Aranyaka Parva: Chapter 237

ಆರಣ್ಯಕ ಪರ್ವ: ಘೋಷಯಾತ್ರಾ ಪರ್ವ

೨೩೭

ದುಃಖದಿಂದ ದುರ್ಯೋಧನನು ಕರ್ಣನಿಗೆ ಪಾಂಡವರು ತನ್ನನ್ನು ಹೇಗೆ ಬಿಡುಗಡೆಮಾಡಿದರೆಂದೂ, ಪಾಂಡವರ ಮತ್ತು ಗಂಧರ್ವರ ಸ್ನೇಹವನ್ನೂ ಹೇಳಿಕೊಳ್ಳುವುದು (೧-೧೫).

03237001 ದುರ್ಯೋಧನ ಉವಾಚ|

03237001a ಅಜಾನತಸ್ತೇ ರಾಧೇಯ ನಾಭ್ಯಸೂಯಾಮ್ಯಹಂ ವಚಃ|

03237001c ಜಾನಾಸಿ ತ್ವಂ ಜಿತಾಂ ಶತ್ರೂನ್ಗಂಧರ್ವಾಂಸ್ತೇಜಸಾ ಮಯಾ||

ದುರ್ಯೋಧನನು ಹೇಳಿದನು: “ರಾಧೇಯ! ನಿನ್ನ ಮಾತಿಗೆ ನಾನು ಅಸೂಯೆಪಡುವುದಿಲ್ಲ. ಯಾಕೆಂದರೆ ನಿನಗೆ ಗೊತ್ತಿಲ್ಲ. ನನ್ನದೇ ತೇಜಸ್ಸಿನಿಂದ ಶತ್ರು ಗಂಧರ್ವರನ್ನು ಗೆದ್ದೆ ಎಂದು ನೀನು ತಿಳಿದುಕೊಂಡಿರುವೆ.

03237002a ಆಯೋಧಿತಾಸ್ತು ಗಂಧರ್ವಾಃ ಸುಚಿರಂ ಸೋದರೈರ್ಮಮ|

03237002c ಮಯಾ ಸಹ ಮಹಾಬಾಹೋ ಕೃತಶ್ಚೋಭಯತಃ ಕ್ಷಯಃ||

ನನ್ನೊಂದಿಗೆ ನನ್ನ ಸೋದರರು ಗಂಧರ್ವರ ವಿರುದ್ಧ ಬಹಳ ಹೊತ್ತು ಹೋರಾಡಿದರು. ಮಹಾಬಾಹೋ! ಇಬ್ಬರ ಕಡೆಯಲ್ಲಿಯೂ ನಷ್ಟವಾಯಿತು.

03237003a ಮಾಯಾಧಿಕಾಸ್ತ್ವಯುಧ್ಯಂತ ಯದಾ ಶೂರಾ ವಿಯದ್ಗತಾಃ|

03237003c ತದಾ ನೋ ನಸಮಂ ಯುದ್ಧಮಭವತ್ಸಹ ಖೇಚರೈಃ||

ಆದರೆ ತಮ್ಮ ಮಾಯೆಯನ್ನು ಬಳಸಿ ಆಕಾಶವನ್ನೇರಿದಾಗ ಆ ಶೂರ ಖೇಚರರೊಂದಿಗೆ ನಮ್ಮ ಯುದ್ಧವು ಅಸಮವಾಯಿತು.

03237004a ಪರಾಜಯಂ ಚ ಪ್ರಾಪ್ತಾಃ ಸ್ಮ ರಣೇ ಬಂಧನಮೇವ ಚ|

03237004c ಸಭೃತ್ಯಾಮಾತ್ಯಪುತ್ರಾಶ್ಚ ಸದಾರಧನವಾಹನಾಃ|

03237004e ಉಚ್ಚೈರಾಕಾಶಮಾರ್ಗೇಣ ಹ್ರಿಯಾಮಸ್ತೈಃ ಸುದುಃಖಿತಾಃ||

ರಣದಲ್ಲಿ ನಾವು ಪರಾಜಿತರಾಗಿ, ಸೇವಕರು, ಅಮಾತ್ಯರು, ಪುತ್ರರು, ಪತ್ನಿಯರು ಮತ್ತು ವಾಹನಗಳೊಂದಿಗೆ ಬಂಧಿತರಾದೆವು. ದುಃಖಿತರಾದ ನಮ್ಮನ್ನು ಮೇಲೆ ಆಕಾಶಮಾರ್ಗದಲ್ಲಿ ಕೊಂಡೊಯ್ಯಲಾಯಿತು.

03237005a ಅಥ ನಃ ಸೈನಿಕಾಃ ಕೇ ಚಿದಮಾತ್ಯಾಶ್ಚ ಮಹಾರಥಾನ್|

03237005c ಉಪಗಮ್ಯಾಬ್ರುವನ್ದೀನಾಃ ಪಾಂಡವಾಂ ಶರಣಪ್ರದಾನ್||

ಆಗ ಕೆಲವು ಸೈನಿಕರು ಮತ್ತು ಅಮಾತ್ಯರು, ಶರಣವನ್ನಿತ್ತ ಮಹಾರಥಿ ಪಾಂಡವರ ಬಳಿ ಹೋಗಿ ದೀನರಾಗಿ ಹೇಳಿದರು:

03237006a ಏಷ ದುರ್ಯೋಧನೋ ರಾಜಾ ಧಾರ್ತರಾಷ್ಟ್ರಃ ಸಹಾನುಜಃ|

03237006c ಸಾಮಾತ್ಯದಾರೋ ಹ್ರಿಯತೇ ಗಂಧರ್ವೈರ್ದಿವಮಾಸ್ಥಿತೈಃ||

“ರಾಜ ದುರ್ಯೋಧನ ಧಾರ್ತರಾಷ್ಟ್ರನನ್ನು ಅನುಜರೊಂದಿಗೆ, ಪತ್ನಿ-ಅಮಾತ್ಯರೊಂದಿಗೆ ಗಂಧರ್ವರು ಆಕಾಶದಲ್ಲಿ ಕೊಂಡೊಯ್ಯುತ್ತಿದ್ದಾರೆ.

03237007a ತಂ ಮೋಕ್ಷಯತ ಭದ್ರಂ ವಃ ಸಹದಾರಂ ನರಾಧಿಪಂ|

03237007c ಪರಾಮರ್ಶೋ ಮಾ ಭವಿಷ್ಯತ್ಕುರುದಾರೇಷು ಸರ್ವಶಃ||

ನಿನಗೆ ಮಂಗಳವಾಗಲಿ! ಎಲ್ಲ ಕುರು ಪತ್ನಿಯರೂ ಪರಾಮರ್ಶರಾಗುವುದರ ಮೊದಲು ಪತ್ನಿಯರೊಂದಿಗೆ ನರಾಧಿಪನನ್ನು ಬಿಡುಗಡೆಗೊಳಿಸು.”

03237008a ಏವಮುಕ್ತೇ ತು ಧರ್ಮಾತ್ಮಾ ಜ್ಯೇಷ್ಠಃ ಪಾಂಡುಸುತಸ್ತದಾ|

03237008c ಪ್ರಸಾದ್ಯ ಸೋದರಾನ್ಸರ್ವಾನಾಜ್ಞಾಪಯತ ಮೋಕ್ಷಣೇ||

ಇದನ್ನು ಕೇಳಿ ಧರ್ಮಾತ್ಮ ಜ್ಯೇಷ್ಠ ಪಾಂಡುಸುತನು ತನ್ನ ಎಲ್ಲ ಸೋದರರನ್ನೂ ಒಪ್ಪಿಸಿ ನಮ್ಮನ್ನು ಬಿಡುಗಡೆಗೊಳಿಸಲು ಅಜ್ಞಾಪಿಸಿದನು.

03237009a ಅಥಾಗಮ್ಯ ತಮುದ್ದೇಶಂ ಪಾಂಡವಾಃ ಪುರುಷರ್ಷಭಾಃ|

03237009c ಸಾಂತ್ವಪೂರ್ವಮಯಾಚಂತ ಶಕ್ತಾಃ ಸಂತೋ ಮಹಾರಥಾಃ||

ಆಗ ಪುರುಷರ್ಷಭ ಪಾಂಡವರು, ಸಂತ ಮಹಾರಥರು  ಆ ಪ್ರದೇಶಕ್ಕೆ ಬಂದು ಶಕ್ತರಾಗಿದ್ದರೂ ಸಾಮಪೂರ್ವಕವಾಗಿ ಕೇಳಿಕೊಂಡರು.

03237010a ಯದಾ ಚಾಸ್ಮಾನ್ನ ಮುಮುಚುರ್ಗಂಧರ್ವಾಃ ಸಾಂತ್ವಿತಾ ಅಪಿ|

03237010c ತತೋಽರ್ಜುನಶ್ಚ ಭೀಮಶ್ಚ ಯಮಜೌ ಚ ಬಲೋತ್ಕಟೌ|

03237010e ಮುಮುಚುಃ ಶರವರ್ಷಾಣಿ ಗಂಧರ್ವಾನ್ಪ್ರತ್ಯನೇಕಶಃ||

ಸಂತವಿಸಿದರೂ ಕೂಡ ಗಂಧರ್ವರು ನಮ್ಮನ್ನು ಬಿಡದಿದ್ದಾಗ ಬಲೋತ್ಕಟರಾದ ಅರ್ಜುನ, ಭೀಮ ಮತ್ತು ಯಮಳರು ಗಂಧರ್ವರ ಮೇಲೆ ಅನೇಕ ಶರವರ್ಷಗಳನ್ನು ಸುರಿಸಿದರು.

03237011a ಅಥ ಸರ್ವೇ ರಣಂ ಮುಕ್ತ್ವಾ ಪ್ರಯಾತಾಃ ಖಚರಾ ದಿವಂ|

03237011c ಅಸ್ಮಾನೇವಾಭಿಕರ್ಷಂತೋ ದೀನಾನ್ಮುದಿತಮಾನಸಾಃ||

ಆಗ ಅವರೆಲ್ಲರೂ ರಣವನ್ನು ತೊರೆದು, ದೀನರಾದ ನಮ್ಮನ್ನೂ ಎಳೆದುಕೊಂಡು ಸಂತೋಷದಿಂದ ಆಕಾಶವನ್ನು ಏರಿದರು.

03237012a ತತಃ ಸಮಂತಾತ್ಪಶ್ಯಾಮಿ ಶರಜಾಲೇನ ವೇಷ್ಟಿತಂ|

03237012c ಅಮಾನುಷಾಣಿ ಚಾಸ್ತ್ರಾಣಿ ಪ್ರಯುಂಜಾನಂ ಧನಂಜಯಂ||

ಆಗ ಅಮಾನುಷ ಅಸ್ತ್ರಗಳನ್ನು ಪ್ರಯೋಗಿಸಿ ಶರಜಾಲದಿಂದ ಎಲ್ಲ ಕಡೆಯಿಂದಲೂ ಧನಂಜಯನು ಮುಚ್ಚಿದ್ದುದನ್ನು ನಾನು ನೋಡಿದೆ.

03237013a ಸಮಾವೃತಾ ದಿಶೋ ದೃಷ್ಟ್ವಾ ಪಾಂಡವೇನ ಶಿತೈಃ ಶರೈಃ|

03237013c ಧನಂಜಯಸಖಾತ್ಮಾನಂ ದರ್ಶಯಾಮಾಸ ವೈ ತದಾ||

ಪಾಂಡವನ ಹರಿತ ಬಾಣಗಳಿಂದ ದಿಕ್ಕುಗಳು ತುಂಬಿಕೊಂಡಿರುವುದನ್ನು ನೋಡಿದ ಧನಂಜಯನ ಸಖನು ಸ್ವಯಂ ಕಾಣಿಸಿಕೊಂಡನು.

03237014a ಚಿತ್ರಸೇನಃ ಪಾಂಡವೇನ ಸಮಾಶ್ಲಿಷ್ಯ ಪರಂತಪಃ|

03237014c ಕುಶಲಂ ಪರಿಪಪ್ರಚ್ಚ ತೈಃ ಪೃಷ್ಟಶ್ಚಾಪ್ಯನಾಮಯಂ||

ಚಿತ್ರಸೇನನು ಪರಂತಪ ಪಾಂಡವನನ್ನು ಆಲಂಗಿಸಿದನು ಮತ್ತು ಪರಸ್ಪರರ ಕುಶಲವನ್ನು ಕೇಳಿದರು.

03237015a ತೇ ಸಮೇತ್ಯ ತಥಾನ್ಯೋನ್ಯಂ ಸಮ್ನಾಹಾನ್ವಿಪ್ರಮುಚ್ಯ ಚ|

03237015c ಏಕೀಭೂತಾಸ್ತತೋ ವೀರಾ ಗಂಧರ್ವಾಃ ಸಹ ಪಾಂಡವೈಃ||

03237015e ಅಪೂಜಯೇತಾಮನ್ಯೋನ್ಯಂ ಚಿತ್ರಸೇನಧನಂಜಯೌ||

ಅನ್ಯೋನ್ಯರನ್ನು ಭೇಟಿ ಮಾಡಿ, ಕವಚಗಳನ್ನು ಕಳಚಿ, ಪಾಂಡವರೂ ವೀರ ಗಂಧರ್ವರೂ ಒಂದಾದರು. ಚಿತ್ರಸೇನ ಮತ್ತು ಧನಂಜಯರು ಅನ್ಯೋನ್ಯರನ್ನು ಗೌರವಿಸಿದರು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ದುರ್ಯೋಧನವಾಕ್ಯೇ ಸಪ್ತತ್ರಿಂಶದಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ದುರ್ಯೋಧನವಾಕ್ಯದಲ್ಲಿ ಇನ್ನೂರಾಮೂವತ್ತೇಳನೆಯ ಅಧ್ಯಾಯವು.

Related image

Comments are closed.