Ashramavasika Parva: Chapter 44

ಆಶ್ರಮವಾಸಿಕ ಪರ್ವ: ಪುತ್ರದರ್ಶನ ಪರ್ವ

೪೪

ಯುಧಿಷ್ಠಿರ ನಿವರ್ತನ

ಯುಧಿಷ್ಠಿರನನ್ನು ಕಳುಹಿಸಿ ಕೊಡಬೇಕೆಂದು ವ್ಯಾಸನು ಧೃತರಾಷ್ಟ್ರನಿಗೆ ಹೇಳಿದುದು (೧-೧೨). ಧೃತರಾಷ್ಟ್ರನು ಯುಧಿಷ್ಠಿರನಿಗೆ ಹಿಂದಿರುಗಲು ಹೇಳಿದುದು (೧೩-೨೨). ಧೃತರಾಷ್ಟ್ರ, ಗಾಂಧಾರೀ-ಕುಂತಿಯರನ್ನು ಬೀಳ್ಕೊಂಡು ಯುಧಿಷ್ಠಿರನು ಹಸ್ತಿನಾಪುರಕ್ಕೆ ಹಿಂದಿರುಗಿದುದು (೨೩-೫೨).

15044001 ಜನಮೇಜಯ ಉವಾಚ|

15044001a ದೃಷ್ಟ್ವಾ ಪುತ್ರಾಂಸ್ತಥಾ ಪೌತ್ರಾನ್ಸಾನುಬಂಧಾನ್ಜನಾಧಿಪಃ|

15044001c ಧೃತರಾಷ್ಟ್ರಃ ಕಿಮಕರೋದ್ರಾಜಾ ಚೈವ ಯುಧಿಷ್ಠಿರಃ||

ಜನಮೇಜಯನು ಹೇಳಿದನು: "ತನ್ನ ಪುತ್ರರನ್ನೂ, ಪೌತ್ರರನ್ನೂ, ಸಂಬಂಧಿಗಳನ್ನೂ ನೋಡಿದ ಜನಾಧಿಪ ಧೃತರಾಷ್ಟ್ರ ಮತ್ತು ರಾಜಾ ಯುಧಿಷ್ಠಿರರು ಏನು ಮಾಡಿದರು?"

15044002 ವೈಶಂಪಾಯನ ಉವಾಚ|

15044002a ತದ್ದೃಷ್ಟ್ವಾ ಮಹದಾಶ್ಚರ್ಯಂ ಪುತ್ರಾಣಾಂ ದರ್ಶನಂ ಪುನಃ|

15044002c ವೀತಶೋಕಃ ಸ ರಾಜರ್ಷಿಃ ಪುನರಾಶ್ರಮಮಾಗಮತ್||

ವೈಶಂಪಾಯನನು ಹೇಳಿದನು: "ಆ ಮಹದಾಶ್ಚರ್ಯಕರವಾದ ಪುತ್ರರ ಪುನಃ ದರ್ಶನವನ್ನು ಕಂಡ ರಾಜರ್ಷಿ ಧೃತರಾಷ್ಟ್ರನು ಶೋಕವನ್ನು ಕಳೆದುಕೊಂಡು ಪುನಃ ಆಶ್ರಮಕ್ಕೆ ಆಗಮಿಸಿದನು.

15044003a ಇತರಸ್ತು ಜನಃ ಸರ್ವಸ್ತೇ ಚೈವ ಪರಮರ್ಷಯಃ|

15044003c ಪ್ರತಿಜಗ್ಮುರ್ಯಥಾಕಾಮಂ ಧೃತರಾಷ್ಟ್ರಾಭ್ಯನುಜ್ಞಯಾ||

ಇತರ ಜನರೂ, ಪರಮಋಷಿಗಳೆಲ್ಲರೂ, ಧೃತರಾಷ್ಟ್ರನ ಅಪ್ಪಣೆಯನ್ನು ಪಡೆದು ಇಷ್ಟಬಂದಲ್ಲಿಗೆ ಹೊರಟುಹೋದರು.

15044004a ಪಾಂಡವಾಸ್ತು ಮಹಾತ್ಮಾನೋ ಲಘುಭೂಯಿಷ್ಠಸೈನಿಕಾಃ|

15044004c ಅನುಜಗ್ಮುರ್ಮಹಾತ್ಮಾನಂ ಸದಾರಂ ತಂ ಮಹೀಪತಿಮ್||

ಮಹಾತ್ಮ ಪಾಂಡವರು ಪತ್ನಿಯರೊಂದಿಗೆ ಮತ್ತು ಉಳಿದಿದ್ದ ಅಲ್ಪ ಸೈನಿಕರೊಂದಿಗೆ ಮಹೀಪತಿ ಧೃತರಾಷ್ಟ್ರನನ್ನು ಅನುಸರಿಸಿ ಹೋದರು.

15044005a ತಮಾಶ್ರಮಗತಂ ಧೀಮಾನ್ಬ್ರಹ್ಮರ್ಷಿರ್ಲೋಕಪೂಜಿತಃ|

15044005c ಮುನಿಃ ಸತ್ಯವತೀಪುತ್ರೋ ಧೃತರಾಷ್ಟ್ರಮಭಾಷತ||

ಆಶ್ರಮಕ್ಕೆ ಬಂದ ಧೀಮಾನ್ ಬ್ರಹ್ಮರ್ಷಿ ಲೋಕಪೂಜಿತ ಮುನಿ ಸತ್ಯವತೀಪುತ್ರನು ಧೃತರಾಷ್ಟ್ರನಿಗೆ ಇಂತೆಂದನು:

15044006a ಧೃತರಾಷ್ಟ್ರ ಮಹಾಬಾಹೋ ಶೃಣು ಕೌರವನಂದನ|

15044006c ಶ್ರುತಂ ತೇ ಜ್ಞಾನವೃದ್ಧಾನಾಮೃಷೀಣಾಂ ಪುಣ್ಯಕರ್ಮಣಾಮ್||

"ಮಹಾಬಾಹೋ! ಕೌರವನಂದನ! ಧೃತರಾಷ್ಟ್ರ! ಕೇಳು. ಪುಣ್ಯಕರ್ಮಿಗಳೂ ಜ್ಞಾನವೃದ್ಧರೂ ಆದ ಋಷಿಗಳಿಂದ ನೀನು ಕೇಳಿರುವೆ.

15044007a ಋದ್ಧಾಭಿಜನವೃದ್ಧಾನಾಂ ವೇದವೇದಾಂಗವೇದಿನಾಮ್|

15044007c ಧರ್ಮಜ್ಞಾನಾಂ ಪುರಾಣಾನಾಂ ವದತಾಂ ವಿವಿಧಾಃ ಕಥಾಃ||

ಶ್ರದ್ಧಾವಂತ ಕುಲವೃದ್ಧರಿಂದಲೂ ವೇದ-ವೇದಾಂಗಗಳನ್ನು ತಿಳಿದವರಿಂದಲೂ, ವಿವಿಧ ಕಥೆಗಳನ್ನು ಹೇಳುವ ಧರ್ಮಜ್ಞರಿಂದಲೂ ಅನೇಕ ವಿಷಯಗಳನ್ನು ತಿಳಿದುಕೊಂಡಿರುವೆ.

15044008a ಮಾ ಸ್ಮ ಶೋಕೇ ಮನಃ ಕಾರ್ಷೀರ್ದಿಷ್ಟೇನ ವ್ಯಥತೇ ಬುಧಃ|

15044008c ಶ್ರುತಂ ದೇವರಹಸ್ಯಂ ತೇ ನಾರದಾದ್ದೇವದರ್ಶನಾತ್||

ಇನ್ನಾದರೂ ನೀನು ಮನಸ್ಸನ್ನು ಶೋಕದಲ್ಲಿರಿಸಿಕೊಳ್ಳಬೇಡ. ದೈವಿಕವಾದ ಆಗುಹೋಗುಗಳ ವಿಷಯಕ್ಕಾಗಿ ವಿದ್ವಾಂಸನು ದುಃಖಿಸುವುದಿಲ್ಲ. ದೇವದರ್ಶನ ನಾರದನಿಂದ ನೀನು ದೇವರಹಸ್ಯವನ್ನು ಕೇಳಿರುವೆ.

15044009a ಗತಾಸ್ತೇ ಕ್ಷತ್ರಧರ್ಮೇಣ ಶಸ್ತ್ರಪೂತಾಂ ಗತಿಂ ಶುಭಾಮ್|

15044009c ಯಥಾ ದೃಷ್ಟಾಸ್ತ್ವಯಾ ಪುತ್ರಾ ಯಥಾಕಾಮವಿಹಾರಿಣಃ||

ಇವರೆಲ್ಲರೂ ಕ್ಷತ್ರಧರ್ಮದಿಂದ ಶಸ್ತ್ರಪೂತರಾಗಿ ಶುಭಗತಿಗಳನ್ನು ಹೊಂದಿರುತ್ತಾರೆ. ನೀನು ನೋಡಿದಂತೆ ನಿನ್ನ ಪುತ್ರರು ಸ್ವರ್ಗದಲ್ಲಿ ಸ್ವೇಚ್ಛಾವಿಹಾರಿಗಳಾಗಿದ್ದಾರೆ.

15044010a ಯುಧಿಷ್ಠಿರಸ್ತ್ವಯಂ ಧೀಮಾನ್ಭವಂತಮನುರುಧ್ಯತೇ|

15044010c ಸಹಿತೋ ಭ್ರಾತೃಭಿಃ ಸರ್ವೈಃ ಸದಾರಃ ಸಸುಹೃಜ್ಜನಃ||

ಈ ಧೀಮಾನ್ ಯುಧಿಷ್ಠಿರನಾದರೋ ಎಲ್ಲ ಸಹೋದರೂ, ಪತ್ನಿಯರೂ ಮತ್ತು ಸುಹೃದಯರೊಂದಿಗೆ ನಿನ್ನನ್ನೇ ಸೇವಿಸುತ್ತಿದ್ದಾನೆ.

15044011a ವಿಸರ್ಜಯೈನಂ ಯಾತ್ವೇಷ ಸ್ವರಾಜ್ಯಮನುಶಾಸತಾಮ್|

15044011c ಮಾಸಃ ಸಮಧಿಕೋ ಹ್ಯೇಷಾಮತೀತೋ ವಸತಾಂ ವನೇ||

ಅವನು ಈ ವನದಲ್ಲಿ ವಾಸಿಸುತ್ತಾ ಒಂದು ತಿಂಗಳಿಗೂ ಹೆಚ್ಚಾಗಿಹೋಯಿತು. ಸ್ವರಾಜ್ಯವನ್ನು ಆಳಲು ಅವನನ್ನು ಕಳುಹಿಸಿಕೊಡು.

15044012a ಏತದ್ಧಿ ನಿತ್ಯಂ ಯತ್ನೇನ ಪದಂ ರಕ್ಷ್ಯಂ ಪರಂತಪ|

15044012c ಬಹುಪ್ರತ್ಯರ್ಥಿಕಂ ಹ್ಯೇತದ್ರಾಜ್ಯಂ ನಾಮ ನರಾಧಿಪ||

ಪರಂತಪ! ನರಾಧಿಪ! ರಾಜ್ಯವು ಯಾವಾಗಲೂ ಬಹುಶತ್ರುಗಳಿಂದ ಕೂಡಿರುವುದು, ಆದುದರಿಂದ ಅದನ್ನು ಯಾವಾಗಲೂ ಪ್ರಯತ್ನಪೂರ್ವಕವಾಗಿ ರಕ್ಷಿಸಬೇಕು!"

15044013a ಇತ್ಯುಕ್ತಃ ಕೌರವೋ ರಾಜಾ ವ್ಯಾಸೇನಾಮಿತಬುದ್ಧಿನಾ|

15044013c ಯುಧಿಷ್ಠಿರಮಥಾಹೂಯ ವಾಗ್ಮೀ ವಚನಮಬ್ರವೀತ್||

ಅಮಿತಬುದ್ಧಿ ವ್ಯಾಸನು ಹೀಗೆ ಹೇಳಲು ರಾಜಾ ವಾಗ್ಮೀ ಕೌರವನು ಯುಧಿಷ್ಠಿರನನ್ನು ಕರೆಯಿಸಿ, ಈ ಮಾತುಗಳನ್ನಾಡಿದನು.

15044014a ಅಜಾತಶತ್ರೋ ಭದ್ರಂ ತೇ ಶೃಣು ಮೇ ಭ್ರಾತೃಭಿಃ ಸಹ|

15044014c ತ್ವತ್ಪ್ರಸಾದಾನ್ಮಹೀಪಾಲ ಶೋಕೋ ನಾಸ್ಮಾನ್ಪ್ರಬಾಧತೇ||

"ಅಜಾತಶತ್ರೋ! ನಿನಗೆ ಮಂಗಳವಾಗಲಿ! ಸಹೋದರರೊಂದಿಗೆ ನನ್ನ ಈ ಮಾತನ್ನು ಕೇಳು. ಮಹೀಪಾಲ! ನಿನ್ನ ಅನುಗ್ರಹದಿಂದ ಈಗ ಶೋಕವು ನಮ್ಮನ್ನು ಬಾಧಿಸುತ್ತಿಲ್ಲ.

15044015a ರಮೇ ಚಾಹಂ ತ್ವಯಾ ಪುತ್ರ ಪುರೇವ ಗಜಸಾಹ್ವಯೇ|

15044015c ನಾಥೇನಾನುಗತೋ ವಿದ್ವನ್ಪ್ರಿಯೇಷು ಪರಿವರ್ತಿನಾ||

ಪುತ್ರ! ಹಿಂದೆ ನಾವು ಹಸ್ತಿನಾಪುರದಲ್ಲಿ ನಿನ್ನೊಡನೆ ಹೇಗೆ ರಮಿಸುತ್ತಿದ್ದೆವೋ ಹಾಗೆಯೇ ಇಲ್ಲಿಯೂ ಕೂಡ ಸಂತೋಷದಿಂದ ಇದ್ದೇವೆ. ನನ್ನೊಡನೆ ಪ್ರೀತಿಯಿಂದ ಇದ್ದುಕೊಂಡು ನನ್ನ ರಕ್ಷಕನಾಗಿದ್ದೀಯೆ.

15044016a ಪ್ರಾಪ್ತಂ ಪುತ್ರಫಲಂ ತ್ವತ್ತಃ ಪ್ರೀತಿರ್ಮೇ ವಿಪುಲಾ ತ್ವಯಿ|

15044016c ನ ಮೇ ಮನ್ಯುರ್ಮಹಾಬಾಹೋ ಗಮ್ಯತಾಂ ಪುತ್ರ ಮಾ ಚಿರಮ್||

ಪುತ್ರರಿಂದ ಪಡೆಯಬೇಕಾದ ಫಲವನ್ನು ನಾನು ಸಂಪೂರ್ಣವಾಗಿ ನಿನ್ನಿಂದ ಪಡೆದಿರುತ್ತೇನೆ. ಈ ವಿಷಯದಲ್ಲಿ ನನಗೆ ಅತ್ಯಂತ ಪ್ರೀತಿಯುಂಟಾಗಿದೆ. ಮಹಾಬಾಹೋ! ನಿನ್ನಲ್ಲಿ ನನಗೆ ಸ್ವಲ್ಪವೂ ಕೋಪವಿಲ್ಲ. ಪುತ್ರ! ಆದುದರಿಂದ ನೀನು ತಡಮಾಡದೇ ಹಸ್ತಿನಾಪುರಕ್ಕೆ ಪ್ರಯಾಣಮಾಡು.

15044017a ಭವಂತಂ ಚೇಹ ಸಂಪ್ರೇಕ್ಷ್ಯ ತಪೋ ಮೇ ಪರಿಹೀಯತೇ|

15044017c ತಪೋಯುಕ್ತಂ ಶರೀರಂ ಚ ತ್ವಾಂ ದೃಷ್ಟ್ವಾ ಧಾರಿತಂ ಪುನಃ||

ನಿನ್ನನ್ನು ನೋಡಿಕೊಂಡೇ ಇದ್ದರೆ ನನ್ನ ತಪಸ್ಸು ಹಾಳಾಗಿಬಿಡುತ್ತದೆ. ತಪೋಯುಕ್ತವಾದ ಈ ಶರೀರವು ನಿನ್ನನ್ನು ನೋಡಿ ಪುನಃ ನನ್ನ ಗಮನವನ್ನು ತನ್ನತ್ತ ಸೆಳೆದಿದೆ.

15044018a ಮಾತರೌ ತೇ ತಥೈವೇಮೇ ಶೀರ್ಣಪರ್ಣಕೃತಾಶನೇ|

15044018c ಮಮ ತುಲ್ಯವ್ರತೇ ಪುತ್ರ ನಚಿರಂ ವರ್ತಯಿಷ್ಯತಃ||

ನಿನ್ನ ತಾಯಿಯರಾದ ಗಾಂಧಾರಿ-ಕುಂತಿಯರೂ ಕೂಡ ನನ್ನಂತೆಯೇ ವ್ರತಾನುಷ್ಠಾನಗಳಲ್ಲಿ ತೊಡಗಿ ಒಣಗಿದ ತರಗೆಲೆಗಳನ್ನು ತಿನ್ನುತ್ತಾ ಜೀವನ್ನು ಧಾರಣೆಮಾಡಿಕೊಂಡಿದ್ದರು. ಅವರು ಇನ್ನು ಬಹುಕಾಲ ಬದುಕಿರಲಾರರು.

15044019a ದುರ್ಯೋಧನಪ್ರಭೃತಯೋ ದೃಷ್ಟಾ ಲೋಕಾಂತರಂ ಗತಾಃ|

15044019c ವ್ಯಾಸಸ್ಯ ತಪಸೋ ವೀರ್ಯಾದ್ಭವತಶ್ಚ ಸಮಾಗಮಾತ್||

ನಿನ್ನ ಸಮಾಗಮದಿಂದ ಮತ್ತು ವ್ಯಾಸನ ತಪೋವೀರ್ಯದಿಂದ ಬೇರೆ ಲೋಕಗಳಿಗೆ ಹೋಗಿರುವ ದುರ್ಯೋಧನಾದಿಗಳನ್ನು ನೋಡಿಯಾಯಿತು.

15044020a ಪ್ರಯೋಜನಂ ಚಿರಂ ವೃತ್ತಂ ಜೀವಿತಸ್ಯ ಚ ಮೇಽನಘ|

15044020c ಉಗ್ರಂ ತಪಃ ಸಮಾಸ್ಥಾಸ್ಯೇ ತ್ವಮನುಜ್ಞಾತುಮರ್ಹಸಿ||

ಅನಘ! ಇದರಿಂದ ನನ್ನ ಜೀವನವು ಸಾರ್ಥಕವಾಯಿತು. ಈಗ ನಾನು ಉಗ್ರ ತಪಸ್ಸಿನಲ್ಲಿ ತೊಡಗುತ್ತೇನೆ. ಇದಕ್ಕೆ ನೀನು ಅನುಮತಿಯನ್ನು ನೀಡಬೇಕು!

15044021a ತ್ವಯ್ಯದ್ಯ ಪಿಂಡಃ ಕೀರ್ತಿಶ್ಚ ಕುಲಂ ಚೇದಂ ಪ್ರತಿಷ್ಠಿತಮ್|

15044021c ಶ್ವೋ ವಾದ್ಯ ವಾ ಮಹಾಬಾಹೋ ಗಮ್ಯತಾಂ ಪುತ್ರ ಮಾ ಚಿರಮ್||

ಮಹಾಬಾಹೋ! ಇಂದು ಪಿತೃಗಳಿಗೆ ಪಿಂಡಪ್ರದಾನವೂ ಕುಲದ ಕೀರ್ತಿಯೂ ನಿನ್ನಲ್ಲಿಯೇ ನೆಲೆಸಿವೆ. ಇಂದು ಅಥವಾ ನಾಳೆ ನೀನು ಹಸ್ತಿನಾಪುರಕ್ಕೆ ಪ್ರಯಾಣಬೆಳೆಸು. ತಡಮಾಡಬೇಡ.

15044022a ರಾಜನೀತಿಃ ಸುಬಹುಶಃ ಶ್ರುತಾ ತೇ ಭರತರ್ಷಭ|

15044022c ಸಂದೇಷ್ಟವ್ಯಂ ನ ಪಶ್ಯಾಮಿ ಕೃತಮೇತಾವತಾ ವಿಭೋ||

ಭರತರ್ಷಭ! ವಿಭೋ! ನೀನು ಅನೇಕ ಪ್ರಕಾರವಾದ ರಾಜನೀತಿಗಳನ್ನು ಕೇಳಿ ತಿಳಿದುಕೊಂಡಿರುವೆ. ನಿನಗೆ ಉಪದೇಶಮಾಡಲು ನನಗೇನೂ ಕಾಣುತ್ತಿಲ್ಲ. ನೀನು ನನಗೆ ಬಹಳ ಉಪಕಾರವನ್ನೆಸಗಿರುವೆ!"

15044023a ಇತ್ಯುಕ್ತವಚನಂ ತಾತ ನೃಪೋ ರಾಜಾನಮಬ್ರವೀತ್|

15044023c ನ ಮಾಮರ್ಹಸಿ ಧರ್ಮಜ್ಞ ಪರಿತ್ಯಕ್ತುಮನಾಗಸಮ್||

ಅಯ್ಯಾ! ಹೀಗೆ ಹೇಳಿದ ರಾಜನಿಗೆ ನೃಪ ಯುಧಿಷ್ಠಿರನು ಹೇಳಿದನು: "ಧರ್ಮಜ್ಞ! ನಿರಪರಾಧಿಯಾದ ನನ್ನನ್ನು ಪರಿತ್ಯಜಿಸುವುದು ಸರಿಯಲ್ಲ!

15044024a ಕಾಮಂ ಗಚ್ಚಂತು ಮೇ ಸರ್ವೇ ಭ್ರಾತರೋಽನುಚರಾಸ್ತಥಾ|

15044024c ಭವಂತಮಹಮನ್ವಿಷ್ಯೇ ಮಾತರೌ ಚ ಯತವ್ರತೇ||

ಬೇಕಾದರೆ ನನ್ನ ಎಲ್ಲ ಸಹೋದರರೂ ಅನುಚರರೊಂದಿಗೆ ಹಸ್ತಿನಾಪುರಕ್ಕೆ ಹೊರಟುಹೋಗಲಿ. ನಾನು ಮಾತ್ರ ವ್ರತನಿಷ್ಠನಾಗಿದ್ದು ನಿನ್ನ ಮತ್ತು ತಾಯಂದಿರ ಸೇವೆಯನ್ನು ಮಾಡಿಕೊಂಡಿರುತ್ತೇನೆ."

15044025a ತಮುವಾಚಾಥ ಗಾಂಧಾರೀ ಮೈವಂ ಪುತ್ರ ಶೃಣುಷ್ವ ಮೇ|

15044025c ತ್ವಯ್ಯಧೀನಂ ಕುರುಕುಲಂ ಪಿಂಡಶ್ಚ ಶ್ವಶುರಸ್ಯ ಮೇ||

ಗಾಂಧಾರಿಯು ಅವನಿಗೆ ಹೇಳಿದಳು: "ಪುತ್ರ! ನೀನು ಹೀಗೆ ಹೇಳಬಾರದು. ನನ್ನ ಮಾತನ್ನು ಕೇಳು. ಕುರುಕುಲ ಮತ್ತು ನನ್ನ ಮಾವನ ಪಿಂಡಪ್ರದಾನ ಇವೆಲ್ಲವುಗಳ ಜವಾಬ್ಧಾರಿಯೂ ಈಗ ನಿನ್ನದಾಗಿದೆ.

15044026a ಗಮ್ಯತಾಂ ಪುತ್ರ ಪರ್ಯಾಪ್ತಮೇತಾವತ್ಪೂಜಿತಾ ವಯಮ್|

15044026c ರಾಜಾ ಯದಾಹ ತತ್ಕಾರ್ಯಂ ತ್ವಯಾ ಪುತ್ರ ಪಿತುರ್ವಚಃ||

ಪುತ್ರ! ಇಲ್ಲಿಯವರೆಗೆ ನಮ್ಮನ್ನು ಪೂಜಿಸಿದ್ದು ಪರ್ಯಾಪ್ತವಾಯಿತು. ಈಗ ಹೊರಡು. ರಾಜನು ಹೇಳಿದ ಕಾರ್ಯವನ್ನು ಮಾಡು. ಪುತ್ರ! ತಂದೆಯ ವಚನವನ್ನು ನೀನು ಪಾಲಿಸಬೇಕು!"

15044027a ಇತ್ಯುಕ್ತಃ ಸ ತು ಗಾಂಧಾರ್ಯಾ ಕುಂತೀಮಿದಮುವಾಚ ಹ|

15044027c ಸ್ನೇಹಬಾಷ್ಪಾಕುಲೇ ನೇತ್ರೇ ಪ್ರಮೃಜ್ಯ ರುದತೀಂ ವಚಃ||

ಗಾಂಧಾರಿಯು ಹೀಗೆ ಹೇಳಲು ಸ್ನೇಹಭಾವದಿಂದ ಕಣ್ಣೀರನ್ನು ಸುರಿಸುತ್ತಾ ರೋದಿಸುವ ಧ್ವನಿಯಲ್ಲಿ ಯುಧಿಷ್ಠಿರನು ಕುಂತಿಗೆ ಹೇಳಿದನು:

15044028a ವಿಸರ್ಜಯತಿ ಮಾಂ ರಾಜಾ ಗಾಂಧಾರೀ ಚ ಯಶಸ್ವಿನೀ|

15044028c ಭವತ್ಯಾಂ ಬದ್ಧಚಿತ್ತಸ್ತು ಕಥಂ ಯಾಸ್ಯಾಮಿ ದುಃಖಿತಃ||

"ರಾಜನೂ ಯಶಸ್ವಿನೀ ಗಾಂಧಾರಿಯೂ ನನ್ನನ್ನು ದೂರಮಾಡಿದ್ದಾರೆ. ನನ್ನ ಚಿತ್ತವು ನಿನ್ನಲ್ಲಿಯೇ ಬದ್ಧವಾಗಿದೆ. ದುಃಖಿತನಾಗಿ ನಾನು ಹೇಗೆ ಹೋಗಲಿ?

15044029a ನ ಚೋತ್ಸಹೇ ತಪೋವಿಘ್ನಂ ಕರ್ತುಂ ತೇ ಧರ್ಮಚಾರಿಣಿ|

15044029c ತಪಸೋ ಹಿ ಪರಂ ನಾಸ್ತಿ ತಪಸಾ ವಿಂದತೇ ಮಹತ್||

ಧರ್ಮಚಾರಿಣೀ! ನಿನ್ನ ತಪಸ್ಸಿನಲ್ಲಿ ವಿಘ್ನವನ್ನು ತರಲು ಬಯಸುವುದಿಲ್ಲ. ಏಕೆಂದರೆ ತಪಸ್ಸೇ ಹೆಚ್ಚಿನದು. ತಪಸ್ಸಿಗಿಂತ ದೊಡ್ಡದು ಬೇರೆ ಯಾವುದೂ ಇಲ್ಲ.

15044030a ಮಮಾಪಿ ನ ತಥಾ ರಾಜ್ಞಿ ರಾಜ್ಯೇ ಬುದ್ಧಿರ್ಯಥಾ ಪುರಾ|

15044030c ತಪಸ್ಯೇವಾನುರಕ್ತಂ ಮೇ ಮನಃ ಸರ್ವಾತ್ಮನಾ ತಥಾ||

ರಾಣಿ! ಹಿಂದಿನಂತೆ ನನಗೆ ರಾಜ್ಯದಲ್ಲಿಯೂ ಮನಸ್ಸಿಲ್ಲವಾಗಿದೆ. ನನ್ನ ಮನಸ್ಸು ಸರ್ವಥಾ ತಪಸ್ಸಿನಲ್ಲಿಯೇ ಅನುರಕ್ತವಾಗಿದೆ.

15044031a ಶೂನ್ಯೇಯಂ ಚ ಮಹೀ ಸರ್ವಾ ನ ಮೇ ಪ್ರೀತಿಕರೀ ಶುಭೇ|

15044031c ಬಾಂಧವಾ ನಃ ಪರಿಕ್ಷೀಣಾ ಬಲಂ ನೋ ನ ಯಥಾ ಪುರಾ||

ಶುಭೇ! ಈ ಭೂಮಿಯಲ್ಲವೂ ನನಗೆ ಶೂನ್ಯವಾಗಿಯೇ ತೋರುತ್ತಿದೆ. ನನಗೆ ಯಾವುದೇ ರೀತಿಯ ಸಂತೋಷವನ್ನೂ ನೀಡುತ್ತಿಲ್ಲ. ಬಾಂಧವರೆಲ್ಲರೂ ನಾಶಹೊಂದಿದರು. ಹಿಂದಿನಂತೆ ನಾವು ಬಲಶಾಲಿಗಳೂ ಆಗಿ ಉಳಿದಿಲ್ಲ.

15044032a ಪಾಂಚಾಲಾಃ ಸುಭೃಶಂ ಕ್ಷೀಣಾಃ ಕನ್ಯಾಮಾತ್ರಾವಶೇಷಿತಾಃ|

15044032c ನ ತೇಷಾಂ ಕುಲಕರ್ತಾರಂ ಕಂ ಚಿತ್ಪಶ್ಯಾಮ್ಯಹಂ ಶುಭೇ||

ಶುಭೇ! ಪಾಂಚಾಲರು ಸಂಪೂರ್ಣವಾಗಿ ನಾಶಹೊಂದಿದ್ದಾರೆ. ಅವರ ಕನ್ಯೆಯರು ಮಾತ್ರ ಉಳಿದುಕೊಂಡಿದ್ದಾರೆ. ಅವರ ಕುಲವನ್ನು ಉದ್ಧರಿಸುವ ಒಬ್ಬನನ್ನೂ ನಾನು ಕಾಣುತ್ತಿಲ್ಲ.

15044033a ಸರ್ವೇ ಹಿ ಭಸ್ಮಸಾನ್ನೀತಾ ದ್ರೋಣೇನೈಕೇನ ಸಂಯುಗೇ|

15044033c ಅವಶೇಷಾಸ್ತು ನಿಹತಾ ದ್ರೋಣಪುತ್ರೇಣ ವೈ ನಿಶಿ||

ಅವರೆಲ್ಲರೂ ಯುದ್ಧದಲ್ಲಿ ದ್ರೋಣನೊಬ್ಬನಿಂದಲೇ ಭಸ್ಮೀಭೂತರಾದರು. ಅಳಿದುಳಿದವರನ್ನು ದ್ರೋಣಪುತ್ರನು ರಾತ್ರಿಯಲ್ಲಿ ಸಂಹರಿಸಿದನು.

15044034a ಚೇದಯಶ್ಚೈವ ಮತ್ಸ್ಯಾಶ್ಚ ದೃಷ್ಟಪೂರ್ವಾಸ್ತಥೈವ ನಃ|

15044034c ಕೇವಲಂ ವೃಷ್ಣಿಚಕ್ರಂ ತು ವಾಸುದೇವಪರಿಗ್ರಹಾತ್|

15044034e ಯಂ ದೃಷ್ಟ್ವಾ ಸ್ಥಾತುಮಿಚ್ಚಾಮಿ ಧರ್ಮಾರ್ಥಂ ನಾನ್ಯಹೇತುಕಮ್||

ನಮ್ಮ ಸಂಬಂಧಿಗಳಾದ ಚೇದಿದೇಶದವರೂ ಮತ್ಸ್ಯದೇಶದವರೂ ಹಿಂದಿನಂತೆ ಈಗ ಇಲ್ಲ. ವಾಸುದೇವನ ಪರಿಗ್ರಹದಿಂದ ಕೇವಲ ವೃಷ್ಣಿವಂಶವು ಸುರಕ್ಷಿತವಾಗಿದೆ. ಅವರನ್ನು ನೋಡಿ ಧರ್ಮ-ಅರ್ಥಗಳನ್ನು ಸ್ಥಾಪಿಸಲು ಬಯಸುತ್ತೇನೆ. ಬೇರೆ ಯಾವ ಕಾರಣದಿಂದಲೂ ಅಲ್ಲ.

15044035a ಶಿವೇನ ಪಶ್ಯ ನಃ ಸರ್ವಾನ್ದುರ್ಲಭಂ ದರ್ಶನಂ ತವ|

15044035c ಭವಿಷ್ಯತ್ಯಂಬ ರಾಜಾ ಹಿ ತೀವ್ರಮಾರಪ್ಸ್ಯತೇ ತಪಃ||

ಅಮ್ಮ! ನೀನು ನಮ್ಮನ್ನು ಮಂಗಳದೃಷ್ಟಿಯಿಂದ ಕಾಣು. ಮುಂದೆ ನಿನ್ನ ದರ್ಶನವು ದುರ್ಲಭವೇ ಸರಿ. ಏಕೆಂದರೆ ರಾಜನು ಈಗ ತೀವ್ರ ತಪಸ್ಸನ್ನು ಆರಂಭಿಸುತ್ತಿದ್ದಾನೆ."

15044036a ಏತಚ್ಛೃತ್ವಾ ಮಹಾಬಾಹುಃ ಸಹದೇವೋ ಯುಧಾಂ ಪತಿಃ|

15044036c ಯುಧಿಷ್ಠಿರಮುವಾಚೇದಂ ಬಾಷ್ಪವ್ಯಾಕುಲಲೋಚನಃ||

ಇದನ್ನು ಕೇಳಿದ ಯೋಧರ ನಾಯಕ ಮಹಾಬಾಹು ಸಹದೇವನು ವ್ಯಾಕುಲದಿಂದ ಕಣ್ಣೀರು ಸುರಿಸುತ್ತಾ ಯುಧಿಷ್ಠಿರನಿಗೆ ಈ ಮಾತನ್ನಾಡಿದನು:

15044037a ನೋತ್ಸಹೇಽಹಂ ಪರಿತ್ಯಕ್ತುಂ ಮಾತರಂ ಪಾರ್ಥಿವರ್ಷಭ|

15044037c ಪ್ರತಿಯಾತು ಭವಾನ್ ಕ್ಷಿಪ್ರಂ ತಪಸ್ತಪ್ಸ್ಯಾಮ್ಯಹಂ ವನೇ||

"ಪಾರ್ಥಿವರ್ಷಭ! ತಾಯಿಯನ್ನು ಬಿಟ್ಟುಹೋಗಲು ನನಗೆ ಉತ್ಸಾಹವಿಲ್ಲ. ನೀನು ಬೇಗನೆ ಹೊರಟುಹೋಗು. ನಾನು ವನದಲ್ಲಿ ತಪಸ್ಸನ್ನು ತಪಿಸುತ್ತೇನೆ.

15044038a ಇಹೈವ ಶೋಷಯಿಷ್ಯಾಮಿ ತಪಸಾಹಂ ಕಲೇವರಮ್|

15044038c ಪಾದಶುಶ್ರೂಷಣೇ ಯುಕ್ತೋ ರಾಜ್ಞೋ ಮಾತ್ರೋಸ್ತಥಾನಯೋಃ||

ನಾನು ಇಲ್ಲಿಯೇ ತಪಸ್ಸನ್ನಾಚರಿಸಿಕೊಂಡು ರಾಜ ಮತ್ತು ತಾಯಂದಿರಿಬ್ಬರ ಪಾದಶುಶ್ರೂಷಣೆಯಲ್ಲಿ ನಿರತನಾಗಿ ನನ್ನ ಶರೀರವನ್ನು ಶೋಷಿಸುತ್ತೇನೆ!"

15044039a ತಮುವಾಚ ತತಃ ಕುಂತೀ ಪರಿಷ್ವಜ್ಯ ಮಹಾಭುಜಮ್|

15044039c ಗಮ್ಯತಾಂ ಪುತ್ರ ಮೈವ ತ್ವಂ ವೋಚಃ ಕುರು ವಚೋ ಮಮ||

ಆಗ ಕುಂತಿಯು ಆ ಮಹಾಭುಜನನ್ನು ಆಲಂಗಿಸಿ ಹೇಳಿದಳು: "ಪುತ್ರ! ನೀನು ಹೋಗಬೇಕು. ಹಾಗೆ ಹೇಳಬೇಡ! ನನ್ನ ಮಾತಿನಂತೆ ಮಾಡು!

15044040a ಆಗಮಾ ವಃ ಶಿವಾಃ ಸಂತು ಸ್ವಸ್ಥಾ ಭವತ ಪುತ್ರಕಾಃ|

15044040c ಉಪರೋಧೋ ಭವೇದೇವಮಸ್ಮಾಕಂ ತಪಸಃ ಕೃತೇ||

ಪುತ್ರರೇ! ನಿಮ್ಮ ಪ್ರಯಾಣವು ಮಂಗಳಮಯವಾಗಲಿ. ನೀವು ಸ್ವಸ್ಥರಾಗಿರಿ! ನೀವೆಲ್ಲರೂ ಇಲ್ಲಿ ಇದ್ದರೆ ನಮ್ಮ ತಪಸ್ಸಿಗೆ ಭಂಗವಾಗುತ್ತದೆ.

15044041a ತ್ವತ್ಸ್ನೇಹಪಾಶಬದ್ಧಾ ಚ ಹೀಯೇಯಂ ತಪಸಃ ಪರಾತ್|

15044041c ತಸ್ಮಾತ್ಪುತ್ರಕ ಗಚ್ಚ ತ್ವಂ ಶಿಷ್ಟಮಲ್ಪಂ ಹಿ ನಃ ಪ್ರಭೋ||

ನಿನ್ನ ಸ್ನೇಹಪಾಶದ ಬಂಧನಕ್ಕೆ ಸಿಲುಕಿ ನಾನು ಶ್ರೇಷ್ಠ ತಪಸ್ಸಿನಿಂದ ವಂಚಿತಳಾದೇನು. ಆದುದರಿಂದ ಪುತ್ರಕ! ಪ್ರಭೋ! ನೀನೂ ಹೊರಟುಹೋಗು. ವ್ಯರ್ಥ ಕಾಲಕಳೆಯಬೇಡ!"

15044042a ಏವಂ ಸಂಸ್ತಂಭಿತಂ ವಾಕ್ಯೈಃ ಕುಂತ್ಯಾ ಬಹುವಿಧೈರ್ಮನಃ|

15044042c ಸಹದೇವಸ್ಯ ರಾಜೇಂದ್ರ ರಾಜ್ಞಶ್ಚೈವ ವಿಶೇಷತಃ||

ರಾಜೇಂದ್ರ! ಹೀಗೆ ಕುಂತಿಯು ಅನೇಕ ಪ್ರಕಾರವಾಗಿ ಸಮಾಧಾನವನ್ನು ಹೇಳಿ ಸಹದೇವನ, ಅದರಲ್ಲಿಯೂ ವಿಶೇಷವಾಗಿ ಯುಧಿಷ್ಠಿರನ ಮನಸ್ಸನ್ನು, ಹಸ್ತಿನಾವತಿಗೆ ತೆರಳುವಂತೆ ಮಾಡಿದಳು.

15044043a ತೇ ಮಾತ್ರಾ ಸಮನುಜ್ಞಾತಾ ರಾಜ್ಞಾ ಚ ಕುರುಪುಂಗವಾಃ|

15044043c ಅಭಿವಾದ್ಯ ಕುರುಶ್ರೇಷ್ಠಮಾಮಂತ್ರಯಿತುಮಾರಭನ್||

ತಾಯಿಯಿಂದ ಅನುಜ್ಞಾತರಾದ ಕುರುಪುಂಗವರು ರಾಜಾ ಕುರುಶ್ರೇಷ್ಠನನ್ನು ಅಭಿವಂದಿಸಿ ಅವನಿಂದ ಬೀಳ್ಕೊಂಡರು.

15044044a ರಾಜನ್ಪ್ರತಿಗಮಿಷ್ಯಾಮಃ ಶಿವೇನ ಪ್ರತಿನಂದಿತಾಃ|

15044044c ಅನುಜ್ಞಾತಾಸ್ತ್ವಯಾ ರಾಜನ್ಗಮಿಷ್ಯಾಮೋ ವಿಕಲ್ಮಷಾಃ||

"ರಾಜನ್! ನಿನ್ನ ಶುಭ ಆಶೀರ್ವಾದಗಳಿಂದ ಆನಂದಿತರಾಗಿ ನಾವು ಹೋಗುತ್ತಿದ್ದೇವೆ. ರಾಜನ್! ನಿನ್ನ ಅಪ್ಪಣೆಯಾದರೆ ಬೇಸರವಿಲ್ಲದೇ ನಾವು ಹೋಗುತ್ತೇವೆ."

15044045a ಏವಮುಕ್ತಃ ಸ ರಾಜರ್ಷಿರ್ಧರ್ಮರಾಜ್ಞಾ ಮಹಾತ್ಮನಾ|

15044045c ಅನುಜಜ್ಞೇ ಜಯಾಶೀರ್ಭಿರಭಿನಂದ್ಯ ಯುಧಿಷ್ಠಿರಮ್||

ಮಹಾತ್ಮ ಧರ್ಮರಾಜನು ಹೀಗೆ ಹೇಳಲು ರಾಜರ್ಷಿ ಧೃತರಾಷ್ಟ್ರನು ಯುಧಿಷ್ಠಿರನಿಗೆ ಜಯ-ಆಶೀರ್ವಚನಗಳನ್ನಿತ್ತು ಹೊರಡಲು ಅನುಮತಿಯನ್ನಿತ್ತನು.

15044046a ಭೀಮಂ ಚ ಬಲಿನಾಂ ಶ್ರೇಷ್ಠಂ ಸಾಂತ್ವಯಾಮಾಸ ಪಾರ್ಥಿವಃ|

15044046c ಸ ಚಾಸ್ಯ ಸಮ್ಯಗ್ ಮೇಧಾವೀ ಪ್ರತ್ಯಪದ್ಯತ ವೀರ್ಯವಾನ್||

ಪಾರ್ಥಿವ ಧೃತರಾಷ್ಟ್ರನು ಬಲಿಗಳಲ್ಲಿ ಶ್ರೇಷ್ಠ ಭೀಮನನ್ನು ಸಂತವಿಸಿದನು. ಉತ್ತಮ ಮೇಧಾವಿಯೂ ವೀರ್ಯವಾನನೂ ಆದ ಭೀಮನೂ ಕೂಡ ಅವನ ಸಾಂತ್ವನವನ್ನು ಸ್ವೀಕರಿಸಿದನು.

15044047a ಅರ್ಜುನಂ ಚ ಸಮಾಶ್ಲಿಷ್ಯ ಯಮೌ ಚ ಪುರುಷರ್ಷಭೌ|

15044047c ಅನುಜಜ್ಞೇ ಸ ಕೌರವ್ಯಃ ಪರಿಷ್ವಜ್ಯಾಭಿನಂದ್ಯ ಚ||

ಕೌರವ್ಯ ಧೃತರಾಷ್ಟ್ರನು ಅರ್ಜುನ ಮತ್ತು ಪುರುಷರ್ಷಭ ಯಮಳರನ್ನೂ ಬಿಗಿದಪ್ಪಿ ಅಭಿನಂದಿಸಿ ಹೊರಡಲು ಅನುಮತಿಯನ್ನಿತ್ತನು.

15044048a ಗಾಂಧಾರ್ಯಾ ಚಾಭ್ಯನುಜ್ಞಾತಾಃ ಕೃತಪಾದಾಭಿವಂದನಾಃ|

15044048c ಜನನ್ಯಾ ಸಮುಪಾಘ್ರಾತಾಃ ಪರಿಷ್ವಕ್ತಾಶ್ಚ ತೇ ನೃಪಮ್|

ಗಾಂಧಾರಿಯ ಪಾದಗಳಿಗೆ ವಂದಿಸಿ ಅವರು ಅವಳ ಅನುಜ್ಞೆಯನ್ನೂ ಪಡೆದುಕೊಂಡರು. ಕುಂತಿಯು ನೃಪ ಯುಧಿಷ್ಠಿರನನ್ನು ಆಲಂಗಿಸಿ ಆಘ್ರಾಣಿಸಿದಳು.

15044048e ಚಕ್ರುಃ ಪ್ರದಕ್ಷಿಣಂ ಸರ್ವೇ ವತ್ಸಾ ಇವ ನಿವಾರಣೇ||

15044049a ಪುನಃ ಪುನರ್ನಿರೀಕ್ಷಂತಃ ಪ್ರಜಗ್ಮುಸ್ತೇ ಪ್ರದಕ್ಷಿಣಮ್|

ಹಾಲುಕುಡಿಯುವ ಕರುವನ್ನು ಹಿಂದಕ್ಕೆ ಸೆಳೆದಂತೆಲ್ಲಾ ಅದು ಪುನಃ ಪುನಃ ತಾಯಿಯ ಕಡೆ ನೋಡುವಂತೆ ಪಾಂಡವರೆಲ್ಲರೂ ಪುನಃ ಪುನಃ ಅವರನ್ನೇ ನೋಡುತ್ತಾ ಧೃತರಾಷ್ಟ್ರ, ಗಾಂಧಾರೀ ಮತ್ತು ಕುಂತಿಯರಿಗೆ ಪ್ರದಕ್ಷಿಣ ನಮಸ್ಕಾರಗಳನ್ನು ಮಾಡಿದರು.

15044049c ತಥೈವ ದ್ರೌಪದೀ ಸಾಧ್ವೀ ಸರ್ವಾಃ ಕೌರವಯೋಷಿತಃ||

15044050a ನ್ಯಾಯತಃ ಶ್ವಶುರೇ ವೃತ್ತಿಂ ಪ್ರಯುಜ್ಯ ಪ್ರಯಯುಸ್ತತಃ|

15044050c ಶ್ವಶ್ರೂಭ್ಯಾಂ ಸಮನುಜ್ಞಾತಾಃ ಪರಿಷ್ವಜ್ಯಾಭಿನಂದಿತಾಃ|

15044050e ಸಂದಿಷ್ಟಾಶ್ಚೇತಿಕರ್ತವ್ಯಂ ಪ್ರಯಯುರ್ಭರ್ತೃಭಿಃ ಸಹ||

ಹಾಗೆಯೇ ಸಾಧ್ವೀ ದ್ರೌಪದೀ ಮತ್ತು ಕೌರವ ನಾರಿಯರೆಲ್ಲರೂ ನ್ಯಾಯವತ್ತಾಗಿ ಮಾವನಿಗೆ ನಮಸ್ಕರಿಸಿದರು. ಆ ಅನಿಂದಿತೆಯರು ಅತ್ತೆಯರಿಬ್ಬರನ್ನೂ ಆಲಂಗಿಸಿ ಅಭಿನಂದಿಸಿ, ಮಾಡಬೇಕಾದ ಕರ್ತವ್ಯಗಳನ್ನು ಕೇಳಿ ತಿಳಿದುಕೊಂಡು ಅವರ ಅನುಮತಿಯನ್ನು ಪಡೆದು, ಗಂಡಂದಿರೊಡನೆ ಹಸ್ತಿನಾಪುರಕ್ಕೆ ಹೊರಟರು.

15044051a ತತಃ ಪ್ರಜಜ್ಞೇ ನಿನದಃ ಸೂತಾನಾಂ ಯುಜ್ಯತಾಮಿತಿ|

15044051c ಉಷ್ಟ್ರಾಣಾಂ ಕ್ರೋಶತಾಂ ಚೈವ ಹಯಾನಾಂ ಹೇಷತಾಮಪಿ||

ಆಗ ಕುದುರೆಗಳನ್ನು ರಥಗಳಿಗೆ ಕಟ್ಟಿ ಎನ್ನುವ ಸೂತರ ನಿನಾದವೂ, ಒಂಟೆಗಳ ಕೂಗೂ, ಕುದುರೆಗಳ ಹೇಷಾರವವೂ ಕೇಳಿಬಂದಿತು.

15044052a ತತೋ ಯುಧಿಷ್ಠಿರೋ ರಾಜಾ ಸದಾರಃ ಸಹಸೈನಿಕಃ|

15044052c ನಗರಂ ಹಾಸ್ತಿನಪುರಂ ಪುನರಾಯಾತ್ಸಬಾಂಧವಃ||

ಅನಂತರ ರಾಜಾ ಯುಧಿಷ್ಟಿರನು ಪತ್ನಿಯರೊಂದಿಗೆ, ಸೈನಿಕರೊಡನೆ ಮತ್ತು ಬಾಂಧವರನ್ನೊಡಗೂಡಿ ಪುನಃ ಹಸ್ತಿನಾಪುರ ನಗರಕ್ಕೆ ಆಗಮಿಸಿದನು."

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಪುತ್ರದರ್ಶನಪರ್ವಣಿ ಯುಧಿಷ್ಠಿರಪ್ರತ್ಯಾಗಮೇ ಚತುಶ್ಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಪುತ್ರದರ್ಶನಪರ್ವದಲ್ಲಿ ಯುಧಿಷ್ಠಿರಪ್ರತ್ಯಾಗಮ ಎನ್ನುವ ನಲ್ವತ್ನಾಲ್ಕನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಆಶ್ರಮವಾಸಿಕಪರ್ವಣಿ ಪುತ್ರದರ್ಶನಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಪುತ್ರದರ್ಶನಪರ್ವವು|

ಇದೂವರೆಗಿನ ಒಟ್ಟು ಮಹಾಪರ್ವಗಳು – ೧೪/೧೮, ಉಪಪರ್ವಗಳು-೯೧/೧೦೦, ಅಧ್ಯಾಯಗಳು-೧೯೭೫/೧೯೯೫, ಶ್ಲೋಕಗಳು-೭೩೧೨೦/೭೩೭೮೪

Related image

Comments are closed.