Aranyaka Parva: Chapter 63

ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ

೬೩

ನಲ-ಕಾರ್ಕೋಟಕ

ದಮಯಂತಿಯನ್ನು ತೊರೆದ ರಾಜ ನಲನು ಗಹನ ವನದಲ್ಲಿ ಉರಿಯುತ್ತಿರುವ ಒಂದು ದೊಡ್ಡ ಕಾಡ್ಗಿಚ್ಚನ್ನು ಕಂಡು ಅದರಲ್ಲಿ ಸಿಲುಕಿರುವ ನಾಗ ಕಾರ್ಕೋಟಕನನ್ನು ಎತ್ತಿ ಹೊರತಂದು ಉಳಿಸಿದುದು (೧-೯). ಇನ್ನೂ ಮುಂದೆ ತೆಗೆದುಕೊಂಡು ಹೋಗೆಂದು ನಾಗವು ಹೇಳುವುದು, ನಲನು ಹಾಗೆಯೇ ಮಾಡಲು ಅವನನ್ನು ಕಾರ್ಕೋಟಕನು ಕಚ್ಚಿ ಕುರೂಪಿಯನ್ನಾಗಿಸಿದುದು (೧೦-೧೨). ಅವನ ದೇಹವನ್ನಾವರಿಸಿ ಕಾಡುತ್ತಿರುವನನ್ನು ಪೀಡಿಸಲು ಕಚ್ಚಿದೆನೆಂದೂ, ಕುರೂಪಿಯಾದ ಅವನನ್ನು ಯಾರೂ ಗುರುತಿಸಲಾರರೆಂದೂ, ಅಯೋಧ್ಯೆಯ ರಾಜ ಋತುಪರ್ಣನಿಂದ ಅಕ್ಷ ವಿದ್ಯೆಯನ್ನು ಕಲಿತನಂತರ ಅವನ ಕಷ್ಟಗಳು ಕೊನೆಗೊಳ್ಳುವವೆಂದೂ ಹೇಳಿ, ಪುನಃ ಸ್ವರೂಪವನ್ನು ಕೊಡಬಲ್ಲ ವಸ್ತ್ರಗಳನ್ನಿತ್ತು ಕಾರ್ಕೋಟಕನು ಅಂತರ್ಧಾನನಾದುದು (೧೩-೨೪).

Image result for nala and karkotaka03063001 ಬೃಹದಶ್ವ ಉವಾಚ|

03063001a ಉತ್ಸೃಜ್ಯ ದಮಯಂತೀಂ ತು ನಲೋ ರಾಜಾ ವಿಶಾಂ ಪತೇ|

03063001c ದದರ್ಶ ದಾವಂ ದಹ್ಯಂತಂ ಮಹಾಂತಂ ಗಹನೇ ವನೇ||

ಬೃಹದಶ್ವನು ಹೇಳಿದನು: “ವಿಶಾಂಪತೇ! ದಮಯಂತಿಯನ್ನು ತೊರೆದ ರಾಜ ನಲನು ಗಹನ ವನದಲ್ಲಿ ಉರಿಯುತ್ತಿರುವ ಒಂದು ದೊಡ್ಡ ಕಾಡ್ಗಿಚ್ಚನ್ನು ಕಂಡನು.

03063002a ತತ್ರ ಶುಶ್ರಾವ ಮಧ್ಯೇಽಗ್ನೌ ಶಬ್ಧಂ ಭೂತಸ್ಯ ಕಸ್ಯ ಚಿತ್|

03063002c ಅಭಿಧಾವ ನಲೇತ್ಯುಚ್ಚೈಃ ಪುಣ್ಯಶ್ಲೋಕೇತಿ ಚಾಸಕೃತ್||

ಕಿಚ್ಚಿನ ಮಧ್ಯದಿಂದ “ನಲ! ಇಲ್ಲಿಗೆ ಬಾ! ಪುಣ್ಯಶ್ಲೋಕ! ಬಾ!” ಎಂದು ಯಾವುದೋ ಜೀವಿಯು ಪುನಃ ಪುನಃ ಕರೆಯುವ ಶಬ್ಧವನ್ನು ಕೇಳಿದನು.

03063003a ಮಾ ಭೈರಿತಿ ನಲಶ್ಚೋಕ್ತ್ವಾ ಮಧ್ಯಮಗ್ನೇಃ ಪ್ರವಿಶ್ಯ ತಂ|

03063003c ದದರ್ಶ ನಾಗರಾಜಾನಂ ಶಯಾನಂ ಕುಂಡಲೀಕೃತಂ||

“ಭಯಪಡಬೇಡ!” ಎಂದು ಕೂಗಿ ಹೇಳುತ್ತಾ ನಲನು ಆ ಅಗ್ನಿಯನ್ನು ಪ್ರವೇಶಿಸಿ[1], ಮಧ್ಯದಲ್ಲಿ ಸುರುಳಿಸುತ್ತಿ ಮಲಗಿದ್ದ ನಾಗರಾಜನನ್ನು ಕಂಡನು.

03063004a ಸ ನಾಗಃ ಪ್ರಾಂಜಲಿರ್ಭೂತ್ವಾ ವೇಪಮಾನೋ ನಲಂ ತದಾ|

03063004c ಉವಾಚ ವಿದ್ಧಿ ಮಾಂ ರಾಜನ್ನಾಗಂ ಕರ್ಕೋಟಕಂ ನೃಪ||

ಆಗ ಆ ನಾಗವು ತರತರಿಸುತ್ತಾ ಅಂಜಲೀಬದ್ಧನಾಗಿ ನಲನನ್ನುದ್ದೇಶಿಸಿ ಮಾತನಾಡಿತು: “ನೃಪ! ನನ್ನನ್ನು ನಾಗರಾಜ ಕಾರ್ಕೋಟಕನೆಂದು ತಿಳಿ.

03063005a ಮಯಾ ಪ್ರಲಬ್ಧೋ ಬ್ರಹ್ಮರ್ಷಿರನಾಗಾಃ ಸುಮಹಾತಪಾಃ|

03063005c ತೇನ ಮನ್ಯುಪರೀತೇನ ಶಪ್ತೋಽಸ್ಮಿ ಮನುಜಾಧಿಪ||

ಮನುಜಾಧಿಪ! ಮಹಾತಪ ಮುಗ್ಧ ಬ್ರಾಹ್ಮಣನೊಬ್ಬನನ್ನು ನಾನು ಹಿಡಿದಿದ್ದೆ. ಕೋಪವಶನಾದ ಅವನಿಂದ ಶಪಿತನಾಗಿದ್ದೇನೆ.

03063006a ತಸ್ಯ ಶಾಪಾನ್ನ ಶಕ್ನೋಮಿ ಪದಾದ್ವಿಚಲಿತುಂ ಪದಂ|

03063006c ಉಪದೇಕ್ಷ್ಯಾಮಿ ತೇ ಶ್ರೇಯಸ್ತ್ರಾತುಮರ್ಹತಿ ಮಾಂ ಭವಾನ್||

ಅವನ ಶಾಪದಿಂದಾಗಿ ಈ ಜಾಗದಿಂದ ಸ್ವಲ್ಪ ದೂರ ಚಲಿಸಲೂ ಅಶಕ್ಯನಾಗಿದ್ದೇನೆ. ನೀನು ನನ್ನನ್ನು ಉಳಿಸಿದರೆ, ನಿನಗೆ ಶ್ರೇಯಸ್ಸಾಗುವ ಉಪದೇಶವನ್ನು ನೀಡುತ್ತೇನೆ.

03063007a ಸಖಾ ಚ ತೇ ಭವಿಷ್ಯಾಮಿ ಮತ್ಸಮೋ ನಾಸ್ತಿ ಪನ್ನಗಃ|

03063007c ಲಘುಶ್ಚ ತೇ ಭವಿಷ್ಯಾಮಿ ಶೀಘ್ರಮಾದಾಯ ಗಚ್ಚ ಮಾಂ||

ನಿನ್ನ ಸಖನಾಗಿರುವೆ. ನನ್ನಂತಹ ಪನ್ನಗವು ಇನ್ನೊಂದಿಲ್ಲ. ನಿನಗಾಗಿ ನಾನು ಹಗುರವಾಗುತ್ತೇನೆ. ಶೀಘ್ರವಾಗಿ ನನ್ನನ್ನು ಎತ್ತಿಕೊಂಡು ಹೋಗು!”

03063008a ಏವಮುಕ್ತ್ವಾ ಸ ನಾಗೇಂದ್ರೋ ಬಭೂವಾಂಗುಷ್ಠಮಾತ್ರಕಃ|

03063008c ತಂ ಗೃಹೀತ್ವಾ ನಲಃ ಪ್ರಾಯಾದುದ್ದೇಶಂ ದಾವವರ್ಜಿತಂ||

ಹೀಗೆ ಹೇಳಿದ ಆ ನಾಗೇಂದ್ರನು ಅಂಗುಷ್ಠಮಾತ್ರದಂತಾದನು. ನಲನು ಅವನನ್ನು ಎತ್ತಿ ಬೆಂಕಿಯು ಇಲ್ಲದೇ ಇರುವ ಸ್ಥಳಕ್ಕೆ ಕೊಂಡೊಯ್ದನು.

03063009a ಆಕಾಶದೇಶಮಾಸಾದ್ಯ ವಿಮುಕ್ತಂ ಕೃಷ್ಣವರ್ತ್ಮನಾ|

03063009c ಉತ್ಸ್ರಷ್ಟುಕಾಮಂ ತಂ ನಾಗಃ ಪುನಃ ಕರ್ಕೋಟಕೋಽಬ್ರವೀತ್||

ಸುಟ್ಟ ಕರಿಯಿಲ್ಲದೇ ಇರುವ ಜಾಗಕ್ಕೆ ಬಂದು ಆ ನಾಗನನ್ನು ಕೆಳಗಿಡುವಷ್ಟರಲ್ಲಿಯೇ ಕಾರ್ಕೋಟಕನು ಪುನಃ ಹೇಳಿದನು:

03063010a ಪದಾನಿ ಗಣಯನ್ಗಚ್ಚ ಸ್ವಾನಿ ನೈಷಧ ಕಾನಿ ಚಿತ್|

03063010c ತತ್ರ ತೇಽಹಂ ಮಹಾರಾಜ ಶ್ರೇಯೋ ಧಾಸ್ಯಾಮಿ ಯತ್ಪರಂ||

“ನಿಷಾಧ! ಹೆಜ್ಜೆಗಳನ್ನು ಎಣಿಸುತ್ತಾ ಇನ್ನೂ ಸ್ವಲ್ಪ ಮುಂದೆ ಹೋಗು. ಮಹಾರಾಜ! ಅಲ್ಲಿ ನಿನಗೆ ಪರಮ ಶ್ರೇಯವಾದದ್ದನ್ನು ಕೊಡುತ್ತೇನೆ.”

03063011a ತತಃ ಸಂಖ್ಯಾತುಮಾರಬ್ಧಮದಶದ್ದಶಮೇ ಪದೇ|

03063011c ತಸ್ಯ ದಷ್ಟಸ್ಯ ತದ್ರೂಪಂ ಕ್ಷಿಪ್ರಮಂತರಧೀಯತ||

ಎಣಿಸುತ್ತಿದ್ದಂತೆಯೇ, ಹತ್ತನೇ ಹೆಜ್ಜೆಯಲ್ಲಿ ನಾಗನು ನಲನನ್ನು ಕಚ್ಚಿಬಿಟ್ಟನು. ಕಚ್ಚಿದಾಕ್ಷಣ ರೂಪವು ಕ್ಷಣದಲ್ಲಿ ಬದಲಾಗಿ ಹೋಯಿತು.

03063012a ಸ ದೃಷ್ಟ್ವಾ ವಿಸ್ಮಿತಸ್ತಸ್ಥಾವಾತ್ಮಾನಂ ವಿಕೃತಂ ನಲಃ|

03063012c ಸ್ವರೂಪಧಾರಿಣಂ ನಾಗಂ ದದರ್ಶ ಚ ಮಹೀಪತಿಃ||

ಮಹೀಪತಿ ನಲನು ತಾನು ವಿಕೃತನಾಗಿರುವುದನ್ನು ನೋಡಿ ವಿಸ್ಮಿತನಾಗಿ ನಿಂತನು ಮತ್ತು ಸ್ವರೂಪಧಾರಣ ಮಾಡಿದ ನಾಗನನ್ನು ನೋಡಿದನು.

03063013a ತತಃ ಕರ್ಕೋಟಕೋ ನಾಗಃ ಸಾಂತ್ವಯನ್ನಲಮಬ್ರವೀತ್|

03063013c ಮಯಾ ತೇಽಂತರ್ಹಿತಂ ರೂಪಂ ನ ತ್ವಾ ವಿದ್ಯುರ್ಜನಾ ಇತಿ||

ಆಗ ನಾಗ ಕಾರ್ಕೋಟಕನು ನಲನನ್ನು ಸಂತವಿಸುತ್ತಾ ಹೇಳಿದನು: “ಜನರು ನಿನ್ನನ್ನು ಗುರುತಿಸಬಾರದೆಂದು ನಾನು ನಿನ್ನ ರೂಪವನ್ನು ಅಪಹರಿಸಿದ್ದೇನೆ.

03063014a ಯತ್ಕೃತೇ ಚಾಸಿ ವಿಕೃತೋ ದುಃಖೇನ ಮಹತಾ ನಲ|

03063014c ವಿಷೇಣ ಸ ಮದೀಯೇನ ತ್ವಯಿ ದುಃಖಂ ನಿವತ್ಸ್ಯತಿ||

ನಲ! ಯಾರಿಂದ ನೀನು ಈ ಮಹಾ ದುಃಖವನ್ನು ಅನುಭವಿಸುತ್ತಿದ್ದೀಯೋ, ಯಾರು ನಿನ್ನ ದೇಹದಲ್ಲಿ ವಾಸಿಸುತ್ತಿದ್ದನೋ ಅವನು ನನ್ನ ಈ ವಿಷದಿಂದ ದುಃಖವನ್ನು ಅನುಭವಿಸುತ್ತಾನೆ.

03063015a ವಿಷೇಣ ಸಂವೃತೈರ್ಗಾತ್ರೈರ್ಯಾವತ್ತ್ವಾಂ ನ ವಿಮೋಕ್ಷ್ಯತಿ|

03063015c ತಾವತ್ತ್ವಯಿ ಮಹಾರಾಜ ದುಃಖಂ ವೈ ಸ ನಿವತ್ಸ್ಯತಿ||

ಎಲ್ಲಿಯವರೆಗೆ ನಿನ್ನನ್ನು ಬಿಡುವುದಿಲ್ಲವೋ ಅಲ್ಲಿಯ ವರೆಗೆ ಅವನು ನಿನ್ನಲ್ಲಿದ್ದು ದೇಹವನ್ನೆಲ್ಲಾ ಆವರಿಸಿರುವ ಈ ವಿಷದಿಂದ ದುಃಖಿತನಾಗಿರುವನು.

03063016a ಅನಾಗಾ ಯೇನ ನಿಕೃತಸ್ತ್ವಮನರ್ಹೋ ಜನಾಧಿಪ|

03063016c ಕ್ರೋಧಾದಸೂಯಯಿತ್ವಾ ತಂ ರಕ್ಷಾ ಮೇ ಭವತಃ ಕೃತಾ||

ಜನಾಧಿಪ! ಕ್ರೋಧ ಅಸೂಯೆಗೊಳಗಾಗಿ ಯಾರು ಮುಗ್ಧನೂ ಕಷ್ಟಗಳಿಗೆ ಅನರ್ಹನೂ ಆದ ನಿನಗೆ ಮೋಸಮಾಡಿದನೋ ಅವನಿಂದ ನಿನ್ನನ್ನು ನಾನು ರಕ್ಷಿಸುತ್ತೇನೆ.

03063017a ನ ತೇ ಭಯಂ ನರವ್ಯಾಘ್ರ ದಂಷ್ಟ್ರಿಭ್ಯಃ ಶತ್ರುತೋಽಪಿ ವಾ|

03063017c ಬ್ರಹ್ಮವಿದ್ಭ್ಯಶ್ಚ ಭವಿತಾ ಮತ್ಪ್ರಸಾದಾನ್ನರಾಧಿಪ||

ನರವ್ಯಾಘ್ರ! ನರಾಧಿಪ! ನನ್ನ ವರದಿಂದ ನೀನು ಯಾವ ಮೃಗಗಳಿಂದಲೂ, ಶತೃಗಳಿಂದಲೂ ಮತ್ತು ಬ್ರಹ್ಮವಿದರಿಂದಲೂ ಭಯಪಡಬೇಕಾಗಿಲ್ಲ.

03063018a ರಾಜನ್ವಿಷನಿಮಿತ್ತಾ ಚ ನ ತೇ ಪೀಡಾ ಭವಿಷ್ಯತಿ|

03063018c ಸಂಗ್ರಾಮೇಷು ಚ ರಾಜೇಂದ್ರ ಶಶ್ವಜ್ಜಯಮವಾಪ್ಸ್ಯಸಿ||

ರಾಜನ್! ಈ ವಿಷದಿಂದಾಗಿ ನಿನಗೆ ಯಾವುದೇ ರೀತಿಯ ಪೀಡೆಯೂ ಆಗುವುದಿಲ್ಲ. ಸಂಗ್ರಾಮಗಳಲ್ಲಿ ನೀನು ಯಾವತ್ತೂ ಜಯವನ್ನು ಗಳಿಸುವೆ.

03063019a ಗಚ್ಚ ರಾಜನ್ನಿತಃ ಸೂತೋ ಬಾಹುಕೋಽಹಮಿತಿ ಬ್ರುವನ್|

03063019c ಸಮೀಪಮೃತುಪರ್ಣಸ್ಯ ಸ ಹಿ ವೇದಾಕ್ಷನೈಪುಣಂ|

03063019e ಅಯೋಧ್ಯಾಂ ನಗರೀಂ ರಮ್ಯಾಮದ್ಯೈವ ನಿಷಧೇಶ್ವರ||

ರಾಜ! ನೀನೊಬ್ಬ ಬಾಹುಕ ಎಂಬ ಹೆಸರಿನ ಸೂತ ಎಂದು ಹೇಳಿಕೊಂಡು ಇಲ್ಲಿಂದ ಅಕ್ಷವಿದ್ಯ ನಿಪುಣನಾದ ಋತುಪರ್ಣನೆಡೆಗೆ ಹೋಗು. ನಿಷಧೇಶ್ವರ! ರಮ್ಯ ಅಯೋಧ್ಯಾ ನಗರಿಗೆ ಇಂದೇ ಹೊರಡು.  

03063020a ಸ ತೇಽಕ್ಷಹೃದಯಂ ದಾತಾ ರಾಜಾಶ್ವಹೃದಯೇನ ವೈ|

03063020c ಇಕ್ಷ್ವಾಕುಕುಲಜಃ ಶ್ರೀಮಾನ್ಮಿತ್ರಂ ಚೈವ ಭವಿಷ್ಯತಿ||

ಆ ರಾಜನು ನಿನ್ನ ಅಶ್ವನೈಪುಣ್ಯತೆಗೆ ಬದಲಾಗಿ ನಿನಗೆ ಅಕ್ಷ ನೈಪುಣ್ಯತೆಯನ್ನು ನೀಡುತ್ತಾನೆ. ಆ ಶ್ರೀಮಾನ್ ಇಕ್ಷ್ವಾಕುಕುಲಜನು ನಿನ್ನ ಮಿತ್ರನಾಗುತ್ತಾನೆ.

03063021a ಭವಿಷ್ಯಸಿ ಯದಾಕ್ಷಜ್ಞಃ ಶ್ರೇಯಸಾ ಯೋಕ್ಷ್ಯಸೇ ತದಾ|

03063021c ಸಮೇಷ್ಯಸಿ ಚ ದಾರೈಸ್ತ್ವಂ ಮಾ ಸ್ಮ ಶೋಕೇ ಮನಃ ಕೃಥಾಃ|

03063021e ರಾಜ್ಯೇನ ತನಯಾಭ್ಯಾಂ ಚ ಸತ್ಯಮೇತದ್ಬ್ರವೀಮಿ ತೇ||

ಯಾವಾಗ ನೀನು ಅಕ್ಷ ವಿದ್ಯೆಯನ್ನು ಪಡೆಯುತ್ತೀಯೋ ಆ ನಂತರ ಶ್ರೇಯಸ್ಸು, ಪತ್ನಿ, ರಾಜ್ಯ ಮತ್ತು ಮಕ್ಕಳೀರ್ವರನ್ನೂ ಪುನಃ ಪಡೆಯುತ್ತೀಯೆ. ನಿನ್ನ ಮನಸ್ಸಿನಿಂದ ಶೋಕವನ್ನು ಹೊರಹಾಕು. ನಾನು ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ.

03063022a ಸ್ವರೂಪಂ ಚ ಯದಾ ದ್ರಷ್ಟುಮಿಚ್ಚೇಥಾಸ್ತ್ವಂ ನರಾಧಿಪ|

03063022c ಸಂಸ್ಮರ್ತವ್ಯಸ್ತದಾ ತೇಽಹಂ ವಾಸಶ್ಚೇದಂ ನಿವಾಸಯೇಃ||

03063023a ಅನೇನ ವಾಸಸಾಚ್ಚನ್ನಃ ಸ್ವರೂಪಂ ಪ್ರತಿಪತ್ಸ್ಯಸೇ|

03063023c ಇತ್ಯುಕ್ತ್ವಾ ಪ್ರದದಾವಸ್ಮೈ ದಿವ್ಯಂ ವಾಸೋಯುಗಂ ತದಾ||

ನರಾಧಿಪ! ಯಾವಾಗ ನಿನಗೆ ನಿನ್ನ ಸ್ವರೂಪವನ್ನು ಪಡೆಯಲು ಮನಸ್ಸಾಗುತ್ತದೆಯೋ ಅವಾಗ ನನ್ನನ್ನು ನೆನಪಿಸಿಕೋ ಮತ್ತು ಈ ವಸ್ತ್ರವನ್ನು ಧರಿಸು. ಈ ವಸ್ತ್ರವನ್ನು ಧರಿಸಿದ ಕೂಡಲೇ ನೀನು ನಿನ್ನ ಸ್ವರೂಪವನ್ನು ಪುನಃ ಹೊಂದುತ್ತೀಯೆ!” ಹೀಗೆ ಹೇಳಿ ಒಂದು ಜೊತೆ ದಿವ್ಯವಸ್ತ್ರಗಳನ್ನು ಅವನಿಗಿತ್ತನು.

03063024a ಏವಂ ನಲಂ ಸಮಾದಿಶ್ಯ ವಾಸೋ ದತ್ತ್ವಾ ಚ ಕೌರವ|

03063024c ನಾಗರಾಜಸ್ತತೋ ರಾಜಂಸ್ತತ್ರೈವಾಂತರಧೀಯತ||

ಕೌರವ! ಈ ರೀತಿ ನಲನಿಗೆ ಆದೇಶ ಮತ್ತು ವಸ್ತ್ರಗಳನ್ನಿತ್ತು ಆ ನಾಗರಾಜನು ಅಲ್ಲಿಯೇ ಅಂತರ್ಧಾನನಾದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ನಲಕರ್ಕೋಟಕಸಂವಾದೇ ತ್ರಿಷಷ್ಟಿತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ನಲಕರ್ಕೋಟಕ ಸಂವಾದ ಎನ್ನುವ ಅರವತ್ತ್ಮೂರನೆಯ ಅಧ್ಯಾಯವು.

Related image

[1]ಉರಿಯುತ್ತಿರುವ ಅಗ್ನಿಯಲ್ಲಿ ಪ್ರವೇಶಿಸಬಲ್ಲನೆಂಬ ಅಗ್ನಿಯ ವರವಿತ್ತು.

Comments are closed.