Aranyaka Parva: Chapter 189

ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ

೧೮೯

ಕಲ್ಕಿಯಿಂದ ಕೃತಯುಗದ ಪ್ರಾರಂಭ (೧-೧೬). ಆತ್ಮವನ್ನು ಧರ್ಮದಲ್ಲಿ ತೊಡಗಿಸಿಕೊಳ್ಳಬೇಕೆಂದು ಮಾರ್ಕಂಡೇಯನು ಯುಧಿಷ್ಠಿರನಿಗೆ ಉಪದೇಶಿಸುವುದು (೧೭-೩೧).

03189001 ಮಾರ್ಕಂಡೇಯ ಉವಾಚ|

03189001a ತತಶ್ಚೋರಕ್ಷಯಂ ಕೃತ್ವಾ ದ್ವಿಜೇಭ್ಯಃ ಪೃಥಿವೀಮಿಮಾಂ|

03189001c ವಾಜಿಮೇಧೇ ಮಹಾಯಜ್ಞೇ ವಿಧಿವತ್ಕಲ್ಪಯಿಷ್ಯತಿ||

ಮಾರ್ಕಂಡೇಯನು ಹೇಳಿದನು: “ಚೋರರನ್ನು ನಾಶಮಾಡಿ ಅವನು ಮಹಾಯಜ್ಞ ಅಶ್ವಮೇಧದಲ್ಲಿ ವಿಧಿವತ್ತಾಗಿ ಈ ಭೂಮಿಯನ್ನು ದ್ವಿಜರಿಗೆ ಒಪ್ಪಿಸುತ್ತಾನೆ.

03189002a ಸ್ಥಾಪಯಿತ್ವಾ ಸ ಮರ್ಯಾದಾಃ ಸ್ವಯಂಭುವಿಹಿತಾಃ ಶುಭಾಃ|

03189002c ವನಂ ಪುಣ್ಯಯಶಃಕರ್ಮಾ ಜರಾವಾನ್ಸಂಶ್ರಯಿಷ್ಯತಿ||

ಅವನು ಸ್ವಯಂಭುವಿನಿಂದ ವಿಹಿತವಾದ ಮರ್ಯಾದೆಗಳನ್ನು ಪುನಃ ಸ್ಥಾಪನೆಮಾಡಿ ಪುಣ್ಯಕರವೂ ಯಶಕರವೂ ಆದ ಕರ್ಮಗಳನ್ನು ಮಾಡಿ ವೃದ್ಧಾಪ್ಯದಲ್ಲಿ ವನದಲ್ಲಿ ವಾಸಿಸುತ್ತಾನೆ.

03189003a ತಚ್ಚೀಲಮನುವರ್ತ್ಸ್ಯಂತೇ ಮನುಷ್ಯಾ ಲೋಕವಾಸಿನಃ|

03189003c ವಿಪ್ರೈಶ್ಚೋರಕ್ಷಯೇ ಚೈವ ಕೃತೇ ಕ್ಷೇಮಂ ಭವಿಷ್ಯತಿ||

ಅವನ ಶೀಲವನ್ನೇ ಲೋಕವಾಸಿಗಳಾದ ಮನುಷ್ಯರು ಅನುಸರಿಸುವರು. ವಿಪ್ರರಿಂದ ಚೋರರು ನಾಶಗೊಳ್ಳಲು ಕೃತಯುಗದಲ್ಲಿ ಕ್ಷೇಮವುಂಟಾಗುತ್ತದೆ.

03189004a ಕೃಷ್ಣಾಜಿನಾನಿ ಶಕ್ತೀಶ್ಚ ತ್ರಿಶೂಲಾನ್ಯಾಯುಧಾನಿ ಚ|

03189004c ಸ್ಥಾಪಯನ್ವಿಪ್ರಶಾರ್ದೂಲೋ ದೇಶೇಷು ವಿಜಿತೇಷು ಚ||

03189005a ಸಂಸ್ತೂಯಮಾನೋ ವಿಪ್ರೇಂದ್ರೈರ್ಮಾನಯಾನೋ ದ್ವಿಜೋತ್ತಮಾನ್|

03189005c ಕಲ್ಕಿಶ್ಚರಿಷ್ಯತಿ ಮಹೀಂ ಸದಾ ದಸ್ಯುವಧೇ ರತಃ||

ಆ ವಿಪ್ರಶಾರ್ದೂಲ ಕಲ್ಕಿಯು ಜಯಿಸಿದ ದೇಶಗಳಲ್ಲಿ ಕೃಷ್ಣಾಜಿನ, ಶಕ್ತಿ, ತ್ರಿಶೂಲ ಮತ್ತು ಆಯುಧಗಳನ್ನು ಸ್ಥಾಪಿಸಿ, ಮಾನಿನಿಗಳಾದ ದ್ವಿಜೋತ್ತಮ ವಿಪ್ರೇಂದ್ರರಿಂದ ಸ್ತುತಿಸಲ್ಪಟ್ಟು, ಸದಾ ದಸ್ಯುಗಳ ವಧೆಯಲ್ಲಿ ನಿರತನಾಗಿ ಭೂಮಿಯಲ್ಲಿ ಸಂಚರಿಸುತ್ತಾನೆ.

03189006a ಹಾ ತಾತ ಹಾ ಸುತೇತ್ಯೇವಂ ತಾಸ್ತಾ ವಾಚಃ ಸುದಾರುಣಾಃ|

03189006c ವಿಕ್ರೋಶಮಾನಾನ್ಸುಭೃಶಂ ದಸ್ಯೂನ್ನೇಷ್ಯತಿ ಸಂಕ್ಷಯಂ||

ಇವನು ದಸ್ಯುಗಳ ನಾಶವನ್ನು ನಡೆಸುತ್ತಿರುವಾಗ ಅವರು ಹಾ ತಂದೇ! ಹಾ ಮಗನೇ! ಎಂದು ದಾರುಣವಾಗಿ ಕೂಗಿ ಕರೆಯುತ್ತಿರುವುದು ಕೇಳಿಬರುತ್ತದೆ.

03189007a ತತೋಽಧರ್ಮವಿನಾಶೋ ವೈ ಧರ್ಮವೃದ್ಧಿಶ್ಚ ಭಾರತ|

03189007c ಭವಿಷ್ಯತಿ ಕೃತೇ ಪ್ರಾಪ್ತೇ ಕ್ರಿಯಾವಾಂಶ್ಚ ಜನಸ್ತಥಾ||

ಭಾರತ! ಕೃತವು ಪ್ರಾಪ್ತವಾದಾಗ ಅಧರ್ಮವು ವಿನಾಶವಾಗಿ ಧರ್ವವು ವೃದ್ಧಿಯಾಗುತ್ತದೆ. ಆಗ ಜನರು ಕ್ರಿಯಾಶಾಲಿಗಳಾಗುತ್ತಾರೆ.

03189008a ಆರಾಮಾಶ್ಚೈವ ಚೈತ್ಯಾಶ್ಚ ತಟಾಕಾನ್ಯವಟಾಸ್ತಥಾ|

03189008c ಯಜ್ಞಕ್ರಿಯಾಶ್ಚ ವಿವಿಧಾ ಭವಿಷ್ಯಂತಿ ಕೃತೇ ಯುಗೇ||

ಕೃತಯುಗದಲ್ಲಿ ಉದ್ಯಾನಗಳು, ಚೈತ್ಯಗಳು, ತಟಾಕಗಳು, ಮತ್ತು ವಟಗಳು ಮತ್ತು ವಿವಿಧ ಯಜ್ಞಕ್ರಿಯೆಗಳು ನಡೆಯುತ್ತವೆ.

03189009a ಬ್ರಾಹ್ಮಣಾಃ ಸಾಧವಶ್ಚೈವ ಮುನಯಶ್ಚ ತಪಸ್ವಿನಃ|

03189009c ಆಶ್ರಮಾಃ ಸಹಪಾಷಂಡಾಃ ಸ್ಥಿತಾಃ ಸತ್ಯೇ ಜನಾಃ ಪ್ರಜಾಃ||

ಬ್ರಾಹ್ಮಣರು ಸಾಧುಗಳಾಗಿರುತ್ತಾರೆ; ಮುನಿಗಳು ತಪಸ್ವಿಗಳಾಗುತ್ತಾರೆ; ಪಾಷಂಡಗಳಾಗಿದ್ದ ಆಶ್ರಮಗಳು ಸತ್ಯದಲ್ಲಿ ನೆಲೆಗೊಳ್ಳುತ್ತವೆ ಮತ್ತು ಜನರು ಪ್ರಜೆಗಳಾಗುತ್ತಾರೆ.

03189010a ಜಾಸ್ಯಂತಿ ಸರ್ವಬೀಜಾನಿ ಉಪ್ಯಮಾನಾನಿ ಚೈವ ಹ|

03189010c ಸರ್ವೇಷ್ವೃತುಷು ರಾಜೇಂದ್ರ ಸರ್ವಂ ಸಸ್ಯಂ ಭವಿಷ್ಯತಿ||

ರಾಜೇಂದ್ರ! ಬಿತ್ತಿದ ಬೀಜಗಳೆಲ್ಲವೂ ಬೆಳೆಯುತ್ತವೆ ಮತ್ತು ಎಲ್ಲ ಋತುಗಳಲ್ಲಿಯೂ ಬೆಳೆಗಳು ಬೆಳೆಯುತ್ತವೆ.

03189011a ನರಾ ದಾನೇಷು ನಿರತಾ ವ್ರತೇಷು ನಿಯಮೇಷು ಚ|

03189011c ಜಪಯಜ್ಞಪರಾ ವಿಪ್ರಾ ಧರ್ಮಕಾಮಾ ಮುದಾ ಯುತಾಃ||

03189011e ಪಾಲಯಿಷ್ಯಂತಿ ರಾಜಾನೋ ಧರ್ಮೇಣೇಮಾಂ ವಸುಂಧರಾಂ||

ನರರು ದಾನಗಳಲ್ಲಿ ವ್ರತಗಳಲ್ಲಿ ನಿಯಮಗಳಲ್ಲಿ ನಿರತರಾಗಿರುತ್ತಾರೆ. ವಿಪ್ರರು ಜಪ-ಯಜ್ಞಪರರಾಗಿ, ಧರ್ಮವನ್ನೇ ಬಯಸಿ ಸಂತೋಷದಿಂದಿರುತ್ತಾರೆ. ರಾಜರು ಈ ವಸುಂಧರೆಯನ್ನು ಧರ್ಮದಿಂದ ಪಾಲಿಸುತ್ತಾರೆ.

03189012a ವ್ಯವಹಾರರತಾ ವೈಶ್ಯಾ ಭವಿಷ್ಯಂತಿ ಕೃತೇ ಯುಗೇ|

03189012c ಷಟ್ಕರ್ಮನಿರತಾ ವಿಪ್ರಾಃ ಕ್ಷತ್ರಿಯಾ ರಕ್ಷಣೇ ರತಾಃ||

03189013a ಶುಶ್ರೂಷಾಯಾಂ ರತಾಃ ಶೂದ್ರಾಸ್ತಥಾ ವರ್ಣತ್ರಯಸ್ಯ ಚ|

ಕೃತಯುಗದಲ್ಲಿ ವೈಶ್ಯರು ವ್ಯವಹಾರದಲ್ಲಿ ನಿರತರಾಗಿರುತ್ತಾರೆ; ವಿಪ್ರರು ಷಟ್ಕರ್ಮ ನಿರತರಾಗಿರುತ್ತಾರೆ; ಕ್ಷತ್ರಿಯರು ರಕ್ಷಣೆಯಲ್ಲಿ ತೊಡಗಿರುತ್ತಾರೆ ಮತ್ತು ಶೂದ್ರರು ಈ ಮೂರು ವರ್ಣದವರ ಶುಶ್ರೂಷೆಯಲ್ಲಿ ನಿರತರಾಗಿರುತ್ತಾರೆ[1].

03189013c ಏಷ ಧರ್ಮಃ ಕೃತಯುಗೇ ತ್ರೇತಾಯಾಂ ದ್ವಾಪರೇ ತಥಾ||

03189013e ಪಶ್ಚಿಮೇ ಯುಗಕಾಲೇ ಚ ಯಃ ಸ ತೇ ಸಂಪ್ರಕೀರ್ತಿತಃ||

ನಾನು ವರ್ಣಿಸಿದ ಇದು ಕೃತಯುಗ, ತ್ರೇತ, ಮತ್ತು ದ್ವಾಪರ ಹಾಗೂ ಯುಗದ ಅಂತ್ಯಕಾಲಗಳ ಧರ್ಮ.

03189014a ಸರ್ವಲೋಕಸ್ಯ ವಿದಿತಾ ಯುಗಸಂಖ್ಯಾ ಚ ಪಾಂಡವ|

03189014c ಏತತ್ತೇ ಸರ್ವಮಾಖ್ಯಾತಮತೀತಾನಾಗತಂ ಮಯಾ||

03189014e ವಾಯುಪ್ರೋಕ್ತಮನುಸ್ಮೃತ್ಯ ಪುರಾಣಮೃಷಿಸಂಸ್ತುತಂ||

ಪಾಂಡವ! ಯುಗಗಳ ಸಂಖ್ಯೆಗಳನ್ನು ಸರ್ವಲೋಕಗಳಿಗೂ ತಿಳಿದಿದೆ. ನನಗೆ ನೆನಪಿದ್ದಷ್ಟು ಕಳೆದ ಮತ್ತು ಮುಂದಾದವುಗಳೆಲ್ಲವನ್ನೂ ನಾನು ಹೇಳಿದ್ದೇನೆ. ವಾಯುವು ಹೇಳಿದ್ದ ಇದನ್ನು ಋಷಿಗಳು ಪುರಾಣದಲ್ಲಿ ಸಂಗ್ರಹಿಸಿದ್ದಾರೆ[2].

03189015a ಏವಂ ಸಂಸಾರಮಾರ್ಗಾ ಮೇ ಬಹುಶಶ್ಚಿರಜೀವಿನಾ|

03189015c ದೃಷ್ಟಾಶ್ಚೈವಾನುಭೂತಾಶ್ಚ ತಾಂಸ್ತೇ ಕಥಿತವಾನಹಂ||

ಚಿರಂಜೀವಿಯಾದ ನಾನು ಬಹಳ ಬಾರಿ ಈ ಸಂಸಾರಮಾರ್ಗವನ್ನು ನೋಡಿದ್ದೇನೆ ಅನುಭವಿಸಿದ್ದೇನೆ. ಅವುಗಳನ್ನು ನಾನು ನಿನಗೆ ಹೇಳಿದ್ದೇನೆ.

03189016a ಇದಂ ಚೈವಾಪರಂ ಭೂಯಃ ಸಹ ಭ್ರಾತೃಭಿರಚ್ಯುತ|

03189016c ಧರ್ಮಸಂಶಯಮೋಕ್ಷಾರ್ಥಂ ನಿಬೋಧ ವಚನಂ ಮಮ||

ಈಗ ಅಚ್ಯುತ! ಭ್ರಾತೃಗಳೊಂದಿಗೆ ಧರ್ಮಸಂಶಯವನ್ನು ಹೋಗಲಾಡಿಸುವ ನನ್ನ ಈ ಮಾತುಗಳನ್ನು ಕೇಳು.

03189017a ಧರ್ಮೇ ತ್ವಯಾತ್ಮಾ ಸಂಯೋಜ್ಯೋ ನಿತ್ಯಂ ಧರ್ಮಭೃತಾಂ ವರ|

03189017c ಧರ್ಮಾತ್ಮಾ ಹಿ ಸುಖಂ ರಾಜಾ ಪ್ರೇತ್ಯ ಚೇಹ ಚ ನಂದತಿ||

ಧರ್ಮಭೃತರಲ್ಲಿ ಶ್ರೇಷ್ಠ! ನಿನ್ನ ಆತ್ಮವನ್ನು ಧರ್ಮದೊಡನೆ ಜೋಡಿಸಿಕೋ! ರಾಜ! ಧರ್ಮಾತ್ಮನೇ ಇಲ್ಲಿಯ ಮತ್ತು ನಂತರದ ಸುಖವನ್ನು ಅನುಭವಿಸುತ್ತಾನೆ.

03189018a ನಿಬೋಧ ಚ ಶುಭಾಂ ವಾಣೀಂ ಯಾಂ ಪ್ರವಕ್ಷ್ಯಾಮಿ ತೇಽನಘ|

03189018c ನ ಬ್ರಾಹ್ಮಣೇ ಪರಿಭವಃ ಕರ್ತವ್ಯಸ್ತೇ ಕದಾ ಚನ||

03189018e ಬ್ರಾಹ್ಮಣೋ ರುಷಿತೋ ಹನ್ಯಾದಪಿ ಲೋಕಾನ್ಪ್ರತಿಜ್ಞಯಾ||

ಅನಘ! ನಾನು ನಿನಗೆ ಹೇಳುವ ಈ ಶುಭ ವಾಣಿಯನ್ನು ಕೇಳು. ಎಂದೂ ಬ್ರಾಹ್ಮಣನನ್ನು ಸೋಲಿಸುವ ಕರ್ತವ್ಯವನ್ನು ಮಾಡಬೇಡ! ಕೋಪಗೊಂಡ ಬ್ರಾಹ್ಮಣನು ಪ್ರತಿಜ್ಞೆಯಿಂದ ಲೋಕಗಳನ್ನೇ ನಾಶಪಡಿಸುತ್ತಾನೆ.””

03189019 ವೈಶಂಪಾಯನ ಉವಾಚ|

03189019a ಮಾರ್ಕಂಡೇಯವಚಃ ಶ್ರುತ್ವಾ ಕುರೂಣಾಂ ಪ್ರವರೋ ನೃಪಃ|

03189019c ಉವಾಚ ವಚನಂ ಧೀಮಾನ್ಪರಮಂ ಪರಮದ್ಯುತಿಃ||

ವೈಶಂಪಾಯನನು ಹೇಳಿದನು: “ಮಾರ್ಕಂಡೇಯನ ಮಾತನ್ನು ಕೇಳಿ ಕುರುಗಳ ಪ್ರವರ ನೃಪ ಧೀಮಂತ ಪರಮದ್ಯುತಿಯು ಶ್ರೇಷ್ಠವಾದ ಈ ಮಾತನ್ನಾಡಿದನು.

03189020a ಕಸ್ಮಿನ್ಧರ್ಮೇ ಮಯಾ ಸ್ಥೇಯಂ ಪ್ರಜಾಃ ಸಂರಕ್ಷತಾ ಮುನೇ|

03189020c ಕಥಂ ಚ ವರ್ತಮಾನೋ ವೈ ನ ಚ್ಯವೇಯಂ ಸ್ವಧರ್ಮತಃ||

“ಮುನೇ! ನಾನು ಪ್ರಜೆಗಳನ್ನು ಸಂರಕ್ಷಿಸಬೇಕಾದರೆ ಯಾವ ಧರ್ಮವನ್ನು ಪಾಲಿಸಬೇಕು? ಸ್ವಧರ್ಮದಿಂದ ಚ್ಯುತಿಹೊಂದದೇ ನಾನು ಹೇಗೆ ನಡೆದುಕೊಳ್ಳಲಿ?”

03189021 ಮಾರ್ಕಂಡೇಯ ಉವಾಚ|

03189021a ದಯಾವಾನ್ಸರ್ವಭೂತೇಷು ಹಿತೋ ರಕ್ತೋಽನಸೂಯಕಃ|

03189021c ಅಪತ್ಯಾನಾಮಿವ ಸ್ವೇಷಾಂ ಪ್ರಜಾನಾಂ ರಕ್ಷಣೇ ರತಃ||

03189021e ಚರ ಧರ್ಮಂ ತ್ಯಜಾಧರ್ಮಂ ಪಿತೄನ್ದೇವಾಂಶ್ಚ ಪೂಜಯ||

ಮಾರ್ಕಂಡೇಯನು ಹೇಳಿದನು: “ಸರ್ವಭೂತಗಳಿಗೆ ದಯಾವಂತನಾಗಿರು. ಅನಸೂಯಕನಾಗಿ ಅವರ ಹಿತಗಳಲ್ಲಿ ನಿರತನಾಗಿರು. ನಿನ್ನದೇ ಮಕ್ಕಳಂತೆ ಪ್ರಜೆಗಳ ರಕ್ಷಣೆಯಲ್ಲಿ ನಿರತನಾಗಿರು. ಅಧರ್ಮವನ್ನು ತೊರೆದು ಧರ್ಮದಲ್ಲಿ ನಡೆ. ಪಿತೃಗಳನ್ನು ಮತ್ತು ದೇವತೆಗಳನ್ನು ಪೂಜಿಸು.

03189022a ಪ್ರಮಾದಾದ್ಯತ್ಕೃತಂ ತೇಽಭೂತ್ಸಮ್ಯಗ್ದಾನೇನ ತಜ್ಜಯ|

03189022c ಅಲಂ ತೇ ಮಾನಮಾಶ್ರಿತ್ಯ ಸತತಂ ಪರವಾನ್ಭವ||

ಅಪ್ರಮಾದದಿಂದ ಮಾಡಿದವುಗಳನ್ನು ಉತ್ತಮ ದಾನಗಳಿಂದ ಜಯಿಸು. ಮಾನವನ್ನು ತೊರೆ. ವಿನೀತನಾಗು.

03189023a ವಿಜಿತ್ಯ ಪೃಥಿವೀಂ ಸರ್ವಾಂ ಮೋದಮಾನಃ ಸುಖೀ ಭವ|

03189023c ಏಷ ಭೂತೋ ಭವಿಷ್ಯಶ್ಚ ಧರ್ಮಸ್ತೇ ಸಮುದೀರಿತಃ||

ಸರ್ವ ಪೃಥಿವಿಯನ್ನೂ ಗೆದ್ದು ಸಂತೋಷಗೊಂಡು ಸುಖಿಯಾಗು. ಹಿಂದಿನ ಮತ್ತು ಮುಂದಿನ ಈ ಧರ್ಮವನ್ನು ನಾನು ನಿನಗೆ ಹೇಳಿದ್ದೇನೆ.

03189024a ನ ತೇಽಸ್ತ್ಯವಿದಿತಂ ಕಿಂ ಚಿದತೀತಾನಾಗತಂ ಭುವಿ|

03189024c ತಸ್ಮಾದಿಮಂ ಪರಿಕ್ಲೇಶಂ ತ್ವಂ ತಾತ ಹೃದಿ ಮಾ ಕೃಥಾಃ||

ಭುವಿಯಲ್ಲಿ ಹಿಂದಿನ ಮುಂದಿನವುಗಳೆಲ್ಲವೂ ನಿನಗೆ ತಿಳಿದಿವೆ. ಆದುದರಿಂದ ಮಗೂ! ನಿನ್ನ ಹೃದಯದಲ್ಲಿರುವ ಈ ಪರಿಕ್ಲೇಶವನ್ನು ತೊರೆ.

03189025a ಏಷ ಕಾಲೋ ಮಹಾಬಾಹೋ ಅಪಿ ಸರ್ವದಿವೌಕಸಾಂ|

03189025c ಮುಹ್ಯಂತಿ ಹಿ ಪ್ರಜಾಸ್ತಾತ ಕಾಲೇನಾಭಿಪ್ರಚೋದಿತಾಃ||

ಮಹಾಬಾಹೋ! ಮಗೂ! ಕಾಲದಿಂದ ಪ್ರಚೋದಿತರಾಗಿ ಈ ಕಾಲದಲ್ಲಿ ಸರ್ವ ದಿವೌಕಸರೂ ಪ್ರಜೆಗಳೂ ಗೊಂದಲಗಳಲ್ಲಿದ್ದಾರೆ.

03189026a ಮಾ ಚ ತೇಽತ್ರ ವಿಚಾರೋ ಭೂದ್ಯನ್ಮಯೋಕ್ತಂ ತವಾನಘ|

03189026c ಅತಿಶಂಕ್ಯ ವಚೋ ಹ್ಯೇತದ್ಧರ್ಮಲೋಪೋ ಭವೇತ್ತವ||

ಅನಘ! ನಾನು ನಿನಗೆ ಹೇಳಿದುದರ ಕುರಿತು ತುಂಬಾ ವಿಚಾರಮಾಡಬೇಡ. ನನ್ನ ವಚನಗಳ ಮೇಲೆ ಅತಿಯಾದ ಶಂಕೆಯೇ ನಿನ್ನ ಧರ್ಮಲೋಪಕ್ಕೆ ಕಾರಣವಾಗಬಹುದು.

03189027a ಜಾತೋಽಸಿ ಪ್ರಥಿತೇ ವಂಶೇ ಕುರೂಣಾಂ ಭರತರ್ಷಭ|

03189027c ಕರ್ಮಣಾ ಮನಸಾ ವಾಚಾ ಸರ್ವಮೇತತ್ಸಮಾಚರ||

ಭರತರ್ಷಭ! ಪ್ರಥಿತವಾದ ಕುರುಗಳ ವಂಶದಲ್ಲಿ ಜನಿಸಿರುವೆ. ಈಗ ಕರ್ಮದಲ್ಲಿ, ಮನಸ್ಸಿನಲ್ಲಿ ಮತ್ತು ಮಾತಿನಲ್ಲಿ ಎಲ್ಲವನ್ನೂ ಆಚರಿಸು.”

03189028 ಯುಧಿಷ್ಠಿರ ಉವಾಚ|

03189028a ಯತ್ತ್ವಯೋಕ್ತಂ ದ್ವಿಜಶ್ರೇಷ್ಠ ವಾಕ್ಯಂ ಶ್ರುತಿಮನೋಹರಂ|

03189028c ತಥಾ ಕರಿಷ್ಯೇ ಯತ್ನೇನ ಭವತಃ ಶಾಸನಂ ವಿಭೋ||

ಯುಧಿಷ್ಠಿರನು ಹೇಳಿದನು: “ವಿಭೋ! ದ್ವಿಜಶ್ರೇಷ್ಠ! ನೀನು ಹೇಳಿದ ಮಾತುಗಳು ಕೇಳಲು ಮನೋಹರವಾಗಿವೆ. ನಿನ್ನ ಶಾಸನದಂತೆ ಮಾಡಲು ಪ್ರಯತ್ನಿಸುತ್ತೇನೆ.

03189029a ನ ಮೇ ಲೋಭೋಽಸ್ತಿ ವಿಪ್ರೇಂದ್ರ ನ ಭಯಂ ನ ಚ ಮತ್ಸರಃ|

03189029c ಕರಿಷ್ಯಾಮಿ ಹಿ ತತ್ಸರ್ವಮುಕ್ತಂ ಯತ್ತೇ ಮಯಿ ಪ್ರಭೋ||

ವಿಪ್ರೇಂದ್ರ! ನನ್ನಲ್ಲಿ ಲೋಭವಿಲ್ಲ, ಭಯವಿಲ್ಲ ಮತ್ತು ಮತ್ಸರವಿಲ್ಲ. ಪ್ರಭೋ! ನೀನು ನನಗೆ ಹೇಳಿದುದೆಲ್ಲವನ್ನು ಮಾಡುತ್ತೇನೆ.””

03189030 ವೈಶಂಪಾಯನ ಉವಾಚ|

03189030a ಶ್ರುತ್ವಾ ತು ವಚನಂ ತಸ್ಯ ಪಾಂಡವಸ್ಯ ಮಹಾತ್ಮನಃ|

03189030c ಪ್ರಹೃಷ್ಟಾಃ ಪಾಂಡವಾ ರಾಜನ್ಸಹಿತಾಃ ಶಾಂರ್ಙ್ಗಧನ್ವನಾ||

ವೈಶಂಪಾಯನನು ಹೇಳಿದನು: “ರಾಜನ್! ಆ ಮಹಾತ್ಮ ಪಾಂಡವನ ಮಾತುಗಳನ್ನು ಕೇಳಿ ಶಾಂರ್ಙ್ಗಧನ್ವಿಯ ಸಹಿತ ಪಾಂಡವರು ಹರ್ಷಿತರಾದರು.

03189031a ತಥಾ ಕಥಾಂ ಶುಭಾಂ ಶ್ರುತ್ವಾ ಮಾರ್ಕಂಡೇಯಸ್ಯ ಧೀಮತಃ|

03189031c ವಿಸ್ಮಿತಾಃ ಸಮಪದ್ಯಂತ ಪುರಾಣಸ್ಯ ನಿವೇದನಾತ್||

ಧೀಮಂತ ಮಾರ್ಕಂಡೇಯನಿಂದ ಶುಭ ಕಥನಗಳನ್ನು, ಪುರಾಣದ ವರ್ಣನೆಗಳನ್ನು ಕೇಳಿ ಅವರು ವಿಸ್ಮಿತರಾದರು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಯುಧಿಷ್ಠಿರಾನುಶಾಸನೇ ಏಕೋನನವತ್ಯಧಿಕಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಯುಧಿಷ್ಠಿರಾನುಶಾಸನದಲ್ಲಿ ನೂರಾಎಂಭತ್ತೊಂಭತ್ತನೆಯ ಅಧ್ಯಾಯವು.

Related image

[1]ಕೃತಯುಗದಲ್ಲಿ ವರ್ಣಬೇಧವಿರುವುದಿಲ್ಲವೆಂದು ಹಿಂದಿನ ಶ್ಲೋಕಗಳಲ್ಲಿ ಹೇಳಲಾಗಿತ್ತು.

[2]ವಾಯುಪುರಾಣ

Comments are closed.