ಆರಣ್ಯಕ ಪರ್ವ: ಕೈರಾತ ಪರ್ವ
Contents
Toggle೪೧
ಪಾಶುಪತ ಪ್ರದಾನ
ಅರ್ಜುನನಿಗೆ ಪಾಶುಪತವನ್ನು ಕೊಡಲು ಹರನು ಒಪ್ಪಿಕೊಂಡಿದುದು (೧-೧೭). ಪಾಶುಪತವನ್ನಿತ್ತು ಹರನು ಅಂತರ್ಧಾನನಾದುದು (೧೮-೨೬).
03041001a ನರಸ್ತ್ವಂ ಪೂರ್ವದೇಹೇ ವೈ ನಾರಾಯಣಸಹಾಯವಾನ್|
03041001c ಬದರ್ಯಾಂ ತಪ್ತವಾನುಗ್ರಂ ತಪೋ ವರ್ಷಾಯುತಾನ್ಬಹೂನ್||
ಭಗವಂತನು ಹೇಳಿದನು: “ನೀನು ಹಿಂದಿನ ದೇಹದಲ್ಲಿ ನಾರಾಯಣನ ಸಹಾಯಕ ನರನಾಗಿದ್ದೆ ಮತ್ತು ಬದರಿಯಲ್ಲಿ ಬಹಳಷ್ಟು ಸಾವಿರ ವರ್ಷಗಳ ಉಗ್ರ ತಪಸ್ಸನ್ನು ತಪಿಸಿದ್ದೆ.
03041002a ತ್ವಯಿ ವಾ ಪರಮಂ ತೇಜೋ ವಿಷ್ಣೌ ವಾ ಪುರುಷೋತ್ತಮೇ|
03041002c ಯುವಾಭ್ಯಾಂ ಪುರುಷಾಗ್ರ್ಯಾಭ್ಯಾಂ ತೇಜಸಾ ಧಾರ್ಯತೇ ಜಗತ್||
ಪುರುಷೋತ್ತಮ ವಿಷ್ಣುವಿನಲ್ಲಿರುವ ಪರಮ ತೇಜಸ್ಸು ನಿನ್ನಲ್ಲಿಯೂ ಇದೆ. ನೀವಿಬ್ಬರು ಪುರುಷವ್ಯಾಘ್ರರ ತೇಜಸ್ಸೇ ಈ ಜಗತ್ತನ್ನು ಪಾಲಿಸುತ್ತಿದೆ.
03041003a ಶಕ್ರಾಭಿಷೇಕೇ ಸುಮಹದ್ಧನುರ್ಜಲದನಿಸ್ವನಂ|
03041003c ಪ್ರಗೃಹ್ಯ ದಾನವಾಃ ಶಸ್ತಾಸ್ತ್ವಯಾ ಕೃಷ್ಣೇನ ಚ ಪ್ರಭೋ||
ಪ್ರಭೋ! ಶಕ್ರನ ಅಭಿಷೇಕದಲ್ಲಿ ನೀನು ಮತ್ತು ಕೃಷ್ಣನು ಮೋಡಗಳಂತೆ ಧ್ವನಿಸುವ ಮಹಾ ಧನುಸ್ಸನ್ನು ಹಿಡಿದು ದಾನವರನ್ನು ನಿಯಂತ್ರಿಸಿದ್ದಿರಿ.
03041004a ಏತತ್ತದೇವ ಗಾಂಡೀವಂ ತವ ಪಾರ್ಥ ಕರೋಚಿತಂ|
03041004c ಮಾಯಾಮಾಸ್ಥಾಯ ಯದ್ಗ್ರಸ್ತಂ ಮಯಾ ಪುರುಷಸತ್ತಮ|
03041004e ತೂಣೌ ಚಾಪ್ಯಕ್ಷಯೌ ಭೂಯಸ್ತವ ಪಾರ್ಥ ಯಥೋಚಿತೌ||
ಪುರುಷಸತ್ತಮ! ಪಾರ್ಥ! ಅದೇ ಗಾಂಡೀವವನ್ನು ನಿನ್ನ ಕೈಯಿಂದ ನನ್ನ ಮಾಯೆಯನ್ನು ಬಳಸಿ ನಾನು ಕಸಿದುಕೊಂಡೆ. ಪಾರ್ಥ! ನಿನಗೆ ಉಚಿತವಾದ ಆ ಎರಡು ಅಕ್ಷಯ ಭತ್ತಳಿಕೆಗಳನ್ನು ಹಿಂದೆ ಪಡೆದುಕೋ.
03041005a ಪ್ರೀತಿಮಾನಸ್ಮಿ ವೈ ಪಾರ್ಥ ತವ ಸತ್ಯಪರಾಕ್ರಮ|
03041005c ಗೃಹಾಣ ವರಮಸ್ಮತ್ತಃ ಕಾಂಕ್ಷಿತಂ ಯನ್ನರರ್ಷಭ||
ಪಾರ್ಥ! ನಿನ್ನ ಸತ್ಯಪರಾಕ್ರಮವನ್ನು ಮೆಚ್ಚಿದ್ದೇನೆ. ನರರ್ಷಭ! ನಿನಗೆ ಏನು ಬೇಕೋ ಆ ವರವನ್ನು ಪಡೆದುಕೋ.
03041006a ನ ತ್ವಯಾ ಸದೃಶಃ ಕಶ್ಚಿತ್ಪುಮಾನ್ಮರ್ತ್ಯೇಷು ಮಾನದ|
03041006c ದಿವಿ ವಾ ವಿದ್ಯತೇ ಕ್ಷತ್ರಂ ತ್ವತ್ಪ್ರಧಾನಮರಿಂದಮ||
ಮಾನದ! ನಿನ್ನ ಸರಿಸಮನಾದ ಪುರುಷನು ಮಾನವರಲ್ಲಿ ಅಥವಾ ದೇವಲೋಕದಲ್ಲಿ ಯಾರೂ ಇಲ್ಲ. ಅರಿಂದಮ! ಕ್ಷತ್ರಿಯರಲ್ಲಿ ನೀನೇ ಪ್ರಧಾನನಾದವನು.”
03041007 ಅರ್ಜುನ ಉವಾಚ|
03041007a ಭಗವನ್ದದಾಸಿ ಚೇನ್ಮಹ್ಯಂ ಕಾಮಂ ಪ್ರೀತ್ಯಾ ವೃಷಧ್ವಜ|
03041007c ಕಾಮಯೇ ದಿವ್ಯಮಸ್ತ್ರಂ ತದ್ಘೋರಂ ಪಾಶುಪತಂ ಪ್ರಭೋ||
03041008a ಯತ್ತದ್ಬ್ರಹ್ಮಶಿರೋ ನಾಮ ರೌದ್ರಂ ಭೀಮಪರಾಕ್ರಮಂ|
03041008c ಯುಗಾಂತೇ ದಾರುಣೇ ಪ್ರಾಪ್ತೇ ಕೃತ್ಸ್ನಂ ಸಂಹರತೇ ಜಗತ್||
ಅರ್ಜುನನು ಹೇಳಿದನು: “ಭಗವನ್! ವೃಷಧ್ವಜ! ಪ್ರಭೋ! ನನಗೆ ಬೇಕಾದುದನ್ನು ಕೊಡಲು ಇಚ್ಛಿಸುವೆಯಾದರೆ ದಿವ್ಯಾಸ್ತ್ರವಾದ ಬ್ರಹ್ಮಶಿರ ಎನ್ನುವ ಹೆಸರಿನಿಂದ ಯಾವುದು ಕರೆಯಲ್ಪಡುತ್ತದೆಯೋ ಆ ಘೋರ, ರೌದ್ರ, ಭೀಮಪರಾಕ್ರಮ, ದಾರುಣ ಯುಗಾಂತವು ಪ್ರಾಪ್ತವಾದಾಗ ಜಗತ್ತನ್ನು ಪೂರ್ತಿ ಸಂಹರಿಸುವ, ಪಾಶುಪತವನ್ನು ಬಯಸುತ್ತೇನೆ.
03041009a ದಹೇಯಂ ಯೇನ ಸಂಗ್ರಾಮೇ ದಾನವಾನ್ರಾಕ್ಷಸಾಂಸ್ತಥಾ|
03041009c ಭೂತಾನಿ ಚ ಪಿಶಾಚಾಂಶ್ಚ ಗಂಧರ್ವಾನಥ ಪನ್ನಗಾನ್||
ಅದರಿಂದ ಸಂಗ್ರಾಮದಲ್ಲಿ ದಾನವರನ್ನೂ ರಾಕ್ಷಸರನ್ನೂ ಭೂತ, ಪಿಶಾಚಿ, ಗಂಧರ್ವ ಮತ್ತು ಪನ್ನಗರನ್ನೂ ದಹಿಸಬಹುದು.
03041010a ಯತಃ ಶೂಲಸಹಸ್ರಾಣಿ ಗದಾಶ್ಚೋಗ್ರಪ್ರದರ್ಶನಾಃ|
03041010c ಶರಾಶ್ಚಾಶೀವಿಷಾಕಾರಾಃ ಸಂಭವಂತ್ಯನುಮಂತ್ರಿತಾಃ||
ಅದನ್ನು ಅನುಮಂತ್ರಿಸಿದಾಗ ಅದರಿಂದ ಸಹಸ್ರಾರು ಶೂಲಗಳು ಮತ್ತು ಉಗ್ರವಾಗಿ ಕಾಣುವ ಗದೆಗಳು, ವಿಷಕಾರುವ ಬಾಣಗಳು ಹುಟ್ಟುತ್ತವೆ.
03041011a ಯುಧ್ಯೇಯಂ ಯೇನ ಭೀಷ್ಮೇಣ ದ್ರೋಣೇನ ಚ ಕೃಪೇಣ ಚ|
03041011c ಸೂತಪುತ್ರೇಣ ಚ ರಣೇ ನಿತ್ಯಂ ಕಟುಕಭಾಷಿಣಾ||
03041012a ಏಷ ಮೇ ಪ್ರಥಮಃ ಕಾಮೋ ಭಗವನ್ಭಗನೇತ್ರಹನ್|
03041012c ತ್ವತ್ಪ್ರಸಾದಾದ್ವಿನಿರ್ವೃತ್ತಃ ಸಮರ್ಥಃ ಸ್ಯಾಮಹಂ ಯಥಾ||
ಇದರಿಂದ ರಣದಲ್ಲಿ ಭೀಷ್ಮ, ದ್ರೋಣ, ಕೃಪ, ಯಾವಾಗಲೂ ಕಟುಕಾಗಿ ಮಾತನಾಡುವ ಸೂತಪುತ್ರನೊಡನೆ ಯುದ್ಧಮಾಡಬಲ್ಲೆ. ಭಗವನ್! ಭಗನೇತ್ರಹ! ಇದು ನನ್ನ ಮೊಟ್ಟಮೊದಲಿನ ಬಯಕೆ. ನಿನ್ನ ಪ್ರಸಾದದಿಂದ ನಾನು ಸಮರ್ಥನಾಗಿ ಹಿಂದಿರುಗಬಹುದು.”
03041013 ಭಗವಾನುವಾಚ|
03041013a ದದಾನಿ ತೇಽಸ್ತ್ರಂ ದಯಿತಮಹಂ ಪಾಶುಪತಂ ಮಹತ್|
03041013c ಸಮರ್ಥೋ ಧಾರಣೇ ಮೋಕ್ಷೇ ಸಂಹಾರೇ ಚಾಪಿ ಪಾಂಡವ||
ಭಗವಂತನು ಹೇಳಿದನು: “ಆ ಮಹಾ ಪಾಶುಪತ ಅಸ್ತ್ರವನ್ನು ನಿನಗೆ ಕೊಡುತ್ತೇನೆ. ಪಾಂಡವ ಅದನ್ನು ಧಾರಣಮಾಡಬಲ್ಲೆ, ಪ್ರಯೋಗಮಾಡಬಲ್ಲೆ ಮತ್ತು ಅದರಿಂದ ಸಂಹಾರಮಾಡಬಲ್ಲೆ.
03041014a ನೈತದ್ವೇದ ಮಹೇಂದ್ರೋಽಪಿ ನ ಯಮೋ ನ ಚ ಯಕ್ಷರಾಟ್|
03041014c ವರುಣೋ ವಾಥ ವಾ ವಾಯುಃ ಕುತೋ ವೇತ್ಸ್ಯಂತಿ ಮಾನವಾಃ||
ಇದನ್ನು ಮಹೇಂದ್ರನೂ, ಯಮನೂ, ಯಕ್ಷರಾಜನೂ, ವರುಣನೂ ಅಥವಾ ವಾಯುವೂ ತಿಳಿದಿಲ್ಲ. ಇನ್ನು ಮನುಷ್ಯರಲ್ಲಿ ಯಾರಿಗೆ ತಿಳಿದಿರಬೇಕು?
03041015a ನ ತ್ವೇತತ್ಸಹಸಾ ಪಾರ್ಥ ಮೋಕ್ತವ್ಯಂ ಪುರುಷೇ ಕ್ವ ಚಿತ್|
03041015c ಜಗದ್ವಿನಿರ್ದಹೇತ್ಸರ್ವಮಲ್ಪತೇಜಸಿ ಪಾತಿತಂ||
ಆದರೆ, ಪಾರ್ಥ! ನೀನು ಇದನ್ನು ಯಾವಾಗಲೂ ಸಾಹಸದಿಂದ ಮನುಷ್ಯನ ಮೇಲೆ ಪ್ರಯೋಗಿಸಬಾರದು. ಏಕೆಂದರೆ ಅಲ್ಪತೇಜಸ್ಸಿನವನ ಮೇಲೆ ಇದು ಬಿದ್ದರೆ ಇಡೀ ಜಗತ್ತನ್ನೇ ಸುಟ್ಟುಹಾಕಿಬಿಡುತ್ತದೆ.
03041016a ಅವಧ್ಯೋ ನಾಮ ನಾಸ್ತ್ಯಸ್ಯ ತ್ರೈಲೋಕ್ಯೇ ಸಚರಾಚರೇ|
03041016c ಮನಸಾ ಚಕ್ಷುಷಾ ವಾಚಾ ಧನುಷಾ ಚ ನಿಪಾತ್ಯತೇ||
ಮೂರೂ ಲೋಕಗಳಲ್ಲಿಯೂ ಇದಕ್ಕೆ ಅವಧ್ಯ ಎನ್ನುವವರು ಯಾವ ಚರಾಚರರೂ ಇಲ್ಲ. ಮತ್ತು ಇದನ್ನು ಮನಸ್ಸಿನಿಂದ, ನೋಟದಿಂದ, ಮಾತಿನಿಂದ ಅಥವಾ ಧನುಸ್ಸಿನಿಂದ ಪ್ರಯೋಗಿಸಬಹುದು.””
03041017 ವೈಶಂಪಾಯನ ಉವಾಚ|
03041017a ತಚ್ಶ್ರುತ್ವಾ ತ್ವರಿತಃ ಪಾರ್ಥಃ ಶುಚಿರ್ಭೂತ್ವಾ ಸಮಾಹಿತಃ|
03041017c ಉಪಸಂಗೃಹ್ಯ ವಿಶ್ವೇಶಮಧೀಷ್ವೇತಿ ಚ ಸೋಽಬ್ರವೀತ್||
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಬೇಗನೇ ಪಾರ್ಥನು ಶುಚಿರ್ಭೂತನಾಗಿ ದಿಟ್ಟನಾಗಿ ವಿಶ್ವೇಶ್ವರನ ಪಾದಗಳನ್ನು ಹಿಡಿಯಲು ಅವನು “ಇದನ್ನು ಕಲಿತುಕೋ!” ಎಂದು ಹೇಳಿದನು.
03041018a ತತಸ್ತ್ವಧ್ಯಾಪಯಾಮಾಸ ಸರಹಸ್ಯ ನಿವರ್ತನಂ|
03041018c ತದಸ್ತ್ರಂ ಪಾಂಡವಶ್ರೇಷ್ಠಂ ಮೂರ್ತಿಮಂತಮಿವಾಂತಕಂ||
ನಂತರ ಅವನು ಪಾಂಡವಶ್ರೇಷ್ಠನಿಗೆ ಅಂತಕನ ಮೂರ್ತಿವತ್ತಾಗಿದ್ದ ಆ ಅಸ್ತ್ರವನ್ನು ಹೇಗೆ ಪ್ರಯೋಗಿಸಬೇಕು ಮತ್ತು ಹೇಗೆ ಹಿಂತೆಗೆದುಕೊಳ್ಳಬೇಕು ಎನ್ನುವುದನ್ನು ಹೇಳಿಕೊಟ್ಟನು.
03041019a ಉಪತಸ್ಥೇ ಮಹಾತ್ಮಾನಂ ಯಥಾ ತ್ರ್ಯಕ್ಷಮುಮಾಪತಿಂ|
03041019c ಪ್ರತಿಜಗ್ರಾಹ ತಚ್ಚಾಪಿ ಪ್ರೀತಿಮಾನರ್ಜುನಸ್ತದಾ||
ಮೂರುಕಣ್ಣಿನವನೊಡನೆ ಹೇಗೋ ಹಾಗೆ ಅದು ಆ ಮಹಾತ್ಮನ ಬಳಿಬಂದಿತು ಮತ್ತು ಅರ್ಜುನನು ಅದನ್ನು ಸ್ವೀಕರಿಸಿದನು.
03041020a ತತಶ್ಚಚಾಲ ಪೃಥಿವೀ ಸಪರ್ವತವನದ್ರುಮಾ|
03041020c ಸಸಾಗರವನೋದ್ದೇಶಾ ಸಗ್ರಾಮನಗರಾಕರಾ||
ಆಗ ಪೃಥ್ವಿಯು - ಅದರ ಪರ್ವತ, ವನ, ಮರಗಳು, ಸಾಗರ. ವನಪ್ರದೇಶಗಳು, ಮತ್ತು ಗ್ರಾಮನಗರಗಳೊಡನೆ - ಕಂಪಿಸಿತು.
03041021a ಶಂಖದುಂದುಭಿಘೋಷಾಶ್ಚ ಭೇರೀಣಾಂ ಚ ಸಹಸ್ರಶಃ|
03041021c ತಸ್ಮಿನ್ಮುಹೂರ್ತೇ ಸಂಪ್ರಾಪ್ತೇ ನಿರ್ಘಾತಶ್ಚ ಮಹಾನಭೂತ್||
ಆದೇ ಸಮಯದಲ್ಲಿ ಸಹಸ್ರಾರು ಶಂಖ, ದುಂದುಭಿ, ಮತ್ತು ಭೇರಿಗಳ ಘೋಷವು ಕೇಳಿಬಂದಿತು ಮತ್ತು ಮಹಾ ಭೂಕಂಪವಾಯಿತು.
03041022a ಅಥಾಸ್ತ್ರಂ ಜಾಜ್ವಲದ್ಘೋರಂ ಪಾಂಡವಸ್ಯಾಮಿತೌಜಸಃ|
03041022c ಮೂರ್ತಿಮದ್ವಿಷ್ಠಿತಂ ಪಾರ್ಶ್ವೇ ದದೃಶುರ್ದೇವದಾನವಾಃ||
ಆ ಜಾಜ್ವಲ್ಯಮಾನ ಘೋರ ಅಸ್ತ್ರವು ಅಮಿತೌಜಸ ಪಾಂಡವನ ಪಕ್ಕದಲ್ಲಿ ಮೂರ್ತಿವತ್ತಾಗಿ ನಿಂತಿದ್ದುದನ್ನು ದೇವದಾನವರು ವೀಕ್ಷಿಸಿದರು.
03041023a ಸ್ಪೃಷ್ಟಸ್ಯ ಚ ತ್ರ್ಯಂಬಕೇನ ಫಲ್ಗುನಸ್ಯಾಮಿತೌಜಸಃ|
03041023c ಯತ್ಕಿಂ ಚಿದಶುಭಂ ದೇಹೇ ತತ್ಸರ್ವಂ ನಾಶಮೇಯಿವತ್||
ತ್ರ್ಯಂಬಕನು ಅಮಿತೌಜಸ ಫಲ್ಗುನನನ್ನು ಮುಟ್ಟಲು ಅವನ ದೇಹದಲ್ಲಿ ಏನೇನು ಅಶುಭಗಳಿದ್ದವೋ ಅವೆಲ್ಲವೂ ನಾಶವಾದವು.
03041024a ಸ್ವರ್ಗಂ ಗಚ್ಚೇತ್ಯನುಜ್ಞಾತಸ್ತ್ರ್ಯಂಬಕೇನ ತದಾರ್ಜುನಃ|
03041024c ಪ್ರಣಮ್ಯ ಶಿರಸಾ ಪಾರ್ಥಃ ಪ್ರಾಂಜಲಿರ್ದೇವಮೈಕ್ಷತ||
ಶಿರಬಾಗಿ ಅಂಜಲೀ ಬದ್ಧನಾಗಿ ಪಾರ್ಥನು ನಮಸ್ಕರಿಸಲು ಸ್ವರ್ಗಕ್ಕೆ ಹೋಗು ಎಂದು ತ್ರ್ಯಂಬಕನು ಅರ್ಜುನನಿಗೆ ಅನುಜ್ಞೆಯನ್ನಿತ್ತನು.
03041025a ತತಃ ಪ್ರಭುಸ್ತ್ರಿದಿವನಿವಾಸಿನಾಂ ವಶೀ |
ಮಹಾಮತಿರ್ಗಿರಿಶ ಉಮಾಪತಿಃ ಶಿವಃ||
03041025c ಧನುರ್ಮಹದ್ದಿತಿಜಪಿಶಾಚಸೂದನಂ|
ದದೌ ಭವಃ ಪುರುಷವರಾಯ ಗಾಂಡಿವಂ||
ಆಗ ದೇವತೆಗಳ ಪ್ರಭು, ಮಹಾಮತಿ, ಗಿರೀಶ, ಉಮಾಪತಿ ಶಿವ ಭವನು ದೈತ್ಯರು ಮತ್ತು ಪಿಶಾಚರನ್ನು ಕೊಲ್ಲಬಲ್ಲ ಮಹಾಧನುಸ್ಸು ಗಾಂಡೀವವನ್ನು ಪುರುಷಶ್ರೇಷ್ಠನಿಗೆ ಕೊಟ್ಟನು.
03041026a ತತಃ ಶುಭಂ ಗಿರಿವರಮೀಶ್ವರಸ್ತದಾ|
ಸಹೋಮಯಾ ಸಿತತಟಸಾನುಕಂದರಂ||
03041026c ವಿಹಾಯ ತಂ ಪತಗಮಹರ್ಷಿಸೇವಿತಂ|
ಜಗಾಮ ಖಂ ಪುರುಷವರಸ್ಯ ಪಶ್ಯತಃ||
ಅನಂತರ ಅರ್ಜುನನು ನೋಡುತ್ತಿದ್ಡಂತೆಯೇ ಆ ಶುಭ, ಈಶ್ವರನು ಉಮೆಯೊಂದಿಗೆ ಆ ಗಿರಿ, ತಟಾಕ, ಮತ್ತು ಕಣಿವೆಗಳಿಂದೊಡಗೂಡಿದ, ಪಕ್ಷಿಗಳು ಮತ್ತು ಮಹರ್ಷಿಗಳಿಂದ ಸೇವಿತ ಗಿರಿಶ್ರೇಷ್ಠವನ್ನು ಬಿಟ್ಟು ಆಕಾಶವನ್ನೇರಿದನು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಕೈರಾತಪರ್ವಣಿ ಶಿವಪ್ರಸ್ತಾನೇ ಈಕಚತ್ವಾರಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದ ಆರಣ್ಯಕಪರ್ವದಲ್ಲಿ ಕೈರಾತಪರ್ವದಲ್ಲಿ ಶಿವಪ್ರಸ್ತಾನದಲ್ಲಿ ನಲ್ವತ್ತೊಂದನೆಯ ಅಧ್ಯಾಯವು.

