Aranyaka Parva: Chapter 66

ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ

೬೬

ದಮಯಂತಿಯ ಮಚ್ಚೆಯನ್ನು ನೋಡಿ ಅವಳು ತನ್ನ ತಂಗಿಯ ಮಗಳೆಂದು ಗುರುತಿಸಿದ (೧-೧೦) ರಾಜಮಾತೆಯು, ತಂದೆಯ ಮನೆಗೆ ಮಕ್ಕಳನ್ನು ನೋಡಲು ಹೋಗ ಬಯಸಿದ ಅವಳನ್ನು ಕಳುಹಿಸಿಕೊಟ್ಟಿದುದು (೧೧-೨೬).

03066001 ಸುದೇವ ಉವಾಚ|

03066001a ವಿದರ್ಭರಾಜೋ ಧರ್ಮಾತ್ಮಾ ಭೀಮೋ ಭೀಮಪರಾಕ್ರಮಃ|

03066001c ಸುತೇಯಂ ತಸ್ಯ ಕಲ್ಯಾಣೀ ದಮಯಂತೀತಿ ವಿಶ್ರುತಾ||

ಸುದೇವನು ಹೇಳಿದನು: “ಭೀಮಪರಾಕ್ರಮಿ ಧರ್ಮಾತ್ಮಾ ಭೀಮನು ವಿದರ್ಭದ ರಾಜ. ದಮಯಂತಿ ಎಂದು ವಿಶ್ರುತ ಕಲ್ಯಾಣಿ ಅವನ ಮಗಳು.

03066002a ರಾಜಾ ತು ನೈಷಧೋ ನಾಮ ವೀರಸೇನಸುತೋ ನಲಃ|

03066002c ಭಾರ್ಯೇಯಂ ತಸ್ಯ ಕಲ್ಯಾಣೀ ಪುಣ್ಯಶ್ಲೋಕಸ್ಯ ಧೀಮತಃ||

ರಾಜ ನೈಷಧನು ನಲ ಎಂಬ ಹೆಸರಿನ ವೀರಸೇನನ ಮಗ. ಆ ಧೀಮತ ಪುಣ್ಯಶ್ಲೋಕನ ಭಾರ್ಯೆಯೇ ಆ ಕಲ್ಯಾಣಿ.

03066003a ಸ ವೈ ದ್ಯೂತೇ ಜಿತೋ ಭ್ರಾತ್ರಾ ಹೃತರಾಜ್ಯೋ ಮಹೀಪತಿಃ|

03066003c ದಮಯಂತ್ಯಾ ಗತಃ ಸಾರ್ಧಂ ನ ಪ್ರಜ್ಞಾಯತ ಕರ್ಹಿ ಚಿತ್||

ಆ ಮಹೀಪತಿಯು ದ್ಯೂತದಲ್ಲಿ ಸಹೋದರನಿಂದ ಗೆಲ್ಲಲ್ಪಟ್ಟು, ರಾಜ್ಯವನ್ನು ಕಳಿದುಕೊಂಡು ದಮಯಂತಿಯೊಡಗೂಡಿ ಹೊರಟುಹೋದನು. ಅವನು ಎಲ್ಲಿಗೆ ಹೋದನೆಂದು ಯಾರಿಗೂ ತಿಳಿಯದು.

03066004a ತೇ ವಯಂ ದಮಯಂತ್ಯರ್ಥೇ ಚರಾಮಃ ಪೃಥಿವೀಮಿಮಾಂ|

03066004c ಸೇಯಮಾಸಾದಿತಾ ಬಾಲಾ ತವ ಪುತ್ರನಿವೇಶನೇ||

ದಮಯಂತಿಗೋಸ್ಕರವಾಗಿ ನಾವು ಈ ಪೃಥ್ವಿಯನ್ನೇ ತಿರುಗುತ್ತಿದ್ದೇವೆ. ಈಗ ನಿನ್ನ ಪುತ್ರನ ನಿವೇಶನದಲ್ಲಿ ಆ ಬಾಲಕಿಯನ್ನು ನೋಡಿದ್ದೇನೆ.

03066005a ಅಸ್ಯಾ ರೂಪೇಣ ಸದೃಶೀ ಮಾನುಷೀ ನೇಹ ವಿದ್ಯತೇ|

03066005c ಅಸ್ಯಾಶ್ಚೈವ ಭ್ರುವೋರ್ಮಧ್ಯೇ ಸಹಜಃ ಪಿಪ್ಲುರುತ್ತಮಃ|

03066005 ಶ್ಯಾಮಾಯಾಃ ಪದ್ಮಸಂಕಾಶೋ ಲಕ್ಷಿತೋಽಂತರ್ಹಿತೋ ಮಯಾ||

ರೂಪದಲ್ಲಿ ಇವಳ ಸದೃಶಳಾದ ಇನ್ನೊಬ್ಬ ಮಾನುಷಿಯಿಲ್ಲ. ಈ ಶ್ಯಾಮೆಯ ಹುಬ್ಬುಗಳ ಮಧ್ಯೆ ಸಹಜವಾದ ಉತ್ತಮವಾದ, ಪದ್ಮದ ಆಕಾರದ ಮಚ್ಚೆಯಿದ್ದುದನ್ನು ನಾನು ನೋಡಿದ್ದೆ; ಈಗ ಅದು ಕಾಣುತ್ತಿಲ್ಲ.

03066006a ಮಲೇನ ಸಂವೃತೋ ಹ್ಯಸ್ಯಾಸ್ತನ್ವಭ್ರೇಣೇವ ಚಂದ್ರಮಾಃ|

03066006c ಚಿಹ್ನಭೂತೋ ವಿಭೂತ್ಯರ್ಥಮಯಂ ಧಾತ್ರಾ ವಿನಿರ್ಮಿತಃ||

ಚಂದ್ರಮನು ಹಗುರಾದ ಮೋಡಗಳಿಂದ ಮುಚ್ಚಿಕೊಂಡಿರುವಂತೆ, ವಿಧಾತನು ವಿಭೂತಿ ಮತ್ತು ಐಶ್ವರ್ಯಗಳ ಚಿಹ್ನೆಯೆಂದು ಅವಳ ಮುಖದ ಮೇಲೆ ಇಟ್ಟ ಮಚ್ಚೆಯು ಕೊಳೆಯಿಂದ ಆವೃತವಾಗಿದೆ. 

03066007a ಪ್ರತಿಪತ್ಕಲುಷೇವೇಂದೋರ್ಲೇಖಾ ನಾತಿ ವಿರಾಜತೇ|

03066007c ನ ಚಾಸ್ಯಾ ನಶ್ಯತೇ ರೂಪಂ ವಪುರ್ಮಲಸಮಾಚಿತಂ|

03066007 ಅಸಂಸ್ಕೃತಮಪಿ ವ್ಯಕ್ತಂ ಭಾತಿ ಕಾಂಚನಸನ್ನಿಭಂ||

ಮೋಡ ಆವರಿಸಿದ ಅಮವಾಸ್ಯೆಯ ರಾತ್ರಿ ಚಂದ್ರನ ಹೊರ ನಕ್ಷೆ ಹೇಗೋ ಹಾಗೆ ಈಗ ಅದು ಸರಿಯಾಗಿ ಕಾಣುತ್ತಿಲ್ಲ. ಆದರೆ ಅವಳ ರೂಪವು ಸ್ಪಲ್ಪವೂ ನಶಿಸಿಲ್ಲ; ಅವಳು ಮಲಿನಳಾಗಿರಬಹುದು ಮತ್ತು ಏನೂ ಅಲಂಕಾರಗಳನ್ನು ಮಾಡಿಕೊಳ್ಳದೇ ಇರಬಹುದು. ಆದರೂ ನೋಡುವವರಿಗೆ ಅವಳು ಕಾಂಚನದಂತೆ ಬೆಳಗುತ್ತಿದ್ದಾಳೆ.

03066008a ಅನೇನ ವಪುಷಾ ಬಾಲಾ ಪಿಪ್ಲುನಾನೇನ ಚೈವ ಹ|

03066008c ಲಕ್ಷಿತೇಯಂ ಮಯಾ ದೇವೀ ಪಿಹಿತೋಽಗ್ನಿರಿವೋಷ್ಮಣಾ||

ಈ ದೇಹ ಮತ್ತು ಮಚ್ಚೆಯನ್ನು ನೋಡಿಯೇ ನಾನು ನನ್ನ ಬಾಲಕಿ ದೇವಿಯನ್ನು ಹೊಗೆಯಿಂದ ಮುಚ್ಚಿಕೊಂಡ ಬೆಂಕಿಯನ್ನು ಹೇಗೋ ಹಾಗೆ ಗುರುತಿಸಿದೆ.””

03066009 ಬೃಹದಶ್ವ ಉವಾಚ|

03066009a ತಚ್ಛೃತ್ವಾ ವಚನಂ ತಸ್ಯ ಸುದೇವಸ್ಯ ವಿಶಾಂ ಪತೇ|

03066009c ಸುನಂದಾ ಶೋಧಯಾಮಾಸ ಪಿಪ್ಲುಪ್ರಚ್ಚಾದನಂ ಮಲಂ||

ಬೃಹದಶ್ವನು ಹೇಳಿದನು: “ವಿಶಾಂಪತೆ! ಸುದೇವನ ಈ ಮಾತುಗಳನ್ನು ಕೇಳಿದ ಸುನಂದಳು ಆ ಮಚ್ಚೆಯನ್ನು ಮುಚ್ಚಿದ್ದ ಕೊಳೆಯನ್ನು ತೊಳೆಸಿದಳು.

03066010a ಸ ಮಲೇನಾಪಕೃಷ್ಟೇನ ಪಿಪ್ಲುಸ್ತಸ್ಯಾ ವ್ಯರೋಚತ|

03066010c ದಮಯಂತ್ಯಾಸ್ತದಾ ವ್ಯಭ್ರೇ ನಭಸೀವ ನಿಶಾಕರಃ||

03066011a ಪಿಪ್ಲುಂ ದೃಷ್ಟ್ವಾ ಸುನಂದಾ ಚ ರಾಜಮಾತಾ ಚ ಭಾರತ|

03066011c ರುದಂತ್ಯೌ ತಾಂ ಪರಿಷ್ವಜ್ಯ ಮುಹೂರ್ತಮಿವ ತಸ್ಥತುಃ|

03066011 ಉತ್ಸೃಜ್ಯ ಬಾಷ್ಪಂ ಶನಕೈ ರಾಜಮಾತೇದಮಬ್ರವೀತ್||

ಕೊಳೆಯನ್ನು ತೊಳೆದನಂತರ, ಮೋಡವಿಲ್ಲದ ಆಕಾಶದಲ್ಲಿ ನಿಶಾಕರನು ಹೊಳೆಯುವಂತೆ ದಮಯಂತಿಯ ಮಚ್ಚೆಯು ಕಾಣಿಸಿಕೊಂಡಿತು. ಭಾರತ! ಮಚ್ಚೆಯನ್ನು ನೋಡಿದ ಸುನಂದ ಮತ್ತು ರಾಜಮಾತೆಯು ಅವಳನ್ನು ಸ್ವಲ್ಪ ಹೊತ್ತು ಅಪ್ಪಿ ಹಿಡಿದು ರೋದಿಸಿದರು. ಕಣ್ಣೀರನ್ನು ಒರೆಸಿಕೊಂಡು ರಾಜಮಾತೆಯು ಮೃದುವಾಗಿ ಹೇಳಿದಳು:

03066012a ಭಗಿನ್ಯಾ ದುಹಿತಾ ಮೇಽಸಿ ಪಿಪ್ಲುನಾನೇನ ಸೂಚಿತಾ|

03066012c ಅಹಂ ಚ ತವ ಮಾತಾ ಚ ರಾಜನ್ಯಸ್ಯ ಮಹಾತ್ಮನಃ|

03066012 ಸುತೇ ದಶಾರ್ಣಾಧಿಪತೇಃ ಸುದಾಮ್ನಶ್ಚಾರುದರ್ಶನೇ||

“ನೀನು ನನ್ನ ತಂಗಿಯ ಮಗಳು. ನಿನ್ನ ಮಚ್ಚೆಯು ಸೂಚಿಸುತ್ತಿದೆ.  ಚಾರುದರ್ಶಿನೀ! ನಾನು ಮತ್ತು ನಿನ್ನ ತಾಯಿ ದಶಾರ್ಣಾಧಿಪತಿ ಮಹಾತ್ಮ ರಾಜ ಸುದಾಮನ ಪುತ್ರಿಯರು.

03066013a ಭೀಮಸ್ಯ ರಾಜ್ಞಃ ಸಾ ದತ್ತಾ ವೀರಬಾಹೋರಹಂ ಪುನಃ|

03066013c ತ್ವಂ ತು ಜಾತಾ ಮಯಾ ದೃಷ್ಟಾ ದಶಾರ್ಣೇಷು ಪಿತುರ್ಗೃಹೇ||

ಅವಳನ್ನು ಭೀಮರಾಜನಿಗೆ ಮತ್ತು ನನ್ನನ್ನು ವೀರಬಾಹುವಿಗೆ ಕೊಡಲಾಯಿತು. ನೀನು ಹುಟ್ಟಿದಾಗ ನಿನ್ನನ್ನು ನಾನು ನನ್ನ ತಂದೆಯ ಮನೆಯಲ್ಲಿ ನೋಡಿದ್ದೆ.

03066014a ಯಥೈವ ತೇ ಪಿತುರ್ಗೇಹಂ ತಥೇದಮಪಿ ಭಾಮಿನಿ|

03066014c ಯಥೈವ ಹಿ ಮಮೈಶ್ವರ್ಯಂ ದಮಯಂತಿ ತಥಾ ತವ||

ಭಾಮಿನಿ! ದಮಯಂತಿ! ಈ ಮನೆಯೂ ಕೂಡ ನಿನ್ನ ತಂದೆಯ ಮನೆ. ಮತ್ತು ನನ್ನ ಈ ಐಶ್ವರ್ಯವು ನಿನ್ನದಿದ್ದಂತೆಯೇ.”

03066015a ತಾಂ ಪ್ರಹೃಷ್ಟೇನ ಮನಸಾ ದಮಯಂತೀ ವಿಶಾಂ ಪತೇ|

03066015c ಅಭಿವಾದ್ಯ ಮಾತುರ್ಭಗಿನೀಮಿದಂ ವಚನಮಬ್ರವೀತ್||

ವಿಶಾಂಪತೇ! ಪ್ರಹೃಷ್ಟ ಮನಸ್ಕಳಾದ ದಮಯಂತಿಯು ತಾಯಿಯ ತಂಗಿಯನ್ನು ಅಭಿವಂದಿಸಿ ಈ ಮಾತುಗಳನ್ನು ಹೇಳಿದಳು:

03066016a ಅಜ್ಞಾಯಮಾನಾಪಿ ಸತೀ ಸುಖಮಸ್ಮ್ಯುಷಿತೇಹ ವೈ|

03066016c ಸರ್ವಕಾಮೈಃ ಸುವಿಹಿತಾ ರಕ್ಷ್ಯಮಾಣಾ ಸದಾ ತ್ವಯಾ||

“ನಾನು ಯಾರೆಂದು ಗುರುತಿಸಲ್ಪಡದಿದ್ದರೂ ಇಲ್ಲಿ ನಿನ್ನ ರಕ್ಷಣೆಯಲ್ಲಿ ನನ್ನ ಎಲ್ಲ ಬಯಕೆಗಳೂ ಪೂರೈಸಲ್ಪಟ್ಟು ನಾನು ಸದಾ ಸುಖವಾಗಿಯೇ ಇದ್ದೆ.

03066017a ಸುಖಾತ್ಸುಖತರೋ ವಾಸೋ ಭವಿಷ್ಯತಿ ನ ಸಂಶಯಃ|

03066017c ಚಿರವಿಪ್ರೋಷಿತಾಂ ಮಾತರ್ಮಾಮನುಜ್ಞಾತುಮರ್ಹಸಿ||

ಇನ್ನು ಮುಂದೆಯೂ ಇಲ್ಲಿ ನನ್ನ ವಾಸವು ಇನ್ನೂ ಸುಖಕರವಾಗಿರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಮಾತಾ! ಆದರೆ ನನಗೆ ಹೋಗಲು ಅನುಮತಿಯನ್ನು ಕೊಡಬೇಕು.

03066018a ದಾರಕೌ ಚ ಹಿ ಮೇ ನೀತೌ ವಸತಸ್ತತ್ರ ಬಾಲಕೌ|

03066018c ಪಿತ್ರಾ ವಿಹೀನೌ ಶೋಕಾರ್ತೌ ಮಯಾ ಚೈವ ಕಥಂ ನು ತೌ||

ನನ್ನ ಇಬ್ಬರು ಬಾಲಕ ಮಕ್ಕಳು ಅಲ್ಲಿ ವಾಸಿಸುತ್ತಿದ್ದಾರೆ. ಪಿತೃ ವಿಹೀನರಾಗಿ ಶೋಕಾರ್ತರಾದ ಅವರು ನಾನೂ ಇಲ್ಲದೇ ಹೇಗಿದ್ದಾರೋ!

03066019a ಯದಿ ಚಾಪಿ ಪ್ರಿಯಂ ಕಿಂ ಚಿನ್ಮಯಿ ಕರ್ತುಮಿಹೇಚ್ಚಸಿ|

03066019c ವಿದರ್ಭಾನ್ಯಾತುಮಿಚ್ಚಾಮಿ ಶೀಘ್ರಂ ಮೇ ಯಾನಮಾದಿಶ||

ನಾನು ವಿದರ್ಭಕ್ಕೆ ಹೋಗಲು ಬಯಸುತ್ತೇನೆ. ಇನ್ನೂ ನನಗೆ ಪ್ರಿಯವಾದುದ್ದನ್ನು ಮಾಡಬೇಕೆಂದೆನಿಸಿದರೆ, ಈಗಲೇ ಒಂದು ಯಾನವನ್ನು ತರಿಸಿಕೊಡು.”

03066020a ಬಾಢಮಿತ್ಯೇವ ತಾಮುಕ್ತ್ವಾ ಹೃಷ್ಟಾ ಮಾತೃಷ್ವಸಾ ನೃಪ|

03066020c ಗುಪ್ತಾಂ ಬಲೇನ ಮಹತಾ ಪುತ್ರಸ್ಯಾನುಮತೇ ತತಃ||

03066021a ಪ್ರಸ್ಥಾಪಯದ್ರಾಜಮಾತಾ ಶ್ರೀಮತಾ ನರವಾಹಿನಾ|

03066021c ಯಾನೇನ ಭರತಶ್ರೇಷ್ಠ ಸ್ವನ್ನಪಾನಪರಿಚ್ಚದಾಂ||

ನೃಪ! ಭರತಶ್ರೇಷ್ಠ! ಅವಳ ತಾಯಿಯ ಭಗಿನಿ ರಾಜಮಾತೆಯು ಹರ್ಷದಿಂದ ಖಂಡಿತ ಹಾಗೆಯೇ ಆಗಲಿ ಎಂದು ಪುತ್ರನ ಅನುಮತಿಯನ್ನು ಪಡೆದು ಪುರುಷರಿಂದ ಹೊರಲ್ಪಟ್ಟ, ಸಾಕಷ್ಟು ಅನ್ನ-ಪಾನ-ಸರಕುಗಳಿಂದ ತುಂಬಲ್ಪಟ್ಟ ಸುಂದರ ಪಲ್ಲಕ್ಕಿಯಲ್ಲಿ ದೊಡ್ಡ ದಂಡಿನೊಡನೆ ಅವಳನ್ನು ಕಳುಹಿಸಿಕೊಟ್ಟಳು.

03066022a ತತಃ ಸಾ ನಚಿರಾದೇವ ವಿದರ್ಭಾನಗಮಚ್ಶುಭಾ|

03066022c ತಾಂ ತು ಬಂಧುಜನಃ ಸರ್ವಃ ಪ್ರಹೃಷ್ಟಃ ಪ್ರತ್ಯಪೂಜಯತ್||

ಹೀಗೆ ಆ ಶುಭೆಯು ಅಲ್ಪ ಸಮಯದಲ್ಲಿಯೇ ವಿದರ್ಭಕ್ಕೆ ಆಗಮಿಸಿದಳು. ಅವಳ ಬಂಧು ಜನರೆಲ್ಲರೂ ಪ್ರಹೃಷ್ಟರಾಗಿ ಅವಳನ್ನು ಸ್ವಾಗತಿಸಿದರು.

03066023a ಸರ್ವಾನ್ಕುಶಲಿನೋ ದೃಷ್ಟ್ವಾ ಬಾಂಧವಾನ್ದಾರಕೌ ಚ ತೌ|

03066023c ಮಾತರಂ ಪಿತರಂ ಚೈವ ಸರ್ವಂ ಚೈವ ಸಖೀಜನಂ||

03066024a ದೇವತಾಃ ಪೂಜಯಾಮಾಸ ಬ್ರಾಹ್ಮಣಾಂಶ್ಚ ಯಶಸ್ವಿನೀ|

03066024c ವಿಧಿನಾ ಪರೇಣ ಕಲ್ಯಾಣೀ ದಮಯಂತೀ ವಿಶಾಂ ಪತೇ||

ವಿಶಾಂಪತೆ! ಮಕ್ಕಳು ಮತ್ತು ಮಾತಾ-ಪಿತರನ್ನೂ ಸೇರಿ ಎಲ್ಲ ಬಂಧುಗಳು ಮತ್ತು ಸಖಿಜನರು ಕುಶಲದಿಂದಿದ್ದಾರೆಂದು ನೋಡಿ ಯಶಸ್ವಿನಿ ಕಲ್ಯಾಣಿ ದಮಯಂತಿಯು ವಿಧಿವತ್ತಾಗಿ ಬ್ರಾಹ್ಮಣ-ದೇವತೆಗಳ ಪೂಜೆಗೈದಳು.

03066025a ಅತರ್ಪಯತ್ಸುದೇವಂ ಚ ಗೋಸಹಸ್ರೇಣ ಪಾರ್ಥಿವಃ|

03066025c ಪ್ರೀತೋ ದೃಷ್ಟ್ವೈವ ತನಯಾಂ ಗ್ರಾಮೇಣ ದ್ರವಿಣೇನ ಚ||

ಮಗಳನ್ನು ನೋಡಿ ಹರ್ಷಿತನಾದ ಪಾರ್ಥಿವನು ಸುದೇವನಿಗೆ ಗ್ರಾಮ, ದಕ್ಷಿಣೆ ಮತ್ತು ಸಹಸ್ರ ಗೋವುಗಳನ್ನಿತ್ತು ತೃಪ್ತಿಪಡಿಸಿದನು.

03066026a ಸಾ ವ್ಯುಷ್ಟಾ ರಜನೀಂ ತತ್ರ ಪಿತುರ್ವೇಶ್ಮನಿ ಭಾಮಿನೀ|

03066026c ವಿಶ್ರಾಂತಾ ಮಾತರಂ ರಾಜನ್ನಿದಂ ವಚನಮಬ್ರವೀತ್||

ರಾಜನ್! ಅಲ್ಲಿ ತಂದೆಯ ಮನೆಯಲ್ಲಿ ರಾತ್ರಿಯನ್ನು ಕಳೆದು ವಿಶ್ರಾಂತಿಹೊಂದಿದ ಭಾಮಿನಿಯು ತನ್ನ ಮಾತೆಯೊಡನೆ ಈ ಮಾತುಗಳನ್ನಾಡಿದಳು.

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ದಮಯಂತೀಸುದೇವ ಸಂವಾದೇ ಷಟ್‌ಷಷ್ಟಿತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ದಮಯಂತೀ-ಸುದೇವ ಸಂವಾದ ಎನ್ನುವ ಅರವತ್ತಾರನೆಯ ಅಧ್ಯಾಯವು.

Related image

Comments are closed.