Ashvamedhika Parva: Chapter 15

ಅಶ್ವಮೇಧಿಕ ಪರ್ವ

೧೫

ಇಂದ್ರಪ್ರಸ್ಥದಲ್ಲಿ ಕೃಷ್ಣಾರ್ಜುನರ ಸಭಾವಿಹಾರ (೧-೭). ತಾವಿಬ್ಬರೂ ದ್ವಾರಕೆಗೆ ಹೋಗಲು ಯುಧಿಷ್ಠಿರನಲ್ಲಿ ಅನುಮತಿಯನ್ನು ಕೇಳು ಎಂದು ಕೃಷ್ಣನು ಅರ್ಜುನನಿಗೆ ಹೇಳಿದುದು (೮-೩೪).

14015001 ಜನಮೇಜಯ ಉವಾಚ

14015001a ವಿಜಿತೇ ಪಾಂಡವೇಯೈಸ್ತು ಪ್ರಶಾಂತೇ ಚ ದ್ವಿಜೋತ್ತಮ|

14015001c ರಾಷ್ಟ್ರೇ ಕಿಂ ಚಕ್ರತುರ್ವೀರೌ ವಾಸುದೇವಧನಂಜಯೌ||

ಜನಮೇಜಯನು ಹೇಳಿದನು: “ದ್ವಿಜೋತ್ತಮ! ಪಾಂಡವರು ಗೆದ್ದು ಪ್ರಶಾಂತರಾಗಿ ರಾಷ್ಟ್ರವನ್ನು ಆಳುತ್ತಿರಲು ವೀರ ವಾಸುದೇವ-ಧನಂಜಯರು ಏನು ಮಾಡಿದರು.”

14015002 ವೈಶಂಪಾಯನ ಉವಾಚ

14015002a ವಿಜಿತೇ ಪಾಂಡವೇಯೈಸ್ತು ಪ್ರಶಾಂತೇ ಚ ವಿಶಾಂ ಪತೇ|

14015002c ರಾಷ್ಟ್ರೇ ಬಭೂವತುರ್ಹೃಷ್ಟೌ ವಾಸುದೇವಧನಂಜಯೌ||

ವೈಶಂಪಾಯನನು ಹೇಳಿದನು: “ವಿಶಾಂಪತೇ! ಪಾಂಡವರಿಗೆ ವಿಜಯವಾಗಿ ಅವರು ಪ್ರಶಾಂತರಾಗಲು ವಾಸುದೇವ-ಧನಂಜಯರು ಹರ್ಷಿತರಾದರು.

14015003a ವಿಜಹ್ರಾತೇ ಮುದಾ ಯುಕ್ತೌ ದಿವಿ ದೇವೇಶ್ವರಾವಿವ|

14015003c ತೌ ವನೇಷು ವಿಚಿತ್ರೇಷು ಪರ್ವತಾನಾಂ ಚ ಸಾನುಷು||

ಮುದಿತರಾಗಿ ಅವನು ತಮ್ಮ ಅನುಯಾಯಿಗಳೊಂದಿಗೆ ದಿವಿಯಲ್ಲಿ ದೇವೇಶ್ವರರಂತೆ ವಿಚಿತ್ರ ವನ-ಪರ್ವತಗಳಲ್ಲಿ ವಿಹರಿಸಿದರು.

14015004a ಶೈಲೇಷು ರಮಣೀಯೇಷು ಪಲ್ವಲೇಷು ನದೀಷು ಚ|

14015004c ಚಂಕ್ರಮ್ಯಮಾಣೌ ಸಂಹೃಷ್ಟಾವಶ್ವಿನಾವಿವ ನಂದನೇ||

ಅಶ್ವಿನಿಯರು ನಂದನ ವನದಲ್ಲಿ ಹೇಗೋ ಹಾಗೆ ಅವರಿಬ್ಬರೂ ರಮಣೀಯ ಶೈಲಗಳಲ್ಲಿ ಮತ್ತು ನದಿ-ತೀರ್ಥಗಳಲ್ಲಿ ವಿಹರಿಸುತ್ತಾ ಹರ್ಷಿತರಾದರು.

14015005a ಇಂದ್ರಪ್ರಸ್ಥೇ ಮಹಾತ್ಮಾನೌ ರೇಮಾತೇ ಕೃಷ್ಣಪಾಂಡವೌ|

14015005c ಪ್ರವಿಶ್ಯ ತಾಂ ಸಭಾಂ ರಮ್ಯಾಂ ವಿಜಹ್ರಾತೇ ಚ ಭಾರತ||

ಭಾರತ! ಮಹಾತ್ಮ ಕೃಷ್ಣ-ಪಾಂಡವರು ಇಂದ್ರಪ್ರಸ್ಥದಲ್ಲಿ ರಮಿಸಿದರು. ಆ ರಮ್ಯ ಸಭೆಯನ್ನು ಪ್ರವೇಶಿಸಿ ವಿಹರಿಸಿದರು.

14015006a ತತ್ರ ಯುದ್ಧಕಥಾಶ್ಚಿತ್ರಾಃ ಪರಿಕ್ಲೇಶಾಂಶ್ಚ ಪಾರ್ಥಿವ|

14015006c ಕಥಾಯೋಗೇ ಕಥಾಯೋಗೇ ಕಥಯಾಮಾಸತುಸ್ತದಾ||

ಪಾರ್ಥಿವ! ಅಲ್ಲಿ ಅವರಿಬ್ಬರೂ ವಿಚಿತ್ರ ಯುದ್ಧಕಥೆಗಳನ್ನೂ, ತಮಗಾದ ಪರಿಕ್ಲೇಶಗಳನ್ನೂ ಹೇಳಿಕೊಳ್ಳುತ್ತಾ, ಮಾತುಕಥೆಗಳಲ್ಲಿಯೇ ಕಾಲವನ್ನು ಕಳೆದರು.

14015007a ಋಷೀಣಾಂ ದೇವತಾನಾಂ ಚ ವಂಶಾಂಸ್ತಾವಾಹತುಸ್ತದಾ|

14015007c ಪ್ರೀಯಮಾಣೌ ಮಹಾತ್ಮಾನೌ ಪುರಾಣಾವೃಷಿಸತ್ತಮೌ||

ಪುರಾಣ ಋಷಿಸತ್ತಮರಾದ ಅವರಿಬ್ಬರು ಮಹಾತ್ಮರೂ ಪ್ರೀತಿಯಿಂದ ಋಷಿಗಳ ಮತ್ತು ದೇವತೆಗಳ ವಂಶಗಳ ಕಥೆಗಳನ್ನು ಹೇಳಿಕೊಳ್ಳುತ್ತಿದ್ದರು.

14015008a ಮಧುರಾಸ್ತು ಕಥಾಶ್ಚಿತ್ರಾಶ್ಚಿತ್ರಾರ್ಥಪದನಿಶ್ಚಯಾಃ|

14015008c ನಿಶ್ಚಯಜ್ಞಃ ಸ ಪಾರ್ಥಾಯ ಕಥಯಾಮಾಸ ಕೇಶವಃ||

ನಿಶ್ಚಯಜ್ಞ ಕೇಶವನು ಪಾರ್ಥನಿಗೆ ಮಧುರವಾದ ವಿಚಿತ್ರ ಪದ ನಿಶ್ಚಯಗಳುಳ್ಳ ಕಥೆಗಳನ್ನು ಹೇಳತೊಡಗಿದನು.

14015009a ಪುತ್ರಶೋಕಾಭಿಸಂತಪ್ತಂ ಜ್ಞಾತೀನಾಂ ಚ ಸಹಸ್ರಶಃ|

14015009c ಕಥಾಭಿಃ ಶಮಯಾಮಾಸ ಪಾರ್ಥಂ ಶೌರಿರ್ಜನಾರ್ದನಃ||

ಪುತ್ರಶೋಕದಿಂದ ಮತ್ತು ಸಹಸ್ರಾರು ಜ್ಞಾತಿಬಾಂಧವರ ಮರಣದಿಂದ ಸಂತಪ್ತನಾಗಿದ್ದ ಪಾರ್ಥನನ್ನು ಶೌರಿ ಜನಾರ್ದನನು ಕಥೆಗಳ ಮೂಲಕ ಸಮಾಧಾನಪಡಿಸಿದನು.

14015010a ಸ ತಮಾಶ್ವಾಸ್ಯ ವಿಧಿವದ್ವಿಧಾನಜ್ಞೋ ಮಹಾತಪಾಃ|

14015010c ಅಪಹೃತ್ಯಾತ್ಮನೋ ಭಾರಂ ವಿಶಶ್ರಾಮೇವ ಸಾತ್ವತಃ||

ವಿಧಾನಜ್ಞ ಮಹಾತಪಸ್ವಿ ಸಾತ್ವತನು ಅರ್ಜುನನನ್ನು ವಿಧಿವತ್ತಾಗಿ ಸಮಾಧಾನಗೊಳಿಸಿ ತಾನು ಹೊತ್ತಿದ್ದ ಭಾರವನ್ನು ಕೆಳಗಿಳಿಸಿ ವಿಶ್ರಮಿಸಿದಂತೆ ತೋರಿದನು.

14015011a ತತಃ ಕಥಾಂತೇ ಗೋವಿಂದೋ ಗುಡಾಕೇಶಮುವಾಚ ಹ|

14015011c ಸಾಂತ್ವಯನ್ಶ್ಲಕ್ಷ್ಣಯಾ ವಾಚಾ ಹೇತುಯುಕ್ತಮಿದಂ ವಚಃ||

ಕಥೆಗಳ ಕೊನೆಯಲ್ಲಿ ಗೋವಿಂದನು ಗುಡಾಕೇಶನನ್ನು ಮಧುರಮಾತುಗಳಿಂದ ಸಾಂತ್ವನಗೊಳಿಸುತ್ತಾ ಅರ್ಥಯುಕ್ತವಾದ ಈ ಮಾತುಗಳನ್ನಾಡಿದನು:

14015012a ವಿಜಿತೇಯಂ ಧರಾ ಕೃತ್ಸ್ನಾ ಸವ್ಯಸಾಚಿನ್ಪರಂತಪ|

14015012c ತ್ವದ್ಬಾಹುಬಲಮಾಶ್ರಿತ್ಯ ರಾಜ್ಞಾ ಧರ್ಮಸುತೇನ ಹ||

“ಸವ್ಯಸಾಚಿ! ಪರಂತಪ! ನಿನ್ನ ಬಾಹುಬಲವನ್ನು ಆಶ್ರಯಿಸಿ ರಾಜಾ ಧರ್ಮಸುತನು ಈ ಇಡೀ ಭೂಮಿಯನ್ನೇ ಗೆದ್ದಿದ್ದಾಯಿತು!

14015013a ಅಸಪತ್ನಾಂ ಮಹೀಂ ಭುಂಕ್ತೇ ಧರ್ಮರಾಜೋ ಯುಧಿಷ್ಠಿರಃ|

14015013c ಭೀಮಸೇನಪ್ರಭಾವೇನ ಯಮಯೋಶ್ಚ ನರೋತ್ತಮ||

ನರೋತ್ತಮ! ಭೀಮಸೇನ ಮತ್ತು ಯಮಳರ ಪ್ರಭಾವದಿಂದ ಧರ್ಮರಾಜ ಯುಧಿಷ್ಠಿರನು ದಾಯಾದಿಗಳಿಲ್ಲದ ಈ ಮಹಿಯನ್ನು ಭೋಗಿಸುತ್ತಿದ್ದಾನೆ

14015014a ಧರ್ಮೇಣ ರಾಜ್ಞಾ ಧರ್ಮಜ್ಞ ಪ್ರಾಪ್ತಂ ರಾಜ್ಯಮಕಂಟಕಮ್|

14015014c ಧರ್ಮೇಣ ನಿಹತಃ ಸಂಖ್ಯೇ ಸ ಚ ರಾಜಾ ಸುಯೋಧನಃ||

ಧರ್ಮಜ್ಞ ರಾಜನು ಧರ್ಮದಿಂದಲೇ ಕಂಟಕವಿಲ್ಲದ ರಾಜ್ಯವನ್ನು ಪಡೆದುಕೊಂಡನು. ಧರ್ಮದಿಂದಲೇ ರಾಜಾ ಸುಯೋಧನನು ಯುದ್ಧದಲ್ಲಿ ಮಡಿದನು.

14015015a ಅಧರ್ಮರುಚಯೋ ಲುಬ್ಧಾಃ ಸದಾ ಚಾಪ್ರಿಯವಾದಿನಃ|

14015015c ಧಾರ್ತರಾಷ್ಟ್ರಾ ದುರಾತ್ಮಾನಃ ಸಾನುಬಂಧಾ ನಿಪಾತಿತಾಃ||

ಅಧರ್ಮದಲ್ಲಿಯೇ ರುಚಿಯನ್ನಿಟ್ಟಿದ್ದ, ಸದಾ ಅಪ್ರಿಯವಾದುದನ್ನೇ ಮಾತನಾಡುತ್ತಿದ್ದ, ಆಸೆಬುರುಕ ದುರಾತ್ಮ ಧಾರ್ತರಾಷ್ಟ್ರರು ಬಾಂಧವರೊಂದಿಗೆ ಕೆಳಗುರುಳಿದ್ದಾರೆ.

14015016a ಪ್ರಶಾಂತಾಮಖಿಲಾಂ ಪಾರ್ಥ ಪೃಥಿವೀಂ ಪೃಥಿವೀಪತಿಃ|

14015016c ಭುಂಕ್ತೇ ಧರ್ಮಸುತೋ ರಾಜಾ ತ್ವಯಾ ಗುಪ್ತಃ ಕುರೂದ್ವಹ||

ಪಾರ್ಥ! ಕುರೂದ್ವಹ! ನೀನು ರಕ್ಷಿಸುತ್ತಿರುವ ಈ ಪ್ರಶಾಂತ ಅಖಿಲ ಪೃಥ್ವಿಯನ್ನು ಪೃಥ್ವೀಪತಿ ಧರ್ಮಸುತ ರಾಜನು ಭೋಗಿಸುತ್ತಿದ್ದಾನೆ.

14015017a ರಮೇ ಚಾಹಂ ತ್ವಯಾ ಸಾರ್ಧಮರಣ್ಯೇಷ್ವಪಿ ಪಾಂಡವ|

14015017c ಕಿಮು ಯತ್ರ ಜನೋಽಯಂ ವೈ ಪೃಥಾ ಚಾಮಿತ್ರಕರ್ಶನ||

ಅಮಿತ್ರಕರ್ಶನ! ಪಾಂಡವ! ನಿನ್ನೊಡನೆ ನಾನು ನಿರ್ಜನ ಅರಣ್ಯದಲ್ಲಿಯೂ ರಮಿಸಬಲ್ಲೆನು. ಇನ್ನು ಜನರಿರುವ ಮತ್ತು ಅತ್ತೆ ಪೃಥಾಳಿರುವ ಇಲ್ಲಿ ಇನ್ನೇನು?

14015018a ಯತ್ರ ಧರ್ಮಸುತೋ ರಾಜಾ ಯತ್ರ ಭೀಮೋ ಮಹಾಬಲಃ|

14015018c ಯತ್ರ ಮಾದ್ರವತೀಪುತ್ರೌ ರತಿಸ್ತತ್ರ ಪರಾ ಮಮ||

ಎಲ್ಲಿ ರಾಜಾ ಧರ್ಮಸುತನಿರುವನೋ, ಎಲ್ಲಿ ಮಹಾಬಲ ಭೀಮನಿರುವನೋ, ಎಲ್ಲಿ ಮಾದ್ರವತೀ ಪುತ್ರರಿರುವರೋ ಅಲ್ಲಿ ನನಗೆ ಪರಮ ಆನಂದವಾಗುತ್ತದೆ.

14015019a ತಥೈವ ಸ್ವರ್ಗಕಲ್ಪೇಷು ಸಭೋದ್ದೇಶೇಷು ಭಾರತ|

14015019c ರಮಣೀಯೇಷು ಪುಣ್ಯೇಷು ಸಹಿತಸ್ಯ ತ್ವಯಾನಘ||

ಭಾರತ! ಅನಘ! ಸ್ವರ್ಗದಂತಿರುವ ಈ ರಮಣೀಯ ಪುಣ್ಯ ಸಭಾಪ್ರದೇಶದಲ್ಲಿ ನಿನ್ನೊಡನೆ ಇದ್ದೇನೆ.

14015020a ಕಾಲೋ ಮಹಾಂಸ್ತ್ವತೀತೋ ಮೇ ಶೂರಪುತ್ರಮಪಶ್ಯತಃ|

14015020c ಬಲದೇವಂ ಚ ಕೌರವ್ಯ ತಥಾನ್ಯಾನ್ವೃಷ್ಣಿಪುಂಗವಾನ್||

ಕೌರವ್ಯ! ಶೂರಪುತ್ರ ವಸುದೇವನನ್ನು, ಬಲದೇವನನ್ನು ಮತ್ತು ಹಾಗೆಯೇ ಇತರ ವೃಷ್ಣಿಪುಂಗವರನ್ನು ಕಾಣದೇ ಬಹಳ ಕಾಲವು ಕಳೆದುಹೋಯಿತು.

14015021a ಸೋಽಹಂ ಗಂತುಮಭೀಪ್ಸಾಮಿ ಪುರೀಂ ದ್ವಾರವತೀಂ ಪ್ರತಿ|

14015021c ರೋಚತಾಂ ಗಮನಂ ಮಹ್ಯಂ ತವಾಪಿ ಪುರುಷರ್ಷಭ||

ಪುರುಷರ್ಷಭ! ಆದುದರಿಂದ ದ್ವಾರವತೀ ಪುರಿಯ ಕಡೆ ಹೋಗಲು ಬಯಸುತ್ತೇನೆ. ನಾನು ಮತ್ತು ನೀನು ಇಬ್ಬರೂ ಅಲ್ಲಿಗೆ ಹೋಗಬೇಕೆಂದು ಅನಿಸುತ್ತಿದೆ.

14015022a ಉಕ್ತೋ ಬಹುವಿಧಂ ರಾಜಾ ತತ್ರ ತತ್ರ ಯುಧಿಷ್ಠಿರಃ|

14015022c ಸ ಹ ಭೀಷ್ಮೇಣ ಯದ್ಯುಕ್ತಮಸ್ಮಾಭಿಃ ಶೋಕಕಾರಿತೇ||

ಶೋಕಿಸುತ್ತಿದ್ದ ರಾಜಾ ಯುಧಿಷ್ಠಿರನಿಗೆ ಭೀಷ್ಮನೊಂದಿಗೆ ನಾವೂ ಕೂಡ ಅಲ್ಲಲ್ಲಿ ಬಹುವಿಧವಾಗಿ ಹೇಳಿದೆವು.

14015023a ಶಿಷ್ಟೋ ಯುಧಿಷ್ಠಿರೋಽಸ್ಮಾಭಿಃ ಶಾಸ್ತಾ ಸನ್ನಪಿ ಪಾಂಡವಃ|

14015023c ತೇನ ತಚ್ಚ ವಚಃ ಸಮ್ಯಗ್ಗೃಹೀತಂ ಸುಮಹಾತ್ಮನಾ||

ಪಾಂಡವ ಯುಧಿಷ್ಠಿರನಾದರೋ ನಮ್ಮಿಂದ ಉಪದೇಶಗಳನ್ನು ಪಡೆದು ಆಳುತ್ತಿದ್ದಾನೆ. ಆ ಮಹಾತ್ಮನು ನಮ್ಮ ವಚನಗಳೆಲ್ಲವನ್ನೂ ಸಂಪೂರ್ಣವಾಗಿ ಸ್ವೀಕರಿಸಿದ್ದಾನೆ.

14015024a ಧರ್ಮಪುತ್ರೇ ಹಿ ಧರ್ಮಜ್ಞೇ ಕೃತಜ್ಞೇ ಸತ್ಯವಾದಿನಿ|

14015024c ಸತ್ಯಂ ಧರ್ಮೋ ಮತಿಶ್ಚಾಗ್ರ್ಯಾ ಸ್ಥಿತಿಶ್ಚ ಸತತಂ ಸ್ಥಿರಾ||

ಧರ್ಮಜ್ಞ ಕೃತಜ್ಞ ಸತ್ಯವಾದಿನಿ ಧರ್ಮಪುತ್ರನಲ್ಲಿ ಸತತವೂ ಸತ್ಯ-ಧರ್ಮಗಳು ಮತ್ತು ಉನ್ನತ ಬುದ್ಧಿಯು ಸ್ಥಿರವಾಗಿ ನೆಲೆಸಿವೆ.

14015025a ತದ್ಗತ್ವಾ ತಂ ಮಹಾತ್ಮಾನಂ ಯದಿ ತೇ ರೋಚತೇಽರ್ಜುನ|

14015025c ಅಸ್ಮದ್ಗಮನಸಂಯುಕ್ತಂ ವಚೋ ಬ್ರೂಹಿ ಜನಾಧಿಪಮ್||

ಅರ್ಜುನ! ನೀನು ಬಯಸುವೆಯಾದರೆ ಆ ಮಹಾತ್ಮನಲ್ಲಿಗೆ ಹೋಗಿ ನಮ್ಮ ಪ್ರಯಾಣದ ಕುರಿತು ಜನಾಧಿಪನಿಗೆ ಹೇಳು.

14015026a ನ ಹಿ ತಸ್ಯಾಪ್ರಿಯಂ ಕುರ್ಯಾಂ ಪ್ರಾಣತ್ಯಾಗೇಽಪ್ಯುಪಸ್ಥಿತೇ|

14015026c ಕುತೋ ಗಂತುಂ ಮಹಾಬಾಹೋ ಪುರೀಂ ದ್ವಾರವತೀಂ ಪ್ರತಿ||

ಮಹಾಬಾಹೋ! ಪ್ರಾಣತ್ಯಾಗಕ್ಕೂ ಸಿದ್ಧನಾಗಿದ್ದ ಅವನಿಗೆ ಅಪ್ರಿಯವಾದುದನ್ನು ಮಾಡಿ ನಾವು ದ್ವಾರವತೀ ಪುರಿಗೆ ಹೇಗೆ ಹೋಗಬಲ್ಲೆವು?

14015027a ಸರ್ವಂ ತ್ವಿದಮಹಂ ಪಾರ್ಥ ತ್ವತ್ಪ್ರೀತಿಹಿತಕಾಮ್ಯಯಾ|

14015027c ಬ್ರವೀಮಿ ಸತ್ಯಂ ಕೌರವ್ಯ ನ ಮಿಥ್ಯೈತತ್ಕಥಂ ಚನ||

ಪಾರ್ಥ! ಇವೆಲ್ಲವನ್ನೂ ನಿನ್ನ ಪ್ರೀತಿ-ಹಿತಗಳನ್ನು ಬಯಸಿ ಹೇಳುತ್ತಿದ್ದೇನೆ. ಕೌರವ್ಯ! ನಿನಗೆ ಸತ್ಯವನ್ನೇ ಹೇಳುತ್ತೇನೆ. ಸುಳ್ಳನೆಂದೂ ಹೇಳುವುದಿಲ್ಲ.

14015028a ಪ್ರಯೋಜನಂ ಚ ನಿರ್ವೃತ್ತಮಿಹ ವಾಸೇ ಮಮಾರ್ಜುನ|

14015028c ಧಾರ್ತರಾಷ್ಟ್ರೋ ಹತೋ ರಾಜಾ ಸಬಲಃ ಸಪದಾನುಗಃ||

ಅರ್ಜುನ! ನಾನು ಇಲ್ಲಿ ಇದ್ದು ಆಗಬೇಕಾಗಿದ್ದ ಪ್ರಯೋಜನವು ಆಗಿಹೋಯಿತು. ರಾಜಾ ಧಾರ್ತರಾಷ್ಟ್ರನು ಅವನ ಸೇನೆ ಮತ್ತು ಅನುಯಾಯಿಗಳೊಂದಿಗೆ ಹತನಾದನು.

14015029a ಪೃಥಿವೀ ಚ ವಶೇ ತಾತ ಧರ್ಮಪುತ್ರಸ್ಯ ಧೀಮತಃ|

14015029c ಸ್ಥಿತಾ ಸಮುದ್ರವಸನಾ ಸಶೈಲವನಕಾನನಾ|

14015029e ಚಿತಾ ರತ್ನೈರ್ಬಹುವಿಧೈಃ ಕುರುರಾಜಸ್ಯ ಪಾಂಡವ||

ಅಯ್ಯಾ! ಪೃಥ್ವಿಯೂ ಕೂಡ ಧೀಮಂತ ಧರ್ಮಪುತ್ರನ ವಶವಾಯಿತು. ಪಾಂಡವ! ಸಮುದ್ರವೇ ವಸ್ತ್ರವಾಗುಳ್ಳ ಶೈಲ-ವನ-ಕಾನನ ಯುಕ್ತಳಾದ ಬಹುವಿಧದ ರತ್ನಗಳ ಖನಿಯಾದ ಭೂಮಿಯು ಕುರುರಾಜನದ್ದಾಗಿದೆ.

14015030a ಧರ್ಮೇಣ ರಾಜಾ ಧರ್ಮಜ್ಞಃ ಪಾತು ಸರ್ವಾಂ ವಸುಂಧರಾಮ್|

14015030c ಉಪಾಸ್ಯಮಾನೋ ಬಹುಭಿಃ ಸಿದ್ಧೈಶ್ಚಾಪಿ ಮಹಾತ್ಮಭಿಃ|

14015030e ಸ್ತೂಯಮಾನಶ್ಚ ಸತತಂ ಬಂದಿಭಿರ್ಭರತರ್ಷಭ||

ಭರತರ್ಷಭ! ಅನೇಕ ಮಹಾತ್ಮ ಸಿದ್ಧರಿಂದ ಉಪಾಸಿಸಲ್ಪಟ್ಟು ಮತ್ತು ಬಂದಿಗಳಿಂದ ಸತತವೂ ಸ್ತುತಿಸಲ್ಪಡುತ್ತಿರುವ ಧರ್ಮಜ್ಞ ರಾಜನು ಇಡೀ ವಸುಂಧರೆಯನ್ನು ಧರ್ಮದಿಂದ ಪಾಲಿಸಲಿ!

14015031a ತನ್ಮಯಾ ಸಹ ಗತ್ವಾದ್ಯ ರಾಜಾನಂ ಕುರುವರ್ಧನಮ್|

14015031c ಆಪೃಚ್ಚ ಕುರುಶಾರ್ದೂಲ ಗಮನಂ ದ್ವಾರಕಾಂ ಪ್ರತಿ||

ಕುರುಶಾರ್ದೂಲ! ಇಂದು ನೀನು ನನ್ನೊಡನೆ ಕುರುವರ್ಧನ ರಾಜನಲ್ಲಿಗೆ ಹೋಗಿ ದ್ವಾರಕೆಗೆ ಹೋಗುವ ಕುರಿತು ಕೇಳು.

14015032a ಇದಂ ಶರೀರಂ ವಸು ಯಚ್ಚ ಮೇ ಗೃಹೇ

ನಿವೇದಿತಂ ಪಾರ್ಥ ಸದಾ ಯುಧಿಷ್ಠಿರೇ|

14015032c ಪ್ರಿಯಶ್ಚ ಮಾನ್ಯಶ್ಚ ಹಿ ಮೇ ಯುಧಿಷ್ಠಿರಃ

ಸದಾ ಕುರೂಣಾಮಧಿಪೋ ಮಹಾಮತಿಃ||

ಈ ಶರೀರ ಮತ್ತು ನನ್ನ ಮನೆಯಲ್ಲಿ ಏನೆಲ್ಲ ಸಂಪತ್ತಿದೆಯೋ ಅದು ಸದಾ ಯುಧಿಷ್ಠಿರನಿಗೇ ಮುಡುಪಾಗಿದೆ. ಕುರುಗಳ ಅಧಿಪ ಮಹಾಮತಿ ಯುಧಿಷ್ಠಿರನು ನನಗೆ ಪ್ರಿಯನಾದವನೂ ಮತ್ತು ಮಾನ್ಯನೂ ಆಗಿದ್ದಾನೆ.

14015033a ಪ್ರಯೋಜನಂ ಚಾಪಿ ನಿವಾಸಕಾರಣೇ

ನ ವಿದ್ಯತೇ ಮೇ ತ್ವದೃತೇ ಮಹಾಭುಜ|

14015033c ಸ್ಥಿತಾ ಹಿ ಪೃಥ್ವೀ ತವ ಪಾರ್ಥ ಶಾಸನೇ

ಗುರೋಃ ಸುವೃತ್ತಸ್ಯ ಯುಧಿಷ್ಠಿರಸ್ಯ ಹ||

ಮಹಾಭುಜ! ನಿನ್ನೊಡನೆ ಇರುವ ಸುಖವಲ್ಲದೇ ಇಲ್ಲಿ ನಾನು ಇನ್ನೂ ಉಳಿದುಕೊಂಡರೆ ಯಾವ ಪ್ರಯೋಜನವನ್ನೂ ನಾನು ಕಾಣುತ್ತಿಲ್ಲ. ಪಾರ್ಥ! ಈ ಪೃಥ್ವಿಯೇ ನಿನ್ನ ಗುರುವೂ ಉತ್ತಮ ನಡತೆಯುಳ್ಳವನೂ ಆದ ಯುಧಿಷ್ಠಿರನ ಶಾಸನದಲ್ಲಿದೆ!”

14015034a ಇತೀದಮುಕ್ತಂ ಸ ತದಾ ಮಹಾತ್ಮನಾ

ಜನಾರ್ದನೇನಾಮಿತವಿಕ್ರಮೋಽರ್ಜುನಃ|

14015034c ತಥೇತಿ ಕೃಚ್ಚ್ರಾದಿವ ವಾಚಮೀರಯನ್

ಜನಾರ್ದನಂ ಸಂಪ್ರತಿಪೂಜ್ಯ ಪಾರ್ಥಿವ||

ಆ ಮಹಾತ್ಮ ಜನಾರ್ದನನು ಹೀಗೆ ಹೇಳಲು ಅಮಿತ ವಿಕ್ರಮಿ ಅರ್ಜುನನು ಕಷ್ಟದಿಂದಲೇ “ಹಾಗೆಯೇ ಆಗಲಿ” ಎಂದು ಹೇಳಿ ಜನಾರ್ದನನನ್ನು ಪೂಜಿಸಿದನು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಪಂಚದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಹದಿನೈದನೇ ಅಧ್ಯಾಯವು.

Comments are closed.