Ashvamedhika Parva: Chapter 25

ಅಶ್ವಮೇಧಿಕ ಪರ್ವ

೨೫

ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಮುಂದುವರೆಸಿ ಹೇಳಿದುದು (೧-೧೭).

14025001 ಬ್ರಾಹ್ಮಣ ಉವಾಚ

14025001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

14025001c ಚಾತುರ್ಹೋತ್ರವಿಧಾನಸ್ಯ ವಿಧಾನಮಿಹ ಯಾದೃಶಮ್||

ಬ್ರಾಹ್ಮಣನು ಹೇಳಿದನು: “ನಾಲ್ಕು ಹೋತೃಗಳಿಂದ ಸಂಪನ್ನವಾಗುವ ಯಜ್ಞವು ಯಾವ ರೀತಿಯದೆಂದು ತಿಳಿಸಲು ಈ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ.

14025002a ತಸ್ಯ ಸರ್ವಸ್ಯ ವಿಧಿವದ್ವಿಧಾನಮುಪದೇಕ್ಷ್ಯತೇ|

14025002c ಶೃಣು ಮೇ ಗದತೋ ಭದ್ರೇ ರಹಸ್ಯಮಿದಮುತ್ತಮಮ್||

ಆ ಎಲ್ಲ ವಿಧಾನಗಳನ್ನೂ ವಿಧಿವತ್ತಾಗಿ ಉಪದೇಶಿಸಿದ್ದಾರೆ. ಭದ್ರೇ! ಈ ಉತ್ತಮ ರಹಸ್ಯವನ್ನು ಹೇಳುತ್ತೇನೆ. ಕೇಳು!

14025003a ಕರಣಂ ಕರ್ಮ ಕರ್ತಾ ಚ ಮೋಕ್ಷ ಇತ್ಯೇವ ಭಾಮಿನಿ|

14025003c ಚತ್ವಾರ ಏತೇ ಹೋತಾರೋ ಯೈರಿದಂ ಜಗದಾವೃತಮ್||

ಭಾಮಿನೀ! ಕರಣ, ಕರ್ಮ, ಕರ್ತಾ, ಮೋಕ್ಷ ಇವು ನಾಲ್ವರೇ ಈ ಜಗತ್ತನ್ನು ಆವರಿಸಿರುವ ಚತುರ್ಹೋತೃಗಳು.

14025004a ಹೋತೄಣಾಂ ಸಾಧನಂ ಚೈವ ಶೃಣು ಸರ್ವಮಶೇಷತಃ|

14025004c ಘ್ರಾಣಂ ಜಿಹ್ವಾ ಚ ಚಕ್ಷುಶ್ಚ ತ್ವಕ್ಚ ಶ್ರೋತ್ರಂ ಚ ಪಂಚಮಮ್|

14025004e ಮನೋ ಬುದ್ಧಿಶ್ಚ ಸಪ್ತೈತೇ ವಿಜ್ಞೇಯಾ ಗುಣಹೇತವಃ||

ಈ ಹೋತೃಗಳ ಸಾಧನವೇನೆನ್ನುವುದನ್ನು ಸಂಪೂರ್ಣವಾಗಿ ಕೇಳು! ಮೂಗು, ನಾಲಿಗೆ, ಕಣ್ಣುಗಳು, ಚರ್ಮ ಮತ್ತು ಐದನೆಯದಾಗಿ ಕಿವಿಗಳು, ಮನಸ್ಸು ಮತ್ತು ಬುದ್ಧಿ ಈ ಏಳು ಗುಣಗಳಿಗೆ ಕಾರಣಗಳೆಂದು ತಿಳಿಯಬೇಕು.

14025005a ಗಂಧೋ ರಸಶ್ಚ ರೂಪಂ ಚ ಶಬ್ಧಃ ಸ್ಪರ್ಶಶ್ಚ ಪಂಚಮಃ|

14025005c ಮಂತವ್ಯಮಥ ಬೋದ್ಧವ್ಯಂ ಸಪ್ತೈತೇ ಕರ್ಮಹೇತವಃ||

ಗಂಧ, ರಸ, ರೂಪ, ಶಬ್ಧ, ಮತ್ತು ಐದನೆಯದಾಗಿ ಸ್ಪರ್ಶ ಹಾಗೂ ಮನನ ಮಾಡಿಕೊಳ್ಳುವುದು ಮತ್ತು ತಿಳಿದುಕೊಳ್ಳುವುದು ಈ ಏಳು ಕರ್ಮಗಳಿಗೆ ಕಾರಣಗಳು.

14025006a ಘ್ರಾತಾ ಭಕ್ಷಯಿತಾ ದ್ರಷ್ಟಾ ಸ್ಪ್ರಷ್ಟಾ ಶ್ರೋತಾ ಚ ಪಂಚಮಃ|

14025006c ಮಂತಾ ಬೋದ್ಧಾ ಚ ಸಪ್ತೈತೇ ವಿಜ್ಞೇಯಾಃ ಕರ್ತೃಹೇತವಃ||

ಆಘ್ರಾಣಿಸುವವನು, ತಿನ್ನುವವನು, ನೋಡುವವನು, ಮುಟ್ಟುವವನು ಮತ್ತು ಐದನೆಯದಾಗಿ ಕೇಳುವವನು ಹಾಗೂ ಮನನ ಮಾಡುವವನು ಮತ್ತು ತಿಳಿಯುವವನು ಈ ಏಳು ಕರ್ತೃವಿನ ಕಾರಣಗಳೆಂದು ತಿಳಿಯಬೇಕು.

14025007a ಸ್ವಗುಣಂ ಭಕ್ಷಯಂತ್ಯೇತೇ ಗುಣವಂತಃ ಶುಭಾಶುಭಮ್|

14025007c ಅಹಂ ಚ ನಿರ್ಗುಣೋಽತ್ರೇತಿ ಸಪ್ತೈತೇ ಮೋಕ್ಷಹೇತವಃ||

ತಮ್ಮ ತಮ್ಮ ಗುಣಗಳುಳ್ಳ ಈ ಇಂದ್ರಿಯಗಳು ಶುಭಾಶುಭ ಗುಣಗಳುಳ್ಳ ಅನುಭವಗಳನ್ನು ಉಂಟುಮಾಡುತ್ತವೆ. “ನಾನು ನಿರ್ಗುಣನು” ಎಂದು ತಿಳಿದ ಸಪ್ತೇಂದ್ರಿಯಗಳೂ ಮೋಕ್ಷಕ್ಕೆ ಸಾಧಕಗಳಾಗುತ್ತವೆ.

14025008a ವಿದುಷಾಂ ಬುಧ್ಯಮಾನಾನಾಂ ಸ್ವಂ ಸ್ವಂ ಸ್ಥಾನಂ ಯಥಾವಿಧಿ|

14025008c ಗುಣಾಸ್ತೇ ದೇವತಾಭೂತಾಃ ಸತತಂ ಭುಂಜತೇ ಹವಿಃ||

ತಿಳಿದುಕೊಂಡಿರುವ ವಿದುಷರ ಪ್ರಕಾರ ದೇವತೆಗಳಂತಿರುವ ಈ ಗುಣಗಳು ತಮ್ಮ ತಮ್ಮ ಸ್ಥಾನದಲ್ಲಿದ್ದುಕೊಂಡು ಯಥಾವಿಧಿಯಾಗಿ ಹವಿಸ್ಸನ್ನು ಭುಂಜಿಸುತ್ತವೆ.

14025009a ಅದನ್ ಹ್ಯವಿದ್ವಾನನ್ನಾನಿ ಮಮತ್ವೇನೋಪಪದ್ಯತೇ|

14025009c ಆತ್ಮಾರ್ಥಂ ಪಾಚಯನ್ನಿತ್ಯಂ ಮಮತ್ವೇನೋಪಹನ್ಯತೇ||

ಅವಿದ್ವಾನನು ಮಮತ್ವದಿಂದ ಆಹಾರವನ್ನು ಭುಂಜಿಸುತ್ತಾನೆ. ತನಗಾಗಿ ಅಡುಗೆಮಾಡಿಕೊಳ್ಳುವವನೂ ಕೂಡ ಮಮತ್ವದಿಂದ ನಾಶಹೊಂದುತ್ತಾನೆ.

14025010a ಅಭಕ್ಷ್ಯಭಕ್ಷಣಂ ಚೈವ ಮದ್ಯಪಾನಂ ಚ ಹಂತಿ ತಮ್|

14025010c ಸ ಚಾನ್ನಂ ಹಂತಿ ತಚ್ಚಾನ್ನಂ ಸ ಹತ್ವಾ ಹನ್ಯತೇ ಬುಧಃ||

ತಿನ್ನಬಾರದುದನ್ನು ತಿನ್ನುವುದರಿಂದ ಮತ್ತು ಮದ್ಯಪಾನದಿಂದ ಅವನು ನಾಶವಾಗುತ್ತಾನೆ. ಅವನು ಅನ್ನವನ್ನು ನಾಶಮಾಡುತ್ತಾನೆ. ನಾಶಗೊಂಡ ಅನ್ನವು ಅವನನ್ನು ನಾಶಗೊಳಿಸುತ್ತದೆ.

14025011a ಅತ್ತಾ ಹ್ಯನ್ನಮಿದಂ ವಿದ್ವಾನ್ಪುನರ್ಜನಯತೀಶ್ವರಃ|

14025011c ಸ ಚಾನ್ನಾಜ್ಜಾಯತೇ ತಸ್ಮಿನ್ಸೂಕ್ಷ್ಮೋ ನಾಮ ವ್ಯತಿಕ್ರಮಃ||

ವಿದ್ವಾನನು ಈಶ್ವರನಂತೆ ಅನ್ನವನ್ನು ನಾಶಗೊಳಿಸಿ ಪುನಃ ಅನ್ನವನ್ನು ಹುಟ್ಟಿಸುತ್ತಾನೆ. ಅವನಿಗೆ ಅನ್ನದಿಂದ ಸೂಕ್ಷ್ಮರೂಪದಲ್ಲಿ ಕೂಡ ತೊಂದರೆಯುಂಟಾಗುವುದಿಲ್ಲ.

14025012a ಮನಸಾ ಗಮ್ಯತೇ ಯಚ್ಚ ಯಚ್ಚ ವಾಚಾ ನಿರುದ್ಯತೇ|

14025012c ಶ್ರೋತ್ರೇಣ ಶ್ರೂಯತೇ ಯಚ್ಚ ಚಕ್ಷುಷಾ ಯಚ್ಚ ದೃಶ್ಯತೇ||

14025013a ಸ್ಪರ್ಶೇನ ಸ್ಪೃಶ್ಯತೇ ಯಚ್ಚ ಘ್ರಾಣೇನ ಘ್ರಾಯತೇ ಚ ಯತ್|

14025013c ಮನಃಷಷ್ಠಾನಿ ಸಂಯಮ್ಯ ಹವೀಂಷ್ಯೇತಾನಿ ಸರ್ವಶಃ||

14025014a ಗುಣವತ್ಪಾವಕೋ ಮಹ್ಯಂ ದೀಪ್ಯತೇ ಹವ್ಯವಾಹನಃ|

ಮನಸ್ಸಿನಿಂದ ಯಾವುದನ್ನು ಮನನಮಾಡಿಕೊಳ್ಳುತ್ತೇನೋ, ಮಾತಿನಿಂದ ಏನನ್ನು ಹೇಳುತ್ತೇನೋ, ಕಿವಿಗಳಿಂದ ಏನನ್ನು ಕೇಳುತ್ತೇನೋ, ಕಣ್ಣುಗಳಿಂದ ಏನನ್ನು ನೋಡುತ್ತೇನೋ, ಸ್ಪರ್ಶದಿಂದ ಏನನ್ನು ಮುಟ್ಟುತ್ತೇನೋ, ಮೂಗಿನಿಂದ ಏನನ್ನು ಮೂಸುತ್ತೇನೋ ಇವೆಲ್ಲವನ್ನೂ ಆರನೆಯದಾದ ಮನಸ್ಸಿನ ಮೂಲಕ ನಿಯಂತ್ರಿಸಿ ಹವಿಸ್ಸಾಗಿ ಹೋಮಮಾಡುತ್ತೇನೆ. ಆಗ ನನ್ನಲ್ಲಿ ಗುಣವಂತ ಪಾವಕ ಹವ್ಯವಾಹನನು ಪ್ರಜ್ವಲಿಸುತ್ತಾನೆ.

14025014c ಯೋಗಯಜ್ಞಃ ಪ್ರವೃತ್ತೋ ಮೇ ಜ್ಞಾನಬ್ರಹ್ಮಮನೋದ್ಭವಃ|

14025014e ಪ್ರಾಣಸ್ತೋತ್ರೋಽಪಾನಶಸ್ತ್ರಃ ಸರ್ವತ್ಯಾಗಸುದಕ್ಷಿಣಃ||

ಬ್ರಹ್ಮಜ್ಞಾನವನ್ನು ಮನಸ್ಸಿನಲ್ಲಿ ಹುಟ್ಟಿಸುವ ಈ ನನ್ನ ಯೋಗಯಜ್ಞವು ನಡೆಯುತ್ತಿದೆ. ಈ ಯಜ್ಞದಲ್ಲಿ ಪ್ರಾಣವೇ ಸ್ತೋತ್ರವು. ಅಪಾನವೇ ಶಸ್ತ್ರವು. ಸರ್ವತ್ಯಾಗವೇ ದಕ್ಷಿಣೆಯು.

[1]14025015a ಕರ್ಮಾನುಮಂತಾ ಬ್ರಹ್ಮಾ ಮೇ ಕರ್ತಾಧ್ವರ್ಯುಃ ಕೃತಸ್ತುತಿಃ|

14025015c ಕೃತಪ್ರಶಾಸ್ತಾ ತಚ್ಚಾಸ್ತ್ರಮಪವರ್ಗೋಽಸ್ಯ ದಕ್ಷಿಣಾ||

ಕರ್ಮಗಳನ್ನು ಸೂಚಿಸುವ ಮನಸ್ಸೇ ಈ ಯಜ್ಞದಲ್ಲಿ ಬ್ರಹ್ಮ, ಮತ್ತು ಆತ್ಮವು ಹೋತೃವು. ಸ್ತುತಿಮಾಡುವವನೇ ಅಧ್ವರ್ಯು. ಸತ್ಯವೇ ಪ್ರಶಾಸ್ತನ ಶಸ್ತ್ರ. ಅಪವರ್ಗ ಮೋಕ್ಷವೇ ಇದರ ದಕ್ಷಿಣೆ.

14025016a ಋಚಶ್ಚಾಪ್ಯತ್ರ ಶಂಸಂತಿ ನಾರಾಯಣವಿದೋ ಜನಾಃ|

14025016c ನಾರಾಯಣಾಯ ದೇವಾಯ ಯದಬಧ್ನನ್ಪಶೂನ್ಪುರಾ||

ನಾರಾಯಣನನ್ನು ತಿಳಿದವರು ಇದಕ್ಕೆ ಸಂಬಂಧಿಸಿದ ಋಕ್ಕನ್ನು ಹೇಳುತ್ತಾರೆ. ಹಿಂದೆ ನಾರಾಯಣದೇವನಿಗೆ ಪಶುಗಳನ್ನು ಕಟ್ಟಿದ್ದರು.

14025017a ತತ್ರ ಸಾಮಾನಿ ಗಾಯಂತಿ ತಾನಿ ಚಾಹುರ್ನಿದರ್ಶನಮ್|

14025017c ದೇವಂ ನಾರಾಯಣಂ ಭೀರು ಸರ್ವಾತ್ಮಾನಂ ನಿಬೋಧ ಮೇ||

ಭೀರು! ಅದಕ್ಕೆ ನಿದರ್ಶನವಾಗಿ ಸಾಮವನ್ನು ಹಾಡುತ್ತಾರೆ. ದೇವ ನಾರಾಯಣನೇ ಸರ್ವಾತ್ಮನು ಎನ್ನುವುದನ್ನು ತಿಳಿದುಕೋ!”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಾಹ್ಮಣಗೀತಾಸು ಪಂಚವಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಾಹ್ಮಣಗೀತಾ ಎನ್ನುವ ಇಪ್ಪತ್ತೈದನೇ ಅಧ್ಯಾಯವು.

[1] ಕರ್ತಾನುಮಂತಾ ಬ್ರಹ್ಮಾತ್ಮಾ ಹೋತಾಧ್ವರ್ಯುಃ ಕೃತಸ್ತುತಿಃ| ಋತಂ ಪ್ರಶಾಸ್ತಾ ತಚ್ಛಸ್ತ್ರಮಪವರ್ಗೋಽಸ್ಯ ದಕ್ಷಿಣಾ|| ಎಂಬ ಪಾಠಾಂತರವಿದೆ.

Comments are closed.