Aranyaka Parva: Chapter 76

ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ

೭೬

ಋತುಪರ್ಣನ ಸ್ವದೇಶ ಗಮನ

ನಲನು ಆಗಮಿಸಿದ ಸಂತಸವನ್ನು ನಗರವೇ ಆಚರಿಸುವುದು (೧-೭). ನಲ-ಋತುಪರ್ಣರು ಪರಸ್ಪರರಲ್ಲಿ ಕ್ಷಮೆ ಕೇಳಿ ಬೀಳ್ಕೊಂಡಿದುದು (೮-೧೭). ನಲನಿಂದ ಅಶ್ವವಿದ್ಯೆಯನ್ನು ಪಡೆದು, ಬೇರೊಬ್ಬ ಸಾರಥಿಯೊಂದಿಗೆ ಋತುಪರ್ಣನು ಮರಳಿದುದು (೧೮-೧೯).

03076001 ಬೃಹದಶ್ವ ಉವಾಚ|

03076001a ಅಥ ತಾಂ ವ್ಯುಷಿತೋ ರಾತ್ರಿಂ ನಲೋ ರಾಜಾ ಸ್ವಲಂಕೃತಃ|

03076001c ವೈದರ್ಭ್ಯಾ ಸಹಿತಃ ಕಾಲ್ಯಂ ದದರ್ಶ ವಸುಧಾಧಿಪಂ||

ಬೃಹದಶ್ವನು ಹೇಳಿದನು: “ಆ ರಾತ್ರಿಯನ್ನು ಕಳೆದ ನಂತರ ರಾಜ ನಲನು ಸ್ವಲಂಕೃತನಾಗಿ ವೈದರ್ಭಿಯ ಸಹಿತ ವಸುಧಾಧಿಪನನ್ನು ಕಂಡನು.

03076002a ತತೋಽಭಿವಾದಯಾಮಾಸ ಪ್ರಯತಃ ಶ್ವಶುರಂ ನಲಃ|

03076002c ತಸ್ಯಾನು ದಮಯಂತೀ ಚ ವವಂದೇ ಪಿತರಂ ಶುಭಾ||

ನಲನು ತನ್ನ ಮಾವನಿಗೆ ವಿನಯದಿಂದ ನಮಸ್ಕರಿಸಿದನು ಮತ್ತು ಅವನ ನಂತರದಲ್ಲಿ ಶುಭೆ ದಮಯಂತಿಯು ತಂದೆಗೆ ವಂದಿಸಿದಳು.

03076003a ತಂ ಭೀಮಃ ಪ್ರತಿಜಗ್ರಾಹ ಪುತ್ರವತ್ಪರಯಾ ಮುದಾ|

03076003c ಯಥಾರ್ಹಂ ಪೂಜಯಿತ್ವಾ ತು ಸಮಾಶ್ವಾಸಯತ ಪ್ರಭುಃ|

03076003e ನಲೇನ ಸಹಿತಾಂ ತತ್ರ ದಮಯಂತೀಂ ಪತಿವ್ರತಾಂ||

ಭೀಮನು ತನ್ನ ಮಗನೋ ಎನ್ನುವ ರೀತಿಯಲ್ಲಿ ಅವನನ್ನು ಸಂತೋಷದಿಂದ ಸ್ವಾಗತಿಸಿದನು ಮತ್ತು ತಕ್ಕುದಾದ ಗೌರವವನ್ನಿತ್ತನು. ನಲನ ಜೊತೆಗಿದ್ದ ಪತಿವ್ರತೆ ದಮಯಂತಿಯನ್ನು ಪ್ರಭುವು ಸಂತವಿಸಿದನು.

03076004a ತಾಮರ್ಹಣಾಂ ನಲೋ ರಾಜಾ ಪ್ರತಿಗೃಹ್ಯ ಯಥಾವಿಧಿ|

03076004c ಪರಿಚರ್ಯಾಂ ಸ್ವಕಾಂ ತಸ್ಮೈ ಯಥಾವತ್ಪ್ರತ್ಯವೇದಯತ್||

ಯಥಾವಿಧಿಯಲ್ಲಿ ಗೌರವವನ್ನು ಸ್ಪೀಕರಿಸಿ ರಾಜ ನಲನು ಅವನಿಗೆ ತನ್ನ ಗೌರವವನ್ನು ಅರ್ಪಿಸಿದನು.

03076005a ತತೋ ಬಭೂವ ನಗರೇ ಸುಮಹಾನ್ ಹರ್ಷನಿಸ್ವನಃ|

03076005c ಜನಸ್ಯ ಸಂಪ್ರಹೃಷ್ಟಸ್ಯ ನಲಂ ದೃಷ್ಟ್ವಾ ತಥಾಗತಂ||

ಈ ರೀತಿ ನಲನ ಆಗಮನವನ್ನು ನೋಡಿ ನಗರದಲ್ಲೆಲ್ಲಾ ಸಂಪ್ರಹೃಷ್ಟ ಜನರ ಮಹತ್ತರ ಹರ್ಷೋದ್ಗಾರವಾಯಿತು.

03076006a ಅಶೋಭಯಚ್ಚ ನಗರಂ ಪತಾಕಾಧ್ವಜಮಾಲಿನಂ|

03076006c ಸಿಕ್ತಸಮ್ಮೃಷ್ಟಪುಷ್ಪಾಢ್ಯಾ ರಾಜಮಾರ್ಗಾಃ ಕೃತಾಸ್ತದಾ||

ಪತಾಕ ಧ್ವಜ ಮಾಲೆಗಳಿಂದ ನಗರವು ಶೋಭೆಗೊಂಡಿತು. ರಾಜ ಮಾರ್ಗವು ಸಿಂಚಿಸಲ್ಪಟ್ಟಿತು ಮತ್ತು ಪುಷ್ಪಗಳಿಂದ ಹಾಸಿಸಲ್ಪಟ್ಟಿತು.

03076007a ದ್ವಾರಿ ದ್ವಾರಿ ಚ ಪೌರಾಣಾಂ ಪುಷ್ಪಭಂಗಃ ಪ್ರಕಲ್ಪಿತಃ|

03076007c ಅರ್ಚಿತಾನಿ ಚ ಸರ್ವಾಣಿ ದೇವತಾಯತನಾನಿ ಚ||

ಪೌರರ ದ್ವಾರ ದ್ವಾರಗಳಲ್ಲಿ ಪುಷ್ಪಗುಚ್ಚಗಳನ್ನು ಇಡಲಾಗಿತ್ತು ಮತ್ತು ಎಲ್ಲಾ ದೇವಾಲಯಗಳಲ್ಲಿ ಅರ್ಚನೆಗಳನ್ನು ಏರ್ಪಡಿಸಲಾಯಿತು.

03076008a ಋತುಪರ್ಣೋಽಪಿ ಶುಶ್ರಾವ ಬಾಹುಕಚ್ಚದ್ಮಿನಂ ನಲಂ|

03076008c ದಮಯಂತ್ಯಾ ಸಮಾಯುಕ್ತಂ ಜಹೃಷೇ ಚ ನರಾಧಿಪಃ||

ನರಾಧಿಪ ಋತುಪರ್ಣನೂ ಕೂಡ ಬಾಹುಕನು ವೇಷಬದಲಿಸಿ ನಲನಾಗಿದ್ದುದನ್ನು ಮತ್ತು ದಮಯಂತಿಯನ್ನು ಪುನಃ ಸೇರಿದುದನ್ನು ಕೇಳಿ ಬಹಳ ಹರ್ಷಿತನಾದನು.

03076009a ತಮಾನಾಯ್ಯ ನಲೋ ರಾಜಾ ಕ್ಷಮಯಾಮಾಸ ಪಾರ್ಥಿವಂ|

03076009c ಸ ಚ ತಂ ಕ್ಷಮಯಾಮಾಸ ಹೇತುಭಿರ್ಬುದ್ಧಿಸಮ್ಮತಃ||

ರಾಜ ನಲನು ಅವನನ್ನು ಕರೆಯಿಸಿ ಪಾರ್ಥಿವನ ಕ್ಷಮೆಯನ್ನು ಕೇಳಿದನು. ಅವನು ಕೂಡ ಬುದ್ಧಿಸಮ್ಮತ ಕಾರಣಗಳಿಗಾಗಿ ಕ್ಷಮಿಸಿದನು.

03076010a ಸ ಸತ್ಕೃತೋ ಮಹೀಪಾಲೋ ನೈಷಧಂ ವಿಸ್ಮಯಾನ್ವಿತಃ|

03076010c ದಿಷ್ಟ್ಯಾ ಸಮೇತೋ ದಾರೈಃ ಸ್ವೈರ್ಭವಾನಿತ್ಯಭ್ಯನಂದತ||

ಸತ್ಕೃತ ಮಹೀಪಾಲನು ವಿಸ್ಮಯಾನ್ವಿತನಾಗಿ ನೈಷಧನು ತನ್ನ ಪತ್ನಿಯನ್ನು ಪುನಃ ಸೇರಿದ್ದುದಕ್ಕಾಗಿ ಅಭಿನಂದಿಸಿದನು.

03076011a ಕಚ್ಚಿತ್ತು ನಾಪರಾಧಂ ತೇ ಕೃತವಾನಸ್ಮಿ ನೈಷಧ|

03076011c ಅಜ್ಞಾತವಾಸಂ ವಸತೋ ಮದ್ಗೃಹೇ ನಿಷಧಾಧಿಪ||

“ನೈಷಧ! ನಿಷಧಾಧಿಪ! ಅಜ್ಞಾತವಾಸಿಯಾಗಿ ನನ್ನ ಮನೆಯಲ್ಲಿ ವಾಸಿಸುತ್ತಿರುವಾಗ ನಿನಗೆ ಎನಾದರೂ ಅಪರಾಧವನ್ನು ಮಾಡಿರಬಹುದು.

03076012a ಯದಿ ವಾ ಬುದ್ಧಿಪೂರ್ವಾಣಿ ಯದ್ಯಬುದ್ಧಾನಿ ಕಾನಿ ಚಿತ್|

03076012c ಮಯಾ ಕೃತಾನ್ಯಕಾರ್ಯಾಣಿ ತಾನಿ ಮೇ ಕ್ಷಂತುಮರ್ಹಸಿ||

ಒಮ್ಮೆ ನಾನು ತಿಳಿದೋ ಅಥವಾ ತಿಳಿಯದೆಯೋ ನಿನಗೆ ನನ್ನಿಂದ ಎನಾದರೂ ತಪ್ಪಾಗಿದ್ದರೆ ನನ್ನನ್ನು ನೀನು ಕ್ಷಮಿಸ ತಕ್ಕದ್ದು.”

03076013 ನಲ ಉವಾಚ|

03076013a ನ ಮೇಽಪರಾಧಂ ಕೃತವಾಂಸ್ತ್ವಂ ಸ್ವಲ್ಪಮಪಿ ಪಾರ್ಥಿವ|

03076013c ಕೃತೇಽಪಿ ಚ ನ ಮೇ ಕೋಪಃ ಕ್ಷಂತವ್ಯಂ ಹಿ ಮಯಾ ತವ||

ನಲನು ಹೇಳಿದನು: “ಪಾರ್ಥಿವ! ನಿನ್ನಿಂದ ನನ್ನ ಮೇಲೆ ಸ್ವಲ್ಪವೂ ಅಪರಾಧವಾಗಲಿಲ್ಲ. ಒಮ್ಮೆ ಆಗಿದ್ದರೂ ನನಗೆ ಅದರ ಕುರಿತು ಕೋಪವಿಲ್ಲ.  ನಾನು ಅದನ್ನು ಕ್ಷಮಿಸಲೇ ಬೇಕು.

03076014a ಪೂರ್ವಂ ಹ್ಯಸಿ ಸಖಾ ಮೇಽಸಿ ಸಂಬಂಧೀ ಚ ನರಾಧಿಪ|

03076014c ಅತ ಊರ್ಧ್ವಂ ತು ಭೂಯಸ್ತ್ವಂ ಪ್ರೀತಿಮಾಹರ್ತುಮರ್ಹಸಿ||

ನರಾಧಿಪ! ಈ ಪೂರ್ವದಲ್ಲಿ ನೀನು ನನ್ನ ಸಖನೂ ಮತ್ತು ಸಂಬಂಧಿಯೂ ಆಗಿರುವೆ. ಇನ್ನು ಮುಂದೆಯೂ ಕೂಡ ನನ್ನ ಮೇಲೆ ನಿನ್ನ ಪ್ರೀತಿಯಿರತಕ್ಕದ್ದು.

03076015a ಸರ್ವಕಾಮೈಃ ಸುವಿಹಿತಃ ಸುಖಮಸ್ಮ್ಯುಷಿತಸ್ತ್ವಯಿ|

03076015c ನ ತಥಾ ಸ್ವಗೃಹೇ ರಾಜನ್ಯಥಾ ತವ ಗೃಹೇ ಸದಾ||

ರಾಜನ್! ನನ್ನ ಮನೆಯಲ್ಲಿಗಿಂತಲೂ ನಿನ್ನ ಮನೆಯಲ್ಲಿ ನನ್ನ ಎಲ್ಲ ಆಸೆಗಳೂ ವಿಹಿತವಾಗಿ ಸುಖವಾಗಿದ್ದೆ.

03076016a ಇದಂ ಚೈವ ಹಯಜ್ಞಾನಂ ತ್ವದೀಯಂ ಮಯಿ ತಿಷ್ಠತಿ|

03076016c ತದುಪಾಕರ್ತುಮಿಚ್ಚಾಮಿ ಮನ್ಯಸೇ ಯದಿ ಪಾರ್ಥಿವ||

ಪಾರ್ಥಿವ! ನಿನ್ನ ಅನುಮತಿಯಿದ್ದರೆ ನನ್ನಲ್ಲಿರುವ ಈ ಅಶ್ವಜ್ಞಾನವನ್ನು ನಿನಗೆ ಕೊಡಲು ಇಚ್ಚಿಸುತ್ತೇನೆ.””

03076017 ಬೃಹದಶ್ವ ಉವಾಚ|

03076017a ಏವಮುಕ್ತ್ವಾ ದದೌ ವಿದ್ಯಾಂ ಋತುಪರ್ಣಾಯ ನೈಷಧಃ|

03076017c ಸ ಚ ತಾಂ ಪ್ರತಿಜಗ್ರಾಹ ವಿಧಿದೃಷ್ಟೇನ ಕರ್ಮಣಾ||

ಬೃಹದಶ್ವನು ಹೇಳಿದನು: “ಹೀಗೆ ಹೇಳಿ ನೈಷಧನು ಋತುಪರ್ಣನಿಗೆ ವಿದ್ಯೆಯನ್ನಿತ್ತನು; ಮತ್ತು ಅವನು ಅದನ್ನು ವಿಧಿಕರ್ಮಪೂರಕವಾಗಿ ಸ್ವೀಕರಿಸಿದನು.

03076018a ತತೋ ಗೃಹ್ಯಾಶ್ವಹೃದಯಂ ತದಾ ಭಾಂಗಸ್ವರಿರ್ನೃಪಃ|

03076018c ಸೂತಮನ್ಯಮುಪಾದಾಯ ಯಯೌ ಸ್ವಪುರಮೇವ ಹಿ||

ಅಶ್ವಹೃದಯವನ್ನು ಪಡೆದ ನಂತರ ನೃಪ ಭಾಂಗಸ್ವರಿಯು ಬೇರೆ ಸೂತನೊಬ್ಬನನ್ನು ನಿಯೋಜಿಸಿ ತನ್ನ ನಗರಿಗೆ ತೆರಳಿದನು.

03076019a ಋತುಪರ್ಣೇ ಪ್ರತಿಗತೇ ನಲೋ ರಾಜಾ ವಿಶಾಂ ಪತೇ|

03076019c ನಗರೇ ಕುಂಡಿನೇ ಕಾಲಂ ನಾತಿದೀರ್ಘಮಿವಾವಸತ್||

ವಿಶಾಂಪತೇ! ಋತುಪರ್ಣನು ತೆರಳಿದ ನಂತರ ರಾಜ ನಲನು ಕುಂಡಿನೀ ನಗರದಲ್ಲಿ ದೀರ್ಘಕಾಲದವರೆಗೆ ವಾಸಿಸಲಿಲ್ಲ.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ಋತುಪರ್ಣಸ್ವದೇಶಗಮನೇ ಷಟ್‌ಸಪ್ತತಿತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ಋತುಪರ್ಣಸ್ವದೇಶಗಮನ ಎನ್ನುವ ಎಪ್ಪತ್ತಾರನೆಯ ಅಧ್ಯಾಯವು.

Related image

Comments are closed.