ಆರಣ್ಯಕ ಪರ್ವ: ಅರಣ್ಯ ಪರ್ವ
Contents
Toggle೧೧
ಮೈತ್ರೇಯನಿಂದ ದುರ್ಯೋಧನನಿಗೆ ಶಾಪ
ನೀನೇ ಆ ದುರಾತ್ಮ ದುರ್ಯೋಧನನಿಗೆ ಭೋದಿಸಬೇಕೆಂದು ಧೃತರಾಷ್ಟ್ರನು ಕೇಳಿಕೊಳ್ಳಲು ವ್ಯಾಸನು ಋಷಿ ಮೈತ್ರೇಯನು ಬಂದು ಅವನಿಗೆ ಅನುಶಾಸನವನ್ನು ನೀಡುತ್ತಾನೆ ಮತ್ತು ಹೇಳಿದಂತೆ ನಡೆದುಕೊಳ್ಳದಿದ್ದರೆ ಶಪಿಸುತ್ತಾನೆ ಎಂದು ಹೇಳಿ ಹೋದುದು (೧-೬). ಧೃತರಾಷ್ಟ್ರನು ಆಗಮಿಸಿದ ಮೈತ್ರೇಯನನ್ನು ಸ್ವಾಗತಿಸಿ ಸತ್ಕರಿಸಿ ಪಾಂಡವರು ಒಪ್ಪಂದದಂತೆ ನಡೆದುಕೊಳ್ಳಲು ಬಯಸುತ್ತಾರೆ ತಾನೇ ಎಂದು ಕೇಳಿದುದು (೭-೧೦). ಮೈತ್ರೇಯನು ಧೃತರಾಷ್ಟ್ರನಿಗೆ ಏಕೆ ಈ ಘೋರ ಅನ್ಯಾಯವು ಆಗಲು ಬಿಟ್ಟೆ ಎಂದು ಕೇಳಿ, ದುರ್ಯೋಧನನು ಪಾಂಡವರೊಂದಿಗೆ ಶಾಂತಿಯಿಂದಿರಬೇಕೆಂದು ಹೇಳಿದುದು (೧೧-೨೭). ಮೈತ್ರೇಯನು ಮಾತನಾಡುತ್ತಿರುವಾಗ ದುರ್ಯೋಧನನು ತನ್ನ ತೊಡೆಯನ್ನು ತಟ್ಟಲು ಕ್ರೋಧಾವಿಷ್ಠನಾದ ಋಷಿಯು ಯುದ್ಧದಲ್ಲಿ ಭೀಮನು ಆ ತೊಡೆಯನ್ನು ಮುರಿಯುತ್ತಾನೆ ಎಂದು ಶಪಿಸುವುದು (೨೮-೩೪). ಹಾಗಾಗದಂತೆ ಮಾಡೆಂದು ಧೃತರಾಷ್ಟ್ರನು ಕೇಳಿಕೊಳ್ಳಲು ಪಾಂಡವರೊಂದಿಗೆ ಶಾಂತಿಯಿಂದಿದ್ದರೆ ಶಾಪದಂತೆ ನಡೆಯುವುದಿಲ್ಲವೆಂದು ಹೇಳುವುದು (೩೫-೩೬). ಭೀಮನು ರಾಕ್ಷಸ ಕಿರ್ಮೀರನನ್ನು ವಧಿಸಿದುದರ ಕುರಿತು ಧೃತರಾಷ್ಟ್ರನು ಕೇಳಲು “ಅಸೂಯೆಗೊಂಡಿರುವ ನಿನಗಾಗಲೀ ಅವಿಧೇಯನಾಗಿರುವ ನಿನ್ನ ಈ ಮಗನಿಗಾಗಲೀ ನಾನು ಇದನ್ನು ಹೇಳುವುದಿಲ್ಲ! ನಾನು ಹೋದ ನಂತರ ಎಲ್ಲವನ್ನೂ ವಿದುರನು ನಿನಗೆ ಹೇಳುತ್ತಾನೆ.” ಎಂದು ಹೇಳಿ ಮೈತ್ರೇಯನು ಹೊರಟು ಹೋದುದು (೩೭-೩೯).
03011001 ಧೃತರಾಷ್ಟ್ರ ಉವಾಚ|
03011001a ಏವಮೇತನ್ಮಹಾಪ್ರಾಜ್ಞ ಯಥಾ ವದಸಿ ನೋ ಮುನೇ|
03011001c ಅಹಂ ಚೈವ ವಿಜಾನಾಮಿ ಸರ್ವೇ ಚೇಮೇ ನರಾಧಿಪಾಃ||
ಧೃತರಾಷ್ಟ್ರನು ಹೇಳಿದನು: “ಮಹಾಪ್ರಾಜ್ಞ! ಮುನೇ! ನೀನು ಹೇಳಿದುದನ್ನು ನಾನೂ ಮತ್ತು ಇಲ್ಲಿರುವ ಸರ್ವ ನರಾಧಿಪರೂ ತಿಳಿದಿದ್ದೇವೆ.
03011002a ಭವಾಂಸ್ತು ಮನ್ಯತೇ ಸಾಧು ಯತ್ಕುರೂಣಾಂ ಸುಖೋದಯಂ|
03011002c ತದೇವ ವಿದುರೋಽಪ್ಯಾಹ ಭೀಷ್ಮೋ ದ್ರೋಣಶ್ಚ ಮಾಂ ಮುನೇ||
ಮುನೇ! ನೀನು ಕುರುಗಳ ಸುಖೋದಯಕ್ಕೆ ಯಾವುದು ಒಳ್ಳೆಯದು ಎಂದು ಹೇಳಿದೆಯೋ ಅದನ್ನೇ ನನಗೆ ವಿದುರ, ಭೀಷ್ಮ ಮತ್ತು ದ್ರೋಣರೂ ಹೇಳಿದ್ದಾರೆ.
03011003a ಯದಿ ತ್ವಹಮನುಗ್ರಾಹ್ಯಃ ಕೌರವೇಷು ದಯಾ ಯದಿ|
03011003c ಅನುಶಾಧಿ ದುರಾತ್ಮಾನಂ ಪುತ್ರಂ ದುರ್ಯೋಧನಂ ಮಮ||
ಒಂದುವೇಳೆ ನಾನು ನಿನ್ನ ಅನುಗ್ರಹಕ್ಕೆ ಅರ್ಹನೆಂದಾದರೆ ಮತ್ತು ನಿನಗೆ ಕೌರವರ ಮೇಲೆ ದಯೆಯಿದ್ದರೆ ನನ್ನ ಪುತ್ರ ದುರಾತ್ಮ ದುರ್ಯೋಧನನಿಗೆ ಬೋಧಿಸಬೇಕು!”
03011004 ವ್ಯಾಸ ಉವಾಚ|
03011004a ಅಯಮಾಯಾತಿ ವೈ ರಾಜನ್ಮೈತ್ರೇಯೋ ಭಗವಾನೃಷಿಃ|
03011004c ಅನ್ವೀಯ ಪಾಂಡವಾನ್ಭ್ರಾತೄನಿಹೈವಾಸ್ಮದ್ದಿದೃಕ್ಷಯಾ||
ವ್ಯಾಸನು ಹೇಳಿದನು: “ರಾಜನ್! ಈಗ ಇಲ್ಲಿಗೆ ಭಗವಾನ್ ಋಷಿ ಮೈತ್ರೇಯ[1]ನು, ಪಾಂಡವ ಸಹೋದರರನ್ನು ಭೇಟಿಯಾದ ನಂತರ ನಿನ್ನನ್ನು ಕಾಣಲು ಬರುತ್ತಿದ್ದಾನೆ.
03011005a ಏಷ ದುರ್ಯೋಧನಂ ಪುತ್ರಂ ತವ ರಾಜನ್ಮಹಾನೃಷಿಃ|
03011005c ಅನುಶಾಸ್ತಾ ಯಥಾನ್ಯಾಯಂ ಶಮಾಯಾಸ್ಯ ಕುಲಸ್ಯ ತೇ||
ರಾಜನ್! ಈ ಮಹಾನೃಷಿಯು ನಿನ್ನ ಕುಲಕ್ಕೆ ಶಾಂತಿಯನ್ನು ತರುವುದಕ್ಕೆ ಯಾವುದು ನ್ಯಾಯವೋ ಅದರ ಅನುಶಾಸನವನ್ನು ನಿನ್ನ ಪುತ್ರ ದುರ್ಯೋಧನನಿಗೆ ನೀಡುತ್ತಾನೆ.
03011006a ಬ್ರೂಯಾದ್ಯದೇಷ ರಾಜೇಂದ್ರ ತತ್ಕಾರ್ಯಮವಿಶಂಕಯಾ|
03011006c ಅಕ್ರಿಯಾಯಾಂ ಹಿ ಕಾರ್ಯಸ್ಯ ಪುತ್ರಂ ತೇ ಶಪ್ಸ್ಯತೇ ರುಷಾ||
ರಾಜೇಂದ್ರ! ಅವನು ಏನೇ ಹೇಳಿದರೂ ಅದನ್ನು ಶಂಕಿಸದೇ ಕಾರ್ಯಗತಗೊಳಿಸು. ಅದನ್ನು ಕಾರ್ಯಗತಗೊಳಿಸದಿದ್ದರೆ ಅವನು ರೋಷಗೊಂಡು ನಿನ್ನ ಮಗನಿಗೆ ಶಾಪವನ್ನು ನೀಡಬಲ್ಲರು!””
03011007 ವೈಶಂಪಾಯನ ಉವಾಚ|
03011007a ಏವಮುಕ್ತ್ವಾ ಯಯೌ ವ್ಯಾಸೋ ಮೈತ್ರೇಯಃ ಪ್ರತ್ಯದೃಶ್ಯತ|
03011007c ಪೂಜಯಾ ಪ್ರತಿಜಗ್ರಾಹ ಸಪುತ್ರಸ್ತಂ ನರಾಧಿಪಃ||
ವೈಶಂಪಾಯನನು ಹೇಳಿದನು: “ಇದನ್ನು ಹೇಳಿದ ವ್ಯಾಸನು ಹೋಗುತ್ತಿದ್ದಂತೆ ಮೈತ್ರೇಯನು ಕಾಣಿಸಿಕೊಂಡನು ಮತ್ತು ನರಾಧಿಪನು ಪುತ್ರರೊಂದಿಗೆ ಅವನನ್ನು ಪೂಜಿಸಿ ಬರಮಾಡಿಕೊಂಡನು.
03011008a ದತ್ತ್ವಾರ್ಘ್ಯಾದ್ಯಾಃ ಕ್ರಿಯಾಃ ಸರ್ವಾ ವಿಶ್ರಾಂತಂ ಮುನಿಪುಂಗವಂ|
03011008c ಪ್ರಶ್ರಯೇಣಾಬ್ರವೀದ್ರಾಜಾ ಧೃತರಾಷ್ಟ್ರೋಽಂಬಿಕಾಸುತಃ||
ಅಂಬಿಕಾಸುತ ರಾಜ ಧೃತರಾಷ್ಟ್ರನು ಆ ಮುನಿಪುಂಗವನಿಗೆ ಅರ್ಘ್ಯಾದಿ ಎಲ್ಲ ಸತ್ಕಾರಕ್ರಿಯೆಗಳನ್ನು ಪೂರೈಸಿ, ಅವನು ವಿಶ್ರಾಂತಗೊಳ್ಳಲು ವಿನಯದಿಂದ ಕೇಳಿದನು:
03011009a ಸುಖೇನಾಗಮನಂ ಕಚ್ಚಿದ್ಭಗವನ್ಕುರುಜಾಂಗಲೇ|
03011009c ಕಚ್ಚಿತ್ಕುಶಲಿನೋ ವೀರಾ ಭ್ರಾತರಃ ಪಂಚ ಪಾಂಡವಾಃ||
“ಭಗವನ್! ಕುರುಜಂಗಲಕ್ಕೆ ನಿಮ್ಮ ಆಗಮನವು ಸುಖಕರವಾಗಿತ್ತೇ? ಐವರು ವೀರ ಪಾಂಡವ ಸಹೋದರರು ಕುಶಲರಾಗಿರುವರಷ್ಟೇ?
03011010a ಸಮಯೇ ಸ್ಥಾತುಮಿಚ್ಚಂತಿ ಕಚ್ಚಿಚ್ಚ ಪುರುಷರ್ಷಭಾಃ|
03011010c ಕಚ್ಚಿತ್ಕುರೂಣಾಂ ಸೌಭ್ರಾತ್ರಮವ್ಯುಚ್ಚಿನ್ನಂ ಭವಿಷ್ಯತಿ||
ಆ ಪುರುಷರ್ಷಭರು ಒಪ್ಪಂದದಂತೆ ಇರಲು ಬಯಸುತ್ತಾರೆ ತಾನೇ? ಕುರುಗಳ ಒಳ್ಳೆಯ ಭ್ರಾತೃತ್ವವು ಅವಿಚ್ಛಿನ್ನವಾಗಿ ಉಳಿದುಕೊಳ್ಳುತ್ತದೆ ತಾನೇ?”
03011011 ಮೈತ್ರೇಯ ಉವಾಚ|
03011011a ತೀರ್ಥಯಾತ್ರಾಮನುಕ್ರಾಮನ್ಪ್ರಾಪ್ತೋಽಸ್ಮಿ ಕುರುಜಾಂಗಲಂ|
03011011c ಯದೃಚ್ಚಯಾ ಧರ್ಮರಾಜಂ ದೃಷ್ಟವಾನ್ಕಾಮ್ಯಕೇ ವನೇ||
ಮೈತ್ರೇಯನು ಹೇಳಿದನು: “ತೀರ್ಥಯಾತ್ರೆಯನ್ನು ಮಾಡುತ್ತಾ ಅನುಕ್ರಮವಾಗಿ ಕುರುಜಂಗಲವನ್ನು ಸೇರಿದೆನು. ಅಲ್ಲಿ ಕಾಮ್ಯಕವನದಲ್ಲಿ ಧರ್ಮರಾಜನನ್ನು ನೋಡಿದೆನು.
03011012a ತಂ ಜಟಾಜಿನಸಂವೀತಂ ತಪೋವನನಿವಾಸಿನಂ|
03011012c ಸಮಾಜಗ್ಮುರ್ಮಹಾತ್ಮಾನಂ ದ್ರಷ್ಟುಂ ಮುನಿಗಣಾಃ ಪ್ರಭೋ||
ಪ್ರಭೋ! ಜಟಾಜಿನ ಧಾರಿಣಿ ತಪೋವನ ವಾಸಿನಿ ಆ ಮಹಾತ್ಮನನ್ನು ನೋಡಲು ಮುನಿಗಣಗಳು ಒಟ್ಟಾಗಿ ಬಂದು ಸೇರಿದ್ದವು.
03011013a ತತ್ರಾಶ್ರೌಷಂ ಮಹಾರಾಜ ಪುತ್ರಾಣಾಂ ತವ ವಿಭ್ರಮಂ|
03011013c ಅನಯಂ ದ್ಯೂತರೂಪೇಣ ಮಹಾಪಾಯಮುಪಸ್ಥಿತಂ||
ಮಹಾರಾಜ! ಅಲ್ಲಿ ನಿನ್ನ ಪುತ್ರರ ಕಪಟತನ, ಮತ್ತು ಅನ್ಯಾಯವಾಗಿ ದ್ಯೂತರೂಪದಲ್ಲಿ ಬಂದೊದಗಿದ ಮಹಾ ಅಪಾಯದ ಕುರಿತು ಕೇಳಿದೆನು.
03011014a ತತೋಽಹಂ ತ್ವಾಮನುಪ್ರಾಪ್ತಃ ಕೌರವಾಣಾಮವೇಕ್ಷಯಾ|
03011014c ಸದಾ ಹ್ಯಭ್ಯಧಿಕಃ ಸ್ನೇಹಃ ಪ್ರೀತಿಶ್ಚ ತ್ವಯಿ ಮೇ ಪ್ರಭೋ||
ಪ್ರಭೋ! ಆಗ ಕೌರವರ ಕುರಿತು ಯೋಚಿಸಿದ ನಾನು ನಿನ್ನಲ್ಲಿಗೆ ಬಂದೆ. ನಿನ್ನ ಮೇಲೆ ನನಗೆ ಸದಾ ಅಧಿಕ ಸ್ನೇಹ ಮತ್ತು ಪ್ರೀತಿಯಿದೆ.
03011015a ನೈತದೌಪಯಿಕಂ ರಾಜಂಸ್ತ್ವಯಿ ಭೀಷ್ಮೇ ಚ ಜೀವತಿ|
03011015c ಯದನ್ಯೋನ್ಯೇನ ತೇ ಪುತ್ರಾ ವಿರುಧ್ಯಂತೇ ನರಾಧಿಪ||
ರಾಜನ್! ನರಾಧಿಪ! ನೀನು ಮತ್ತು ಭೀಷ್ಮರು ಜೀವಂತವಾಗಿರುವಾಗಲೇ ನಿನ್ನ ಪುತ್ರರು ಅನ್ಯೋನ್ಯರನ್ನು ವಿರೋಧಿಸುವುದು ಸರಿಯಲ್ಲ.
03011016a ಮೇಢೀಭೂತಃ ಸ್ವಯಂ ರಾಜನ್ನಿಗ್ರಹೇ ಪ್ರಗ್ರಹೇ ಭವಾನ್|
03011016c ಕಿಮರ್ಥಮನಯಂ ಘೋರಮುತ್ಪತಂತಮುಪೇಕ್ಷಸೇ||
ರಾಜನ್! ಸ್ವಯಂ ನೀನೇ ಪ್ರಗ್ರಹ ನಿಗ್ರಹಗಳ ಮಧ್ಯದಲ್ಲಿದ್ದೀಯೆ. ಆದರೂ ನೀನು ಏಕೆ ಬೆಳೆದಿರುವ ಈ ಘೋರ ಅನ್ಯಾಯವನ್ನು ಉಪೇಕ್ಷಿಸುತ್ತಿದ್ದೀಯೆ?
03011017a ದಸ್ಯೂನಾಮಿವ ಯದ್ವೃತ್ತಂ ಸಭಾಯಾಂ ಕುರುನಂದನ|
03011017c ತೇನ ನ ಭ್ರಾಜಸೇ ರಾಜಂಸ್ತಾಪಸಾನಾಂ ಸಮಾಗಮೇ||
ಕುರುನಂದನ! ನಿನ್ನ ಸಭೆಯಲ್ಲಿ ನಡೆದುದು ದಸ್ಯುಗಳ ವರ್ತನೆಯಂತಿತ್ತು! ರಾಜನ್! ತಾಪಸಿಗಳ ಸಮಾಗಮದಲ್ಲಿ ಅದು ನಿನ್ನ ಕೀರ್ತಿಯನ್ನು ಹೆಚ್ಚಿಸುವುದಿಲ್ಲ!””
03011018 ವೈಶಂಪಾಯನ ಉವಾಚ|
03011018a ತತೋ ವ್ಯಾವೃತ್ಯ ರಾಜಾನಂ ದುರ್ಯೋಧನಮಮರ್ಷಣಂ|
03011018c ಉವಾಚ ಶ್ಲಕ್ಷ್ಣಯಾ ವಾಚಾ ಮೈತ್ರೇಯೋ ಭಗವಾನೃಷಿಃ||
ವೈಶಂಪಾಯನನು ಹೇಳಿದನು: “ಆಗ ಭಗವಾನ್ ಋಷಿ ಮೈತ್ರೇಯನು ರಾಜ ಅಮರ್ಷಣ ದುರ್ಯೋಧನನ ಕಡೆ ತಿರುಗಿ ಈ ಮೃದು ಮಾತುಗಳನ್ನಾಡಿದನು:
03011019a ದುರ್ಯೋಧನ ಮಹಾಬಾಹೋ ನಿಬೋಧ ವದತಾಂ ವರ|
03011019c ವಚನಂ ಮೇ ಮಹಾಪ್ರಾಜ್ಞ ಬ್ರುವತೋ ಯದ್ಧಿತಂ ತವ||
“ಮಾತನಾಡುವವರಲ್ಲಿ ಶ್ರೇಷ್ಠ! ಮಹಾಬಾಹು ದುರ್ಯೋಧನ! ನಿನ್ನದೇ ಒಳಿತಾಗಿ ಹೇಳುವ ನನ್ನ ಈ ತಿಳುವಳಿಕೆಯ ಮಾತುಗಳನ್ನು ಕೇಳು.
03011020a ಮಾ ದ್ರುಹಃ ಪಾಂಡವಾನ್ರಾಜನ್ಕುರುಷ್ವ ಹಿತಮಾತ್ಮನಃ|
03011020c ಪಾಂಡವಾನಾಂ ಕುರೂಣಾಂ ಚ ಲೋಕಸ್ಯ ಚ ನರರ್ಷಭ||
ರಾಜನ್! ಪಾಂಡವರನ್ನು ದ್ವೇಷಿಸಬೇಡ. ನರರ್ಷಭ! ನಿನ್ನ, ಪಾಂಡವರ, ಕೌರವರ ಮತ್ತು ಲೋಕಕ್ಕೇ ಏನು ಹಿತವೋ ಅದನ್ನು ಮಾಡು!
03011021a ತೇ ಹಿ ಸರ್ವೇ ನರವ್ಯಾಘ್ರಾಃ ಶೂರಾ ವಿಕ್ರಾಂತಯೋಧಿನಃ|
03011021c ಸರ್ವೇ ನಾಗಾಯುತಪ್ರಾಣಾ ವಜ್ರಸಂಹನನಾ ದೃಢಾಃ||
ಅವರೆಲ್ಲ ನರವ್ಯಾಘ್ರರೂ ಶೂರರು, ವಿಕ್ರಾಂತ ಯೋದ್ಧರು. ಎಲ್ಲರೂ ಆನೆಗಳ ಬಲವುಳ್ಳವರು ಮತ್ತು ವಜ್ರದಂತೆ ದೃಢರು.
03011022a ಸತ್ಯವ್ರತಪರಾಃ ಸರ್ವೇ ಸರ್ವೇ ಪುರುಷಮಾನಿನಃ|
03011022c ಹಂತಾರೋ ದೇವಶತ್ರೂಣಾಂ ರಕ್ಷಸಾಂ ಕಾಮರೂಪಿಣಾಂ|
03011022e ಹಿಡಿಂಬಬಕಮುಖ್ಯಾನಾಂ ಕಿರ್ಮೀರಸ್ಯ ಚ ರಕ್ಷಸಃ||
03011023a ಇತಃ ಪ್ರಚ್ಯವತಾಂ ರಾತ್ರೌ ಯಃ ಸ ತೇಷಾಂ ಮಹಾತ್ಮನಾಂ|
03011023c ಆವೃತ್ಯ ಮಾರ್ಗಂ ರೌದ್ರಾತ್ಮಾ ತಸ್ಥೌ ಗಿರಿರಿವಾಚಲಃ||
03011024a ತಂ ಭೀಮಃ ಸಮರಶ್ಲಾಘೀ ಬಲೇನ ಬಲಿನಾಂ ವರಃ|
03011024c ಜಘಾನ ಪಶುಮಾರೇಣ ವ್ಯಾಘ್ರಃ ಕ್ಷುದ್ರಮೃಗಂ ಯಥಾ||
ಅವರೆಲ್ಲರೂ ಸತ್ಯವ್ರತ ಪರಾಯಣರು. ಎಲ್ಲರೂ ಅಭಿಮಾನಿ ಪುರುಷರು. ದೇವಶತ್ರುಗಳಾದ ಕಾಮರೂಪಿಣಿ ರಾಕ್ಷರನ್ನು -ಮುಖ್ಯವಾಗಿ ಹಿಡಿಂಬ, ಬಕ ಮತ್ತು ರಾಕ್ಷಸ ಕಿರ್ಮೀರರನ್ನು ಸಂಹರಿಸಿದವರು. ಇವರಲ್ಲಿ ಕೊನೆಯ ರೌದ್ರಾತ್ಮನು ಆ ಮಹಾತ್ಮರನ್ನು ರಾತ್ರಿಯಲ್ಲಿ ಮಾರ್ಗದಲ್ಲಿ ಸುತ್ತುವರೆದು ಪರ್ವತದಂತೆ ಅಚಲವಾಗಿ ನಿಂತಿರಲು ಸಮರಶ್ಲಾಘೀ ಬಲಿಗಳಲ್ಲಿಯೇ ಶ್ರೇಷ್ಠ ಭೀಮನು ಕ್ಷುದ್ರಮೃಗವನ್ನು ವ್ಯಾಘ್ರವೊಂದು ಕೊಲ್ಲುವಂತೆ ಬಲದಿಂದ ಸಂಹರಿಸಿದನು.
03011025a ಪಶ್ಯ ದಿಗ್ವಿಜಯೇ ರಾಜನ್ಯಥಾ ಭೀಮೇನ ಪಾತಿತಃ|
03011025c ಜರಾಸಂಧೋ ಮಹೇಷ್ವಾಸೋ ನಾಗಾಯುತಬಲೋ ಯುಧಿ||
ರಾಜನ್! ನೋಡು! ದಿಗ್ವಿಜಯದಲ್ಲಿ ಭೀಮನು ಹೇಗೆ ಜರಾಸಂಧನನ್ನು ಉರುಳಿಸಿದನು. ಆ ಮಹೇಷ್ವಾಸ ಜರಾಸಂಧನು ಯುದ್ಧದಲ್ಲಿ ಹತ್ತುಸಾವಿರ ಆನೆಗಳ ಬಲವನ್ನು ಹೊಂದಿದ್ದನು.
03011026a ಸಂಬಂಧೀ ವಾಸುದೇವಶ್ಚ ಯೇಷಾಂ ಶ್ಯಾಲಶ್ಚ ಪಾರ್ಷತಃ|
03011026c ಕಸ್ತಾನ್ಯುಧಿ ಸಮಾಸೀತ ಜರಾಮರಣವಾನ್ನರಃ||
ಯಾರ ಸಂಬಂಧಿಯು ವಾಸುದೇವನೋ ಮತ್ತು ಬಾವನು ಪಾರ್ಷತನೋ ಅವರನ್ನು ಮುಪ್ಪು ಮತ್ತು ಸಾವಿಗೆ ಅಧೀನನಾದ ಯಾವ ನರನು ತಾನೇ ಯುದ್ಧದಲ್ಲಿ ಎದುರಿಸಿಯಾನು?
03011027a ತಸ್ಯ ತೇ ಶಮ ಏವಾಸ್ತು ಪಾಂಡವೈರ್ಭರತರ್ಷಭ|
03011027c ಕುರು ಮೇ ವಚನಂ ರಾಜನ್ಮಾ ಮೃತ್ಯುವಶಮನ್ವಗಾಃ||
ಭರತರ್ಷಭ! ನಿನ್ನ ಮತ್ತು ಪಾಂಡವರ ಮಧ್ಯೆ ಶಾಂತಿಯಿರಬೇಕು. ರಾಜನ್! ನಾನು ಹೇಳಿದಂತೆ ಮಾಡು. ಇಲ್ಲದಿದ್ದರೆ ಮೃತ್ಯುವಶನಾಗುತ್ತೀಯೆ.”
03011028a ಏವಂ ತು ಬ್ರುವತಸ್ತಸ್ಯ ಮೈತ್ರೇಯಸ್ಯ ವಿಶಾಂ ಪತೇ|
03011028c ಊರುಂ ಗಜಕರಾಕಾರಂ ಕರೇಣಾಭಿಜಘಾನ ಸಃ||
ವಿಶಾಂಪತೇ! ಹೀಗೆ ಮೈತ್ರೇಯನು ಹೇಳುತ್ತಿರಲು ಅವನು ಆನೆಯ ಸೊಂಡಿಲಿನಂತಿದ್ದ ತನ್ನ ತೊಡೆಯನ್ನು ತಟ್ಟಿದನು.
03011029a ದುರ್ಯೋಧನಃ ಸ್ಮಿತಂ ಕೃತ್ವಾ ಚರಣೇನಾಲಿಖನ್ಮಹೀಂ|
03011029c ನ ಕಿಂ ಚಿದುಕ್ತ್ವಾ ದುರ್ಮೇಧಾಸ್ತಸ್ಥೌ ಕಿಂ ಚಿದವಾಙ್ಮುಖಃ||
ನಗುವಂತೆ ಮಾಡಿ ಆ ದುರ್ಮತಿ ದುರ್ಯೋಧನನು ಏನನ್ನೂ ಹೇಳದೇ ತಲೆಯನ್ನು ತಗ್ಗಿಸಿ ತನ್ನ ಕಾಲ ಬೆರಳಿನಿಂದ ನೆಲದ ಮೇಲೆ ಬರೆಯತೊಡಗಿದನು.
03011030a ತಮಶುಶ್ರೂಷಮಾಣಂ ತು ವಿಲಿಖಂತಂ ವಸುಂಧರಾಂ|
03011030c ದೃಷ್ಟ್ವಾ ದುರ್ಯೋಧನಂ ರಾಜನ್ಮೈತ್ರೇಯಂ ಕೋಪ ಆವಿಶತ್||
ರಾಜನ್! ಹೇಳಿದ್ದುದನ್ನು ಕೇಳದೇ ದುರ್ಯೋಧನನು ನೆಲದ ಮೇಲೆ ಬರೆಯುತ್ತಿರುವುದನ್ನು ನೋಡಿ ಮೈತ್ರೇಯನು ಕೋಪಾವಿಷ್ಟನಾದನು.
03011031a ಸ ಕೋಪವಶಮಾಪನ್ನೋ ಮೈತ್ರೇಯೋ ಮುನಿಸತ್ತಮಃ|
03011031c ವಿಧಿನಾ ಸಂಪ್ರಯುಕ್ತಶ್ಚ ಶಾಪಾಯಾಸ್ಯ ಮನೋ ದಧೇ||
ಕೋಪಾವಿಷ್ಟನಾದ ಆ ಮುನಿಸತ್ತಮ ಮೈತ್ರೇಯನು ವಿಧಿಯ ಸೆಳೆತಕ್ಕೆ ಸಿಕ್ಕಿ ಅವನನ್ನು ಶಪಿಸಲು ನಿರ್ಧರಿಸಿದನು.
03011032a ತತಃ ಸ ವಾರ್ಯುಪಸ್ಪೃಶ್ಯ ಕೋಪಸಂರಕ್ತಲೋಚನಃ|
03011032c ಮೈತ್ರೇಯೋ ಧಾರ್ತರಾಷ್ಟ್ರಂ ತಮಶಪದ್ದುಷ್ಟಚೇತಸಂ||
ಆಗ ಕೋಪದಿಂದ ಅವನ ಕಣ್ಣುಗಳು ಕೆಂಪಾಗಲು, ನೀರನ್ನು ಮುಟ್ಟಿ ಮೈತ್ರೇಯನು ಆ ದುಷ್ಟಚೇತಸ ಧಾರ್ತರಾಷ್ಟ್ರನನ್ನು ಶಪಿಸಿದನು:
03011033a ಯಸ್ಮಾತ್ತ್ವಂ ಮಾಮನಾದೃತ್ಯ ನೇಮಾಂ ವಾಚಂ ಚಿಕೀರ್ಷಸಿ|
03011033c ತಸ್ಮಾದಸ್ಯಾಭಿಮಾನಸ್ಯ ಸದ್ಯಃ ಫಲಮವಾಪ್ನುಹಿ||
“ನನ್ನನ್ನು ಅನಾದರಿಸಿ ನನ್ನ ಮಾತುಗಳಂತೆ ನಡೆದುಕೊಳ್ಳದೇ ಇದ್ದುದಕ್ಕೆ ನೀನು ಸದ್ಯವೇ ನಿನ್ನ ಅಭಿಮಾನದ ಫಲವನ್ನು ಹೊಂದುತ್ತೀಯೆ!
03011034a ತ್ವದಭಿದ್ರೋಹಸಂಯುಕ್ತಂ ಯುದ್ಧಮುತ್ಪತ್ಸ್ಯತೇ ಮಹತ್|
03011034c ಯತ್ರ ಭೀಮೋ ಗದಾಪಾತೈಸ್ತವೋರುಂ ಭೇತ್ಸ್ಯತೇ ಬಲೀ||
ನಿನ್ನ ವಿದ್ರೋಹದಿಂದ ನಡೆಯುವ ಮಹಾ ಯುದ್ಧದಲ್ಲಿ ಬಲಿ ಭೀಮನು ತನ್ನ ಗದಾಪ್ರಹಾರದಿಂದ ನಿನ್ನ ತೊಡೆಯನ್ನು ಒಡೆಯುತ್ತಾನೆ!”
03011035a ಇತ್ಯೇವಮುಕ್ತೇ ವಚನೇ ಧೃತರಾಷ್ಟ್ರೋ ಮಹೀಪತಿಃ|
03011035c ಪ್ರಸಾದಯಾಮಾಸ ಮುನಿಂ ನೈತದೇವಂ ಭವೇದಿತಿ||
ಈ ಮಾತನ್ನು ಆಡುತ್ತಿದ್ದಂತೆಯೇ ಮಹೀಪತಿ ಧೃತರಾಷ್ಟ್ರನು “ಈ ರೀತಿ ಆಗದಂತೆ ಮಾಡು!” ಇಂದು ಆ ಮುನಿಯನ್ನು ಬೇಡಿಕೊಂಡನು.
03011036 ಮೈತ್ರೇಯ ಉವಾಚ|
03011036a ಶಮಂ ಯಾಸ್ಯತಿ ಚೇತ್ಪುತ್ರಸ್ತವ ರಾಜನ್ಯಥಾ ತಥಾ|
03011036c ಶಾಪೋ ನ ಭವಿತಾ ತಾತ ವಿಪರೀತೇ ಭವಿಷ್ಯತಿ||
ಮೈತ್ರೇಯನು ಹೇಳಿದನು: “ರಾಜನ್! ನಿನ್ನ ಮಗನು ಶಾಂತಿಯನ್ನು ಕೇಳಿಕೊಂಡರೆ ಶಾಪದಂತೆ ನಡೆಯುವುದಿಲ್ಲ. ಮಗೂ! ಇದಕ್ಕೆ ವಿಪರೀತವಾಗಿ ನಡೆದುಕೊಂಡರೆ ಶಾಪದಂತೆಯೇ ನಡೆಯುತ್ತದೆ!””
03011037 ವೈಶಂಪಾಯನ ಉವಾಚ|
03011037a ಸ ವಿಲಕ್ಷಸ್ತು ರಾಜೇಂದ್ರ ದುರ್ಯೋಧನಪಿತಾ ತದಾ|
03011037c ಮೈತ್ರೇಯಂ ಪ್ರಾಹ ಕಿರ್ಮೀರಃ ಕಥಂ ಭೀಮೇನ ಪಾತಿತಃ||
ವೈಶಂಪಾಯನನು ಹೇಳಿದನು: “ರಾಜೇಂದ್ರ! ಅದನ್ನು ವಿಲಕ್ಷಣೆ ಮಾಡಿ ದುರ್ಯೋಧನನ ತಂದೆಯು ಮೈತ್ರೇಯನನ್ನು ಕೇಳಿದನು: “ಭೀಮಸೇನನು ಕಿರ್ಮೀರನನ್ನು ಹೇಗೆ ಉರುಳಿಸಿದನು?”
03011038 ಮೈತ್ರೇಯ ಉವಾಚ|
03011038a ನಾಹಂ ವಕ್ಷ್ಯಾಮ್ಯಸೂಯಾ ತೇ ನ ತೇ ಶುಶ್ರೂಷತೇ ಸುತಃ|
03011038c ಏಷ ತೇ ವಿದುರಃ ಸರ್ವಮಾಖ್ಯಾಸ್ಯತಿ ಗತೇ ಮಯಿ||
ಮೈತ್ರೇಯನು ಹೇಳಿದನು: “ಅಸೂಯೆಗೊಂಡಿರುವ ನಿನಗಾಗಲೀ ಅವಿಧೇಯನಾಗಿರುವ ನಿನ್ನ ಈ ಮಗನಿಗಾಗಲೀ ನಾನು ಇದನ್ನು ಹೇಳುವುದಿಲ್ಲ! ನಾನು ಹೊರಟು ಹೋದ ನಂತರ ಎಲ್ಲವನ್ನೂ ವಿದುರನು ನಿನಗೆ ಹೇಳುತ್ತಾನೆ.””
03011039 ವೈಶಂಪಾಯನ ಉವಾಚ|
03011039a ಇತ್ಯೇವಮುಕ್ತ್ವಾ ಮೈತ್ರೇಯಃ ಪ್ರಾತಿಷ್ಠತ ಯಥಾಗತಂ|
03011039c ಕಿರ್ಮೀರವಧಸಂವಿಗ್ನೋ ಬಹಿರ್ದುರ್ಯೋಧನೋಽಗಮತ್||
ವೈಶಂಪಾಯನನು ಹೇಳಿದನು: “ಇದನ್ನು ಹೇಳಿ ಮೈತ್ರೇಯನು ಎದ್ದುಕೊಂಡು ಎಲ್ಲಿಂದ ಬಂದಿದ್ದನೋ ಅಲ್ಲಿಗೆ ಹೊರಟುಹೋದನು. ಕಿರ್ಮೀರನ ವಧೆಯಿಂದ ಚಿಂತಿತನಾದ ದುರ್ಯೋಧನನು ಹೊರಗೆ ಹೊರಟುಹೋದನು.
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅರಣ್ಯಪರ್ವಣಿ ಮೈತ್ರೇಯಶಾಪೇ ಏಕಾದಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ವನಪರ್ವದಲ್ಲಿ ಆರಣ್ಯಪರ್ವದಲ್ಲಿ ಮೈತ್ರೇಯಶಾಪ ಎನ್ನುವ ಹನ್ನೊಂದನೆಯು ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅರಣ್ಯಪರ್ವಃ|
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕ ಪರ್ವದಲ್ಲಿ ಅರಣ್ಯಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-೨/೧೮, ಉಪಪರ್ವಗಳು-೨೯/೧೦೦, ಅಧ್ಯಾಯಗಳು-೩೦೮/೧೯೯೫, ಶ್ಲೋಕಗಳು-೯೯೦೮/೭೩೭೮೪

[1] ಮೈತ್ರೇಯನು ವ್ಯಾಸಮಹರ್ಷಿಯ ತಂದೆ ಪರಾಶರ ಮುನಿಯ ಶಿಷ್ಯ. ಪರಾಶರನು ಮೈತ್ರೇಯನಿಗೆ ವಿಷ್ಣುಪುರಾಣವನ್ನು ಹೇಳಿದ್ದನು.