Ashramavasika Parva: Chapter 38

ಆಶ್ರಮವಾಸಿಕ ಪರ್ವ: ಪುತ್ರದರ್ಶನ ಪರ್ವ

೩೮

ಕರ್ಣಜನ್ಮ ಕಥನ

ಕುಂತೀ ಮತ್ತು ವ್ಯಾಸರ ಸಂವಾದ (೧-೨೩).

15038001 ಕುಂತ್ಯುವಾಚ|

15038001a ಭಗವನ್ಶ್ವಶುರೋ ಮೇಽಸಿ ದೈವತಸ್ಯಾಪಿ ದೈವತಮ್|

15038001c ಸ ಮೇ ದೇವಾತಿದೇವಸ್ತ್ವಂ ಶೃಣು ಸತ್ಯಾಂ ಗಿರಂ ಮಮ||

ಕುಂತಿಯು ಹೇಳಿದಳು: "ಭಗವನ್! ನೀನು ನನ್ನ ಮಾವ! ದೇವತೆಗಳಿಗೂ ದೇವತೆಯಾಗಿದ್ದೀಯೆ. ನನ್ನ ಪಾಲಿಗೆ ದೇವಾತಿದೇವನಾಗಿದ್ದೀಯೆ. ನನ್ನ ಈ ಸತ್ಯದ ಮಾತನ್ನು ಕೇಳು!

15038002a ತಪಸ್ವೀ ಕೋಪನೋ ವಿಪ್ರೋ ದುರ್ವಾಸಾ ನಾಮ ಮೇ ಪಿತುಃ|

15038002c ಭಿಕ್ಷಾಮುಪಾಗತೋ ಭೋಕ್ತುಂ ತಮಹಂ ಪರ್ಯತೋಷಯಮ್||

ತಪಸ್ವಿಯೂ ಕೋಪಿಷ್ಟನೂ ಆಗಿದ್ದ ದುರ್ವಾಸನೆಂಬ ಹೆಸರಿನ ವಿಪ್ರನು ನನ್ನ ತಂದೆಯಲ್ಲಿಗೆ ಭಿಕ್ಷೆಯನ್ನು ಸೇವಿಸಲು ಆಗಮಿಸಿದ್ದಾಗ ನಾನು ಅವನನ್ನು ಸೇವೆಗಳಿಂದ ತೃಪ್ತಿಗೊಳಿಸಿದ್ದೆನು.

15038003a ಶೌಚೇನ ತ್ವಾಗಸಸ್ತ್ಯಾಗೈಃ ಶುದ್ಧೇನ ಮನಸಾ ತಥಾ|

15038003c ಕೋಪಸ್ಥಾನೇಷ್ವಪಿ ಮಹತ್ಸ್ವಕುಪ್ಯಂ ನ ಕದಾ ಚನ||

ಆಗ ನಾನು ಶೌಚಾಚಾರಗಳನ್ನು ಪಾಲಿಸುತ್ತಾ, ಯಾವುದೇ ಅಪರಾಧಗಳನ್ನೂ ಎಸಗದೇ ಶುದ್ಧವಾದ ಮನಸ್ಸಿನಿಂದ, ಅತ್ಯಂತ ಕೋಪಗೊಳ್ಳುವ ಸನ್ನಿವೇಶಗಳು ಬಂದರೂ ಕೋಪಗೊಳ್ಳದೇ ಅವನ ಸೇವೆಗೈದೆನು.

15038004a ಸ ಮೇ ವರಮದಾತ್ಪ್ರೀತಃ ಕೃತಮಿತ್ಯಹಮಬ್ರುವಮ್|

15038004c ಅವಶ್ಯಂ ತೇ ಗ್ರಹೀತವ್ಯಮಿತಿ ಮಾಂ ಸೋಽಬ್ರವೀದ್ವಚಃ||

ನನ್ನ ಮೇಲೆ ಪ್ರೀತನಾದ ಅವನು ವರವನ್ನು ನೀಡುತ್ತಾ "ನನ್ನಿಂದ ಇದನ್ನು ನೀನು ಅವಶ್ಯವಾಗಿಯೂ ಪಡೆದುಕೊಳ್ಳಬೇಕು!" ಎಂದು ಹೇಳಿದನು.

15038005a ತತಃ ಶಾಪಭಯಾದ್ವಿಪ್ರಮವೋಚಂ ಪುನರೇವ ತಮ್|

15038005c ಏವಮಸ್ತ್ವಿತಿ ಚ ಪ್ರಾಹ ಪುನರೇವ ಸ ಮಾಂ ದ್ವಿಜಃ||

ಆಗ ನಾನು ಶಾಪಭಯದಿಂದ ಆ ವಿಪ್ರನಿಗೆ ಹಾಗೆಯೇ ಆಗಲಿ ಎಂದು ಪುನಃ ಹೇಳಿದೆನು. ಆ ದ್ವಿಜನು ಪುನಃ ನನ್ನಲ್ಲಿ ಹೇಳಿದನು:

15038006a ಧರ್ಮಸ್ಯ ಜನನೀ ಭದ್ರೇ ಭವಿತ್ರೀ ತ್ವಂ ವರಾನನೇ|

15038006c ವಶೇ ಸ್ಥಾಸ್ಯಂತಿ ತೇ ದೇವಾ ಯಾಂಸ್ತ್ವಮಾವಾಹಯಿಷ್ಯಸಿ||

"ಭದ್ರೇ! ವರಾನನೇ! ನೀನು ಧರ್ಮನಿಗೆ ಜನನಿಯಾಗುವೆ! ನೀನು ಯಾವ ದೇವತೆಗಳನ್ನು ಆಹ್ವಾನಿಸುವೆಯೋ ಅವರು ನಿನ್ನ ವಶರಾಗಿ ಬರುತ್ತಾರೆ!"

15038007a ಇತ್ಯುಕ್ತ್ವಾಂತರ್ಹಿತೋ ವಿಪ್ರಸ್ತತೋಽಹಂ ವಿಸ್ಮಿತಾಭವಮ್|

15038007c ನ ಚ ಸರ್ವಾಸ್ವವಸ್ಥಾಸು ಸ್ಮೃತಿರ್ಮೇ ವಿಪ್ರಣಶ್ಯತಿ||

ಹೀಗೆ ಹೇಳಿ ಆ ವಿಪ್ರನು ಅಂತರ್ಧಾನನಾದನು. ಆಗ ನಾನು ವಿಸ್ಮಿತಳಾದೆನು. ಎಲ್ಲ ಅವಸ್ಥೆಗಳಲ್ಲಿಯೂ ಅವನ ಆ ಮಾತು ನನ್ನ ನೆನಪಿನಿಂದ ನಾಶವಾಗುತ್ತಿರಲಿಲ್ಲ.

15038008a ಅಥ ಹರ್ಮ್ಯತಲಸ್ಥಾಹಂ ರವಿಮುದ್ಯಂತಮೀಕ್ಷತೀ|

15038008c ಸಂಸ್ಮೃತ್ಯ ತದೃಷೇರ್ವಾಕ್ಯಂ ಸ್ಪೃಹಯಂತೀ ದಿವಾಕರಮ್|

15038008e ಸ್ಥಿತಾಹಂ ಬಾಲಭಾವೇನ ತತ್ರ ದೋಷಮಬುಧ್ಯತೀ||

ಒಮ್ಮೆ ನಾನು ಮಹಡಿಯ ಮೇಲಿದ್ದಾಗ ಉದಯಿಸುತ್ತಿರುವ ರವಿಯನ್ನೇ ನೋಡುತ್ತಿದ್ದೆನು. ಆಗ ಆ ಋಷಿಯ ಮಾತನ್ನು ಸ್ಮರಿಸಿಕೊಂಡು ದಿವಾಕರನನ್ನು ಬಯಸಿದೆನು. ಆಗ ನಾನು ಇನ್ನೂ ಬಾಲಭಾವದಲ್ಲಿದ್ದೆನು. ದೋಷಗಳನ್ನು ತಿಳಿದುಕೊಳ್ಳುವ ಹಾಗಿರಲಿಲ್ಲ.

15038009a ಅಥ ದೇವಃ ಸಹಸ್ರಾಂಶುರ್ಮತ್ಸಮೀಪಗತೋಽಭವತ್|

15038009c ದ್ವಿಧಾ ಕೃತ್ವಾತ್ಮನೋ ದೇಹಂ ಭೂಮೌ ಚ ಗಗನೇಽಪಿ ಚ|

15038009e ತತಾಪ ಲೋಕಾನೇಕೇನ ದ್ವಿತೀಯೇನಾಗಮಚ್ಚ ಮಾಮ್||

ಕೂಡಲೇ ಸಹಸ್ರಾಂಶು ದೇವನು ನನ್ನ ಸಮೀಪಕ್ಕೆ ಬಂದೇಬಿಟ್ಟನು. ಅವನು ತನ್ನ ದೇಹವನ್ನು ಗಗನದಲ್ಲೊಂದು ಮತ್ತು ಭೂಮಿಯಲ್ಲೊಂದು ಹೀಗೆ ಎರಡನ್ನಾಗಿ ಮಾಡಿಕೊಂಡಿದ್ದನು. ಒಂದರಿಂದ ಲೋಕಗಳನ್ನು ಸುಡುತ್ತಿದ್ದವನು ತನ್ನ ಎರಡನೆಯ ರೂಪದಿಂದ ನನ್ನ ಬಳಿ ಬಂದನು.

15038010a ಸ ಮಾಮುವಾಚ ವೇಪಂತೀಂ ವರಂ ಮತ್ತೋ ವೃಣೀಷ್ವ ಹ|

15038010c ಗಮ್ಯತಾಮಿತಿ ತಂ ಚಾಹಂ ಪ್ರಣಮ್ಯ ಶಿರಸಾವದಮ್||

ತರತರನೆ ನಡುಗುತ್ತಿದ್ದ ನನಗೆ ಅವನು "ವರವನ್ನು ಕೇಳಿಕೋ!" ಎಂದನು. ಆದರೆ ನಾನು ಅವನಿಗೆ ಶಿರಬಾಗಿ ನಮಸ್ಕರಿಸಿ "ಹೋಗಬೇಕು!" ಎಂದು ಕೇಳಿಕೊಂಡೆನು.

15038011a ಸ ಮಾಮುವಾಚ ತಿಗ್ಮಾಂಶುರ್ವೃಥಾಹ್ವಾನಂ ನ ತೇ ಕ್ಷಮಮ್|

15038011c ಧಕ್ಷ್ಯಾಮಿ ತ್ವಾಂ ಚ ವಿಪ್ರಂ ಚ ಯೇನ ದತ್ತೋ ವರಸ್ತವ||

ಆಗ ತಿಗ್ಮಾಂಶುವು ನನಗೆ ಹೇಳಿದನು: "ವೃಥಾ ಆಹ್ವಾನವನ್ನು ನಾನು ಕ್ಷಮಿಸುವುದಿಲ್ಲ! ನಿನ್ನನ್ನೂ ಮತ್ತು ನಿನಗೆ ಈ ವರವನ್ನಿತ್ತ ವಿಪ್ರನನ್ನೂ ಸುಟ್ಟುಬಿಡುತ್ತೇನೆ!"

15038012a ತಮಹಂ ರಕ್ಷತೀ ವಿಪ್ರಂ ಶಾಪಾದನಪರಾಧಿನಮ್|

15038012c ಪುತ್ರೋ ಮೇ ತ್ವತ್ಸಮೋ ದೇವ ಭವೇದಿತಿ ತತೋಽಬ್ರುವಮ್||

ಅನಪರಾಧಿಯಾದ ಆ ವಿಪ್ರನನ್ನು ರಕ್ಷಿಸಲೋಸುಗ ನಾನು ಅವನಿಗೆ "ದೇವ! ನನಗೆ ನಿನ್ನ ಸಮನಾದ ಮಗನಾಗಲಿ!" ಎಂದು ಹೇಳಿದೆನು.

15038013a ತತೋ ಮಾಂ ತೇಜಸಾವಿಶ್ಯ ಮೋಹಯಿತ್ವಾ ಚ ಭಾನುಮಾನ್|

15038013c ಉವಾಚ ಭವಿತಾ ಪುತ್ರಸ್ತವೇತ್ಯಭ್ಯಗಮದ್ದಿವಮ್||

ಆಗ ಭಾನುಮಂತನು ನನ್ನನ್ನು ಮೋಹಗೊಳಿಸಿ ತೇಜಸ್ಸಿನಿಂದ ನನ್ನನ್ನು ಪ್ರವೇಶಿಸಿದನು. "ನಿನಗೊಬ್ಬ ಮಗನಾಗುವನು!" ಎಂದು ಹೇಳಿ ಆಕಾಶಕ್ಕೆ ಹೊರಟುಹೋದನು.

15038014a ತತೋಽಹಮಂತರ್ಭವನೇ ಪಿತುರ್ವೃತ್ತಾಂತರಕ್ಷಿಣೀ|

15038014c ಗೂಢೋತ್ಪನ್ನಂ ಸುತಂ ಬಾಲಂ ಜಲೇ ಕರ್ಣಮವಾಸೃಜಮ್||

ಈ ವೃತ್ತಾಂತವನ್ನು ತಂದೆಯಿಂದ ರಕ್ಷಿಸಲೋಸುಗ ನಾನು ಭವನದ ಒಳಗೇ ಇದ್ದುಬಿಟ್ಟೆನು. ಗುಟ್ಟಿನಲ್ಲಿ ಹುಟ್ಟಿದ ನನ್ನ ಮಗ ಕರ್ಣ ಬಾಲಕನನ್ನು ನೀರಿನಲ್ಲಿ ಬಿಟ್ಟುಬಿಟ್ಟೆನು.

15038015a ನೂನಂ ತಸ್ಯೈವ ದೇವಸ್ಯ ಪ್ರಸಾದಾತ್ಪುನರೇವ ತು|

15038015c ಕನ್ಯಾಹಮಭವಂ ವಿಪ್ರ ಯಥಾ ಪ್ರಾಹ ಸ ಮಾಮೃಷಿಃ||

ವಿಪ್ರ! ಆ ಋಷಿಯು ನನಗೆ ಹೇಗೆ ಹೇಳಿದ್ದನೋ ಹಾಗೆ ದೇವನ ಪ್ರಸಾದದಿಂದ ಪುನಃ ನಾನು ಕನ್ಯೆಯಾಗಿಯೇ ಉಳಿದುಕೊಂಡೆನು.

15038016a ಸ ಮಯಾ ಮೂಢಯಾ ಪುತ್ರೋ ಜ್ಞಾಯಮಾನೋಽಪ್ಯುಪೇಕ್ಷಿತಃ|

15038016c ತನ್ಮಾಂ ದಹತಿ ವಿಪ್ರರ್ಷೇ ಯಥಾ ಸುವಿದಿತಂ ತವ||

ಮೂರ್ಖಳಾದ ನಾನು ಕರ್ಣನು ನನ್ನ ಮಗನೆಂದು ತಿಳಿದಿದ್ದರೂ ಅವನನ್ನು ಉಪೇಕ್ಷಿಸಿಬಿಟ್ಟೆನು. ವಿಪ್ರರ್ಷೇ! ಅದು ನನ್ನನ್ನು ಸುಡುತ್ತಿದೆ. ನಿನಗೆ ಇದೆಲ್ಲವೂ ಚೆನ್ನಾಗಿಯೇ ತಿಳಿದಿದೆ.

15038017a ಯದಿ ಪಾಪಮಪಾಪಂ ವಾ ತದೇತದ್ವಿವೃತಂ ಮಯಾ|

15038017c ತನ್ಮೇ ಭಯಂ ತ್ವಂ ಭಗವನ್ವ್ಯಪನೇತುಮಿಹಾರ್ಹಸಿ||

ನಾನು ಮಾಡಿದ ಕಾರ್ಯವು ಪಾಪಕರವೋ-ಪುಣ್ಯಕರವೋ - ನಡೆದಹಾಗೆ ನಿನಗೆ ಹೇಳಿದ್ದೇನೆ. ಭಗವನ್! ನನ್ನ ಈ ಭಯವನ್ನು ನೀಗಿಸಬೇಕು!

15038018a ಯಚ್ಚಾಸ್ಯ ರಾಜ್ಞೋ ವಿದಿತಂ ಹೃದಿಸ್ಥಂ ಭವತೋಽನಘ|

15038018c ತಂ ಚಾಯಂ ಲಭತಾಂ ಕಾಮಮದ್ಯೈವ ಮುನಿಸತ್ತಮ||

ಅನಘ! ಮುನಿಸತ್ತಮ! ರಾಜನ ಹೃದಯದಲ್ಲಿರುವುದನ್ನೂ ನೀನು ತಿಳಿದುಕೊಂಡಿರುವೆ. ಅದೂ ಕೂಡ ಇಂದೇ ಈಡೇರುವಂತೆ ಮಾಡು!"

15038019a ಇತ್ಯುಕ್ತಃ ಪ್ರತ್ಯುವಾಚೇದಂ ವ್ಯಾಸೋ ವೇದವಿದಾಂ ವರಃ|

15038019c ಸಾಧು ಸರ್ವಮಿದಂ ತಥ್ಯಮೇವಮೇವ ಯಥಾತ್ಥ ಮಾಮ್||

ಅವಳು ಹೀಗೆ ಹೇಳಲು ವೇದವಿದರಲ್ಲಿ ಶ್ರೇಷ್ಠ ವ್ಯಾಸನು ಇಂತೆಂದನು: "ಸಾಧು! ಇವೆಲ್ಲವೂ ಸರಿಯಾಗಿಯೇ ಇವೆ. ಇವು ಹಾಗೆಯೇ ಆಗಬೇಕಾಗಿದ್ದಿತ್ತು.

15038020a ಅಪರಾಧಶ್ಚ ತೇ ನಾಸ್ತಿ ಕನ್ಯಾಭಾವಂ ಗತಾ ಹ್ಯಸಿ|

15038020c ದೇವಾಶ್ಚೈಶ್ವರ್ಯವಂತೋ ವೈ ಶರೀರಾಣ್ಯಾವಿಶಂತಿ ವೈ||

ಇದರಲ್ಲಿ ನಿನ್ನ ಅಪರಾಧವೇನೂ ಇಲ್ಲ. ಆಗ ನೀನು ಕನ್ಯಾಭಾವದಲ್ಲಿದ್ದೆ. ದೇವತೆಗಳು ಸಿದ್ಧಿಗಳ ಐಶ್ವರ್ಯವಂತರು. ಇತರರ ಶರೀರಗಳನ್ನು ಪ್ರವೇಶಿಸಬಲ್ಲರು.

15038021a ಸಂತಿ ದೇವನಿಕಾಯಾಶ್ಚ ಸಂಕಲ್ಪಾಜ್ಜನಯಂತಿ ಯೇ|

15038021c ವಾಚಾ ದೃಷ್ಟ್ಯಾ ತಥಾ ಸ್ಪರ್ಶಾತ್ಸಂಘರ್ಷೇಣೇತಿ ಪಂಚಧಾ||

ಸಂಕಲ್ಪ, ವಚನ, ದೃಷ್ಟಿ, ಸ್ಪರ್ಷ ಮತ್ತು ಸಮಾಗಮ - ಈ ಐದು ವಿಧಗಳಲ್ಲಿ ಮಕ್ಕಳನ್ನು ಹುಟ್ಟಿಸುವ ದೇವಸಂಘಗಳಿವೆ.

15038022a ಮನುಷ್ಯಧರ್ಮೋ ದೈವೇನ ಧರ್ಮೇಣ ನ ಹಿ ಯುಜ್ಯತೇ|

15038022c ಇತಿ ಕುಂತಿ ವ್ಯಜಾನೀಹಿ ವ್ಯೇತು ತೇ ಮಾನಸೋ ಜ್ವರಃ||

ಮನುಷ್ಯಧರ್ಮವು ದೇವಧರ್ಮದೊಡನೆ ಸೇರುವುದಿಲ್ಲ. ಕುಂತಿ! ಇದನ್ನು ಅರ್ಥಮಾಡಿಕೊಂಡು ನಿನ್ನ ಮಾನಸಿಕ ಜ್ವರವನ್ನು ಕಳೆದುಕೋ!

15038023a ಸರ್ವಂ ಬಲವತಾಂ ಪಥ್ಯಂ ಸರ್ವಂ ಬಲವತಾಂ ಶುಚಿ|

15038023c ಸರ್ವಂ ಬಲವತಾಂ ಧರ್ಮಃ ಸರ್ವಂ ಬಲವತಾಂ ಸ್ವಕಮ್||

ಬಲವಂತರ ಎಲ್ಲವೂ ಒಳ್ಳೆಯದೇ! ಬಲವಂತರ ಎಲ್ಲವೂ ಶುಚಿಯಾದುದೇ! ಬಲವಂತರು ಮಾಡಿದ ಎಲ್ಲವೂ ಧರ್ಮ! ಮತ್ತು ಎಲ್ಲವೂ ಬಲವಂತರದ್ದೇ ಆಗಿರುತ್ತದೆ!""

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಪುತ್ರದರ್ಶನಪರ್ವಣಿ ವ್ಯಾಸಕುಂತೀಸಂವಾದೇ ಅಷ್ಟತ್ರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಪುತ್ರದರ್ಶನಪರ್ವದಲ್ಲಿ ವ್ಯಾಸಕುಂತೀಸಂವಾದ ಎನ್ನುವ ಮೂವತ್ತೆಂಟನೇ ಅಧ್ಯಾಯವು.

Related image

Comments are closed.