Ashvamedhika Parva: Chapter 42

ಅಶ್ವಮೇಧಿಕ ಪರ್ವ

೪೨

ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಮುಂದುವರಿಸಿ ಹೇಳಿದುದು (೧-೬೨).

14042001 ಬ್ರಹ್ಮೋವಾಚ

14042001a ಅಹಂಕಾರಾತ್ಪ್ರಸೂತಾನಿ ಮಹಾಭೂತಾನಿ ಪಂಚ ವೈ|

14042001c ಪೃಥಿವೀ ವಾಯುರಾಕಾಶಮಾಪೋ ಜ್ಯೋತಿಶ್ಚ ಪಂಚಮಮ್||

ಬ್ರಹ್ಮನು ಹೇಳಿದನು: “ಅಹಂಕಾರದಿಂದಲೇ ಪೃಥ್ವಿ, ವಾಯು, ಆಕಾಶ, ಆಪ, ಮತ್ತು ಐದನೆಯದಾದ ಜ್ಯೋತಿ ಈ ಪಂಚಮಹಾಭೂತಗಳು ಹುಟ್ಟಿಕೊಂಡಿವೆ.

14042002a ತೇಷು ಭೂತಾನಿ ಮುಹ್ಯಂತೇ ಮಹಾಭೂತೇಷು ಪಂಚಸು|

14042002c ಶಬ್ದಸ್ಪರ್ಶನರೂಪೇಷು ರಸಗಂಧಕ್ರಿಯಾಸು ಚ||

ಇವುಗಳಿಂದ ಹುಟ್ಟಿದ ಎಲ್ಲವೂ ಈ ಐದು ಮಹಾಭೂತಗಳ ಕ್ರಿಯೆಗಳಲ್ಲಿ  – ಶಬ್ಧ, ಸ್ಪರ್ಶ, ರೂಪ, ರಸ ಮತ್ತು ಗಂಧಕ್ರಿಯೆಗಳಲ್ಲಿ – ಮುಳುಗಿರುತ್ತವೆ.

14042003a ಮಹಾಭೂತವಿನಾಶಾಂತೇ ಪ್ರಲಯೇ ಪ್ರತ್ಯುಪಸ್ಥಿತೇ|

14042003c ಸರ್ವಪ್ರಾಣಭೃತಾಂ ಧೀರಾ ಮಹದುತ್ಪದ್ಯತೇ ಭಯಮ್||

ಮಹಾಭೂತಗಳು ವಿನಾಶವಾಗುವ ಪ್ರಲಯವು ಸಮೀಪವಾದಾಗ ಸರ್ವಪ್ರಾಣಭೃತರಿಗೂ ಮಹಾಭಯವುಂಟಾಗುತ್ತದೆ.

14042004a ಯದ್ಯಸ್ಮಾಜ್ಜಾಯತೇ ಭೂತಂ ತತ್ರ ತತ್ಪ್ರವಿಲೀಯತೇ|

14042004c ಲೀಯಂತೇ ಪ್ರತಿಲೋಮಾನಿ ಜಾಯಂತೇ ಚೋತ್ತರೋತ್ತರಮ್||

ಯಾವ ಭೂತದಿಂದ ಯಾವುದು ಹುಟ್ಟಿತೋ ಅದರಲ್ಲಿಯೇ ಅದು ವಿಲೀನವಾಗುತ್ತದೆ. ಇವುಗಳು ಅನುಲೋಮಕ್ರಮದಿಂದ[1] ಒಂದಾದಮೇಲೊಂದು ಹುಟ್ಟುತ್ತವೆ. ವಿಲೋಮಕ್ರಮದಿಂದ ತಮ್ಮ ತಮ್ಮ ಕಾರಣಗಳಲ್ಲಿ ಲಯವನ್ನು ಹೊಂದುತ್ತವೆ[2].

14042005a ತತಃ ಪ್ರಲೀನೇ ಸರ್ವಸ್ಮಿನ್ಭೂತೇ ಸ್ಥಾವರಜಂಗಮೇ|

14042005c ಸ್ಮೃತಿಮಂತಸ್ತದಾ ಧೀರಾ ನ ಲೀಯಂತೇ ಕದಾ ಚನ||

ಹೀಗೆ ಇರುವ ಸ್ಥಾವರ-ಜಂಗಮಗಳೆಲ್ಲವೂ ಲೀನವಾಗಿಹೋದರೂ ಸ್ಮೃತಿಮಂತರಾದ ಧೀರರು ಎಂದೂ ಲೀನರಾಗುವುದಿಲ್ಲ.

14042006a ಶಬ್ದಃ ಸ್ಪರ್ಶಸ್ತಥಾ ರೂಪಂ ರಸೋ ಗಂಧಶ್ಚ ಪಂಚಮಃ|

14042006c ಕ್ರಿಯಾಕಾರಣಯುಕ್ತಾಃ ಸ್ಯುರನಿತ್ಯಾ ಮೋಹಸಂಜ್ಞಿತಾಃ||

ಶಬ್ಧ, ಸ್ಪರ್ಶ, ರೂಪ, ರಸ ಮತ್ತು ಐದನೆಯ ಗಂಧ ಈ ಕ್ರಿಯಾಕಾರಣಗಳು ಅನಿತ್ಯವಾದವುಗಳಾದುದರಿಂದ “ಮೋಹ” ಎಂದೂ ಕರೆಯಲ್ಪಟ್ಟಿವೆ.

14042007a ಲೋಭಪ್ರಜನಸಂಯುಕ್ತಾ ನಿರ್ವಿಶೇಷಾ ಹ್ಯಕಿಂಚನಾಃ|

14042007c ಮಾಂಸಶೋಣಿತಸಂಘಾತಾ ಅನ್ಯೋನ್ಯಸ್ಯೋಪಜೀವಿನಃ||

14042008a ಬಹಿರಾತ್ಮಾನ ಇತ್ಯೇತೇ ದೀನಾಃ ಕೃಪಣವೃತ್ತಯಃ|

ಲೋಭ ಮತ್ತು ಸ್ತ್ರೀ-ಪುರುಷರ ಸಂಯೋಗದಿಂದ ಹುಟ್ಟಿರುವ ರಕ್ತ-ಮಾಂಸಗಳ ಸಮೂಹಗಳ ಶರೀರವು ಸ್ವಲ್ಪವೂ ವ್ಯತ್ಯಾಸವಿಲ್ಲದೇ ಸಮನಾಗಿರುತ್ತದೆ ಮತ್ತು ಅನ್ಯೋನ್ಯವನ್ನು ಅವಲಂಬಿಸಿ ಬೆಳೆಯುತ್ತದೆ. ಇದು ಆತ್ಮನ ಹೊರಗಡೆ ಬೆಳೆಯುತ್ತದೆ. ಆದುದರಿಂದ ಶರೀರದಲ್ಲಿರುವ ಈ ರಕ್ತ-ಮಾಂಸಗಳ ಸಮೂಹಗಳನ್ನು ದೀನರೆಂದೂ ಕೃಪಣಜೀವಿಗಳೆಂದೂ ಕರೆಯುತ್ತಾರೆ.

14042008c ಪ್ರಾಣಾಪಾನಾವುದಾನಶ್ಚ ಸಮಾನೋ ವ್ಯಾನ ಏವ ಚ||

14042009a ಅಂತರಾತ್ಮೇತಿ ಚಾಪ್ಯೇತೇ ನಿಯತಾಃ ಪಂಚ ವಾಯವಃ|

14042009c ವಾಙ್ಮನೋಬುದ್ಧಿರಿತ್ಯೇಭಿಃ ಸಾರ್ಧಮಷ್ಟಾತ್ಮಕಂ ಜಗತ್||

ಪ್ರಾಣ, ಅಪಾನ, ಉದಾನ, ಸಮಾನ ಮತ್ತು ವ್ಯಾನ ಈ ಪಂಚವಾಯುಗಳು ಅಂತರಾತ್ಮನಲ್ಲಿ ವಾಸಮಾಡಿಕೊಂಡಿರುತ್ತವೆ. ಮನಸ್ಸು, ಬುದ್ಧಿ, ಮತ್ತು ವಾಕ್ ಇವುಗಳೂ ಸೇರಿ ಈ ಜಗತ್ತು ಅಷ್ಟಾತ್ಮಕವಾಗಿದೆ.

14042010a ತ್ವಗ್ಘ್ರಾಣಶ್ರೋತ್ರಚಕ್ಷೂಂಷಿ ರಸನಂ ವಾಕ್ಚ ಸಂಯತಾ|

14042010c ವಿಶುದ್ಧಂ ಚ ಮನೋ ಯಸ್ಯ ಬುದ್ಧಿಶ್ಚಾವ್ಯಭಿಚಾರಿಣೀ||

14042011a ಅಷ್ಟೌ ಯಸ್ಯಾಗ್ನಯೋ ಹ್ಯೇತೇ ನ ದಹಂತೇ ಮನಃ ಸದಾ|

14042011c ಸ ತದ್ಬ್ರಹ್ಮ ಶುಭಂ ಯಾತಿ ಯಸ್ಮಾದ್ಭೂಯೋ ನ ವಿದ್ಯತೇ||

ಚರ್ಮ, ಮೂಗು, ಕಿವಿ, ಕಣ್ಣು, ನಾಲಿಗೆ ಮತ್ತು ಮಾತು – ಈ ಇಂದ್ರಿಯಗಳು ಯಾವನ ವಶದಲ್ಲಿರುತ್ತವೆಯೋ, ಯಾರ ಮನಸ್ಸು ವಿಶುದ್ಧವಾಗಿರುತ್ತದೆಯೋ, ಯಾರ ಬುದ್ಧಿಯು ವ್ಯಭಿಚಾರಿಯಾಗಿರುವುದಿಲ್ಲವೋ, ಯಾರ ಮನಸ್ಸನ್ನು ಎಂಟು ಅಗ್ನಿಗಳು[3] ಸಂತಾಪಗೊಳಿಸುವುದಿಲ್ಲವೋ ಅಂಥವನು ಶುಭ ಬ್ರಹ್ಮನನ್ನು ಹೊಂದುತ್ತಾನೆ. ಬ್ರಹ್ಮಕ್ಕಿಂತಲೂ ಅಧಿಕವಾದುದು ಬೇರೆ ಯಾವುದೂ ಇಲ್ಲ.

14042012a ಏಕಾದಶ ಚ ಯಾನ್ಯಾಹುರಿಂದ್ರಿಯಾಣಿ ವಿಶೇಷತಃ|

14042012c ಅಹಂಕಾರಪ್ರಸೂತಾನಿ ತಾನಿ ವಕ್ಷ್ಯಾಮ್ಯಹಂ ದ್ವಿಜಾಃ||

ದ್ವಿಜರೇ! ಅಹಂಕಾರದಿಂದ ಹುಟ್ಟಿದ ಹನ್ನೊಂದು ಇಂದ್ರಿಯಗಳ ವಿಶೇಷ ಲಕ್ಷಣಗಳನ್ನು ನಿಮಗೆ ಹೇಳುತ್ತೇನೆ.

14042013a ಶ್ರೋತ್ರಂ ತ್ವಕ್ಚಕ್ಷುಷೀ ಜಿಹ್ವಾ ನಾಸಿಕಾ ಚೈವ ಪಂಚಮೀ|

14042013c ಪಾದೌ ಪಾಯುರುಪಸ್ಥಂ ಚ ಹಸ್ತೌ ವಾಗ್ದಶಮೀ ಭವೇತ್||

14042014a ಇಂದ್ರಿಯಗ್ರಾಮ ಇತ್ಯೇಷ ಮನ ಏಕಾದಶಂ ಭವೇತ್|

14042014c ಏತಂ ಗ್ರಾಮಂ ಜಯೇತ್ಪೂರ್ವಂ ತತೋ ಬ್ರಹ್ಮ ಪ್ರಕಾಶತೇ||

ಕಿವಿ, ಚರ್ಮ, ಕಣ್ಣು, ನಾಲಿಗೆ, ಐದನೆಯದಾಗಿ ಮೂಗು, ಕಾಲುಗಳು, ಕೈಗಳು, ಗುದ, ಜನನೇಂದ್ರಿಯ ಮತ್ತು ಮಾತು ಈ ಹತ್ತು ಮತ್ತು ಹನ್ನೊಂದನೆಯದಾದ ಮನಸ್ಸು ಇವುಗಳನ್ನು ಇಂದ್ರಿಯಗ್ರಾಮಗಳೆಂದು ಹೇಳುತ್ತಾರೆ. ಮೊದಲು ಈ ಇಂದ್ರಿಯಗ್ರಾಮಗಳನ್ನು ಜಯಿಸಬೇಕು. ಅನಂತರ ಬ್ರಹ್ಮನ ಸಾಕ್ಷಾತ್ಕಾರವಾಗುತ್ತದೆ. 

14042015a ಬುದ್ಧೀಂದ್ರಿಯಾಣಿ ಪಂಚಾಹುಃ ಪಂಚ ಕರ್ಮೇಂದ್ರಿಯಾಣಿ ಚ|

14042015c ಶ್ರೋತ್ರಾದೀನ್ಯಪಿ ಪಂಚಾಹುರ್ಬುದ್ಧಿಯುಕ್ತಾನಿ ತತ್ತ್ವತಃ||

14042016a ಅವಿಶೇಷಾಣಿ ಚಾನ್ಯಾನಿ ಕರ್ಮಯುಕ್ತಾನಿ ತಾನಿ ತು|

14042016c ಉಭಯತ್ರ ಮನೋ ಜ್ಞೇಯಂ ಬುದ್ಧಿರ್ದ್ವಾದಶಮೀ ಭವೇತ್||

ಈ ಹತ್ತು ಇಂದ್ರಿಯಗಳಲ್ಲಿ ಐದು ಜ್ಞಾನೇಂದ್ರಿಯಗಳು[4] ಮತ್ತು ಐದು ಕರ್ಮೇಂದ್ರಿಯಗಳು[5]. ಶ್ರೋತ್ರಾದಿ ಜ್ಞಾನೇಂದ್ರಿಯಗಳು ಬುದ್ಧಿಗೆ ಜೋಡಿಸಿಕೊಂಡಿವೆ. ಉಳಿದ ಅನ್ಯ ಇಂದ್ರಿಯಗಳು ಕರ್ಮೇಂದ್ರಿಯಗಳು. ಈ ಎರಡರಲ್ಲೂ ಮನಸ್ಸು ಒಳಗೊಂಡಿದೆ. ಬುದ್ಧಿಯು ಹನ್ನೆರಡನೆಯ ಇಂದ್ರಿಯವೆನಿಸಿಕೊಳ್ಳುತ್ತದೆ.

14042017a ಇತ್ಯುಕ್ತಾನೀಂದ್ರಿಯಾಣೀಮಾನ್ಯೇಕಾದಶ ಮಯಾ ಕ್ರಮಾತ್|

14042017c ಮನ್ಯಂತೇ ಕೃತಮಿತ್ಯೇವ ವಿದಿತ್ವೈತಾನಿ ಪಂಡಿತಾಃ||

ಹೀಗೆ ಕ್ರಮವಾಗಿ ಹನ್ನೊಂದು ಇಂದ್ರಿಯಗಳ ಕುರಿತು ಹೇಳಿದ್ದಾಯಿತು. ಇವುಗಳ ತತ್ತ್ವವನ್ನು ತಿಳಿದ ಪಂಡಿತರು ಕೃತಕೃತ್ಯರಾದೆವೆಂದು ಭಾವಿಸುತ್ತಾರೆ.

14042018a ತ್ರೀಣಿ ಸ್ಥಾನಾನಿ ಭೂತಾನಾಂ ಚತುರ್ಥಂ ನೋಪಪದ್ಯತೇ|

14042018c ಸ್ಥಲಮಾಪಸ್ತಥಾಕಾಶಂ ಜನ್ಮ ಚಾಪಿ ಚತುರ್ವಿಧಮ್||

ಪ್ರಾಣಿಗಳು ವಾಸಮಾಲು ಇರುವ ಮೂರು ಸ್ಥಾನಗಳೆಂದರೆ – ಭೂಮಿ, ನೀರು ಮತ್ತು ಆಕಾಶ. ನಾಲ್ಕನೆಯ ಜಾಗವೇ ಇಲ್ಲ. ಪ್ರಾಣಿಗಳ ಜನ್ಮವು ನಾಲ್ಕು ವಿಧಗಳಲ್ಲಾಗುತ್ತವೆ.

14042019a ಅಂಡಜೋದ್ಭಿಜ್ಜಸಂಸ್ವೇದಜರಾಯುಜಮಥಾಪಿ ಚ|

14042019c ಚತುರ್ಧಾ ಜನ್ಮ ಇತ್ಯೇತದ್ಭೂತಗ್ರಾಮಸ್ಯ ಲಕ್ಷ್ಯತೇ||

ಪ್ರಾಣಿಗಳಿಗೆ ಅಂಡಜ (ಮೊಟ್ಟೆಯಿಂದ ಹುಟ್ಟುವುದು), ಉದ್ಭಿಜ್ಜ (ನೆಲವನ್ನು ಸೀಳಿಕೊಂಡು ಹುಟ್ಟುವುದು), ಸ್ವೇದಜ (ಬೆವರಿನಿಂದ ಹುಟ್ಟುವುದು), ಜರಾಯುಜ (ಗರ್ಭಾಶಯದಿಂದ ಹುಟ್ಟುವುದು) ಎಂಬ ನಾಲ್ಕು ವಿಧದ ಜನ್ಮವಿದೆ. ಪ್ರಾಣಿಗಳಿಗೆ ಇವೇ ನಾಲ್ಕು ವಿಧದ ಜನ್ಮಗಳು ಕಂಡುಬರುತ್ತವೆ.

14042020a ಅಚರಾಣ್ಯಪಿ ಭೂತಾನಿ ಖೇಚರಾಣಿ ತಥೈವ ಚ|

14042020c ಅಂಡಜಾನಿ ವಿಜಾನೀಯಾತ್ಸರ್ವಾಂಶ್ಚೈವ ಸರೀಸೃಪಾನ್||

ಕಾಲುಗಳಿಲ್ಲದ ಪ್ರಾಣಿಗಳು, ಪಕ್ಷಿಗಳು ಮತ್ತು ಎಲ್ಲ ಸರೀಸೃಪಗಳೂ ಅಂಡಜಗಳೆಂದು ತಿಳಿಯಬೇಕು.

14042021a ಸಂಸ್ವೇದಾಃ ಕೃಮಯಃ ಪ್ರೋಕ್ತಾ ಜಂತವಶ್ಚ ತಥಾವಿಧಾಃ|

14042021c ಜನ್ಮ ದ್ವಿತೀಯಮಿತ್ಯೇತಜ್ಜಘನ್ಯತರಮುಚ್ಯತೇ||

ಕ್ರಿಮಿಗಳು ಮತ್ತು ಜಂತುಗಳನ್ನು ಸ್ವೇದಜಗಳೆಂದು ಹೇಳುತ್ತಾರೆ. ಕ್ರಿಮಿಜನ್ಮಕ್ಕಿಂತಲೂ ಜಂತುಜನ್ಮವು ಅತಿನೀಚವಾದುದು ಎಂದು ಹೇಳುತ್ತಾರೆ.

14042022a ಭಿತ್ತ್ವಾ ತು ಪೃಥಿವೀಂ ಯಾನಿ ಜಾಯಂತೇ ಕಾಲಪರ್ಯಯಾತ್|

14042022c ಉದ್ಭಿಜ್ಜಾನೀತಿ ತಾನ್ಯಾಹುರ್ಭೂತಾನಿ ದ್ವಿಜಸತ್ತಮಾಃ||

ದ್ವಿಜಸತ್ತಮರೇ! ಕಾಲವುರುಳಿದಂತೆ ಭೂಮಿಯನ್ನು ಸೀಳಿ ಹುಟ್ಟುವ ಸಸ್ಯ ಭೂತಗಳನ್ನು ಉದ್ಭಿಜ್ಜಗಳೆಂದು ಹೇಳುತ್ತಾರೆ.

14042023a ದ್ವಿಪಾದಬಹುಪಾದಾನಿ ತಿರ್ಯಗ್ಗತಿಮತೀನಿ ಚ|

14042023c ಜರಾಯುಜಾನಿ ಭೂತಾನಿ ವಿತ್ತ ತಾನ್ಯಪಿ ಸತ್ತಮಾಃ||

ಸತ್ತಮರೇ! ಎರಡು ಕಾಲಿನ, ಅನೇಕ ಕಾಲಿನ ಮತ್ತು ವಕ್ರನಡುಗೆಯುಳ್ಳ, ವಕ್ರ ಮತಿಯುಳ್ಳ ಪ್ರಾಣಿಗಳು ಜರಾಯುಜಗಳೆಂದು ತಿಳಿಯಬೇಕು.

14042024a ದ್ವಿವಿಧಾಪೀಹ ವಿಜ್ಞೇಯಾ ಬ್ರಹ್ಮಯೋನಿಃ ಸನಾತನಾ|

14042024c ತಪಃ ಕರ್ಮ ಚ ಯತ್ಪುಣ್ಯಮಿತ್ಯೇಷ ವಿದುಷಾಂ ನಯಃ||

ಬ್ರಹ್ಮಯೋನಿಯಲ್ಲಿ ಹುಟ್ಟಲು ಸನಾತನವಾದ ಎರಡು ಕಾರಣಗಳೆಂದು ತಿಳಿಯಬೇಕು: ತಪಸ್ಸು ಮತ್ತು ಪುಣ್ಯ ಕರ್ಮಗಳು. ಇವೆರಡರಿಂದ ಬ್ರಾಹ್ಮಣತ್ವವು ಪ್ರಾಪ್ತವಾಗುತ್ತದೆ ಎಂದು ವಿದ್ವಾಂಸರ ನಿಶ್ಚಯ.   

14042025a ದ್ವಿವಿಧಂ ಕರ್ಮ ವಿಜ್ಞೇಯಮಿಜ್ಯಾ ದಾನಂ ಚ ಯನ್ಮಖೇ|[6]

14042025c ಜಾತಸ್ಯಾಧ್ಯಯನಂ ಪುಣ್ಯಮಿತಿ ವೃದ್ಧಾನುಶಾಸನಮ್||

ಯಜ್ಞಗಳಲ್ಲಿ ಆಹುತಿ ಹಾಕುವುದು ಮತ್ತು ದಾನಗಳನ್ನು ನೀಡುವುದು ಈ ಎರಡೂ ವಿಧದ ಕರ್ಮಗಳು ಪುಣ್ಯಕರ್ಮಗಳೆಂದು ತಿಳಿಯಬೇಕು. ಅಧ್ಯಯನವೇ ಹುಟ್ಟಿದವನಿಗೆ ಪುಣ್ಯಕಾರ್ಯವೆಂದು ವೃದ್ಧರ ಉಪದೇಶ.

14042026a ಏತದ್ಯೋ ವೇದ ವಿಧಿವತ್ಸ ಮುಕ್ತಃ ಸ್ಯಾದ್ದ್ವಿಜರ್ಷಭಾಃ|[7]

14042026c ವಿಮುಕ್ತಃ ಸರ್ವಪಾಪೇಭ್ಯ ಇತಿ ಚೈವ ನಿಬೋಧತ||

ದ್ವಿಜರ್ಷಭರೇ! ಇದನ್ನು ವಿಧಿವತ್ತಾಗಿ ತಿಳಿದುಕೊಂಡವನು ಸರ್ವಪಾಪಗಳಿಂದ ವಿಮುಕ್ತನಾಗಿ ಮುಕ್ತನಾಗುತ್ತಾನೆ ಎಂದು ತಿಳಿಯಿರಿ.

14042027a ಆಕಾಶಂ ಪ್ರಥಮಂ ಭೂತಂ ಶ್ರೋತ್ರಮಧ್ಯಾತ್ಮಮುಚ್ಯತೇ|

14042027c ಅಧಿಭೂತಂ ತಥಾ ಶಬ್ದೋ ದಿಶಸ್ತತ್ರಾಧಿದೈವತಮ್||

ಆಕಾಶವು ಮೊದಲನೆಯ ಭೂತ. ಶ್ರೋತೃವನ್ನು ಇದರ ಅಧ್ಯಾತ್ಮವೆಂದು ಹೇಳುತ್ತಾರೆ. ಹಾಗೆಯೇ ಶಬ್ಧವು ಇದರ ಅಧಿಭೂತ ಮತ್ತು ದಿಕ್ಕುಗಳು ಇದರ ಅಧಿದೈವತ.

14042028a ದ್ವಿತೀಯಂ ಮಾರುತೋ ಭೂತಂ ತ್ವಗಧ್ಯಾತ್ಮಂ ಚ ವಿಶ್ರುತಮ್|

14042028c ಸ್ಪ್ರಷ್ಟವ್ಯಮಧಿಭೂತಂ ಚ ವಿದ್ಯುತ್ತತ್ರಾಧಿದೈವತಮ್||

ಮಾರುತವು ಎರಡನೆಯ ಭೂತ. ಚರ್ಮವು ಇದರ ಅಧ್ಯಾತ್ಮವೆಂದು ಕೇಳಿದ್ದೇವೆ. ಸ್ಪರ್ಶವು ಇದರ ಅಧಿಭೂತ ಮತ್ತು ವಿದ್ಯುತ್ತು ಇದರ ಅಧಿದೈವತ.

14042029a ತೃತೀಯಂ ಜ್ಯೋತಿರಿತ್ಯಾಹುಶ್ಚಕ್ಷುರಧ್ಯಾತ್ಮಮುಚ್ಯತೇ|

14042029c ಅಧಿಭೂತಂ ತತೋ ರೂಪಂ ಸೂರ್ಯಸ್ತತ್ರಾಧಿದೈವತಮ್||

ಮೂರನೆಯದು ಜ್ಯೋತಿಯೆಂದು ಹೇಳುತ್ತಾರೆ. ಕಣ್ಣುಗಳು ಇದರ ಅಧ್ಯಾತ್ಮವೆಂದು ಹೇಳಲ್ಪಟ್ಟಿವೆ. ರೂಪವು ಇದರ ಅಧಿಭೂತ. ಸೂರ್ಯನು ಇದರ ಅಧಿದೈವತ.

14042030a ಚತುರ್ಥಮಾಪೋ ವಿಜ್ಞೇಯಂ ಜಿಹ್ವಾ ಚಾಧ್ಯಾತ್ಮಮಿಷ್ಯತೇ|

14042030c ಅಧಿಭೂತಂ ರಸಶ್ಚಾತ್ರ ಸೋಮಸ್ತತ್ರಾಧಿದೈವತಮ್||

ನಾಲ್ಕನೆಯದು ನೀರು ಎಂದು ತಿಳಿಯಬೇಕು. ನಾಲಿಗೆಯು ಇದರ ಅಧ್ಯಾತ್ಮವೆನಿಸಿಕೊಳ್ಳುತ್ತದೆ. ರಸವು ಇದರ ಅಧಿಭೂತ. ಸೋಮನು ಇದರ ಅಧಿದೈವತ.

14042031a ಪೃಥಿವೀ ಪಂಚಮಂ ಭೂತಂ ಘ್ರಾಣಶ್ಚಾಧ್ಯಾತ್ಮಮಿಷ್ಯತೇ|

14042031c ಅಧಿಭೂತಂ ತಥಾ ಗಂಧೋ ವಾಯುಸ್ತತ್ರಾಧಿದೈವತಮ್||

ಪೃಥ್ವಿಯು ಐದನೆಯ ಭೂತ. ಘ್ರಾಣವು ಇದರ ಅಧ್ಯಾತ್ಮ. ಗಂಧವು ಇದರ ಅಧಿಭೂತ ಮತ್ತು ವಾಯುವು ಇದರ ಅಧಿದೈವತ.

14042032a ಏಷ ಪಂಚಸು ಭೂತೇಷು ಚತುಷ್ಟಯವಿಧಿಃ ಸ್ಮೃತಃ|[8]

14042032c ಅತಃ ಪರಂ ಪ್ರವಕ್ಷ್ಯಾಮಿ ಸರ್ವಂ ತ್ರಿವಿಧಮಿಂದ್ರಿಯಮ್||

ಹೀಗೆ ಐದು ಭೂತಗಳಿಗೆ ನಾಲ್ಕು[9] ವಿಧಿಗಳಿವೆ ಎಂದು ಹೇಳುತ್ತಾರೆ. ಇದರ ನಂತರ ನಾನು ಇಂದ್ರಿಯಗಳ ಮೂರು ವಿಧಿಗಳ ಕುರಿತು ಎಲ್ಲವನ್ನೂ ಹೇಳುತ್ತೇನೆ.

14042033a ಪಾದಾವಧ್ಯಾತ್ಮಮಿತ್ಯಾಹುರ್ಬ್ರಾಹ್ಮಣಾಸ್ತತ್ತ್ವದರ್ಶಿನಃ|

14042033c ಅಧಿಭೂತಂ ತು ಗಂತವ್ಯಂ ವಿಷ್ಣುಸ್ತತ್ರಾಧಿದೈವತಮ್||

ತತ್ತ್ವದರ್ಶೀ ಬ್ರಾಹ್ಮಣರು ಪಾದಗಳನ್ನು ಅಧ್ಯಾತ್ಮವೆಂದು ಹೇಳುತ್ತಾರೆ. ಹೋಗಬೇಕಾದ ಸ್ಥಾನವೇ ಅಲ್ಲಿ ಅಧಿಭೂತ ಮತ್ತು ವಿಷ್ಣುವು ಅಧಿದೈವತ.

14042034a ಅವಾಗ್ಗತಿರಪಾನಶ್ಚ ಪಾಯುರಧ್ಯಾತ್ಮಮಿಷ್ಯತೇ|

14042034c ಅಧಿಭೂತಂ ವಿಸರ್ಗಶ್ಚ ಮಿತ್ರಸ್ತತ್ರಾಧಿದೈವತಮ್||

ಕೆಳಮುಖವಾಗಿ ಸಂಚರಿಸುವ ಅಪಾನ ಮತ್ತು ಗುದವನ್ನು ಅಧ್ಯಾತ್ಮವೆನ್ನುತ್ತಾರೆ. ವಿಸರ್ಗವು ಅಧಿಭೂತ ಮತ್ತು ಮಿತ್ರನು ಇದರ ಅಧಿದೈವತ.

14042035a ಪ್ರಜನಃ ಸರ್ವಭೂತಾನಾಮುಪಸ್ಥೋಽಧ್ಯಾತ್ಮಮುಚ್ಯತೇ|

14042035c ಅಧಿಭೂತಂ ತಥಾ ಶುಕ್ರಂ ದೈವತಂ ಚ ಪ್ರಜಾಪತಿಃ||

ಸರ್ವಭೂತಗಳ ಪ್ರಜನನಕ್ಕೆ ಕಾರಣವಾದ ಜನನೇಂದ್ರಿಯಗಳು ಅಧ್ಯಾತ್ಮವೆಂದು ಹೇಳುತ್ತಾರೆ. ವೀರ್ಯವು ಅದರ ಅಧಿಭೂತ ಮತ್ತು ಪ್ರಜಾಪತಿಯು ಅದರ ದೈವತ.

14042036a ಹಸ್ತಾವಧ್ಯಾತ್ಮಮಿತ್ಯಾಹುರಧ್ಯಾತ್ಮವಿದುಷೋ ಜನಾಃ|

14042036c ಅಧಿಭೂತಂ ತು ಕರ್ಮಾಣಿ ಶಕ್ರಸ್ತತ್ರಾಧಿದೈವತಮ್||

ಅಧ್ಯಾತ್ಮವನ್ನು ತಿಳಿದ ಜನರು ಕೈಗಳನ್ನು ಅಧ್ಯಾತ್ಮವೆನ್ನುತ್ತಾರೆ. ಕರ್ಮಗಳು ಅದರ ಅಧಿಭೂತ ಮತ್ತು ಶಕ್ರನು ಅಧಿದೈವತ.

14042037a ವೈಶ್ವದೇವೀ ಮನಃಪೂರ್ವಾ ವಾಗಧ್ಯಾತ್ಮಮಿಹೋಚ್ಯತೇ|

14042037c ವಕ್ತವ್ಯಮಧಿಭೂತಂ ಚ ವಹ್ನಿಸ್ತತ್ರಾಧಿದೈವತಮ್||

ಹಿಂದೆ ವೈಶ್ವದೇವಿಯೆನಿಸಿಕೊಂಡಿದ್ದ ವಾಕ್ಕನ್ನು ಅಧ್ಯಾತ್ಮವೆಂದು ಹೇಳುತ್ತಾರೆ. ಹೇಳಲ್ಪಡುವುದು ಇದರ ಅಧಿಭೂತ ಮತ್ತು ವಹ್ನಿಯು ಇದರ ಅಧಿದೈವತ.

14042038a ಅಧ್ಯಾತ್ಮಂ ಮನ ಇತ್ಯಾಹುಃ ಪಂಚಭೂತಾನುಚಾರಕಮ್|

14042038c ಅಧಿಭೂತಂ ಚ ಮಂತವ್ಯಂ ಚಂದ್ರಮಾಶ್ಚಾಧಿದೈವತಮ್||[10]

ಪಂಚಭೂತಗಳನ್ನು ಸಂಚಲಿಸುವ ಮನಸ್ಸನ್ನು ಅಧ್ಯಾತ್ಮವೆನ್ನುತ್ತಾರೆ. ಯೋಚಿಸುವುದೇ ಇದರ ಅಧಿಭೂತ ಮತ್ತು ಚಂದ್ರನು ಇದರ ಅಧಿದೈವತ.

[11]14042039a ಅಧ್ಯಾತ್ಮಂ ಬುದ್ಧಿರಿತ್ಯಾಹುಃ ಷಡಿಂದ್ರಿಯವಿಚಾರಿಣೀ|

14042039c ಅಧಿಭೂತಂ ತು ವಿಜ್ಞೇಯಂ ಬ್ರಹ್ಮಾ ತತ್ರಾಧಿದೈವತಮ್||

ಆರು ಇಂದ್ರಿಯಗಳನ್ನೂ ತಿಳಿದಿರುವ ಬುದ್ಧಿಯನ್ನು ಅಧ್ಯಾತ್ಮವೆಂದು ಕರೆಯುತ್ತಾರೆ. ತಿಳಿಯಲ್ಪಡುವುದೇ ಅಧಿಭೂತ ಮತ್ತು ಬ್ರಹ್ಮನು ಇದರ ಅಧಿದೈವತ.

14042040a ಯಥಾವದಧ್ಯಾತ್ಮವಿಧಿರೇಷ ವಃ ಕೀರ್ತಿತೋ ಮಯಾ|

14042040c ಜ್ಞಾನಮಸ್ಯ ಹಿ ಧರ್ಮಜ್ಞಾಃ ಪ್ರಾಪ್ತಂ ಬುದ್ಧಿಮತಾಮಿಹ||

ಹೀಗೆ ನಾನು ಅಧ್ಯಾತ್ಮವಿಧಿಗಳನ್ನು ನಿಮಗೆ ಹೇಳಿದ್ದೇನೆ. ಧರ್ಮಜ್ಞರೇ! ಬುದ್ಧಿಮತರಿಗೆ ಇದರ ಜ್ಞಾನವು ಪ್ರಾಪ್ತವಾಗುತ್ತದೆ.

14042041a ಇಂದ್ರಿಯಾಣೀಂದ್ರಿಯಾರ್ಥಾಶ್ಚ ಮಹಾಭೂತಾನಿ ಪಂಚ ಚ|

14042041c ಸರ್ವಾಣ್ಯೇತಾನಿ ಸಂಧಾಯ ಮನಸಾ ಸಂಪ್ರಧಾರಯೇತ್||

ಇಂದ್ರಿಯಗಳನ್ನೂ, ಇಂದ್ರಿಯಾರ್ಥಗಳನ್ನೂ ಮತ್ತು ಪಂಚಮಹಾಭೂತಗಳನ್ನೂ ಎಲ್ಲವನ್ನೂ ಒಂದಾಗಿಸಿ ಮನಸ್ಸಿನಲ್ಲಿ ಚೆನ್ನಾಗಿ ಧಾರಣೆಮಾಡಿಕೊಳ್ಳಬೇಕು.

14042042a ಕ್ಷೀಣೇ ಮನಸಿ ಸರ್ವಸ್ಮಿನ್ನ ಜನ್ಮಸುಖಮಿಷ್ಯತೇ|

14042042c ಜ್ಞಾನಸಂಪನ್ನಸತ್ತ್ವಾನಾಂ ತತ್ಸುಖಂ ವಿದುಷಾಂ ಮತಮ್||

ಇಂದ್ರಿಯಗಳೆಲ್ಲವೂ ಕ್ಷೀಣವಾದ ಮನಸ್ಸಿನಲ್ಲಿ ಜನ್ಮಸುಖವು ಉಂಟಾಗುವುದಿಲ್ಲ. ಮನಸ್ಸನ್ನು ಇಂದ್ರಿಯ ವಿಷಯಗಳಿಂದ ಹಿಂದಕ್ಕೆ ತೆಗೆದುಕೊಂಡು ಜ್ಞಾನಸಂಪನ್ನ ಸಾತ್ವಿಕರು ಅನುಭವಿಸುವುದನ್ನೇ ಸುಖವೆಂದು ವಿದ್ವಾಂಸರ ಮತವಾಗಿದೆ.

14042043a ಅತಃ ಪರಂ ಪ್ರವಕ್ಷ್ಯಾಮಿ ಸೂಕ್ಷ್ಮಭಾವಕರೀಂ ಶಿವಾಮ್|

14042043c ನಿವೃತ್ತಿಂ ಸರ್ವಭೂತೇಷು ಮೃದುನಾ ದಾರುಣೇನ ವಾ||

ಇನ್ನು ಮುಂದೆ ಸರ್ವಭೂತಗಳಲ್ಲಿಯೂ ಮೃದುವಾಗಿ ಅಥವಾ ದಾರುಣವಾಗಿರುವ ಸೂಕ್ಷ್ಮಭಾವವನ್ನುಂಟುಮಾಡುವ ಮಂಗಳಕರ ನಿವೃತ್ತಿಯ ಕುರಿತು ಹೇಳುತ್ತೇನೆ.

14042044a ಗುಣಾಗುಣಮನಾಸಂಗಮೇಕಚರ್ಯಮನಂತರಮ್|

14042044c ಏತದ್ಬ್ರಾಹ್ಮಣತೋ ವೃತ್ತಮಾಹುರೇಕಪದಂ ಸುಖಮ್||

ಗುಣಗಳಿದ್ದರೂ ಗುಣಗಳಿಲ್ಲದವನಂತೆ ನಿರಹಂಕಾರನಾಗಿರುವುದು, ನಿಸ್ಸಂಗನಾಗಿರುವುದು, ಯಾವುದರಲ್ಲಿಯೂ ಭೇದಭಾವಗಳನ್ನು ತಾಳದೇ ಇರುವುದನ್ನು ಬ್ರಾಹ್ಮಣ ವರ್ತನೆಯೆಂದು ಹೇಳುತ್ತಾರೆ. ಇದು ಸುಖಕ್ಕೆ ಏಕಮಾತ್ರ ಮಾರ್ಗವಾಗಿದೆ.

14042045a ವಿದ್ವಾನ್ಕೂರ್ಮ ಇವಾಂಗಾನಿ ಕಾಮಾನ್ಸಂಹೃತ್ಯ ಸರ್ವಶಃ|

14042045c ವಿರಜಾಃ ಸರ್ವತೋ ಮುಕ್ತೋ ಯೋ ನರಃ ಸ ಸುಖೀ ಸದಾ||

ಆಮೆಯು ತನ್ನ ಅವಯವಗಳನ್ನು ಬೆನ್ನುಚಿಪ್ಪಿನ ಒಳಕ್ಕೆ ಎಳೆದುಕೊಳ್ಳುವಂತೆ ಯಾವ ವಿದ್ವಾಂಸನು ಇಂದ್ರಿಯಕಾಮನೆಗಳೆಲ್ಲವನ್ನೂ ಹಿಂದಕ್ಕೆ ಸೆಳೆದುಕೊಂಡು ಸಂಕೋಚಗೊಳಿಸಿ ರಜೋಗುಣರಹಿತನಾಗಿರುವನೋ ಅವನು ಎಲ್ಲ ಪ್ರಕಾರದ ಬಂಧನಗಳಿಂದ ಮುಕ್ತನಾಗಿ ಸದಾ ಸುಖಿಯಾಗಿರುತ್ತಾನೆ.

14042046a ಕಾಮಾನಾತ್ಮನಿ ಸಂಯಮ್ಯ ಕ್ಷೀಣತೃಷ್ಣಃ ಸಮಾಹಿತಃ|

14042046c ಸರ್ವಭೂತಸುಹೃನ್ಮೈತ್ರೋ ಬ್ರಹ್ಮಭೂಯಂ ಸ ಗಚ್ಚತಿ||

ಕಾಮನೆಗಳನ್ನು ಆತ್ಮನಲ್ಲಿ ಲೀನಗೊಳಿಸಿ ಆಶಾರಹಿತನಾಗಿ, ಸಮಾಹಿತನಾಗಿ ಸರ್ವಭೂತಗಳಿಗೂ ಸ್ನೇಹಿತನಾಗಿರುವವನು ಬ್ರಹ್ಮಸ್ಥಾನಕ್ಕೆ ಹೋಗುತ್ತಾನೆ.

14042047a ಇಂದ್ರಿಯಾಣಾಂ ನಿರೋಧೇನ ಸರ್ವೇಷಾಂ ವಿಷಯೈಷಿಣಾಮ್|

14042047c ಮುನೇರ್ಜನಪದತ್ಯಾಗಾದಧ್ಯಾತ್ಮಾಗ್ನಿಃ ಸಮಿಧ್ಯತೇ||

ವಿಷಯಗಳನ್ನು ಬಯಸುವ ಎಲ್ಲ ಇಂದ್ರಿಯಗಳನ್ನೂ ಮನಸ್ಸಿನ ಮೂಲಕ ನಿರೋಧಿಸಿ ಜನಪದವನ್ನು ತ್ಯಜಿಸಿ ಏಕಾಂತದಲ್ಲಿರುವ ಮುನಿಯಲ್ಲಿ ಆಧ್ಯಾತ್ಮದ ಅಗ್ನಿಯು ಹೊತ್ತಿ ಉರಿಯುತ್ತದೆ.

14042048a ಯಥಾಗ್ನಿರಿಂಧನೈರಿದ್ಧೋ ಮಹಾಜ್ಯೋತಿಃ ಪ್ರಕಾಶತೇ|

14042048c ತಥೇಂದ್ರಿಯನಿರೋಧೇನ ಮಹಾನಾತ್ಮಾ ಪ್ರಕಾಶತೇ||

ಕಟ್ಟಿಗೆಗಳಿಂದ ಉರಿಯಲ್ಪಟ್ಟ ಅಗ್ನಿಯು ಹೇಗೆ ಮಹಾಜ್ಯೋತಿಯಾಗಿ ಪ್ರಕಾಶಿಸುವುದೋ ಹಾಗೆ ಇಂದ್ರಿಯ ನಿರೋಧದಿಂದ[12] ಮಹಾನ್ ಆತ್ಮವು ಪ್ರಕಾಶಿಸುತ್ತದೆ.

14042049a ಯದಾ ಪಶ್ಯತಿ ಭೂತಾನಿ ಪ್ರಸನ್ನಾತ್ಮಾತ್ಮನೋ ಹೃದಿ|

14042049c ಸ್ವಯಂಯೋನಿಸ್ತದಾ ಸೂಕ್ಷ್ಮಾತ್ಸೂಕ್ಷ್ಮಮಾಪ್ನೋತ್ಯನುತ್ತಮಮ್||

ಪ್ರಸನ್ನಾತ್ಮನಾಗಿ ತನ್ನ ಹೃದಯದಲ್ಲಿರುವ ಸ್ವಯಂ ಜ್ಯೋತಿಯನ್ನು ಎಲ್ಲ ಭೂತಗಳಲ್ಲಿಯೂ ಯಾವಾಗ ಕಾಣುತ್ತಾನೋ ಆಗ ಅವನು ಸೂಕ್ಷ್ಮಕ್ಕೂ ಸೂಕ್ಷ್ಮನಾದ ಅನುತ್ತಮ ಪರಮಾತ್ಮನನ್ನು ಹೊಂದುತ್ತಾನೆ.

14042050a ಅಗ್ನೀ ರೂಪಂ ಪಯಃ ಸ್ರೋತೋ ವಾಯುಃ ಸ್ಪರ್ಶನಮೇವ ಚ|

14042050c ಮಹೀ ಪಂಕಧರಂ ಘೋರಮಾಕಾಶಂ ಶ್ರವಣಂ ತಥಾ||

14042051a ರಾಗಶೋಕಸಮಾವಿಷ್ಟಂ ಪಂಚಸ್ರೋತಃಸಮಾವೃತಮ್|

14042051c ಪಂಚಭೂತಸಮಾಯುಕ್ತಂ ನವದ್ವಾರಂ ದ್ವಿದೈವತಮ್||

14042052a ರಜಸ್ವಲಮಥಾದೃಶ್ಯಂ ತ್ರಿಗುಣಂ ಚ ತ್ರಿಧಾತುಕಮ್|

14042052c ಸಂಸರ್ಗಾಭಿರತಂ ಮೂಢಂ ಶರೀರಮಿತಿ ಧಾರಣಾ||

ಅಗ್ನಿಯೇ ರೂಪವಾಗಿರುವ, ಆಪವೇ ಸ್ರೋತವಾಗಿರುವ, ವಾಯುವೇ ಸ್ಪರ್ಶವಾಗಿರುವ, ಪೃಥ್ವಿಯೇ ಘೋರ ಮಾಂಸಾಸ್ಥಿಗಳಾಗಿರುವ, ಆಕಾಶವೇ ಶ್ರವಣವಾಗಿರುವ, ರಾಗ-ಶೋಕ ಸಮಾವಿಷ್ಟವಾದ, ಪ್ರವಾಹರೂಪದ ಐದು ಇಂದ್ರಿಯಗಳಿಂದ ಸಮಾವೃತವಾಗಿರುವ, ಪಂಚಭೂತಗಳಿಂದ ಕೂಡಿರುವ, ನವದ್ವಾರಗಳನ್ನೂ ಎರಡು ಅಧಿದೇವತೆಗಳನ್ನೂ ಹೊಂದಿರುವ, ರಜೋಗುಣಮಯವಾದ, ವಿನಾಶಹೊಂದುವ, ಮೂರುಗುಣಗಳಿಂದ ಮತ್ತು ಮೂರು ಧಾತುಗಳಿಂದ ಕೂಡಿರುವ, ಹೊರಗಿನ ವಿಷಯಗಳೊಂದಿಗೆ ಸಂಸರ್ಗಹೊಂದುವುದರಲ್ಲಿಯೇ ಆಸಕ್ತಿಯನ್ನಿಟ್ಟುಕೊಂಡಿರುವ ಈ ಜಡ ವಸ್ತುವನ್ನು ಶರೀರವೆಂದು ಕರೆಯುತ್ತಾರೆ.

14042053a ದುಶ್ಚರಂ ಜೀವಲೋಕೇಽಸ್ಮಿನ್ಸತ್ತ್ವಂ ಪ್ರತಿ ಸಮಾಶ್ರಿತಮ್|

14042053c ಏತದೇವ ಹಿ ಲೋಕೇಽಸ್ಮಿನ್ಕಾಲಚಕ್ರಂ ಪ್ರವರ್ತತೇ||

ಇವೇ ಸತ್ತ್ವಗಳನ್ನು ಆಶ್ರಯಿಸಿ ಈ ಶರೀರವು ಜೀವಲೋಕದಲ್ಲಿ ಕಷ್ಟಕರವಾಗಿ ಕಾಲಕಳೆಯುತ್ತದೆ. ಈ ರೀತಿ ಶರೀರವು ಲೋಕದಲ್ಲಿ ಕಾಲಚಕ್ರವನ್ನು ತಿರುಗಿಸುತ್ತಿರುತ್ತದೆ[13].

14042054a ಏತನ್ಮಹಾರ್ಣವಂ ಘೋರಮಗಾಧಂ ಮೋಹಸಂಜ್ಞಿತಮ್|

14042054c ವಿಸೃಜೇತ್ಸಂಕ್ಷಿಪೇಚ್ಚೈವ ಬೋಧಯೇತ್ಸಾಮರಂ ಜಗತ್||

ಮೋಹವೆಂದು ಕರೆಯಲ್ಪಡುವ ಈ ಕಾಲಚಕ್ರವು ಅಗಾಧವಾದ ಘೋರ ಮಹಾಸಮುದ್ರದಂತಿದೆ. ಇದು ಅಮರರೊಂದಿಗಿನ ಜಗತ್ತನ್ನು ಸೃಷ್ಟಿಸುತ್ತದೆ, ಸಂಕ್ಷಿಪ್ತಗೊಳಿಸುತ್ತದೆ ಮತ್ತು ಜಾಗೃತಗೊಳಿಸುತ್ತದೆ.

14042055a ಕಾಮಕ್ರೋಧೌ ಭಯಂ ಮೋಹಮಭಿದ್ರೋಹಮಥಾನೃತಮ್|

14042055c ಇಂದ್ರಿಯಾಣಾಂ ನಿರೋಧೇನ ಸ ತಾಂಸ್ತ್ಯಜತಿ ದುಸ್ತ್ಯಜಾನ್||

ಇಂದ್ರಿಯಗಳನ್ನು ನಿರೋಧಿಸುವುದ ಮೂಲಕ ತ್ಯಜಿಸಲು ಕಷ್ಟಕರವಾಗಿರುವ ಕಾಮ-ಕ್ರೋಧಗಳು, ಭಯ, ಮೋಹ, ದ್ರೋಹ, ಅಸತ್ಯಗಳನ್ನು ತ್ಯಜಿಸಬಹುದು.

14042056a ಯಸ್ಯೈತೇ ನಿರ್ಜಿತಾ ಲೋಕೇ ತ್ರಿಗುಣಾಃ ಪಂಚ ಧಾತವಃ|

14042056c ವ್ಯೋಮ್ನಿ ತಸ್ಯ ಪರಂ ಸ್ಥಾನಮನಂತಮಥ ಲಕ್ಷ್ಯತೇ||

ಈ ಲೋಕದಲ್ಲಿ ಯಾರು ತ್ರಿಗುಣಾತ್ಮಕವಾದ ಮತ್ತು ಪಂಚಧಾತುಗಳಿಂದ ಕೂಡಿರುವ ಶರೀರವನ್ನು ಗೆಲ್ಲುತ್ತಾನೋ ಅವನು ಎತ್ತರದಲ್ಲಿ ಅನಂತವಾದ ಪರಮಸ್ಥಾನವನ್ನು ಕಾಣುತ್ತಾನೆ.

14042057a ಕಾಮಕೂಲಾಮಪಾರಾಂತಾಂ ಮನಃಸ್ರೋತೋಭಯಾವಹಾಮ್|

14042057c ನದೀಂ ದುರ್ಗಹ್ರದಾಂ ತೀರ್ಣಃ ಕಾಮಕ್ರೋಧಾವುಭೌ ಜಯೇತ್||

ಕಾಮವೆಂಬ ದೊಡ್ಡ ತೀರಗಳಿರುವ, ಭಯವನ್ನುಂಟುಮಾಡುವ ಮನಸ್ಸೆಂಬ ಪ್ರವಾಹವಿರುವ, ದಾಟಲಸಾದ್ಯವಾದ ನದಿಯನ್ನು ದಾಟಲು ಕಾಮ-ಕ್ರೋಧಗಳೆರಡನ್ನೂ ಜಯಿಸಬೇಕು.

14042058a ಸ ಸರ್ವದೋಷನಿರ್ಮುಕ್ತಸ್ತತಃ ಪಶ್ಯತಿ ಯತ್ಪರಮ್|

14042058c ಮನೋ ಮನಸಿ ಸಂಧಾಯ ಪಶ್ಯತ್ಯಾತ್ಮಾನಮಾತ್ಮನಿ||

ಮನಸ್ಸನ್ನು ಮನಸ್ಸಿನಲ್ಲಿ ಸಂಧಾನಗೊಳಿಸಿ ಆತ್ಮನಲ್ಲಿ ಆತ್ಮನನ್ನು ಕಾಣುವವನು ಸರ್ವದೋಷಗಳಿಂದ ವಿಮುಕ್ತನಾಗಿ ಪರಮಾತ್ಮನನ್ನು ಕಾಣುತ್ತಾನೆ.  

14042059a ಸರ್ವವಿತ್ಸರ್ವಭೂತೇಷು ವೀಕ್ಷತ್ಯಾತ್ಮಾನಮಾತ್ಮನಿ|

14042059c ಏಕಧಾ ಬಹುಧಾ ಚೈವ ವಿಕುರ್ವಾಣಸ್ತತಸ್ತತಃ||

ಒಬ್ಬನೇ ಅನೇಕರೂಪಗಳಲ್ಲಿದ್ದುಕೊಂಡು ಅಲ್ಲಲ್ಲಿ ಎಲ್ಲವನ್ನೂ ಮಾಡುವವನಂತೆ ಸರ್ವಭೂತಗಳಲ್ಲಿಯೂ ತನ್ನ ಆತ್ಮವನ್ನು ಕಾಣುವವನೇ ಸರ್ವವಿದುವು.

14042060a ಧ್ರುವಂ ಪಶ್ಯತಿ ರೂಪಾಣಿ ದೀಪಾದ್ದೀಪಶತಂ ಯಥಾ|

14042060c ಸ ವೈ ವಿಷ್ಣುಶ್ಚ ಮಿತ್ರಶ್ಚ ವರುಣೋಽಗ್ನಿಃ ಪ್ರಜಾಪತಿಃ||

ಒಂದೇ ದೀಪದಿಂದ ನೂರಾರು ದೀಪಗಳನ್ನು ಹೊತ್ತಿಸಲು ಸಾಧ್ಯವಾಗುವಂತೆ ಅದೊಂದೇ ವಿಷ್ಣು, ಮಿತ್ರ, ವರುಣ, ಅಗ್ನಿ ಮತ್ತು ಪ್ರಜಾಪತಿಗಳು.

14042061a ಸ ಹಿ ಧಾತಾ ವಿಧಾತಾ ಚ ಸ ಪ್ರಭುಃ ಸರ್ವತೋಮುಖಃ|

14042061c ಹೃದಯಂ ಸರ್ವಭೂತಾನಾಂ ಮಹಾನಾತ್ಮಾ ಪ್ರಕಾಶತೇ||

ಅದೇ ಧಾತಾ, ವಿಧಾತ, ಮತ್ತು ಸರ್ವತೋಮುಖನಾಗಿರುವ ಪ್ರಭು. ಅದೇ ಮಹಾನ್ ಆತ್ಮವು ಸರ್ವಭೂತಗಳ ಹೃದಯಗಳನ್ನು ಪ್ರಕಾಶಿಸುತ್ತದೆ.

14042062a ತಂ ವಿಪ್ರಸಂಘಾಶ್ಚ ಸುರಾಸುರಾಶ್ಚ

ಯಕ್ಷಾಃ ಪಿಶಾಚಾಃ ಪಿತರೋ ವಯಾಂಸಿ|

14042062c ರಕ್ಷೋಗಣಾ ಭೂತಗಣಾಶ್ಚ ಸರ್ವೇ

ಮಹರ್ಷಯಶ್ಚೈವ ಸದಾ ಸ್ತುವಂತಿ||

ಅದನ್ನೇ ವಿಪ್ರಸಂಘಗಳು, ಸುರಾಸುರರು, ಯಕ್ಷರು, ಪಿಶಾಚಿಗಳು, ಪಿತೃಗಳು, ವಸುಗಳು, ರಾಕ್ಷಸಗಣಗಳು, ಭೂತಗಣಗಳು ಮತ್ತು ಸರ್ವ ಮಹರ್ಷಿಗಳೂ ಸದಾ ಸ್ತುತಿಸುತ್ತಾರೆ.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ದ್ವಿಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ನಲ್ವತ್ತೆರಡನೇ ಅಧ್ಯಾಯವು.

[1] ಆಕಾಶಾದ್ವಾಯುಃ| ವಾಯೋರಗ್ನಿಃ| ಅಗ್ನೇರಾಪಃ| ಅದ್ಭ್ಯಃ ಪೃಥಿವೀ| ಹೀಗೆ ಆಕಾಶದಿಂದ ವಾಯುವೂ, ವಾಯುವಿನಿಂದ ಅಗ್ನಿಯೂ, ಅಗ್ನಿಯಿಂದ ನೀರೂ, ನೀರಿನಿಂದ ಭೂಮಿಯೂ ಹುಟ್ಟುತ್ತವೆ.

[2] ವಿಲೋಮಕ್ರಮದಿಂದ ಲೀನವಾಗುವುದೆಂದರೆ – ಪೃಥ್ವಿಯು ಜಲದಲ್ಲಿಯೂ, ಜಲವು ಅಗ್ನಿಯಲ್ಲಿಯೂ, ಅಗ್ನಿಯು ವಾಯುವಿನಲ್ಲಿಯೂ, ವಾಯುವು ಆಕಾಶದಲ್ಲಿಯೂ ಲೀನವಾಗುವುದು.

[3] ಚರ್ಮ, ಎರಡು ಕಣ್ಣುಗಳು, ಎರಡು ಕಿವಿಗಳು, ಮೂಗಿನ ಎರಡು ಹೊಳ್ಳೆಗಳು ಮತ್ತು ನಾಲಿಗೆ ಇವೇ ಎಂಟು ಅಗ್ನಿಗಳು.

[4] ಕಿವಿ, ಚರ್ಮ, ಕಣ್ಣು, ನಾಲಿಗೆ ಮತ್ತು ಮೂಗು – ಈ ಐದನ್ನು ಜ್ಞಾನೇಂದ್ರಿಯಗಳೆನ್ನುತ್ತಾರೆ.

[5] ಕಾಲುಗಳು, ಕೈಗಳು, ಗುದ, ಜನನೇಂದ್ರಿಯ ಮತ್ತು ಮಾತು – ಈ ಐದನ್ನು ಕರ್ಮೇಂದ್ರಿಯಗಳೆನ್ನುತ್ತಾರೆ.

[6] ವಿವಿಧಂ ಕರ್ಮ ವಿಜ್ಞೇಯಮಿಜ್ಯಾ ದಾನಂ ಚ ತನ್ಮಖೇ| ಎಂಬ ಪಾಠಾಂತರವಿದೆ.

[7] ಏತದ್ಯೋ ವೇತ್ತಿ ವಿಧಿವದ್ಯುಕ್ತಃ ಸ ಸ್ಯಾದ್ವಿಜರ್ಷಭಾ:| ಎಂಬ ಪಾಠಾಂತರವಿದೆ.

[8] ಏಷು ಪಂಚಸು ಭೂತೇಷು ತ್ರಿಷು ಯಶ್ಚ ವಿಧಿಃ ಸ್ಮೃತಃ| ಎಂಬ ಪಾಠಾಂತರವಿದೆ.

[9] ಹಿಂದಿನ ಶ್ಲೋಕಗಳಲ್ಲಿ ಅಧ್ಯಾತ್ಮ, ಅಧಿಭೂತ ಮತ್ತು ಅಧಿದೈವತಗಳೆಂಬ ಮೂರೇ ವಿಧಿಗಳನ್ನು ಹೇಳಿರುವುದರಿಂದ, ಪಾಠಾಂತರದಲ್ಲಿರುವ ಶ್ಲೋಕವೇ ಸರಿಯೆಂದು ತೋರುತ್ತದೆ.

[10] ಅಧಿಭೂತಂ ಚ ಸಂಕಲ್ಪಶ್ಚಂದ್ರಮಾಶ್ಚಾಧಿದೈವತಮ್| ಎಂಬ ಪಾಠಾಂತರವಿದೆ.

[11] ಇದರ ಮೊದಲು – ಅಹಂಕಾರಸ್ತಥಾಧ್ಯಾತ್ಮಂ ಸರ್ವಸಂಸಾರಕಾರಕಮ್| ಅಭಿಮಾನೋಽಧಿಭೂತಂ ಚ ರುದ್ರಸ್ತತ್ರಾಧಿದೈವತಮ್|| ಅರ್ಥಾತ್ ಸಕಲ ಸಂಸಾರ ಕಾರಕವಾದ ಅಹಂಕಾರವು ಅಧ್ಯಾತ್ಮ. ಅಭಿಮಾನವು ಅಧಿಭೂತ ಮತ್ತು ರುದ್ರನು ಅದರ ಅಧಿದೈವತ – ಎನ್ನುವ ಶ್ಲೋಕವಿದೆ (ಭಾರತದರ್ಶನ).

[12] ಇಂದ್ರಿಯಗಳನ್ನು ಮನಸ್ಸಿನ ಮೂಲಕ ಒಳಗೆ ಎಳೆದುಕೊಂಡು ಆತ್ಮಕ್ಕೆ ಇಂಧನವನ್ನಾಗಿ ಬಳಸುವುದರಿಂದ ಆತ್ಮನು ಪ್ರಕಾಶಿಸುತ್ತಾನೆ.

[13] ಶರೀರಕ್ಕೆ ಮಾತ್ರ ಕಾಲಚಕ್ರಕ್ಕನುಗುಣವಾದ ಪರಿವರ್ತನೆಗಳಾಗುತ್ತವೆ.

Comments are closed.