ಆರಣ್ಯಕ ಪರ್ವ: ಅಜಗರ ಪರ್ವ
Contents
Toggle೧೭೬
ಭೀಮನು ತನ್ನ ಪರಿಚಯ ಮಾಡಿಕೊಂಡು ತನಗಿಂತಲೂ ಬಲಶಾಲಿಯಾಗಿರುವ ಆ ಅಜಗರವು ಯಾರೆಂದು ಕೇಳಿದುದು (೧-೮). ತನ್ನ ಸುರುಳಿಯಿಂದ ಭೀಮನನ್ನು ಸುತ್ತುತ್ತಾ ಅಜಗರವು ತಾನು ಭೀಮನ ವಂಶಜ ನಹುಷನೆಂದೂ, ಅಗಸ್ತ್ಯನ ಶಾಪದಿಂದ ಹಾವಾಗಿರುವನೆಂದೂ, ತಾನು ಕೇಳುವ ಪ್ರಶ್ನೆಗಳಿಗೆ ಯಾರು ಉತ್ತರವನ್ನು ಕೊಡುತ್ತಾರೋ ಅವರಿಂದ ಶಾಪವಿಮೋಚನೆಯಾಗುತ್ತದೆ ಎಂದೂ ಹೇಳಿದುದು (೯-೨೪). ಭೀಮನು ಶೋಕದಿಂದ ವಿಲಪಿಸುವುದು (೨೫-೩೯). ಅಪಶಕುನಗಳನ್ನು ಕಂಡ ಯುಧಿಷ್ಠಿರನು ಭೀಮನನ್ನು ಹುಡುಕಿಕೊಂಡು ಬರುವುದು (೪೦-೫೧).
03176001 ವೈಶಂಪಾಯನ ಉವಾಚ|
03176001a ಸ ಭೀಮಸೇನಸ್ತೇಜಸ್ವೀ ತಥಾ ಸರ್ಪವಶಂ ಗತಃ|
03176001c ಚಿಂತಯಾಮಾಸ ಸರ್ಪಸ್ಯ ವೀರ್ಯಮತ್ಯದ್ಭುತಂ ಮಹತ್||
ವೈಶಂಪಾಯನನು ಹೇಳಿದನು: “ಹೀಗೆ ತೇಜಸ್ವಿ ಭೀಮಸೇನನು ಸರ್ಪದ ವಶನಾಗಲು ಅದರ ಅದ್ಭುತ ಮಹಾ ವೀರ್ಯದ ಕುರಿತು ಯೋಚಿಸಿದನು.
03176002a ಉವಾಚ ಚ ಮಹಾಸರ್ಪಂ ಕಾಮಯಾ ಬ್ರೂಹಿ ಪನ್ನಗ|
03176002c ಕಸ್ತ್ವಂ ಭೋ ಭುಜಗಶ್ರೇಷ್ಠ ಕಿಂ ಮಯಾ ಚ ಕರಿಷ್ಯಸಿ||
ಆ ಮಹಾಸರ್ಪಕ್ಕೆ ಹೇಳಿದನು: “ಪನ್ನಗ! ನಿನಗಿಷ್ಟವಾದರೆ ನೀನು ಯಾರು ಎಂದು ಹೇಳು. ಭೋ! ಭುಜಗಶ್ರೇಷ್ಠ! ನನ್ನನ್ನು ಏನು ಮಾಡಲಿರುವೆ?
03176003a ಪಾಂಡವೋ ಭಿಮಸೇನೋಽಹಂ ಧರ್ಮರಾಜಾದನಂತರಃ|
03176003c ನಾಗಾಯುತಸಮಪ್ರಾಣಸ್ತ್ವಯಾ ನೀತಃ ಕಥಂ ವಶಂ||
ನಾನು ಧರ್ಮರಾಜನ ಅನಂತರದವ. ಪಾಂಡವ ಭೀಮಸೇನ. ಆನೆಗಳ ಹಿಂಡಿನ ಪ್ರಮಾಣಕ್ಕೆ ಸಮನಾದವನು ನಿನ್ನ ವಶನಾದದ್ದು ಹೇಗೆ?
03176004a ಸಿಂಹಾಃ ಕೇಸರಿಣೋ ವ್ಯಾಘ್ರಾ ಮಹಿಷಾ ವಾರಣಾಸ್ತಥಾ|
03176004c ಸಮಾಗತಾಶ್ಚ ಬಹುಶೋ ನಿಹತಾಶ್ಚ ಮಯಾ ಮೃಧೇ||
03176005a ದಾನವಾಶ್ಚ ಪಿಶಾಚಾಶ್ಚ ರಾಕ್ಷಸಾಶ್ಚ ಮಹಾಬಲಾಃ|
03176005c ಭುಜವೇಗಮಶಕ್ತಾ ಮೇ ಸೋಢುಂ ಪನ್ನಗಸತ್ತಮ||
ಪನ್ನಗಸತ್ತಮ! ಬಹಳಷ್ಟು ಕೇಸರಿ ಸಿಂಹಗಳು, ಹುಲಿಗಳು, ಕಾಡೆಮ್ಮೆಗಳು, ಆನೆಗಳನ್ನು ನಾನು ಯುದ್ಧದಲ್ಲಿ ಎದುರಿಸಿ ಕೊಂದಿದ್ದೇನೆ. ದಾನವರೂ ಪಿಶಾಚಿಗಳೂ, ಮಹಾಬಲ ರಾಕ್ಷಸರೂ ನನ್ನ ಭುಜಗಳ ವೇಗವನ್ನು ಸಹಿಸಲು ಅಶಕ್ತರಾಗಿದ್ದರು.
03176006a ಕಿಂ ನು ವಿದ್ಯಾಬಲಂ ಕಿಂ ವಾ ವರದಾನಮಥೋ ತವ|
03176006c ಉದ್ಯೋಗಮಪಿ ಕುರ್ವಾಣೋ ವಶಗೋಽಸ್ಮಿ ಕೃತಸ್ತ್ವಯಾ||
ನೀನು ಹೇಗೆತಾನೆ - ವಿದ್ಯಾಬಲದಿಂದಲೋ ಅಥವಾ ನಿನಗೆ ದೊರಕಿದ ವರದಾನದಿಂದಲೋ - ಶ್ರಮಿಸುತ್ತಿರುವ ನನ್ನನ್ನು ನಿನ್ನ ವಶದಲ್ಲಿರಿಸಿಕೊಂಡಿದ್ದೀಯೆ?
03176007a ಅಸತ್ಯೋ ವಿಕ್ರಮೋ ನೃಣಾಮಿತಿ ಮೇ ನಿಶ್ಚಿತಾ ಮತಿಃ|
03176007c ಯಥೇದಂ ಮೇ ತ್ವಯಾ ನಾಗ ಬಲಂ ಪ್ರತಿಹತಂ ಮಹತ್||
ಆನೆಗಳಿಗಿದ್ದಷ್ಟು ಮಹಾಬಲವುಳ್ಳ ನನ್ನನ್ನು ನೀನು ತಡೆದಿದ್ದೀಯೆ ಎಂದರೆ ಮನುಷ್ಯರ ವಿಕ್ರಮವು ಸುಳ್ಳು ಎಂದು ನಿಶ್ಚಯವಾಗಿಯೂ ನನಗನ್ನಿಸುತ್ತದೆ.”
03176008a ಇತ್ಯೇವಂವಾದಿನಂ ವೀರಂ ಭೀಮಮಕ್ಲಿಷ್ಟಕಾರಿಣಂ|
03176008c ಭೋಗೇನ ಮಹತಾ ಸರ್ಪಃ ಸಮಂತಾತ್ಪರ್ಯವೇಷ್ಟಯತ್||
ಈ ರೀತಿ ವೀರ ಅಕ್ಲಿಷ್ಟಕರ್ಮಿ ಭೀಮನು ಮಾತನಾಡುತ್ತಿರಲು ಸರ್ಪವು ಅವನನ್ನು ತನ್ನ ಮಹಾ ಸುರುಳಿಯಿಂದ ಸುತ್ತುವರೆಯಿತು.
03176009a ನಿಗೃಹ್ಯ ತಂ ಮಹಾಬಾಹುಂ ತತಃ ಸ ಭುಜಗಸ್ತದಾ|
03176009c ವಿಮುಚ್ಯಾಸ್ಯ ಭುಜೌ ಪೀನಾವಿದಂ ವಚನಮಬ್ರವೀತ್||
ಅವನ ದಪ್ಪ ಬಾಹುಗಳನ್ನು ಮಾತ್ರ ಸ್ವತಂತ್ರವಾಗಿರಲು ಬಿಟ್ಟು ಆ ಮಹಾಬಾಹುವನ್ನು ನಿಗ್ರಹಿಸಿ ಈ ಮಾತುಗಳನ್ನಾಡಿತು:
03176010a ದಿಷ್ಟ್ಯಾ ತ್ವಂ ಕ್ಷುಧಿತಸ್ಯಾದ್ಯ ದೇವೈರ್ಭಕ್ಷೋ ಮಹಾಭುಜ|
03176010c ದಿಷ್ಟ್ಯಾ ಕಾಲಸ್ಯ ಮಹತಃ ಪ್ರಿಯಾಃ ಪ್ರಾಣಾ ಹಿ ದೇಹಿನಾಂ||
“ದೇವತೆಗಳು ಮಹಾಭುಜ ನಿನ್ನನ್ನು ಇಂದು ಹಸಿವಿನಿಂದ ಬಳಲುತ್ತಿದ್ದ ನನಗೆ ಆಹಾರವಾಗಿ ಕಳುಹಿಸಿದ್ದುದು ಅದೃಷ್ಟವೇ ಸರಿ. ದೇಹಿಗಳಿಗೆ ಪ್ರಾಣವೇ ಪ್ರಿಯವಾಗಿರಲು ಬಹುಕಾಲದ ನಂತರ ನನಗೆ ಈ ಅದೃಷ್ಟವು ದೊರಕಿದೆ.
03176011a ಯಥಾ ತ್ವಿದಂ ಮಯಾ ಪ್ರಾಪ್ತಂ ಭುಜಂಗತ್ವಮರಿಂದಮ|
03176011c ತದವಶ್ಯಂ ಮಯಾ ಖ್ಯಾಪ್ಯಂ ತವಾದ್ಯ ಶೃಣು ಸತ್ತಮ||
ಅರಿಂದಮ! ನನಗೆ ಹೇಗೆ ಭುಜಂಗತ್ವವು ಪ್ರಾಪ್ತವಾಯಿತು ಎನ್ನುವುದನ್ನು ಅವಶ್ಯವಾಗಿ ನನಗೆ ಹೇಳಬೇಕು. ಸತ್ತಮ! ಅದನ್ನು ಇಂದು ಕೇಳು.
03176012a ಇಮಾಮವಸ್ಥಾಂ ಸಂಪ್ರಾಪ್ತೋ ಹ್ಯಹಂ ಕೋಪಾನ್ಮನೀಷಿಣಾಂ|
03176012c ಶಾಪಸ್ಯಾಂತಂ ಪರಿಪ್ರೇಪ್ಸುಃ ಸರ್ಪಸ್ಯ ಕಥಯಾಮಿ ತತ್||
ಮನೀಷಿಗಳ ಕೋಪದಿಂದ ನನಗೆ ಈ ಅವಸ್ಥೆಯು ಪ್ರಾಪ್ತವಾಯಿತು. ಈ ಶಾಪವನ್ನು ಕೊನೆಗಾಣಿಸುವ ಆಸೆಯಿಂದ ಈ ಸರ್ಪದ ಕಥೆಯನ್ನು ಹೇಳುತ್ತೇನೆ.
03176013a ನಹುಷೋ ನಾಮ ರಾಜರ್ಷಿರ್ವ್ಯಕ್ತಂ ತೇ ಶ್ರೋತ್ರಮಾಗತಃ|
03176013c ತವೈವ ಪೂರ್ವಃ ಪೂರ್ವೇಷಾಮಾಯೋರ್ವಂಶಕರಃ ಸುತಃ||
ನಿನ್ನ ಪೂರ್ವಜ, ಆಯುವಿನ ವಂಶಕರ ಮಗ ನಹುಷನೆಂಬ ರಾಜರ್ಷಿಯ ಕುರಿತು ನೀನು ಕೇಳಿರಬಹುದು.
03176014a ಸೋಽಹಂ ಶಾಪಾದಗಸ್ತ್ಯಸ್ಯ ಬ್ರಾಹ್ಮಣಾನವಮನ್ಯ ಚ|
03176014c ಇಮಾಮವಸ್ಥಾಮಾಪನ್ನಃ ಪಶ್ಯ ದೈವಮಿದಂ ಮಮ||
ಅವನೇ ನಾನು. ಅಗಸ್ತ್ಯನ ಶಾಪ ಮತ್ತು ಬ್ರಾಹ್ಮಣರಿಗೆ ನಾನು ಎಸಗಿದ ಅಪಮಾನಗಳಿಂದಾಗಿ ಈ ಅವಸ್ಥೆಯನ್ನು ಪಡೆದಿದ್ದೇನೆ. ನನ್ನ ಈ ದೈವವನ್ನು ನೋಡು[1].
03176015a ತ್ವಾಂ ಚೇದವಧ್ಯಮಾಯಾಂತಮತೀವ ಪ್ರಿಯದರ್ಶನಂ|
03176015c ಅಹಮದ್ಯೋಪಯೋಕ್ಷ್ಯಾಮಿ ವಿಧಾನಂ ಪಶ್ಯ ಯಾದೃಶಂ||
ಅತೀವ ಪ್ರಿಯದರ್ಶನನಾದ ಅವಧ್ಯನಾದ ನಿನ್ನನ್ನು ನಾನು ಇಂದು ನುಂಗುತ್ತೇನೆ ಎಂದರೆ ವಿಧಿಯು ಏನನ್ನು ನಡೆಸುತ್ತದೆ ಎನ್ನುವುದನ್ನು ನೋಡು!
03176016a ನ ಹಿ ಮೇ ಮುಚ್ಯತೇ ಕಶ್ಚಿತ್ಕಥಂ ಚಿದ್ಗ್ರಹಣಂ ಗತಃ|
03176016c ಗಜೋ ವಾ ಮಹಿಷೋ ವಾಪಿ ಷಷ್ಠೇ ಕಾಲೇ ನರೋತ್ತಮ||
ನರೋತ್ತಮ! ದಿನದ ಈ ಆರನೆಯ ಗಳಿಗೆಯಲ್ಲಿ ನನ್ನ ಹಿಡಿತಕ್ಕೆ ಸಿಕ್ಕಿದ ಏನೂ ಆನೆಯಾಗಿರಲಿ ಅಥವಾ ಎಮ್ಮೆಯಾಗಿರಲಿ ನನ್ನಿಂದ ಬಿಡುಗಡೆಯನ್ನು ಹೊಂದುವುದಿಲ್ಲ.
03176017a ನಾಸಿ ಕೇವಲಸರ್ಪೇಣ ತಿರ್ಯಗ್ಯೋನಿಷು ವರ್ತತಾ|
03176017c ಗೃಹೀತಃ ಕೌರವಶ್ರೇಷ್ಠ ವರದಾನಮಿದಂ ಮಮ||
ಕೌರವಶ್ರೇಷ್ಠ! ನೀನು ಎಲ್ಲ ಪ್ರಾಣಿಗಳಂತೆ ನಡೆಯುವ ಒಂದು ಕೇವಲ ಸರ್ಪದ ಹಿಡಿತಕ್ಕೆ ಸಿಕ್ಕಿಲ್ಲ. ನನಗೆ ವರದಾನವಿದೆ.
03176018a ಪತತಾ ಹಿ ವಿಮಾನಾಗ್ರಾನ್ಮಯಾ ಶಕ್ರಾಸನಾದ್ದ್ರುತಂ|
03176018c ಕುರು ಶಾಪಾಂತಮಿತ್ಯುಕ್ತೋ ಭಗವಾನ್ಮುನಿಸತ್ತಮಃ||
ಯಾಕೆಂದರೆ ನಾನು ಶಕ್ರನು ಕುಳಿತುಕೊಳ್ಳುವ ಆ ಮಹಾ ವಿಮಾನದಿಂದ ವೇಗದಿಂದ ಕೆಳಗೆ ಬೀಳುತ್ತಿರುವಾಗ ಆ ಮುನಿಸತ್ತಮ ಭಗವಾನನಲ್ಲಿ ನನ್ನನ್ನು ಶಾಪದಿಂದ ವಿಮುಕ್ತನನ್ನಾಗಿ ಮಾಡು ಎಂದು ಕೇಳಿಕೊಂಡೆ.
03176019a ಸ ಮಾಮುವಾಚ ತೇಜಸ್ವೀ ಕೃಪಯಾಭಿಪರಿಪ್ಲುತಃ|
03176019c ಮೋಕ್ಷಸ್ತೇ ಭವಿತಾ ರಾಜನ್ಕಸ್ಮಾಚ್ಚಿತ್ಕಾಲಪರ್ಯಯಾತ್||
ಆ ತೇಜಸ್ವಿಯು ಕೃಪೆಯಿಂದ ಆವೇಶಗೊಂಡು ರಾಜನ್! ಕೆಲವು ಕಾಲವು ಕಳೆದನಂತರ ನೀನು ಬಿಡುಗಡೆಹೊಂದುತ್ತೀಯೆ.
03176020a ತತೋಽಸ್ಮಿ ಪತಿತೋ ಭೂಮೌ ನ ಚ ಮಾಮಜಹಾತ್ಸ್ಮೃತಿಃ|
03176020c ಸ್ಮಾರ್ತಮಸ್ತಿ ಪುರಾಣಂ ಮೇ ಯಥೈವಾಧಿಗತಂ ತಥಾ||
ಆಗ ನಾನು ಭೂಮಿಯ ಮೇಲೆ ಬಿದ್ದೆ. ಆದರೂ ನನ್ನ ನೆನಪು ಅಳಿಸಿಹೋಗಿಲ್ಲ. ಅಂದು ನಾನು ತಿಳಿದುಕೊಂಡಿದ್ದುದು ಪುರಾತನ ಕಾಲದಿಂದಲೂ ನನಗೆ ನೆನಪಿದೆ.
03176021a ಯಸ್ತು ತೇ ವ್ಯಾಹೃತಾನ್ಪ್ರಶ್ನಾನ್ಪ್ರತಿಬ್ರೂಯಾದ್ವಿಶೇಷವಿತ್|
03176021c ಸ ತ್ವಾಂ ಮೋಕ್ಷಯಿತಾ ಶಾಪಾದಿತಿ ಮಾಮಬ್ರವೀದೃಷಿಃ||
“ನೀನು ಕೇಳುವ ಪ್ರಶ್ನೆಗಳಿಗೆ ಸರಿಯಾಗಿ ಯಾರು ಉತ್ತರವನ್ನು ಕೊಡುತ್ತಾನೋ ಅವನು ನಿನ್ನನ್ನು ಈ ಶಾಪದಿಂದ ಮುಕ್ತಿಯನ್ನು ಕೊಡುತ್ತಾನೆ” ಎಂದು ನನಗೆ ಆ ಋಷಿಯು ಹೇಳಿದ್ದನು.
03176022a ಗೃಹೀತಸ್ಯ ತ್ವಯಾ ರಾಜನ್ಪ್ರಾಣಿನೋಽಪಿ ಬಲೀಯಸಃ|
03176022c ಸತ್ತ್ವಭ್ರಂಶೋಽಧಿಕಸ್ಯಾಪಿ ಸರ್ವಸ್ಯಾಶು ಭವಿಷ್ಯತಿ||
“ರಾಜನ್! ನಿನ್ನ ಹಿಡಿತಕ್ಕೆ ಸಿಕ್ಕ ಪ್ರಾಣಿಗಳು, ನಿನಗಿಂತಲೂ ಅಧಿಕ ಬಲಶಾಲಿಯಾಗಿದ್ದರೂ, ತಕ್ಷಣವೇ ಸತ್ವವನ್ನು ಕಳೆದುಕೊಳ್ಳುತ್ತವೆ.”
03176023a ಇತಿ ಚಾಪ್ಯಹಮಶ್ರೌಷಂ ವಚಸ್ತೇಷಾಂ ದಯಾವತಾಂ|
03176023c ಮಯಿ ಸಂಜಾತಹಾರ್ದಾನಾಮಥ ತೇಽಂತರ್ಹಿತಾ ದ್ವಿಜಾಃ||
03176024a ಸೋಽಹಂ ಪರಮದುಷ್ಕರ್ಮಾ ವಸಾಮಿ ನಿರಯೇಽಶುಚೌ|
03176024c ಸರ್ಪಯೋನಿಮಿಮಾಂ ಪ್ರಾಪ್ಯ ಕಾಲಾಕಾಂಕ್ಷೀ ಮಹಾದ್ಯುತೇ||
ಹೀಗೆ ನನಗೆ ಈ ದಯಾವಂತ ಮಾತುಗಳನ್ನು ಕೇಳಿಸಿ, ನನಗೆ ಇದು ನೆನಪಿನಲ್ಲಿರುವಂತೆ ಅನುಗ್ರಹಿಸಿ ಆ ದ್ವಿಜರು ಅಂತರ್ಹಿತರಾದರು. ಹೀಗೆ ನಾನು ಪರಮದುಷ್ಕರ್ಮಗಳನ್ನು ಮಾಡಿಕೊಂಡು ಅಶೌಚನಾಗಿ ಈ ಸರ್ಪಯೋನಿಯನ್ನು ಹೊಂದಿ ನರಕದಲ್ಲಿ ಬಿದ್ದಿದ್ದೇನೆ. ಮಹಾದ್ಯುತಿ! ಕಾಲವನ್ನು ಆಕಾಂಕ್ಷಿಸುತ್ತಿದ್ದೇನೆ.”
03176025a ತಮುವಾಚ ಮಹಾಬಾಹುರ್ಭೀಮಸೇನೋ ಭುಜಂಗಮಂ|
03176025c ನ ತೇ ಕುಪ್ಯೇ ಮಹಾಸರ್ಪ ನ ಚಾತ್ಮಾನಂ ವಿಗರ್ಹಯೇ||
ಆಗ ಮಹಾಬಾಹು ಭೀಮಸೇನನು ಹಾವಿಗೆ ಹೇಳಿದನು: “ಮಹಾಸರ್ಪ! ನಾನು ನಿನ್ನ ಮೇಲೆ ಕೋಪಗೊಂಡಿಲ್ಲ ಮತ್ತು ನನ್ನನ್ನು ಕೂಡ ಬೈದುಕೊಳ್ಳುವುದಿಲ್ಲ.
03176026a ಯಸ್ಮಾದಭಾವೀ ಭಾವೀ ವಾ ಮನುಷ್ಯಃ ಸುಖದುಃಖಯೋಃ|
03176026c ಆಗಮೇ ಯದಿ ವಾಪಾಯೇ ನ ತತ್ರ ಗ್ಲಪಯೇನ್ಮನಃ||
ಬಂದು ಹೋಗುವ ಸುಖ ದುಃಖಗಳನ್ನು ಅನುಭವಿಸಲಿ ಅಥವಾ ಅನುಭವಿಸದೇ ಇರಲಿ. ಅದರಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳಬೇಕಾಗಿಲ್ಲ.
03176027a ದೈವಂ ಪುರುಷಕಾರೇಣ ಕೋ ನಿವರ್ತಿತುಮರ್ಹತಿ|
03176027c ದೈವಮೇವ ಪರಂ ಮನ್ಯೇ ಪುರುಷಾರ್ಥೋ ನಿರರ್ಥಕಃ||
03176028a ಪಶ್ಯ ದೈವೋಪಘಾತಾದ್ಧಿ ಭುಜವೀರ್ಯವ್ಯಪಾಶ್ರಯಂ|
03176028c ಇಮಾಮವಸ್ಥಾಂ ಸಂಪ್ರಾಪ್ತಮನಿಮಿತ್ತಮಿಹಾದ್ಯ ಮಾಂ||
ದೈವವನ್ನು ಪುರುಷಕಾರಣದಿಂದ ಯಾರು ತಾನೇ ತಡೆಯಬಲ್ಲರು? ದೈವವೇ ಮೇಲು, ಪುರುಷಾರ್ಥವು ನಿರರ್ಥಕ. ನೋಡು! ಭುಜವೀರ್ಯವನ್ನು ಆಶ್ರಯಿಸಿದ್ದ ನಾನು ದುರ್ದೈವದಿಂದ ನನ್ನ ಏನೂ ಕಾರಣಗಳಿಲ್ಲದೇ ಈ ಅವಸ್ಥೆಯನ್ನು ಹೊಂದಿದ್ದೇನೆ.
03176029a ಕಿಂ ತು ನಾದ್ಯಾನುಶೋಚಾಮಿ ತಥಾತ್ಮಾನಂ ವಿನಾಶಿತಂ|
03176029c ಯಥಾ ತು ವಿಪಿನೇ ನ್ಯಸ್ತಾನ್ಭ್ರಾತೄನ್ರಾಜ್ಯಪರಿಚ್ಯುತಾನ್||
ಆದರೆ ರಾಜ್ಯವನ್ನು ಕಳೆದುಕೊಂಡು ವಿಪಿನವನ್ನು ಸೇರಿರುವ ನನ್ನ ಭ್ರಾತೃಗಳ ಕುರಿತು ಶೋಚಿಸುವಷ್ಟು ನನ್ನ ವಿನಾಶದ ಕುರಿತು ಶೋಚಿಸುತ್ತಿಲ್ಲ.
03176030a ಹಿಮವಾಂಶ್ಚ ಸುದುರ್ಗೋಽಯಂ ಯಕ್ಷರಾಕ್ಷಸಸಂಕುಲಃ|
03176030c ಮಾಂ ಚ ತೇ ಸಮುದೀಕ್ಷಂತಃ ಪ್ರಪತಿಷ್ಯಂತಿ ವಿಹ್ವಲಾಃ||
03176031a ವಿನಷ್ಟಮಥ ವಾ ಶ್ರುತ್ವಾ ಭವಿಷ್ಯಂತಿ ನಿರುದ್ಯಮಾಃ|
03176031c ಧರ್ಮಶೀಲಾ ಮಯಾ ತೇ ಹಿ ಬಾಧ್ಯಂತೇ ರಾಜ್ಯಗೃದ್ಧಿನಾ||
ಯಕ್ಷ-ರಾಕ್ಷಸರ ಸಂಕುಲವಾದ ಈ ಹಿಮಾಲಯವು ತುಂಬಾ ಅಪಾಯಕಾರಿ. ನನ್ನನ್ನು ಈ ರೀತಿ ನೋಡಿದರೆ ಅವರು ವಿಹ್ವಲರಾಗಿ ಕೆಳಗುರುಳುತ್ತಾರೆ. ನಾನು ನಾಶಹೊಂದಿದ್ದೇನೆ ಎಂದು ತಿಳಿದ ಅವರು ಶ್ರಮವನ್ನು ತೊರೆಯುತ್ತಾರೆ. ಅವರೆಲ್ಲ ಧರ್ಮಶೀಲರು ರಾಜ್ಯದ ಆಸೆಬುರುಕನಾದ ನನ್ನಿಂದಲೇ ಬಾಧಿತರಾಗಿದ್ದಾರೆ.
03176032a ಅಥ ವಾ ನಾರ್ಜುನೋ ಧೀಮಾನ್ವಿಷಾದಮುಪಯಾಸ್ಯತಿ|
03176032c ಸರ್ವಾಸ್ತ್ರವಿದನಾಧೃಷ್ಯೋ ದೇವಗಂಧರ್ವರಾಕ್ಷಸೈಃ||
ಅಥವಾ ಸರ್ವ ಅಸ್ತ್ರಗಳನ್ನು ತಿಳಿದ ದೇವ-ಗಂಧರ್ವ-ರಾಕ್ಷರಿಂದಲೂ ಗೆಲ್ಲಲಸಾದ್ಯ ಧೀಮಂತ ಅರ್ಜುನನು ವಿಷಾದಹೊಂದುತ್ತಾನೆ.
03176033a ಸಮರ್ಥಃ ಸ ಮಹಾಬಾಹುರೇಕಾಹ್ನಾ ಸುಮಹಾಬಲಃ|
03176033c ದೇವರಾಜಮಪಿ ಸ್ಥಾನಾತ್ಪ್ರಚ್ಯಾವಯಿತುಮೋಜಸಾ||
03176034a ಕಿಂ ಪುನರ್ಧೃತರಾಷ್ಟ್ರಸ್ಯ ಪುತ್ರಂ ದುರ್ದ್ಯೂತದೇವಿನಂ|
03176034c ವಿದ್ವಿಷ್ಟಂ ಸರ್ವಲೋಕಸ್ಯ ದಂಭಲೋಭಪರಾಯಣಂ||
ಆ ಮಹಾಬಾಹು ಸುಮಹಾಬಲನು ಒಬ್ಬನೇ ದೇವರಾಜನನ್ನೂ ಕೂಡ ಅವನ ಸ್ಥಾನದಿಂದ ಕೆಳಗುರುಳಿಸುವ ಓಜಸ್ಸನ್ನು ಪಡೆದಿದ್ದಾನೆ. ಕೆಟ್ಟ ದ್ಯೂತಕೋರನಾದ, ಲೋಕದಲ್ಲಿ ಯಾರಿಗೂ ಇಷ್ಟವಿರದ, ಲೋಭ-ಮೋಸಗಳಲ್ಲಿ ನಿರತ ಧೃತರಾಷ್ಟ್ರಪುತ್ರನಿನ್ನೇನು?
03176035a ಮಾತರಂ ಚೈವ ಶೋಚಾಮಿ ಕೃಪಣಾಂ ಪುತ್ರಗೃದ್ಧಿನೀಂ|
03176035c ಯಾಸ್ಮಾಕಂ ನಿತ್ಯಮಾಶಾಸ್ತೇ ಮಹತ್ತ್ವಮಧಿಕಂ ಪರೈಃ||
ಪುತ್ರನ ಮೇಲೆ ಆಸೆಯನ್ನಿಟ್ಟಿರುವ, ನಾವು ಇತರರಿಗಿಂತ ಅಧಿಕ ಮಹತ್ವವುಳ್ಳವರಾಗಬೇಕೆಂದು ನಿತ್ಯವೂ ಆಶಿಸುತ್ತಿರುವ ನನ್ನ ಬಡ ತಾಯಿಯ ಕುರಿತೂ ಶೋಕಿಸುತ್ತೇನೆ.
03176036a ಕಥಂ ನು ತಸ್ಯಾನಾಥಾಯಾ ಮದ್ವಿನಾಶಾದ್ಭುಜಂಗಮ|
03176036c ಅಫಲಾಸ್ತೇ ಭವಿಷ್ಯಂತಿ ಮಯಿ ಸರ್ವೇ ಮನೋರಥಾಃ||
ಭುಜಂಗಮ! ನನ್ನ ವಿನಾಶದಿಂದ ಅನಾಥಳಾದ ಅವಳು ನನ್ನ ಮೇಲೆ ಇಟ್ಟಿದ್ದ ಸರ್ವ ಮನೋರಥಗಳೂ ನಿಷ್ಫಲವಾಗುವುದಿಲ್ಲವೇ?
03176037a ನಕುಲಃ ಸಹದೇವಶ್ಚ ಯಮಜೌ ಗುರುವರ್ತಿನೌ|
03176037c ಮದ್ಬಾಹುಬಲಸಂಸ್ತಬ್ಧೌ ನಿತ್ಯಂ ಪುರುಷಮಾನಿನೌ||
03176038a ನಿರುತ್ಸಾಹೌ ಭವಿಷ್ಯೇತೇ ಭ್ರಷ್ಟವೀರ್ಯಪರಾಕ್ರಮೌ|
03176038c ಮದ್ವಿನಾಶಾತ್ಪರಿದ್ಯೂನಾವಿತಿ ಮೇ ವರ್ತತೇ ಮತಿಃ||
ಹಿರಿಯರಿಗೆ ವಿನೀತರಾದ ಯಮಳ ನಕುಲ ಸಹದೇವರು ನಿತ್ಯವೂ ನನ್ನ ಬಾಹುಬಲದ ಬೆಂಬಲದಿಂದ ಪುರುಷರೆನಿಸಿಕೊಂಡಿದ್ದರು. ಅವರು ನನ್ನ ವಿನಾಶದಿಂದ ಅನಾಥರಾಗಿ ವೀರಪರಾಕ್ರಮವನ್ನು ಕಳೆದುಕೊಂಡು ನಿರುತ್ಸಾಹರಾಗುತ್ತಾರೆ ಎಂದು ನನಗನ್ನಿಸುತ್ತದೆ.”
03176039a ಏವಂವಿಧಂ ಬಹು ತದಾ ವಿಲಲಾಪ ವೃಕೋದರಃ|
03176039c ಭುಜಂಗಭೋಗಸಂರುದ್ಧೋ ನಾಶಕಚ್ಚ ವಿಚೇಷ್ಟಿತುಂ||
ಈ ವಿಧದಲ್ಲಿ ಹಾವಿನ ಸುರುಳಿಯಲ್ಲಿ ಸಿಕ್ಕಿಹಾಕಿಕೊಂಡು ಅಲುಗಾಡಲೂ ಅಶಕ್ತನಾದ ವೃಕೋದರನು ಬಹಳಷ್ಟು ವಿಲಪಿಸಿದನು.
03176040a ಯುಧಿಷ್ಠಿರಸ್ತು ಕೌಂತೇಯ ಬಭೂವಾಸ್ವಸ್ಥಚೇತನಃ|
03176040c ಅನಿಷ್ಟದರ್ಶನಾನ್ಘೋರಾನುತ್ಪಾತಾನ್ಪರಿಚಿಂತಯನ್||
ಆಗ ಕೌಂತೇಯ ಯುಧಿಷ್ಠಿರನು ಅಸ್ವಸ್ಥಚೇತನನಾದನು. ಘೋರ ಉತ್ಪಾತಗಳನ್ನೂ ಅಪಶಕುನಗಳನ್ನೂ ನೋಡಿ ತುಂಬಾ ಚಿಂತಿತನಾದನು.
03176041a ದಾರುಣಂ ಹ್ಯಶಿವಂ ನಾದಂ ಶಿವಾ ದಕ್ಷಿಣತಃ ಸ್ಥಿತಾ|
03176041c ದೀಪ್ತಾಯಾಂ ದಿಶಿ ವಿತ್ರಸ್ತಾ ರೌತಿ ತಸ್ಯಾಶ್ರಮಸ್ಯ ಹ||
ಅವನ ಆಶ್ರಮದ ಪಕ್ಕದಲ್ಲಿ ಆಕಾಶವು ಕೆಂಪಾದ ದಕ್ಷಿಣ ದಿಕ್ಕಿನಿಂದ ಒಂದು ಹೆಣ್ಣು ನರಿಯ ದಾರುಣ ಕೂಗು ಕೇಳಿಬಂದಿತು.
03176042a ಏಕಪಕ್ಷಾಕ್ಷಿಚರಣಾ ವರ್ತಿಕಾ ಘೋರದರ್ಶನಾ|
03176042c ರುಧಿರಂ ವಮಂತೀ ದದೃಶೇ ಪ್ರತ್ಯಾದಿತ್ಯಮಪಸ್ವರಾ||
ಒಂದೇ ರೆಕ್ಕೆಯ, ಒಂದೇ ಕಣ್ಣಿನ, ಒಂದೇ ಕಾಲಿನ ಘೋರವಾಗಿ ಕಾಣುತ್ತಿದ್ದ ಬಾತುಕೋಳಿಯು ರಕ್ತವನ್ನು ಕಾರುತ್ತಾ ಸೂರ್ಯನ ದಿಕ್ಕಿನಲ್ಲಿ ಹೋಗುತ್ತಿರುವುದು ಕಂಡುಬಂದಿತು.
03176043a ಪ್ರವವಾವನಿಲೋ ರೂಕ್ಷಶ್ಚಂಡಃ ಶರ್ಕರಕರ್ಷಣಃ|
03176043c ಅಪಸವ್ಯಾನಿ ಸರ್ವಾಣಿ ಮೃಗಪಕ್ಷಿರುತಾನಿ ಚ||
03176044a ಪೃಷ್ಠತೋ ವಾಯಸಃ ಕೃಷ್ಣೋ ಯಾಹಿ ಯಾಹೀತಿ ವಾಶತಿ|
ಧೂಳುತುಂಬಿದ ಬಿಸಿ ಒರಟು ಗಾಳಿಯು ಬೀಸಿತು. ಎಲ್ಲ ಮೃಗಪಕ್ಷಿಗಳು ಕಪ್ಪುಕಾಗೆಯ ಬೆನ್ನತ್ತಿ ಹೋಗು ಹೋಗು ಎಂದು ಕೂಗುತ್ತಿದ್ದವು.
03176044c ಮುಹುರ್ಮುಹುಃ ಪ್ರಸ್ಫುರತಿ ದಕ್ಷಿಣೋಽಸ್ಯ ಭುಜಸ್ತಥಾ||
03176045a ಹೃದಯಂ ಚರಣಶ್ಚಾಪಿ ವಾಮೋಽಸ್ಯ ಪರಿವರ್ತತೇ|
03176045c ಸವ್ಯಸ್ಯಾಕ್ಷ್ಣೋ ವಿಕಾರಶ್ಚಾಪ್ಯನಿಷ್ಟಃ ಸಮಪದ್ಯತ||
ಅವನ ಬಲತೋಳು ನಡುಗತೊಡಗಿತು, ಅವನ ಎದೆ ತತ್ತರಿಸಿತು, ಅವನ ಎಡಕಾಲು ಮಿಡಿಯಿತು, ಮತ್ತು ಅವನ ಎಡಕಣ್ಣು ಒಂದೇ ಸಮನೆ ಬಡಿಯತೊಡಗಿತು.
03176046a ಸ ಧರ್ಮರಾಜೋ ಮೇಧಾವೀ ಶಂಕಮಾನೋ ಮಹದ್ಭಯಂ|
03176046c ದ್ರೌಪದೀಂ ಪರಿಪಪ್ರಚ್ಚ ಕ್ವ ಭೀಮ ಇತಿ ಭಾರತ||
ಭಾರತ! ಮಹಾಭಯವನ್ನು ಶಂಕಿಸಿ ಆ ಮೇಧಾವಿ ಧರ್ಮರಾಜನು “ಭೀಮನೆಲ್ಲಿ?” ಎಂದು ದ್ರೌಪದಿಯನ್ನು ಕೇಳಿದನು.
03176047a ಶಶಂಸ ತಸ್ಮೈ ಪಾಂಚಾಲೀ ಚಿರಯಾತಂ ವೃಕೋದರಂ|
03176047c ಸ ಪ್ರತಸ್ಥೇ ಮಹಾಬಾಹುರ್ಧೌಮ್ಯೇನ ಸಹಿತೋ ನೃಪಃ||
ಅವನಿಗೆ ಪಾಂಚಾಲಿಯು “ವೃಕೋದರನು ಹೋಗಿ ತುಂಬಾ ಹೊತ್ತಾಯಿತು” ಎಂದಳು. ಆಗ ಮಹಾಬಾಹು ನೃಪನು ಧೌಮ್ಯನನ್ನು ಜೊತೆಗೆ ಕರೆದುಕೊಂಡು ಹೊರಟನು.
03176048a ದ್ರೌಪದ್ಯಾ ರಕ್ಷಣಂ ಕಾರ್ಯಮಿತ್ಯುವಾಚ ಧನಂಜಯಂ|
03176048c ನಕುಲಂ ಸಹದೇವಂ ಚ ವ್ಯಾದಿದೇಶ ದ್ವಿಜಾನ್ಪ್ರತಿ||
ದ್ರೌಪದಿಯ ರಕ್ಷಣಕಾರ್ಯವು ನಿನ್ನದು ಎಂದು ಧನಂಜಯನಿಗೆ ಹೇಳಿದನು ಹಾಗೂ ನಕುಲ ಸಹದೇವರಿಗೆ ದ್ವಿಜರ ಕುರಿತು ಆದೇಶವನ್ನಿತ್ತನು.
03176049a ಸ ತಸ್ಯ ಪದಮುನ್ನೀಯ ತಸ್ಮಾದೇವಾಶ್ರಮಾತ್ಪ್ರಭುಃ|
03176049c ದದರ್ಶ ಪೃಥಿವೀಂ ಚಿಹ್ನೈರ್ಭೀಮಸ್ಯ ಪರಿಚಿಹ್ನಿತಾಂ||
ರಾಜನು ಆಶ್ರಮದಿಂದ ಅವನ ಹೆಜ್ಜೆಗಳ ಗುರುತನ್ನು ಹಿಡಿದು ಹೊರಟನು ಮತ್ತು ನೆಲದ ಮೇಲೆ ಅವನು ಹೋದ ದಾರಿಯ ಗುರುತುಗಳನ್ನು ಕಂಡು ಮುಂದುವರೆದನು.
03176050a ಧಾವತಸ್ತಸ್ಯ ವೀರಸ್ಯ ಮೃಗಾರ್ಥೇ ವಾತರಂಹಸಃ|
03176050c ಊರುವಾತವಿನಿರ್ಭಗ್ನಾನ್ದ್ರುಮಾನ್ವ್ಯಾವರ್ಜಿತಾನ್ಪಥಿ||
ಆ ವಾತರಂಹಸ ವೀರನು ಬೇಟೆಯಾಡುತ್ತಾ ಓಡುವಾಗ ಅವನ ತೊಡೆಗೆ ತಾಗಿ ಸೊಟ್ಟಾದ ಮತ್ತು ಮುರಿದುಬಿದ್ದಿದ್ದ ಮರಗಳನ್ನು ಕಂಡನು.
03176051a ಸ ಗತ್ವಾ ತೈಸ್ತದಾ ಚಿಹ್ನೈರ್ದದರ್ಶ ಗಿರಿಗಹ್ವರೇ|
03176051c ಗೃಹೀತಂ ಭುಜಗೇಂದ್ರೇಣ ನಿಶ್ಚೇಷ್ಟಮನುಜಂ ತಥಾ||
ಈ ಗುರುತುಗಳನ್ನೇ ಹಿಡಿದು ಹೋಗಿ ಆ ಗಿರಿಗಹ್ವರದಲ್ಲಿ ಭುಜಗೇಂದ್ರನ ಹಿಡಿತಕ್ಕೆ ಸಿಲುಕಿ ನಿಶ್ಚೇಷ್ಟನಾಗಿದ್ದ ಅನುಜನನ್ನು ನೋಡಿದನು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅಜಗರಪರ್ವಣಿ ಯುಧಿಷ್ಠಿರಭೀಮದರ್ಶನೇ ಷಟ್‌ಸಪ್ತತ್ಯಧಿಕಶತತಮೋಽಧ್ಯಾಯ:|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಅಜಗರಪರ್ವದಲ್ಲಿ ಯುಧಿಷ್ಠಿರಭೀಮದರ್ಶನದಲ್ಲಿ ನೂರಾಎಪ್ಪತ್ತಾರನೆಯ ಅಧ್ಯಾಯವು.
[1]ನಹುಷನಿಗೆ ಅಗಸ್ತ್ಯನಿಂದ ದೊರೆತ ಶಾಪದ ಕುರಿತು ವಿಸ್ತಾರವಾದ ಕಥೆಯು ಉದ್ಯೋಗಪರ್ವದಲ್ಲಿದೆ.