|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
Contents
Toggleಆರಣ್ಯಕ ಪರ್ವ: ಜಟಾಸುರವಧ ಪರ್ವ
೧೫೪
ಸೌಗಂಧಿಕಾ ವನದಲ್ಲಿ ಉಳಿದುಕೊಂಡಿರಲು ಒಮ್ಮೆ ಓರ್ವ ರಾಕ್ಷಸನು ಭೀಮನಿಲ್ಲದಿರುವಾಗ ಯುಧಿಷ್ಠಿರ, ದ್ರೌಪದಿ, ಮತ್ತು ನಕುಲ ಸಹದೇವರನ್ನು ಎತ್ತಿಕೊಂಡು ಹೋದುದು (೧-೨೭). ಅದನ್ನು ನೋಡಿದ ಭೀಮನು ರಾಕ್ಷಸನನ್ನು ಎದುರಿಸುವುದು (೨೮-೪೪). ಭೀಮ-ಜಟಾಸುರರ ಯುದ್ಧ, ಅಸುರನ ವಧೆ (೪೫-೬೧).
03154001 ವೈಶಂಪಾಯನ ಉವಾಚ|
03154001a ತತಸ್ತಾನ್ಪರಿವಿಶ್ವಸ್ತಾನ್ವಸತಸ್ತತ್ರ ಪಾಂಡವಾನ್|
03154001c ಗತೇಷು ತೇಷು ರಕ್ಷಃಸು ಭೀಮಸೇನಾತ್ಮಜೇಽಪಿ ಚ||
03154002a ರಹಿತಾನ್ಭೀಮಸೇನೇನ ಕದಾ ಚಿತ್ತಾನ್ಯದೃಚ್ಚಯಾ|
03154002c ಜಹಾರ ಧರ್ಮರಾಜಾನಂ ಯಮೌ ಕೃಷ್ಣಾಂ ಚ ರಾಕ್ಷಸಃ||
ವೈಶಂಪಾಯನನು ಹೇಳಿದನು: “ಭೀಮಸೇನಾತ್ಮಜ ಮತ್ತು ಇತರ ರಾಕ್ಷಸರು ಹೊರಟು ಹೋದ ನಂತರ ಅಲ್ಲಿ ಆ ಪಾಂಡವರು ಶಾಂತರಾಗಿ ವಾಸಿಸುತ್ತಿರುವಾಗ ಒಂದು ದಿನ ಭೀಮಸೇನನು ಇಲ್ಲದಿರುವಾಗ ಓರ್ವ ರಾಕ್ಷಸನು ಧರ್ಮರಾಜನನ್ನು, ನಕುಲ-ಸಹದೇವರನ್ನು ಮತ್ತು ಕೃಷ್ಣೆಯನ್ನು ಅಪಹರಿಸಿಕೊಂಡು ಹೋದನು.
03154003a ಬ್ರಾಹ್ಮಣೋ ಮಂತ್ರಕುಶಲಃ ಸರ್ವಾಸ್ತ್ರೇಷ್ವಸ್ತ್ರವಿತ್ತಮಃ|
03154003c ಇತಿ ಬ್ರುವನ್ಪಾಂಡಡವೇಯಾನ್ಪರ್ಯುಪಾಸ್ತೇ ಸ್ಮ ನಿತ್ಯದಾ||
ಅವನು ತಾನೋರ್ವ ಮಂತ್ರ ಕುಶಲ, ಶಸ್ತ್ರ ಅಶ್ವಸ್ತ್ರ ವಿತ್ತಮ ಬ್ರಾಹ್ಮಣನೆಂದು ಹೇಳಿಕೊಂಡು ಪಾಂಡವರನ್ನು ನಿತ್ಯವೂ ಸುತ್ತುವರೆದುಕೊಂಡು ಇರುತ್ತಿದ್ದನು.
03154004a ಪರೀಕ್ಷಮಾಣಃ ಪಾರ್ಥಾನಾಂ ಕಲಾಪಾನಿ ಧನೂಂಷಿ ಚ|
03154004c ಅಂತರಂ ಸಮಭಿಪ್ರೇಪ್ಸುರ್ನಾಮ್ನಾ ಖ್ಯಾತೋ ಜಟಾಸುರಃ||
ಆ ಜಟಾಸುರನೆಂಬ ವಿಖ್ಯಾತನು ಪಾರ್ಥನ ಧನುಸ್ಸು ಮತ್ತು ಬತ್ತಳಿಕೆಗಳನ್ನು ಪರೀಕ್ಷಿಸುವ ಅವಕಾಶವನ್ನು ಹುಡುಕುತ್ತಿದ್ದನು.
03154005a ಸ ಭೀಮಸೇನೇ ನಿಷ್ಕ್ರಾಂತೇ ಮೃಗಯಾರ್ಥಮರಿಂದಮೇ|
03154005c ಅನ್ಯದ್ರೂಪಂ ಸಮಾಸ್ಥಾಯ ವಿಕೃತಂ ಭೈರವಂ ಮಹತ್||
03154006a ಗೃಹೀತ್ವಾ ಸರ್ವಶಸ್ತ್ರಾಣಿ ದ್ರೌಪದೀಂ ಪರಿಗೃಹ್ಯ ಚ|
03154006c ಪ್ರಾತಿಷ್ಠತ ಸ ದುಷ್ಟಾತ್ಮಾ ತ್ರೀನ್ಗೃಹೀತ್ವಾ ಚ ಪಾಂಡವಾನ್||
ಅರಿಂದಮ ಭೀಮಸೇನನು ಬೇಟೆಗೆಂದು ಹೋಗಿದ್ದಾಗ, ಆ ದುಷ್ಟಾತ್ಮ ರಾಕ್ಷಸನು ತನ್ನ ಬೇರೆಯದಾದ ವಿಕೃತ ಮಹಾ ಭೈರವ ರೂಪವನ್ನು ಧರಿಸಿ ಸರ್ವ ಶಸ್ತ್ರಗಳನ್ನು ಹಿಡಿದು, ದ್ರೌಪದಿಯನ್ನೂ ಮೂವರು ಪಾಂಡವರನ್ನೂ ಎತ್ತಿಕೊಂಡು ಹೋದನು.
03154007a ಸಹದೇವಸ್ತು ಯತ್ನೇನ ತತೋಽಪಕ್ರಮ್ಯ ಪಾಂಡವಃ|
03154007c ಆಕ್ರಂದದ್ಭೀಮಸೇನಂ ವೈ ಯೇನ ಯಾತೋ ಮಹಾಬಲಃ||
ಆದರೆ ಪಾಂಡವ ಸಹದೇವನು ಮಾತ್ರ ಯತ್ನದಿಂದ ತಪ್ಪಿಸಿಕೊಂಡು ಭೀಮಸೇನನನ್ನು ಕರೆಯುತ್ತಾ ಆ ಮಹಾಬಲನು ಹೋದ ದಾರಿಯಲ್ಲಿಯೇ ಹೋದನು.
03154008a ತಮಬ್ರವೀದ್ಧರ್ಮರಾಜೋ ಹ್ರಿಯಮಾಣೋ ಯುಧಿಷ್ಠಿರಃ|
03154008c ಧರ್ಮಸ್ತೇ ಹೀಯತೇ ಮೂಢ ನ ಚೈನಂ ಸಮವೇಕ್ಷಸೇ||
ಎತ್ತಿಕೊಂಡು ಹೋಗುತ್ತಿರುವಾಗ ಧರ್ಮರಾಜ ಯುಧಿಷ್ಠಿರನು ಅವನಿಗೆ ಹೇಳಿದನು: “ಮೂಢ! ನಿನ್ನ ಧರ್ಮವು ಕ್ಷೀಣಿಸುತ್ತಾ ಬಂದಿದೆಯಾದರೂ ಅದನ್ನು ನೀನು ಗಮನಿಸುತ್ತಿಲ್ಲ!
03154009a ಯೇಽನ್ಯೇ ಕೇ ಚಿನ್ಮನುಷ್ಯೇಷು ತಿರ್ಯಗ್ಯೋನಿಗತಾ ಅಪಿ|
03154009c ಗಂಧರ್ವಯಕ್ಷರಕ್ಷಾಂಸಿ ವಯಾಂಸಿ ಪಶವಸ್ತಥಾ||
03154009e ಮನುಷ್ಯಾನುಪಜೀವಂತಿ ತತಸ್ತ್ವಮುಪಜೀವಸಿ||
ಮನುಷ್ಯರೂ ಮತ್ತು ಇತರ ಯೋನಿಗಳಲ್ಲಿ ಜನಿಸಿದ ಅನ್ಯರೂ ಕೂಡ - ಗಂಧರ್ವರು, ಯಕ್ಷರು, ರಾಕ್ಷಸರು, ಪಕ್ಷಿ ಪ್ರಾಣಿಗಳು ಮನುಷ್ಯರನ್ನು ಅವಲಂಬಿಸಿ ಜೀವಿಸುತ್ತಾರೆ. ಅವರಂತೆ ನೀನೂ ಕೂಡ ಉಪಜೀವನ ಮಾಡುತ್ತೀಯೆ!
03154010a ಸಮೃದ್ಧ್ಯಾ ಹ್ಯಸ್ಯ ಲೋಕಸ್ಯ ಲೋಕೋ ಯುಷ್ಮಾಕಮೃಧ್ಯತೇ|
03154010c ಇಮಂ ಚ ಲೋಕಂ ಶೋಚಂತಮನುಶೋಚಂತಿ ದೇವತಾಃ||
03154010e ಪೂಜ್ಯಮಾನಾಶ್ಚ ವರ್ಧಂತೇ ಹವ್ಯಕವ್ಯೈರ್ಯಥಾವಿಧಿ||
ನಮ್ಮ ಈ ಲೋಕವು ಸಮೃದ್ಧವಾಗಿದ್ದರೆ ನಿನ್ನ ಲೋಕವೂ ವೃದ್ಧಿಹೊಂದುತ್ತದೆ. ಈ ಲೋಕವು ಶೋಕದಿಂದಿದ್ದರೆ ದೇವತೆಗಳು ಶೋಕಿಸುತ್ತಾರೆ. ಯಾಕೆಂದರೆ ಅವರು ಯಥಾವಿಧಿಯಾಗಿ ನಡೆಯುವ ಪೂಜೆ ಮತ್ತು ಹವ್ಯಕವ್ಯಗಳ ಮೂಲಕ ವೃದ್ಧಿ ಹೊಂದುತ್ತಾರೆ.
03154011a ವಯಂ ರಾಷ್ಟ್ರಸ್ಯ ಗೋಪ್ತಾರೋ ರಕ್ಷಿತಾರಶ್ಚ ರಾಕ್ಷಸ|
03154011c ರಾಷ್ಟ್ರಸ್ಯಾರಕ್ಷ್ಯಮಾಣಸ್ಯ ಕುತೋ ಭೂತಿಃ ಕುತಃ ಸುಖಂ||
ರಾಕ್ಷಸ! ನಾವು ರಾಷ್ಟ್ರವನ್ನು ಕಾಯುವವರು ಮತ್ತು ರಕ್ಷಕರು. ರಾಷ್ಟ್ರದ ರಕ್ಷಣೆಯೇ ಇಲ್ಲವೆಂದಾದರೆ ಎಲ್ಲಿಯ ಅಭಿವೃದ್ಧಿ ಮತ್ತು ಹೇಗಿನ ಸುಖ!
03154012a ನ ಚ ರಾಜಾವಮಂತವ್ಯೋ ರಕ್ಷಸಾ ಜಾತ್ವನಾಗಸಿ|
03154012c ಅಣುರಪ್ಯಪಚಾರಶ್ಚ ನಾಸ್ತ್ಯಸ್ಮಾಕಂ ನರಾಶನ||
ನರಾಶನ! ತಪ್ಪಿಲ್ಲದ ರಾಜನನ್ನು ರಾಕ್ಷಸನು ಹಳಿಯಬಾರದು. ನಾವು ಅಣುವಿನಷ್ಟೂ ಏನೂ ತಪ್ಪನ್ನು ಮಾಡಿಲ್ಲ.
03154013a ದ್ರೋಗ್ಧವ್ಯಂ ನ ಚ ಮಿತ್ರೇಷು ನ ವಿಶ್ವಸ್ತೇಷು ಕರ್ಹಿ ಚಿತ್|
03154013c ಯೇಷಾಂ ಚಾನ್ನಾನಿ ಭುಂಜೀತ ಯತ್ರ ಚ ಸ್ಯಾತ್ಪ್ರತಿಶ್ರಯಃ||
ಸ್ನೇಹ ಮತ್ತು ವಿಶ್ವಾಸದಿಂದಿದ್ದವರನ್ನು, ಯಾರ ಅನ್ನವನ್ನು ಉಂಡಿದ್ದೇವೋ ಮತ್ತು ಯಾರ ಆಶ್ರಯದಲ್ಲಿದ್ದೆವೋ ಅಂಥವರಿಗೆ ಎಂದೂ ಆಪತ್ತನ್ನು ತರಬಾರದು.
03154014a ಸ ತ್ವಂ ಪ್ರತಿಶ್ರಯೇಽಸ್ಮಾಕಂ ಪೂಜ್ಯಮಾನಃ ಸುಖೋಷಿತಃ|
03154014c ಭುಕ್ತ್ವಾ ಚಾನ್ನಾನಿ ದುಷ್ಪ್ರಜ್ಞ ಕಥಮಸ್ಮಾಂ ಜಿಹೀರ್ಷಸಿ||
ನೀನು ನಮ್ಮೊಡನೆ ಉಳಿದುಕೊಂಡಿದ್ದೆ, ನಮ್ಮ ಗೌರವವನ್ನು ಪಡೆದು ನೀನು ಸುಖವಾಗಿ ವಾಸಿಸುತ್ತಿದ್ದೆ. ದುಷ್ಪ್ರಜ್ಞ! ನಮ್ಮ ಅನ್ನವನ್ನೇ ತಿಂದ ನೀನು ನಮ್ಮನ್ನು ಏಕೆ ಅಪಹರಿಸಿಕೊಂಡು ಹೋಗುತ್ತಿರುವೆ?
03154015a ಏವಮೇವ ವೃಥಾಚಾರೋ ವೃಥಾವೃದ್ಧೋ ವೃಥಾಮತಿಃ|
03154015c ವೃಥಾಮರಣಮರ್ಹಸ್ತ್ವಂ ವೃಥಾದ್ಯ ನ ಭವಿಷ್ಯಸಿ||
ನಿನ್ನ ಆಚಾರವು ಸುಳ್ಳು. ನಿನ್ನ ವಯಸ್ಸು ಸುಳ್ಳು. ನಿನ್ನ ಬುದ್ಧಿಯೂ ಸುಳ್ಳು! ಆದರೆ ಇಂದು ನಿನಗೆ ದೊರಕುವ ಮರಣವು ಸುಳ್ಳಾಗುವುದಿಲ್ಲ!
03154016a ಅಥ ಚೇದ್ದುಷ್ಟಬುದ್ಧಿಸ್ತ್ವಂ ಸರ್ವೈರ್ಧರ್ಮೈರ್ವಿವರ್ಜಿತಃ|
03154016c ಪ್ರದಾಯ ಶಸ್ತ್ರಾಣ್ಯಸ್ಮಾಕಂ ಯುದ್ಧೇನ ದ್ರೌಪದೀಂ ಹರ||
03154017a ಅಥ ಚೇತ್ತ್ವಮವಿಜ್ಞಾಯ ಇದಂ ಕರ್ಮ ಕರಿಷ್ಯಸಿ|
03154017c ಅಧರ್ಮಂ ಚಾಪ್ಯಕೀರ್ತಿಂ ಚ ಲೋಕೇ ಪ್ರಾಪ್ಸ್ಯಸಿ ಕೇವಲಂ||
ನೀನು ದುಷ್ಟಬುದ್ಧಿಯವನೂ ಸರ್ವಧರ್ಮಗಳನ್ನು ಬಿಟ್ಟವನೂ ಆಗಿದ್ದರೆ ಈಗ ನಮ್ಮ ಅಸ್ತ್ರಗಳನ್ನು ಕೊಟ್ಟು ಯುದ್ಧದಲ್ಲಿ ದ್ರೌಪದಿಯನ್ನು ಪಡೆ. ಆದರೆ ನೀನು ಅಜ್ಞಾನದಿಂದ ಇದೇ ಕೆಲಸವನ್ನು ಮಾಡುತ್ತೀಯಾದರೆ ಅಧರ್ಮವನ್ನು ಮಾಡಿದವರು ಪಡೆಯುವ ತುಚ್ಛ ಲೋಕವನ್ನು ಹೊಂದುತ್ತೀಯೆ.
03154018a ಏತಾಮದ್ಯ ಪರಾಮೃಶ್ಯ ಸ್ತ್ರಿಯಂ ರಾಕ್ಷಸ ಮಾನುಷೀಂ|
03154018c ವಿಷಮೇತತ್ಸಮಾಲೋಡ್ಯ ಕುಂಭೇನ ಪ್ರಾಶಿತಂ ತ್ವಯಾ||
ರಾಕ್ಷಸ! ಇಂದು ನೀನು ಮನುಷ್ಯ ಸ್ತ್ರೀಯನ್ನು ಎತ್ತಿಕೊಂಡು ಕುಂಭದಲ್ಲಿರುವ ವಿಷವನ್ನು ಕದಡಿ ಕುಡಿದಿದ್ದೀಯೆ!”
03154019a ತತೋ ಯುಧಿಷ್ಠಿರಸ್ತಸ್ಯ ಭಾರಿಕಃ ಸಮಪದ್ಯತ|
03154019c ಸ ತು ಭಾರಾಭಿಭೂತಾತ್ಮಾ ನ ತಥಾ ಶೀಘ್ರಗೋಽಭವತ್||
03154020a ಅಥಾಬ್ರವೀದ್ದ್ರೌಪದೀಂ ಚ ನಕುಲಂ ಚ ಯುಧಿಷ್ಠಿರಃ|
ಆಗ ಯುಧಿಷ್ಠಿರನು ತನ್ನ ಭಾರದಿಂದ ಅವನನ್ನು ಒತ್ತಲು ಅವನ ಭಾರದಿಂದ ಆ ಭೂತಾತ್ಮನು ಶೀಘ್ರವಾಗಿ ಹೋಗಲು ಸಾಧ್ಯವಾಗಲಿಲ್ಲ. ಆಗ ಯುಧಿಷ್ಠಿರನು ದ್ರೌಪದಿ ಮತ್ತು ನಕುಲರಿಗೆ ಹೇಳಿದನು:
03154020c ಮಾ ಭೈಷ್ಟ ರಾಕ್ಷಸಾನ್ಮೂಢಾದ್ಗತಿರಸ್ಯ ಮಯಾ ಹೃತಾ||
03154021a ನಾತಿದೂರೇ ಮಹಾಬಾಹುರ್ಭವಿತಾ ಪವನಾತ್ಮಜಃ|
03154021c ಅಸ್ಮಿನ್ಮುಹೂರ್ತೇ ಸಂಪ್ರಾಪ್ತೇ ನ ಭವಿಷ್ಯತಿ ರಾಕ್ಷಸಃ||
“ಮೂಢ ರಾಕ್ಷಸರಿಂದ ಭಯಪಡಬೇಡಿ! ಅವನ ಓಟವನ್ನು ಸ್ಥಗಿತಗೊಳಿಸಿದ್ದೇನೆ. ಮಹಾಬಾಹು ಪವನಾತ್ಮಜನು ತುಂಬಾ ದೂರದಲ್ಲಿ ಇರಲಿಕ್ಕಿಲ್ಲ. ಸ್ವಲ್ಪವೇ ಸಮಯದಲ್ಲಿ ಅವನು ಬಂದರೆ ಈ ರಾಕ್ಷಸನು ಉಳಿಯುವುದಿಲ್ಲ.”
03154022a ಸಹದೇವಸ್ತು ತಂ ದೃಷ್ಟ್ವಾ ರಾಕ್ಷಸಂ ಮೂಢಚೇತಸಂ|
03154022c ಉವಾಚ ವಚನಂ ರಾಜನ್ಕುಂತೀಪುತ್ರಂ ಯುಧಿಷ್ಠಿರಂ||
ಆ ಮೂಢಚೇತಸ ರಾಕ್ಷಸನನ್ನು ನೋಡಿ ಸಹದೇವನು ಕುಂತೀಪುತ್ರ ಯುಧಿಷ್ಠಿರನಿಗೆ ಈ ಮಾತುಗಳನ್ನಾಡಿದನು:
03154023a ರಾಜನ್ಕಿಂ ನಾಮ ತತ್ಕೃತ್ಯಂ ಕ್ಷತ್ರಿಯಸ್ಯಾಸ್ತ್ಯತೋಽಧಿಕಂ|
03154023c ಯದ್ಯುದ್ಧೇಽಭಿಮುಖಃ ಪ್ರಾಣಾಂಸ್ತ್ಯಜೇಚ್ಛತ್ರೂಂ ಜಯೇತ ವಾ||
“ರಾಜನ್! ಯುದ್ಧದಲ್ಲಿ ಇವನನ್ನು ಎದುರಿಸಿ ಪ್ರಾಣವನ್ನು ತ್ಯಜಿಸುವುದರಿಂದ ಅಥವಾ ಶತ್ರುವನ್ನು ಜಯಿಸುವುದರಿಂದ ದೊರೆಯುವಷ್ಟು ತೃಪ್ತಿಯು ಕ್ಷತ್ರಿಯನಿಗೆ ಇನ್ನ್ಯಾವುದರಿಂದ ದೊರೆಯುತ್ತದೆ?
03154024a ಏಷ ಚಾಸ್ಮಾನ್ವಯಂ ಚೈನಂ ಯುಧ್ಯಮಾನಾಃ ಪರಂತಪ|
03154024c ಸೂದಯೇಮ ಮಹಾಬಾಹೋ ದೇಶಕಾಲೋ ಹ್ಯಯಂ ನೃಪ||
ಪರಂತಪ! ಯುದ್ಧಮಾಡಿ ನಾವು ಇವನನ್ನು ಮುಗಿಸಬಹುದು ಅಥವಾ ಇವನೇ ನಮ್ಮನ್ನು ಮುಗಿಸಬಹುದು. ಮಹಾಬಾಹು ನೃಪ! ಇದೇ ನಮಗೆ ಒದಗಿಬಂದಿರುವ ಸ್ಥಳ ಮತ್ತು ಅವಕಾಶ!
03154025a ಕ್ಷತ್ರಧರ್ಮಸ್ಯ ಸಂಪ್ರಾಪ್ತಃ ಕಾಲಃ ಸತ್ಯಪರಾಕ್ರಮ|
03154025c ಜಯಂತಃ ಪಾತ್ಯಮಾನಾ ವಾ ಪ್ರಾಪ್ತುಮರ್ಹಾಮ ಸದ್ಗತಿಂ||
ಸತ್ಯಪರಾಕ್ರಮ! ಕ್ಷತ್ರಧರ್ಮವನ್ನು ಪಾಲಿಸುವ ಕಾಲವು ಒದಗಿಬಂದಿದೆ. ಜಯಿಸಿದರೆ ಅಥವಾ ಮಡಿದರೆ ನಮಗೆ ಸದ್ಗತಿಯು ಪ್ರಾಪ್ತವಾಗುತ್ತದೆ.
03154026a ರಾಕ್ಷಸೇ ಜೀವಮಾನೇಽದ್ಯ ರವಿರಸ್ತಮಿಯಾದ್ಯದಿ|
03154026c ನಾಹಂ ಬ್ರೂಯಾಂ ಪುನರ್ಜಾತು ಕ್ಷತ್ರಿಯೋಽಸ್ಮೀತಿ ಭಾರತ||
ಭಾರತ! ಇಂದು ಸೂರ್ಯನು ಮುಳುಗುವಾಗಲೂ ಈ ರಾಕ್ಷಸನು ಜೀವಿತನಾಗಿದ್ದರೆ ಇನ್ನು ಎಂದೂ ನನ್ನನ್ನು ಕ್ಷತ್ರಿಯನೆಂದು ಕರೆದುಕೊಳ್ಳಲಾರೆ!
03154027a ಭೋ ಭೋ ರಾಕ್ಷಸ ತಿಷ್ಠಸ್ವ ಸಹದೇವೋಽಸ್ಮಿ ಪಾಂಡವಃ|
03154027c ಹತ್ವಾ ವಾ ಮಾಂ ನಯಸ್ವೈನಾನ್ ಹತೋ ವಾದ್ಯೇಹ ಸ್ವಪ್ಸ್ಯಸಿ||
ಭೋ! ಭೋ! ರಾಕ್ಷಸ! ನಿಲ್ಲು! ನಾನು ಪಾಂಡವ ಸಹದೇವ! ನನ್ನನ್ನು ಕೊಂದು ಅವರನ್ನು ಎತ್ತಿಕೊಂಡು ಹೋಗು ಅಥವಾ ನನ್ನಿಂದ ಮರಣ ಹೊಂದು.”
03154028a ತಥೈವ ತಸ್ಮಿನ್ಬ್ರುವತಿ ಭೀಮಸೇನೋ ಯದೃಚ್ಚಯಾ|
03154028c ಪ್ರಾದೃಶ್ಯತ ಮಹಾಬಾಹುಃ ಸವಜ್ರ ಇವ ವಾಸವಃ||
ಅವನು ಹೀಗೆ ಹೇಳುತ್ತಿರಲು ಅಕಸ್ಮಾತ್ತಾಗಿ ಮಹಾಬಾಹು ಭೀಮಸೇನನು ವಜ್ರಧಾರಿ ವಾಸವನಂತೆ ಅಲ್ಲಿ ಕಂಡುಬಂದನು.
03154029a ಸೋಽಪಶ್ಯದ್ಭ್ರಾತರೌ ತತ್ರ ದ್ರೌಪದೀಂ ಚ ಯಶಸ್ವಿನೀಂ|
03154029c ಕ್ಷಿತಿಸ್ಥಂ ಸಹದೇವಂ ಚ ಕ್ಷಿಪಂತಂ ರಾಕ್ಷಸಂ ತದಾ||
03154030a ಮಾರ್ಗಾಚ್ಚ ರಾಕ್ಷಸಂ ಮೂಢಂ ಕಾಲೋಪಹತಚೇತಸಂ|
03154030c ಭ್ರಮಂತಂ ತತ್ರ ತತ್ರೈವ ದೈವೇನ ವಿನಿವಾರಿತಂ||
ಅವನು ತನ್ನ ಈರ್ವರು ಸಹೋದರರನ್ನೂ ಯಶಸ್ವಿನೀ ದ್ರೌಪದಿಯನ್ನೂ, ಭೂಮಿಯ ಮೇಲೆ ನಿಂತಿರುವ ಸಹದೇವನನ್ನೂ ಮತ್ತು ಕಾಲವಶನಾಗಿ ಬುದ್ಧಿಯನ್ನು ಕಳೆದುಕೊಂಡು ಅಲ್ಲಲ್ಲಿ ತಿರುಗುತ್ತಿರಲು ದೈವದಿಂದ ತಡೆಹಿಡಿಯಲ್ಪಟ್ಟು ಮಾರ್ಗದ ಎದುರು ನಿಂತಿರುವ ಮೂಢ ರಾಕ್ಷಸನನ್ನೂ ನೋಡಿದನು.
03154031a ಭ್ರಾತೄಂಸ್ತಾನ್ ಹ್ರಿಯತೋ ದೃಷ್ಟ್ವಾ ದ್ರೌಪದೀಂ ಚ ಮಹಾಬಲಃ|
03154031c ಕ್ರೋಧಮಾಹಾರಯದ್ಭೀಮೋ ರಾಕ್ಷಸಂ ಚೇದಮಬ್ರವೀತ್||
ದ್ರೌಪದಿಯನ್ನೂ ಸಹೋದರರನ್ನು ಅಪಹರಿಸಿಕೊಂಡು ಹೋಗುತ್ತಿರುವುದನ್ನು ನೋಡಿದ ಮಹಾಬಲ ಭೀಮನು ಕ್ರೋಧಮೂರ್ಛಿತನಾಗಿ ರಾಕ್ಷಸನಿಗೆ ಹೇಳಿದನು:
03154032a ವಿಜ್ಞಾತೋಽಸಿ ಮಯಾ ಪೂರ್ವಂ ಚೇಷ್ಟಂ ಶಸ್ತ್ರಪರೀಕ್ಷಣೇ|
03154032c ಆಸ್ಥಾ ತು ತ್ವಯಿ ಮೇ ನಾಸ್ತಿ ಯತೋಽಸಿ ನ ಹತಸ್ತದಾ||
03154032e ಬ್ರಹ್ಮರೂಪಪ್ರತಿಚ್ಚನ್ನೋ ನ ನೋ ವದಸಿ ಚಾಪ್ರಿಯಂ||
“ನಮ್ಮ ಶಸ್ತ್ರಗಳನ್ನು ನೀನು ಪರೀಕ್ಷಿಸುತ್ತಿರುವಾಗ ಮೊದಲೇ ನಿನ್ನನ್ನು ಅರ್ಥಮಾಡಿಕೊಂಡಿದ್ದೆ! ಆದರೆ ನಿನ್ನ ಕುರಿತು ನನಗೆ ಅಷ್ಟು ಆಸಕ್ತಿಯಿಲ್ಲದೇ ಇದ್ದುದರಿಂದ ಆಗಲೇ ನಿನ್ನನ್ನು ಕೊಲ್ಲಲಿಲ್ಲ. ಬ್ರಾಹ್ಮಣ ರೂಪದ ಹಿಂದೆ ಅಡಗಿಕೊಂಡಿದ್ದ ನೀನು ನಮಗೆ ಅಪ್ರಿಯ ಮಾತುಗಳನ್ನೆಂದೂ ಆಡಿರಲಿಲ್ಲ.
03154033a ಪ್ರಿಯೇಷು ಚರಮಾಣಂ ತ್ವಾಂ ನ ಚೈವಾಪ್ರಿಯಕಾರಿಣಂ|
03154033c ಅತಿಥಿಂ ಬ್ರಹ್ಮರೂಪಂ ಚ ಕಥಂ ಹನ್ಯಾಮನಾಗಸಂ||
03154033e ರಾಕ್ಷಸಂ ಮನ್ಯಮಾನೋಽಪಿ ಯೋ ಹನ್ಯಾನ್ನರಕಂ ವ್ರಜೇತ್||
ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದ ಎಂದೂ ಅಪ್ರಿಯ ಕೆಲಸಗಳನ್ನು ಮಾಡದೇ ಇದ್ದ ಬ್ರಾಹ್ಮಣ ರೂಪದಲ್ಲಿ ಅತಿಥಿಯಾಗಿದ್ದ ತಪ್ಪನ್ನೇ ಮಾಡದಿದ್ದ ನಿನ್ನನ್ನು ಹೇಗೆ ತಾನೇ ನಾನು ಕೊಲ್ಲುತ್ತಿದ್ದೆ? ನೀನೊಬ್ಬ ರಾಕ್ಷಸನೆಂದು ತಿಳಿದೂ ನಿನ್ನನ್ನು ಸಂಹರಿಸಿದವನು ನರಕವನ್ನು ಸೇರುತ್ತಿದ್ದ!
03154034a ಅಪಕ್ವಸ್ಯ ಚ ಕಾಲೇನ ವಧಸ್ತವ ನ ವಿದ್ಯತೇ|
03154034c ನೂನಮದ್ಯಾಸಿ ಸಂಪಕ್ವೋ ಯಥಾ ತೇ ಮತಿರೀದೃಶೀ||
03154034e ದತ್ತಾ ಕೃಷ್ಣಾಪಹರಣೇ ಕಾಲೇನಾದ್ಭುತಕರ್ಮಣಾ||
ನಿನ್ನ ವಧೆಯ ಕಾಲವು ಒದಗಿ ಬಂದಿರಲಿಲ್ಲವೆಂದು ತೋರುತ್ತದೆ. ಆದರೆ ಇಂದು ನಿನ್ನದೇ ಬುದ್ಧಿ ಕಾರ್ಯದಿಂದ ಅಧ್ಭುತಕರ್ಮಿ ಕಾಲವು ಕೃಷ್ಣೆಯ ಅಪಹರಣದ ಮೂಲಕ ಅದನ್ನು ಒದಗಿಸಿ ಕೊಟ್ಟಿದೆ.
03154035a ಬಡಿಶೋಽಯಂ ತ್ವಯಾ ಗ್ರಸ್ತಃ ಕಾಲಸೂತ್ರೇಣ ಲಂಬಿತಃ|
03154035c ಮತ್ಸ್ಯೋಽಂಭಸೀವ ಸ್ಯೂತಾಸ್ಯಃ ಕಥಂ ಮೇಽದ್ಯ ಗಮಿಷ್ಯಸಿ||
ನೀರಿನಲ್ಲಿರುವ ಮೀನಿನ ಬಾಯಿಯು ಕೊಕ್ಕೆಗೆ ಹೇಗಿ ಸಿಲುಕಿಕೊಳ್ಳುತ್ತದೆಯೋ ಹಾಗೆ ಇಂದು ಕಾಲವೆಂಬ ದಾರದಲ್ಲಿ ಜೋತು ಬಿದ್ದಿರುವ ಕೊಕ್ಕೆಗೆ ನೀನು ಸಿಲುಕಿ ಬಿಟ್ಟಿದ್ದೀಯೆ! ಇಂದು ನನ್ನಿಂದ ಹೇಗೆ ಬಿಡುಗಡೆ ಹೊಂದುತ್ತೀಯೆ?
03154036a ಯಂ ಚಾಸಿ ಪ್ರಸ್ಥಿತೋ ದೇಶಂ ಮನಃ ಪೂರ್ವಂ ಗತಂ ಚ ತೇ|
03154036c ನ ತಂ ಗಂತಾಸಿ ಗಂತಾಸಿ ಮಾರ್ಗಂ ಬಕಹಿಡಿಂಬಯೋಃ||
ಎಲ್ಲಿಂದ ನೀನು ಬಂದಿದ್ದೀಯೋ ಮತ್ತು ಎಲ್ಲಿಗೆ ಹೋಗಲು ಬಯಸುತ್ತೀಯೋ ಅಲ್ಲಿಗೆ ಇಂದು ನೀನು ಹೋಗದೇ ಬಕ ಮತ್ತು ಹಿಡಿಂಬರು ಹೋದ ದಾರಿಯಲ್ಲಿಯೇ ಹೋಗುತ್ತೀಯೆ!”
03154037a ಏವಮುಕ್ತಸ್ತು ಭೀಮೇನ ರಾಕ್ಷಸಃ ಕಾಲಚೋದಿತಃ|
03154037c ಭೀತ ಉತ್ಸೃಜ್ಯ ತಾನ್ಸರ್ವಾನ್ಯುದ್ಧಾಯ ಸಮುಪಸ್ಥಿತಃ||
ಭೀಮನು ಹೀಗೆ ಹೇಳಲು ಕಾಲಚೋದಿತ ರಾಕ್ಷಸನು ಭಯಗೊಂಡು ಅವರೆಲ್ಲರನ್ನೂ ಬಿಸುಟು ಯುದ್ಧಕ್ಕೆ ಅಣಿಯಾಗಿ ನಿಂತನು.
03154038a ಅಬ್ರವೀಚ್ಚ ಪುನರ್ಭೀಮಂ ರೋಷಾತ್ ಪ್ರಸ್ಫುರಿತಾಧರಃ|
03154038c ನ ಮೇ ಮೂಢಾ ದಿಶಃ ಪಾಪ ತ್ವದರ್ಥಂ ಮೇ ವಿಲಂಬನಂ||
ರೋಷದಿಂದ ಅವನ ಕೆಳಬಾಹುವು ಕಂಪಿಸುತ್ತಿರಲು ಭೀಮನಿಗೆ ತಿರುಗಿ ಹೇಳಿದನು: “ಮೂಢ! ನಾನೇನೂ ದಿಕ್ಕು ತಪ್ಪಿ ಹೋಗುತ್ತಿರಲಿಲ್ಲ. ನಿನಗೋಸ್ಕರವೇ ಕಾಯುತ್ತಿದ್ದೆ!
03154039a ಶ್ರುತಾ ಮೇ ರಾಕ್ಷಸಾ ಯೇ ಯೇ ತ್ವಯಾ ವಿನಿಹತಾ ರಣೇ|
03154039c ತೇಷಾಮದ್ಯ ಕರಿಷ್ಯಾಮಿ ತವಾಸ್ರೇಣೋದಕಕ್ರಿಯಾಂ||
ರಣದಲ್ಲಿ ನಿನ್ನಿಂದ ಯಾವ ಯಾವ ರಾಕ್ಷಸರು ಹತರಾದರೋ ಅವರ ಕುರಿತು ಕೇಳಿದ್ದೇನೆ. ನಿನ್ನ ರಕ್ತದಿಂದ ಇಂದು ಅವರಿಗೆ ಉದಕ ಕ್ರಿಯೆಯನ್ನು ಮಾಡುತ್ತೇನೆ.”
03154040a ಏವಮುಕ್ತಸ್ತತೋ ಭೀಮಃ ಸೃಕ್ಕಿಣೀ ಪರಿಸಂಲಿಹನ್|
03154040c ಸ್ಮಯಮಾನ ಇವ ಕ್ರೋಧಾತ್ಸಾಕ್ಷಾತ್ಕಾಲಾಂತಕೋಪಮಃ||
ಹೀಗೆ ಹೇಳಲು ಭೀಮನು ನಾಲಿಗೆಯಿಂದ ತನ್ನ ಬಾಯಿಯ ತುದಿಯನ್ನು ನೆಕ್ಕಿ ಸಾಕ್ಷಾತ್ ಕಾಲಾಂತಕನಂತೆ ಕ್ರೋಧದಿಂದ ರಾಕ್ಷಸನೊಂದಿಗೆ ಬಾಹುಯುದ್ಧಕ್ಕೆ ಮುನ್ನುಗ್ಗಿದನು.
03154040e ಬಾಹುಸಂರಂಭಮೇವೇಚ್ಚನ್ನಭಿದುದ್ರಾವ ರಾಕ್ಷಸಂ||
03154041a ರಾಕ್ಷಸೋಽಪಿ ತದಾ ಭೀಮಂ ಯುದ್ಧಾರ್ಥಿನಮವಸ್ಥಿತಂ|
ಆಗ ರಾಕ್ಷಸನೂ ಕೂಡ ಯುದ್ಧಕ್ಕೆ ಅಣಿಯಾಗಿ ನಿಂತಿದ್ದ ಭೀಮನೆಡೆಗೆ ವಜ್ರಧರನೆಡೆಗೆ ಬಲನು ಹೇಗೋ ಹಾಗೆ ಮುನ್ನುಗ್ಗಿದನು.
03154041c ಅಭಿದುದ್ರಾವ ಸಂರಬ್ಧೋ ಬಲೋ ವಜ್ರಧರಂ ಯಥಾ||
03154042a ವರ್ತಮಾನೇ ತದಾ ತಾಭ್ಯಾಂ ಬಾಹುಯುದ್ಧೇ ಸುದಾರುಣೇ|
03154042c ಮಾದ್ರೀಪುತ್ರಾವಭಿಕ್ರುದ್ಧಾವುಭಾವಪ್ಯಭ್ಯಧಾವತಾಂ||
ಆಗ ಅವರಿಬ್ಬರ ದಾರುಣ ಬಾಹುಯುದ್ಧವು ಪ್ರಾರಂಭವಾಯಿತು. ಇಬ್ಬರು ಮಾದ್ರೀ ಪುತ್ರರೂ ಕೋಪದಿಂದ ಮುನ್ನುಗ್ಗಲು ಕುಂತೀಪುತ್ರ ವೃಕೋದರನು ನಗುತ್ತಾ ಅವರನ್ನು ತಡೆದು ಹೇಳಿದನು:
03154043a ನ್ಯವಾರಯತ್ತೌ ಪ್ರಹಸನ್ಕುಂತೀಪುತ್ರೋ ವೃಕೋದರಃ|
03154043c ಶಕ್ತೋಽಹಂ ರಾಕ್ಷಸಸ್ಯೇತಿ ಪ್ರೇಕ್ಷಧ್ವಮಿತಿ ಚಾಬ್ರವೀತ್||
03154044a ಆತ್ಮನಾ ಭ್ರಾತೃಭಿಶ್ಚಾಹಂ ಧರ್ಮೇಣ ಸುಕೃತೇನ ಚ|
03154044c ಇಷ್ಟೇನ ಚ ಶಪೇ ರಾಜನ್ಸೂದಯಿಷ್ಯಾಮಿ ರಾಕ್ಷಸಂ||
“ನಾನು ಈ ರಾಕ್ಷಸನನ್ನು ಕೊಲ್ಲಲು ಶಕ್ತನಾಗಿದ್ದೇನೆ. ಸುಮ್ಮನೇ ನೋಡುತ್ತಿರಿ! ರಾಜನ್! ಸ್ವತಃ ನನ್ನಿಂದ, ನನ್ನ ಭ್ರಾತೃಗಳಿಂದ ಮಾಡಿದ ಧರ್ಮಕಾರ್ಯಗಳಿಂದ, ಯಾಗಗಳಿಂದ, ಈ ರಾಕ್ಷಸನನ್ನು ಸಂಹರಿಸುತ್ತೇನೆ. ಇದು ನನ್ನ ಪ್ರತಿಜ್ಞೆ!”
03154045a ಇತ್ಯೇವಮುಕ್ತ್ವಾ ತೌ ವೀರೌ ಸ್ಪರ್ಧಮಾನೌ ಪರಸ್ಪರಂ|
03154045c ಬಾಹುಭಿಃ ಸಮಸಜ್ಜೇತಾಮುಭೌ ರಕ್ಷೋವೃಕೋದರೌ||
ಹೀಗೆ ಹೇಳಲು ಆ ವೀರ ರಾಕ್ಷಸ ವೃಕೋದರರಿಬ್ಬರೂ ಪರಸ್ಪರರೊಡನೆ ಸ್ಪರ್ಧಿಸುತ್ತಾ ಬಾಹುಗಳಿಂದ ಹೊಡೆದಾಡಿದರು.
03154046a ತಯೋರಾಸೀತ್ಸಂಪ್ರಹಾರಃ ಕ್ರುದ್ಧಯೋರ್ಭೀಮರಕ್ಷಸೋಃ|
03154046c ಅಮೃಷ್ಯಮಾಣಯೋಃ ಸಂಖ್ಯೇ ದೇವದಾನವಯೋರಿವ||
ಕೃದ್ಧರಾದ ಆ ಭೀಮ-ರಾಕ್ಷಸರು ದೇವದಾನವರಂತೆ ಒಬ್ಬರಿಂದೊಬ್ಬರು ಬಹಳಷ್ಟು ಹೊಡೆದಾಡಿದರು.
03154047a ಆರುಜ್ಯಾರುಜ್ಯ ತೌ ವೃಕ್ಷಾನನ್ಯೋನ್ಯಮಭಿಜಘ್ನತುಃ|
03154047c ಜೀಮೂತಾವಿವ ಘರ್ಮಾಂತೇ ವಿನದಂತೌ ಮಹಾಬಲೌ||
ಅವರಿಬ್ಬರೂ ಮರಗಳನ್ನು ಕೀಳುತ್ತಾ ಅನ್ಯೋನ್ಯರನ್ನು ಹೊಡೆದರು ಮತ್ತು ಆ ಮಹಾಬಲಶಾಲಿಗಳು ನಾನು ಗೆದ್ದೆ ನಾನು ಗೆದ್ದೆ ಎಂದು ಜೋರಾಗಿ ಕೂಗಾಡಿಕೊಂಡರು.
03154048a ಬಭಂಜತುರ್ಮಹಾವೃಕ್ಷಾನೂರುಭಿರ್ಬಲಿನಾಂ ವರೌ|
03154048c ಅನ್ಯೋನ್ಯೇನಾಭಿಸಂರಬ್ಧೌ ಪರಸ್ಪರಜಯೈಷಿಣೌ||
ಬಲಶಾಲಿಗಳಲ್ಲಿಯೇ ಶ್ರೇಷ್ಠರಾದ ಅವರಿಬ್ಬರೂ ತಮ್ಮ ತಮ್ಮ ತೊಡೆಗಳಿಂದ ಮಹಾವೃಕ್ಷಗಳನ್ನು ಕಿತ್ತು ಪರಸ್ಪರ ಜಯವನ್ನು ಬಯಸಿ ಅನ್ಯೋನ್ಯರನ್ನು ಹೊಡೆಯುತ್ತಿದ್ದರು.
03154049a ತದ್ವೃಕ್ಷಯುದ್ಧಮಭವನ್ಮಹೀರುಹವಿನಾಶನಂ|
03154049c ವಾಲಿಸುಗ್ರೀವಯೋರ್ಭ್ರಾತ್ರೋಃ ಪುರೇವ ಕಪಿಸಿಂಹಯೋಃ||
ಆ ಯುದ್ಧದಲ್ಲಿ ಕೀಳಲ್ಪಟ್ಟು ಬಹಳಷ್ಟ್ರು ವೃಕ್ಷಗಳು ನಾಶಗೊಂಡವು. ಹಿಂದೆ ಕಪಿಸಿಂಹ ಸಹೋದರ ವಾಲಿ-ಸುಗ್ರೀವರ ನಡುವೆ ನಡೆದ ಯುದ್ಧದಂತೆ ತೋರಿಬಂದಿತು.
03154050a ಆವಿಧ್ಯಾವಿಧ್ಯ ತೌ ವೃಕ್ಷಾನ್ಮುಹೂರ್ತಮಿತರೇತರಂ|
03154050c ತಾಡಯಾಮಾಸತುರುಭೌ ವಿನದಂತೌ ಮುಹುರ್ಮುಹುಃ||
03154051a ತಸ್ಮಿನ್ದೇಶೇ ಯದಾ ವೃಕ್ಷಾಃ ಸರ್ವ ಏವ ನಿಪಾತಿತಾಃ|
03154051c ಪುಂಜೀಕೃತಾಶ್ಚ ಶತಶಃ ಪರಸ್ಪರವಧೇಪ್ಸಯಾ||
03154052a ತದಾ ಶಿಲಾಃ ಸಮಾದಾಯ ಮುಹೂರ್ತಮಿವ ಭಾರತ|
03154052c ಮಹಾಭ್ರೈರಿವ ಶೈಲೇಂದ್ರೌ ಯುಯುಧಾತೇ ಮಹಾಬಲೌ||
03154053a ಉಗ್ರಾಭಿರುಗ್ರರೂಪಾಭಿರ್ಬೃಹತೀಭಿಃ ಪರಸ್ಪರಂ|
03154053c ವಜ್ರೈರಿವ ಮಹಾವೇಗೈರಾಜಘ್ನತುರಮರ್ಷಣೌ||
ಭಾರತ! ಪರಸ್ಪರರನ್ನು ಕೊಲ್ಲುವ ಉದ್ದೇಶದಿಂದ ಆ ಪ್ರದೇಶದಲ್ಲಿದ್ದ ಎಲ್ಲ ಮರಗಳನ್ನು ಬೀಳಿಸಿ, ನೂರಾರು ಸಂಖ್ಯೆಗಳಲ್ಲಿ ಗುಂಪುಮಾಡಿಯಾದ ನಂತರ ಆ ಮಹಾಬಲಶಾಲಿಗಳಿಬ್ಬರೂ ಸ್ವಲ್ಪ ಸಮಯ ಕಲ್ಲುಬಂಡೆಗಳನ್ನು ಎತ್ತಿಕೊಂಡು ದೊಡ್ಡ ಮೋಡಗಳಿಂದ ಆವೃತವಾದ ಪರ್ವತಗಳಂತೆ ಯುದ್ಧಮಾಡಿದರು. ಉಗ್ರವಾಗಿ ತೋರುದ್ದಿದ್ದ ಆ ಕಲ್ಲುಬಂಡೆಗಳನ್ನು ದಯೆತೋರಿಸದೇ ಪರಸ್ಪರರ ಮೇಲೆ ಬೀಸಾಡಿದರು. ಆಕಾಶದಲ್ಲಿ ಮಿಂಚಿನಂತೆ ಆ ಮಹಾವೇಗದಲ್ಲಿ ಹಾರುತ್ತಿದ್ದ ಬಂಡೆಗಲ್ಲುಗಳು ಕಂಡುಬಂದವು.
03154054a ಅಭಿಹತ್ಯ ಚ ಭೂಯಸ್ತಾವನ್ಯೋನ್ಯಂ ಬಲದರ್ಪಿತೌ|
03154054c ಭುಜಾಭ್ಯಾಂ ಪರಿಗೃಹ್ಯಾಥ ಚಕರ್ಷಾತೇ ಗಜಾವಿವ||
ಆ ಬಲದರ್ಪಿತರಿಬ್ಬರೂ ಅನ್ಯೋನ್ಯರ ಭುಜಗಳನ್ನು ಹಿಡಿದು ಆನೆಗಳಂತೆ ಎಳೆದಾಡಿದರು.
03154055a ಮುಷ್ಟಿಭಿಶ್ಚ ಮಹಾಘೋರೈರನ್ಯೋನ್ಯಮಭಿಪೇತತುಃ|
03154055c ತಯೋಶ್ಚಟಚಟಾಶಬ್ದೋ ಬಭೂವ ಸುಮಹಾತ್ಮನೋಃ||
ಆ ಮಹಾಘೋರರೀರ್ವರೂ ಮುಷ್ಟಿಗಳಿಂದ ಅನ್ಯೋನ್ಯರನ್ನು ಹೊಡೆಯುತ್ತಿರಲು ಆ ಮಹಾತ್ಮರ ಮಧ್ಯೆ ಚಟ ಚಟ ಎನ್ನುವ ಶಬ್ಧವು ಕೇಳಿಬಂದಿತು.
03154056a ತತಃ ಸಂಹೃತ್ಯ ಮುಷ್ಟಿಂ ತು ಪಂಚಶೀರ್ಷಮಿವೋರಗಂ|
03154056c ವೇಗೇನಾಭ್ಯಹನದ್ಭೀಮೋ ರಾಕ್ಷಸಸ್ಯ ಶಿರೋಧರಾಂ||
ಐದುಹೆಡೆಯ ಸರ್ಪದಂತಿದ್ದ ತನ್ನ ಮುಷ್ಟಿಯನ್ನು ಬಿಗಿದು ಆ ರಾಕ್ಷಸನ ತಲೆಯಮೇಲೆ ವೇಗದಿಂದ ಗುದ್ದಿದನು.
03154057a ತತಃ ಶ್ರಾಂತಂ ತು ತದ್ರಕ್ಷೋ ಭೀಮಸೇನಭುಜಾಹತಂ|
03154057c ಸುಪರಿಶ್ರಾಂತಮಾಲಕ್ಷ್ಯ ಭೀಮಸೇನೋಽಭ್ಯವರ್ತತ||
ಅವನ ಪೆಟ್ಟನ್ನು ತಿಂದು ಆ ರಾಕ್ಷಸನು ತಲೆತಿರುಗಿ ಆಯಾಸಗೊಂಡಿದ್ದುದನ್ನು ನೋಡಿದ ಭೀಮಸೇನನು ಅವನ ಮೇಲೆರಗಿದನು.
03154058a ತತ ಏನಂ ಮಹಾಬಾಹುರ್ಬಾಹುಭ್ಯಾಮಮರೋಪಮಃ|
03154058c ಸಮುತ್ಕ್ಷಿಪ್ಯ ಬಲಾದ್ಭೀಮೋ ನಿಷ್ಪಿಪೇಷ ಮಹೀತಲೇ||
ಅಮರೋಪಮ ಮಹಾಬಾಹು ಭೀಮನು ಅವನನ್ನು ತನ್ನ ಎರಡೂ ಕೈಗಳಿಂದ ಮೇಲಕ್ಕೆತ್ತಿ ಗಟ್ಟಿಯಾಗಿ ನೆಲಕ್ಕೆ ಅಪ್ಪಳಿಸಿದನು.
03154059a ತಸ್ಯ ಗಾತ್ರಾಣಿ ಸರ್ವಾಣಿ ಚೂರ್ಣಯಾಮಾಸ ಪಾಂಡವಃ|
03154059c ಅರತ್ನಿನಾ ಚಾಭಿಹತ್ಯ ಶಿರಃ ಕಾಯಾದಪಾಹರತ್||
ಆಗ ಪಾಂಡವನು ಅವನ ದೇಹದ ಸರ್ವಾಂಗಗಳನ್ನೂ ಒತ್ತಿ ತನ್ನ ತೋಳಿನಿಂದ ಅವನ ಶಿರವನ್ನು ದೇಹದಿಂದ ತುಂಡುಮಾಡಿದನು.
03154060a ಸಂದಷ್ಟೋಷ್ಠಂ ವಿವೃತ್ತಾಕ್ಷಂ ಫಲಂ ವೃಂತಾದಿವ ಚ್ಯುತಂ|
03154060c ಜಟಾಸುರಸ್ಯ ತು ಶಿರೋ ಭೀಮಸೇನಬಲಾದ್ಧೃತಂ||
03154060e ಪಪಾತ ರುಧಿರಾದಿಗ್ಧಂ ಸಂದಷ್ಟದಶನಚ್ಚದಂ||
ಭೀಮಸೇನನ ಅದ್ಭುತ ಬಲಕ್ಕೆ ಸಿಲುಕಿ ತುಟಿಗಳು ಸೀಳಿಹೋದ, ಕಣ್ಣುಗಳು ಮೇಲೆದ್ದ, ಹಲ್ಲುಗಳನ್ನು ಕಚ್ಚಿದ್ದ ಆ ಜಟಾಸುರನ ಶಿರಸ್ಸು ರಕ್ತದಿಂದ ತೋಯ್ದು, ಮರದಿಂದ ಬೀಳುವ ಹಣ್ಣಿನಂತೆ ಕೆಳಕ್ಕೆ ಬಿದ್ದಿತು.
03154061a ತಂ ನಿಹತ್ಯ ಮಹೇಷ್ವಾಸೋ ಯುಧಿಷ್ಠಿರಮುಪಾಗಮತ್|
03154061c ಸ್ತೂಯಮಾನೋ ದ್ವಿಜಾಗ್ರ್ಯೈಸ್ತೈರ್ಮರುದ್ಭಿರಿವ ವಾಸವಃ||
ಅವನನ್ನು ಸಂಹರಿಸಿದ ಆ ಮಹೇಷ್ವಾಸನು, ವಾಸವನನ್ನು ಅಮರರು ಹೇಗೋ ಹಾಗೆ ದ್ವಿಜಶ್ರೇಷ್ಠರು ಪ್ರಶಂಸಿಸುತ್ತಿರಲು, ಯುಧಿಷ್ಠಿರನ ಬಳಿ ಬಂದನು.”
ಇತಿ ಶ್ರೀ ಮಹಾಭಾರತೇ ವನಪರ್ವಣಿ ಜಟಾಸುರವಧಪರ್ವಣಿ ಚತುಷ್ಪಂಚಶದಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ವನಪರ್ವದಲ್ಲಿ ಜಟಾಸುರವಧಪರ್ವದಲ್ಲಿ ನೂರಾಐವತ್ನಾಲ್ಕನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ವನಪರ್ವಣಿ ಜಟಾಸುರವಧಪರ್ವಃ|
ಇದು ಮಹಾಭಾರತದ ವನಪರ್ವದಲ್ಲಿ ಜಟಾಸುರವಧಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-೨/೧೮, ಉಪಪರ್ವಗಳು-೩೪/೧೦೦, ಅಧ್ಯಾಯಗಳು-೪೫೧/೧೯೯೫, ಶ್ಲೋಕಗಳು-೧೪೭೯೨/೭೩೭೮೪
