Aranyaka Parva: Chapter 56

ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ

೫೬

ನಲ-ಪುಷ್ಕರರ ದ್ಯೂತ

ಕಲಿಯು ನಲ-ಪುಷ್ಕರರನ್ನು ಪ್ರವೇಶಿಸಿ, ಅವರಿಬ್ಬರನ್ನೂ ದ್ಯೂತದಲ್ಲಿ ತೊಡಗಿಸಿ, ಮತ್ತರನ್ನಾಗಿಸಿದುದು (೧-೧೦). ದ್ಯೂತವನ್ನು ನಿಲ್ಲಿಸಲು ಪ್ರಯತ್ನಿಸಿದರೂ, ಬಹಳ ಮಾಸಗಳು ನಡೆದ ದ್ಯೂತದಲ್ಲಿ ನಲನು ಸೋಲುತ್ತಾ ಬಂದುದು (೧೧-೧೮).

03056001 ಬೃಹದಶ್ವ ಉವಾಚ|

03056001a ಏವಂ ಸ ಸಮಯಂ ಕೃತ್ವಾ ದ್ವಾಪರೇಣ ಕಲಿಃ ಸಹ|

03056001c ಆಜಗಾಮ ತತಸ್ತತ್ರ ಯತ್ರ ರಾಜಾ ಸ ನೈಷಧಃ||

ಬೃಹದಶ್ವನು ಹೇಳಿದನು: “ಈ ರೀತಿ ದ್ವಾಪರನ ಜೊತೆ ಒಪ್ಪಂದ ಮಾಡಿಕೊಂಡ ಕಲಿಯು ರಾಜ ನೈಷಧನಿರುವಲ್ಲಿಗೆ ಆಗಮಿಸಿದನು.

03056002a ಸ ನಿತ್ಯಮಂತರಪ್ರೇಕ್ಷೀ ನಿಷಧೇಷ್ವವಸಚ್ಚಿರಂ|

03056002c ಅಥಾಸ್ಯ ದ್ವಾದಶೇ ವರ್ಷೇ ದದರ್ಶ ಕಲಿರಂತರಂ||

ನೈಷಧನಲ್ಲಿ ಚಿರವಾಗಿ ವಾಸಿಸುವ ಸಲುವಾಗಿ ನಿತ್ಯವೂ ಅವಕಾಶವನ್ನು ಅಪೇಕ್ಷಿಸುತ್ತಿದ್ದ ಕಲಿಯು ಹನ್ನೆರಡನೆಯ ವರ್ಷಗಳ ನಂತರ ಅವಕಾಶವನ್ನು ಕಂಡನು.

03056003a ಕೃತ್ವಾ ಮೂತ್ರಮುಪಸ್ಪೃಶ್ಯ ಸಂಧ್ಯಾಮಾಸ್ತೇ ಸ್ಮ ನೈಷಧಃ|

03056003c ಅಕೃತ್ವಾ ಪಾದಯೋಃ ಶೌಚಂ ತತ್ರೈನಂ ಕಲಿರಾವಿಶತ್||

ಒಮ್ಮೆ ನೈಷಧನು ಮೂತ್ರವಿಸರ್ಜನೆ ಮಾಡಿ ಪಾದಗಳನ್ನು ತೊಳೆಯದೆಯೇ ಸಂಧ್ಯಾವಂದನೆ ಮಾಡಿದಾಗ ಕಲಿಯು ಅವನನ್ನು ಪ್ರವೇಶಿಸಿದನು.

03056004a ಸ ಸಮಾವಿಶ್ಯ ತು ನಲಂ ಸಮೀಪಂ ಪುಷ್ಕರಸ್ಯ ಹ|

03056004c ಗತ್ವಾ ಪುಷ್ಕರಮಾಹೇದಮೇಹಿ ದೀವ್ಯ ನಲೇನ ವೈ||

ನಲನನ್ನು ಪ್ರವೇಶಿಸಿದ ಅವನು ಪುಷ್ಕರನ ಸಮೀಪ ಹೋಗಿ “ಪುಷ್ಕರ! ನಲನೊಟ್ಟಿಗೆ ಜೂಜನ್ನಾಡು ಬಾ” ಎಂದನು.

03056005a ಅಕ್ಷದ್ಯೂತೇ ನಲಂ ಜೇತಾ ಭವಾನ್ ಹಿ ಸಹಿತೋ ಮಯಾ|

03056005c ನಿಷಧಾನ್ಪ್ರತಿಪದ್ಯಸ್ವ ಜಿತ್ವಾ ರಾಜನ್ನಲಂ ನೃಪಂ||

“ನನ್ನ ಸಹಾಯದಿಂದ ನೀನು ನಿರ್ದಿಷ್ಟವಾಗಿ ನಲನನ್ನು ದ್ಯೂತದಲ್ಲಿ ಗೆಲ್ಲುತ್ತೀಯೆ. ರಾಜ! ನೃಪ ನಲನನ್ನು ಸೋಲಿಸಿ ನಿಷಧವನ್ನು ಗೆಲ್ಲು.”

03056006a ಏವಮುಕ್ತಸ್ತು ಕಲಿನಾ ಪುಷ್ಕರೋ ನಲಮಭ್ಯಯಾತ್|

03056006c ಕಲಿಶ್ಚೈವ ವೃಷೋ ಭೂತ್ವಾ ಗವಾಂ ಪುಷ್ಕರಮಭ್ಯಯಾತ್||

ಕಲಿಯ ಈ ಮಾತುಗಳಂತೆ ಪುಷ್ಕರನು ನಲನಲ್ಲಿಗೆ ಹೋದನು. ಕಲಿಯಾದರೂ ಗೋವುಗಳ ಹೋರಿಯಾಗಿ ಪುಷ್ಕರನನ್ನು ಸೇರಿಕೊಂಡನು.

03056007a ಆಸಾದ್ಯ ತು ನಲಂ ವೀರಂ ಪುಷ್ಕರಃ ಪರವೀರಹಾ|

03056007c ದೀವ್ಯಾವೇತ್ಯಬ್ರವೀದ್ಭ್ರಾತಾ ವೃಷೇಣೇತಿ ಮುಹುರ್ಮುಹುಃ||

ಪರವೀರಹ ಪುಷ್ಕರನು ನಲನ ಬಳಿಸಾರಿ ಸಹೋದರನಿಗೆ - “ಹೋರಿಗಳೊಂದಿಗೆ ಜೂಜಾಡೋಣ!” - ಎಂದು ಪುನಃ ಪುನಃ ಹೇಳಿದನು.

03056008a ನ ಚಕ್ಷಮೇ ತತೋ ರಾಜಾ ಸಮಾಹ್ವಾನಂ ಮಹಾಮನಾಃ|

03056008c ವೈದರ್ಭ್ಯಾಃ ಪ್ರೇಕ್ಷಮಾಣಾಯಾಃ ಪಣಕಾಲಮಮನ್ಯತ||

ಮಹಾಮನ ರಾಜನು ಸಮಾಹ್ವಾನವನ್ನು ಬೇಡ ಎನ್ನದೇ, ವೈದರ್ಭಿಯು ನೋಡುತ್ತಿದ್ದಂತೆಯೇ ಇದು ಜೂಜಾಡುವ ಸಮಯವೆಂದು ನಿರ್ಧರಿಸಿಬಿಟ್ಟನು.

03056009a ಹಿರಣ್ಯಸ್ಯ ಸುವರ್ಣಸ್ಯ ಯಾನಯುಗ್ಯಸ್ಯ ವಾಸಸಾಂ|

03056009c ಆವಿಷ್ಟಃ ಕಲಿನಾ ದ್ಯೂತೇ ಜೀಯತೇ ಸ್ಮ ನಲಸ್ತದಾ||

ಕಲಿಯಿಂದ ಆವಿಷ್ಟಗೊಂಡ ನಲನು ಹಿರಣ್ಯ, ಸುವರ್ಣ, ರಥಗಳು ಮತ್ತು ವಸ್ತ್ರಗಳನ್ನು ದ್ಯೂತದಲ್ಲಿ ಸೋತನು.

03056010a ತಮಕ್ಷಮದಸಮ್ಮತ್ತಂ ಸುಹೃದಾಂ ನ ತು ಕಶ್ಚನ|

03056010c ನಿವಾರಣೇಽಭವಚ್ಛಕ್ತೋ ದೀವ್ಯಮಾನಮಚೇತಸಂ||

ಜೂಜಿನ ಮತ್ತಿನಲ್ಲಿ ಹುಚ್ಚಾಗಿ ಬಿಟ್ಟಿದ್ದ ಮತ್ತು ಪ್ರಜ್ಞೆಯೇ ಇಲ್ಲದೇ ಜೂಜಾಡುತ್ತಿದ್ದ ಅವನನ್ನು ತಡೆಯಲು ಅವನ ಸುಹೃದಯರು ಯಾರೂ ಶಕ್ತರಾಗಿರಲಿಲ್ಲ.

03056011a ತತಃ ಪೌರಜನಃ ಸರ್ವೋ ಮಂತ್ರಿಭಿಃ ಸಹ ಭಾರತ|

03056011c ರಾಜಾನಂ ದ್ರಷ್ಟುಮಾಗಚ್ಚನ್ನಿವಾರಯಿತುಮಾತುರಂ||

ಭಾರತ! ಅನಂತರ ಸರ್ವ ಪೌರಜನರೂ ಮಂತ್ರಿಗಳನ್ನೊಡಗೂಡಿ ರಾಜನನ್ನು ನೋಡಿ ಅವನ ರೋಗವನ್ನು ನಿವಾರಿಸಲು ಬಂದರು.

03056012a ತತಃ ಸೂತ ಉಪಾಗಮ್ಯ ದಮಯಂತ್ಯೈ ನ್ಯವೇದಯತ್|

03056012c ಏಷ ಪೌರಜನಃ ಸರ್ವೋ ದ್ವಾರಿ ತಿಷ್ಠತಿ ಕಾರ್ಯವಾನ್||

03056013a ನಿವೇದ್ಯತಾಂ ನೈಷಧಾಯ ಸರ್ವಾಃ ಪ್ರಕೃತಯಃ ಸ್ಥಿತಾಃ|

03056013c ಅಮೃಷ್ಯಮಾಣಾ ವ್ಯಸನಂ ರಾಜ್ಞೋ ಧರ್ಮಾರ್ಥದರ್ಶಿನಃ||

ಸೂತನು ಬಂದು ದಮಯಂತಿಗೆ ನಿವೇದಿಸಿದನು: “ಸರ್ವ ಪೌರಜನರೂ ದ್ವಾರದಲ್ಲಿ ಕಾರ್ಯಕ್ಕೆಂದು ನಿಂತಿದ್ದಾರೆ. ಧರ್ಮಾರ್ಥದರ್ಶಿನಿ ರಾಜನ ವ್ಯಸನವನ್ನು ಸಹಿಸಲಾಗದೇ ಎಲ್ಲ ಪ್ರಜೆಗಳೂ ಬಂದು ನಿಂತಿದ್ದಾರೆ ಎಂದು ನೈಷಧನಿಗೆ ನಿವೇದಿಸಬೇಕು.”

03056014a ತತಃ ಸಾ ಬಾಷ್ಪಕಲಯಾ ವಾಚಾ ದುಃಖೇನ ಕರ್ಶಿತಾ|

03056014c ಉವಾಚ ನೈಷಧಂ ಭೈಮೀ ಶೋಕೋಪಹತಚೇತನಾ||

ಶೋಕದಿಂದ ಹತಚೇತನಳಾದ ಭೈಮಿಯು ದುಃಖದಿಂದ ನಡುಗುತ್ತಾ, ಬಾಷ್ಪಗಳಿಂದೊಡಗೂಡಿದ ಮಾತುಗಳನ್ನು ನೈಷಧನಿಗೆ ಹೇಳಿದಳು:

03056015a ರಾಜನ್ಪೌರಜನೋ ದ್ವಾರಿ ತ್ವಾಂ ದಿದೃಕ್ಷುರವಸ್ಥಿತಃ|

03056015c ಮಂತ್ರಿಭಿಃ ಸಹಿತಃ ಸರ್ವೈ ರಾಜಭಕ್ತಿಪುರಸ್ಕೃತಃ|

03056015e ತಂ ದ್ರಷ್ಟುಮರ್ಹಸೀತ್ಯೇವಂ ಪುನಃ ಪುನರಭಾಷತ||

“ರಾಜ! ರಾಜಭಕ್ತಿ ಪುರಸ್ಕೃತ ಸರ್ವ ಪೌರಜನರೂ ಮಂತ್ರಿಗಳನ್ನೊಡಗೊಂಡು ನಿನ್ನನ್ನು ಕಾಣಲು ಬಂದು ದ್ವಾರದಲ್ಲಿ ನಿಂತಿದ್ದಾರೆ. ನೀನು ಅವರನ್ನು ಕಾಣಬೇಕು!” ಎಂದು ಪುನಃ ಪುನಃ ಕೇಳಿಕೊಂಡಳು.

03056016a ತಾಂ ತಥಾ ರುಚಿರಾಪಾಂಗೀಂ ವಿಲಪಂತೀಂ ಸುಮಧ್ಯಮಾಂ|

03056016c ಆವಿಷ್ಟಃ ಕಲಿನಾ ರಾಜಾ ನಾಭ್ಯಭಾಷತ ಕಿಂ ಚನ||

ಆದರೆ ಕಲಿಯಿಂದ ಆವಿಷ್ಟನಾಗಿದ್ದ ರಾಜನು ಆ ರುಚಿರಾಪಾಂಗಿ ಸುಮಧ್ಯಮಳಿಗೆ ಎನನ್ನೂ ಹೇಳಲಿಲ್ಲ.

03056017a ತತಸ್ತೇ ಮಂತ್ರಿಣಃ ಸರ್ವೇ ತೇ ಚೈವ ಪುರವಾಸಿನಃ|

03056017c ನಾಯಮಸ್ತೀತಿ ದುಃಖಾರ್ತಾ ವ್ರೀಡಿತಾ ಜಗ್ಮುರಾಲಯಾನ್||

ಅನಂತರ ಮಂತ್ರಿಗಳ ಸಹಿತ ಸರ್ವ ಪುರವಾಸಿಗಳು “ಅವನು ಇಲ್ಲಿ ಇಲ್ಲವೇ ಇಲ್ಲ!” ಎನ್ನುತ್ತಾ ದುಃಖಾರ್ತ ವ್ರೀಡಿತರಾಗಿ ಮನೆಗಳಿಗೆ ತೆರಳಿದರು.

03056018a ತಥಾ ತದಭವದ್ದ್ಯೂತಂ ಪುಷ್ಕರಸ್ಯ ನಲಸ್ಯ ಚ|

03056018c ಯುಧಿಷ್ಠಿರ ಬಹೂನ್ಮಾಸಾನ್ಪುಣ್ಯಶ್ಲೋಕಸ್ತ್ವಜೀಯತ||

ಯುಧಿಷ್ಠಿರ! ಈ ರೀತಿ ಪುಷ್ಕರ ಮತ್ತು ನಲನ ಈ ದ್ಯೂತವು ಬಹಳ ಮಾಸಗಳು ನಡೆಯಿತು ಮತ್ತು ಪುಣ್ಯಶ್ಲೋಕನು ಸೋಲುತ್ತಾ ಬಂದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಮನಪರ್ವಣಿ ನಲೋಪಾಖ್ಯಾನೇ ನಲದ್ಯೂತೇ ಷಟ್‌ಪಂಚಾಶತ್ತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ನಲದ್ಯೂತ ಎನ್ನುವ ಐವತ್ತಾರನೆಯ ಅಧ್ಯಾಯವು.

Related image

Comments are closed.