Adi Parva: Chapter 68

ಆದಿ ಪರ್ವ: ಸಂಭವ ಪರ್ವ

೬೮

ಶಕುಂತಲೆಯಲ್ಲಿ ಸರ್ವದಮನನ ಜನನ (೧-೧೦). ಶಕುಂತಲೆಯು ಮಗನನ್ನು ದುಃಷಂತನಿಗೆ ಒಪ್ಪಿಸುವುದು; ದುಃಷಂತನು ಮರೆಯದಿದ್ದರೂ ನೆನಪಿಲ್ಲವೆಂದು ಹೇಳುವುದು (೧೧-೧೫). ಶಕುಂತಲೆಯು ರಾಜನಿಗೆ ತಿಳಿಸಿ ಹೇಳಲು ಪ್ರಯತ್ನಿಸುವುದು (೧೬-೮೦).

01068001 ವೈಶಂಪಾಯನ ಉವಾಚ

01068001a ಪ್ರತಿಜ್ಞಾಯ ತು ದುಃಷಂತೇ ಪ್ರತಿಯಾತೇ ಶಕುಂತಲಾ|

01068001c ಗರ್ಭಂ ಸುಷಾವ ವಾಮೋರುಃ ಕುಮಾರಮಮಿತೌಜಸಂ||

ವೈಶಂಪಾಯನನು ಹೇಳಿದನು: ““ಹಿಂದಿರುಗುತ್ತೇನೆ” ಎಂದು ಪ್ರತಿಜ್ಞೆ ಮಾಡಿ ದುಃಷಂತನು ಹೊರಟು ಹೋದ ನಂತರ ಆ ವಾಮೋರು ಶಕುಂತಲೆಯು ಅಮಿತೌಜಸ ಕುಮಾರನಿಗೆ ಜನ್ಮವನ್ನಿತ್ತಳು.

01068002a ತ್ರಿಷು ವರ್ಷೇಷು ಪೂರ್ಣೇಷು ದಿಪ್ತಾನಲಸಮದ್ಯುತಿಂ|

01068002c ರೂಪೌದಾರ್ಯಗುಣೋಪೇತಂ ದೌಃಷಂತಿಂ ಜನಮೇಜಯ||

ಜನಮೇಜಯ! ಮೂರು ವರ್ಷಗಳು ತುಂಬಿದಾಗಲೇ ದುಃಷಂತನ ಆ ಮಗನು ಅಗ್ನಿಯ ತೇಜಸ್ಸಿನಲ್ಲಿ ಬೆಳಗುತ್ತಿದ್ದನು ಮತ್ತು ರೂಪ ಔದಾರ್ಯ ಗುಣಗಳಿಂದ ತುಂಬಿದ್ದನು.

01068003a ಜಾತಕರ್ಮಾದಿಸಂಸ್ಕಾರಂ ಕಣ್ವಃ ಪುಣ್ಯಕೃತಾಂ ವರಃ|

01068003c ತಸ್ಯಾಥ ಕಾರಯಾಮಾಸ ವರ್ಧಮಾನಸ್ಯ ಧೀಮತಃ||

ಪುಣ್ಯಕೃತರಲ್ಲಿ ಶ್ರೇಷ್ಠ ಕಣ್ವನು ಬೆಳೆಯುತ್ತಿರುವ ಆ ಧೀಮಂತನಿಗೆ ಜಾತಕರ್ಮ ಮೊದಲಾದ ಸಂಸ್ಕಾರಗಳನ್ನು ನಡೆಯಿಸಿದನು.

01068004a ದಂತೈಃ ಶುಕ್ಲೈಃ ಶಿಖರಿಭಿಃ ಸಿಂಹಸಂಹನನೋ ಯುವಾ|

01068004c ಚಕ್ರಾಂಕಿತಕರಃ ಶ್ರೀಮಾನ್ಮಹಾಮೂರ್ಧಾ ಮಹಾಬಲಃ|

01068004e ಕುಮಾರೋ ದೇವಗರ್ಭಾಭಃ ಸ ತತ್ರಾಶು ವ್ಯವರ್ಧತ||

ಅವನ ಹಲ್ಲುಗಳು ಬಿಳಿಯಾಗಿದ್ದವು, ಸಿಂಹವನ್ನೂ ಕೊಲ್ಲಬಲ್ಲ ಶಕ್ತಿಯನ್ನು ಹೊಂದಿದ್ದನು, ಚಕ್ರದ ಗುರುತನ್ನು ಹೊಂದಿದ್ದನು, ಶ್ರೀಮಾನ್ ಕುಮಾರನು ಅಗಲವಾದ ಹಣೆ, ಮಹಾಬಲಶಾಲಿ, ದೇವಗರ್ಭದಲ್ಲಿ ಜನಿಸಿದನೋ ಅನ್ನುವ ಹಾಗೆ ಕಾಂತಿಯಿಂದ ಅಲ್ಲಿ ಬೆಳೆದನು.

01068005a ಷಡ್ವರ್ಷ ಏವ ಬಾಲಃ ಸ ಕಣ್ವಾಶ್ರಮಪದಂ ಪ್ರತಿ|

01068005c ವ್ಯಾಘ್ರಾನ್ಸಿಂಹಾನ್ವರಾಹಾಂಶ್ಚ ಗಜಾಂಶ್ಚ ಮಹಿಷಾಂಸ್ತಥಾ||

01068006a ಬದ್ಧ್ವಾ ವೃಕ್ಷೇಷು ಬಲವಾನಾಶ್ರಮಸ್ಯ ಸಮಂತತಃ|

01068006c ಆರೋಹನ್ದಮಯಂಶ್ಚೈವ ಕ್ರೀಡಂಶ್ಚ ಪರಿಧಾವತಿ||

ಆರುವರ್ಷದವನಾಗ ಆ ಬಾಲಕನು ಕಣ್ವಾಶ್ರಮದ ಬಳಿಯಲ್ಲಿ ಹುಲಿ, ಸಿಂಹ, ವರಾಹ, ಆನೆ, ಮತ್ತು ಕಾಡೆಮ್ಮೆಗಳನ್ನು ಮರಗಳಿಗೆ ಕಟ್ಟಿ ಅವುಗಳ ಮೇಲೆ ಸವಾರಿ ಮಾಡುತ್ತಿದ್ದನು ಅಥವಾ ಹೊಡೆದು ಓಡಿಸಿ ಆಟವಾಡುತ್ತಿದ್ದನು.

01068007a ತತೋಽಸ್ಯ ನಾಮ ಚಕ್ರುಸ್ತೇ ಕಣ್ವಾಶ್ರಮನಿವಾಸಿನಃ|

01068007c ಅಸ್ತ್ವಯಂ ಸರ್ವದಮನಃ ಸರ್ವಂ ಹಿ ದಮಯತ್ಯಯಂ||

ಸರ್ವ ಪ್ರಾಣಿಗಳನ್ನೂ ಹತೋಟಿಯಲ್ಲಿಡುತ್ತಿದ್ದುದರಿಂದ “ಅವನು ಸರ್ವದಮನ” ಎಂದು ಕಣ್ವಾಶ್ರಮವಾಸಿಗಳು ಅವನಿಗೆ ಹೆಸರನ್ನಿತ್ತರು.

01068008a ಸ ಸರ್ವದಮನೋ ನಾಮ ಕುಮಾರಃ ಸಮಪದ್ಯತ|

01068008c ವಿಕ್ರಮೇಣೌಜಸಾ ಚೈವ ಬಲೇನ ಚ ಸಮನ್ವಿತಃ||

ಹೀಗೆ ವಿಕ್ರಮ, ತೇಜಸ್ಸು ಮತ್ತು ಬಲಗಳಿಂದೊಡಗೂಡಿದ ಆ ಕುಮಾರನು ‘ಸರ್ವದಮನ’ ಎಂಬ ಹೆಸರಿನಿಂದ ಕರೆಯಲ್ಪಟ್ಟನು.

01068009a ತಂ ಕುಮಾರಮೃಷಿರ್ದೃಷ್ಟ್ವಾ ಕರ್ಮ ಚಾಸ್ಯಾತಿಮಾನುಷಂ|

01068009c ಸಮಯೋ ಯೌವರಾಜ್ಯಾಯೇತ್ಯಬ್ರವೀಚ್ಚ ಶಕುಂತಲಾಂ||

ಅವನ ಅಮಾನುಷ ಕೃತ್ಯಗಳನ್ನು ನೋಡಿದ ಋಷಿಯು “ಇವನು ಯುವರಾಜನಾಗುವ ಸಮಯ ಬಂದಿದೆ” ಎಂದು ಶಕುಂತಲೆಗೆ ಹೇಳಿದನು.

01068010a ತಸ್ಯ ತದ್ಬಲಮಾಜ್ಞಾಯ ಕಣ್ವಃ ಶಿಷ್ಯಾನುವಾಚ ಹ|

01068010c ಶಕುಂತಲಾಮಿಮಾಂ ಶೀಘ್ರಂ ಸಹಪುತ್ರಾಮಿತೋಽಶ್ರಮಾತ್|

01068010e ಭರ್ತ್ರೇ ಪ್ರಾಪಯತಾದ್ಯೈವ ಸರ್ವಲಕ್ಷಣಪೂಜಿತಾಂ||

ತನ್ನ ಶಿಷ್ಯಬಲವನ್ನು ಕರೆದು ಕಣ್ವನು ಹೇಳಿದನು: “ಈ ಸರ್ವ ಲಕ್ಷಣ ಪೂಜಿತ ಶಕುಂತಲೆಯನ್ನು ಅವಳ ಪುತ್ರನೊಂದಿಗೆ ಶೀಘ್ರದಲ್ಲಿ ಆಶ್ರಮದಿಂದ ಅವಳ ಪತಿಯ ಮನೆಗೆ ಕರೆದೊಯ್ಯಿರಿ.

01068011a ನಾರೀಣಾಂ ಚಿರವಾಸೋ ಹಿ ಬಾಂಧವೇಷು ನ ರೋಚತೇ|

 01068011c ಕೀರ್ತಿಚಾರಿತ್ರಧರ್ಮಘ್ನಸ್ತಸ್ಮಾನ್ನಯತ ಮಾಚಿರಂ||

ತನ್ನ ಬಾಂಧವರಲ್ಲಿಯೇ ಸದಾ ವಾಸಿಸಿರುವುದು ನಾರಿಗೆ ಒಳ್ಳೆಯದಲ್ಲ. ಹೀಗೆ ಇರುವುದರಿಂದ ಅವಳ ಕೀರ್ತಿ, ಚಾರಿತ್ರ ಮತ್ತು ಧರ್ಮಕ್ಕೆ ಧಕ್ಕೆಯುಂಟಾಗುತ್ತದೆ. ಆದುದರಿಂದ ಅವಳನ್ನು ಶೀಘ್ರದಲ್ಲಿಯೇ ಕರೆದೊಯ್ಯಿರಿ.”

01068012a ತಥೇತ್ಯುಕ್ತ್ವಾ ತು ತೇ ಸರ್ವೇ ಪ್ರಾತಿಷ್ಠಂತಾಮಿತೌಜಸಃ|

01068012c ಶಕುಂತಲಾಂ ಪುರಸ್ಕೃತ್ಯ ಸಪುತ್ರಾಂ ಗಜಸಾಹ್ವಯಂ||

ಅವನು ಹೀಗೆ ಹೇಳಿದ ಬಳಿಕ ಸರ್ವ ಅಮಿತೌಜಸ ಶಿಷ್ಯರೂ ಶಕುಂತಲೆಯನ್ನು ಅವಳ ಪುತ್ರನ ಸಹಿತ ಕರೆದುಕೊಂಡು ಗಜಸಾಹ್ವಯಕ್ಕೆ ಹೊರಟರು.

01068013a ಗೃಹೀತ್ವಾಮರಗರ್ಭಾಭಂ ಪುತ್ರಂ ಕಮಲಲೋಚನಂ|

01068013c ಆಜಗಾಮ ತತಃ ಶುಭ್ರಾ ದುಃಷಂತವಿದಿತಾದ್ವನಾತ್||

ಕಮಲಲೋಚನೆ ಶುಭ್ರೆಯು ಅಮರಗರ್ಭದ ಕಾಂತಿಯುಳ್ಳ ತನ್ನ ಪುತ್ರನನ್ನು ಕರೆದುಕೊಂಡು ದುಃಷಂತನನ್ನು ಮೊದಲಬಾರಿ ಭೆಟ್ಟಿಯಾದ ಆ ವನವನ್ನು ಬಿಟ್ಟು ಹೊರಟಳು.

01068014a ಅಭಿಸೃತ್ಯ ಚ ರಾಜಾನಂ ವಿದಿತಾ ಸಾ ಪ್ರವೇಶಿತಾ|

01068014c ಸಹ ತೇನೈವ ಪುತ್ರೇಣ ತರುಣಾದಿತ್ಯವರ್ಚಸಾ||

ರಾಜನಿಗೆ ವಾರ್ತೆಯನ್ನು ಕಳುಹಿಸಿ ಅವಳು ತನ್ನ ಆದಿತ್ಯವರ್ಚಸ ಪುತ್ರನೊಂದಿಗೆ ಪ್ರವೇಶಿಸಿದಳು.

01068015a ಪೂಜಯಿತ್ವಾ ಯಥಾನ್ಯಾಯಮಬ್ರವೀತ್ತಂ ಶಕುಂತಲಾ|

01068015c ಅಯಂ ಪುತ್ರಸ್ತ್ವಯಾ ರಾಜನ್ಯೌವರಾಜ್ಯೇಽಭಿಷಿಚ್ಯತಾಂ||

ಯಥಾವತ್ತಾಗಿ ಅವನನ್ನು ಪೂಜಿಸಿ ಶಕುಂತಲೆಯು “ರಾಜನ್! ಇವನು ನಿನ್ನ ಪುತ್ರ. ಇವನಿಗೆ ಯುವರಾಜ್ಯಾಭಿಷೇಕವನ್ನು ಮಾಡು” ಎಂದಳು.

01068016a ತ್ವಯಾ ಹ್ಯಯಂ ಸುತೋ ರಾಜನ್ಮಯ್ಯುತ್ಪನ್ನಃ ಸುರೋಪಮಃ|

01068016c ಯಥಾಸಮಯಮೇತಸ್ಮಿನ್ವರ್ತಸ್ವ ಪುರುಷೋತ್ತಮ||

“ರಾಜನ್! ಈ ಸುರೋಪಮನು ನನ್ನಲ್ಲಿ ಹುಟ್ಟಿದ ನಿನ್ನ ಸುತ. ಪುರುಷೋತ್ತಮ! ನೀನು ವಚನವಿತ್ತಿದ್ದಹಾಗೆ ನಡೆದುಕೋ.

01068017a ಯಥಾ ಸಮಾಗಮೇ ಪೂರ್ವಂ ಕೃತಃ ಸ ಸಮಯಸ್ತ್ವಯಾ|

01068017c ತಂ ಸ್ಮರಸ್ವ ಮಹಾಭಾಗ ಕಣ್ವಾಶ್ರಮಪದಂ ಪ್ರತಿ||

ಮಹಾಭಾಗ! ಹಿಂದೆ ಕಣ್ವಾಶ್ರಮದಲ್ಲಿ ನಮ್ಮ ಸಮಾಗಮದ ಸಮಯದಲ್ಲಿ ನೀನು ಕೊಟ್ಟಿದ್ದ ವಚನವನ್ನು ನೆನಪಿಸಿಕೋ.”

01068018a ಸೋಽಥ ಶ್ರುತ್ವೈವ ತದ್ವಾಕ್ಯಂ ತಸ್ಯಾ ರಾಜಾ ಸ್ಮರನ್ನಪಿ|

01068018c ಅಬ್ರವೀನ್ನ ಸ್ಮರಾಮೀತಿ ಕಸ್ಯ ತ್ವಂ ದುಷ್ಟತಾಪಸಿ||

ಅವಳ ಈ ಮಾತುಗಳನ್ನು ಕೇಳಿದ ರಾಜನು ಎಲ್ಲ ನೆನಪಿಸಿಕೊಂಡರೂ ಮರೆತುಹೋದವನ ಹಾಗೆ ಹೇಳಿದನು: “ದುಷ್ಟ ತಾಪಸಿ! ನೀನು ಯಾರವಳು?

01068019a ಧರ್ಮಕಾಮಾರ್ಥಸಂಬಂಧಂ ನ ಸ್ಮರಾಮಿ ತ್ವಯಾ ಸಹ|

01068019c ಗಚ್ಛ ವಾ ತಿಷ್ಠ ವಾ ಕಾಮಂ ಯದ್ವಾಪೀಚ್ಛಸಿ ತತ್ಕುರು||

ನಿನ್ನೊಂದಿಗೆ ಧರ್ಮ, ಅರ್ಥ ಅಥವಾ ಕಾಮದಲ್ಲಿ ಯಾವುದೇ ರೀತಿಯ ಸಂಬಂಧವನ್ನಿಟ್ಟಿದ್ದುದೂ ನನಗೆ ನೆನಪಿಲ್ಲ. ಹೊರಟು ಹೋಗು ಅಥವಾ ಇಲ್ಲಿಯೇ ಇರು ಅಥವಾ ನಿನಗಿಷ್ಟವಾದ ಹಾಗೆ ಮಾಡು.”

01068020a ಸೈವಮುಕ್ತಾ ವರಾರೋಹಾ ವ್ರೀಡಿತೇವ ಮನಸ್ವಿನೀ|

01068020c ವಿಸಂಜ್ಞೇವ ಚ ದುಃಖೇನ ತಸ್ಥೌ ಸ್ಥಾಣುರಿವಾಚಲಾ||

ಇದನ್ನು ಕೇಳಿದ ಆ ವರಾರೋಹೆ ಮನಸ್ವಿನಿಯು ನಾಚಿಕೆ-ದುಃಖಗಳಿಂದ ಮೂರ್ಛೆಗೊಂಡವಳ ಹಾಗೆ ಮರದ ಕಂಭದಂತೆ ಅಚಲಳಾಗಿ ಅಲ್ಲಿಯೇ ನಿಂತಳು.

01068021a ಸಂರಂಭಾಮರ್ಷತಾಮ್ರಾಕ್ಷೀ ಸ್ಫುರಮಾಣೋಷ್ಠಸಂಪುಟಾ|

01068021c ಕಟಾಕ್ಷೈರ್ನಿರ್ದಹಂತೀವ ತಿರ್ಯಗ್ರಾಜಾನಮೈಕ್ಷತ||

ತಕ್ಷಣವೇ ಆ ಸುಂದರಿಯ ಕಣ್ಣುಗಳು ಕೆಂಪಾದವು, ತುಟಿಗಳು ಕಂಪಿಸತೊಡಗಿದವು, ಮತ್ತು ರಾಜನನ್ನು ಸುಟ್ಟುಬಿಡುತ್ತಾಳೋ ಎನ್ನುವಂತೆ ಅವನ ಕಡೆ ನೋಡಿದಳು.

01068022a ಆಕಾರಂ ಗೂಹಮಾನಾ ಚ ಮನ್ಯುನಾಭಿಸಮೀರಿತಾ|

01068022c ತಪಸಾ ಸಂಭೃತಂ ತೇಜೋ ಧಾರಯಾಮಾಸ ವೈ ತದಾ||

ಅವಳು ತನ್ನ ತಪೋ ಬಲದಿಂದ ಏರುತ್ತಿರುವ ಸಿಟ್ಟಿನ ತೇಜಸ್ಸನ್ನು ತಡೆಹಿಡಿಯಲು ಪ್ರಯತ್ನಿಸಿದಳು.

01068023a ಸಾ ಮುಹೂರ್ತಮಿವ ಧ್ಯಾತ್ವಾ ದುಃಖಾಮರ್ಷಸಮನ್ವಿತಾ|

01068023c ಭರ್ತಾರಮಭಿಸಂಪ್ರೇಕ್ಷ್ಯ ಕ್ರುದ್ಧಾ ವಚನಮಬ್ರವೀತ್||

ಸ್ವಲ್ಪ ಹೊತ್ತು ಯೋಚಿಸಿ ದುಃಖ ಮತ್ತು ಕೋಪಸಮನ್ವಿತಳಾಗಿ ಸಿಟ್ಟಿನಿಂದ ತನ್ನ ಪತಿಯನ್ನು ನೇರವಾಗಿ ನೋಡುತ್ತಾ ಹೇಳಿದಳು:

01068024a ಜಾನನ್ನಪಿ ಮಹಾರಾಜ ಕಸ್ಮಾದೇವಂ ಪ್ರಭಾಷಸೇ|

01068024c ನ ಜಾನಾಮೀತಿ ನಿಃಸಂಗಂ ಯಥಾನ್ಯಃ ಪ್ರಾಕೃತಸ್ತಥಾ||

“ಮಹಾರಾಜ! ಎಲ್ಲವನ್ನು ತಿಳಿದಿದ್ದರೂ ಏನೂ ತಿಳಿಯದಿರುವನ ಹಾಗೆ ಒಬ್ಬ ಕೀಳು ಮನುಷ್ಯನಂತೆ ಹೇಗೆ ಈ ರೀತಿ ಮಾತನಾಡುತ್ತಿರುವೆ?

01068025a ಅತ್ರ ತೇ ಹೃದಯಂ ವೇದ ಸತ್ಯಸ್ಯೈವಾನೃತಸ್ಯ ಚ|

01068025c ಕಲ್ಯಾಣ ಬತ ಸಾಕ್ಷೀ ತ್ವಂ ಮಾತ್ಮಾನಮವಮನ್ಯಥಾಃ||

ನನ್ನ ಈ ಮಾತುಗಳ ಸತ್ಯ-ಅಸತ್ಯತೆಯ ಕುರಿತು ನಿನ್ನ ಹೃದಯವೇ ತಿಳಿದಿದೆ. ಆದುದರಿಂದ ಸತ್ಯವನ್ನು ಹೇಳು. ನಿನ್ನನ್ನು ನೀನೇ ಅಪಮಾನಿಸಬೇಡ.

01068026a ಯೋಽನ್ಯಥಾ ಸಂತಮಾತ್ಮಾನಮನ್ಯಥಾ ಪ್ರತಿಪದ್ಯತೇ|

01068026c ಕಿಂ ತೇನ ನ ಕೃತಂ ಪಾಪಂ ಚೋರೇಣಾತ್ಮಾಪಹಾರಿಣಾ||

ಮನಸ್ಸಿನಲ್ಲಿ ಒಂದನ್ನು ಯೋಚಿಸಿ ಇತರರಿಗೆ ಬೇರೆಯದನ್ನೇ ತೋರಿಸುವವನು ತನ್ನ ಆತ್ಮವನ್ನೇ ಅಪಹರಿಸುವ ಕಳ್ಳನಲ್ಲವೇ? ಅವನು ಪಾಪ ಮಾಡಿದ ಹಾಗಲ್ಲವೇ?

01068027a ಏಕೋಽಹಮಸ್ಮೀತಿ ಚ ಮನ್ಯಸೇ ತ್ವಂ|

                        ನ ಹೃಚ್ಛಯಂ ವೇತ್ಸಿ ಮುನಿಂ ಪುರಾಣಂ||

01068027c ಯೋ ವೇದಿತಾ ಕರ್ಮಣಃ ಪಾಪಕಸ್ಯ|

                        ತಸ್ಯಾಂತಿಕೇ ತ್ವಂ ವೃಜಿನಂ ಕರೋಷಿ||

ನೀನೊಬ್ಬನೇ ಮಾಡಿದ್ದುದು ನಿನಗೊಬ್ಬನಿಗೇ ಗೊತ್ತು ಎಂದು ತಿಳಿಯಬೇಡ. ನಿನ್ನ ಹೃದಯದಲ್ಲಿ ವಾಸಿಸುವ ಅವನಿಗೆ ಎಲ್ಲವೂ ತಿಳಿದಿದೆ. ಎಲ್ಲ ಪಾಪಗಳನ್ನೂ ನೋಡುವ ಅವನ ಎದುರಿನಲ್ಲಿಯೇ ನೀನು ಹೇಗೆ ಪಾಪವನ್ನೆಸಗುತ್ತಿರುವೆ?

01068028a ಮನ್ಯತೇ ಪಾಪಕಂ ಕೃತ್ವಾ ನ ಕಶ್ಚಿದ್ವೇತ್ತಿ ಮಾಮಿತಿ|

01068028c ವಿದಂತಿ ಚೈನಂ ದೇವಾಶ್ಚ ಸ್ವಶ್ಚೈವಾಂತರಪೂರುಷಃ||

ಪಾಪಿಯು ಪಾಪವನ್ನೆಸಗಿ ಇದು ಬೇರೆ ಯಾರಿಗೂ ತಿಳಿಯುವುದಿಲ್ಲ ಎಂದು ಭಾವಿಸುತ್ತಾನೆ. ಆದರೆ ದೇವತೆಗಳು ಮತ್ತು ತನ್ನಲ್ಲಿಯೇ ಇರುವ ಪುರುಷನು ನೋಡುತ್ತಿದ್ದಾನೆ ಎಂದು ತಿಳಿಯುವುದಿಲ್ಲ.

01068029a ಆದಿತ್ಯಚಂದ್ರಾವನಿಲಾನಲೌ ಚ|

         ದ್ಯೌರ್ಭೂಮಿರಾಪೋ ಹೃದಯಂ ಯಮಶ್ಚ||

01068029c ಅಹಶ್ಚ ರಾತ್ರಿಶ್ಚ ಉಭೇ ಚ ಸಂಧ್ಯೇ|

         ಧರ್ಮಶ್ಚ ಜಾನಾತಿ ನರಸ್ಯ ವೃತ್ತಂ||

ಆದಿತ್ಯ, ಚಂದ್ರ, ಅನಿಲ, ಅನಲ, ಆಕಾಶ, ಭೂಮಿ, ಆಪ, ಹೃದಯ, ಯಮ, ಹಗಲು, ರಾತ್ರಿ, ಸಂಧ್ಯಾ, ಧರ್ಮ ಇವೆಲ್ಲವೂ ನರನ ಪ್ರತಿಯೊಂದು ಕಾರ್ಯವನ್ನೂ ತಿಳಿದಿರುತ್ತವೆ.

01068030a ಯಮೋ ವೈವಸ್ವತಸ್ತಸ್ಯ ನಿರ್ಯಾತಯತಿ ದುಷ್ಕೃತಂ|

01068030c ಹೃದಿ ಸ್ಥಿತಃ ಕರ್ಮಸಾಕ್ಷೀ ಕ್ಷೇತ್ರಜ್ಞೋ ಯಸ್ಯ ತುಷ್ಯತಿ||

ಹೃದಯಸ್ಥಿತ ಕರ್ಮಸಾಕ್ಷೀ ಕೇತ್ರಜ್ಞನನ್ನು ಸಂತುಷ್ಟಗೊಳಿಸುವವನ ದುಷ್ಕೃತವನ್ನು ವೈವಸ್ವತ ಯಮನೂ ಸಹ ಗಣನೆಗೆ ತೆಗೆದುಕೊಳ್ಳುವುದಿಲ್ಲ.

01068031a ನ ತು ತುಷ್ಯತಿ ಯಸ್ಯೈಷ ಪುರುಷಸ್ಯ ದುರಾತ್ಮನಃ|

01068031c ತಂ ಯಮಃ ಪಾಪಕರ್ಮಾಣಂ ನಿರ್ಯಾತಯತಿ ದುಷ್ಕೃತಂ||

ಆದರೆ ಆ ಪುರುಷನನ್ನು ತೃಪ್ತಿಗೊಳಿಸದ ದುರಾತ್ಮನ ಪಾಪ ಕರ್ಮಗಳನ್ನು ಯಮನು ದುಷ್ಕೃತವೆಂದು ಪರಿಗಣಿಸುತ್ತಾನೆ.

01068032a ಅವಮನ್ಯಾತ್ಮನಾತ್ಮಾನಮನ್ಯಥಾ ಪ್ರತಿಪದ್ಯತೇ|

01068032c ದೇವಾ ನ ತಸ್ಯ ಶ್ರೇಯಾಂಸೋ ಯಸ್ಯಾತ್ಮಾಪಿ ನ ಕಾರಣಂ||

ತನ್ನ ಆತ್ಮವನ್ನು ಅನಾದರಣಿಸಿ, ತನ್ನನ್ನು ಅನ್ಯಥಾ ಪ್ರತಿಪಾದಿಸುವವನಿಗೆ ದೇವತೆಗಳು ಶ್ರೇಯಸ್ಸನ್ನು ನೀಡುವುದಿಲ್ಲ. ಅವನ ಸ್ವಂತ ಆತ್ಮವೂ ಕೂಡ ಅವನಿಗೆ ಶ್ರೇಯಸ್ಸನ್ನು ನೀಡುವುದಿಲ್ಲ.

01068033a ಸ್ವಯಂ ಪ್ರಾಪ್ತೇತಿ ಮಾಮೇವಂ ಮಾವಮಂಸ್ಥಾಃ ಪತಿವ್ರತಾಂ|

01068033c ಅರ್ಘ್ಯಾರ್ಹಾಂ ನಾರ್ಚಯಸಿ ಮಾಂ ಸ್ವಯಂ ಭಾರ್ಯಾಮುಪಸ್ಥಿತಾಂ||

ಸ್ವಯಂ ತಾನಾಗಿಯೇ ಇಲ್ಲಿಗೆ ಬಂದಿರುವ ಪತಿವ್ರತೆಯನ್ನು ಅಪಮಾನಿಸಬೇಡ. ಅರ್ಘ್ಯಾರ್ಹ ನನ್ನನ್ನು ನಿನ್ನ ಭಾರ್ಯೆಯನ್ನು ಸತ್ಕರಿಸದೇ ಅವಹೇಳನಮಾಡಬೇಡ.

01068034a ಕಿಮರ್ಥಂ ಮಾಂ ಪ್ರಾಕೃತವದುಪಪ್ರೇಕ್ಷಸಿ ಸಂಸದಿ|

01068034c ನ ಖಲ್ವಹಮಿದಂ ಶೂನ್ಯೇ ರೌಮಿ ಕಿಂ ನ ಶೃಣೋಷಿ ಮೇ||

ಈ ಸಂಸತ್ತಿನಲ್ಲಿ ನನ್ನನ್ನು ಏಕೆ ಓರ್ವ ಸಾಮಾನ್ಯ ಸ್ತ್ರೀಯಂತೆ ಕಾಣುತ್ತಿರುವೆ? ನಾನು ಸುಮ್ಮನೇ ಇಲ್ಲಿ ರೋದಿಸುತ್ತಿಲ್ಲವಲ್ಲ! ನನ್ನ ಮಾತುಗಳನ್ನು ನೀನು ಏಕೆ ಕೇಳುತ್ತಿಲ್ಲ?

01068035a ಯದಿ ಮೇ ಯಾಚಮಾನಾಯಾ ವಚನಂ ನ ಕರಿಷ್ಯಸಿ|

01068035c ದುಃಷಂತ ಶತಧಾ ಮೂರ್ಧಾ ತತಸ್ತೇಽದ್ಯ ಫಲಿಷ್ಯತಿ||

ದುಃಷಂತ! ಯಾಚಿಸುತ್ತಿರುವ ನನ್ನ ಮಾತಿನಂತೆ ನಡೆದುಕೊಳ್ಳದಿದ್ದರೆ ನಿನ್ನ ತಲೆಯು ನೂರಾರು ಚೂರುಗಳಾಗಿ ಒಡೆದುಹೋಗುತ್ತದೆ. 

01068036a ಭಾರ್ಯಾಂ ಪತಿಃ ಸಂಪ್ರವಿಶ್ಯ ಸ ಯಸ್ಮಾಜ್ಜಾಯತೇ ಪುನಃ|

01068036c ಜಾಯಾಯಾ ಇತಿ ಜಾಯಾತ್ವಂ ಪುರಾಣಾಃ ಕವಯೋ ವಿದುಃ||

ಪತಿಯು ತನ್ನ ಭಾರ್ಯೆಯನ್ನು ಪ್ರವೇಶಿಸಿ ಪುನಃ ಹುಟ್ಟಿಬರುವುದರಿಂದ ಭಾರ್ಯೆಯನ್ನು ಜಾಯಾ ಎಂದು ಪುರಾಣಗಳು, ಕವಿಗಳು ಮತ್ತು ವಿದ್ವಾಂಸರು ಕರೆಯುತ್ತಾರೆ.

01068037a ಯದಾಗಮವತಃ ಪುಂಸಸ್ತದಪತ್ಯಂ ಪ್ರಜಾಯತೇ|

01068037c ತತ್ತಾರಯತಿ ಸಂತತ್ಯಾ ಪೂರ್ವಪ್ರೇತಾನ್ಪಿತಾಮಹಾನ್||

ಒಳ್ಳೆಯವನು ತನ್ನ ಪತ್ನಿಯಲ್ಲಿ ಮಗನನ್ನು ಪಡೆಯುತ್ತಾನೆ ಮತ್ತು ಆ ಸಂತತಿಯಿಂದ ತನ್ನ ಪೂರ್ವ ಪಿತಾಮಹರ ಪ್ರೇತಾತ್ಮಗಳನ್ನು ಕಾಪಾಡುತ್ತಾನೆ.

01068038a ಪುನ್ನಾಮ್ನೋ ನರಕಾದ್ಯಸ್ಮಾತ್ಪಿತರಂ ತ್ರಾಯತೇ ಸುತಃ|

01068038c ತಸ್ಮಾತ್ಪುತ್ರ ಇತಿ ಪ್ರೋಕ್ತಃ ಸ್ವಯಮೇವ ಸ್ವಯಂಭುವಾ||

ಸುತನು ಪು ಎಂಬ ಹೆಸರಿನ ನರಕದಿಂದ ತನ್ನ ಪಿತೃಗಳನ್ನು ದಾಟಿಸುವುದರಿಂದ ಸ್ವಯಂ ಸ್ವಯಂಭುವೇ ಅವನನ್ನು ಪುತ್ರ ಎಂದು ಕರೆದಿದ್ದಾನೆ.

01068039a ಸಾ ಭಾರ್ಯಾ ಯಾ ಗೃಹೇ ದಕ್ಷಾ ಸಾ ಭಾರ್ಯಾ ಯಾ ಪ್ರಜಾವತೀ|

01068039c ಸಾ ಭಾರ್ಯಾ ಯಾ ಪತಿಪ್ರಾಣಾ ಸಾ ಭಾರ್ಯಾ ಯಾ ಪತಿವ್ರತಾ||

ಗೃಹವನ್ನು ದಕ್ಷತೆಯಿಂದ ನಡೆಸಿಕೊಂಡು ಹೋಗುವವಳೇ ಭಾರ್ಯೆ. ಮಕ್ಕಳಿಗೆ ತಾಯಿಯಾಗುವವಳೇ ಭಾರ್ಯೆ. ಪತಿಯಲ್ಲಿಯೇ ಪ್ರಾಣವನ್ನಿಟ್ಟವಳು ಭಾರ್ಯೆ. ಮತ್ತು ಪತಿವ್ರತೆಯಾದವಳೇ ಭಾರ್ಯೆ.

01068040a ಅರ್ಧಂ ಭಾರ್ಯಾ ಮನುಷ್ಯಸ್ಯ ಭಾರ್ಯಾ ಶ್ರೇಷ್ಠತಮಃ ಸಖಾ|

01068040c ಭಾರ್ಯಾ ಮೂಲಂ ತ್ರಿವರ್ಗಸ್ಯ ಭಾರ್ಯಾ ಮಿತ್ರಂ ಮರಿಷ್ಯತಃ||

ಮನುಷ್ಯನ ಅರ್ಧವೇ ಭಾರ್ಯೆ. ಭಾರ್ಯೆಯೇ ಅವನ ಶ್ರೇಷ್ಠತಮ ಸಖಿ. ಭಾರ್ಯೆಯು ತ್ರಿವರ್ಗಗಳ (ಧರ್ಮ, ಅರ್ಥ ಮತ್ತು ಕಾಮ) ಮೂಲ. ಮತ್ತು ಭಾರ್ಯೆಯೇ ಮನುಷ್ಯನ ಮಿತ್ರೆ.

01068041a ಭಾರ್ಯಾವಂತಃ ಕ್ರಿಯಾವಂತಃ ಸಭಾರ್ಯಾ ಗೃಹಮೇಧಿನಃ|

01068041c ಭಾರ್ಯಾವಂತಃ ಪ್ರಮೋದಂತೇ ಭಾರ್ಯಾವಂತಃ ಶ್ರಿಯಾನ್ವಿತಾಃ||

ಭಾರ್ಯೆಯನ್ನು ಪಡೆದವನು ಕ್ರಿಯೆಗಳನ್ನು ಮಾಡಬಹುದು. ಭಾರ್ಯೆಯನ್ನು ಹೊಂದಿದವನು ಗೃಹಸ್ಥಾಶ್ರಮವನ್ನು ನಡೆಸಬಹುದು. ಭಾರ್ಯೆಯನ್ನು  ಹೊಂದಿದವರು ಸಂತೋಷದಿಂದಿರುವರು. ಮತ್ತು ಭಾರ್ಯೆಯನ್ನು ಹೊಂದಿದವರು ಧನವನ್ನೂ ಹೊಂದುವರು.

01068042a ಸಖಾಯಃ ಪ್ರವಿವಿಕ್ತೇಷು ಭವಂತ್ಯೇತಾಃ ಪ್ರಿಯಂವದಾಃ|

01068042c ಪಿತರೋ ಧರ್ಮಕಾರ್ಯೇಷು ಭವಂತ್ಯಾರ್ತಸ್ಯ ಮಾತರಃ||

ಅವಳು ಎಕಾಂತದಲ್ಲಿ ಸಖನಂತೆ ಪ್ರೀತಿಯ ಮಾತುಗಳನ್ನಾಡುತ್ತಾಳೆ, ಧರ್ಮಕಾರ್ಯಗಳಲ್ಲಿ ತಂದೆಯಂತಿರುತ್ತಾಳೆ ಮತ್ತು ಆರ್ತ ಸಮಯದಲ್ಲಿ ತಾಯಿಯಂತಿರುತ್ತಾಳೆ.

01068043a ಕಾಂತಾರೇಷ್ವಪಿ ವಿಶ್ರಾಮೋ ನರಸ್ಯಾಧ್ವನಿಕಸ್ಯ ವೈ|

01068043c ಯಃ ಸದಾರಃ ಸ ವಿಶ್ವಾಸ್ಯಸ್ತಸ್ಮಾದ್ದಾರಾಃ ಪರಾ ಗತಿಃ||

ಕಾನನದಲ್ಲಿ ಅಲೆಯುತ್ತಿರುವವನಿಗೆ ಕೂಡ ಅವಳು ವಿಶ್ರಾಮವಿದ್ದಂತೆ. ಪತ್ನಿಸಹಿತನಾದವನನ್ನು ಎಲ್ಲರೂ ವಿಶ್ವಾಸದಿಂದ ಕಾಣುತ್ತಾರೆ. ಆದುದರಿಂದ ಪತ್ನಿಯು ಪರಮ ಗತಿಯನ್ನು ನೀಡುತ್ತಾಳೆ.

01068044a ಸಂಸರಂತಮಪಿ ಪ್ರೇತಂ ವಿಷಮೇಷ್ವೇಕಪಾತಿನಂ|

01068044c ಭಾರ್ಯೈವಾನ್ವೇತಿ ಭರ್ತಾರಂ ಸತತಂ ಯಾ ಪತಿವ್ರತಾ||

ಪತಿಯು ಯಮಲೋಕಕ್ಕೆ ಹೋದಾಗ ಅವನನ್ನು ಹಿಂಬಾಲಿಸುವವಳು ಅವನ ಪತಿವ್ರತೆ ಪತ್ನಿಯೇ!

01068045a ಪ್ರಥಮಂ ಸಂಸ್ಥಿತಾ ಭಾರ್ಯಾ ಪತಿಂ ಪ್ರೇತ್ಯ ಪ್ರತೀಕ್ಷತೇ|

01068045c ಪೂರ್ವಂ ಮೃತಂ ಚ ಭರ್ತಾರಂ ಪಶ್ಚಾತ್ಸಾಧ್ವ್ಯನುಗಚ್ಛತಿ||

ಒಂದುವೇಳೆ ಭಾರ್ಯೆಯೇ ಮೊದಲು ತೀರಿಕೊಂಡರೆ ಅವಳು ತನ್ನ ಪತಿಗಾಗಿ ಅಲ್ಲಿ ಕಾಯುತ್ತಾಳೆ. ಗಂಡನೇ ಮೊದಲು ತೀರಿಕೊಂಡರೆ, ಆ ಸಾಧ್ವಿಯು ಅವನನ್ನು ಅನುಸರಿಸುತ್ತಾಳೆ.

01068046a ಏತಸ್ಮಾತ್ಕಾರಣಾದ್ರಾಜನ್ಪಾಣಿಗ್ರಹಣಮಿಷ್ಯತೇ|

01068046c ಯದಾಪ್ನೋತಿ ಪತಿರ್ಭಾರ್ಯಾಮಿಹ ಲೋಕೇ ಪರತ್ರ ಚ||

ರಾಜನ್! ಈ ಎಲ್ಲ ಕಾರಣಗಳಿಂದ ಪಾಣಿಗ್ರಹಣವಿದೆ. ಪತಿಯು ತನ್ನ ಭಾರ್ಯೆಯನ್ನು ಈ ಲೋಕದಲ್ಲಿಯೂ ಪರಲೋಕದಲ್ಲಿಯೂ ಅನುಭವಿಸುತ್ತಾನೆ.

01068047a ಆತ್ಮಾತ್ಮನೈವ ಜನಿತಃ ಪುತ್ರ ಇತ್ಯುಚ್ಯತೇ ಬುಧೈಃ|

01068047c ತಸ್ಮಾದ್ಭಾರ್ಯಾಂ ನರಃ ಪಶ್ಯೇನ್ಮಾತೃವತ್ಪುತ್ರಮಾತರಂ||

ತಾನೇ ತನ್ನ ಪುತ್ರನಾಗಿ ಜನಿಸುತ್ತಾನೆ ಎಂದು ತಿಳಿದವರು ಹೇಳುತ್ತಾರೆ. ಆದ್ದರಿಂದ ಮನುಷ್ಯನು ತನ್ನ ಮಗನ ತಾಯಿಯನ್ನು ತನ್ನ ತಾಯಿಯ ಹಾಗೆಯೇ ಕಾಣಬೇಕು.

01068048a ಭಾರ್ಯಾಯಾಂ ಜನಿತಂ ಪುತ್ರಮಾದರ್ಶೇ ಸ್ವಮಿವಾನನಂ|

01068048c ಹ್ಲಾದತೇ ಜನಿತಾ ಪ್ರೇಷ್ಕ್ಯ ಸ್ವರ್ಗಂ ಪ್ರಾಪ್ಯೇವ ಪುಣ್ಯಕೃತ್||

ಕನ್ನಡಿಯಲ್ಲಿ ಕಂಡಂತೆ ಭಾರ್ಯೆಯಿಂದ ಜನಿಸಿದ ಪುತ್ರನ ಮುಖದಲ್ಲಿ ತನ್ನನ್ನು ತಾನೇ ಕಾಣುತ್ತಾನೆ ಮತ್ತು ಪುಣ್ಯಕರ್ಮಗಳಿಂದ ಸ್ವರ್ಗವನ್ನು ಸೇರಿದ ಸಂತೋಷವನ್ನು ಪಡೆಯುತ್ತಾನೆ.

01068049a ದಹ್ಯಮಾನಾ ಮನೋಧುಃಖೈರ್ವ್ಯಾಧಿಭಿಶ್ಚಾತುರಾ ನರಾಃ|

01068049c ಹ್ಲಾದಂತೇ ಸ್ವೇಷು ದಾರೇಷು ಘರ್ಮಾರ್ತಾಃ ಸಲಿಲೇಷ್ವಿವ||

ಮನೋದುಃಖ, ವ್ಯಾಧಿ ಮತ್ತು ಆತುರತೆಯಿಂದ ಸುಡುತ್ತಿದ್ದ ನರನಿಗೆ ತನ್ನ ಹೆಂಡತಿಯನ್ನು ನೋಡಿದರೆ ಬೇಸಿಗೆಯ ಬಿಸಿಲಿನಿಂದ ಬಳಲಿತ್ತಿರುವವನಿಗೆ ತಣ್ಣೀರಿನ ಸ್ನಾನಮಾಡಿದಷ್ಟು ಸಂತೋಷವಾಗುತ್ತದೆ.

01068050a ಸುಸಂರಬ್ಧೋಽಪಿ ರಾಮಾಣಾಂ ನ ಬ್ರೂಯಾದಪ್ರಿಯಂ ಬುಧಃ|

01068050c ರತಿಂ ಪ್ರೀತಿಂ ಚ ಧರ್ಮಂ ಚ ತಾಸ್ವಾಯತ್ತಮವೇಕ್ಷ್ಯ ಚ||

ತಿಳಿದವನು ಕೋಪದಲ್ಲಿಯೂ ತನ್ನ ಪತ್ನಿಗೆ ಇಷ್ಟವಾಗಿಲ್ಲದುದನ್ನು ಮಾಡಬಾರದು; ಯಾಕೆಂದರೆ, ಸಂತೋಷ, ಪ್ರೀತಿ, ಧರ್ಮ ಮತ್ತು ಎಲ್ಲವೂ ಪತ್ನಿಯನ್ನು ಅವಲಂಬಿಸಿರುತ್ತದೆ.

01068051a ಆತ್ಮನೋ ಜನ್ಮನಃ ಕ್ಷೇತ್ರಂ ಪುಣ್ಯಂ ರಾಮಾಃ ಸನಾತನಂ|

01068051c ಋಷೀಣಾಮಪಿ ಕಾ ಶಕ್ತಿಃ ಸ್ರಷ್ಟುಂ ರಾಮಾಮೃತೇ ಪ್ರಜಾಃ||

ತನ್ನನ್ನು ತಾನೇ ಹುಟ್ಟಿಸಿಕೊಳ್ಳುವ ಸನಾತನ ಪುಣ್ಯ ಕ್ಷೇತ್ರ ಹೆಣ್ಣು. ಋಷಿಗಳಿಗೂ ಕೂಡ ಹೆಣ್ಣಿಲ್ಲದೇ ಸಂತತಿಯನ್ನು ಹುಟ್ಟಿಸಲು ಶಕ್ತಿಯೆಲ್ಲಿದೆ?

01068052a ಪರಿಪತ್ಯ ಯದಾ ಸೂನುರ್ಧರಣೀರೇಣುಗುಂಠಿತಃ|

01068052c ಪಿತುರಾಶ್ಲಿಷ್ಯತೇಽಂಗಾನಿ ಕಿಮಿವಾಸ್ತ್ಯಧಿಕಂ ತತಃ||

ಧೂಳು ಕೊಳಕುಗಳಿಂದ ತುಂಬಿದ್ದರೂ ತನ್ನ ಮಗನು ಓಡಿ ಬಂದು ಬಿಗಿದಪ್ಪಿದಾಗ ಆಗುವ ಸಂತೋಷಕ್ಕಿಂತಲೂ ಹೆಚ್ಚಿನ ಸಂತೋಷ ಇನ್ನು ಯಾವುದಿದೆ?

01068053a ಸ ತ್ವಂ ಸ್ವಯಮನುಪ್ರಾಪ್ತಂ ಸಾಭಿಲಾಷಮಿಮಂ ಸುತಂ|

01068053c ಪ್ರೇಕ್ಷಮಾಣಂ ಚ ಕಾಕ್ಷೇಣ ಕಿಮರ್ಥಮವಮನ್ಯಸೇ||

ತಾನಾಗಿಯೇ ಬಂದಿರುವ, ನಿನ್ನನ್ನು ಅಭಿಲಾಷೆಯ ದೃಷ್ಠಿಯಿಂದ ನೋಡುತ್ತಿರುವ ಈ ನಿನ್ನ ಮಗನನ್ನು ನೀನು ಏಕೆ ತಿರಸ್ಕಾರ ದೃಷ್ಠಿಯಿಂದ ನೋಡುತ್ತಿರುವೆ?

01068054a ಅಂಡಾನಿ ಬಿಭ್ರತಿ ಸ್ವಾನಿ ನ ಭಿಂದಂತಿ ಪಿಪೀಲಿಕಾಃ|

01068054c ನ ಭರೇಥಾಃ ಕಥಂ ನು ತ್ವಂ ಧರ್ಮಜ್ಞಃ ಸನ್ಸ್ವಮಾತ್ಮಜಂ||

ಇರುವೆಗಳೂ ಕೂಡ ತಮ್ಮ ಮೊಟ್ಟೆಗಳನ್ನು ಒಡೆಯದ ಹಾಗೆ ರಕ್ಷಿಸುತ್ತವೆ. ಧರ್ಮಜ್ಞನಾದ ನೀನು ಏಕೆ ನಿನ್ನ ಸ್ವಂತ ಮಗನನ್ನು ಪಾಲಿಸುವುದಿಲ್ಲ?

01068055a ನ ವಾಸಸಾಂ ನ ರಾಮಾಣಾಂ ನಾಪಾಂ ಸ್ಪರ್ಶಸ್ತಥಾ ಸುಖಃ|

01068055c ಶಿಶೋರಾಲಿಂಗ್ಯಮಾನಸ್ಯ ಸ್ಪರ್ಶಃ ಸೂನೋರ್ಯಥಾ ಸುಖಃ||

ತನ್ನ ಮಗುವಿನ ಗಾಢ ಆಲಿಂಗನ, ಸ್ಪರ್ಷ ಮತ್ತು ಸುವಾಸನೆಯು ಕೊಡುವಷ್ಟು ಸುಖವನ್ನು ಸುಗಂಧವಾಗಲೀ, ಸ್ತ್ರೀಯಾಗಲೀ, ನೀರಾಗಲೀ ಕೊಡುವುದಿಲ್ಲ.

01068056a ಬ್ರಾಹ್ಮಣೋ ದ್ವಿಪದಾಂ ಶ್ರೇಷ್ಠೋ ಗೌರ್ವರಿಷ್ಠಾ ಚತುಷ್ಪದಾಂ|

01068056c ಗುರುರ್ಗರೀಯಸಾಂ ಶ್ರೇಷ್ಠಃ ಪುತ್ರಃ ಸ್ಪರ್ಶವತಾಂ ವರಃ||

ದ್ವಿಪದರಲ್ಲಿ ಬ್ರಾಹ್ಮಣರು ಹೇಗೆ ಶ್ರೇಷ್ಠರೋ, ಚತುಷ್ಪದರಲ್ಲಿ ಗೋವುಗಳು ಹೇಗೆ ಶ್ರೇಷ್ಠವೋ, ಹಿರಿಯರಲ್ಲಿ ಗುರುವು ಹೇಗೆ ಶ್ರೇಷ್ಠವೋ, ಹಾಗೆ ಸ್ಪರ್ಷದಲ್ಲಿ ಪುತ್ರನೇ ಶ್ರೇಷ್ಠ.

01068057a ಸ್ಪೃಶತು ತ್ವಾಂ ಸಮಾಶ್ಲಿಷ್ಯ ಪುತ್ರೋಽಯಂ ಪ್ರಿಯದರ್ಶನಃ|

01068057c ಪುತ್ರಸ್ಪರ್ಶಾತ್ಸುಖತರಃ ಸ್ಪರ್ಶೋ ಲೋಕೇ ನ ವಿದ್ಯತೇ||

ಈ ಪ್ರಿಯದರ್ಶನ ಪುತ್ರನು ನಿನ್ನನ್ನು ಆಲಿಂಗಿಸಿ ಸ್ಪರ್ಷಿಸಲಿ. ಪುತ್ರಸ್ಪರ್ಷ ಸುಖಕ್ಕಿಂತ ಹೆಚ್ಚಿನದು ಈ ಲೋಕದಲ್ಲಿ ಇನ್ನಿಲ್ಲ.

01068058a ತ್ರಿಷು ವರ್ಷೇಷು ಪೂರ್ಣೇಷು ಪ್ರಜಾತಾಹಮರಿಂದಮ|

01068058c ಇಮಂ ಕುಮಾರಂ ರಾಜೇಂದ್ರ ತವ ಶೋಕಪ್ರಣಾಶನಂ||

ಅರಿಂದಮ! ರಾಜೇಂದ್ರ! ಮೂರು ವರ್ಷಗಳು ಪೂರ್ಣವಾದ ನಂತರ ನಾನು ನಿನ್ನ ಈ ಶೋಕಪ್ರಾಣಾಶ ಕುಮಾರನಿಗೆ ಜನ್ಮವಿತ್ತಿದ್ದೇನೆ.

01068059a ಆಹರ್ತಾ ವಾಜಿಮೇಧಸ್ಯ ಶತಸಂಖ್ಯಸ್ಯ ಪೌರವ|

01068059c ಇತಿ ವಾಗಂತರಿಕ್ಷೇ ಮಾಂ ಸೂತಕೇಽಭ್ಯವದತ್ಪುರಾ||

ಪೌರವ! ಹಿಂದೆ ನಾನು ಸೂತಕದಲ್ಲಿದ್ದಾಗ ಇವನು ಒಂದು ನೂರು ಅಶ್ವಮೇಧ ಯಜ್ಞಗಳನ್ನು ನಡೆಸುತ್ತಾನೆ ಎಂದು ಆಕಾಶದಲ್ಲಿ ಅಶರೀರವಾಣಿಯಾಯಿತು.

01068060a ನನು ನಾಮಾಂಕಮಾರೋಪ್ಯ ಸ್ನೇಹಾದ್ಗ್ರಾಮಾಂತರಂ ಗತಾಃ|

01068060c ಮೂರ್ಧ್ನಿ ಪುತ್ರಾನುಪಾಘ್ರಾಯ ಪ್ರತಿನಂದಂತಿ ಮಾನವಾಃ||

ಮನೆಯನ್ನು ಬಿಟ್ಟು ದೂರ ಪ್ರಯಾಣಮಾಡುವವರು ಬೇರೊಬ್ಬರ ಮಕ್ಕಳನ್ನು ತಮ್ಮ ತೊಡೆಯಮೇಲಿರಿಸಿ, ಅವರ ತಲೆಯನ್ನು ಸೂಸಿ ತಮ್ಮ ಮಕ್ಕಳ ಆನಂದವನ್ನು ಪಡೆಯುತ್ತಾರೆ.

01068061a ವೇದೇಷ್ವಪಿ ವದಂತೀಮಂ ಮಂತ್ರವಾದಂ ದ್ವಿಜಾತಯಃ|

01068061c ಜಾತಕರ್ಮಣಿ ಪುತ್ರಾಣಾಂ ತವಾಪಿ ವಿದಿತಂ ತಥಾ||

ಮಕ್ಕಳ ಜಾತಕರ್ಮದ ಸಮಯದಲ್ಲಿ ದ್ವಿಜರು ಹೇಳುವ ಈ ಮಂತ್ರಗಳನ್ನು ನೀನೂ ಕೂಡ ಕೇಳಿರಬಹುದು.

01068062a ಅಂಗಾದಂಗಾತ್ಸಂಭವಸಿ ಹೃದಯಾದಭಿಜಾಯಸೇ|

01068062c ಆತ್ಮಾ ವೈ ಪುತ್ರನಾಮಾಸಿ ಸ ಜೀವ ಶರದಃ ಶತಂ||

“ನೀನು ನನ್ನ ಅಂಗಗಳಿಂದ ಸಂಭವಿಸಿರುವೆ. ಹೃದಯದಿಂದ ಹುಟ್ಟಿರುವೆ. ಪುತ್ರನಾಗಿರುವ ನೀನು ನಾನೇ. ನೂರು ಸಂವತ್ಸರಗಳನ್ನು ಜೀವಿಸು.

01068063a ಪೋಷೋ ಹಿ ತ್ವದಧೀನೋ ಮೇ ಸಂತಾನಮಪಿ ಚಾಕ್ಷಯಂ|

01068063c ತಸ್ಮಾತ್ತ್ವಂ ಜೀವ ಮೇ ವತ್ಸ ಸುಸುಖೀ ಶರದಾಂ ಶತಂ||

ನನ್ನ ಪೋಷಣೆಯು ನಿನ್ನನ್ನವಲಂಬಿಸಿದೆ. ನನ್ನ ಸಂತಾನವೂ ನಿನ್ನಿಂದ ಅಕ್ಷಯವಾಗುತ್ತದೆ. ನಿನ್ನಿಂದಲೇ ನನಗೆ ಜೀವ. ವತ್ಸ! ನೂರು ಸಂವತ್ಸರಗಳು ಸುಖವಾಗಿ ಬಾಳು.”

01068064a ತ್ವದಂಗೇಭ್ಯಃ ಪ್ರಸೂತೋಽಯಂ ಪುರುಷಾತ್ಪುರುಷೋಽಪರಃ|

01068064c ಸರಸೀವಾಮಲೇಽತ್ಮಾನಂ ದ್ವಿತೀಯಂ ಪಶ್ಯ ಮೇ ಸುತಂ||

ಇವನು ನಿನ್ನ ಅಂಗಗಳಿಂದ ಹುಟ್ಟಿದವನು, ಪುರುಷನಿಂದ ಹುಟ್ಟಿದ ಇನ್ನೊಬ್ಬ ಪುರುಷನು. ತಿಳಿ ಕೊಳದಂತಿರುವ ನಿನ್ನ ಮಗನಲ್ಲಿ ನಿನ್ನನ್ನೇ ಕಾಣು.

01068065a ಯಥಾ ಹ್ಯಾಹವನೀಯೋಽಗ್ನಿರ್ಗಾರ್ಹಪತ್ಯಾತ್ಪ್ರಣೀಯತೇ|

01068065c ತಥಾ ತ್ವತ್ತಃ ಪ್ರಸೂತೋಽಯಂ ತ್ವಮೇಕಃ ಸಂದ್ವಿಧಾ ಕೃತಃ||

ಗಾರ್ಹಪತ್ಯದ ಅಗ್ನಿಯಿಂದ ಹೇಗೆ ಯಜ್ಞೇಶ್ವರನು ಹುಟ್ಟುತ್ತಾನೋ ಹಾಗೆ ಈ ಮಗುವೂ ಕೂಡ ನಿನ್ನಿಂದಲೇ ಹುಟ್ಟಿದವನು. ನೀನು ಒಬ್ಬನೇ ಆದರೂ ನಿನ್ನನ್ನು ನೀನೇ ಎರಡಾಗಿ ವಿಭಜನೆಗೊಂಡಿದ್ದೀಯೆ.

01068066a ಮೃಗಾಪಕೃಷ್ಟೇನ ಹಿ ತೇ ಮೃಗಯಾಂ ಪರಿಧಾವತಾ|

01068066c ಅಹಮಾಸಾದಿತಾ ರಾಜನ್ಕುಮಾರೀ ಪಿತುರಾಶ್ರಮೇ||

ರಾಜನ್! ಮೃಗಗಳ ಬೇಟೆಗೆಂದು ಬಂದು ಆಯಾಸಗೊಂಡಾಗ ನೀನು ಕುಮಾರಿಯಾಗಿದ್ದ ನನ್ನನ್ನು ನನ್ನ ತಂದೆಯ ಆಶ್ರಮದಲ್ಲಿ ಪಡೆದಿದ್ದೆ.

01068067a ಉರ್ವಶೀ ಪೂರ್ವಚಿತ್ತಿಶ್ಚ ಸಹಜನ್ಯಾ ಚ ಮೇನಕಾ|

01068067c ವಿಶ್ವಾಚೀ ಚ ಘೃತಾಚೀ ಚ ಷಡೇವಾಪ್ಸರಸಾಂ ವರಾಃ||

ಊರ್ವಶೀ, ಪೂರ್ವಚಿತ್ತಿ, ಸಹಜನ್ಯ, ಮೇನಕಾ, ವಿಶ್ವಾ, ಮತ್ತು ಘೃತಾಚೀ ಈ ಆರು ಮಂದಿ ಅಪ್ಸರೆಯರಲ್ಲಿ ಶ್ರೇಷ್ಠರು.

01068068a ತಾಸಾಂ ಮಾಂ ಮೇನಕಾ ನಾಮ ಬ್ರಹ್ಮಯೋನಿರ್ವರಾಪ್ಸರಾಃ|

01068068c ದಿವಃ ಸಂಪ್ರಾಪ್ಯ ಜಗತೀಂ ವಿಶ್ವಾಮಿತ್ರಾದಜೀಜನತ್||

ಅವರಲ್ಲಿಯೇ ಶ್ರೇಷ್ಠ ಬ್ರಹ್ಮಯೋನಿಯಲ್ಲಿ ಜನಿಸಿದ ಮೇನಕಾ ಎಂಬ ಹೆಸರಿನ ಅಪ್ಸರೆಯು ಸ್ವರ್ಗದಿಂದ ಕೆಳಗಿಳಿದು ವಿಶ್ವಾಮಿತ್ರನಿಂದ ನನಗೆ ಜನ್ಮವಿತ್ತಳು.

01068069a ಸಾ ಮಾಂ ಹಿಮವತಃ ಪೃಷ್ಠೇ ಸುಷುವೇ ಮೇನಕಾಪ್ಸರಾಃ|

01068069c ಅವಕೀರ್ಯ ಚ ಮಾಂ ಯಾತಾ ಪರಾತ್ಮಜಮಿವಾಸತೀ||

ಅಪ್ಸರೆ ಮೇನಕಾ ನನ್ನನ್ನು ಹಿಮಾಲಯದ ತಪ್ಪಲಿನಲ್ಲಿ ಜನ್ಮವಿತ್ತಳು. ಆ ವಾತ್ಸಲ್ಯವಿಹೀನಳು ಬೇರೆ ಯಾರದ್ದೋ ಮಗುವಿನಂತೆ ನನ್ನನ್ನು ಅಲ್ಲಿಯೇ ಬಿಟ್ಟು ಹೊರಟುಹೋದಳು.

01068070a ಕಿಂ ನು ಕರ್ಮಾಶುಭಂ ಪೂರ್ವಂ ಕೃತವತ್ಯಸ್ಮಿ ಜನ್ಮನಿ|

01068070c ಯದಹಂ ಬಾಂಧವೈಸ್ತ್ಯಕ್ತಾ ಬಾಲ್ಯೇ ಸಂಪ್ರತಿ ಚ ತ್ವಯಾ||

ಹಿಂದಿನ ಜನ್ಮದಲ್ಲಿ ನಾನು ಯಾವ ಅಶುಭ ಕರ್ಮವನ್ನು ಮಾಡಿದ್ದೆನೋ ಏನೋ ಬಾಲ್ಯದಲ್ಲಿಯೇ ನನ್ನ ತಂದೆತಾಯಿಗಳು ಬಿಟ್ಟುಹೋದರು. ಈಗ ನಿನ್ನಿಂದ ನಾನು ಪರಿತ್ಯಜಿಸಲ್ಪಟ್ಟಿದ್ದೇನೆ.

01068071a ಕಾಮಂ ತ್ವಯಾ ಪರಿತ್ಯಕ್ತಾ ಗಮಿಷ್ಯಾಮ್ಯಹಮಾಶ್ರಮಂ|

01068071c ಇಮಂ ತು ಬಾಲಂ ಸಂತ್ಯಕ್ತುಂ ನಾರ್ಹಸ್ಯಾತ್ಮಜಮಾತ್ಮನಾ||

ನಿನ್ನಿಂದ ಪರಿತ್ಯಕ್ತಳಾದರೆ ನಾನು ಆಶ್ರಮಕ್ಕೆ ಹಿಂದಿರುಗಲು ಸಿದ್ಧಳಿದ್ದೇನೆ. ಆದರೆ ನಿನ್ನದೇ ಮಗನಾಗಿರುವ ಈ ಬಾಲಕನನ್ನು ನೀನು ತ್ಯಜಿಸುವುದು ಸರಿಯಲ್ಲ.”

01068072 ದುಃಷಂತ ಉವಾಚ

01068072a ನ ಪುತ್ರಮಭಿಜಾನಾಮಿ ತ್ವಯಿ ಜಾತಂ ಶಕುಂತಲೇ|

01068072c ಅಸತ್ಯವಚನಾ ನಾರ್ಯಃ ಕಸ್ತೇ ಶ್ರದ್ಧಾಸ್ಯತೇ ವಚಃ||

ದುಃಷಂತನು ಹೇಳಿದನು: “ಶಕುಂತಲೇ! ನಿನ್ನಲ್ಲಿ ಹುಟ್ಟಿದ ಈ ಪುತ್ರನು ನನಗೆ ಗೊತ್ತೇ ಇಲ್ಲ. ಸಾಧಾರಣವಾಗಿ ನಾರಿಯರು ಅಸತ್ಯವನ್ನೇ ನುಡಿಯುವರು. ನಿನ್ನ ಈ ಮಾತುಗಳನ್ನು ಯಾರುತಾನೆ ನಂಬುವರು?

01068073a ಮೇನಕಾ ನಿರನುಕ್ರೋಶಾ ಬಂಧಕೀ ಜನನೀ ತವ|

01068073c ಯಯಾ ಹಿಮವತಃ ಪೃಷ್ಠೇ ನಿರ್ಮಾಲ್ಯೇವ ಪ್ರವೇರಿತಾ||

ಅನುಕಂಪವಿಲ್ಲದ ವೇಶ್ಯೆ ನಿನ್ನ ಜನನಿ ಮೇನಕೆಯು ದೇವರಿಗೇರಿಸಿದ ಮಾಲೆಯನ್ನು ಹೇಗೋ ಹಾಗೆ ನಿನ್ನನ್ನು ಹಿಮಾಲಯದಲ್ಲಿ ಬಿಸುಟು ಹೋದಳು.

01068074a ಸ ಚಾಪಿ ನಿರನುಕ್ರೋಶಃ ಕ್ಷತ್ರಯೋನಿಃ ಪಿತಾ ತವ|

01068074c ವಿಶ್ವಾಮಿತ್ರೋ ಬ್ರಾಹ್ಮಣತ್ವೇ ಲುಬ್ಧಃ ಕಾಮಪರಾಯಣಃ||

ಕ್ಷತ್ರಿಯನಾಗಿ ಹುಟ್ಟಿಯೂ ಬಾಹ್ಮಣತ್ವದ ಆಸೆಗೊಳಗಾದ ಕಾಮಪರಾಯಣ ನಿನ್ನ ಪಿತ ವಿಶ್ವಾಮಿತ್ರನಿಗೂ ಅನುಕಂಪವಿರಲಿಲ್ಲ.

01068075a ಮೇನಕಾಪ್ಸರಸಾಂ ಶ್ರೇಷ್ಠಾ ಮಹರ್ಷೀಣಾಂ ಚ ತೇ ಪಿತಾ|

01068075c ತಯೋರಪತ್ಯಂ ಕಸ್ಮಾತ್ತ್ವಂ ಪುಂಶ್ಚಲೀವಾಭಿಧಾಸ್ಯಸಿ||

ಮೇನಕೆಯು ಅಪ್ಸರೆಯರಲ್ಲಿ ಮತ್ತು ನಿನ್ನ ಪಿತನು ಮಹರ್ಷಿಗಳಲ್ಲಿ ಶ್ರೇಷ್ಠರೆನಿಸಿದರೂ ಅವರ ಮಗಳಾದ ನೀನು ಯಾವ ಕಾರಣಕ್ಕಾಗಿ ಈ ರೀತಿ ನೆಲೆಗೋಸ್ಕರ ಅಲೆಯುತ್ತಿರುವೆ?

01068076a ಅಶ್ರದ್ಧೇಯಮಿದಂ ವಾಕ್ಯಂ ಕಥಯಂತೀ ನ ಲಜ್ಜಸೇ|

01068076c ವಿಶೇಷತೋ ಮತ್ಸಕಾಶೇ ದುಷ್ಟತಾಪಸಿ ಗಮ್ಯತಾಂ||

ನಿನ್ನ ಈ ಮಾತುಗಳಲ್ಲಿ ಸ್ವಲ್ಪವೂ ವಿಶ್ವಾಸ ಬರುತ್ತಿಲ್ಲ. ಈ ರೀತಿ ವಿಶೇಷತಃ ನನ್ನ ಎದಿರು ಇದನ್ನೆಲ್ಲಾ ಹೇಳಿಕೊಳ್ಳಲು ನಾಚಿಕೆಯಾದರೂ ಆಗುತ್ತಿಲ್ಲವೇ? ದುಷ್ಟ ತಾಪಸಿ! ಹೊರಟು ಹೋಗು.

01068077a ಕ್ವ ಮಹರ್ಷಿಃ ಸದೈವೋಗ್ರಃ ಸಾಪ್ಸರಾ ಕ್ವ ಚ ಮೇನಕಾ|

01068077c ಕ್ವ ಚ ತ್ವಮೇವಂ ಕೃಪಣಾ ತಾಪಸೀವೇಷಧಾರಿಣೀ||

ಸದೈವರಲ್ಲಿ ಅಗ್ರ ಮಹರ್ಷಿಯೆಲ್ಲಿ? ಅಪ್ಸರೆ ಮೇನಕೆ ಎಲ್ಲಿ? ತಾಪಸೀ ವೇಷಧಾರಿಣಿ ಕೃಪಣೆ ನೀನಾದರೂ ಎಲ್ಲಿದ್ದೀಯೆ?

01068078a ಅತಿಕಾಯಶ್ಚ ಪುತ್ರಸ್ತೇ ಬಾಲೋಽಪಿ ಬಲವಾನಯಂ|

01068078c ಕಥಮಲ್ಪೇನ ಕಾಲೇನ ಶಾಲಸ್ಕಂಧ ಇವೋದ್ಗತಃ||

ನಿನ್ನ ಈ ಪುತ್ರನು ಅತಿಕಾಯನಾಗಿ ತೋರುತ್ತಿದ್ದಾನೆ, ಬಾಲಕನಾದರೂ ಬಲಶಾಲಿಯಾಗಿದ್ದಾನೆ. ಈ ಅಲ್ಪ ಕಾಲದಲ್ಲಿಯೇ ಇವನು ಹೇಗೆ ಶಾಲಸ್ಕಂಧದ ಹಾಗೆ ಬೆಳೆದಿದ್ದಾನೆ?

01068079a ಸುನಿಕೃಷ್ಟಾ ಚ ಯೋನಿಸ್ತೇ ಪುಂಶ್ಚಲೀ ಪ್ರತಿಭಾಸಿ ಮೇ|

01068079c ಯದೃಚ್ಛಯಾ ಕಾಮರಾಗಾಜ್ಜಾತಾ ಮೇನಕಯಾ ಹ್ಯಸಿ||

ಮೇನಕೆಯ ಕಾಮರಾಗದಿಂದ ಜನಿಸಿದ ನೀನು ನೀಚ ಯೋನಿಯಲ್ಲಿ ಜನಿಸಿದವಳು. ನನಗೆ ವ್ಯಭಿಚಾರಿಣಿಯಂತೆ ತೋರುತ್ತಿರುವೆ.

01068080a ಸರ್ವಮೇತತ್ಪರೋಕ್ಷಂ ಮೇ ಯತ್ತ್ವಂ ವದಸಿ ತಾಪಸಿ|

01068080c ನಾಹಂ ತ್ವಾಮಭಿಜಾನಾಮಿ ಯಥೇಷ್ಟಂ ಗಮ್ಯತಾಂ ತ್ವಯಾ||

ತಾಪಸಿ! ನೀನು ಹೇಳುತ್ತಿರುವ ಸರ್ವವೂ ನನಗೆ ತಿಳಿಯದಾಗಿದೆ. ನನಗೆ ನೀನು ಗೊತ್ತೇ ಇಲ್ಲ. ನಿನಗಿಷ್ಟವಾದಲ್ಲಿ ನೀನು ಹೋಗಬಹುದು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಶಕುಂತಲೋಪಾಖ್ಯಾನೇ ಅಷ್ಟಷಷ್ಟಿತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಶಕುಂತಲೋಪಾಖ್ಯಾನದಲ್ಲಿ ಅರವತ್ತೆಂಟನೆಯ ಅಧ್ಯಾಯವು.

Comments are closed.