ಹದಿನೆಂಟನೇ ದಿನದ ಸಾಯಂಕಾಲ ಅಶ್ವತ್ಥಾಮನಿಗೆ ಕುರುಸೇನಾಪತ್ಯದ ಅಭಿಷೇಕ

ವಾರ್ತಾವಾಹಿಗಳಿಂದ ದುರ್ಯೋಧನನು ಹತನಾದನೆಂದು ಕೇಳಿ ಹತರಾಗದೇ ಉಳಿದಿದ್ದ ಆದರೆ ನಿಶಿತ ಬಾಣಗಳಿಂದ, ಗದೆ-ತೋಮರ-ಶಕ್ತಿಗಳ ಹೊಡೆತದಿಂದ ಗಾಯಗೊಂಡಿದ್ದ ಕೌರವರ ಮಹಾರಥರುಅಶ್ವತ್ಥಾಮ, ಕೃಪ ಮತ್ತು ಸಾತ್ವತ ಕೃತವರ್ಮರುತ್ವರೆಮಾಡಿ ವೇಗಶಾಲೀ ಕುದುರೆಗಳೊಂದಿಗೆ ರಣರಂಗಕ್ಕೆ ತಲುಪಿದರು. ಅಲ್ಲಿ ಅವರು ಚಂಡಮಾರುತದಿಂದ ವನದಲ್ಲಿ ಮುರಿದುಬಿದ್ದ ಮಹಾಶಾಲ ವೃಕ್ಷದಂತೆ ಕೆಳಗೆ ಬಿದ್ದಿದ್ದ ಮಹಾತ್ಮ ಧಾರ್ತರಾಷ್ಟ್ರನನ್ನು ನೋಡಿದರು. ಅರಣ್ಯದಲ್ಲಿ ವ್ಯಾಧನಿಂದ ಕೆಳಗುರುಳಿಸಲ್ಪಟ್ಟ ಮಹಾಗಜದಂತೆ ಅವನು ರಕ್ತದಲ್ಲಿ ತೋಯ್ದುಹೋಗಿ ನೆಲದಮೇಲೆ ಚಡಪಡಿಸುತ್ತಿದ್ದನು. ರಕ್ತದ ಕೋಡಿಯಲ್ಲಿಯೇ ಮುಳುಗಿ ಹೋಗಿ ಪ್ರಾಣಸಂಕಟದಿಂದ ಹೊರಳಾಡುತ್ತಿದ್ದ ಅವನು ತನ್ನ ಇಚ್ಛೆಯಿಂದಲೇ ಕೆಳಗೆ ಬಿದ್ದಿದ್ದ ಸೂರ್ಯನ ಚಕ್ರದಂತೆ ಕಾಣುತ್ತಿದ್ದನು. ಮೇಲೆದ್ದ ಭಿರುಗಾಳಿಯಿಂದ ಒಣಗಿದ ಸಾಗರದಂತೆ ಮತ್ತು ಹಿಮದಿಂದ ಆವೃತವಾದ ಆಕಾಶಮಂಡಲದಿಂದ ಕೂಡಿದ ಪೂರ್ಣಚಂದ್ರನಂತೆ ದುರ್ಯೋಧನನು ಕಾಣುತ್ತಿದ್ದನು. ಮಾತಂಗಸಮ ವಿಕ್ರಮಿಯಾಗಿದ್ದ ದೀರ್ಘಭುಜ ನೃಪತಿಸತ್ತಮನು ಧೂಳಿನಿಂದ ತುಂಬಿಹೋಗಿದ್ದು, ಧನವನ್ನು ಕಸಿದುಕೊಳ್ಳುವ ಇಚ್ಛೆಯಿಂದ ಸೇವಕರು ಮುತ್ತುವಂತೆ ಸುತ್ತಲೂ ಘೋರ ಭೂತಗಣಗಳಿಂದಲೂ ಮಾಂಸಾಶಿ ಮೃಗ-ಪಕ್ಷಿಗಳಿಂದಲೂ ಆವೃತನಾಗಿದ್ದನು. ಕೆಳಗುರುಳಿ ಸಿಟ್ಟಾಗಿದ್ದ ವ್ಯಾಘ್ರನಂತಿದ್ದ ನರವ್ಯಾಘ್ರನು ಕ್ರೋಧದಿಂದ ಗಂಟುಕಟ್ಟಿದ್ದ ಹುಬ್ಬುಗಳು ಬಾಯಿಯವರೆಗೂ ಪ್ರಸರಿಸಿದ್ದವು. ಕಣ್ಣುಗಳು ಹೊರಚಾಚಿದಂತಿದ್ದವು. ಭೂತಲದಲ್ಲಿ ಬಿದ್ದಿರುವ ನೃಪನನ್ನು ಕಂಡು ಕೃಪನೇ ಮೊದಲಾದ ಮಹೇಷ್ವಾಸ ಮಹಾರಥರಿಗೆ ಮೋಹವು ಆವೇಶಗೊಂಡಿತು. ರಥದಿಂದ ಕೆಳಗಿಳಿದು ರಾಜಸನ್ನಿಧಿಗೆ ಓಡಿಬಂದು ದುರ್ಯೋಧನನನ್ನು ನೋಡಿ ಎಲ್ಲರೂ ನೆಲದ ಮೇಲೆ ಕುಳಿತುಕೊಂಡರು.

ಆಗ ಕಂಬನಿದುಂಬಿದ ಕಣ್ಣುಗಳಿಂದ ಕೂಡಿದ್ದ ದ್ರೌಣಿಯು ನಿಟ್ಟುಸಿರು ಬಿಡುತ್ತಾ ಸರ್ವ ಲೋಕೇಶ್ವರೇಶ್ವರ ಭರತಶ್ರೇಷ್ಠನಿಗೆ ಹೀಗೆಂದನು: “ಪುರುಷವ್ಯಾಘ್ರ! ನಿನ್ನಂತವನೇ ಕೆಸರಿನಿಂದ ಒರಳಾಡುತ್ತಿರುವಂತಾಯಿತೆಂದರೆ ಮನುಷ್ಯನಿಗೆ ಸಹಿಸಲಾಗದಂತದು ಕಿಂಚಿತ್ತೂ ಇಲ್ಲವೆಂದಾಯಿತಲ್ಲವೇ? ಹಿಂದೆ ನೃಪತಿಯಾಗಿ ಇಡೀ ಮೇದಿನಿಗೇ ಆಜ್ಞೆನೀಡುತ್ತಿದ್ದ ನೀನು ಇಂದು ಏಕಾಂಗಿಯಾಗಿ ನಿರ್ಜನ ವನದಲ್ಲಿ ಹೇಗಿರುವೆ? ದುಃಶಾಸನನನ್ನು ಕಾಣುತ್ತಿಲ್ಲ. ಮಹಾರಥ ಕರ್ಣನೂ ಕಾಣುತ್ತಿಲ್ಲ. ಸರ್ವ ಸುಹೃದ್ಗಣಗಳನ್ನೂ ಕಾಣುತ್ತಿಲ್ಲ! ಹೀಗೇಕಾಯಿತು? ಕೆಸರಿನಲ್ಲಿ ಹೊರಳಾಡುತ್ತಾ ನೀನು ಮಲಗಿರುವುದನ್ನು ನೋಡಿದರೆ ಕೃತಾಂತನು ಲೋಕಗಳನ್ನು ನಡೆಸುವ ಮತ್ತು ದುಃಖವನ್ನು ತಂದೊಡ್ಡುವುದನ್ನು ಅರಿತುಕೊಳ್ಳುವುದು ಕಷ್ಟಸಾಧ್ಯ ಎಂದೆನಿಸುತ್ತದೆ. ಮೂರ್ಧಾಭಿಷಿಕ್ತರಾದ ರಾಜರ ಮುಂದಾಳುವಾಗಿದ್ದ ಪರಂತಪನು ಹುಲ್ಲಿನೊಂದಿಗೆ ಮಿಶ್ರಣವಾಗಿರುವ ಧೂಳನ್ನು ತಿನ್ನುತ್ತಿದ್ದಾನೆ! ಕಾಲದ ವೈಪರೀತ್ಯವನ್ನಾದರೂ ನೋಡಿ! ನಿನ್ನ ಅಮಲ ಚತ್ರವೆಲ್ಲಿ? ನಿನ್ನ ಚಾಮರವೆಲ್ಲಿ? ಪಾರ್ಥಿವೋತ್ತಮ! ನಿನ್ನ ಮಹಾಸೇನೆಯು ಎಲ್ಲಿ ಹೋಯಿತು? ಲೋಕಗುರುವಾಗಿದ್ದ ನಿನಗೆ ದಶೆಯುಂಟಾಯಿತೆಂದರೆ ಆಗು ಹೋಗುಗಳ ಕಾರಣಗಳನ್ನು ತಿಳಿದುಕೊಳ್ಳುವುದು ಕಷ್ಟವೆಂದಾಯಿತಲ್ಲವೇ? ಸಂಪತ್ತಿನಲ್ಲಿ ಶಕ್ರನೊಡನೆ ಕೂಡ ಸ್ಪರ್ಧಿಸುವಂತಿದ್ದ ನಿನಗೇ ವ್ಯಸನವುಂಟಾಯಿತೆಂದರೆ ಸರ್ವ ಮನುಷ್ಯರಲ್ಲಿ ಸಂಪತ್ತು ಅನಿಶ್ಚಿತವಾದುದು ಎನ್ನುವುದು ನಿಶ್ಚಯ!”

ವಿಶೇಷವಾಗಿ ದುಃಖಿತನಾಗಿದ್ದ ಅವನ ಮಾತನ್ನು ಕೇಳಿ ದುರ್ಯೋಧನನು ಶೋಕದಿಂದ ಉಕ್ಕಿಬರುತ್ತಿದ್ದ ಕಣ್ಣೀರನ್ನು ಎರಡೂ ಕೈಗಳಿಂದ ಒರೆಸಿಕೊಳ್ಳುತ್ತಾ ಕೃಪನೇ ಮೊದಲಾದ ಸರ್ವ ವೀರರಿಗೆ ಸಮಯಕ್ಕೆ ತಕ್ಕುದಾದ ಮಾತನ್ನಾಡಿದನು: “ಕಾಲದ ಉರುಳುವಿಕೆಯಿಂದ ಸರ್ವಭೂತಗಳ ವಿನಾಶವಾಗುತ್ತದೆ. ಇದೇ ಮನುಷ್ಯಧರ್ಮವೆಂದೂ ಇದನ್ನು ಧಾತಾರನೇ ನಿರ್ಧರಿಸಿದ್ದಾನೆಂದೂ ಹೇಳುತ್ತಾರೆ. ಅದೇ ವಿನಾಶವನ್ನು ನಾನು ನಿಮ್ಮ ಸಮಕ್ಷಮದಲ್ಲಿ ಹೊಂದಿದ್ದೇನೆ. ಪೃಥ್ವಿಯನ್ನು ಪಾಲಿಸುತ್ತಿದ್ದ ನಾನು ಪರಿಸ್ಥಿತಿಯನ್ನು ಹೊಂದಿದ್ದೇನೆ. ಒಳ್ಳೆಯದಾಯಿತು! ನಾನು ಯುದ್ಧದಿಂದ ಎಂದೂ ಹಿಂದೆಸರಿಯಲಿಲ್ಲ! ಒಳ್ಳೆಯದಾಯಿತು! ಪಾಪಿಷ್ಟರು ನನ್ನನ್ನು ಮೋಸದಿಂದಲೇ ಕೊಂದರು! ಒಳ್ಳೆಯದಾಯಿತು! ನಾನು ನಿತ್ಯವೂ ಉತ್ಸಾಹದಿಂದಲೇ ಯುದ್ಧಮಾಡಿದೆ! ಒಳ್ಳೆಯದಾಯಿತು! ನನ್ನ ಜ್ಞಾತಿಬಾಂಧವರೆಲ್ಲರೂ ಯುದ್ಧದಲ್ಲಿ ಹತನಾದ ನಂತರವೇ ನಾನು ಹತನಾದೆನು! ಒಳ್ಳೆಯದಾಯಿತು! ಜನಕ್ಷಯಯುದ್ಧದಿಂದ ಮುಕ್ತರಾಗಿರುವ ನಿಮ್ಮನ್ನು ನಾನು ನೋಡುತ್ತಿದ್ದೇನೆ! ಕುಶಲರಾಗಿರುವಿರಿ ಮತ್ತು ಕಾರ್ಯಸಮರ್ಥರಾಗಿದ್ದೀರಿ ಎಂದು ನೋಡಿ ಅತ್ಯಂತ ಸಂತೋಷವೂ ಆಗಿದೆ. ನನ್ನ ನಿಧನದ ಕುರಿತು ಸ್ನೇಹಭಾವದಿಂದ ನೀವು ಪರಿತಪಿಸಬೇಕಾಗಿಲ್ಲ! ವೇದಗಳಿಗೆ ಪ್ರಮಾಣವಿವೆಯೆಂದಾದರೆ ನಾನು ಅಕ್ಷಯ ಲೋಕಗಳನ್ನು ಗೆದ್ದುಕೊಂಡಿದ್ದೇನೆ! ಕೃಷ್ಣನ ಪ್ರಭಾವವನ್ನು ತಿಳಿದುಕೊಂಡಿದ್ದರೂ ಅವನ ಪ್ರೇರಣೆಗೆ ಬಾರದೇ ನಾನು ಕ್ಷತ್ರಧರ್ಮದಲ್ಲಿಯೇ ನಿರತನಾಗಿದ್ದೆ! ಕ್ಷತ್ರಧರ್ಮದ ಫಲವನ್ನು ನಾನು ಪಡೆದುಕೊಂಡಿದ್ದೇನೆ. ಅದರಲ್ಲಿ ಶೋಕಿಸುವಂತಾದ್ದು ಏನೂ ಇಲ್ಲ. ನೀವು ನಿಮಗೆ ಅನುರೂಪವಾದ ರೀತಿಗಳಲ್ಲಿ ಯುದ್ಧಮಾಡಿರುವಿರಿ! ನಿತ್ಯವೂ ನನ್ನ ವಿಜಯಕ್ಕೆ ಪ್ರಯತ್ನಿಸಿದರೂ ದೈವವನ್ನು ಅತಿಕ್ರಮಿಸಲು ಯಾರಿಗೂ ಸಾಧ್ಯವಿಲ್ಲ!”

ಹೀಗೆ ಹೇಳಿ ಪ್ರಾಣಪ್ರಯಾಣದಿಂದ ತುಂಬಾ ವಿಹ್ವಲನಾಗಿದ್ದ ರಾಜೇಂದ್ರನು ಕಣ್ಣೀರು ಮತ್ತು ವ್ಯಾಕುಲಗಳು ಅವನ ಕಣ್ಣುಗಳನ್ನು ತುಂಬಿರಲು ಸುಮ್ಮನಾದನು. ಹಾಗೆ ಬಾಷ್ಪಶೋಕಸಮನ್ವಿತನಾದ ರಾಜನನ್ನು ನೋಡಿ ದ್ರೌಣಿಯು ಜಗತ್ ಕ್ಷಯದಲ್ಲಿ ವಹ್ನಿಯು ಹೇಗೋ ಹಾಗೆ ಕ್ರೋಧದಿಂದ ಪ್ರಜ್ವಲಿಸಿದನು. ಅವನಾದರೋ ಕೈಯಿಂದ ಕೈಯನ್ನು ಉಜ್ಜಿಕೊಳ್ಳುತ್ತಾ ರಾಜನಿಗೆ ಬಾಷ್ಪವಿಹ್ವಲ ಮಾತುಗಳನ್ನಾಡಿದನು: “ ಕ್ಷುದ್ರರು ಅತ್ಯಂತ ಕ್ರೂರಕರ್ಮದಿಂದ ನನ್ನ ತಂದೆಯನ್ನು ಸಂಹರಿಸಿದಾಗಲೂ ಇಂದು ನಿನ್ನ ಪರಿಸ್ಥಿತಿಯನ್ನು ನೋಡಿ ಪರಿತಾಪಪಡುವಷ್ಟು ಪರಿತಪಿಸಿರಲಿಲ್ಲ. ಪ್ರಭೋ! ನಾನು ಪೂರೈಸಿದ ಇಷ್ಟಿಗಳ, ದಾನ-ಧರ್ಮ ಮತ್ತು ಸುಕೃತಗಳ ಮೇಲೆ ಆಣೆಯನ್ನಿಟ್ಟು ಹೇಳುವ ನನ್ನ ಸತ್ಯವಚನವನ್ನು ಕೇಳು! ಇಂದು ನಾನು ವಾಸುದೇವನು ನೋಡುತ್ತಿದ್ದಂತೆಯೇ ಸರ್ವಪಾಂಚಾಲರನ್ನು ಸರ್ವೋಪಾಯಗಳನ್ನು ಬಳಸಿ ಪ್ರೇತರಾಜನ ನಿವೇಶನಕ್ಕೆ ಕಳುಹಿಸುತ್ತೇನೆ. ನೀನು ನನಗೆ ಅನುಜ್ಞೆಯನ್ನು ನೀಡಬೇಕು!”

ಮನಸ್ಸಿಗೆ ಸಂತೋಷವನ್ನುಂಟುಮಾಡಿದ ದ್ರೋಣಪುತ್ರನ ಮಾತನ್ನು ಕೇಳಿ ಕೌರವನು ಕೃಪನಿಗೆಆಚಾರ್ಯ! ಶೀಘ್ರವಾಗಿ ಜಲಪೂರ್ಣ ಕಲಶವನ್ನು ತರಿಸಿ!” ಎಂದು ಹೇಳಿದನು. ರಾಜನ ಮಾತನ್ನು ಕೇಳಿ ಬ್ರಾಹ್ಮಣಸತ್ತಮನು ಪೂರ್ಣಕಲಶವನ್ನು ಹಿಡಿದು ರಾಜನ ಬಳಿಬಂದನು. ಅವನಿಗೆ ದುರ್ಯೋಧನನು ಹೇಳಿದನು: “ದ್ವಿಜಶ್ರೇಷ್ಠ! ನಿಮಗೆ ಮಂಗಳವಾಗಲಿ! ನನಗೆ ಪ್ರಿಯವಾದುದನ್ನು ಬಯಸುವಿರಾದರೆ ನನ್ನ ಆಜ್ಞೆಯಂತೆ  ದ್ರೋಣಪುತ್ರನನ್ನು ಸೇನಪತ್ಯದಿಂದ ಅಭಿಷೇಕಿಸಿರಿ! ರಾಜನ ನಿಯೋಗದಂತೆ ಯುದ್ಧಮಾಡಬೇಕು! ಅದರಲ್ಲೂ ವಿಶೇಷವಾಗಿ ಕ್ಷತ್ರಧರ್ಮದಿಂದ ವರ್ತಿಸುವ ಬ್ರಾಹ್ಮಣನು ಹೀಗೇ ಮಾಡಬೇಕೆಂದು ಧರ್ಮವಿದರು ತಿಳಿಸುತ್ತಾರೆ.”

ರಾಜನ ಮಾತನ್ನು ಕೇಳಿ ಶಾರದ್ವತ ಕೃಪನು ರಾಜನ ನಿಯೋಗದಂತೆ ದ್ರೌಣಿಯನ್ನು ಸೇನಾಪತಿಯಾಗಿ ಅಭಿಷೇಕಿಸಿದನು. ಹಾಗೆ ಅಭಿಷಿಕ್ತನಾದ ಅಶ್ವತ್ಥಾಮನು ನೃಪೋತ್ತಮನನ್ನು ಆಲಂಗಿಸಿ ಸರ್ವ ದಿಶಗಳಲ್ಲಿಯೂ ಪ್ರತಿಧ್ವನಿಯಾಗುವಂತೆ ಸಿಂಹನಾದ ಮಾಡುತ್ತಾ ಹೊರಟುಹೋದನು. ರಕ್ತದಿಂದ ತೋಯ್ದುಹೋಗಿದ್ದ ದುರ್ಯೋಧನನಾದರೋ ಸರ್ವಭೂತಗಳಿಗೂ ಭಯಂಕರವಾಗಿದ್ದ ರಾತ್ರಿಯನ್ನು ಅಲ್ಲಿಯೇ ಕಳೆದನು. ಅಲ್ಲಿಂದ ಶೀಘ್ರವಾಗಿ ಹೊರಟುಹೋದ ಅವರು ಶೋಕಸಂವಿಗ್ನಮನಸ್ಕರಾಗಿ ಚಿಂತಾಧ್ಯಾನಪರರಾದರು.

Leave a Reply

Your email address will not be published. Required fields are marked *