Aranyaka Parva: Chapter 62

ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ

೬೨

ಚೇದಿನಗರದಲ್ಲಿ ದಮಯಂತಿ

ಸರೋವರವೊಂದರ ಬಳಿ ರಾತ್ರಿ ಮಲಗಿರುವಾಗ ಆನೆಗಳ ಹಿಂಡೊಂದು ಬಂದು ದಂಡನ್ನು ನಾಶಗೊಳಿದುದು (೧-೧೧). ದಮಯಂತಿಯು ವಿಲಪಿಸುತ್ತಾ ಬ್ರಾಹ್ಮಣರೊಡಗೂಡಿ ಪ್ರಯಾಣಿಸಿ ಚೇದಿಪುರವನ್ನು ಪ್ರವೇಶಿಸಿದುದು (೧೨-೧೮). ಕರೆಯಿಸಿ ಕೇಳಿದ ರಾಜಮಾತೆಗೆ ದಮಯಂತಿಯು ತನ್ನ ಕಷ್ಟಗಳನ್ನು ಹೇಳಿಕೊಂಡಿದುದು (೧೯-೩೪). ದಮಯಂತಿಯ ವ್ರತ-ನಿಬಂಧನೆಗಳಿಗೆ ಒಪ್ಪಿಕೊಂಡು ರಾಜಮಾತೆಯು ಅವಳನ್ನು ತನ್ನ ಮಗಳು ಸುನಂದೆಯಲ್ಲಿ ಇರಿಸುವುದು (೨೫-೪೩).

03062001 ಬೃಹದಶ್ವ ಉವಾಚ|

03062001a ಸಾ ತಚ್ಶ್ರುತ್ವಾನವದ್ಯಾಂಗೀ ಸಾರ್ಥವಾಹವಚಸ್ತದಾ|

03062001c ಅಗಚ್ಚತ್ತೇನ ವೈ ಸಾರ್ಧಂ ಭರ್ತೃದರ್ಶನಲಾಲಸಾ||

ಬೃಹದಶ್ವನು ಹೇಳಿದನು: “ಆ ಅನವದ್ಯಾಂಗಿಯು ದಂಡಿನ ನಾಯಕನ ಮಾತುಗಳನ್ನು ಕೇಳಿ ತನ್ನ ಪತಿಯನ್ನು ಕಾಣುವ ಆಸೆಯಿಂದ ಅವನ ಜೊತೆ ನಡೆದಳು.

03062002a ಅಥ ಕಾಲೇ ಬಹುತಿಥೇ ವನೇ ಮಹತಿ ದಾರುಣೇ|

03062002c ತಡಾಗಂ ಸರ್ವತೋಭದ್ರಂ ಪದ್ಮಸೌಗಂಧಿಕಂ ಮಹತ್||

03062003a ದದೃಶುರ್ವಣಿಜೋ ರಮ್ಯಂ ಪ್ರಭೂತಯವಸೇಂಧನಂ|

03062003c ಬಹುಮೂಲಫಲೋಪೇತಂ ನಾನಾಪಕ್ಷಿಗಣೈರ್ವೃತಂ||

ಕಾಲಾನಂತರದಲ್ಲಿ ಆ ವರ್ತಕರು ದಾರುಣ ಮಹಾ ವನದಲ್ಲಿ ಸರ್ವತೋಭದ್ರವಾದ, ದಡದಲ್ಲಿ ಸಾಕಷ್ಟು ಹುಲ್ಲು, ಕಟ್ಟಿಗೆ, ಫಲ-ಗಡ್ಡೆಗಳನ್ನು ಹೊಂದಿದ್ದ, ನಾನಾ ಪಕ್ಷಿಗಳು ಮತ್ತು ಪದ್ಮಸೌಗಂಧಿಕಗಳಿಂದೊಡಗೂಡಿದ ಒಂದು ವಿಶಾಲ, ರಮ್ಯ ಸರೋವರವನ್ನು ಕಂಡರು.

03062004a ತಂ ದೃಷ್ಟ್ವಾ ಮೃಷ್ಟಸಲಿಲಂ ಮನೋಹರಸುಖಾವಹಂ|

03062004c ಸುಪರಿಶ್ರಾಂತವಾಹಾಸ್ತೇ ನಿವೇಶಾಯ ಮನೋ ದಧುಃ||

ಸಂತೋಷವನ್ನು ನೀಡುವ ಆ ಮನೋಹರ ಶುದ್ಧ ನೀರನ್ನು ನೋಡಿ, ಪ್ರಾಣಿಗಳು ದಣಿದಿದ್ದರಿಂದ, ಅಲ್ಲೇ ತಂಗಲು ನಿರ್ಧರಿಸಿದರು.

03062005a ಸಮ್ಮತೇ ಸಾರ್ಥವಾಹಸ್ಯ ವಿವಿಶುರ್ವನಮುತ್ತಮಂ|

03062005c ಉವಾಸ ಸಾರ್ಥಃ ಸುಮಹಾನ್ವೇಲಾಮಾಸಾದ್ಯ ಪಶ್ಚಿಮಾಂ||

ದಂಡಿನ ನಾಯಕನ ಅನುಮತಿಯಂತೆ ಆ ಉತ್ತಮ ವನವನ್ನು ಪ್ರವೇಶಿಸಿದ ದಂಡು ಆ ರಾತ್ರಿಯನ್ನು ಅಲ್ಲೇ ಕಳೆಯಲು ತಯಾರಿಮಾಡಿತು.

03062006a ಅಥಾರ್ಧರಾತ್ರಸಮಯೇ ನಿಃಶಬ್ದಸ್ತಿಮಿತೇ ತದಾ|

03062006c ಸುಪ್ತೇ ಸಾರ್ಥೇ ಪರಿಶ್ರಾಂತೇ ಹಸ್ತಿಯೂಥಮುಪಾಗಮತ್|

03062006e ಪಾನೀಯಾರ್ಥಂ ಗಿರಿನದೀಂ ಮದಪ್ರಸ್ರವಣಾವಿಲಾಂ||

ಅರ್ಧರಾತ್ರಿಯ ಸಮಯದಲ್ಲಿ, ನಿಃಶಬ್ಧರಾಗಿ ದಂಡಿನ ಎಲ್ಲರೂ ಮಲಗಿರುವ ಸಮಯದಲ್ಲಿ, ಆನೆಗಳ ಗುಂಪೊಂದು ಆ ಗಿರಿನದಿಯಲ್ಲಿ ನೀರು ಕುಡಿಯಲೆಂದು ಬಂದಿತು.

03062007a ಮಾರ್ಗಂ ಸಂರುಧ್ಯ ಸಂಸುಪ್ತಂ ಪದ್ಮಿನ್ಯಾಃ ಸಾರ್ಥಮುತ್ತಮಂ|

03062007c ಸುಪ್ತಂ ಮಮರ್ದ ಸಹಸಾ ಚೇಷ್ಟಮಾನಂ ಮಹೀತಲೇ||

ಪದ್ಮಗಳಿದ್ದ ಸರೋವರದ ಮಾರ್ಗವನ್ನು ತಡೆಹಿಡಿದು ಮಲಗಿದ್ದ ಆ ಉತ್ತಮ ದಂಡನ್ನು ಅವುಗಳ ಗುಂಪು ತುಳಿದಾಡಿತು. ಮತ್ತು ಮಲಗಿದ್ದವರೆಲ್ಲ ನೆಲದಮೇಲೆ ಒದ್ದಾಡತೊಡಗಿದರು.

03062008a ಹಾಹಾರವಂ ಪ್ರಮುಂಚಂತಃ ಸಾರ್ಥಿಕಾಃ ಶರಣಾರ್ಥಿನಃ|

03062008c ವನಗುಲ್ಮಾಂಶ್ಚ ಧಾವಂತೋ ನಿದ್ರಾಂಧಾ ಮಹತೋ ಭಯಾತ್|

03062008e ಕೇ ಚಿದ್ದಂತೈಃ ಕರೈಃ ಕೇ ಚಿತ್ಕೇ ಚಿತ್ಪದ್ಭ್ಯಾಂ ಹತಾ ನರಾಃ||

ಹಾಹಾಕಾರ ಮಾಡುತ್ತಾ ಶರಣಾರ್ಥಿಗಳಾದ ವರ್ತಕರು, ಇನ್ನೂ ನಿದ್ದೆಯಿಂದ ಕುರುಡರಾಗಿ, ಮಹತ್ತರ ಭಯದಿಂದ ತಪ್ಪಿಸಿಕೊಳ್ಳಲು ವನದಲ್ಲಿನ ಗಿಡಗಂಟಿಗಳ ಹಿಂದೆ ಓಡಿದರು. ಕೆಲವರು ದಂತಗಳಿಂದ ಸೀಳಿಹೋದರು, ಇನ್ನು ಕೆಲವರು ತುಳಿಯಲ್ಪಟ್ಟು ಹತರಾದರು.

03062009a ಗೋಖರೋಷ್ಟ್ರಾಶ್ವಬಹುಲಂ ಪದಾತಿಜನಸಂಕುಲಂ|

03062009c ಭಯಾರ್ತಂ ಧಾವಮಾನಂ ತತ್ಪರಸ್ಪರಹತಂ ತದಾ||

ಎತ್ತು, ಕತ್ತೆ, ಒಂಟೆ, ಕುದುರೆ ಮತ್ತು ಕಾಲ್ದಾಳುಗಳ ಸಂಕುಲವು ಭಯದಿಂದ ಓಡುತ್ತಿದ್ದಾಗ ಪರಸ್ಪರರನ್ನು ಕೊಂದು ಹಾಕಿದವು.

03062010a ಘೋರಾನ್ನಾದಾನ್ವಿಮುಂಚಂತೋ ನಿಪೇತುರ್ಧರಣೀತಲೇ|

03062010c ವೃಕ್ಷೇಷ್ವಾಸಜ್ಯ ಸಂಭಗ್ನಾಃ ಪತಿತಾ ವಿಷಮೇಷು ಚ|

03062010e ತಥಾ ತನ್ನಿಹತಂ ಸರ್ವಂ ಸಮೃದ್ಧಂ ಸಾರ್ಥಮಂಡಲಂ||

ಘೋರವಾಗಿ ಕೂಗುತ್ತಾ ಧರಣೀತಲದಲ್ಲಿ ಬಿದ್ದರು. ಭಗ್ನವಾದ ಅಂಗಗಳಿಂದ ವೃಕ್ಷಗಳನ್ನು ಹಿಡಿದು ಕಣಿವೆಗಳಲ್ಲಿ ಬಿದ್ದರು. ಹೀಗೆ ವರ್ತಕರ ಆ ಸಮೃದ್ಧ ಮಂಡಲವೆಲ್ಲವೂ ನಿಹತವಾಯಿತು.

03062011a ಅಥಾಪರೇದ್ಯುಃ ಸಂಪ್ರಾಪ್ತೇ ಹತಶಿಷ್ಟಾ ಜನಾಸ್ತದಾ|

03062011c ವನಗುಲ್ಮಾದ್ವಿನಿಷ್ಕ್ರಮ್ಯ ಶೋಚಂತೋ ವೈಶಸಂ ಕೃತಂ|

03062011e ಭ್ರಾತರಂ ಪಿತರಂ ಪುತ್ರಂ ಸಖಾಯಂ ಚ ಜನಾಧಿಪ||

ಜನಾಧಿಪ! ಬೆಳಕು ಹರಿಯುತ್ತಿದ್ದಂತೆ ಸಾವಿನಿಂದ ಬದುಕಿದ ಜನರು ಗಿಡ ಮಟ್ಟಿಗಳಿಂದ ಹೊರಬಂದು ಎಲ್ಲರ ಹತ್ಯೆಯನ್ನು ಕಂಡು “ಸಹೋದರ! ತಂದೇ! ಪುತ್ರ! ಸಖಾ!” ಎಂದು ಶೋಕಿಸಿದರು.

03062012a ಅಶೋಚತ್ತತ್ರ ವೈದರ್ಭೀ ಕಿಂ ನು ಮೇ ದುಷ್ಕೃತಂ ಕೃತಂ|

03062012c ಯೋಽಪಿ ಮೇ ನಿರ್ಜನೇಽರಣ್ಯೇ ಸಂಪ್ರಾಪ್ತೋಽಯಂ ಜನಾರ್ಣವಃ|

03062012e ಹತೋಽಯಂ ಹಸ್ತಿಯೂಥೇನ ಮಂದಭಾಗ್ಯಾನ್ಮಮೈವ ತು||

“ನಾನೇನು ದುಷ್ಕೃತವನ್ನು ಮಾಡಿದ್ದೇನೆಂದು ಈ ನಿರ್ಜನ ಅರಣ್ಯದಲ್ಲಿ ಈ ಜನಸಾಗರವು ಆನೆಗಳಿಂದ ತುಳಿಯಲ್ಪಟ್ಟು ನಾಶವಾಯಿತು? ಇದು ನನ್ನ ಮಂದಭಾಗ್ಯವೇ ಸರಿ!” ಎಂದು ಆ ವೈದರ್ಭಿಯು ಶೋಕಿಸಿದಳು.

03062013a ಪ್ರಾಪ್ತವ್ಯಂ ಸುಚಿರಂ ದುಃಖಂ ಮಯಾ ನೂನಮಸಂಶಯಂ|

03062013c ನಾಪ್ರಾಪ್ತಕಾಲೋ ಮ್ರಿಯತೇ ಶ್ರುತಂ ವೃದ್ಧಾನುಶಾಸನಂ||

03062014a ಯನ್ನಾಹಮದ್ಯ ಮೃದಿತಾ ಹಸ್ತಿಯೂಥೇನ ದುಃಖಿತಾ|

03062014c ನ ಹ್ಯದೈವಕೃತಂ ಕಿಂ ಚಿನ್ನರಾಣಾಮಿಹ ವಿದ್ಯತೇ||

“ನಿಸ್ಸಂಶಯವಾಗಿಯೂ ನನಗೆ ಮುಂದೆ ದುಃಖಪ್ರಾಪ್ತಿಯಾಗುವುದಿದೆ. ಅಕಾಲದಲ್ಲಿ ಮೃತ್ಯು ಪ್ರಾಪ್ತಿಯಾಗುವುದಿಲ್ಲ ಎಂದು ವೃದ್ಧರು ಹೇಳಿದುದನ್ನು ಕೇಳಿದ್ದೇನೆ. ನಾನು ಆನೆಗಳಿಂದ ತುಳಿಯಲ್ಪಟ್ಟು ಸಾಯಲಿಲ್ಲ. ಇದರಿಂದ ತಿಳಿಯುವುದೇನೆಂದರೆ, ವಿಧಿಯು ನಿಶ್ಚಯಿಸದೇ ಯಾವುದೂ ಆಗುವುದಿಲ್ಲ.

03062015a ನ ಚ ಮೇ ಬಾಲಭಾವೇಽಪಿ ಕಿಂ ಚಿದ್ವ್ಯಪಕೃತಂ ಕೃತಂ|

03062015c ಕರ್ಮಣಾ ಮನಸಾ ವಾಚಾ ಯದಿದಂ ದುಃಖಮಾಗತಂ||

ಆದರೆ ನಾನು ಬಾಲ್ಯದಲ್ಲಿಯೂ ಕರ್ಮದಲ್ಲಿಯಾಗಲೀ, ಮನಸ್ಸಿನಲ್ಲಿಯಾಗಲೀ ಅಥವಾ ಮಾತಿನಲ್ಲಿಯಾಗಲೀ ಅಪಕೃತವನ್ನು ಮಾಡಿಲ್ಲ. ಹಾಗಿದ್ದರೆ ಈ ದುಃಖವು ಬರಲು ಕಾರಣವೇನು?

03062016a ಮನ್ಯೇ ಸ್ವಯಂವರಕೃತೇ ಲೋಕಪಾಲಾಃ ಸಮಾಗತಾಃ|

03062016c ಪ್ರತ್ಯಾಖ್ಯಾತಾ ಮಯಾ ತತ್ರ ನಲಸ್ಯಾರ್ಥಾಯ ದೇವತಾಃ|

03062016e ನೂನಂ ತೇಷಾಂ ಪ್ರಭಾವೇನ ವಿಯೋಗಂ ಪ್ರಾಪ್ತವತ್ಯಹಂ||

ನನ್ನ ಯೋಚನೆಯಂತೆ ಸ್ವಯಂವರದಲ್ಲಿ ಸೇರಿದ್ದ ದೇವತೆ ಲೋಕಪಾಲಕರನ್ನು ನಲನಿಗೋಸ್ಕರವಾಗಿ ತಿರಸ್ಕರಿಸಿದ್ದುದಕ್ಕಾಗಿ, ಅವರ ಪ್ರಭಾವದಿಂದ ಈ ರೀತಿಯ ವಿಯೋಗ ಪ್ರಾಪ್ತಿಯಾಯಿತೇನೋ!”

03062017a ಏವಮಾದೀನಿ ದುಃಖಾನಿ ಸಾ ವಿಲಪ್ಯ ವರಾಂಗನಾ|

03062017c ಹತಶಿಷ್ಟೈಃ ಸಹ ತದಾ ಬ್ರಾಹ್ಮಣೈರ್ವೇದಪಾರಗೈಃ|

03062017e ಅಗಚ್ಚದ್ರಾಜಶಾರ್ದೂಲ ದುಃಖಶೋಕಪರಾಯಣಾ||

ನರಶಾರ್ದೂಲ! ಈ ರೀತಿ ದುಃಖಿತಳಾದ ಆ ದೀನ ವರಾಂಗನೆಯು ದುಃಖಶೋಕಪರಾಯಣಳಾಗಿ ವಿಲಪಿಸುತ್ತಾ ವೇದಪಾರಂಗತ ಬ್ರಾಹ್ಮಣರೊಡಗೂಡಿ ಹೊರಟಳು.

03062018a ಗಚ್ಚಂತೀ ಸಾ ಚಿರಾತ್ಕಾಲಾತ್ಪುರಮಾಸಾದಯನ್ಮಹತ್|

03062018c ಸಾಯಾಹ್ನೇ ಚೇದಿರಾಜಸ್ಯ ಸುಬಾಹೋಃ ಸತ್ಯವಾದಿನಃ|

03062018e ವಸ್ತ್ರಾರ್ಧಕರ್ತಸಂವೀತಾ ಪ್ರವಿವೇಶ ಪುರೋತ್ತಮಂ||

ಬಹಳ ದೂರ ಪ್ರಯಾಣಮಾಡಿದ ನಂತರ ಅವಳು ಒಂದು ದೊಡ್ಡ ಪಟ್ಟಣಕ್ಕೆ ಆಗಮಿಸಿದಳು. ಸುಬಾಹುವೂ ಸತ್ಯವಾದಿಯೂ ಆದ ಚೇದಿ ರಾಜನ ಆ ಉತ್ತಮ ಪುರವನ್ನು ಅರ್ಧವಸ್ತ್ರವನ್ನೇ ಧರಿಸಿದ್ದ ಅವಳು ಪ್ರವೇಶಿಸಿದಳು.

03062019a ತಾಂ ವಿವರ್ಣಾಂ ಕೃಶಾಂ ದೀನಾಂ ಮುಕ್ತಕೇಶೀಮಮಾರ್ಜನಾಂ|

03062019c ಉನ್ಮತ್ತಾಮಿವ ಗಚ್ಚಂತೀಂ ದದೃಶುಃ ಪುರವಾಸಿನಃ||

03062020a ಪ್ರವಿಶಂತೀಂ ತು ತಾಂ ದೃಷ್ಟ್ವಾ ಚೇದಿರಾಜಪುರೀಂ ತದಾ|

03062020c ಅನುಜಗ್ಮುಸ್ತತೋ ಬಾಲಾ ಗ್ರಾಮಿಪುತ್ರಾಃ ಕುತೂಹಲಾತ್||

ವಿವರ್ಣಳೂ, ಕೃಶಳೂ, ದೀನಳೂ, ಬಿಚ್ಚಿದ ತಲೆಗೂದಲಿನವಳೂ, ಹೊಲಸು ತುಂಬಿದವಳೂ, ಮತ್ತು ಹುಚ್ಚಿಯಂತೆ ಹೋಗುತ್ತಿರುವ ಅವಳನ್ನು ಪುರವಾಸಿಗಳು ನೋಡಿದರು. ಚೇದಿರಾಜಪುರವನ್ನು ಪ್ರವೇಶಿಸುತ್ತಿರುವ ಅವಳನ್ನು ನೋಡಿದ ಬಾಲಕರೂ ಗ್ರಾಮಪುತ್ರರೂ ಕುತೂಹಲದಿಂದ ಅವಳನ್ನು ಹಿಂಬಾಲಿಸಿದರು.

03062021a ಸಾ ತೈಃ ಪರಿವೃತಾಗಚ್ಚತ್ಸಮೀಪಂ ರಾಜವೇಶ್ಮನಃ|

03062021c ತಾಂ ಪ್ರಾಸಾದಗತಾಪಶ್ಯದ್ರಾಜಮಾತಾ ಜನೈರ್ವೃತಾಂ||

ಅವಳು ರಾಜಭವನದ ಸಮೀಪ ಹೋಗುತ್ತಿದ್ದಂತೆಯೇ ಅವರೆಲ್ಲರೂ ಅವಳನ್ನು ಸುತ್ತುವರಿದರು. ಜನರಿಂದ ಸುತ್ತುವರಿಯಲ್ಪಟ್ಟಿದ್ದ ಅವಳನ್ನು ರಾಜಮಾತೆಯು ಅರಮನೆಯ ಮೇಲ್ಗಚ್ಚಿನಿಂದ ನೋಡಿದಳು.

03062022a ಸಾ ಜನಂ ವಾರಯಿತ್ವಾ ತಂ ಪ್ರಾಸಾದತಲಮುತ್ತಮಂ|

03062022c ಆರೋಪ್ಯ ವಿಸ್ಮಿತಾ ರಾಜನ್ದಮಯಂತೀಮಪೃಚ್ಚತ||

ರಾಜನ್! ಉತ್ತಮ ಪೀಠದಲ್ಲಿ ಕುಳಿತಿದ್ದ ಅವಳು ವಿಸ್ಮಿತಳಾಗಿ ಜನರೆಲ್ಲರನ್ನೂ ಹಿಂದೆಸರಿಸಿ ದಮಯಂತಿಯನ್ನು ಪ್ರಶ್ನಿಸಿದಳು.

03062023a ಏವಮಪ್ಯಸುಖಾವಿಷ್ಟಾ ಬಿಭರ್ಷಿ ಪರಮಂ ವಪುಃ|

03062023c ಭಾಸಿ ವಿದ್ಯುದಿವಾಭ್ರೇಷು ಶಂಸ ಮೇ ಕಾಸಿ ಕಸ್ಯ ವಾ||

“ದುಃಖಾವಿಷ್ಟಳಾಗಿದ್ದರೂ ಸುಂದರವಾದ ದೇಹವನ್ನು ಧರಿಸಿದ್ದೀಯೆ ಮತ್ತು ಮಿಂಚಿನಿಂದೊಡಗೂಡಿದ ಮೋಡದಂತೆ ಹೊಳೆಯುತ್ತಿರುವೆ. ನೀನು ಯಾರು ಮತ್ತು ಯಾರವಳು ಎನ್ನುವುದನ್ನು ಹೇಳು!

03062024a ನ ಹಿ ತೇ ಮಾನುಷಂ ರೂಪಂ ಭೂಷಣೈರಪಿ ವರ್ಜಿತಂ|

03062024c ಅಸಹಾಯಾ ನರೇಭ್ಯಶ್ಚ ನೋದ್ವಿಜಸ್ಯಮರಪ್ರಭೇ||

ಅಮರಪ್ರಭೆ! ಭೂಷಣಗಳಿಲ್ಲದಿದ್ದರೂ ರೂಪದಲ್ಲಿ ನೀನು ಮನುಷ್ಯಳೆಂದು ಅನ್ನಿಸುವುದಿಲ್ಲ. ಅಸಹಾಯಕಳಾಗಿದ್ದರೂ ನಿನಗೆ ಈ ಜನರ ಭಯವಾಗುತ್ತಿಲ್ಲವಲ್ಲ!”

03062025a ತಚ್ಛೃತ್ವಾ ವಚನಂ ತಸ್ಯಾ ಭೈಮೀ ವಚನಮಬ್ರವೀತ್|

03062025c ಮಾನುಷೀಂ ಮಾಂ ವಿಜಾನೀಹಿ ಭರ್ತಾರಂ ಸಮನುವ್ರತಾಂ||

ಅವಳ ಈ ಮಾತುಗಳನ್ನು ಕೇಳಿ ಭೈಮಿಯು ಹೇಳಿದಳು: “ಪತಿಯ ಅನುವ್ರತಳಾದ ಓರ್ವ ಮಾನುಷಿಯೆಂದು ನನ್ನನ್ನು ತಿಳಿ.

03062026a ಸೈರಂಧ್ರೀಂ ಜಾತಿಸಂಪನ್ನಾಂ ಭುಜಿಷ್ಯಾಂ ಕಾಮವಾಸಿನೀಂ|

03062026c ಫಲಮೂಲಾಶನಾಮೇಕಾಂ ಯತ್ರಸಾಯಂಪ್ರತಿಶ್ರಯಾಂ||

ನಾನು ಇಷ್ಟವಿದ್ದಲ್ಲಿ ವಾಸಿಸುವ, ಫಲಮೂಲಗಳನ್ನು ಸೇವಿಸುವ, ಎಕಾಂಗಿ. ಸಾಯಂಕಾಲ ಎಲ್ಲಿ ಆಗುತ್ತದೆಯೋ ಅಲ್ಲಿಯೇ ಉಳಿಯುವ, ಜಾತಿಸಂಪನ್ನಳಾದ ಓರ್ವ ಸೈರಂಧ್ರೀ.

03062027a ಅಸಂಖ್ಯೇಯಗುಣೋ ಭರ್ತಾ ಮಾಂ ಚ ನಿತ್ಯಮನುವ್ರತಃ|

03062027c ಭರ್ತಾರಮಪಿ ತಂ ವೀರಂ ಚಾಯೇವಾನಪಗಾ ಸದಾ||

ಅಸಂಖ್ಯಗುಣಿಯಾದ ನನ್ನ ಪತಿಯು ನಿತ್ಯವೂ ನನ್ನಲ್ಲಿಯೇ ಅನುವ್ರತನಾದವನು. ನಾನೂ ಕೂಡ ನನ್ನ ವೀರ ಪತಿಯನ್ನು ನೆರಳಿನಂತೆ ಹಿಂಬಾಲಿಸಿಕೊಂಡು ಬಂದಿದ್ದೇನೆ.

03062028a ತಸ್ಯ ದೈವಾತ್ಪ್ರಸಂಗೋಽಭೂದತಿಮಾತ್ರಂ ಸ್ಮ ದೇವನೇ|

03062028c ದ್ಯೂತೇ ಸ ನಿರ್ಜಿತಶ್ಚೈವ ವನಮೇಕೋಽಭ್ಯುಪೇಯಿವಾನ್||

ದುರ್ದೈವವಷಾತ್ ಅವನಿಗೆ ಜೂಜಿನಲ್ಲಿ ಅತಿಯಾದ ಚಟವಿತ್ತು. ದ್ಯೂತದಲ್ಲಿ ಎಲ್ಲವನ್ನೂ ಕಳೆದುಕೊಂಡ ಅವನು ಒಬ್ಬನೇ ಅರಣ್ಯಕ್ಕೆ ಹೊರಟುಹೋದನು.

03062029a ತಮೇಕವಸನಂ ವೀರಮುನ್ಮತ್ತಮಿವ ವಿಃವಲಂ|

03062029c ಆಶ್ವಾಸಯಂತೀ ಭರ್ತಾರಮಹಮನ್ವಗಮಂ ವನಂ||

ಏಕವಸ್ತ್ರನಾಗಿ, ಹುಚ್ಚನಂತೆ ವಿಹ್ವಲನಾಗಿದ್ದ ಆ ವೀರ ಪತಿಯನ್ನು ಅನುಸರಿಸಿ ನಾನೂ ಕಾಡಿಗೆ ಬಂದೆ.

03062030a ಸ ಕದಾ ಚಿದ್ವನೇ ವೀರಃ ಕಸ್ಮಿಂಶ್ಚಿತ್ಕಾರಣಾಂತರೇ|

03062030c ಕ್ಷುತ್ಪರೀತಃ ಸುವಿಮನಾಸ್ತದಪ್ಯೇಕಂ ವ್ಯಸರ್ಜಯತ್||

ಒಂದುದಿನ ವನದಲ್ಲಿ ಹಸಿವೆಯಿಂದ ಬಳಲಿದ್ದ ಆ ವೀರನು ಯಾವುದೋ ಕಾರಣದಿಂದಾಗಿ ಅವನಲ್ಲಿದ್ದ ಒಂದು ವಸ್ತ್ರವನ್ನೂ ಕಳೆದುಕೊಂಡನು.

03062031a ತಮೇಕವಸನಂ ನಗ್ನಮುನ್ಮತ್ತಂ ಗತಚೇತಸಂ|

03062031c ಅನುವ್ರಜಂತೀ ಬಹುಲಾ ನ ಸ್ವಪಾಮಿ ನಿಶಾಃ ಸದಾ||

ಆ ನಗ್ನ, ಉನ್ಮತ್ತ, ಅರಿವನ್ನೇ ಕಳೆದುಕೊಂಡಿದ್ದ ಏಕವಸ್ತ್ರಧಾರಿಯನ್ನು ಅನುಸರಿಸುತ್ತಾ ಬಹಳಷ್ಟು ರಾತ್ರಿಗಳು ನಾನು ನಿದ್ದೆಯನ್ನೇ ಮಾಡಲಿಲ್ಲ.

03062032a ತತೋ ಬಹುತಿಥೇ ಕಾಲೇ ಸುಪ್ತಾಮುತ್ಸೃಜ್ಯ ಮಾಂ ಕ್ವ ಚಿತ್|

03062032c ವಾಸಸೋಽರ್ಧಂ ಪರಿಚ್ಚಿದ್ಯ ತ್ಯಕ್ತವಾನ್ಮಾಮನಾಗಸಂ||

ಬಹುದಿನಗಳ ನಂತರ ಯಾವಾಗಲೋ ಒಮ್ಮೆ ನಾನು ನಿದ್ದೆಮಾಡುತ್ತಿರುವಾಗ ನನ್ನ ವಸ್ತ್ರವನ್ನು ಅರ್ಧ ಕತ್ತರಿಸಿ ಅದನ್ನೇ ಸುತ್ತಿಕೊಂಡು ತಪ್ಪನ್ನೇನೂ ಮಾಡಿರದ ನನ್ನನ್ನು ಬಿಟ್ಟು ಹೊರಟು ಹೋದನು.

03062033a ತಂ ಮಾರ್ಗಮಾಣಾ ಭರ್ತಾರಂ ದಹ್ಯಮಾನಾ ದಿನಕ್ಷಪಾಃ|

03062033c ನ ವಿಂದಾಮ್ಯಮರಪ್ರಖ್ಯಂ ಪ್ರಿಯಂ ಪ್ರಾಣಧನೇಶ್ವರಂ||

ನನ್ನ ಮನಸ್ಸು ದಹಿಸುತ್ತಿದ್ದಂತೆ ದಿನ ರಾತ್ರಿಯೂ ಪತಿಯನ್ನು ಹುಡುಕುತ್ತಿದ್ದೇನೆ. ಆದರೆ ನನ್ನ ಪ್ರಿಯನನ್ನು, ಪ್ರಾಣಧನೇಶ್ವರನನ್ನು ಕಾಣದಾಗಿದ್ದೇನೆ.”

03062034a ತಾಮಶ್ರುಪರಿಪೂರ್ಣಾಕ್ಷೀಂ ವಿಲಪಂತೀಂ ತಥಾ ಬಹು|

03062034c ರಾಜಮಾತಾಬ್ರವೀದಾರ್ತಾಂ ಭೈಮೀಮಾರ್ತತರಾ ಸ್ವಯಂ||

ಅಶ್ರುಪರಿಪೂರ್ಣಾಕ್ಷಿಯಾಗಿ ಬಹುವಾಗಿ ವಿಲಪಿಸುತ್ತಿದ್ದ ಆರ್ತ ಭೈಮಿಗೆ ತಾನೇ ಸ್ವತಃ ದುಃಖದಲ್ಲಿದ್ದಾಳೋ ಎನ್ನುವಂತೆ ರಾಜಮಾತೆಯು ಹೇಳಿದಳು:

03062035a ವಸಸ್ವ ಮಯಿ ಕಲ್ಯಾಣಿ ಪ್ರೀತಿರ್ಮೇ ತ್ವಯಿ ವರ್ತತೇ|

03062035c ಮೃಗಯಿಷ್ಯಂತಿ ತೇ ಭದ್ರೇ ಭರ್ತಾರಂ ಪುರುಷಾ ಮಮ||

“ಕಲ್ಯಾಣಿ! ನೀನು ನನ್ನಲ್ಲಿಯೇ ಇರು. ನಿನ್ನ ವರ್ತನೆಯಿಂದ ನಾನು ಸಂತೋಷಗೊಂಡಿದ್ದೇನೆ. ಭದ್ರೆ! ನನ್ನ ಪುರುಷರು ನಿನ್ನ ಪತಿಯನ್ನು ಹುಡುಕುವರು.

03062036a ಅಥ ವಾ ಸ್ವಯಮಾಗಚ್ಚೇತ್ಪರಿಧಾವನ್ನಿತಸ್ತತಃ|

03062036c ಇಹೈವ ವಸತೀ ಭದ್ರೇ ಭರ್ತಾರಮುಪಲಪ್ಸ್ಯಸೇ||

ಅಥವಾ ತಾನಾಗಿಯೇ ಇಲ್ಲಿ ಅಲ್ಲಿ ಸುತ್ತಾಡುತ್ತಾ ಅವನೇ ಇಲ್ಲಿಗೆ ಬರಬಹುದು. ಭದ್ರೆ! ನೀನು ಇಲ್ಲಿ ವಾಸಿಸುತ್ತಿರುವಾಗಲೇ ನಿನ್ನ ಪತಿಯನ್ನು ಪುನಃ ಹೊಂದುವೆ.”

03062037a ರಾಜಮಾತುರ್ವಚಃ ಶ್ರುತ್ವಾ ದಮಯಂತೀ ವಚೋಽಬ್ರವೀತ್|

03062037c ಸಮಯೇನೋತ್ಸಹೇ ವಸ್ತುಂ ತ್ವಯಿ ವೀರಪ್ರಜಾಯಿನಿ||

03062038a ಉಚ್ಚಿಷ್ಟಂ ನೈವ ಭುಂಜೀಯಾಂ ನ ಕುರ್ಯಾಂ ಪಾದಧಾವನಂ|

03062038c ನ ಚಾಹಂ ಪುರುಷಾನನ್ಯಾನ್ಸಂಭಾಷೇಯಂ ಕಥಂ ಚನ||

ರಾಜಮಾತೆಯ ವಚನಗಳನ್ನು ಕೇಳಿ ದಮಯಂತಿಯು ಹೇಳಿದಳು: “ವೀರಮಾತೆ! ನಿನ್ನಲ್ಲಿ ನಾನು ಇರುತ್ತೇನೆ. ಆದರೆ ಕೆಲವು ನಿಯಮಗಳಡಿಯಲ್ಲಿ! ನಾನು ಎಂಜಲನ್ನು ತಿನ್ನುವುದಿಲ್ಲ, ಬೇರೆಯವರ ಪಾದಗಳನ್ನು ತೊಳೆಯುವುದಿಲ್ಲ, ಮತ್ತು ಅನ್ಯ ಪುರುಷರೊಂದಿಗೆ ಎಂದೂ ಮಾತನಾಡುವುದಿಲ್ಲ.

03062039a ಪ್ರಾರ್ಥಯೇದ್ಯದಿ ಮಾಂ ಕಶ್ಚಿದ್ದಂಡ್ಯಸ್ತೇ ಸ ಪುಮಾನ್ಭವೇತ್|

03062039c ಭರ್ತುರನ್ವೇಷಣಾರ್ಥಂ ತು ಪಶ್ಯೇಯಂ ಬ್ರಾಹ್ಮಣಾನಹಂ||

ಯಾರಾದರೂ ನನ್ನಜೊತೆ ಸರಿಯಾಗಿ ವರ್ತಿಸದೇ ಇದ್ದರೆ ಅವರಿಗೆ ಸರಿಯಾದ ದಂಡವು ದೊರೆಯಬೇಕು. ಆದರೆ, ಪತಿಯನ್ನು ಅನ್ವೇಷಿಸುವ ಸಲುವಾಗಿ ನಾನು ಬ್ರಾಹ್ಮಣರನ್ನು ಕಾಣುತ್ತೇನೆ.

03062040a ಯದ್ಯೇವಮಿಹ ಕರ್ತವ್ಯಂ ವಸಾಮ್ಯಹಮಸಂಶಯಂ|

03062040c ಅತೋಽನ್ಯಥಾ ನ ಮೇ ವಾಸೋ ವರ್ತತೇ ಹೃದಯೇ ಕ್ವ ಚಿತ್||

ಈ ರೀತಿ ಮಾಡುವುದು ಸಾದ್ಯವಾದರೆ ನಾನು ಇಲ್ಲಿ ವಾಸಿಸುವುದಕ್ಕೆ ಸಂಶಯವೇ ಇಲ್ಲ. ಅನ್ಯಥಾ ನನಗೆ ಇಲ್ಲಿ ವಾಸಿಸಲು ಸ್ವಲ್ಪವೂ ಮನಸ್ಸಿಲ್ಲ.”

03062041a ತಾಂ ಪ್ರಹೃಷ್ಟೇನ ಮನಸಾ ರಾಜಮಾತೇದಮಬ್ರವೀತ್|

03062041c ಸರ್ವಮೇತತ್ ಕರಿಷ್ಯಾಮಿ ದಿಷ್ಟ್ಯಾ ತೇ ವ್ರತಮೀದೃಶಂ||

ಪ್ರಹೃಷ್ಟಮನಸಳಾದ ರಾಜಮಾತೆಯು ಅವಳಿಗೆ ಹೇಳಿದಳು: “ನಿನ್ನ ವ್ರತದ ನಿಯಮಗಳ ತಕ್ಕಂತೆ ಎಲ್ಲವನ್ನೂ ಮಾಡುತ್ತೇನೆ.”

03062042a ಏವಮುಕ್ತ್ವಾ ತತೋ ಭೈಮೀಂ ರಾಜಮಾತಾ ವಿಶಾಂ ಪತೇ|

03062042c ಉವಾಚೇದಂ ದುಹಿತರಂ ಸುನಂದಾಂ ನಾಮ ಭಾರತ||

ವಿಶಾಂಪತೇ! ಭಾರತ! ಭೈಮಿಗೆ ಈ ರೀತಿ ಹೇಳಿದ ನಂತರ ರಾಜಮಾತೆಯು ಸುನಂದ ಎಂಬ ಹೆಸರಿನ ತನ್ನ ಮಗಳಿಗೆ ಹೇಳಿದಳು:

03062043a ಸೈರಂಧ್ರೀಮಭಿಜಾನೀಷ್ವ ಸುನಂದೇ ದೇವರೂಪಿಣೀಂ|

03062043c ಏತಯಾ ಸಹ ಮೋದಸ್ವ ನಿರುದ್ವಿಗ್ನಮನಾಃ ಸ್ವಯಂ||

“ಸುನಂದ! ಈ ದೇವರೂಪಿಣಿಯು ನಿನ್ನ ಸೈರಂಧ್ರಿಯಾಗಿ ಇರುವಳು, ಗುರುತಿಟ್ಟುಕೋ. ಇವಳೊಂದಿಗೆ ಯಾವ ಉದ್ವೇಗವೂ ಇಲ್ಲದೇ ಸ್ವತಃ ಆನಂದವಾಗಿರು!””

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ದಮಯಂತೀಚೇದಿರಾಜಗೃಹವಾಸೇ ದ್ವಿಷಷ್ಟಿತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ದಮಯಂತಿಯು ಚೇದಿರಾಜನ ಮನೆಯಲ್ಲಿ ವಾಸಿಸಿದುದು ಎನ್ನುವ ಅರವತ್ತೆರಡನೆಯ ಅಧ್ಯಾಯವು.

Related image

Kannada translation of Indralokabhigamana Parva, by Chapter:
  1. ಇಂದ್ರಲೋಕಾಭಿಗಮನ ಪರ್ವ
  2. ಇಂದ್ರಸಭಾದರ್ಶನ
  3. ಲೋಮಶಗಮನ
  4. ಧೃತರಾಷ್ಟ್ರಖೇದ
  5. ಪಾರ್ಥಾಹಾರಕಥನ
  6. ಧೃತರಾಷ್ಟ್ರವಿಲಾಪ
  7. ನಲೋಪಾಖ್ಯಾನ
  8. ನಲೋಪಾಖ್ಯಾನ-ಹಂಸದಮಯಂತೀಸಂವಾದ
  9. ನಲೋಪಾಖ್ಯಾನ-ಇಂದ್ರನಾರದಸಂವಾದ
  10. ನಲೋಪಾಖ್ಯಾನ-ನಲಸ್ಯ ದೇವದೌತ್ಯ
  11. ನಲೋಪಾಖ್ಯಾನ-ನಲಕರ್ತುಕದೇವದೌತ್ಯ
  12. ನಲೋಪಾಖ್ಯಾನ-ದಮಯಂತೀಸ್ವಯಂವರ
  13. ನಲೋಪಾಖ್ಯಾನ-ಕಲಿದೇವಸಂವಾದ
  14. ನಲೋಪಾಖ್ಯಾನ-ನಲದ್ಯೂತ
  15. ನಲೋಪಾಖ್ಯಾನ-ಕುಂಡಿನಂಪ್ರತಿಕುಮಾರಯೋಪ್ರಸ್ಥಾಪನ
  16. ನಲೋಪಾಖ್ಯಾನ-ನಲವನಯಾತ್ರಾ
  17. ನಲೋಪಾಖ್ಯಾನ-ದಮಯಂತೀಪರಿತ್ಯಾಗ
  18. ನಲೋಪಾಖ್ಯಾನ-ಅಜಗರಗ್ರಸ್ತದಮಯಂತೀಮೋಚನ
  19. ನಲೋಪಾಖ್ಯಾನ-ದಮಯಂತೀಸಾರ್ಥವಾಹಸಂಗಮ
  20. ನಲೋಪಾಖ್ಯಾನ-ದಮಯಂತೀಚೇದಿರಾಜಗೃಹವಾಸ
  21. ನಲೋಪಾಖ್ಯಾನ-ನಲಕಾರ್ಕೋಟಕಸಂವಾದ
  22. ನಲೋಪಾಖ್ಯಾನ-ನಲವಿಲಾಪ
  23. ನಲೋಪಾಖ್ಯಾನ-ದಮಯಂತೀಸುದೇವಸಂವಾದ-೧
  24. ನಲೋಪಾಖ್ಯಾನ-ದಮಯಂತೀಸುದೇವಸಂವಾದ-೨
  25. ನಲೋಪಾಖ್ಯಾನ-ನಲಾನ್ವೇಷಣೆ
  26. ನಲೋಪಾಖ್ಯಾನ-ದಮಯಂತೀಪುನಃಸ್ವಯಂವರಕಥನ
  27. ನಲೋಪಾಖ್ಯಾನ-ಋತುಪರ್ಣವಿದರ್ಭಗಮನ
  28. ನಲೋಪಾಖ್ಯಾನ-ಕಲಿನಿರ್ಗಮನ
  29. ನಲೋಪಾಖ್ಯಾನ-ಋತುಪರ್ಣಸ್ಯಭೀಮಪುರಪ್ರವೇಶ
  30. ನಲೋಪಾಖ್ಯಾನ-ನಲಕೇಶಿನೀಸಂವಾದ
  31. ನಲೋಪಾಖ್ಯಾನ-ಕನ್ಯಾಪುತ್ರದರ್ಶನ
  32. ನಲೋಪಾಖ್ಯಾನ-ನಲದಮಯಂತೀಸಮಾಗಮ-೧
  33. ನಲೋಪಾಖ್ಯಾನ-ನಲದಮಯಂತೀಸಮಾಗಮ-೨
  34. ನಲೋಪಾಖ್ಯಾನ-ಋತುಪರ್ಣಸ್ವದೇಶಗಮನ
  35. ನಲೋಪಾಖ್ಯಾನ-ಪುಷ್ಕರಪರಾಭವಪೂರ್ವಕರಾಜ್ಯಪ್ರತ್ಯಾನಯನ
  36. ನಲೋಪಾಖ್ಯಾನ-ಬೃಹದಶ್ವಗಮನ
  37. ಅರ್ಜುನಾನುಶೋಚನ

Comments are closed.