ಆರಣ್ಯಕ ಪರ್ವ: ಕೈರಾತ ಪರ್ವ
Contents
Toggle೪೨
ಲೋಕಪಾಲಕರಿಂದ ಆಯುಧಗಳ ಪ್ರದಾನ
ಅರ್ಜುನನಲ್ಲಿಗೆ ಲೋಕಪಾಲರ ಆಗಮನ (೧-೧೫). ಯಮನು ದಂಡಾಸ್ತ್ರವನ್ನು ಅರ್ಜುನನಿಗಿತ್ತುದು (೧೬-೨೪). ವರುಣನು ಪಾಶಗಳನ್ನು ಅರ್ಜುನನಿಗೆ ನೀಡಿದುದು (೨೫-೩೦). ಕುಬೇರನು ಅಂತರ್ಧಾನ ಅಸ್ತ್ರವನ್ನು ನೀಡಿದುದು (೩೧-೩೪). ಇಂದ್ರನು ಅರ್ಜುನನನ್ನು ದೇವಲೋಕಕ್ಕೆ ಬಾ ಎಂದೂ, ಅಲ್ಲಿ ಎಲ್ಲಾ ದಿವ್ಯಾಸ್ತ್ರಗಳನ್ನೂ ನೀಡುವೆನೆಂದು ಹೇಳಿದುದು (೩೫-೩೮). ಲೋಕಪಾಲಕರ ನಿರ್ಗಮನ (೩೯-೪೨).
03042001 ವೈಶಂಪಾಯನ ಉವಾಚ|
03042001a ತಸ್ಯ ಸಂಪಶ್ಯತಸ್ತ್ವೇವ ಪಿನಾಕೀ ವೃಷಭಧ್ವಜಃ|
03042001c ಜಗಾಮಾದರ್ಶನಂ ಭಾನುರ್ಲೋಕಸ್ಯೇವಾಸ್ತಮೇಯಿವಾನ್||
ವೈಶಂಪಾಯನನು ಹೇಳಿದನು: “ಅವನು ನೋಡುತ್ತಿದ್ದಂತೆಯೇ ಸೂರ್ಯನು ಲೋಕದಿಂದ ಅಸ್ತನಾಗುವಂತೆ ಪಿನಾಕೀ ವೃಷಭಧ್ವಜನು ಅಲ್ಲಿಯೇ ಅದೃಶ್ಯನಾದನು.
03042002a ತತೋಽರ್ಜುನಃ ಪರಂ ಚಕ್ರೇ ವಿಸ್ಮಯಂ ಪರವೀರಹಾ|
03042002c ಮಯಾ ಸಾಕ್ಷಾನ್ಮಹಾದೇವೋ ದೃಷ್ಟ ಇತ್ಯೇವ ಭಾರತ||
ಭಾರತ! ಪರವೀರಹ ಅರ್ಜುನನು “ನಾನು ಸಾಕ್ಷಾತ್ ಮಹಾದೇವನನ್ನು ನೋಡಿದೆ!” ಎಂದು ಪರಮ ವಿಸ್ಮಿತನಾದನು.
03042003a ಧನ್ಯೋಽಸ್ಮ್ಯನುಗೃಹೀತೋಽಸ್ಮಿ ಯನ್ಮಯಾ ತ್ರ್ಯಂಬಕೋ ಹರಃ|
03042003c ಪಿನಾಕೀ ವರದೋ ರೂಪೀ ದೃಷ್ಟಃ ಸ್ಪೃಷ್ಟಶ್ಚ ಪಾಣಿನಾ||
“ತ್ರ್ಯಂಬಕ ಹರ ಪಿನಾಕೀ ವರದ ಸುಂದರನನ್ನು ನಾನು ನೋಡಿ ಮತ್ತು ಅವನು ತನ್ನ ಕೈಗಳಿಂದ ನನ್ನನ್ನು ಮುಟ್ಟಿ ನಾನು ಧನ್ಯನಾದೆ! ಅನುಗೃಹೀತನಾದೆ!
03042004a ಕೃತಾರ್ಥಂ ಚಾವಗಚ್ಚಾಮಿ ಪರಮಾತ್ಮಾನಮಾತ್ಮನಾ|
03042004c ಶತ್ರೂಂಶ್ಚ ವಿಜಿತಾನ್ಸರ್ವಾನ್ನಿರ್ವೃತ್ತಂ ಚ ಪ್ರಯೋಜನಂ||
ನನ್ನನ್ನು ನಾನೇ ಮೀರಿ ಕೃತಾರ್ಥನಾಗಿ ಹಿಂದಿರುಗುತ್ತಿದ್ದೇನೆ. ಹಿಂದಿರುಗಿ ಶತ್ರುಗಳೆಲ್ಲರನ್ನೂ ಗೆಲ್ಲುವುದಕ್ಕೆ ಇದನ್ನು ಬಳಸುತ್ತೇನೆ.”
03042005a ತತೋ ವೈಡೂರ್ಯವರ್ಣಾಭೋ ಭಾಸಯನ್ಸರ್ವತೋ ದಿಶಃ|
03042005c ಯಾದೋಗಣವೃತಃ ಶ್ರೀಮಾನಾಜಗಾಮ ಜಲೇಶ್ವರಃ||
03042006a ನಾಗೈರ್ನದೈರ್ನದೀಭಿಶ್ಚ ದೈತ್ಯೈಃ ಸಾಧ್ಯೈಶ್ಚ ದೈವತೈಃ|
03042006c ವರುಣೋ ಯಾದಸಾಂ ಭರ್ತಾ ವಶೀ ತಂ ದೇಶಮಾಗಮತ್||
ಆಗ ವೈಡೂರ್ಯವರ್ಣದಿಂದ ಹೊಳೆಯುತ್ತಿದ್ದ ಎಲ್ಲ ದಿಕ್ಕುಗಳನ್ನೂ ಬೆಳಗುತ್ತಾ ಜಲಚರಗಣಗಳಿಂದ, ನಾಗಗಳು, ನದನದಿಗಳು, ದೈತ್ಯರು, ಸಾಧ್ಯರು, ಮತ್ತು ದೇವತೆಗಳಿಂದ ಸುತ್ತುವರೆದು, ಜಲವಾಸಿಗಳ ಒಡೆಯ ಶ್ರೀಮಾನ್ ಜಲೇಶ್ವರ ವರುಣನು ಆ ಪ್ರದೇಶಕ್ಕೆ ಆಗಮಿಸಿದನು.
03042007a ಅಥ ಜಾಂಬೂನದವಪುರ್ವಿಮಾನೇನ ಮಹಾರ್ಚಿಷಾ|
03042007c ಕುಬೇರಃ ಸಮನುಪ್ರಾಪ್ತೋ ಯಕ್ಷೈರನುಗತಃ ಪ್ರಭುಃ||
ಅದೇ ಸಮಯದಲ್ಲಿ ಬಂಗಾರದ ಬಣ್ಣದ, ಸುಂದರ ವಿಮಾನವನ್ನೇರಿ, ಯಕ್ಷರಿಂದ ಅನುಸರಿಸಲ್ಪಟ್ಟ ಪ್ರಭು ಕುಬೇರನು ಅಲ್ಲಿಗೆ ಬಂದನು.
03042008a ವಿದ್ಯೋತಯನ್ನಿವಾಕಾಶಮದ್ಭುತೋಪಮದರ್ಶನಃ|
03042008c ಧನಾನಾಮೀಶ್ವರಃ ಶ್ರೀಮಾನರ್ಜುನಂ ದ್ರಷ್ಟುಮಾಗತಃ||
ಇಡೀ ಆಕಾಶವನ್ನೇ ಬೆಳಗಿಸುತ್ತಾ ನೋಡಲು ಅದ್ಭುತನಾಗಿ ಕಾಣುತ್ತಿದ್ದ ಶ್ರೀಮಾನ್ ಕುಬೇರನು ಅರ್ಜುನನನ್ನು ಕಾಣಲು ಬಂದನು.
03042009a ತಥಾ ಲೋಕಾಂತಕೃಚ್ಶ್ರೀಮಾನ್ಯಮಃ ಸಾಕ್ಷಾತ್ಪ್ರತಾಪವಾನ್|
03042009c ಮೂರ್ತ್ಯಮೂರ್ತಿಧರೈಃ ಸಾರ್ಧಂ ಪಿತೃಭಿರ್ಲೋಕಭಾವನೈಃ||
03042010a ದಂಡಪಾಣಿರಚಿಂತ್ಯಾತ್ಮಾ ಸರ್ವಭೂತವಿನಾಶಕೃತ್|
03042010c ವೈವಸ್ವತೋ ಧರ್ಮರಾಜೋ ವಿಮಾನೇನಾವಭಾಸಯನ್||
03042011a ತ್ರೀಽಲ್ಲೋಕಾನ್ಗುಹ್ಯಕಾಂಶ್ಚೈವ ಗಂಧರ್ವಾಂಶ್ಚ ಸಪನ್ನಗಾನ್|
03042011c ದ್ವಿತೀಯ ಇವ ಮಾರ್ತಂಡೋ ಯುಗಾಂತೇ ಸಮುಪಸ್ಥಿತೇ||
ಹಾಗೆಯೇ ಲೋಕಾಂತಕ ಪ್ರತಾಪಿ, ದಂಡಪಾಣಿ, ಅಚಿಂತ್ಯಾತ್ಮ, ಸರ್ವಭೂತಗಳನ್ನು ವಿನಾಶಮಾಡುವ, ವೈವಸ್ವತ, ಧರ್ಮರಾಜ ಶ್ರೀಮಾನ್ ಸಾಕ್ಷಾತ್ ಯಮನು ಮೂರ್ತಿವಂತ ಮತ್ತು ಅಮೂರ್ತಿವಂತ ಲೋಕಭಾವನ ಪಿತೃಗಳೊಡನೆ ತನ್ನ ವಿಮಾನದ ಪ್ರಭೆಯನ್ನು ಗುಹ್ಯಕ-ಗಂಧರ್ವ-ಪನ್ನಗ ಈ ಮೂರೂ ಲೋಕಗಳನ್ನೂ ಬೆಳಗಿಸುತ್ತಾ, ಯುಗಾಂತದಲ್ಲಿ ಕಂಡುಬರುವ ಎರಡನೆಯ ಸೂರ್ಯನೋ ಎನ್ನುವಂತೆ ತೋರುತ್ತಾ ಆಗಮಿಸಿದನು.
03042012a ಭಾನುಮಂತಿ ವಿಚಿತ್ರಾಣಿ ಶಿಖರಾಣಿ ಮಹಾಗಿರೇಃ|
03042012c ಸಮಾಸ್ಥಾಯಾರ್ಜುನಂ ತತ್ರ ದದೃಶುಸ್ತಪಸಾನ್ವಿತಂ||
ಮಹಾಗಿರಿಯ ಶಿಖರಗಳನ್ನು ವಿಚಿತ್ರ ಕಾಂತಿಯಿಂದ ಬೆಳಗಿಸುತ್ತಾ ಅಲ್ಲಿಗೆ ಬಂದು ತಪಸ್ಸಿನಲ್ಲಿ ತೊಡಗಿದ್ದ ಅರ್ಜುನನನ್ನು ನೋಡಿದರು.
03042013a ತತೋ ಮುಹೂರ್ತಾದ್ಭಗವಾನೈರಾವತಶಿರೋಗತಃ|
03042013c ಆಜಗಾಮ ಸಹೇಂದ್ರಾಣ್ಯಾ ಶಕ್ರಃ ಸುರಗಣೈರ್ವೃತಃ||
ಸ್ವಲ್ಪವೇ ಸಮಯದಲ್ಲಿ ಭಗವಾನ್ ಶಕ್ರನು ಐರಾವತವನ್ನೇರಿ, ಸುರಗಣಗಳಿಂದ ಸುತ್ತುವರೆದು, ಇಂದ್ರಾಣಿಯೊಡನೆ ಅಲ್ಲಿಗೆ ಆಗಮಿಸಿದನು.
03042014a ಪಾಂಡುರೇಣಾತಪತ್ರೇಣ ಧ್ರಿಯಮಾಣೇನ ಮೂರ್ಧನಿ|
03042014c ಶುಶುಭೇ ತಾರಕಾರಾಜಃ ಸಿತಮಭ್ರಮಿವಾಸ್ಥಿತಃ||
ಅವನ ತಲೆಯ ಮೇಲೆ ಹಿಡಿದಿದ್ದ ಬಿಳೀಬಣ್ಣದ ಛತ್ರದಿಂದ ಅವನು ಬಿಳಿಯ ಮೋಡಗಳ ಮರೆಯಲ್ಲಿದ್ದ ಚಂದ್ರನಂತೆ ಶೋಭಿಸಿದನು.
03042015a ಸಂಸ್ತೂಯಮಾನೋ ಗಂಧರ್ವೈರೃಷಿಭಿಶ್ಚ ತಪೋಧನೈಃ|
03042015c ಶೃಂಗಂ ಗಿರೇಃ ಸಮಾಸಾದ್ಯ ತಸ್ಥೌ ಸೂರ್ಯ ಇವೋದಿತಃ||
ಗಂಧರ್ವರು ಮತ್ತು ತಪೋಧನ ಋಷಿಗಳು ಅವನನ್ನು ಸಂಸ್ತುತಿಸುತ್ತಿರಲು ಅವನು ಗಿರಿಶೃಂಗವನ್ನು ಸೇರಿ ಉದಯಿಸುತ್ತಿರುವ ಸೂರ್ಯನಂತೆ ನಿಂತುಕೊಂಡನು.
03042016a ಅಥ ಮೇಘಸ್ವನೋ ಧೀಮಾನ್ವ್ಯಾಜಹಾರ ಶುಭಾಂ ಗಿರಂ|
03042016c ಯಮಃ ಪರಮಧರ್ಮಜ್ಞೋ ದಕ್ಷಿಣಾಂ ದಿಶಮಾಸ್ಥಿತಃ||
ಆಗ ಮೋಡಗಳ ಧ್ವನಿಯನ್ನು ಹೊಂದಿದ್ದ ಧೀಮಂತ, ಪರಮಧರ್ಮಜ್ಞ, ದಕ್ಷಿಣದಿಕ್ಕಿನಲ್ಲಿರುವ ಯಮನು ಶುಭಧ್ವನಿಯಲ್ಲಿ ಹೇಳಿದನು:
03042017a ಅರ್ಜುನಾರ್ಜುನ ಪಶ್ಯಾಸ್ಮಾಽಲ್ಲೋಕಪಾಲಾನ್ಸಮಾಗತಾನ್|
03042017c ದೃಷ್ಟಿಂ ತೇ ವಿತರಾಮೋಽದ್ಯ ಭವಾನರ್ಹೋ ಹಿ ದರ್ಶನಂ||
“ಅರ್ಜುನ! ಅರ್ಜುನ! ಇಲ್ಲಿ ಸೇರಿರುವ ಲೋಕಪಾಲಕರಾದ ನಮ್ಮನ್ನು ನೋಡು. ನಮ್ಮನ್ನು ನೋಡಲು ಅರ್ಹನಾದ ನಿನಗೆ ದೃಷ್ಟಿಯನ್ನು ನೀಡುತ್ತಿದ್ದೇವೆ.
03042018a ಪೂರ್ವರ್ಷಿರಮಿತಾತ್ಮಾ ತ್ವಂ ನರೋ ನಾಮ ಮಹಾಬಲಃ|
03042018c ನಿಯೋಗಾದ್ಬ್ರಹ್ಮಣಸ್ತಾತ ಮರ್ತ್ಯತಾಂ ಸಮುಪಾಗತಃ|
03042018e ತ್ವಂ ವಾಸವಸಮುದ್ಭೂತೋ ಮಹಾವೀರ್ಯಪರಾಕ್ರಮಃ||
ನೀನು ಪೂರ್ವದಲ್ಲಿ ಅಮಿತಾತ್ಮ ಮಹಾಬಲಿ ನರ ಎಂಬ ಹೆಸರಿನ ಋಷಿಯಾಗಿದ್ದೆ. ಮಗೂ! ಬ್ರಹ್ಮನ ಆದೇಶದಂತೆ ನೀನು ಮಹಾವೀರ್ಯ ಪರಾಕ್ರಮಿ ಇಂದ್ರನಿಗೆ ಹುಟ್ಟಿ ಮನುಷ್ಯರಲ್ಲಿ ಬಂದಿರುವೆ.
03042019a ಕ್ಷತ್ರಂ ಚಾಗ್ನಿಸಮಸ್ಪರ್ಶಂ ಭಾರದ್ವಾಜೇನ ರಕ್ಷಿತಂ|
03042019c ದಾನವಾಶ್ಚ ಮಹಾವೀರ್ಯಾ ಯೇ ಮನುಷ್ಯತ್ವಮಾಗತಾಃ|
03042019e ನಿವಾತಕವಚಾಶ್ಚೈವ ಸಂಸಾಧ್ಯಾಃ ಕುರುನಂದನ||
ಕುರುನಂದನ! ಮುಟ್ಟಲು ಅಗ್ನಿಯಂತಿರುವ, ಭಾರದ್ವಾಜನಿಂದ ರಕ್ಷಿತ ಕ್ಷತ್ರಿಯರನ್ನು, ಮನುಷ್ಯರಾಗಿ ಜನ್ಮತಳೆದ ಮಹಾವೀರ ದಾನವರು, ಮತ್ತು ನಿವಾತಕವಚರನ್ನೂ ನೀನು ನಿಯಂತ್ರಿಸಬೇಕಾಗಿದೆ.
03042020a ಪಿತುರ್ಮಮಾಂಶೋ ದೇವಸ್ಯ ಸರ್ವಲೋಕಪ್ರತಾಪಿನಃ|
03042020c ಕರ್ಣಃ ಸ ಸುಮಹಾವೀರ್ಯಸ್ತ್ವಯಾ ವಧ್ಯೋ ಧನಂಜಯ||
ಧನಂಜಯ! ಸರ್ವಲೋಕತಾಪಿನಿ ನನ್ನ ತಂದೆ ದೇವನ ಅಂಶವಾಗಿರುವ ಮಹಾವೀರ ಕರ್ಣನನ್ನು ನೀನು ವಧಿಸುತ್ತೀಯೆ.
03042021a ಅಂಶಾಶ್ಚ ಕ್ಷಿತಿಸಂಪ್ರಾಪ್ತಾ ದೇವಗಂಧರ್ವರಕ್ಷಸಾಂ|
03042021c ತಯಾ ನಿಪಾತಿತಾ ಯುದ್ಧೇ ಸ್ವಕರ್ಮಫಲನಿರ್ಜಿತಾಂ|
03042021e ಗತಿಂ ಪ್ರಾಪ್ಸ್ಯಂತಿ ಕೌಂತೇಯ ಯಥಾಸ್ವಮರಿಕರ್ಶನ||
ಕೌಂತೇಯ! ಅರಿಕರ್ಶನ! ಭೂಮಿಯ ಮೇಲೆ ಬಂದಿರುವ ದೇವ-ಗಂಧರ್ವ-ರಾಕ್ಷಸರ ಅಂಶಗಳನ್ನು ನೀನು ಯುದ್ಧದಲ್ಲಿ ಉರುಳಿಸಿದ ನಂತರ ತಮ್ಮ ತಮ್ಮ ಕರ್ಮಫಲಗಳಿಗನುಗುಣವಾಗಿ ಗತಿಯನ್ನು ಹೊಂದುತ್ತಾರೆ.
03042022a ಅಕ್ಷಯಾ ತವ ಕೀರ್ತಿಶ್ಚ ಲೋಕೇ ಸ್ಥಾಸ್ಯತಿ ಫಲ್ಗುನ|
03042022c ತ್ವಯಾ ಸಾಕ್ಷಾನ್ಮಹಾದೇವಸ್ತೋಷಿತೋ ಹಿ ಮಹಾಮೃಧೇ|
03042022e ಲಘ್ವೀ ವಸುಮತೀ ಚಾಪಿ ಕರ್ತವ್ಯಾ ವಿಷ್ಣುನಾ ಸಹ||
ಫಲ್ಗುನ! ಲೋಕದಲ್ಲಿ ನಿನ್ನ ಕೀರ್ತಿಯು ಅಕ್ಷಯವಾಗಿರುತ್ತದೆ. ನೀನು ಸಾಕ್ಷಾತ್ ಮಹಾದೇವನನ್ನು ಮಹಾಯುದ್ಧದಲ್ಲಿ ಮೆಚ್ಚಿಸಿದ್ದೀಯೆ. ವಿಷ್ಣುವಿನ ಜೊತೆಗೂಡಿ ನೀನು ಭೂಮಿಯ ಭಾರವನ್ನು ಕಡಿಮೆಮಾಡುತ್ತೀಯೆ.
03042023a ಗೃಹಾಣಾಸ್ತ್ರಂ ಮಹಾಬಾಹೋ ದಂಡಮಪ್ರತಿವಾರಣಂ|
03042023c ಅನೇನಾಸ್ತ್ರೇಣ ಸುಮಹತ್ತ್ವಂ ಹಿ ಕರ್ಮ ಕರಿಷ್ಯಸಿ||
ಮಹಾಬಾಹೋ! ತಡೆಯಲು ಅಸಾದ್ಯವಾದ ಈ ದಂಡಾಸ್ತ್ರವನ್ನು ಸ್ವೀಕರಿಸು. ಈ ಅಸ್ತ್ರದಿಂದ ನೀನು ಮಹಾಕರ್ಮಗಳನ್ನು ಎಸಗಬಲ್ಲೆ.
03042024a ಪ್ರತಿಜಗ್ರಾಹ ತತ್ಪಾರ್ಥೋ ವಿಧಿವತ್ಕುರುನಂದನಃ|
03042024c ಸಮಂತ್ರಂ ಸೋಪಚಾರಂ ಚ ಸಮೋಕ್ಷಂ ಸನಿವರ್ತನಂ||
ಪಾರ್ಥ! ಕುರುನಂದನ! ಇದನ್ನು ವಿಧಿವತ್ತಾಗಿ ಮಂತ್ರ, ಉಪಚಾರ, ಮೋಕ್ಷ ಮತ್ತು ಹಿಂತೆಗೆದುಕೊಳ್ಳುವದರ ಜೊತೆ ಸ್ವೀಕರಿಸು.”
03042025a ತತೋ ಜಲಧರಶ್ಯಾಮೋ ವರುಣೋ ಯಾದಸಾಂ ಪತಿಃ|
03042025c ಪಶ್ಚಿಮಾಂ ದಿಶಮಾಸ್ಥಾಯ ಗಿರಮುಚ್ಚಾರಯನ್ಪ್ರಭುಃ||
ಆಗ ಜಲಧರ, ಶ್ಯಾಮವರ್ಣಿ, ಜಲವಾಸಿಗಳ ಒಡೆಯ, ಪಶ್ಚಿಮ ದಿಕ್ಕಿನಲ್ಲಿ ಸ್ಥಿತ, ಪ್ರಭು ವರುಣನು ಈ ಮಾತುಗಳನ್ನಾಡಿದನು:
03042026a ಪಾರ್ಥ ಕ್ಷತ್ರಿಯಮುಖ್ಯಸ್ತ್ವಂ ಕ್ಷತ್ರಧರ್ಮೇ ವ್ಯವಸ್ಥಿತಃ|
03042026c ಪಶ್ಯ ಮಾಂ ಪೃಥುತಾಂರಾಕ್ಷ ವರುಣೋಽಸ್ಮಿ ಜಲೇಶ್ವರಃ||
“ಪಾರ್ಥ! ಕ್ಷತ್ರಧರ್ಮವನ್ನು ಪರಿಪಾಲಿಸುತ್ತಿರುವ ಕ್ಷತ್ರಿಯರಲ್ಲಿ ನೀನು ಮುಖ್ಯ. ತಾಮ್ರವರ್ಣದ ವಿಶಾಲ ಕಣ್ಣುಗಳಿಂದ ನನ್ನನ್ನು ನೋಡು. ನಾನು ಜಲೇಶ್ವರ ವರುಣ.
03042027a ಮಯಾ ಸಮುದ್ಯತಾನ್ಪಾಶಾನ್ವಾರುಣಾನನಿವಾರಣಾನ್|
03042027c ಪ್ರತಿಗೃಹ್ಣೀಷ್ವ ಕೌಂತೇಯ ಸರಹಸ್ಯನಿವರ್ತನಾನ್||
ಕೌಂತೇಯ! ಎದುರಿಸಲಸಾಧ್ಯ ವಾರುಣ ಪಾಶಗಳನ್ನು ನಿನಗೆ ನೀಡುತ್ತಿದ್ದೇನೆ. ಅದನ್ನು ಹಿಂದೆ ತೆಗೆದುಕೊಳ್ಳುವ ರಹಸ್ಯದೊಂದಿಗೆ ಸ್ವೀಕರಿಸು.
03042028a ಏಭಿಸ್ತದಾ ಮಯಾ ವೀರ ಸಂಗ್ರಾಮೇ ತಾರಕಾಮಯೇ|
03042028c ದೈತೇಯಾನಾಂ ಸಹಸ್ರಾಣಿ ಸಮ್ಯತಾನಿ ಮಹಾತ್ಮನಾಂ||
ಇದರಿಂದ ನಾನು ತಾರಕಾಸುರನೊಡನೆ ಸಂಗ್ರಾಮದ ಸಮಯದಲ್ಲಿ ಸಹಸ್ರಾರು ವೀರ ಮಹಾತ್ಮ ದೈತ್ಯರನ್ನು ಬಂಧಿಸಿ ಸೋಲಿಸಿದ್ದೆ.
03042029a ತಸ್ಮಾದಿಮಾನ್ಮಹಾಸತ್ತ್ವ ಮತ್ಪ್ರಸಾದಾತ್ಸಮುತ್ಥಿತಾನ್|
03042029c ಗೃಹಾಣ ನ ಹಿ ತೇ ಮುಚ್ಯೇದಂತಕೋಽಪ್ಯಾತತಾಯಿನಃ||
ಮಹಾಸತ್ವ! ಪ್ರಸಾದವಾಗಿ ನಿನಗೆ ಕೊಡುತ್ತಿರುವ ಇವುಗಳನ್ನು ನನ್ನಿಂದ ಸ್ವೀಕರಿಸು. ಇದನ್ನು ನೀನು ಪ್ರಯೋಗಿಸಿದಾಗ ಅಂತಕನೂ ಕೂಡ ನಿನ್ನಿಂದ ಉಳಿಯಲಾರ.
03042030a ಅನೇನ ತ್ವಂ ಯದಾಸ್ತ್ರೇಣ ಸಂಗ್ರಾಮೇ ವಿಚರಿಷ್ಯಸಿ|
03042030c ತದಾ ನಿಃಕ್ಷತ್ರಿಯಾ ಭೂಮಿರ್ಭವಿಷ್ಯತಿ ನ ಸಂಶಯಃ||
ಈ ಅಸ್ತ್ರದೊಂದಿಗೆ ನೀನು ಸಂಗ್ರಾಮಕ್ಕೆ ಹೋದಾಗ ಭೂಮಿಯು ಕ್ಷತ್ರಿಯರಿಲ್ಲದಂತಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.”
03042031a ತತಃ ಕೈಲಾಸನಿಲಯೋ ಧನಾಧ್ಯಕ್ಷೋಽಭ್ಯಭಾಷತ|
03042031c ದತ್ತೇಷ್ವಸ್ತ್ರೇಷು ದಿವ್ಯೇಷು ವರುಣೇನ ಯಮೇನ ಚ||
ವರುಣ ಮತ್ತು ಯಮರು ದಿವ್ಯಾಸ್ತ್ರಗಳನ್ನು ನೀಡಿದ ನಂತರ ಕೈಲಾಸವಾಸಿ, ಧನಾಧ್ಯಕ್ಷನು ಮಾತನಾಡಿದನು.
03042032a ಸವ್ಯಸಾಚಿನ್ಮಹಾಬಾಹೋ ಪೂರ್ವದೇವ ಸನಾತನ|
03042032c ಸಹಾಸ್ಮಾಭಿರ್ಭವಾಂ ಶ್ರಾಂತಃ ಪುರಾಕಲ್ಪೇಷು ನಿತ್ಯಶಃ||
“ಮಹಾಬಾಹೋ! ಸವ್ಯಸಾಚಿ! ಸನಾತನ ಪೂರ್ವದೇವ! ಹಿಂದಿನ ಕಲ್ಪಗಳಲ್ಲಿ ನಿತ್ಯವೂ ನೀನು ನಮ್ಮ ಸಹಾಯಕ್ಕೆಂದು ಶ್ರಮಿಸಿದೆ.
03042033a ಮತ್ತೋಽಪಿ ತ್ವಂ ಗೃಹಾಣಾಸ್ತ್ರಮಂತರ್ಧಾನಂ ಪ್ರಿಯಂ ಮಮ|
03042033c ಓಜಸ್ತೇಜೋದ್ಯುತಿಹರಂ ಪ್ರಸ್ವಾಪನಮರಾತಿಹನ್||
ನನ್ನಿಂದಲೂ ಕೂಡ ನನಗೆ ಪ್ರಿಯವಾದ, ಶತ್ರುಗಳ ಓಜಸ್ಸು, ತೇಜಸ್ಸು ಮತ್ತು ದ್ಯುತಿಗಳನ್ನು ಕಸಿದು, ಮೂರ್ಛೆಗೊಳಿಸುವ ಅಂತರ್ಧಾನ ಅಸ್ತ್ರವನ್ನು ಸ್ವೀಕರಿಸು.”
03042034a ತತೋಽರ್ಜುನೋ ಮಹಾಬಾಹುರ್ವಿಧಿವತ್ಕುರುನಂದನಃ|
03042034c ಕೌಬೇರಮಪಿ ಜಗ್ರಾಹ ದಿವ್ಯಮಸ್ತ್ರಂ ಮಹಾಬಲಃ||
ಆಗ ಕುರುನಂದನ ಮಹಾಬಾಹು ಅರ್ಜುನನು ವಿಧಿವತ್ತಾಗಿ ಕುಬೇರನ ಮಹಾಬಲ ದಿವ್ಯ ಅಸ್ತ್ರವನ್ನೂ ಸ್ವೀಕರಿಸಿದನು.
03042035a ತತೋಽಬ್ರವೀದ್ದೇವರಾಜಃ ಪಾರ್ಥಮಕ್ಲಿಷ್ಟಕಾರಿಣಂ|
03042035c ಸಾಂತ್ವಯಂ ಶ್ಲಕ್ಷ್ಣಯಾ ವಾಚಾ ಮೇಘದುಂದುಭಿನಿಸ್ವನಃ||
ಆಗ ದೇವರಾಜನು ಅಕ್ಲಿಷ್ಟಕರ್ಮಿ ಪಾರ್ಥನಿಗೆ ಸಂತವಿಸುತ್ತಾ ಮೃದುವಾದ ಮೋಡಗಳ ಗುಡುಗಿನ ಸ್ವರದಲ್ಲಿ ಹೇಳಿದನು:
03042036a ಕುಂತೀಮಾತರ್ಮಹಾಬಾಹೋ ತ್ವಮೀಶಾನಃ ಪುರಾತನಃ|
03042036c ಪರಾಂ ಸಿದ್ಧಿಮನುಪ್ರಾಪ್ತಃ ಸಾಕ್ಷಾದ್ದೇವಗತಿಂ ಗತಃ||
“ಕುಂತಿಯ ಮಗ ಮಹಾಬಾಹೋ! ಹಿಂದೆ ನೀನು ಈಶನಾಗಿದ್ದೆ ಮತ್ತು ಉತ್ತಮ ಸಿದ್ಧಿಯನ್ನು ಹೊಂದಿ ಸಾಕ್ಷಾತ್ ದೇವಲೋಕಕ್ಕೆ ಹೋಗಿದ್ದೆ.
03042037a ದೇವಕಾರ್ಯಂ ಹಿ ಸುಮಹತ್ತ್ವಯಾ ಕಾರ್ಯಮರಿಂದಮ|
03042037c ಆರೋಢವ್ಯಸ್ತ್ವಯಾ ಸ್ವರ್ಗಃ ಸಜ್ಜೀಭವ ಮಹಾದ್ಯುತೇ||
ಅರಿಂದಮ! ಮಹತ್ತರವಾದ ದೇವಕಾರ್ಯವೇ ನಿನ್ನ ಕಾರ್ಯ. ನೀನು ಸ್ವರ್ಗವನ್ನು ಏರಬೇಕಾಗಿದೆ. ಮಹಾದ್ಯುತಿ! ಸಿದ್ಧನಾಗಿರು!
03042038a ರಥೋ ಮಾತಲಿಸಮ್ಯುಕ್ತ ಆಗಂತಾ ತ್ವತ್ಕೃತೇ ಮಹೀಂ|
03042038c ತತ್ರ ತೇಽಹಂ ಪ್ರದಾಸ್ಯಾಮಿ ದಿವ್ಯಾನ್ಯಸ್ತ್ರಾಣಿ ಕೌರವ||
ನಿನಗೋಸ್ಕರವಾಗಿ ಮಾತಲಿಯು ನಡೆಸುವ ನನ್ನ ರಥವು ಭೂಮಿಗೆ ಬರುತ್ತದೆ. ಕೌರವ! ಅಲ್ಲಿ ನಾನು ನಿನಗೆ ಇತರ ದಿವ್ಯಾಸ್ತ್ರಗಳನ್ನು ಕೊಡುತ್ತೇನೆ.”
03042039a ತಾನ್ದೃಷ್ಟ್ವಾ ಲೋಕಪಾಲಾಂಸ್ತು ಸಮೇತಾನ್ಗಿರಿಮೂರ್ಧನಿ|
03042039c ಜಗಾಮ ವಿಸ್ಮಯಂ ಧೀಮಾನ್ಕುಂತೀಪುತ್ರೋ ಧನಂಜಯಃ||
ಗಿರಿಯ ಮೇಲೆ ಸೇರಿದ್ದ ಆ ಲೋಕಪಾಲಕರನ್ನು ನೋಡಿ ಧೀಮಂತ ಕುಂತಿಪುತ್ರ ಧನಂಜಯನು ವಿಸ್ಮಿತನಾದನು.
03042040a ತತೋಽರ್ಜುನೋ ಮಹಾತೇಜಾ ಲೋಕಪಾಲಾನ್ಸಮಾಗತಾನ್|
03042040c ಪೂಜಯಾಮಾಸ ವಿಧಿವದ್ವಾಗ್ಭಿರದ್ಭಿಃ ಫಲೈರಪಿ||
ಆಗ ಮಹಾತೇಜಸ್ವಿ ಅರ್ಜುನನು ಸೇರಿದ್ದ ಲೋಕಪಾಲಕರನ್ನು ವಿಧಿವತ್ತಾಗಿ ಮಾತು-ಫಲಗಳಿಂದ ಪೂಜಿಸಿದನು.
03042041a ತತಃ ಪ್ರತಿಯಯುರ್ದೇವಾಃ ಪ್ರತಿಪೂಜ್ಯ ಧನಂಜಯಂ|
03042041c ಯಥಾಗತೇನ ವಿಬುಧಾಃ ಸರ್ವೇ ಕಾಮಮನೋಜವಾಃ||
ಪ್ರತಿಯಾಗಿ ಧನಂಜಯನನ್ನು ಸತ್ಕರಿಸಿ ಮನಸ್ಸಿಗೆ ಬಂದಲ್ಲಿಗೆ ಮನೋವೇಗದಲ್ಲಿ ಹೋಗಬಲ್ಲ ವಿಬುಧ ಸರ್ವ ದೇವತೆಗಳೂ ಎಲ್ಲಿಂದ ಬಂದಿದ್ದರೋ ಅಲ್ಲಿಗೆ ತೆರಳಿದರು.
03042042a ತತೋಽರ್ಜುನೋ ಮುದಂ ಲೇಭೇ ಲಬ್ಧಾಸ್ತ್ರಃ ಪುರುಷರ್ಷಭಃ|
03042042c ಕೃತಾರ್ಥಮಿವ ಚಾತ್ಮಾನಂ ಸ ಮೇನೇ ಪೂರ್ಣಮಾನಸಃ||
ಪುರುಷರ್ಷಭ ಅರ್ಜುನನು ಅಸ್ತ್ರಗಳನ್ನು ಪಡೆದು, ಕೃತಾರ್ಥನಾದೆ ಮತ್ತು ಮನಸ್ಸಿನಲ್ಲಿರುವ ಎಲ್ಲವನ್ನೂ ಸಂಪೂರ್ಣವಾಗಿ ಪಡೆದಿದ್ದೇನೆ ಎಂದು ತಿಳಿದು ತುಂಬಾ ಸಂತೋಷಗೊಂಡನು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ದೇವಪ್ರಸ್ತಾನೇ ದ್ವಿಚತ್ವಾರಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ದೇವಪ್ರಸ್ತಾನದಲ್ಲಿ ನಲ್ವತ್ತೆರಡನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಃ|
ಇದು ಶ್ರೀ ಮಹಾಭಾರತದ ಆರಣ್ಯಕಪರ್ವದಲ್ಲಿ ಕೈರಾತಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-೨/೧೮, ಉಪಪರ್ವಗಳು-೩೧/೧೦೦, ಅಧ್ಯಾಯಗಳು-೩೩೯/೧೯೯೫, ಶ್ಲೋಕಗಳು-೧೧೧೩೩/೭೩೭೮೪
