ಆರಣ್ಯಕ ಪರ್ವ: ಘೋಷಯಾತ್ರಾ ಪರ್ವ
Contents
Toggle೨೨೯
ಗಂಧರ್ವರಿಂದ ಕೌರವರ ಬಂಧನ
ದುರ್ಯೋಧನನು ಪರಮ ವಿಜೃಂಭಣೆಯಿಂದ ದ್ವೈತವನದ ಸರೋವರದ ಬಳಿ ಬಂದು, ಕ್ರೀಡಾಭವನವನ್ನು ನಿರ್ಮಿಸಲು ಸೈನಿಕರಿಗೆ ಆಜ್ಞಾಪಿಸಿದುದು (೧-೧೬). ಅಲ್ಲಿಗೆ ಮೊದಲೇ ಕ್ರೀಡೆಯಾಡಲು ಅಪ್ಸರೆಯರು ಮತ್ತು ದೇವಪುತ್ರರೊಡನೆ ಬಂದಿದ್ದ ಗಂಧರ್ವರಾಜನ ಸೈನಿಕರು ದುರ್ಯೋಧನನ ಸೈನಿಕರನ್ನು ತಡೆದುದು (೧೭-೨೦). ಗಂಧರ್ವರ ಬೆದರಿಕೆಗೆ ಹೆದರಿ ದುರ್ಯೋಧನನ ಸೇನೆಯು ಪಲಾಯನ ಮಾಡಿದುದು (೨೧-೨೯).
03229001 ವೈಶಂಪಾಯನ ಉವಾಚ|
03229001a ಅಥ ದುರ್ಯೋಧನೋ ರಾಜಾ ತತ್ರ ತತ್ರ ವನೇ ವಸನ್|
03229001c ಜಗಾಮ ಘೋಷಾನಭಿತಸ್ತತ್ರ ಚಕ್ರೇ ನಿವೇಶನಂ||
ವೈಶಂಪಾಯನನು ಹೇಳಿದನು: “ವನದಲ್ಲಿ ಅಲ್ಲಲ್ಲಿ ವಾಸಿಸುತ್ತಾ ರಾಜ ದುರ್ಯೋಧನನು ಘೋಷಗಳಲ್ಲಿಗೆ ಬಂದು ಅಲ್ಲಿ ಬೀಡು ಬಿಟ್ಟನು.
03229002a ರಮಣೀಯೇ ಸಮಾಜ್ಞಾತೇ ಸೋದಕೇ ಸಮಹೀರುಹೇ|
03229002c ದೇಶೇ ಸರ್ವಗುಣೋಪೇತೇ ಚಕ್ರುರಾವಸಥಂ ನರಾಃ||
ಸೇವಕರು ಅವನಿಗೆ ರಮಣೀಯವಾದ ವಿಶಾಲ ಪ್ರದೇಶದಲ್ಲಿ, ಮರಗಿಡಗಳಿರುವಲ್ಲಿ, ನೀರಿನ ಸೌಲಭ್ಯವಿರುವಲ್ಲಿ, ಮತ್ತು ಅವರ ಎಲ್ಲ ಬಯಕೆಗಳನ್ನೂ ಪೂರೈಸಬಲ್ಲಲ್ಲಿ ಬಿಡದಿಯನ್ನು ನಿರ್ಮಿಸಿದರು.
03229003a ತಥೈವ ತತ್ಸಮೀಪಸ್ಥಾನ್ ಪೃಥಗಾವಸಥಾನ್ಬಹೂನ್|
03229003c ಕರ್ಣಸ್ಯ ಶಕುನೇಶ್ಚೈವ ಭ್ರಾತೄಣಾಂ ಚೈವ ಸರ್ವಶಃ||
ಹಾಗೆಯೇ ಅದರ ಹತ್ತಿರದಲ್ಲಿಯೇ ಕರ್ಣನಿಗೆ, ಶಕುನಿಗೆ ಮತ್ತು ಎಲ್ಲ ಸಹೋದರರಿಗೆ ಬೇರೆ ಬೇರೆಯಾದ ಬಹಳಷ್ಟು ನಿವೇಶನಗಳನ್ನು ನಿರ್ಮಿಸಿದರು.
03229004a ದದರ್ಶ ಸ ತದಾ ಗಾವಃ ಶತಶೋಽಥ ಸಹಸ್ರಶಃ|
03229004c ಅಂಕೈರ್ಲಕ್ಷೈಶ್ಚ ತಾಃ ಸರ್ವಾ ಲಕ್ಷಯಾಮಾಸ ಪಾರ್ಥಿವಃ||
ಆಗ ಆ ರಾಜನು ನೂರಾರು ಸಹಸ್ರಾರು ಗೋವುಗಳನ್ನು ನೋಡಿ ಪರೀಕ್ಷಿಸಿ ಅಂಕೆ ಮತ್ತು ಗುರುತುಗಳನ್ನು ಹಾಕಿದನು.
03229005a ಅಂಕಯಾಮಾಸ ವತ್ಸಾಂಶ್ಚ ಜಜ್ಞೇ ಚೋಪಸೃತಾಸ್ತ್ವಪಿ|
03229005c ಬಾಲವತ್ಸಾಶ್ಚ ಯಾ ಗಾವಃ ಕಾಲಯಾಮಾಸ ತಾ ಅಪಿ||
ಕರುಗಳಿಗೆ ಗುರುತು ಹಾಕಿಸಿದನು; ಯಾವ ಗೋವುಗಳಿಗೆ ಹೋರಿ ಹಾರಿಸಿಯಾಗಿದೆ ಮತ್ತು ಯಾವುದಕ್ಕೆ ಹಾಲುಕುಡಿಯುವ ಕರುಗಳಿವೆಯೆಂದು ಗುರುತಿಸಿದನು.
03229006a ಅಥ ಸ ಸ್ಮಾರಣಂ ಕೃತ್ವಾ ಲಕ್ಷಯಿತ್ವಾ ತ್ರಿಹಾಯನಾನ್|
03229006c ವೃತೋ ಗೋಪಾಲಕೈಃ ಪ್ರೀತೋ ವ್ಯಹರತ್ಕುರುನಂದನಃ||
ಮೂರುವರ್ಷದ ಕರುಗಳನ್ನು ಎಣಿಸಿ ಗುರುತುಹಾಕಿದನಂತರ, ಕುರುನಂದನನು ಗೋಪಾಲಕರೊಡನೆ ಸಂತೋಷದಿಂದ ಆಡಿ ವಿಹರಿಸಿದನು.
03229007a ಸ ಚ ಪೌರಜನಃ ಸರ್ವಃ ಸೈನಿಕಾಶ್ಚ ಸಹಸ್ರಶಃ|
03229007c ಯಥೋಪಜೋಷಂ ಚಿಕ್ರೀಡುರ್ವನೇ ತಸ್ಮಿನ್ಯಥಾಮರಾಃ||
ಎಲ್ಲ ಪೌರಜನರೂ ಸಹಸ್ರಾರು ಸೈನಿಕರೂ ಅಮರರಂತೆ ತಮಗಿಷ್ಟಬಂದ ಹಾಗೆ ಆ ವನದಲ್ಲಿ ಆಡಿದರು.
03229008a ತತೋ ಗೋಪಾಃ ಪ್ರಗಾತಾರಃ ಕುಶಲಾ ನೃತ್ತವಾದಿತೇ|
03229008c ಧಾರ್ತರಾಷ್ಟ್ರಮುಪಾತಿಷ್ಠನ್ಕನ್ಯಾಶ್ಚೈವ ಸ್ವಲಂಕೃತಾಃ||
ಆಗ ನೃತ್ಯ ವಾದ್ಯಗಳಲ್ಲಿ ಕುಶಲರಾದ ಗಾಯಕ ಗೋಪರು ಮತ್ತು ಸ್ವಲಂಕೃತರಾದ ಅವರ ಕನ್ಯೆಯರೂ ಕೂಡ ಧಾರ್ತರಾಷ್ಟ್ರರನ್ನು ಸೇವಿಸಿದರು.
03229009a ಸ ಸ್ತ್ರೀಗಣವೃತೋ ರಾಜಾ ಪ್ರಹೃಷ್ಟಃ ಪ್ರದದೌ ವಸು|
03229009c ತೇಭ್ಯೋ ಯಥಾರ್ಹಮನ್ನಾನಿ ಪಾನಾನಿ ವಿವಿಧಾನಿ ಚ||
ಆ ಸ್ತ್ರೀಯರ ಗುಂಪಿನಿಂದ ಸುತ್ತುವರೆಯಲ್ಪಟ್ಟ ರಾಜನು ಸಂತೋಷಗೊಂಡು ಅವರಿಗೆ ತಕ್ಕುದಾದ ವಿವಿಧ ಆಹಾರ-ಪಾನೀಯಗಳನ್ನೂ ಹಣವನ್ನೂ ಕೊಟ್ಟನು.
03229010a ತತಸ್ತೇ ಸಹಿತಾಃ ಸರ್ವೇ ತರಕ್ಷೂನ್ಮಹಿಷಾನ್ಮೃಗಾನ್|
03229010c ಗವಯರ್ಕ್ಷವರಾಹಾಂಶ್ಚ ಸಮಂತಾತ್ಪರ್ಯಕಾಲಯನ್||
03229011a ಸ ತಾಂ ಶರೈರ್ವಿನಿರ್ಭಿಂದನ್ಗಜಾನ್ಬಧ್ನನ್ಮಹಾವನೇ|
03229011c ರಮಣೀಯೇಷು ದೇಶೇಷು ಗ್ರಾಹಯಾಮಾಸ ವೈ ಮೃಗಾನ್||
ಆಗ ಅವರೆಲ್ಲರೂ ಒಟ್ಟಿಗೇ ಹಯೀನ, ಕಾಡೆಮ್ಮೆ, ಜಿಂಕೆ, ಗಾಯಲ್, ಕರಡಿ, ಹಂದಿಗಳನ್ನು ಎಲ್ಲಕಡೆಯಿಂದ ಸುತ್ತುವರೆದು ಬೆನ್ನಟ್ಟಿದರು. ಬಾಣಗಳಿಂದ ಬೇಟೆಯನ್ನು ಹೊಡೆಯುತ್ತಾ ಮತ್ತು ವನದಲ್ಲಿ ಆನೆಗಳನ್ನು ಸೆರೆಹಿಡಿಯುತ್ತಾ ಅವನು ಆ ಮೃಗಗಳನ್ನು ರಮಣೀಯ ಪ್ರದೇಶದಲ್ಲಿ ಹಿಡಿದಿಟ್ಟನು.
03229012a ಗೋರಸಾನುಪಯುಂಜಾನ ಉಪಭೋಗಾಂಶ್ಚ ಭಾರತ|
03229012c ಪಶ್ಯನ್ಸುರಮಣೀಯಾನಿ ಪುಷ್ಪಿತಾನಿ ವನಾನಿ ಚ||
03229013a ಮತ್ತಭ್ರಮರಜುಷ್ಟಾನಿ ಬರ್ಹಿಣಾಭಿರುತಾನಿ ಚ|
ಭಾರತ! ಸುರಮಣೀಯವಾದ ಹೂಬಿಟ್ಟ ವನಗಳನ್ನು, ಮತ್ತೇರಿದ ದುಂಬಿಗಳ ಗುಂಪುಗಳನ್ನು, ಮತ್ತು ಕೂಗುತ್ತಿರುವ ನವಿಲುಗಳನ್ನು ನೋಡುತ್ತಾ, ಆಕಳ ಹಾಲನ್ನು ಕುಡಿದನು ಮತ್ತು ರುಚಿಯಾದ ಅಡುಗೆಯನ್ನು ಊಟಮಾಡಿದನು.
03229013c ಅಗಚ್ಚದನುಪೂರ್ವ್ಯೇಣ ಪುಣ್ಯಂ ದ್ವೈತವನಂ ಸರಃ|
03229013e ಋದ್ಧ್ಯಾ ಪರಮಯಾ ಯುಕ್ತೋ ಮಹೇಂದ್ರ ಇವ ವಜ್ರಭೃತ್||
ಕ್ರಮೇಣವಾಗಿ ವಜ್ರಧಾರಿ ಮಹೇಂದ್ರನಂತೆ ಪರಮ ವಿಜೃಂಭಣೆಯಿಂದ ಪುಣ್ಯ ದ್ವೈತವನದ ಸರೋವರದ ಬಳಿ ಬಂದನು.
03229014a ಯದೃಚ್ಚಯಾ ಚ ತದಹೋ ಧರ್ಮಪುತ್ರೋ ಯುಧಿಷ್ಠಿರಃ|
03229014c ಈಜೇ ರಾಜರ್ಷಿಯಜ್ಞೇನ ಸದ್ಯಸ್ಕೇನ ವಿಶಾಂ ಪತೇ|
03229014e ದಿವ್ಯೇನ ವಿಧಿನಾ ರಾಜಾ ವನ್ಯೇನ ಕುರುಸತ್ತಮಃ||
ವಿಶಾಂಪತೇ! ಅದೇ ದಿವಸ ರಾಜಾ ಕುರುಸತ್ತಮ ಧರ್ಮಪುತ್ರ ಯುಧಿಷ್ಠಿರನು ರಾಜರ್ಷಿಗಳು ಮಾಡುವ ಸದ್ಯಸ್ಕ ಯಜ್ಞವನ್ನು ದಿವ್ಯ ವಿಧಿಗಳೊಂದಿಗೆ ವನ್ಯ ವಸ್ತುಗಳಿಂದ ನೆರವೇರಿಸಿದ್ದನು.
03229015a ಕೃತ್ವಾ ನಿವೇಶಮಭಿತಃ ಸರಸಸ್ತಸ್ಯ ಕೌರವಃ|
03229015c ದ್ರೌಪದ್ಯಾ ಸಹಿತೋ ಧೀಮಾನ್ಧರ್ಮಪತ್ನ್ಯಾ ನರಾಧಿಪಃ||
ಅದನ್ನು ಪೂರೈಸಿ ಧೀಮಾನ್ ನರಾಧಿಪ ಕೌರವನು ಧರ್ಮಪತ್ನಿ ದ್ರೌಪದಿಯ ಸಹಿತ ಸರೋವರದ ಹತ್ತಿರದ ತನ್ನ ಬಿಡಾರಕ್ಕೆ ಬಂದಿದ್ದನು.
03229016a ತತೋ ದುರ್ಯೋಧನಃ ಪ್ರೇಷ್ಯಾನಾದಿದೇಶ ಸಹಾನುಜಃ|
03229016c ಆಕ್ರೀಡಾವಸಥಾಃ ಕ್ಷಿಪ್ರಂ ಕ್ರಿಯಂತಾಮಿತಿ ಭಾರತ||
ಭಾರತ! ಆಗ ಅನುಜರೊಂದಿಗೆ ದುರ್ಯೋಧನನು ಸೇವಕರಿಗೆ ಬೇಗನೇ ಕ್ರೀಡಾಭವನಗಳನ್ನು ನಿರ್ಮಿಸಿ ಎಂದು ಆದೇಶವನ್ನಿತ್ತನು.
03229017a ತೇ ತಥೇತ್ಯೇವ ಕೌರವ್ಯಮುಕ್ತ್ವಾ ವಚನಕಾರಿಣಃ|
03229017c ಚಿಕೀರ್ಷಂತಸ್ತದಾಕ್ರೀಡಾಂ ಜಗ್ಮುರ್ದ್ವೈತವನಂ ಸರಃ||
ಹಾಗೆಯೇ ಆಗಲೆಂದು ಕೌರವನಿಗೆ ಹೇಳಿ ಆ ವಚನಪಾಲಕರು ಕ್ರೀಡಾಭವನಗಳನ್ನು ನಿರ್ಮಿಸಲು ದ್ವೈತವನ ಸರೋವರಕ್ಕೆ ಹೋದರು.
03229018a ಸೇನಾಗ್ರಂ ಧಾರ್ತರಾಷ್ಟ್ರಸ್ಯ ಪ್ರಾಪ್ತಂ ದ್ವೈತವನಂ ಸರಃ|
03229018c ಪ್ರವಿಶಂತಂ ವನದ್ವಾರಿ ಗಂಧರ್ವಾಃ ಸಮವಾರಯನ್||
ಧಾರ್ತರಾಷ್ಟ್ರನ ಸೇನೆಯು ದ್ವೈತವನದ ಸರೋವರವನ್ನು ಪ್ರವೇಶಿಸುವಾಗ ವನದ ದ್ವಾರದಲ್ಲಿಯೇ ಅವರನ್ನು ಗಂಧರ್ವರು ತಡೆದು ನಿಲ್ಲಿಸಿದರು.
03229019a ತತ್ರ ಗಂಧರ್ವರಾಜೋ ವೈ ಪೂರ್ವಮೇವ ವಿಶಾಂ ಪತೇ|
03229019c ಕುಬೇರಭವನಾದ್ರಾರಾಜನ್ನಾಜಗಾಮ ಗಣಾವೃತಃ||
ವಿಶಾಂಪತೇ! ರಾಜನ್! ಅದಕ್ಕೆ ಮೊದಲೇ ಕುಬೇರ ಭವನದಿಂದ ಗಂಧರ್ವರಾಜನು ತನ್ನ ಗಣಗಳೊಂದಿಗೆ ಅಲ್ಲಿಗೆ ಆಗಮಿಸಿದ್ದನು.
03229020a ಗಣೈರಪ್ಸರಸಾಂ ಚೈವ ತ್ರಿದಶಾನಾಂ ತಥಾತ್ಮಜೈಃ|
03229020c ವಿಹಾರಶೀಲಃ ಕ್ರೀಡಾರ್ಥಂ ತೇನ ತತ್ಸಂವೃತಂ ಸರಃ||
ಅಪ್ಸರೆಯರ ಗಣಗಳೊಂದಿಗೆ ಮತ್ತು ದೇವತೆಗಳ ಮಕ್ಕಳೊಂದಿಗೆ ವಿಹರಿಸುತ್ತಿದ್ದ ಅವನು ಕ್ರೀಡೆಗಾಗಿ ಆ ಸರೋವರವನ್ನು ಸುತ್ತುವರೆದಿದ್ದನು.
03229021a ತೇನ ತತ್ಸಂವೃತಂ ದೃಷ್ಟ್ವಾ ತೇ ರಾಜಪರಿಚಾರಕಾಃ|
03229021c ಪ್ರತಿಜಗ್ಮುಸ್ತತೋ ರಾಜನ್ಯತ್ರ ದುರ್ಯೋಧನೋ ನೃಪಃ||
ರಾಜನ್! ಅವನಿಂದ ಆವೃತವಾದುದನ್ನು ನೋಡಿದ ರಾಜ ಪರಿಚಾರಕರು ನೃಪ ದುರ್ಯೋಧನನಿದ್ದಲ್ಲಿಗೆ ಹಿಂದಿರುಗಿದರು.
03229022a ಸ ತು ತೇಷಾಂ ವಚಃ ಶ್ರುತ್ವಾ ಸೈನಿಕಾನ್ಯುದ್ಧದುರ್ಮದಾನ್|
03229022c ಪ್ರೇಷಯಾಮಾಸ ಕೌರವ್ಯ ಉತ್ಸಾರಯತ ತಾನಿತಿ||
ಅವರ ವರದಿಯನ್ನು ಕೇಳಿ ಕೌರವನು ಯುದ್ಧ ದುರ್ಮದರಾದ ಸೈನಿಕರರಿಗೆ “ಅವರನ್ನು ಹೊಡೆದೋಡಿಸಿ!” ಎಂದು ಹೇಳಿ ಕಳುಹಿಸಿದನು.
03229023a ತಸ್ಯ ತದ್ವಚನಂ ಶ್ರುತ್ವಾ ರಾಜ್ಞಃ ಸೇನಾಗ್ರಯಾಯಿನಃ|
03229023c ಸರೋ ದ್ವೈತವನಂ ಗತ್ವಾ ಗಂಧರ್ವಾನಿದಮಬ್ರುವನ್||
ರಾಜನ ಆ ಮಾತುಗಳನ್ನು ಕೇಳಿ ಸೇನೆಯು ಶೀಘ್ರದಲ್ಲಿ ದ್ವೈತವನ ಸರೋವರಕ್ಕೆ ಹೋಗಿ ಗಂದರ್ವರಿಗೆ ಹೇಳಿತು:
03229024a ರಾಜಾ ದುರ್ಯೋಧನೋ ನಾಮ ಧೃತರಾಷ್ಟ್ರಸುತೋ ಬಲೀ|
03229024c ವಿಜಿಹೀರ್ಷುರಿಹಾಯಾತಿ ತದರ್ಥಮಪಸರ್ಪತ||
“ರಾಜಾ ದುರ್ಯೋಧನನೆಂಬ ಹೆಸರಿನ ಧೃತರಾಷ್ಟ್ರನ ಬಲಶಾಲೀ ಪುತ್ರನು ತನ್ನ ವಿನೋದಕ್ಕಾಗಿ ಇಲ್ಲಿಗೆ ಬಂದಿದ್ದಾನೆ. ಆದುದರಿಂದ ಈ ಸ್ಥಳವನ್ನು ಖಾಲಿಮಾಡಿ!”
03229025a ಏವಮುಕ್ತಾಸ್ತು ಗಂಧರ್ವಾಃ ಪ್ರಹಸಂತೋ ವಿಶಾಂ ಪತೇ|
03229025c ಪ್ರತ್ಯಬ್ರುವಂಸ್ತಾನ್ಪುರುಷಾನಿದಂ ಸುಪರುಷಂ ವಚಃ||
ವಿಶಾಂಪತೇ! ಇದನ್ನು ಕೇಳಿದ ಗಂಧರ್ವರು ನಕ್ಕರು ಮತ್ತು ಆ ಪುರುಷರಿಗೆ ಪೌರುಷದ ಈ ಮಾತುಗಳನ್ನಾಡಿದರು.
03229026a ನ ಚೇತಯತಿ ವೋ ರಾಜಾ ಮಂದಬುದ್ಧಿಃ ಸುಯೋಧನಃ|
03229026c ಯೋಽಸ್ಮಾನಾಜ್ಞಾಪಯತ್ಯೇವಂ ವಶ್ಯಾನಿವ ದಿವೌಕಸಃ||
“ತನ್ನ ವಶದಲ್ಲಿರುವವರೋ ಎಂಬಂತೆ ದಿವೌಕಸರಾದ ನಮ್ಮಂಥವರಿಗೆ ಈ ರೀತಿ ಆಜ್ಞಾಪಿಸುತ್ತಿರುವ ನಿಮ್ಮ ರಾಜ ಸುಯೋಧನನು ಮೂಢನೇ ಸರಿ!
03229027a ಯೂಯಂ ಮುಮೂರ್ಷವಶ್ಚಾಪಿ ಮಂದಪ್ರಜ್ಞಾ ನ ಸಂಶಯಃ|
03229027c ಯೇ ತಸ್ಯ ವಚನಾದೇವಮಸ್ಮಾನ್ಬ್ರೂತ ವಿಚೇತಸಃ||
ಅವನ ಆಜ್ಞೆಯಂತೆ ನಮ್ಮೊಂದಿಗೆ ಈ ರೀತಿ ಬುದ್ಧಿಯಿಲ್ಲದೇ ಮಾತನಾಡುವ ನೀವು ಸಾಯುತ್ತೀರಿ ಎನ್ನುವುದರಲ್ಲಿ ಸಂಶಯವಿಲ್ಲ.
03229028a ಗಚ್ಚತ ತ್ವರಿತಾಃ ಸರ್ವೇ ಯತ್ರ ರಾಜಾ ಸ ಕೌರವಃ|
03229028c ದ್ವೇಷ್ಯಂ ಮಾದ್ಯೈವ ಗಚ್ಚಧ್ವಂ ಧರ್ಮರಾಜನಿವೇಶನಂ||
ಯಾರಿಗೂ ಇಷ್ಟವಿಲ್ಲದ ಧರ್ಮರಾಜನ ಮನೆಗೆ ಹೋಗುವ ಮೊದಲು ಕೌರವ ರಾಜನ ಬಳಿ ಈಗಲೇ ಹಿಂದಿರುಗಿ! ತಡಮಾಡಬೇಡಿ!”
03229029a ಏವಮುಕ್ತಾಸ್ತು ಗಂಧರ್ವೈ ರಾಜ್ಞಃ ಸೇನಾಗ್ರಯಾಯಿನಃ|
03229029c ಸಂಪ್ರಾದ್ರವನ್ಯತೋ ರಾಜಾ ಧೃತರಾಷ್ಟ್ರಸುತೋಽಭವತ್||
ಗಂಧರ್ವರು ಹೀಗೆ ಹೇಳಲು ರಾಜನ ಸೇನೆಯು ರಾಜ ಧೃತರಾಷ್ಟ್ರನ ಮಗನಿದ್ದಲ್ಲಿಗೆ ಪಲಾಯನ ಮಾಡಿತು.”
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ಗಂಧರ್ವದುರ್ಯೋಧನಸೇನಾಸಂವಾದೇ ಏಕೋನತ್ರಿಂಶದಧಿಕದ್ವಿಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ಗಂಧರ್ವದುರ್ಯೋಧನಸೇನಾಸಂವಾದದಲ್ಲಿ ಇನ್ನೂರಾಇಪ್ಪತ್ತೊಂಭತ್ತನೆಯ ಅಧ್ಯಾಯವು.
