Ashvamedhika Parva: Chapter 43

ಅಶ್ವಮೇಧಿಕ ಪರ್ವ

೪೩

ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಮುಂದುವರಿಸಿ ಹೇಳಿದುದು (೧-೪೦).

14043001 ಬ್ರಹ್ಮೋವಾಚ

14043001a ಮನುಷ್ಯಾಣಾಂ ತು ರಾಜನ್ಯಃ ಕ್ಷತ್ರಿಯೋ ಮಧ್ಯಮೋ ಗುಣಃ|

14043001c ಕುಂಜರೋ ವಾಹನಾನಾಂ ಚ ಸಿಂಹಶ್ಚಾರಣ್ಯವಾಸಿನಾಮ್||

14043002a ಅವಿಃ ಪಶೂನಾಂ ಸರ್ವೇಷಾಮಾಖುಶ್ಚ ಬಿಲವಾಸಿನಾಮ್|

14043002c ಗವಾಂ ಗೋವೃಷಭಶ್ಚೈವ ಸ್ತ್ರೀಣಾಂ ಪುರುಷ ಏವ ಚ||

ಬ್ರಹ್ಮನು ಹೇಳಿದನು: “ಮನುಷ್ಯರಲ್ಲಿ ಕ್ಷತ್ರಿಯ ರಾಜನು ಗುಣಗಳಲ್ಲಿ ಶ್ರೇಷ್ಠ. ಹಾಗೆಯೇ ವಾಹನಗಳಲ್ಲಿ ಆನೆ, ಅರಣ್ಯವಾಸಿಗಳಲ್ಲಿ ಸಿಂಹ, ಸರ್ವ ಪಶುಗಳಲ್ಲಿ ಟಗರು, ಬಿಲವಾಸಿಗಳಲ್ಲಿ ಸರ್ಪ, ಗೋವುಗಳಲ್ಲಿ ಎತ್ತು ಮತ್ತು ಸ್ತ್ರೀಪುರುಷರಲ್ಲಿ ಪುರುಷನು ಶ್ರೇಷ್ಠನು.

14043003a ನ್ಯಗ್ರೋಧೋ ಜಂಬುವೃಕ್ಷಶ್ಚ ಪಿಪ್ಪಲಃ ಶಾಲ್ಮಲಿಸ್ತಥಾ|

14043003c ಶಿಂಶಪಾ ಮೇಷಶೃಂಗಶ್ಚ ತಥಾ ಕೀಚಕವೇಣವಃ|

14043003e ಏತೇ ದ್ರುಮಾಣಾಂ ರಾಜಾನೋ ಲೋಕೇಽಸ್ಮಿನ್ನಾತ್ರ ಸಂಶಯಃ||

ಆಲ, ನೇರಳೆ, ಅರಳಿ, ಬೂರುಗ, ಅಗುರು, ಕುರುಟಿಗ, ಒಳಗೆ ಟೊಳ್ಳಾಗಿರುವ ಬಿದಿರು  - ಈ ವೃಕ್ಷಗಳು ಲೋಕದಲ್ಲಿರುವ ವೃಕ್ಷಗಳಲೆಲ್ಲಾ ಶ್ರೇಷ್ಠವಾದವುಗಳು ಎನ್ನುವುದರಲ್ಲಿ ಸಂಶಯವೇ ಇಲ್ಲ.

14043004a ಹಿಮವಾನ್ಪಾರಿಯಾತ್ರಶ್ಚ ಸಹ್ಯೋ ವಿಂಧ್ಯಸ್ತ್ರಿಕೂಟವಾನ್|

14043004c ಶ್ವೇತೋ ನೀಲಶ್ಚ ಭಾಸಶ್ಚ ಕಾಷ್ಠವಾಂಶ್ಚೈವ ಪರ್ವತಃ||

14043005a ಶುಭಸ್ಕಂಧೋ ಮಹೇಂದ್ರಶ್ಚ ಮಾಲ್ಯವಾನ್ಪರ್ವತಸ್ತಥಾ|

14043005c ಏತೇ ಪರ್ವತರಾಜಾನೋ ಗಣಾನಾಂ ಮರುತಸ್ತಥಾ||

ಹಿಮವಂತ, ಪಾರಿಯಾತ್ರ, ಸಹ್ಯ, ತ್ರಿಕೂಟ, ವಿಂಧ್ಯ, ಶ್ವೇತ, ನೀಲ, ಭಾಸ, ಕಾಷ್ಠವಾನ್, ಶುಭಸ್ಕಂಧ, ಮಹೇಂದ್ರ ಮತ್ತು ಮಾಲ್ಯವಾನ್ – ಈ ಪರ್ವತಗಳು ಎಲ್ಲ ಪರ್ವತಗಳಿಂತ ಶ್ರೇಷ್ಠ. ಗಣಗಳಲ್ಲಿ ಮರುದ್ಗಣವು ಶ್ರೇಷ್ಠವಾದುದು.

14043006a ಸೂರ್ಯೋ ಗ್ರಹಾಣಾಮಧಿಪೋ ನಕ್ಷತ್ರಾಣಾಂ ಚ ಚಂದ್ರಮಾಃ|

14043006c ಯಮಃ ಪಿತೄಣಾಮಧಿಪಃ ಸರಿತಾಮಥ ಸಾಗರಃ||

ಸೂರ್ಯನು ಗ್ರಹಗಳ ಅಧಿಪ ಮತ್ತು ಚಂದ್ರಮನು ನಕ್ಷತ್ರಗಳ ಒಡೆಯ. ಯಮನು ಪಿತೃಗಳ ಅಧಿಪ ಮತ್ತು ಸಾಗರನು ಸರಿತ್ತುಗಳ ಒಡೆಯ.

14043007a ಅಂಭಸಾಂ ವರುಣೋ ರಾಜಾ ಸತ್ತ್ವಾನಾಂ ಮಿತ್ರ ಉಚ್ಯತೇ|[1]

14043007c ಅರ್ಕೋಽಧಿಪತಿರುಷ್ಣಾನಾಂ ಜ್ಯೋತಿಷಾಮಿಂದುರುಚ್ಯತೇ||

ವರುಣನು ನೀರುಗಳ ರಾಜ ಮತ್ತು ಮಿತ್ರನು ಸತ್ತ್ವಗಳ ಮಿತ್ರ ಎಂದು ಹೇಳುತ್ತಾರೆ. ಉಷ್ಣಪದಾರ್ಥಗಳಿಗೆ ಸೂರ್ಯನು ಅಧಿಪತಿ. ಜ್ಯೋತಿಗಳಿಗೆ ಇಂದುವು ರಾಜ.

14043008a ಅಗ್ನಿರ್ಭೂತಪತಿರ್ನಿತ್ಯಂ ಬ್ರಾಹ್ಮಣಾನಾಂ ಬೃಹಸ್ಪತಿಃ|

14043008c ಓಷಧೀನಾಂ ಪತಿಃ ಸೋಮೋ ವಿಷ್ಣುರ್ಬಲವತಾಂ ವರಃ||

ಅಗ್ನಿಯು ಎಲ್ಲ ಭೂತಗಳ ಒಡೆಯ ಮತ್ತು ಬೃಹಸ್ಪತಿಯು ಬ್ರಾಹ್ಮಣರ ಅಧಿಪತಿ. ಔಷಧಿಗಳ ಪತಿ ಸೋಮ ಮತ್ತು ವಿಷ್ಣುವು ಬಲವಂತರಲ್ಲಿ ಶ್ರೇಷ್ಠನು.

14043009a ತ್ವಷ್ಟಾಧಿರಾಜೋ ರೂಪಾಣಾಂ ಪಶೂನಾಮೀಶ್ವರಃ ಶಿವಃ|

14043009c ದಕ್ಷಿಣಾನಾಂ ತಥಾ ಯಜ್ಞೋ ವೇದಾನಾಮೃಷಯಸ್ತಥಾ||

ರೂಪಗಳಿಗೆ ತ್ವಷ್ಟನೇ ಅಧಿರಾಜ. ಪಶುಗಳ ಅಧಿರಾಜನು ಈಶ್ವರ ಶಿವ. ಹಾಗೆಯೇ ದಕ್ಷಿಣೆಗಳಿಗೆ ಯಜ್ಞ ಮತ್ತು ವೇದಗಳಿಗೆ ಋಷಿಗಳು ಅಧಿಪತಿಗಳು.

14043010a ದಿಶಾಮುದೀಚೀ ವಿಪ್ರಾಣಾಂ ಸೋಮೋ ರಾಜಾ ಪ್ರತಾಪವಾನ್|

14043010c ಕುಬೇರಃ ಸರ್ವಯಕ್ಷಾಣಾಂ ದೇವತಾನಾಂ ಪುರಂದರಃ|

14043010e ಏಷ ಭೂತಾದಿಕಃ ಸರ್ಗಃ ಪ್ರಜಾನಾಂ ಚ ಪ್ರಜಾಪತಿಃ||

ದಿಕ್ಕುಗಳಲ್ಲಿ ಉತ್ತರವು ಶ್ರೇಷ್ಠ, ವಿಪ್ರರಿಗೆ ಪ್ರತಾಪವಾನ್ ಸೋಮನು ರಾಜ. ಸರ್ವ ಯಕ್ಷರಲ್ಲಿ ಕುಬೇರನು ಶ್ರೇಷ್ಠ ಮತ್ತು ದೇವತೆಗಳಲ್ಲಿ ಪುರಂದರನು ಶ್ರೇಷ್ಠ. ಪ್ರಜೆಗಳಿಗೆ ಪ್ರಜಾಪತಿಯು ಅಧಿಪನು. ಇದು ಭೂತಗಳ ಅಧಿಪತಿ ಸರ್ಗವಾಯಿತು.

14043011a ಸರ್ವೇಷಾಮೇವ ಭೂತಾನಾಮಹಂ ಬ್ರಹ್ಮಮಯೋ ಮಹಾನ್|

14043011c ಭೂತಂ ಪರತರಂ ಮತ್ತೋ ವಿಷ್ಣೋರ್ವಾಪಿ ನ ವಿದ್ಯತೇ||

ನಾನೇ ಎಲ್ಲ ಪ್ರಾಣಿಗಳಿಗೂ ಅಧೀಶ್ವರ ಮತ್ತು ಮಹಾನ್ ಬ್ರಹ್ಮಮಯನು. ನಾನು ಮತ್ತು ವಿಷ್ಣುವಿಗಿಂತಲೂ ಶ್ರೇಷ್ಠರಾದವರು ಯಾರೂ ಇಲ್ಲ.

14043012a ರಾಜಾಧಿರಾಜಃ ಸರ್ವಾಸಾಂ ವಿಷ್ಣುರ್ಬ್ರಹ್ಮಮಯೋ ಮಹಾನ್|

14043012c ಈಶ್ವರಂ ತಂ ವಿಜಾನೀಮಃ ಸ ವಿಭುಃ ಸ ಪ್ರಜಾಪತಿಃ||

ಮಹಾನ್ ಬ್ರಹ್ಮಮಯನಾದ ವಿಷ್ಣುವೇ ಸರ್ವರ ರಾಜಾಧಿರಾಜ. ಅವನೇ ಈಶ್ವರ, ಅವನೇ ವಿಭು ಮತ್ತು ಅವನೇ ಪ್ರಜಾಪತಿಯೆಂದು ತಿಳಿದುಕೊಳ್ಳಬೇಕು.

14043013a ನರಕಿನ್ನರಯಕ್ಷಾಣಾಂ ಗಂಧರ್ವೋರಗರಕ್ಷಸಾಮ್|

14043013c ದೇವದಾನವನಾಗಾನಾಂ ಸರ್ವೇಷಾಮೀಶ್ವರೋ ಹಿ ಸಃ||

ನರ, ಕಿನ್ನರ, ಯಕ್ಷ, ಗಂಧರ್ವ, ಉರಗ, ರಾಕ್ಷಸ, ದೇವ, ದಾನವ, ನಾಗ ಎಲ್ಲರ ಈಶ್ವರನೂ ಅವನೇ.

14043014a ಭಗದೇವಾನುಯಾತಾನಾಂ ಸರ್ವಾಸಾಂ ವಾಮಲೋಚನಾ|

14043014c ಮಾಹೇಶ್ವರೀ ಮಹಾದೇವೀ ಪ್ರೋಚ್ಯತೇ ಪಾರ್ವತೀತಿ ಯಾ||

14043015a ಉಮಾಂ ದೇವೀಂ ವಿಜಾನೀತ ನಾರೀಣಾಮುತ್ತಮಾಂ ಶುಭಾಮ್|

14043015c ರತೀನಾಂ ವಸುಮತ್ಯಸ್ತು ಸ್ತ್ರೀಣಾಮಪ್ಸರಸಸ್ತಥಾ||

ಭಗದೇವ ಸೂರ್ಯನು ಅನುಸರಿಸುವ ಸರ್ವಸ್ತ್ರೀಯರಲ್ಲಿಯೂ ಸುಂದರ ಕಣ್ಣುಗಳನ್ನು ಹೊಂದಿರುವ ಮಾಹೇಶ್ವರಿ ಮಹಾದೇವೀ ಪಾರ್ವತಿಯೇ ಶ್ರೇಷ್ಠಳಾದವಳು. ನಾರಿಗಳಲ್ಲಿ ಉಮಾದೇವಿಯು ಉತ್ತಮಳೂ ಶುಭಳೂ ಎಂದು ತಿಳಿಯಿರಿ. ರಮಿಸಲು ಯೋಗ್ಯ ಸ್ತ್ರೀಯರಲ್ಲಿ ಸರ್ವಾಭರಣಭೂಷಿತ ಅಪ್ಸರೆಯರೇ ಶ್ರೇಷ್ಠರು.

14043016a ಧರ್ಮಕಾಮಾಶ್ಚ ರಾಜಾನೋ ಬ್ರಾಹ್ಮಣಾ ಧರ್ಮಲಕ್ಷಣಾಃ|[2]

14043016c ತಸ್ಮಾದ್ರಾಜಾ ದ್ವಿಜಾತೀನಾಂ ಪ್ರಯತೇತೇಹ ರಕ್ಷಣೇ||

ರಾಜರು ಧರ್ಮಕಾಮಿಗಳು ಮತ್ತು ಬ್ರಾಹ್ಮಣರು ಧರ್ಮಲಕ್ಷಣರು. ಆದುದರಿಂದ ರಾಜನಾದವನು ದ್ವಿಜಾತಿಯವರ ರಕ್ಷಣೆಗಾಗಿ ಪ್ರಯತ್ನಿಸುತ್ತಿರಬೇಕು.

14043017a ರಾಜ್ಞಾಂ ಹಿ ವಿಷಯೇ ಯೇಷಾಮವಸೀದಂತಿ ಸಾಧವಃ|

14043017c ಹೀನಾಸ್ತೇ ಸ್ವಗುಣೈಃ ಸರ್ವೈಃ ಪ್ರೇತ್ಯಾವಾನ್ಮಾರ್ಗಗಾಮಿನಃ||

ಯಾವ ರಾಜನ ರಾಜ್ಯದಲ್ಲಿ ಸಾಧುಗಳು ವಿನಾಶಹೊಂದುವರೋ ಅವನು ಸರ್ವ ಸ್ವಗುಣಗಳಿಂದ ಹೀನನಾಗಿ ಮರಣಾನಂತರ ದುರ್ಗತಿಯನ್ನು ಹೊಂದುತ್ತಾನೆ.

14043018a ರಾಜ್ಞಾಂ ತು ವಿಷಯೇ ಯೇಷಾಂ ಸಾಧವಃ ಪರಿರಕ್ಷಿತಾಃ|

14043018c ತೇಽಸ್ಮಿಽಲ್ಲೋಕೇ ಪ್ರಮೋದಂತೇ ಪ್ರೇತ್ಯ ಚಾನಂತ್ಯಮೇವ ಚ|

14043018e ಪ್ರಾಪ್ನುವಂತಿ ಮಹಾತ್ಮಾನ ಇತಿ ವಿತ್ತ ದ್ವಿಜರ್ಷಭಾಃ||

ದ್ವಿಜರ್ಷಭರೇ! ಯಾವ ರಾಜರ ರಾಜ್ಯದಲ್ಲಿ ಸಾಧುಗಳು ಪರಿರಕ್ಷಿತರಾಗಿರುವರೋ ಅವರು ಈ ಲೋಕದಲ್ಲಿ ಸಂತೋಷದಿಂದಿರುತ್ತಾರೆ ಮತ್ತು ಮರಣಾನಂತರವೂ ಅನಂತಕಾಲದವರೆಗೆ ಸದ್ಗತಿಯನ್ನು ಹೊಂದುತ್ತಾರೆ.

14043019a ಅತ ಊರ್ಧ್ವಂ ಪ್ರವಕ್ಷ್ಯಾಮಿ ನಿಯತಂ ಧರ್ಮಲಕ್ಷಣಮ್|

14043019c ಅಹಿಂಸಾಲಕ್ಷಣೋ ಧರ್ಮೋ ಹಿಂಸಾ ಚಾಧರ್ಮಲಕ್ಷಣಾ||

ಇನ್ನು ಮುಂದೆ ನಾನು ಧರ್ಮದ ನಿಯತ ಲಕ್ಷಣಗಳನ್ನು ಹೇಳುತ್ತೇನೆ. ಅಹಿಂಸೆಯು ಧರ್ಮದ ಲಕ್ಷಣ. ಹಿಂಸೆಯು ಅಧರ್ಮದ ಲಕ್ಷಣ.

14043020a ಪ್ರಕಾಶಲಕ್ಷಣಾ ದೇವಾ ಮನುಷ್ಯಾಃ ಕರ್ಮಲಕ್ಷಣಾಃ|

14043020c ಶಬ್ದಲಕ್ಷಣಮಾಕಾಶಂ ವಾಯುಸ್ತು ಸ್ಪರ್ಶಲಕ್ಷಣಃ||

ದೇವತೆಗಳ ಲಕ್ಷಣವು ಪ್ರಕಾಶ. ಮನುಷ್ಯರ ಲಕ್ಷಣವು ಕರ್ಮ. ಆಕಾಶದ ಲಕ್ಷಣವು ಶಬ್ಧ. ವಾಯುವಿನ ಲಕ್ಷಣವು ಸ್ಪರ್ಶ.

14043021a ಜ್ಯೋತಿಷಾಂ ಲಕ್ಷಣಂ ರೂಪಮಾಪಶ್ಚ ರಸಲಕ್ಷಣಾಃ|

14043021c ಧರಣೀ ಸರ್ವಭೂತಾನಾಂ ಪೃಥಿವೀ ಗಂಧಲಕ್ಷಣಾ||

ಬೆಳಗುತ್ತಿರುವವುಗಳ ಲಕ್ಷಣ ರೂಪ ಮತ್ತು ರಸವು ನೀರಿನ ಲಕ್ಷಣ. ಸರ್ವಭೂತಗಳನ್ನು ಹೊತ್ತಿರುವ ಪೃಥ್ವಿಯ ಲಕ್ಷಣವು ಗಂಧ.

14043022a ಸ್ವರವ್ಯಂಜನಸಂಸ್ಕಾರಾ ಭಾರತೀ ಸತ್ಯಲಕ್ಷಣಾ|

14043022c ಮನಸೋ ಲಕ್ಷಣಂ ಚಿಂತಾ ತಥೋಕ್ತಾ ಬುದ್ಧಿರನ್ವಯಾತ್||[3]

ಸ್ವರವ್ಯಂಜನಗಳಿಂದ ಕೂಡಿದ ಸಂಸ್ಕಾರಯುಕ್ತ ಮಾತೇ ಸತ್ಯದ ಲಕ್ಷಣ. ಮನಸ್ಸಿನ ಲಕ್ಷಣ ಚಿಂತೆ ಮತ್ತು ನಿಶ್ಚಯವು ಬುದ್ಧಿಯ ಲಕ್ಷಣ.

14043023a ಮನಸಾ ಚಿಂತಯಾನೋಽರ್ಥಾನ್ಬುದ್ಧ್ಯಾ ಚೈವ ವ್ಯವಸ್ಯತಿ|

14043023c ಬುದ್ಧಿರ್ಹಿ ವ್ಯವಸಾಯೇನ ಲಕ್ಷ್ಯತೇ ನಾತ್ರ ಸಂಶಯಃ||

ಮನಸ್ಸಿನಿಂದ ಆಲೋಚಿಸುವ ವಿಷಯಗಳನ್ನು ಬುದ್ಧಿಯು ಇತ್ಯರ್ಥಗೊಳಿಸುತ್ತದೆ. ಬುದ್ಧಿಯು ಯಾವಾಗಲೂ ನಿಶ್ಚಯಾತ್ಮಕವಾದುದು ಮತ್ತು ಕಾರ್ಯನಿರತವಾದುದು ಎನ್ನುವುದರಲ್ಲಿ ಸಂಶಯವಿಲ್ಲ.

14043024a ಲಕ್ಷಣಂ ಮಹತೋ ಧ್ಯಾನಮವ್ಯಕ್ತಂ ಸಾಧುಲಕ್ಷಣಮ್|[4]

14043024c ಪ್ರವೃತ್ತಿಲಕ್ಷಣೋ ಯೋಗೋ ಜ್ಞಾನಂ ಸಂನ್ಯಾಸಲಕ್ಷಣಮ್|

ಧ್ಯಾನ ಮತ್ತು ಅವ್ಯಕ್ತತೆ ಇವು ಸಾಧುಗಳ ಮಹಾ ಲಕ್ಷಣಗಳು. ಪ್ರವೃತ್ತಿಯು ಯೋಗದ ಮತ್ತು ಜ್ಞಾನವು ಸಂನ್ಯಾಸದ ಲಕ್ಷಣಗಳು.

14043025a ತಸ್ಮಾಜ್ಞಾನಂ ಪುರಸ್ಕೃತ್ಯ ಸಂನ್ಯಸೇದಿಹ ಬುದ್ಧಿಮಾನ್|

14043025c ಸಂನ್ಯಾಸೀ ಜ್ಞಾನಸಂಯುಕ್ತಃ ಪ್ರಾಪ್ನೋತಿ ಪರಮಾಂ ಗತಿಮ್|

14043025e ಅತೀತೋಽದ್ವಂದ್ವಮಭ್ಯೇತಿ ತಮೋಮೃತ್ಯುಜರಾತಿಗಮ್||

ಅದುದರಿಂದ ಬುದ್ಧಿವಂತನು ಜ್ಞಾನವನ್ನು ಪುರಸ್ಕರಿಸಿ ಸಂನ್ಯಾಸಗ್ರಹಣ ಮಾಡಬೇಕು. ಜ್ಞಾನಸಂಯುಕ್ತ ಸಂನ್ಯಾಸಿಯು ದ್ವಂದ್ವಗಳಿಂದ ಅತೀತನಾಗಿ ಅಜ್ಞಾನ-ಮುಪ್ಪು-ಸಾವುಗಳನ್ನು ದಾಟಿ ಪರಮಸದ್ಗತಿಯನ್ನು ಹೊಂದುತ್ತಾನೆ.

14043026a ಧರ್ಮಲಕ್ಷಣಸಂಯುಕ್ತಮುಕ್ತಂ ವೋ ವಿಧಿವನ್ಮಯಾ|

14043026c ಗುಣಾನಾಂ ಗ್ರಹಣಂ ಸಮ್ಯಗ್ವಕ್ಷ್ಯಾಮ್ಯಹಮತಃ ಪರಮ್||

ಇದೂವರೆಗೆ ನಾನು ಲಕ್ಷಣಗಳಿಂದ ಕೂಡಿದ ಧರ್ಮದ ಕುರಿತು ವಿಧಿವತ್ತಾಗಿ ಹೇಳಿದೆನು. ಇನ್ನು ಮುಂದೆ ಯಾವ ಯಾವ ಗುಣಗಳನ್ನು ಯಾವ ಯಾವ ಇಂದ್ರಿಯಗಳು ಗ್ರಹಿಸುತ್ತವೆ ಎನ್ನುವುದನ್ನು ಹೇಳುತ್ತೇನೆ.

14043027a ಪಾರ್ಥಿವೋ ಯಸ್ತು ಗಂಧೋ ವೈ ಘ್ರಾಣೇನೇಹ ಸ ಗೃಹ್ಯತೇ|

14043027c ಘ್ರಾಣಸ್ಥಶ್ಚ ತಥಾ ವಾಯುರ್ಗಂಧಜ್ಞಾನೇ ವಿಧೀಯತೇ||

ಪೃಥ್ವಿಯಲ್ಲಿರುವ ಗಂಧವೆಂಬ ಗುಣವನ್ನು ಮೂಗು ಗ್ರಹಿಸುತ್ತದೆ. ಮೂಗಿನಲ್ಲಿರುವ ವಾಯುವು ಗಂಧವನ್ನು ತಿಳಿಯಲು ಸಹಾಯಮಾಡುತ್ತಾನೆ.

14043028a ಅಪಾಂ ಧಾತುರಸೋ ನಿತ್ಯಂ ಜಿಹ್ವಯಾ ಸ ತು ಗೃಹ್ಯತೇ|

14043028c ಜಿಹ್ವಾಸ್ಥಶ್ಚ ತಥಾ ಸೋಮೋ ರಸಜ್ಞಾನೇ ವಿಧೀಯತೇ||

ಆಪದ ಸ್ವಾಭಾವಿಕ ಗುಣ ರಸವನ್ನು ನಾಲಿಗೆಯು ಗ್ರಹಿಸುತ್ತದೆ. ನಾಲಿಗೆಯಲ್ಲಿರುವ ಸೋಮನು ರಸಜ್ಞಾನಕ್ಕೆ ಸಹಾಯಮಾಡುತ್ತಾನೆ.

14043029a ಜ್ಯೋತಿಷಶ್ಚ ಗುಣೋ ರೂಪಂ ಚಕ್ಷುಷಾ ತಚ್ಚ ಗೃಹ್ಯತೇ|

14043029c ಚಕ್ಷುಃಸ್ಥಶ್ಚ ತಥಾದಿತ್ಯೋ ರೂಪಜ್ಞಾನೇ ವಿಧೀಯತೇ||

ಜ್ಯೋತಿಯ ಗುಣವಾದ ರೂಪವನ್ನು ಕಣ್ಣುಗಳು ಗ್ರಹಿಸುತ್ತವೆ. ಕಣ್ಣುಗಳಲ್ಲಿರುವ ಆದಿತ್ಯನು ರೂಪಜ್ಞಾನದಲ್ಲಿ ಸಹಾಯಮಾಡುತ್ತಾನೆ.

14043030a ವಾಯವ್ಯಸ್ತು ತಥಾ ಸ್ಪರ್ಶಸ್ತ್ವಚಾ ಪ್ರಜ್ಞಾಯತೇ ಚ ಸಃ|

14043030c ತ್ವಕ್ಸ್ಥಶ್ಚೈವ ತಥಾ ವಾಯುಃ ಸ್ಪರ್ಶಜ್ಞಾನೇ ವಿಧೀಯತೇ||

ಹಾಗೆಯೇ ವಾಯುವಿನ ಗುಣ ಸ್ಪರ್ಶವನ್ನು ಚರ್ಮವು ತಿಳಿದುಕೊಳ್ಳುತ್ತದೆ. ಚರ್ಮದಲ್ಲಿರುವ ವಾಯುವು ಸ್ಪರ್ಶಜ್ಞಾನಕ್ಕೆ ಸಹಾಯಮಾಡುತ್ತಾನೆ.

14043031a ಆಕಾಶಸ್ಯ ಗುಣೋ ಘೋಷಃ ಶ್ರೋತ್ರೇಣ ಸ ತು ಗೃಹ್ಯತೇ|

14043031c ಶ್ರೋತ್ರಸ್ಥಾಶ್ಚ ದಿಶಃ ಸರ್ವಾಃ ಶಬ್ದಜ್ಞಾನೇ ಪ್ರಕೀರ್ತಿತಾಃ||

ಆಕಾಶದ ಗುಣ ಘೋಷವನ್ನು ಕಿವಿಗಳು ಗ್ರಹಿಸುತ್ತವೆ. ಕಿವಿಗಳಲ್ಲಿರುವ ಎಲ್ಲ ದಿಗ್ದೇವತೆಗಳೂ ಶಬ್ಧಜ್ಞಾನಕ್ಕೆ ಸಹಾಯಮಾಡುತ್ತವೆ.

14043032a ಮನಸಸ್ತು ಗುಣಶ್ಚಿಂತಾ ಪ್ರಜ್ಞಯಾ ಸ ತು ಗೃಹ್ಯತೇ|

14043032c ಹೃದಿಸ್ಥಚೇತನಾಧಾತುರ್ಮನೋಜ್ಞಾನೇ ವಿಧೀಯತೇ||

ಮನಸ್ಸಿನ ಗುಣವಾದ ಚಿಂತೆಯನ್ನು ಪ್ರಜ್ಞೆಯು ಗ್ರಹಿಸುತ್ತದೆ. ಹೃದಯದಲ್ಲಿರುವ ಚೇತನವು ಮನೋಜ್ಞಾನಕ್ಕೆ ಸಹಾಯಮಾಡುತ್ತದೆ.

14043033a ಬುದ್ಧಿರಧ್ಯವಸಾಯೇನ ಧ್ಯಾನೇನ ಚ ಮಹಾಂಸ್ತಥಾ|[5]

14043033c ನಿಶ್ಚಿತ್ಯ ಗ್ರಹಣಂ ನಿತ್ಯಮವ್ಯಕ್ತಂ ನಾತ್ರ ಸಂಶಯಃ||

ನಿಶ್ಚಯದಿಂದ ಬುದ್ಧಿ ಮತ್ತು ಧ್ಯಾನದಿಂದ ಮಹತ್ತು ಗ್ರಹಿಸಲ್ಪಡುತ್ತವೆ. ಈ ನಿಶ್ಚಯ ಗ್ರಹಣವು ನಿತ್ಯವೂ ಅವ್ಯಕ್ತವಾಗಿರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. 

14043034a ಅಲಿಂಗಗ್ರಹಣೋ ನಿತ್ಯಃ ಕ್ಷೇತ್ರಜ್ಞೋ ನಿರ್ಗುಣಾತ್ಮಕಃ|

14043034c ತಸ್ಮಾದಲಿಂಗಃ ಕ್ಷೇತ್ರಜ್ಞಃ ಕೇವಲಂ ಜ್ಞಾನಲಕ್ಷಣಃ||

ನಿತ್ಯವೂ ನಿರ್ಗುಣಾತ್ಮಕನಾದ ಕ್ಷೇತ್ರಜ್ಞನನ್ನು ಯಾವುದೇ ರೀತಿಯ ಚಿಹ್ನೆ-ಲಕ್ಷಣಗಳ ಮೂಲಕ ತಿಳಿದುಕೊಳ್ಳಲು ಸಾಧ್ಯವಿಲ್ಲ. ಆದುದರಿಂದ ಕೇವಲ ಜ್ಞಾನವೇ ಚಿಹ್ನಾರಹಿತನಾದ ಕ್ಷೇತ್ರಜ್ಞನ ಲಕ್ಷಣವು. 

14043035a ಅವ್ಯಕ್ತಂ ಕ್ಷೇತ್ರಮುದ್ದಿಷ್ಟಂ ಗುಣಾನಾಂ ಪ್ರಭವಾಪ್ಯಯಮ್|

14043035c ಸದಾ ಪಶ್ಯಾಮ್ಯಹಂ ಲೀನಂ ವಿಜಾನಾಮಿ ಶೃಣೋಮಿ ಚ||

ಗುಣಗಳು ಹುಟ್ಟುವ ಮತ್ತು ಲೀನಗೊಳ್ಳುವ ಅವ್ಯಕ್ತವಾದುದನ್ನೇ ಕ್ಷೇತ್ರವೆಂದು ಹೇಳುತ್ತಾರೆ. ಸದಾ ನಾನು ಅದರಲ್ಲಿಯೇ ಲೀನನಾಗಿದ್ದುಕೊಂಡು ಅದನ್ನು ನೋಡುತ್ತೇನೆ, ಕೇಳುತ್ತೇನೆ ಮತ್ತು ಅರಿತುಕೊಳ್ಳುತ್ತೇನೆ.

14043036a ಪುರುಷಸ್ತದ್ವಿಜಾನೀತೇ ತಸ್ಮಾತ್ಕ್ಷೇತ್ರಜ್ಞ ಉಚ್ಯತೇ|

14043036c ಗುಣವೃತ್ತಂ ತಥಾ ಕೃತ್ಸ್ನಂ ಕ್ಷೇತ್ರಜ್ಞಃ ಪರಿಪಶ್ಯತಿ||

ಪುರುಷನು ಅದನ್ನು ಅರಿತುಕೊಂಡಿದ್ದಾನೆ. ಆದುದರಿಂದ ಅವನಿಗೆ ಕ್ಷೇತ್ರಜ್ಞನೆಂದು ಹೇಳುತ್ತಾರೆ. ಹಾಗೆಯೇ ಕ್ಷೇತ್ರಜ್ಞನು ಗುಣಗಳ ಎಲ್ಲ ಕ್ರಿಯೆಗಳನ್ನೂ ನೋಡುತ್ತಿರುತ್ತಾನೆ.

14043037a ಆದಿಮಧ್ಯಾವಸಾನಾಂತಂ ಸೃಜ್ಯಮಾನಮಚೇತನಮ್|

14043037c ನ ಗುಣಾ ವಿದುರಾತ್ಮಾನಂ ಸೃಜ್ಯಮಾನಂ ಪುನಃ ಪುನಃ||

ಪುನಃ ಪುನಃ ಸೃಷ್ಟಿಸಲ್ಪಟ್ಟು ಆದಿ-ಮಧ್ಯ-ಅಂತ್ಯಗಳೆಂಬ ಕಟ್ಟುಗಳಿಗೆ ಬಂಧಿತಗೊಂಡಿರುವ ಆ ಅಚೇತನ ಗುಣಗಳಿಗೆ ತಮ್ಮ ಅರಿವು ಇರುವುದಿಲ್ಲ.

14043038aಸತ್ಯಂ ವೇದ ವೈ ಕಶ್ಚಿತ್ಕ್ಷೇತ್ರಜ್ಞಸ್ತ್ವೇವ ವಿಂದತಿ|

14043038c ಗುಣಾನಾಂ ಗುಣಭೂತಾನಾಂ ಯತ್ಪರಂ ಪರತೋ ಮಹತ್||

ಕ್ಷೇತ್ರಜ್ಞನಲ್ಲದೇ ಬೇರೆ ಯಾವುದಕ್ಕೂ ಗುಣಗಳ ಮತ್ತು ಗುಣಗಳು ಹುಟ್ಟಿಸುವ ಮತ್ತು ಅವುಗಳಿಗಿಂತಲೂ ಅತೀತವಾಗಿರುವ ಪರಮ ಮಹಾ ಸತ್ಯವು ತಿಳಿಯುವುದಿಲ್ಲ.

14043039a ತಸ್ಮಾದ್ಗುಣಾಂಶ್ಚ ತತ್ತ್ವಂ ಚ ಪರಿತ್ಯಜ್ಯೇಹ ತತ್ತ್ವವಿತ್|

14043039c ಕ್ಷೀಣದೋಷೋ ಗುಣಾನ್ ಹಿತ್ವಾ ಕ್ಷೇತ್ರಜ್ಞಂ ಪ್ರವಿಶತ್ಯಥ||[6]

ಆದುದರಿಂದ ತತ್ತ್ವವನ್ನು ತಿಳಿದುಕೊಂಡಿರುವವನು ಗುಣಗಳನ್ನೂ ಅವುಗಳ ಕ್ರಿಯೆಗಳನ್ನೂ ಪರಿತ್ಯಜಿಸಿ ದೋಷಗಳನ್ನು ಕಳೆದುಕೊಂಡು ಕ್ಷೇತ್ರಜ್ಞನನ್ನು ಪ್ರವೇಶಿಸುತ್ತಾನೆ.

14043040a ನಿರ್ದ್ವಂದ್ವೋ ನಿರ್ನಮಸ್ಕಾರೋ ನಿಃಸ್ವಧಾಕಾರ ಏವ ಚ|

14043040c ಅಚಲಶ್ಚಾನಿಕೇತಶ್ಚ ಕ್ಷೇತ್ರಜ್ಞಃ ಸ ಪರೋ ವಿಭುಃ||

ನಿರ್ದ್ವಂದ್ವನೂ, ನಿರ್ನಮಸ್ಕಾರನೂ[7], ನಿಃಸ್ವಧಾಕಾರನೂ[8], ಅಚಲನೂ, ಮನೆಯಿಲ್ಲದವನೂ ಆದ ಕ್ಷೇತ್ರಜ್ಞನೇ ಪರಮ ವಿಭುವು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ತ್ರಿಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ನಲ್ವತ್ಮೂರನೇ ಅಧ್ಯಾಯವು.

[1] ಅಂಭಸಾಂ ವರುಣೋ ರಾಜ ಮರುತಾಮಿಂದ್ರ ಉಚ್ಯತೇ| ಎಂಬ ಪಾಠಾಂತರವಿದೆ.

[2] ಧರ್ಮಕಾಮಾಶ್ಚ ರಾಜಾನೋ ಬ್ರಾಹ್ಮಣಾ ಧರ್ಮಸೇತವಃ| ಎಂಬ ಪಾಠಾಂತರವಿದೆ.

[3] ಸ್ವರವ್ಯಂಜನಸಂಸ್ಕಾರಾ ಭಾರತೀ ಶಬ್ಧಲಕ್ಷಣಾ| ಮನಸೋ ಲಕ್ಷಣಂ ಚಿಂತಾ ಚಿಂತೋಕ್ತಾ ಬುದ್ಧಿಲಕ್ಷಣಾ|| ಎಂಬ ಪಾಠಾಂತರವಿದೆ.

[4] ಲಕ್ಷಣಂ ಮನಸೋ ಧ್ಯಾನಮವ್ಯಕ್ತಂ ಸಾಧುಲಕ್ಷಣಮ್| ಅರ್ಥಾತ್ ಮನಸ್ಸಿನ ಲಕ್ಷಣ ಧ್ಯಾನ ಮತ್ತು ಬಹಿಃಪ್ರಪಂಚಕ್ಕೆ ತೋರಿಸಿಕೊಳ್ಳದೇ ಇರುವುದೇ ಸಾಧುಪುರುಷರ ಲಕ್ಷಣ ಎಂಬ ಪಾಠಾಂತರವಿದೆ.

[5] ಬುದ್ಧಿರಧ್ಯವಸಾಯೇನ ಜ್ಞಾನೇನ ಚ ಮಹಾಂಸ್ತಥಾ| ಅರ್ಥಾತ್ ನಿಶ್ಚಯದಿಂದ ಬುದ್ಧಿ ಮತ್ತು ಜ್ಞಾನದಿಂದ ಮಹತ್ತು ಗ್ರಹಿಸಲ್ಪಡುತ್ತವೆ ಎಂಬ ಪಾಠಾಂತರವಿದೆ.

[6] ತಸ್ಮಾದ್ಗುಣಾಂಶ್ಚ ಸತ್ತ್ವಂ ಚ ಪರಿತ್ಯಜ್ಯೇಹ ಧರ್ಮವಿತ್| ಕ್ಷೀಣದೋಷೋ ಗುಣಾತೀತಃ ಕ್ಷೇತ್ರಜ್ಞಂ ಪ್ರವಿಶತ್ಯಥ|| ಅರ್ಥಾತ್ ಆದುದರಿಂದ ಪಾಪಗಳನ್ನು ಕಳೆದುಕೊಂಡ ಗುಣಾತೀತ ಧರ್ಮಜ್ಞನು ಸತ್ತ್ವವನ್ನೂ ಮತ್ತು ಗುಣಗಳನ್ನೂ ಪರಿತ್ಯಜಿಸಿ ಶುದ್ಧರೂಪನಾದ ಕ್ಷೇತ್ರಜ್ಞನನ್ನು ಪ್ರವೇಶಿಸುತ್ತಾನೆ ಎಂಬ ಪಾಠಾಂತರವಿದೆ.

[7] ಯಾರಿಗೂ ನಮಸ್ಕರಿಸದವನು ಮತ್ತು ಯಾರ ನಮಸ್ಕಾರಗಳೂ ಬೇಕಿಲ್ಲದವನು.

[8] ಸ್ವಾಹಾಕಾರರೂಪದ ಯಜ್ಞಗಳನ್ನು ಮಾಡದೇ ಇರುವವನು ಅಥವಾ ಕರ್ಮರಹಿತನು.

Comments are closed.