Ashramavasika Parva: Chapter 40

ಆಶ್ರಮವಾಸಿಕ ಪರ್ವ: ಪುತ್ರದರ್ಶನ ಪರ್ವ

೪೦

ದುರ್ಯೋಧನಾದಿಗಳ ದರ್ಶನ

ಯುದ್ಧದಲ್ಲಿ ಮಡಿದವರೆಲ್ಲರನ್ನೂ ವ್ಯಾಸನು ತೋರಿಸಿದುದು (೧-೨೧).

15040001 ವೈಶಂಪಾಯನ ಉವಾಚ|

15040001a ತತೋ ನಿಶಾಯಾಂ ಪ್ರಾಪ್ತಾಯಾಂ ಕೃತಸಾಯಾಹ್ನಿಕಕ್ರಿಯಾಃ|

15040001c ವ್ಯಾಸಮಭ್ಯಗಮನ್ಸರ್ವೇ ಯೇ ತತ್ರಾಸನ್ಸಮಾಗತಾಃ||

ವೈಶಂಪಾಯನನು ಹೇಳಿದನು: "ರಾತ್ರಿಯಾಗಲು ಅಲ್ಲಿ ಬಂದು ಸೇರಿದ್ದ ಎಲ್ಲರೂ ಆಹ್ನಿಕಕ್ರಿಯೆಗಳನ್ನು ಪೂರೈಸಿ ವ್ಯಾಸನ ಬಳಿ ಹೋದರು.

15040002a ಧೃತರಾಷ್ಟ್ರಸ್ತು ಧರ್ಮಾತ್ಮಾ ಪಾಂಡವೈಃ ಸಹಿತಸ್ತದಾ|

15040002c ಶುಚಿರೇಕಮನಾಃ ಸಾರ್ಧಮೃಷಿಭಿಸ್ತೈರುಪಾವಿಶತ್||

ಧರ್ಮಾತ್ಮಾ ಧೃತರಾಷ್ಟ್ರನಾದರೋ ಪಾಂಡವರೊಡನೆ ಶುದ್ಧ ಏಕಮನಸ್ಸಿನಿಂದ ಋಷಿಯ ಬಳಿ ಕುಳಿತುಕೊಂಡನು.

15040003a ಗಾಂಧಾರ್ಯಾ ಸಹ ನಾರ್ಯಸ್ತು ಸಹಿತಾಃ ಸಮುಪಾವಿಶನ್|

15040003c ಪೌರಜಾನಪದಶ್ಚಾಪಿ ಜನಃ ಸರ್ವೋ ಯಥಾವಯಃ||

ಗಾಂಧಾರಿಯೂ ಕೂಡ ಎಲ್ಲ ನಾರಿಯರೊಡನೆ ಕುಳಿತುಕೊಂಡಳು. ಪೌರಜನಪದ ಜನರೂ ಕೂಡ ಎಲ್ಲರೂ ವಯಸ್ಸಿಗೆ ತಕ್ಕಂತೆ ಕುಳಿತುಕೊಂಡರು.

15040004a ತತೋ ವ್ಯಾಸೋ ಮಹಾತೇಜಾಃ ಪುಣ್ಯಂ ಭಾಗೀರಥೀಜಲಮ್|

15040004c ಅವಗಾಹ್ಯಾಜುಹಾವಾಥ ಸರ್ವಾಽಲ್ಲೋಕಾನ್ಮಹಾಮುನಿಃ||

15040005a ಪಾಂಡವಾನಾಂ ಚ ಯೇ ಯೋಧಾಃ ಕೌರವಾಣಾಂ ಚ ಸರ್ವಶಃ|

15040005c ರಾಜಾನಶ್ಚ ಮಹಾಭಾಗಾ ನಾನಾದೇಶನಿವಾಸಿನಃ||

ಆಗ ಮಹಾತೇಜಸ್ವೀ ಮಹಾಮುನಿ ವ್ಯಾಸನು ಪುಣ್ಯ ಭಾಗೀರಥೀ ಜಲದಲ್ಲಿ ಮಿಂದು ಸರ್ವಲೋಕಗಳಿಂದ ಪಾಂಡವರ ಮತ್ತು ಕೌರವರ ಕಡೆಯ ಎಲ್ಲ ಯೋಧರನ್ನೂ, ನಾನಾದೇಶನಿವಾಸಿಗಳಾಗಿದ್ದ ಮಹಾಭಾಗ ರಾಜರನ್ನೂ ಆಹ್ವಾನಿಸಿದನು.

15040006a ತತಃ ಸುತುಮುಲಃ ಶಬ್ದೋ ಜಲಾಂತರ್ಜನಮೇಜಯ|

15040006c ಪ್ರಾದುರಾಸೀದ್ಯಥಾ ಪೂರ್ವಂ ಕುರುಪಾಂಡವಸೇನಯೋಃ||

ಜನಮೇಜಯ! ಆಗ ನೀರಿನ ಕೆಳಗಿನಿಂದ ಹಿಂದೆ ಕುರುಪಾಂಡವಸೇನೆಗಳಲ್ಲಿ ಹೇಗೋ ಹಾಗೆ ತುಮುಲ ಶಬ್ಧವು ಕೇಳಿಬಂದಿತು.

15040007a ತತಸ್ತೇ ಪಾರ್ಥಿವಾಃ ಸರ್ವೇ ಭೀಷ್ಮದ್ರೋಣಪುರೋಗಮಾಃ|

15040007c ಸಸೈನ್ಯಾಃ ಸಲಿಲಾತ್ತಸ್ಮಾತ್ಸಮುತ್ತಸ್ಥುಃ ಸಹಸ್ರಶಃ||

ಆಗ ನೀರಿನಿಂದ ಮೇಲಕ್ಕೆ ಭೀಷ್ಮ-ದ್ರೋಣರನ್ನು ಮುಂದಿಟ್ಟುಕೊಂಡು ಎಲ್ಲ ಪಾರ್ಥಿವರೂ, ಸೇನೆಗಳೊಂದಿಗೆ, ಸಹಸ್ರಾರು ಸಂಖ್ಯೆಗಳಲ್ಲಿ ಮೇಲೆದ್ದರು.

15040008a ವಿರಾಟದ್ರುಪದೌ ಚೋಭೌ ಸಪುತ್ರೌ ಸಹಸೈನಿಕೌ|

15040008c ದ್ರೌಪದೇಯಾಶ್ಚ ಸೌಭದ್ರೋ ರಾಕ್ಷಸಶ್ಚ ಘಟೋತ್ಕಚಃ||

15040009a ಕರ್ಣದುರ್ಯೋಧನೌ ಚೋಭೌ ಶಕುನಿಶ್ಚ ಮಹಾರಥಃ|

15040009c ದುಃಶಾಸನಾದಯಶ್ಚೈವ ಧಾರ್ತರಾಷ್ಟ್ರಾ ಮಹಾರಥಾಃ||

15040010a ಜಾರಾಸಂಧಿರ್ಭಗದತ್ತೋ ಜಲಸಂಧಶ್ಚ ಪಾರ್ಥಿವಃ|

15040010c ಭೂರಿಶ್ರವಾಃ ಶಲಃ ಶಲ್ಯೋ ವೃಷಸೇನಶ್ಚ ಸಾನುಜಃ||

15040011a ಲಕ್ಷ್ಮಣೋ ರಾಜಪುತ್ರಶ್ಚ ಧೃಷ್ಟದ್ಯುಮ್ನಸ್ಯ ಚಾತ್ಮಜಾಃ|

15040011c ಶಿಖಂಡಿಪುತ್ರಾಃ ಸರ್ವೇ ಚ ಧೃಷ್ಟಕೇತುಶ್ಚ ಸಾನುಜಃ||

15040012a ಅಚಲೋ ವೃಷಕಶ್ಚೈವ ರಾಕ್ಷಸಶ್ಚಾಪ್ಯಲಾಯುಧಃ|

15040012c ಬಾಹ್ಲೀಕಃ ಸೋಮದತ್ತಶ್ಚ ಚೇಕಿತಾನಶ್ಚ ಪಾರ್ಥಿವಃ||

15040013a ಏತೇ ಚಾನ್ಯೇ ಚ ಬಹವೋ ಬಹುತ್ವಾದ್ಯೇ ನ ಕೀರ್ತಿತಾಃ|

15040013c ಸರ್ವೇ ಭಾಸುರದೇಹಾಸ್ತೇ ಸಮುತ್ತಸ್ಥುರ್ಜಲಾತ್ತತಃ||

ಸೈನಿಕರು ಮತ್ತು ಪುತ್ರರೊಂದಿಗೆ ವಿರಾಟ-ದ್ರುಪದರು, ದ್ರೌಪದೇಯರು, ಸೌಭದ್ರ, ರಾಕ್ಷಸ ಘಟೋತ್ಕಚ, ಕರ್ಣ-ದುರ್ಯೋಧನರು, ಮಹಾರಥ ಶಕುನಿ, ದುಃಶಾಸನನೇ ಮೊದಲಾದ ಧೃತರಾಷ್ಟ್ರನ ಮಹಾರಥ ಪುತ್ರರು, ಜರಾಸಂಧನ ಮಗ, ಭಗದತ್ತ, ಪಾರ್ಥಿವ ಜಲಸಂಧ, ಭೂರಿಶ್ರವ, ಶಲ, ಶಲ್ಯ, ಸಹೋದರರೊಂದಿಗೆ ವೃಷಸೇನ, ರಾಜಪುತ್ರ ಲಕ್ಷ್ಮಣ, ಧೃಷ್ಟದ್ಯುಮ್ನನ ಮಗ, ಶಿಖಂಡಿಯ ಎಲ್ಲ ಮಕ್ಕಳೂ, ಅನುಜನೊಂದಿಗೆ ಧೃಷ್ಟಕೇತು, ಅಚಲ, ವೃಷಕ, ರಾಕ್ಷಸ ಅಲಾಯುಧ, ಬಾಹ್ಲೀಕ, ಸೋಮದತ್ತ, ರಾಜ ಚೇಕಿತಾನ - ಇವರು ಮತ್ತು ಇಲ್ಲಿ ಹೇಳಿರದ ಇನ್ನೂ ಅನೇಕ ಅನ್ಯರು ಎಲ್ಲರೂ ಬೆಳಗುತ್ತಿರುವ ದೇಹಗಳಿಂದ ನೀರಿನ ಒಳಗಿಂದ ಮೇಲೆದ್ದರು.

15040014a ಯಸ್ಯ ವೀರಸ್ಯ ಯೋ ವೇಷೋ ಯೋ ಧ್ವಜೋ ಯಚ್ಚ ವಾಹನಮ್|

15040014c ತೇನ ತೇನ ವ್ಯದೃಶ್ಯಂತ ಸಮುಪೇತಾ ನರಾಧಿಪಾಃ||

ಯಾವ ವೀರನ ಯಾವ ವೇಷ, ಧ್ವಜ, ವಾಹನವಿದ್ದಿತ್ತೋ ಅದೇ ರೀತಿಯಲ್ಲಿ ಆ ನರಾಧಿಪರು ಕಾಣಿಸಿಕೊಂಡರು.

15040015a ದಿವ್ಯಾಂಬರಧರಾಃ ಸರ್ವೇ ಸರ್ವೇ ಭ್ರಾಜಿಷ್ಣುಕುಂಡಲಾಃ|

15040015c ನಿರ್ವೈರಾ ನಿರಹಂಕಾರಾ ವಿಗತಕ್ರೋಧಮನ್ಯವಃ||

ಎಲ್ಲರೂ ದಿವ್ಯಾಂಬರಗಳನ್ನು ಧರಿಸಿದ್ದರು. ಎಲ್ಲರೂ ಹೊಳೆಯುವ ಕುಂಡಲಗಳನ್ನು ಧರಿಸಿದ್ದರು. ಎಲ್ಲರೂ ವೈರಗಳಿಲ್ಲದೇ, ನಿರಹಂಕಾರರಾಗಿ, ಕ್ರೋಧ-ಅಸೂಯೆಗಳನ್ನು ಕಳೆದುಕೊಂಡಿದ್ದರು.

15040016a ಗಂಧರ್ವೈರುಪಗೀಯಂತಃ ಸ್ತೂಯಮಾನಾಶ್ಚ ಬಂದಿಭಿಃ|

15040016c ದಿವ್ಯಮಾಲ್ಯಾಂಬರಧರಾ ವೃತಾಶ್ಚಾಪ್ಸರಸಾಂ ಗಣೈಃ||

ಗಂಧರ್ವರು ಅವರ ಗುಣಗಾನಮಾಡುತ್ತಿದ್ದರು. ಬಂದಿಗಳು ಅವರನ್ನು ಸ್ತುತಿಸುತ್ತಿದ್ದರು. ದಿವ್ಯಮಾಲೆ-ವಸ್ತ್ರಗಳನ್ನು ಧರಿಸಿದ್ದ ಅಪ್ಸರೆಯರ ಗಣಗಳು ಅವರನ್ನು ಸುತ್ತುವರೆದಿದ್ದವು.

15040017a ಧೃತರಾಷ್ಟ್ರಸ್ಯ ಚ ತದಾ ದಿವ್ಯಂ ಚಕ್ಷುರ್ನರಾಧಿಪ|

15040017c ಮುನಿಃ ಸತ್ಯವತೀಪುತ್ರಃ ಪ್ರೀತಃ ಪ್ರಾದಾತ್ತಪೋಬಲಾತ್||

ನರಾಧಿಪ! ಆಗ ಸತ್ಯವತೀ ಪುತ್ರ ಮುನಿಯು ಪ್ರೀತನಾಗಿ ತನ್ನ ತಪೋಬಲದಿಂದ ಧೃತರಾಷ್ಟ್ರನಿಗೆ ದಿವ್ಯದೃಷ್ಟಿಯನ್ನಿತ್ತನು.

15040018a ದಿವ್ಯಜ್ಞಾನಬಲೋಪೇತಾ ಗಾಂಧಾರೀ ಚ ಯಶಸ್ವಿನೀ|

15040018c ದದರ್ಶ ಪುತ್ರಾಂಸ್ತಾನ್ಸರ್ವಾನ್ಯೇ ಚಾನ್ಯೇಽಪಿ ರಣೇ ಹತಾಃ||

ದಿವ್ಯಜ್ಞಾನಬಲವಿದ್ದಿದ್ದ ಯಶಸ್ವಿನೀ ಗಾಂಧಾರಿಯು ರಣದಲ್ಲಿ ಹತರಾಗಿದ್ದ ಆ ಪುತ್ರರನ್ನೂ ಅನ್ಯ ಎಲ್ಲರನ್ನೂ ನೋಡಿದಳು.

15040019a ತದದ್ಭುತಮಚಿಂತ್ಯಂ ಚ ಸುಮಹದ್ರೋಮಹರ್ಷಣಮ್|

15040019c ವಿಸ್ಮಿತಃ ಸ ಜನಃ ಸರ್ವೋ ದದರ್ಶಾನಿಮಿಷೇಕ್ಷಣಃ||

ಪರಮಾದ್ಭುತವೂ, ಅಚಿಂತ್ಯವೂ, ರೋಮಾಂಚಕಾರಿಯೂ ಆಗಿದ್ದ ಅದನ್ನು ಸರ್ವಜನರೂ ಕಣ್ಣುರೆಪ್ಪೆಗಳನ್ನೂ ಬಡಿಯದೇ ವಿಸ್ಮಿತರಾಗಿ ನೋಡಿದರು.

15040020a ತದುತ್ಸವಮದೋದಗ್ರಂ ಹೃಷ್ಟನಾರೀನರಾಕುಲಮ್|

15040020c ದದೃಶೇ ಬಲಮಾಯಾಂತಂ ಚಿತ್ರಂ ಪಟಗತಂ ಯಥಾ||

ಹರ್ಷೋದ್ಗಾರಗೈಯುತ್ತಿದ್ದ ನರನಾರಿಯರಿಂದ ಕೂಡಿದ್ದ ಆ ಉಗ್ರ ಮಹೋತ್ಸವವು ತೆರೆಯ ಮೇಲಿನ ಚಿತ್ರದಂತೆಯೇ ಕಾಣಿಸುತ್ತಿತ್ತು.

15040021a ಧೃತರಾಷ್ಟ್ರಸ್ತು ತಾನ್ಸರ್ವಾನ್ಪಶ್ಯನ್ದಿವ್ಯೇನ ಚಕ್ಷುಷಾ|

15040021c ಮುಮುದೇ ಭರತಶ್ರೇಷ್ಠ ಪ್ರಸಾದಾತ್ತಸ್ಯ ವೈ ಮುನೇಃ||

ಭರತಶ್ರೇಷ್ಠ! ಧೃತರಾಷ್ಟ್ರನಾದರೋ ಆ ಮುನಿಯ ಅನುಗ್ರಹದಿಂದ ಪಡೆದ ದಿವ್ಯದೃಷ್ಟಿಯಿಂದ ಅವರೆಲ್ಲರನ್ನೂ ನೋಡಿ ಅತ್ಯಂತ ಮುದಿತನಾದನು."

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಪುತ್ರದರ್ಶನಪರ್ವಣಿ ಭೀಷ್ಮಾದಿದರ್ಶನೇ ಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಪುತ್ರದರ್ಶನಪರ್ವದಲ್ಲಿ ಭೀಷ್ಮಾದಿದರ್ಶನ ಎನ್ನುವ ನಲ್ವತ್ತನೇ ಅಧ್ಯಾಯವು.

Related image

Comments are closed.