Aranyaka Parva: Chapter 242

ಆರಣ್ಯಕ ಪರ್ವ: ಘೋಷಯಾತ್ರಾ ಪರ್ವ

೨೪೨

ದುಃಶಾಸನನು ಪಾಂಡವರಿಗೆ ಯಜ್ಞದ ಆಮಂತ್ರಣವನ್ನು ಕಳುಹಿಸಲು ಹದಿಮೂರು ವರ್ಷಗಳು ಮುಗಿಯುವವರೆಗೆ ತಮಗೆ ಬರಲಿಕ್ಕಾಗುವುದಿಲ್ಲವೆಂದು ಯುಧಿಷ್ಠಿರನೂ, ನಂತರ ದುರ್ಯೋಧನನನ್ನು ಆಹುತಿ ಕೊಡುವ ಯಜ್ಞಕ್ಕೆ ಬರುತ್ತೇವೆಂದು ಭೀಮನೂ ಹೇಳಿ ಕಳುಹಿಸುವುದು (೧-೧೬). ದುರ್ಯೋಧನನ ವೈಷ್ಣವ ಯಜ್ಞ ಸಮಾಪ್ತಿ (೧೭-೨೪).

03242001 ವೈಶಂಪಾಯನ ಉವಾಚ|

03242001a ತತಸ್ತು ಶಿಲ್ಪಿನಃ ಸರ್ವೇ ಅಮಾತ್ಯಪ್ರವರಾಶ್ಚ ಹ|

03242001c ವಿದುರಶ್ಚ ಮಹಾಪ್ರಾಜ್ಞೋ ಧಾರ್ತರಾಷ್ಟ್ರೇ ನ್ಯವೇದಯತ್||

ವೈಶಂಪಾಯನನು ಹೇಳಿದನು: “ಆಗ ಎಲ್ಲ ಶಿಲ್ಪಿಗಳೂ ಅಮಾತ್ಯ ಪ್ರವರರೂ ಮತ್ತು ಮಹಾಪ್ರಾಜ್ಞ ವಿದುರನೂ ಧಾರ್ತರಾಷ್ಟ್ರನಿಗೆ ನಿವೇದಿಸಿದರು.

03242002a ಸಜ್ಜಂ ಕ್ರತುವರಂ ರಾಜನ್ಕಾಲಪ್ರಾಪ್ತಂ ಚ ಭಾರತ|

03242002c ಸೌವರ್ಣಂ ಚ ಕೃತಂ ದಿವ್ಯಂ ಲಾಂಗಲಂ ಸುಮಹಾಧನಂ||

“ರಾಜನ್! ಭಾರತ! ಶ್ರೇಷ್ಠ ಕ್ರತುವಿಗೆ ಎಲ್ಲವೂ ಸಿದ್ಧವಾಗಿವೆ ಮತ್ತು ಕಾಲವೂ ಪ್ರಾಪ್ತವಾಗಿದೆ. ಮತ್ತು ಚಿನ್ನದಿಂದ ದಿವ್ಯವಾದ ನೇಗಿಲನ್ನೂ ನಿರ್ಮಿಸಿಯಾಗಿದೆ.”

03242003a ಏತಚ್ಚ್ರುತ್ವಾ ನೃಪಶ್ರೇಷ್ಠೋ ಧಾರ್ತರಾಷ್ಟ್ರೋ ವಿಶಾಂ ಪತೇ|

03242003c ಆಜ್ಞಾಪಯಾಮಾಸ ನೃಪಃ ಕ್ರತುರಾಜಪ್ರವರ್ತನಂ||

ವಿಶಾಂಪತೇ! ಇದನ್ನು ಕೇಳಿ ನೃಪಶ್ರೇಷ್ಠ ನೃಪ ಧಾರ್ತರಾಷ್ಟ್ರನು ಆ ರಾಜಕ್ರತುವನ್ನು ಪ್ರಾರಂಭಿಸಲು ಆಜ್ಞೆಯನ್ನಿತ್ತನು.

03242004a ತತಃ ಪ್ರವವೃತೇ ಯಜ್ಞಃ ಪ್ರಭೂತಾನ್ನಃ ಸುಸಂಸ್ಕೃತಃ|

03242004c ದೀಕ್ಷಿತಶ್ಚಾಪಿ ಗಾಂಧಾರಿರ್ಯಥಾಶಾಸ್ತ್ರಂ ಯಥಾಕ್ರಮಂ||

ಆಗ ಬಹು ಆಹಾರಗಳಿಂದ ಕೂಡಿದ್ದ, ಸುಸಂಸ್ಕೃತವಾದ ಯಜ್ಞವು ಪ್ರಾರಂಭಗೊಂಡಿತು. ಗಾಂಧಾರಿಯ ಮಗನು ಯಥಾಶಾಸ್ತ್ರವಾಗಿ ಯಥಾಕ್ರಮವಾಗಿ ದೀಕ್ಷಿತಗೊಂಡನು.

03242005a ಪ್ರಹೃಷ್ಟೋ ಧೃತರಾಷ್ಟ್ರೋಽಭೂದ್ವಿದುರಶ್ಚ ಮಹಾಯಶಾಃ|

03242005c ಭೀಷ್ಮೋ ದ್ರೋಣಃ ಕೃಪಃ ಕರ್ಣೋ ಗಾಂಧಾರೀ ಚ ಯಶಸ್ವಿನೀ||

ಧೃತರಾಷ್ಟ್ರ, ವಿದುರ, ಮಹಾಯಶಸ್ವಿಗಳಾದ ಭೀಷ್ಮ, ದ್ರೋಣ, ಕೃಪ, ಕರ್ಣ ಮತ್ತು ಯಶಸ್ವಿನೀ ಗಾಂಧಾರಿಯರು ತುಂಬಾ ಸಂತೋಷಗೊಂಡರು.

03242006a ನಿಮಂತ್ರಣಾರ್ಥಂ ದೂತಾಂಶ್ಚ ಪ್ರೇಷಯಾಮಾಸ ಶೀಘ್ರಗಾನ್|

03242006c ಪಾರ್ಥಿವಾನಾಂ ಚ ರಾಜೇಂದ್ರ ಬ್ರಾಹ್ಮಣಾನಾಂ ತಥೈವ ಚ|

03242006e ತೇ ಪ್ರಯಾತಾ ಯಥೋದ್ದಿಷ್ಟಂ ದೂತಾಸ್ತ್ವರಿತವಾಹನಾಃ||

ರಾಜೇಂದ್ರ! ರಾಜರ ಮತ್ತು ಬ್ರಾಹ್ಮಣರ ನಿಮಂತ್ರಣಕ್ಕಾಗಿ ಶೀಘ್ರವಾಗಿ ಹೋಗುವ ದೂತರನ್ನು ಕಳುಹಿಸಲಾಯಿತು. ಆ ದೂತರು ತಮಗೆ ಹೇಳಿದ ದಿಕ್ಕುಗಳಿಗೆ ತ್ವರಿತ ವಾಹನಗಳಲ್ಲಿ ಹೊರಟರು.

03242007a ತತ್ರ ಕಂ ಚಿತ್ಪ್ರಯಾತಂ ತು ದೂತಂ ದುಃಶಾಸನೋಽಬ್ರವೀತ್|

03242007c ಗಚ್ಚ ದ್ವೈತವನಂ ಶೀಘ್ರಂ ಪಾಂಡವಾನ್ಪಾಪಪೂರುಷಾನ್|

03242007e ನಿಮಂತ್ರಯ ಯಥಾನ್ಯಾಯಂ ವಿಪ್ರಾಂಸ್ತಸ್ಮಿನ್ಮಹಾವನೇ||

ಆಗ ಹೊರಡುತ್ತಿರುವ ಓರ್ವ ದೂತನಿಗೆ ದುಃಶಾಸನನು ಹೇಳಿದನು: “ಶೀಘ್ರವಾಗಿ ದ್ವೈತವನಕ್ಕೆ ಹೋಗಿ ಪಾಪಪುರುಷರಾದ ಪಾಂಡವರಿಗೂ ಆ ಮಹಾವನದಲ್ಲಿರುವ ವಿಪ್ರರಿಗೂ ಯಥಾನ್ಯಾಯವಾಗಿ ನಿಮಂತ್ರಣವನ್ನು ನೀಡು.”

03242008a ಸ ಗತ್ವಾ ಪಾಂಡವಾವಾಸಮುವಾಚಾಭಿಪ್ರಣಮ್ಯ ತಾನ್|

03242008c ದುರ್ಯೋಧನೋ ಮಹಾರಾಜ ಯಜತೇ ನೃಪಸತ್ತಮಃ||

03242009a ಸ್ವವೀರ್ಯಾರ್ಜಿತಮರ್ಥೌಘಮವಾಪ್ಯ ಕುರುನಂದನಃ|

ಅವನು ಪಾಂಡವರು ವಾಸಿಸುವಲ್ಲಿಗೆ ಹೋಗಿ ಅವರಿಗೆ ನಮಸ್ಕರಿಸಿ ಹೇಳಿದನು: “ಮಹಾರಾಜ! ಕುರುನಂದನ ನೃಪಸತ್ತಮ ದುರ್ಯೋಧನನು ತನ್ನ ವೀರ್ಯದಿಂದ ಅಮೋಘ ಸಂಪತ್ತನ್ನು ಗಳಿಸಿ ಯಜ್ಞವನ್ನು ನಡೆಸಿದ್ದಾನೆ.

03242009c ತತ್ರ ಗಚ್ಚಂತಿ ರಾಜಾನೋ ಬ್ರಾಹ್ಮಣಾಶ್ಚ ತತಸ್ತತಃ||

03242010a ಅಹಂ ತು ಪ್ರೇಷಿತೋ ರಾಜನ್ಕೌರವೇಣ ಮಹಾತ್ಮನಾ|

03242010c ಆಮಂತ್ರಯತಿ ವೋ ರಾಜಾ ಧಾರ್ತರಾಷ್ಟ್ರೋ ಜನೇಶ್ವರಃ|

03242010e ಮನೋಽಭಿಲಷಿತಂ ರಾಜ್ಞಸ್ತಂ ಕ್ರತುಂ ದ್ರಷ್ಟುಮರ್ಹಥ||

ಎಲ್ಲೆಡೆಯಿಂದ ರಾಜರು ಮತ್ತು ಬ್ರಾಹ್ಮಣರು ಅಲ್ಲಿಗೇ ಹೋಗುತ್ತಿದ್ದಾರೆ. ರಾಜನ್! ನಾನಾದರೋ ಮಹಾತ್ಮ ಕೌರವನಿಂದ ಕಳುಹಿಸಲ್ಪಟ್ಟಿದ್ದೇನೆ. ಆ ರಾಜಾ ಜನೇಶ್ವರ ಧಾರ್ತರಾಷ್ಟ್ರನು ಆಮಂತ್ರಣವನ್ನಿಟ್ಟಿದ್ದಾನೆ. ಆದುದರಿಂದ ರಾಜನ ಆ ಕ್ರತುವನ್ನು ನೋಡುವ ಮನಸ್ಸುಮಾಡಬೇಕು.”

03242011a ತತೋ ಯುಧಿಷ್ಠಿರೋ ರಾಜಾ ತಚ್ಚ್ರುತ್ವಾ ದೂತಭಾಷಿತಂ|

03242011c ಅಬ್ರವೀನ್ನೃಪಶಾರ್ದೂಲೋ ದಿಷ್ಟ್ಯಾ ರಾಜಾ ಸುಯೋಧನಃ|

03242011e ಯಜತೇ ಕ್ರತುಮುಖ್ಯೇನ ಪೂರ್ವೇಷಾಂ ಕೀರ್ತಿವರ್ಧನಃ||

ಆಗ ಆ ದೂತನು ಹೇಳಿದುದನ್ನು ಕೇಳಿ ರಾಜಾ ಯುಧಿಷ್ಠಿರನು ಹೇಳಿದನು: “ನೃಪಶಾರ್ದೂಲ ರಾಜಾ ಸುಯೋಧನನು ಪೂರ್ವಜರ ಕೀರ್ತಿಯನ್ನು ಹೆಚ್ಚಿಸುವ ಮುಖ್ಯ ಕ್ರತುವನ್ನು ಮಾಡುತ್ತಿರುವುದು ಒಳ್ಳೆಯದೇ!

03242012a ವಯಮಪ್ಯುಪಯಾಸ್ಯಾಮೋ ನ ತ್ವಿದಾನೀಂ ಕಥಂ ಚನ|

03242012c ಸಮಯಃ ಪರಿಪಾಲ್ಯೋ ನೋ ಯಾವದ್ವರ್ಷಂ ತ್ರಯೋದಶಂ||

ನಾವು ಖಂಡಿತವಾಗಿಯೂ ಅಲ್ಲಿಗೆ ಬರಬೇಕು. ಆದರೆ ಹದಿಮೂರು ವರ್ಷಗಳು ಮುಗಿಯುವವರೆಗೆ ಒಪ್ಪಂದವನ್ನು ಪಾಲಿಸಬೇಕಾಗಿರುವುದರಿಂದ ನಾವು ಹಾಗೆ ಮಾಡಲಾರೆವು.”

03242013a ಶ್ರುತ್ವೈತದ್ಧರ್ಮರಾಜಸ್ಯ ಭೀಮೋ ವಚನಮಬ್ರವೀತ್|

03242013c ತದಾ ತು ನೃಪತಿರ್ಗಂತಾ ಧರ್ಮರಾಜೋ ಯುಧಿಷ್ಠಿರಃ||

03242014a ಅಸ್ತ್ರಶಸ್ತ್ರಪ್ರದೀಪ್ತೇಽಗ್ನೌ ಯದಾ ತಂ ಪಾತಯಿಷ್ಯತಿ|

ಧರ್ಮರಾಜನ ಆ ಮಾತನ್ನು ಕೇಳಿ ಭೀಮನು ಹೇಳಿದನು: “ಆಗ ನೃಪತಿ ಧರ್ಮರಾಜ ಯುಧಿಷ್ಠಿರನು ಹೋಗಿ ಅವನನ್ನು ಅಸ್ತ್ರ-ಶಸ್ತ್ರಗಳಿಂದ ಉರಿಸಿದ ಅಗ್ನಿಯಲ್ಲಿ ಕೆಡಹುತ್ತಾನೆ.

03242014c ವರ್ಷಾತ್ತ್ರಯೋದಶಾದೂರ್ಧ್ವಂ ರಣಸತ್ರೇ ನರಾಧಿಪಃ||

03242015a ಯದಾ ಕ್ರೋಧಹವಿರ್ಮೋಕ್ತಾ ಧಾರ್ತರಾಷ್ಟ್ರೇಷು ಪಾಂಡವಃ|

03242015c ಆಗಂತಾರಸ್ತದಾ ಸ್ಮೇತಿ ವಾಚ್ಯಸ್ತೇ ಸ ಸುಯೋಧನಃ||

ಹದಿಮೂರನೆಯ ವರ್ಷವು ಕೊನೆಗೊಳ್ಳಲು ರಣಸತ್ರದಲ್ಲಿ ನರಾಧಿಪ ಪಾಂಡವನು ಕ್ರೋಧದ ಹವಿಸ್ಸಾಗಿ ಧಾರ್ತರಾಷ್ಟ್ರರನ್ನು ಹಾಕುತ್ತಾನೆ. ಆಗ ನಾನು ಬರುತ್ತೇನೆ ಎಂದು ಸುಯೋಧನನಿಗೆ ಹೇಳು.”

03242016a ಶೇಷಾಸ್ತು ಪಾಂಡವಾ ರಾಜನ್ನೈವೋಚುಃ ಕಿಂ ಚಿದಪ್ರಿಯಂ|

03242016c ದೂತಶ್ಚಾಪಿ ಯಥಾವೃತ್ತಂ ಧಾರ್ತರಾಷ್ಟ್ರೇ ನ್ಯವೇದಯತ್||

ರಾಜನ್! ಉಳಿದ ಪಾಂಡವರು ಯಾರೂ ಅಪ್ರಿಯವಾದುದನ್ನು ಹೇಳಲಿಲ್ಲ. ದೂತನೂ ಕೂಡ ನಡೆದುದನ್ನು ಹಾಗೆಯೇ ಧಾರ್ತರಾಷ್ಟ್ರನಿಗೆ ನಿವೇದಿಸಿದನು.

03242017a ಅಥಾಜಗ್ಮುರ್ನರಶ್ರೇಷ್ಠಾ ನಾನಾಜನಪದೇಶ್ವರಾಃ|

03242017c ಬ್ರಾಹ್ಮಣಾಶ್ಚ ಮಹಾಭಾಗಾ ಧಾರ್ತರಾಷ್ಟ್ರಪುರಂ ಪ್ರತಿ||

ಆಗ ಧಾರ್ತರಾಷ್ಟ್ರನ ಪುರಕ್ಕೆ ನರಶ್ರೇಷ್ಠರೂ, ನಾನಾ ಜನಪದೇಶ್ವರರೂ, ಮಹಾಭಾಗ ಬ್ರಾಹ್ಮಣರೂ ಬಂದರು.

03242018a ತೇ ತ್ವರ್ಚಿತಾ ಯಥಾಶಾಸ್ತ್ರಂ ಯಥಾವರ್ಣಂ ಯಥಾಕ್ರಮಂ|

03242018c ಮುದಾ ಪರಮಯಾ ಯುಕ್ತಾಃ ಪ್ರೀತ್ಯಾ ಚಾಪಿ ನರೇಶ್ವರ||

ನರೇಶ್ವರ! ಅವರು ಯಥಾಶಾಸ್ತ್ರವಾಗಿ, ಯಥಾವರ್ಣವಾಗಿ, ಯಥಾಕ್ರಮವಾಗಿ ಅರ್ಚಿತರಾದರು ಮತ್ತು ಪರಮ ಸಂತೋಷದಿಂದ ಮುದಿತರಾದರು.

03242019a ಧೃತರಾಷ್ಟ್ರೋಽಪಿ ರಾಜೇಂದ್ರ ಸಂವೃತಃ ಸರ್ವಕೌರವೈಃ|

03242019c ಹರ್ಷೇಣ ಮಹತಾ ಯುಕ್ತೋ ವಿದುರಂ ಪ್ರತ್ಯಭಾಷತ||

ರಾಜೇಂದ್ರ! ಧೃತರಾಷ್ಟ್ರನೂ ಕೂಡ ಎಲ್ಲ ಕೌರವರಿಂದ ಸುತ್ತುವರೆಯಲ್ಪಟ್ಟು ಮಹಾ ಹರ್ಷಿತಾಗಿ ವಿದುರನಿಗೆ ಹೇಳಿದನು:

03242020a ಯಥಾ ಸುಖೀ ಜನಃ ಸರ್ವಃ ಕ್ಷತ್ತಃ ಸ್ಯಾದನ್ನಸಮ್ಯುತಃ|

03242020c ತುಷ್ಯೇಚ್ಚ ಯಜ್ಞಸದನೇ ತಥಾ ಕ್ಷಿಪ್ರಂ ವಿಧೀಯತಾಂ||

“ಕ್ಷತ್ತ! ಬೇಗನೇ ಯಜ್ಞಸದನದಲ್ಲಿರುವ ಎಲ್ಲರೂ ಸುಖಿಗಳಾಗಿ ಆಹಾರ ಪಾನೀಯಗಳಿಂದ ತೃಪ್ತರಾಗುವಂತೆ ನೋಡಿಕೋ!”

03242021a ವಿದುರಸ್ತ್ವೇವಮಾಜ್ಞಪ್ತಃ ಸರ್ವವರ್ಣಾನರಿಂದಮ|

03242021c ಯಥಾಪ್ರಮಾಣತೋ ವಿದ್ವಾನ್ಪೂಜಯಾಮಾಸ ಧರ್ಮವಿತ್||

03242022a ಭಕ್ಷ್ಯಭೋಜ್ಯಾನ್ನಪಾನೇನ ಮಾಲ್ಯೈಶ್ಚಾಪಿ ಸುಗಂಧಿಭಿಃ|

ಅರಿಂದಮ! ಆಜ್ಞೆಯಂತೆ ವಿದ್ವಾನ್ ವಿದುರನು ಎಲ್ಲ ವರ್ಣದವರನ್ನೂ ಧರ್ಮವತ್ತಾಗಿ ಭಕ್ಷ್ಯ, ಭೋಜನ, ಪಾನೀಯ, ಮಾಲೆ ಸುಗಂಧಗಳಿಂದ ಪೂಜಿಸಿದನು.

03242022c ವಾಸೋಭಿರ್ವಿವಿಧೈಶ್ಚೈವ ಯೋಜಯಾಮಾಸ ಹೃಷ್ಟವತ್||

03242023a ಕೃತ್ವಾ ಹ್ಯವಭೃಥಂ ವೀರೋ ಯಥಾಶಾಸ್ತ್ರಂ ಯಥಾಕ್ರಮಂ|

03242023c ಸಾಂತ್ವಯಿತ್ವಾ ಚ ರಾಜೇಂದ್ರೋ ದತ್ತ್ವಾ ಚ ವಿವಿಧಂ ವಸು|

03242023e ವಿಸರ್ಜಯಾಮಾಸ ನೃಪಾನ್ಬ್ರಾಹ್ಮಣಾಂಶ್ಚ ಸಹಸ್ರಶಃ||

ಸಂತೋಷದಿಂದ ವಾಸಿಸಲು ವಿವಿಧ ಕಟ್ಟಡಗಳನ್ನು ನಿರ್ಮಿಸಿದರು. ವೀರ ರಾಜೇಂದ್ರನು ಯಥಾಶಾಸ್ತ್ರವಾಗಿ ಯಥಾಕ್ರಮವಾಗಿ ಅವಭೃತವನ್ನು ಮಾಡಿ, ವಿವಿಧ ಸಂಪತ್ತನ್ನು ದಾನವನ್ನಿತ್ತು ಸಂತವಿಸಿ ಸಹಸ್ರಾರು ನೃಪರನ್ನೂ ಬ್ರಾಹ್ಮಣರನ್ನೂ ಕಳುಹಿಸಿಕೊಟ್ಟನು.

03242024a ವಿಸರ್ಜಯಿತ್ವಾ ಸ ನೃಪಾನ್ಭ್ರಾತೃಭಿಃ ಪರಿವಾರಿತಃ|

03242024c ವಿವೇಶ ಹಾಸ್ತಿನಪುರಂ ಸಹಿತಃ ಕರ್ಣಸೌಬಲೈಃ||

ನೃಪರನ್ನು ಕಳುಹಿಸಿಕೊಟ್ಟು ಸಹೋದರರಿಂದ ಸುತ್ತುವರೆಯಲ್ಪಟ್ಟು ಅವನು ಕರ್ಣ-ಸೌಬಲರೊಂದಿಗೆ ಹಸ್ತಿನಾಪುರವನ್ನು ಪ್ರವೇಶಿಸಿದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ದುರ್ಯೋಧನಯಜ್ಞೇ ದ್ವಿಚತ್ವಾರಿಂಶದಧಿಕದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ದುರ್ಯೋಧನಯಜ್ಞದಲ್ಲಿ ಇನ್ನೂರಾನಲ್ವತ್ತೆರಡನೆಯ ಅಧ್ಯಾಯವು.

Related image

Comments are closed.