Aranyaka Parva: Chapter 241

ಆರಣ್ಯಕ ಪರ್ವ: ಘೋಷಯಾತ್ರಾ ಪರ್ವ

೨೪೧

ದುರ್ಯೋಧನನಿಂದ ವೈಷ್ಣವ ಯಜ್ಞ

ಪಾಂಡವರ ಶೌರ್ಯವನ್ನು ಹೊಗಳುತ್ತಾ ಮತ್ತು ಕರ್ಣನ ಹೇಡಿತನವನ್ನು ತೆಗಳುತ್ತಾ ಭೀಷ್ಮನು ಸಂಧಿಯ ಕುರಿತು ಸೂಚಿಸುವುದು (೧-೧೦). ಭೀಷ್ಮನ ಮಾತನ್ನು ಕೇಳಿ ದುರ್ಯೋಧನನು ಜೋರಾಗಿ ನಕ್ಕು ತನ್ನ ಮಿತ್ರರೊಂದಿಗೆ ಸಭಾತ್ಯಾಗ ಮಾಡಿದುದು; ಭೀಷ್ಮನು ನಾಚಿ ತನ್ನ ಮನೆಗೆ ತೆರಳಿದುದು (೧೧-೧೨). ಪಾಂಡವರು ಮಾಡಿದ ರಾಜಸೂಯವನ್ನು ಮಾಡಬೇಕೆಂದು ಮುಂದಾದ ದುರ್ಯೋಧನನಿಗೆ ಯುಧಿಷ್ಠಿರ-ಧೃತರಾಷ್ಟ್ರರಿರುವಾಗಲೇ ಇದನ್ನು ಮಾಡಲಿಕ್ಕಾಗುವುದಿಲ್ಲವೆಂದೂ, ಬದಲಾಗಿ ವೈಷ್ಣವ ಯಜ್ಞವನ್ನು ಮಾಡಬಹುದೆಂದೂ ಪುರೋಹಿತರು ತಿಳಿಸುವುದು (೧೩-೩೩). ಯಜ್ಞಕ್ಕೆ ತಯಾರಿ (೩೪-೩೭).

03241001 ಜನಮೇಜಯ ಉವಾಚ|

03241001a ವಸಮಾನೇಷು ಪಾರ್ಥೇಷು ವನೇ ತಸ್ಮಿನ್ಮಹಾತ್ಮಸು|

03241001c ಧಾರ್ತರಾಷ್ಟ್ರಾ ಮಹೇಷ್ವಾಸಾಃ ಕಿಮಕುರ್ವಂತ ಸತ್ತಮ||

03241002a ಕರ್ಣೋ ವೈಕರ್ತನಶ್ಚಾಪಿ ಶಕುನಿಶ್ಚ ಮಹಾಬಲಃ|

03241002c ಭೀಷ್ಮದ್ರೋಣಕೃಪಾಶ್ಚೈವ ತನ್ಮೇ ಶಂಸಿತುಮರ್ಹಸಿ||

ಜನಮೇಜಯನು ಹೇಳಿದನು: “ಮಹಾತ್ಮ ಪಾರ್ಥರು ಆ ವನದಲ್ಲಿ ವಾಸಿಸುತ್ತಿರಲು, ಮಹೇಷ್ವಾಸ ಧಾರ್ತರಾಷ್ಟ್ರರು, ವೈಕರ್ತನ ಕರ್ಣ, ಮಹಾಬಲ ಶಕುನಿ, ಭೀಷ್ಮ, ದ್ರೋಣ, ಮತ್ತು ಕೃಪರು ಏನು ಮಾಡಿದರು? ಸತ್ತಮ! ಅದನ್ನು ನನಗೆ ಹೇಳಬೇಕು.”

03241003 ವೈಶಂಪಾಯನ ಉವಾಚ|

03241003a ಏವಂ ಗತೇಷು ಪಾರ್ಥೇಷು ವಿಸೃಷ್ಟೇ ಚ ಸುಯೋಧನೇ|

03241003c ಆಗತೇ ಹಾಸ್ತಿನಪುರಂ ಮೋಕ್ಷಿತೇ ಪಾಂಡುನಂದನೈಃ|

03241003e ಭೀಷ್ಮೋಽಬ್ರವೀನ್ಮಹಾರಾಜ ಧಾರ್ತರಾಷ್ಟ್ರಮಿದಂ ವಚಃ||

ವೈಶಂಪಾಯನನು ಹೇಳಿದನು: “ಮಹಾರಾಜ! ಹೀಗೆ ಸುಯೋಧನನನ್ನು ಬಿಡಿಸಿ ಪಾಂಡವರು ಹೊರಟು ಹೋಗಲು, ಪಾಂಡುನಂದನರಿಂದ ಮೋಕ್ಷಿತನಾಗಿ ಹಸ್ತಿನಾಪುರಕ್ಕೆ ಮರಳಿದ ಧಾರ್ತರಾಷ್ಟ್ರನಿಗೆ ಭೀಷ್ಮನು ಈ ಮಾತನ್ನು ಹೇಳಿದನು:

03241004a ಉಕ್ತಂ ತಾತ ಮಯಾ ಪೂರ್ವಂ ಗಚ್ಚತಸ್ತೇ ತಪೋವನಂ|

03241004c ಗಮನಂ ಮೇ ನ ರುಚಿತಂ ತವ ತನ್ನ ಕೃತಂ ಚ ತೇ||

“ಮಗನೇ! ಆ ತಪೋವನಕ್ಕೆ ನೀನು ಹೋಗುವ ಮೊದಲೇ ಹೋಗುವುದು ನನಗೆ ಇಷ್ಟವಾಗುತ್ತಿಲ್ಲವೆಂದು ನಿನಗೆ ಹೇಳಿದ್ದೆ. ಆದರೆ ನೀನು ಅದರಂತೆ ಮಾಡಲಿಲ್ಲ.

03241005a ತತಃ ಪ್ರಾಪ್ತಂ ತ್ವಯಾ ವೀರ ಗ್ರಹಣಂ ಶತ್ರುಭಿರ್ಬಲಾತ್|

03241005c ಮೋಕ್ಷಿತಶ್ಚಾಸಿ ಧರ್ಮಜ್ಞೈಃ ಪಾಂಡವೈರ್ನ ಚ ಲಜ್ಜಸೇ||

ಅದರಿಂದಾಗಿ ವೀರ! ಶತ್ರುಗಳಿಂದ ಬಲಾತ್ಕಾರವಾಗಿ ಸೆರೆಹಿಡಿಯಲ್ಪಟ್ಟು, ಧರ್ಮಜ್ಞ ಪಾಂಡವರಿಂದ ಬಿಡಿಸಲ್ಪಟ್ಟರೂ ನಿನಗೆ ನಾಚಿಕೆಯಾಗುತ್ತಿಲ್ಲ!

03241006a ಪ್ರತ್ಯಕ್ಷಂ ತವ ಗಾಂಧಾರೇ ಸಸೈನ್ಯಸ್ಯ ವಿಶಾಂ ಪತೇ|

03241006c ಸೂತಪುತ್ರೋಽಪಯಾದ್ಭೀತೋ ಗಂಧರ್ವಾಣಾಂ ತದಾ ರಣಾತ್||

03241006e ಕ್ರೋಶತಸ್ತವ ರಾಜೇಂದ್ರ ಸಸೈನ್ಯಸ್ಯ ನೃಪಾತ್ಮಜ||

ಗಾಂಧಾರೇ! ವಿಶಾಂಪತೇ! ನಿನ್ನ ಮತ್ತು ನಿನ್ನ ಸೈನ್ಯದ ಪ್ರತ್ಯಕ್ಷದಲ್ಲಿಯೇ ಗಂಧರ್ವರ ಭಯದಿಂದ ಸೂತಪುತ್ರನು ರಣದಿಂದ ಓಡಿಹೋಗಲಿಲ್ಲವೇ?

03241007a ದೃಷ್ಟಸ್ತೇ ವಿಕ್ರಮಶ್ಚೈವ ಪಾಂಡವಾನಾಂ ಮಹಾತ್ಮನಾಂ|

03241007c ಕರ್ಣಸ್ಯ ಚ ಮಹಾಬಾಹೋ ಸೂತಪುತ್ರಸ್ಯ ದುರ್ಮತೇಃ||

ರಾಜೇಂದ್ರ! ನೃಪಾತ್ಮಜ! ಆ ನಿನ್ನ ಸೇನೆಯು ಕಷ್ಟದಿಂದ ರೋದಿಸುತ್ತಿರುವಾಗ ಮಹಾತ್ಮ ಪಾಂಡವರ ವಿಕ್ರಮವನ್ನು ನೋಡಿದುದರೊಂದಿಗೆ ಸೂತಪುತ್ರ ದುರ್ಮತಿ ಕರ್ಣನನ್ನೂ ನೋಡಿದೆ.

03241008a ನ ಚಾಪಿ ಪಾದಭಾಕ್ಕರ್ಣಃ ಪಾಂಡವಾನಾಂ ನೃಪೋತ್ತಮ|

03241008c ಧನುರ್ವೇದೇ ಚ ಶೌರ್ಯೇ ಚ ಧರ್ಮೇ ವಾ ಧರ್ಮವತ್ಸಲ||

ನೃಪೋತ್ತಮ! ಧರ್ಮವತ್ಸಲ! ಧನುರ್ವೇದದಲ್ಲಿಯಾಗಲೀ, ಶೌರ್ಯದಲ್ಲಿಯಾಗಲೀ, ಅಥವಾ ಧರ್ಮದಲ್ಲಿಯಾಗಲೀ ಕರ್ಣನು ಪಾಂಡವರ ಕಾಲುಭಾಗದಷ್ಟೂ ಇಲ್ಲ.

03241009a ತಸ್ಯ ತೇಽಹಂ ಕ್ಷಮಂ ಮನ್ಯೇ ಪಾಂಡವೈಸ್ತೈರ್ಮಹಾತ್ಮಭಿಃ|

03241009c ಸಂಧಿಂ ಸಂಧಿವಿದಾಂ ಶ್ರೇಷ್ಠ ಕುಲಸ್ಯಾಸ್ಯ ವಿವೃದ್ಧಯೇ||

ಆದುದರಿಂದ ಈ ಕುಲದ ವೃದ್ಧಿಗಾಗಿ, ಜಗಳವನ್ನು ಕೊನೆಗೊಳಿಸುವುದಕ್ಕಾಗಿ ಮಹಾತ್ಮ ಪಾಂಡವರೊಂದಿಗೆ ಸಂಧಿಮಾಡಿಕೊಳ್ಳುವುದೇ ಶ್ರೇಷ್ಠವೆಂದು ನನಗನ್ನಿಸುತ್ತದೆ.”

03241010a ಏವಮುಕ್ತಸ್ತು ಭೀಷ್ಮೇಣ ಧಾರ್ತರಾಷ್ಟ್ರೋ ಜನೇಶ್ವರಃ|

03241010c ಪ್ರಹಸ್ಯ ಸಹಸಾ ರಾಜನ್ವಿಪ್ರತಸ್ಥೇ ಸಸೌಬಲಃ||

03241011a ತಂ ತು ಪ್ರಸ್ಥಿತಮಾಜ್ಞಾಯ ಕರ್ಣದುಃಶಾಸನಾದಯಃ|

03241011c ಅನುಜಗ್ಮುರ್ಮಹೇಷ್ವಾಸಾ ಧಾರ್ತರಾಷ್ಟ್ರಂ ಮಹಾಬಲಂ||

ರಾಜನ್! ಭೀಷ್ಮನು ಹೀಗೆ ಹೇಳಲು ಧಾರ್ತರಾಷ್ಟ್ರ ಜನೇಶ್ವರನು ಜೋರಾಗಿ ನಕ್ಕು ಸೌಬಲನೊಂದಿಗೆ ಹೊರ ಹೋದನು. ಅವನು ಹೊರಟು ಹೋದುದನ್ನು ತಿಳಿದು ಕರ್ಣ ದುಃಶಾಸನಾದಿಗಳು ಕೂಡ ಆ ಮಹೇಷ್ವಾಸ, ಮಹಾಬಲ, ಧಾರ್ತರಾಷ್ಟ್ರನನ್ನು ಹಿಂಬಾಲಿಸಿ ಹೋದರು.

03241012a ತಾಂಸ್ತು ಸಂಪ್ರಸ್ಥಿತಾನ್ದೃಷ್ಟ್ವಾ ಭೀಷ್ಮಃ ಕುರುಪಿತಾಮಹಃ|

03241012c ಲಜ್ಜಯಾ ವ್ರೀಡಿತೋ ರಾಜಂ ಜಗಾಮ ಸ್ವಂ ನಿವೇಶನಂ||

ರಾಜನ್! ಅವರು ಹೊರಟುಹೋದುದನ್ನು ನೋಡಿದ ಕುರುಪಿತಾಮಹ ಭೀಷ್ಮನು ನಾಚಿಕೆಯಿಂದ ತಲೆತಗ್ಗಿಸಿ, ತನ್ನ ಮನೆಗೆ ತೆರಳಿದನು.

03241013a ಗತೇ ಭೀಷ್ಮೇ ಮಹಾರಾಜ ಧಾರ್ತರಾಷ್ಟ್ರೋ ಜನಾಧಿಪಃ|

03241013c ಪುನರಾಗಮ್ಯ ತಂ ದೇಶಮಮಂತ್ರಯತ ಮಂತ್ರಿಭಿಃ||

ಮಹಾರಾಜ! ಭೀಷ್ಮನು ಹೋದ ನಂತರ ಜನಾಧಿಪ ಧಾರ್ತರಾಷ್ಟ್ರನು ಪುನಃ ಬಂದು ತನ್ನ ಮಂತ್ರಿಗಳೊಂದಿಗೆ ಸಮಾಲೋಚನೆ ಮಾಡಿದನು.

03241014a ಕಿಮಸ್ಮಾಕಂ ಭವೇಚ್ಚ್ರೇಯಃ ಕಿಂ ಕಾರ್ಯಮವಶಿಷ್ಯತೇ|

03241014c ಕಥಂ ನು ಸುಕೃತಂ ಚ ಸ್ಯಾನ್ಮಂತ್ರಯಾಮಾಸ ಭಾರತ||

ಭಾರತ! “ನಮಗೆ ಶ್ರೇಯಸ್ಕರವಾದುದು ಯಾವುದು? ಯಾವ ಕೆಲಸವನ್ನು ಮಾಡುವುದಿದೆ? ಹೇಗೆ ನಾವು ಒಳ್ಳೆಯದನ್ನು ಮಾಡಬಹುದು?” ಎಂದು ಅವನು ಮಂತ್ರಲೋಚನೆ ಮಾಡಿದನು.

03241015 ಕರ್ಣ ಉವಾಚ|

03241015a ದುರ್ಯೋಧನ ನಿಬೋಧೇದಂ ಯತ್ತ್ವಾ ವಕ್ಷ್ಯಾಮಿ ಕೌರವ|

03241015c ಶ್ರುತ್ವಾ ಚ ತತ್ತಥಾ ಸರ್ವಂ ಕರ್ತುಮರ್ಹಸ್ಯರಿಂದಮ||

ಕರ್ಣನು ಹೇಳಿದನು: “ದುರ್ಯೋಧನ! ಕೌರವ! ನಾನು ಹೇಳುವುದನ್ನು ಕೇಳು. ಅರಿಂದಮ! ಅದನ್ನು ಕೇಳಿ ಎಲ್ಲವನ್ನೂ ಮಾಡಬೇಕು.

03241016a ತವಾದ್ಯ ಪೃಥಿವೀ ವೀರ ನಿಃಸಪತ್ನಾ ನೃಪೋತ್ತಮ|

03241016c ತಾಂ ಪಾಲಯ ಯಥಾ ಶಕ್ರೋ ಹತಶತ್ರುರ್ಮಹಾಮನಾಃ||

ವೀರ! ನೃಪೋತ್ತಮ! ಇಂದು ಪೃಥ್ವಿಯು ಶತ್ರುಗಳಿಲ್ಲದಂತಾಗಿದೆ. ಶಕ್ರನಂತೆ ನೀನು ಶತ್ರುಗಳನ್ನು ಕಳೆದುಕೊಂಡು ಮಹಾಮನನಾಗಿ ಪಾಲಿಸು.””

03241017 ವೈಶಂಪಾಯನ ಉವಾಚ|

03241017a ಏವಮುಕ್ತಸ್ತು ಕರ್ಣೇನ ಕರ್ಣಂ ರಾಜಾಬ್ರವೀತ್ಪುನಃ|

03241017c ನ ಕಿಂ ಚಿದ್ದುರ್ಲಭಂ ತಸ್ಯ ಯಸ್ಯ ತ್ವಂ ಪುರುಷರ್ಷಭ||

03241018a ಸಹಾಯಶ್ಚಾನುರಕ್ತಶ್ಚ ಮದರ್ಥಂ ಚ ಸಮುದ್ಯತಃ|

ವೈಶಂಪಾಯನನು ಹೇಳಿದನು: “ಕರ್ಣನು ಹೀಗೆ ಹೇಳಲು ಕರ್ಣನಿಗೆ ರಾಜನು ಪುನಃ ಹೇಳಿದನು: “ಪುರುಷರ್ಷಭ! ನಿನ್ನ ಸಹಾಯವಿರುವವನಿಗೆ ಯಾವುದೂ ದುರ್ಲಭವಲ್ಲ. ನನ್ನಲ್ಲಿ ನೀನು ಅನುರಕ್ತನಾಗಿದ್ದೀಯೆ ಮತ್ತು ಸದಾ ನನಗೆ ಒಳ್ಳೆಯದನ್ನು ಮಾಡಲು ಸಿದ್ದನಾಗಿದ್ದೀಯೆ.

03241018c ಅಭಿಪ್ರಾಯಸ್ತು ಮೇ ಕಶ್ಚಿತ್ತಂ ವೈ ಶೃಣು ಯಥಾತಥಂ||

ನನ್ನದೊಂದು ಅಭಿಪ್ರಾಯವಿದೆ. ಅದನ್ನು ಇದ್ದಹಾಗೆ ಕೇಳು.

03241019a ರಾಜಸೂಯಂ ಪಾಂಡವಸ್ಯ ದೃಷ್ಟ್ವಾ ಕ್ರತುವರಂ ತದಾ|

03241019c ಮಮ ಸ್ಪೃಹಾ ಸಮುತ್ಪನ್ನಾ ತಾಂ ಸಂಪಾದಯ ಸೂತಜ||

ಸೂತಜ! ಪಾಂಡವರ ಆ ಶ್ರೇಷ್ಠ ಕ್ರತು ರಾಜಸೂಯವನ್ನು ನೋಡಿ ನನಗೂ ಅದನ್ನು ಮಾಡುವ ಬಯಕೆಯು ಹುಟ್ಟಿದೆ. ಅದನ್ನು ನಡೆಸಿಕೊಡು.

03241020a ಏವಮುಕ್ತಸ್ತತಃ ಕರ್ಣೋ ರಾಜಾನಮಿದಮಬ್ರವೀತ್|

03241020c ತವಾದ್ಯ ಪೃಥಿವೀಪಾಲಾ ವಶ್ಯಾಃ ಸರ್ವೇ ನೃಪೋತ್ತಮ||

ಇದನ್ನು ಕೇಳಿದ ಕರ್ಣನು ರಾಜನಿಗೆ ಹೇಳಿದನು: “ನೃಪೋತ್ತಮ! ಇಂದು ಪೃಥಿವೀಪಾಲರೆಲ್ಲರೂ ನಿನ್ನ ವಶದಲ್ಲಿದ್ದಾರೆ.

03241021a ಆಹೂಯಂತಾಂ ದ್ವಿಜವರಾಃ ಸಂಭಾರಾಶ್ಚ ಯಥಾವಿಧಿ|

03241021c ಸಂಭ್ರಿಯಂತಾಂ ಕುರುಶ್ರೇಷ್ಠ ಯಜ್ಞೋಪಕರಣಾನಿ ಚ||

ಕುರುಶ್ರೇಷ್ಠ! ದ್ವಿಜವರರನ್ನು ಆಹ್ವಾನಿಸೋಣ. ಯಥಾವಿಧಿಯಾದ ಪದಾರ್ಥಗಳನ್ನು ಮತ್ತು ಯಜ್ಞೋಪಕರಣಗಳನ್ನು ಒಂದುಗೂಡಿಸೋಣ.

03241022a ಋತ್ವಿಜಶ್ಚ ಸಮಾಹೂತಾ ಯಥೋಕ್ತಂ ವೇದಪಾರಗಾಃ|

03241022c ಕ್ರಿಯಾಂ ಕುರ್ವಂತು ತೇ ರಾಜನ್ಯಥಾಶಾಸ್ತ್ರಮರಿಂದಮ||

ರಾಜನ್! ಅರಿಂದಮ! ವೇದಪಾರಂಗತರಾದ ಋತ್ವಿಜರು ಯಥೋಕ್ತವಾಗಿ ಯಾಜಿಸಲಿ. ಅವರು ಯಥಾಶಾಸ್ತ್ರವಾಗಿ ಕಾರ್ಯ ನಿರ್ವಹಿಸಲಿ.

03241023a ಬಹ್ವನ್ನಪಾನಸಮ್ಯುಕ್ತಃ ಸುಸಮೃದ್ಧಗುಣಾನ್ವಿತಃ|

03241023c ಪ್ರವರ್ತತಾಂ ಮಹಾಯಜ್ಞಸ್ತವಾಪಿ ಭರತರ್ಷಭ||

ಭರತರ್ಷಭ! ನಿನ್ನ ಮಹಾಯಜ್ಞವೂ ಕೂಡ ಬಹು ಅನ್ನ-ಪಾನಗಳಿಂದ ಕೂಡಿದ್ದು, ಸುಸಮೃದ್ಧಗುಣಾನ್ವಿತವಾಗಿರುವಂತೆ ನಡೆಯಲಿ.”

03241024a ಏವಮುಕ್ತಸ್ತು ಕರ್ಣೇನ ಧಾರ್ತರಾಷ್ಟ್ರೋ ವಿಶಾಂ ಪತೇ|

03241024c ಪುರೋಹಿತಂ ಸಮಾನಾಯ್ಯ ಇದಂ ವಚನಮಬ್ರವೀತ್||

ವಿಶಾಂಪತೇ! ಕರ್ಣನು ಹೀಗೆ ಹೇಳಲು ಧಾರ್ತರಾಷ್ಟ್ರನು ಪುರೋಹಿತನನ್ನು ಕರೆಯಿಸಿ ಹೀಗೆ ಹೇಳಿದನು:

03241025a ರಾಜಸೂಯಂ ಕ್ರತುಶ್ರೇಷ್ಠಂ ಸಮಾಪ್ತವರದಕ್ಷಿಣಂ|

03241025c ಆಹರ ತ್ವಂ ಮಮ ಕೃತೇ ಯಥಾನ್ಯಾಯಂ ಯಥಾಕ್ರಮಂ||

“ಶ್ರೇಷ್ಠ ಕ್ರತು ಶ್ರೇಷ್ಠ ದಕ್ಷಿಣೆಗಳಿಂದ ಸಮಾಪ್ತಗೊಳ್ಳುವ ರಾಜಸೂಯವನ್ನು ಯಥಾನ್ಯಾಯವಾಗಿ ಯಥಾಕ್ರಮವಾಗಿ ನನ್ನಿಂದ ಮಾಡಿಸಿ.”

03241026a ಸ ಏವಮುಕ್ತೋ ನೃಪತಿಮುವಾಚ ದ್ವಿಜಪುಂಗವಃ|

03241026c ನ ಸ ಶಕ್ಯಃ ಕ್ರತುಶ್ರೇಷ್ಠೋ ಜೀವಮಾನೇ ಯುಧಿಷ್ಠಿರೇ|

03241026e ಆಹರ್ತುಂ ಕೌರವಶ್ರೇಷ್ಠ ಕುಲೇ ತವ ನೃಪೋತ್ತಮ||

ನೃಪತಿಯು ಹೀಗೆ ಹೇಳಲು ದ್ವಿಜಪುಂಗವನು ಹೇಳಿದನು: “ಕೌರವಶ್ರೇಷ್ಠ! ನೃಪೋತ್ತಮ! ಯುಧಿಷ್ಠಿರನು ಜೀವಂತವಿರುವಾಗ ನಿನ್ನ ಕುಲದಲ್ಲಿ ಈ ಶ್ರೇಷ್ಠ ಕ್ರತುವನ್ನು ಮಾಡಲು ಶಕ್ಯವಿಲ್ಲ.

03241027a ದೀರ್ಘಾಯುರ್ಜೀವತಿ ಚ ವೈ ಧೃತರಾಷ್ಟ್ರಃ ಪಿತಾ ತವ|

03241027c ಅತಶ್ಚಾಪಿ ವಿರುದ್ಧಸ್ತೇ ಕ್ರತುರೇಷ ನೃಪೋತ್ತಮ||

ನಿನ್ನ ತಂದೆ ದೀರ್ಘಾಯು ಧೃತರಾಷ್ಟ್ರನು ಜೀವಿಸಿದ್ದಾನೆ. ನೃಪೋತ್ತಮ! ಇದೂ ಕೂಡ ನೀನು ಕ್ರತುವನ್ನು ಆಚರಿಸುವುದನ್ನು ವಿರೋಧಿಸುತ್ತದೆ.

03241028a ಅಸ್ತಿ ತ್ವನ್ಯನ್ಮಹತ್ಸತ್ರಂ ರಾಜಸೂಯಸಮಂ ಪ್ರಭೋ|

03241028c ತೇನ ತ್ವಂ ಯಜ ರಾಜೇಂದ್ರ ಶೃಣು ಚೇದಂ ವಚೋ ಮಮ||

ಪ್ರಭೋ! ರಾಜಸೂಯಕ್ಕೆ ಸಮನಾದ ಇನ್ನೊಂದು ಮಹಾ ಸತ್ರವಿದೆ. ರಾಜೇಂದ್ರ! ಅದನ್ನು ನೀನು ಯಾಜಿಸು. ನನ್ನ ಮಾತನ್ನು ಕೇಳು.

03241029a ಯ ಇಮೇ ಪೃಥಿವೀಪಾಲಾಃ ಕರದಾಸ್ತವ ಪಾರ್ಥಿವ|

03241029c ತೇ ಕರಾನ್ಸಂಪ್ರಯಚ್ಚಂತು ಸುವರ್ಣಂ ಚ ಕೃತಾಕೃತಂ||

ಪಾರ್ಥಿವ! ಇದರಲ್ಲಿ ನಿನಗೆ ಕರವನ್ನು ಕೊಡುತ್ತಿರುವ ಪೃಥಿವೀಪಾಲರು ಸಂಸ್ಕರಿಸಿದ ಅಥವಾ ಸಂಸ್ಕರಿಸದೇ ಇದ್ದ ಚಿನ್ನವನ್ನು ಕರವಾಗಿ ಕೊಡುತ್ತಾರೆ.

03241030a ತೇನ ತೇ ಕ್ರಿಯತಾಮದ್ಯ ಲಾಂಗಲಂ ನೃಪಸತ್ತಮ|

03241030c ಯಜ್ಞವಾಟಸ್ಯ ತೇ ಭೂಮಿಃ ಕೃಷ್ಯತಾಂ ತೇನ ಭಾರತ||

ನೃಪಸತ್ತಮ! ಭಾರತ! ಅದರಿಂದ ನೀನು ನೇಗಿಲನ್ನು ಮಾಡಿ ಅದರಿಂದ ಯಜ್ಞವಾಟಿಕೆಯ ಭೂಮಿಯನ್ನು ಹೂಳಬೇಕು.

03241031a ತತ್ರ ಯಜ್ಞೋ ನೃಪಶ್ರೇಷ್ಠ ಪ್ರಭೂತಾನ್ನಃ ಸುಸಂಸ್ಕೃತಃ|

03241031c ಪ್ರವರ್ತತಾಂ ಯಥಾನ್ಯಾಯಂ ಸರ್ವತೋ ಹ್ಯನಿವಾರಿತಃ||

ನೃಪಶ್ರೇಷ್ಠ! ಅಲ್ಲಿ ಯಥಾನ್ಯಾಯವಾಗಿ ಸುಸಂಸ್ಕರಿಸಿದ ಹೇರಳ ಅನ್ನದಿಂದ ವಿಘ್ನವಿಲ್ಲದೇ ಯಜ್ಞವು ನಡೆಯಲಿ.

03241032a ಏಷ ತೇ ವೈಷ್ಣವೋ ನಾಮ ಯಜ್ಞಃ ಸತ್ಪುರುಷೋಚಿತಃ|

03241032c ಏತೇನ ನೇಷ್ಟವಾನ್ಕಶ್ಚಿದೃತೇ ವಿಷ್ಣುಂ ಪುರಾತನಂ||

ವೈಷ್ಣವ ಎಂಬ ಹೆಸರಿನ ಈ ಯಜ್ಞವು ಸತ್ಪುರುಷರಿಗೆ ಉಚಿತವಾದುದು. ಹಿಂದೆ ವಿಷ್ಣುವಿನ ಹೊರತಾಗಿ ಯಾರೂ ಈ ಯಜ್ಞವನ್ನು ಮಾಡಿಲ್ಲ.

03241033a ರಾಜಸೂಯಂ ಕ್ರತುಶ್ರೇಷ್ಠಂ ಸ್ಪರ್ಧತ್ಯೇಷ ಮಹಾಕ್ರತುಃ|

03241033c ಅಸ್ಮಾಕಂ ರೋಚತೇ ಚೈವ ಶ್ರೇಯಶ್ಚ ತವ ಭಾರತ|

03241033e ಅವಿಘ್ನಶ್ಚ ಭವೇದೇಷ ಸಫಲಾ ಸ್ಯಾತ್ಸ್ಪೃಹಾ ತವ||

ಭಾರತ! ಈ ಮಹಾಕ್ರತುವು ಶ್ರೇಷ್ಠ ಕ್ರತುವಾದ ರಾಜಸೂಯದೊಂದಿಗೆ ಸ್ಪರ್ಧಿಸುತ್ತದೆ. ನಿನಗೂ ಕೂಡ ಇದು ಶ್ರೇಯಸ್ಕರವಾದುದು ಎಂದು ನನಗನ್ನಿಸುತ್ತದೆ. ಇದು ಅವಿಘ್ನವಾಗಿ ನಡೆಯುತ್ತದೆ. ನಿನ್ನ ಬಯಕೆಗಳನ್ನು ಸಫಲಗೊಳಿಸುತ್ತದೆ.”

03241034a ಏವಮುಕ್ತಸ್ತು ತೈರ್ವಿಪ್ರೈರ್ಧಾರ್ತರಾಷ್ಟ್ರೋ ಮಹೀಪತಿಃ|

03241034c ಕರ್ಣಂ ಚ ಸೌಬಲಂ ಚೈವ ಭ್ರಾತೄಂಶ್ಚೈವೇದಮಬ್ರವೀತ್||

ಆ ವಿಪ್ರರು ಹೀಗೆ ಹೇಳಲು ಮಹೀಪತಿ ಧಾರ್ತರಾಷ್ಟ್ರನು ಕರ್ಣ, ಸೌಬಲ, ಮತ್ತು ಸಹೋದರರಿಗೆ ಇಂತೆಂದನು.

03241035a ರೋಚತೇ ಮೇ ವಚಃ ಕೃತ್ಸ್ನಂ ಬ್ರಾಹ್ಮಣಾನಾಂ ನ ಸಂಶಯಃ|

03241035c ರೋಚತೇ ಯದಿ ಯುಷ್ಮಾಕಂ ತನ್ಮಾ ಪ್ರಬ್ರೂತ ಮಾಚಿರಂ||

“ಬ್ರಾಹ್ಮಣರ ಮಾತುಗಳು ಸಂಪೂರ್ಣವಾಗಿ ನನಗೆ ಇಷ್ಟವಾದವು ಎನ್ನುವುದರಲ್ಲಿ ಸಂಶಯವಿಲ್ಲ. ಇದು ನಿಮಗೂ ಇಷ್ಟವಾದರೆ ಬೇಗನೇ ನನಗೆ ಹೇಳಿ.”

03241036a ಏವಮುಕ್ತಾಸ್ತು ತೇ ಸರ್ವೇ ತಥೇತ್ಯೂಚುರ್ನರಾಧಿಪಂ|

03241036c ಸಂದಿದೇಶ ತತೋ ರಾಜಾ ವ್ಯಾಪಾರಸ್ಥಾನ್ಯಥಾಕ್ರಮಂ||

ಹಾಗೆಯೇ ಆಗಲೆಂದು ಅವರೆಲ್ಲರೂ ನರಾಧಿಪನಿಗೆ ಹೇಳಿದರು. ಆಗ ರಾಜನು ಅವರಿಗೆ ಒಂದೊಂದಾಗಿ ಕೆಲಸಗಳನ್ನು ವಹಿಸಿಕೊಟ್ಟನು.

03241037a ಹಲಸ್ಯ ಕರಣೇ ಚಾಪಿ ವ್ಯಾದಿಷ್ಟಾಃ ಸರ್ವಶಿಲ್ಪಿನಃ|

03241037c ಯಥೋಕ್ತಂ ಚ ನೃಪಶ್ರೇಷ್ಠ ಕೃತಂ ಸರ್ವಂ ಯಥಾಕ್ರಮಂ||

ಎಲ್ಲ ಶಿಲ್ಪಿಗಳನ್ನೂ ನೇಗಿಲನ್ನು ಮಾಡುವುದಕ್ಕೆ ನೇಮಿಸಿದನು. ನೃಪಶ್ರೇಷ್ಠ! ಹೇಳಿದಂತೆ ಎಲ್ಲ ಕೆಲಸಗಳೂ ಯಥಾಕ್ರಮವಾಗಿ ಮಾಡಲ್ಪಟ್ಟವು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ದುರ್ಯೋಧನಯಜ್ಞಸಮಾರಂಭೇ ಏಕಚತ್ವಾರಿಂಶದಧಿಕದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ದುರ್ಯೋಧನಯಜ್ಞಸಮಾರಂಭದಲ್ಲಿ ಇನ್ನೂರಾನಲ್ವತ್ತೊಂದನೆಯ ಅಧ್ಯಾಯವು.

Related image

Comments are closed.