Ashramavasika Parva: Chapter 39

ಆಶ್ರಮವಾಸಿಕ ಪರ್ವ: ಪುತ್ರದರ್ಶನ ಪರ್ವ

೩೯

ಯುದ್ಧದಲ್ಲಿ ಮಡಿದವರನ್ನು ತೋರಿಸುತ್ತೇನೆಂದು ವ್ಯಾಸನು ಹೇಳಿದುದು (೧-೧೮). ಜನಸ್ತೋಮವು ಗಂಗಾತೀರವನ್ನು ಸೇರಿದುದು (೧೯-೨೪).

15039001 ವ್ಯಾಸ ಉವಾಚ|

15039001a ಭದ್ರೇ ದ್ರಕ್ಷ್ಯಸಿ ಗಾಂಧಾರಿ ಪುತ್ರಾನ್ ಭ್ರಾತೄನ್ಸಖೀಂಸ್ತಥಾ|

15039001c ವಧೂಶ್ಚ ಪತಿಭಿಃ ಸಾರ್ಧಂ ನಿಶಿ ಸುಪ್ತೋತ್ಥಿತಾ ಇವ||

ವ್ಯಾಸನು ಹೇಳಿದನು: "ಭದ್ರೇ ಗಾಂಧಾರೀ! ಇಂದು ರಾತ್ರಿ ನೀನು ನಿನ್ನ ಮಕ್ಕಳನ್ನೂ, ಸಹೋದರರನ್ನೂ, ಮಿತ್ರರನ್ನೂ ನೋಡುತ್ತೀಯೆ! ನಿನ್ನ ಸೊಸೆಯಂದಿರೂ ಕೂಡ ತಮ್ಮ ಪತಿಗಳೊಂದಿಗೆ ಮಲಗಿ ಎದ್ದು ಬಂದವರಂತೆ ಕಾಣುತ್ತಾರೆ.

15039002a ಕರ್ಣಂ ದ್ರಕ್ಷ್ಯತಿ ಕುಂತೀ ಚ ಸೌಭದ್ರಂ ಚಾಪಿ ಯಾದವೀ|

15039002c ದ್ರೌಪದೀ ಪಂಚ ಪುತ್ರಾಂಶ್ಚ ಪಿತೄನ್ ಭ್ರಾತೄಂಸ್ತಥೈವ ಚ||

ಕುಂತಿಯು ಕರ್ಣನನ್ನು ನೋಡುತ್ತಾಳೆ. ಯಾದವೀ ಸುಭದ್ರೆಯು ಅಭಿಮನ್ಯುವನ್ನು ನೋಡುತ್ತಾಳೆ. ದ್ರೌಪದಿಯು ಐವರು ಪುತ್ರರನ್ನೂ, ತಂದೆಯನ್ನೂ ಮತ್ತು ಸಹೋದರರನ್ನೂ ನೋಡುತ್ತಾಳೆ.

15039003a ಪೂರ್ವಮೇವೈಷ ಹೃದಯೇ ವ್ಯವಸಾಯೋಽಭವನ್ಮಮ|

15039003c ಯಥಾಸ್ಮಿ ಚೋದಿತೋ ರಾಜ್ಞಾ ಭವತ್ಯಾ ಪೃಥಯೈವ ಚ||

ರಾಜ ಧೃತರಾಷ್ಟ್ರ, ನೀನು ಮತ್ತು ಪೃಥೆಯು ನನ್ನನ್ನು ಕೇಳುವ ಮೊದಲೇ ಇದನ್ನು ಮಾಡಿ ತೋರಿಸಬೇಕೆಂದು ನನ್ನ ಮನಸ್ಸಿನಲ್ಲಿದ್ದಿತ್ತು.

15039004a ನ ತೇ ಶೋಚ್ಯಾ ಮಹಾತ್ಮಾನಃ ಸರ್ವ ಏವ ನರರ್ಷಭಾಃ|

15039004c ಕ್ಷತ್ರಧರ್ಮಪರಾಃ ಸಂತಸ್ತಥಾ ಹಿ ನಿಧನಂ ಗತಾಃ||

ಆ ಮಹಾತ್ಮರ ಕುರಿತಾಗಿ ನೀನು ಶೋಕಿಸಬಾರದು. ಆ ಎಲ್ಲ ನರರ್ಷಭರೂ ಕ್ಷತ್ರಧರ್ಮಪರಾಯಣರಾಗಿದ್ದರು, ಮತ್ತು ಅವರ ಧರ್ಮಕ್ಕನುಸಾರವಾಗಿಯೇ ನಿಧನ ಹೊಂದಿದರು.

15039005a ಭವಿತವ್ಯಮವಶ್ಯಂ ತತ್ಸುರಕಾರ್ಯಮನಿಂದಿತೇ|

15039005c ಅವತೇರುಸ್ತತಃ ಸರ್ವೇ ದೇವಭಾಗೈರ್ಮಹೀತಲಮ್||

ಅನಿಂದಿತೇ! ಸುರರ ಕಾರ್ಯವಾದ ಅದು ಅವಶ್ಯವಾಗಿಯೂ ಹಾಗೆಯೇ ಆಗಬೇಕಿತ್ತು. ಅವರೆಲ್ಲರೂ ದೇವತೆಗಳ ಅಂಶಗಳಿಂದ ಭೂಮಿಯಮೇಲೆ ಅವತರಿಸಿದ್ದರು.

15039006a ಗಂಧರ್ವಾಪ್ಸರಸಶ್ಚೈವ ಪಿಶಾಚಾ ಗುಹ್ಯರಾಕ್ಷಸಾಃ|

15039006c ತಥಾ ಪುಣ್ಯಜನಾಶ್ಚೈವ ಸಿದ್ಧಾ ದೇವರ್ಷಯೋಽಪಿ ಚ||

15039007a ದೇವಾಶ್ಚ ದಾನವಾಶ್ಚೈವ ತಥಾ ಬ್ರಹ್ಮರ್ಷಯೋಽಮಲಾಃ|

15039007c ತ ಏತೇ ನಿಧನಂ ಪ್ರಾಪ್ತಾಃ ಕುರುಕ್ಷೇತ್ರೇ ರಣಾಜಿರೇ||

ಕುರುಕ್ಷೇತ್ರದ ರಣಭೂಮಿಯಲ್ಲಿ ನಿಧನ ಹೊಂದಿದ ಇವರು ಗಂಧರ್ವರೂ, ಅಪ್ಸರೆಯರೂ, ಪಿಶಾಚರೂ, ಗುಹ್ಯರೂ, ರಾಕ್ಷಸರೂ, ಹಾಗೆಯೇ ಪುಣ್ಯಜನರಾದ ಸಿದ್ಧರೂ, ದೇವರ್ಷಿಗಳೂ, ದೇವತೆಗಳೂ, ದಾನವರೂ, ಮತ್ತು ಹಾಗೆಯೇ ಅಮಲ ಬ್ರಹ್ಮರ್ಷಿಗಳೂ ಆಗಿದ್ದರು.

15039008a ಗಂಧರ್ವರಾಜೋ ಯೋ ಧೀಮಾನ್ಧೃತರಾಷ್ಟ್ರ ಇತಿ ಶ್ರುತಃ|

15039008c ಸ ಏವ ಮಾನುಷೇ ಲೋಕೇ ಧೃತರಾಷ್ಟ್ರಃ ಪತಿಸ್ತವ||

ಧೃತರಾಷ್ಟ್ರನೆಂದು ಖ್ಯಾತಿಹೊಂದಿದ್ದ ಯಾವ ಧೀಮಾನ್ ಗಂಧರ್ವರಾಜನಿದ್ದನೋ ಅವನೇ ಮನುಷ್ಯಲೋಕದಲ್ಲಿ ನಿನ್ನ ಪತಿ ಧೃತರಾಷ್ಟ್ರನಾಗಿದ್ದಾನೆ.

15039009a ಪಾಂಡುಂ ಮರುದ್ಗಣಂ ವಿದ್ಧಿ ವಿಶಿಷ್ಟತಮಮಚ್ಯುತಮ್|

15039009c ಧರ್ಮಸ್ಯಾಂಶೋಽಭವತ್ಕ್ಷತ್ತಾ ರಾಜಾ ಚಾಯಂ ಯುಧಿಷ್ಠಿರಃ||

ಪಾಂಡುವು ಅತ್ಯಂತ ವಿಶಿಷ್ಠವಾದ ಚ್ಯುತಿಯಿಲ್ಲದ ಮರುದ್ಗಣವೆಂದು ತಿಳಿ. ಕ್ಷತ್ತ ವಿದುರ ಮತ್ತು ಈ ರಾಜಾ ಯುಧಿಷ್ಠಿರನು ಧರ್ಮನ ಅಂಶಗಳಾಗಿದ್ದಾರೆ.

15039010a ಕಲಿಂ ದುರ್ಯೋಧನಂ ವಿದ್ಧಿ ಶಕುನಿಂ ದ್ವಾಪರಂ ತಥಾ|

15039010c ದುಃಶಾಸನಾದೀನ್ವಿದ್ಧಿ ತ್ವಂ ರಾಕ್ಷಸಾನ್ಶುಭದರ್ಶನೇ||

ದುರ್ಯೋಧನನು ಕಲಿಯೆಂದೂ ಶಕುನಿಯು ದ್ವಾಪರನೆಂದೂ ತಿಳಿ. ಶುಭದರ್ಶನೆಯೇ! ದುಃಶಾಸನಾದಿಗಳು ರಾಕ್ಷಸರೆಂದು ತಿಳಿ.

15039011a ಮರುದ್ಗಣಾದ್ಭೀಮಸೇನಂ ಬಲವಂತಮರಿಂದಮಮ್|

15039011c ವಿದ್ಧಿ ಚ ತ್ವಂ ನರಮೃಷಿಮಿಮಂ ಪಾರ್ಥಂ ಧನಂಜಯಮ್|

15039011e ನಾರಾಯಣಂ ಹೃಷೀಕೇಶಮಶ್ವಿನೌ ಯಮಜಾವುಭೌ||

ಬಲವಂತ ಅರಿಂದಮ ಭೀಮಸೇನನು ಮರುದ್ಗಣಗಳಿಂದ, ಈ ಪಾರ್ಥ ಧನಂಜಯನು ಋಷಿ ನರನೆಂದೂ, ಹೃಷೀಕೇಶನು ನಾರಯಣನೆಂದೂ, ಮತ್ತು ಈ ಇಬ್ಬರು ಅವಳಿಮಕ್ಕಳು ಅಶ್ವಿನಿಯರ ಅಂಶಜರೆಂದೂ ತಿಳಿ.

15039012a ದ್ವಿಧಾ ಕೃತ್ವಾತ್ಮನೋ ದೇಹಮಾದಿತ್ಯಂ ತಪತಾಂ ವರಮ್|

15039012c ಲೋಕಾಂಶ್ಚ ತಾಪಯಾನಂ ವೈ ವಿದ್ಧಿ ಕರ್ಣಂ ಚ ಶೋಭನೇ|

15039012e ಯಶ್ಚ ವೈರಾರ್ಥಮುದ್ಭೂತಃ ಸಂಘರ್ಷಜನನಸ್ತಥಾ||

ಶೋಭನೇ! ವೈರವನ್ನು ಹುಟ್ಟಿಸಲು ಮತ್ತು ಸಂಘರ್ಷವನ್ನುಂಟುಮಾಡಲು ಜನಿಸಿದ್ದ ಕರ್ಣನು ತನ್ನ ದೇಹವನ್ನೇ ಎರಡನ್ನಾಗಿಸಿಕೊಂಡ, ಸುಡುವವರಲ್ಲಿ ಶ್ರೇಷ್ಠನಾದ, ಲೋಕಗಳನ್ನು ಸುಡುತ್ತಿರುವ ಆದಿತ್ಯನೆಂದು ತಿಳಿ.

15039013a ಯಶ್ಚ ಪಾಂಡವದಾಯಾದೋ ಹತಃ ಷಡ್ಭಿರ್ಮಹಾರಥೈಃ|

15039013c ಸ ಸೋಮ ಇಹ ಸೌಭದ್ರೋ ಯೋಗಾದೇವಾಭವದ್ದ್ವಿಧಾ||

ಷಡ್ಮಹಾರಥರಿಂದ ಹತನಾದ ಪಾಂಡವರ ಮಗ ಸೌಭದ್ರನು ಯೋಗದಿಂದ ಎರಡಾಗಿ ಇಲ್ಲಿಗೆ ಬಂದ ಸೋಮನೆಂದು ತಿಳಿ.

15039014a ದ್ರೌಪದ್ಯಾ ಸಹ ಸಂಭೂತಂ ಧೃಷ್ಟದ್ಯುಮ್ನಂ ಚ ಪಾವಕಾತ್|

15039014c ಅಗ್ನೇರ್ಭಾಗಂ ಶುಭಂ ವಿದ್ಧಿ ರಾಕ್ಷಸಂ ತು ಶಿಖಂಡಿನಮ್||

ದ್ರೌಪದಿಯೊಡನೆ ಅಗ್ನಿಯಿಂದ ಹುಟ್ಟಿದ ಧೃಷ್ಟದ್ಯುಮ್ನನು ಅಗ್ನಿಯ ಶುಭ ಅಂಶದವನು ಮತ್ತು ಶಿಖಂಡಿಯು ರಾಕ್ಷಸನಾಗಿದ್ದನೆಂದು ತಿಳಿ.

15039015a ದ್ರೋಣಂ ಬೃಹಸ್ಪತೇರ್ಭಾಗಂ ವಿದ್ಧಿ ದ್ರೌಣಿಂ ಚ ರುದ್ರಜಮ್|

15039015c ಭೀಷ್ಮಂ ಚ ವಿದ್ಧಿ ಗಾಂಗೇಯಂ ವಸುಂ ಮಾನುಷತಾಂ ಗತಮ್||

ದ್ರೋಣನು ಬೃಹಸ್ಪತಿಯ ಅಂಶವೆಂದೂ ದ್ರೌಣಿ ಅಶ್ವತ್ಥಾಮನು ರುದ್ರಜನೆಂದೂ ತಿಳಿ. ಗಾಂಗೇಯ ಭೀಷ್ಮನು ಮಾನುಷತ್ವವನ್ನು ಪಡೆದ ವಸುವೆಂದು ತಿಳಿ.

15039016a ಏವಮೇತೇ ಮಹಾಪ್ರಾಜ್ಞೇ ದೇವಾ ಮಾನುಷ್ಯಮೇತ್ಯ ಹಿ|

15039016c ತತಃ ಪುನರ್ಗತಾಃ ಸ್ವರ್ಗಂ ಕೃತೇ ಕರ್ಮಣಿ ಶೋಭನೇ||

ಮಹಾಪ್ರಾಜ್ಞೇ! ಶೋಭನೇ! ಹೀಗೆ ಈ ದೇವತೆಗಳು ಮಾನುಷತ್ವವನ್ನು ಪಡೆದು ಕಾರ್ಯಗಳು ಮುಗಿದನಂತರ ಪುನಃ ಸ್ವರ್ಗಕ್ಕೆ ತೆರಳಿದ್ದಾರೆ.

15039017a ಯಚ್ಚ ವೋ ಹೃದಿ ಸರ್ವೇಷಾಂ ದುಃಖಮೇನಚ್ಚಿರಂ ಸ್ಥಿತಮ್|

15039017c ತದದ್ಯ ವ್ಯಪನೇಷ್ಯಾಮಿ ಪರಲೋಕಕೃತಾದ್ಭಯಾತ್||

ಪರಲೋಕದ ಭಯದಿಂದಾಗಿ ನಿಮ್ಮೆಲ್ಲರ ಹೃದಯದಲ್ಲಿ ಬಹುಕಾಲ ನೆಲೆಸಿರುವ ದುಃಖವನ್ನು ಇಂದು ನಾನು ದೂರೀಕರಿಸುತ್ತೇನೆ.

15039018a ಸರ್ವೇ ಭವಂತೋ ಗಚ್ಚಂತು ನದೀಂ ಭಾಗೀರಥೀಂ ಪ್ರತಿ|

15039018c ತತ್ರ ದ್ರಕ್ಷ್ಯಥ ತಾನ್ಸರ್ವಾನ್ಯೇ ಹತಾಸ್ಮಿನ್ರಣಾಜಿರೇ||

ನೀವೆಲ್ಲರೂ ಭಾಗೀರಥೀ ನದಿಯ ಕಡೆ ಹೊರಡಬೇಕು. ಅಲ್ಲಿ ನಾನು ರಣಾಂಗಣದಲ್ಲಿ ಮಡಿದ ಅವರೆಲ್ಲರನ್ನೂ ಅನ್ಯರನ್ನೂ ತೋರಿಸುತ್ತೇನೆ.""

15039019 ವೈಶಂಪಾಯನ ಉವಾಚ|

15039019a ಇತಿ ವ್ಯಾಸಸ್ಯ ವಚನಂ ಶ್ರುತ್ವಾ ಸರ್ವೋ ಜನಸ್ತದಾ|

15039019c ಮಹತಾ ಸಿಂಹನಾದೇನ ಗಂಗಾಮಭಿಮುಖೋ ಯಯೌ||

ವೈಶಂಪಾಯನನು ಹೇಳಿದನು: "ವ್ಯಾಸನ ಈ ಮಾತನ್ನು ಕೇಳಿ ಸರ್ವ ಜನಸ್ತೋಮವೂ ಮಹಾ ಸಿಂಹನಾದದೊಡನೆ ಗಂಗಾಭಿಮುಖವಾಗಿ ಹೊರಟಿತು.

15039020a ಧೃತರಾಷ್ಟ್ರಶ್ಚ ಸಾಮಾತ್ಯಃ ಪ್ರಯಯೌ ಸಹ ಪಾಂಡವೈಃ|

15039020c ಸಹಿತೋ ಮುನಿಶಾರ್ದೂಲೈರ್ಗಂಧರ್ವೈಶ್ಚ ಸಮಾಗತೈಃ||

ಪಾಂಡವರೊಂದಿಗೆ ಮತ್ತು ಅಮಾತ್ಯರೊಂದಿಗೆ ಧೃತರಾಷ್ಟ್ರನೂ, ಅಲ್ಲಿ ಸೇರಿದ್ದ ಮುನಿಶಾರ್ದೂಲರು ಮತ್ತು ಗಂಧರ್ವರನ್ನು ಕೂಡಿಕೊಂಡು ಹೊರಟರು.

15039021a ತತೋ ಗಂಗಾಂ ಸಮಾಸಾದ್ಯ ಕ್ರಮೇಣ ಸ ಜನಾರ್ಣವಃ|

15039021c ನಿವಾಸಮಕರೋತ್ಸರ್ವೋ ಯಥಾಪ್ರೀತಿ ಯಥಾಸುಖಮ್||

ಕ್ರಮೇಣ ಆ ಜನಸಾಗರವು ಗಂಗೆಯನ್ನು ಸೇರಿ ಅಲ್ಲಿ ಯಥಾಪ್ರೀತಿಯಾಗಿ ಯಥಾಸುಖವಾಗಿ ಬೀಡುಬಿಟ್ಟಿತು.

15039022a ರಾಜಾ ಚ ಪಾಂಡವೈಃ ಸಾರ್ಧಮಿಷ್ಟೇ ದೇಶೇ ಸಹಾನುಗಃ|

15039022c ನಿವಾಸಮಕರೋದ್ಧೀಮಾನ್ಸಸ್ತ್ರೀವೃದ್ಧಪುರಃಸರಃ||

ಧೀಮಂತ ರಾಜಾ ಯುಧಿಷ್ಠಿರನು ಪಾಂಡವರೊಡನೆ, ತನ್ನ ಅನುಯಾಯಿಗಳಿಂದೊಡಗೂಡಿ, ಸ್ತ್ರೀಯರು ಮತ್ತು ವೃದ್ಧರನ್ನು ಮುಂದಿರಿಸಿಕೊಂಡು ಇಷ್ಟ ಪ್ರದೇಶದಲ್ಲಿ ಬೀಡುಬಿಟ್ಟನು.

15039023a ಜಗಾಮ ತದಹಶ್ಚಾಪಿ ತೇಷಾಂ ವರ್ಷಶತಂ ಯಥಾ|

15039023c ನಿಶಾಂ ಪ್ರತೀಕ್ಷಮಾಣಾನಾಂ ದಿದೃಕ್ಷೂಣಾಂ ಮೃತಾನ್ನೃಪಾನ್||

ಮೃತರಾಗಿದ್ದ ನೃಪರನ್ನು ನೋಡಲು ರಾತ್ರಿಯನ್ನೇ ಕಾಯುತ್ತಿದ್ದ ಅವರಿಗೆ ಆ ಒಂದು ಹಗಲೂ ಕೂಡ ನೂರು ವರ್ಷಗಳಂತೆ ಕಳೆದವು.

15039024a ಅಥ ಪುಣ್ಯಂ ಗಿರಿವರಮಸ್ತಮಭ್ಯಗಮದ್ರವಿಃ|

15039024c ತತಃ ಕೃತಾಭಿಷೇಕಾಸ್ತೇ ನೈಶಂ ಕರ್ಮ ಸಮಾಚರನ್||

ಬಳಿಕ ರವಿಯು ಪುಣ್ಯಗಿರಿಶ್ರೇಷ್ಠನನ್ನು ಸೇರಿದ ನಂತರ ಅವರೆಲ್ಲರೂ ಸ್ನಾನಮಾಡಿ ಸಂಧ್ಯಾವಂದನಾದಿ ಕರ್ಮಗಳನ್ನೆಸಗಿದರು."

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಪುತ್ರದರ್ಶನಪರ್ವಣಿ ಗಂಗಾತಿರಗಮನೇ ಏಕೋನಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಪುತ್ರದರ್ಶನಪರ್ವದಲ್ಲಿ ಗಂಗಾತೀರಗಮನ ಎನ್ನುವ ಮೂವತ್ತೊಂಭತ್ತನೇ ಅಧ್ಯಾಯವು.

Related image

Comments are closed.