Adi Parva: Chapter 58

ಆದಿ ಪರ್ವ: ಅಂಶಾವತರಣ ಪರ್ವ

೫೮

ಪರಶುರಾಮನು ಕ್ಷತ್ರಿಯರನ್ನು ನಾಶಗೊಳಿಸಿದ ನಂತರ ಬ್ರಾಹ್ಮಣರು ಕ್ಷತ್ರಾಣಿಯರಲ್ಲಿ ಕ್ಷತ್ರಿಯರನ್ನು ಹುಟ್ಟಿಸಿದುದು (೧-೨೫). ಅಸುರರು ಕ್ಷತ್ರಿಯರಾಗಿ ಜನಿಸುವುದು (೨೬-೩೫). ಮೊರೆಹೊಕ್ಕ ಭೂಮಿಗೆ ನಾರಾಯಣನು ಆಶ್ವಾಸನೆ ನೀಡುವುದು (೩೬-೫೦).

01058001 ಜನಮೇಜಯ ಉವಾಚ|

01058001a ಯ ಏತೇ ಕೀರ್ತಿತಾ ಬ್ರಹ್ಮನ್ಯೇ ಚಾನ್ಯೇ ನಾನುಕೀರ್ತಿತಾಃ|

01058001c ಸಮ್ಯಕ್ತಾಂಶ್ರೋತುಮಿಚ್ಛಾಮಿ ರಾಜ್ಞಶ್ಚಾನ್ಯಾನ್ಸುವರ್ಚಸಃ||

ಜನಮೇಜಯನು ಹೇಳಿದನು: “ಬ್ರಾಹ್ಮಣ! ನೀನು ಕೆಲವರ ಕುರಿತು ಮಾತ್ರ ಹೇಳಿದ್ದೀಯೆ ಮತ್ತು ಇನ್ನು ಕೆಲವರ ಕುರಿತು ಹೇಳಿಲ್ಲ. ನಾನು ಆ ಎಲ್ಲ ಸುವರ್ಚಸ ರಾಜರ ಹೆಸರುಗಳನ್ನು ಕೇಳಲು ಬಯಸುತ್ತೇನೆ.

01058002a ಯದರ್ಥಮಿಹ ಸಂಭೂತಾ ದೇವಕಲ್ಪಾ ಮಹಾರಥಾಃ|

01058002c ಭುವಿ ತನ್ಮೇ ಮಹಾಭಾಗ ಸಮ್ಯಗಾಖ್ಯಾತುಮರ್ಹಸಿ||

ಮಹಾಭಾಗ! ಈ ಎಲ್ಲ ದೇವಕಲ್ಪ ಮಹಾರಥರು ಯಾವ ಕಾರಣಕ್ಕಾಗಿ ಭುವಿಯಲ್ಲಿ ಜನ್ಮತಳೆದರು ಎನ್ನುವುದನ್ನು ಸಂಪೂರ್ಣವಾಗಿ ಹೇಳು.”

01058003 ವೈಶಂಪಾಯನ ಉವಾಚ

01058003a ರಹಸ್ಯಂ ಖಲ್ವಿದಂ ರಾಜನ್ದೇವಾನಾಮಿತಿ ನಃ ಶ್ರುತಂ|

01058003c ತತ್ತು ತೇ ಕಥಯಿಷ್ಯಾಮಿ ನಮಸ್ಕೃತ್ವಾ ಸ್ವಯಂಭುವೇ||

ವೈಶಂಪಾಯನನು ಹೇಳಿದನು: “ರಾಜನ್! ಇದು ದೇವತೆಗಳಿಗೂ ತಿಳಿಯದಿರುವಂತ ರಹಸ್ಯ ಎಂದು ಕೇಳಿದ್ದೇನೆ. ಆದರೂ ಆ ಸ್ವಯಂಭುವಿಗೆ ನಮಸ್ಕರಿಸಿ ನಿನಗೆ ಹೇಳುತ್ತೇನೆ.

01058004a ತ್ರಿಃಸಪ್ತಕೃತ್ವಃ ಪೃಥಿವೀಂ ಕೃತ್ವಾ ನಿಃಕ್ಷತ್ರಿಯಾಂ ಪುರಾ|

01058004c ಜಾಮದಗ್ನ್ಯಸ್ತಪಸ್ತೇಪೇ ಮಹೇಂದ್ರೇ ಪರ್ವತೋತ್ತಮೇ||

ಹಿಂದೆ ಜಾಮದಗ್ನಿಯು ಇಪ್ಪತ್ತೊಂದು ಬಾರಿ ಪೃಥ್ವಿಯನ್ನು ನಿಃಕ್ಷತ್ರಿಯರನ್ನಾಗಿ ಮಾಡಿ ಪರ್ವತೋತ್ತಮ ಮಹೇಂದ್ರದ ಮೇಲೆ ತಪಸ್ಸು ಮಾಡುತ್ತಿದ್ದನು.

01058005a ತದಾ ನಿಃಕ್ಷತ್ರಿಯೇ ಲೋಕೇ ಭಾರ್ಗವೇಣ ಕೃತೇ ಸತಿ|

01058005c ಬ್ರಾಹ್ಮಣಾನ್ಕ್ಷತ್ರಿಯಾ ರಾಜನ್ಗರ್ಭಾರ್ಥಿನ್ಯೋಽಭಿಚಕ್ರಮುಃ||

ರಾಜನ್! ಭಾರ್ಗವನಿಂದ ಲೋಕಗಳಲ್ಲಿ ಕ್ಷತ್ರಿಯರೇ ಇಲ್ಲದಂತಾದಾಗ ಕ್ಷಾತ್ರಿಣಿಯರು ಬ್ರಾಹ್ಮಣರಲ್ಲಿ ಗರ್ಭವನ್ನು ಬೇಡಿದರು.

01058006a ತಾಭಿಃ ಸಹ ಸಮಾಪೇತುರ್ಬ್ರಾಹ್ಮಣಾಃ ಸಂಶಿತವ್ರತಾಃ|

01058006c ಋತಾವೃತೌ ನರವ್ಯಾಘ್ರ ನ ಕಾಮಾನ್ನಾನೃತೌ ತಥಾ||

ನರವ್ಯಾಘ್ರ! ಆಗ ಸಂಶಿತವ್ರತ ಬ್ರಾಹ್ಮಣರು ಋತುಮತಿಯರಾಗಿದ್ದಾಗ ಮಾತ್ರ ಸಂಭೋಗ ಮಾಡಿದರು. ಕಾಮಕ್ಕಾಗಿ ಎಂದೂ ಕೂಡಲಿಲ್ಲ.

01058007a ತೇಭ್ಯಸ್ತು ಲೇಭಿರೇ ಗರ್ಭಾನ್ ಕ್ಷತ್ರಿಯಾಸ್ತಾಃ ಸಹಸ್ರಶಃ|

01058007c ತತಃ ಸುಷುವಿರೇ ರಾಜನ್ ಕ್ಷತ್ರಿಯಾನ್ವೀರ್ಯಸಮ್ಮತಾನ್|

01058007e ಕುಮಾರಾಂಶ್ಚ ಕುಮಾರೀಶ್ಚ ಪುನಃ ಕ್ಷತ್ರಾಭಿವೃದ್ಧಯೇ||

ಈ ರೀತಿಯ ಸಂಬಂಧದಿಂದ ಕ್ಷಾತ್ರಿಣಿಯರು ಸಹಸ್ರಾರು ಸಂಖ್ಯೆಯಲ್ಲಿ ಗರ್ಭಧರಿಸಿದರು ಮತ್ತು ಕ್ಷತ್ರಿಯ ವೀರಸಮನ್ವಿತ ಕುಮಾರ ಕುಮಾರಿಯರಿಗೆ ಜನ್ಮವಿತ್ತು ಪುನಃ ಕ್ಷತ್ರಿಯರ ಅಭಿವೃದ್ದಿಯಾಯಿತು.

01058008a ಏವಂ ತದ್ಬ್ರಾಹ್ಮಣೈಃ ಕ್ಷತ್ರಂ ಕ್ಷತ್ರಿಯಾಸುತಪಸ್ವಿಭಿಃ|

01058008c ಜಾತಮೃಧ್ಯತ ಧರ್ಮೇಣ ಸುದೀರ್ಘೇಣಾಯುಷಾನ್ವಿತಂ|

01058008e ಚತ್ವಾರೋಽಪಿ ತದಾ ವರ್ಣಾ ಬಭೂವುರ್ಬ್ರಾಹ್ಮಣೋತ್ತರಾಃ||

ಈ ರೀತಿ ಸುತಪಸ್ವಿ ಬ್ರಾಹ್ಮಣರು ಮತ್ತು ಕ್ಷಾತ್ರಿಣಿಯರಿಂದ ಕ್ಷತ್ರಿಯಕುಲವು ವೃದ್ಧಿಯಾಯಿತು. ಹೊಸ ಪೀಳಿಗೆಯು ಧರ್ಮ, ಸುದೀರ್ಘಾಯಸ್ಸುಗಳನ್ನು ಹೊಂದಿದ್ದು ಬ್ರಾಹ್ಮಣರೇ ಮೊದಲಾದ ನಾಲ್ಕು ವರ್ಣಗಳ ಪುನಃಸ್ಥಾಪನೆಯಾಯಿತು.

01058009a ಅಭ್ಯಗಚ್ಛನ್ನೃತೌ ನಾರೀಂ ನ ಕಾಮಾನ್ನಾನೃತೌ ತಥಾ|

01058009c ತಥೈವಾನ್ಯಾನಿ ಭೂತಾನಿ ತಿರ್ಯಗ್ಯೋನಿಗತಾನ್ಯಪಿ|

01058009e ಋತೌ ದಾರಾಂಶ್ಚ ಗಚ್ಛಂತಿ ತದಾ ಸ್ಮ ಭರತರ್ಷಭ||

ನಾರಿಯರು ಋತುಮತಿಯರಾಗಿದ್ದಾಗ ಮಾತ್ರ ಹೋಗುತ್ತಿದ್ದರೇ ಹೊರತು ಋತುಮತಿಯಾಗಿರದಿದ್ದಾಗ ಅಥವಾ ಕಾಮಕ್ಕೋಸ್ಕರ ಹೋಗುತ್ತಿರಲಿಲ್ಲ.

01058010a ತತೋಽವರ್ಧಂತ ಧರ್ಮೇಣ ಸಹಸ್ರಶತಜೀವಿನಃ|

01058010c ತಾಃ ಪ್ರಜಾಃ ಪೃಥಿವೀಪಾಲ ಧರ್ಮವ್ರತಪರಾಯಣಾಃ|

01058010e ಆಧಿಭಿರ್ವ್ಯಾಧಿಭಿಶ್ಚೈವ ವಿಮುಕ್ತಾಃ ಸರ್ವಶೋ ನರಾಃ||

ಈ ರೀತಿ ಧರ್ಮಪ್ರಕಾರ ಸಹಸ್ರಶತ ಸಂಖ್ಯೆಗಳಲ್ಲಿ ಧರ್ಮವ್ರತಪರಾಯಣ ಪೃಥ್ವೀಪಾಲರು ಜನಿಸಿದರು ಮತ್ತು ವೃದ್ಧಿಸಿದರು. ಸರ್ವ ನರರೂ ದುಃಖ ಮತ್ತು ಅನಾರೋಗ್ಯದಿಂದ ವಿಮುಕ್ತರಾಗಿದ್ದರು.

01058011a ಅಥೇಮಾಂ ಸಾಗರಾಪಾಂಗಾಂ ಗಾಂ ಗಜೇಂದ್ರಗತಾಖಿಲಾಂ|

01058011c ಅಧ್ಯತಿಷ್ಠತ್ಪುನಃ ಕ್ಷತ್ರಂ ಸಶೈಲವನಕಾನನಾಂ||

ಗಜೇಂದ್ರನ ನಡೆಯ ಸಾಗರಗಳನ್ನು ಗಡಿಯಾಗಿ ಹೊಂದಿದ ಪೃಥ್ವಿಯು ಮತ್ತೊಮ್ಮೆ ಗಿರಿವನಕಾನನಗಳ ಸಮೇತ ಎದ್ದುನಿಂತಂತೆ ಆಯಿತು.

01058012a ಪ್ರಶಾಸತಿ ಪುನಃ ಕ್ಷತ್ರೇ ಧರ್ಮೇಣೇಮಾಂ ವಸುಂಧರಾಂ|

01058012c ಬ್ರಾಹ್ಮಣಾದ್ಯಾಸ್ತದಾ ವರ್ಣಾ ಲೇಭಿರೇ ಮುದಮುತ್ತಮಾಂ||

ಪುನಃ ಕ್ಷತ್ರಿಯರಿಂದ ಧರ್ಮಪೂರ್ವಕವಾಗಿ ಆಳಲ್ಪಟ್ಟ ವಸುಂಧರೆಯಲ್ಲಿ ಬ್ರಾಹ್ಮಣರೇ ಮೊದಲಾದ ಅನ್ಯ ವರ್ಣದವರೂ ಉತ್ತಮ ಸಂತೋಷವನ್ನು ಹೊಂದಿದ್ದರು.

01058013a ಕಾಮಕ್ರೋಧೋದ್ಭವಾಂದೋಷಾನ್ನಿರಸ್ಯಚ ನರಾಧಿಪಾಃ|

01058013c ದಂಡಂ ದಂಡ್ಯೇಷು ಧರ್ಮೇಣ ಪ್ರಣಯಂತೋಽನ್ವಪಾಲಯನ್||

ನರಾಧಿಪರೆಲ್ಲರೂ ಕಾಮ-ಕ್ರೋಧಗಳಿಂದ ಉಂಟಾಗಬಹುದಾದ ದೋಷಗಳನ್ನೆಲ್ಲ ತೊರೆದು, ದಂಡಿಸಬೇಕಾದವರಿಗೆ ದಂಡಿಸುತ್ತಾ ಧರ್ಮದಿಂದ ಭೂಮಿಯನ್ನು ಪಾಲಿಸಿದರು.

01058014a ತಥಾ ಧರ್ಮಪರೇ ಕ್ಷತ್ರೇ ಸಹಸ್ರಾಕ್ಷಃ ಶತಕ್ರತುಃ|

01058014c ಸ್ವಾದು ದೇಶೇ ಚ ಕಾಲೇ ಚ ವವರ್ಷಾಪ್ಯಾಯಯನ್ಪ್ರಜಾಃ||

ಈ ರೀತಿ ಕ್ಷತ್ರಿಯರೆಲ್ಲರೂ ಧರ್ಮಪರರಾಗಿರುವಾಗ ಸಹಸ್ರಾಕ್ಷ ಶತಕ್ರತುವು ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸಿ ದೇಶದ ಪ್ರಜೆಗಳನ್ನೆಲ್ಲಾ ಸುಖದಿಂದ ಇರಿಸುತ್ತಿದ್ದನು.

01058015a ನ ಬಾಲ ಏವ ಮ್ರಿಯತೇ ತದಾ ಕಶ್ಚಿನ್ನರಾಧಿಪ|

01058015c ನ ಚ ಸ್ತ್ರಿಯಂ ಪ್ರಜಾನಾತಿ ಕಶ್ಚಿದಪ್ರಾಪ್ತಯೌವನಃ||

ನರಾಧಿಪ! ಯಾವ ಬಾಲಕನೂ ಮರಣಹೊಂದುತ್ತಿರಲಿಲ್ಲ, ಮತ್ತು ಯೌವನ ಪ್ರಾಪ್ತವಾಗದೇ ಯಾವ ಸ್ತ್ರೀಯೂ ಮಗುವಿನ ತಾಯಿಯಾಗುತ್ತಿರಲಿಲ್ಲ.

01058016a ಏವಮಾಯುಷ್ಮತೀಭಿಸ್ತು ಪ್ರಜಾಭಿರ್ಭರತರ್ಷಭ|

01058016c ಇಯಂ ಸಾಗರಪರ್ಯಂತಾ ಸಮಾಪೂರ್ಯತ ಮೇದಿನೀ||

ಭರತರ್ಷಭ! ಈ ರೀತಿ ಸಾಗರಪರ್ಯಂತವೂ ಈ ಮೇದಿನಿಯು ದೀರ್ಘಾಯುಷಿ ಪ್ರಜೆಗಳಿಂದ ತುಂಬಿತ್ತು.

01058017a ಈಜಿರೇ ಚ ಮಹಾಯಜ್ಞೈಃ ಕ್ಷತ್ರಿಯಾ ಬಹುದಕ್ಷಿಣೈಃ|

01058017c ಸಾಂಗೋಪನಿಷದಾನ್ವೇದಾನ್ವಿಪ್ರಾಶ್ಚಾಧೀಯತೇ ತದಾ||

ಕ್ಷತ್ರಿಯರು ಬಹುದಕ್ಷಿಣೆಗಳನ್ನಿತ್ತು ಮಹಾ ಯಜ್ಞಗಳನ್ನು ನಡೆಸಿದರು ಮತ್ತು ವಿಪ್ರರು ಉಪನಿಷತ್ ಮೊದಲಾದ ಅಂಗಗಳನ್ನೊಡಗೂಡಿದ ವೇದಗಳನ್ನು ಅಭ್ಯಾಸ ಮಾಡಿದರು.

01058018a ನ ಚ ವಿಕ್ರೀಣತೇ ಬ್ರಹ್ಮ ಬ್ರಾಹ್ಮಣಾಃ ಸ್ಮ ತದಾ ನೃಪ|

01058018c ನ ಚ ಶೂದ್ರಸಮಾಭ್ಯಾಶೇ ವೇದಾನುಚ್ಛಾರಯಂತ್ಯುತ||

ನೃಪ! ಆಗ ಯಾವ ಬ್ರಾಹ್ಮಣನೂ ಬ್ರಹ್ಮವಿದ್ಯೆಯನ್ನು ಮಾರಾಟಮಾಡುತ್ತಿರಲಿಲ್ಲ ಮತ್ತು ಶೂದ್ರರ ಎದುರಿನಲ್ಲಿ ವೇದೋಚ್ಛಾರ ಮಾಡುತ್ತಿರಲಿಲ್ಲ.

01058019a ಕಾರಯಂತಃ ಕೃಷಿಂ ಗೋಭಿಸ್ತಥಾ ವೈಶ್ಯಾಃ ಕ್ಷಿತಾವಿಹ|

01058019c ನ ಗಾಮಯುಂಜಂತ ಧುರಿ ಕೃಶಾಂಗಾಶ್ಚಾಪ್ಯಜೀವಯನ್||

ವೈಶ್ಯರು ಈ ಕ್ಷಿತಿಯಲ್ಲಿ ಗೋವುಗಳ ಮೂಲಕ ಕೃಷಿ ಮಾಡಿದರು. ಆದರೆ ಬಡಕಲು ಗೋವುಗಳನ್ನು ಕಟ್ಟುತ್ತಿರಲಿಲ್ಲ ಮತ್ತು ಕೃಶಗೋವುಗಳಿಗೆ ಸಾಕಷ್ಟು ಆಹಾರವನ್ನು ಕೊಡುತ್ತಿದ್ದರು.

01058020a ಫೇನಪಾಂಶ್ಚ ತಥಾ ವತ್ಸಾನ್ನ ದುಹಂತಿ ಸ್ಮ ಮಾನವಾಃ|

01058020c ನ ಕೂಟಮಾನೈರ್ವಣಿಜಃ ಪಣ್ಯಂ ವಿಕ್ರೀಣತೇ ತದಾ||

ಕರುಗಳು ತಾಯಿಯ ಹಾಲನ್ನು ಮಾತ್ರ ಕುಡಿದು ಜೀವಿಸುವವರೆಗೆ ನರರು ಹಾಲನ್ನು ಕರೆಯುತ್ತಿರಲಿಲ್ಲ. ಯಾವ ವರ್ತಕನೂ ಸುಳ್ಳು ತಕ್ಕಡಿಯನ್ನು ಬಳಸಿ ಮಾರುತ್ತಿರಲಿಲ್ಲ.

01058021a ಕರ್ಮಾಣಿ ಚ ನರವ್ಯಾಘ್ರ ಧರ್ಮೋಪೇತಾನಿ ಮಾನವಾಃ|

01058021c ಧರ್ಮಮೇವಾನುಪಶ್ಯಂತಶ್ಚಕ್ರುರ್ಧರ್ಮಪರಾಯಣಾಃ||

ನರವ್ಯಾಘ್ರ! ಮಾನವರು ಧರ್ಮದಮೇಲೇ ದೃಷ್ಠಿಯನ್ನಿಟ್ಟುಕೊಂಡು ಧರ್ಮಪರಾಯಣರಾಗಿ ಧರ್ಮೋಪೇತ ಕರ್ಮಗಳಲ್ಲಿ ನಿರತರಾಗಿದ್ದರು.

01058022a ಸ್ವಕರ್ಮನಿರತಾಶ್ಚಾಸನ್ಸರ್ವೇ ವರ್ಣಾ ನರಾಧಿಪ|

01058022c ಏವಂ ತದಾ ನರವ್ಯಾಘ್ರ ಧರ್ಮೋ ನ ಹ್ರಸತೇ ಕ್ವ ಚಿತ್||

ನರಾಧಿಪ! ಸರ್ವ ವರ್ಣದವರು ತಮ್ಮ ತಮ್ಮ ಕರ್ಮಗಳಲ್ಲಿ ನಿರತರಾಗಿದ್ದರು. ನರವ್ಯಾಘ್ರ! ಈ ರೀತಿ ಧರ್ಮವು ಎಂದೂ ಕುಂದಲಿಲ್ಲ.

01058023a ಕಾಲೇ ಗಾವಃ ಪ್ರಸೂಯಂತೇ ನಾರ್ಯಶ್ಚ ಭರತರ್ಷಭ|

01058023c ಫಲಂತ್ಯೃತುಷು ವೃಕ್ಷಾಶ್ಚ ಪುಷ್ಪಾಣಿ ಚ ಫಲಾನಿ ಚ||

ಭರತರ್ಷಭ! ಗೋವು ಮತ್ತು ನಾರಿಯರು ಸಕಾಲದಲ್ಲಿ ಜನ್ಮನೀಡುತ್ತಿದ್ದರು. ಮತ್ತು ವೃಕ್ಷಗಳು ಋತುವಿಗೆ ತಕ್ಕಂತೆ ಪುಷ್ಪ-ಫಲಗಳನ್ನು ನೀಡುತ್ತಿದ್ದವು.

01058024a ಏವಂ ಕೃತಯುಗೇ ಸಮ್ಯಗ್ವರ್ತಮಾನೇ ತದಾ ನೃಪ|

01058024c ಆಪೂರ್ಯತ ಮಹೀ ಕೃತ್ಸ್ನಾ ಪ್ರಾಣಿಭಿರ್ಬಹುಭಿರ್ಭೃಶಂ||

ನೃಪ! ಈ ರೀತಿ ಕೃತಯುಗವು ನಡೆಯುತ್ತಿರುವಾಗ ಈ ಭೂಮಿಯು ಬಹಳಷ್ಟು ಶ್ರೇಷ್ಠ ಪ್ರಾಣಿಗಳಿಂದ ತುಂಬಿಕೊಂಡಿತ್ತು.

01058025a ತತಃ ಸಮುದಿತೇ ಲೋಕೇ ಮಾನುಷೇ ಭರತರ್ಷಭ|

01058025c ಅಸುರಾ ಜಜ್ಞಿರೇ ಕ್ಷೇತ್ರೇ ರಾಜ್ಞಾಂ ಮನುಜಪುಂಗವ||

ಭರತರ್ಷಭ! ಮನುಜಪುಂಗವ! ಮನುಷ್ಯಲೋಕವು ಸಮೃದ್ದವಾಗಿರುವಾಗ ಅಸುರರು ರಾಜ ಕ್ಷತ್ರಿಯರಲ್ಲಿ ಜನಿಸತೊಡಗಿದರು.

01058026a ಆದಿತ್ಯೈರ್ಹಿ ತದಾ ದೈತ್ಯಾ ಬಹುಶೋ ನಿರ್ಜಿತಾ ಯುಧಿ|

01058026c ಐಶ್ವರ್ಯಾದ್ ಭ್ರಂಶಿತಾಶ್ಚಾಪಿ ಸಂಬಭೂವುಃ ಕ್ಷಿತಾವಿಹ||

ಆದಿತ್ಯರಿಂದ ಬಹಳಷ್ಟು ಬಾರಿ ಯುದ್ಧದಲ್ಲಿ ಸೋತು ಐಶ್ವರ್ಯ ವಂಚಿತ ದೈತ್ಯರು ಕ್ಷಿತಿಯಲ್ಲಿ ಅವತರಿಸಿದರು.

01058027a ಇಹ ದೇವತ್ವಮಿಚ್ಛಂತೋ ಮಾನುಷೇಷು ಮನಸ್ವಿನಃ|

1058027c ಜಜ್ಞಿರೇ ಭುವಿ ಭೂತೇಷು ತೇಷು ತೇಷ್ವಸುರಾ ವಿಭೋ||

01058028a ಗೋಷ್ವಶ್ವೇಷು ಚ ರಾಜೇಂದ್ರ ಖರೋಷ್ಟ್ರಮಹಿಷೇಷು ಚ|

01058028c ಕ್ರವ್ಯಾದೇಷು ಚ ಭೂತೇಷು ಗಜೇಷು ಚ ಮೃಗೇಷು ಚ||

ವಿಭೋ! ರಾಜೇಂದ್ರ! ಮನಸ್ವಿ ಮನುಷ್ಯರಲ್ಲಿ ದೇವತ್ವವನ್ನು ಬಯಸಿ ಆ ಅಸುರರು ಭೂಮಿಯ ಹಲವಷ್ಟು ಜೀವಿಗಳಲ್ಲಿ - ಗೋವುಗಳಲ್ಲಿ, ಕುದುರೆಗಳಲ್ಲಿ, ಕತ್ತೆಗಳಲ್ಲಿ, ಒಂಟೆಗಳಲ್ಲಿ, ಎಮ್ಮೆಗಳಲ್ಲಿ, ಆನೆಗಳಲ್ಲಿ, ಜಿಂಕೆಗಳಲ್ಲಿ ಮತ್ತು ಅನ್ಯ ಜೀವಿಗಳಲ್ಲಿ ಜನಿಸತೊಡಗಿದರು.

01058029a ಜಾತೈರಿಹ ಮಹೀಪಾಲ ಜಾಯಮಾನೈಶ್ಚ ತೈರ್ಮಹೀ|

01058029c ನ ಶಶಾಕಾತ್ಮನಾತ್ಮಾನಮಿಯಂ ಧಾರಯಿತುಂ ಧರಾ||

ಮಹೀಪಾಲ! ಇದಾಗಲೇ ಹುಟ್ಟಿದ್ದ ಮತ್ತು ಇನ್ನೂ ಹುಟ್ಟುತ್ತಿದ್ದವರೆಲ್ಲರನ್ನೂ ಹೊತ್ತು ತನ್ನನ್ನು ತಾನು ಪೋಷಿಸಿಕೊಳ್ಳಲು ಮಹೀಧರೆಯು ಅಸಮರ್ಥಳಾದಳು. 

01058030a ಅಥ ಜಾತಾ ಮಹೀಪಾಲಾಃ ಕೇ ಚಿದ್ಬಲಸಮನ್ವಿತಾಃ|

01058030c ದಿತೇಃ ಪುತ್ರಾ ದನೋಶ್ಚೈವ ತಸ್ಮಾಲ್ಲೋಕಾದಿಹ ಚ್ಯುತಾಃ||

ಅವರ ಲೋಕದಿಂದ ಚ್ಯುತರಾದ ಹಲವು ದಿತಿಯ ಪುತ್ರರು ಇಲ್ಲಿ ಬಲಸಮನ್ವಿತ ಮಹೀಪಾಲರಾಗಿ ಜನಿಸಿದರು.

01058031a ವೀರ್ಯವಂತೋಽವಲಿಪ್ತಾಸ್ತೇ ನಾನಾರೂಪಧರಾ ಮಹೀಂ|

01058031c ಇಮಾಂ ಸಾಗರಪರ್ಯಂತಾಂ ಪರೀಯುರರಿಮರ್ದನಾಃ||

ಆ ವೀರ್ಯವಂತರು ನಾನಾರೂಪಗಳನ್ನು ಧರಿಸಿ ಮಹಿಯಲ್ಲೆಲ್ಲಾ ತುಂಬಿಕೊಂಡರು. ಆ ಅರಿಮರ್ದನರು ಸಾಗರ ಪರ್ಯಂತ ಭೂಮಿಯಲ್ಲಿ ತುಂಬಿಕೊಂಡರು.

01058032a ಬ್ರಾಹ್ಮಣಾನ್ ಕ್ಷತ್ರಿಯಾನ್ವೈಶ್ಯಾಂಶೂದ್ರಾಂಶ್ಚೈವಾಪ್ಯಪೀಡಯನ್|

01058032c ಅನ್ಯಾನಿ ಚೈವ ಭೂತಾನಿ ಪೀಡಯಾಮಾಸುರೋಜಸಾ||

ಅವರು ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರರನ್ನು ಪೀಡಿಸ ತೊಡಗಿದರು ಮತ್ತು ತಮ್ಮ ಅಸುರೀ ಶಕ್ತಿಯಿಂದ ಇನ್ನೂ ಅನ್ಯ ಜೀವಿಗಳನ್ನು ಪೀಡಿಸತೊಡಗಿದರು.

01058033a ತ್ರಾಸಯಂತೋ ವಿನಿಘ್ನಂತಸ್ತಾಂಸ್ತಾನ್ಭೂತಗಣಾಂಶ್ಚ ತೇ||

01058033c ವಿಚೇರುಃ ಸರ್ವತೋ ರಾಜನ್ಮಹೀಂ ಶತಸಹಸ್ರಶಃ||

ರಾಜನ್! ಭೂತಗಣಗಳಿಗೆ ಕಷ್ಟಗಳನ್ನೀಡುತ್ತಾ, ಅವರನ್ನು ಕೊಲ್ಲುತ್ತಾ ಲಕ್ಷ ಲಕ್ಷ ಸಂಖ್ಯೆಗಳಲ್ಲಿ ಮಹಿಯ ಎಲ್ಲೆಲ್ಲೂ ಸಂಚರಿಸುತ್ತಿದ್ದರು.

01058034a ಆಶ್ರಮಸ್ಥಾನ್ಮಹರ್ಷೀಂಶ್ಚ ಧರ್ಷಯಂತಸ್ತತಸ್ತತಃ|

01058034c ಅಬ್ರಹ್ಮಣ್ಯಾ ವೀರ್ಯಮದಾ ಮತ್ತಾ ಮದಬಲೇನ ಚ||

ವೀರ್ಯಮದ ಮತ್ತು ಮದಬಲದಿಂದ ಮತ್ತರಾದ ಆ ಅಬ್ರಾಹ್ಮಣರು ಆಶ್ರಮವಾಸಿ ಮಹರ್ಷಿಗಳನ್ನೂ ಕೂಡ ಕಾಡತೊಡಗಿದರು.

01058035a ಏವಂ ವೀರ್ಯಬಲೋತ್ಸಿಕ್ತೈರ್ಭೂರಿಯಂ ತೈರ್ಮಹಾಸುರೈಃ|

01058035c ಪೀಡ್ಯಮಾನಾ ಮಹೀಪಾಲ ಬ್ರಹ್ಮಾಣಮುಪಚಕ್ರಮೇ|||

ಮಹೀಪಾಲ! ಈ ರೀತಿ ವೀರ್ಯಬಲಗಳನ್ನು ಹೊಂದಿದ ಮಹಾಸುರರಿಂದ ತುಳಿಯಲ್ಪಟ್ಟ ಭೂಮಿಯು ಬ್ರಹ್ಮನ ಬಳಿ ಹೊರಟಳು.

01058036a ನ ಹೀಮಾಂ ಪವನೋ ರಾಜನ್ನ ನಾಗಾ ನ ನಗಾ ಮಹೀಂ|

01058036c ತದಾ ಧಾರಯಿತುಂ ಶೇಕುರಾಕ್ರಾಂತಾಂ ದಾನವೈರ್ಬಲಾತ್||

ರಾಜನ್! ದಾನವರ ಬಲದಿಂದಾಗಿ ಮಹಿಯನ್ನು ಹೊರುತ್ತಿದ್ದ ನಾಗ ಮತ್ತು ಗಜಗಳು ಅವಳನ್ನು ಹೊರಲು ಅಸಮರ್ಥರಾಗಿ ರೋದಿಸುತ್ತಿದ್ದರು.

01058037a ತತೋ ಮಹೀ ಮಹೀಪಾಲ ಭಾರಾರ್ತಾ ಭಯಪೀಡಿತಾ|

01058037c ಜಗಾಮ ಶರಣಂ ದೇವಂ ಸರ್ವಭೂತಪಿತಾಮಹಂ||

ಮಹೀಪಾಲ! ಆಗ ಮಹಿಯು ಭಾರದಿಂದ ಭಯಪೀಡಿತಳಾಗಿ ಸರ್ವಭೂತಪಿತಾಮಹ ದೇವನನ್ನು ಶರಣು ಹೊಕ್ಕಳು.

01058038a ಸಾ ಸಂವೃತಂ ಮಹಾಭಾಗೈರ್ದೇವದ್ವಿಜಮಹರ್ಷಿಭಿಃ|

01058038c ದದರ್ಶ ದೇವಂ ಬ್ರಹ್ಮಾಣಂ ಲೋಕಕರ್ತಾರಮವ್ಯಯಂ||

01058039a ಗಂಧರ್ವೈರಪ್ಸರೋಭಿಶ್ಚ ಬಂದಿಕರ್ಮಸು ನಿಷ್ಠಿತೈಃ|

01058039c ವಂದ್ಯಮಾನಂ ಮುದೋಪೇತೈರ್ವವಂದೇ ಚೈನಮೇತ್ಯ ಸಾ||

ದೇವದ್ವಿಜಮಹರ್ಷಿಗಳಿಂದ ಆವೃತ, ಗಂಧರ್ವ ಮತ್ತು ಅಪ್ಸರೆಯರಿಂದ ನಮಸ್ಕರಿಸಿಕೊಳ್ಳುತ್ತಿರುವ, ಲೋಕಕರ್ತಾರನೂ, ಅವ್ಯಯನೂ ಆದ ಮಹಾಭಾಗ ಬ್ರಹ್ಮದೇವನನ್ನು ಅವಳು ಕಂಡಳು.

01058040a ಅಥ ವಿಜ್ಞಾಪಯಾಮಾಸ ಭೂಮಿಸ್ತಂ ಶರಣಾರ್ಥಿನೀ|

01058040c ಸನ್ನಿಧೌ ಲೋಕಪಾಲಾನಾಂ ಸರ್ವೇಷಾಮೇವ ಭಾರತ||

ಭಾರತ! ಶರಣಾರ್ಥಿನಿಯಾದ ಭೂಮಿಯು ಲೋಕಪಾಲಕರೆಲ್ಲರ ಸನ್ನಿಧಿಯಲ್ಲಿ ಅವನಲ್ಲಿ ವಿಜ್ಞಾಪಿಸಿಕೊಂಡಳು.

01058041a ತತ್ಪ್ರಧಾನಾತ್ಮನಸ್ತಸ್ಯ ಭೂಮೇಃ ಕೃತ್ಯಂ ಸ್ವಯಂಭುವಃ|

01058041c ಪೂರ್ವಮೇವಾಭವದ್ರಾಜನ್ವಿದಿತಂ ಪರಮೇಷ್ಟಿನಃ||

ರಾಜನ್! ಭೂಮಿಯು ಯಾವ ಕಾರಣಕ್ಕಾಗಿ ಅಲ್ಲಿಗೆ ಬಂದಿದ್ದಾಳೆ ಎನ್ನುವುದು ಪರಮೇಷ್ಟಿ ಸ್ವಯಂಭುವಿಗೆ ಮೊದಲೇ ತಿಳಿದಿತ್ತು.

01058042a ಸ್ರಷ್ಟಾ ಹಿ ಜಗತಃ ಕಸ್ಮಾನ್ನ ಸಂಬುಧ್ಯೇತ ಭಾರತ|

01058042c ಸುರಾಸುರಾಣಾಂ ಲೋಕಾನಾಮಶೇಷೇಣ ಮನೋಗತಂ||

ಭಾರತ! ಜಗತ್ತಿನ ಸೃಷ್ಟಿಯನ್ನೇ ಮಾಡುತ್ತಿರುವ ಅವನಿಗೆ ಸುರಾಸುರರ ಮತ್ತು ಉಳಿದ ಲೋಕಗಳ ಮನೋಗತವು ಹೇಗೆ ತಾನೆ ತಿಳಿದಿರುವುದಿಲ್ಲ?

01058043a ತಮುವಾಚ ಮಹಾರಾಜ ಭೂಮಿಂ ಭೂಮಿಪತಿರ್ವಿಭುಃ|

01058043c ಪ್ರಭವಃ ಸರ್ವಭೂತಾನಾಮೀಶಃ ಶಂಭುಃ ಪ್ರಜಾಪತಿಃ||

ಮಹಾರಾಜ! ಭೂಮಿಪತಿಗಳ ವಿಭು, ಸರ್ವಭೂತಗಳ ಈಶ, ಶಂಭು, ಪ್ರಜಾಪತಿಯು ಭೂಮಿಗೆ ಹೇಳಿದನು:

01058044a ಯದರ್ಥಮಸಿ ಸಂಪ್ರಾಪ್ತಾ ಮತ್ಸಕಾಶಂ ವಸುಂಧರೇ|

01058044c ತದರ್ಥಂ ಸನ್ನಿಯೋಕ್ಷ್ಯಾಮಿ ಸರ್ವಾನೇವ ದಿವೌಕಸಃ||

 “ವಸುಂಧರೆ! ನನ್ನ ಸನ್ನಿಧಿಯಲ್ಲಿ ಯಾವ ಕಾರಣಕ್ಕಾಗಿ ಬಂದಿರುವೆಯೋ ಅ ಕೆಲಸಕ್ಕೆ ಸರ್ವ ದಿವೌಕಸರನ್ನೂ ನಿಯೋಜಿಸುತ್ತೇನೆ.”

01058045a ಇತ್ಯುಕ್ತ್ವಾ ಸ ಮಹೀಂ ದೇವೋ ಬ್ರಹ್ಮಾ ರಾಜನ್ವಿಸೃಜ್ಯ ಚ|

01058045c ಆದಿದೇಶ ತದಾ ಸರ್ವಾನ್ವಿಬುಧಾನ್ಭೂತಕೃತ್ಸ್ವಯಂ||

01058046a ಅಸ್ಯಾ ಭೂಮೇರ್ನಿರಸಿತುಂ ಭಾರಂ ಭಾಗೈಃ ಪೃಥಕ್ ಪೃಥಕ್|

01058046c ಅಸ್ಯಾಮೇವ ಪ್ರಸೂಯಧ್ವಂ ವಿರೋಧಾಯೇತಿ ಚಾಬ್ರವೀತ್||

ರಾಜನ್! ಈ ರೀತಿ ಹೇಳಿ ದೇವನು ಮಹಿಯನ್ನು ಕಳುಹಿಸಿಕೊಟ್ಟ ನಂತರ ಸರ್ವ ದೇವತೆಗಳಿಗೆ ಈ ರೀತಿ ಆದೇಶವನ್ನಿತ್ತನು: “ಭೂಮಿಯ ಭಾರವನ್ನು ಕಡಿಮೆಮಾಡಲೋಸುಗ ನೀವೆಲ್ಲರು ನಿಮ್ಮ ನಿಮ್ಮ ಅಂಶಗಳನ್ನು ಅಲ್ಲಿ ಅವರಿಗೆ ವಿರೋಧಿಗಳಾಗಿ ಹುಟ್ಟಿಸಿ.”

01058047a ತಥೈವ ಚ ಸಮಾನೀಯ ಗಂಧರ್ವಾಪ್ಸರಸಾಂ ಗಣಾನ್|

01058047c ಉವಾಚ ಭಗವಾನ್ಸರ್ವಾನಿದಂ ವಚನಮುತ್ತಮಂ|

01058047e ಸ್ವೈರಂಶೈಃ ಸಂಪ್ರಸೂಯಧ್ವಂ ಯಥೇಷ್ಟಂ ಮಾನುಷೇಷ್ವಿತಿ||

ಹಾಗೆಯೇ ಗಂಧರ್ವ ಮತ್ತು ಅಪ್ಸರೆಯರ ಎಲ್ಲ ಗಣಗಳನ್ನೂ ಕರೆದು ಭಗವಂತನು “ನಿಮ್ಮ ನಿಮ್ಮ ಅಂಶಗಳಲ್ಲಿ ಮನುಷ್ಯರಲ್ಲಿ ಯಥೇಚ್ಚವಾಗಿ ಜನ್ಮತಾಳಿ” ಎಂದು ಉತ್ತಮ ಮಾತುಗಳನ್ನಾಡಿದನು.

01058048a ಅಥ ಶಕ್ರಾದಯಃ ಸರ್ವೇ ಶ್ರುತ್ವಾ ಸುರಗುರೋರ್ವಚಃ|

01058048c ತಥ್ಯಮರ್ಥ್ಯಂ ಚ ಪಥ್ಯಂ ಚ ತಸ್ಯ ತೇ ಜಗೃಹುಸ್ತದಾ||

ಶಕ್ರಾದಿ ಸರ್ವರೂ ಸುರಗುರುವಿನ ಈ ತತ್ವಯುತ, ಅರ್ಥಯುತ ಒಳ್ಳೆಯ ಮಾತುಗಳನ್ನು ಕೇಳಿ ಅದನ್ನು ಸ್ವೀಕರಿಸಿದರು.

01058049a ಅಥ ತೇ ಸರ್ವಶೋಽಂಶೈಃ ಸ್ವೈರ್ಗಂತುಂ ಭೂಮಿಂ ಕೃತಕ್ಷಣಾಃ|

01058049c ನಾರಾಯಣಮಮಿತ್ರಘ್ನಂ ವೈಕುಂಠಮುಪಚಕ್ರಮುಃ||

01058050a ಯಃ ಸ ಚಕ್ರಗದಾಪಾಣಿಃ ಪೀತವಾಸಾಸಿತಪ್ರಭಃ|

01058050c ಪದ್ಮನಾಭಃ ಸುರಾರಿಘ್ನಃ ಪೃಥುಚಾರ್ವಂಚಿತೇಕ್ಷಣಃ||

ಅದರಂತೆ ತಮ್ಮ ತಮ್ಮ ಅಂಶಗಳಲ್ಲಿ ಭೂಮಿಗೆ ಹೋಗಿ ಜನಿಸುವ ನಿಶ್ಚಯಮಾಡಿದ ಸರ್ವರೂ ವೈಕುಂಠದಲ್ಲಿರುವ ಅಮಿತ್ರಘ್ನ ನಾರಾಯಣನಲ್ಲಿಗೆ ಹೋದರು. ಅಲ್ಲಿ ಅವರು ಚಕ್ರಗದಾಪಾಣಿ, ಪೀತವಸ್ತ್ರದಲ್ಲಿ ಅಸಿತಪ್ರಭನಾಗಿ ಶೋಭಿಸುತ್ತಿರುವ ಸುರಾರಿಘ್ನ, ತನ್ನ ವಿಶಾಲ ಎದೆಯನ್ನೇ ನೋಡುತ್ತಿದ್ದ, ಪದ್ಮನಾಭನನ್ನು ಕಂಡರು.

[1]01058051a ತಂ ಭುವಃ ಶೋಧನಾಯೇಂದ್ರ ಉವಾಚ ಪುರುಷೋತ್ತಮಂ|

01058051c ಅಂಶೇನಾವತರಸ್ವೇತಿ ತಥೇತ್ಯಾಹ ಚ ತಂ ಹರಿಃ||

ಪುರುಷೋತ್ತಮನಿಗೆ ಇಂದ್ರನು “ಭೂಮಿಯಲ್ಲಿ ಅವತರಿಸು” ಎನ್ನಲಾಗಿ ಹರಿಯು “ಹಾಗೆಯೇ ಆಗಲಿ” ಎಂದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಅಂಶಾವತರಣಪರ್ವಣಿ ಅಷ್ಟಪಂಚಾಶತ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಅಂಶಾವತರಣ ಪರ್ವದಲ್ಲಿ ಐವತ್ತೆಂಟನೆಯ ಅಧ್ಯಾಯವು.

[1] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕವಿದೆ: ಪ್ರಜಾಪತಿಪತಿರ್ದೇವಃ ಸುರನಾಥೋ ಮಹಾಬಲಃ| ಶ್ರೀವತ್ಸಾಂಕೋ ಹೃಷೀಕೇಶಃ ಸರ್ವದೈವತಪೂಜಿತಃ||

Comments are closed.