ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ
Contents
Toggle೪೪
ಇಂದ್ರಸಭೆಯಲ್ಲಿ ಅರ್ಜುನನಿಗೆ ಸ್ವಾಗತ
ಅಮರಾಮತಿಯಲ್ಲಿ ಅರ್ಜುನನ ಆಗಮನ, ಸ್ವಾಗತ (೧-೧೫). ಇಂದ್ರನು ಅರ್ಜುನನನ್ನು ಪ್ರೀತಿಯಿಂದ ಬರಮಾಡಿಕೊಂಡು, ಅರ್ಧ ಸಿಂಹಾಸನವನ್ನು ಕೊಟ್ಟಿದ್ದುದು (೧೬-೩೨).
03044001 ವೈಶಂಪಾಯನ ಉವಾಚ|
03044001a ಸ ದದರ್ಶ ಪುರೀಂ ರಮ್ಯಾಂ ಸಿದ್ಧಚಾರಣಸೇವಿತಾಂ|
03044001c ಸರ್ವರ್ತುಕುಸುಮೈಃ ಪುಣ್ಯೈಃ ಪಾದಪೈರುಪಶೋಭಿತಾಂ||
03044002a ತತ್ರ ಸೌಗಂಧಿಕಾನಾಂ ಸ ದ್ರುಮಾಣಾಂ ಪುಣ್ಯಗಂಧಿನಾಂ|
03044002c ಉಪವೀಜ್ಯಮಾನೋ ಮಿಶ್ರೇಣ ವಾಯುನಾ ಪುಣ್ಯಗಂಧಿನಾ||
ವೈಶಂಪಾಯನನು ಹೇಳಿದನು: “ಅವನು ಸಿದ್ಧಚಾರಣರಿಂದ ಸೇವಿತ, ಎಲ್ಲೆಲ್ಲೂ ಕುಸುಮ, ಪುಣ್ಯ ವೃಕ್ಷಗಳಿಂದ ಶೋಭಿತ, ರಮ್ಯ ಪುರಿಯನ್ನು ನೋಡಿದನು. ಅಲ್ಲಿ ಪುಣ್ಯಸುಗಂಧಿತ ಸೌಗಂಧಿಕಗಳ ವೃಕ್ಷಗಳಿದ್ದವು ಮತ್ತು ಆ ಪುಣ್ಯಗಂಧಿ ವೃಕ್ಷಗಳಿಂದ ಬೀಸಿದ ಗಾಳಿಯು ಅವನಿಗೆ ಚಾಮರಗಳಂತೆ ಬೀಸಿದವು.
03044003a ನಂದನಂ ಚ ವನಂ ದಿವ್ಯಮಪ್ಸರೋಗಣಸೇವಿತಂ|
03044003c ದದರ್ಶ ದಿವ್ಯಕುಸುಮೈರಾಹ್ವಯದ್ಭಿರಿವ ದ್ರುಮೈಃ||
ಅಪ್ಸರಗಣಗಳಿಂದ ಸೇವಿತ, ದಿವ್ಯ ಕುಸುಮಗಳಿಂದ ಕರೆಯುತ್ತಿವೆಯೋ ಎನ್ನುವ ಮರಗಳಿಂದ ಕೂಡಿದ ದಿವ್ಯ ನಂದನವನವನ್ನು ಕಂಡನು.
03044004a ನಾತಪ್ತತಪಸಾ ಶಕ್ಯೋ ದ್ರಷ್ಟುಂ ನಾನಾಹಿತಾಗ್ನಿನಾ|
03044004c ಸ ಲೋಕಃ ಪುಣ್ಯಕರ್ತೄಣಾಂ ನಾಪಿ ಯುದ್ಧಪರಾಙ್ಮುಖೈಃ||
03044005a ನಾಯಜ್ವಭಿರ್ನಾನೃತಕೈರ್ನ ವೇದಶ್ರುತಿವರ್ಜಿತೈಃ|
03044005c ನಾನಾಪ್ಲುತಾಂಗೈಸ್ತೀರ್ಥೇಷು ಯಜ್ಞದಾನಬಹಿಷ್ಕೃತೈಃ||
ತಪಸ್ಸನ್ನು ತಪಿಸದೇ ಇದ್ದ ಮತ್ತು ಅಗ್ನಿಯನ್ನು ಪೂಜಿಸದೇ ಇದ್ದವರಿಗೆ, ಯುದ್ಧದಲ್ಲಿ ಪರಾಙ್ಮುಖರಾದವರಿಗೆ, ಯಜ್ಞಗಳನ್ನು ಮಾಡಲು ಅಸಮರ್ಥರಾದವರಿಗೆ, ವೇದ ಮತ್ತು ಶೃತಿಗಳನ್ನು ತ್ಯಜಿಸಿದವರಿಗೆ, ಸುಳ್ಳು ಹೇಳುವವರಿಗೆ, ತೀರ್ಥಗಳಲ್ಲಿ ಮುಳುಗಿ ಸ್ನಾನಮಾಡದೇ ಇರುವವರಿಗೆ ಮತ್ತು ಯಜ್ಞ-ದಾನಗಳನ್ನು ದೂರವಿಟ್ಟವರಿಗೆ ಆ ಪುಣ್ಯಕರ್ತೃಗಳ ಲೋಕವನ್ನು ನೋಡಲು ಶಕ್ಯವಾಗುವುದಿಲ್ಲ.
03044006a ನಾಪಿ ಯಜ್ಞಹನೈಃ ಕ್ಷುದ್ರೈರ್ದ್ರಷ್ಟುಂ ಶಕ್ಯಃ ಕಥಂ ಚನ|
03044006c ಪಾನಪೈರ್ಗುರುತಲ್ಪೈಶ್ಚ ಮಾಂಸಾದೈರ್ವಾ ದುರಾತ್ಮಭಿಃ||
ಯಜ್ಞಗಳನ್ನು ಕೆಡಿಸುವವರಿಗೂ, ಕುಡಿದು ದುಷ್ಟಕೃತ್ಯಗಳನ್ನು ಮಾಡುವವರಿಗೂ, ತಮ್ಮ ಗುರುಗಳ ಹಾಸಿಗೆಯನ್ನು ಉಲ್ಲಂಘಿಸುವರಿಗೂ, ಮಾಂಸವನ್ನು ತಿನ್ನುವ ದುರಾತ್ಮರಿಗೂ ಎಂದೂ ನೋಡಲಿಕ್ಕಾಗುವುದಿಲ್ಲ.
03044007a ಸ ತದ್ದಿವ್ಯಂ ವನಂ ಪಶ್ಯನ್ದಿವ್ಯಗೀತನಿನಾದಿತಂ|
03044007c ಪ್ರವಿವೇಶ ಮಹಾಬಾಹುಃ ಶಕ್ರಸ್ಯ ದಯಿತಾಂ ಪುರೀಂ||
ದಿವ್ಯ ಗೀತನಿನಾದದಿಂದ ತುಂಬಿದ್ದ ಆ ದಿವ್ಯ ವನವನ್ನು ನೋಡುತ್ತಾ ಆ ಮಹಾಬಾಹುವು ಶಕ್ರನ ಪ್ರೀತಿಯ ಪುರವನ್ನು ಪ್ರವೇಶಿಸಿದನು.
03044008a ತತ್ರ ದೇವವಿಮಾನಾನಿ ಕಾಮಗಾನಿ ಸಹಸ್ರಶಃ|
03044008c ಸಂಸ್ಥಿತಾನ್ಯಭಿಯಾತಾನಿ ದದರ್ಶಾಯುತಶಸ್ತದಾ||
ಅಲ್ಲಿ ಬೇಕಾದಲ್ಲಿ ಹೋಗಬಲ್ಲ ಸಹಸ್ರಾರು ದೇವ ವಿಮಾನಗಳು ನಿಂತಿರುವುದನ್ನು ಮತ್ತು ಹಾರಾಡುತ್ತಿರುವುವನ್ನು ನೋಡಿದನು.
03044009a ಸಂಸ್ತೂಯಮಾನೋ ಗಂಧರ್ವೈರಪ್ಸರೋಭಿಶ್ಚ ಪಾಂಡವಃ|
03044009c ಪುಷ್ಪಗಂಧವಹೈಃ ಪುಣ್ಯೈರ್ವಾಯುಭಿಶ್ಚಾನುವೀಜಿತಃ||
ಗಂಧರ್ವರೂ ಅಪ್ಸರರೂ ಪಾಂಡವನನ್ನು ಸಂಸ್ತುತಿಸುತ್ತಿರಲು ವಾಯುವು ಹೂವಿನ ಸುವಾಸನೆಯನ್ನು ಹೊತ್ತು ಪುಣ್ಯಕರ ಗಾಳಿಯನ್ನು ಬೀಸಿದನು.
03044010a ತತೋ ದೇವಾಃ ಸಗಂಧರ್ವಾಃ ಸಿದ್ಧಾಶ್ಚ ಪರಮರ್ಷಯಃ|
03044010c ಹೃಷ್ಟಾಃ ಸಂಪೂಜಯಾಮಾಸುಃ ಪಾರ್ಥಮಕ್ಲಿಷ್ಟಕಾರಿಣಂ||
ಆಗ ಗಂಧರ್ವರೂ, ಸಿದ್ಧರೂ, ಪರಮಋಷಿಗಳೂ ಸೇರಿ ದೇವತೆಗಳು ಸಂತೋಷದಿಂದ ಅಕ್ಲಿಷ್ಟಕರ್ಮಿಣಿ ಪಾರ್ಥನನ್ನು ಸ್ವಾಗತಿಸಿದರು.
03044011a ಆಶೀರ್ವಾದೈಃ ಸ್ತೂಯಮಾನೋ ದಿವ್ಯವಾದಿತ್ರನಿಸ್ವನೈಃ|
03044011c ಪ್ರತಿಪೇದೇ ಮಹಾಬಾಹುಃ ಶಂಖದುಂದುಭಿನಾದಿತಂ||
03044012a ನಕ್ಷತ್ರಮಾರ್ಗಂ ವಿಪುಲಂ ಸುರವೀಥೀತಿ ವಿಶ್ರುತಂ|
03044012c ಇಂದ್ರಾಜ್ಞಯಾ ಯಯೌ ಪಾರ್ಥಃ ಸ್ತೂಯಮಾನಃ ಸಮಂತತಃ||
ಆಶೀರ್ವಾದಗಳಿಂದ ಸ್ತುತಿಸಲ್ಪಟ್ಟು, ದಿವ್ಯವಾದ್ಯಗಳ ನಾದದೊಂದಿಗೆ ಶಂಖದುಂದುಭಿಗಳ ನಾದಗಳೊಂದಿಗೆ, ಮಹಾಬಾಹು ಪಾರ್ಥನು ಸುರಬೀದಿಯೆಂದು ವಿಶ್ರುತವಾದ ಆ ನಕ್ಷತ್ರಮಾರ್ಗದಲ್ಲಿ ನಡೆದು ಇಂದ್ರನ ಆಜ್ಞೆಯಂತೆ ಎಲ್ಲರೂ ಸುತ್ತುವರೆದು ಸ್ತುತಿಸುತ್ತಿರಲು ಮುಂದುವರೆದನು.
03044013a ತತ್ರ ಸಾಧ್ಯಾಸ್ತಥಾ ವಿಶ್ವೇ ಮರುತೋಽಥಾಶ್ವಿನಾವಪಿ|
03044013c ಆದಿತ್ಯಾ ವಸವೋ ರುದ್ರಾಸ್ತಥಾ ಬ್ರಹ್ಮರ್ಷಯೋಽಮಲಾಃ||
03044014a ರಾಜರ್ಷಯಶ್ಚ ಬಹವೋ ದಿಲೀಪಪ್ರಮುಖಾ ನೃಪಾಃ|
03044014c ತುಂಬುರುರ್ನಾರದಶ್ಚೈವ ಗಂಧರ್ವೌ ಚ ಹಹಾಹುಹೂ||
ಅಲ್ಲಿ ಸಾಧ್ಯರೂ, ವಿಶ್ಚೇದೇವರೂ, ಮರುತರೂ, ಅಶ್ವಿನಿಯರೂ, ಆದಿತ್ಯರೂ, ವಸುಗಳೂ, ರುದ್ರರೂ, ಅಮಲ ಬ್ರಹ್ಮರ್ಷಿಗಳೂ, ದಿಲೀಪನೇ ಮೊದಲಾದ ಬಹಳಷ್ಟು ಮಂದಿ ರಾಜರ್ಷಿ ನೃಪರೂ, ತುಂಬುರು ನಾರದರೂ, ಹಹಾಹುಹೂ ಮೊದಲಾದ ಗಂಧರ್ವರೂ ಸೇರಿದ್ದರು.
03044015a ತಾನ್ಸರ್ವಾನ್ಸ ಸಮಾಗಮ್ಯ ವಿಧಿವತ್ಕುರುನಂದನಃ|
03044015c ತತೋಽಪಶ್ಯದ್ದೇವರಾಜಂ ಶತಕ್ರತುಮರಿಂದಮಂ||
ಕುರುನಂದನನು ಅವರೆಲ್ಲರನ್ನೂ ವಿಧಿವತ್ತಾಗಿ ಭೇಟಿಮಾಡಿ, ನಂತರ ಅರಿಂದಮ ದೇವರಾಜ ಶತಕ್ರತುವನ್ನು ಕಂಡನು.
03044016a ತತಃ ಪಾರ್ಥೋ ಮಹಾಬಾಹುರವತೀರ್ಯ ರಥೋತ್ತಮಾತ್|
03044016c ದದರ್ಶ ಸಾಕ್ಷಾದ್ದೇವೇಂದ್ರಂ ಪಿತರಂ ಪಾಕಶಾಸನಂ||
ಆಗ ಮಹಾಬಾಹು ಪಾರ್ಥನು ಆ ಉತ್ತಮ ರಥದಿಂದಿಳಿದು ತನ್ನ ತಂದೆ ಪಾಕಶಾಸನಿ ಸಾಕ್ಷಾತ್ ದೇವೇಂದ್ರನನ್ನು ನೋಡಿದನು.
03044017a ಪಾಂಡುರೇಣಾತಪತ್ರೇಣ ಹೇಮದಂಡೇನ ಚಾರುಣಾ|
03044017c ದಿವ್ಯಗಂಧಾಧಿವಾಸೇನ ವ್ಯಜನೇನ ವಿಧೂಯತಾ||
ಬಂಗಾರದ ದಂಡದ ಸುಂದರ ಶ್ವೇತಛತ್ರವನ್ನು ಅವನ ಮೇಲೆ ಹಿಡಿಯಲಾಗಿತ್ತು ಮತ್ತು ದಿವ್ಯಗಂಧಗಳಿಂದ ಕೂಡಿದ ಚಾಮರವು ಬೀಸಿ ಅವನಿಗೆ ತಂಪನ್ನು ನೀಡಿತು.
03044018a ವಿಶ್ವಾವಸುಪ್ರಭೃತಿಭಿರ್ಗಂಧರ್ವೈಃ ಸ್ತುತಿವಂದನೈಃ|
03044018c ಸ್ತೂಯಮಾನಂ ದ್ವಿಜಾಗ್ರ್ಯೈಶ್ಚ ಋಗ್ಯಜುಃಸಾಮಸಂಸ್ತವೈಃ||
ವಿಶ್ವಾವಸು ಮೊದಲಾದ ಗಂಧರ್ವರು ಸ್ತುತಿವಂದನೆಗಳಿಂದ ಹೊಗಳಲು ದ್ವಿಜಾಗ್ರರು ಋಗ್ವೇದ ಯಜುರ್ವೇದ ಸಾಮಗಳನ್ನು ಹಾಡಿದರು.
03044019a ತತೋಽಭಿಗಮ್ಯ ಕೌಂತೇಯಃ ಶಿರಸಾಭ್ಯನಮದ್ಬಲೀ|
03044019c ಸ ಚೈನಮನುವೃತ್ತಾಭ್ಯಾಂ ಭುಜಾಭ್ಯಾಂ ಪ್ರತ್ಯಗೃಹ್ಣತ||
03044020a ತತಃ ಶಕ್ರಾಸನೇ ಪುಣ್ಯೇ ದೇವರಾಜರ್ಷಿಪೂಜಿತೇ|
03044020c ಶಕ್ರಃ ಪಾಣೌ ಗೃಹೀತ್ವೈನಮುಪಾವೇಶಯದಂತಿಕೇ||
ಆಗ ಬಲಶಾಲಿ ಕೌಂತೇಯನು ಹತ್ತಿರ ಹೋಗಿ ಶಿರಬಾಗಿಸಿ ನಮಸ್ಕರಿಸಿದನು. ನಂತರ ಶಕ್ರನು ತನ್ನ ಕೈಗಳಿಂದ ಅವನ ಭುಜಗಳನ್ನು ಹಿಡಿದು ಆಲಂಗಿಸಿ, ಕೈಹಿಡಿದು, ತನ್ನೊಂದಿಗೆ, ದೇವರಾಜರ್ಷಿಗಳಿಂದ ಪೂಜಿತ ಶಕ್ರನ ಆಸನದಲ್ಲಿ ಕುಳ್ಳಿರಿಸಿಕೊಂಡನು.
03044021a ಮೂರ್ಧ್ನಿ ಚೈನಮುಪಾಘ್ರಾಯ ದೇವೇಂದ್ರಃ ಪರವೀರಹಾ|
03044021c ಅಂಕಮಾರೋಪಯಾಮಾಸ ಪ್ರಶ್ರಯಾವನತಂ ತದಾ||
ಪರವೀರಹ ದೇವೇಂದ್ರನು ಅವನ ನೆತ್ತಿಗೆ ಮುತ್ತನ್ನಿತ್ತು, ಎಲ್ಲರೂ ವಿನಯದಿಂದ ತಲೆಬಾಗಿಸಿಕೊಂಡಿರಲು ಅವನನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡನು.
03044022a ಸಹಸ್ರಾಕ್ಷನಿಯೋಗಾತ್ಸ ಪಾರ್ಥಃ ಶಕ್ರಾಸನಂ ತದಾ|
03044022c ಅಧ್ಯಕ್ರಾಮದಮೇಯಾತ್ಮಾ ದ್ವಿತೀಯ ಇವ ವಾಸವಃ||
ಸಹಸ್ರಾಕ್ಷನ ನಿಯೋಗದಂತೆ ಅಮೇಯಾತ್ಮ ಪಾರ್ಥನು ಎರಡನೆಯೇ ಇಂದ್ರನೋ ಎನ್ನುವಂತೆ ಶಕ್ರನ ಆಸನದಲ್ಲಿ ಕುಳಿತುಕೊಂಡನು.
03044023a ತತಃ ಪ್ರೇಮ್ಣಾ ವೃತ್ರಶತ್ರುರರ್ಜುನಸ್ಯ ಶುಭಂ ಮುಖಂ|
03044023c ಪಸ್ಪರ್ಶ ಪುಣ್ಯಗಂಧೇನ ಕರೇಣ ಪರಿಸಾಂತ್ವಯನ್||
ಆಗ ವೃತ್ರಶತ್ರುವು ಅರ್ಜುನನ ಸುಂದರ ಮುಖವನ್ನು ಪ್ರೀತಿಯಿಂದ ಮುಟ್ಟಿ, ತನ್ನ ಪುಣ್ಯಗಂಧದ ಕೈಗಳಿಂದ ಸವರಿದನು.
03044024a ಪರಿಮಾರ್ಜಮಾನಃ ಶನಕೈರ್ಬಾಹೂ ಚಾಸ್ಯಾಯತೌ ಶುಭೌ|
03044024c ಜ್ಯಾಶರಕ್ಷೇಪಕಠಿನೌ ಸ್ತಂಭಾವಿವ ಹಿರಣ್ಮಯೌ||
ಬಿಲ್ಲಿನ ಹಗ್ಗದಿಂದ ಗಡುಸಾಗಿದ್ದ, ಬಂಗಾರದ ಸ್ತಂಭಗಳಂತಿದ್ದ ಅವನ ಸುಂದರ ಬಾಹುಗಳನ್ನು ಮೃದುವಾಗಿ ಸವರಿದನು.
03044025a ವಜ್ರಗ್ರಹಣಚಿಹ್ನೇನ ಕರೇಣ ಬಲಸೂದನಃ|
03044025c ಮುಹುರ್ಮುಹುರ್ವಜ್ರಧರೋ ಬಾಹೂ ಸಂಸ್ಫಾಲಯಂ ಶನೈಃ||
ಬಲಸೂದನ, ವಜ್ರಪಾಣಿಯು ಪುನಃ ಪುನಃ ಅವನ ತೋಳನ್ನು ಮೆಲ್ಲಮೆಲ್ಲನೆ ವಜ್ರವನ್ನು ಹಿಡಿದು ಕಲೆಯಾದ ತನ್ನ ಕೈಗಳಿಂದ ಒತ್ತುತ್ತಿದ್ದನು.
03044026a ಸ್ಮಯನ್ನಿವ ಗುಡಾಕೇಶಂ ಪ್ರೇಕ್ಷಮಾಣಃ ಸಹಸ್ರದೃಕ್|
03044026c ಹರ್ಷೇಣೋತ್ಫುಲ್ಲನಯನೋ ನ ಚಾತೃಪ್ಯತ ವೃತ್ರಹಾ||
ಸಹಸ್ರಾಕ್ಷ ವೃತ್ರಹನು ಹರ್ಷದಿಂದ ತೆರೆದ ಕಣ್ಣುಗಳಿಂದ ಮುಗುಳ್ನಗುತ್ತಾ ಗುಡಾಕೇಶನನ್ನು ಎಷ್ಟು ನೋಡಿದರೂ ತೃಪ್ತಿಯಾಗಲಿಲ್ಲವೋ ಎಂಬಂತೆ ನೋಡುತ್ತಿದ್ದನು.
03044027a ಏಕಾಸನೋಪವಿಷ್ಟೌ ತೌ ಶೋಭಯಾಂ ಚಕ್ರತುಃ ಸಭಾಂ|
03044027c ಸೂರ್ಯಾಚಂದ್ರಮಸೌ ವ್ಯೋಮ್ನಿ ಚತುರ್ದಶ್ಯಾಮಿವೋದಿತೌ||
ಒಂದೇ ಸಿಂಹಾಸನದಲ್ಲಿ ಕುಳಿತುಕೊಂಡ ಅವರಿಬ್ಬರು ಚತುರ್ದಶಿಯಂದು ಒಂದೇ ಸಮಯದಲ್ಲಿ ಉದಯಿಸುವ ಸೂರ್ಯಚಂದ್ರರು ಆಕಾಶವನ್ನು ಹೇಗೋ ಹಾಗೆ ಸಭೆಯನ್ನು ಶೋಭಿಸಿದರು.
03044028a ತತ್ರ ಸ್ಮ ಗಾಥಾ ಗಾಯಂತಿ ಸಾಮ್ನಾ ಪರಮವಲ್ಗುನಾ|
03044028c ಗಂಧರ್ವಾಸ್ತುಂಬುರುಶ್ರೇಷ್ಠಾಃ ಕುಶಲಾ ಗೀತಸಾಮಸು||
ಗೀತ ಮತ್ತು ಸಾಮಗಳಲ್ಲಿ ಕುಶಲರಾದ ತುಂಬುರುವೇ ಮೊದಲಾದ ಶ್ರೇಷ್ಠ ಗಂಧರ್ವರು ಅಲ್ಲಿ ಸುಮಧುರ ವಾಣಿಯಲ್ಲಿ ಗಾಯನ-ಸಾಮವನ್ನು ಹಾಡುತ್ತಿದ್ದರು.
03044029a ಘೃತಾಚೀ ಮೇನಕಾ ರಂಭಾ ಪೂರ್ವಚಿತ್ತಿಃ ಸ್ವಯಂಪ್ರಭಾ|
03044029c ಉರ್ವಶೀ ಮಿಶ್ರಕೇಶೀ ಚ ಡುಂಡುರ್ಗೌರೀ ವರೂಥಿನೀ||
03044030a ಗೋಪಾಲೀ ಸಹಜನ್ಯಾ ಚ ಕುಂಭಯೋನಿಃ ಪ್ರಜಾಗರಾ|
03044030c ಚಿತ್ರಸೇನಾ ಚಿತ್ರಲೇಖಾ ಸಹಾ ಚ ಮಧುರಸ್ವರಾ||
03044031a ಏತಾಶ್ಚಾನ್ಯಾಶ್ಚ ನನೃತುಸ್ತತ್ರ ತತ್ರ ವರಾಂಗನಾಃ|
03044031c ಚಿತ್ತಪ್ರಮಥನೇ ಯುಕ್ತಾಃ ಸಿದ್ಧಾನಾಂ ಪದ್ಮಲೋಚನಾಃ||
03044032a ಮಹಾಕಟಿತಟಶ್ರೋಣ್ಯಃ ಕಂಪಮಾನೈಃ ಪಯೋಧರೈಃ|
03044032c ಕಟಾಕ್ಷಹಾವಮಾಧುರ್ಯೈಶ್ಚೇತೋಬುದ್ಧಿಮನೋಹರಾಃ||
ಘೃತಾಚೀ, ಮೇನಕಾ, ರಂಭಾ, ಪೂರ್ವಚಿತ್ತಿ, ಸ್ವಯಂಪ್ರಭಾ, ಉರ್ವಶೀ, ಮಿಶ್ರಕೇಶೀ, ಡುಂಡು, ಗೌರೀ, ವರೂಥಿನೀ, ಗೋಪಾಲೀ, ಸಹಜನ್ಯಾ, ಕುಂಭಯೋನಿ, ಪ್ರಜಾಗರಾ, ಚಿತ್ರಸೇನಾ, ಚಿತ್ರಲೇಖಾ, ಸಹಾ, ಮಧುರಸ್ವರಾ, ಮತ್ತು ಇತರ ವರಾಂಗನೆ-ಪದ್ಮಲೋಚನೆಯರು, ಮಹಾಕಟಿ-ತಟಶ್ರೋಣಿಯರು ಸಿದ್ಧರ ಮನಸ್ಸನ್ನು ಕಡೆಯುತ್ತಾ ತಮ್ಮ ಸ್ತನಗಳನ್ನು ಕಂಪಿಸುತ್ತಾ, ಕಡೆಗಣ್ಣಿನ ಮಧುರ ನೋಟದಲ್ಲಿ ಚೇತನ ಬುದ್ಧಿ, ಮನಸ್ಸನ್ನು ಅಪಹರಿಸುತ್ತಾ ಅಲ್ಲಲ್ಲಿ ನೃತ್ಯಮಾಡುತ್ತಿದ್ದರು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ಇಂದ್ರಸಭಾದರ್ಶನೇ ಚತುಶ್ಚತ್ವಾರಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ಇಂದ್ರಸಭಾದರ್ಶನವೆಂಬ ನಲ್ವತ್ನಾಲ್ಕನೆಯ ಅಧ್ಯಾಯವು.
/Bartosz-Hadyniak-g-56a2e3d25f9b58b7d0cf8d5c.jpg)