Aranyaka Parva: Chapter 10

ಆರಣ್ಯಕ ಪರ್ವ: ಅರಣ್ಯ ಪರ್ವ

೧೦

ತಾನು ದುರ್ಯೋಧನನನ್ನು ಪರಿತ್ಯಜಿಸಲು ಶಕ್ತನಿಲ್ಲವೆಂದು ಹೇಳಿದ ಧೃತರಾಷ್ಟ್ರನಿಗೆ ವ್ಯಾಸನು ಪುತ್ರವಾತ್ಸಲ್ಯದ ಕುರಿತು ಇಂದ್ರ ಮತ್ತು ಸುರಭಿಯರ ನಡುವೆ ನಡೆದ ಸಂವಾದವನ್ನು ಉದಾಹರಿಸುವುದು (೧-೧೮). “ನಿನ್ನ ಮಕ್ಕಳಲ್ಲಿ ಎಲ್ಲರೂ ಸಮನಾಗಿದ್ದರೂ ದೀನರ ಮೇಲೆ ಅಧಿಕ ಕೃಪೆಯಿರಲಿ” ಎಂದೂ, ದುರ್ಯೋಧನನು ಪಾಂಡವರೊಂದಿಗೆ ಸಂಧಿಮಾಡಿಕೊಳ್ಳಲೆಂದೂ ವ್ಯಾಸನು ಧೃತರಾಷ್ಟ್ರನಿಗೆ ಸಲಹೆ ನೀಡುವುದು (೧೯-೨೩).

03010001 ಧೃತರಾಷ್ಟ್ರ ಉವಾಚ|

03010001a ಭಗವನ್ನಾಹಮಪ್ಯೇತದ್ರೋಚಯೇ ದ್ಯೂತಸಂಸ್ತವಂ|

03010001c ಮನ್ಯೇ ತದ್ವಿಧಿನಾಕ್ರಮ್ಯ ಕಾರಿತೋಽಸ್ಮೀತಿ ವೈ ಮುನೇ||

ಧೃತರಾಷ್ಟ್ರನು ಹೇಳಿದನು: “ಭಗವನ್! ಈ ದ್ಯೂತದ ಮಾತು ನನಗೂ ಇಷ್ಟವಾಗಲಿಲ್ಲ. ಮುನೇ! ಆದರೆ ವಿಧಿಯು ನನ್ನನ್ನೂ ಮೀರಿ ನನ್ನಿಂದ ಇದು ನಡೆಯುವ ಹಾಗೆ ಮಾಡಿತು ಎಂದು ನನಗನ್ನಿಸುತ್ತದೆ.

03010002a ನೈತದ್ರೋಚಯತೇ ಭೀಷ್ಮೋ ನ ದ್ರೋಣೋ ವಿದುರೋ ನ ಚ|

03010002c ಗಾಂಧಾರೀ ನೇಚ್ಚತಿ ದ್ಯೂತಂ ತಚ್ಚ ಮೋಹಾತ್ಪ್ರವರ್ತಿತಂ||

ಇದು ಭೀಷ್ಮನಿಗೂ, ದ್ರೋಣ ಮತ್ತು ವಿದುರರಿಗೂ ಇಷ್ಟವಾಗಿರಲಿಲ್ಲ. ಗಾಂಧಾರಿಯೂ ಇದನ್ನು ಬಯಸಿರಲಿಲ್ಲ. ಆದರೂ ಮೋಹದಿಂದ ದ್ಯೂತವು ನಡೆದುಹೋಯಿತು!

03010003a ಪರಿತ್ಯಕ್ತುಂ ನ ಶಕ್ನೋಮಿ ದುರ್ಯೋಧನಮಚೇತನಂ|

03010003c ಪುತ್ರಸ್ನೇಹೇನ ಭಗವನ್ಜಾನನ್ನಪಿ ಯತವ್ರತ||

ಭಗವನ್! ಯತವ್ರತ! ತಿಳಿದಿದ್ದರೂ ಕೂಡ ಪುತ್ರಸ್ನೇಹದಿಂದಾಗಿ ನಾನು ಆ ಅಚೇತನ ದುರ್ಯೋಧನನನ್ನು ಪರಿತ್ಯಜಿಸಲು ಶಕ್ತನಾಗಿಲ್ಲ!”

03010004 ವ್ಯಾಸ ಉವಾಚ|

03010004a ವೈಚಿತ್ರವೀರ್ಯ ನೃಪತೇ ಸತ್ಯಮಾಹ ಯಥಾ ಭವಾನ್|

03010004c ದೃಢಂ ವೇದ್ಮಿ ಪರಂ ಪುತ್ರಂ ಪರಂ ಪುತ್ರಾನ್ನ ವಿದ್ಯತೇ||

ವ್ಯಾಸನು ಹೇಳಿದನು: “ನೃಪತೇ ವೈಚಿತ್ರವೀರ್ಯ! ನೀನು ಹೇಳುತ್ತಿರುವುದು ಸತ್ಯ. ಮಗನೇ ಶ್ರೇಷ್ಠ. ಮಗನನ್ನು ಮೀರಿ ಇನ್ನೊಂದಿಲ್ಲ ಎನ್ನುವುದನ್ನು ನಾನೂ ಕೂಡ ಧೃಢವಾಗಿ ತಿಳಿದುಕೊಂಡಿದ್ದೇನೆ. 

03010005a ಇಂದ್ರೋಽಪ್ಯಶ್ರುನಿಪಾತೇನ ಸುರಭ್ಯಾ ಪ್ರತಿಬೋಧಿತಃ|

03010005c ಅನ್ಯೈಃ ಸಮೃದ್ಧೈರಪ್ಯರ್ಥೈರ್ನ ಸುತಾದ್ವಿದ್ಯತೇ ಪರಂ||

ಇಂದ್ರನೂ ಕೂಡ, ಎಷ್ಟೇ ಬೆಲೆಬಾಳುವಂಥಹದಾಗಿದ್ದರೂ ಮಗನಿಂತ ಶ್ರೇಷ್ಠವಾದ ಸಂಪತ್ತು ಬೇರೊಂದಿಲ್ಲ ಎನ್ನುವ ಸತ್ಯವನ್ನು ಸುರಭಿಯ ಕಣ್ಣೀರಿನಿಂದ ಕಂಡುಕೊಂಡಿದ್ದನು.

03010006a ಅತ್ರ ತೇ ವರ್ತಯಿಷ್ಯಾಮಿ ಮಹದಾಖ್ಯಾನಮುತ್ತಮಂ|

03010006c ಸುರಭ್ಯಾಶ್ಚೈವ ಸಂವಾದಮಿಂದ್ರಸ್ಯ ಚ ವಿಶಾಂ ಪತೇ||

ವಿಶಾಂಪತೇ! ಇದಕ್ಕೆ ಸಂಬಂಧಿಸಿದ ಸುರಭಿ ಮತ್ತು ಇಂದ್ರರ ನಡುವೆ ನಡೆದ ಸಂವಾದದ ಒಂದು ಉತ್ತಮ ಮಹದಾಖ್ಯಾನವನ್ನು ಹೇಳುತ್ತೇನೆ.

03010007a ತ್ರಿವಿಷ್ಟಪಗತಾ ರಾಜನ್ಸುರಭಿಃ ಪ್ರಾರುದತ್ಕಿಲ|

03010007c ಗವಾಂ ಮಾತ ಪುರಾ ತಾತ ತಾಮಿಂದ್ರೋಽನ್ವಕೃಪಾಯತ||

ರಾಜನ್! ಮಗೂ! ಹಿಂದೆ ಗೋವುಗಳ ಮಾತೆ ಸುರಭಿಯು ಸ್ವರ್ಗಕ್ಕೆ ಹೋಗಿ ತುಂಬಾ ರೋದಿಸಿದಳು. ಅದನ್ನು ನೋಡಿದ ಇಂದ್ರನಿಗೆ ಅನುಕಂಪವುಂಟಾಯಿತು.

03010008 ಇಂದ್ರ ಉವಾಚ|

03010008a ಕಿಮಿದಂ ರೋದಿಷಿ ಶುಭೇ ಕಚ್ಚಿತ್ ಕ್ಷೇಮಂ ದಿವೌಕಸಾಂ|

03010008c ಮಾನುಷೇಷ್ವಥ ವಾ ಗೋಷು ನೈತದಲ್ಪಂ ಭವಿಷ್ಯತಿ||

ಇಂದ್ರನು ಹೇಳಿದನು: “ಶುಭೇ! ಯಾವ ಕಾರಣಕ್ಕಾಗಿ ನೀನು ಈ ರೀತಿ ರೋದಿಸುತ್ತಿರುವೆ? ದಿವೌಕಸರು, ಮನುಷ್ಯರು ಮತ್ತು ಗೋವುಗಳು ಕ್ಷೇಮದಿಂದಿದ್ದಾರೆ ತಾನೆ? ಇದು ಸಣ್ಣ ವಿಷಯವಾಗಿರಲಿಕ್ಕಿಲ್ಲ!”

03010009 ಸುರಭಿರುವಾಚ|

03010009a ವಿನಿಪಾತೋ ನ ವಃ ಕಶ್ಚಿದ್ದೃಶ್ಯತೇ ತ್ರಿದಶಾಧಿಪ|

03010009c ಅಹಂ ತು ಪುತ್ರಂ ಶೋಚಾಮಿ ತೇನ ರೋದಿಮಿ ಕೌಶಿಕ||

ಸುರಭಿಯು ಹೇಳಿದಳು: “ತ್ರಿದಶಾಧಿಪ! ನಿಮಗೆಲ್ಲರಿಗೂ ಯಾವುದೇ ರೀತಿಯ ಆಪತ್ತೂ ಬಂದೊದಗಿಲ್ಲ! ಕೌಶಿಕ! ನಾನು ನನ್ನ ಪುತ್ರನಿಗೋಸ್ಕರ ಶೋಕಿಸಿ ಅಳುತ್ತಿದ್ದೇನೆ.

03010010a ಪಶ್ಯೈನಂ ಕರ್ಷಕಂ ರೌದ್ರಂ ದುರ್ಬಲಂ ಮಮ ಪುತ್ರಕಂ|

03010010c ಪ್ರತೋದೇನಾಭಿನಿಘ್ನಂತಂ ಲಾಂಗಲೇನ ನಿಪೀಡಿತಂ||

ನೇಗಿಲ ಭಾರದಡಿಯಲ್ಲಿ ನನ್ನ ದುರ್ಬಲ ಪುತ್ರನನ್ನು ಭಯಂಕರ ಬಾರಿಕೋಲಿನಿಂದ ಆ ರೈತನು ಹೊಡೆಯುತ್ತಿರುವುದನ್ನು ನೋಡು!

03010011a ಏತಂ ದೃಷ್ಟ್ವಾ ಭೃಶಂ ಶ್ರಂತಂ ವಧ್ಯಮಾನಂ ಸುರಾಧಿಪ|

03010011c ಕೃಪಾವಿಷ್ಟಾಸ್ಮಿ ದೇವೇಂದ್ರ ಮನಶ್ಚೋದ್ವಿಜತೇ ಮಮ||

ಸುರಾಧಿಪ! ಬಹಳಷ್ಟು ಆಯಾಸಗೊಂಡಿರುವವನನ್ನು ಚೆನ್ನಾಗಿ ಹೊಡೆಯುತ್ತಿರುವುದನ್ನು ನೋಡಿ ಕೃಪಾವಿಷ್ಟಳಾಗಿದ್ದೇನೆ. ದೇವೇಂದ್ರ! ನನ್ನ ಮನಸ್ಸಿನಲ್ಲಿ ಶೋಕವು ಹುಟ್ಟಿದೆ.

03010012a ಏಕಸ್ತತ್ರ ಬಲೋಪೇತೋ ಧುರಮುದ್ವಹತೇಽಧಿಕಾಂ|

03010012c ಅಪರೋಽಲ್ಪಬಲಪ್ರಾಣಃ ಕೃಶೋ ಧಮನಿಸಂತತಃ|

03010012e ಕೃಚ್ಚ್ರಾದುದ್ವಹತೇ ಭಾರಂ ತಂ ವೈ ಶೋಚಾಮಿ ವಾಸವ||

ಅಲ್ಲಿ ಒಬ್ಬ ಬಲವಂತನು ಅಧಿಕ ಭಾರವನ್ನು ಹೊತ್ತಿದ್ದಾನೆ. ಇನ್ನೊಬ್ಬನು ಕಡಿಮೆ ಬಲವುಳ್ಳವನು ಕೃಶನಾದವನು ಕಡಿವಾಣದ ನಿಯಂತ್ರಣದಲ್ಲಿದ್ದಾನೆ. ವಾಸವ! ಅವನು ಹೇಗೆ ಭಾರವನ್ನು ಹೊರಬಲ್ಲ ಎನ್ನುವುದರ ಕುರಿತೇ ಚಿಂತಿಸುತ್ತಿದ್ದೇನೆ.

03010013a ವಧ್ಯಮಾನಃ ಪ್ರತೋದೇನ ತುದ್ಯಮಾನಃ ಪುನಃ ಪುನಃ|

03010013c ನೈವ ಶಕ್ನೋತಿ ತಂ ಭಾರಮುದ್ವೋಢುಂ ಪಶ್ಯ ವಾಸವ||

ವಾಸವ! ಒಂದೇ ಸಮನೆ ಅವನನ್ನು ಹೊಡೆಯುತ್ತಿದ್ದರೂ, ತಿವಿಯುತ್ತಿದ್ದರೂ ಅವನು ಆ ಭಾರವನ್ನು ಎಳೆಯಲು ಶಕ್ಯನಿಲ್ಲ. ನೋಡು!

03010014a ತತೋಽಹಂ ತಸ್ಯ ದುಃಖಾರ್ತಾ ವಿರೌಮಿ ಭೃಶದುಃಖಿತಾ|

03010014c ಅಶ್ರೂಣ್ಯಾವರ್ತಯಂತೀ ಚ ನೇತ್ರಾಭ್ಯಾಂ ಕರುಣಾಯತೀ||

ಆದುದರಿಂದಲೇ ಅವನಿಗಾಗಿ ದುಃಖಾರ್ತಳಾಗಿ ದುಃಖದಿಂದ ತುಂಬಾ ರೋದಿಸುತ್ತಿದ್ದೇನೆ. ಕರುಣೆಯಿಂದ ಕಣ್ಣುಗಳಿಂದ ಕಣ್ಣೀರು ಹರಿಯುತ್ತಿದೆ.”

03010015 ಇಂದ್ರ ಉವಾಚ|

03010015a ತವ ಪುತ್ರಸಹಸ್ರೇಷು ಪೀಡ್ಯಮಾನೇಷು ಶೋಭನೇ|

03010015c ಕಿಂ ಕೃಪಾಯಿತಮಸ್ತ್ಯತ್ರ ಪುತ್ರ ಏಕೋಽತ್ರ ಪೀಡ್ಯತೇ||

ಇಂದ್ರನು ಹೇಳಿದನು: “ಶೋಭನೇ! ನಿನ್ನ ಸಹಸ್ರಾರು ಪುತ್ರರು ಪೀಡನೆಗೊಳಗಾಗುತ್ತಿದ್ದಾರೆ. ಈ ಒಬ್ಬನೇ ಪುತ್ರನ ಪೀಡನೆಯಿಂದ ನೀನು ಏಕೆ ಕೃಪಾವಿಷ್ಟಳಾಗಿದ್ದೀಯೆ?”

03010016 ಸುರಭಿರುವಾಚ|

03010016a ಯದಿ ಪುತ್ರಸಹಸ್ರಂ ಮೇ ಸರ್ವತ್ರ ಸಮಮೇವ ಮೇ|

03010016c ದೀನಸ್ಯ ತು ಸತಃ ಶಕ್ರ ಪುತ್ರಸ್ಯಾಭ್ಯಧಿಕಾ ಕೃಪಾ||

ಸುರಭಿಯು ಹೇಳಿದಳು: “ಶಕ್ರ! ನನಗೆ ಸಹಸ್ರಾರು ಪುತ್ರರಿದ್ದರೂ ಸರ್ವರೂ ನನಗೆ ಸಮನಾಗಿದ್ದಾರೆ. ಆದರೆ ದೀನನಾದ ಸುತನ ಮೇಲೆ ಕೃಪೆಯು ಅಧಿಕ!””

03010017 ವ್ಯಾಸ ಉವಾಚ|

03010017a ತದಿಂದ್ರಃ ಸುರಭೀವಾಕ್ಯಂ ನಿಶಮ್ಯ ಭೃಶವಿಸ್ಮಿತಃ|

03010017c ಜೀವಿತೇನಾಪಿ ಕೌರವ್ಯ ಮೇನೇಽಭ್ಯಧಿಕಮಾತ್ಮಜಂ||

ವ್ಯಾಸನು ಹೇಳಿದನು: “ಕೌರವ್ಯ! ಸುರಭಿಯ ಮಾತುಗಳನ್ನು ಕೇಳಿದ ಇಂದ್ರನು ಅತ್ಯಂತ ವಿಸ್ಮಿತನಾದನು ಮತ್ತು ಆತ್ಮಜನು ಜೀವಕ್ಕಿಂತಲೂ ಅಧಿಕವೆಂದು ತನ್ನಲ್ಲಿಯೇ ಯೋಚಿಸಿದನು.

03010018a ಪ್ರವವರ್ಷ ಚ ತತ್ರೈವ ಸಹಸಾ ತೋಯಮುಲ್ಬಣಂ|

03010018c ಕರ್ಷಕಸ್ಯಾಚರನ್ವಿಘ್ನಂ ಭಗವಾನ್ಪಾಕಶಾಸನಃ||

ಆಗ ಭಗವಾನ್ ಪಾಕಶಾಸನನು ಅಲ್ಲಿ ತಕ್ಷಣವೇ ಅತಿ ಮಳೆಯನ್ನು ಸುರಿಸಿ ಕೃಷಿಕನ ಹೂಳುವಿಕೆಗೆ ವಿಘ್ನವನ್ನುಂಟುಮಾಡಿದನು.

03010019a ತದ್ಯಥಾ ಸುರಭಿಃ ಪ್ರಾಹ ಸಮಮೇವಾಸ್ತು ತೇ ತಥಾ|

03010019c ಸುತೇಷು ರಾಜನ್ಸರ್ವೇಷು ದೀನೇಷ್ವಭ್ಯಧಿಕಾ ಕೃಪಾ||

ರಾಜನ್! ಸುರಭಿಯು ಹೇಳಿದಂತೆ ನಿನ್ನ ಮಕ್ಕಳಲ್ಲಿ ಎಲ್ಲರೂ ಸಮನಾಗಿದ್ದರೂ ದೀನರ ಮೇಲೆ ಅಧಿಕ ಕೃಪೆಯಿರಲಿ.

03010020a ಯಾದೃಶೋ ಮೇ ಸುತಃ ಪಂಡುಸ್ತಾದೃಶೋ ಮೇಽಸಿ ಪುತ್ರಕ|

03010020c ವಿದುರಶ್ಚ ಮಹಾಪ್ರಾಜ್ಞಃ ಸ್ನೇಹಾದೇತದ್ಬ್ರವೀಮ್ಯಹಂ||

ನೀನು ಹೇಗೆ ನನ್ನ ಮಗನೋ ಹಾಗೆಯೇ ಪಾಂಡುವೂ ನನ್ನದೇ ಮಗ. ಮಹಾಪ್ರಾಜ್ಞ ವಿದುರನೂ ಕೂಡ. ಸ್ನೇಹದಿಂದ ನಿನಗೆ ಇದನ್ನು ಹೇಳುತ್ತಿದ್ದೇನೆ.

03010021a ಚಿರಾಯ ತವ ಪುತ್ರಾಣಾಂ ಶತಮೇಕಶ್ಚ ಪಾರ್ಥಿವ|

03010021c ಪಾಂಡೋಃ ಪಂಚೈವ ಲಕ್ಷ್ಯಂತೇ ತೇಽಪಿ ಮಂದಾಃ ಸುದುಃಖಿತಾಃ||

ಪಾರ್ಥಿವ! ನಿನಗೆ ನೂರಾ‌ಒಂದು ಮಕ್ಕಳಿದ್ದಾರೆ. ಆದರೆ ಪಾಂಡುವಿಗೆ ಐವರೇ ಇದ್ದರೂ ಅವರು ಸರಳರಾಗಿದ್ದು ತುಂಬಾ ದುಃಖಿತರಾಗಿರುವಂತೆ ಕಾಣುತ್ತಿದ್ದಾರೆ.

03010022a ಕಥಂ ಜೀವೇಯುರತ್ಯಂತಂ ಕಥಂ ವರ್ಧೇಯುರಿತ್ಯಪಿ|

03010022c ಇತಿ ದೀನೇಷು ಪಾರ್ಥೇಷು ಮನೋ ಮೇ ಪರಿತಪ್ಯತೇ||

ಅವರು ಹೇಗೆ ಕೊನೆಯವರೆಗೆ ಉಳಿಯುತ್ತಾರೆ ಮತ್ತು ಹೇಗೆ ವೃದ್ಧಿಸುತ್ತಾರೆ ಎಂದು ಆ ದೀನ ಪಾರ್ಥರ ಕುರಿತು ನನ್ನ ಮನಸ್ಸು ಪರಿತಪಿಸುತ್ತಿದೆ.

03010023a ಯದಿ ಪಾರ್ಥಿವ ಕೌರವ್ಯಾಂ ಜೀವಮಾನಾನಿಹೇಚ್ಚಸಿ|

03010023c ದುರ್ಯೋಧನಸ್ತವ ಸುತಃ ಶಮಂ ಗಚ್ಚತು ಪಾಂಡವೈಃ||

ಪಾರ್ಥಿವ! ಕೌರವ್ಯರು ಜೀವಂತರಾಗಿರಬೇಕೆಂದು ಬಯಸುವೆಯಾದರೆ ನಿನ್ನ ಸುತ ದುರ್ಯೋಧನನು ಪಾಂಡವರಲ್ಲಿ ಹೋಗಿ ಸಂಧಿಮಾಡಿಕೊಳ್ಳಲಿ.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅರಣ್ಯಪರ್ವಣಿ ಸುರಭ್ಯುಪಾಖ್ಯಾನೇ ದಶಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಅರಣ್ಯಪರ್ವದಲ್ಲಿ ಸುರಭಿಯ ಕಥೆ ಎನ್ನುವ ಹತ್ತನೆಯು ಅಧ್ಯಾಯವು.

Related image

Comments are closed.