Aranyaka Parva: Chapter 202

ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ

೨೦೨

ಪಂಚಭೂತಗಳಲ್ಲಿ ಪ್ರತಿಯೊಂದರ ಗುಣಗಳ ವರ್ಣನೆ (೧-೧೦). ಇಂದ್ರಿಯ ನಿಗ್ರಹದ ಮಹತ್ವ (೧೧-೨೫).

03202001 ಮಾರ್ಕಂಡೇಯ ಉವಾಚ|

03202001a ಏವಮುಕ್ತಃ ಸ ವಿಪ್ರಸ್ತು ಧರ್ಮವ್ಯಾಧೇನ ಭಾರತ|

03202001c ಕಥಾಮಕಥಯದ್ಭೂಯೋ ಮನಸಃ ಪ್ರೀತಿವರ್ಧನೀಂ||

ಮಾರ್ಕಂಡೇಯನು ಹೇಳಿದನು: “ಭಾರತ! ಧರ್ಮವ್ಯಾಧನು ಹೀಗೆ ಹೇಳಲು, ವಿಪ್ರನು ಮನಸ್ಸಿಗೆ ಸುಖವನ್ನು ನೀಡುವ ಈ ಮಾತುಕತೆಯನ್ನು ಮುಂದುವರೆಸಿದನು.”

03202002 ಬ್ರಾಹ್ಮಣ ಉವಾಚ|

03202002a ಮಹಾಭೂತಾನಿ ಯಾನ್ಯಾಹುಃ ಪಂಚ ಧರ್ಮವಿದಾಂ ವರ|

03202002c ಏಕೈಕಸ್ಯ ಗುಣಾನ್ಸಮ್ಯಕ್ಪಂಚಾನಾಮಪಿ ಮೇ ವದ||

ಬ್ರಾಹ್ಮಣನು ಹೇಳಿದನು: “ಧರ್ಮವನ್ನು ತಿಳಿದವರಲ್ಲಿ ಶ್ರೇಷ್ಠನೇ! ಐದು ಮಹಾಭೂತಗಳಿವೆಯೆಂದು ಹೇಳುತ್ತಾರೆ. ಈ ಐದರಲ್ಲಿ ಪ್ರತಿಯೊಂದರ ಗುಣಗಳನ್ನು ಸರಿಯಾಗಿ ನನಗೆ ತಿಳಿಸಿ ಹೇಳು.”

03202003 ವ್ಯಾಧ ಉವಾಚ|

03202003a ಭೂಮಿರಾಪಸ್ತಥಾ ಜ್ಯೋತಿರ್ವಾಯುರಾಕಾಶಮೇವ ಚ|

03202003c ಗುಣೋತ್ತರಾಣಿ ಸರ್ವಾಣಿ ತೇಷಾಂ ವಕ್ಷ್ಯಾಮಿ ತೇ ಗುಣಾನ್||

ವ್ಯಾಧನು ಹೇಳಿದನು: “ಭೂಮಿ, ನೀರು, ಜ್ಯೋತಿ, ವಾಯು, ಆಕಾಶಗಳಿವೆ. ಅವೆಲ್ಲವುಗಳಲ್ಲಿ ಪ್ರತಿಯೊಂದರ ಗುಣಗಳನ್ನು ನಿನಗೆ ಹೇಳುತ್ತೇನೆ.

03202004a ಭೂಮಿಃ ಪಂಚಗುಣಾ ಬ್ರಹ್ಮನ್ನುದಕಂ ಚ ಚತುರ್ಗುಣಂ|

03202004c ಗುಣಾಸ್ತ್ರಯಸ್ತೇಜಸಿ ಚ ತ್ರಯಶ್ಚಾಕಾಶವಾತಯೋಃ||

ಬ್ರಹ್ಮನ್! ಭೂಮಿಯು ಐದು ಗುಣಗಳನ್ನು ಮತ್ತು ಉದಕವು ನಾಲ್ಕು ಗುಣಗಳನ್ನು ಹೊಂದಿವೆ. ತೇಜಕ್ಕೆ ಮೂರು ಗುಣಗಳಿವೆ ಮತ್ತು ಆಕಾಶ ವಾತಗಳ ಮಧ್ಯೆ ಮೂರು ಗುಣಗಳಿವೆ.

03202005a ಶಬ್ದಃ ಸ್ಪರ್ಶಶ್ಚ ರೂಪಂ ಚ ರಸೋ ಗಂಧಶ್ಚ ಪಂಚಮಃ|

03202005c ಏತೇ ಗುಣಾಃ ಪಂಚ ಭೂಮೇಃ ಸರ್ವೇಭ್ಯೋ ಗುಣವತ್ತರಾಃ||

ಎಲ್ಲಕ್ಕಿಂತಲೂ ಹೆಚ್ಚು ಗುಣಗಳನ್ನುಳ್ಳ ಭೂಮಿಯು ಈ ಐದು ಗುಣಗಳನ್ನು ಹೊಂದಿದೆ: ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ.

03202006a ಶಬ್ದಃ ಸ್ಪರ್ಶಶ್ಚ ರೂಪಂ ಚ ರಸಶ್ಚಾಪಿ ದ್ವಿಜೋತ್ತಮ|

03202006c ಅಪಾಮೇತೇ ಗುಣಾ ಬ್ರಹ್ಮನ್ಕೀರ್ತಿತಾಸ್ತವ ಸುವ್ರತ||

ದ್ವಿಜೋತ್ತಮ! ಸುವ್ರತ! ಬ್ರಹ್ಮನ್! ಶಬ್ದ, ಸ್ಪರ್ಶ, ರೂಪ, ಮತ್ತು ರಸಗಳು ನೀರಿನ ಗುಣಗಳೆಂದು ಹೇಳುತ್ತಾರೆ.

03202007a ಶಬ್ದಃ ಸ್ಪರ್ಶಶ್ಚ ರೂಪಂ ಚ ತೇಜಸೋಽಥ ಗುಣಾಸ್ತ್ರಯಃ|

03202007c ಶಬ್ದಃ ಸ್ಪರ್ಶಶ್ಚ ವಾಯೌ ತು ಶಬ್ದ ಆಕಾಶ ಏವ ಚ||

ಶಬ್ದ, ಸ್ಪರ್ಶ ಮತ್ತು ರೂಪ ಇವು ತೇಜಸ್ಸಿನ ಮೂರು ಗುಣಗಳು. ಗಾಳಿಯು ಶಬ್ದ ಸ್ಪರ್ಶಗಳನ್ನು ಹೊಂದಿದೆ ಮತ್ತು ಆಕಾಶಕ್ಕೆ ಶಬ್ದವು ಮಾತ್ರ.

03202008a ಏತೇ ಪಂಚದಶ ಬ್ರಹ್ಮನ್ಗುಣಾ ಭೂತೇಷು ಪಂಚಸು|

03202008c ವರ್ತಂತೇ ಸರ್ವಭೂತೇಷು ಯೇಷು ಲೋಕಾಃ ಪ್ರತಿಷ್ಠಿತಾಃ|

03202008e ಅನ್ಯೋನ್ಯಂ ನಾತಿವರ್ತಂತೇ ಸಂಪಚ್ಚ ಭವತಿ ದ್ವಿಜ||

ಬ್ರಹ್ಮನ್! ಈ ಹದಿನೈದು ಗುಣಗಳು ಐದು ಭೂತಗಳಲ್ಲಿವೆ. ಮತ್ತು ಇವು ಲೋಕಗಳ ಆಧಾರವಾದ ಎಲ್ಲ ಭೂತಗಳಲ್ಲಿ ನಡೆಯುತ್ತವೆ. ದ್ವಿಜ! ಅವು ಅನ್ಯೋನ್ಯವನ್ನು ಅತಿಕ್ರಮಿಸುವುದಿಲ್ಲ; ಅವು ಒಂದಾಗಿರುತ್ತವೆ.

03202009a ಯದಾ ತು ವಿಷಮೀಭಾವಮಾಚರಂತಿ ಚರಾಚರಾಃ|

03202009c ತದಾ ದೇಹೀ ದೇಹಮನ್ಯಂ ವ್ಯತಿರೋಹತಿ ಕಾಲತಃ||

ಆದರೆ ಚರಾಚರಗಳಲ್ಲಿ ಇವುಗಳ ವೈಷಮ್ಯವುಂಟಾದಾಗ, ಸಮಯದಲ್ಲಿ ದೇಹಿಯು ಅನ್ಯ ದೇಹವನ್ನು ಪ್ರವೇಶಿಸುತ್ತಾನೆ.

03202010a ಆನುಪೂರ್ವ್ಯಾ ವಿನಶ್ಯಂತಿ ಜಾಯಂತೇ ಚಾನುಪೂರ್ವಶಃ|

03202010c ತತ್ರ ತತ್ರ ಹಿ ದೃಶ್ಯಂತೇ ಧಾತವಃ ಪಾಂಚಭೌತಿಕಾಃ|

03202010e ಯೈರಾವೃತಮಿದಂ ಸರ್ವಂ ಜಗತ್ಸ್ಥಾವರಜಂಗಮಂ||

ಧಾತುಗಳು ಒಂದರ ನಂತರ ಒಂದರಂತೆ ನಾಶಹೊಂದುತ್ತವೆ ಮತ್ತು ಒಂದರ ನಂತರ ಒಂದರಂತೆ ಹುಟ್ಟುತ್ತವೆ. ಪ್ರತಿ ಕ್ಷಣದಲ್ಲಿಯೂ ಪಂಚಭೌತಿಕಗಳ ಧಾತುಗಳು ಕಾಣಿಸಿಕೊಳ್ಳುತ್ತವೆ. ಅವು ಈ ಜಗತ್ತಿನ ಸ್ಥಾವರ ಜಂಗಮಗಳೆಲ್ಲವನ್ನೂ ಆವರಿಸಿವೆ.

03202011a ಇಂದ್ರಿಯೈಃ ಸೃಜ್ಯತೇ ಯದ್ಯತ್ತತ್ತದ್ವ್ಯಕ್ತಮಿತಿ ಸ್ಮೃತಂ|

03202011c ಅವ್ಯಕ್ತಮಿತಿ ವಿಜ್ಞೇಯಂ ಲಿಂಗಗ್ರಾಹ್ಯಮತೀಂದ್ರಿಯಂ||

ಇಂದ್ರಿಯಗಳಿಂದ ಸೃಷ್ಟಿಸಿದವುಗಳನ್ನು ವ್ಯಕ್ತವೆಂದು ಹೇಳುತ್ತಾರೆ. ಅತೀಂದ್ರಿಯವಾದವುಗಳನ್ನು, ಲಿಂಗವೆಂದು ತಿಳಿಯಬೇಕಾದುದನ್ನು ಅವ್ಯಕ್ತವೆಂದು ಹೇಳುತ್ತಾರೆ[1].

03202012a ಯಥಾಸ್ವಂ ಗ್ರಾಹಕಾನ್ಯೇಷಾಂ ಶಬ್ದಾದೀನಾಮಿಮಾನಿ ತು|

03202012c ಇಂದ್ರಿಯಾಣಿ ಯದಾ ದೇಹೀ ಧಾರಯನ್ನಿಹ ತಪ್ಯತೇ||

ಶಬ್ದಾದಿಗಳನ್ನು ಯಾವುದರಿಂದ ಗ್ರಹಿಸುತ್ತಾನೋ ಆ ಇಂದ್ರಿಯಗಳು ತನ್ನವು ಎಂಬ ತಿಳುವಳಿಕೆಯಿಂದ ಇರುವಾಗ ದೇಹಿಯು ಪರಿತಪಿಸುತ್ತಾನೆ.

03202013a ಲೋಕೇ ವಿತತಮಾತ್ಮಾನಂ ಲೋಕಂ ಚಾತ್ಮನಿ ಪಶ್ಯತಿ|

03202013c ಪರಾವರಜ್ಞಃ ಸಕ್ತಃ ಸನ್ಸರ್ವಭೂತಾನಿ ಪಶ್ಯತಿ||

ಆತ್ಮವನ್ನು ಮುಂದುವರಿಸಿ ಲೋಕವನ್ನೂ, ಲೋಕದಲ್ಲಿ ಆತ್ಮವನ್ನೂ ಕಾಣುವವನು ಮೇಲಿನ ಮತ್ತು ಕೆಳಗಿನ ಲೋಕಗಳೆರಡನ್ನೂ ತಿಳಿದುಕೊಂಡು, ಅಂಟಿಕೊಂಡಿದ್ದರೂ ಸರ್ವಭೂತಗಳನ್ನು ಕಾಣುತ್ತಾನೆ.

03202014a ಪಶ್ಯತಃ ಸರ್ವಭೂತಾನಿ ಸರ್ವಾವಸ್ಥಾಸು ಸರ್ವದಾ|

03202014c ಬ್ರಹ್ಮಭೂತಸ್ಯ ಸಂಯೋಗೋ ನಾಶುಭೇನೋಪಪದ್ಯತೇ||

ಸರ್ವದಾ ಸರ್ವ ಭೂತಗಳ ಸರ್ವಾವಸ್ಥೆಗಳನ್ನು ನೋಡುವವನು ಬ್ರಹ್ಮನಾಗುತ್ತಾನೆ. ಅವನು ಎಂದೂ ಅಶುಭದೊಂದಿಗೆ ಕೂಡುವುದಿಲ್ಲ.

03202015a ಜ್ಞಾನಮೂಲಾತ್ಮಕಂ ಕ್ಲೇಶಮತಿವೃತ್ತಸ್ಯ ಮೋಹಜಂ|

03202015c ಲೋಕೋ ಬುದ್ಧಿಪ್ರಕಾಶೇನ ಜ್ಞೇಯಮಾರ್ಗೇಣ ದೃಶ್ಯತೇ||

ಮೋಹದಿಂದ ಉಂಟಾಗುವ ಅತಿಕ್ಲೇಶದ ನಡತೆಯನ್ನು ಜ್ಞಾನದ ಮೂಲದಿಂದ ತೆಗೆಯಬಹುದು. ಜ್ಞಾನಮಾರ್ಗದ ಬುದ್ಧಿಪ್ರಕಾಶದಿಂದ ಲೋಕವು ಕಾಣುತ್ತದೆ.

03202016a ಅನಾದಿನಿಧನಂ ಜಂತುಮಾತ್ಮಯೋನಿಂ ಸದಾವ್ಯಯಂ|

03202016c ಅನೌಪಮ್ಯಮಮೂರ್ತಂ ಚ ಭಗವಾನಾಹ ಬುದ್ಧಿಮಾನ್|

03202016e ತಪೋಮೂಲಮಿದಂ ಸರ್ವಂ ಯನ್ಮಾಂ ವಿಪ್ರಾನುಪೃಚ್ಚಸಿ||

ಅಂಥವನು ಅನಾದಿನಿಧನ, ಸದಾ ಅವ್ಯಯನಾಗಿರುವ, ಅನೌಪಮ, ಅಮುಹೂರ್ತ, ಬುದ್ಧಿವಂತ ಪ್ರಾಣಿಯೋನಿಯಲ್ಲಿ ಹುಟ್ಟುತ್ತಾನೆ. ವಿಪ್ರ! ನೀನು ಏನು ನನ್ನನ್ನು ಕೇಳುತ್ತಿದ್ದೀಯೋ ಇವೆಲ್ಲವುಗಳ ಮೂಲವೂ ತಪಸ್ಸು.

03202017a ಇಂದ್ರಿಯಾಣ್ಯೇವ ತತ್ಸರ್ವಂ ಯತ್ಸ್ವರ್ಗನರಕಾವುಭೌ|

03202017c ನಿಗೃಹೀತವಿಸೃಷ್ಟಾನಿ ಸ್ವರ್ಗಾಯ ನರಕಾಯ ಚ||

ಇಂದ್ರಿಯಗಳಿಂದಲೇ ಸ್ವರ್ಗ ನರಕಗಳೆರಡೂ ಇವೆ. ಅವುಗಳನ್ನು ನಿಗ್ರಹದಲ್ಲಿಟ್ಟುಕೊಂಡರೆ ಸ್ವರ್ಗ, ಸ್ವಚ್ಛಂದವಾಗಿ ಬಿಟ್ಟರೆ ನರಕ.

03202018a ಏಷ ಯೋಗವಿಧಿಃ ಕೃತ್ಸ್ನೋ ಯಾವದಿಂದ್ರಿಯಧಾರಣಂ|

03202018c ಏತನ್ಮೂಲಂ ಹಿ ತಪಸಃ ಕೃತ್ಸ್ನಸ್ಯ ನರಕಸ್ಯ ಚ||

ಈ ಇಂದ್ರಿಯ ಧಾರಣೆಯೇ ಸಂಪೂರ್ಣ ಯೋಗವಿಧಿ. ಇಂದ್ರಿಯಗಳೇ ನಮ್ಮ ತಪಸ್ಸಿನ ಅಥವಾ ನರಕದ ಮೂಲ.

03202019a ಇಂದ್ರಿಯಾಣಾಂ ಪ್ರಸಂಗೇನ ದೋಷಮೃಚ್ಚತ್ಯಸಂಶಯಂ|

03202019c ಸಂನಿಯಮ್ಯ ತು ತಾನ್ಯೇವ ತತಃ ಸಿದ್ಧಿಮವಾಪ್ನುತೇ||

ಇಂದ್ರಿಯಗಳ ಪ್ರಸಂಗದಿಂದ ದೋಷವುಂಟಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಅವುಗಳನ್ನೇ ಸಂಯಮದಲ್ಲಿಟ್ಟುಕೊಂಡರೆ ಸಿದ್ಧಿಯನ್ನು ಹೊಂದುತ್ತೇವೆ.

03202020a ಷಣ್ಣಾಮಾತ್ಮನಿ ನಿತ್ಯಾನಾಮೈಶ್ವರ್ಯಂ ಯೋಽಧಿಗಚ್ಚತಿ|

03202020c ನ ಸ ಪಾಪೈಃ ಕುತೋಽನರ್ಥೈರ್ಯುಜ್ಯತೇ ವಿಜಿತೇಂದ್ರಿಯಃ||

ನಮ್ಮಲ್ಲಿರುವ ಆರು ಇಂದ್ರಿಯಗಳ ಮೇಲೆ ಅಧಿಕಾರವನ್ನು ಸಾಧಿಸುವ ಜಿಂತೇಂದ್ರಿಯನನ್ನು ಪಾಪಗಳು ಅಂಟುವುದಿಲ್ಲ. ಅನರ್ಥವು ಎಲ್ಲಿಂದ?

03202021a ರಥಃ ಶರೀರಂ ಪುರುಷಸ್ಯ ದೃಷ್ಟಂ|

         ಆತ್ಮಾ ನಿಯಂತೇಂದ್ರಿಯಾಣ್ಯಾಹುರಶ್ವಾನ್|

03202021c ತೈರಪ್ರಮತ್ತಃ ಕುಶಲೀ ಸದಶ್ವೈರ್|

         ದಾಂತೈಃ ಸುಖಂ ಯಾತಿ ರಥೀವ ಧೀರಃ||

ಪುರುಷನ ಶರೀರವನ್ನು ರಥಕ್ಕೆ, ಆತ್ಮವನ್ನು ಸಾರಥಿಗೆ ಮತ್ತು ಇಂದ್ರಿಯಗಳನ್ನು ರಥಕ್ಕೆ ಕಟ್ಟಿದ ಕುದುರೆಗಳಿಗೆ ಹೋಲಿಸುತ್ತಾರೆ. ಕುಶಲ ಸಾರಥಿಯು ಅಪ್ರಮತ್ತನಾಗಿ ಅಶ್ವಗಳನ್ನು ನಡೆಸುತ್ತಾನೆ. ಮತ್ತು ಧೀರ ರಥಿಕನಿಗೆ ನಿಯಂತ್ರಣದ ಮೂಲಕ ಸುಖವನ್ನು ತರುತ್ತಾನೆ.

03202022a ಷಣ್ಣಾಮಾತ್ಮನಿ ನಿತ್ಯಾನಾಮಿಂದ್ರಿಯಾಣಾಂ ಪ್ರಮಾಥಿನಾಂ|

03202022c ಯೋ ಧೀರೋ ಧಾರಯೇದ್ರಶ್ಮೀನ್ಸ ಸ್ಯಾತ್ಪರಮಸಾರಥಿಃ||

ಅಶ್ವಗಳಂತಿರುವ ನಮ್ಮಲ್ಲಿರುವ ಆರು ಇಂದ್ರಿಯಗಳನ್ನು (ಪಂಚೇಂದ್ರಿಯಗಳು ಮತ್ತು ಮನಸ್ಸು) ಯಾರು ತಾಳ್ಮೆಯಿಂದ ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾನೋ ಆ ಧೀರನೇ ಪರಮ ಸಾರಥಿ.

03202023a ಇಂದ್ರಿಯಾಣಾಂ ಪ್ರಸೃಷ್ಟಾನಾಂ ಹಯಾನಾಮಿವ ವರ್ತ್ಮಸು|

03202023c ಧೃತಿಂ ಕುರ್ವೀತ ಸಾರಥ್ಯೇ ಧೃತ್ಯಾ ತಾನಿ ಜಯೇದ್ಧ್ರುವಂ||

ಹೆದ್ದಾರಿಯಲ್ಲಿ ಹೋಗುತ್ತಿರುವ ಕುದುರೆಗಳನ್ನು ಹೇಗೆ ನಿಯಂತ್ರಣದಲ್ಲಿಟ್ಟುಕೊಂಡಿರಬೇಕೋ ಹಾಗೆ ಸಾರಥಿಯು ಧೃತನಾಗಿದ್ದರೆ ಜಯವು ನಿರ್ಧಿಷ್ಟ.

03202024a ಇಂದ್ರಿಯಾಣಾಂ ಹಿ ಚರತಾಂ ಯನ್ಮನೋಽನುವಿಧೀಯತೇ|

03202024c ತದಸ್ಯ ಹರತೇ ಬುದ್ಧಿಂ ನಾವಂ ವಾಯುರಿವಾಂಭಸಿ||

ಯಾರ ಇಂದ್ರಿಯವು ಮನಸ್ಸಿನ ಮೇಲೆ ಅತಿಯಾದ ನಿಯಂತ್ರಣವನ್ನು ಹಾಕುತ್ತದೆಯೋ ಅಂಥವನ ಬುದ್ಧಿಯು ಸಮುದ್ರದಲ್ಲಿ ಗಾಳಿಗೆ ಸಿಲುಕಿದ ನಾವೆಯಂತೆ ಕಳೆದುಹೋಗುತ್ತದೆ.

03202025a ಯೇಷು ವಿಪ್ರತಿಪದ್ಯಂತೇ ಷಟ್ಸು ಮೋಹಾತ್ಫಲಾಗಮೇ|

03202025c ತೇಷ್ವಧ್ಯವಸಿತಾಧ್ಯಾಯೀ ವಿಂದತೇ ಧ್ಯಾನಜಂ ಫಲಂ||

ಈ ಆರು ಇಂದ್ರಿಯಗಳ ಫಲಗಳ ಆಸೆಯಿಂದ ಜನರು ಮೋಹಿತರಾಗುತ್ತಾರೆ. ಆದರೆ ಅವುಗಳನ್ನು ಅಧ್ಯಯನ ಮಾಡುವವನು ಧ್ಯಾನದ ಮೂಲಕವೇ ಅವುಗಳ ಫಲವನ್ನು ಅನುಭವಿಸುತ್ತಾನೆ.””

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಬ್ರಾಹ್ಮಣವ್ಯಾಧಸಂವಾದೇ ದ್ವ್ಯಧಿಕದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಬ್ರಾಹ್ಮಣವ್ಯಾಧಸಂವಾದದಲ್ಲಿ ಇನ್ನೂರಾಎರಡನೆಯ ಅಧ್ಯಾಯವು.

Image result for flowers against white background

[1]ಇಂದ್ರಿಯಗಳಿಂದ ಯಾವುದು ತಿಳಿಯಲ್ಪಡುವುದೋ ಅದಕ್ಕೆ ವ್ಯಕ್ತವೆಂದೂ, ಇಂದ್ರಿಯಗಳಿಗೆ ತಿಳಿಯಲ್ಪಡದೇ ಕೇವಲ ಊಹಾಮಾತ್ರದಿಂದ ತಿಳಿಯಲ್ಪಡುವ ಅತೀಂದ್ರಿಯ ವಸ್ತುಗಳಿಗೆ ಅವ್ಯಕ್ತವೆಂದೂ ಹೆಸರು (ಭಾರತ ದರ್ಶನ ಪ್ರಕಾಶನ, ಸಂಪುಟ ೭, ಪುಟ ೩೪೪೮).

Comments are closed.