Anushasana Parva: Chapter 72

ಅನುಶಾಸನ ಪರ್ವ: ದಾನಧರ್ಮ ಪರ್ವ

೭೨ 

13072001 ಬ್ರಹ್ಮೋವಾಚ|

13072001a ಯೋಽಯಂ ಪ್ರಶ್ನಸ್ತ್ವಯಾ ಪೃಷ್ಟೋ ಗೋಪ್ರದಾನಾಧಿಕಾರವಾನ್|

13072001c ನಾಸ್ಯ ಪ್ರಷ್ಟಾಸ್ತಿ ಲೋಕೇಽಸ್ಮಿಂಸ್ತ್ವತ್ತೋಽನ್ಯೋ ಹಿ ಶತಕ್ರತೋ||

ಬ್ರಹ್ಮನು ಹೇಳಿದನು: “ಶತಕ್ರತೋ! ಗೋದಾನದ ಕುರಿತು ನೀನು ಕೇಳಿದ ಪ್ರಶ್ನೆಗಳನ್ನು ಕೇಳುವ ಅಧಿಕಾರವುಳ್ಳವನು ಈ ಲೋಕದಲ್ಲಿ ನಿನ್ನನ್ನು ಬಿಟ್ಟು ಬೇರೆ ಯಾರೂ ಇಲ್ಲ.

13072002a ಸಂತಿ ನಾನಾವಿಧಾ ಲೋಕಾ ಯಾಂಸ್ತ್ವಂ ಶಕ್ರ ನ ಪಶ್ಯಸಿ|

13072002c ಪಶ್ಯಾಮಿ ಯಾನಹಂ ಲೋಕಾನೇಕಪತ್ನ್ಯಶ್ಚ ಯಾಃ ಸ್ತ್ರಿಯಃ||

ಶಕ್ರ! ನಾನಾವಿಧದ ಗೋಲೋಕಗಳಿವೆ. ಅವುಗಳನ್ನು ನೀನು ನೋಡಲಾರೆ. ಆ ಅನೇಕ ಲೋಕಗಳನ್ನು ನಾನು ಮತ್ತು ಪತಿವ್ರತಾ ಸ್ತ್ರೀಯರು ನೋಡಬಲ್ಲರು.

13072003a ಕರ್ಮಭಿಶ್ಚಾಪಿ ಸುಶುಭೈಃ ಸುವ್ರತಾ ಋಷಯಸ್ತಥಾ|

13072003c ಸಶರೀರಾ ಹಿ ತಾನ್ಯಾಂತಿ ಬ್ರಾಹ್ಮಣಾಃ ಶುಭವೃತ್ತಯಃ||

ಶುಭಕರ್ಮಗಳಿಂದ ಕೂಡಿದ ಸುವ್ರತ ಋಷಿಗಳು ಮತ್ತು ಶುಭ ನಡತೆಗಳುಳ್ಳ ಬ್ರಾಹ್ಮಣರು ಸಶರೀರರಾಗಿಯೇ ಆ ಲೋಕಗಳಿಗೆ ಹೋಗುತ್ತಾರೆ.

13072004a ಶರೀರನ್ಯಾಸಮೋಕ್ಷೇಣ ಮನಸಾ ನಿರ್ಮಲೇನ ಚ|

13072004c ಸ್ವಪ್ನಭೂತಾಂಶ್ಚ ತಾಽಲ್ಲೋಕಾನ್ಪಶ್ಯಂತೀಹಾಪಿ ಸುವ್ರತಾಃ||

ಸುವ್ರತರು ಶರೀರವನ್ನು ತೊರೆದು ಮೋಕ್ಷಹೊಂದುವ ಸಮಯದಲ್ಲಿ ನಿರ್ಮಲ ಮನಸ್ಸಿನಿಂದ ಸ್ವಪ್ನಪ್ರಾಯವಾದ ಆ ಲೋಕಗಳನ್ನು ಇಲ್ಲಿಂದಲೇ ಕಾಣುತ್ತಾರೆ.

13072005a ತೇ ತು ಲೋಕಾಃ ಸಹಸ್ರಾಕ್ಷ ಶೃಣು ಯಾದೃಗ್ಗುಣಾನ್ವಿತಾಃ|

13072005c ನ ತತ್ರ ಕ್ರಮತೇ ಕಾಲೋ ನ ಜರಾ ನ ಚ ಪಾಪಕಮ್|

13072005e ತಥಾನ್ಯನ್ನಾಶುಭಂ ಕಿಂ ಚಿನ್ನ ವ್ಯಾಧಿಸ್ತತ್ರ ನ ಕ್ಲಮಃ||

ಸಹಸ್ರಾಕ್ಷ! ಆ ಲೋಕಗಳು ಯಾವ ಗುಣಗಳಿಂದ ಕೂಡಿವೆ ಎನ್ನುವುದನ್ನು ಕೇಳು. ಅಲ್ಲಿ ಕಾಲವು ನಡೆಯುವುದಿಲ್ಲ. ಮುಪ್ಪಿಲ್ಲ. ಪಾಪವೂ ಇಲ್ಲ. ಹಾಗೆಯೇ ವ್ಯಾಧಿ ಮತ್ತು ಆಯಾಸಗಳೆಂಬ ಬೇರೆ ಯಾವ ಅಶುಭಗಳೂ ಅಲ್ಲಿ ಇಲ್ಲ.

13072006a ಯದ್ಯಚ್ಚ ಗಾವೋ ಮನಸಾ ತಸ್ಮಿನ್ವಾಂಚಂತಿ ವಾಸವ|

13072006c ತತ್ಸರ್ವಂ ಪ್ರಾಪಯಂತಿ ಸ್ಮ ಮಮ ಪ್ರತ್ಯಕ್ಷದರ್ಶನಾತ್|

13072006e ಕಾಮಗಾಃ ಕಾಮಚಾರಿಣ್ಯಃ ಕಾಮಾತ್ಕಾಮಾಂಶ್ಚ ಭುಂಜತೇ||

ವಾಸವ! ಅಲ್ಲಿ ಗೋವುಗಳು ಮನಸಾ ಬಯಸಿದವುಗಳನ್ನು ಎಲ್ಲವನ್ನೂ ಪಡೆದುಕೊಳ್ಳುತ್ತವೆ. ಅದನ್ನು ನಾನು ಪ್ರತ್ಯಕ್ಷ ನೋಡಿದ್ದೇನೆ. ಸ್ವೇಚ್ಛೆಯಿಂದ ಸಂಚರಿಸುತ್ತವೆ. ಬೇಕೆಂದವುಗಳನ್ನು ಸಂಕಲ್ಪ ಮಾತ್ರದಿಂದಲೇ ಪಡೆದುಕೊಳ್ಳುತ್ತವೆ.

13072007a ವಾಪ್ಯಃ ಸರಾಂಸಿ ಸರಿತೋ ವಿವಿಧಾನಿ ವನಾನಿ ಚ|

13072007c ಗೃಹಾಣಿ ಪರ್ವತಾಶ್ಚೈವ ಯಾವದ್ದ್ರವ್ಯಂ ಚ ಕಿಂ ಚನ||

ಅಲ್ಲಿ ಬಾವಿಗಳು, ಸರೋವರಗಳು, ನದಿಗಳು, ವಿವಿಧ ವನಗಳು, ಗೃಗಹಗಳು, ಪರ್ವತಗಳು ಮತ್ತು ಇತರ ದ್ರವ್ಯಗಳೂ ಇವೆ.

13072008a ಮನೋಜ್ಞಂ ಸರ್ವಭೂತೇಭ್ಯಃ ಸರ್ವಂ ತತ್ರ ಪ್ರದೃಶ್ಯತೇ|

13072008c ಈದೃಶಾನ್ವಿದ್ಧಿ ತಾಽಲ್ಲೋಕಾನ್ನಾಸ್ತಿ ಲೋಕಸ್ತತೋಽಧಿಕಃ||

ಅಲ್ಲಿರುವ ಎಲ್ಲವೂ ಸರ್ವಭೂತಗಳಿಗೂ ಮನೋಜ್ಞವಾಗಿಯೇ ಕಾಣುತ್ತವೆ. ಈ ರೀತಿಯ ಲೋಕಗಳು ಮತ್ತು ಇದಕ್ಕೂ ಅಧಿಕವಾಗಿರುವ ಲೋಕಗಳು ಬೇರೆಯಾವುದೂ ಇಲ್ಲ ಎಂದು ತಿಳಿ.

13072009a ತತ್ರ ಸರ್ವಸಹಾಃ ಕ್ಷಾಂತಾ ವತ್ಸಲಾ ಗುರುವರ್ತಿನಃ|

13072009c ಅಹಂಕಾರೈರ್ವಿರಹಿತಾ ಯಾಂತಿ ಶಕ್ರ ನರೋತ್ತಮಾಃ||

ಶಕ್ರ! ಸರ್ವವನ್ನೂ ಸಹಿಸಿಕೊಳ್ಳುವ, ಸಹನಶೀಲರಾದ, ದಯಾಳುಗಳಾದ, ಗುರುವನ್ನೇ ಅನುಸರಿಸುವ, ಅಹಂಕಾರದಿಂದ ರಹಿತರಾಗಿರುವ ನರೋತ್ತಮರು ಅಲ್ಲಿಗೆ ಹೋಗುತ್ತಾರೆ.

13072010a ಯಃ ಸರ್ವಮಾಂಸಾನಿ ನ ಭಕ್ಷಯೀತ

ಪುಮಾನ್ಸದಾ ಯಾವದಂತಾಯ ಯುಕ್ತಃ[1]|

13072010c ಮಾತಾಪಿತ್ರೋರರ್ಚಿತಾ ಸತ್ಯಯುಕ್ತಃ

ಶುಶ್ರೂಷಿತಾ ಬ್ರಾಹ್ಮಣಾನಾಮನಿಂದ್ಯಃ||

ಯಾವ ಮಾಂಸವನ್ನೂ ತಿನ್ನದಿರುವ, ಇಂದ್ರಿಯಗಳನ್ನು ನಿಗ್ರಹಿಸುವ ಪುರುಷರು, ಮಾತಾ ಪಿತೃಗಳನ್ನು ಪೂಜಿಸುವ, ಸತ್ಯಯುಕ್ತನಾದ, ಬ್ರಾಹ್ಮಣರ ಶೂಶ್ರೂಷೆ ಮಾಡುವ ಅನಿಂದ್ಯ ಪುರುಷರು ಅಲ್ಲಿಗೆ ಹೋಗುತ್ತಾರೆ.

13072011a ಅಕ್ರೋಧನೋ ಗೋಷು ತಥಾ ದ್ವಿಜೇಷು

ಧರ್ಮೇ ರತೋ ಗುರುಶುಶ್ರೂಷಕಶ್ಚ|

13072011c ಯಾವಜ್ಜೀವಂ ಸತ್ಯವೃತ್ತೇ ರತಶ್ಚ

ದಾನೇ ರತೋ ಯಃ ಕ್ಷಮೀ ಚಾಪರಾಧೇ||

ಗೋವುಗಳ ಮತ್ತು ಬ್ರಾಹ್ಮಣರ ವಿಷಯದಲ್ಲಿ ಕ್ರೋಧಗೊಳ್ಳದಿರುವ, ಧರ್ಮನಿರತನಾಗಿರುವ, ಗುರುಶುಶ್ರೂಷಣೆಯಲ್ಲಿ ತೊಡಗಿರುವ, ಜೀವನಪರ್ಯಂತ ಸತ್ಯವ್ರತವನ್ನು ನಡೆಸಿಕೊಂಡು ಬಂದಿರುವ, ದಾನನಿರತನಾಗಿರುವ ಮತ್ತು ಅಪರಾಧಗಳನ್ನು ಕ್ಷಮಿಸುವ ಪುರುಷರು ಗೋಲೋಕಕ್ಕೆ ಹೋಗುತ್ತಾರೆ.

13072012a ಮೃದುರ್ದಾಂತೋ ದೇವಪರಾಯಣಶ್ಚ

ಸರ್ವಾತಿಥಿಶ್ಚಾಪಿ ತಥಾ ದಯಾವಾನ್|

13072012c ಈದೃಗ್ಗುಣೋ ಮಾನವಃ ಸಂಪ್ರಯಾತಿ

ಲೋಕಂ ಗವಾಂ ಶಾಶ್ವತಂ ಚಾವ್ಯಯಂ ಚ||

ಮೃದುಸ್ವಭಾವ, ಜಿತೇಂದ್ರಿಯತೆ, ದೇವಪರಾಯಣ, ಅತಿಥಿಗಳು ಮತ್ತು ಸರ್ವರ ಕುರಿತೂ ದಯೆ ಈ ಗುಣಗಳಿಂದ ಕೂಡಿದ ಮಾನವರು ಶಾಶ್ವತವೂ ಅವ್ಯಯವೂ ಆಗಿರುವ ಗೋಲೋಕಕ್ಕೆ ಹೋಗುತ್ತಾರೆ.

13072013a ನ ಪಾರದಾರೀ ಪಶ್ಯತಿ ಲೋಕಮೇನಂ

ನ ವೈ ಗುರುಘ್ನೋ ನ ಮೃಷಾಪ್ರಲಾಪೀ|

13072013c ಸದಾಪವಾದೀ ಬ್ರಾಹ್ಮಣಃ ಶಾಂತವೇದೋ

ದೋಷೈರನ್ಯೈರ್ಯಶ್ಚ ಯುಕ್ತೋ ದುರಾತ್ಮಾ||

ಪರಸ್ತ್ರೀಗಮನ, ಗುರುಘಾತಿ, ಸುಳ್ಳನ್ನು ಹೇಳುವುದು, ಪರನಿಂದನೆಯನ್ನು ಮಾಡುವುದು, ಬ್ರಾಹ್ಮಣರನ್ನು ದ್ವೇಷಿಸುವುದು – ಈ ಮತ್ತು ಅನ್ಯ ದೋಷಗಳನ್ನು ಹೊಂದಿರುವ ದುರಾತ್ಮನು ಈ ಲೋಕವನ್ನು ನೋಡುವುದಿಲ್ಲ. 

13072014a ನ ಮಿತ್ರಧ್ರುಘ್ನೈಕೃತಿಕಃ ಕೃತಘ್ನಃ

ಶಠೋಽನೃಜುರ್ಧರ್ಮವಿದ್ವೇಷಕಶ್ಚ|

13072014c ನ ಬ್ರಹ್ಮಹಾ ಮನಸಾಪಿ ಪ್ರಪಶ್ಯೇದ್

ಗವಾಂ ಲೋಕಂ ಪುಣ್ಯಕೃತಾಂ ನಿವಾಸಮ್||

ಮಿತ್ರದ್ರೋಹಿ, ವಂಚಕ, ಕೃತಘ್ನ, ಶಠ, ಕುಟಿಲ, ಧರ್ಮದ್ವೇಷಿ, ಮತ್ತು ಬ್ರಹ್ಮಹತ್ಯೆಯನ್ನು ಮಾಡಿರುವವನು ಮನಸ್ಸಿನಲ್ಲಿಯೂ ಕೂಡ ಈ ಗೋಲೋಕವನ್ನು ಕಾಣಲಾರರು.

13072015a ಏತತ್ತೇ ಸರ್ವಮಾಖ್ಯಾತಂ ನೈಪುಣೇನ ಸುರೇಶ್ವರ|

13072015c ಗೋಪ್ರದಾನರತಾನಾಂ ತು ಫಲಂ ಶೃಣು ಶತಕ್ರತೋ||

ಸುರೇಶ್ವರ! ಶತಕ್ರತೋ! ಗೋಲೋಕದ ಕುರಿತು ನಿನಗೆ ಎಲ್ಲವನ್ನೂ ಹೇಳಿದ್ದೇನೆ. ಇನ್ನು ಗೋದಾನವನ್ನು ಮಾಡುವವರಿಗೆ ದೊರೆಯುವ ಫಲದ ಕುರಿತು ಕೇಳು.

13072016a ದಾಯಾದ್ಯಲಬ್ಧೈರರ್ಥೈರ್ಯೋ ಗಾಃ ಕ್ರೀತ್ವಾ ಸಂಪ್ರಯಚ್ಚತಿ|

13072016c ಧರ್ಮಾರ್ಜಿತಧನಕ್ರೀತಾನ್ಸ ಲೋಕಾನಶ್ನುತೇಽಕ್ಷಯಾನ್||

ಪಿತ್ರಾರ್ಜಿತ ಧನದಿಂದ ಗೋವುಗಳನ್ನು ಕರೀದಿಸಿ ದಾನಮಾಡುವವರು ಮತ್ತು ಧರ್ಮಾರ್ಜಿತ ಧನದಿಂದ ಗೋವುಗಳನ್ನು ಕರೀದಿಸಿ ದಾನಮಾಡುವವರು ಅಕ್ಷಯ ಲೋಕಗಳನ್ನು ಪಡೆಯುತ್ತಾರೆ.

13072017a ಯೋ ವೈ ದ್ಯೂತೇ ಧನಂ ಜಿತ್ವಾ ಗಾಃ ಕ್ರೀತ್ವಾ ಸಂಪ್ರಯಚ್ಚತಿ|

13072017c ಸ ದಿವ್ಯಮಯುತಂ ಶಕ್ರ ವರ್ಷಾಣಾಂ ಫಲಮಶ್ನುತೇ||

ಶಕ್ರ! ದ್ಯೂತದಲ್ಲಿ ಧನವನ್ನು ಗೆದ್ದು ಅದರಿಂದ ಗೋವುಗಳನ್ನು ಕರೀದಿಸಿ ದಾನಮಾಡುವವನು ಹತ್ತುಸಾವಿರ ದೇವವರ್ಷಗಳ ವರೆಗೆ ಗೋದಾನದ ಫಲವನ್ನು ಅನುಭವಿಸುತ್ತಾನೆ.

13072018a ದಾಯಾದ್ಯಾ ಯಸ್ಯ ವೈ ಗಾವೋ ನ್ಯಾಯಪೂರ್ವೈರುಪಾರ್ಜಿತಾಃ|

13072018c ಪ್ರದತ್ತಾಸ್ತಾಃ ಪ್ರದಾತೄಣಾಂ ಸಂಭವಂತ್ಯಕ್ಷಯಾ ಧ್ರುವಾಃ||

ಪಿತ್ರಾರ್ಜಿತವಾಗಿ ಬಂದ ಅಥವಾ ನ್ಯಾಯಪೂರ್ವಕವಾಗಿ ಸಂಪಾದಿಸಿದ ಗೋವುಗಳನ್ನು ದಾನಮಾಡುವ ದಾನಿಗಳಿಗೆ ಅಕ್ಷಯ ಮತ್ತು ನಿಶ್ಚಲ ಲೋಕಗಳು ದೊರೆಯುತ್ತವೆ.

13072019a ಪ್ರತಿಗೃಹ್ಯ ಚ ಯೋ ದದ್ಯಾದ್ಗಾಃ ಸುಶುದ್ಧೇನ ಚೇತಸಾ|

13072019c ತಸ್ಯಾಪೀಹಾಕ್ಷಯಾಽಲ್ಲೋಕಾನ್ಧ್ರುವಾನ್ವಿದ್ಧಿ ಶಚೀಪತೇ||

ಶಚೀಪತೇ! ಗೋದಾನವನ್ನು ಸ್ವೀಕರಿಸಿ ಅದೇ ಗೋವನ್ನು ಶುದ್ಧ ಮನಸ್ಸಿನಿಂದ ದಾನಮಾಡುವವನು ಕೂಡ ಅಕ್ಷಯ ಮತ್ತು ನಿಶ್ಚಲ ಲೋಕಗಳನ್ನು ಪಡೆಯುತ್ತಾನೆ ಎಂದು ತಿಳಿ.

13072020a ಜನ್ಮಪ್ರಭೃತಿ ಸತ್ಯಂ ಚ ಯೋ ಬ್ರೂಯಾನ್ನಿಯತೇಂದ್ರಿಯಃ|

13072020c ಗುರುದ್ವಿಜಸಹಃ ಕ್ಷಾಂತಸ್ತಸ್ಯ ಗೋಭಿಃ ಸಮಾ ಗತಿಃ||

ಜನ್ಮಪ್ರಭೃತಿ ಸತ್ಯವನ್ನೇ ಹೇಳುವ, ಜಿತೇಂದ್ರಿಯ, ಗುರು-ದ್ವಿಜರರನ್ನು ಸಹಿಸಿಕೊಳ್ಳುವ, ಕ್ಷಮಾಶೀಲನು ಗೋದಾನದ ಫಲವನ್ನೇ ಹೊಂದುತ್ತಾನೆ.

13072021a ನ ಜಾತು ಬ್ರಾಹ್ಮಣೋ ವಾಚ್ಯೋ ಯದವಾಚ್ಯಂ ಶಚೀಪತೇ|

13072021c ಮನಸಾ ಗೋಷು ನ ದ್ರುಹ್ಯೇದ್ಗೋವೃತ್ತಿರ್ಗೋನುಕಂಪಕಃ||

13072022a ಸತ್ಯೇ ಧರ್ಮೇ ಚ ನಿರತಸ್ತಸ್ಯ ಶಕ್ರ ಫಲಂ ಶೃಣು|

13072022c ಗೋಸಹಸ್ರೇಣ ಸಮಿತಾ ತಸ್ಯ ಧೇನುರ್ಭವತ್ಯುತ||

ಶಚೀಪತೇ! ಶಕ್ರ! ಅವಾಚ್ಯ ಮಾತುಗಳನ್ನಾಡುವ ಬ್ರಾಹ್ಮಣರು ಇಲ್ಲ. ಮನಸ್ಸಿನಲ್ಲಿಯೂ ಗೋವುಗಳಿಗೆ ದ್ರೋಹವನ್ನೆಸಗದೇ ಗೋವುಗಳಿಗೆ ಅನುಕಂಪಕನಾಗಿದ್ದುಕೊಂಡು ಗೋವೃತ್ತಿಯನ್ನು ನಡೆಸುತ್ತಾ ಸತ್ಯ-ಧರ್ಮಗಳಲ್ಲಿ ನಿರತನಾಗಿರುವ ಬ್ರಾಹ್ಮಣನ ಫಲವನ್ನು ಕೇಳು. ಅವನು ಮಾಡುವ ಒಂದು ಗೋದಾನವು ಸಹಸ್ರ ಗೋದಾನಗಳ ಫಲವನ್ನು ಕೊಡುತ್ತದೆ.

13072023a ಕ್ಷತ್ರಿಯಸ್ಯ ಗುಣೈರೇಭಿರನ್ವಿತಸ್ಯ ಫಲಂ ಶೃಣು|

13072023c ತಸ್ಯಾಪಿ ಶತತುಲ್ಯಾ[2] ಗೌರ್ಭವತೀತಿ ವಿನಿಶ್ಚಯಃ||

ಕ್ಷತ್ರಿಯನೂ ಇದೇ ಗುಣಗಳಿಂದ ಸಂಪನ್ನನಾಗಿದ್ದರೆ ಅವನಿಗೆ ದೊರೆಯುವ ಫಲದ ಕುರಿತು ಕೇಳು. ಅವನ ಗೋದಾನವು ನೂರರ ಸಮನಾಗುತ್ತದೆ ಎನ್ನುವುದು ನಿಶ್ಚಯ.

13072024a ವೈಶ್ಯಸ್ಯೈತೇ ಯದಿ ಗುಣಾಸ್ತಸ್ಯ ಪಂಚಾಶತಂ ಭವೇತ್|

13072024c ಶೂದ್ರಸ್ಯಾಪಿ ವಿನೀತಸ್ಯ ಚತುರ್ಭಾಗಫಲಂ ಸ್ಮೃತಮ್||

ಇದೇ ಗುಣಗಳಿಂದ ವೈಶ್ಯನಿಗೆ ಒಂದು ಗೋಡಾನವು ಐವತ್ತು ಗೋದನಗಳ ಫಲವನ್ನು ನೀಡುತ್ತದೆ. ವಿನೀತನಾದ ಶೂದ್ರನಿಗೆ ಅವನು ಮಾಡಿದ ಒಂದು ಗೋದಾನವು ಇನ್ನೂರಾ ಐವತ್ತು ಗೋದಾನಗಳ ಫಲವನ್ನು ನೀಡುತ್ತದೆ.

13072025a ಏತಚ್ಚೈವಂ ಯೋಽನುತಿಷ್ಠೇತ ಯುಕ್ತಃ

ಸತ್ಯೇನ ಯುಕ್ತೋ ಗುರುಶುಶ್ರೂಷಯಾ ಚ|

13072025c ದಾಂತಃ ಕ್ಷಾಂತೋ ದೇವತಾರ್ಚೀ ಪ್ರಶಾಂತಃ

ಶುಚಿರ್ಬುದ್ಧೋ ಧರ್ಮಶೀಲೋಽನಹಂವಾಕ್||

13072026a ಮಹತ್ಫಲಂ ಪ್ರಾಪ್ನುತೇ ಸ ದ್ವಿಜಾಯ

ದತ್ತ್ವಾ ದೋಗ್ಧ್ರೀಂ ವಿಧಿನಾನೇನ ಧೇನುಮ್|

ಹೀಗೆಯೇ ಏಕಾಗ್ರಚಿತ್ತನಾಗಿ ಗೋಸೇವಾವ್ರತವನ್ನು ಪಾಲಿಸುವ ಸತ್ಯನಿಷ್ಠ ಗುರುಸೇವಾಪಾರಾಯಣ ದಕ್ಷ ಕ್ಷಮಾಶೀಲ ದೇವತಾರ್ಚೀ ಪ್ರಶಾಂತ ಶುಚಿರ್ಬುದ್ಧಿ ಧರ್ಮಶೀಲ ಅನಹಂಕಾರನು ಹಾಲುಕರೆಯುವ ಧೇನುವನ್ನು ದ್ವಿಜನಿಗೆ ದಾನಮಾಡಿದರೆ ಮಹಾಫಲವನ್ನು ಪಡೆದುಕೊಳ್ಳುತ್ತಾನೆ.

13072026c ನಿತ್ಯಂ ದದ್ಯಾದೇಕಭಕ್ತಃ ಸದಾ ಚ

ಸತ್ಯೇ ಸ್ಥಿತೋ ಗುರುಶುಶ್ರೂಷಿತಾ ಚ||

13072027a ವೇದಾಧ್ಯಾಯೀ ಗೋಷು ಯೋ ಭಕ್ತಿಮಾಂಶ್ಚ

ನಿತ್ಯಂ ದೃಷ್ಟ್ವಾ ಯೋಽಭಿನಂದೇತ ಗಾಶ್ಚ|

13072027c ಆ ಜಾತಿತೋ ಯಶ್ಚ ಗವಾಂ ನಮೇತ

ಇದಂ ಫಲಂ ಶಕ್ರ ನಿಬೋಧ ತಸ್ಯ||

ಶಕ್ರ! ಹುಟ್ಟಿದಾಗಿನಿಂದಲೂ ಗೋವುಗಳಿಗೆ ನಮಸ್ಕರಿಸುತ್ತಿರುವ, ಪ್ರತಿನಿತ್ಯವೂ ಗೋವುಗಳನ್ನು ನೋಡಿ ಆನಂದಿಸುವ ಸತ್ಯನಿಷ್ಠ ಗುರುಶುಶ್ರೂಷಕ, ವೇದಾಧ್ಯಾಯಿ, ಗೋಭಕ್ತನು ನಿತ್ಯ ಒಂದೇ ಹೊತ್ತು ಊಟಮಾಡುತ್ತಾ ದಿನವೂ ಒಂದು ಗೋದಾನಮಾಡಿದರೆ ದೊರಕುವ ಫಲವನ್ನು ಕೇಳು.

13072028a ಯತ್ಸ್ಯಾದಿಷ್ಟ್ವಾ ರಾಜಸೂಯೇ ಫಲಂ ತು

ಯತ್ಸ್ಯಾದಿಷ್ಟ್ವಾ ಬಹುನಾ ಕಾಂಚನೇನ|

13072028c ಏತತ್ತುಲ್ಯಂ ಫಲಮಸ್ಯಾಹುರಗ್ರ್ಯಂ

ಸರ್ವೇ ಸಂತಸ್ತ್ವೃಷಯೋ ಯೇ ಚ ಸಿದ್ಧಾಃ||

ರಾಜಸೂಯಯಾಗದಿಂದ ದೊರೆಯುವ ಫಲ, ಬಹುಕಾಂಚನದಿಂದ ಮಾಡಿದ ಯಜ್ಞದ ಫಲ ಇವು ದಿನನಿತ್ಯ ಗೋದಾನದ ಫಲಕ್ಕೆ ಸಮಾನವೆಂದು ಆದುದರಿಂದ ಅದು ಹೆಚ್ಚಿನ ಮಹತ್ವವುಳ್ಳದ್ದೆಂದು ಎಲ್ಲ ಸತ್ಪುರುಷರೂ, ಋಷಿಗಳೂ ಮತ್ತು ಸಿದ್ಧರೂ ಹೇಳುತ್ತಾರೆ.

13072029a ಯೋಽಗ್ರಂ ಭಕ್ತಾನ್ಕಿಂ ಚಿದಪ್ರಾಶ್ಯ ದದ್ಯಾದ್

ಗೋಭ್ಯೋ ನಿತ್ಯಂ ಗೋವ್ರತೀ ಸತ್ಯವಾದೀ|

13072029c ಶಾಂತೋ ಬುದ್ಧೋ ಗೋಸಹಸ್ರಸ್ಯ ಪುಣ್ಯಂ

ಸಂವತ್ಸರೇಣಾಪ್ನುಯಾತ್ಪುಣ್ಯಶೀಲಃ||

ಗೋಸೇವೆಯ ವ್ರತವನ್ನು ಕೈಗೊಂಡು ನಿತ್ಯವೂ ಊಟಕ್ಕೆ ಮೊದಲು ಗೋವುಗಳಿಗೆ ಗೋಗ್ರಾಸವನ್ನು ಭಕ್ತಿಯಿಂದ ನೀಡುವ ಸತ್ಯವಾದೀ ಶಾಂತ ಬುದ್ಧನಿಗೆ ಒಂದೇ ವರ್ಷದಲ್ಲಿ ಸಹಸ್ರ ಗೋದಾನಗಳ ಫಲವು ದೊರೆಯುತ್ತದೆ.

13072030a ಯ ಏಕಂ ಭಕ್ತಮಶ್ನೀಯಾದ್ದದ್ಯಾದೇಕಂ ಗವಾಂ ಚ ಯತ್|

13072030c ದಶ ವರ್ಷಾಣ್ಯನಂತಾನಿ ಗೋವ್ರತೀ ಗೋನುಕಂಪಕಃ||

ದಿನದ ಒಂದು ಊಟವನ್ನು ಮಾತ್ರ ಮಾಡಿಕೊಂಡಿದ್ದು ಇನ್ನೊಂದು ಊಟವನ್ನು ಪ್ರತಿನಿತ್ಯ ಗೋವಿಗೆ ಭಕ್ತಿಯಿಂದ ಅರ್ಪಿಸುವ ಗೋವ್ರತೀ ಗೋ-ಅನುಕಂಪನಿಗೆ ಹತ್ತುವರ್ಷಗಳಲ್ಲಿ ಅನಂತ ಗೋದಾನಗಳ ಫಲವು ಲಭಿಸುತ್ತದೆ.

13072031a ಏಕೇನೈವ ಚ ಭಕ್ತೇನ ಯಃ ಕ್ರೀತ್ವಾ ಗಾಂ ಪ್ರಯಚ್ಚತಿ|

13072031c ಯಾವಂತಿ ತಸ್ಯ ಪ್ರೋಕ್ತಾನಿ ದಿವಸಾನಿ ಶತಕ್ರತೋ|

13072031e ತಾವಚ್ಚತಾನಾಂ ಸ ಗವಾಂ ಫಲಮಾಪ್ನೋತಿ ಶಾಶ್ವತಮ್||

ಶತಕ್ರತೋ! ಯಾರು ಹತ್ತು ವರ್ಷಗಳ ಪರ್ಯಂತ ಒಂದೇ ಹೊತ್ತು ಊಟಮಾಡುತ್ತಾ ಮತ್ತೊಂದು ಹೊತ್ತಿನ ಊಟದ ಉಳಿತಾಯದಿಂದ ಹಸುವನ್ನು ಖರೀದಿಸಿ ಅದನ್ನು ಸತ್ಪಾತ್ರನಿಗೆ ದಾನ ಮಾಡುವವನು ಆ ಗೋವಿನಲ್ಲಿ ಎಷ್ಟು ರೋಮಗಳಿರುವವೋ ಅಷ್ಟು ಸಂಖ್ಯೆಯ ಗೋವುಗಳನ್ನು ದಾನಮಾಡಿದ ಶಾಶ್ವತ ಫಲವನ್ನು ಹೊಂದುತ್ತಾನೆ.

13072032a ಬ್ರಾಹ್ಮಣಸ್ಯ ಫಲಂ ಹೀದಂ ಕ್ಷತ್ರಿಯೇಽಭಿಹಿತಂ ಶೃಣು|

13072032c ಪಂಚವಾರ್ಷಿಕಮೇತತ್ತು ಕ್ಷತ್ರಿಯಸ್ಯ ಫಲಂ ಸ್ಮೃತಮ್|

13072032e ತತೋಽರ್ಧೇನ ತು ವೈಶ್ಯಸ್ಯ ಶೂದ್ರೋ ವೈಶ್ಯಾರ್ಧತಃ ಸ್ಮೃತಃ||

ಇದು ಬ್ರಾಹ್ಮಣನಿಗೆ ದೊರಕುವ ಫಲ. ಕ್ಷತ್ರಿಯನಿಗೆ ದೊರಕುವ ಫಲದ ಕುರಿತು ಕೇಳು. ಕ್ಷತ್ರಿಯನಿಗೆ ಐದು ವರ್ಷಗಳಲ್ಲಿಯೇ ಫಲವನ್ನೀಯುತ್ತದೆ ಎಂದು ಸ್ಮೃತಿಯಿದೆ. ಅದಕ್ಕಿಂದ ಅರ್ಧ ಸಮಯದಲ್ಲಿ ವೈಶ್ಯನಿಗೂ, ವೈಶ್ಯನದಕ್ಕಿಂತ ಅರ್ಧಸಮಯದಲ್ಲಿ ಶೂದ್ರನಿಗೂ ಆ ಫಲವು ದೊರಕುತ್ತದೆಯಿಂದು ಸ್ಮೃತಿಯಿದೆ.

13072033a ಯಶ್ಚಾತ್ಮವಿಕ್ರಯಂ ಕೃತ್ವಾ ಗಾಃ ಕ್ರೀತ್ವಾ ಸಂಪ್ರಯಚ್ಚತಿ|

13072033c ಯಾವತೀಃ ಸ್ಪರ್ಶಯೇದ್ಗಾ[3] ವೈ ತಾವತ್ತು ಫಲಮಶ್ನುತೇ|

13072033e ಲೋಮ್ನಿ ಲೋಮ್ನಿ ಮಹಾಭಾಗ ಲೋಕಾಶ್ಚಾಸ್ಯಾಕ್ಷಯಾಃ ಸ್ಮೃತಾಃ||

ತನ್ನನ್ನೇ ಮಾರಿಕೊಂಡು ಗೋವನ್ನು ಖರೀದಿಸಿ ದಾನಮಾಡುವವನಿಗೆ ಅವನು ಎಲ್ಲಿಯವರೆಗೆ ಗೋವನ್ನು ಮುಟ್ಟುತ್ತಿರುತ್ತಾನೋ ಅಲ್ಲಿಯವರೆಗೆ ಆ ಫಲವು ದೊರೆಯುತ್ತದೆ. ಮಹಾಭಾಗ! ಗೋವಿನ ರೋಮ ರೋಮದಲ್ಲಿಯೂ ಅಕ್ಷಯ ಲೋಕಗಳಿವೆಯೆಂದು ಸ್ಮೃತಿಯಿದೆ.

13072034a ಸಂಗ್ರಾಮೇಷ್ವರ್ಜಯಿತ್ವಾ ತು ಯೋ ವೈ ಗಾಃ ಸಂಪ್ರಯಚ್ಚತಿ|

13072034c ಆತ್ಮವಿಕ್ರಯತುಲ್ಯಾಸ್ತಾಃ ಶಾಶ್ವತಾ ವಿದ್ಧಿ ಕೌಶಿಕ||

ಕೌಶಿಕ[4]! ಸಂಗ್ರಾಮದಲ್ಲಿ ಗೆದ್ದ ಗೋವುಗಳನ್ನು ದಾನಮಾಡುವುದು ಮತ್ತು ತನ್ನನ್ನು ತಾನೇ ಮಾರಾಟಮಾಡಿಕೊಂಡು ಗೋವನ್ನು ಖರೀದಿಸಿ ದಾನಮಾಡುವುದು ಇವೆರಡೂ ಸಮಾನ ಶಾಶ್ವತಲೋಕಗಳನ್ನು ನೀಡುತ್ತವೆ ಎಂದು ತಿಳಿ.

13072035a ಅಲಾಭೇ ಯೋ ಗವಾಂ ದದ್ಯಾತ್ತಿಲಧೇನುಂ ಯತವ್ರತಃ|

13072035c ದುರ್ಗಾತ್ಸ ತಾರಿತೋ ಧೇನ್ವಾ ಕ್ಷೀರನದ್ಯಾಂ ಪ್ರಮೋದತೇ||

ಗೋವಿನ ಅಭಾವದಲ್ಲಿ ತಿಲಧೇನುವನ್ನು ದಾನಮಾಡುವ ಯತವ್ರತನು ಆ ಧೇನುವಿನಿಂದ ಕಷ್ಟಗಳನ್ನು ಪಾರಾಗುತ್ತಾನೆ ಮತ್ತು ಕ್ಷೀರಸರೋವರದ ತೀರದಲ್ಲಿ ಪ್ರಮೋದಿಸುತ್ತಾನೆ.

13072036a ನ ತ್ವೇವಾಸಾಂ ದಾನಮಾತ್ರಂ ಪ್ರಶಸ್ತಂ

ಪಾತ್ರಂ ಕಾಲೋ ಗೋವಿಶೇಷೋ ವಿಧಿಶ್ಚ|

13072036c ಕಾಲಜ್ಞಾನಂ ವಿಪ್ರ ಗವಾಂತರಂ ಹಿ

ದುಃಖಂ ಜ್ಞಾತುಂ ಪಾವಕಾದಿತ್ಯಭೂತಮ್||

ವಿಪ್ರ! ಗೋವುಗಳ ದಾನಮಾತ್ರದಿಂದ ಅದು ಪ್ರಶಸ್ತವಾಗುವುದಿಲ್ಲ. ಪಾತ್ರ, ಕಾಲ, ಗೋವಿಶೇಷ ಮತ್ತು ವಿಧಿಗಳು ಮುಖ್ಯ. ಯಾವ ಕಾಲದಲ್ಲಿ ದಾನಮಾಡಬೇಕು, ಎಂತಹ ಗೋವನ್ನು ದಾನಮಾಡಬೇಕು ಮತ್ತು ಅಗ್ನಿ-ಸೂರ್ಯರ ತೇಜಸ್ಸಿರುವ ಪಾತ್ರನು ಯಾರು ಎಂದು ತಿಳಿದುಕೊಳ್ಳುವುದು ಕಠಿಣ.

13072037a ಸ್ವಾಧ್ಯಾಯಾಢ್ಯಂ ಶುದ್ಧಯೋನಿಂ ಪ್ರಶಾಂತಂ

ವೈತಾನಸ್ಥಂ ಪಾಪಭೀರುಂ ಕೃತಜ್ಞಮ್|

13072037c ಗೋಷು ಕ್ಷಾಂತಂ ನಾತಿತೀಕ್ಷ್ಣಂ ಶರಣ್ಯಂ

ವೃತ್ತಿಗ್ಲಾನಂ ತಾದೃಶಂ ಪಾತ್ರಮಾಹುಃ||

ಸ್ವಾಧ್ಯಾಯಸಂಪನ್ನನೂ, ಶುದ್ಧಯೋನಿಯಲ್ಲಿ ಜನಿಸಿದವನೂ, ಪ್ರಶಾಂತನೂ, ಯಜ್ಞಪರಾಯಣನೂ, ಪಾಪಕ್ಕೆ ಹೆದರುವವನೂ, ಕೃತಜ್ಞನೂ, ಗೋವುಗಳ ಕುರಿತು ಕ್ಷಮೆಯಿಂದಿರುವವನೂ, ಅತಿತೀಕ್ಷ್ಣನಲ್ಲದವನೂ, ಶರಣ್ಯನೂ ಆದವನು ಗೋದಾನಕ್ಕೆ ಪಾತ್ರನು ಎಂದು ಹೇಳುತ್ತಾರೆ.

13072038a ವೃತ್ತಿಗ್ಲಾನೇ ಸೀದತಿ ಚಾತಿಮಾತ್ರಂ

ಕೃಷ್ಯರ್ಥಂ ವಾ ಹೋಮಹೇತೋಃ ಪ್ರಸೂತ್ಯಾಮ್|

13072038c ಗುರ್ವರ್ಥಂ ವಾ ಬಾಲಸಂವೃದ್ಧಯೇ ವಾ

ಧೇನುಂ ದದ್ಯಾದ್ದೇಶಕಾಲೇ ವಿಶಿಷ್ಟೇ||

ವೃತ್ತಿಯನ್ನು ಕಳೆದುಕೊಂಡಿರುವವನಿಗೆ, ಅತ್ಯಂತ ಕಷ್ಟದಲ್ಲಿರುವವನಿಗೆ, ಕೃಷಿಗೋಸ್ಕರವಾಗಿ ಅಥವಾ ಹೋಮದ ಸಲುವಾಗಿಯೂ, ಗರ್ಭಿಣಿಯ ಮತ್ತು ಬಾಣಂತಿಯ ಪೋಷಣೆಯ ಸಲುವಾಗಿಯೂ, ಗುರುದಕ್ಷಿಣೆಗಾಗಿಯೂ, ಮಕ್ಕಳನ್ನು ಸಾಕುವ ಸಲುವಾಗಿಯೂ ಗೋದಾನವನ್ನು ಯಾವ ದೇಶ-ಕಾಲಗಳಲ್ಲಾದರೂ ಮಾಡಬಹುದು.

13072039a ಅಂತರ್ಜಾತಾಃ[5] ಸುಕ್ರಯಜ್ಞಾನಲಬ್ಧಾಃ

ಪ್ರಾಣಕ್ರೀತಾ ನಿರ್ಜಿತಾಶ್ಚೌಕಜಾಶ್ಚ|

13072039c ಕೃಚ್ಚ್ರೋತ್ಸೃಷ್ಟಾಃ ಪೋಷಣಾಭ್ಯಾಗತಾಶ್ಚ

ದ್ವಾರೈರೇತೈರ್ಗೋವಿಶೇಷಾಃ ಪ್ರಶಸ್ತಾಃ||

ಗರ್ಭವನ್ನು ಧರಿಸಿರುವ, ಖರೀದಿಸಿರುವ, ಜ್ಞಾನಕ್ಕೆ ಪಾರಿತೋಷಕವಾಗಿ ದೊರಕಿರುವ, ತನ್ನನ್ನೇ ಮಾರಿಕೊಂಡು ಖರೀದಿಸಿದ, ಗೆದ್ದುಕೊಂಡಿರುವ, ಬಳುವಳಿಯಾಗಿ ಬಂದ, ಬಂಧನದಿಂದ ಬಿಡುಗಡೆಯನ್ನು ಹೊಂದಿದ, ತಾವಾಗಿಯೇ ಮನೆಬಾಗಿಲಿಗೆ ಆಗಮಿಸಿದ ಹಸುಗಳು ದಾನಕ್ಕೆ ಪ್ರಶಸ್ತವಾದವುಗಳು.

13072040a ಬಲಾನ್ವಿತಾಃ ಶೀಲವಯೋಪಪನ್ನಾಃ

ಸರ್ವಾಃ ಪ್ರಶಂಸಂತಿ ಸುಗಂಧವತ್ಯಃ|

13072040c ಯಥಾ ಹಿ ಗಂಗಾ ಸರಿತಾಂ ವರಿಷ್ಠಾ

ತಥಾರ್ಜುನೀನಾಂ ಕಪಿಲಾ ವರಿಷ್ಠಾ||

ಬಲಾನ್ವಿತವಾದ, ಶೀಲಸಂಪನ್ನವಾದ ಮತ್ತು ಚಿಕ್ಕವಯಸ್ಸಿನ ಸುಗಂಧಯುಕ್ತ ಹಸುಗಳೆಲ್ಲವೂ ದಾನಕ್ಕೆ ಯೋಗ್ಯವಾದವುಗಳೇ. ಗಂಗೆಯು ಹೇಗೆ ನದಿಗಳಲ್ಲಿ ವರಿಷ್ಠಳೋ ಹಾಗೆ ಕಪಿಲೆಯು ಗೋವುಗಳಲ್ಲಿ ವರಿಷ್ಠಳು.

13072041a ತಿಸ್ರೋ ರಾತ್ರೀಸ್ತ್ವದ್ಭಿರುಪೋಷ್ಯ ಭೂಮೌ

ತೃಪ್ತಾ ಗಾವಸ್ತರ್ಪಿತೇಭ್ಯಃ ಪ್ರದೇಯಾಃ|

13072041c ವತ್ಸೈಃ ಪುಷ್ಟೈಃ ಕ್ಷೀರಪೈಃ ಸುಪ್ರಚಾರಾಸ್

ತ್ರ್ಯಹಂ ದತ್ತ್ವಾ ಗೋರಸೈರ್ವರ್ತಿತವ್ಯಮ್||

ಮೂರು ರಾತ್ರಿ ಕೇವಲ ನೀರನ್ನು ಕುಡಿದುಕೊಂಡು ನೆಲದ ಮೇಲೆ ಮಲಗಿದ್ದು ಗೋವುಗಳನ್ನು ಸೇವೆಮಾಡಿ ಸಂತೃಪ್ತಿಗೊಳಿಸಿ ನಂತರ ಗೋದಾನಮಾಡಬೇಕು. ಹಾಲುಣ್ಣುವ ಪುಷ್ಟ ಕರುವಿನೊಂದಿಗೆ ಸತ್ಪಾತ್ರನಿಗೆ ಗೋದಾನಮಾಡಬೇಕು. ಗೋದಾನದ ನಂತರ ಮೂರು ದಿನ ಆಕಳ ಹಾಲನ್ನು ಮಾತ್ರ ಸೇವಿಸಬೇಕು.

13072042a ದತ್ತ್ವಾ ಧೇನುಂ ಸುವ್ರತಾಂ ಸಾಧುವತ್ಸಾಂ

ಕಲ್ಯಾಣವೃತ್ತಾಮಪಲಾಯಿನೀಂ ಚ|

13072042c ಯಾವಂತಿ ಲೋಮಾನಿ ಭವಂತಿ ತಸ್ಯಾಸ್

ತಾವಂತಿ ವರ್ಷಾಣಿ ವಸತ್ಯಮುತ್ರ||

ತಂಟೆ ಮಾಡದೇ ಹಾಲುಕೊಡುವ ಮತ್ತು ತಪ್ಪಿಸಿಕೊಂಡು ಓಡಿ ಹೋಗದೇ ಇರುವ ಸಾಧು ಹಸುವನ್ನು ದಾನಮಾಡಿದವನು ಆ ಹಸುವಿನಲ್ಲಿರುವ ರೋಮಗಳ ಸಂಖ್ಯೆಯಷ್ಟು ವರ್ಷಗಳನ್ನು ಪರಲೋಕದಲ್ಲಿ ಸುಖವಾಗಿ ಕಳೆಯುತ್ತಾನೆ.

13072043a ತಥಾನಡ್ವಾಹಂ ಬ್ರಾಹ್ಮಣಾಯಾಥ ಧುರ್ಯಂ

ದತ್ತ್ವಾ ಯುವಾನಂ ಬಲಿನಂ ವಿನೀತಮ್|

13072043c ಹಲಸ್ಯ ವೋಢಾರಮನಂತವೀರ್ಯಂ

ಪ್ರಾಪ್ನೋತಿ ಲೋಕಾನ್ದಶಧೇನುದಸ್ಯ||

ಹಾಗೆಯೇ ಭಾರವನ್ನೆಳೆಯಬಲ್ಲ, ಬಲಿಷ್ಠವಾದ, ಯುವವಯಸ್ಸಿನ, ಸಾಧುವಾದ, ನೇಗಿಲೆನ್ನೆಳೆಯುವ ಅಪಾರಬಲವುಳ್ಳ ಎತ್ತನ್ನು ಬ್ರಾಹ್ಮಣನಿಗೆ ದಾನಮಾಡುವವನು ಹತ್ತು ಗೋದಾನಗಳಿಂದ ಪ್ರಾಪ್ತವಾಗುವ ಲೋಕಗಳನ್ನು ಪಡೆದುಕೊಳ್ಳುತ್ತಾನೆ.

13072044a ಕಾಂತಾರೇ ಬ್ರಾಹ್ಮಣಾನ್ಗಾಶ್ಚ ಯಃ ಪರಿತ್ರಾತಿ ಕೌಶಿಕ|

13072044c ಕ್ಷೇಮೇಣ ಚ ವಿಮುಚ್ಯೇತ[6] ತಸ್ಯ ಪುಣ್ಯಫಲಂ ಶೃಣು|

ಕೌಶಿಕ! ಕಾಂತಾರದಲ್ಲಿ ಬ್ರಾಹ್ಮಣ-ಗೋವುಗಳನ್ನು ರಕ್ಷಿಸಿ ಕ್ಷೇಮದಿಂದ ಬಿಡುಗಡೆಗೊಳಿಸುವವನ ಪುಣ್ಯಫಲವನ್ನು ಕೇಳು.

13072044e ಅಶ್ವಮೇಧಕ್ರತೋಸ್ತುಲ್ಯಂ ಫಲಂ ಭವತಿ ಶಾಶ್ವತಮ್||

13072045a ಮೃತ್ಯುಕಾಲೇ ಸಹಸ್ರಾಕ್ಷ ಯಾಂ ವೃತ್ತಿಮನುಕಾಂಕ್ಷತೇ|

ಸಹಸ್ರಾಕ್ಷ! ಅವನಿಗೆ ಅಶ್ವಮೇಧಕ್ರತುವಿನ ಸಮನಾದ ಶಾಶ್ವತ ಫಲವು ಲಭಿಸುತ್ತದೆ. ಮತ್ತು ಮೃತ್ಯುಕಾಲದಲ್ಲಿ ಯಾವುದನ್ನು ಬಯಸುವನೋ ಅದನ್ನೇ ಪಡೆದುಕೊಳ್ಳುತ್ತಾನೆ.

13072045c ಲೋಕಾನ್ಬಹುವಿಧಾನ್ದಿವ್ಯಾನ್ಯದ್ವಾಸ್ಯ ಹೃದಿ ವರ್ತತೇ||

13072046a ತತ್ಸರ್ವಂ ಸಮವಾಪ್ನೋತಿ ಕರ್ಮಣಾ ತೇನ ಮಾನವಃ|

13072046c ಗೋಭಿಶ್ಚ ಸಮನುಜ್ಞಾತಃ ಸರ್ವತ್ರ ಸ ಮಹೀಯತೇ||

ಗೋ-ಬ್ರಾಹ್ಮಣರ ರಕ್ಷಣಾ ಕರ್ಮದಿಂದ ಮಾನವನು ಬಹುವಿಧದ ದಿವ್ಯ ಲೋಕಗಳನ್ನೂ ಮತ್ತು ಹೃದಯದಲ್ಲಿರುವ ಸರ್ವ ಕಾಮನೆಗಳನ್ನೂ ಪಡೆದುಕೊಳ್ಳುತ್ತಾನೆ. ಗೋವುಗಳ ಅನುಗ್ರಹಕ್ಕೆ ಪಾತ್ರನಾದವನು ಸರ್ವತ್ರ ಪೂಜ್ಯನಾಗುತ್ತಾನೆ.

13072047a ಯಸ್ತ್ವೇತೇನೈವ ವಿಧಿನಾ ಗಾಂ ವನೇಷ್ವನುಗಚ್ಚತಿ|

13072047c ತೃಣಗೋಮಯಪರ್ಣಾಶೀ ನಿಃಸ್ಪೃಹೋ ನಿಯತಃ ಶುಚಿಃ||

13072048a ಅಕಾಮಂ ತೇನ ವಸ್ತವ್ಯಂ ಮುದಿತೇನ ಶತಕ್ರತೋ|

13072048c ಮಮ ಲೋಕೇ ಸುರೈಃ ಸಾರ್ಧಂ ಲೋಕೇ ಯತ್ರಾಪಿ ಚೇಚ್ಚತಿ||

ಶತಕ್ರತೋ! ಇದೇ ವಿಧಿಯಿಂದ ಗೋವುಗಳನ್ನು ಅನುಸರಿಸಿ ಅರಣ್ಯಕ್ಕೆ ಹೋಗಿ , ನಿಃಸ್ಪೃಹನೂ, ನಿಯತನೂ, ಶುಚಿಯೂ ಆಗಿದ್ದುಕೊಂಡು ಹುಲ್ಲು-ಗೋಮಯ-ತರಗೆಲೆಗಳನ್ನು ತಿನ್ನುತ್ತಾ ಅಕಾಮದಿಂದ ವಾಸಿಸುವನೋ ಅವನು ಮುದದಿಂದ ನನ್ನ ಲೋಕದಲ್ಲಿ  ಸುರರೊಂದಿಗೆ  ಆನಂದಿಸುತ್ತಾನೆ  ಮತ್ತು ತಾನು ತಾನು ಬಯಸಿದ ಲೋಕಗಳಿಗೆ ಹೋಗುತ್ತಾನೆ.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಪಿತಾಮಹೇಂದ್ರಸಂವಾದೇ ದ್ವಿಸಪ್ತತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಪಿತಾಮಹೇಂದ್ರಸಂವಾದ ಎನ್ನುವ ಎಪ್ಪತ್ತೆರಡನೇ ಅಧ್ಯಾಯವು.

blue flower isolated on white background Stock Photo by sommai | PhotoDune

[1] ಪುಮಾನ್ಸದಾ ಭಾವಿತೋ ಧರ್ಮಯುಕ್ತಃ (ಭಾರತ ದರ್ಶನ).

[2] ದ್ವಿಜತುಲ್ಯಾ (ಭಾರತ ದರ್ಶನ).

[3] ಯಾವತ್ಸಂದರ್ಶಯೇದ್ಗಾಂ ವೈ (ಭಾರತ ದರ್ಶನ).

[4] ಇಂದ್ರನೇ ಕುಶಿಕನ ಮಗ ಗಾಧಿಯಾಗಿ ಹುಟ್ಟಿದ್ದುದರಿಂದ ಕೌಶಿಕನಾದನು.

[5] ಅಂತರ್ಜ್ಞಾತಾಃ (ಭಾರತ ದರ್ಶನ).

[6] ಕ್ಷಣೇನ ವಿಪ್ರಮುಚ್ಯೇತ (ಭಾರತ ದರ್ಶನ).

Comments are closed.