Ashvamedhika Parva: Chapter 29

ಅಶ್ವಮೇಧಿಕ ಪರ್ವ

೨೯

ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಮುಂದುವರೆಸಿ ಹೇಳಿದುದು (೧-೨೨).

14029001 ಬ್ರಾಹ್ಮಣ ಉವಾಚ

14029001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

14029001c ಕಾರ್ತವೀರ್ಯಸ್ಯ ಸಂವಾದಂ ಸಮುದ್ರಸ್ಯ ಚ ಭಾಮಿನಿ||

ಬ್ರಾಹ್ಮಣನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾಗಿರುವ ಕಾರ್ತವೀರ್ಯ ಮತ್ತು ಸಮುದ್ರಗಳ ನಡುವಿನ ಈ ಸಂವಾದವನ್ನು ಉದಾಹರಿಸುತ್ತಾರೆ.

14029002a ಕಾರ್ತವೀರ್ಯಾರ್ಜುನೋ ನಾಮ ರಾಜಾ ಬಾಹುಸಹಸ್ರವಾನ್|

14029002c ಯೇನ ಸಾಗರಪರ್ಯಂತಾ ಧನುಷಾ ನಿರ್ಜಿತಾ ಮಹೀ||

ಸಹಸ್ರಬಾಹುಗಳುಳ್ಳ ಕಾರ್ತವೀರ್ಯಾರ್ಜುನ ಎಂಬ ಹೆಸರಿನ ರಾಜನಿದ್ದನು. ಅವನು ತನ್ನ ಧನುಸ್ಸಿನ ಬಲದಿಂದ ಸಾಗರಪರ್ಯಂತ ಮಹಿಯನ್ನು ಗೆದ್ದಿದ್ದನು.

14029003a ಸ ಕದಾ ಚಿತ್ಸಮುದ್ರಾಂತೇ ವಿಚರನ್ಬಲದರ್ಪಿತಃ|

14029003c ಅವಾಕಿರಚ್ಚರಶತೈಃ ಸಮುದ್ರಮಿತಿ ನಃ ಶ್ರುತಮ್||

ಬಲದರ್ಪಿತನಾಗಿದ್ದ ಅವನು ಒಮ್ಮೆ ಸಮುದ್ರತೀರದಲ್ಲಿ ಸಂಚರಿಸುತ್ತಿದ್ದಾಗ ನೂರಾರು ಬಾಣಗಳಿಂದ ಸಮುದ್ರವನ್ನು ಮುಚ್ಚಿಬಿಟ್ಟನೆಂದು ನಾವು ಕೇಳಿದ್ದೇವೆ.

14029004a ತಂ ಸಮುದ್ರೋ ನಮಸ್ಕೃತ್ಯ ಕೃತಾಂಜಲಿರುವಾಚ ಹ|

14029004c ಮಾ ಮುಂಚ ವೀರ ನಾರಾಚಾನ್ಬ್ರೂಹಿ ಕಿಂ ಕರವಾಣಿ ತೇ||

ಸಮುದ್ರನು ಕೈಮುಗಿದು ಅವನಿಗೆ ನಮಸ್ಕರಿಸಿ ಹೇಳಿದನು: “ವೀರ! ನನ್ನ ಮೇಲೆ ನಾರಾಚಗಳನ್ನು ಪ್ರಯೋಗಿಸಬೇಡ! ಹೇಳು. ನನ್ನಿಂದ ನಿನಗೇನಾಗಬೇಕು?

14029005a ಮದಾಶ್ರಯಾಣಿ ಭೂತಾನಿ ತ್ವದ್ವಿಸೃಷ್ಟೈರ್ಮಹೇಷುಭಿಃ|

14029005c ವಧ್ಯಂತೇ ರಾಜಶಾರ್ದೂಲ ತೇಭ್ಯೋ ದೇಹ್ಯಭಯಂ ವಿಭೋ||

ನಿನ್ನ ಬಾಣಗಳಿಂದ ನನ್ನನ್ನೇ ಆಶ್ರಯಿಸಿರುವ ಭೂತಗಳು ವಧಿಸಲ್ಪಡುತ್ತಿವೆ. ವಿಭೋ! ರಾಜಶಾರ್ದೂಲ! ಅವುಗಳಿಗೆ ಅಭಯವನ್ನು ನೀಡು!”

14029006 ಅರ್ಜುನ ಉವಾಚ

14029006a ಮತ್ಸಮೋ ಯದಿ ಸಂಗ್ರಾಮೇ ಶರಾಸನಧರಃ ಕ್ವ ಚಿತ್|

14029006c ವಿದ್ಯತೇ ತಂ ಮಮಾಚಕ್ಷ್ವ ಯಃ ಸಮಾಸೀತ ಮಾಂ ಮೃಧೇ||

ಅರ್ಜುನನು ಹೇಳಿದನು: “ಸಂಗ್ರಾಮದಲ್ಲಿ ನನ್ನ ಸಮನಾಗಿರುವ ಧನುರ್ಧಾರಿಯು ಯಾರಾದರೂ ಇರುವನೇ? ಯುದ್ಧದಲ್ಲಿ ನನ್ನ ಎದುರಾಗಬಲ್ಲವನು ಯಾರಾದರೂ ನಿನಗೆ ತಿಳಿದಿದ್ದರೆ ಅದನ್ನು ನನಗೆ ಹೇಳು!”

14029007 ಸಮುದ್ರ ಉವಾಚ

14029007a ಮಹರ್ಷಿರ್ಜಮದಗ್ನಿಸ್ತೇ ಯದಿ ರಾಜನ್ಪರಿಶ್ರುತಃ|

14029007c ತಸ್ಯ ಪುತ್ರಸ್ತವಾತಿಥ್ಯಂ ಯಥಾವತ್ಕರ್ತುಮರ್ಹತಿ||

ಸಮುದ್ರನು ಹೇಳಿದನು: “ರಾಜನ್! ಮಹರ್ಷಿ ಜಮದಗ್ನಿಯ ಕುರಿತು ನೀನು ಕೇಳಿದ್ದಿದ್ದರೆ ಅವನ ಪುತ್ರನು ನಿನಗೆ ಯಥಾವತ್ತಾಗಿ ಆತಿಥ್ಯವನ್ನು ನೀಡಲು ಯೋಗ್ಯನಾಗಿದ್ದಾನೆ.”

14029008a ತತಃ ಸ ರಾಜಾ ಪ್ರಯಯೌ ಕ್ರೋಧೇನ ಮಹತಾ ವೃತಃ|

14029008c ಸ ತಮಾಶ್ರಮಮಾಗಮ್ಯ ರಾಮಮೇವಾನ್ವಪದ್ಯತ||

ಅನಂತರ ಆ ರಾಜನು ಮಹಾ ಕ್ರೋಧವಶನಾಗಿ ಅವನ ಆಶ್ರಮಕ್ಕೆ ಹೋಗಿ ಅಲ್ಲಿ ರಾಮನನ್ನೇ ಸಂಧಿಸಿದನು.

14029009a ಸ ರಾಮಪ್ರತಿಕೂಲಾನಿ ಚಕಾರ ಸಹ ಬಂಧುಭಿಃ|

14029009c ಆಯಾಸಂ ಜನಯಾಮಾಸ ರಾಮಸ್ಯ ಚ ಮಹಾತ್ಮನಃ||

ಬಂಧುಗಳೊಡನಿದ್ದ ಅವನು ರಾಮನಿಗೆ ಪ್ರತಿಕೂಲವಾಗಿಯೇ ನಡೆದುಕೊಂಡನು. ಮಹಾತ್ಮ ರಾಮನಿಗೆ ಆಯಾಸವುಂಟಾಗುವಂತೆ ಮಾಡಿದನು.

14029010a ತತಸ್ತೇಜಃ ಪ್ರಜಜ್ವಾಲ ರಾಮಸ್ಯಾಮಿತತೇಜಸಃ|

14029010c ಪ್ರದಹದ್ರಿಪುಸೈನ್ಯಾನಿ ತದಾ ಕಮಲಲೋಚನೇ||

ಆಗ ಅಮಿತತೇಜಸ್ವಿ ರಾಮನ ತೇಜಸ್ಸು ಪ್ರಜ್ವಲಿಸಿತು. ಕಮಲಲೋಚನೇ! ಆಗ ಅವನು ರಿಪುಸೈನ್ಯಗಳನ್ನು ಸುಟ್ಟುಹಾಕಿದನು.

14029011a ತತಃ ಪರಶುಮಾದಾಯ ಸ ತಂ ಬಾಹುಸಹಸ್ರಿಣಮ್|

14029011c ಚಿಚ್ಚೇದ ಸಹಸಾ ರಾಮೋ ಬಾಹುಶಾಖಮಿವ ದ್ರುಮಮ್||

ಅನಂತರ ರಾಮನು ಪರಶುವನ್ನು ತೆಗೆದುಕೊಂಡು ಒಮ್ಮೆಲೇ ಅವನ ಸಹಸ್ರ ಬಾಹುಗಳನ್ನು ಅನೇಕ ರೆಂಬೆಗಳಿರುವ ವೃಕ್ಷದಂತೆ ತುಂಡರಿಸಿದನು.

14029012a ತಂ ಹತಂ ಪತಿತಂ ದೃಷ್ಟ್ವಾ ಸಮೇತಾಃ ಸರ್ವಬಾಂಧವಾಃ|

14029012c ಅಸೀನಾದಾಯ ಶಕ್ತೀಶ್ಚ ಭಾರ್ಗವಂ ಪರ್ಯವಾರಯನ್||

ಅವನು ಹತನಾಗಿ ಬಿದ್ದುದನ್ನು ನೋಡಿ ಅವನ ಸರ್ವಬಾಂಧವರೂ ಒಟ್ಟಾಗಿ ಖಡ್ಗ-ಶಕ್ತಿಗಳನ್ನು ಹಿಡಿದು ಭಾರ್ಗವನನ್ನು ಸುತ್ತುವರೆದರು.

14029013a ರಾಮೋಽಪಿ ಧನುರಾದಾಯ ರಥಮಾರುಹ್ಯ ಸತ್ವರಃ|

14029013c ವಿಸೃಜನ್ಶರವರ್ಷಾಣಿ ವ್ಯಧಮತ್ಪಾರ್ಥಿವಂ ಬಲಮ್||

ವೇಗಶಾಲೀ ರಾಮನೂ ಕೂಡ ಧನುಸ್ಸನ್ನೆತ್ತಿಕೊಂಡು ರಥವನ್ನೇರಿ ಶರವರ್ಷಗಳನ್ನು ಸುರಿಸಿ ಪಾರ್ಥಿವ ಸೇನೆಯನ್ನು ವಧಿಸಿದನು.

14029014a ತತಸ್ತು ಕ್ಷತ್ರಿಯಾಃ ಕೇ ಚಿಜ್ಜಮದಗ್ನಿಂ ನಿಹತ್ಯ ಚ|

14029014c ವಿವಿಶುರ್ಗಿರಿದುರ್ಗಾಣಿ ಮೃಗಾಃ ಸಿಂಹಾರ್ದಿತಾ ಇವ||

ಆಗ ಕೆಲವು ಕ್ಷತ್ರಿಯರು ಜಮದಗ್ನಿಯನ್ನು ಸಂಹರಿಸಿ ಸಿಂಹಕ್ಕೆ ಭಯಪಟ್ಟ ಜಿಂಕೆಗಳಂತೆ ಗಿರಿ-ದುರ್ಗಗಳಲ್ಲಿ ಅಡಗಿಕೊಂಡರು.

14029015a ತೇಷಾಂ ಸ್ವವಿಹಿತಂ ಕರ್ಮ ತದ್ಭಯಾನ್ನಾನುತಿಷ್ಠತಾಮ್|

14029015c ಪ್ರಜಾ ವೃಷಲತಾಂ ಪ್ರಾಪ್ತಾ ಬ್ರಾಹ್ಮಣಾನಾಮದರ್ಶನಾತ್||

ರಾಮನ ಭಯದಿಂದಾಗಿ ಅವರು ಕ್ಷತ್ರಿಯರಿಗೆ ವಿಹಿಸಿದ್ದ ಕರ್ಮಗಳ ಅನುಷ್ಠಾನ ಮಾಡಲಿಲ್ಲ. ಬ್ರಾಹ್ಮಣರ ದರ್ಶನವನ್ನೇ ಮಾಡದಿದ್ದ ಅವರು ಶೂದ್ರತ್ವವನ್ನೇ ಹೊಂದಿದರು.

14029016a ತ ಏತೇ ದ್ರಮಿಡಾಃ ಕಾಶಾಃ ಪುಂಡ್ರಾಶ್ಚ ಶಬರೈಃ ಸಹ|

14029016c ವೃಷಲತ್ವಂ ಪರಿಗತಾ ವ್ಯುತ್ಥಾನಾತ್ಕ್ಷತ್ರಧರ್ಮತಃ||

ಈ ರೀತಿ ದ್ರಮಿಡ, ಕಾಶ, ಪುಂಡ್ರ ಮತ್ತು ಶಬರರೊಂದಿಗೆ ಸಹವಾಸಮಾಡಿ ಕ್ಷತ್ರಧರ್ಮದಿಂದ ಭ್ರಷ್ಟರಾಗಿ ಶೂದ್ರತ್ವವನ್ನು ಪಡೆದರು.

14029017a ತತಸ್ತು ಹತವೀರಾಸು ಕ್ಷತ್ರಿಯಾಸು ಪುನಃ ಪುನಃ|

14029017c ದ್ವಿಜೈರುತ್ಪಾದಿತಂ ಕ್ಷತ್ರಂ ಜಾಮದಗ್ನ್ಯೋ ನ್ಯಕೃಂತತ||

ಜಾಮದಗ್ನಿ ರಾಮನಿಂದ ಹೀಗೆ ಕ್ಷತ್ರಿಯ ವೀರರು ಪುನಃ ಪುನಃ ಹತರಾಗಲು ದ್ವಿಜರು ಕ್ಷತ್ರಿಯ ಸ್ತ್ರೀಯರಲ್ಲಿ ಪುತ್ರರನ್ನು ಪಡೆದರು.

14029018a ಏಕವಿಂಶತಿಮೇಧಾಂತೇ ರಾಮಂ ವಾಗಶರೀರಿಣೀ|

14029018c ದಿವ್ಯಾ ಪ್ರೋವಾಚ ಮಧುರಾ ಸರ್ವಲೋಕಪರಿಶ್ರುತಾ||

ಇಪ್ಪತ್ತೊಂದು ಬಾರಿ ರಾಮನು ಕ್ಷತ್ರಿಯರನ್ನು ಸಂಹರಿಸಲು ಅಂತ್ಯದಲ್ಲಿ ಸರ್ವಲೋಕಗಳೂ ಕೇಳುವಂತೆ ದಿವ್ಯ ಮಧುರ ಅಶರೀರವಾಣಿಯು ನುಡಿಯಿತು:

14029019a ರಾಮ ರಾಮ ನಿವರ್ತಸ್ವ ಕಂ ಗುಣಂ ತಾತ ಪಶ್ಯಸಿ|

14029019c ಕ್ಷತ್ರಬಂಧೂನಿಮಾನ್ಪ್ರಾಣೈರ್ವಿಪ್ರಯೋಜ್ಯ ಪುನಃ ಪುನಃ||

“ರಾಮ! ರಾಮ! ಇದನ್ನು ನಿಲ್ಲಿಸು! ಮಗೂ! ಪುನಃ ಪುನಃ ಈ ಕ್ಷತ್ರಬಂಧುಗಳ ಪ್ರಾಣಗಳನ್ನು ತೆಗೆದುಕೊಳ್ಳುವುದರಲ್ಲಿ ನೀನು ಯಾವ ಪ್ರಯೋಜನವನ್ನು ಕಾಣುತ್ತಿದ್ದೀಯೆ?”

14029020a ತಥೈವ ತಂ ಮಹಾತ್ಮಾನಮೃಚೀಕಪ್ರಮುಖಾಸ್ತದಾ|

14029020c ಪಿತಾಮಹಾ ಮಹಾಭಾಗ ನಿವರ್ತಸ್ವೇತ್ಯಥಾಬ್ರುವನ್||

ಹಾಗೆಯೇ ಮಹಾತ್ಮ ಋಚೀಕನೇ ಮೊದಲಾದ ಅವನ ಪಿತಾಮಹರು “ಮಹಾಭಾಗ! ಇದರಿಂದ ವಿಮುಖನಾಗು!” ಎಂದು ಹೇಳಿದರು.

14029021a ಪಿತುರ್ವಧಮಮೃಷ್ಯಂಸ್ತು ರಾಮಃ ಪ್ರೋವಾಚ ತಾನೃಷೀನ್|

14029021c ನಾರ್ಹಂತೀಹ ಭವಂತೋ ಮಾಂ ನಿವಾರಯಿತುಮಿತ್ಯುತ||

ತಂದೆಯ ವಧೆಯಿಂದ ಅತ್ಯಂತ ಕುಪಿತನಾಗಿದ್ದ ರಾಮನು ಆ ಋಷಿಗಳಿಗೆ “ನೀವು ನನ್ನನ್ನು ತಡೆಯುವುದು ಸರಿಯಲ್ಲ!” ಎಂದು ಹೇಳಿದನು.

14029022 ಪಿತರ ಊಚುಃ

14029022a ನಾರ್ಹಸೇ ಕ್ಷತ್ರಬಂಧೂಂಸ್ತ್ವಂ ನಿಹಂತುಂ ಜಯತಾಂ ವರ|

14029022c ನ ಹಿ ಯುಕ್ತಂ ತ್ವಯಾ ಹಂತುಂ ಬ್ರಾಹ್ಮಣೇನ ಸತಾ ನೃಪಾನ್||

ಪಿತೃಗಳು ಹೇಳಿದರು: “ವಿಜಯಿಗಳಲ್ಲಿ ಶ್ರೇಷ್ಠನೇ! ಕ್ಷತ್ರಬಂಧುಗಳನ್ನು ಸಂಹರಿಸುತ್ತಲೇ ಇರುವುದು ನಿನಗೆ ಯೋಗ್ಯವಲ್ಲ. ಉತ್ತಮ ಬ್ರಾಹ್ಮಣನಾಗಿದ್ದುಕೊಂಡು ನೀನು ನೃಪರನ್ನು ಸಂಹರಿಸುವುದು ಯುಕ್ತವಲ್ಲ!”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಾಹ್ಮಣಗೀತಾಸು ಏಕೋನತ್ರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಾಹ್ಮಣಗೀತಾ ಎನ್ನುವ ಇಪ್ಪತ್ತೊಂಭತ್ತನೇ ಅಧ್ಯಾಯವು.

Comments are closed.