Anushasana Parva: Chapter 74

ಅನುಶಾಸನ ಪರ್ವ: ದಾನಧರ್ಮ ಪರ್ವ

೭೪

ವ್ರತ-ನಿಯಮ ಫಲ

ವ್ರತ, ನಿಯಮ, ದಮ, ಸತ್ಯ, ಬ್ರಹ್ಮಚರ್ಯ, ಮಾತಾ-ಪಿತಾ ಮತ್ತು ಗುರು ಮೊದಲಾದವರ ಸೇವೆಯ ಮಹತ್ವ (೧-೩೯).

13074001 ಯುಧಿಷ್ಠಿರ ಉವಾಚ|

13074001a ವಿಸ್ರಂಭಿತೋಽಹಂ ಭವತಾ ಧರ್ಮಾನ್ ಪ್ರವದತಾ ವಿಭೋ|

13074001c ಪ್ರವಕ್ಷ್ಯಾಮಿ ತು ಸಂದೇಹಂ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ವಿಭೋ! ನಿನ್ನ ಧರ್ಮೋಪದೇಶಗಳಿಂದ ನನಗೆ ಅದರಲ್ಲಿ ದೃಢ ವಿಶ್ವಾಸವನ್ನುಂಟುಮಾಡಿರುವೆ. ನನ್ನ ಒಂದು ಸಂದೇಹವನ್ನು ಕೇಳುತ್ತೇನೆ. ಪಿತಾಮಹ! ಅದನ್ನು ನನಗೆ ಹೇಳು.

13074002a ವ್ರತಾನಾಂ ಕಿಂ ಫಲಂ ಪ್ರೋಕ್ತಂ ಕೀದೃಶಂ ವಾ ಮಹಾದ್ಯುತೇ|

13074002c ನಿಯಮಾನಾಂ ಫಲಂ ಕಿಂ ಚ ಸ್ವಧೀತಸ್ಯ ಚ ಕಿಂ ಫಲಮ್||

ಮಹಾದ್ಯುತೇ! ವ್ರತಗಳ ಫಲವು ಏನು ಅಥವಾ ಎಂಥಹುದೆಂದು ಹೇಳಿದ್ದಾರೆ? ನಿಯಮಪಾಲನೆಯ ಫಲವೇನು ಮತ್ತು ಸ್ವಾಧ್ಯಾಯದ ಫಲವೇನು?

13074003a ದಮಸ್ಯೇಹ[1] ಫಲಂ ಕಿಂ ಚ ವೇದಾನಾಂ ಧಾರಣೇ ಚ ಕಿಮ್|

13074003c ಅಧ್ಯಾಪನೇ ಫಲಂ ಕಿಂ ಚ ಸರ್ವಮಿಚ್ಚಾಮಿ ವೇದಿತುಮ್||

ದಮ[2]ದಿಂದಿರುವುದರ ಫಲವೇನು? ವೇದಗಳನ್ನು ಹೃದ್ಗತಮಾಡಿಕೊಳ್ಳುವುದರ ಫಲವೇನು? ವೇದಗಳ ಅಧ್ಯಾಪನೆ ಮಾಡುವುದರ ಫಲವೇನು? ಎಲ್ಲವನ್ನೂ ತಿಳಿಯಲು ಇಚ್ಛಿಸುತ್ತೇನೆ.

13074004a ಅಪ್ರತಿಗ್ರಾಹಕೇ ಕಿಂ ಚ ಫಲಂ ಲೋಕೇ ಪಿತಾಮಹ|

13074004c ತಸ್ಯ ಕಿಂ ಚ ಫಲಂ ದೃಷ್ಟಂ ಶ್ರುತಂ ಯಃ ಸಂಪ್ರಯಚ್ಚತಿ||

ಪಿತಾಮಹ! ಲೋಕದಲ್ಲಿ ಯಾವುದನ್ನೂ ಪ್ರತಿಗ್ರಹಿಸದೇ ಇರುವವನಿಗೆ ದೊರಕುವ ಫಲವೇನು? ಮತ್ತು ವೇದಜ್ಞಾನವನ್ನು ನೀಡುವವನಿಗೆ ಯಾವ ಫಲವು ದೊರೆಯುತ್ತದೆ?

13074005a ಸ್ವಕರ್ಮನಿರತಾನಾಂ ಚ ಶೂರಾಣಾಂ ಚಾಪಿ ಕಿಂ ಫಲಮ್|

13074005c ಸತ್ಯೇ[3] ಚ ಕಿಂ ಫಲಂ ಪ್ರೋಕ್ತಂ ಬ್ರಹ್ಮಚರ್ಯೇ ಚ ಕಿಂ ಫಲಮ್||

ಸ್ವಕರ್ಮನಿರತರಿಗೆ ಮತ್ತು ಶೂರರಿಗೆ ಯಾವ ಫಲವು ದೊರೆಯುತ್ತದೆ? ಸತ್ಯದ ಫಲವೇನು ಮತ್ತು ಬ್ರಹ್ಮಚರ್ಯದ ಫಲವೇನೆಂದು ಹೇಳಿದ್ದಾರೆ?

13074006a ಪಿತೃಶುಶ್ರೂಷಣೇ ಕಿಂ ಚ ಮಾತೃಶುಶ್ರೂಷಣೇ ತಥಾ|

13074006c ಆಚಾರ್ಯಗುರುಶುಶ್ರೂಷಾಸ್ವನುಕ್ರೋಶಾನುಕಂಪನೇ||

ಪಿತೃಶುಶ್ರೂಷಣೆ, ಮಾತೃಶುಶ್ರೂಷಣೆ, ಆಚಾರ್ಯಗುರುಶುಶ್ರೂಷಣೆ, ಅನುಕ್ರೋಶ-ಅನುಕಂಪಗಳ ಫಲಗಳೇನು?

13074007a ಏತತ್ಸರ್ವಮಶೇಷೇಣ ಪಿತಾಮಹ ಯಥಾತಥಮ್|

13074007c ವೇತ್ತುಮಿಚ್ಚಾಮಿ ಧರ್ಮಜ್ಞ ಪರಂ ಕೌತೂಹಲಂ ಹಿ ಮೇ||

ಪಿತಾಮಹ! ಎವೆಲ್ಲವನ್ನು ಸಂಪೂರ್ಣವಾಗಿ ಇದ್ದಹಾಗೆ ತಿಳಿದುಕೊಳ್ಳಲು ಇಚ್ಛಿಸುತ್ತೇನೆ. ಧರ್ಮಜ್ಞ! ಇದರಲ್ಲಿ ನನಗೆ ಪರಮ ಕುತೂಹಲವಿದೆ.”

13074008 ಭೀಷ್ಮ ಉವಾಚ|

13074008a ಯೋ ವ್ರತಂ ವೈ ಯಥೋದ್ದಿಷ್ಟಂ ತಥಾ ಸಂಪ್ರತಿಪದ್ಯತೇ|

13074008c ಅಖಂಡಂ ಸಮ್ಯಗಾರಬ್ಧಂ ತಸ್ಯ ಲೋಕಾಃ ಸನಾತನಾಃ||

ಭೀಷ್ಮನು ಹೇಳಿದನು: “ಶಾಸ್ತ್ರೋಕ್ತವಿಧಿಯಿಂದ ಯಾರು ವ್ರತವನ್ನು ಚೆನ್ನಾಗಿ ಪ್ರಾರಂಭಿಸಿ ಅಖಂಡವಾಗಿ ಪೂರೈಸುತ್ತಾನೋ ಅವನಿಗೆ ಸನಾತನ ಲೋಕಗಳು ದೊರೆಯುತ್ತವೆ.

13074009a ನಿಯಮಾನಾಂ ಫಲಂ ರಾಜನ್ ಪ್ರತ್ಯಕ್ಷಮಿಹ ದೃಶ್ಯತೇ|

13074009c ನಿಯಮಾನಾಂ ಕ್ರತೂನಾಂ ಚ ತ್ವಯಾವಾಪ್ತಮಿದಂ ಫಲಮ್||

ರಾಜನ್! ನಿಯಮಪಾಲನೆಯ ಫಲವನ್ನಾದರೋ ನಾವು ಇಲ್ಲಿ ಪ್ರತ್ಯಕ್ಷವಾಗಿ ಕಾಣುತ್ತೇವೆ. ನೀನೂ ಕೂಡ ನಿಯಮಪಾಲನೆಯ ಮತ್ತು ಕ್ರತುಗಳ ಫಲವನ್ನು ಪಡೆದುಕೊಂಡಿದ್ದೀಯೆ.

13074010a ಸ್ವಧೀತಸ್ಯಾಪಿ ಚ ಫಲಂ ದೃಶ್ಯತೇಽಮುತ್ರ ಚೇಹ ಚ|

13074010c ಇಹಲೋಕೇಽರ್ಥವಾನ್ನಿತ್ಯಂ ಬ್ರಹ್ಮಲೋಕೇ ಚ ಮೋದತೇ||

ಸ್ವಾಧ್ಯಾಯನದ ಫಲವೂ ಕೂಡ ಇಹಲೋಕ ಮತ್ತು ಪರಲೋಕಗಳೆರಡರಲ್ಲೂ ಕಾಣ ಸಿಗುತ್ತವೆ. ಸ್ವಾಧ್ಯಾಯಶೀಲನು ಇಹಲೋಕ ಮತ್ತು ಬ್ರಹ್ಮಲೋಕದಲ್ಲಿ ನಿತ್ಯ ಆನಂದವನ್ನು ಭೋಗಿಸುತ್ತಾನೆ.

13074011a ದಮಸ್ಯ ತು ಫಲಂ ರಾಜನ್ ಶೃಣು ತ್ವಂ ವಿಸ್ತರೇಣ ಮೇ|

13074011c ದಾಂತಾಃ ಸರ್ವತ್ರ ಸುಖಿನೋ ದಾಂತಾಃ ಸರ್ವತ್ರ ನಿರ್ವೃತಾಃ||

ರಾಜನ್! ದಮದ ಫಲವನ್ನು ವಿಸ್ತಾರವಾಗಿ ಕೇಳು. ಜಿತೇಂದ್ರಿಯನು ಸರ್ವತ್ರ ಸುಖಿಯಾಗಿರುತ್ತಾನೆ ಮತ್ತು ಸರ್ವತ್ರ ಸಂತುಷ್ಟನಾಗಿರುತ್ತಾನೆ.

13074012a ಯತ್ರೇಚ್ಚಾಗಾಮಿನೋ ದಾಂತಾಃ ಸರ್ವಶತ್ರುನಿಷೂದನಾಃ|

13074012c ಪ್ರಾರ್ಥಯಂತಿ ಚ ಯದ್ದಾಂತಾ ಲಭಂತೇ ತನ್ನ ಸಂಶಯಃ||

ಜಿತೇಂದ್ರಿಯನು ಎಲ್ಲಿ ಬೇಕಾದರಲ್ಲಿ ಹೋಗುತ್ತಾರೆ ಮತ್ತು ಯಾವುದನ್ನು ಬಯಸುತ್ತಾರೋ ಅದು ಅವರಿಗೆ ಪ್ರಾಪ್ತವಾಗುತ್ತದೆ. ಅವರು ಸರ್ವಶತ್ರುಗಳನ್ನೂ ನಾಶಪಡಿಸುತ್ತಾರೆ. ಇದರಲ್ಲಿ ಸಂಶಯವೇ ಇಲ್ಲ.

13074013a ಯುಜ್ಯಂತೇ ಸರ್ವಕಾಮೈರ್ಹಿ ದಾಂತಾಃ ಸರ್ವತ್ರ ಪಾಂಡವ|

13074013c ಸ್ವರ್ಗೇ ತಥಾ ಪ್ರಮೋದಂತೇ ತಪಸಾ ವಿಕ್ರಮೇಣ ಚ||

13074014a ದಾನೈರ್ಯಜ್ಞೈಶ್ಚ ವಿವಿಧೈರ್ಯಥಾ ದಾಂತಾಃ ಕ್ಷಮಾನ್ವಿತಾಃ|

ಪಾಂಡವ! ಜಿತೇಂದ್ರಿಯರು ಸರ್ವತ್ರ ಸರ್ವಕಾಮಗಳನ್ನೂ ಪಡೆದುಕೊಳ್ಳುತ್ತಾರೆ. ಅವರು ತಮ್ಮ ತಪಸ್ಸು, ವಿಕ್ರಮ, ದಾನ, ಮತ್ತು ವಿವಿಧ ಯಜ್ಞಗಳಿಂದ ಸ್ವರ್ಗದಲ್ಲಿ ಆನಂದಿಸುತ್ತಾರೆ. ಜಿತೇಂದ್ರಿಯರು ಕ್ಷಮಾನ್ವಿತರಾಗಿರುತ್ತಾರೆ.

[4]13074014c ದಾತಾ ಕುಪ್ಯತಿ ನೋ ದಾಂತಸ್ತಸ್ಮಾದ್ದಾನಾತ್ಪರೋ ದಮಃ||

13074015a ಯಸ್ತು ದದ್ಯಾದಕುಪ್ಯನ್ ಹಿ ತಸ್ಯ ಲೋಕಾಃ ಸನಾತನಾಃ|

ದಾನಮಾಡುವವನು ಕೋಪಿಸಿಕೊಳ್ಳಬಹುದು. ಆದರೆ ಜಿತೇಂದ್ರಿಯನಿಗೆ ಕೋಪವಿರುವುದಿಲ್ಲ. ಆದುದರಿಂದ ದಾನಕ್ಕಿಂತಲೂ ದಮವೇ ಶ್ರೇಷ್ಠವು. ಯಾರು ಕ್ರೋಧಗೊಳ್ಳದೇ ದಾನವನ್ನು ಮಾಡುತ್ತಾನೋ ಅವನಿಗೆ ಸನಾತನ ಲೋಕಗಳು ದೊರೆಯುತ್ತವೆ.

13074015c ಕ್ರೋಧೋ ಹಂತಿ ಹಿ ಯದ್ದಾನಂ ತಸ್ಮಾದ್ದಾನಾತ್ಪರೋ ದಮಃ||

13074016a ಅದೃಶ್ಯಾನಿ ಮಹಾರಾಜ ಸ್ಥಾನಾನ್ಯಯುತಶೋ ದಿವಿ|

13074016c ಋಷೀಣಾಂ ಸರ್ವಲೋಕೇಷು ಯಾನೀತೋ ಯಾಂತಿ ದೇವತಾಃ||

13074017a ದಮೇನ ಯಾನಿ ನೃಪತೇ ಗಚ್ಚಂತಿ ಪರಮರ್ಷಯಃ|

13074017c ಕಾಮಯಾನಾ ಮಹತ್ ಸ್ಥಾನಂ ತಸ್ಮಾದ್ದಾನಾತ್ಪರೋ ದಮಃ||

ಕ್ರೋಧವು ಮಾಡಿದ ದಾನದ ಫಲವನ್ನು ನಷ್ಟಗೊಳಿಸುತ್ತದೆ. ಆದುದರಿಂದ ದಾನಕ್ಕಿಂತಲೂ ದಮವೇ ಶ್ರೇಷ್ಠವಾದುದು. ಮಹಾರಾಜ! ನೃಪತೇ! ದಿವಿಯಲ್ಲಿ ಸರ್ವಲೋಕಗಳಲ್ಲಿರುವ ಋಷಿಗಳಿಗಾಗಿ ಸಾವಿರಾರು ಅದೃಶ್ಯಸ್ಥಾನಗಳಿವೆ. ಅಂತಹ ಮಹಾಸ್ಥಾನಗಳನ್ನು ಬಯಸಿದ ಪರಮ ಋಷಿಗಳು ಮತ್ತು ದೇವತೆಗಳು ದಮದಿಂದಲೇ ಅವುಗಳನ್ನು ಪಡೆದುಕೊಳ್ಳುತ್ತಾರೆ. ಆದುದರಿಂದ ದಾನಕ್ಕಿಂತಲೂ ದಮವೇ ಶ್ರೇಷ್ಠವು.

13074018a ಅಧ್ಯಾಪಕಃ ಪರಿಕ್ಲೇಶಾದಕ್ಷಯಂ ಫಲಮಶ್ನುತೇ|

13074018c ವಿಧಿವತ್ಪಾವಕಂ ಹುತ್ವಾ ಬ್ರಹ್ಮಲೋಕೇ ನರಾಧಿಪ||

ನರಾಧಿಪ! ಅಧ್ಯಾಪಕನು ಪರಿಕ್ಲೇಶಗಳನ್ನು ಸಹಿಸಿಕೊಂಡಿದುದಕ್ಕಾಗಿ ಅಕ್ಷಯ ಫಲವನ್ನು ಪಡೆದುಕೊಳ್ಳುತ್ತಾನೆ. ವಿಧಿವತ್ತಾಗಿ ಪಾವಕನಲ್ಲಿ ಹೋಮಮಾಡಿದವನು ಬ್ರಹ್ಮಲೋಕದಲ್ಲಿ ನೆಲೆಸುತ್ತಾನೆ.

13074019a ಅಧೀತ್ಯಾಪಿ ಹಿ ಯೋ ವೇದಾನ್ನ್ಯಾಯವಿದ್ಭ್ಯಃ ಪ್ರಯಚ್ಚತಿ|

13074019c ಗುರುಕರ್ಮಪ್ರಶಂಸೀ ಚ ಸೋಽಪಿ ಸ್ವರ್ಗೇ ಮಹೀಯತೇ||

ವೇದಾಧ್ಯನ ಮಾಡಿ ನ್ಯಾಯವಿಧಿಯಿಂದ ಅದನ್ನು ನೀಡುವ ಮತ್ತು ಗುರುಕರ್ಮವನ್ನು ಪ್ರಶಂಸಿಸುವವನೂ ಕೂಡ ಸ್ವರ್ಗದಲ್ಲಿ ಮೆರೆಯುತ್ತಾರೆ.

13074020a ಕ್ಷತ್ರಿಯೋಽಧ್ಯಯನೇ ಯುಕ್ತೋ ಯಜನೇ ದಾನಕರ್ಮಣಿ|

13074020c ಯುದ್ಧೇ ಯಶ್ಚ ಪರಿತ್ರಾತಾ ಸೋಽಪಿ ಸ್ವರ್ಗೇ ಮಹೀಯತೇ||

ಅಧ್ಯಯನ-ಯಜನ-ದಾನಕರ್ಮಗಳಲ್ಲಿ ಯುಕ್ತನಾದ ಮತ್ತು ಸತ್ಪುರುಷರನ್ನು ರಕ್ಷಿಸುವ ಸಲುವಾಗಿ ಯುದ್ಧಮಾಡುವ ಕ್ಷತ್ರಿಯನು ಸ್ವರ್ಗದಲ್ಲಿ ಮೆರೆಯುತ್ತಾನೆ.

13074021a ವೈಶ್ಯಃ ಸ್ವಕರ್ಮನಿರತಃ ಪ್ರದಾನಾಲ್ಲಭತೇ ಮಹತ್|

13074021c ಶೂದ್ರಃ ಸ್ವಕರ್ಮನಿರತಃ ಸ್ವರ್ಗಂ ಶುಶ್ರೂಷಯಾರ್ಚ್ಚತಿ||

ಸ್ವಕರ್ಮನಿರತ ವೈಶ್ಯನು ದಾನದಿಂದ ಮಹಾಸ್ಥಾನಗಳನ್ನು ಪಡೆಯುತ್ತಾನೆ. ಸ್ವಕರ್ಮನಿರತ ಶೂದ್ರನು ಶುಶ್ರೂಷೆಯಿಂದ ಸ್ವರ್ಗವನ್ನು ಪಡೆದುಕೊಳ್ಳುತ್ತಾನೆ.

13074022a ಶೂರಾ ಬಹುವಿಧಾಃ ಪ್ರೋಕ್ತಾಸ್ತೇಷಾಮರ್ಥಾಂಶ್ಚ ಮೇ ಶೃಣು|

13074022c ಶೂರಾನ್ವಯಾನಾಂ ನಿರ್ದಿಷ್ಟಂ ಫಲಂ ಶೂರಸ್ಯ ಚೈವ ಹ||

ಬಹುವಿಧದ ಶೂರರ ಕುರಿತು ಹೇಳಿದ್ದಾರೆ. ಅವರಿಗೆ ಪ್ರಾಪ್ತವಾಗುವ ಲೋಕಗಳನ್ನು ಹೇಳುತ್ತೇನೆ. ಕೇಳು. ಶೂರರಿಗೂ ಮತ್ತು ಅವರ ವಂಶದವರಿಗೂ ಇಂತಹುದೇ ಫಲವೆಂದು ನಿರ್ದಿಷ್ಟವಾಗಿದೆ.

13074023a ಯಜ್ಞಶೂರಾ ದಮೇ ಶೂರಾಃ ಸತ್ಯಶೂರಾಸ್ತಥಾಪರೇ|

13074023c ಯುದ್ಧಶೂರಾಸ್ತಥೈವೋಕ್ತಾ ದಾನಶೂರಾಶ್ಚ ಮಾನವಾಃ||

ಕೆಲವರು ಯಜ್ಞಶೂರರು. ಕೆಲವರು ಇಂದ್ರಿಯಸಂಯಮದಲ್ಲಿ ಶೂರರು. ಇನ್ನು ಕೆಲವರು ಸತ್ಯಶೂರರು. ಹಾಗೆಯೇ ಯುದ್ಧಶೂರ ಮತ್ತು ದಾನಶೂರ ಮಾನವರ ಕುರಿತು ಹೇಳಿದ್ದಾರೆ.

13074024a ಬುದ್ಧಿಶೂರಾಸ್ತಥೈವಾನ್ಯೇ ಕ್ಷಮಾಶೂರಾಸ್ತಥಾಪರೇ|

13074024c ಆರ್ಜವೇ ಚ ತಥಾ ಶೂರಾಃ ಶಮೇ ವರ್ತಂತಿ ಮಾನವಾಃ||

ಹಾಗೆಯೇ ಅನ್ಯರು ಬುದ್ಧಿಶೂರರಾದರೆ ಇನ್ನೂ ಬೇರೆಯವರು ಕ್ಷಮಾಶೂರರಾಗಿರುತ್ತಾರೆ. ಹಾಗೆಯೇ ಸರಳತೆಯಲ್ಲಿ ಶೂರರಿದ್ದಾರೆ. ಮಾನವರು ಮನೋನಿಗ್ರಹ ಶಮೆಯಲ್ಲಿ ಶೂರರಿದ್ದಾರೆ.

13074025a ತೈಸ್ತೈಸ್ತು ನಿಯಮೈಃ ಶೂರಾ ಬಹವಃ ಸಂತಿ ಚಾಪರೇ|

13074025c ವೇದಾಧ್ಯಯನಶೂರಾಶ್ಚ ಶೂರಾಶ್ಚಾಧ್ಯಾಪನೇ ರತಾಃ||

ಹಾಗೆಯೇ ನಿಯಮಪಾಲನೆಯಲ್ಲಿ ಅನೇಕ ಶೂರರಿದ್ದಾರೆ. ಇನ್ನೂ ವೇದಾಧ್ಯಯನ ಶೂರರಿದ್ದಾರೆ. ಅಧ್ಯಾಪನದಲ್ಲಿ ನಿರತರಾದ ಶೂರರಿದ್ದಾರೆ.

13074026a ಗುರುಶುಶ್ರೂಷಯಾ ಶೂರಾಃ ಪಿತೃಶುಶ್ರೂಷಯಾಪರೇ|

13074026c ಮಾತೃಶುಶ್ರೂಷಯಾ ಶೂರಾ ಭೈಕ್ಷ್ಯಶೂರಾಸ್ತಥಾಪರೇ||

ಗುರುಶುಶ್ರೂಷೆಯಲ್ಲಿ ಶೂರರಾದವರಿದ್ದಾರೆ. ಇನ್ನು ಪಿತೃಶುಶ್ರೂಷೆ, ಮಾತೃಶುಶ್ರೂಷೆಗಳಲ್ಲಿ ಶೂರರು ಹಾಗೂ ಭಿಕ್ಷಾಟನೆ ಮಾಡಿ ಜೀವಿಸುವುದರಲ್ಲಿ ಶೂರರಿದ್ದಾರೆ.

13074027a ಸಾಂಖ್ಯಶೂರಾಶ್ಚ ಬಹವೋ ಯೋಗಶೂರಾಸ್ತಥಾಪರೇ|

[5]13074027c ಅರಣ್ಯೇ ಗೃಹವಾಸೇ ಚ ಶೂರಾಶ್ಚಾತಿಥಿಪೂಜನೇ|

13074027e ಸರ್ವೇ ಯಾಂತಿ ಪರಾಽಲ್ಲೋಕಾನ್ಸ್ವಕರ್ಮಫಲನಿರ್ಜಿತಾನ್||

ಅನೇಕ ಸಾಂಖ್ಯಶೂರರೂ ಇನ್ನು ಯೋಗ ಶೂರರೂ ಇದ್ದಾರೆ. ಅರಣ್ಯ ವಾಸ, ಗೃಹವಾಸ ಮತ್ತು ಅತಿಥಿಪೂಜನಗಳಲ್ಲಿಯೂ ಶೂರರಿದ್ದಾರೆ. ಈ ಎಲ್ಲ ವಿಧದ ಶೂರರೂ ತಮ್ಮ ಕರ್ಮಫಲಗಳನ್ನು ಗೆದ್ದು ಶ್ರೇಷ್ಠ ಲೋಕಗಳಿಗೆ ಹೋಗುತ್ತಾರೆ.

13074028a ಧಾರಣಂ ಸರ್ವವೇದಾನಾಂ ಸರ್ವತೀರ್ಥಾವಗಾಹನಮ್|

13074028c ಸತ್ಯಂ ಚ ಬ್ರುವತೋ ನಿತ್ಯಂ ಸಮಂ ವಾ ಸ್ಯಾನ್ನ ವಾ ಸಮಮ್||

ಸರ್ವವೇದಗಳನ್ನು ಧಾರಣೆಮಾಡಿಕೊಳ್ಳುವುದು ಮತ್ತು ಸರ್ವತೀರ್ಥಗಳಿಗೆ ಹೋಗುವುದು ಇವುಗಳ ಫಲವು ನಿತ್ಯವೂ ಸತ್ಯವನ್ನು ನುಡಿಯುವುದರ ಫಲಕ್ಕೆ ಸಮನಾಗಿರಬಹುದು ಅಥವಾ ಇಲ್ಲದೇ ಇರಬಹುದು.

13074029a ಅಶ್ವಮೇಧಸಹಸ್ರಂ ಚ ಸತ್ಯಂ ಚ ತುಲಯಾ ಧೃತಮ್|

13074029c ಅಶ್ವಮೇಧಸಹಸ್ರಾದ್ಧಿ ಸತ್ಯಮೇವ ವಿಶಿಷ್ಯತೇ||

ಸಹಸ್ರ ಅಶ್ವಮೇಧಗಳ ಫಲ ಮತ್ತು ಸತ್ಯನಿಷ್ಠೆಯ ಫಲ ಇವೆರಡನ್ನೂ ತುಲನೆ ಮಾಡಿದರೆ ಸಹಸ್ರ ಅಶ್ವಮೇಧಗಳಿಗಿಂತ ಸತ್ಯವೇ ಹೆಚ್ಚಿನ ಭಾರವುಳ್ಳದ್ದಾಗುತ್ತದೆ.

13074030a ಸತ್ಯೇನ ಸೂರ್ಯಸ್ತಪತಿ ಸತ್ಯೇನಾಗ್ನಿಃ ಪ್ರದೀಪ್ಯತೇ|

13074030c ಸತ್ಯೇನ ಮಾರುತೋ ವಾತಿ ಸರ್ವಂ ಸತ್ಯೇ ಪ್ರತಿಷ್ಠಿತಮ್||

ಸತ್ಯದಿಂದ ಸೂರ್ಯನು ಸುಡುತ್ತಾನೆ. ಸತ್ಯದಿಂದ ಅಗ್ನಿಯು ಉರಿಯುತ್ತಾನೆ. ಸತ್ಯದಿಂದ ಗಾಳಿಯು ಬೀಸುತ್ತದೆ. ಸರ್ವವೂ ಸತ್ಯದಲ್ಲಿಯೇ ಪ್ರತಿಷ್ಠಿತವಾಗಿದೆ.

13074031a ಸತ್ಯೇನ ದೇವಾನ್ಪ್ರೀಣಾತಿ ಪಿತೄನ್ವೈ ಬ್ರಾಹ್ಮಣಾಂಸ್ತಥಾ|

13074031c ಸತ್ಯಮಾಹುಃ ಪರಂ ಧರ್ಮಂ ತಸ್ಮಾತ್ಸತ್ಯಂ ನ ಲಂಘಯೇತ್||

ಸತ್ಯದಿಂದಲೇ ದೇವತೆಗಳು, ಪಿತೃಗಳು ಮತ್ತು ಬ್ರಾಹ್ಮಣರು ಪ್ರೀತರಾಗುತ್ತಾರೆ. ಸತ್ಯವೇ ಪರಮ ಧರ್ಮವೆಂದೂ ಹೇಳುತ್ತಾರೆ. ಆದುದರಿಂದ ಸತ್ಯವನ್ನು ಉಲ್ಲಂಘಿಸಬಾರದು.

13074032a ಮುನಯಃ ಸತ್ಯನಿರತಾ ಮುನಯಃ ಸತ್ಯವಿಕ್ರಮಾಃ|

13074032c ಮುನಯಃ ಸತ್ಯಶಪಥಾಸ್ತಸ್ಮಾತ್ಸತ್ಯಂ ವಿಶಿಷ್ಯತೇ|

13074032e ಸತ್ಯವಂತಃ ಸ್ವರ್ಗಲೋಕೇ ಮೋದಂತೇ ಭರತರ್ಷಭ||

ಭರತರ್ಷಭ! ಮುನಿಗಳು ಸತ್ಯನಿರತರು. ಮುನಿಗಳು ಸತ್ಯವಿಕ್ರಮಿಗಳು. ಮುನಿಗಳು ಸತ್ಯಶಪಥರು. ಆದುದರಿಂದ ಸತ್ಯವೇ ಶ್ರೇಷ್ಠವು. ಸತ್ಯವಂತರು ಸ್ವರ್ಗಲೋಕದಲ್ಲಿ ಮೆರೆಯುತ್ತಾರೆ.

13074033a ದಮಃ ಸತ್ಯಫಲಾವಾಪ್ತಿರುಕ್ತಾ ಸರ್ವಾತ್ಮನಾ ಮಯಾ|

13074033c ಅಸಂಶಯಂ ವಿನೀತಾತ್ಮಾ ಸರ್ವಃ ಸ್ವರ್ಗೇ ಮಹೀಯತೇ||

ಇಂದ್ರಿಯನಿಗ್ರಹವು ಸತ್ಯಫಲಕ್ಕೆ ಮೂಲ ಎಂದು ನಾನು ಸಂಪೂರ್ಣಹೃದಯದಿಂದ ಹೇಳುತ್ತೇನೆ. ವಿನೀತಾತ್ಮರೆಲ್ಲರೂ ಸ್ವರ್ಗದಲ್ಲಿ ಮೆರೆಯುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.

13074034a ಬ್ರಹ್ಮಚರ್ಯಸ್ಯ ತು ಗುಣಾನ್ ಶೃಣು ಮೇ ವಸುಧಾಧಿಪ|

13074034c ಆ ಜನ್ಮಮರಣಾದ್ಯಸ್ತು ಬ್ರಹ್ಮಚಾರೀ ಭವೇದಿಹ|

13074034e ನ ತಸ್ಯ ಕಿಂ ಚಿದಪ್ರಾಪ್ಯಮಿತಿ ವಿದ್ಧಿ ಜನಾಧಿಪ||

ವಸುಧಾಧಿಪ! ಜನಾಧಿಪ! ಬ್ರಹ್ಮಚರ್ಯದ ಗುಣಗಳನ್ನು ಕೇಳು. ಜನ್ಮದಿಂದ ಮರಣಪರ್ಯಂತವಾಗಿ ಬ್ರಹ್ಮಚಾರಿಯಾಗಿದ್ದವನಿಗೆ ಇಲ್ಲಿ ದೊರೆಯದೇ ಇರುವುದು ಯಾವುದೂ ಇಲ್ಲ ಎಂದು ತಿಳಿ.

13074035a ಬಹ್ವ್ಯಃ ಕೋಟ್ಯಸ್ತ್ವೃಷೀಣಾಂ ತು ಬ್ರಹ್ಮಲೋಕೇ ವಸಂತ್ಯುತ|

13074035c ಸತ್ಯೇ ರತಾನಾಂ ಸತತಂ ದಾಂತಾನಾಮೂರ್ಧ್ವರೇತಸಾಮ್||

ಸತ್ಯರತರಾದ, ಸತತವೂ ದಾಂತರಾದ ಮತ್ತು ಊರ್ಧ್ವರೇತಸರಾದ ಅನೇಕ ಕೋಟಿ ಋಷಿಗಳು ಬ್ರಹ್ಮಲೋಕದಲ್ಲಿ ವಾಸಿಸುತ್ತಿದ್ದಾರೆ.

13074036a ಬ್ರಹ್ಮಚರ್ಯಂ ದಹೇದ್ರಾಜನ್ಸರ್ವಪಾಪಾನ್ಯುಪಾಸಿತಮ್|

13074036c ಬ್ರಾಹ್ಮಣೇನ ವಿಶೇಷೇಣ ಬ್ರಾಹ್ಮಣೋ ಹ್ಯಗ್ನಿರುಚ್ಯತೇ||

ರಾಜನ್! ಬ್ರಹ್ಮಚರ್ಯವನ್ನು ಪಾಲಿಸುವವನು ತನ್ನ ಸರ್ವಪಾಪಗಳನ್ನೂ ಸುಟ್ಟುಬಿಡುತ್ತಾನೆ. ಬ್ರಾಹ್ಮಣನಿಗೆ ಇದು ವಿಶೇಷವಾಗಿ ಅನ್ವಯಿಸುತ್ತದೆ. ಏಕೆಂದರೆ ಬ್ರಾಹ್ಮಣನು ಅಗ್ನಿಯೆಂದು ಹೇಳುತ್ತಾರೆ.

13074037a ಪ್ರತ್ಯಕ್ಷಂ ಚ ತವಾಪ್ಯೇತದ್ಬ್ರಾಹ್ಮಣೇಷು ತಪಸ್ವಿಷು|

13074037c ಬಿಭೇತಿ ಹಿ ಯಥಾ ಶಕ್ರೋ ಬ್ರಹ್ಮಚಾರಿಪ್ರಧರ್ಷಿತಃ|

13074037e ತದ್ಬ್ರಹ್ಮಚರ್ಯಸ್ಯ ಫಲಮೃಷೀಣಾಮಿಹ ದೃಶ್ಯತೇ||

ತಪಸ್ವೀ ಬ್ರಾಹ್ಮಣರಲ್ಲಿ ಪ್ರತ್ಯಕ್ಷವಾಗಿ ಕಾಣಿಸುತ್ತದೆ. ಬ್ರಹ್ಮಚಾರಿಯನ್ನು ಎದುರಿಸಲು ಶಕ್ರನೂ ಭಯಗೊಳ್ಳುತ್ತಾನೆ. ಆ ಬ್ರಹ್ಮಚರ್ಯದ ಫಲವು ಇಲ್ಲಿರುವ ಋಷಿಗಳಲ್ಲಿ ಕಾಣುತ್ತದೆ.

13074038a ಮಾತಾಪಿತ್ರೋಃ ಪೂಜನೇ ಯೋ ಧರ್ಮಸ್ತಮಪಿ ಮೇ ಶೃಣು|

13074038c ಶುಶ್ರೂಷತೇ ಯಃ ಪಿತರಂ ನ ಚಾಸೂಯೇತ್ಕಥಂ ಚನ|

13074038e ಮಾತರಂ ವಾನಹಂವಾದೀ[6] ಗುರುಮಾಚಾರ್ಯಮೇವ ಚ||

13074039a ತಸ್ಯ ರಾಜನ್ ಫಲಂ ವಿದ್ಧಿ ಸ್ವರ್ಲೋಕೇ ಸ್ಥಾನಮುತ್ತಮಮ್|

13074039c ನ ಚ ಪಶ್ಯೇತ ನರಕಂ ಗುರುಶುಶ್ರೂಷುರಾತ್ಮವಾನ್||

ಮತಾಪಿತೃಗಳ ಪೂಜನೆಯ ಧರ್ಮದಿಂದ ದೊರೆಯುವ ಫಲವನ್ನು ಕೇಳು. ತಂದೆ, ತಾಯಿ ಮತ್ತು ಗುರುಆಚಾರ್ಯನನ್ನೂ ಅಸೂಯೆಪಡದೇ ಅಹಂಕಾರವಿಲ್ಲದೇ ಶುಶ್ರೂಷೆಮಾಡುವವನಿಗೆ ಫಲವು ಸ್ವರ್ಲೋಕದಲ್ಲಿ ಉತ್ತಮ ಸ್ಥಾನ ಎಂದು ತಿಳಿ. ಗುರುಶುಶ್ರೂಷೆ ಮಾಡಿದ ಆತ್ಮವಂತನು ನರಕವನ್ನೇ ನೋಡುವುದಿಲ್ಲ.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಚತುಃಸಪ್ತತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಎಪ್ಪತ್ನಾಲ್ಕನೇ ಅಧ್ಯಾಯವು

Pink flower Wall Mural • Pixers® - We live to change.

[1] ದತ್ತಸ್ಯೇಹ (ಭಾರತ ದರ್ಶನ ಮತ್ತು ಗೀತಾ ಪ್ರೆಸ್).

[2] ಇಂದ್ರಿಯ ನಿಗ್ರಹ.

[3] ಶೌಚೇ (ಭಾರತ ದರ್ಶನ ಮತ್ತು ಗೀತಾ ಪ್ರೆಸ್).

[4] ಇದಕ್ಕೆ ಮೊದಲು ಭಾರತ ದರ್ಶನ ಮತ್ತು ಗೀತಾ ಪ್ರೆಸ್ ಸಂಪುಟಗಳಲ್ಲಿ ಈ ಒಂದು ಶ್ಲೋಕಾರ್ದವಿದೆ: ದಾನಾದ್ದಮೋ ವಿಶಿಷ್ಠೋ ಹಿ ದದತ್ಕಿಂಚಿದ್ದ್ವಿಜಾತಯೇ|

[5] ಇದಕ್ಕೆ ಮೊದಲು ಗೀತಾ ಪ್ರೆಸ್ ಸಂಪುಟದಲ್ಲಿ ಈ ಶ್ಲೋಕಾರ್ಧವಿದೆ: ಅರಣ್ಯೇ ಗೃಹವಾಸೇ ಚ ತ್ಯಾಗೇ ಶೂರಾಸ್ತಥಾಪರೇ|

[6] ಮಾತರಂ ಭ್ರಾತರಂ ವಾಪಿ (ಭಾರತ ದರ್ಶನ ಮತ್ತು ಗೀತಾ ಪ್ರೆಸ್).

Comments are closed.