ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ
Contents
Toggle೪೯[1]
ಬೃಹದಶ್ವನಿಂದ ನಲೋಪಾಖ್ಯಾನದ ಆರಂಭ
ಅರ್ಜುನನನ್ನು ಅಗಲಿ ದುಃಖಿತರಾಗಿ ಪಾಂಡವರು ಕುಳಿತುಕೊಂಡಿರುವಾಗ ಭೀಮನು ದುರ್ಯೋಧನನನ್ನು ಆಕ್ರಮಣ ಮಾಡಿ ರಾಜ್ಯವನ್ನು ಹಿಂದೆ ತೆಗೆದು ಕೊಳ್ಳಲು ಇದೇ ಸಮಯವೆಂದು ಪುನಃ ಯುಧಿಷ್ಠಿರನಿಗೆ ಹೇಳುವುದು (೧-೨೪). ಯುಧಿಷ್ಠಿರನು ಹದಿಮೂರು ವರ್ಷಗಳು ಕಳೆದನಂತರ ಅದನ್ನು ಮಾಡಬಹುದು ಎಂದು ಹೇಳುವುದು (೨೫-೨೮). ಅಷ್ಟರಲ್ಲಿ ಅಲ್ಲಿಗೆ ಮಹರ್ಷಿ ಬೃಹದಶ್ವನ ಆಗಮನ, ಸ್ವಾಗತ ಸತ್ಕಾರ (೨೯-೩೧). ತನಗಿಂತಲೂ ಹೆಚ್ಚು ದುಃಖವನ್ನು ಅನುಭವಿಸಿದ ಬೇರೆ ಯಾರಾದರೂ ಇದ್ದಾರೆಯೇ ಎಂದು ಯುಧಿಷ್ಠಿರನು ಕೇಳಲು (೩೨-೩೪), ಬೃಹದಶ್ವನು ನಲನ ಚರಿತ್ರವನ್ನು ಪ್ರಾರಂಭಿಸಿದುದು (೩೫-೪೩).
03049001 ಜನಮೇಜಯ ಉವಾಚ|
03049001a ಅಸ್ತ್ರಹೇತೋರ್ಗತೇ ಪಾರ್ಥೇ ಶಕ್ರಲೋಕಂ ಮಹಾತ್ಮನಿ|
03049001c ಯುಧಿಷ್ಠಿರಪ್ರಭೃತಯಃ ಕಿಮಕುರ್ವಂತ ಪಾಂಡವಾಃ||
ಜನಮೇಜಯನು ಹೇಳಿದನು: “ಮಹಾತ್ಮ ಪಾರ್ಥನು ಆಸ್ತ್ರಗಳಿಗೋಸ್ಕರ ಶಕ್ರಲೋಕಕ್ಕೆ ಹೋದ ಬಳಿಕ ಯುಧಿಷ್ಠಿರನೇ ಮೊದಲಾದ ಪಾಂಡವರು ಏನು ಮಾಡಿದರು?”
03049002 ವೈಶಂಪಾಯನ ಉವಾಚ|
03049002a ಅಸ್ತ್ರಹೇತೋರ್ಗತೇ ಪಾರ್ಥೇ ಶಕ್ರಲೋಕಂ ಮಹಾತ್ಮನಿ|
03049002c ನ್ಯವಸನ್ಕೃಷ್ಣಯಾ ಸಾರ್ಧಂ ಕಾಮ್ಯಕೇ ಪುರುಷರ್ಷಭಾಃ||
ವೈಶಂಪಾಯನನು ಹೇಳಿದನು: “ಮಹಾತ್ಮ ಪಾರ್ಥನು ಅಸ್ತ್ರಗಳಿಗೋಸ್ಕರ ಶಕ್ರಲೋಕಕ್ಕೆ ಹೋದ ಬಳಿಕ ಆ ಪುರುಷರ್ಷಭರು ಕೃಷ್ಣೆಯಿಂದೊಡಗೂಡಿ ಕಾಮ್ಯಕ ವನದಲ್ಲಿ ವಾಸಿಸಿದರು.
03049003a ತತಃ ಕದಾ ಚಿದೇಕಾಂತೇ ವಿವಿಕ್ತ ಇವ ಶಾದ್ವಲೇ|
03049003c ದುಃಖಾರ್ತಾ ಭರತಶ್ರೇಷ್ಠಾ ನಿಷೇದುಃ ಸಹ ಕೃಷ್ಣಯಾ||
03049003e ಧನಂಜಯಂ ಶೋಚಮಾನಾಃ ಸಾಶ್ರುಕಂಠಾಃ ಸುದುಃಖಿತಾಃ|
03049004a ತದ್ವಿಯೋಗಾದ್ಧಿ ತಾನ್ಸರ್ವಾಂ ಶೋಕಃ ಸಮಭಿಪುಪ್ಲುವೇ||
03049004c ಧನಂಜಯವಿಯೋಗಾಚ್ಚ ರಾಜ್ಯನಾಶಾಚ್ಚ ದುಃಖಿತಾಃ|
ಒಂದು ದಿನ ಆ ಭರತಶ್ರೇಷ್ಠರು ಕೃಷ್ಣೆಯೊಂದಿಗೆ ನಿರ್ಜನ ಹುಲ್ಲುಗಾವಲಿನಲ್ಲಿ ದುಖಾರ್ತರಾಗಿ ಕುಳಿತಿದ್ದರು. ಅವರೆಲ್ಲರೂ ಧನಂಜಯನ ಕುರಿತು ಶೋಕಿಸುತ್ತಾ, ಧನಂಜಯನ ಅಗಲಿಕೆ ಮತ್ತು ತಮ್ಮ ರಾಜ್ಯನಾಶದ ಕುರಿತು ಯೋಜಿಸುತ್ತಾ ಅಶ್ರುಕಂಠರಾಗಿ ಶೋಕಸಾಗರದಲ್ಲಿ ಮುಳುಗಿದ್ದರು.
03049005a ಅಥ ಭೀಮೋ ಮಹಾಬಾಹುರ್ಯುಧಿಷ್ಠಿರಮಭಾಷತ||
03049005c ನಿದೇಶಾತ್ತೇ ಮಹಾರಾಜ ಗತೋಽಸೌ ಪುರುಷರ್ಷಭಃ|
03049005e ಅರ್ಜುನಃ ಪಾಂಡುಪುತ್ರಾಣಾಂ ಯಸ್ಮಿನ್ಪ್ರಾಣಾಃ ಪ್ರತಿಷ್ಠಿತಾಃ||
ಆಗ ಮಹಾಬಾಹು ಭೀಮನು ಯುಧಿಷ್ಠಿರನಿಗೆ ಹೇಳಿದನು: “ಮಹಾರಾಜ! ಪಾಂಡುಪುತ್ರರ ಪ್ರಾಣವು ಯಾರ ಮೇಲೆ ಅವಲಂಬಿಸಿದೆಯೋ ಆ ಪುರುಷರ್ಷಭ ಅರ್ಜುನನು ನಿನ್ನ ಆದೇಶದ ಮೇಲೆಯೇ ಹೋಗಿದ್ದಾನೆ.
03049006a ಯಸ್ಮಿನ್ವಿನಷ್ಟೇ ಪಾಂಚಾಲಾಃ ಸಹ ಪುತ್ರೈಸ್ತಥಾ ವಯಂ|
03049006c ಸಾತ್ಯಕಿರ್ವಾಸುದೇವಶ್ಚ ವಿನಶ್ಯೇಯುರಸಂಶಯಂ||
ಒಂದುವೇಳೆ ಅವನಿಗೇನಾದರೂ ವಿನಷ್ಟವಾದರೆ, ಪುತ್ರಸಮೇತರಾಗಿ ನಾವು, ಪಾಂಚಾಲರು, ಸಾತ್ಯಕಿ-ವಾಸುದೇವ ಎಲ್ಲರೂ ವಿನಾಶಹೊಂದುತ್ತೇವೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
03049007a ಯೋಽಸೌ ಗಚ್ಚತಿ ತೇಜಸ್ವೀ ಬಹೂನ್ಕ್ಲೇಶಾನಚಿಂತಯನ್|
03049007c ಭವನ್ನಿಯೋಗಾದ್ಬೀಭತ್ಸುಸ್ತತೋ ದುಃಖತರಂ ನು ಕಿಂ||
ನಿನ್ನ ಆದೇಶದ ಮೇರೆಗೆ ತೇಜಸ್ವಿ ಬೀಭತ್ಸುವು ಮುಂದಿನ ಹಲವಾರು ಕ್ಲೇಶಗಳ ಕುರಿತು ಚಿಂತಿಸದೆಯೇ ಹೊರಟುಹೋದ ಎನ್ನುವುದಕ್ಕಿಂತ ದುಃಖತರವಾದದ್ದು ಇನ್ನೇನಿದೆ?
03049008a ಯಸ್ಯ ಬಾಹೂ ಸಮಾಶ್ರಿತ್ಯ ವಯಂ ಸರ್ವೇ ಮಹಾತ್ಮನಃ|
03049008c ಮನ್ಯಾಮಹೇ ಜಿತಾನಾಜೌ ಪರಾನ್ಪ್ರಾಪ್ತಾಂ ಚ ಮೇದಿನೀಂ||
ನಮ್ಮ ಶತ್ರುಗಳನ್ನು ಯುದ್ಧದಲ್ಲಿ ಸೋಲಿಸಿ ಈ ಮೇದಿನಿಯನ್ನು ಪಡೆಯಬಹುದೆನ್ನುವ ಯೋಚನೆಯಿಂದ ನಾವೆಲ್ಲರೂ ಆ ಮಹಾತ್ಮನ ಬಾಹುಗಳ ಆಶ್ರಯ ಹೊಂದಿದ್ದೆವು.
03049009a ಯಸ್ಯ ಪ್ರಭಾವಾನ್ನ ಮಯಾ ಸಭಾಮಧ್ಯೇ ಧನುಷ್ಮತಃ|
03049009c ನೀತಾ ಲೋಕಮಮುಂ ಸರ್ವೇ ಧಾರ್ತರಾಷ್ಟ್ರಾಃ ಸಸೌಬಲಾಃ||
ಧಾರ್ತರಾಷ್ಟ್ರರು ಮತ್ತು ಸೌಬಲನನ್ನು ಸಭಾಮದ್ಯದಲ್ಲಿ ನಾನು ಕೊಲ್ಲುವುದನ್ನು ತಡೆಹಿಡಿದಿದ್ದುದೇ ಆ ಧನುಷ್ಮತನ ಪ್ರಭಾವದಿಂದ.
03049010a ತೇ ವಯಂ ಬಾಹುಬಲಿನಃ ಕ್ರೋಧಮುತ್ಥಿತಮಾತ್ಮನಃ|
03049010c ಸಹಾಮಹೇ ಭವನ್ಮೂಲಂ ವಾಸುದೇವೇನ ಪಾಲಿತಾಃ||
ವಾಸುದೇವನಿಂದ ಪಾಲಿತರಾದ ಮತ್ತು ಬಾಹುಬಲಿಗಳಾದ ನಾವು, ನಮ್ಮ ಕ್ರೋಧವನ್ನು ನಿನ್ನಿಂದ ಹುಟ್ಟಿದ ಸಹನಾಶಕ್ತಿಯಿಂದ ಸಹಿಸಿಕೊಳ್ಳುತ್ತಿದ್ದೇವೆ.
03049011a ವಯಂ ಹಿ ಸಹ ಕೃಷ್ಣೇನ ಹತ್ವಾ ಕರ್ಣಮುಖಾನ್ಪರಾನ್|
03049011c ಸ್ವಬಾಹುವಿಜಿತಾಂ ಕೃತ್ಸ್ನಾಂ ಪ್ರಶಾಸೇಮ ವಸುಂಧರಾಂ||
ಯಾಕೆಂದರೆ, ಒಂದು ವೇಳೆ ಕೃಷ್ಣನ ಸಹಿತ ನಾವು ಕರ್ಣನ ಮುಖಂಡತ್ವದಲ್ಲಿರುವ ಶತ್ರುಗಳನ್ನು ಕೊಂದಿದ್ದರೆ, ಸ್ವ-ಬಾಹುಗಳಿಂದ ಗೆದ್ದ ಈ ಎಲ್ಲ ಭೂಮಿಯನ್ನು ಆಳಬಹುದಾಗಿತ್ತು!
03049012a ಭವತೋ ದ್ಯೂತದೋಷೇಣ ಸರ್ವೇ ವಯಮುಪಪ್ಲುತಾಃ|
03049012c ಅಹೀನಪೌರುಷಾ ರಾಜನ್ಬಲಿಭಿರ್ಬಲವತ್ತಮಾಃ||
ಪೌರುಷತ್ವದ ಯಾವುದೂ ಕೊರತೆಯಿಲ್ಲದ, ಬಲಿಗಳಿಗಿಂಥ ಬಲವತ್ತರಾದ ನಾವೆಲ್ಲಾ ಈ ದುಃಸ್ತಿಥಿಗೆ ಬರಲು ನಿನ್ನ ದ್ಯೂತ ದೋಷವೇ ಕಾರಣ!
03049013a ಕ್ಷಾತ್ರಂ ಧರ್ಮಂ ಮಹಾರಾಜ ಸಮವೇಕ್ಷಿತುಮರ್ಹಸಿ|
03049013c ನ ಹಿ ಧರ್ಮೋ ಮಹಾರಾಜ ಕ್ಷತ್ರಿಯಸ್ಯ ವನಾಶ್ರಯಃ||
03049013e ರಾಜ್ಯಮೇವ ಪರಂ ಧರ್ಮಂ ಕ್ಷತ್ರಿಯಸ್ಯ ವಿದುರ್ಬುಧಾಃ|
ಮಹಾರಾಜ! ಕ್ಷಾತ್ರಧರ್ಮವನ್ನು ಸಮವೇಕ್ಷಿಸು. ಮಹಾರಾಜ! ವನಾಶ್ರಯವು ಕ್ಷತ್ರಿಯನ ಧರ್ಮವಲ್ಲ. ರಾಜ್ಯವೇ ಕ್ಷತ್ರಿಯನ ಪರಮ ಧರ್ಮ ಎಂದು ತಿಳಿದವರು ತಿಳಿದಿರುತ್ತಾರೆ.
03049014a ಸ ಕ್ಷತ್ರಧರ್ಮವಿದ್ರಾಜನ್ಮಾ ಧರ್ಮ್ಯಾನ್ನೀನಶಃ ಪಥಃ||
03049014c ಪ್ರಾಂಗ್ದ್ವಾದಶ ಸಮಾ ರಾಜನ್ಧಾರ್ತರಾಷ್ಟ್ರಾನ್ನಿಹನ್ಮಹಿ|
ಕ್ಷತ್ರಧರ್ಮವನ್ನು ತಿಳಿದಂತಹ ರಾಜ! ಧರ್ಮಪಥವನ್ನು ನಾಶಮಾಡಬೇಡ. ರಾಜ! ಹನ್ನೆರಡು ವರುಷಗಳು ಮುಗಿಯುವುದರೊಳಗೇ ಧಾರ್ತರಾಷ್ಟ್ರರನ್ನು ಕೊಂದು ಬಿಡೋಣ.
03049015a ನಿವರ್ತ್ಯ ಚ ವನಾತ್ಪಾರ್ಥಮಾನಾಯ್ಯ ಚ ಜನಾರ್ದನಂ||
03049015c ವ್ಯೂಢಾನೀಕಾನ್ಮಹಾರಾಜ ಜವೇನೈವ ಮಹಾಹವೇ|
03049015e ಧಾರ್ತರಾಷ್ಟ್ರಾನಮುಂ ಲೋಕಂ ಗಮಯಾಮಿ ವಿಶಾಂ ಪತೇ||
ವನದಿಂದ ಹಿಂದಿರುಗಿ, ಪಾರ್ಥ-ಜನಾರ್ದನರನ್ನು ಕರೆದುಕೊಂಡು, ಮಹಾ ಯುದ್ಧದಲ್ಲಿ ಅವರೆಲ್ಲ ಪಡೆಗಳನ್ನೂ ಬಹುಬೇಗ ನಾಶಮಾಡಿಬಿಡೋಣ. ವಿಶಾಂಪತೇ! ನಾನು ಧಾರ್ತರಾಷ್ಟ್ರರೆಲ್ಲರನ್ನೂ ಬೇರೆ ಲೋಕಕ್ಕೆ ಕಳುಹಿಸಿಬಿಡುತ್ತೇನೆ.
03049016a ಸರ್ವಾನಹಂ ಹನಿಷ್ಯಾಮಿ ಧಾರ್ತರಾಷ್ಟ್ರಾನ್ಸಸೌಬಲಾನ್|
03049016c ದುರ್ಯೋಧನಂ ಚ ಕರ್ಣಂ ಚ ಯೋ ವಾನ್ಯಃ ಪ್ರತಿಯೋತ್ಸ್ಯತೇ||
ನಾನು ಸೌಬಲ ಸಹಿತರಾದ ಆ ಎಲ್ಲ ಧಾರ್ತರಾಷ್ಟ್ರರನ್ನು ದುರ್ಯೋಧನ, ಕರ್ಣ, ಮತ್ತು ಪ್ರತಿಸ್ಪರ್ಧಿಸುವ ಎಲ್ಲರನ್ನೂ ಸಂಹಾರ ಮಾಡುತ್ತೇನೆ.
03049017a ಮಯಾ ಪ್ರಶಮಿತೇ ಪಶ್ಚಾತ್ತ್ವಮೇಷ್ಯಸಿ ವನಾತ್ಪುನಃ|
03049017c ಏವಂ ಕೃತೇ ನ ತೇ ದೋಷೋ ಭವಿಷ್ಯತಿ ವಿಶಾಂ ಪತೇ||
ನಾನು ಅವರೆಲ್ಲರನ್ನೂ ಮುಗಿಸಿದ ಬಳಿಕ ನೀನು ವನದಿಂದ ಮರಳಬಹುದು. ವಿಶಾಂಪತೇ! ಹೀಗೆ ಮಾಡುವುದರಿಂದ ನಿನಗೆ ಯಾವುದೇ ದೋಷವೂ ಬರುವುದಿಲ್ಲ.
03049018a ಯಜ್ಞೈಶ್ಚ ವಿವಿಧೈಸ್ತಾತ ಕೃತಂ ಪಾಪಮರಿಂದಮ|
03049018c ಅವಧೂಯ ಮಹಾರಾಜ ಗಚ್ಚೇಮ ಸ್ವರ್ಗಮುತ್ತಮಂ||
ಭ್ರಾತಾ ಅರಿಂದಮ! ಮಹಾರಾಜ! ಇದರಿಂದ ಯಾವುದೇ ಪಾಪವನ್ನು ಮಾಡಿದ್ದೇವೆಂದಾದರೆ, ಅವೆಲ್ಲವನ್ನೂ ಒಂದಲ್ಲ ಒಂದು ಯಜ್ಞದಿಂದ ತೊಳೆದು ಉತ್ತಮ ಸ್ವರ್ಗಕ್ಕೆ ಹೋಗೋಣ.
03049019a ಏವಮೇತದ್ಭವೇದ್ರಾಜನ್ಯದಿ ರಾಜಾ ನ ಬಾಲಿಶಃ|
03049019c ಅಸ್ಮಾಕಂ ದೀರ್ಘಸೂತ್ರಃ ಸ್ಯಾದ್ಭವಾನ್ಧರ್ಮಪರಾಯಣಃ||
ನಮ್ಮ ರಾಜನು ಬಾಲಿಶನಾಗಿರದಿದ್ದರೆ ಅಥವಾ ದೀರ್ಘಸೂತ್ರನಾಗಿರದಿದ್ದರೆ, ಇದು ಹೀಗೆಯೇ ಆಗಬೇಕಾಗಿತ್ತು. ಆದರೆ ನೀನು ಧರ್ಮಪರಾಯಣನಾಗಿದ್ದೀಯೆ.
03049020a ನಿಕೃತ್ಯಾ ನಿಕೃತಿಪ್ರಜ್ಞಾ ಹಂತವ್ಯಾ ಇತಿ ನಿಶ್ಚಯಃ|
03049020c ನ ಹಿ ನೈಕೃತಿಕಂ ಹತ್ವಾ ನಿಕೃತ್ಯಾ ಪಾಪಮುಚ್ಯತೇ||
ಮೋಸಗೊಳಿಸುವವರನ್ನು ಮೋಸದಿಂದಲೇ ಕೊಲ್ಲಬೇಕೆಂದು ನಿಶ್ಚಯವಾಗಿದೆ. ಕೃತ್ರಿಮರನ್ನು ಕೃತ್ರಿಮದಿಂದ ಕೊಂದರೆ ಪಾಪವಿಲ್ಲ ಎಂದು ಹೇಳುತ್ತಾರೆ.
03049021a ತಥಾ ಭಾರತ ಧರ್ಮೇಷು ಧರ್ಮಜ್ಞೈರಿಹ ದೃಶ್ಯತೇ|
03049021c ಅಹೋರಾತ್ರಂ ಮಹಾರಾಜ ತುಲ್ಯಂ ಸಂವತ್ಸರೇಣ ಹಿ||
ಭಾರತ! ಮಹಾರಾಜ! ಇದೂ ಅಲ್ಲದೇ ಧರ್ಮಜ್ಞರು ಒಂದು ಅಹೋರಾತ್ರಿಯು ಒಂದು ವರ್ಷಕ್ಕೆ ಸಮ ಎಂದು ಧರ್ಮಗಳಲ್ಲಿ ಕಂಡುಕೊಂಡಿದ್ದಾರೆ.
03049022a ತಥೈವ ವೇದವಚನಂ ಶ್ರೂಯತೇ ನಿತ್ಯದಾ ವಿಭೋ|
03049022c ಸಂವತ್ಸರೋ ಮಹಾರಾಜ ಪೂರ್ಣೋ ಭವತಿ ಕೃಚ್ಚ್ರತಃ||
ಸ್ವಾಮೀ! ಮಹಾರಾಜ! ಈ ತರಹ ಕಷ್ಟಕಾಲದಲ್ಲಿ ವರ್ಷಗಳು ಪೂರ್ಣವಾಗುತ್ತವೆ ಎಂದು ನಿತ್ಯವೂ ವೇದವಚನವನ್ನು ಕೇಳುತ್ತೇವೆ.
03049023a ಯದಿ ವೇದಾಃ ಪ್ರಮಾಣಂ ತೇ ದಿವಸಾದೂರ್ಧ್ವಮಚ್ಯುತ|
03049023c ತ್ರಯೋದಶ ಸಮಾಃ ಕಾಲೋ ಜ್ಞಾಯತಾಂ ಪರಿನಿಷ್ಠಿತಃ||
ಅಚ್ಯುತ! ವೇದಗಳೇ ನಿನ್ನ ಪ್ರಮಾಣಗಳಾಗಿದ್ದರೆ, ಒಂದೇ ದಿನದ ನಂತರ ಹದಿಮೂರು ವರ್ಷಗಳ ಅವಧಿಯೂ ಮುಗಿಯಿತು ಎಂದು ತಿಳಿ.
03049024a ಕಾಲೋ ದುರ್ಯೋಧನಂ ಹಂತುಂ ಸಾನುಬಂಧಮರಿಂದಮ|
03049024c ಏಕಾಗ್ರಾಂ ಪೃಥಿವೀಂ ಸರ್ವಾಂ ಪುರಾ ರಾಜನ್ಕರೋತಿ ಸಃ||
ಅರಿಂದಮ! ದುರ್ಯೋಧನನು ಇಡೀ ಪೃಥ್ವಿಯನ್ನು ತನ್ನಡಿಯಲ್ಲಿ ಮಾಡಿಕೊಳ್ಳುವ ಮೊದಲೇ ಅವನು ಮತ್ತು ಅವನ ಸಂಬಂಧಿಗಳೆಲ್ಲರನ್ನೂ ಸಂಹಾರ ಮಾಡಲು ಇದೇ ಸಮಯ.”
03049025a ಏವಂ ಬ್ರುವಾಣಂ ಭೀಮಂ ತು ಧರ್ಮರಾಜೋ ಯುಧಿಷ್ಠಿರಃ|
03049025c ಉವಾಚ ಸಾಂತ್ವಯನ್ರಾಜಾ ಮೂರ್ಧ್ನ್ಯುಪಾಘ್ರಾಯ ಪಾಂಡವಂ||
ರಾಜನ್! ಈ ರೀತಿ ಮಾತನಾಡುತ್ತಿದ್ದ ಪಾಂಡವ ಭೀಮನ ಶಿರವನ್ನು ಆಘ್ರಾಣಿಸಿ, ಸಂತಯಿಸುತ್ತಾ ಧರ್ಮರಾಜ ಯುಧಿಷ್ಠಿರನು ಹೇಳಿದನು:
03049026a ಅಸಂಶಯಂ ಮಹಾಬಾಹೋ ಹನಿಷ್ಯಸಿ ಸುಯೋಧನಂ|
03049026c ವರ್ಷಾತ್ತ್ರಯೋದಶಾದೂರ್ಧ್ವಂ ಸಹ ಗಾಂಡೀವಧನ್ವನಾ||
“ಮಹಾಬಾಹು! ನಿಸ್ಸಂಶಯವಾಗಿ ಗಾಂಡೀವ ಧನುರ್ಧಾರಿಯ ಜೊತೆಗೂಡಿ ನೀನು ಸುಯೋಧನನನ್ನು ಕೊಲ್ಲುತ್ತೀಯೆ. ಆದರೆ ಹದಿಮೂರು ವರ್ಷಗಳ ನಂತರ.
03049027a ಯಚ್ಚ ಮಾ ಭಾಷಸೇ ಪಾರ್ಥ ಪ್ರಾಪ್ತಃ ಕಾಲ ಇತಿ ಪ್ರಭೋ|
03049027c ಅನೃತಂ ನೋತ್ಸಹೇ ವಕ್ತುಂ ನ ಹ್ಯೇತನ್ಮಯಿ ವಿದ್ಯತೇ||
03049028a ಅಂತರೇಣಾಪಿ ಕೌಂತೇಯ ನಿಕೃತಿಂ ಪಾಪನಿಶ್ಚಯಂ|
03049028c ಹಂತಾ ತ್ವಮಸಿ ದುರ್ಧರ್ಷ ಸಾನುಬಂಧಂ ಸುಯೋಧನಂ||
ಪಾರ್ಥ! ನೀನೇನು ಹೇಳುತ್ತಿದ್ದೀಯೆ - ಪ್ರಭು! ಕಾಲ ಪ್ರಾಪ್ತಿಯಾಗಿದೆ - ಎಂದು? ಅನೃತವನ್ನು ಹೇಳಲು ನನಗೆ ಇಷ್ಟವಿಲ್ಲ. ಯಾಕೆಂದರೆ ನನಗೆ ಅದು ಗೊತ್ತಿಲ್ಲ. ಕೌಂತೇಯ! ಮೋಸವನ್ನು ಪಾಪಿಗಳೇ ನಿಶ್ಚಯಿಸುತ್ತಾರೆ. ಆದರೂ ನೀನು ಬಂಧುಸಮೇತ ಸುಯೋಧನನನ್ನು ಕೊಲ್ಲುತ್ತೀಯೆ.”
03049029a ಏವಂ ಬ್ರುವತಿ ಭೀಮಂ ತು ಧರ್ಮರಾಜೇ ಯುಧಿಷ್ಠಿರೇ|
03049029c ಆಜಗಾಮ ಮಹಾಭಾಗೋ ಬೃಹದಶ್ವೋ ಮಹಾನೃಷಿಃ||
ಧರ್ಮರಾಜ ಯುಧಿಷ್ಠಿರನು ಈ ರೀತಿ ಭೀಮನಿಗೆ ಹೇಳುತ್ತಿರಲು, ಮಹಾಭಾಗ, ಮಹಾನೃಷಿ ಬೃಹದಶ್ವನು ಅಲ್ಲಿಗೆ ಆಗಮಿಸಿದನು.
03049030a ತಮಭಿಪ್ರೇಕ್ಷ್ಯ ಧರ್ಮಾತ್ಮಾ ಸಂಪ್ರಾಪ್ತಂ ಧರ್ಮಚಾರಿಣಂ|
03049030c ಶಾಸ್ತ್ರವನ್ಮಧುಪರ್ಕೇಣ ಪೂಜಯಾಮಾಸ ಧರ್ಮರಾಟ್||
ಆ ಧರ್ಮಚಾರಿಯು ಆಗಮಿಸಿದ್ದುದನ್ನು ನೋಡಿ ಧರ್ಮಾತ್ಮ ಧರ್ಮರಾಜನು ಶಾಸ್ತ್ರೋಕ್ತವಾಗಿ ಮಧುಪರ್ಕದಿಂದ ಪೂಜಿಸಿದನು.
03049031a ಆಶ್ವಸ್ತಂ ಚೈನಮಾಸೀನಮುಪಾಸೀನೋ ಯುಧಿಷ್ಠಿರಃ|
03049031c ಅಭಿಪ್ರೇಕ್ಷ್ಯ ಮಹಾಬಾಹುಃ ಕೃಪಣಂ ಬಃವಭಾಷತ||
ಅತಿಥಿಯು ಕುಳಿತುಕೊಂಡು ವಿಶ್ರಾಂತಿಸಿದ ನಂತರ ಮಹಾಬಾಹು ಯುಧಿಷ್ಠಿರನು ಅವನ ಎದುರಿನಲ್ಲಿ ಶೋಕತಪ್ತನಾಗಿ ಹೇಳಿದನು:
03049032a ಅಕ್ಷದ್ಯೂತೇನ ಭಗವನ್ಧನಂ ರಾಜ್ಯಂ ಚ ಮೇ ಹೃತಂ|
03049032c ಆಹೂಯ ನಿಕೃತಿಪ್ರಜ್ಞೈಃ ಕಿತವೈರಕ್ಷಕೋವಿದೈಃ||
“ಭಗವನ್! ಧನ ಮತ್ತು ರಾಜ್ಯವನ್ನು ದ್ಯೂತದಲ್ಲಿ ಪಣವಿಡಿಸಿಕೊಂಡು ಮೋಸ ಮತ್ತು ದ್ಯೂತ ಎರಡರಲ್ಲೂ ಪ್ರವೀಣರಾದ ಮೋಸಕೋರರು ಅಪಹರಿಸಿದರು.
03049033a ಅನಕ್ಷಜ್ಞಸ್ಯ ಹಿ ಸತೋ ನಿಕೃತ್ಯಾ ಪಾಪನಿಶ್ಚಯೈಃ|
03049033c ಭಾರ್ಯಾ ಚ ಮೇ ಸಭಾಂ ನೀತಾ ಪ್ರಾಣೇಭ್ಯೋಽಪಿ ಗರೀಯಸೀ||
ನನಗೆ ಜೂಜಾಡುವುದು ಗೊತ್ತಿರಲಿಲ್ಲ. ಆದರೂ ಆ ಪಾಪನಿಶ್ಚಯಿಗಳು ನನ್ನನ್ನು ಮೋಸಗೊಳಿಸಿ, ನನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿದ್ದ ನನ್ನ ಭಾರ್ಯೆಯನ್ನು ಸಭೆಗೆ ಎಳೆದು ತಂದರು.
03049034a ಅಸ್ತಿ ರಾಜಾ ಮಯಾ ಕಶ್ಚಿದಲ್ಪಭಾಗ್ಯತರೋ ಭುವಿ|
03049034c ಭವತಾ ದೃಷ್ಟಪೂರ್ವೋ ವಾ ಶ್ರುತಪೂರ್ವೋಽಪಿ ವಾ ಭವೇತ್|
03049034e ನ ಮತ್ತೋ ದುಃಖಿತತರಃ ಪುಮಾನಸ್ತೀತಿ ಮೇ ಮತಿಃ||
ನನಗಿಂಥಲೂ ಹೆಚ್ಚು ಭಾಗ್ಯಹೀನನಾದ ರಾಜನು ಬೇರೆ ಯಾರಾದರೂ - ನೀನು ನೋಡಿದ ಹಾಗೆ ಅಥವಾ ಕೇಳಿದ ಹಾಗೆ - ಇದ್ದನೇ ಈ ಭುವಿಯಲ್ಲಿ? ನನ್ನ ಅಭಿಪ್ರಾಯದಂತೆ ನನಗಿಂಥ ಹೆಚ್ಚಿನ ದುಃಖವನ್ನು ಅನುಭವಿಸಿದ ಮನುಷ್ಯನು ಇಲ್ಲವೇ ಇಲ್ಲ.”
03049035 ಬೃಹದಶ್ವ ಉವಾಚ|
03049035a ಯದ್ಬ್ರವೀಷಿ ಮಹಾರಾಜ ನ ಮತ್ತೋ ವಿದ್ಯತೇ ಕ್ವ ಚಿತ್|
03049035c ಅಲ್ಪಭಾಗ್ಯತರಃ ಕಶ್ಚಿತ್ಪುಮಾನಸ್ತೀತಿ ಪಾಂಡವ||
ಬೃಹದಶ್ವನು ಹೇಳಿದನು: “ಮಹಾರಾಜ! ಪಾಂಡವ! ನಿನಗಿಂಥಲೂ ಅಲ್ಪಭಾಗ್ಯಶಾಲಿ ಬಹುಷಃ ಇಲ್ಲ ಎಂದು ಹೇಳುತ್ತಿದ್ದೀಯಾ?
03049036a ಅತ್ರ ತೇ ಕಥಯಿಷ್ಯಾಮಿ ಯದಿ ಶುಶ್ರೂಷಸೇಽನಘ|
03049036c ಯಸ್ತ್ವತ್ತೋ ದುಃಖಿತತರೋ ರಾಜಾಸೀತ್ಪೃಥಿವೀಪತೇ||
ಅನಘ! ಪೃಥಿವೀಪತೇ! ನಿನಗೆ ಇಷ್ಟವಾದರೆ, ಇದಕ್ಕೆ ಒಂದು ಕಥೆಯನ್ನು ಹೇಳುತ್ತೇನೆ. ನಿನಗಿಂಥಲೂ ಹೆಚ್ಚು ದುಃಖಿತನಾದ ರಾಜನೊಬ್ಬನಿದ್ದ.”
03049037 ಯುಧಿಷ್ಠಿರ ಉವಾಚ|
03049037a ಅಥೈನಮಬ್ರವೀದ್ರಾಜಾ ಬ್ರವೀತು ಭಗವಾನಿತಿ|
03049037c ಇಮಾಮವಸ್ಥಾಂ ಸಂಪ್ರಾಪ್ತಂ ಶ್ರೋತುಮಿಚ್ಚಾಮಿ ಪಾರ್ಥಿವಂ||
ಯುಧಿಷ್ಠಿರನು ಹೇಳಿದನು: “ಭಗವಾನ್! ಹೇಳು. ನನ್ನ ಈ ಅವಸ್ಥೆಯನ್ನೇ ಹೊಂದಿದ್ದ ಪಾರ್ಥಿವನ ಕುರಿತು ಕೇಳಲು ಬಯಸುತ್ತೇನೆ.”
03049038 ಬೃಹದಶ್ವ ಉವಾಚ|
03049038a ಶೃಣು ರಾಜನ್ನವಹಿತಃ ಸಹ ಭ್ರಾತೃಭಿರಚ್ಯುತ|
03049038c ಯಸ್ತ್ವತ್ತೋ ದುಃಖಿತತರೋ ರಾಜಾಸೀತ್ಪೃಥಿವೀಪತೇ||
ಬೃಹದಶ್ವನು ಹೇಳಿದನು: “ರಾಜನ್! ಅಚ್ಯುತ! ಭ್ರಾತೃಗಳ ಸಹಿತ ನಿನಗಿಂಥ ಹೆಚ್ಚು ದುಃಖವನ್ನನುಭವಿಸಿದ ರಾಜ ಪೃಥಿವೀಪತಿಯ ಕುರಿತು ಗಮನವಿಟ್ಟು ಕೇಳು.
03049039a ನಿಷಧೇಷು ಮಹೀಪಾಲೋ ವೀರಸೇನ ಇತಿ ಸ್ಮ ಹ|
03049039c ತಸ್ಯ ಪುತ್ರೋಽಭವನ್ನಾಮ್ನಾ ನಲೋ ಧರ್ಮಾರ್ಥದರ್ಶಿವಾನ್||
ವೀರಸೇನ ಎನ್ನುವ ನಿಷಧದ ಮಹೀಪಾಲನಿದ್ದನು. ಅವನಿಗೆ ಧರ್ಮಾರ್ಥದರ್ಶಿಯಾದ ನಲ ಎಂಬ ಹೆಸರಿನ ಪುತ್ರನಿದ್ದನು.
03049040a ಸ ನಿಕೃತ್ಯಾ ಜಿತೋ ರಾಜಾ ಪುಷ್ಕರೇಣೇತಿ ನಃ ಶ್ರುತಂ|
03049040c ವನವಾಸಮದುಃಖಾರ್ಹೋ ಭಾರ್ಯಯಾ ನ್ಯವಸತ್ಸಹ||
ರಾಜನ್! ಪುಷ್ಕರನು ಮೋಸದಿಂದ ಅವನನ್ನು ಗೆದ್ದನು ಮತ್ತು ದುಃಖಕ್ಕೆ ಅನರ್ಹನಾದ ಅವನು ಭಾರ್ಯೆಯ ಸಹಿತ ವನವಾಸವನ್ನು ಅನುಭವಿಸಿದನು ಎಂದು ಕೇಳಿದ್ದೇವೆ.
03049041a ನ ತಸ್ಯಾಶ್ವೋ ನ ಚ ರಥೋ ನ ಭ್ರಾತಾ ನ ಚ ಬಾಂಧವಾಃ|
03049041c ವನೇ ನಿವಸತೋ ರಾಜಂ ಶಿಷ್ಯಂತೇ ಸ್ಮ ಕದಾ ಚನ||
ವನದಲ್ಲಿ ವಾಸಿಸುತ್ತಿದ್ದ ಆ ರಾಜನಿಗೆ ಯಾವುದೇರೀತಿಯ ಸಹಾಯಗಳಿರಲಿಲ್ಲ: ಅಶ್ವಗಳಿರಲಿಲ್ಲ, ರಥವಿರಲಿಲ್ಲ, ಸಹೋದರರಿರಲಿಲ್ಲ, ಬಾಂಧವರಿರಲಿಲ್ಲ.
03049042a ಭವಾನ್ ಹಿ ಸಂವೃತೋ ವೀರೈರ್ಭ್ರಾತೃಭಿರ್ದೇವಸಮ್ಮಿತೈಃ|
03049042c ಬ್ರಹ್ಮಕಲ್ಪೈರ್ದ್ವಿಜಾಗ್ರ್ಯೈಶ್ಚ ತಸ್ಮಾನ್ನಾರ್ಹಸಿ ಶೋಚಿತುಂ||
ನೀನಾದರೂ ದೇವಸಮ್ಮಿತ ವೀರ ಭ್ರಾತೃಗಳಿಂದ ಮತ್ತು ಬ್ರಹ್ಮಕಲ್ಪರಾದ ದ್ವಿಜಾಗ್ರರಿಂದ ಸುತ್ತುವರೆದಿದ್ದೀಯೆ. ನೀನು ಶೋಕಿಸುವುದು ಸರಿಯಲ್ಲ.”
03049043 ಯುಧಿಷ್ಠಿರ ಉವಾಚ|
03049043a ವಿಸ್ತರೇಣಾಹಮಿಚ್ಚಾಮಿ ನಲಸ್ಯ ಸುಮಹಾತ್ಮನಃ|
03049043c ಚರಿತಂ ವದತಾಂ ಶ್ರೇಷ್ಠ ತನ್ಮಮಾಖ್ಯಾತುಮರ್ಹಸಿ||
ಯುಧಿಷ್ಠಿರನು ಹೇಳಿದನು: “ಸುಮಹಾತ್ಮ ನಲನ ಚರಿತವನ್ನು ವಿಸ್ತಾರವಾಗಿ ಕೇಳಲು ಬಯಸುತ್ತೇನೆ. ಶ್ರೇಷ್ಠನಾದ ನೀನು ನನಗೆ ಆ ಕಥೆಯನ್ನು ಹೇಳುವಂಥವನಾಗು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ಏಕೋನಪಂಚಾಶತ್ತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲವತ್ತೊಂಭತ್ತನೆಯ ಅಧ್ಯಾಯವು.

[1]ಪುಣೆಯ ಸಂಪುಟದ ಪ್ರಕಾರ ಈ ಅಧ್ಯಾಯವು ಇಂದ್ರಲೋಕಾಭಿಗಮನ ಪರ್ವದಲ್ಲಿ ಬರುತ್ತದೆ. ಆದರೆ ಗೋರಖಪುರದ ಸಂಪುಟದಲ್ಲಿ ಈ ಅಧ್ಯಾಯವನ್ನು ನಲೋಪಾಖ್ಯಾನಪರ್ವದಲ್ಲಿ ಸೇರಿಸಲಾಗಿದೆ.