Ashvamedhika Parva: Chapter 44

ಅಶ್ವಮೇಧಿಕ ಪರ್ವ

೪೪

ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಮುಂದುವರಿಸಿ ಹೇಳಿದುದು (೧-೨೧).

14044001 ಬ್ರಹ್ಮೋವಾಚ

14044001a ಯದಾದಿಮಧ್ಯಪರ್ಯಂತಂ ಗ್ರಹಣೋಪಾಯಮೇವ ಚ|

14044001c ನಾಮಲಕ್ಷಣಸಂಯುಕ್ತಂ ಸರ್ವಂ ವಕ್ಷ್ಯಾಮಿ ತತ್ತ್ವತಃ||

ಬ್ರಹ್ಮನು ಹೇಳಿದನು: “ನಾನೀಗ ಎಲ್ಲವುಗಳ ನಾಮ-ಲಕ್ಷಣ ಸಂಯುತವಾದ ಆದಿ-ಮಧ್ಯ-ಅಂತ್ಯಗಳನ್ನು ಮತ್ತು ಅವುಗಳನ್ನು ಗ್ರಹಿಸುವ ಉಪಾಯಗಳನ್ನು ಇದ್ದಹಾಗೆ ಹೇಳುತ್ತೇನೆ.

14044002a ಅಹಃ ಪೂರ್ವಂ ತತೋ ರಾತ್ರಿರ್ಮಾಸಾಃ ಶುಕ್ಲಾದಯಃ ಸ್ಮೃತಾಃ|

14044002c ಶ್ರವಿಷ್ಠಾದೀನಿ ಋಕ್ಷಾಣಿ ಋತವಃ ಶಿಶಿರಾದಯಃ||

ಮೊದಲು ರಾತ್ರಿ, ನಂತರ ಹಗಲು. ಮಾಸಗಳು ಶುಕ್ಲಪಕ್ಷದಿಂದ ಪ್ರಾರಂಭಿಸಿದವು. ಶ್ರವಣದಿಂದ ನಕ್ಷತ್ರಗಳು ಪ್ರಾರಂಭವಾದವು. ಶಿಶಿರದಿಂದ ಋತುಗಳು ಪ್ರಾರಂಭಿಸಿದವು ಎಂದು ನೆನಪಿನಲ್ಲಿವೆ.

14044003a ಭೂಮಿರಾದಿಸ್ತು ಗಂಧಾನಾಂ ರಸಾನಾಮಾಪ ಏವ ಚ|

14044003c ರೂಪಾಣಾಂ ಜ್ಯೋತಿರಾದಿಸ್ತು ಸ್ಪರ್ಶಾದಿರ್ವಾಯುರುಚ್ಯತೇ|

14044003e ಶಬ್ದಸ್ಯಾದಿಸ್ತಥಾಕಾಶಮೇಷ ಭೂತಕೃತೋ ಗುಣಃ||

ಭೂಮಿಯು ಗಂಧಗಳ ಮತ್ತು ಆಪವು ರಸಗಳ ಆದಿ. ರೂಪಗಳ ಆದಿಯು ಜ್ಯೋತಿ ಮತ್ತು ಸ್ಪರ್ಶಗಳ ಆದಿಯು ವಾಯು ಎಂದು ಹೇಳುತ್ತಾರೆ. ಹಾಗೆಯೇ ಶಬ್ಧದ ಆದಿ ಆಕಾಶ. ಇವು ಪಂಚಭೂತಗಳು ಉಂಟುಮಾಡಿದ ಗುಣಗಳು.

14044004a ಅತಃ ಪರಂ ಪ್ರವಕ್ಷ್ಯಾಮಿ ಭೂತಾನಾಮಾದಿಮುತ್ತಮಮ್|

14044004c ಆದಿತ್ಯೋ ಜ್ಯೋತಿಷಾಮಾದಿರಗ್ನಿರ್ಭೂತಾದಿರಿಷ್ಯತೇ||

ಇನ್ನು ಮುಂದೆ ಉತ್ತಮ ಭೂತಗಳಲ್ಲಿ ಮೊದಲನೆಯದು ಯಾವುವೆಂದು ಹೇಳುತ್ತೇನೆ. ಜ್ಯೋತಿಯಿರುವ ಸಮಸ್ತಕ್ಕೆ ಆದಿತ್ಯನು ಮೊದಲನೆಯವನು. ಭೂತಗಳಿಗೆಲ್ಲ ಅಗ್ನಿಯು ಆದಿಯೆಂದು ಹೇಳುತ್ತಾರೆ.

14044005a ಸಾವಿತ್ರೀ ಸರ್ವವಿದ್ಯಾನಾಂ ದೇವತಾನಾಂ ಪ್ರಜಾಪತಿಃ|

14044005c ಓಂಕಾರಃ ಸರ್ವವೇದಾನಾಂ ವಚಸಾಂ ಪ್ರಾಣ ಏವ ಚ|

14044005e ಯದ್ಯಸ್ಮಿನ್ನಿಯತಂ ಲೋಕೇ ಸರ್ವಂ ಸಾವಿತ್ರಮುಚ್ಯತೇ||

ಸರ್ವವಿದ್ಯೆಗಳಿಗೂ ಸಾವಿತ್ರಿಯು ಆದಿ. ದೇವತೆಗಳಲ್ಲಿ ಮೊದಲನೆಯವನು ಪ್ರಜಾಪತಿ. ಸರ್ವವೇದಗಳಲ್ಲಿ ಓಂಕಾರವು ಆದಿ. ವಾಕ್ಕಿಗೆ ಪ್ರಾಣವು ಆದಿ. ಈ ಲೋಕದಲ್ಲಿ ನಿಯತ ವಾಕ್ಕುಗಳೆಲ್ಲವಕ್ಕೂ ಸಾವಿತ್ರಿಯೇ ಮೂಲವೆಂದು ಹೇಳುತ್ತಾರೆ.

14044006a ಗಾಯತ್ರೀ ಚಂದಸಾಮಾದಿಃ ಪಶೂನಾಮಜ ಉಚ್ಯತೇ|

14044006c ಗಾವಶ್ಚತುಷ್ಪದಾಮಾದಿರ್ಮನುಷ್ಯಾಣಾಂ ದ್ವಿಜಾತಯಃ||

ಛಂದಸ್ಸುಗಳಲ್ಲಿ ಗಾಯತ್ರಿಯೇ ಮೊದಲನೆಯದು. ಪಶುಗಳಲ್ಲಿ ಮೊದಲಿನವನು ಅಜ ಎಂದು ಹೇಳುತ್ತಾರೆ. ಗೋವೇ ನಾಲ್ಕು ಕಾಲುಗಳುಳ್ಳ ಪ್ರಾಣಿಗಳಲ್ಲಿ ಮೊದಲನೆಯದು. ದ್ವಿಜಾತಿಯವರೇ ಮನುಷ್ಯರಲ್ಲಿ ಮೊದಲು ಹುಟ್ಟಿದವರು.

14044007a ಶ್ಯೇನಃ ಪತತ್ರಿಣಾಮಾದಿರ್ಯಜ್ಞಾನಾಂ ಹುತಮುತ್ತಮಮ್|

14044007c ಪರಿಸರ್ಪಿಣಾಂ ತು ಸರ್ವೇಷಾಂ ಜ್ಯೇಷ್ಠಃ ಸರ್ಪೋ ದ್ವಿಜೋತ್ತಮಾಃ||

ದ್ವಿಜೋತ್ತಮರೇ! ಪಕ್ಷಿಗಳಲ್ಲಿ ಗಿಡುಗವು ಮೊದಲನೆಯದು. ಯಜ್ಞಗಳಲ್ಲಿ ಆಹುತಿಯು ಮೊದಲನೆಯದು. ಹರಿದಾಡುವ ಪ್ರಾಣಿಗಳೆಲ್ಲವುಗಳಲ್ಲಿ ಸರ್ಪವು ಹಿರಿಯದು.

14044008a ಕೃತಮಾದಿರ್ಯುಗಾನಾಂ ಚ ಸರ್ವೇಷಾಂ ನಾತ್ರ ಸಂಶಯಃ|

14044008c ಹಿರಣ್ಯಂ ಸರ್ವರತ್ನಾನಾಮೋಷಧೀನಾಂ ಯವಾಸ್ತಥಾ||

ಸರ್ವ ಯುಗಗಳಲ್ಲಿ ಕೃತವು ಮೊದಲನೆಯದು ಎನ್ನುವುದರಲ್ಲಿ ಸಂಶಯವಿಲ್ಲ. ಸರ್ವರತ್ನಗಳಲ್ಲಿ ಹಿರಣ್ಯವು ಮೊದಲನೆಯದು ಮತ್ತು ಔಷಧಿಗಳಲ್ಲಿ ಗೋಧಿಯೇ ಮೊದಲನೆಯದು.

14044009a ಸರ್ವೇಷಾಂ ಭಕ್ಷ್ಯಭೋಜ್ಯಾನಾಮನ್ನಂ ಪರಮಮುಚ್ಯತೇ|

14044009c ದ್ರವಾಣಾಂ ಚೈವ ಸರ್ವೇಷಾಂ ಪೇಯಾನಾಮಾಪ ಉತ್ತಮಾಃ||

ಸರ್ವ ಭಕ್ಷ್ಯಭೋಜ್ಯಗಳಲ್ಲಿ ಅನ್ನವೇ ಪರಮವೆಂದು ಹೇಳುತ್ತಾರೆ. ಎಲ್ಲ ದ್ರವಗಳಲ್ಲಿ ಮತ್ತು ಪಾನೀಯಗಳಲ್ಲಿ ನೀರೇ ಉತ್ತಮವು.

14044010a ಸ್ಥಾವರಾಣಾಂ ಚ ಭೂತಾನಾಂ ಸರ್ವೇಷಾಮವಿಶೇಷತಃ|

14044010c ಬ್ರಹ್ಮಕ್ಷೇತ್ರಂ ಸದಾ ಪುಣ್ಯಂ ಪ್ಲಕ್ಷಃ ಪ್ರಥಮಜಃ ಸ್ಮೃತಃ||

ಸಮಸ್ತ ಸ್ಥಾವರಗಳಲ್ಲಿ ಪುಷ್ಕರಕ್ಷೇತ್ರವು ಸದಾ ಪುಣ್ಯಕರವಾದುದು. ಅಶ್ವತ್ಥವು ವೃಕ್ಷಗಳಲೆಲ್ಲಾ ಮೊದಲನೆಯದೆಂದು ಹೇಳುತ್ತಾರೆ.

14044011a ಅಹಂ ಪ್ರಜಾಪತೀನಾಂ ಚ ಸರ್ವೇಷಾಂ ನಾತ್ರ ಸಂಶಯಃ|

14044011c ಮಮ ವಿಷ್ಣುರಚಿಂತ್ಯಾತ್ಮಾ ಸ್ವಯಂಭೂರಿತಿ ಸ ಸ್ಮೃತಃ||

ಸರ್ವ ಪ್ರಜಾಪತಿಗಳಲ್ಲಿ ನಾನೇ ಮೊದಲನೆಯವನು ಎನ್ನುವುದರಲ್ಲಿ ಸಂಶಯವಿಲ್ಲ. ನನಗಿಂತಲೂ ಮೊದಲನೆಯವನು ಅಚಿಂತ್ಯಾತ್ಮಾ ವಿಷ್ಣು. ಅವನನ್ನು ಸ್ವಯಂಭೂ ಎಂದು ಕರೆಯುತ್ತಾರೆ.

14044012a ಪರ್ವತಾನಾಂ ಮಹಾಮೇರುಃ ಸರ್ವೇಷಾಮಗ್ರಜಃ ಸ್ಮೃತಃ|

14044012c ದಿಶಾಂ ಚ ಪ್ರದಿಶಾಂ ಚೋರ್ಧ್ವಾ ದಿಗ್ಜಾತಾ ಪ್ರಥಮಂ ತಥಾ||[1]

ಪರ್ವತಗಳಿಗೆಲ್ಲಾ ಮಹಾಮೇರುವು ಮೊದಲನೆಯದೆಂದು ಹೇಳುತ್ತಾರೆ. ಹಾಗೆಯೇ ದಿಕ್ಕು ಉಪದಿಕ್ಕುಗಳಲ್ಲಿ ಪೂರ್ವವು ಮೊದಲನೆಯದು.

14044013a ತಥಾ ತ್ರಿಪಥಗಾ ಗಂಗಾ ನದೀನಾಮಗ್ರಜಾ ಸ್ಮೃತಾ|

14044013c ತಥಾ ಸರೋದಪಾನಾನಾಂ ಸರ್ವೇಷಾಂ ಸಾಗರೋಽಗ್ರಜಃ||

ಹಾಗೆಯೇ ನದಿಗಳಲ್ಲಿ ತ್ರಿಪಥಗೆ ಗಂಗೆಯು ಅಗ್ರಜಳೆಂದು ಹೇಳುತ್ತಾರೆ. ಹಾಗೆಯೇ ಸರೋವರ-ಜಲಾಶಯಗಳೆಲ್ಲವುಗಳಲ್ಲಿ ಅಗ್ರಜವು ಸಾಗರ.

14044014a ದೇವದಾನವಭೂತಾನಾಂ ಪಿಶಾಚೋರಗರಕ್ಷಸಾಮ್|

14044014c ನರಕಿನ್ನರಯಕ್ಷಾಣಾಂ ಸರ್ವೇಷಾಮೀಶ್ವರಃ ಪ್ರಭುಃ||

ದೇವ, ದಾನವ, ಭೂತ, ಪಿಶಾಚ, ಉರಗ, ರಾಕ್ಷಸ, ನರ, ಕಿನ್ನರ, ಯಕ್ಷರೆಲ್ಲರ ಪ್ರಭುವು ಈಶ್ವರನು.

14044015a ಆದಿರ್ವಿಶ್ವಸ್ಯ ಜಗತೋ ವಿಷ್ಣುರ್ಬ್ರಹ್ಮಮಯೋ ಮಹಾನ್|

14044015c ಭೂತಂ ಪರತರಂ ತಸ್ಮಾತ್ತ್ರೈಲೋಕ್ಯೇ ನೇಹ ವಿದ್ಯತೇ||

ಬ್ರಹ್ಮಮಯನಾದ ಮಹಾನ್ ವಿಷ್ಣುವು ಈ ಜಗತ್ತು-ವಿಶ್ವದ ಆದಿಯು. ಅವನಿಗಿಂತಲೂ ಅಧಿಕರಾದವರು ಮೂರು ಲೋಕಗಳಲ್ಲಿ ಯಾರೂ ಇಲ್ಲ.

14044016a ಆಶ್ರಮಾಣಾಂ ಚ ಗಾರ್ಹಸ್ಥ್ಯಂ ಸರ್ವೇಷಾಂ ನಾತ್ರ ಸಂಶಯಃ|

14044016c ಲೋಕಾನಾಮಾದಿರವ್ಯಕ್ತಂ ಸರ್ವಸ್ಯಾಂತಸ್ತದೇವ ಚ||

ಆಶ್ರಮಗಳಲೆಲ್ಲಾ ಗೃಹಸ್ಥಾಶ್ರಮವು ಅಧಿಕ ಎನ್ನುವುದರಲ್ಲಿ ಸಂಶಯವಿಲ್ಲ. ಸರ್ವ ಲೋಕಗಳ ಆದಿ ಮತ್ತು ಅಂತ್ಯವು ಅವ್ಯಕ್ತ ಪ್ರಕೃತಿ.

14044017a ಅಹಾನ್ಯಸ್ತಮಯಾಂತಾನಿ ಉದಯಾಂತಾ ಚ ಶರ್ವರೀ|

14044017c ಸುಖಸ್ಯಾಂತಃ ಸದಾ ದುಃಖಂ ದುಃಖಸ್ಯಾಂತಃ ಸದಾ ಸುಖಮ್||

ಹಗಲಿಗೆ ಕತ್ತಲೆಯು ಕೊನೆ. ರಾತ್ರಿಗೆ ಉದಯವು ಕೊನೆ. ಸುಖವು ಸದಾ ದುಃಖದಲ್ಲಿ ಅಂತ್ಯಗೊಳ್ಳುತ್ತದೆ ಮತ್ತು ದುಃಖವು ಸದಾ ಸುಖದಲ್ಲಿ ಅಂತ್ಯಗೊಳ್ಳುತ್ತದೆ.

14044018a ಸರ್ವೇ ಕ್ಷಯಾಂತಾ ನಿಚಯಾಃ ಪತನಾಂತಾಃ ಸಮುಚ್ಚ್ರಯಾಃ|

14044018c ಸಂಯೋಗಾ ವಿಪ್ರಯೋಗಾಂತಾ ಮರಣಾಂತಂ ಹಿ ಜೀವಿತಮ್||

ಸರ್ವ ಸಂಗ್ರಹಗಳೂ ನಾಶದಲ್ಲಿ ಕೊನೆಗೊಳ್ಳುತ್ತವೆ. ಉಚ್ಛ್ರಾಯಸ್ಥಿತಿಯು ಅಧಃಪತನದಲ್ಲಿ ಕೊನೆಗೊಳ್ಳುತ್ತದೆ. ಸಂಯೋಗವು ವಿಯೋಗದಲ್ಲಿ ಕೊನೆಗೊಳ್ಳುತ್ತದೆ. ಜೀವನವು ಮರಣದಲ್ಲಿ ಅಂತ್ಯಗೊಳ್ಳುತ್ತದೆ.

14044019a ಸರ್ವಂ ಕೃತಂ ವಿನಾಶಾಂತಂ ಜಾತಸ್ಯ ಮರಣಂ ಧ್ರುವಮ್|

14044019c ಅಶಾಶ್ವತಂ ಹಿ ಲೋಕೇಽಸ್ಮಿನ್ಸರ್ವಂ ಸ್ಥಾವರಜಂಗಮಮ್||

ಮಾಡಿದುದೆಲ್ಲವೂ ವಿನಾಶದಲ್ಲಿ ಕೊನೆಗೊಳ್ಳುತ್ತವೆ. ಹುಟ್ಟಿದವನಿಗೆ ಮರಣವು ನಿಶ್ಚಿತ. ಈ ಲೋಕದಲ್ಲಿರುವ ಯಾವ ಸ್ಥಾವರ-ಜಂಗಮಗಳೂ ಶಾಶ್ವತವಾದವುಗಳಲ್ಲ.

14044020a ಇಷ್ಟಂ ದತ್ತಂ ತಪೋಽಧೀತಂ ವ್ರತಾನಿ ನಿಯಮಾಶ್ಚ ಯೇ|

14044020c ಸರ್ವಮೇತದ್ವಿನಾಶಾಂತಂ ಜ್ಞಾನಸ್ಯಾಂತೋ ನ ವಿದ್ಯತೇ||

ಯಜ್ಞ, ದಾನ, ತಪಸ್ಸು, ಅಧ್ಯಯನ, ವ್ರತ, ನಿಯಮ ಇವೆಲ್ಲವೂ ಅಂತ್ಯದಲ್ಲಿ ವಿನಾಶಗೊಳ್ಳುತ್ತವೆ. ಆದರೆ ಜ್ಞಾನಕ್ಕೆ ಅಂತ್ಯವಿಲ್ಲ.

14044021a ತಸ್ಮಾಜ್ಞಾನೇನ ಶುದ್ಧೇನ ಪ್ರಸನ್ನಾತ್ಮಾ ಸಮಾಹಿತಃ|

14044021c ನಿರ್ಮಮೋ ನಿರಹಂಕಾರೋ ಮುಚ್ಯತೇ ಸರ್ವಪಾಪ್ಮಭಿಃ||

ಆದುದರಿಂದ ಪ್ರಸನ್ನಾತ್ಮ ಸಮಾಹಿತನು ನಿರ್ಮಮನಾಗಿದ್ದುಕೊಂಡು ನಿರಹಂಕಾರನಾಗಿದ್ದುಕೊಂಡು ಶುದ್ಧ ಜ್ಞಾನದ ಮೂಲಕ ಸರ್ವಪಾಪಗಳಿಂದಲೂ ಮುಕ್ತನಾಗುತ್ತಾನೆ.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ಚತುಶ್ಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ನಲ್ವತ್ನಾಲ್ಕನೇ ಅಧ್ಯಾಯವು.

[1] ದಿಶಾಂ ಪ್ರದಿಶಾಂ ಚೋರ್ಧ್ವಂ ದಿಕ್ಪೂರ್ವಾ ಪ್ರಥಮಾ ತಥಾ|| ಎಂಬ ಪಾಠಾಂತರವಿದೆ.

Comments are closed.