Ashvamedhika Parva: Chapter 47

ಅಶ್ವಮೇಧಿಕ ಪರ್ವ

೪೭

ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಮುಂದುವರಿಸಿ ಹೇಳಿದುದು (೧-೧೬).

14047001 ಬ್ರಹ್ಮೋವಾಚ

14047001a ಸಂನ್ಯಾಸಂ ತಪ ಇತ್ಯಾಹುರ್ವೃದ್ಧಾ ನಿಶ್ಚಿತದರ್ಶಿನಃ|

14047001c ಬ್ರಾಹ್ಮಣಾ ಬ್ರಹ್ಮಯೋನಿಸ್ಥಾ ಜ್ಞಾನಂ ಬ್ರಹ್ಮ ಪರಂ ವಿದುಃ||

ಬ್ರಹ್ಮನು ಹೇಳಿದನು: “ನಿಶ್ಚಯಗಳನ್ನು ಕಂಡ ಬ್ರಹ್ಮಯೋನಿಸ್ಥ ವೃದ್ಧ ಬ್ರಾಹ್ಮಣರು ಸಂನ್ಯಾಸವೇ ತಪಸ್ಸೆಂದು ಹೇಳುತ್ತಾರೆ. ಬ್ರಹ್ಮಜ್ಞಾನವೇ ಪರಮ ಜ್ಞಾನವೆಂದು ತಿಳಿಯುತ್ತಾರೆ.

14047002a ಅವಿದೂರಾತ್ಪರಂ ಬ್ರಹ್ಮ ವೇದವಿದ್ಯಾವ್ಯಪಾಶ್ರಯಮ್|

14047002c ನಿರ್ದ್ವಂದ್ವಂ ನಿರ್ಗುಣಂ ನಿತ್ಯಮಚಿಂತ್ಯಂ ಗುಹ್ಯಮುತ್ತಮಮ್||

ವೇದವಿದ್ಯೆಗೆ ಆಶ್ರಯವಾಗಿರುವ ಈ ಬ್ರಹ್ಮಜ್ಞಾನವು ಅಜ್ಞಾನಿಗಳಿಗೆ ಅತಿ ದೂರದ್ದಾಗಿದೆ. ನಿರ್ದ್ವಂದ್ವವೂ, ನಿರ್ಗುಣವೂ, ಅಚಿಂತ್ಯವೂ, ನಿತ್ಯವೂ ಆದ ಬ್ರಹ್ಮವು ಗುಹ್ಯವಾದುದು.

14047003a ಜ್ಞಾನೇನ ತಪಸಾ ಚೈವ ಧೀರಾಃ ಪಶ್ಯಂತಿ ತತ್ಪದಮ್|

14047003c ನಿರ್ಣಿಕ್ತತಮಸಃ ಪೂತಾ ವ್ಯುತ್ಕ್ರಾಂತರಜಸೋಽಮಲಾಃ||

ಜ್ಞಾನ ಮತ್ತು ತಪಸ್ಸಿನಿಂದ ಮಾತ್ರವೇ ತಮಸ್ಸನ್ನು ತೊಳೆದುಕೊಂಡು ರಜಸ್ಸನ್ನು ದಾಟಿ ಪವಿತ್ರರಾದ ಅಮಲ ಧೀರರು ಆ ಪದವನ್ನು ಕಾಣುತ್ತಾರೆ.

14047004a ತಪಸಾ ಕ್ಷೇಮಮಧ್ವಾನಂ ಗಚ್ಚಂತಿ ಪರಮೈಷಿಣಃ|

14047004c ಸಂನ್ಯಾಸನಿರತಾ ನಿತ್ಯಂ ಯೇ ಬ್ರಹ್ಮವಿದುಷೋ ಜನಾಃ||

ಪರಮ ಪದವಿಯನ್ನು ಬಯಸುವ ಬ್ರಹ್ಮವಿದುಷ ಜನರು ನಿತ್ಯವೂ ಸಂನ್ಯಾಸನಿರತರಾಗಿ ತಪಸ್ಸಿನಿಂದ ಕ್ಷೇಮಕರ ಮಾರ್ಗದಲ್ಲಿ ಹೋಗುತ್ತಾರೆ.

14047005a ತಪಃ ಪ್ರದೀಪ ಇತ್ಯಾಹುರಾಚಾರೋ ಧರ್ಮಸಾಧಕಃ|

14047005c ಜ್ಞಾನಂ ತ್ವೇವ ಪರಂ ವಿದ್ಮ ಸಂನ್ಯಾಸಸ್ತಪ ಉತ್ತಮಮ್||

ತಪಸ್ಸನ್ನು ಪ್ರಕಾಶನೀಡುವ ದೀಪವೆಂದು ಹೇಳುತ್ತಾರೆ. ಆಚಾರವು ಧರ್ಮಸಾಧಕವು. ಜ್ಞಾನವು ಶ್ರೇಷ್ಠವಾದುದು. ಸಂನ್ಯಾಸವೇ ಉತ್ತಮ ತಪವು.

14047006a ಯಸ್ತು ವೇದ ನಿರಾಬಾಧಂ ಜ್ಞಾನಂ ತತ್ತ್ವವಿನಿಶ್ಚಯಾತ್|

14047006c ಸರ್ವಭೂತಸ್ಥಮಾತ್ಮಾನಂ ಸ ಸರ್ವಗತಿರಿಷ್ಯತೇ||

ತತ್ತ್ವವಿನಿಶ್ಚಯದಿಂದ ಸರ್ವಭೂತಸ್ಥನಾಗಿರುವ ಆತ್ಮನ ನಿರಾಬಾಧ ಜ್ಞಾನವನ್ನು ಹೊಂದಿರುವವನು ಸರ್ವವ್ಯಾಪಕನಾಗುತ್ತಾನೆ.

14047007a ಯೋ ವಿದ್ವಾನ್ಸಹವಾಸಂ ಚ ವಿವಾಸಂ ಚೈವ ಪಶ್ಯತಿ|

14047007c ತಥೈವೈಕತ್ವನಾನಾತ್ವೇ ಸ ದುಃಖಾತ್ಪರಿಮುಚ್ಯತೇ||

ಒಟ್ಟಿಗೇ ಇರುವುದರಲ್ಲಿ ಪ್ರತ್ಯೇಕತೆಯನ್ನೂ ಮತ್ತು ಅನೇಕಗಳಲ್ಲಿ ಏಕತ್ವವನ್ನೂ ಕಾಣುವ ವಿದ್ವಾನನು ದುಃಖದಿಂದ ಮುಕ್ತನಾಗುತ್ತಾನೆ.

14047008a ಯೋ ನ ಕಾಮಯತೇ ಕಿಂ ಚಿನ್ನ ಕಿಂ ಚಿದವಮನ್ಯತೇ|

14047008c ಇಹಲೋಕಸ್ಥ ಏವೈಷ ಬ್ರಹ್ಮಭೂಯಾಯ ಕಲ್ಪತೇ||

ಏನನ್ನೂ ಬಯಸದೇ ಮತ್ತು ಯಾವುದನ್ನೂ ಬೇಡವೆನ್ನದೇ ಇರುವವನು ಈ ಲೋಕದಲ್ಲಿದ್ದರೂ ಬ್ರಹ್ಮಸ್ವರೂಪನೆಂದೆನಿಸಿಕೊಳ್ಳುತ್ತಾನೆ.

14047009a ಪ್ರಧಾನಗುಣತತ್ತ್ವಜ್ಞಃ ಸರ್ವಭೂತವಿಧಾನವಿತ್|

14047009c ನಿರ್ಮಮೋ ನಿರಹಂಕಾರೋ ಮುಚ್ಯತೇ ನಾತ್ರ ಸಂಶಯಃ||

ಪ್ರಧಾನಗುಣತತ್ತ್ವಗಳನ್ನು ತಿಳಿದುಕೊಂಡು ಸರ್ವಭೂತಗಳ ವಿಧಾನಗಳನ್ನು ತಿಳಿದುಕೊಂಡಿರುವ ಮಮಕಾರರಹಿತ ನಿರಹಂಕಾರನು ಮುಕ್ತನು ಎನ್ನುವುದರಲ್ಲಿ ಸಂಶಯವಿಲ್ಲ.

14047010a ನಿರ್ದ್ವಂದ್ವೋ ನಿರ್ನಮಸ್ಕಾರೋ ನಿಃಸ್ವಧಾಕಾರ ಏವ ಚ|

14047010c ನಿರ್ಗುಣಂ ನಿತ್ಯಮದ್ವಂದ್ವಂ ಪ್ರಶಮೇನೈವ ಗಚ್ಚತಿ||

ನಿರ್ದ್ವಂದ್ವನೂ ನಿರ್ನಮಸ್ಕಾರನೂ ಮತ್ತು ನಿಃಸ್ವಧಾಕಾರನೂ ಆಗಿರುವವನು ನಿರ್ಗುಣನೂ, ನಿತ್ಯವೂ, ಅದ್ವಂದ್ವನೂ ಆದ ಪರಮಾತ್ಮನನ್ನು ಹೊಂದುತ್ತಾನೆ.

14047011a ಹಿತ್ವಾ ಗುಣಮಯಂ ಸರ್ವಂ ಕರ್ಮ ಜಂತುಃ ಶುಭಾಶುಭಮ್|

14047011c ಉಭೇ ಸತ್ಯಾನೃತೇ ಹಿತ್ವಾ ಮುಚ್ಯತೇ ನಾತ್ರ ಸಂಶಯಃ||

ಗುಣಮಯವಾದ ಎಲ್ಲ ಶುಭಾಶುಭ ಕರ್ಮಗಳನ್ನು ತ್ಯಜಿಸಿದವನು ಮತ್ತು ಸತ್ಯ-ಸುಳ್ಳುಗಳೆರಡನ್ನೂ ತ್ಯಜಿಸಿದವನು ಮುಕ್ತನಾಗುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

14047012a ಅವ್ಯಕ್ತಬೀಜಪ್ರಭವೋ ಬುದ್ಧಿಸ್ಕಂಧಮಯೋ ಮಹಾನ್|

14047012c ಮಹಾಹಂಕಾರವಿಟಪ ಇಂದ್ರಿಯಾಂತರಕೋಟರಃ||

14047013a ಮಹಾಭೂತವಿಶಾಖಶ್ಚ ವಿಶೇಷಪ್ರತಿಶಾಖವಾನ್|

14047013c ಸದಾಪರ್ಣಃ ಸದಾಪುಷ್ಪಃ ಶುಭಾಶುಭಫಲೋದಯಃ|

14047013e ಆಜೀವಃ ಸರ್ವಭೂತಾನಾಂ ಬ್ರಹ್ಮವೃಕ್ಷಃ ಸನಾತನಃ||

ಅವ್ಯಕ್ತಬೀಜದಿಂದ ಹುಟ್ಟಿದ, ಬುದ್ಧಿಯೇ ಮಹಾಕಾಂಡವಾಗಿರುವ, ಅಹಂಕಾರವೆಂಬ ಮಹಾ ರೆಂಬೆಗಳಿರುವ, ಇಂದ್ರಿಯಗಳೆಂಬ ಚಿಗುರುಗಳುಳ್ಳ, ಮಹಾಭೂತಗಳು ವಿಸ್ತರಿಸಿ ವಿಶೇಷವಾಗಿ ಶೋಭೆಗೊಳಿಸಿರುವ, ಸದಾ ಪತ್ರಗಳಿರುವ, ಸದಾ ಪುಷ್ಪಗಳಿರುವ, ಶುಭಾಶುಭ ಫಲಗಳನ್ನು ನೀಡುವ ಸರ್ವಭೂತಗಳ ಜೀವವಾಗಿರುವ ಇದು ಸನಾತನವಾದ ಬ್ರಹ್ಮವೃಕ್ಷ.

14047014a ಏತಚ್ಚಿತ್ತ್ವಾ ಚ ಭಿತ್ತ್ವಾ ಚ ಜ್ಞಾನೇನ ಪರಮಾಸಿನಾ||

14047014c ಹಿತ್ವಾ ಚಾಮರತಾಂ ಪ್ರಾಪ್ಯ ಜಹ್ಯಾದ್ವೈ ಮೃತ್ಯುಜನ್ಮನೀ|

14047014e  ನಿರ್ಮಮೋ ನಿರಹಂಕಾರೋ ಮುಚ್ಯತೇ ನಾತ್ರ ಸಂಶಯಃ||

ಜ್ಞಾನವೆಂಬ ತೀಕ್ಷ್ಣ ಖಡ್ಗದಿಂದ ಇದನ್ನು ಕತ್ತರಿಸಿ ತುಂಡುಮಾಡಿದವನು ಮೃತ್ಯು-ಜನ್ಮ-ಮುಪ್ಪುಗಳಿರುವ ಪಾಶಗಳನ್ನು ಬಿಡಿಸಿಕೊಂಡು ಅಮರತ್ವವನ್ನೂ ತೊರೆದು ನಿರ್ಮಮ ನಿರಹಂಕಾರನಾಗಿ ಮುಕ್ತನಾಗುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

14047015a ದ್ವಾವೇತೌ ಪಕ್ಷಿಣೌ ನಿತ್ಯೌ ಸಖಾಯೌ ಚಾಪ್ಯಚೇತನೌ|

14047015c ಏತಾಭ್ಯಾಂ ತು ಪರೋ ಯಸ್ಯ ಚೇತನಾವಾನಿತಿ ಸ್ಮೃತಃ||

ಈ ವೃಕ್ಷದಲ್ಲಿ ಮನಸ್ಸು-ಬುದ್ಧಿಗಳೆಂಬ ಎರಡು ಪಕ್ಷಿಗಳಿವೆ. ಸಖರಾಗಿರುವ ಇವೆರಡೂ ಅಚೇತನಗಳು. ಇವೆರಡರಿಗೂ ಶ್ರೇಷ್ಠವಾದ ಚೇತನವಿದೆ ಎಂದು ತಿಳಿದಿದೆ.

14047016a ಅಚೇತನಃ ಸತ್ತ್ವಸಂಘಾತಯುಕ್ತಃ

ಸತ್ತ್ವಾತ್ಪರಂ ಚೇತಯತೇಽಂತರಾತ್ಮಾ|

14047016c ಸ ಕ್ಷೇತ್ರಜ್ಞಃ ಸತ್ತ್ವಸಂಘಾತಬುದ್ಧಿರ್

ಗುಣಾತಿಗೋ ಮುಚ್ಯತೇ ಮೃತ್ಯುಪಾಶಾತ್||

ಸತ್ತ್ವಸಂಘಾತಯುಕ್ತವಾದುದು ಅಚೇತನವು. ಸತ್ತ್ವಕ್ಕೂ ಭಿನ್ನವಾಗಿರುವ ಅಂತರಾತ್ಮನೇ ಚೇತನವನ್ನು ನೀಡುತ್ತಾನೆ. ಆ ಕ್ಷೇತ್ರಜ್ಞನೇ ಸತ್ತ್ವಸಂಘಾತಗಳನ್ನು ತಿಳಿದು ಗುಣಾತೀತನಾಗಿ ಮೃತ್ಯುಪಾಶದಿಂದ ಮುಕ್ತನಾಗುತ್ತಾನೆ.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ಸಪ್ತಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ನಲ್ವತ್ತೇಳನೇ ಅಧ್ಯಾಯವು.

Comments are closed.