Ashvamedhika Parva: Chapter 45

ಅಶ್ವಮೇಧಿಕ ಪರ್ವ

೪೫

ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಮುಂದುವರಿಸಿ ಹೇಳಿದುದು (೧-೨೫).

14045001 ಬ್ರಹ್ಮೋವಾಚ

14045001a ಬುದ್ಧಿಸಾರಂ ಮನಸ್ತಂಭಮಿಂದ್ರಿಯಗ್ರಾಮಬಂಧನಮ್|

14045001c ಮಹಾಭೂತಾರವಿಷ್ಕಂಭಂ ನಿಮೇಷಪರಿವೇಷ್ಟನಮ್||[1]

14045002a ಜರಾಶೋಕಸಮಾವಿಷ್ಟಂ ವ್ಯಾಧಿವ್ಯಸನಸಂಚರಮ್|[2]

14045002c ದೇಶಕಾಲವಿಚಾರೀದಂ ಶ್ರಮವ್ಯಾಯಾಮನಿಸ್ವನಮ್||

14045003a ಅಹೋರಾತ್ರಪರಿಕ್ಷೇಪಂ ಶೀತೋಷ್ಣಪರಿಮಂಡಲಮ್|

14045003c ಸುಖದುಃಖಾಂತಸಂಕ್ಲೇಶಂ ಕ್ಷುತ್ಪಿಪಾಸಾವಕೀಲನಮ್||

14045004a ಛಾಯಾತಪವಿಲೇಖಂ ಚ ನಿಮೇಷೋನ್ಮೇಷವಿಹ್ವಲಮ್|

14045004c ಘೋರಮೋಹಜನಾಕೀರ್ಣಂ ವರ್ತಮಾನಮಚೇತನಮ್||

14045005a ಮಾಸಾರ್ಧಮಾಸಗಣಿತಂ ವಿಷಮಂ ಲೋಕಸಂಚರಮ್|

14045005c ತಮೋನಿಚಯಪಂಕಂ ಚ ರಜೋವೇಗಪ್ರವರ್ತಕಮ್||

14045006a ಸತ್ತ್ವಾಲಂಕಾರದೀಪ್ತಂ ಚ ಗುಣಸಂಘಾತಮಂಡಲಮ್|

14045006c ಸ್ವರವಿಗ್ರಹನಾಭೀಕಂ ಶೋಕಸಂಘಾತವರ್ತನಮ್||[3]

14045007a ಕ್ರಿಯಾಕಾರಣಸಂಯುಕ್ತಂ ರಾಗವಿಸ್ತಾರಮಾಯತಮ್|

14045007c ಲೋಭೇಪ್ಸಾಪರಿಸಂಖ್ಯಾತಂ ವಿವಿಕ್ತಜ್ಞಾನಸಂಭವಮ್||

14045008a ಭಯಮೋಹಪರೀವಾರಂ ಭೂತಸಂಮೋಹಕಾರಕಮ್|

14045008c ಆನಂದಪ್ರೀತಿಧಾರಂ ಚ ಕಾಮಕ್ರೋಧಪರಿಗ್ರಹಮ್||

14045009a ಮಹದಾದಿವಿಶೇಷಾಂತಮಸಕ್ತಪ್ರಭವಾವ್ಯಯಮ್|

14045009c ಮನೋಜವನಮಶ್ರಾಂತಂ ಕಾಲಚಕ್ರಂ ಪ್ರವರ್ತತೇ||

ಮನೋವೇಗದ ಕಾಲಚಕ್ರವು ಆಯಾಸವಿಲ್ಲದೇ ತಿರುಗುತ್ತಲೇ ಇರುತ್ತದೆ. ಈ ಕಾಲಚಕ್ರಕ್ಕೆ ಬುದ್ಧಿಯೇ ಸಾರ, ಮನಸ್ಸೇ ಸ್ಥಂಭ ಮತ್ತು ಇಂದ್ರಿಯಗ್ರಾಮವು ಇದರ ಬಂಧನ. ಪಂಚಮಹಾಭೂತಗಳು ಇದರ ಅವಿಷ್ಕಂಭ ಮತ್ತು ನಿಮೇಷವು ಈ ಚಕ್ರಕ್ಕೆ ಸುತ್ತುವರೆದ ಪಟ್ಟಿ. ಮುಪ್ಪು-ಶೋಕಗಳಿಂದ ಕೂಡಿದ ಈ ಕಾಲಚಕ್ರಕ್ಕೆ ವ್ಯಾಧಿ-ವ್ಯಸನಗಳೇ ಸಂಚಾರಗಳು. ದೇಶ-ಕಾಲಗಳಲ್ಲಿ ಸಂಚರಿಸುವ ಈ ಕಾಲಚಕ್ರಕ್ಕೆ ಶ್ರಮ-ವ್ಯಾಯಾಮಗಳೇ ಶಬ್ಧ. ಹಗಲು-ರಾತ್ರಿಗಳೇ ಈ ಕಾಲಚಕ್ರದ ಸುತ್ತುಗಳು. ಇದು ಶೀತ-ಉಷ್ಣಗಳಿಂದ ಸುತ್ತುವರೆಯಲ್ಪಟ್ಟಿದೆ. ಸುಖ-ದುಃಖಗಳು ಇದರ ಸಂಧಿಗಳು. ಹಸಿವು-ಬಾಯಾರಿಕೆಗಳು ಇದಕ್ಕೆ ಚುಚ್ಚಿದ ಮೊಳೆಗಳು. ಬಿಸಿಲು-ನೆರಳುಗಳು ಇದರ ನಡುಗೆ ಮತ್ತು ರೆಪ್ಪೆಗಳ ಬಡಿತವು ಇದರ ಹಂದಾಡುವಿಕೆ. ಈ ಚಕ್ರವು ಮೋಹವೆಂಬ ಘೋರ ಕೆಸರಿನಲ್ಲಿ ಹುದುಗಿಕೊಂಡಿದೆ ಮತ್ತು ಅರಿವಿಲ್ಲದೆಯೇ ಉರುಳಿಕೊಂಡು ಹೋಗುತ್ತಿರುತ್ತದೆ. ಮಾಸ-ಅರ್ಧಮಾಸಗಳು ಇದರ ಲೆಖ್ಕ. ಬದಲಾಗುತ್ತಲೇ ಇರುವ ಈ ಚಕ್ರವು ಲೋಕದಲ್ಲೆಲ್ಲಾ ಸಂಚರಿಸುತ್ತದೆ. ತಮೋಗುಣವು ಇದರ ಚಲನೆಯನ್ನು ನಿಗ್ರಹಿಸುವ ಕೆಸರು. ರಜೋಗುಣವು ಇದರ ವೇಗವನ್ನು ಹೆಚ್ಚಿಸುವಂಥಹುದು ಮತ್ತು ಸತ್ತ್ವಗುಣವು ಇದರ ಅಲಂಕಾರ-ದೀಪ. ಈ ರೀತಿ ಗುಣಗಳು ಇದರ ಮೇಲೆ ಪ್ರಭಾವಬೀರುತ್ತವೆ. ಸ್ವರವಿಗ್ರಹಗಳೇ ಇದರ ನಾಭಿ. ಶೋಕಸಂಘಾತದಂತೆ ವರ್ತಿಸುತ್ತದೆ. ಕ್ರಿಯಾ-ಕಾರಣಸಂಯುಕ್ತವಾದ ಈ ಕಾಲಚಕ್ರದ ವಿಸ್ತಾರವು ಅನುರಾಗ. ಲೋಭ-ತೃಷ್ಣೆಗಳೇ ಇದು ಮೇಲೆ-ಕೆಳಗೆ ಹೋಗುವಂತೆ ಮಾಡುತ್ತವೆ. ಈ ಚಕ್ರವು ಅಜ್ಞಾನದಿಂದ ಹುಟ್ಟಿದೆ. ಭಯ-ಮೋಹಗಳೇ ಇದರ ಪರಿವಾರವು. ಇದು ಭೂತಗಳ ಸಂಮೋಹನಕ್ಕೆ ಕಾರಣ. ಆನಂದ-ಪ್ರೀತಿಗಳನ್ನೇ ಅರಸಿಕೊಂಡು ಇದು ಹೋಗುತ್ತಿರುತ್ತದೆ. ಕಾಮ-ಕ್ರೋಧಗಳನ್ನು ಸಂಗ್ರಹಿಸಿಕೊಳ್ಳುತ್ತಿರುತ್ತದೆ. ಎಲ್ಲವುಗಳ ಮೂಲವಾದ ಈ ಅವ್ಯಯವು ಮಹತ್ತಿನಿಂದ ಪ್ರಾರಂಭವಾಗಿ ವಿಶೇಷದ ಅಂತ್ಯದವರೆಗೂ ಯಾವುದೇ ತಡೆಯಿಲ್ಲದೆಯೂ ಸುತ್ತುತ್ತಿರುತ್ತದೆ.

14045010a ಏತದ್ದ್ವಂದ್ವಸಮಾಯುಕ್ತಂ ಕಾಲಚಕ್ರಮಚೇತನಮ್|

14045010c ವಿಸೃಜೇತ್ಸಂಕ್ಷಿಪೇಚ್ಚಾಪಿ ಬೋಧಯೇತ್ಸಾಮರಂ ಜಗತ್||

ದ್ವಂದ್ವಗಳಿಂದ ಕೂಡಿದ ಚೇತನವಿಲ್ಲದ ಈ ಕಾಲಚಕ್ರವು ಅಮರರೊಂದಿಗಿನ ಈ ಜಗತ್ತಿಗೆ ಸೃಷ್ಟಿ-ಲಯಗಳನ್ನು ತಿಳಿಸಿಕೊಡುತ್ತದೆ.

14045011a ಕಾಲಚಕ್ರಪ್ರವೃತ್ತಿಂ ಚ ನಿವೃತ್ತಿಂ ಚೈವ ತತ್ತ್ವತಃ|

14045011c ಯಸ್ತು ವೇದ ನರೋ ನಿತ್ಯಂ ನ ಸ ಭೂತೇಷು ಮುಹ್ಯತಿ||

ಕಾಲಚಕ್ರದ ಪ್ರವೃತ್ತಿ-ನಿವೃತ್ತಿಗಳನ್ನು ತತ್ತ್ವತಃ ತಿಳಿದುಕೊಂಡ ನರನು ಇರುವವುಗಳಲ್ಲಿ ನಿತ್ಯವೂ ಮೋಹವನ್ನಿಡುವುದಿಲ್ಲ.

14045012a ವಿಮುಕ್ತಃ ಸರ್ವಸಂಕ್ಲೇಶೈಃ ಸರ್ವದ್ವಂದ್ವಾತಿಗೋ ಮುನಿಃ|

14045012c ವಿಮುಕ್ತಃ ಸರ್ವಪಾಪೇಭ್ಯಃ ಪ್ರಾಪ್ನೋತಿ ಪರಮಾಂ ಗತಿಮ್||

ಅಂಥಹ ಮುನಿಯು ಸರ್ವಸಂಕ್ಲೇಶಗಳಿಂದ ವಿಮುಕ್ತನಾಗಿ, ಸರ್ವದ್ವಂದ್ವಗಳನ್ನು ಮೀರಿ ಸರ್ವಪಾಪಗಳಿಂದ ವಿಮುಕ್ತನಾಗಿ ಪರಮಗತಿಯನ್ನು ಪಡೆಯುತ್ತಾನೆ.

14045013a ಗೃಹಸ್ಥೋ ಬ್ರಹ್ಮಚಾರೀ ಚ ವಾನಪ್ರಸ್ಥೋಽಥ ಭಿಕ್ಷುಕಃ|

14045013c ಚತ್ವಾರ ಆಶ್ರಮಾಃ ಪ್ರೋಕ್ತಾಃ ಸರ್ವೇ ಗಾರ್ಹಸ್ಥ್ಯಮೂಲಕಾಃ||

ಗ್ರಹಸ್ಥ, ಬ್ರಹ್ಮಚಾರೀ, ವಾನಪ್ರಸ್ಥ ಮತ್ತು ಭಿಕ್ಷುಕ – ಈ ನಾಲ್ಕು ಆಶ್ರಮಗಳಲ್ಲಿ ಗ್ರಹಸ್ಥಾಶ್ರಮವೇ ಮೂಲವಾದುದು.

14045014a ಯಃ ಕಶ್ಚಿದಿಹ ಲೋಕೇ ಚ ಹ್ಯಾಗಮಃ ಸಂಪ್ರಕೀರ್ತಿತಃ|

14045014c ತಸ್ಯಾಂತಗಮನಂ ಶ್ರೇಯಃ ಕೀರ್ತಿರೇಷಾ ಸನಾತನೀ||

ಈ ಲೋಕದಲ್ಲಿ ಯಾವ ಯಾವ ಆಗಮಗಳಿವೆಯೆಂದು ಹೇಳುತ್ತಾರೋ ಅವುಗಳನ್ನು ತಿಳಿದುಕೊಳ್ಳುವುದು ಶ್ರೇಯಸ್ಸು ಎಂಬ ಸನಾತನ ಉಕ್ತಿಯೇ ಇದೆ.

14045015a ಸಂಸ್ಕಾರೈಃ ಸಂಸ್ಕೃತಃ ಪೂರ್ವಂ ಯಥಾವಚ್ಚರಿತವ್ರತಃ|

14045015c ಜಾತೌ ಗುಣವಿಶಿಷ್ಟಾಯಾಂ ಸಮಾವರ್ತೇತ ವೇದವಿತ್||

ಮೊದಲು ಸಂಸ್ಕಾರಗಳಿಂದ ಸಂಸ್ಕೃತನಾಗಿ ಯಥಾವತ್ತಾಗಿ ವ್ರತಚರಿತನಾಗಿದ್ದುಕೊಂಡು ಸಮಾವರ್ತವನ್ನು ಮಾಡಿಕೊಂಡು ಗುಣವಿಶಿಷ್ಟಕುಲದಲ್ಲಿ ಹುಟ್ಟಿದವಳನ್ನು ವೇದವತ್ತಾಗಿ ವಿವಾಹವಾಗಬೇಕು.

14045016a ಸ್ವದಾರನಿರತೋ ದಾಂತಃ ಶಿಷ್ಟಾಚಾರೋ ಜಿತೇಂದ್ರಿಯಃ|

14045016c ಪಂಚಭಿಶ್ಚ ಮಹಾಯಜ್ಞೈಃ ಶ್ರದ್ದಧಾನೋ ಯಜೇತ ಹ||

ತನ್ನ ಪತ್ನಿಯಲ್ಲಿ ಅನುರತನಾಗಿ, ಜಿತೇಂದ್ರಿಯನೂ, ಶಿಷ್ಟಾಚಾರಿಯೂ, ದಾಂತನೂ ಆಗಿದ್ದುಕೊಂಡು, ಐದು ಮಹಾಯಜ್ಞಗಳನ್ನು ಶ್ರದ್ಧಾವಂತನಾಗಿ ಯಜಿಸಬೇಕು.

14045017a ದೇವತಾತಿಥಿಶಿಷ್ಟಾಶೀ ನಿರತೋ ವೇದಕರ್ಮಸು|

14045017c ಇಜ್ಯಾಪ್ರದಾನಯುಕ್ತಶ್ಚ ಯಥಾಶಕ್ತಿ ಯಥಾವಿಧಿ||

ದೇವತೆಗಳು ಮತ್ತು ಅತಿಥಿಗಳಿಗೆ ನೀಡಿ ಉಳಿದ ಶಿಷ್ಟವನ್ನು ಊಟಮಾಡಬೇಕು. ವೇದಕರ್ಮಗಳಲ್ಲಿ ನಿರತನಾಗಿರಬೇಕು. ಯಥಾಶಕ್ತಿಯಾಗಿ ಯಥಾವಿಧಿಯಾಗಿ ಯಜ್ಞ-ದಾನಗಳಲ್ಲಿ ತೊಡಗಿರಬೇಕು.

14045018a ನ ಪಾಣಿಪಾದಚಪಲೋ ನ ನೇತ್ರಚಪಲೋ ಮುನಿಃ|

14045018c ನ ಚ ವಾಗಂಗಚಪಲ ಇತಿ ಶಿಷ್ಟಸ್ಯ ಗೋಚರಃ||

ಮುನಿಯಾದವನು ಕೈ-ಕಾಲುಗಳ ಚಪಲತೆ, ಕಣ್ಣುಗಳ ಚಪಲತೆ ಮತ್ತು ಮಾತು-ಅಂಗಗಳ ಚಪಲತೆಯನ್ನಿಟ್ಟುಕೊಂಡಿರಬಾರದು. ಇದೇ ಶಿಷ್ಟನನ್ನು ಗುರುತಿಸುವ ಲಕ್ಷಣವು.

14045019a ನಿತ್ಯಯಜ್ಞೋಪವೀತೀ ಸ್ಯಾಚ್ಚುಕ್ಲವಾಸಾಃ ಶುಚಿವ್ರತಃ|

14045019c ನಿಯತೋ ದಮದಾನಾಭ್ಯಾಂ ಸದಾ ಶಿಷ್ಟೈಶ್ಚ ಸಂವಿಶೇತ್||

ನಿತ್ಯವೂ ಯಜ್ಞೋಪವೀತವನ್ನು ಧರಿಸಿಕೊಂಡಿರಬೇಕು. ಬಿಳಿಯ ವಸ್ತ್ರಗಳನ್ನು ಉಡಬೇಕು. ಶುಚಿಯಾಗಿರಬೇಕು. ನಿಯತನಾಗಿ, ಸದಾ ದಮ-ದಾನಗಳಲ್ಲಿ ನಿರತನಾಗಿರಬೇಕು. ಮತ್ತು ಶಿಷ್ಟರ ಸಹವಾಸದಲ್ಲಿರಬೇಕು.

14045020a ಜಿತಶಿಶ್ನೋದರೋ ಮೈತ್ರಃ ಶಿಷ್ಟಾಚಾರಸಮಾಹಿತಃ|

14045020c ವೈಣವೀಂ ಧಾರಯೇದ್ಯಷ್ಟಿಂ ಸೋದಕಂ ಚ ಕಮಂಡಲುಮ್||

ಶಿಶ್ನ-ಉದರಗಳನ್ನು ಗೆದ್ದು, ಎಲ್ಲರೊಡನೆಯೂ ಮೈತ್ರಭಾವದಿಂದಿದ್ದುಕೊಂಡು ಶಿಷ್ಟಾಚಾರಸಮಾಹಿತನಾಗಿರಬೇಕು. ಬಿದಿರಿನ ದಂಡವನ್ನೂ ನೀರುತುಂಬಿದ ಕಮಂಡಲುವನ್ನೂ ಧರಿಸಬೇಕು.

14045021a ಅಧೀತ್ಯಾಧ್ಯಾಪನಂ ಕುರ್ಯಾತ್ತಥಾ ಯಜನಯಾಜನೇ|

14045021c ದಾನಂ ಪ್ರತಿಗ್ರಹಂ ಚೈವ ಷಡ್ಗುಣಾಂ ವೃತ್ತಿಮಾಚರೇತ್||

ಅಧ್ಯಯನ, ಅಧ್ಯಾಪನ, ಯಜನ, ಯಾಜನ, ದಾನ ಮತ್ತು ಪ್ರತಿಗ್ರಹಣ ಈ ಆರು ಗುಣಗಳಿರುವ ವೃತ್ತಿಯನ್ನು ಆಚರಿಸಬೇಕು.

14045022a ತ್ರೀಣಿ ಕರ್ಮಾಣಿ ಯಾನೀಹ ಬ್ರಾಹ್ಮಣಾನಾಂ ತು ಜೀವಿಕಾ|

14045022c ಯಾಜನಾಧ್ಯಾಪನೇ ಚೋಭೇ ಶುದ್ಧಾಚ್ಚಾಪಿ ಪ್ರತಿಗ್ರಹಃ||

ಇವುಗಳಲ್ಲಿ ಯಜ್ಞಮಾಡಿಸುವುದು, ಅಧ್ಯಯನ ಮಾಡಿಸುವುದು ಮತ್ತು ಶುದ್ಧರಿಂದ ದಾನವನ್ನು ಸ್ವೀಕರಿಸುವುದು – ಈ ಮೂರು ಬ್ರಾಹ್ಮಣರ ಜೀವಿಕೆಗೆ ಸಾಧನಗಳು.

14045023a ಅವಶೇಷಾಣಿ ಚಾನ್ಯಾನಿ ತ್ರೀಣಿ ಕರ್ಮಾಣಿ ಯಾನಿ ತು|

14045023c ದಾನಮಧ್ಯಯನಂ ಯಜ್ಞೋ ಧರ್ಮಯುಕ್ತಾನಿ ತಾನಿ ತು||

ಉಳಿದ ಅನ್ಯ ಮೂರು ಕರ್ಮಗಳು – ದಾನಮಾಡುವುದು, ಅಧ್ಯಯನ ಮಾಡುವುದು ಮತ್ತು ಯಜ್ಞಗಳನ್ನು ಮಾಡುವುದು – ಧರ್ಮಾರ್ಜನೆಯ ಸಾಧನಗಳು.

14045024a ತೇಷ್ವಪ್ರಮಾದಂ ಕುರ್ವೀತ ತ್ರಿಷು ಕರ್ಮಸು ಧರ್ಮವಿತ್|

14045024c ದಾಂತೋ ಮೈತ್ರಃ ಕ್ಷಮಾಯುಕ್ತಃ ಸರ್ವಭೂತಸಮೋ ಮುನಿಃ||

ಧರ್ಮವಿದುವು ಈ ಮೂರು ಕರ್ಮಗಳಲ್ಲಿ ಅಪ್ರಮಾದನಾಗಿರಬೇಕು - ಜಿತೇಂದ್ರಿಯನೂ, ಮೈತ್ರಭಾವನೆಯುಳ್ಳವನೂ, ಕ್ಷಮಾಯುಕ್ತನೂ, ಸರ್ವಭೂತಗಳಿಗೆ ಸಮನೂ, ಮುನಿಯೂ ಆಗಿರಬೇಕು.

14045025a ಸರ್ವಮೇತದ್ಯಥಾಶಕ್ತಿ ವಿಪ್ರೋ ನಿರ್ವರ್ತಯನ್ಶುಚಿಃ|

14045025c ಏವಂ ಯುಕ್ತೋ ಜಯೇತ್ಸ್ವರ್ಗಂ ಗೃಹಸ್ಥಃ ಸಂಶಿತವ್ರತಃ||

ಈ ಎಲ್ಲವನ್ನೂ ಶುಚಿಯಾದ ವಿಪ್ರನು ಯಥಾಶಕ್ತಿ ಪಾಲಿಸಿಕೊಂಡು ಬಂದರೆ ಅಂಥಹ ಸಂಶಿತವ್ರತ ಗೃಹಸ್ಥನು ಸ್ವರ್ಗವನ್ನು ಗೆಲ್ಲುತ್ತಾನೆ.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ಪಂಚಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ನಲ್ವತ್ತೈದನೇ ಅಧ್ಯಾಯವು.

[1] ಮಹಾಭೂತಪರಿಸ್ಕಂಧಂ ನಿವೇಶಪರಿವೇಶನಮ್| ಎಂಬ ಪಾಠಾಂತರವಿದೆ.

[2] ಜರಾಶೋಕಸಮಾವಿಷ್ಟಂ ವ್ಯಾಧಿವ್ಯಸನಸಂಭವಮ್| ಎಂಬ ಪಾಠಾಂತರವಿದೆ.

[3] ಮಹಾಹಂಕಾರ ದೀಪ್ತಂ ಚ ಗುಣಸಂಜಾತವರ್ತನಮ್| ಅರತಿಗ್ರಹಣಾನೀಕಂ ಶೋಕಸಂಹಾರವರ್ತನಮ್|| ಎಂಬ ಪಾಠಾಂತರವಿದೆ.

Comments are closed.