Aranyaka Parva: Chapter 227

ಆರಣ್ಯಕ ಪರ್ವ: ಘೋಷಯಾತ್ರಾ ಪರ್ವ

೨೨೭

ಘೋಷಯಾತ್ರೆಯ ಕುರಿತು ಸಮಾಲೋಚನೆ

ಪಾಂಡವರಿರುವಲ್ಲಿಗೆ ಹೋಗಲು ತನಗೆ ಅನುಜ್ಞೆಯು ಖಂಡಿತವಾಗಿಯೂ ದೊರೆಯುವುದಿಲ್ಲವೆಂದು ದುರ್ಯೋಧನನು ಹೇಳಲು (೧-೧೬), ಕರ್ಣನು ಘೋಷಯಾತ್ರೆಯ ನೆಪದಲ್ಲಿ ಹೋಗಬಹುದೆಂದು ಸೂಚಿಸುವುದು (೧೭-೨೪).

03227001 ವೈಶಂಪಾಯನ ಉವಾಚ|

03227001a ಕರ್ಣಸ್ಯ ವಚನಂ ಶ್ರುತ್ವಾ ರಾಜಾ ದುರ್ಯೋಧನಸ್ತದಾ|

03227001c ಹೃಷ್ಟೋ ಭೂತ್ವಾ ಪುನರ್ದೀನ ಇದಂ ವಚನಮಬ್ರವೀತ್||

ವೈಶಂಪಾಯನನು ಹೇಳಿದನು: “ಕರ್ಣನ ಮಾತನ್ನು ಕೇಳಿ ರಾಜಾ ದುರ್ಯೋಧನನು ಮೊದಲು ಸಂತೋಷಗೊಂಡು, ನಂತರ ದೀನನಾಗಿ ಈ ಮಾತನ್ನಾಡಿದನು.

03227002a ಬ್ರವೀಷಿ ಯದಿದಂ ಕರ್ಣ ಸರ್ವಂ ಮೇ ಮನಸಿ ಸ್ಥಿತಂ|

03227002c ನ ತ್ವಭ್ಯನುಜ್ಞಾಂ ಲಪ್ಸ್ಯಾಮಿ ಗಮನೇ ಯತ್ರ ಪಾಂಡವಾಃ||

“ಕರ್ಣ! ನೀನು ಹೇಳಿದುದೆಲ್ಲವೂ ನನ್ನ ಮನಸ್ಸಿಗೂ ಬಂದಿತ್ತು. ಆದರೆ ಪಾಂಡವರಿರುವಲ್ಲಿಗೆ ಹೋಗಲು ನನಗೆ ಅನುಜ್ಞೆಯು ಖಂಡಿತವಾಗಿಯೂ ದೊರೆಯುವುದಿಲ್ಲ.

03227003a ಪರಿದೇವತಿ ತಾನ್ವೀರಾನ್ಧೃತರಾಷ್ಟ್ರೋ ಮಹೀಪತಿಃ|

03227003c ಮನ್ಯತೇಽಭ್ಯಧಿಕಾಂಶ್ಚಾಪಿ ತಪೋಯೋಗೇನ ಪಾಂಡವಾನ್||

ಮಹೀಪತಿ ಧೃತರಾಷ್ಟ್ರನು ಆ ವೀರರ ಕುರಿತು ಪರಿತಪಿಸುತ್ತಾನೆ. ಈಗಂತೂ ಪಾಂಡವರ ತಪೋಯೋಗದಿಂದ ಅವರನ್ನು ಇನ್ನೂ ಹೆಚ್ಚಾಗಿ ಗೌರವಿಸುತ್ತಾನೆ.

03227004a ಅಥ ವಾಪ್ಯನುಬುಧ್ಯೇತ ನೃಪೋಽಸ್ಮಾಕಂ ಚಿಕೀರ್ಷಿತಂ|

03227004c ಏವಮಪ್ಯಾಯತಿಂ ರಕ್ಷನ್ನಾಭ್ಯನುಜ್ಞಾತುಮರ್ಹತಿ||

ಈಗ ನೃಪನು ನಮ್ಮ ಇಂಗಿತವನ್ನು ತಿಳಿದರೆ, ಭವಿಷ್ಯದಿಂದ ರಕ್ಷಿತನಾಗಲು ನಮ್ಮನ್ನು ಹೋಗಲು ಬಿಡುವುದಿಲ್ಲ.

03227005a ನ ಹಿ ದ್ವೈತವನೇ ಕಿಂ ಚಿದ್ವಿದ್ಯತೇಽನ್ಯತ್ಪ್ರಯೋಜನಂ|

03227005c ಉತ್ಸಾದನಮೃತೇ ತೇಷಾಂ ವನಸ್ಥಾನಾಂ ಮಮ ದ್ವಿಷಾಂ||

ಏಕೆಂದರೆ ವನದಲ್ಲಿ ವಾಸಿಸುವ ಆ ನನ್ನ ದ್ವೇಷಿಗಳನ್ನು ಕಿತ್ತೊಗೆಯುವ ಕಾರಣವೊಂದನ್ನು ಬಿಟ್ಟರೆ ದ್ವೈತವನಕ್ಕೆ ಹೋಗಲು ಬೇರೆ ಯಾವುದೇ ಕಾರಣವಿಲ್ಲ!

03227006a ಜಾನಾಸಿ ಹಿ ಯಥಾ ಕ್ಷತ್ತಾ ದ್ಯೂತಕಾಲ ಉಪಸ್ಥಿತೇ|

03227006c ಅಬ್ರವೀದ್ಯಚ್ಚ ಮಾಂ ತ್ವಾಂ ಚ ಸೌಬಲಂ ಚ ವಚಸ್ತದಾ||

ದ್ಯೂತಕಾಲದಲ್ಲಿ ಉಪಸ್ಥಿತನಿದ್ದ ಆ ಕ್ಷತ್ತನು ನನಗೆ, ನಿನಗೆ ಮತ್ತು ಸೌಬಲನಿಗೆ ಹೇಳಿದ್ದುದು ಮತ್ತು ಅವನ ಇತರ ತಕರಾರುಗಳು ನಿನಗೆ ತಿಳಿದೇ ಇವೆ.

03227007a ತಾನಿ ಪೂರ್ವಾಣಿ ವಾಕ್ಯಾನಿ ಯಚ್ಚಾನ್ಯತ್ಪರಿದೇವಿತಂ|

03227007c ವಿಚಿಂತ್ಯ ನಾಧಿಗಚ್ಚಾಮಿ ಗಮನಾಯೇತರಾಯ ವಾ||

ಹಿಂದಿನ ಆ ಮಾತುಗಳನ್ನು ಮತ್ತು ನಂತರದ ಚಾಡಿಗಳನ್ನು ನೆನಪಿಸಿಕೊಂಡರೆ ಹೋಗಬೇಕೋ ಬೇಡವೋ ಎಂದು ನನಗೂ ನಿರ್ಧರಿಸಲಾಗುತ್ತಿಲ್ಲ.

03227008a ಮಮಾಪಿ ಹಿ ಮಹಾನ್ ಹರ್ಷೋ ಯದಹಂ ಭೀಮಫಲ್ಗುನೌ|

03227008c ಕ್ಲಿಷ್ಟಾವರಣ್ಯೇ ಪಶ್ಯೇಯಂ ಕೃಷ್ಣಯಾ ಸಹಿತಾವಿತಿ||

ಕೃಷ್ಣೆಯ ಸಹಿತ ಭೀಮ-ಫಲ್ಗುನರು ಅರಣ್ಯದಲ್ಲಿ ಕಷ್ಟದಲ್ಲಿರುವುದನ್ನು ನೋಡಲು ನನಗೂ ಮಹಾ ಹರ್ಷವಾಗುತ್ತದೆ.

03227009a ನ ತಥಾ ಪ್ರಾಪ್ನುಯಾಂ ಪ್ರೀತಿಮವಾಪ್ಯ ವಸುಧಾಮಪಿ|

03227009c ದೃಷ್ಟ್ವಾ ಯಥಾ ಪಾಂಡುಸುತಾನ್ವಲ್ಕಲಾಜಿನವಾಸಸಃ||

ವಲ್ಕಲ ಜಿನಗಳನ್ನುಟ್ಟ ಪಾಂಡವರನ್ನು ನೋಡುವಾಗ ದೊರಕುವ ಸಂತೋಷವು ವಸುಧೆಯನ್ನು ಪಡೆದಾಗಲೂ ಆಗಿರಲಿಕ್ಕಿಲ್ಲ.

03227010a ಕಿಂ ನು ಸ್ಯಾದಧಿಕಂ ತಸ್ಮಾದ್ಯದಹಂ ದ್ರುಪದಾತ್ಮಜಾಂ|

03227010c ದ್ರೌಪದೀಂ ಕರ್ಣ ಪಶ್ಯೇಯಂ ಕಾಷಾಯವಸನಾಂ ವನೇ||

ಕರ್ಣ! ವನದಲ್ಲಿ ಕಾಷಾಯವಸ್ತ್ರಗಳನ್ನುಟ್ಟಿರುವ ದ್ರುಪದಾತ್ಮಜೆ ದ್ರೌಪದಿಯನ್ನು ನಾನು ನೋಡುತ್ತೇನಾದರೆ, ಅದಕ್ಕಿಂತಲೂ ಹೆಚ್ಚಿನ ಸಂತೋಷವು ನನಗೆ ಇನ್ನ್ಯಾವುದಿದೆ?

03227011a ಯದಿ ಮಾಂ ಧರ್ಮರಾಜಶ್ಚ ಭೀಮಸೇನಶ್ಚ ಪಾಂಡವಃ|

03227011c ಯುಕ್ತಂ ಪರಮಯಾ ಲಕ್ಷ್ಮ್ಯಾ ಪಶ್ಯೇತಾಂ ಜೀವಿತಂ ಭವೇತ್||

ಪಾಂಡವ ಧರ್ಮರಾಜ ಮತ್ತು ಭೀಮಸೇನರು ಪರಮ ಸಂಪದ್ಭರಿತನಾದ ನನ್ನನ್ನು ನೋಡಿದರೆಂದರೆ ಅದೇ ಬದುಕೆನೆಸಿಕೊಳ್ಳುತ್ತದೆ!

03227012a ಉಪಾಯಂ ನ ತು ಪಶ್ಯಾಮಿ ಯೇನ ಗಚ್ಚೇಮ ತದ್ವನಂ|

03227012c ಯಥಾ ಚಾಭ್ಯನುಜಾನೀಯಾದ್ಗಚ್ಚಂತಂ ಮಾಂ ಮಹೀಪತಿಃ||

ಆದರೆ ನಾನು ವನಕ್ಕೆ ಹೋಗುವ ಯಾವ ಉಪಾಯವನ್ನೂ ಕಾಣುತ್ತಿಲ್ಲ. ಮಹೀಪತಿಯು ಹೋಗಲು ಹೇಗೆ ಅನುಮತಿಯನ್ನು ನೀಡುತ್ತಾನೆ ಎನ್ನುವುದೂ ತಿಳಿಯುತ್ತಿಲ್ಲ.

03227013a ಸ ಸೌಬಲೇನ ಸಹಿತಸ್ತಥಾ ದುಃಶಾಸನೇನ ಚ|

03227013c ಉಪಾಯಂ ಪಶ್ಯ ನಿಪುಣಂ ಯೇನ ಗಚ್ಚೇಮ ತದ್ವನಂ||

ಸೌಬಲ ಮತ್ತು ದುಃಶಾಸನನೊಂದಿಗೆ ನಾವು ಹೇಗೆ ಆ ವನಕ್ಕೆ ಹೋಗಬಹುದೆಂಬ ಉಪಾಯವನ್ನು ನಿಪುಣತೆಯಿಂದ ನೀನು ಕಂಡು ಹೇಳಬೇಕು.

03227014a ಅಹಮಪ್ಯದ್ಯ ನಿಶ್ಚಿತ್ಯ ಗಮನಾಯೇತರಾಯ ವಾ|

03227014c ಕಾಲ್ಯಮೇವ ಗಮಿಷ್ಯಾಮಿ ಸಮೀಪಂ ಪಾರ್ಥಿವಸ್ಯ ಹ||

ನಾನೂ ಕೂಡ ಹೋಗಬೇಕೋ ಬೇಡವೋ ಎಂದು ನಿಶ್ಚಯಿಸಿ, ನಾಳೆ ಬೆಳಿಗ್ಗೆ ಹೋಗುತ್ತೇನೆ.

03227015a ಮಯಿ ತತ್ರೋಪವಿಷ್ಟೇ ತು ಭೀಷ್ಮೇ ಚ ಕುರುಸತ್ತಮೇ|

03227015c ಉಪಾಯೋ ಯೋ ಭವೇದ್ದೃಷ್ಟಸ್ತಂ ಬ್ರೂಯಾಃ ಸಹಸೌಬಲಃ||

ಅಲ್ಲಿ ನಾನು ಕುರುಸತ್ತಮ ಭೀಷ್ಮನ ಬಳಿ ಕುಳಿತುಕೊಂಡಿರುವಾಗ ಸೌಬಲನೊಂದಿಗೆ ನೀನು ಕಂಡುಕೊಂಡ ಉಪಾಯವೇನಿದೆಯೋ ಅದನ್ನು ಹೇಳಬೇಕು.

03227016a ತತೋ ಭೀಷ್ಮಸ್ಯ ರಾಜ್ಞಶ್ಚ ನಿಶಮ್ಯ ಗಮನಂ ಪ್ರತಿ|

03227016c ವ್ಯವಸಾಯಂ ಕರಿಷ್ಯೇಽಹಮನುನೀಯ ಪಿತಾಮಹಂ||

ಆಗ ಭೀಷ್ಮ ಮತ್ತು ರಾಜನು ನನ್ನ ಹೋಗುವಿಕೆಯ ಕುರಿತು ಏನನ್ನು ಹೇಳುತ್ತಾರೋ ಅದನ್ನು ಕೇಳಿ, ನನ್ನ ನಿರ್ಧಾರವನ್ನು ಮಾಡಿ ಪಿತಾಮಹನಲ್ಲಿ ವಿನಯದಿಂದ ಕೇಳಿಕೊಳ್ಳುತ್ತೇನೆ.”

03227017a ತಥೇತ್ಯುಕ್ತ್ವಾ ತು ತೇ ಸರ್ವೇ ಜಗ್ಮುರಾವಸಥಾನ್ಪ್ರತಿ|

03227017c ವ್ಯುಷಿತಾಯಾಂ ರಜನ್ಯಾಂ ತು ಕರ್ಣೋ ರಾಜಾನಮಭ್ಯಯಾತ್||

ಹಾಗೆಯೇ ಆಗಲೆಂದು ಅವರೆಲ್ಲರೂ ತಮ್ಮ ವಸತಿಗಳಿಗೆ ತೆರಳಿದರು. ರಾತ್ರಿಯು ಕಳೆಯಲು ಕರ್ಣನು ರಾಜನಲ್ಲಿಗೆ ಹೋದನು.

03227018a ತತೋ ದುರ್ಯೋಧನಂ ಕರ್ಣಃ ಪ್ರಹಸನ್ನಿದಮಬ್ರವೀತ್|

03227018c ಉಪಾಯಃ ಪರಿದೃಷ್ಟೋಽಯಂ ತಂ ನಿಬೋಧ ಜನೇಶ್ವರ||

ಆಗ ಕರ್ಣನು ನಗುತ್ತಾ ದುರ್ಯೋಧನನಿಗೆ ಹೇಳಿದನು: “ಜನೇಶ್ವರ! ಉಪಾಯವನ್ನು ಕಂಡುಕೊಂಡಿದ್ದೇನೆ. ಅದನ್ನು ಕೇಳು.

03227019a ಘೋಷಾ ದ್ವೈತವನೇ ಸರ್ವೇ ತ್ವತ್ಪ್ರತೀಕ್ಷಾ ನರಾಧಿಪ|

03227019c ಘೋಷಯಾತ್ರಾಪದೇಶೇನ ಗಮಿಷ್ಯಾಮೋ ನ ಸಂಶಯಃ||

ನರಾಧಿಪ! ದ್ವೈತವನದಲ್ಲಿರುವ ಗೋಶಾಲೆಗಳೆಲ್ಲವೂ ನಿನ್ನನ್ನು ಕಾಯುತ್ತಿವೆ. ನಾವು ಅಲ್ಲಿಗೆ ನಿಸ್ಸಂಶಯವಾಗಿಯೂ ಘೋಷಯಾತ್ರೆಯ ನೆಪದಲ್ಲಿ ಹೋಗಬಹುದು.

03227020a ಉಚಿತಂ ಹಿ ಸದಾ ಗಂತುಂ ಘೋಷಯಾತ್ರಾಂ ವಿಶಾಂ ಪತೇ|

03227020c ಏವಂ ಚ ತ್ವಾಂ ಪಿತಾ ರಾಜನ್ಸಮನುಜ್ಞಾತುಮರ್ಹತಿ||

ರಾಜನ್! ವಿಶಾಂಪತೇ! ಘೋಷಯಾತ್ರೆಗೆ ಹೋಗುವುದು ಸದಾ ಉಚಿತ; ಆದುದರಿಂದ ತಂದೆಯು ನಿನಗೆ ಹೋಗಲು ಅನುಮತಿಯನ್ನು ನೀಡಲೇಬೇಕು.”

03227021a ತಥಾ ಕಥಯಮಾನೌ ತೌ ಘೋಷಯಾತ್ರಾವಿನಿಶ್ಚಯಂ|

03227021c ಗಾಂಧಾರರಾಜಃ ಶಕುನಿಃ ಪ್ರತ್ಯುವಾಚ ಹಸನ್ನಿವ||

ಹೀಗೆ ಘೋಷಯಾತ್ರೆಯ ಕುರಿತು ನಿರ್ಧರಿಸಿ ಮಾತನಾಡಿಕೊಳ್ಳುತ್ತಿರಲು ಗಾಂಧಾರರಾಜ ಶಕುನಿಯು ನಗುತ್ತಿರುವಂತೆ ಹೀಗೆ ಹೇಳಿದನು:

03227022a ಉಪಾಯೋಽಯಂ ಮಯಾ ದೃಷ್ಟೋ ಗಮನಾಯ ನಿರಾಮಯಃ|

03227022c ಅನುಜ್ಞಾಸ್ಯತಿ ನೋ ರಾಜಾ ಚೋದಯಿಷ್ಯತಿ ಚಾಪ್ಯುತ||

“ಹೋಗಲು ಈ ಉಪಾಯವು ನಿರಾಮಯವೆಂದು ನನಗೆ ತೋರುತ್ತದೆ. ರಾಜನು ಅನುಮತಿಯನ್ನು ನೀಡುವನಲ್ಲದೇ ಹೋಗಿ ಎಂದು ಒತ್ತಾಯವನ್ನೂ ಮಾಡಬಹುದು.

03227023a ಘೋಷಾ ದ್ವೈತವನೇ ಸರ್ವೇ ತ್ವತ್ಪ್ರತೀಕ್ಷಾ ನರಾಧಿಪ|

03227023c ಘೋಷಯಾತ್ರಾಪದೇಶೇನ ಗಮಿಷ್ಯಾಮೋ ನ ಸಂಶಯಃ||

ನರಾಧಿಪ! ದ್ವೈತವನದಲ್ಲಿ ಎಲ್ಲ ಗೋಶಾಲೆಗಳೂ ನಿನ್ನ ನಿರೀಕ್ಷೆಯಲ್ಲಿದ್ದಾರೆ. ಮತ್ತು ನಿಸ್ಸಂಶಯವಾಗಿಯೂ ನಾವು ಘೋಷಯಾತ್ರದ ನೆಪದಲ್ಲಿ ಹೋಗಬಹುದು.”

03227024a ತತಃ ಪ್ರಹಸಿತಾಃ ಸರ್ವೇ ತೇಽನ್ಯೋನ್ಯಸ್ಯ ತಲಾನ್ದದುಃ|

03227024c ತದೇವ ಚ ವಿನಿಶ್ಚಿತ್ಯ ದದೃಶುಃ ಕುರುಸತ್ತಮಂ||

ಆಗ ಸಂತೋಷದಿಂದ ನಗುತ್ತಾ ಆ ಮೂವರೂ ತಾಲಿಗಳನ್ನು ಕೊಟ್ಟರು. ಅದನ್ನು ನಿಶ್ಚಯಿಸಿ ಕುರುಸತ್ತಮನನ್ನು ಕಾಣಲು ಹೋದರು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ಘೋಷಯಾತ್ರಾಮಂತ್ರಣೇ ಸಪ್ತವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ಘೋಷಯಾತ್ರಾಮಂತ್ರಣದಲ್ಲಿ ಇನ್ನೂರಾಇಪ್ಪತ್ತೇಳನೆಯ ಅಧ್ಯಾಯವು.

Related image

Comments are closed.