ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ
Contents
Toggle೨೦೦
ವ್ಯಾಧನು ಧರ್ಮದ ಸೂಕ್ಷ್ಮತೆಯನ್ನು ಉದಾಹರಣೆಗಳೊಂದಿಗೆ ವಿವರಿಸಿದುದು (೧-೪). ಕರ್ಮಫಲಗಳ ಮಹತ್ವವನ್ನು ಪ್ರತಿಪಾದಿಸಿದುದು (೫-೨೨). ಜೀವವು ಹೇಗೆ ಶಾಶ್ವತವಾಗಿರುತ್ತದೆ ಎಂದು ಕೌಶಿಕನು ಕೇಳಲು ವ್ಯಾಧನು ದೇಹಭೇದವಾದಾಗ ಜೀವವು ಮುಂದುವರೆದು ಮಾಡಿದ ಕರ್ಮಗಳಿಗನುಸಾರವಾಗಿ ಸುಖದುಃಖಗಳ ಭಾಗಿಯಾಗುತ್ತದೆ ಎಂದು ವಿವರಿಸಿದುದು (೨೩-೫೪).
03200001 ಮಾರ್ಕಂಡೇಯ ಉವಾಚ|
03200001a ಧರ್ಮವ್ಯಾಧಸ್ತು ನಿಪುಣಂ ಪುನರೇವ ಯುಧಿಷ್ಠಿರ|
03200001c ವಿಪ್ರರ್ಷಭಮುವಾಚೇದಂ ಸರ್ವಧರ್ಮಭೃತಾಂ ವರಃ||
ಮಾರ್ಕಂಡೇಯನು ಹೇಳಿದನು: “ಯುಧಿಷ್ಠಿರ! ಸರ್ವಧರ್ಮಗಳನ್ನು ಎತ್ತಿಹಿಡಿಯುವವರಲ್ಲಿ ಶ್ರೇಷ್ಠ ನಿಪುಣ ಧರ್ಮವ್ಯಾಧನು ಪುನಃ ವಿಪ್ರರ್ಷನನ್ನುದ್ದೇಶಿಸಿ ಇದನ್ನು ಹೇಳಿದನು.
03200002a ಶ್ರುತಿಪ್ರಮಾಣೋ ಧರ್ಮೋ ಹಿ ವೃದ್ಧಾನಾಮಿತಿ ಭಾಷಿತಂ|
03200002c ಸೂಕ್ಷ್ಮಾ ಗತಿರ್ಹಿ ಧರ್ಮಸ್ಯ ಬಹುಶಾಖಾ ಹ್ಯನಂತಿಕಾ||
“ಶೃತಿಪ್ರಮಾಣವಾದುದೇ ಧರ್ಮವೆಂದು ವೃದ್ಧರು ಹೇಳುತ್ತಾರೆ. ಏಕೆಂದರೆ ಧರ್ಮದ ಗತಿಯು ಸೂಕ್ಷ್ಮವಾದುದು. ಅದಕ್ಕೆ ಹಲವಾರು ಕವಲುಗಳಿವೆ ಮತ್ತು ಕೊನೆಯೇ ಇಲ್ಲ.
03200003a ಪ್ರಾಣಾತ್ಯಯೇ ವಿವಾಹೇ ಚ ವಕ್ತವ್ಯಮನೃತಂ ಭವೇತ್|
03200003c ಅನೃತಂ ಚ ಭವೇತ್ಸತ್ಯಂ ಸತ್ಯಂ ಚೈವಾನೃತಂ ಭವೇತ್||
ಮರಣಕಾಲದಲ್ಲಿ ಮತ್ತು ವಿವಾಹದಲ್ಲಿ ಸುಳ್ಳನ್ನು ಹೇಳಬಹುದು. ಆಗ ಸುಳ್ಳು ಸತ್ಯವಾಗಬಹುದು ಮತ್ತು ಸತ್ಯವು ಸುಳ್ಳಾಗಬಹುದು.
03200004a ಯದ್ಭೂತಹಿತಮತ್ಯಂತಂ ತತ್ಸತ್ಯಮಿತಿ ಧಾರಣಾ|
03200004c ವಿಪರ್ಯಯಕೃತೋಽಧರ್ಮಃ ಪಶ್ಯ ಧರ್ಮಸ್ಯ ಸೂಕ್ಷ್ಮತಾಂ||
ಇರುವವುಗಳಿಗೆ ಅತ್ಯಂತ ಹಿತವಾದುದು ಯಾವುದೋ ಅದೇ ಸತ್ಯವೆಂದೂ, ಇದಕ್ಕೆ ವಿಪರ್ಯಾಸವಾದುದನ್ನು ಅಧರ್ಮವೆಂದೂ ಅಭಿಪ್ರಾಯಪಡುತ್ತಾರೆ. ಧರ್ಮದ ಸೂಕ್ಷ್ಮತೆಯನ್ನು ನೋಡು!
03200005a ಯತ್ಕರೋತ್ಯಶುಭಂ ಕರ್ಮ ಶುಭಂ ವಾ ದ್ವಿಜಸತ್ತಮ|
03200005c ಅವಶ್ಯಂ ತತ್ಸಮಾಪ್ನೋತಿ ಪುರುಷೋ ನಾತ್ರ ಸಂಶಯಃ||
ದ್ವಿಜಸತ್ತಮ! ಶುಭ ಅಥವಾ ಅಶುಭ ಯಾವುದೇ ಕರ್ಮವನ್ನು ಮಾಡಲಿ, ಅವಶ್ಯವಾಗಿ ಪುರುಷನು ಅದರ ಫಲವನ್ನು ಅನುಭವಿಸುತ್ತಾನೆ. ಅದರಲ್ಲಿ ಸಂಶಯವೇ ಇಲ್ಲ.
03200006a ವಿಷಮಾಂ ಚ ದಶಾಂ ಪ್ರಾಪ್ಯ ದೇವಾನ್ಗರ್ಹತಿ ವೈ ಭೃಶಂ|
03200006c ಆತ್ಮನಃ ಕರ್ಮದೋಷಾಣಿ ನ ವಿಜಾನಾತ್ಯಪಂಡಿತಃ||
ಪಂಡಿತನಲ್ಲದವನು ವಿಷಮ ದಶೆಗಳನ್ನು ಹೊಂದಿ ದೇವತೆಗಳನ್ನು ಚೆನ್ನಾಗಿ ಬೈಯುತ್ತಾನೆ. ತನ್ನ ಕರ್ಮಗಳಲ್ಲಿರುವ ದೋಷಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ.
03200007a ಮೂಢೋ ನೈಕೃತಿಕಶ್ಚಾಪಿ ಚಪಲಶ್ಚ ದ್ವಿಜೋತ್ತಮ|
03200007c ಸುಖದುಃಖವಿಪರ್ಯಾಸೋ ಯದಾ ಸಮುಪಪದ್ಯತೇ|
03200007e ನೈನಂ ಪ್ರಜ್ಞಾ ಸುನೀತಂ ವಾ ತ್ರಾಯತೇ ನೈವ ಪೌರುಷಂ||
ದ್ವಿಜೋತ್ತಮ! ಮೂಡನು, ಮೋಸಗಾರನು ಮತ್ತು ಚಪಲನು ಸುಖದುಃಖಗಳಲ್ಲಿ ವಿಪರ್ಯಾಸಗಳನ್ನು ಅನುಭವಿಸಿದಾಗ ಉತ್ತಮ ದಾರಿಗೆ ಕರೆದೊಯ್ಯುವ ಪ್ರಜ್ಞೆಯನ್ನಾಗಲೀ ತಮ್ಮನ್ನು ದಾಟಿಸಿಕೊಳ್ಳಲು ಪೌರುಷವನ್ನಾಗಲೀ ಹೊಂದಿರುವುದಿಲ್ಲ.
03200008a ಯೋ ಯಮಿಚ್ಚೇದ್ಯಥಾ ಕಾಮಂ ತಂ ತಂ ಕಾಮಂ ಸಮಶ್ನುಯಾತ್|
03200008c ಯದಿ ಸ್ಯಾದಪರಾಧೀನಂ ಪುರುಷಸ್ಯ ಕ್ರಿಯಾಫಲಂ||
ಪುರುಷನ ಕ್ರಿಯಾಫಲವು ಬೇರೆಯಾವುದರ ಅದೀನದಲ್ಲಿಲ್ಲವಾದರೆ, ಅವನು ಯಾವ ಯಾವ ಕಾಮವನ್ನು ಬಯಸುತ್ತಾನೋ ಆ ಆ ಕಾಮವನ್ನು ಪಡೆಯುತ್ತಾನೆ.
03200009a ಸಮ್ಯತಾಶ್ಚಾಪಿ ದಕ್ಷಾಶ್ಚ ಮತಿಮಂತಶ್ಚ ಮಾನವಾಃ|
03200009c ದೃಶ್ಯಂತೇ ನಿಷ್ಫಲಾಃ ಸಂತಃ ಪ್ರಹೀಣಾಃ ಸರ್ವಕರ್ಮಭಿಃ||
03200010a ಭೂತಾನಾಮಪರಃ ಕಶ್ಚಿದ್ಧಿಂಸಾಯಾಂ ಸತತೋತ್ಥಿತಃ|
03200010c ವಂಚನಾಯಾಂ ಚ ಲೋಕಸ್ಯ ಸ ಸುಖೇನೇಹ ಜೀವತಿ||
ಸಮ್ಯತ, ದಕ್ಷ, ಮತ್ತು ಮತಿಮಂತ ಮಾನವರು ನಿಷ್ಫಲರಾಗಿ ಸರ್ವ ಕರ್ಮಗಳನ್ನು ಕಳೆದುಕೊಂಡಿದುದನ್ನು ಮತ್ತು ಇರುವವುಗಳನ್ನು ಸದಾ ಹಿಂಸಿಸುವವರು ಲೋಕಕ್ಕೆ ಮೋಸಮಾಡಿಕೊಂಡು ಸುಖವಾಗಿ ಜೀವಿಸುತ್ತಾರೆ ಎನ್ನುವುದನ್ನೂ ಇನ್ನೂ ನೋಡಬೇಕಷ್ಟೆ.
03200011a ಅಚೇಷ್ಟಮಾನಮಾಸೀನಂ ಶ್ರೀಃ ಕಂ ಚಿದುಪತಿಷ್ಠತಿ|
03200011c ಕಶ್ಚಿತ್ ಕರ್ಮಾಣಿ ಕುರ್ವನ್ ಹಿ ನ ಪ್ರಾಪ್ಯಮಧಿಗಚ್ಚತಿ||
ಏನನ್ನೂ ಮಾಡದೇ ಕುಳಿತುಕೊಂಡಿರುವವನಿಗೆ ಅದೃಷ್ಟವು ಒಲಿಯಬಹುದು. ಕೆಲವೊಮ್ಮೆ ಕರ್ಮಗಳನ್ನು ಮಾಡುವವನು ತನ್ನ ಗುರಿಯನ್ನು ತಲುಪದೇ ಇರಬಹುದು.
03200012a ದೇವಾನಿಷ್ಟ್ವಾ ತಪಸ್ತಪ್ತ್ವಾ ಕೃಪಣೈಃ ಪುತ್ರಗೃದ್ಧಿಭಿಃ|
03200012c ದಶಮಾಸಧೃತಾ ಗರ್ಭೇ ಜಾಯಂತೇ ಕುಲಪಾಂಸನಾಃ||
ಪುತ್ರನನ್ನು ಬಯಸಿ ಕೃಪಣರಾದವರು ದೇವನಿಷ್ಟರಾಗಿ ತಪಸ್ಸನ್ನು ತಪಿಸಿ ಹತ್ತು ತಿಂಗಳು ಗರ್ಭವನ್ನು ಧರಿಸಿ ಕುಲಪಾಂಸಕರಿಗೆ ಜನ್ಮ ನೀಡಬಹುದು.
03200013a ಅಪರೇ ಧನಧಾನ್ಯೈಶ್ಚ ಭೋಗೈಶ್ಚ ಪಿತೃಸಂಚಿತೈಃ|
03200013c ವಿಪುಲೈರಭಿಜಾಯಂತೇ ಲಬ್ಧಾಸ್ತೈರೇವ ಮಂಗಲೈಃ||
ಇದೇ ಮಂಗಲ ವಿಧಗಳಿಂದ ಪಡೆದರೂ ಹುಟ್ಟಿದವರು ತಂದೆತಾಯಿಗಳು ಕೂಡಿಟ್ಟ ಧನ-ಧಾನ್ಯ-ಭೋಗಗಳನ್ನು ಪಡೆಯುವ ಆಸೆಯುಳ್ಳವರಾಗಿರಬಹುದು.
03200014a ಕರ್ಮಜಾ ಹಿ ಮನುಷ್ಯಾಣಾಂ ರೋಗಾ ನಾಸ್ತ್ಯತ್ರ ಸಂಶಯಃ|
0320004c ಆಧಿಭಿಶ್ಚೈವ ಬಾಧ್ಯಂತೇ ವ್ಯಾಧೈಃ ಕ್ಷುದ್ರಮೃಗಾ ಇವ||
ಮನುಷ್ಯರ ರೋಗಗಳು ಕರ್ಮದಿಂದಲೇ ಹುಟ್ಟುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಬೇಟೆಯಲ್ಲಿ ಕ್ಷುದ್ರಮೃಗಗಳಂತೆ ಅವರು ವ್ಯಾಧಿಗಳ ಬಾಧೆಗೊಳಗಾಗುತ್ತಾರೆ.
03200015a ತೇ ಚಾಪಿ ಕುಶಲೈರ್ವೈದ್ಯೈರ್ನಿಪುಣೈಃ ಸಂಭೃತೌಷಧೈಃ|
03200015c ವ್ಯಾಧಯೋ ವಿನಿವಾರ್ಯಂತೇ ಮೃಗಾ ವ್ಯಾಧೈರಿವ ದ್ವಿಜ||
ದ್ವಿಜ! ಕುಶಲ ನಿಪುಣ ವೈದ್ಯರು ಔಷಧಿಗಳನ್ನು ಸಂಗ್ರಹಿಸಿಕೊಂಡು ವ್ಯಾಧನು ಮೃಗಗಳನ್ನು ಬೆನ್ನಟ್ಟಿ ಹೋಗುವಂತೆ ವ್ಯಾಧಿಗಳ ಹಿಂದೆ ಹೋಗುತ್ತಾರೆ.
03200016a ಯೇಷಾಮಸ್ತಿ ಚ ಭೋಕ್ತವ್ಯಂ ಗ್ರಹಣೀದೋಷಪೀಡಿತಾಃ|
03200016c ನ ಶಕ್ನುವಂತಿ ತೇ ಭೋಕ್ತುಂ ಪಶ್ಯ ಧರ್ಮಭೃತಾಂ ವರ||
ಧರ್ಮಭೃತರಲ್ಲಿ ಶ್ರೇಷ್ಠನೇ! ಭೋಗಿಸಲು ಎಷ್ಟೇ ಇದ್ದರೂ ಅಜೀರ್ಣದಿಂದ ಪೀಡಿತರಾದವರು ಅದನ್ನು ಭೋಗಿಸಲು ಅಶಕ್ತರಾಗಿರುತ್ತಾರೆ. ನೋಡು!
03200017a ಅಪರೇ ಬಾಹುಬಲಿನಃ ಕ್ಲಿಶ್ಯಂತೇ ಬಹವೋ ಜನಾಃ|
03200017c ದುಃಖೇನ ಚಾಧಿಗಚ್ಚಂತಿ ಭೋಜನಂ ದ್ವಿಜಸತ್ತಮ||
ದ್ವಿಜಸತ್ತಮ! ಬಾಹುಬಲವುಳ್ಳ ಇತರ ಬಹುಜನರು ದುಃಖದಿಂದ ಭೋಜನವನ್ನು ಕಂಡುಕೊಳ್ಳಲಾರರು.
03200018a ಇತಿ ಲೋಕಮನಾಕ್ರಂದಂ ಮೋಹಶೋಕಪರಿಪ್ಲುತಂ|
03200018c ಸ್ರೋತಸಾಸಕೃದಾಕ್ಷಿಪ್ತಂ ಹ್ರಿಯಮಾಣಂ ಬಲೀಯಸಾ||
ಹೀಗೆ ಲೋಕವು ಆಕ್ರಂದದಿಂದ, ಮೋಹಶೋಕಗಳಿಂದ ತುಂಬಿ, ಯಾವಾಗಲೂ ಬಲಶಾಲಿ ಪ್ರವಾಹದಿಂದ ಕೊಚ್ಚಿಕೊಂಡು ಹೋಗುತ್ತದೆ.
03200019a ನ ಮ್ರಿಯೇಯುರ್ನ ಜೀರ್ಯೇಯುಃ ಸರ್ವೇ ಸ್ಯುಃ ಸಾರ್ವಕಾಮಿಕಾಃ|
03200019c ನಾಪ್ರಿಯಂ ಪ್ರತಿಪಶ್ಯೇಯುರ್ವಶಿತ್ವಂ ಯದಿ ವೈ ಭವೇತ್||
ತಮ್ಮ ವಿಧಿಯ ಒಡೆಯರಾಗಿದ್ದರೆ ಯಾರೂ ಸಾಯುತ್ತಿರಲಿಲ್ಲ, ಯಾರೂ ವೃದ್ಧರಾಗುತ್ತಿರಲಿಲ್ಲ, ಎಲ್ಲರಿಗೂ ಬಯಸಿದುದೆಲ್ಲವೂ ದೊರೆಯುತ್ತಿದ್ದವು, ಯಾರೂ ಅಪ್ರಿಯವಾದುದನ್ನು ನೋಡುತ್ತಿರಲಿಲ್ಲ.
03200020a ಉಪರ್ಯುಪರಿ ಲೋಕಸ್ಯ ಸರ್ವೋ ಗಂತುಂ ಸಮೀಹತೇ|
03200020c ಯತತೇ ಚ ಯಥಾಶಕ್ತಿ ನ ಚ ತದ್ವರ್ತತೇ ತಥಾ||
ಲೋಕದಲ್ಲಿ ಎಲ್ಲರೂ ಇತರರಿಗಿಂತ ಮೇಲೆ ಹೋಗಲು ಬಯಸುತ್ತಾರೆ, ಯಥಾಶಕ್ತಿಯಾಗಿ ಪ್ರಯತ್ನಿಸುತ್ತಾರೆ. ಆದರೆ ಅದು ಹಾಗಾಗುವುದಿಲ್ಲ.
03200021a ಬಹವಃ ಸಂಪ್ರದೃಶ್ಯಂತೇ ತುಲ್ಯನಕ್ಷತ್ರಮಂಗಲಾಃ|
03200021c ಮಹಚ್ಚ ಫಲವೈಷಮ್ಯಂ ದೃಶ್ಯತೇ ಕರ್ಮಸಂಧಿಷು||
ಬಹುಮಂದಿ ಒಂದೇ ನಕ್ಷತ್ರ ಮಂಗಲ ಕಾಲಗಳಲ್ಲಿ ಹುಟ್ಟಿದ್ದರೂ ಅವರ ಕರ್ಮಸಂಧಿಗಳಲ್ಲಿ ಪಡೆಯುವ ಫಲಗಳಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ನೋಡುತ್ತೇವೆ.
03200022a ನ ಕಶ್ಚಿದೀಶತೇ ಬ್ರಹ್ಮನ್ಸ್ವಯಂಗ್ರಾಹಸ್ಯ ಸತ್ತಮ|
03200022c ಕರ್ಮಣಾಂ ಪ್ರಾಕೃತಾನಾಂ ವೈ ಇಹ ಸಿದ್ಧಿಃ ಪ್ರದೃಶ್ಯತೇ||
ಬ್ರಾಹ್ಮಣಸತ್ತಮ! ಸ್ವಯಂ ಯಾರೂ ತಮ್ಮ ವಿಧಿಯ ಈಶರಲ್ಲ. ಪ್ರಾಕೃತವಾಗಿ ಕರ್ಮಗಳು ಸಿದ್ಧಿಯಾಗುವುದನ್ನೇ ನಾವು ಇಲ್ಲಿ ಕಾಣುತ್ತೇವೆ.
03200023a ಯಥಾ ಶ್ರುತಿರಿಯಂ ಬ್ರಹ್ಮಂ ಜೀವಃ ಕಿಲ ಸನಾತನಃ|
03200023c ಶರೀರಮಧ್ರುವಂ ಲೋಕೇ ಸರ್ವೇಷಾಂ ಪ್ರಾಣಿನಾಮಿಹ||
ಬ್ರಾಹ್ಮಣ! ಇದು ಶ್ರುತಿಗಳು ಹೇಳಿದಂತೆ: ಜೀವವು ಸನಾತನವಾದುದು. ಈ ಲೋಕದ ಎಲ್ಲ ಪ್ರಾಣಿಗಳ ಶರೀರಗಳೂ ನಿರ್ದಿಷ್ಟವಾದವುಗಳಲ್ಲ.
03200024a ವಧ್ಯಮಾನೇ ಶರೀರೇ ತು ದೇಹನಾಶೋ ಭವತ್ಯುತ|
03200024c ಜೀವಃ ಸಂಕ್ರಮತೇಽನ್ಯತ್ರ ಕರ್ಮಬಂಧನಿಬಂಧನಃ||
ಶರೀರವನ್ನು ಕೊಲ್ಲುವಾಗ ದೇಹನಾಶವಾಗುತ್ತದೆ. ಜೀವವು ಕರ್ಮಬಂಧಗಳ ಪ್ರಕಾರ ಬೇರೆ ಕಡೆ ವರ್ಗಾಯಿಸಲ್ಪಡುತ್ತದೆ.”
03200025 ಬ್ರಾಹ್ಮಣ ಉವಾಚ|
03200025a ಕಥಂ ಧರ್ಮಭೃತಾಂ ಶ್ರೇಷ್ಠ ಜೀವೋ ಭವತಿ ಶಾಶ್ವತಃ|
03200025c ಏತದಿಚ್ಚಾಮ್ಯಹಂ ಜ್ಞಾತುಂ ತತ್ತ್ವೇನ ವದತಾಂ ವರ||
ಬ್ರಾಹ್ಮಣನು ಹೇಳಿದನು: “ಧರ್ಮಭೃತರಲ್ಲಿ ಶ್ರೇಷ್ಠನೇ! ಮಾತನಾಡುವವರಲ್ಲಿ ಶ್ರೇಷ್ಠನೇ! ಜೀವವು ಹೇಗೆ ಶಾಶ್ವತವಾದುದು? ಇದನ್ನು ಇದ್ದಹಾಗೆ ಕೇಳಲು ಬಯಸುತ್ತೇನೆ.”
03200026 ವ್ಯಾಧ ಉವಾಚ|
03200026a ನ ಜೀವನಾಶೋಽಸ್ತಿ ಹಿ ದೇಹಭೇದೇ|
ಮಿಥ್ಯೈತದಾಹುರ್ಮ್ರಿಯತೇತಿ ಮೂಢಾಃ|
03200026c ಜೀವಸ್ತು ದೇಹಾಂತರಿತಃ ಪ್ರಯಾತಿ|
ದಶಾರ್ಧತೈವಾಸ್ಯ ಶರೀರಭೇದಃ||
ವ್ಯಾಧನು ಹೇಳಿದನು: “ದೇಹಭೇದವಾದಾಗ ಜೀವವು ಸಾಯುವುದಿಲ್ಲ. ಆದರೆ ಮೂಡರು ಅದು ಕಳೆದುಹೋಗುತ್ತದೆ ಎಂದು ತಪ್ಪಾಗಿ ತಿಳಿದುಕೊಂಡಿರುತ್ತಾರೆ. ದೇಹದೊಳಗಿರುವ ಜೀವವು ಮುಂದುವರೆದು ಹೋಗುತ್ತದೆ. ಬೇರೆಯಾದ ಶರೀರವು ಪಂಚಭೂತಗಳನ್ನು ಸೇರುತ್ತದೆ.
03200027a ಅನ್ಯೋ ಹಿ ನಾಶ್ನಾತಿ ಕೃತಂ ಹಿ ಕರ್ಮ|
ಸ ಏವ ಕರ್ತಾ ಸುಖದುಃಖಭಾಗೀ|
03200027c ಯತ್ತೇನ ಕಿಂ ಚಿದ್ಧಿ ಕೃತಂ ಹಿ ಕರ್ಮ|
ತದಶ್ನುತೇ ನಾಸ್ತಿ ಕೃತಸ್ಯ ನಾಶಃ||
ಮಾಡಿದ ಕರ್ಮಗಳನ್ನು ಬೇರೆ ಯಾರೂ ಪಡೆಯುವುದಿಲ್ಲ. ಕರ್ತನು ಮಾತ್ರ ಅವುಗಳಿಂದುಂಟಾಗುವ ಸುಖ ದುಃಖಗಳ ಭಾಗಿಯಾಗುತ್ತಾನೆ. ಏನೇ ಕರ್ಮಗಳನ್ನು ಮಾಡಿದ್ದರೂ ಅವನೇ ಅದನ್ನು ಪಡೆಯುತ್ತಾನೆ. ಕೃತನ ನಾಶವಾಗುವುದಿಲ್ಲ.
03200028a ಅಪುಣ್ಯಶೀಲಾಶ್ಚ ಭವಂತಿ ಪುಣ್ಯಾ|
ನರೋತ್ತಮಾಃ ಪಾಪಕೃತೋ ಭವಂತಿ|
03200028c ನರೋಽನುಯಾತಸ್ತ್ವಿಹ ಕರ್ಮಭಿಃ ಸ್ವೈಸ್|
ತತಃ ಸಮುತ್ಪದ್ಯತಿ ಭಾವಿತಸ್ತೈಃ||
ಅಪುಣ್ಯಶೀಲರು ಪುಣ್ಯಶೀಲರಾಗುತ್ತಾರೆ. ನರೋತ್ತಮರು ಪಾಪಕೃತರಾಗುತ್ತಾರೆ. ಕರ್ಮಗಳು ನರನ ಬೆನ್ನುಹತ್ತಿ ಹೋಗುತ್ತವೆ. ಅವನೇನಾಗಬೇಕೆಂದು ನಿರ್ಧರಿಸುತ್ತವೆ ಮತ್ತು ಅನಂತರ ಅವನು ಹುಟ್ಟುತ್ತಾನೆ.”
03200029 ಬ್ರಾಹ್ಮಣ ಉವಾಚ|
03200029a ಕಥಂ ಸಂಭವತೇ ಯೋನೌ ಕಥಂ ವಾ ಪುಣ್ಯಪಾಪಯೋಃ|
03200029c ಜಾತೀಃ ಪುಣ್ಯಾ ಹ್ಯಪುಣ್ಯಾಶ್ಚ ಕಥಂ ಗಚ್ಚತಿ ಸತ್ತಮ||
ಬ್ರಾಹ್ಮಣನು ಹೇಳಿದನು: “ಸತ್ತಮ! ಅವನು ಹೇಗೆ ಯೋನಿಗಳಲ್ಲಿ ಹುಟ್ಟಿಕೊಳ್ಳುತ್ತಾನೆ? ಮತ್ತು ಪುಣ್ಯಪಾಪಗಳಿಂದ ಪುಣ್ಯನು ಪುಣ್ಯನಾಗಿಯೇ ಮತ್ತು ಪಾಪಿಯು ಪಾಪಿಯಾಗಿಯೇ ಹೇಗೆ ಹುಟ್ಟಿಕೊಳ್ಳುತ್ತಾನೆ? ಅವನು ಹೇಗೆ ಹೋಗುತ್ತಾನೆ?”
03200030 ವ್ಯಾಧ ಉವಾಚ|
03200030a ಗರ್ಭಾಧಾನಸಮಾಯುಕ್ತಂ ಕರ್ಮೇದಂ ಸಂಪ್ರದೃಶ್ಯತೇ|
03200030c ಸಮಾಸೇನ ತು ತೇ ಕ್ಷಿಪ್ರಂ ಪ್ರವಕ್ಷ್ಯಾಮಿ ದ್ವಿಜೋತ್ತಮ||
ವ್ಯಾಧನು ಹೇಳಿದನು: “ಕರ್ಮವು ಗರ್ಭಾಧಾನದೊಂದಿಗೆ ಕೂಡಿರುತ್ತದೆಯೆಂದು ಕಾಣುತ್ತದೆ. ದ್ವಿಜೋತ್ತಮ! ಇದರ ಕುರಿತು ಬೇಗನೇ ಸಂಕ್ಷಿಪ್ತವಾಗಿ ಹೇಳುತ್ತೇನೆ.
03200031a ಯಥಾ ಸಂಭೃತಸಂಭಾರಃ ಪುನರೇವ ಪ್ರಜಾಯತೇ|
03200031c ಶುಭಕೃಚ್ಚುಭಯೋನೀಷು ಪಾಪಕೃತ್ಪಾಪಯೋನಿಷು||
ಒಟ್ಟುಹಾಕಿಕೊಂಡ ಸಂಭಾರ-ಸಾಮಾಗ್ರಿಗಳಿಗೆ ತಕ್ಕುದಾಗಿ ಶುಭಕಾರ್ಯಗಳನ್ನು ಮಾಡಿದವರು ಶುಭಯೋನಿಗಳಲ್ಲಿ ಮತ್ತು ಪಾಪಕಾರ್ಯಗಳನ್ನು ಮಾಡಿದವರು ಪಾಪಯೋನಿಗಳಲ್ಲಿ ಪುನಃ ಹುಟ್ಟುತ್ತಾರೆ.
03200032a ಶುಭೈಃ ಪ್ರಯೋಗೈರ್ದೇವತ್ವಂ ವ್ಯಾಮಿಶ್ರೈರ್ಮಾನುಷೋ ಭವೇತ್|
03200032c ಮೋಹನೀಯೈರ್ವಿಯೋನೀಷು ತ್ವಧೋಗಾಮೀ ಚ ಕಿಲ್ಬಿಷೈಃ||
ಶುಭಕರ್ಮಗಳಿಂದ ದೇವತ್ವವನ್ನು ಪಡೆಯುತ್ತಾರೆ. ಮಿಶ್ರಕರ್ಮಗಳಿಂದ ಮನುಷ್ಯನಾಗುತ್ತಾರೆ. ಮೋಹದಿಂದ ಪ್ರಾಣಿಯೋನಿಗಳಲ್ಲಿ, ಮತ್ತು ಕಿಲ್ಬಿಷಗಳಿಂದ ಅಧೋಯೋನಿಗಳಲ್ಲಿ ಹುಟ್ಟುತ್ತಾರೆ.
03200033a ಜಾತಿಮೃತ್ಯುಜರಾದುಃಖೈಃ ಸತತಂ ಸಮಭಿದ್ರುತಃ|
03200033c ಸಂಸಾರೇ ಪಚ್ಯಮಾನಶ್ಚ ದೋಷೈರಾತ್ಮಕೃತೈರ್ನರಃ||
ಮನುಷ್ಯನು ತಾನೇ ಮಾಡಿದ ದೋಷಗಳಿಂದ ಸಂಸಾರದಲ್ಲಿ ಹುಟ್ಟು, ಮೃತ್ಯು, ವೃದ್ಧಾಪ್ಯಗಳಿಂದ ಸುಡಲ್ಪಡುತ್ತಾನೆ.
03200034a ತಿರ್ಯಗ್ಯೋನಿಸಹಸ್ರಾಣಿ ಗತ್ವಾ ನರಕಮೇವ ಚ|
03200034c ಜೀವಾಃ ಸಂಪರಿವರ್ತಂತೇ ಕರ್ಮಬಂಧನಿಬಂಧನಾಃ||
ಕರ್ಮಬಂಧನ ನಿಬಂಧನೆಗಳಿಗೆ ಸಿಲುಕಿ ಜೀವಗಳು ನರಕಕ್ಕೂ ಹೋಗಿ ಸಹಸ್ರಾರು ಕೀಳು ಯೋನಿಗಳಲ್ಲಿ ತಿರುಗುತ್ತಿರುತ್ತವೆ.
03200035a ಜಂತುಸ್ತು ಕರ್ಮಭಿಸ್ತೈಸ್ತೈಃ ಸ್ವಕೃತೈಃ ಪ್ರೇತ್ಯ ದುಃಖಿತಃ|
03200035c ತದ್ದುಃಖಪ್ರತಿಘಾತಾರ್ಥಮಪುಣ್ಯಾಂ ಯೋನಿಮಶ್ನುತೇ||
ತಾವೇ ಮಾಡುವ ಕರ್ಮಗಳಿಂದ ಮತ್ತು ದುಃಖಗಳಿಗೆ ನೀಡುವ ಪ್ರತಿಕ್ರಿಯೆಗಳಿಂದ ಜಂತುಗಳು ಅಪುಣ್ಯ ಯೋನಿಗಳನ್ನು ಹೊಂದುತ್ತವೆ.
03200036a ತತಃ ಕರ್ಮ ಸಮಾದತ್ತೇ ಪುನರನ್ಯನ್ನವಂ ಬಹು|
03200036c ಪಚ್ಯತೇ ತು ಪುನಸ್ತೇನ ಭುಕ್ತ್ವಾಪಥ್ಯಮಿವಾತುರಃ||
ಅಲ್ಲಿ ಪುನಃ ಅನ್ಯ ಹೊಸಕರ್ಮಗಳನ್ನು ಒಟ್ಟುಹಾಕಿಕೊಂಡು ಪುನಃ, ರೋಗಿಯು ಅಪಥ್ಯ ಆಹಾರವನ್ನು ಸೇವಿಸಿದರೆ ಹೇಗೋ ಹಾಗೆ, ದುಃಖವನ್ನು ಅನುಭವಿಸುತ್ತವೆ.
03200037a ಅಜಸ್ರಮೇವ ದುಃಖಾರ್ತೋಽದುಃಖಿತಃ ಸುಖಸಂಜ್ಞಿತಃ|
03200037c ತತೋಽನಿವೃತ್ತಬಂಧತ್ವಾತ್ಕರ್ಮಣಾಮುದಯಾದಪಿ|
03200037e ಪರಿಕ್ರಾಮತಿ ಸಂಸಾರೇ ಚಕ್ರವದ್ಬಹುವೇದನಃ||
ಆಗ ದುಃಖಾರ್ತರಾಗಿದ್ದರೂ ಅದುಃಖಿತರಾಗಿದ್ದೇವೆ ಸುಖವಾಗಿದ್ದೇವೆ ಎಂದು ತಪ್ಪು ತಿಳಿದುಕೊಂಡು ತಮ್ಮ ಸರಪಳಿಗಳನ್ನು ಕಳಚಿಕೊಳ್ಳದೇ ಹೊಸ ಕರ್ಮಗಳಿಂದ ಬಂಧನವನ್ನು ಹೆಚ್ಚಿಸಿಕೊಳ್ಳುತ್ತಾರೆ. ಹೀಗೆ ಬಹುವೇದನೆಯ ಸಂಸಾರಚಕ್ರದಲ್ಲಿ ತಿರುಗುತ್ತಿರುತ್ತವೆ.
03200038a ಸ ಚೇನ್ನಿವೃತ್ತಬಂಧಸ್ತು ವಿಶುದ್ಧಶ್ಚಾಪಿ ಕರ್ಮಭಿಃ|
03200038c ಪ್ರಾಪ್ನೋತಿ ಸುಕೃತಾಽಲ್ಲೋಕಾನ್ಯತ್ರ ಗತ್ವಾ ನ ಶೋಚತಿ||
ವಿಶುದ್ಧ ಕರ್ಮಗಳ ಮೂಲಕ ಈ ಬಂಧನದಿಂದ ನಿವೃತ್ತನಾದವನು ಎಲ್ಲಿಗೆ ಹೋದರೆ ದುಃಖವಿಲ್ಲವೋ ಆ ಸುಕೃತ ಲೋಕಗಳನ್ನು ಪಡೆಯುತ್ತಾನೆ.
03200039a ಪಾಪಂ ಕುರ್ವನ್ಪಾಪವೃತ್ತಃ ಪಾಪಸ್ಯಾಂತಂ ನ ಗಚ್ಚತಿ|
03200039c ತಸ್ಮಾತ್ಪುಣ್ಯಂ ಯತೇತ್ಕರ್ತುಂ ವರ್ಜಯೇತ ಚ ಪಾತಕಂ||
ಪಾಪದಲ್ಲಿ ನಿರತನಾದವನು ಪಾಪವನ್ನೇ ಮಾಡಿಕೊಂಡು ಪಾಪದ ಅಂತ್ಯವನ್ನು ಪಡೆಯುವುದೇ ಇಲ್ಲ. ಆದುದರಿಂದ ಪಾತಕ ಕರ್ಮವನ್ನು ವರ್ಜಿಸಿ ಪುಣ್ಯವನ್ನು ಮಾಡಬೇಕು.
03200040a ಅನಸೂಯುಃ ಕೃತಜ್ಞಶ್ಚ ಕಲ್ಯಾಣಾನ್ಯೇವ ಸೇವತೇ|
03200040c ಸುಖಾನಿ ಧರ್ಮಮರ್ಥಂ ಚ ಸ್ವರ್ಗಂ ಚ ಲಭತೇ ನರಃ||
ಅನಸೂಯನಾಗಿ, ಕೃತಜ್ಞನಾಗಿದ್ದುಕೊಂಡು ಕಲ್ಯಾಣಕರ ಸೇವೆಸಲ್ಲಿಸುವ ನರನು ಸುಖ-ಧರ್ಮ-ಅರ್ಥ-ಸ್ವರ್ಗಗಳನ್ನು ಪಡೆಯುತ್ತಾನೆ.
03200041a ಸಂಸ್ಕೃತಸ್ಯ ಹಿ ದಾಂತಸ್ಯ ನಿಯತಸ್ಯ ಯತಾತ್ಮನಃ|
03200041c ಪ್ರಾಜ್ಞಸ್ಯಾನಂತರಾ ವೃತ್ತಿರಿಹ ಲೋಕೇ ಪರತ್ರ ಚ||
ಉತ್ತಮ ನಡತೆಯುಳ್ಳವನು, ತಾಳ್ಮೆಯುಳ್ಳವನು, ನಿಯತನಾದವನು, ಮತ್ತು ಯತಾತ್ಮನು ನಿರಂತರ ಸುಖವನ್ನು ಇಲ್ಲಿಯೂ ಇದರ ನಂತರವೂ ಪಡೆಯುತ್ತಾನೆ.
03200042a ಸತಾಂ ಧರ್ಮೇಣ ವರ್ತೇತ ಕ್ರಿಯಾಂ ಶಿಷ್ಟವದಾಚರೇತ್|
03200042c ಅಸಂಕ್ಲೇಶೇನ ಲೋಕಸ್ಯ ವೃತ್ತಿಂ ಲಿಪ್ಸೇತ ವೈ ದ್ವಿಜ||
ದ್ವಿಜ! ಮನುಷ್ಯನು ಉತ್ತಮರ ಧರ್ಮದಂತೆ ನಡೆದುಕೊಳ್ಳಬೇಕು ಮತ್ತು ಶಿಷ್ಟರಂತೆ ಕ್ರಿಯೆಗಳನ್ನು ಆಚರಿಸಬೇಕು. ಲೋಕದ ವೃತ್ತಿಯನ್ನು ಅನುಸರಿಸುವುದರಿಂದ ಸಂಕ್ಲೇಶಗಳುಂಟಾಗುವುದಿಲ್ಲ.
03200043a ಸಂತಿ ಹ್ಯಾಗತವಿಜ್ಞಾನಾಃ ಶಿಷ್ಟಾಃ ಶಾಸ್ತ್ರವಿಚಕ್ಷಣಾಃ|
03200043c ಸ್ವಧರ್ಮೇಣ ಕ್ರಿಯಾ ಲೋಕೇ ಕರ್ಮಣಃ ಸೋಽಪ್ಯಸಂಕರಃ||
ವಿಜ್ಞಾನಿಗಳೂ, ಶಾಸ್ತ್ರಗಳನ್ನು ಕಂಡುಕೊಂಡವರೂ, ಶಿಷ್ಟರೂ ಇದ್ದಾರೆ. ಸ್ವಧರ್ಮದಂತೆ ಕ್ರಿಯೆಯಲ್ಲಿ ತೊಡಗಿರುವುದರಿಂದ ಲೋಕದಲ್ಲಿ ಕರ್ಮಸಂಕರವು ಆಗುವುದಿಲ್ಲ.
03200044a ಪ್ರಾಜ್ಞೋ ಧರ್ಮೇಣ ರಮತೇ ಧರ್ಮಂ ಚೈವೋಪಜೀವತಿ|
03200044c ತಸ್ಯ ಧರ್ಮಾದವಾಪ್ತೇಷು ಧನೇಷು ದ್ವಿಜಸತ್ತಮ|
03200044e ತಸ್ಯೈವ ಸಿಂಚತೇ ಮೂಲಂ ಗುಣಾನ್ಪಶ್ಯತಿ ಯತ್ರ ವೈ||
ಪ್ರಾಜ್ಞರು ಧರ್ಮದಂತೆ ನಡೆದುಕೊಳ್ಳುವುದರಲ್ಲಿ ಸಂತೋಷವನ್ನು ಪಡೆಯುತ್ತಾರೆ. ಧರ್ಮದಿಂದ ಜೀವನವನ್ನು ನಡೆಸುತ್ತಾರೆ. ದ್ವಿಜಸತ್ತಮ! ಅವನು ಧರ್ಮದಿಂದ ಧನವನ್ನು ಗಳಿಸುತ್ತಾನೆ. ಅದರಿಂದಲೇ ಬೇರಿಗೆ ನೀರನ್ನು ಹಾಕುತ್ತಾನೆ ಮತ್ತು ಎಲ್ಲಿಯೂ ಗುಣಗಳನ್ನು ಕಾಣುತ್ತಾನೆ.
03200045a ಧರ್ಮಾತ್ಮಾ ಭವತಿ ಹ್ಯೇವಂ ಚಿತ್ತಂ ಚಾಸ್ಯ ಪ್ರಸೀದತಿ|
03200045c ಸ ಮೈತ್ರಜನಸಂತುಷ್ಟ ಇಹ ಪ್ರೇತ್ಯ ಚ ನಂದತಿ||
ಅಂಥವನು ಧರ್ಮಾತ್ಮನಾಗಿರುತ್ತಾನೆ. ಅವನ ಚಿತ್ತವು ಸದಾ ಸಂತೃಪ್ತವಾಗಿರುತ್ತದೆ. ಅವನು ಮಿತ್ರಜನರೊಡನೆ ಸಂತುಷ್ಟನಾಗಿ ಇಲ್ಲಿಯೂ ಮತ್ತು ನಂತರದಲ್ಲಿಯೂ ಆನಂದಿಸುತ್ತಾನೆ.
03200046a ಶಬ್ದಂ ಸ್ಪರ್ಶಂ ತಥಾ ರೂಪಂ ಗಂಧಾನಿಷ್ಟಾಂಶ್ಚ ಸತ್ತಮ|
03200046c ಪ್ರಭುತ್ವಂ ಲಭತೇ ಚಾಪಿ ಧರ್ಮಸ್ಯೈತತ್ಫಲಂ ವಿದುಃ||
ಸತ್ತಮ! ಧರ್ಮದಲ್ಲಿರುವವರು ಸುಖವನ್ನು ನೀಡುವ ಶಬ್ಧ, ಸ್ಪರ್ಶ, ರೂಪ, ಗಂಧಗಳ ಮೇಲೆ ಪ್ರಭುತ್ವವನ್ನು ಪಡೆಯುತ್ತಾರೆ. ಇವು ಧರ್ಮದ ಫಲವೆಂದು ತಿಳಿಯಲ್ಪಟ್ಟಿವೆ.
03200047a ಧರ್ಮಸ್ಯ ಚ ಫಲಂ ಲಬ್ಧ್ವಾ ನ ತೃಪ್ಯತಿ ಮಹಾದ್ವಿಜ|
03200047c ಅತೃಪ್ಯಮಾಣೋ ನಿರ್ವೇದಮಾದತ್ತೇ ಜ್ಞಾನಚಕ್ಷುಷಾ||
ಮಹಾದ್ವಿಜ! ಜ್ಞಾನಚಕ್ಷುಷಿಯು ಧರ್ಮದ ಫಲವನ್ನು ಪಡೆದು ತೃಪ್ತನಾಗುವುದಿಲ್ಲ. ಅವನು ನೋವು ಸುಖಗಳಿಗೆ ನಿರ್ವೇದನಾಗುತ್ತಾನೆ.
03200048a ಪ್ರಜ್ಞಾಚಕ್ಷುರ್ನರ ಇಹ ದೋಷಂ ನೈವಾನುರುಧ್ಯತೇ|
03200048c ವಿರಜ್ಯತಿ ಯಥಾಕಾಮಂ ನ ಚ ಧರ್ಮಂ ವಿಮುಂಚತಿ||
ಪ್ರಜ್ಞಾಚಕ್ಷು ನರನನ್ನು ಇಲ್ಲಿಯ ದೋಷಗಳು ತಾಗುವುದಿಲ್ಲ. ತಾನೇ ಬಯಸಿ ವೈರಾಗ್ಯನಾಗುತ್ತಾನೆ. ಆದರೆ ಧರ್ಮವನ್ನು ಬಿಡುವುದಿಲ್ಲ.
03200049a ಸರ್ವತ್ಯಾಗೇ ಚ ಯತತೇ ದೃಷ್ಟ್ವಾ ಲೋಕಂ ಕ್ಷಯಾತ್ಮಕಂ|
03200049c ತತೋ ಮೋಕ್ಷೇ ಪ್ರಯತತೇ ನಾನುಪಾಯಾದುಪಾಯತಃ||
ಲೋಕ ಮತ್ತು ತಾನೂ ಕ್ಷಯವಾಗುವವೆನ್ನುವುದನ್ನು ಕಂಡುಕೊಂಡು ಎಲ್ಲವನ್ನೂ ತ್ಯಜಿಸಲು ಪ್ರಯತ್ನಿಸುತ್ತಾನೆ. ಇನ್ನೂ ಉಪಾಯಗಳನ್ನು ಹುಡುಕಿಕೊಳ್ಳುತ್ತಾ ಮೋಕ್ಷಕ್ಕೆ ಪ್ರಯತ್ನಿಸುತ್ತಾನೆ.
03200050a ಏವಂ ನಿರ್ವೇದಮಾದತ್ತೇ ಪಾಪಂ ಕರ್ಮ ಜಹಾತಿ ಚ|
03200050c ಧಾರ್ಮಿಕಶ್ಚಾಪಿ ಭವತಿ ಮೋಕ್ಷಂ ಚ ಲಭತೇ ಪರಂ||
ಹೀಗೆ ನಿರ್ವೇದಭಾವವನ್ನು ತಳೆದು ಪಾಪ ಕರ್ಮಗಳನ್ನು ಕಳೆದುಕೊಳ್ಳುತ್ತಾನೆ. ಧಾರ್ಮಿಕನಾಗಿದ್ದುಕೊಂಡು ಪರಮ ಮೋಕ್ಷವನ್ನು ಪಡೆಯುತ್ತಾನೆ.
03200051a ತಪೋ ನಿಃಶ್ರೇಯಸಂ ಜಂತೋಸ್ತಸ್ಯ ಮೂಲಂ ಶಮೋ ದಮಃ|
03200051c ತೇನ ಸರ್ವಾನವಾಪ್ನೋತಿ ಕಾಮಾನ್ಯಾನ್ಮನಸೇಚ್ಚತಿ||
ತಪಸ್ಸು ಜಂತುವಿನ ಶ್ರೇಯಸ್ಸಿಗೆ ಕಾರಣ ಮತ್ತು ಅದರ ಮೂಲವು ಶಮ ಮತ್ತು ದಮ. ಇವುಗಳ ಮೂಲಕ ಅವನ ಮನಸ್ಸು ಬಯಸಿದ ಕಾಮಗಳೆಲ್ಲವನ್ನೂ ಪಡೆಯುತ್ತಾನೆ.
03200052a ಇಂದ್ರಿಯಾಣಾಂ ನಿರೋಧೇನ ಸತ್ಯೇನ ಚ ದಮೇನ ಚ|
03200052c ಬ್ರಹ್ಮಣಃ ಪದಮಾಪ್ನೋತಿ ಯತ್ಪರಂ ದ್ವಿಜಸತ್ತಮ||
ದ್ವಿಜಸತ್ತಮ! ಇಂದ್ರಿಯಗಳ ನಿರೋಧ, ಸತ್ಯ ಮತ್ತು ದಮಗಳ ಮೂಲಕ ಶ್ರೇಷ್ಠ ಬ್ರಹ್ಮಪದವನ್ನು ಪಡೆಯುತ್ತಾನೆ.”
03200053 ಬ್ರಾಹ್ಮಣ ಉವಾಚ|
03200053a ಇಂದ್ರಿಯಾಣಿ ತು ಯಾನ್ಯಾಹುಃ ಕಾನಿ ತಾನಿ ಯತವ್ರತ|
03200053c ನಿಗ್ರಹಶ್ಚ ಕಥಂ ಕಾರ್ಯೋ ನಿಗ್ರಹಸ್ಯ ಚ ಕಿಂ ಫಲಂ||
ಬ್ರಾಹ್ಮಣನು ಹೇಳಿದನು: “ಯತವ್ರತ! ಇಂದ್ರಿಯಗಳೆಂದು ನೀನು ಹೇಳಿದೆಯಲ್ಲ ಅವು ಏನು? ಅವುಗಳ ನಿಗ್ರಹವನ್ನು ಹೇಗೆ ಮಾಡಬೇಕು ಮತ್ತು ನಿಗ್ರಹದ ಫಲವೇನು?
03200054a ಕಥಂ ಚ ಫಲಮಾಪ್ನೋತಿ ತೇಷಾಂ ಧರ್ಮಭೃತಾಂ ವರ|
03200054c ಏತದಿಚ್ಚಾಮಿ ತತ್ತ್ವೇನ ಧರ್ಮಂ ಜ್ಞಾತುಂ ಸುಧಾರ್ಮಿಕ||
ಧರ್ಮಭೃತರಲ್ಲಿ ಶ್ರೇಷ್ಠ! ಸುಧಾರ್ಮಿಕ! ಇವುಗಳ ಫಲವನ್ನು ಹೇಗೆ ಪಡೆಯಬೇಕು? ತತ್ವದಿಂದ ಈ ಧರ್ಮವನ್ನು ತಿಳಿಯಲು ಬಯಸುತ್ತೇನೆ.””
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಪತಿವ್ರತೋಪಾಖ್ಯಾನೇ ಬ್ರಾಹ್ಮಣವ್ಯಾಧಸಂವಾದೇ ದ್ವಿಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಪತಿವ್ರತೋಪಾಖ್ಯಾನದಲ್ಲಿ ಬ್ರಾಹ್ಮಣವ್ಯಾಧಸಂವಾದದಲ್ಲಿ ಇನ್ನೂರನೆಯ ಅಧ್ಯಾಯವು.
