Ashvamedhika Parva: Chapter 21

ಅಶ್ವಮೇಧಿಕ ಪರ್ವ

೨೧

ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಮುಂದುವರೆಸಿ ಹೇಳಿದುದು (೧-೨೧).

14021001 ಬ್ರಾಹ್ಮಣ ಉವಾಚ

14021001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

14021001c ನಿಬೋಧ ದಶಹೋತೄಣಾಂ ವಿಧಾನಮಿಹ ಯಾದೃಶಮ್||

ಬ್ರಾಹ್ಮಣನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವೊಂದನ್ನು ಉದಾಹರಿಸುತ್ತಾರೆ. ಹತ್ತು ಹೋತೃಗಳು ಯಾವ ರೀತಿಯಲ್ಲಿ ಯಜ್ಞಮಾಡಿದರೆಂಬುವುದನ್ನು ಕೇಳು.

14021002a ಸರ್ವಮೇವಾತ್ರ ವಿಜ್ಞೇಯಂ ಚಿತ್ತಂ ಜ್ಞಾನಮವೇಕ್ಷತೇ|

14021002c ರೇತಃ ಶರೀರಭೃತ್ಕಾಯೇ ವಿಜ್ಞಾತಾ ತು ಶರೀರಭೃತ್||

ತಿಳಿಯಬೇಕಾಗಿರುವ ಎಲ್ಲವೂ ಚಿತ್ತರೂಪವಾಗಿವೆ. ಈ ಚಿತ್ತವು ಜ್ಞಾನವನ್ನು ಅಪೇಕ್ಷಿಸುತ್ತದೆ. ವೀರ್ಯದಿಂದ ಹುಟ್ಟುವ ಈ ಶರೀರದಲ್ಲಿರುವ ಶರೀರಧಾರಿಯು ಈ ಚಿತ್ತವನ್ನು ತಿಳಿದಿರುತ್ತಾನೆ.

14021003a ಶರೀರಭೃದ್ಗಾರ್ಹಪತ್ಯಸ್ತಸ್ಮಾದನ್ಯಃ ಪ್ರಣೀಯತೇ|

14021003c ತತಶ್ಚಾಹವನೀಯಸ್ತು ತಸ್ಮಿನ್ಸಂಕ್ಷಿಪ್ಯತೇ ಹವಿಃ||

ಶರೀರಧಾರಿ ಜೀವನೇ ಗಾರ್ಹಪತ್ಯಾಗ್ನಿಯು. ಅದರಿಂದ ಇನ್ನೊಂದು ಅಗ್ನಿಯು ಹುಟ್ಟಿಕೊಳ್ಳುತ್ತದೆ. ಅದೇ ಆಹವನೀಯ ಅಗ್ನಿಯಾದ ಮನಸ್ಸು. ಅದರಲ್ಲಿ ಹವಿಸ್ಸನ್ನು ಹಾಕುತ್ತಾರೆ.

14021004a ತತೋ ವಾಚಸ್ಪತಿರ್ಜಜ್ಞೇ ಸಮಾನಃ ಪರ್ಯವೇಕ್ಷತೇ|

14021004c ರೂಪಂ ಭವತಿ ವೈ ವ್ಯಕ್ತಂ ತದನುದ್ರವತೇ ಮನಃ||

ಆಗ ವಾಚಸ್ಪತಿಯು ಹುಟ್ಟುತ್ತಾನೆ. ಅವನನ್ನು ಸಮಾನ ವಾಯುವು ನೋಡುತ್ತದೆ. ಆಗ ರೂಪವು ಹುಟ್ಟಿಕೊಳ್ಳುತ್ತದೆ. ಅದು ಮನಸ್ಸಿನ ಕಡೆ ಓಡುತ್ತದೆ.”

14021005 ಬ್ರಾಹ್ಮಣ್ಯುವಾಚ

14021005a ಕಸ್ಮಾದ್ವಾಗಭವತ್ಪೂರ್ವಂ ಕಸ್ಮಾತ್ಪಶ್ಚಾನ್ಮನೋಽಭವತ್|

14021005c ಮನಸಾ ಚಿಂತಿತಂ ವಾಕ್ಯಂ ಯದಾ ಸಮಭಿಪದ್ಯತೇ||

ಬ್ರಾಹ್ಮಣಿಯು ಹೇಳಿದಳು: “ಮೊದಲು ವಾಕ್ಕು ಹೇಗೆ ಹುಟ್ಟಿಕೊಂಡಿತು? ಹೇಗೆ ತಾನೆ ಅದರ ನಂತರ ಮನಸ್ಸು ಹುಟ್ಟಿಕೊಂಡಿತು? ಮನಸ್ಸು ಯೋಚಿಸಿದ ನಂತರವೇ ಮಾತು ಹೊರಬರುತ್ತದೆಯಲ್ಲವೇ?

14021006a ಕೇನ ವಿಜ್ಞಾನಯೋಗೇನ ಮತಿಶ್ಚಿತ್ತಂ ಸಮಾಸ್ಥಿತಾ|

14021006c ಸಮುನ್ನೀತಾ ನಾಧ್ಯಗಚ್ಚತ್ಕೋ ವೈನಾಂ ಪ್ರತಿಷೇಧತಿ||

ಯಾವ ವಿಜ್ಞಾನಯೋಗದಿಂದ ಬುದ್ಧಿಯು ಚಿತ್ತವನ್ನು ಆಶ್ರಯಿಸಿದೆ? ಬುದ್ಧಿಯು ಸುಷುಪ್ತವಾಗಿರುವಾಗ ಅದು ವಿಷಯಗಳ ಕಡೆ ಹೋಗದಂತೆ ಯಾರು ತಡೆಯುತ್ತಾರೆ?”

14021007 ಬ್ರಾಹ್ಮಣ ಉವಾಚ

14021007a ತಾಮಪಾನಃ ಪತಿರ್ಭೂತ್ವಾ ತಸ್ಮಾತ್ಪ್ರೇಷ್ಯತ್ಯಪಾನತಾಮ್|

14021007c ತಾಂ ಮತಿಂ ಮನಸಃ ಪ್ರಾಹುರ್ಮನಸ್ತಸ್ಮಾದವೇಕ್ಷತೇ||

ಬ್ರಾಹ್ಮಣನು ಹೇಳಿದನು: “ಅಪಾನವು ಬುದ್ಧಿಯ ಪತಿಯಾಗಿ ಅದನ್ನು ಅಪಾನದ ಕಡೆಗೇ ಸೆಳೆದೊಯ್ಯುತ್ತದೆ. ಅಪಾನದ ಕಡೆ ಹೋಗುವ ಬುದ್ಧಿಯನ್ನೇ ಮನಸ್ಸೆಂದು ಹೇಳುತ್ತಾರೆ. ಆದುದರಿಂದಲೇ ಮನಸ್ಸು ವಾಕ್ಕನ್ನು ನೋಡುತ್ತದೆ.

14021008a ಪ್ರಶ್ನಂ ತು ವಾಙ್ಮನಸೋರ್ಮಾಂ ಯಸ್ಮಾತ್ತ್ವಮನುಪೃಚ್ಚಸಿ|

14021008c ತಸ್ಮಾತ್ತೇ ವರ್ತಯಿಷ್ಯಾಮಿ ತಯೋರೇವ ಸಮಾಹ್ವಯಮ್||

ವಾಕ್ಕು ಮತ್ತು ಮನಸ್ಸುಗಳ ಕುರಿತು ನೀನು ಕೇಳಿದ ಪ್ರಶ್ನೆಗೆ ಅವೆರಡರ ನಡುವೆ ನಡೆದ ಸಂವಾದವನ್ನು ಹೇಳುತ್ತೇನೆ. ಅದರಲ್ಲಿಯೇ ನಿನಗೆ ಉತ್ತರವು ಸಿಕ್ಕುತ್ತದೆ.

14021009a ಉಭೇ ವಾಙ್ಮನಸೀ ಗತ್ವಾ ಭೂತಾತ್ಮಾನಮಪೃಚ್ಚತಾಮ್|

14021009c ಆವಯೋಃ ಶ್ರೇಷ್ಠಮಾಚಕ್ಷ್ವ ಚಿಂಧಿ ನೌ ಸಂಶಯಂ ವಿಭೋ||

ವಾಕ್ಕು ಮತ್ತು ಮನಸ್ಸು ಎರಡೂ ಜೀವಾತ್ಮನ ಬಳಿ ಹೋಗಿ ಕೇಳಿದವು: “ವಿಭೋ! ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠರೆಂದು ಹೇಳು. ನಮ್ಮ ಈ ಸಂಶಯವನ್ನು ನಿವಾರಿಸು!”

14021010a ಮನ ಇತ್ಯೇವ ಭಗವಾಂಸ್ತದಾ ಪ್ರಾಹ ಸರಸ್ವತೀಮ್|

14021010c ಅಹಂ ವೈ ಕಾಮಧುಕ್ತುಭ್ಯಮಿತಿ ತಂ ಪ್ರಾಹ ವಾಗಥ||

ಮನಸ್ಸೇ ಶ್ರೇಷ್ಠವೆಂದು ಭಗವಂತನು ಹೇಳಲು, ಸರಸ್ವತಿಯು “ನಾನೇ ನಿನಗೆ ಕಾಮಧೇನುವಂತೆ ಎಲ್ಲವನ್ನೂ ಒದಗಿಸಿಕೊಡುತ್ತಿದ್ದೇನೆ” ಎಂದಳು. ಅದಕ್ಕೆ ಜೀವಾತ್ಮನು ಹೇಳಿದನು:

14021011a ಸ್ಥಾವರಂ ಜಂಗಮಂ ಚೈವ ವಿದ್ಧ್ಯುಭೇ ಮನಸೀ ಮಮ|

14021011c ಸ್ಥಾವರಂ ಮತ್ಸಕಾಶೇ ವೈ ಜಂಗಮಂ ವಿಷಯೇ ತವ||

“ಸ್ಥಾವರ-ಜಂಗಮಗಳೆರಡೂ ನನ್ನ ಮನಸ್ಸು ಎನ್ನುವುದನ್ನು ತಿಳಿದುಕೋ. ಗ್ರಹಿಸಬಹುದಾದ ಸ್ಥಾವರ ಜಗತ್ತೆಲ್ಲವೂ ನನ್ನ ಬಳಿಯಲ್ಲಿದೆ. ಇಂದ್ರಿಯಾತೀತವಾದ ಸ್ವರ್ಗಾದಿ ಜಂಗಮ ವಿಷಯಗಳೆಲ್ಲವೂ ನಿನ್ನ ಅಧೀನದಲ್ಲಿದೆ.

14021012a ಯಸ್ತು ತೇ ವಿಷಯಂ ಗಚ್ಚೇನ್ಮಂತ್ರೋ ವರ್ಣಃ ಸ್ವರೋಽಪಿ ವಾ|

14021012c ತನ್ಮನೋ ಜಂಗಮಂ ನಾಮ ತಸ್ಮಾದಸಿ ಗರೀಯಸೀ||

ನಿನ್ನ ವಿಷಯವಾದ ಮಂತ್ರ, ವರ್ಣ, ಅಥವಾ ಸ್ವರಗಳು ಜಂಗಮದ ಕುರಿತಾದರೆ ಮನಸ್ಸೂ ಅದನ್ನೇ ಹಿಂಬಾಲಿಸಿ ಹೋಗುತ್ತದೆ. ಆದುದರಿಂದ ನೀನೇ ಶ್ರೇಷ್ಠಳಾಗಿರುವೆ!

14021013a ಯಸ್ಮಾದಸಿ ಚ ಮಾ ವೋಚಃ ಸ್ವಯಮಭ್ಯೇತ್ಯ ಶೋಭನೇ|

14021013c ತಸ್ಮಾದುಚ್ಚ್ವಾಸಮಾಸಾದ್ಯ ನ ವಕ್ಷ್ಯಸಿ ಸರಸ್ವತಿ||

ಶೋಭನೇ! ಸರಸ್ವತಿ! ಸ್ವಯಂ ನೀನೇ ಬಂದು ನನಗೆ ಹೀಗೆ ಹೇಳಿದುದರಿಂದ ನೀನು ಉಚ್ಛ್ವಾಸದ ಸಮಯದಲ್ಲಿ ಮಾತನಾಡಲಾರೆ!

14021014a ಪ್ರಾಣಾಪಾನಾಂತರೇ ದೇವೀ ವಾಗ್ವೈ ನಿತ್ಯಂ ಸ್ಮ ತಿಷ್ಠತಿ|

14021014c ಪ್ರೇರ್ಯಮಾಣಾ ಮಹಾಭಾಗೇ ವಿನಾ ಪ್ರಾಣಮಪಾನತೀ|

14021014e ಪ್ರಜಾಪತಿಮುಪಾಧಾವತ್ಪ್ರಸೀದ ಭಗವನ್ನಿತಿ||

ಮಹಾಭಾಗೇ! ದೇವೀ! ಪ್ರಾಣ-ಅಪಾನಗಳ ಮಧ್ಯೆ ನೀನು ನಿತ್ಯವೂ ನೆಲಸಿರುವೆ. ಪ್ರಾಣದ ಪ್ರೇರಣೆಯಿಲ್ಲದೇ ನೀನು ಅಪಾನದ ಕಡೆಗೆ ಹೋದಾಗ ಪ್ರಜಾಪತಿಯ ಬಳಿಸಾರಿ ಭಗವಂತನೇ ಪ್ರಸನ್ನನಾಗು ಎಂದು ಪ್ರಾರ್ಥಿಸುವೆ!

14021015a ತತಃ ಪ್ರಾಣಃ ಪ್ರಾದುರಭೂದ್ವಾಚಮಾಪ್ಯಾಯಯನ್ಪುನಃ|

14021015c ತಸ್ಮಾದುಚ್ಚ್ವಾಸಮಾಸಾದ್ಯ ನ ವಾಗ್ವದತಿ ಕರ್ಹಿ ಚಿತ್||

ಆಗ ಪ್ರಾಣವು ವಾಣಿಗೆ ಪುಷ್ಟಿಯನ್ನು ಕೊಡುವ ಸಲುವಾಗಿ ಪುನಃ ಪ್ರಕಟವಾಗುತ್ತದೆ. ಆದುದರಿಂದ ಉಸಿರನ್ನು ಎಳೆದುಕೊಳ್ಳುವಾಗ ಯಾವುದೇ ಮಾತು ಹೊರಡುವುದಿಲ್ಲ.

14021016a ಘೋಷಿಣೀ ಜಾತನಿರ್ಘೋಷಾ ನಿತ್ಯಮೇವ ಪ್ರವರ್ತತೇ|

14021016c ತಯೋರಪಿ ಚ ಘೋಷಿಣ್ಯೋರ್ನಿರ್ಘೋಷೈವ ಗರೀಯಸೀ||

ವಾಣಿಯು ನಿತ್ಯವೂ ಎರಡು ಪ್ರಕಾರಗಳಲ್ಲಿ ಇರುತ್ತದೆ: ಘೋಷಯುಕ್ತವಾಗಿ ಮತ್ತು ನಿರ್ಘೋಷವಾಗಿ. ಘೋಷಯುಕ್ತ ವಾಣಿಗಿಂತಲೂ ಘೋಷರಹಿತ ವಾಣಿಯೇ ಶ್ರೇಷ್ಠವಾದುದು.

14021017a ಗೌರಿವ ಪ್ರಸ್ರವತ್ಯೇಷಾ ರಸಮುತ್ತಮಶಾಲಿನೀ|

14021017c ಸತತಂ ಸ್ಯಂದತೇ ಹ್ಯೇಷಾ ಶಾಶ್ವತಂ ಬ್ರಹ್ಮವಾದಿನೀ||

ಈ ಉತ್ತಮ ನಿರ್ಘೋಷ ವಾಣಿಯು ಹಸುವಿನಂತೆ ಹಾಲನ್ನೀಯುತ್ತದೆ ಮತ್ತು ಬ್ರಹ್ಮವಾದಿನಿಯಾದ ಇದು ಸತತವೂ ಶಾಶ್ವತವಾದುದನ್ನೇ ನೀಡುತ್ತದೆ.

14021018a ದಿವ್ಯಾದಿವ್ಯಪ್ರಭಾವೇನ ಭಾರತೀ ಗೌಃ ಶುಚಿಸ್ಮಿತೇ|

14021018c ಏತಯೋರಂತರಂ ಪಶ್ಯ ಸೂಕ್ಷ್ಮಯೋಃ ಸ್ಯಂದಮಾನಯೋಃ||

ಶುಚಿಸ್ಮಿತೇ! ಹಸುವಿನಂಥಹ ಈ ಮಾತು ದಿವ್ಯಪ್ರಭಾವಗಳಿಂದ ಕೂಡಿದ್ದು ದಿವ್ಯವಾದುದು. ಸೂಕ್ಷ್ಮವಾಗಿ ಹರಿದುಬರುವ ಇವೆರಡರ ನಡುವಿನ ಅಂತರವನ್ನು ನೋಡು!””

14021019a ಅನುತ್ಪನ್ನೇಷು ವಾಕ್ಯೇಷು ಚೋದ್ಯಮಾನಾ ಸಿಸೃಕ್ಷಯಾ|

14021019c ಕಿಂ ನು ಪೂರ್ವಂ ತತೋ ದೇವೀ ವ್ಯಾಜಹಾರ ಸರಸ್ವತೀ||

ಬ್ರಾಹ್ಮಣಿಯು ಹೇಳಿದಳು: “ಹಿಂದೆ ಮಾತೇ ಹೊರಡದಿದ್ದಾಗ ಮಾತನಾಡ ಬಯಸಿದ ಸರಸ್ವತೀ ದೇವಿಯು ಯಾವ ಮಾತನ್ನಾಡಿದಳು?”

14021020a ಪ್ರಾಣೇನ ಯಾ ಸಂಭವತೇ ಶರೀರೇ

ಪ್ರಾಣಾದಪಾನಂ ಪ್ರತಿಪದ್ಯತೇ ಚ|

14021020c ಉದಾನಭೂತಾ ಚ ವಿಸೃಜ್ಯ ದೇಹಂ

ವ್ಯಾನೇನ ಸರ್ವಂ ದಿವಮಾವೃಣೋತಿ||

ಬ್ರಾಹ್ಮಣನು ಹೇಳಿದನು: “ವಾಣಿಯು ಶರೀರದಲ್ಲಿನ ಪ್ರಾಣದಿಂದ ಹುಟ್ಟುತ್ತದೆ. ಪ್ರಾಣದಿಂದ ಅಪಾನವನ್ನು ಸೇರುತ್ತದೆ. ನಂತರ ಉದಾನವಾಗಿ ದೇಹವನ್ನು ತ್ಯಜಿಸಿ ವ್ಯಾನದಿಂದ ದಿವವೆಲ್ಲವನ್ನೂ ಆವರಿಸುತ್ತದೆ.

14021021a ತತಃ ಸಮಾನೇ ಪ್ರತಿತಿಷ್ಠತೀಹ

ಇತ್ಯೇವ ಪೂರ್ವಂ ಪ್ರಜಜಲ್ಪ ಚಾಪಿ|

14021021c ತಸ್ಮಾನ್ಮನಃ ಸ್ಥಾವರತ್ವಾದ್ವಿಶಿಷ್ಟಂ

ತಥಾ ದೇವೀ ಜಂಗಮತ್ವಾದ್ವಿಶಿಷ್ಟಾ||

ಅನಂತರ ಸಮಾನದಲ್ಲಿ ಅದು ನೆಲೆಸುತ್ತದೆ. ಹೀಗೆ ಹಿಂದೆ ದೇವಿಯು ಹೇಳಿದಳು. ಆದುದರಿಂದ ಮನಸ್ಸು ಅದರ ಸ್ಥಾವರತ್ವದಿಂದ ವಿಶಿಷ್ಟವಾದುದು. ಹಾಗೆಯೇ ವಾಗ್ದೇವಿಯು ಅವಳ ಜಂಗಮತ್ವದಿಂದ ವಿಶಿಷ್ಟಳು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಾಹ್ಮಣಗೀತಾಸು ಏಕವಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಾಹ್ಮಣಗೀತಾ ಎನ್ನುವ ಇಪ್ಪತ್ತೊಂದನೇ ಅಧ್ಯಾಯವು.

Comments are closed.