ಆರಣ್ಯಕ ಪರ್ವ: ಯಕ್ಷಯುದ್ಧ ಪರ್ವ
Contents
Toggle೧೬೯
ನಿವಾತಕವಚರ ವಿನಾಶ (೧-೩೫).
03169001 ಅರ್ಜುನ ಉವಾಚ|
03169001a ಅದೃಶ್ಯಮಾನಾಸ್ತೇ ದೈತ್ಯಾ ಯೋಧಯಂತಿ ಸ್ಮ ಮಾಯಯಾ|
03169001c ಅದೃಶ್ಯಾನ್ ಅಸ್ತ್ರವೀರ್ಯೇಣ ತಾನಪ್ಯಹಮಯೋಧಯಂ||
ಅರ್ಜುನನು ಹೇಳಿದನು: “ಅದೃಶ್ಯರಾಗಿ ಆ ದೈತ್ಯರು ನನ್ನೊಡನೆ ಮಾಯೆಯಿಂದ ಯುದ್ಧಮಾಡಿದರು; ಆದರೆ ನಾನು ಆದೃಶ್ಯವಾಗಿರುವವರೊಡನೆ ಅಸ್ತ್ರವೀರ್ಯದಿಂದ ಹೋರಾಡಿದೆನು.
03169002a ಗಾಂಡೀವಮುಕ್ತಾ ವಿಶಿಖಾಃ ಸಮ್ಯಗಸ್ತ್ರಪ್ರಚೋದಿತಾಃ|
03169002c ಅಚ್ಚಿಂದನ್ನುತ್ತಮಾಂಗಾನಿ ಯತ್ರ ಯತ್ರ ಸ್ಮ ತೇಽಭವನ್||
ಗಾಂಡೀವದಿಂದ ಬಿಟ್ಟ ಸರಿಯಾಗಿ ಅಸ್ತ್ರಗಳಿಂದ ಪ್ರಚೋದಿತ ಬಾಣಗಳು ಅವರ ಶಿರಗಳನ್ನು ಎಲ್ಲೆಲ್ಲಿ ಇದ್ದವೋ ಅಲ್ಲಿಯೇ ತುಂಡರಿಸಿದವು.
03169003a ತತೋ ನಿವಾತಕವಚಾ ವಧ್ಯಮಾನಾ ಮಯಾ ಯುಧಿ|
03169003c ಸಂಹೃತ್ಯ ಮಾಯಾಂ ಸಹಸಾ ಪ್ರಾವಿಶನ್ಪುರಮಾತ್ಮನಃ||
ಆಗ ಯುದ್ಧದಲ್ಲಿ ನನ್ನಿಂದ ಹೊಡೆಯಲ್ಪಟ್ಟ ನಿವಾತಕವಚರು ಒಮ್ಮೆಗೇ ಮಾಯೆಯನ್ನು ತೊರೆದು ತಮ್ಮ ಪುರವನ್ನು ಪ್ರವೇಶಿಸಿದರು.
03169004a ವ್ಯಪಯಾತೇಷು ದೈತ್ಯೇಷು ಪ್ರಾದುರ್ಭೂತೇ ಚ ದರ್ಶನೇ|
03169004c ಅಪಶ್ಯಂ ದಾನವಾಂಸ್ತತ್ರ ಹತಾಂ ಶತಸಹಸ್ರಶಃ||
ದೈತ್ಯರು ಹೋಗಿ ಪುನ ಕಾಣಿಸುವಂತಾದಾಗ ನಾನು ಅಲ್ಲಿ ಹತರಾಗಿದ್ದ ನೂರಾರು ಸಾವಿರಾರು ದಾನವರನ್ನು ನೋಡಿದೆನು.
03169005a ವಿನಿಷ್ಪಿಷ್ಟಾನಿ ತತ್ರೈಷಾಂ ಶಸ್ತ್ರಾಣ್ಯಾಭರಣಾನಿ ಚ|
03169005c ಕೂಟಶಃ ಸ್ಮ ಪ್ರದೃಶ್ಯಂತೇ ಗಾತ್ರಾಣಿ ಕವಚಾನಿ ಚ||
ಅಲ್ಲಿ ಅವರ ಶಸ್ತ್ರಗಳು ಮತ್ತು ಆಭರಣಗಳು ಚದುರಿ ಬಿದ್ದಿದ್ದವು; ದೇಹಗಳು ಮತ್ತು ಕವಚಗಳು ರಾಶಿರಾಶಿಯಾಗಿ ಬಿದ್ದಿರುವುದು ಕಂಡುಬಂದಿತು.
03169006a ಹಯಾನಾಂ ನಾಂತರಂ ಹ್ಯಾಸೀತ್ಪದಾದ್ವಿಚಲಿತುಂ ಪದಂ|
03169006c ಉತ್ಪತ್ಯ ಸಹಸಾ ತಸ್ಥುರಂತರಿಕ್ಷಗಮಾಸ್ತತಃ||
ಕುದುರೆಗಳಿಗೆ ಒಂದು ಕಾಲನ್ನು ಚಲಿಸಲೂ ಸ್ಥಳವಿರಲಿಲ್ಲ. ಒಮ್ಮೆಲೇ ಹಾರಿ ಅವು ಅಂತರಿಕ್ಷಗಾಮಿಗಳಾದವು.
03169007a ತತೋ ನಿವಾತಕವಚಾ ವ್ಯೋಮ ಸಂಚಾದ್ಯ ಕೇವಲಂ|
03169007c ಅದೃಶ್ಯಾ ಹ್ಯಭ್ಯವರ್ತಂತ ವಿಸೃಜಂತಃ ಶಿಲೋಚ್ಚಯಾನ್||
ಆಗ ನಿವಾತಕವಚರೂ ಕೂಡ ಇಡೀ ವ್ಯೋಮವನ್ನು ತುಂಬಿ, ಅದೃಶ್ಯರಾಗಿಯೇ ದೊಡ್ಡ ಶಿಲೆಗಳನ್ನು ಬೀರಿ ಆಕ್ರಮಣಮಾಡಿದರು.
03169008a ಅಂತರ್ಭೂಮಿಗತಾಶ್ಚಾನ್ಯೇ ಹಯಾನಾಂ ಚರಣಾನ್ಯಥ|
03169008c ನ್ಯಗೃಹ್ಣನ್ದಾನವಾ ಘೋರಾ ರಥಚಕ್ರೇ ಚ ಭಾರತ||
ಭಾರತ! ಭೂಮಿಯ ಒಳಗೆ ಹೋಗಿದ್ದ ಅವರಲ್ಲಿಯೇ ಕೆಲವು ಘೋರ ದಾನವರು ಕುದುರೆಗಳ ಕಾಲುಗಳನ್ನು ಮತ್ತು ರಥಚಕ್ರಗಳನ್ನು ಎಳೆದು ತಡೆದರು.
03169009a ವಿನಿಗೃಹ್ಯ ಹರೀನಶ್ವಾನ್ರಥಂ ಚ ಮಮ ಯುಧ್ಯತಃ|
03169009c ಸರ್ವತೋ ಮಾಮಚಿನ್ವಂತ ಸರಥಂ ಧರಣೀಧರೈಃ||
03169010a ಪರ್ವತೈರುಪಚೀಯದ್ಭಿಃ ಪತಮಾನೈಸ್ತಥಾಪರೈಃ|
03169010c ಸ ದೇಶೋ ಯತ್ರ ವರ್ತಾಮ ಗುಹೇವ ಸಮಪದ್ಯತ||
ಆ ಹರಿ ಕುದುರೆಗಳನ್ನು ಮತ್ತು ಯುದ್ಧಮಾಡುತ್ತಿರುವ ನನ್ನ ರಥವನ್ನು ಹಿಡಿದು ಅವರು ಎಲ್ಲ ಕಡೆಯಿಂದ ರಥದೊಡನೆ ನನ್ನ ಮೇಲೆ ಎಲ್ಲಕಡೆಯಿಂದಲೂ ಮುಚ್ಚಿ ಪರ್ವತಗಳನ್ನು ಒಟ್ಟುಹಾಕಿದರು. ಬಿದ್ದಿರುವ ಮತ್ತು ಇನ್ನೂ ಬೀಳುತ್ತಿರುವ ಪರ್ವತಗಳಿಂದ ನಾವಿರುವ ಪ್ರದೇಶವು ಗುಹೆಯಂತೆ ಆಯಿತು.
03169011a ಪರ್ವತೈಶ್ಚಾದ್ಯಮಾನೋಽಹಂ ನಿಗೃಹೀತೈಶ್ಚ ವಾಜಿಭಿಃ|
03169011c ಅಗಚ್ಚಂ ಪರಮಾಮಾರ್ತಿಂ ಮಾತಲಿಸ್ತದಲಕ್ಷಯತ್||
03169012a ಲಕ್ಷಯಿತ್ವಾ ತು ಮಾಂ ಭೀತಮಿದಂ ವಚನಮಬ್ರವೀತ್|
03169012c ಅರ್ಜುನಾರ್ಜುನ ಮಾ ಭೈಸ್ತ್ವಂ ವಜ್ರಮಸ್ತ್ರಮುದೀರಯ||
ಸಂಪೂರ್ಣವಾಗಿ ಪರ್ವತಗಳಿಂದ ಮುಚ್ಚಲ್ಪಟ್ಟು, ಕುದುರೆಗಳು ಚಲಿಸಲಾಗದಿರುವಾಗ ನಾನು ಪರಮ ಚಿಂತಿತನಾದೆನು. ನಾನು ಹೆದರಿದುದನ್ನು ಗಮನಿಸಿ ಮಾತಲಿಯು ಹೇಳಿದನು: “ಅರ್ಜುನ! ಅರ್ಜುನ! ಹೆದರಬೇಡ! ಈಗ ವಜ್ರಾಸ್ತ್ರವನ್ನು ಬಿಡು!”
03169013a ತತೋಽಹಂ ತಸ್ಯ ತದ್ವಾಕ್ಯಂ ಶ್ರುತ್ವಾ ವಜ್ರಮುದೀರಯಂ|
03169013c ದೇವರಾಜಸ್ಯ ದಯಿತಂ ವಜ್ರಮಸ್ತ್ರಂ ನರಾಧಿಪ||
ನರಾಧಿಪ! ಅವನ ಆ ಮಾತನ್ನು ಕೇಳಿ ನಾನು ದೇವರಾಜನಿಗೆ ಪ್ರಿಯವಾದ ವಜ್ರಾಸ್ತ್ರವನ್ನು ಬಿಟ್ಟೆನು.
03169014a ಅಚಲಂ ಸ್ಥಾನಮಾಸಾದ್ಯ ಗಾಂಡೀವಮನುಮಂತ್ರ್ಯ ಚ|
03169014c ಅಮುಂಚಂ ವಜ್ರಸಂಸ್ಪರ್ಶಾನಾಯಸಾನ್ನಿಶಿತಾಂ ಶರಾನ್||
ಅಚಲವಾದ ಗೋಡೆಗಳಿಂದ ಆವೃತ ಸ್ಥಳವನ್ನು ಸೇರಿ ವಜ್ರದ ಪರಿಣಾಮವುಳ್ಳ ಹರಿತ ಉಕ್ಕಿನ ಶರಗಳನ್ನು ಪ್ರಯೋಗಿಸಲು ಪ್ರಾರಂಭಿಸಿದೆನು.
03169015a ತತೋ ಮಾಯಾಶ್ಚ ತಾಃ ಸರ್ವಾ ನಿವಾತಕವಚಾಂಶ್ಚ ತಾನ್|
03169015c ತೇ ವಜ್ರಚೋದಿತಾ ಬಾಣಾ ವಜ್ರಭೂತಾಃ ಸಮಾವಿಶನ್||
ವಜ್ರದಿಂದ ಪ್ರಚೋದಿತ ಆ ಬಾಣಗಳು ವಜ್ರದಂತೆಯೇ ಆಗಿ ನಿವಾತಕವಚರ ಆ ಎಲ್ಲ ಮಾಯೆಗಳನ್ನು ಭೇದಿಸಿದವು.
03169016a ತೇ ವಜ್ರವೇಗಾಭಿಹತಾ ದಾನವಾಃ ಪರ್ವತೋಪಮಾಃ|
03169016c ಇತರೇತರಮಾಶ್ಲಿಷ್ಯ ನ್ಯಪತನ್ಪೃಥಿವೀತಲೇ||
ಆ ವೇಗವಾದ ವಜ್ರಗಳ ಹೊಡೆತಕ್ಕೆ ಸಿಲುಕಿದ ಪರ್ವತೋಪಮ ದಾನವರು ಇತರರನ್ನು ಅಪ್ಪಿಕೊಂಡು ಭೂಮಿಯ ಮೇಲೆ ಬಿದ್ದರು.
03169017a ಅಂತರ್ಭೂಮೌ ತು ಯೇಽಗೃಹ್ಣನ್ದಾನವಾ ರಥವಾಜಿನಃ|
03169017c ಅನುಪ್ರವಿಶ್ಯ ತಾನ್ಬಾಣಾಃ ಪ್ರಾಹಿಣ್ವನ್ಯಮಸಾದನಂ||
ಆ ಬಾಣಗಳು ಭೂಮಿಯ ಒಳಗೆ ಇದ್ದು ರಥ ಕುದುರೆಗಳನ್ನು ಹಿಡಿದಿದ್ದ ದಾನವರನ್ನೂ ಹುಡುಕಿ ಯಮಸಾದನಕ್ಕೆ ಕಳುಹಿಸಿದವು.
03169018a ಹತೈರ್ನಿವಾತಕವಚೈರ್ನಿರಸ್ತೈಃ ಪರ್ವತೋಪಮೈಃ|
03169018c ಸಮಾಚ್ಚಾದ್ಯತ ದೇಶಃ ಸ ವಿಕೀರ್ಣೈರಿವ ಪರ್ವತೈಃ||
ಆ ಪ್ರದೇಶವು ಚದುರಿದ ಪರ್ವತಗಳಂತೆ ಪರ್ವತೋಪಮ ನಿವಾತಕವಚರ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಶವಗಳಿಂದ ತುಂಬಿಹೋಯಿತು.
03169019a ನ ಹಯಾನಾಂ ಕ್ಷತಿಃ ಕಾ ಚಿನ್ನ ರಥಸ್ಯ ನ ಮಾತಲೇಃ|
03169019c ಮಮ ಚಾದೃಶ್ಯತ ತದಾ ತದದ್ಭುತಮಿವಾಭವತ್||
ಆದರೆ ಕುದುರೆಗಳಾಗಲೀ, ರಥವಾಗಲೀ, ಮಾತಲಿಯಾಗಲೀ ಅಥವಾ ನಾನಾಗಲೀ ಸ್ವಲ್ಪವೂ ಚ್ಯುತಿಯನ್ನು ಹೊಂದಲಿಲ್ಲ. ಇದೊಂದು ಅದ್ಭುತವೇ ನಡೆಯಿತು.
03169020a ತತೋ ಮಾಂ ಪ್ರಹಸನ್ರಾಜನ್ಮಾತಲಿಃ ಪ್ರತ್ಯಭಾಷತ|
03169020c ನೈತದರ್ಜುನ ದೇವೇಷು ತ್ವಯಿ ವೀರ್ಯಂ ಯದೀಕ್ಷ್ಯತೇ||
ರಾಜನ್! ಆಗ ಮಾತಲಿಯು ನಗುತ್ತಾ ನನಗೆ ಹೇಳಿದನು: “ಅರ್ಜುನ! ನಿನ್ನಲ್ಲಿ ಕಂಡುಬರುವ ವೀರ್ಯವು ದೇವತೆಗಳಲ್ಲಿಯೂ ಇಲ್ಲ.”
03169021a ಹತೇಷ್ವಸುರಸಂಘೇಷು ದಾರಾಸ್ತೇಷಾಂ ತು ಸರ್ವಶಃ|
03169021c ಪ್ರಾಕ್ರೋಶನ್ನಗರೇ ತಸ್ಮಿನ್ಯಥಾ ಶರದಿ ಲಕ್ಷ್ಮಣಾಃ||
ಆ ಅಸುರರ ಗುಂಪುಗಳು ಹತರಾಗಲು ಅವರ ಪತ್ನಿಯರೆಲ್ಲರೂ ನಗರದಲ್ಲಿ ಶರದೃತುವಿನ ಸಾರಂಗಗಳಂತೆ ರೋದಿಸತೊಡಗಿದರು.
03169022a ತತೋ ಮಾತಲಿನಾ ಸಾರ್ಧಮಹಂ ತತ್ಪುರಮಭ್ಯಯಾಂ|
03169022c ತ್ರಾಸಯನ್ರಥಘೋಷೇಣ ನಿವಾತಕವಚಸ್ತ್ರಿಯಃ||
ಮಾತಲಿಯೊಂದಿಗೆ ನಾನು ನಿವಾತಕವಚ ಸ್ತ್ರೀಯರನ್ನು ರಥಘೋಷದಿಂದ ನಡುಗಿಸುತ್ತಾ ಆ ಪುರದೊಳಗೆ ಹೋದೆನು.
03169023a ತಾನ್ದೃಷ್ಟ್ವಾ ದಶಸಾಹಸ್ರಾನ್ಮಯೂರಸದೃಶಾನ್ ಹಯಾನ್|
03169023c ರಥಂ ಚ ರವಿಸಂಕಾಶಂ ಪ್ರಾದ್ರವನ್ಗಣಶಃ ಸ್ತ್ರಿಯಃ||
ಹತ್ತುಸಾವಿರ ನವಿಲಿನ ಬಣ್ಣಗಳ ಕುದುರೆಗಳನ್ನು ಮತ್ತು ರವಿಸಂಕಾಶ ರಥವನ್ನು ನೋಡಿ ಸ್ತ್ರೀಯರು ಗುಂಪುಗುಂಪಾಗಿ ಓಡಿದರು.
03169024a ತಾಭಿರಾಭರಣೈಃ ಶಬ್ಧಸ್ತ್ರಾಸಿತಾಭಿಃ ಸಮೀರಿತಃ|
03169024c ಶಿಲಾನಾಮಿವ ಶೈಲೇಷು ಪತಂತೀನಾಮಭೂತ್ತದಾ||
ಆಭರಣಗಳೊಂದಿಗೆ ಆ ವಿಭೀತರಾದ ಸ್ತ್ರೀಯರು ಮಾಡಿದ ಶಬ್ಧವು ಪರ್ವತದಿಂದ ಹಾಸಿಗಲ್ಲುಗಳು ಕೆಳಗೆ ಬೀಳುತ್ತಿರುವಂತೆ ಕೇಳಿಸಿದವು.
03169025a ವಿತ್ರಸ್ತಾ ದೈತ್ಯನಾರ್ಯಸ್ತಾಃ ಸ್ವಾನಿ ವೇಶ್ಮಾನ್ಯಥಾವಿಶನ್|
03169025c ಬಹುರತ್ನವಿಚಿತ್ರಾಣಿ ಶಾತಕುಂಭಮಯಾನಿ ಚ||
ಬೆದರಿ ನಡುಗುತ್ತ ಆ ದೈತ್ಯನಾರಿಯರು ವಿಚಿತ್ರವಾದ ಬಹುರತ್ನಗಳಿಂದ ಮತ್ತು ಬಂಗಾರದಿಂದ ನಿರ್ಮಿಸಲ್ಪಟ್ಟಿದ್ದ ತಮ್ಮ ಮನೆಗಳನ್ನು ಪ್ರವೇಶಿಸಿದರು.
03169026a ತದದ್ಭುತಾಕಾರಮಹಂ ದೃಷ್ಟ್ವಾ ನಗರಮುತ್ತಮಂ|
03169026c ವಿಶಿಷ್ಟಂ ದೇವನಗರಾದಪೃಚ್ಚಂ ಮಾತಲಿಂ ತತಃ||
ಆ ಅದ್ಭುತಾಕಾರದ, ದೇವನಗರವನ್ನೂ ಮೀರಿದ ವಿಶಿಷ್ಠವಾದ ಉತ್ತಮ ನಗರವನ್ನು ನೋಡಿ ನಾನು ಮಾತಲಿಗೆ ಹೇಳಿದೆನು:
03169027a ಇದಮೇವಂವಿಧಂ ಕಸ್ಮಾದ್ದೇವತಾ ನಾವಿಶಂತ್ಯುತ|
03169027c ಪುರಂದರಪುರಾದ್ಧೀದಂ ವಿಶಿಷ್ಟಮಿತಿ ಲಕ್ಷಯೇ||
“ದೇವತೆಗಳು ಏಕೆ ಈ ಅಮೋಘ ಸ್ಥಳದಲ್ಲಿ ವಾಸಿಸುವುದಿಲ್ಲ? ಇದು ಪುರಂದರನ ಪುರಕ್ಕಿಂತಲೂ ವಿಶಿಷ್ಟವಾಗಿದೆ ಎಂದು ನನಗನ್ನಿಸುತ್ತದೆ.”
03169028 ಮಾತಲಿರುವಾಚ|
03169028a ಆಸೀದಿದಂ ಪುರಾ ಪಾರ್ಥ ದೇವರಾಜಸ್ಯ ನಃ ಪುರಂ|
03169028c ತತೋ ನಿವಾತಕವಚೈರಿತಃ ಪ್ರಚ್ಯಾವಿತಾಃ ಸುರಾಃ||
ಮಾತಲಿಯು ಹೇಳಿದನು: “ಪಾರ್ಥ! ಇದು ಹಿಂದೆ ನಮ್ಮ ದೇವರಾಜನದೇ ಪುರವಾಗಿತ್ತು. ಆದರೆ ನಿವಾತಕವಚರಿಂದ ಸುರರು ಹೊರಗಟ್ಟಲ್ಪಟ್ಟಿದ್ದರು.
03169029a ತಪಸ್ತಪ್ತ್ವಾ ಮಹತ್ತೀವ್ರಂ ಪ್ರಸಾದ್ಯ ಚ ಪಿತಾಮಹಂ|
03169029c ಇದಂ ವೃತಂ ನಿವಾಸಾಯ ದೇವೇಭ್ಯಶ್ಚಾಭಯಂ ಯುಧಿ||
ಅವರು ಮಹಾತೀವ್ರ ತಪಸ್ಸನ್ನು ತಪಿಸಿ ಪಿತಾಮಹನ ಪ್ರಸಾದಕ್ಕೊಳಗಾದರು. ಇಲ್ಲಿಯೇ ವಾಸಿಸಿ ಯುದ್ಧದಲ್ಲಿ ದೇವತೆಗಳಿಂದ ಅಭಯವೇ ಅವರ ವರವಾಗಿತ್ತು.
03169030a ತತಃ ಶಕ್ರೇಣ ಭಗವಾನ್ಸ್ವಯಂಭೂರಭಿಚೋದಿತಃ|
03169030c ವಿಧತ್ತಾಂ ಭಗವಾನತ್ರೇತ್ಯಾತ್ಮನೋ ಹಿತಕಾಮ್ಯಯಾ||
ಆಗ ಶಕ್ರನು ಭಗವಾನ್ ಸ್ವಯಂಭುವಿನ ಮೊರೆಹೊಕ್ಕನು. “ಭಗವಾನ್! ನಿನ್ನದೇ ಹಿತಕ್ಕಾಗಿ ಈ ವಿಷಯದಲ್ಲಿ ವಿಧಿಸು!”
03169031a ತತ ಉಕ್ತೋ ಭಗವತಾ ದಿಷ್ಟಮತ್ರೇತಿ ವಾಸವಃ|
03169031c ಭವಿತಾಂತಸ್ತ್ವಮೇವೈಷಾಂ ದೇಹೇನಾನ್ಯೇನ ವೃತ್ರಹನ್||
ಈ ವಿಷಯದಲ್ಲಿ ದೈವದಂತಾಗುವುದನ್ನು ಭಗವಾನನು ವಾಸವನಿಗೆ ಹೇಳಿದನು: “ವೃತ್ರಹನ್! ನೀನೇ ಇವರ ಅಂತ್ಯಕ್ಕೆ ಕಾರಣನಾಗುತ್ತೀಯೆ. ಆದರೆ ಬೇರೆಯೇ ದೇಹದಲ್ಲಿ!”
03169032a ತತ ಏಷಾಂ ವಧಾರ್ಥಾಯ ಶಕ್ರೋಽಸ್ತ್ರಾಣಿ ದದೌ ತವ|
03169032c ನ ಹಿ ಶಕ್ಯಾಃ ಸುರೈರ್ಹಂತುಂ ಯ ಏತೇ ನಿಹತಾಸ್ತ್ವಯಾ||
ಆದುದರಿಂದ ಇವರ ವಧೆಗಾಗಿ ಶಕ್ರನು ನಿನಗೆ ಅಸ್ತ್ರಗಳನ್ನು ನೀಡಿದನು. ನೀನು ಸಂಹರಿಸಿದ ಇವರನ್ನು ಸುರರು ಸಂಹರಿಸಲು ಸಾಧ್ಯವಾಗುತ್ತಿರಲಿಲ್ಲ.
03169033a ಕಾಲಸ್ಯ ಪರಿಣಾಮೇನ ತತಸ್ತ್ವಮಿಹ ಭಾರತ|
03169033c ಏಷಾಮಂತಕರಃ ಪ್ರಾಪ್ತಸ್ತತ್ತ್ವಯಾ ಚ ಕೃತಂ ತಥಾ||
ಭಾರತ! ಕಾಲದ ಪರಿಣಾಮವಾಗಿ, ಇವರನ್ನು ಮುಗಿಸಲು ನೀನು ಇಲ್ಲಿಗೆ ಬಂದೆ ಮತ್ತು ಅದನ್ನು ಮಾಡಿದೆ ಕೂಡ.
03169034a ದಾನವಾನಾಂ ವಿನಾಶಾರ್ಥಂ ಮಹಾಸ್ತ್ರಾಣಾಂ ಮಹದ್ಬಲಂ|
03169034c ಗ್ರಾಹಿತಸ್ತ್ವಂ ಮಹೇಂದ್ರೇಣ ಪುರುಷೇಂದ್ರ ತದುತ್ತಮಂ||
ಪುರುಷೇಂದ್ರ! ದಾನವರ ವಿನಾಶಕ್ಕಾಗಿ ಮಹೇಂದ್ರನು ನಿನಗೆ ಉತ್ತಮವಾದ, ಮಹಾಬಲವಾದ ಮಹಾಸ್ತ್ರಗಳನ್ನು ನೀಡಿದನು.””
03169035 ಅರ್ಜುನ ಉವಾಚ|
03169035a ತತಃ ಪ್ರವಿಶ್ಯ ನಗರಂ ದಾನವಾಂಶ್ಚ ನಿಹತ್ಯ ತಾನ್|
03169035c ಪುನರ್ಮಾತಲಿನಾ ಸಾರ್ಧಮಗಚ್ಚಂ ದೇವಸದ್ಮ ತತ್||
ಅರ್ಜುನನು ಹೇಳಿದನು: “ಆಗ ನಗರವನ್ನು ಪ್ರವೇಶಿಸಿ ಆ ದಾನವರನ್ನು ಕೊಂದು ಪುನಃ ಮಾತಲಿಯೊಂದಿಗೆ ದೇವಪೀಠಕ್ಕೆ ಬಂದೆನು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ನಿವಾತಕವಚಯುದ್ಧೇ ಏಕೋನಸಪ್ತತ್ಯಧಿಕಶತತಮೋಽಧ್ಯಾಯ:|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ನಿವಾತಕವಚಯುದ್ಧದಲ್ಲಿ ನೂರಾಅರವತ್ತೊಂಭತ್ತನೆಯ ಅಧ್ಯಾಯವು.
