Aranyaka Parva: Chapter 199

ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ

೧೯೯

ಈಗಿನ ವೃತ್ತಿಯನ್ನು ಫಲವನ್ನಾಗಿತ್ತ ಹಿಂದಿನ ಕರ್ಮದೋಷಗಳನ್ನು ಕೊನೆಗೊಳಿಸಲು ಸಾಧ್ಯವಾದ ಪ್ರಯತ್ನವನ್ನು ಮಾಡುತ್ತಿದ್ದಾನೆಂದು ವ್ಯಾಧನು ಹೇಳುವುದು (೧-೨). ಔಷಧಗಳು, ತೋಟದ ಹಸಿರುಗಳ ಜೊತೆ ಪಶುಗಳು ಮತ್ತು ಮೃಗಪಕ್ಷಿಗಳೂ ಲೋಕದ ಆಹಾರಗಳೆಂದು ಶ್ರುತಿಯು ಹೇಳುತ್ತದೆಯೆಂದೂ; ಶಿಬಿ-ರಂತಿದೇವ ಮೊದಲಾದ ರಾಜರು ಮಾಂಸವನ್ನು ಬಳಸಿದ್ದರೆಂದೂ; ದೇವತೆಗಳಿಗೂ, ಪಿತೃಗಳಿಗೂ ಯಥಾವಿಧಿಯಾಗಿ ಯಥಾಶ್ರದ್ಧೆಯಿಂದ ನೀಡಿ ತಿಂದರೆ ತಿಂದುದರ ಪಾಪವನ್ನು ಪಡೆಯುವುದಿಲ್ಲವೆಂದೂ ವ್ಯಾಧನು ಕೌಶಿಕನಿಗೆ ವಿವರಿಸುವುದು (೩-೧೬). ಲೋಕದಲ್ಲಿ ಕಾಣುವ ಬಹಳಷ್ಟು ಧರ್ಮ ಮತ್ತು ಅಧರ್ಮಯುಕ್ತ ವಿಪರ್ಯಾಸಗಳನ್ನು ವರ್ಣಿಸಿ ಸ್ವಕರ್ಮದಲ್ಲಿ ನಿರತನಾದವನು ಯಶಸ್ವಿಯಾಗುತ್ತಾನೆ ಎನ್ನುವುದು (೧೭-೩೪).

03199001 ಮಾರ್ಕಂಡೇಯ ಉವಾಚ|

03199001a ಸ ತು ವಿಪ್ರಮಥೋವಾಚ ಧರ್ಮವ್ಯಾಧೋ ಯುಧಿಷ್ಠಿರ|

03199001c ಯದಹಂ ಹ್ಯಾಚರೇ ಕರ್ಮ ಘೋರಮೇತದಸಂಶಯಂ||

ಮಾರ್ಕಂಡೇಯನು ಹೇಳಿದನು: “ಯುಧಿಷ್ಠಿರ! ಆಗ ಧರ್ಮವ್ಯಾಧನು ವಿಪ್ರನಿಗೆ ಹೇಳಿದನು. “ನಾನು ಆಚರಿಸುತ್ತಿರುವ ಈ ಕರ್ಮವು ಘೋರವಾದುದು ಎನ್ನುವುದರಲ್ಲಿ ಸಂಶಯವೇ ಇಲ್ಲ.

03199002a ವಿಧಿಸ್ತು ಬಲವಾನ್ಬ್ರಹ್ಮನ್ದುಸ್ತರಂ ಹಿ ಪುರಾಕೃತಂ|

03199002c ಪುರಾಕೃತಸ್ಯ ಪಾಪಸ್ಯ ಕರ್ಮದೋಷೋ ಭವತ್ಯಯಂ|

03199002e ದೋಷಸ್ಯೈತಸ್ಯ ವೈ ಬ್ರಹ್ಮನ್ವಿಘಾತೇ ಯತ್ನವಾನಹಂ||

ಬ್ರಹ್ಮನ್! ಹಿಂದೆ ಮಾಡಿದ ಕರ್ಮಗಳ ವಿಧಿಯು ಬಲಶಾಲಿ ಮತ್ತು ದಾಟುವುದು ಕಷ್ಟ. ಇದು ನಾನು ಹಿಂದೆ ಮಾಡಿದ ಕರ್ಮದೋಷಗಳ ಫಲ. ಬ್ರಹ್ಮನ್! ಈ ದೋಷವನ್ನು ಕೊನೆಗೊಳಿಸಲು ನನಗಾದಷ್ಟು ಪ್ರಯತ್ನಿಸುತ್ತಿದ್ದೇನೆ.

03199003a ವಿಧಿನಾ ವಿಹಿತೇ ಪೂರ್ವಂ ನಿಮಿತ್ತಂ ಘಾತಕೋ ಭವೇತ್|

03199003c ನಿಮಿತ್ತಭೂತಾ ಹಿ ವಯಂ ಕರ್ಮಣೋಽಸ್ಯ ದ್ವಿಜೋತ್ತಮ||

ದ್ವಿಜೋತ್ತಮ! ಹಿಂದೆಯೇ ವಿಧಿಯಿಂದ ವಿಹಿತವಾದುದಕ್ಕೆ ಘಾತಕನು ನಿಮಿತ್ತಮಾತ್ರವಾಗುತ್ತಾನೆ. ಆದುದರಿಂದ ನಾವು ಹಿಂದಿನ ಕರ್ಮಗಳ ನಿಮಿತ್ತಗಳಾಗಿರುತ್ತೇವೆ.

03199004a ಯೇಷಾಂ ಹತಾನಾಂ ಮಾಂಸಾನಿ ವಿಕ್ರೀಣಾಮೋ ವಯಂ ದ್ವಿಜ|

03199004c ತೇಷಾಮಪಿ ಭವೇದ್ಧರ್ಮ ಉಪಭೋಗೇನ ಭಕ್ಷಣಾತ್|

03199004e ದೇವತಾತಿಥಿಭೃತ್ಯಾನಾಂ ಪಿತೄಣಾಂ ಪ್ರತಿಪೂಜನಾತ್||

ದ್ವಿಜ! ಯಾರಿಗೆ ನಾವು ಕೊಲ್ಲಲ್ಪಟ್ಟಿದುದರ ಮಾಂಸವನ್ನು ಮಾರುತ್ತೇವೋ ಅವರಿಗೂ ದೇವತೆ, ಅತಿಥಿ, ಸೇವಕರು ಮತ್ತು ಪಿತೃಗಳನ್ನು ಪೂಜಿಸಿದ ನಂತರ ಅದನ್ನು ತಿಂದು ಭೋಗಿಸುವ ಧರ್ಮವಿರುತ್ತದೆ.

03199005a ಓಷಧ್ಯೋ ವೀರುಧಶ್ಚಾಪಿ ಪಶವೋ ಮೃಗಪಕ್ಷಿಣಃ|

03199005c ಅನ್ನಾದ್ಯಭೂತಾ ಲೋಕಸ್ಯ ಇತ್ಯಪಿ ಶ್ರೂಯತೇ ಶ್ರುತಿಃ||

ಔಷಧಗಳು, ತೋಟದ ಹಸಿರುಗಳು, ಪಶುಗಳು, ಮೃಗಪಕ್ಷಿಗಳು ಲೋಕದ ಅನ್ನಗಳು ಎಂದು ಶ್ರುತಿಗಳು ತಿಳಿಸುತ್ತವೆ.

03199006a ಆತ್ಮಮಾಂಸಪ್ರದಾನೇನ ಶಿಬಿರೌಶೀನರೋ ನೃಪಃ|

03199006c ಸ್ವರ್ಗಂ ಸುದುರ್ಲಭಂ ಪ್ರಾಪ್ತಃ ಕ್ಷಮಾವಾನ್ದ್ವಿಜಸತ್ತಮ||

ದ್ವಿಜಸತ್ತಮ! ನೃಪ ಔಶೀನರ ಕ್ಷಮವಂತ ಶಿಬಿಯು ತನ್ನದೇ ಮಾಂಸವನ್ನು ನೀಡಿ ತುಂಬಾ ದುರ್ಲಭವಾದ ಸ್ವರ್ಗವನ್ನು ಪಡೆದನು.

03199007a ರಾಜ್ಞೋ ಮಹಾನಸೇ ಪೂರ್ವಂ ರಂತಿದೇವಸ್ಯ ವೈ ದ್ವಿಜ|

03199007c ದ್ವೇ ಸಹಸ್ರೇ ತು ವಧ್ಯೇತೇ ಪಶೂನಾಮನ್ವಹಂ ತದಾ||

ದ್ವಿಜ! ಹಿಂದೆ ರಾಜ ರಂತಿದೇವನ ಅಡುಗೆಮನೆಯಲ್ಲಿ ದಿನವೂ ಎರಡು ಸಾವಿರ ಪಶುಗಳನ್ನು ವಧಿಸಲಾಗುತ್ತಿತ್ತು.

03199008a ಸಮಾಂಸಂ ದದತೋ ಹ್ಯನ್ನಂ ರಂತಿದೇವಸ್ಯ ನಿತ್ಯಶಃ|

03199008c ಅತುಲಾ ಕೀರ್ತಿರಭವನ್ನೃಪಸ್ಯ ದ್ವಿಜಸತ್ತಮ|

03199008e ಚಾತುರ್ಮಾಸ್ಯೇಷು ಪಶವೋ ವಧ್ಯಂತ ಇತಿ ನಿತ್ಯಶಃ||

ರಂತಿದೇವನು ದಿನವೂ ಮಾಂಸವನ್ನು ಕೂಡಿದ ಊಟವನ್ನು ಬಡಿಸುತ್ತಿದ್ದನು. ಆ ನೃಪನು ಅತುಲ ಕೀರ್ತಿಯನ್ನು ಹೊಂದಿದನು. ಚಾತುರ್ಮಾಸದಲ್ಲಿ ನಿತ್ಯವೂ ಪಶುಗಳ ವಧೆಯಾಗುತ್ತಿತ್ತು.

03199009a ಅಗ್ನಯೋ ಮಾಂಸಕಾಮಾಶ್ಚ ಇತ್ಯಪಿ ಶ್ರೂಯತೇ ಶ್ರುತಿಃ|

03199009c ಯಜ್ಞೇಷು ಪಶವೋ ಬ್ರಹ್ಮನ್ವಧ್ಯಂತೇ ಸತತಂ ದ್ವಿಜೈಃ|

03199009e ಸಂಸ್ಕೃತಾಃ ಕಿಲ ಮಂತ್ರೈಶ್ಚ ತೇಽಪಿ ಸ್ವರ್ಗಮವಾಪ್ನುವನ್||

ಅಗ್ನಿಗಳು ಮಾಂಸವನ್ನು ಬಯಸುತ್ತವೆ ಎಂದು ಶ್ರುತಿಗಳೂ ಹೇಳುತ್ತವೆ. ಬ್ರಹ್ಮನ್! ಯಜ್ಞಗಳಲ್ಲಿ ಸತತವೂ ದ್ವಿಜರು ಪಶುಗಳನ್ನು ವಧಿಸುತ್ತಾರೆ. ಮಂತ್ರಗಳಿಂದ ಸಂಸ್ಕೃತರಾಗಿ ಅವೂ ಸ್ವರ್ಗವನ್ನು ತಲುಪುತ್ತವೆ ಎನ್ನುವುದಿಲ್ಲವೇ?

03199010a ಯದಿ ನೈವಾಗ್ನಯೋ ಬ್ರಹ್ಮನ್ಮಾಂಸಕಾಮಾಭವನ್ಪುರಾ|

03199010c ಭಕ್ಷ್ಯಂ ನೈವ ಭವೇನ್ಮಾಂಸಂ ಕಸ್ಯ ಚಿದ್ದ್ವಿಜಸತ್ತಮ||

ದ್ವಿಜಸತ್ತಮ! ಹಿಂದೆ ಅಗ್ನಿಗಳು ಮಾಂಸಕಾಮಿಗಳಾಗಿರದಿದ್ದರೆ ಈಗ ಯಾರೂ ಮಾಂಸವನ್ನು ತಿನ್ನುತ್ತಿರಲಿಲ್ಲ.

03199011a ಅತ್ರಾಪಿ ವಿಧಿರುಕ್ತಶ್ಚ ಮುನಿಭಿರ್ಮಾಂಸಭಕ್ಷಣೇ|

03199011c ದೇವತಾನಾಂ ಪಿತೄಣಾಂ ಚ ಭುಂಕ್ತೇ ದತ್ತ್ವಾ ತು ಯಃ ಸದಾ|

03199011e ಯಥಾವಿಧಿ ಯಥಾಶ್ರದ್ಧಂ ನ ಸ ದುಷ್ಯತಿ ಭಕ್ಷಣಾತ್||

ಈಗಲೂ ಕೂಡ ಮುನಿಗಳು ಮಾಂಸಭಕ್ಷಣದ ವಿಷಯದಲ್ಲಿ ನಿಶ್ಚಯವನ್ನು ಹೇಳುತ್ತಾರೆ: ದೇವತೆಗಳಿಗೂ, ಪಿತೃಗಳಿಗೂ ಯಥಾವಿಧಿಯಾಗಿ ಯಥಾಶ್ರದ್ಧೆಯಿಂದ ನೀಡಿ ತಿಂದರೆ ತಿಂದಿದುದರ ಪಾಪವನ್ನು ಪಡೆಯುವುದಿಲ್ಲ.

03199012a ಅಮಾಂಸಾಶೀ ಭವತ್ಯೇವಮಿತ್ಯಪಿ ಶ್ರೂಯತೇ ಶ್ರುತಿಃ|

03199012c ಭಾರ್ಯಾಂ ಗಚ್ಚನ್ಬ್ರಹ್ಮಚಾರೀ ಋತೌ ಭವತಿ ಬ್ರಾಹ್ಮಣಃ||

ಹೇಗೆ ಋತುಮತಿಯಾಗಿದ್ದಾಗ ಪತ್ನಿಯನ್ನು ಕೂಡುವ ಬ್ರಾಹ್ಮಣನು ಬ್ರಹ್ಮಚಾರಿಯಾಗಿಯೇ ಇರುತ್ತಾನೋ ಹಾಗೆ ಇದರಿಂದ ಮಾಂಸಾಹಾರಿಯಾಗುವುದಿಲ್ಲ ಎಂದು ಶ್ರುತಿಗಳು ಹೇಳುತ್ತವೆ.

03199013a ಸತ್ಯಾನೃತೇ ವಿನಿಶ್ಚಿತ್ಯ ಅತ್ರಾಪಿ ವಿಧಿರುಚ್ಯತೇ|

03199013c ಸೌದಾಸೇನ ಪುರಾ ರಾಜ್ಞಾ ಮಾನುಷಾ ಭಕ್ಷಿತಾ ದ್ವಿಜ|

03199013e ಶಾಪಾಭಿಭೂತೇನ ಭೃಶಮತ್ರ ಕಿಂ ಪ್ರತಿಭಾತಿ ತೇ||

ಈಗಲೂ ಕೂಡ ಸತ್ಯ ಮತ್ತು ಸುಳ್ಳುಗಳನ್ನು ನಿಶ್ಚಯಿಸುವ ವಿಧಿಗಳನ್ನು ಹೇಳುತ್ತಾರೆ. ದ್ವಿಜ! ಹಿಂದೆ ಶಾಪದ ಮಹಾ ಪ್ರಭಾವಕ್ಕೆ ಸಿಲುಕಿದ ರಾಜ ಸೌದಾಸನು ನರಮಾಂಸವನ್ನು ಭಕ್ಷಿಸಿದನು[1]. ಇದರ ಕುರಿತು ನಿನಗೆ ಏನನ್ನಿಸುತ್ತದೆ?

03199014a ಸ್ವಧರ್ಮ ಇತಿ ಕೃತ್ವಾ ತು ನ ತ್ಯಜಾಮಿ ದ್ವಿಜೋತ್ತಮ|

03199014c ಪುರಾಕೃತಮಿತಿ ಜ್ಞಾತ್ವಾ ಜೀವಾಮ್ಯೇತೇನ ಕರ್ಮಣಾ||

ದ್ವಿಜೋತ್ತಮ! ಇದು ನನ್ನ ಧರ್ಮವೆಂದು ಮಾಡುತ್ತೇನೆ. ಇದನ್ನು ಬಿಡುವುದಿಲ್ಲ. ಇದು ಹಿಂದೆ ಮಾಡಿದುದರಿಂದ ಎಂದು ತಿಳಿದು ಇದೇ ಕರ್ಮದಿಂದ ಜೀವಿಸುತ್ತೇನೆ.

03199015a ಸ್ವಕರ್ಮ ತ್ಯಜತೋ ಬ್ರಹ್ಮನ್ನಧರ್ಮ ಇಹ ದೃಶ್ಯತೇ|

03199015c ಸ್ವಕರ್ಮನಿರತೋ ಯಸ್ತು ಸ ಧರ್ಮ ಇತಿ ನಿಶ್ಚಯಃ||

ಬ್ರಹ್ಮನ್! ಇಲ್ಲಿ ತನ್ನ ಕರ್ಮವನ್ನು ಬಿಡುವುದು ಅಧರ್ಮವೆಂದು ಕಾಣುತ್ತದೆ. ತನ್ನ ಕರ್ಮದಲ್ಲಿ ಯಾರು ನಿರತನಾಗಿರುತ್ತಾನೋ ಅದೇ ಧರ್ಮವೆಂದು ನಿಶ್ಚಿತಗೊಂಡಿದೆ.

03199016a ಪೂರ್ವಂ ಹಿ ವಿಹಿತಂ ಕರ್ಮ ದೇಹಿನಂ ನ ವಿಮುಂಚತಿ|

03199016c ಧಾತ್ರಾ ವಿಧಿರಯಂ ದೃಷ್ಟೋ ಬಹುಧಾ ಕರ್ಮನಿರ್ಣಯೇ||

ಏಕೆಂದರೆ, ಹಿಂದೆಯೇ ವಿಹಿತವಾಗಿರುವ ಕರ್ಮವು ದೇಹಿಯನ್ನು ಬಿಡುವುದಿಲ್ಲ. ಕರ್ಮವನ್ನು ನಿರ್ಣಯಿಸುವಾಗ ಧಾತ್ರುವು ಈ ವಿಧಿಯನ್ನು ಬಹುರೀತಿಗಳಲ್ಲಿ ನೋಡಿದನು.

03199017a ದ್ರಷ್ಟವ್ಯಂ ತು ಭವೇತ್ಪ್ರಾಜ್ಞ ಕ್ರೂರೇ ಕರ್ಮಣಿ ವರ್ತತಾ|

03199017c ಕಥಂ ಕರ್ಮ ಶುಭಂ ಕುರ್ಯಾಂ ಕಥಂ ಮುಚ್ಯೇ ಪರಾಭವಾತ್|

03199017e ಕರ್ಮಣಸ್ತಸ್ಯ ಘೋರಸ್ಯ ಬಹುಧಾ ನಿರ್ಣಯೋ ಭವೇತ್||

ಬ್ರಾಹ್ಮಣ! ಕ್ರೂರಕರ್ಮಗಳಲ್ಲಿ ತೊಡಗಿರುವವನು ಹೇಗೆ ಆ ಕರ್ಮವನ್ನು ಶುಭವನ್ನಾಗಿ ಮಾಡಬೇಕು ಮತ್ತು ಹೇಗೆ ಪರಾಭವದಿಂದ ತಪ್ಪಿಸಿಕೊಳ್ಳಬೇಕು ಎನ್ನುವುದನ್ನು ನೋಡಬೇಕಾಗುತ್ತದೆ. ಈ ಘೋರ ಕರ್ಮಗಳ ಕುರಿತು ಬಹುರೀತಿಯ ನಿರ್ಣಯಗಳಾಗುತ್ತವೆ.

03199018a ದಾನೇ ಚ ಸತ್ಯವಾಕ್ಯೇ ಚ ಗುರುಶುಶ್ರೂಷಣೇ ತಥಾ|

03199018c ದ್ವಿಜಾತಿಪೂಜನೇ ಚಾಹಂ ಧರ್ಮೇ ಚ ನಿರತಃ ಸದಾ|

03199018e ಅತಿವಾದಾತಿಮಾನಾಭ್ಯಾಂ ನಿವೃತ್ತೋಽಸ್ಮಿ ದ್ವಿಜೋತ್ತಮ||

ದ್ವಿಜೋತ್ತಮ! ನಾನು ಸದಾ ದಾನ, ಸತ್ಯವಾಕ್ಯ, ಗುರುಶುಶ್ರೂಷೆ, ದ್ವಿಜರ ಪೂಜೆ ಮತ್ತು ಧರ್ಮದಲ್ಲಿ ನಿರತನಾಗಿದ್ದೇನೆ. ನಾನು ಅತಿಯಾಗಿ ಮಾತನಾಡುವುದರಿಂದ ಮತ್ತು ಅತಿಯಾಗಿ ಜಂಬಕೊಚ್ಚಿಕೊಳ್ಳುವುದರಿಂದ ದೂರವಿರುತ್ತೇನೆ.

03199019a ಕೃಷಿಂ ಸಾಧ್ವಿತಿ ಮನ್ಯಂತೇ ತತ್ರ ಹಿಂಸಾ ಪರಾ ಸ್ಮೃತಾ|

03199019c ಕರ್ಷಂತೋ ಲಾಂಗಲೈಃ ಪುಂಸೋ ಘ್ನಂತಿ ಭೂಮಿಶಯಾನ್ಬಹೂನ್|

03199019e ಜೀವಾನನ್ಯಾಂಶ್ಚ ಬಹುಶಸ್ತತ್ರ ಕಿಂ ಪ್ರತಿಭಾತಿ ತೇ||

ಕೃಷಿಯು ಒಳ್ಳೆಯದೆಂದು ಅಭಿಪ್ರಾಯಪಡುತ್ತಾರೆ. ಅದರಲ್ಲಿಯೂ ಬಹಳಷ್ಟು ಹಿಂಸೆಗಳಾಗುತ್ತದೆ ಎಂದು ತಿಳಿದಿದೆ. ನೇಗಿಲನ್ನು ಎಳೆದು ಹೂಳುವ ನರರು ಭೂಮಿಯೊಳಗೆ ಜೀವಿಸುವ ಬಹಳ ಜೀವಿಗಳನ್ನು ಮತ್ತು ಇತರ ಅನೇಕಗಳನ್ನು ಕೊಲ್ಲುತ್ತಾರೆ. ನಿನಗೇನನ್ನಿಸುತ್ತದೆ?

03199020a ಧಾನ್ಯಬೀಜಾನಿ ಯಾನ್ಯಾಹುರ್ವ್ರೀಹ್ಯಾದೀನಿ ದ್ವಿಜೋತ್ತಮ|

03199020c ಸರ್ವಾಣ್ಯೇತಾನಿ ಜೀವಾನಿ ತತ್ರ ಕಿಂ ಪ್ರತಿಭಾತಿ ತೇ||

ದ್ವಿಜೋತ್ತಮ! ಧಾನ್ಯಬೀಜಗಳೆಂದು ಕರೆಯಲ್ಪಡುವ ಭತ್ತ ಮೊದಲಾದವುಗಳೆಲ್ಲವೂ ಜೀವಿಗಳೇ. ನಿನಗೇನನ್ನಿಸುತ್ತದೆ?

03199021a ಅಧ್ಯಾಕ್ರಮ್ಯ ಪಶೂಂಶ್ಚಾಪಿ ಘ್ನಂತಿ ವೈ ಭಕ್ಷಯಂತಿ ಚ|

03199021c ವೃಕ್ಷಾನಥೌಷಧೀಶ್ಚೈವ ಚಿಂದಂತಿ ಪುರುಷಾ ದ್ವಿಜ||

ದ್ವಿಜ! ಪುರುಷನು ಪಶುಗಳನ್ನು ಅತಿಕ್ರಮಿಸಿ ಕೊಂದು ತಿನ್ನುತ್ತಾನೆ. ಮರ ಔಷಧಗಳನ್ನೂ ಕಡಿಯುತ್ತಾನೆ.

03199022a ಜೀವಾ ಹಿ ಬಹವೋ ಬ್ರಹ್ಮನ್ವೃಕ್ಷೇಷು ಚ ಫಲೇಷು ಚ|

03199022c ಉದಕೇ ಬಹವಶ್ಚಾಪಿ ತತ್ರ ಕಿಂ ಪ್ರತಿಭಾತಿ ತೇ||

ಬ್ರಹ್ಮನ್! ಮರಗಳಲ್ಲಿ ಮತ್ತು ಫಲಗಳಲ್ಲಿಯೂ ಬಹಳಷ್ಟು ಜೀವಿಗಳಿರುತ್ತವೆ. ನೀರಿನಲ್ಲಿಯೂ ಕೂಡ ಅನೇಕವಿವೆ. ಇದರ ಕುರಿತು ನಿನಗೇನನ್ನಿಸುತ್ತದೆ?

03199023a ಸರ್ವಂ ವ್ಯಾಪ್ತಮಿದಂ ಬ್ರಹ್ಮನ್ಪ್ರಾಣಿಭಿಃ ಪ್ರಾಣಿಜೀವನೈಃ|

03199023c ಮತ್ಸ್ಯಾ ಗ್ರಸಂತೇ ಮತ್ಸ್ಯಾಂಶ್ಚ ತತ್ರ ಕಿಂ ಪ್ರತಿಭಾತಿ ತೇ||

ಬ್ರಹ್ಮನ್! ಎಲ್ಲವೂ ಪ್ರಾಣವಿರುವವುಗಳಿಂದ ಪ್ರಾಣಿಜೀವಿಗಳಿಂದ ತುಂಬಿದೆ. ಮೀನುಗಳು ಮೀನುಗಳನ್ನು ತಿನ್ನುತ್ತವೆ. ಇದರ ಕುರಿತು ನಿನಗೇನನ್ನಿಸುತ್ತದೆ?

03199024a ಸತ್ತ್ವೈಃ ಸತ್ತ್ವಾನಿ ಜೀವಂತಿ ಬಹುಧಾ ದ್ವಿಜಸತ್ತಮ|

03199024c ಪ್ರಾಣಿನೋಽನ್ಯೋನ್ಯಭಕ್ಷಾಶ್ಚ ತತ್ರ ಕಿಂ ಪ್ರತಿಭಾತಿ ತೇ||

ದ್ವಿಜಸತ್ತಮ! ಸತ್ವವುಳ್ಳವುಗಳು ಬಹಳಷ್ಟು ಸತ್ವವುಳ್ಳವುಗಳನ್ನು ಆಧರಿಸಿ ಜೀವಿಸುತ್ತವೆ. ಪ್ರಾಣಿಗಳು ಅನ್ಯೋನ್ಯರನ್ನು ತಿನ್ನುತ್ತವೆ. ಇದರ ಕುರಿತು ನಿನಗೇನನ್ನಿಸುತ್ತದೆ?

03199025a ಚಂಕ್ರಮ್ಯಮಾಣಾ ಜೀವಾಂಶ್ಚ ಧರಣೀಸಂಶ್ರಿತಾನ್ಬಹೂನ್|

03199025c ಪದ್ಭ್ಯಾಂ ಘ್ನಂತಿ ನರಾ ವಿಪ್ರ ತತ್ರ ಕಿಂ ಪ್ರತಿಭಾತಿ ತೇ||

ವಿಪ್ರ! ಕೇವಲ ನೆಲದ ಮೇಲೆ ನಡೆಯುವುದರಿಂದ ನರರು ನೆಲಕ್ಕೆ ಅಂಟಿಕೊಂಡಿರುವ ಅನೇಕ ಜೀವಿಗಳನ್ನು ಕಾಲಿನಿಂದ ತುಳಿಯುತ್ತಾರೆ. ಇದರ ಕುರಿತು ನಿನಗೇನನ್ನಿಸುತ್ತದೆ?

03199026a ಉಪವಿಷ್ಟಾಃ ಶಯಾನಾಶ್ಚ ಘ್ನಂತಿ ಜೀವಾನನೇಕಶಃ|

03199026c ಜ್ಞಾನವಿಜ್ಞಾನವಂತಶ್ಚ ತತ್ರ ಕಿಂ ಪ್ರತಿಭಾತಿ ತೇ||

ಕುಳಿತಿರುವ, ಮಲಗಿರುವ, ಜ್ಞಾನ-ವಿವೇಕಗಳಿರುವ ಅನೇಕಾನೇಕ ಜೀವಿಗಳು ನಾಶಹೊಂದುತ್ತವೆ. ಇದರ ಕುರಿತು ನಿನಗೇನನ್ನಿಸುತ್ತದೆ?

03199027a ಜೀವೈರ್ಗ್ರಸ್ತಮಿದಂ ಸರ್ವಮಾಕಾಶಂ ಪೃಥಿವೀ ತಥಾ|

03199027c ಅವಿಜ್ಞಾನಾಚ್ಚ ಹಿಂಸಂತಿ ತತ್ರ ಕಿಂ ಪ್ರತಿಭಾತಿ ತೇ||

ತಿಳಿಯದೇ ಅವರು ಈ ಆಕಾಶ ಮತ್ತು ಭೂಮಿಯಲ್ಲಿ ತುಂಬಿರುವ ಎಲ್ಲ ಜೀವಗಳನ್ನು ಹಿಂಸಿಸುತ್ತಾರೆ. ಇದರ ಕುರಿತು ನಿನಗೇನನ್ನಿಸುತ್ತದೆ?

03199028a ಅಹಿಂಸೇತಿ ಯದುಕ್ತಂ ಹಿ ಪುರುಷೈರ್ವಿಸ್ಮಿತೈಃ ಪುರಾ|

03199028c ಕೇ ನ ಹಿಂಸಂತಿ ಜೀವನ್ವೈ ಲೋಕೇಽಸ್ಮಿನ್ದ್ವಿಜಸತ್ತಮ|

03199028e ಬಹು ಸಂಚಿಂತ್ಯ ಇಹ ವೈ ನಾಸ್ತಿ ಕಶ್ಚಿದಹಿಂಸಕಃ||

ದ್ವಿಜಸತ್ತಮ! ಹಿಂದೆ ಪುರುಷರು ವಿಸ್ಮಿತರಾಗಿ ಅಹಿಂಸೆ ಎಂದು ಹೇಳಿದ್ದರು. ಆದರೆ ಈ ಲೋಕದಲ್ಲಿ ಯಾರುತಾನೇ ಜೀವವಿರುವ ಯಾವುದನ್ನೂ ಹಿಂಸಿಸದೇ ಇದ್ದಾನೆ? ಬಹಳಷ್ಟು ಚಿಂತಿಸಿದರೂ ಇಲ್ಲಿ ಅಹಿಂಸಕನು ಯಾರೂ ಇಲ್ಲ.

03199029a ಅಹಿಂಸಾಯಾಂ ತು ನಿರತಾ ಯತಯೋ ದ್ವಿಜಸತ್ತಮ|

03199029c ಕುರ್ವಂತ್ಯೇವ ಹಿ ಹಿಂಸಾಂ ತೇ ಯತ್ನಾದಲ್ಪತರಾ ಭವೇತ್||

ದ್ವಿಜಸತ್ತಮ! ಅಹಿಂಸೆಯಲ್ಲಿ ನಿರತರಾದ ಯತಿಗಳೂ ಕೂಡ ಹಿಂಸೆಯನ್ನೆಸಗುತ್ತಾರೆ. ಆದರೆ ಅವರ ಪ್ರಯತ್ನದಿಂದ ಅವು ಕಡಿಮೆಯಾಗುತ್ತವೆ.

03199030a ಆಲಕ್ಷ್ಯಾಶ್ಚೈವ ಪುರುಷಾಃ ಕುಲೇ ಜಾತಾ ಮಹಾಗುಣಾಃ|

03199030c ಮಹಾಘೋರಾಣಿ ಕರ್ಮಾಣಿ ಕೃತ್ವಾ ಲಜ್ಜಂತಿ ವೈ ನ ಚ||

ನಾವು ನೋಡುವಂತೆಯೇ ಮಹಾಗುಣಗಳ, ಉತ್ತಮ ಕುಲದಲ್ಲಿ ಜನಿಸಿದವರು ಮಹಾ ಘೋರ ಕರ್ಮಗಳನ್ನು ಮಾಡಿಯೂ ಅದರಿಂದ ನಾಚಿಕೆಪಟ್ಟುಕೊಂಡಿಲ್ಲ.

03199031a ಸುಹೃದಃ ಸುಹೃದೋಽನ್ಯಾಂಶ್ಚ ದುರ್ಹೃದಶ್ಚಾಪಿ ದುರ್ಹೃದಃ|

03199031c ಸಮ್ಯಕ್ಪ್ರವೃತ್ತಾನ್ಪುರುಷಾನ್ನ ಸಮ್ಯಗನುಪಶ್ಯತಃ||

ಸ್ನೇಹಿತರು ಸ್ನೇಹಿತರನ್ನು, ವೈರಿಗಳು ವೈರಿಗಳನ್ನು, ಒಳ್ಳೆಯ ನಡತೆಯುಳ್ಳವರು ಒಳ್ಳೆಯ ನಡತೆಯಲ್ಲಿರುವವರನ್ನು ಸ್ವಾಗತಿಸುವುದಿಲ್ಲ.

03199032a ಸಮೃದ್ಧೈಶ್ಚ ನ ನಂದಂತಿ ಬಾಂಧವಾ ಬಾಂಧವೈರಪಿ|

03199032c ಗುರೂಂಶ್ಚೈವ ವಿನಿಂದಂತಿ ಮೂಢಾಃ ಪಂಡಿತಮಾನಿನಃ||

ಬಾಂಧವರು ಶ್ರೀಮಂತ ಬಾಂಧವರನ್ನು ನೋಡಿ ಸಂತೋಷ ಪಡುವುದಿಲ್ಲ. ಪಂಡಿತರೆಂದು ತಿಳಿದುಕೊಂಡ ಮೂಢರು ಗುರುಗಳನ್ನೂ ನಿಂದಿಸುತ್ತಾರೆ.

03199033a ಬಹು ಲೋಕೇ ವಿಪರ್ಯಸ್ತಂ ದೃಶ್ಯತೇ ದ್ವಿಜಸತ್ತಮ|

03199033c ಧರ್ಮಯುಕ್ತಮಧರ್ಮಂ ಚ ತತ್ರ ಕಿಂ ಪ್ರತಿಭಾತಿ ತೇ||

ಲೋಕದಲ್ಲಿ ಧರ್ಮ ಮತ್ತು ಅಧರ್ಮಯುಕ್ತವಾದ ಬಹಳಷ್ಟು ವಿಪರ್ಯಾಸಗಳು ಕಾಣುತ್ತವೆ. ಇದರ ಕುರಿತು ನಿನಗೇನನ್ನಿಸುತ್ತದೆ?

03199034a ವಕ್ತುಂ ಬಹುವಿಧಂ ಶಕ್ಯಂ ಧರ್ಮಾಧರ್ಮೇಷು ಕರ್ಮಸು|

03199034c ಸ್ವಕರ್ಮನಿರತೋ ಯೋ ಹಿ ಸ ಯಶಃ ಪ್ರಾಪ್ನುಯಾನ್ಮಹತ್||

ಧರ್ಮ ಮತ್ತು ಅಧರ್ಮ ಕರ್ಮಗಳ ಕುರಿತು ಬಹಳಷ್ಟನ್ನು ಹೇಳಬಹುದು. ಆದರೆ ಸ್ವಕರ್ಮದಲ್ಲಿ ನಿರತನಾದವನು ಮಹಾ ಯಶಸ್ಸನ್ನು ಪಡೆಯುತ್ತಾನೆ.””

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಪತಿವ್ರತೋಪಾಖ್ಯಾನೇ ಬ್ರಾಹ್ಮಣವ್ಯಾಧಸಂವಾದೇ ಏಕೋನದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಪತಿವ್ರತೋಪಾಖ್ಯಾನದಲ್ಲಿ ಬ್ರಾಹ್ಮಣವ್ಯಾಧಸಂವಾದಲ್ಲಿ ನೂರಾತೊಂಭತ್ತೊಂಭತ್ತನೆಯ ಅಧ್ಯಾಯವು.

Related image

[1] ಸೌದಾಸನು ನರಮಾಂಸ ಭಕ್ಷಕ ನಾದ ಕಥೆಯು ಆದಿ ಪರ್ವದ ಅಧ್ಯಾಯ ೧೬೭ರಲ್ಲಿ ಬಂದಿದೆ.

Comments are closed.