ಹನ್ನೊಂದನೇ ದಿನದ ಯುದ್ಧ: ದ್ರೋಣಸೇನಾಪತ್ಯ
ಕರ್ಣನ ರಣಯಾತ್ರೆ
ಸತ್ಯಪರಾಕ್ರಮಿ ಭೀಷ್ಮನು ನಿಹತನಾಗಲು ಕೌರವರು ಮತ್ತು ಪಾಂಡವೇಯರು ಪ್ರತ್ಯೇಕ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿದರು. ಕ್ಷತ್ರಧರ್ಮವನ್ನು ವಿಮರ್ಶಿಸಿ ವಿಸ್ಮಿತರೂ ಪ್ರಹೃಷ್ಟರೂ ಆದ ಅವರು ಸ್ವಧರ್ಮವನ್ನು ನಿಂದಿಸುತ್ತಾ ಆ ಮಹಾತ್ಮ ಅಮಿತತೇಜಸ್ವಿ ಭೀಷ್ಮನಿಗೆ ನಮಸ್ಕರಿಸಿ ಸನ್ನತಪರ್ವ ಶರಗಳಿಂದ ಅವನಿಗೆ ಶಯನವನ್ನೂ ತಲೆದಿಂಬನ್ನೂ ಮಾಡಿದರು. ಕಾಲಚೋದಿತ ಕ್ಷತ್ರಿಯರು ಪರಸ್ಪರರಲ್ಲಿ ಮಾತನಾಡಿಕೊಂಡು ಗಾಂಗೇಯ ಭೀಷ್ಮನಿಗೆ ರಕ್ಷಣಾವ್ಯವಸ್ಥೆಯನ್ನು ಏರ್ಪಡಿಸಿ, ಪ್ರದಕ್ಷಿಣೆಮಾಡಿ ಅವನ ಅನುಮತಿಯನ್ನು ಪಡೆದು, ಕ್ರೋಧದಿಂದ ಕೆಂಪಾದ ಕಣ್ಣುಗಳಿಂದ ಪರಸ್ಪರರನ್ನು ನೋಡುತ್ತಾ ಪುನಃ ಯುದ್ಧಮಾಡಲು ತೆರಳಿದರು. ಆಗ ತೂರ್ಯ-ಭೇರಿ ನಿನಾದದ ಮಹಾಸ್ವನಗಳೊಂದಿಗೆ ನಿನ್ನವರ ಮತ್ತು ಶತ್ರುಗಳ ಸೇನೆಗಳು ಹಿಂದಿರುಗಿದವು.
ಜಾಹ್ನವೀ ಸುತನ ಪತನದ ಮರುದಿನ ಕಾಲಪ್ರಭಾವದಿಂದ ಹತ ಚೇತಸರಾಗಿದ್ದ ಆ ಎಲ್ಲ ಭರತಶ್ರೇಷ್ಠರೂ ಮಹಾತ್ಮ ಗಾಂಗೇಯನ ವಚನವನ್ನು ಅನಾದರಿಸಿ ಕೋಪಾವೇಶಗೊಂಡವರಾಗಿ ಶಸ್ತ್ರಗಳೊಂದಿಗೆ ಹಿಂದಿರುಗಿದರು. ಧೃತರಾಷ್ಟ್ರ ಮತ್ತು ಅವನ ಮಗ ದುರ್ಯೊಧನನ ಮೋಹದಿಂದಾಗಿ ಮತ್ತು ಶಾಂತನವನ ವಧೆಯಿಂದಾಗಿ ಎಲ್ಲ ರಾಜರ ಸಹಿತ ಕೌರವ್ಯರು ಮೃತರಾದಂತೆಯೇ ತೋರಿದರು. ದೇವವ್ರತನಿಲ್ಲದೇ ಅವರು ವನದಲ್ಲಿ ಹಿಂಸಮೃಗಗಳ ಮಧ್ಯದಲ್ಲಿ ರಕ್ಷಣೆಯೇ ಇಲ್ಲದ ಗೋವುಗಳಂತೆ ತುಂಬಾ ಉದ್ವಿಗ್ನಮನಸ್ಕರಾಗಿದ್ದರು. ಭರತಶ್ರೇಷ್ಠನು ಕೆಳಗುರುಳಲು ಕುರುವಾಹಿನಿಯು ನಕ್ಷತ್ರವಿಲ್ಲದ ಆಕಾಶದಂತಾಯಿತು. ಗಾಳಿಯೇ ಇಲ್ಲದ ಅಂತರಿಕ್ಷದಂತಾಯಿತು. ಸಸ್ಯಗಳು ನಾಶವಾದ ಭೂಮಿಯಂತಾಯಿತು. ಅಸಂಸ್ಕೃತ ಮಾತಿನಂತಾಯಿತು. ಹಿಂದೆ ಬಲಿಯಿಲ್ಲದೇ ಅಸ್ತವ್ಯಸ್ತವಾಗಿದ್ದ ಅಸುರೀ ಸೇನೆಯಂತಾಯಿತು. ವಿಧವೆಯಾದ ಸುಂದರಿಯಂತೆ, ಒಣಗಿದ ನದಿಯಂತೆ, ವನದಲ್ಲಿ ಗಂಡುಜಿಂಕೆಯನ್ನು ಕಳೆದುಕೊಂಡು ತೋಳಗಳಿಂದ ಸುತ್ತುವರೆಯಲ್ಪಟ್ಟ ಹೆಣ್ಣುಜಿಂಕೆಯಂತೆ ಕಂಡಿತು. ಜಾಹ್ನವೀಸುತನು ಬೀಳಲು ಭಾರತ ಸೇನೆಯು ಸಿಂಹವನ್ನು ಕಳೆದುಕೊಂಡ ಗಿರಿಕಂದರದ ಮಹಾ ಗುಹೆಯಂತಾಯಿತು. ಬಲಶಾಲಿ ವೀರ ಪಾಂಡವರಿಂದ ಮರ್ದಿತವಾದ ಕೌರವ ಸೈನ್ಯವು ನಾಲ್ಕೂ ಕಡೆಗಳಿಂದ ಬೀಸುವ ಭಿರುಗಾಳಿಗೆ ಸಿಲುಕಿ ಮಹಾಸಾಗರದಲ್ಲಿ ಮುರಿಯುತ್ತಿರುವ ನೌಕೆಯಂತಾಯಿತು. ಆ ಸೇನೆಯಲ್ಲಿದ್ದ ಅಶ್ವ-ರಥ-ಪದಾತಿಗಳು ತುಂಬಾ ವ್ಯಾಕುಲವಾಗಿದ್ದವು. ಸೈನಿಕರು ವಿಷಣ್ಣರಾಗಿದ್ದರು. ದೀನರಾಗಿ ಕಾಣುತ್ತಿದ್ದರು. ದೇವವ್ರತನಿಲ್ಲದೇ ತ್ರಸ್ತರಾದ ನೃಪತಿ-ಸೈನಿಕರು ಪಾತಾಳದಲ್ಲಿ ಮುಳುಗಿ ಹೋಗುತ್ತಿರುವರೋ ಎನ್ನುವಂತಿರಲು ಕುರುಗಳು ದೇವವ್ರತನಂತಿರುವ ಕರ್ಣನನ್ನೇ ಸ್ಮರಿಸಿಕೊಂಡರು. ಮಧ್ಯಾಹ್ನದ ಸಮಯದಲ್ಲಿ ಸದ್ಗೃಹಸ್ತನು ಅತಿಥಿಯನ್ನು ಹೇಗೋ ಹಾಗೆ ಮತ್ತು ಆಪತ್ತಿನಲ್ಲಿರುವವರು ಬಂಧು-ಮಿತ್ರರನ್ನು ಹೇಗೋ ಹಾಗೆ ಅವರು ಆ ಸರ್ವಶಸ್ತ್ರಭೃತಶ್ರೇಷ್ಠನನ್ನು ಮನಸ್ಸಿನಲ್ಲಿ ಧ್ಯಾನಿಸಿದರು. ಪಾರ್ಥಿವರು ಅಲ್ಲಿ “ಕರ್ಣ! ಕರ್ಣ!” ಎಂದು ಕೂಗಿಕೊಂಡರು. ಅವರು ಹೀಗೆ ಮಾತನಾಡಿದರು: “ನಮ್ಮ ಹಿತಕ್ಕಾಗಿ ದೇಹವನ್ನೇ ಮುಡುಪಾಗಿಸಿರುವ ಸೂತಪುತ್ರ ರಾಧೇಯ ಕರ್ಣನನ್ನು ಅಮಾತ್ಯಬಂಧುಗಳೊಂದಿಗೆ ಬೇಗನೇ ಕರೆತನ್ನಿರಿ! ಆ ಮಹಾಯಶಸ್ವಿಯು ತನ್ನದೇ ಮಾತಿನಂತೆ ಈ ಹತ್ತು ದಿವಸಗಳು ಯುದ್ಧವನ್ನು ಮಾಡಲಿಲ್ಲ. ಏಕೆಂದರೆ ಮಹಾಬಾಹು ಭೀಷ್ಮನು ಸರ್ವ ಕ್ಷತ್ರಿಯರೂ ನೋಡುತ್ತಿದ್ದಂತೆ ಬಲವಿಕ್ರಮಶಾಲಿ ರಥಿಗಳನ್ನು ಗಣಿಸುವಾಗ ಕರ್ಣನನ್ನು ಅರ್ಧರಥನೆಂದು ಗಣಿಸಿದ್ದನು. ಆದರೆ ನರರ್ಷಭ ಕರ್ಣನು ಅದಕ್ಕಿಂತಲೂ ದ್ವಿಗುಣನು. ಪಿತೃವಿತ್ತಾಂಬು ದೇವೇಶನೊಡನೆಯೂ ಯುದ್ಧಮಾಡಲು ಉತ್ಸುಕನಾಗಿರುವ ಆ ಶೂರಸಮ್ಮತನು ರಥಾತಿರಥರ ಗಣನೆಯಲ್ಲಿ ಅಗ್ರಣಿಯಷ್ಟೇ!”
ಆದುದರಿಂದಲೇ ಅವನು ಕೋಪದಿಂದ ಗಾಂಗೇಯನಿಗೆ ಹೇಳಿದ್ದನು: “ಭೀಷ್ಮ! ನೀನು ಜೀವಿಸಿರುವವರೆಗೆ ಎಂದೂ ನಾನು ಯುದ್ಧಮಾಡುವುದಿಲ್ಲ. ಒಂದುವೇಳೆ ನೀನೇ ಪಾಂಡವರನ್ನು ಮಹಾಯುದ್ಧದಲ್ಲಿ ಸಂಹರಿಸಿಬಿಟ್ಟರೆ ದುರ್ಯೋಧನನ ಅನುಮತಿಯನ್ನು ಪಡೆದು ವನಕ್ಕೆ ಹೊರಟುಹೋಗುತ್ತೇನೆ. ಒಂದುವೇಳೆ ನೀನೇ ಪಾಂಡವರಿಂದ ಹತನಾಗಿ ಸ್ವರ್ಗಕ್ಕೆ ಹೊರಟುಹೋದರೆ ನೀನು ಯಾರನ್ನು ರಥರೆಂದು ಭಾವಿಸಿರುವೆಯೋ ಅವರೆಲ್ಲರನ್ನೂ ಒಂದೇ ರಥದಲ್ಲಿ ನಾನು ಸಂಹಾರಮಾಡುತ್ತೇನೆ.” ಹೀಗೆ ಹೇಳಿ ಮಹಾಯಶಸ್ವಿ ಕರ್ಣನು ದುರ್ಯೋಧನನ ಸಮ್ಮತಿಯಂತೆ ಹತ್ತು ದಿವಸಗಳೂ ಯುದ್ಧ ಮಾಡಲಿಲ್ಲ. ಸಮರವಿಕ್ರಾಂತ ಪರಾಕ್ರಮಿ ಭೀಷ್ಮನು ಸಮರದಲ್ಲಿ ಪಾಂಡವೇಯನ ಅಸಂಖ್ಯಾತ ಯೋಧರನ್ನು ಸಂಹರಿಸಿದನು. ಆ ಶೂರ ಸತ್ಯಸಂಧ ಮಹೌಜಸನು ಹತನಾಗಲು ಧೃತರಾಷ್ಟ್ರನ ಮಕ್ಕಳು ನದಿಯನ್ನು ದಾಟಲು ಬಯಸುವವರು ದೋಣಿಯನ್ನು ಹೇಗೋ ಹಾಗೆ ಕರ್ಣನನ್ನು ಸ್ಮರಿಸಿಕೊಂಡರು. ಎಲ್ಲರಾಜರೊಂದಿಗೆ ಅವರು “ಹಾ ಕರ್ಣ! ಇದೋ ಸಮಯವೊದಗಿದೆ!” ಎಂದು ಕೂಗಿ ಹೇಳಿದರು. ಜಾಮದಗ್ನಿಯಿಂದ ಅಸ್ತ್ರಗಳನ್ನು ತಿಳಿದುಕೊಂಡಿದ್ದ ಮತ್ತು ಶತ್ರುಗಳನ್ನು ತಡೆಯಲು ಅಸಾಧ್ಯ ಪೌರುಷವನ್ನು ಪಡೆದಿದ್ದ ಕರ್ಣನು ಆಪತ್ತಿನಲ್ಲಿ ಬಂಧುಗಳನ್ನು ನೆನೆಯುವಂತಿದ್ದ ಅವರ ಮನಸ್ಸಿಗೆ ಬಂದನು. ಏಕೆಂದರೆ ತ್ರಿದಶರನ್ನು ಸತತವೂ ಮಹಾಭಯದಿಂದ ರಕ್ಷಿಸುವ ಗೋವಿಂದನಂತೆ ಅವನೇ ಅವರನ್ನು ರಣದಲ್ಲಿ ಮಹಾಭಯದಿಂದ ರಕ್ಷಿಸಲು ಶಕ್ತನಾಗಿದ್ದನು.
ಕುರುಗಳ ಸೇನೆಯು ತುಂಡಾದ ನಾವೆಯಂತೆ ಅಗಾಧ ಸಮುದ್ರದಲ್ಲಿ ಮುಳುಗಿರಲು ಭೀಷ್ಮನು ಹತನಾದನೆಂದು ತಿಳಿದು ಅಧಿರಥಿ ಸೂತಪುತ್ರನು ಸಹೋದರನಂತೆ ದುರ್ಯೋಧನನ ಸೇನೆಯನ್ನು ಉಳಿಸಲು ಬಯಸಿದನು. ಆ ಮಹಾರಥ ಶಾಂತನವನು ಬಿದ್ದನೆಂದು ಕೇಳಿ ತಕ್ಷಣವೇ ಧನುರ್ಧರಶ್ರೇಷ್ಠ ಅಮಿತ್ರಕರ್ಷನ ವೃಷಸೇನ ಕರ್ಣನು ಹೊರಟನು. ಶತ್ರುಗಳಿಂದ ರಥಸತ್ತಮ ಭೀಷ್ಮನು ಹತನಾಗಿ ಕುರುಗಳ ನಾವೆಯು ಮಹಾಸಾಗರದಲ್ಲಿ ಮುಳುಗುತ್ತಿರಲು ತಂದೆಯು ಮಕ್ಕಳ ಬಳಿ ಬರುವಂತೆ ತ್ವರೆಮಾಡಿ ದುರ್ಯೋಧನನ ಸೇನೆಯನ್ನು ಉಳಿಸಲೋಸುಗ ಕರ್ಣನು ಅಲ್ಲಿಗೆ ಧಾವಿಸಿ ಬಂದನು. ಕರ್ಣನು ಹೇಳಿದನು: “ಯಾರಲ್ಲಿ ಧೃತಿ ಬುದ್ಧಿ ಪರಾಕ್ರಮ ಓಜಸ್ಸು ದಮ ವಿನಯ ಸಂಕೋಚ ಸತ್ಯ ವೀರಗುಣಗಳೆಲ್ಲವೂ, ದಿವ್ಯ ಅಸ್ತ್ರಗಳು ಮತ್ತು ಪ್ರೀತಿಯ ಮಾತುಗಳಿದ್ದವೋ ಆ ಬ್ರಹ್ಮದ್ವೇಷಿಗಳನ್ನು ಸಂಹರಿಸುವ, ಸತತವೂ ಕೃತಜ್ಞನಾಗಿದ್ದ, ಚಂದ್ರನಲ್ಲಿರುವ ಲಕ್ಷ್ಮಿಯಂತೆ ಸನಾತನನಾದ, ಪ್ರಶಾಂತ, ಪರವೀರಹಂತ ಭೀಷ್ಮನೇ ಹತನಾದನೆಂದರೆ ಎಲ್ಲ ಯೋಧರೂ ಹತರಾದರಂತೆಯೇ! ಕರ್ಮಯೋಗದಿಂದ ಹುಟ್ಟಿದ ಯಾವುದೂ ಈ ಲೋಕದಲ್ಲಿ ನಿತ್ಯವೂ ಇರುವುದಿಲ್ಲವೆಂದು ತಿಳಿದುಕೊಳ್ಳಬೇಕು. ಏಕೆಂದರೆ ಇಂದು ಮಹಾವ್ರತನು ಹತನಾಗಲು ಯಾರುತಾನೇ ಸಂಶಯವಿಲ್ಲದೇ ನಾಳೆ ಸೂರ್ಯೋದಯವಾಗುತ್ತದೆಯೆಂದು ಹೇಳಬಹುದು? ಆ ವಸುಪ್ರಭಾವ ವಸುವೀರ್ಯಸಂಭವನು ವಸುಂಧರೆಯಲ್ಲಿ ವಸುವಾಗಿಯೇ ಹೋಗಲು ಇಂದು ಈ ಸೇನೆಯು ಸಂಪತ್ತು ಮಕ್ಕಳು ಭೂಮಿ ಮತ್ತು ಕುರುಗಳ ಕುರಿತು ಶೋಕಿಸುತ್ತಿದೆ!”
ಆ ಲೋಕಶ್ರೇಷ್ಠ ಮಹಾ ತೇಜಸ್ವಿ ಶಾಂತನವನು ಬೀಳಲು ಪರಾಜಿತರಾಗಿ ದುಃಖಿತ ಭರತರನ್ನು ಕರ್ಣನು ಜೋರಾಗಿ ಅಳುತ್ತಾ ಸಂತವಿಸತೊಡಗಿದನು. ರಾಧೇಯನ ಈ ಮಾತನ್ನು ಕೇಳಿ ಧೃತರಾಷ್ಟ್ರನ ಮಕ್ಕಳು ಮತ್ತು ಸೈನಿಕರು ಪರಸ್ಪರರನ್ನು ನೋಡಿ ತುಂಬಾ ಜೋರಾಗಿ ಕೂಗಿ ಅತ್ತರು. ಕೂಗುತ್ತಾ ಪುನಃ ಪುನಃ ಕಣ್ಣೀರನ್ನು ಸುರಿಸಿದರು. ಆದರೆ ಪುನಃ ಮಹಾಯುದ್ಧವು ಪ್ರಾರಂಭವಾಗಿ ಪಾರ್ಥಿವರು ಸೇನೆಗಳನ್ನು ಪ್ರಚೋದಿಸಲು ಸರ್ವಮಹಾರಥ ಋಷಭ ಕರ್ಣನು ರಥರ್ಷಭರಿಗೆ ಈ ಪ್ರೋತ್ಸಾಹಕರ ಮಾತುಗಳನ್ನಾಡಿದನು:
“ಅನಿತ್ಯವಾದ ಈ ಜಗತ್ತು ಸತತವೂ ಓಡುತ್ತಿರುತ್ತವೆ. ಇದನ್ನು ಲಕ್ಷಿಸಿ ಎಲ್ಲವೂ ಅಸ್ಥಿರವೆಂದು ಯೋಚಿಸುತ್ತೇನೆ. ನೀವೆಲ್ಲ ಇರುವಾಗ ಹೇಗೆ ತಾನೇ ಗಿರಿಪ್ರಕಾಶ ಕುರುಪುಂಗವನು ರಣದಲ್ಲಿ ಬಿದ್ದನು? ಆಕಾಶದಿಂದ ಬಿದ್ದ ಸೂರ್ಯನಂತೆ ಮಹಾರಥ ಶಾಂತನವನು ಭೂಮಿಯ ಮೇಲೆ ಮಲಗಿರಲು ಭಿರುಗಾಳಿಯನ್ನು ಎದುರಿಸಲಾರದ ಪರ್ವತದ ಮರಗಳಂತೆ ಧನಂಜಯನನ್ನು ಎದುರಿಸಲು ಪಾರ್ಥಿವರು ಅಶಕ್ಯರಾಗಿದ್ದಾರೆ. ಆ ಮಹಾತ್ಮನಂತೆ ನಾನು ಇಂದು ಪ್ರಧಾನನನ್ನು ಕಳೆದುಕೊಂಡು ಪರರಿಂದ ನಾಶಗೊಂಡು ಉತ್ಸಾಹವನ್ನು ಕಳೆದುಕೊಂಡು ಅನಾಥವಾಗಿರುವ ಈ ಕುರುಸೇನೆಯನ್ನು ಯುದ್ಧದಲ್ಲಿ ರಕ್ಷಿಸುತ್ತೇನೆ. ಈ ಭಾರವನ್ನು ನನ್ನ ಮೇಲೆ ತೆಗೆದುಕೊಳ್ಳುತ್ತೇನೆ. ಈ ಜಗತ್ತು ಅನಿತ್ಯವೆಂದು ತಿಳಿದುಕೊಂಡು, ಯುದ್ಧನಾಯಕನೇ ಯುದ್ಧದಲ್ಲಿ ಬಿದ್ದಿರುವುದನ್ನು ಲಕ್ಷದಲ್ಲಿಟ್ಟುಕೊಂಡ ನನಗೆ ಯುದ್ಧದಲ್ಲಿ ಭಯವೇನಿದೆ? ಆದುದರಿಂದ ನಾನು ರಣದಲ್ಲಿ ಸಂಚರಿಸಿ ಜಿಹ್ಮಗಗಳಿಂದ ಆ ಕುರುವೃಷಭರನ್ನು ಯಮಸದನಕ್ಕೆ ಕಳುಹಿಸುತ್ತೇನೆ. ಜಗತ್ತಿನಲ್ಲಿ ಯಶಸ್ಸೇ ಹೆಚ್ಚಿನದು ಎಂದು ತಿಳಿದುಕೊಂಡು ಯುದ್ಧದಲ್ಲಿ ಶತ್ರುಗಳಿಂದ ಹತನಾಗುತ್ತೇನೆ ಅಥವಾ ಅವರಿಂದ ಹತನಾಗಿ ಮಲಗುತ್ತೇನೆ. ಯುಧಿಷ್ಠಿರನಲ್ಲಿ ಧೃತಿ, ಮತಿ ಮತ್ತು ಧರ್ಮತತ್ವಗಳಿವೆ. ವೃಕೋದರನ ವಿಕ್ರಮವು ನೂರು ಆನೆಗಳಿಗೆ ಸಮನಾದುದು. ಹಾಗೆಯೇ ಅರ್ಜುನನು ಯುವಕ ಮತ್ತು ತ್ರಿದಶರಲ್ಲಿ ಶ್ರೇಷ್ಠನಾದವನ ಮಗ. ಅವರ ಸೇನೆಯನ್ನು ಅಮರರೂ ಕೂಡ ಸುಲಭವಾಗಿ ಗೆಲ್ಲಲಾರರು. ಯಾವ ಸೇನೆಯಲ್ಲಿ ಯಮರಂತಿರುವ ಯಮಳರಿದ್ದಾರೆಯೋ, ಸಾತ್ಯಕಿ, ದೇವಕೀ ಸುತರಿದ್ದಾರೋ ಅದು ಮೃತ್ಯುವಿನ ಬಾಯಿಯಿದ್ದಂತೆ. ಅದನ್ನು ಎದುರಿಸಿದ ಯಾವ ಕಾಪುರುಷನೂ ಜೀವಂತ ಹಿಂದಿರುಗಲಾರ. ಬುದ್ಧಿವಂತರು ತಪಸ್ಸನ್ನು ತಪಸ್ಸಿನಿಂದಲೇ ಮತ್ತು ಬಲವನ್ನು ಬಲದಿಂದಲೇ ಎದುರಿಸುತ್ತಾರೆ. ನಾನೂ ಕೂಡ ಶತ್ರುನಿವಾರಣೆಯ ಮತ್ತು ಸ್ವ-ರಕ್ಷಣೆಯ ಅಚಲವಾದ ನಿಶ್ಚಯವನ್ನು ಮಾಡಿದ್ದೇನೆ.
“ಸೂತ! ನಾನೀಗಲೇ ಯುದ್ಧಕ್ಕೆ ಹೋಗಿ ಶತ್ರುಗಳ ಪ್ರಭಾವವನ್ನು ಕುಗ್ಗಿಸುತ್ತೇನೆ. ಮಿತ್ರನಿಗೆ ದ್ರೋಹವನ್ನೆಸುವುದು ನನಗೆ ಸಹ್ಯವಾಗುವುದಿಲ್ಲ. ಸೈನ್ಯವು ಭಗ್ನವಾಗಿರುವಾಗ ಸಹಾಯ ಮಾಡುವವನೇ ಮಿತ್ರನು. ಸತ್ಪುರುಷರಿಗೆ ಯೋಗ್ಯವಾದ ಈ ಕಾರ್ಯವನ್ನು ನಾನು ಮಾಡುತ್ತೇನೆ. ಪ್ರಾಣಗಳನ್ನು ತ್ಯಜಿಸಿ ಭೀಷ್ಮನನ್ನು ಅನುಸರಿಸಿ ಹೋಗುತ್ತೇನೆ. ಯುದ್ಧದಲ್ಲಿ ಸರ್ವ ಶತ್ರುಸಂಘಗಳನ್ನು ಸಂಹರಿಸುತ್ತೇನೆ ಅಥವಾ ಹತನಾಗಿ ವೀರಲೋಕಕ್ಕೆ ಹೋಗುತ್ತೇನೆ. ಧಾರ್ತರಾಷ್ಟ್ರನ ಪೌರುಷವು ಉಡುಗಿಹೋಗಿದೆ. ಹೆಂಗಸರು ಮಕ್ಕಳು ಮೊರೆಯಿಟ್ಟು ರೋದಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ನಾನು ಏನು ಮಾಡಬೇಕೆಂದು ತಿಳಿದುಕೊಂಡಿದ್ದೇನೆ. ಆದುದರಿಂದ ಧಾರ್ತರಾಷ್ಟ್ರನ ಶತ್ರುಗಳನ್ನು ಜಯಿಸುತ್ತೇನೆ. ಕುರುಗಳನ್ನು ರಕ್ಷಿಸಿ, ಪಾಂಡುಪುತ್ರರನ್ನು ಸಂಹರಿಸಿ, ಘೋರರೂಪದ ಈ ರಣದಲ್ಲಿ ಪ್ರಾಣಗಳನ್ನು ತ್ಯಜಿಸಿ, ಯುದ್ಧದಲ್ಲಿ ಎಲ್ಲ ಶತ್ರುಪಡೆಗಳನ್ನು ಸಂಹರಿಸಿ ನಾನು ರಾಜ್ಯವನ್ನು ಧಾರ್ತರಾಷ್ಟ್ರನಿಗೆ ಕೊಡುತ್ತೇನೆ. ಮಣಿರತ್ನಗಳಿಂದ ಹೊಳೆಯುವ, ಶುಭ್ರವಾದ, ವಿಚಿತ್ರವಾದ, ಬಂಗಾರದ, ಕವಚವನ್ನು ನನಗೆ ತೊಡಿಸು. ಸೂರ್ಯನಂತೆ ಹೊಳೆಯುತ್ತಿರುವ ಶಿರಸ್ತ್ರಾಣವನ್ನೂ, ಸರ್ಪಗಳಂತಿರುವ ಧನುಸ್ಸು-ಬಾಣಗಳನ್ನೂ ಕೊಡು. ಹದಿನಾರು ಭತ್ತಳಿಕೆಗಳ ವ್ಯವಸ್ಥೆಯಾಗಲಿ. ದಿವ್ಯವಾದ ಧನುಸ್ಸುಗಳನ್ನೂ, ಖಡ್ಗಗಳನ್ನೂ, ಶಕ್ತಿಗಳನ್ನೂ, ಭಾರವಾದ ಗದೆಗಳನ್ನೂ, ಬಂಗಾರದ ಚಿತ್ರಗಳಿಂದ ಹೊಳೆಯುವ ಶಂಖವನ್ನೂ ತರಲಿ. ಆನೆಗೆ ಕಟ್ಟುವ ಸುವರ್ಣಮಯವಾದ ವಿಚಿತ್ರವಾದ ಸರಪಣಿಯನ್ನೂ, ಜಯವನ್ನು ಗಳಿಸುವ ಕಮಲದ ಚಿಹ್ನೆಯಿರುವ ಹೊಳೆಯುವ ಧ್ವಜವನ್ನೂ, ನವಿರಾದ ಮತ್ತು ಸುಂದರ ಬಟ್ಟೆಗಳಿಂದ ಒರೆಸಿಕೊಂಡು, ಮಗಳಕರವಾದ ಅರಳಿನಿಂದ ಕಟ್ಟಿದ ಚಿತ್ರ-ವಿಚಿತ್ರವಾಗಿರುವ ಪುಷ್ಪಮಾಲಿಕೆಯನ್ನೂ ತರಲಿ. ಶ್ರೀಘ್ರಗಾಮಿಗಳಾದ, ಬಿಳಿಯ ಮೋಡದಂತೆ ಪ್ರಕಾಶಮಾನವಾದ, ಪುಷ್ಟವಾದ, ಮಂತ್ರಪೂತ ನೀರಿನಿಂದ ಸ್ನಾನಮಾಡಿರುವ, ಪುಟಕ್ಕೆ ಹಾಕಿದ ಚಿನ್ನದ ಆಭರಣಗಳಿಂದ ಸಮಲಂಕೃತವಾದ ಕುದುರೆಗಳನ್ನು ಶೀಘ್ರವಾಗಿ ಕರೆತಾ. ಸುವರ್ಣಮಾಲೆಗಳಿಂದ ಅಲಂಕೃತವಾದ, ಸೂರ್ಯಚಂದ್ರರ ಪ್ರಕಾಶವುಳ್ಳ, ರತ್ನಗಳಿಂದ ಚಿತ್ರಿತವಾದ, ಯುದ್ಧೋಪಯೋಗೀ ಸಾಮಗ್ರಿಗಳಿಂದ ಸಂಪನ್ನವಾದ, ಉಪಪನ್ನ ಕುದುರೆಗಳನ್ನು ಕಟ್ಟಲ್ಪಟ್ಟ ರಥವನ್ನು ಶೀಘ್ರವಾಗಿ ಸಿದ್ಧಗೊಳಿಸು. ವೇಗಯುಕ್ತವಾದ ಮತ್ತು ಚಿತ್ರಿತವಾದ ಧನುಸ್ಸುಗಳನ್ನೂ, ಗಟ್ಟಿಯಾದ ಶಿಂಜಿನಿಗಳನ್ನೂ, ಕವಚಗಳನ್ನೂ, ಬಾಣಗಳಿಂದ ತುಂಬಿದ ಭತ್ತಳಿಕೆಗಳನ್ನೂ, ಶರೀರದ ಆವರಣಗಳನ್ನೂ ಕೂಡಲೇ ಸಜ್ಜುಗೊಳಿಸು. ರಣಯಾತ್ರೆಗೆ ಅವಶ್ಯವಾದ ಎಲ್ಲ ಸಾಮಗ್ರಿಗಳನ್ನೂ ತನ್ನಿ. ಮೊಸರಿನಿಂದ ತುಂಬಿದ ಕಂಚಿನ ಮತ್ತು ಚಿನ್ನದ ಪಾತ್ರೆಗಳನ್ನು ಹಿಡಿದು ಕನ್ಯೆಯರು ಬಂದು ವಿಜಯ ಮಾಲೆಯನ್ನು ತೊಡಿಸಲಿ. ವಿಜಯಕ್ಕಾಗಿ ಭೇರಿಗಳನ್ನು ಮೊಳಗಿಸಿ. ಸೂತ! ಅನಂತರ ಎಲ್ಲಿ ಕಿರೀಟೀ, ವೃಕೋದರ, ಧರ್ಮಸುತ ಮತ್ತು ಯಮಳರು ಇರುವರೋ ಅಲ್ಲಿಗೆ ಕರೆದುಕೊಂಡು ಹೋಗು.
“ಅವರನ್ನು ಒಟ್ಟಿಗೇ ಯುದ್ಧದಲ್ಲಿ ಸಂಹರಿಸುತ್ತೇನೆ ಅಥವಾ ಶತ್ರುಗಳಿಂದ ಹತನಾಗಿ ಭೀಷ್ಮನನ್ನು ಅನುಸರಿಸಿ ಹೋಗುತ್ತೇನೆ. ಯಾರ ರಾಜನು ಸತ್ಯಧೃತಿ ಯುಧಿಷ್ಠಿರನೋ, ಯಾರಲ್ಲಿ ಭೀಮಸೇನ-ಅರ್ಜುನರು, ವಾಸುದೇವ-ಸಾತ್ಯಕಿಯರು ಮತ್ತು ಸೃಂಜಯರಿದ್ದಾರೋ ಆ ಸೇನೆಯು ಮಹೀಪರಿಂದ ಅಜಯ್ಯವೆಂದು ಅನ್ನಿಸುತ್ತದೆ. ಎಲ್ಲವನ್ನೂ ನಾಶಪಡಿಸುವ ಮೃತ್ಯುವೇ ಒಂದುವೇಳೆ ಅವನನ್ನು ರಕ್ಷಿಸಿದರೂ ಸದಾ ಅಪ್ರಮತ್ತನಾಗಿರುವ ಕಿರೀಟಿಯನ್ನು ಸಮರದಲ್ಲಿ ಸೇನೆಗಳೊಂದಿಗೆ ಸಂಹರಿಸುತ್ತೇನೆ ಅಥವಾ ಭೀಷ್ಮನ ದಾರಿಯಲ್ಲಿ ಯಮನಲ್ಲಿಗೆ ಹೋಗುತ್ತೇನೆ. ನಾನು ಈಗ ಹೇಳುತ್ತಿದ್ದೇನೆ. ಆ ಶೂರರ ಮಧ್ಯೆ ನುಗ್ಗಿ ಹೋಗುತ್ತೇನೆ. ಮಿತ್ರದ್ರೋಹಿಗಳು, ದುರ್ಬಲ ಭಕ್ತರು, ಪಾಪಾತ್ಮರು ನನ್ನ ಸಹಾಯಕ್ಕೆ ಬರುವವರಲ್ಲ.”
ಅವನು ಉತ್ತಮವಾದ ದೃಢವಾದ ನೊಗವನ್ನುಳ್ಳ, ಬಂಗಾರದಿಂದ ಸಮಲಂಕೃತವಾದ ಶುಭವಾದ ಪಾತಕಗಳನ್ನುಳ್ಳ, ಗಾಳಿಯ ವೇಗವುಳ್ಳ ಉತ್ತಮ ಕುದುರೆಗಳನ್ನು ಕಟ್ಟಿದ್ದ ರಥದಲ್ಲಿ ಕುಳಿತು ಜಯಕ್ಕಾಗಿ ಹೊರಟನು. ಕುರುಗಳಿಂದ ಗೌರವಿಸಿಕೊಳ್ಳುತ್ತಾ ಆ ಮಹಾತ್ಮಾ ರಥರ್ಷಭ ಉಗ್ರಧನ್ವಿ ಯೋಧನು ಬಿಳಿಯ ಕುದುರೆಗಳನ್ನು ಕಟ್ಟಿದ್ದ ರಥದಲ್ಲಿ ಭರತರ್ಷಭ ಭೀಷ್ಮನು ಅವಸಾನಹೊಂದಿದಲ್ಲಿಗೆ ಹೋದನು. ಮಹಾ ವರೂಥವನ್ನೇರಿ, ಧ್ವಜದಿಂದ ಕೂಡಿದ, ಸುವರ್ಣ-ಮುತ್ತು-ಮಣಿ-ವಜ್ರಗಳಿಂದ ಅಲಂಕೃತವಾದ, ಮೇಘದ ಧ್ವನಿಯುಳ್ಳ, ಸೂರ್ಯನ ತೇಜಸ್ಸುಳ್ಳ ಕುದುರೆಗಳನ್ನು ಕಟ್ಟಿದ್ದ ರಥದಲ್ಲಿ ಕರ್ಣನು ಹೊರಟನು. ಹುತಾಶನನಂತೆ ಹೊಳೆಯುವ ಅವನು ಹುತಾಶನನ ಪ್ರಭೆಯುಳ್ಳ, ಶುಭನಾಗಿದ್ದ ಅವನು ಶುಭವಾದ ರಥದಲ್ಲಿ, ಸ್ವಯಂ ವಿಮಾನದಲ್ಲಿ ನಿಂತ ಸುರರಾಜನಂತೆ ಆ ಧನುರ್ಧರ ಅಧಿರಥಿ ಮಹಾರಥಿಯು ನಿಂತು ರಾರಾಜಿಸಿದನು.
ಮಹಾ ಚಂಡಮಾರುತದಿಂದ ಶೋಷಿತವಾದ ಸಮುದ್ರದಂತಿದ್ದ ಶರತಲ್ಪದಲ್ಲಿ ಮಲಗಿದ್ದ, ಭೀಷ್ಮನನ್ನು ನೋಡಿ ಅದಿರಥನು ರಥದಿಂದ ಇಳಿದು ಆರ್ತನಾಗಿ, ಕಣ್ಣೀರಿನಿಂದ ವ್ಯಾಕುಲಗೊಂಡ ಮಾತಿನಲ್ಲಿ ಕೈಮುಗಿದು ಅಭಿವಾದಿಸಿ ನಮಸ್ಕರಿಸುತ್ತಾ ಹೇಳಿದನು: “ಭಾರತ! ನಾನು ಕರ್ಣ. ನಿನಗೆ ಮಂಗಳವಾಗಲಿ. ಇಂದು ನನ್ನೊಡನೆ ಮಾತನಾಡು! ಪುಣ್ಯವಾದ ಕ್ಷೇಮಕರ ಮಾತಿನಿಂದ ದೃಷ್ಟಿಯಿಂದ ನನ್ನನ್ನು ನೋಡು! ಧರ್ಮಪರ ವೃದ್ಧನಾದ ನೀನೇ ಭೂಮಿಯ ಮೇಲೆ ಹೀಗೆ ಮಲಗಿದ್ದೀಯೇ ಎಂದರೆ ಪುಣ್ಯಕರ್ಮಗಳ ಫಲವು ಇಲ್ಲಿ ಯಾರಿಗೂ ದೊರೆಯುವುದಿಲ್ಲವೆಂದಲ್ಲವೇ? ಕುರುಸತ್ತಮ! ಕೋಶ ಸಂಗ್ರಹದಲ್ಲಿ, ಮಂತ್ರಾಲೋಚನೆಯಲ್ಲಿ, ವ್ಯೂಹರಚನೆಯಲ್ಲಿ, ಪ್ರಹರಿಸುವುದರಲ್ಲಿ ಕುರುಗಳ ನಾಥನಾಗಿ ಬೇರೆ ಯಾರನ್ನೂ ನಾನು ಕಾಣುತ್ತಿಲ್ಲ. ವಿಶುದ್ಧ ಬುದ್ಧಿಯಿಂದ ಯುಕ್ತನಾಗಿ ಕುರುಗಳನ್ನು ಭಯದಿಂದ ಪಾರುಗೊಳಿಸಿ, ಯುದ್ಧದಲ್ಲಿ ಅನೇಕ ಯೋಧರನ್ನು ಸಂಹರಿಸಿ ಪಿತೃಲೋಕಕ್ಕೆ ಹೋಗುತ್ತಿರುವೆ? ಇಂದಿನಿಂದ ಪಾಂಡವರು ಕ್ರುದ್ಧರಾಗಿ ವ್ಯಾಘ್ರವು ಮೃಗಗಳನ್ನು ಕೊಲ್ಲುವಂತೆ ಕುರುಗಳ ಕ್ಷಯವನ್ನು ಮಾಡುತ್ತಾರೆ. ಇಂದು ಸವ್ಯಸಾಚಿಯ ವೀರ್ಯವನ್ನು ತಿಳಿದ ಕುರುಗಳು ಗಾಂಡೀವಘೋಷದಿಂದಾಗಿ ವಜ್ರಪಾಣಿಯನ್ನು ಅಸುರರು ಹೇಗೋ ಹಾಗೆ ತಡೆದುಕೊಳ್ಳಲಾರರು. ಇಂದು ಸಿಡಿಲಿನಂತೆ ಗುಡುಗುವ ಗಾಂಡೀವದಿಂದ ಹೊರಟ ಬಾಣಗಳು ಸಂಗ್ರಾಮದಲ್ಲಿ ಕುರುಗಳನ್ನೂ ಅನ್ಯ ಪಾರ್ಥಿವರನ್ನೂ ತ್ರಾಸಗೊಳಿಸಲಿವೆ. ಮಹಾಜ್ವಾಲೆಯ ಅಗ್ನಿಯಲ್ಲಿ ವೃಕ್ಷಗಳು ಹೇಗೆ ಸುಟ್ಟುಹೋಗುತ್ತವೆಯೋ ಹಾಗೆ ಕಿರೀಟಿಯ ಬಾಣಗಳಿಂದ ಧಾರ್ತರಾಷ್ಟ್ರರು ಭಸ್ಮವಾಗಲಿದ್ದಾರೆ. ವಾಯು ಮತ್ತು ಅಗ್ನಿಯರು ಒಟ್ಟಿಗೇ ವನದಲ್ಲಿ ಎಲ್ಲೆಲ್ಲಿ ಪ್ರಸರಿಸುತ್ತಾರೆಯೋ ಅಲ್ಲಲ್ಲಿ ಸುಡುವಂತೆ ಭಗವಂತರಿಬ್ಬರೂ ಇಚ್ಛಿಸಿದವರನ್ನು ಸುಡುತ್ತಾರೆ. ಅಗ್ನಿಯು ಹೇಗೆ ಸುಡುತ್ತಾನೋ ಹಾಗೆ ಪಾರ್ಥ ಎನ್ನುವುದರಲ್ಲಿ ಸಂಶಯವಿಲ್ಲ. ಹಾಗೆಯೇ ಕೃಷ್ಣನು ವಾಯು ಎನ್ನುವುದರಲ್ಲಿಯೂ ಸಂಶಯವಿಲ್ಲ. ಪಾಂಚಜನ್ಯದ ಧ್ವನಿ ಮತ್ತು ಗಾಂಡೀವದ ಟೇಂಕಾರಗಳನ್ನು ಕೇಳಿ ಸರ್ವ ಸೈನ್ಯಗಳೂ ಭಯೋದ್ವಿಗ್ನರಾಗುತ್ತಾರೆ. ನಿನ್ನನ್ನು ಬಿಟ್ಟು ಬೇರೆ ಯಾವ ಪಾರ್ಥಿವರಿಗೂ ಕಪಿಧ್ವಜ ಅಮಿತ್ರಕರ್ಶನನ ನುಗ್ಗಿ ಬರುತ್ತಿರುವ ರಥವನ್ನು ತಡೆಯಲು ಸಾಧ್ಯವಿಲ್ಲ. ಯಾರ ದಿವ್ಯ ಕರ್ಮಗಳನ್ನು ಮನೀಷಿಣರು ಮಾತನಾಡಿಕೊಳ್ಳುತ್ತಿರುತ್ತಾರೋ, ಯಾವ ಧೀಮಂತನು ತ್ರ್ಯಂಬಕನೊಂದಿಗೆ ಅಮಾನುಷ ಸಂಗ್ರಾಮವನ್ನು ನಡೆಸಿ ಅವನಿಂದ ವರವನ್ನು ಪಡೆದನೋ ಅಂತಹ ದುಷ್ಪ್ರಾಪ ಕೃತಾತ್ಮ ಅರ್ಜುನನೊಂದಿಗೆ ರಣದಲ್ಲಿ ಹೋರಾಡಲು ಬೇರೆ ಯಾವ ಪಾರ್ಥಿವರೂ ಅರ್ಹರಲ್ಲ. ಇಂದು ಆ ಪಾಂಡವ ಯುದ್ಧಶೌಂಡನನ್ನು ಸಹಿಸಲಾಗದ ನಾನು ನಿನ್ನ ಅನುಜ್ಞೆಯನ್ನು ಪಡೆದು ಸರ್ಪದ ವಿಷದಂತಿರುವ, ಘೋರ ದೃಷ್ಟಿಯಿಂದಲೇ ಸಂಹರಿಸಬಲ್ಲ ಅವನನ್ನು ಗೌರವಿಸಿ ವಧಿಸುತ್ತೇನೆ ಅಥವಾ ಜಯವನ್ನು ಗಳಿಸುತ್ತೇನೆ.”
ಅವನ ಆ ಲಲಾಪಗಳನ್ನು ಕೇಳಿದ ಪ್ರೀತಮನಸ್ಕನಾದ ವೃದ್ಧ ಕುರುಪಿತಾಮಹನು ದೇಶ ಕಾಲೋಚಿತವಾದ ಮಾತನ್ನಾಡಿದನು: “ನದಿಗಳಿಗೆ ಸಮುದ್ರದಂತೆ, ಬೆಳಗುತ್ತಿರುವವರಲ್ಲಿ ಭಾಸ್ಕರನಂತೆ, ಸಂತರಿಗೆ ಸತ್ಯದಂತೆ, ಫಲವತ್ತಾದ ಭೂಮಿಗೆ ಬೀಜದಂತೆ, ಜೀವಿಗಳಿಗೆ ಮಳೆಯಂತೆ ನಿನ್ನ ಸುಹೃದಯರಲ್ಲಿ ನೆಲೆಸಿರು. ಸಹಸ್ರಾಕ್ಷನನ್ನು ಅವಲಂಬಿಸಿ ಅಮರರು ಇರುವಂತೆ ಬಾಂಧವರು ನಿನ್ನನ್ನು ಅವಲಂಬಿಸಿರಲಿ. ಕರ್ಣ! ಧಾರ್ತರಾಷ್ಟ್ರನಿಗೆ ಪ್ರಿಯವಾದುದನ್ನು ಮಾಡಲಿಚ್ಛಿಸಿ ನೀನು ರಾಜಪುರಕ್ಕೆ ಹೋಗಿ ಕಾಂಬೋಜರನ್ನು ಸಂಹರಿಸಿದೆ. ಗಿರಿವ್ರಜಕ್ಕೆ ಹೋಗಿ ನಗ್ನಜಿತನೇ ಮೊದಲಾದ ಪ್ರಮುಖ ನೃಪರನ್ನೂ, ಅಂಬಷ್ಠ, ವಿದೇಹ, ಗಾಂಧಾರರನ್ನು ನೀನು ಗೆದ್ದೆ. ಹಿಂದೆ ನೀನು ಹಿಮವತ್ಪರ್ವತದ ಕಣಿವೆಯಳಲ್ಲಿ ವಾಸಿಸುವ ರಣಕರ್ಕಶರಾದ ಕಿರಾತರು ದುರ್ಯೋಧನನನ ವಶದಲ್ಲಿ ಬರುವಂತೆ ಮಾಡಿದೆ. ದುರ್ಯೋಧನನಿಗೆ ಹಿತವನ್ನು ಮಾಡಲು ಬಯಸಿ ನಿನ್ನ ವೀರ್ಯ ಮತ್ತು ಮಹಾ ಓಜಸ್ಸಿನಿಂದ ನೀನು ಅಲ್ಲಲ್ಲಿ ಅನೇಕರನ್ನು ಗೆದ್ದೆ. ದುರ್ಯೋಧನನು ಜ್ಞಾತಿಕುಲಬಾಂಧವರಿಗೆ ಹೇಗೋ ಹಾಗೆ ನೀನೂ ಕೂಡ ಸರ್ವ ಕೌರವರಿಗೆ ಗತಿಯಾಗಿರು. ಮಂಗಳಕರವಾಗಿ ನಿನಗೆ ಹೇಳುತ್ತಿದ್ದೇನೆ. ಹೋಗು! ಶತ್ರುಗಳೊಂದಿಗೆ ಯುದ್ಧಮಾಡು! ಯುದ್ಧದಲ್ಲಿ ಕುರುಗಳನ್ನು ನಡೆಸಿ ದುರ್ಯೋಧನನಿಗೆ ಜಯವನ್ನು ಕೊಡು. ದುರ್ಯೋಧನನು ಹೇಗೋ ಹಾಗೆ ನೀನೂ ಕೂಡ ನಮಗೆ ಮೊಮ್ಮಗನ ಸಮನಾಗಿರುವೆ. ಆದುದರಿಂದ ಧರ್ಮತಃ ನಮ್ಮದೆಲ್ಲವೂ ನಿನ್ನದೂ ಕೂಡ. ಒಂದೇ ತಾಯಿಯಲ್ಲಿ ಹುಟ್ಟಿದವರಿಗಿಂತ ಸಜ್ಜನರ ಸಂಗವು ವಿಶಿಷ್ಟವಾದುದೆಂದು ತಿಳಿದವರು ಹೇಳುತ್ತಾರೆ. ಆದುದರಿಂದ ಸತ್ಯಸಂಗರನಾಗಿದ್ದುಕೊಂಡು ದುರ್ಯೋಧನನ ಸೇನೆಯನ್ನು ನನ್ನದೇ ಎಂದು ನಿಶ್ಚಯಿಸಿ ಕುರುಗಳನ್ನು ಪಾಲಿಸು!”
ಅವನ ಆ ಮಾತನ್ನು ಕೇಳಿ ವೈಕರ್ತನ ಕರ್ಣನು ಅವನ ಚರಣಗಳಿಗೆ ನಮಸ್ಕರಿಸಿ ಬೇಗನೇ ದುರ್ಯೋಧನನ ಕಡೆ ಹೋದನು. ಅವನು ಆ ಅಪ್ರತಿಮ ಸ್ಥಾನದ ಮಹಾ ಸೇನೆಯನ್ನು ನೋಡಿ ವಿಶಾಲ ಎದೆಯ ಅವನು ಉತ್ತೇಜಿಸಿದನು. ಯುದ್ಧಕ್ಕೆ ಬಂದೊದಗಿದ ಮಹೇಷ್ವಾಸ ಕರ್ಣನನ್ನು ನೋಡಿ ಕೌರವರು ಅವನನ್ನು ಭುಜಗಳನ್ನು ತಟ್ಟುವುದರ ಮೂಲಕ, ಸಿಂಹನಾದದೊಂದಿಗೆ ವಿವಿಧ ಧನುಸ್ಸುಗಳ ಶಬ್ಧಗಳೊಂದಿಗೆ ಗೌರವಿಸಿದರು.
ದ್ರೋಣನ ಸೇನಾಪತ್ಯ
ರಥದಲ್ಲಿ ನಿಂತಿದ್ದ ಪುರುಷವ್ಯಾಘ್ರ ಕರ್ಣನನ್ನು ನೋಡಿ ಹೃಷ್ಟನಾದ ದುರ್ಯೋಧನನು ಈ ಮಾತನ್ನಾಡಿನು: “ನಿನ್ನಿಂದ ಪಾಲಿತವಾದ ಈ ಸೇನೆಯು ಈಗ ನಾಯಕನನ್ನು ಪಡೆದಿದೆ. ಈಗ ನೀನು ಏನು ಮಾಡುವುದು ಒಳ್ಳೆಯದೆಂದು ಅಭಿಪ್ರಾಯ ಪಡುತ್ತೀಯೋ ಅದರಂತೆಯೇ ಆಗಲಿ!”
ಕರ್ಣನು ಹೇಳಿದನು: “ಪುರುಷವ್ಯಾಘ್ರ! ನೃಪ! ನಿನಗೆ ಎಲ್ಲರಿಗಿಂತ ಹೆಚ್ಚು ತಿಳಿದಿದೆ. ನೀನೇ ಹೇಳು. ರಾಜನು ಏನು ಮಾಡಬೇಕೆಂದು ಯೋಚಿಸಿರುತ್ತಾನೋ ಅದನ್ನು ಇನ್ನೊಬ್ಬರು ಯೋಚಿಸಿ ಹೇಳಲಿಕ್ಕಾಗುವುದಿಲ್ಲ. ಇಲ್ಲಿ ನಾವೆಲ್ಲರೂ ನಿನ್ನ ಮಾತುಗಳನ್ನು ಕೇಳಲು ಬಯಸಿದ್ದೇವೆ. ನೀನು ಅನ್ಯಾಯದ ಮಾತುಗಳನ್ನು ಹೇಳುವುದೇ ಇಲ್ಲವೆಂದು ನನ್ನ ಅಭಿಪ್ರಾಯ.”
ದುರ್ಯೋಧನನು ಹೇಳಿದನು: “ವಯಸ್ಸು, ವಿಕ್ರಮ, ವಿದ್ಯೆ ಮತ್ತು ಯೋಧನಲ್ಲಿರಬೇಕಾದ ಎಲ್ಲ ಗುಣಗಳಿಂದ ಸುಸಂಪನ್ನನಾಗಿದ್ದ ಭೀಷ್ಮನು ನಮ್ಮ ಸೇನಾಪತಿಯಾಗಿದ್ದನು. ಕರ್ಣ! ಅತಿ ಯಶಸ್ವಿಯಾಗಿದ್ದ ಆ ಮಹಾತ್ಮನು ನನ್ನ ಶತ್ರುಗಣಗಳನ್ನು ಸಂಹರಿಸುತ್ತ ಉತ್ತಮವಾಗಿ ಯುದ್ಧಮಾಡಿ ಹತ್ತು ದಿನಗಳು ನಮ್ಮನ್ನು ಪಾಲಿಸಿದನು. ಅವನು ಸಾಧಿಸಲಸಾದ್ಯವಾದುದನ್ನು ಸಾಧಿಸಿ ಸ್ವರ್ಗದ ದಾರಿಯನ್ನು ಹಿಡಿದಿದ್ದಾನೆ. ಅವನ ನಂತರ ಯಾರನ್ನು ಸೇನಾಪತಿಯನ್ನಾಗಿ ಮಾಡಬೇಕೆಂದು ನಿನ್ನ ಅಭಿಪ್ರಾಯ? ನಾಯಕನಿಲ್ಲದೇ ಯುದ್ಧದಲ್ಲಿ ಸೇನೆಯು ನೀರಿನಲ್ಲಿ ನಾಯಕನಿಲ್ಲದ ದೋಣಿಯಂತೆ ಮುಹೂರ್ತಕಾಲವೂ ನಿಲ್ಲಲಾರದು. ನಡೆಸುವವನಿಲ್ಲದ ದೋಣಿಯಂತೆ, ಸಾರಥಿಯಿಲ್ಲದ ರಥದಂತೆ ಸೇನಾಪತಿಯಿಲ್ಲದ ಸೇನೆಯು ಇಷ್ಟಬಂದಲ್ಲಿ ಓಡಿ ಹೋಗುವುದಿಲ್ಲವೇ? ಈಗ ನೀನು ನನ್ನವರಾದ ಮಹಾತ್ಮರಲ್ಲಿ ಶಾಂತನವನಂತೆ ಸೇನಾಪತಿಯಾಗಲು ಯುಕ್ತನಾರೆಂದು ನೋಡು! ಯಾರನ್ನು ನೀನು ಸೇನಾಪತಿಯೆಂದು ಆರಿಸುತ್ತೀಯೋ ಅವನನ್ನೇ ನಾವೆಲ್ಲರೂ ಸೇರಿ ಸೇನಾಪತಿಯೆಂದು ಮಾಡೋಣ!”
ಕರ್ಣನು ಹೇಳಿದನು: “ಈ ಎಲ್ಲ ಮಹಾತ್ಮ ಪುರುಷಸತ್ತಮರೂ ಸೇನಾಪತಿಯಾಗಲು ಅರ್ಹರಾಗಿದ್ದಾರೆ. ಅದರಲ್ಲಿ ವಿಚಾರಣೆ ಮಾಡುವುದೇನೂ ಇಲ್ಲ. ಎಲ್ಲರೂ ಕುಲೀನರು. ಯುದ್ಧದ ಜ್ಞಾನವುಳ್ಳವರು. ವಿಕ್ರಮ ಬುದ್ಧಿಯುಳ್ಳವರು. ಕೃತಜ್ಞರು. ನಾಚಿಕೆಯಿದ್ದವರು. ಮತ್ತು ಯುದ್ಧದಿಂದ ಪಲಾಯನ ಮಾಡದವರು. ಆದರೆ ಅವರೆಲ್ಲರೂ ಏಕ ಕಾಲದಲ್ಲಿ ನಾಯಕರಾಗಲಾರರು. ವಿಶೇಷ ಗುಣಗಳಿರುವ ಒಬ್ಬನನ್ನೇ ನಾಯಕನನ್ನಾಗಿ ಮಾಡಬೇಕು. ಭಾರತ! ಅನ್ಯೋನ್ಯರೊಡನೆ ಸ್ಪರ್ಧಿಸುವ ಅವರಲ್ಲಿ ಯಾರೊಬ್ಬನನ್ನು ನೀನು ಸತ್ಕರಿಸಿದರೂ ಉಳಿದವರು ಬೇಸರ ಪಟ್ಟುಕೊಂಡು ಯುದ್ಧಮಾಡದೇ ಇರಬಹುದು. ಈ ಸರ್ವಯೋಧರ ಆಚಾರ್ಯ, ವೃದ್ಧ ಗುರು, ಶಸ್ತ್ರಭೃತರಲ್ಲಿ ಶ್ರೇಷ್ಠ ದ್ರೋಣನನ್ನು ಸೇನಾಪತಿಯನ್ನಾಗಿ ಮಾಡುವುದು ಯುಕ್ತವಾಗಿದೆ. ಶುಕ್ರ ಮತ್ತು ಅಂಗಿರಸರಂತೆ ತೋರುವ ಈ ಬ್ರಹ್ಮವಿದುತ್ತಮ ದುರ್ಧರ್ಷ ದ್ರೋಣನನ್ನು ಬಿಟ್ಟು ಬೇರೆ ಯಾರುತಾನೇ ಸೇನಾಪತಿಯಾಗಲು ನಿಲ್ಲುತ್ತಾರೆ? ಈ ಸರ್ವ ರಾಜರಲ್ಲಿ ಸಮರದಲ್ಲಿ ಹೋಗುತ್ತಿರುವ ದ್ರೋಣನನ್ನು ಅನುಸರಿಸದೇ ಇರುವವರು ಯಾರೂ ಇಲ್ಲ. ಇವನು ಸೇನಾ ಪ್ರಣೇತಾರ. ಇವನು ಶಸ್ತ್ರಭೃತರಲ್ಲಿ ಶ್ರೇಷ್ಠನೂ ಕೂಡ. ಇವನು ಬುದ್ಧಿವಂತರಲ್ಲಿ ಕೂಡ ಶ್ರೇಷ್ಠ. ಮತ್ತು ಇವನು ನಿನ್ನ ಗುರುವೂ ಹೌದು. ದುರ್ಯೋಧನ! ಹೀಗಿರುವ ಆಚಾರ್ಯನನ್ನು ಸೇನಾಪತಿಯನ್ನಾಗಿ ಮಾಡು. ಅವನು ಕಾರ್ತಿಕೇಯನು ಅಮರರಿಗೆ ಅಸುರರನ್ನು ಗೆದ್ದುಕೊಟ್ಟಂತೆ ನಿನಗೆ ಜಯವನ್ನು ನೀಡುತ್ತಾನೆ.”
ಕರ್ಣನ ಮಾತನ್ನು ಕೇಳಿ ರಾಜಾ ದುರ್ಯೋಧನನು ಸೇನೆಯ ಮಧ್ಯ ಹೋಗಿ ದ್ರೋಣನಿಗೆ ಈ ಮಾತನ್ನಾಡಿದನು: “ವರ್ಣದ ಶ್ರೇಷ್ಠತೆಯಲ್ಲಿ, ಜನ್ಮತಾಳಿದ ಕುಲದಲ್ಲಿ, ಶಸ್ತ್ರಜ್ಞಾನದಲ್ಲಿ, ವಯಸ್ಸಿನಲ್ಲಿ, ಬುದ್ಧಿಯಲ್ಲಿ, ವೀರ್ಯದಲ್ಲಿ, ದಕ್ಷತೆಯಲ್ಲಿ, ಅಜೇಯತ್ವದಲ್ಲಿ, ಅರ್ಥಜ್ಞಾನದಲ್ಲಿ, ಜಯದಲ್ಲಿ, ತಪಸ್ಸಿನಲ್ಲಿ, ಕೃತಜ್ಞತೆಯಲ್ಲಿ ಮತ್ತು ಇತರ ಸರ್ವ ಗುಣಗಳಲ್ಲಿ ನೀಮಗೆ ಸಮನಾಗಿರುವವರು ಮತ್ತು ರಕ್ಷಕರು ಯಾರೂ ಇಲ್ಲವೆಂದು ರಾಜನಿಗೆ ತಿಳಿದಿದೆ. ದ್ವಿಜಸತ್ತಮ! ವಾಸವನು ದೇವತೆಗಳನ್ನು ಹೇಗೋ ಹಾಗೆ ನೀವು ನಮ್ಮೆಲ್ಲರನ್ನೂ ರಕ್ಷಿಸಬೇಕು. ನಿಮ್ಮ ನೇತೃತ್ವದಲ್ಲಿ ಶತ್ರುಗಳನ್ನು ಜಯಿಸಲು ಇಚ್ಛಿಸುತ್ತೇನೆ. ರುದ್ರರಲ್ಲಿ ಕಪಾಲಿಯಂತೆ, ವಸುಗಳಲ್ಲಿ ಪಾವಕನಂತೆ, ಯಕ್ಷರಲ್ಲಿ ಕುಬೇರನಂತೆ, ಮರುತರಲ್ಲಿ ವಾಸವನಂತೆ, ವಿಪ್ರರಲ್ಲಿ ವಸಿಷ್ಠನಂತೆ, ತೇಜಸ್ವಿಗಳಲ್ಲಿ ಭಾಸ್ಕರನಂತೆ, ಪಿತೃಗಳಲ್ಲಿ ಧರ್ಮನಂತೆ, ಆದಿತ್ಯರಲ್ಲಿ ಸೂರ್ಯನಂತೆ, ನಕ್ಷತ್ರಗಳಲ್ಲಿ ಶಶಿಯಂತೆ, ದೈತ್ಯರಲ್ಲಿ ಶುಕ್ರನಂತೆ ಸೇನಾಪತಿಗಳಲ್ಲಿ ಶ್ರೇಷ್ಠನಾಗಿ ನನ್ನ ಸೇನಾಪತಿಯಾಗು. ಈ ಹನ್ನೊಂದು ಅಕ್ಷೌಹಿಣಿಗಳು ನಿನ್ನ ವಶದಲ್ಲಿ ಬಂದಿವೆ. ನೀನೂ ಶತ್ರುಗಳ ಪ್ರತಿಯಾಗಿ ವ್ಯೂಹವನ್ನು ರಚಿಸಿ ದಾನವರನ್ನು ಇಂದ್ರನು ಹೇಗೋ ಹಾಗೆ ಶತ್ರುಗಳನ್ನ್ನು ಸಂಹರಿಸು. ಪಾವಕೀ ಕಾರ್ತಿಕೇಯನು ದೇವಸೇನೆಯ ಅಗ್ರಭಗದಲ್ಲಿ ಹೋಗುವಂತೆ ನಿವು ನಮ್ಮ ಮುಂಬಾಗದಲ್ಲಿ ನಡೆಯಿರಿ. ಹಸುಗಳು ಹೋರಿಯನ್ನು ಅನುಸರಿಸುವಂತೆ ನಾವು ನಿಮ್ಮನ್ನು ಹಿಂಬಾಲಿಸಿ ಬರುತ್ತೇವೆ. ದಿವ್ಯ ಧನುಸ್ಸನ್ನು ಟೇಂಕರಿಸಿ ಮುಂದಿರುವ ಮಹೇಷ್ವಾಸ ಉಗ್ರಧನ್ವಿ ನಿಮ್ಮನ್ನು ನೋಡಿ ಅರ್ಜುನನು ಪ್ರಹರಿಸುವುದಿಲ್ಲ. ಒಂದುವೇಳೆ ನೀವು ನನ್ನ ಸೇನಾಪತಿಯಾದರೆ ಯುದ್ಧದಲ್ಲಿ ಬಾಂಧವರು ಮತ್ತು ಅನುಯಾಯಿಗಳೊಂದಿಗೆ ಯುಧಿಷ್ಠಿರನನ್ನು ಗೆಲ್ಲುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.”
ದ್ರೋಣನಿಗೆ ಹೀಗೆ ಹೇಳಲು ಜಯುವಾಗಲೆಂದು ನರಾಧಿಪರು ಕೂಗಿ ಹೇಳಿ, ಮಹಾ ಸಿಂಹನಾದದಿಂದ ದುರ್ಯೋಧನನನ್ನು ಹರ್ಷಿಸಿದರು. ಸಂತೋಷದಿಂದ ಸೈನಿಕರು ದ್ವಿಜೋತ್ತಮನಿಗೆ ಜಯಕಾರ ಹಾಕಿದರು. ದುರ್ಯೋಧನನನ್ನು ಮುಂದಿರಿಸಿಕೊಂಡು ಮಹದ್ಯಶನನ್ನು ಬೇಡಿಕೊಂಡರು. ಆಗ ದ್ರೋಣನು ಹೇಳಿದನು: “ಆರೂ ಅಂಗಗಳೊಂದಿಗೆ ವೇದವನ್ನು ತಿಳಿದಿದ್ದೇನೆ. ಮನುವಿನ ಅರ್ಥವಿದ್ಯೆಯನ್ನೂ ನಾನು ತಿಳಿದುಕೊಂಡಿದ್ದೇನೆ. ತ್ರೈಯಂಬಕನ ವಿವಿಧ ಇಷ್ವಸ್ತ್ರಗಳನ್ನೂ ಅರಿತಿದ್ದೇನೆ. ವಿಜಯಕಾಂಕ್ಷಿಗಳಾದ ನೀವು ನನ್ನ ಏನೆಲ್ಲ ಗುಣಗಳಿವೆಯೆಂದು ಹೇಳಿದಿರೋ ಅವೆಲ್ಲವನ್ನೂ ಸತ್ಯವಾಗಿಸಲು ಪಾಂಡವರೊಡನೆ ಹೋರಾಡುತ್ತೇನೆ.”
ಹೀಗೆ ಅವನು ಅನುಜ್ಞೆಯನ್ನು ನೀಡಲು ದುರ್ಯೊಧನನು ದ್ರೋಣನನ್ನು ವಿಧಿವತ್ತಾದ ಕರ್ಮಗಳಿಂದ ಸೇನಾಪತಿಯನ್ನಾಗಿ ಮಾಡಿದನು. ಆಗ ದುರ್ಯೋಧನಪ್ರಮುಖ ನೃಪರು ಹಿಂದೆ ಶಕ್ರನ ನಾಯಕತ್ವದಲ್ಲಿ ಸುರರು ಸ್ಕಂದನನ್ನು ಹೇಗೋ ಹಾಗೆ ದ್ರೋಣನನ್ನು ಸೇನಾಪತಿಯನ್ನಾಗಿ ಅಭಿಷೇಕಿಸಿದರು. ಮಂಗಳ ವಾದ್ಯಗಳ ಘೋಷಗಳಿಂದ ಪುರುಷರ ಮಹಾಕೂಗುಗಳೊಡನೆ ಹರ್ಷದಿಂದ ದ್ರೋಣನನ್ನು ಸೇನಾಪತಿಯನ್ನಾಗಿ ಮಾಡಲಾಯಿತು. ಪುಣ್ಯಾಹಘೋಷ, ಸ್ವಸ್ತಿವಾಚನ, ಸೂತ-ವಂದಿ-ಮಾಗಧರ ಹೊಗಳಿಕೆ, ಸಂಗೀತ, ಶ್ರೇಷ್ಠ ಬ್ರಾಹ್ಮಣರಿಂದ ಜಯಾಶಿಷಗಳು, ನೃತ್ಯಗಾತಿಯರಿಂದ ನರ್ತನ ಇತ್ಯಾದಿಗಳಿಂದ ದ್ರೋಣನನ್ನು ಯಥಾವಿಧಿಯಾಗಿ ಸತ್ಕರಿಸಿದ ಕೌರವರು ಪಾಂಡವರನ್ನು ಗೆದ್ದೆವೆಂದೇ ಭಾವಿಸಿದರು.
ದ್ರೋಣನ ಪ್ರತಿಜ್ಞೆ
ಸೇನಾಪತಿತ್ವವನ್ನು ಪಡೆದು ಮಹಾರಥ ಭಾರದ್ವಾಜನು ಸರ್ವ ಸೇನೆಗಳ ಮಧ್ಯೆ ನಿನ್ನ ಮಗನಿಗೆ ಈ ಮಾತನ್ನಾಡಿದನು: “ರಾಜನ್! ಕೌರವರ ಋಷಭ ಆಪಗೇಯನ ನಂತರ ನನ್ನನ್ನು ಸೇನಾಪತ್ಯದಿಂದ ಗೌರವಿಸಿದ್ದೀಯೆ. ಈ ಕರ್ಮಕ್ಕೆ ತಕ್ಕುದಾದ ಫಲವನ್ನು ಪಡೆಯುತ್ತೀಯೆ. ಪಾರ್ಥಿವ! ನಿನ್ನ ಆಸೆ ಏನಿದೆ ಹೇಳು. ಅದನ್ನು ನಾನು ಇಂದು ಮಾಡುತ್ತೇನೆ. ಬೇಕಾದ ವರವನ್ನು ಕೇಳಿಕೋ!”
ಆಗ ದುರ್ಯೋಧನನು ಕರ್ಣ-ದುಃಶಾಸನಾದಿಗಳೊಂದಿಗೆ ಚರ್ಚಿಸಿ ಆ ವಿಜಯಿಗಳಲ್ಲಿ ಶ್ರೇಷ್ಠ, ದುರ್ಧರ್ಷ ಆಚಾರ್ಯನಿಗೆ ಹೇಳಿದನು: “ನನಗೆ ವರವನ್ನು ಕೊಡುತ್ತೀರಾದರೆ ಯುಧಿಷ್ಠಿರನನ್ನು ಜೀವಂತವಾಗಿ ಸೆರೆಹಿಡಿಯಿರಿ. ಆ ರಥಿಶ್ರೇಷ್ಠನನ್ನು ಹಿಡಿದು ನನ್ನ ಬಳಿಗೆ ಕರೆದುಕೊಂಡು ಬನ್ನಿ.”
ಆಗ ಕುರುಗಳ ಆಚಾರ್ಯನು ದುರ್ಯೋಧನನ ಮಾತನ್ನು ಕೇಳಿ ಸರ್ವ ಸೇನೆಗಳನ್ನೂ ಹರ್ಷಗೊಳಿಸುತ್ತಾ ಈ ಮಾತನ್ನಾಡಿದನು: “ಯಾರನ್ನು ಸೆರೆಹಿಡಿಯಲು ಬಯಸುತ್ತೀಯೋ ಆ ರಾಜಾ ಕುಂತೀಪುತ್ರನು ಧನ್ಯ. ಅವನ ವಧೆಯನ್ನು ಇಂದು ವರವನ್ನಾಗಿ ಕೇಳುತ್ತಿಲ್ಲವಲ್ಲ! ಯಾವ ಕಾರಣಕ್ಕಾಗಿ ನೀನು ಅವನ ವಧೆಯನ್ನು ಬಯಸುತ್ತಿಲ್ಲ? ನಿಶ್ಚಯವಾಗಿ ದುರ್ಯೋಧನನು ಮತ್ತನಾಗಿ ಈ ಕೆಲಸವನ್ನು ಹೇಳುತ್ತಿಲ್ಲ ತಾನೇ? ಧರ್ಮಪುತ್ರನ ವಧೆಯನ್ನು ಬಯಸುವವನು ಯಾರೂ ಇಲ್ಲವೆಂದರೆ ಅದೊಂದು ಅದ್ಭುತವೇ ಸರಿ. ಅವನನ್ನು ಜೀವಂತವಿರಿಸಿ ನೀನು ನಿನ್ನನ್ನೂ ನಿನ್ನ ಕುಲವನ್ನೂ ರಕ್ಷಿಸಲು ಬಯಸುತ್ತಿದ್ದೀಯಾ? ಅಥವಾ ಯುದ್ಧದಲ್ಲಿ ಪಾಂಡವರನ್ನು ಸೋಲಿಸಿ ಅವರ ರಾಜ್ಯಾಂಶವನ್ನು ಅವರಿಗೆ ಹಿಂದಿರುಗಿಸಿ ಉತ್ತಮ ಸಹೋದರತ್ವವನ್ನು ಕಲ್ಪಿಸಲು ಬಯಸುತ್ತಿರುವೆಯಾ? ಉತ್ತಮ ಕುಲದಲ್ಲಿ ಜನಿಸಿದ ಧೀಮತ ರಾಜಾ ಕುಂತೀಸುತನೇ ಧನ್ಯ. ನೀನೂ ಕೂಡ ಅವನಲ್ಲಿ ಸ್ನೇಹಭಾವವನ್ನು ತೋರಿಸುತ್ತಿರುವೆಯೆಂದರೆ ಅವನ ಅಜಾತಶತ್ರುತ್ವವು ಸತ್ಯವಾದಂತಾಯಿತು.”
ದ್ರೋಣನು ಹೀಗೆ ಹೇಳಲು ನಿತ್ಯವೂ ದುರ್ಯೋಧನನಲ್ಲಿ ಮಲಗಿದ್ದ ನಿಜಭಾವನೆಯು ಒಮ್ಮಿಂದೊಮ್ಮೆಲೇ ಪ್ರಕಟವಾಯಿತು. ಬೃಹಸ್ಪತಿಯಂತಿರುವವರು ಕೂಡ ಅವನ ಆಕಾರವನ್ನು ಊಹಿಸಲು ಶಕ್ಯರಾಗಿರಲಿಲ್ಲ. ಅದಕ್ಕೆ ಅವನು ಪ್ರಹೃಷ್ಟನಾಗಿ ಹೀಗೆ ಹೇಳಿದನು: “ಆಚಾರ್ಯ! ಕುಂತೀಸುತನ ವಧೆಯಲ್ಲಿ ನನ್ನ ವಿಜಯವಿಲ್ಲ. ಯುಧಿಷ್ಠಿರನು ಹತನಾದರೆ ಪರ್ಥನು ಸರ್ವರನ್ನೂ ಸಂಹರಿಸುತ್ತಾನೆ ಎನ್ನುವುದು ಖಂಡಿತ. ರಣದಲ್ಲಿ ಅವರೆಲ್ಲರನ್ನು ಸಂಹರಿಸಲು ಅಮರರಿಂದಲೂ ಸಾಧ್ಯವಿಲ್ಲ. ಅವರಲ್ಲಿ ಯಾರು ಉಳಿದರೂ ಅವರು ನಮ್ಮೆಲ್ಲರನ್ನೂ ಉಳಿಯಗೊಡುವುದಿಲ್ಲ. ಆ ಸತ್ಯಪ್ರತಿಜ್ಞನನ್ನು ನೀನು ಕರೆದುಕೊಂಡು ಬಂದರೆ ಪುನಃ ದ್ಯೂತದಲ್ಲಿ ಅವನನ್ನು ಸೋಲಿಸಿ, ಪುನಃ ಅರಣ್ಯಕ್ಕೆ ಕಳುಹಿಸುತ್ತೇನೆ. ಕೌಂತೇಯರು ಅವನನ್ನು ಹಿಂಬಾಲಿಸಿ ಹೋಗುತ್ತಾರೆ. ಅಂಥಹ ಜಯವು ನನಗೆ ದೀರ್ಘಕಾಲವುಳಿಯುತ್ತದೆ ಎಂದು ವ್ಯಕ್ತವಾಗುತ್ತಿದೆ. ಇದರಿಂದಾಗಿ ನಾನು ಎಂದೂ ಧರ್ಮರಾಜನ ವಧೆಯನ್ನು ಬಯಸುವುದಿಲ್ಲ.”
ಅವನ ನಾಲಿಗೆಯಿಂದ ಅವನ ಅಭಿಪ್ರಾಯವನ್ನು ತಿಳಿದ ಅರ್ಥತತ್ವಗಳನ್ನು ತಿಳಿದಿದ್ದ ಬುದ್ಧಿಮಾನ್ ದ್ರೋಣನು ಕೂಡಲೇ ಯೋಚಿಸಿ ಅವನಿಗೆ ವರವನ್ನಿತ್ತನು: “ವೀರ! ಒಂದುವೇಳೆ ಅರ್ಜುನನು ಯುದ್ಧದಲ್ಲಿ ಯುಧಿಷ್ಠಿರನನ್ನು ರಕ್ಷಿಸುತ್ತಿಲ್ಲವಾದರೆ ಜ್ಯೇಷ್ಠ ಪಾಂಡವನನ್ನು ನಾನು ಸೆರೆಹಿಡಿದು ತರುತ್ತೇನೆ ಎಂದು ತಿಳಿ. ರಣದಲ್ಲಿ ಪಾರ್ಥನನ್ನು ಜಯಿಸಲು ಇಂದ್ರಸಮೇತರಾದ ದೇವಾಸುರರಿಂದಲೂ ಶಕ್ಯವಾಗುವುದಿಲ್ಲ. ಆದುದರಿಂದ ಅವನ ಮೇಲೆ ಆಕ್ರಮಣಿಸಲಾಗಲೀ ಜಯಿಸಲಾಗಲೀ ನಾನು ಯಾವಾಗಲೂ ಯೋಚಿಸುವುದೇ ಇಲ್ಲ. ಅವನು ನನ್ನ ಶಿಷ್ಯನೆಂಬುವುದರಲ್ಲಿ ಸಂಶಯವಿಲ್ಲ. ಅಸ್ತ್ರಗಳನ್ನು ಬೋಧಿಸಿದುದರಲ್ಲಿ ಅವನಿಗೆ ನಾನೇ ಮೊದಲಿಗನು. ಅವನಿನ್ನೂ ತರುಣನು. ಅನೇಕ ಪುಣ್ಯಕಾರ್ಯಗಳನ್ನು ಮಾಡಿದ ಸುಕೃತನು. ಇನ್ನು ಹೆಚ್ಚಾಗಿ ಇಂದ್ರ ಮತ್ತು ರುದ್ರರಿಂದ ಅಸ್ತ್ರಗಳನ್ನು ಸಂಪಾದಿಸಿದ್ದಾನೆ. ನಿನ್ನ ಮೇಲೆ ಕುಪಿತನಾಗಿದ್ದಾನೆ. ನಾನು ಅವನ ಮೇಲೆ ಸಿಟ್ಟಾಗುವುದಿಲ್ಲ. ಯಾವುದಾದರೂ ಉಪಾಯವನ್ನು ಹೂಡಿ ಯುದ್ಧದಿಂದ ನೀನು ಪಾರ್ಥನನ್ನು ದೂರಕಳುಹಿಸಲು ಶಕ್ಯನಾದರೆ ನೀನು ಧರ್ಮರಾಜನನ್ನು ಗೆದ್ದಂತೆಯೇ. ಅವನನ್ನು ಹಿಡಿಯುವುದರಿಂದಲೇ ಜಯವೆಂದು ನೀನು ಅಭಿಪ್ರಾಯ ಪಟ್ಟಿದ್ದೀಯೇ. ಈ ಉಪಾಯದಿಂದ ಅವನನ್ನು ಹಿಡಿಯುವುದು ಖಂಡಿತ ಸಾಧ್ಯವಾಗುತ್ತದೆ. ರಾಜನ್! ಕುಂತೀಪುತ್ರ ಧನಂಜಯನನ್ನು ದೂರಕ್ಕೆ ಒಯ್ದ ನಂತರ ಒಂದು ಕ್ಷಣಕಾಲವೂ ಅವನು ನನ್ನ ಎದುರು ನಿಂತರೆ ಆ ಸತ್ಯಧರ್ಮಪರಾಯಣ ರಾಜನನ್ನು ಹಿಡಿದು ನಿನ್ನ ವಶದಲ್ಲಿ ಇಂದು ತರುತ್ತೇನೆ. ಅದರಲ್ಲಿ ಸಂಶಯ ಬೇಡ. ಪಾರ್ಥ ಫಲ್ಗುನನು ನೋಡುತ್ತಿರುವಾಗಲೇ ಸಮರದಲ್ಲಿ ಯುಧಿಷ್ಠಿರನನ್ನು ಸೆರೆಹಿಡಿಯಲು ಇಂದ್ರನೊಂದಿಗೆ ಸುರಾಸುರರಿಗೂ ಸಾಧ್ಯವಿಲ್ಲ.”
ರಾಜನನ್ನು ಸೆರೆಹಿಡಿಯಲು ದ್ರೋಣನು ಈ ರೀತಿ ನಿಬಂಧನೆಗಳೊಂದಿಗೆ ಪ್ರತಿಜ್ಞೆ ಮಾಡಲು ಧೃತರಾಷ್ಟ್ರನ ಪುತ್ರರು ಬಾಲಕರಂತೆ ಅವನು ಸೆರೆಹಿಡಿಯಲ್ಪಟ್ಟನೆಂದೇ ಭಾವಿಸಿದರು. ಪಾಂಡವರೊಂದಿಗೆ ದ್ರೋಣನ ಪಕ್ಷಪಾತವಿದೆಯೆಂದು ದುರ್ಯೋಧನನು ತಿಳಿದಿದ್ದನು. ಆದುದರಿಂದ ರಹಸ್ಯದಲ್ಲಿ ಮಾಡಿದ್ದ ಪ್ರತಿಜ್ಞೆಯನ್ನು ಬಹಿರಂಗಗೊಳಿಸಿದನು. ಆಗ ದುರ್ಯೋಧನನು ಪಾಂಡವನ ಸೆರೆಹಿಡಿಯುವುದರ ಕುರಿತು ಎಲ್ಲ ಸೈನ್ಯ ಸ್ಥಾನಗಳಲ್ಲಿ ಘೋಷಿಸಿದನು.
ಅರ್ಜುನನಿಂದ ಯುಧಿಷ್ಠಿರನಿಗೆ ಆಶ್ವಾಸನೆ; ಹನ್ನೊಂದನೆಯ ದಿನದ ಯುದ್ಧಾರಂಭ
ಯುಧಿಷ್ಠಿರನ ಸೆರೆಹಿಡಿಯುವುದರ ಕುರಿತು ಅದನ್ನು ಕೇಳಿದ ಸೈನಿಕರು ಸಿಂಹನಾದಗೈದರು. ಬಾಣ ಶಂಖಗಳಿಂದ ತುಮುಲ ಶಬ್ಧಮಾಡಿದರು. ಭಾರದ್ವಾಜನು ಮಾಡಿದ ಪ್ರತಿಜ್ಞೆಯನ್ನು ಸಂಪೂರ್ಣವಾಗಿ ನಡೆದಂತೆ ಆಪ್ತರಿಂದ ಧರ್ಮರಾಜನು ತಿಳಿದುಕೊಂಡನು. ಆಗ ಎಲ್ಲಕಡೆಗಳಿಂದ ತಮ್ಮಂದಿರನ್ನೂ ಸೇನೆಗಳನ್ನೂ ಕರೆಯಿಸಿಕೊಂಡು ಧರ್ಮರಾಜನು ಧನಂಜಯನಿಗೆ ಈ ಮಾತುಗಳನ್ನಾಡಿದನು. “ಪುರುಷವ್ಯಾಘ್ರ! ಇಂದು ದ್ರೋಣನು ಮಾಡಿದ ಪ್ರತಿಜ್ಞೆಯನ್ನು ನೀನೂ ಕೇಳಿದೆಯಲ್ಲವೇ? ಅದು ಸತ್ಯವಾಗದ ಹಾಗೆ ನೀತಿಯನ್ನು ರೂಪಿಸಬೇಕಾಗಿದೆ. ದ್ರೋಣನ ಪ್ರತಿಜ್ಞೆಯಲ್ಲಿ ಒಂದು ಛಿದ್ರವನ್ನಿಟ್ಟಿದ್ದಾರೆಂದು ತಿಳಿದಿದೆ. ಆ ಛಿದ್ರವು ಯಶಸ್ವಿಯಾಗದೇ ಇರುವುದು ನಿನ್ನ ಮೇಲೆ ಅವಲಂಬಿಸಿದೆ. ದ್ರೋಣನ ಪ್ರತಿಜ್ಞೆಯ ಮೂಲಕವಾಗಿ ದುರ್ಯೋಧನನು ತನ್ನ ಇಚ್ಛೆಯನ್ನು ಪೂರೈಸಿಕೊಳ್ಳದ ಹಾಗೆ ಇಂದು ನೀನು ನನ್ನ ಹತ್ತಿರವಿದ್ದೇ ಯುದ್ಧಮಾಡಬೇಕು!”
ಅರ್ಜುನನು ಹೇಳಿದನು: “ರಾಜನ್! ಆಚಾರ್ಯರ ವಧೆಯು ಎಂದೂ ನನ್ನ ಕೆಲಸವಲ್ಲವೋ ಹಾಗೆ ನಿನ್ನನ್ನು ಪರಿತ್ಯಜಿಸುವುದೂ ನಾನು ಇಚ್ಛಿಸುವ ಕೆಲಸವಲ್ಲ. ಯುದ್ಧದಲ್ಲಿ ನಾನು ಪ್ರಾಣಗಳನ್ನು ತ್ಯಜಿಸಿಯೇನು. ಆದರೆ ಆಚಾರ್ಯರ ಕುರಿತು ವಿರೋಧಭಾವನೆಯನ್ನು ಮಾತ್ರ ಖಂಡಿತವಾಗಿಯೂ ಇಟ್ಟುಕೊಳ್ಳುವುಲ್ಲ. ನಿನ್ನನ್ನು ಸಮರದಲ್ಲಿ ಬಂಧಿಸಲು ಧಾರ್ತರಾಷ್ಟ್ರನು ಏನು ಇಚ್ಛಿಸಿರುವನೋ ಆ ಬಯಕೆಯನ್ನು ಅವನು ಈ ಜೀವಲೋಕದಲ್ಲಿ ಎಂದೂ ಪೂರೈಸಿಕೊಳ್ಳಲಾರ. ನಕ್ಷತ್ರಸಹಿತವಾಗಿ ಆಕಾಶವೇ ಕೆಳಗೆ ಬೀಳಬಹುದು. ಭೂಮಿಯು ಚೂರುಚೂರಾಗಬಹುದು. ಆದರೆ ನಾನು ಜೀವಿಸಿರುವಾಗ ದ್ರೋಣರು ನಿನ್ನನ್ನು ಸೆರೆಹಿಡಿಯಲಾರರು. ಇದು ಖಂಡಿತ. ಒಂದುವೇಳೆ ಅವನಿಗೆ ರಣದಲ್ಲಿ ಸಹಾಯವಾಗಿ ಸ್ವಯಂ ವಜ್ರಭೃತುವು ದೇವ ಅಥವಾ ದೈತ್ಯರೊಂದಿಗೆ ಬಂದರೂ ಕೂಡ ಅವನು ನಿನ್ನನ್ನು ಯುದ್ಧದಲ್ಲಿ ಬಂಧಿಸಲಾರನು. ನಾನು ಜೀವಿಸಿರುವಾಗ ನೀನು ಅಸ್ತ್ರಭೃತರಲ್ಲಿ ಶ್ರೇಷ್ಠನಾದ ದ್ರೋಣರಿಗಾಗಲೀ ಸರ್ವ ಶಸ್ತ್ರಭೃತರಿಗಾಗಲೀ ಭಯಪಡಬಾರದು. ಸುಳ್ಳುಹೇಳಿರುವುದು ನೆನಪಿಲ್ಲ. ಪರಾಜಯಗೊಂಡಿದುದು ನೆನಪಿಲ್ಲ. ಎಂದಾದರೂ ಪ್ರತಿಜ್ಞೆಯನ್ನು ಸುಳ್ಳಾಗಿಸಿ ನಡೆದುಕೊಂಡಿದುದರ ನೆನಪಿಲ್ಲ.”
ಆಗ ಪಾಂಡವರ ಶಿಬಿರದಲ್ಲಿ ಶಂಖ, ಭೇರಿ, ಮೃದಂಗ, ಅನಕಗಳನ್ನು ಒಟ್ಟಿಗೇ ಬಾರಿಸಲಾಯಿತು. ಮಹಾತ್ಮ ಪಾಂಡವರ ಸಿಂಹನಾದವೂ ಸೇರಿಕೊಂಡು ಕೇಳಿಬಂದಿತು. ಧನುಸ್ಸಿನ ಭಯಂಕರ ಟೇಂಕಾರ ಶಬ್ಧವು ಗಗನದಲ್ಲಿ ಮೊಳಗಿತು. ಮಹಾತ್ಮ ಪಾಂಡವರ ಶಂಖನಿರ್ಘೋಷವನ್ನು ಕೇಳಿ ಕೌರವ ಸೇನೆಗಳಲ್ಲಿಯೂ ಕೂಡ ವಾದಿತ್ರಾದಿ ವಾದ್ಯಗಳನ್ನು ಬಾರಿಸಲಾಯಿತು.
ಸೇನಾಪತಿತ್ವವನ್ನು ಪಡೆದು ಮಹಾರಥ ಭಾರದ್ವಾಜನು ಸೈನ್ಯಗಳನ್ನು ವ್ಯೂಹದಲ್ಲಿ ರಚಿಸಿ ಕೌರವರೊಡನೆ ಹೊರಟನು. ಸೈಂಧವ, ಕಲಿಂಕ ಮತ್ತು ವಿಕರ್ಣರು ಕವಚಗಳನ್ನು ಧರಿಸಿ ಬಲಭಾಗದಲ್ಲಿ ನಿಂತರು. ಅವರ ಬೆಂಬಲವಾಗಿ ಶಕುನಿಯು ಹೊಳೆಯುವ ಪ್ರಾಸಗಳನ್ನು ಹಿಡಿದಿದ್ದ ಶ್ರೇಷ್ಠ ಗಾಂಧಾರಕ ಅಶ್ವಯೋಧಿಗಳೊಂದಿಗೆ ನಡೆದನು. ಕೃಪ, ಕೃತವರ್ಮ, ಚಿತ್ರಸೇನ, ವಿವಿಂಶತಿಯರು ದುಃಶಾಸನನ ನಾಯಕತ್ವದಲ್ಲಿ ಎಡ ಭಾಗವನ್ನು ರಕ್ಷಿಸುತ್ತಿದ್ದರು. ಅವರ ಬೆಂಬಲಿಗರಾಗಿ ಸುದಕ್ಷಿಣನನ್ನು ಮುಂದಿರಿಸಿಕೊಂಡು ಕಾಂಬೋಜರು ಶಕ ಮತ್ತು ಯವನರೊಂದಿಗೆ ಮಹಾವೇಗದ ಕುದುರೆಗಳ ಮೇಲೆ ಹೊರಟರು. ಮದ್ರರು, ತ್ರಿಗರ್ತರು, ಅಂಬಷ್ಠರು, ಪೂರ್ವದವರು, ಉತ್ತರದವರು, ಶಿಬಿಗಳು, ಶೂರಸೇನರು, ಶೂದ್ರರು, ಮಲದರು, ಸೌವೀರರು, ಕಿತವರು, ಪಶ್ಚಿಮದವರು, ದಕ್ಷಿಣದವರು ಎಲ್ಲರೂ ದುರ್ಯೋಧನನನ್ನು ಮುಂದಿರಿಸಿಕೊಂಡು ಸೂತಪುತ್ರನ ಹಿಂದೆ ನಡೆದರು. ವೈಕರ್ತನ ಕರ್ಣನು ಸರ್ವ ಧನ್ವಿಗಳ ಪ್ರಮುಖನಾಗಿ ಸರ್ವ ಸೇನೆಗಳನ್ನು ಹರ್ಷಗೊಳಿಸುತ್ತಾ, ಸೇನೆಗಳಿಗೆ ಬಲವನ್ನು ನೀಡುತ್ತಾ ನಡೆದನು. ಆನೆಯ ಹಗ್ಗದ ಚಿಹ್ನೆಯುನ್ನು ಹೊಂದಿದ ಅವನ ಅತಿ ದೊಡ್ಡದೂ ಎತ್ತರವೂ ಆದ ಧ್ವಜವು ಸೂರ್ಯನ ಬೆಳಕಿನಂತೆ ಬೆಳಗಿ ಅವನ ಸೇನೆಗಳನ್ನು ಹರ್ಷಗೊಳಿಸುತ್ತಿತ್ತು. ಕರ್ಣನನ್ನು ನೋಡಿ ಕುರುಗಳೊಂದಿಗೆ ಎಲ್ಲ ರಾಜರೂ ಭೀಷ್ಮನನ್ನು ಕಳೆದುಕೊಂಡಿದುದರ ದುಃಖವನ್ನು ಮರೆತಿದ್ದರು. ಅಲ್ಲಿ ಹೃಷ್ಟರಾಗಿದ್ದ ಅನೇಕ ಯೋಧರು ಒಟ್ಟಿಗೇ ಮಾತನಾಡಿಕೊಳ್ಳುತ್ತಿದ್ದರು: “ರಣದಲ್ಲಿ ಕರ್ಣನನ್ನು ನೋಡಿ ಪಾಂಡವರು ಯುದ್ಧದಲ್ಲಿ ನಿಲ್ಲಲಾರರು. ಏಕೆಂದರೆ ಕರ್ಣನೊಬ್ಬನೇ ಸಮರದಲ್ಲಿ ವಾಸವನೊಂದಿಗೆ ದೇವತೆಗಳನ್ನು ಗೆಲ್ಲಲು ಶಕ್ತ. ಇನ್ನು ಯುದ್ಧದಲ್ಲಿ ಕಡಿಮೆ ವೀರ್ಯ-ಪರಾಕ್ರಮಗಳುಳ್ಳ ಪಾಂಡವರು ಯಾವ ಲೆಖ್ಕಕ್ಕೆ? ಭೀಷ್ಮನಾದರೋ ರಣದಲ್ಲಿ ಪಾರ್ಥರನ್ನು ಪಾಲಿಸಿದನು. ಆದರೆ ಕರ್ಣನು ಅವರನ್ನು ತೀಕ್ಷ್ಣ ಶರಗಳಿಂದ ನಾಶಗೊಳಿಸುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.”
ಹೀಗೆ ಅನ್ಯೋನ್ಯರಲ್ಲಿ ಹೇಳಿಕೊಳ್ಳುತ್ತಾ ಹೃಷ್ಟರೂಪರಾಗಿ ಅವರು ರಾಧೇಯನನ್ನು ಗೌರವಿಸುತ್ತಾ ಪ್ರಶಂಸಿಸುತ್ತಾ ನಡೆದರು. ದ್ರೋಣನು ಹೇಳಿದಂತೆ ಕೌರವ ಸೇನೆಯು ಶಕಟವ್ಯೂಹದಲ್ಲಿ ರಚನೆಗೊಂಡಿತು. ಧರ್ಮರಾಜನಿಂದ ವಿಹಿತವಾದ ಮಹಾತ್ಮ ಶತ್ರುಗಳ ಸೇನೆಯು ಸಂತೋಷದಿಂದ ಕ್ರೌಂಚ ವ್ಯೂಹದ್ದಾಗಿತ್ತು.
ಅವರ ಸೇನೆಯ ಪ್ರಮುಖಸ್ಥಾನದಲ್ಲಿ ವಾನರಧ್ವಜವನ್ನು ಹಾರಿಸಿಕೊಂಡು ಪುರುಷರ್ಷಭರಾದ ವಿಷ್ವಕ್ಸೇನ-ಧನಂಜಯರಿದ್ದರು. ಸರ್ವಸೈನ್ಯಗಳಿಗೂ ಗುರುತಾಗಿದ್ದ, ಸರ್ವಧನುಷ್ಮಂತರಿಗೂ ಆಶ್ರಯಭೂತವಾದ, ಸೂರ್ಯನ ಮಾರ್ಗವಾದ ಆಕಾಶದಲ್ಲಿ ಹಾರಾಡುತ್ತಿದ್ದ ಅಮಿತ ತೇಜಸ್ವಿ ಪಾರ್ಥನ ಆ ಧ್ವಜವು ಮಹಾತ್ಮ ಪಾಂಡವನ ಸೈನ್ಯವನ್ನು ಯುಗಾಂತದಲ್ಲಿ ಸೂರ್ಯನು ಭೂಮಿಯನ್ನು ಬೆಳಗುವಂತೆ ಪ್ರಜ್ವಲಿಸಿ ಬೆಳಗಿಸುತ್ತಿತ್ತು. ಯೋಧರಲ್ಲಿ ಅರ್ಜುನನು ಶ್ರೇಷ್ಠ. ಧನುಸ್ಸುಗಳಲ್ಲಿ ಗಾಂಡೀವ, ಇರುವವರಲ್ಲಿ ವಾಸುದೇವ ಮತ್ತು ಚಕ್ರಗಳಲ್ಲಿ ಸುದರ್ಶನವು ಶ್ರೇಷ್ಠವು. ಈ ನಾಲ್ಕೂ ತೇಜಸ್ಸುಗಳನ್ನೂ ಏರಿಸಿಕೊಂಡ ಶ್ವೇತಹಯಗಳ ರಥವು ಕಾಲಚಕ್ರದಂತೆ ಶತ್ರುಸೇನೆಯ ಅಗ್ರಭಾಗದಲ್ಲಿ ನಿಂತಿತ್ತು. ಹೀಗೆ ಅವರಿಬ್ಬರು ಮಹಾತ್ಮರೂ ಬಲಿಷ್ಟವಾದ ತಮ್ಮ ಸೇನೆಯ ಅಗ್ರಭಾಗದಲ್ಲಿ ಇದ್ದರು. ಕೌರವರ ಮುಂಬಾಗದಲ್ಲಿ ಕರ್ಣ ಮತ್ತು ಶತ್ರುಸೇನೆಯ ಮುಂದೆ ಧನಂಜಯರರು ನಿಂತಿದ್ದರು. ಆಗ ಕರ್ಣ-ಪಾಂಡವರಿಬ್ಬರೂ ತಮ್ಮ ತಮ್ಮ ಪಕ್ಷಕ್ಕೆ ವಿಜಯವನ್ನು ಗಳಿಸಿಕೊಡಬೇಕೆಂದು ಕ್ರುದ್ಧರಾಗಿ ಅನ್ಯೋನ್ಯರನ್ನು ವಧೆಮಾಡುವ ಇಚ್ಛೆಯಿಂದ ಪರಸ್ಪರರನ್ನು ದುರುಗುಟ್ಟಿಕೊಂಡು ನೋಡುತ್ತಿದ್ದರು.
ಆಗ ಮಹಾರಥ ಭಾರದ್ವಾಜನು ಬರಲು ಘೋರವಾದ ಅಂತರ್ನಾದದೊಂದಿಗೆ ಭೂಮಿಯು ಕಂಪಿಸಿತು. ಆಗ ಪ್ರಚಂಡ ಭಿರುಗಾಳಿಯು ಬೀಸಿ ರೇಷ್ಮೆಯಂತೆ ನವಿರಾದ ಧೂಳೆದ್ದು ಅದು ಸೂರ್ಯಸಹಿತವಾದ ಆಕಾಶವನ್ನೇ ವ್ಯಾಪಿಸಿತು. ಮೋಡಗಳಿಲ್ಲದಿದ್ದರೂ ಆಕಾಶದಿಂದ ಮಾಂಸ, ಮೂಳೆ ಮತ್ತು ರಕ್ತಗಳ ಮಳೆಯು ಸುರಿಯಿತು. ಹದ್ದುಗಳು, ಗಿಡುಗಗಳು, ಬಕಗಳು, ರಣಹದ್ದುಗಳು ಮತ್ತು ಕಾಗೆಗಳು ಸಹಸ್ರಾರು ಸಂಖ್ಯೆಗಳಲ್ಲಿ ನಿನ್ನ ಸೇನೆಯ ಮೇಲ್ಬಾಗದಲ್ಲಿ ಹಾರಾಡುತ್ತಿದ್ದವು. ಗುಳ್ಳೇನರಿಗಳು ಭಯಂಕರವಾಗಿ ವಿಕಾರವಾಗಿ ಕಿರುಚಿಕೊಳ್ಳುತ್ತಿದ್ದವು. ರಕ್ತವನ್ನು ಕುಡಿಯಲು ಮತ್ತು ಮಾಂಸವನ್ನು ತಿನ್ನಲು ಅವು ಅನೇಕ ಸಂಖ್ಯೆಗಳಲ್ಲಿ ನಿನ್ನ ಸೇನೆಯನ್ನು ಅಪ್ರದಕ್ಷಿಣೆಹಾಕಿ ಸುತ್ತುತ್ತಿದ್ದವು. ಬೆಳಗುತ್ತಿರುವ ಉಲ್ಕೆಗಳು ಉರಿಯುತ್ತಾ ಬಾಲದಿಂದ ರಣರಂಗವನ್ನು ಎಲ್ಲ ಕಡೆಗಳಿಂದ ಆವರಿಸಿ, ಮಹಾ ಶಬ್ಧದೊಂದಿಗೆ ನಡುಗುತ್ತಾ ಬಿದ್ದಿತು. ಆ ಸೇನಾಪತಿಗಳು ಮುಂದೆ ಬರುವಾಗ ಭಾಸ್ಕರನ ಮಂಡಲದಿಂದ ವಿದ್ಯುತ್ತಿನಂತೆ ಬೆಳಕು ಮತ್ತು ಗುಡುಗಿನಂತೆ ಶಬ್ಧಗಳು ಬರುತ್ತಿದ್ದವು. ಯುದ್ಧದಲ್ಲಿ ವೀರರ ಸಾವನ್ನು ಸೂಚಿಸುವ ಇವು ಮತ್ತು ಇನ್ನೂ ಅನೇಕ ದಾರುಣ ಉತ್ಪಾತಗಳು ಅಲ್ಲಿ ನಡೆಯಿತು.
ಆಗ ಪರಸ್ಪರರನ್ನು ವಧಿಸಲು ಬಯಸಿದ್ದ ಕುರುಪಾಂಡವ ಸೈನ್ಯಗಳ ನಡುವೆ ಜಗತ್ತನ್ನೇ ಶಬ್ಧದಿಂದ ಮೊಳಗಿಸುತ್ತಾ ಯುದ್ಧವು ನಡೆಯಿತು. ಅನ್ಯೋನ್ಯರೊಡನೆ ಕ್ರೋಧಿತರಾದ ಪ್ರಹಾರದಲ್ಲಿ ನಿಷ್ಣಾತರಾದ ಪಾಂಡವ-ಕೌರವರು ಒಟ್ಟಿಗೇ ನಿಶಿತ ಬಾಣಗಳಿಂದ ಕೊಲ್ಲತೊಡಗಿದರು. ಆ ಮಹೇಷ್ವಾಸ ಮಹಾದ್ಯುತಿಯು ವೇಗದಿಂದ ಆಕ್ರಮಣಿಸಿ ಪಾಂಡವರ ಮಹಾಸೇನೆಯ ಮೇಲೆ ನೂರಾರು ನಿಶಿತ ಶರಗಳನ್ನು ಎರಚಿದನು. ದ್ರೋಣನು ಮೇಲೆ ಎರಗಿದುದನ್ನು ನೋಡಿ ಪಾಂಡವರೊಂದಿಗೆ ಸೃಂಜಯರು ಅವನನ್ನು ಮೇಲಿಂದ ಮೇಲೆ ಶರವರ್ಷಗಳಿಂದ ತಡೆದುಕೊಂಡರು. ದ್ರೋಣನಿಂದ ಕ್ಷೋಭೆಗೊಂಡ ಮತ್ತು ಒಡೆದುಹೋದ ಪಾಂಚಾಲರ ಆ ಮಹಾಸೇನೆಯು ಭಿರುಗಾಳಿಗೆ ಸಿಲುಕಿದ ಬೆಳ್ಳಕ್ಕಿಗಳ ಸಾಲಿನಂತೆ ಚದುರಿ ಹೋಯಿತು. ಅನೇಕ ದಿವ್ಯಾಸ್ತ್ರಗಳನ್ನು ಪ್ರಯೋಗಿಸುತ್ತಾ ದ್ರೋಣನು ಕ್ಷಣದಲ್ಲಿಯೇ ಪಾಂಡವ-ಸೃಂಜಯರ ಸೇನೆಯನ್ನು ಪೀಡಿಸಿದನು.
ವಾಸವನಿಂದ ದಾನವರಂತೆ ದ್ರೋಣನಿಂದ ವಧಿಸಲ್ಪಡುತ್ತಿದ್ದ ಧೃಷ್ಟದ್ಯುಮ್ನನ ನಾಯಕತ್ವದಲ್ಲಿದ್ದ ಪಾಂಚಾಲರು ತತ್ತರಿಸಿದರು. ಆಗ ದಿವ್ಯಾಸ್ತ್ರಗಳನ್ನು ತಿಳಿದಿದ್ದ ಮಹಾರಥ ಶೂರ ಯಾಜ್ಞಸೇನಿಯು ಶರವರ್ಷಗಳಿಂದ ದ್ರೋಣನ ಸೇನೆಯನ್ನು ಅನೇಕ ಕಡೆಗಳಲ್ಲಿ ಭೇದಿಸಿದನು. ದ್ರೋಣನ ಶರವರ್ಷಗಳನ್ನು ತನ್ನದೇ ಶರವರ್ಷಗಳಿಂದ ತುಂಡುಮಾಡಿ ಆ ಬಲಶಾಲಿಯು ಕುರುಗಳ ಸೇನೆಯನ್ನು ತಡೆದನು. ಆಗ ಮಹಾಬಾಹು ದ್ರೋಣನು ಯುದ್ಧದಲ್ಲಿ ತನ್ನ ಸೇನೆಯನ್ನು ಒಟ್ಟುಗೂಡಿಸಿಕೊಂಡು ಪಾರ್ಷತನ ಮೇಲೆ ಆಕ್ರಮಣ ಮಾಡಿದನು. ಕ್ರುದ್ಧನಾದ ಮಘವಾನನು ಒಮ್ಮಿಂದೊಮ್ಮೆಲೇ ದಾನವರ ಮೇಲೆ ಹೇಗೋ ಹಾಗೆ ಅವನು ಪಾರ್ಷತನ ಮೇಲೆ ಬಾಣಗಳ ಅತಿದೊಡ್ಡ ಮಳೆಯನ್ನು ಸುರಿಸಿದನು. ದ್ರೋಣನ ಬಾಣಗಳಿಂದ ತತ್ತರಿಸಿದ ಪಾಂಡವ-ಸೃಂಜಯರು ಸಿಂಹನಿಂದ ಆಕ್ರಮಣಿಸಲ್ಪಟ್ಟ ಇತರ ಮೃಗಗಳಂತೆ ಪುನಃ ಪುನಃ ಚದುರಿ ಹೋಗುತ್ತಿದ್ದರು. ಹೀಗೆ ಬಲಶಾಲೀ ದ್ರೋಣನು ಬೆಂಕಿಯ ಚಕ್ರದಂತೆ ಪಾಂಡವರ ಸೇನೆಯಲ್ಲಿ ರಾಜಿಸುತ್ತಿದ್ದನು. ಆಗ ಈ ಅದ್ಭುತವು ನಡೆಯಿತು. ಆಕಾಶದಲ್ಲಿ ಚಲಿಸುತ್ತಿರುವ ನಗರದಂತೆ ಶಾಸ್ತ್ರೋಕ್ತವಾಗಿ ಸಜ್ಜುಗೊಳಿಸಿದ್ದ, ಗಾಳಿಯಿಂದ ಹಾರಾಡುತ್ತಿದ್ದ ಪತಾಕೆಯುಳ್ಳ, ರಣಭೂಮಿಯನ್ನೇ ತುಂಬುವ ಗಾಲಿಯ ಶಬ್ಧಗಳನ್ನುಳ್ಳ, ಸ್ಪಟಿಕದಂತೆ ಹೊಳೆಯುತ್ತಿದ್ದ ಬಾವುಟವುಳ್ಳ ಶತ್ರುಗಳನ್ನು ಸುಡುವ ಶ್ರೇಷ್ಠವಾದ ರಥವನ್ನೇರಿ ದ್ರೋಣನು ಅರಿಸೇನೆಯನ್ನು ಸಂಹರಿಸತೊಡಗಿದನು.
ಹಾಗೆ ದ್ರೋಣನು ಅಶ್ವ-ಸೂತ-ರಥ-ಗಜಗಳೊಡನೆ ಸಂಹರಿಸುತ್ತಾ ಅವರನ್ನು ಸುತ್ತುವರೆದುದನ್ನು ನೋಡಿ ಪಾಂಡವರು ವ್ಯಥಿತರಾದರು. ಆಗ ರಾಜಾ ಯುಧಿಷ್ಠಿರನು ಧೃಷ್ಟದ್ಯುಮ್ನ ಧನಂಜಯರಿಗೆ “ಕುಂಭಯೋನಿಜನನ್ನು ತಡೆಯುವ ಸರ್ವ ಯತ್ನಗಳೂ ನಡೆಯಲಿ!” ಎಂದನು. ಆಗ ಅರ್ಜುನ ಮತ್ತು ಪಾರ್ಷತರು ಎಲ್ಲ ಮಹಾರಥ ಅನುಯಾಯಿಗಳೊಂದಿಗೆ ದ್ರೋಣನನ್ನು ಮುತ್ತಿದರು. ಕೇಕಯರು, ಭೀಮಸೇನ, ಸೌಭದ್ರ, ಘಟೋತ್ಕಚ, ಯುಧಿಷ್ಠಿರ, ಯಮಳರು, ಮತ್ಸ್ಯರು, ದ್ರುಪದನ ಮಕ್ಕಳು, ದ್ರೌಪದಿಯ ಮಕ್ಕಳು, ಸಂಹೃಷ್ಟನಾಗಿದ್ದ ಧೃಷ್ಟಕೇತು ಸಾತ್ಯಕಿಯರು, ಚೇಕಿತಾನ, ಸಂಕ್ರುದ್ಧನಾಗಿದ್ದ ಮಹಾರಥಿ ಯುಯುತ್ಸು ಇವರು ಮತ್ತು ಪಾಂಡವರನ್ನು ಬೆಂಬಲಿಸಿದ ಅನ್ಯ ಪಾರ್ಥಿವರು ಅವರವರ ಕುಲ ವೀರ್ಯಗಳಿಗನುಗುಣವಾಗಿ ಅನೇಕ ಕರ್ಮಗಳನ್ನೆಸಗಿದರು. ರಣದಲ್ಲಿ ಪಾಂಡವರು ಸಂಗ್ರಹಿಸಿ ಸಂರಕ್ಷಿಸಿದ್ದ ಆ ಸೇನೆಯನ್ನು ನೋಡಿ ಭಾರದ್ವಾಜನು ಕೋಪದಿಂದ ಕಣ್ಣುಗಳನ್ನರಳಿಸಿ ನೋಡಿದನು. ಆ ಸಮರದುರ್ಮದನು ತೀವ್ರವಾಗಿ ಕೋಪಗೊಂಡು ಪಾಂಡವರ ಸೇನೆಯನ್ನು ಮೋಡಗಳನ್ನು ಚದುರಿಸುವಂತೆ ಭೇದಿಸಿದನು. ವೃದ್ಧನಾಗಿದ್ದರೂ ತರುಣನಂತೆ ಉನ್ಮತ್ತನಾಗಿರುವನೋ ಎನ್ನುವಂತೆ ದ್ರೋಣನು ಅಲ್ಲಿಂದಿಲ್ಲಿಗೆ ಧಾವಿಸುತ್ತಾ ಅವರ ರಥಗಳನ್ನೂ, ಕುದುರೆಗಳನ್ನೂ, ಸೈನಿಕರನ್ನೂ, ಆನೆಗಳನ್ನೂ ವಧಿಸುತ್ತಿದ್ದರು. ಸ್ವಭಾವತಃ ಕೆಂಪಾಗಿದ್ದ ಅವನ ಕುದುರೆಗಳು ರಕ್ತದಿಂದ ತೋಯ್ದ ಶರೀರಗಳಿಂದ ಇನ್ನೂ ಹೆಚ್ಚು ಕೆಂಪಾಗಿ ಕಾಣುತ್ತಿದ್ದವು. ವಾಯುವೇಗದ ಅವು ಅವಿಭ್ರಾಂತರಾಗಿ ಅವನನ್ನು ಕೊಂಡೊಯ್ಯುತ್ತಿದ್ದವು. ಅಂತಕನಂತೆ ಕ್ರುದ್ಧನಾಗಿ ಮೇಲೆ ಬೀಳುತ್ತಿದ್ದ ಆ ಯತವ್ರತನನ್ನು ನೋಡಿ ಪಾಂಡವರ ಯೋಧರು ಎಲ್ಲ ಕಡೆಗಳಲ್ಲಿ ಓಡಿ ಹೋಗುತ್ತಿದ್ದರು. ಹೀಗೆ ಓಡಿಹೋಗುತ್ತಿರುವವರ, ಪುನಃ ಹಿಂದಿರುಗುತ್ತಿರುವವರ, ಸುಮ್ಮನೆ ನಿಂತು ನೋಡುತ್ತಿದ್ದವರ, ನಿಂತು ಕೂಗಿಕೊಳ್ಳುತ್ತಿದ್ದವರ ಭೀಕರ ಶಬ್ಧವು ಪರಮ ದಾರುಣವಾಗಿತ್ತು.
ಆಕಾಶ-ಭೂಮಿಗಳನ್ನು ಎಲ್ಲ ಕಡೆಯಿಂದಲೂ ತುಂಬಿಬಿಟ್ಟಿದ್ದ ಆ ತುಮುಲವು ಶೂರರಿಗೆ ಹರ್ಷವನ್ನಿತ್ತರೆ ದುರ್ಬಲಹೃದಯದವರ ಭಯವನ್ನು ಹೆಚ್ಚಿಸುತ್ತಿತ್ತು. ಆಗ ಪುನಃ ದ್ರೋಣನು ಯುದ್ಧದಲ್ಲಿ ತನ್ನ ಹೆಸರನ್ನು ಕೇಳಿಸುತ್ತಾ ತನ್ನ ರೂಪವನ್ನು ರೌದ್ರವಾಗಿಸಿಕೊಂಡು ಶತ್ರುಗಳ ಮೇಲೆ ನೂರಾರು ಬಾಣಗಳನ್ನು ಎರಚಿದನು. ವೃದ್ಧನಾಗಿದ್ದರೂ ಬಲಶಾಲಿ ಯುವಕನಂತಿದ್ದ ಧೀಮತ ದ್ರೋಣನು ಪಾಂಡವನ ಸೇನೆಗಳ ಮಧ್ಯೆ ಅಂತಕನಂತೆ ಸಂಚರಿಸುತ್ತಿದ್ದನು. ಆ ಮಹಾರಥನು ಉಗ್ರನಾಗಿ ರಥದಲ್ಲಿದ್ದವರ ಶಿರಗಳನ್ನು ಮತ್ತು ಸುಭೂಷಣ ಬಾಹುಗಳನ್ನೂ ಕತ್ತರಿಸಿ ರಥಗಳನ್ನು ಬರಿದುಮಾಡಿ ಗರ್ಜಿಸುತ್ತಿದ್ದನು. ಅವನ ಹರ್ಷಗರ್ಜನೆಯಿಂದ ಮತ್ತು ಬಾಣಗಳ ವೇಗದಿಂದ ರಣದಲ್ಲಿ ಯೋಧರು ಛಳಿಯಿಂದ ನಡುಗುವ ಗೋವುಗಳಂತೆ ನಡುಗುತ್ತಿದ್ದರು. ದ್ರೋಣನ ರಥ ಘೋಷದಿಂದ, ಶಿಂಜನಿಯನ್ನು ಉಜ್ಜುವುದರಿಂದಲೂ, ಧನುಸ್ಸಿನ ಟೇಂಕಾರದಿಂದ ಉಂಟಾದ ಶಬ್ಧವು ಆಕಾಶವನ್ನು ತಲುಪಿ ಅತಿ ಜೋರಾಯಿತು. ಅವನು ಬಿಟ್ಟ ಸಹಸ್ರಾರು ಬಾಣಗಳು ಹೆಚ್ಚಾಗಿ ಎಲ್ಲ ದಿಕ್ಕುಗಳನ್ನೂ ವ್ಯಾಪಿಸಿ ಆನೆ-ಕುದುರೆ-ರಥ-ಪದಾತಿಗಳ ಮೇಲೆ ಬೀಳುತ್ತಿದ್ದವು.
ಆ ಮಹಾಧನ್ವಿ, ಮಹಾವೇಗಿ, ಅಸ್ತ್ರಗಳನ್ನು ಹೊಂದಿದ್ದ, ಪಾವಕನಂತೆ ಪ್ರಜ್ವಲಿಸುತ್ತಿದ್ದ ದ್ರೋಣನನ್ನು ಆಕ್ರಮಣಿಸಲು ಪಾಂಡವರೊಂದಿಗೆ ಪಾಂಚಾಲರು ಪ್ರಯತ್ನಿಸಿದರು. ಅವರನ್ನು ರಥ-ಆನೆ-ಕುದುರೆಗಳೊಂದಿಗೆ ಯಮಸಾದನಕ್ಕೆ ಕಳುಹಿಸಿ ದ್ರೋಣನು ಕ್ಷಣಮಾತ್ರದಲ್ಲಿ ಭೂಮಿಯನ್ನು ರಕ್ತದ ಕೆಸರಿನಿಂದ ತುಂಬಿಸಿದರು. ದ್ರೋಣನಿಂದ ಸತತವಾಗಿ ಪ್ರಯೋಗಿಸಲ್ಪಟ್ಟ ಪರಮಾಸ್ತ್ರಗಳೂ ಶರಗಳೂ ದಿಕ್ಕುಗಳನ್ನು ಬಾಣಗಳ ಜಾಲದಂತೆ ಮುಚ್ಚಿರುವುದು ಕಂಡುಬಂದಿತು. ಪದಾತಿಗಳ, ರಥ-ಕುದುರೆಗಳ, ಆನೆಗಳ ಮಧ್ಯೆ ಎಲ್ಲೆಡೆಯಲ್ಲಿ ಮೋಡಗಳ ಮಧ್ಯೆ ಕಾಣುವ ಮಿಂಚಿನಂತೆ ಅವನ ಧ್ವಜವು ಕಾಣುತ್ತಿತ್ತು. ದ್ರೋಣನು ಬಿಲ್ಲು ಬಾಣಗಳನ್ನು ಹಿಡಿದು ಕೇಕಯರ ಐವರು ಮುಖ್ಯರನ್ನೂ ಪಾಂಚಾಲರಾಜನನ್ನೂ ಶರಗಳಿಂದ ಹೊಡೆದು ಯುಧಿಷ್ಠಿರನ ಸೇನೆಯನ್ನು ಆಕ್ರಮಣಿಸಿದನು. ಭೀಮಸೇನ-ಧನಂಜಯರು, ಸಾತ್ಯಕಿ, ಧೃಷ್ಟದ್ಯುಮ್ನ, ಶೈಬ್ಯನ ಮಗ, ಕಾಶಿರಾಜ, ಶಿಬಿ ಮೊದಲಾದವರು ಹೃಷ್ಟರಾಗಿ ಕೂಗುತ್ತಾ ಶರಸಮೂಹಗಳಿಂದ ಅವನನ್ನು ಮುಚ್ಚಿದರು. ಆಗ ದ್ರೋಣನ ಧನುಸ್ಸಿನಿಂದ ಹೊರಟ ಕಾಂಚನದ ಬಣ್ಣದ ರೆಕ್ಕೆಗಳುಳ್ಳ ಪತತ್ರಿಗಳು ಆನೆ ಕುದುರೆಗಳ ಶರೀರಗಳನ್ನು ಭೇದಿಸಿ ರಕ್ತದಲ್ಲಿ ತೋಯ್ದು ಭೂಮಿಯನ್ನು ಹೊಕ್ಕವು. ಎಲ್ಲ ಕಡೆ ಬಿದ್ದಿದ್ದ ಆ ಯೋಧರ ಗುಂಪುಗಳಿಂದ ಮತ್ತು ರಥಗಳಿಂದ, ಶರಗಳಿಂದ ತುಂಡಾದ ಆನೆ-ಕುದುರೆಗಳಿಂದ ರಣಭೂಮಿಯು ಕಪ್ಪು ಮೋಡಗಳಿಂದ ಕೂಡಿದ ಆಕಾಶದಂತೆ ತೋರಿತು. ನಿನ್ನ ಸುತರಿಗೆ ಒಳಿತನ್ನು ಮಾಡಬಯಸಿ ದ್ರೋಣನು ಶೈನೇಯ-ಭೀಮ-ಅರ್ಜುನರಿಂದ ಪಾಲಿತವಾದ ವಾಹಿನಿಯನ್ನೂ, ಶೈಬ್ಯ, ಅಭಿಮನ್ಯು, ಕಾಶಿರಾಜ, ಮತ್ತು ಇತರ ವೀರರನ್ನು ಸಮರದಲ್ಲಿ ಮರ್ದಿಸುತ್ತಿದ್ದನು.
ದ್ರೋಣನ ಸೇನೆಯನ್ನು ನಾಶಗೊಳಿಸಲು ಪ್ರಯತ್ನಿಸಿದರೂ ದ್ರೋಣನಿಂದ ಪಾಲಿತವಾದ ಸೇನೆಯನ್ನು ವಿನಾಶಗೊಳಿಸಲು ಸೃಂಜಯರು ಶಕ್ಯರಾಗಲಿಲ್ಲ. ಹಾಗೆಯೇ ದುರ್ಯೋಧನನ ರಥೋದಾರ ಪ್ರಹಾರಿಗಳೂ ಕೂಡ ಕಿರೀಟಿಯಿಂದ ಪಾಲಿತಗೊಂಡ ಪಾಂಡವರ ಸೇನೆಯನ್ನು ನಾಶಗೊಳಿಸಲು ಶಕ್ಯರಾಗಲಿಲ್ಲ. ರಾತ್ರಿವೇಳೆ ಸುಪುಷ್ಪಿತ ವನರಾಜಿಗಳು ಹಂದಾಡದೇ ನಿದ್ರಿಸುತ್ತಿರುವಂತೆ ಪರಸ್ಪರರಿಂದ ರಕ್ಷಿಸಲ್ಪಟ್ಟ ಆ ಸೇನೆಗಳು ಸ್ತಿಮಿತವಾಗಿಬಿಟ್ಟಿದ್ದವು. ಆಗ ರುಕ್ಮರಥ ದ್ರೋಣನು ಸೂರ್ಯನಂತೆ ವಿರಾಜಿಸುತ್ತಾ ಸೈನ್ಯದ ಗುಂಪಿನಿಂದ ಹೊರಬಂದು ಸೇನಾವಿಭಾಗಗಳ ಮುಂಭಾಗದಲ್ಲಿ ಸಂಚರಿಸತೊಡಗಿದರು. ಆಹವದಲ್ಲಿ ಒಂದೇರಥದಲ್ಲಿ ಕುಳಿತು ಬಾಣಗಳ ಮಳೆಯನ್ನು ಅವ್ಯಾಹತವಾಗಿ ಸುರಿಸಲು ಅನೇಕ ದ್ರೋಣರು ತಮ್ಮೊಡನೆ ಹೋರಡುತ್ತಿರುವರೋ ಏನೋ ಎಂದು ಪಾಂಡುಸೃಂಜಯರು ಅಂದುಕೊಂಡರು.
ಅವನು ಬಿಟ್ಟ ಘೋರ ಶರಗಳು ಎಲ್ಲ ದಿಕ್ಕುಗಳಲ್ಲಿ ಹರಡಿ ಪಾಂಡವೇಯನ ಸೇನೆಯನ್ನು ಬಹುವಾಗಿ ಭಯಪಡಿಸಿದವು. ನೂರಾರು ಕಿರಣಗಳ ಸೂರ್ಯನು ಮಧ್ಯಾಹ್ನದ ಹೊತ್ತು ತನ್ನ ಉಷ್ಣತೆಯಿಂದ ಸುಡುವಂತೆ ದ್ರೋಣನು ಕಂಡನು. ಸಮರದಲ್ಲಿ ಕ್ರುದ್ಧನಾದ ಮಹೇಂದ್ರನನ್ನು ದಾನವರು ಹೇಗೋ ಹಾಗೆ ಅವನನ್ನು ನೋಡಲು ಪಾಂಡವರು ಯಾರೂ ಶಕ್ಯರಾಗಿರಲಿಲ್ಲ. ಭಾರದ್ವಾಜನು ಬೇಗನೇ ಸೇನೆಗಳನ್ನು ಮೂರ್ಛೆಗೊಳಿಸಿ ಧೃಷ್ಟದ್ಯುಮ್ನನ ಸೇನೆಯನ್ನು ನಿಶಿತ ಶರಗಳಿಂದ ವಧಿಸಿದನು. ಜಿಹ್ಮಗಗಳಿಂದ ಅವನು ಎಲ್ಲ ದಿಕ್ಕುಗಳನ್ನೂ ಆಕಾಶವನ್ನೂ ತುಂಬಿಸಿಬಿಟ್ಟನು. ಪಾರ್ಷತನು ಎಲ್ಲಿದ್ದನೋ ಅಲ್ಲಲ್ಲಿಯೇ ಪಾಂಡವ ವಾಹಿನಿಯನ್ನು ಮರ್ದಿಸಿದನು.
ಆಗ ಪಾಂಡವರ ಸೇನೆಯಲ್ಲಿ ಮಹಾ ತುಮುಲವುಂಟಾಯಿತು. ದ್ರೋಣನು ಸಂಚರಿಸುತ್ತಾ ಪಾಂಡವರನ್ನು ಹುಲ್ಲುಮೆದೆಯಂತೆ ಸುಡುತ್ತಿದ್ದನು. ಭುಗಿಲೆದ್ದ ಸಾಕ್ಷಾತ್ ಅಗ್ನಿಯಂತೆ ಸೇನೆಯನ್ನು ದಹಿಸುತ್ತಿದ್ದ ರುಕ್ಮರಥನನ್ನು ನೋಡಿ ಸೃಂಜಯರು ನಡುಗಿದರು. ಸತತವಾಗಿ ಸೆಳೆಯಲ್ಪಟ್ಟು ಬಾಣಗಳನ್ನು ಬಿಡುತ್ತಿದ್ದ ಧನುಸ್ಸಿನ ಟೇಂಕಾರ ಶಬ್ಧವು ಸಿಡಿಲಿನ ಶಬ್ಧದಂತೆ ಕೇಳಿಬರುತ್ತಿತ್ತು. ಆ ಕೈಚಳಕಿನವನು ಬಿಟ್ಟ ರೌದ್ರ ಸಾಯಕಗಳು ರಥಿಗಳನ್ನೂ, ಅಶ್ವಾರೋಹಿಗಳನ್ನೂ, ಆನೆಗಳನ್ನೂ, ಕುದುರೆಗಳನ್ನೂ, ಪದಾತಿಗಳನ್ನೂ ಹೊಡೆದುರುಳಿಸುತ್ತಿದ್ದವು. ಮಳೆಗಾಲದ ಆರಂಭದಲ್ಲಿ ಮೋಡಗಳು ಭಿರುಗಾಳಿಯಡಗೂಡಿ ಗುಡುಗುತ್ತಾ ಆನೆಕಲ್ಲಿನ ಮಳೆಕರೆಯುವಂತೆ ಬಾಣಗಳ ಮಳೆಗರೆದು ಅವನು ಶತ್ರುಗಳಲ್ಲಿ ಯುದ್ಧದ ಭಯವನ್ನು ಹುಟ್ಟಿಸಿದನು. ಆ ಪ್ರಭುವು ಸಂಚರಿಸುತ್ತಾ ಸೇನೆಗಳನ್ನು ಅಲ್ಲೋಲಕಲ್ಲೋಲಗೊಳಿಸಿ ಶತ್ರುಗಳ ಮನಸ್ಸಿನಲ್ಲಿ ಅಮಾನುಷ ಭಯವನ್ನು ಹೆಚ್ಚಿಸಿದನು. ಮೋಡದಂತೆ ಚಲಿಸುತ್ತಿರುವ ಅವನ ರಥದಿಂದ ಹೇಮಪರಿಷ್ಕೃತ ಧನುಸ್ಸು ಮೋಡದಲ್ಲಿನ ಮಿಂಚಿನಂತೆ ಫಳ ಫಳನೆ ಪುನಃ ಪುನಃ ಹೊಳೆಯುತ್ತಿರುವುದು ಕಂಡುಬಂದಿತು. ಆ ವೀರ, ಸತ್ಯವಾನ್, ಪ್ರಾಜ್ಞ, ಧರ್ಮನಿತ್ಯನು ಪ್ರಲಯಕಾಲದಂತೆಯೇ ರೌದ್ರವೂ ದಾರುಣವೂ ಆದ ರಕ್ತದ ನದಿಯನ್ನೇ ಸೃಷ್ಟಿಸಿದನು. ಕೋಪದ ಆವೇಗದಿಂದ ಹುಟ್ಟಿದ ಆ ನದಿಯು ಮಾಂಸಾಹಾರಿ ಪ್ರಾಣಿಸಂಕುಲಗಳಿಂದ ಕೂಡಿದ್ದು ಸೈನ್ಯಸಮೂಹದ ಪ್ರವಾಹದಿಂದ ಪೂರ್ಣವಾಗಿ, ವೀರರನ್ನೇ ವೃಕ್ಷಗಳನ್ನಾಗಿ ತೇಲಿಸಿಕೊಂಡು ಹೋಗುತ್ತಿತ್ತು. ರಕ್ತವೇ ನೀರಾಗಿತ್ತು, ರಥಗಳೇ ಸುರುಳಿಗಳಾಗಿದ್ದವು, ಆನೆ-ಕುದುರೆಗಳೇ ಅದರ ದಡಗಳಾಗಿದ್ದವು, ವೀರರ ಕವಚಗಳೇ ದೋಣಿಗಳಂತಿದ್ದವು ಮತ್ತು ಮಾಂಸರೂಪದ ಕೆಸರಿನಿಂದ ತುಂಬಿಕೊಂಡಿತ್ತು. ಮೇಧಸ್ಸು-ಮಜ್ಜೆ-ಮೂಳೆಗಳೇ ಮರಳಿನ ರಾಶಿಯಾಗಿದ್ದವು, ಶಿರಸ್ತ್ರಾಣಗಳು ನೊರೆಯ ರೂಪದಲ್ಲಿದ್ದವು, ಸಂಗ್ರಾಮವೆಂಬ ಮೋಡಗಳಿಂದ ಸುರಿದ ರಕ್ತದಿಂದ ತುಂಬಿಹೋಗಿತ್ತು ಮತ್ತು ಪ್ರಾಸಾಯುಧಗಳೇ ಮೀನುಗಳ ಸಮಾಕುಲದಂತಿದ್ದವು. ನರ-ಗಜ-ಅಶ್ವಗಳಿಂದ ತುಂಬಿದ್ದ ಆ ನದಿಗೆ ಶರವೇಗಗಳೇ ಪ್ರವಾಹಗಳಾಗಿದ್ದವು. ಶರೀರಗಳು ಅದರ ಘಟ್ಟಗಳಾಗಿದ್ದರೆ ರಥಗಳೇ ಆಮೆಗಳಾಗಿದ್ದವು. ತಲೆಗಳು ಕಮಲದ ಪುಷ್ಪಗಳಂತಿದ್ದವು. ಖಡ್ಗಗಳೇ ಮೀನುಗಳಾಗಿ ತುಂಬಿಹೋಗಿದ್ದವು. ರಥಗಳು ಮತ್ತು ಆನೆಗಳ ಅದರ ಮಡುವಿನಂತಿದ್ದವು. ನಾನಾಭರಣಗಳೇ ನೀರಜ ಪುಷ್ಪಗಳಾಗಿದ್ದವು. ನೂರಾರು ಮಹಾರಥಗಳು ಸುಳಿಗಳಿಂತಿದ್ದವು. ಭೂಮಿಯಿಂದ ಹುಟ್ಟಿದ ಧೂಳೇ ಅದರ ಅಲೆಗಳ ಮಾಲೆಗಳಾಗಿದ್ದವು. ಯುದ್ಧದಲ್ಲಿ ಮಹಾವೀರರಿಗೆ ಅದು ಸುಲಭವೂ ರಣಹೇಡಿಗಳಿಗೂ ದುಸ್ತರವೂ ಆಗಿದ್ದಿತು. ಶೂರರ ಶರೀರಗಳಿಂದ ತುಂಬಿದ್ದ ಅದಕ್ಕೆ ಪ್ರಾಣಿಗಳ ಗುಂಪುಗಳು ಮುತ್ತಿದ್ದವು. ಹರಿದುಹೋದ ಚತ್ರಗಳು ಹಂಸಗಳಂತೆ ತೇಲುತ್ತಿದ್ದವು. ಮುಕುಟಗಳು ಪಕ್ಷಿಸಂಕುಲಗಳಂತೆ ತೋರುತ್ತಿದ್ದವು. ಚಕ್ರಗಳು ಆಮೆಗಳಂತಿದ್ದವು, ಗದೆಗಳು ಮೊಸಳೆಗಳಂತಿದ್ದವು, ಶರಗಳೆಂಬ ಸಣ್ಣ ಸಣ್ಣ ಮೀನುಗಳಿಂದ ತುಂಬಿಹೋಗಿತ್ತು. ಘೋರವಾದ ಹದ್ದು, ಬಕ ಮತ್ತು ಗುಳ್ಳೇನರಿಗಳ ಗುಂಪುಗಳಿಂದ ಕೂಡಿತ್ತು. ದ್ರೋಣನ ಬಲಶಾಲಿ ಶರಗಳು ಯುದ್ಧದಲ್ಲಿ ಪ್ರಾಣಿಗಳನ್ನು ಕೊಂದು ನೂರಾರು ರಾಜಸತ್ತಮರನ್ನು ಪಿತೃಲೋಕಕ್ಕೆ ತೇಲಿಸಿಕೊಂಡು ಹೋಗುತ್ತಿದ್ದವು. ನೂರಾರು ಶರೀರಗಳಿಂದ ಸಮಾಕುಲವಾಗಿದ್ದ ಕೂದಲುಗಳೆಂಬ ಹುಲ್ಲಿನಿಂದಲೂ ಪಾಚಿಯಿಂದಲೂ ಕೂಡಿದ್ದ ಭೀರುಗಳಿಗೆ ಭಯವನ್ನು ಹೆಚಿವಿಸುತ್ತಿದ್ದ ಆ ರಕ್ತನದಿಯು ಹರಿಯುತ್ತಿತ್ತು.
ಅಲ್ಲಲ್ಲಿ ಸೇನೆಗಳನ್ನು ಜಯಿಸುತ್ತಿದ್ದ ದ್ರೋಣನನ್ನು ಯುಧಿಷ್ಠಿರನೇ ಮೊದಲಾದವರು ಎಲ್ಲಕಡೆಗಳಿಂದ ಆಕ್ರಮಣಿಸಿದರು. ಧಾವಿಸಿ ಬರುತ್ತಿದ್ದ ಆ ಶೂರರನ್ನು ಕೌರವ ದೃಢಕಾರ್ಮುಕರು ಎಲ್ಲ ಕಡೆಯಿಂದ ತಡೆದು ನಿಲ್ಲಿಸಿದರು. ಆಗ ರೋಮಾಂಚಕಾರೀ ಯುದ್ಧವು ನಡೆಯಿತು. ನೂರಾರು ಮಾಯಾವಿದ್ಯೆಗಳನ್ನು ತಿಳಿದಿದ್ದ ಶಕುನಿಯು ಸಹದೇವನನ್ನು ಆಕ್ರಮಣಿಸಿ, ಅವನನ್ನೂ, ಸಾರಥಿಯನ್ನೂ, ಧ್ವಜವನ್ನೂ, ರಥವನ್ನು ನಿಶಿತ ಶರಗಳಿಂದ ಹೊಡೆದನು. ಆಗ ಮಾದ್ರೀ ಸುತನು ಅತಿ ಕ್ರುದ್ಧನಾಗಿ ಅವನ ಧ್ವಜ, ಧನುಸ್ಸು, ಸೂತ ಮತ್ತು ಕುದುರೆಗಳನ್ನೂ ಶರಗಳಿಂದ ತುಂಡುಮಾಡಿ ಅರವತ್ತರಿಂದ ಸೋದರ ಮಾವನನ್ನು ಹೊಡೆದನು. ಸೌಬಲನಾದರೋ ಗದೆಯನ್ನು ಹಿಡಿದು ಉತ್ತಮ ರಥದಿಂದ ಕೆಳಗೆ ಹಾರಿ ಆ ಗದೆಯಿಂದ ಅವನ ರಥದಿಂದ ಸೂತನನ್ನು ಕೆಳಗೆ ಬೀಳಿಸಿದನು. ಆಗ ಅವರಿಬ್ಬರು ಮಹಾರಥ ಶೂರರೂ ರಥಗಳನ್ನು ಕಳೆದುಕೊಂಡು ಗದೆಗಳನ್ನು ಹಿಡಿದು ರಣದಿಂದ ಶಿಖರಗಳಿರುವ ಪರ್ವತಗಳಂತೆ ಹೋರಾಡಿದರು.
ದ್ರೋಣನು ಪಾಂಚಾಲರಾಜನನ್ನು ಹತ್ತು ಆಶುಗಗಳಿಂದ ಗಾಯಗೊಳಿಸಿದನು. ಆಗ ಅವನೂ ಕೂಡ ದ್ರೋಣನನ್ನು ಅನೇಕ ನೂರಕ್ಕೂ ಹೆಚ್ಚು ಬಾಣಗಳಿಂದ ಹೊಡೆದನು. ಭೀಮಸೇನನು ವಿವಿಂಶತಿಯನ್ನು ಇಪ್ಪತ್ತು ನಿಶಿತ ಶರಗಳಿಂದ ಹೊಡೆಯಲು ಆ ವೀರನು ಅಲುಗಾಡಲಿಲ್ಲ. ಒಡನೆಯೇ ವಿವಿಂಶತಿಯು ಭೀಮನನ್ನು ಕುದುರೆ-ಧ್ವಜ-ಬಿಲ್ಲುಗಳು ಇಲ್ಲದಂತೆ ಮಾಡಿಬಿಟ್ಟನು. ಆಗ ಸೈನ್ಯಗಳು ಅವನನ್ನು ಗೌರವಿಸಿದವು. ಆಹವದಲ್ಲಿ ಶತ್ರುವಿನ ವಿಜಯವನ್ನು ಸಹಿಸಿಕೊಳ್ಳಲಾಗದ ಆ ವೀರನು ಗದೆಯಿಂದ ಅವನ ಆನೆ-ಕುದುರೆಗಳೆಲ್ಲವನ್ನೂ ಅಪ್ಪಳಿಸಿ ಉರುಳಿಸಿದನು.
ವೀರ ಶಲ್ಯನಾದರೋ ತನ್ನ ಪ್ರಿತಿಯ ಅಳಿಯ ನಕುಲನನ್ನು ನಗುತ್ತಾ ಆಟವಾಡುತ್ತಿದ್ದಂತೆ ಮತ್ತು ಕೋಪದಲ್ಲಿರುವಂತೆ ಬಾಣಗಳಿಂದ ಹೊಡೆದನು. ಆಗ ನಕುಲನು ಅವನ ಕುದುರೆಗಳನ್ನೂ, ಧ್ವಜವನ್ನೂ, ಸೂತನನ್ನೂ, ಧನುಸ್ಸನ್ನೂ ಕೆಳಗುರುಳಿಸಿ ಶಂಖವನ್ನು ಊದಿದನು. ಧೃಷ್ಟಕೇತುವು ಕೃಪನು ಪ್ರಯೋಗಿಸಿದ ಬಹುವಿಧದ ಶರಗಳನ್ನು ಕತ್ತರಿಸಿ, ಮೂರು ಬಾಣಗಳಿಂದ ಅವನ ಧ್ವಜವನ್ನು ತುಂಡರಿಸಿ ಕೃಪನನ್ನು ಎಪ್ಪತ್ತು ಬಾಣಗಳಿಂದ ಗಾಯಗೊಳಿಸಿದನು. ಅವನನ್ನು ಕೃಪನು ಮಹಾ ಶರವರ್ಷದಿಂದ ಮುಚ್ಚಿದನು. ವಿಪ್ರನು ಧೃಷ್ಟಕೇತುವನ್ನು ತಡೆದು ಯುದ್ಧ ಮಾಡಿದನು. ಸಾತ್ಯಕಿಯು ಕೃತವರ್ಮನನ್ನು ನಾರಾಚದಿಂದ ಎದೆಗೆ ಹೊಡೆದು ಪುನಃ ನಗುತ್ತ ಇತರ ಎಪ್ಪತ್ತರಿಂದ ಹೊಡೆದನು. ಆಗ ಭೋಜನು ಅವನನ್ನು ಎಪ್ಪತ್ತೇಳು ನಿಶಿತ ಶರಗಳಿಂದ ಹೊಡೆಯಲು ಶೈನೇಯನು ಭಿರುಗಾಳಿಗೂ ಅಲುಗಾಡದ ಪರ್ವತದಂತೆ ಕಂಪಿಸಲಿಲ್ಲ. ಸೇನಾಪತಿ ಧೃಷ್ಟದ್ಯುಮ್ನನು ಸುಶರ್ಮನನ್ನು ಶೀಘ್ರವಾಗಿ ಮರ್ಮಗಳಲ್ಲಿ ಹೊಡೆದನು. ಅವನೂ ಕೂಡ ಅವನನ್ನು ಜತ್ರುದೇಶದಲ್ಲಿ ತೋಮರದಿಂದ ಹೊಡೆದನು.
ವೈಕರ್ತನನ್ನು ವಿರಾಟನು ಮತ್ಸ್ಯ ಮಹಾವೀರರೊಂದಿಗೆ ಎದುರಿಸಿ ತಡೆದನು. ಆಗ ಈ ಅದ್ಭುತವು ನಡೆಯಿತು. ಸನ್ನತಪರ್ವ ಶರಗಳಿಂದ ಸೈನ್ಯವನ್ನು ತಡೆಹಿಡಿದ ಸೂತಪುತ್ರನ ದಾರುಣ ಪೌರುಷವನ್ನು ಅಲ್ಲಿ ನೋಡಲಿಕ್ಕೆ ಸಿಕ್ಕಿತು. ರಾಜಾ ದ್ರುಪದನು ಸ್ವಯಂ ಭಗದತ್ತನೊಡನೆ ಯುದ್ಧಮಾಡಿದನು. ಅವರಿಬ್ಬರ ಯುದ್ಧವು ವಿಚಿತ್ರವಾಗಿ ಕಾಣುತ್ತಿತ್ತು. ಅವರಿಬ್ಬರು ಅಸ್ತ್ರವಿಶಾರದರೂ ಭೂತಗಳಿಗೆ ಭಯವನ್ನುಂಟುಮಾಡತೊಡಗಿದರು. ವೀರ್ಯವಾನ್ ಭೂರಿಶ್ರವನು ಮಹಾರಥ ಯಾಜ್ಞಸೇನಿಯನ್ನು ಮಹಾ ಸಾಯಕಗಳ ರಾಶಿಯಿಂದ ಹೊಡೆದನು. ಆಗ ಶಿಖಂಡಿಯಾದರೋ ಕ್ರುದ್ಧನಾಗಿ ಸೌಮದತ್ತಿಯನ್ನು ತೊಂಭತ್ತು ಸಾಯಕಗಲಿಂದ ನಡುಗಿಸಿದನು. ಭೀಮಕರ್ಮಿ ರಾಕ್ಷಸರಿಬ್ಬರು ಹೈಡಿಂಬಿ-ಅಲಂಬುಸರು ಪರಸ್ಪರರನ್ನು ವಧಿಸಲು ಬಯಸಿ ಅತ್ಯದ್ಭುತವಾದ ಯುದ್ಧದಲ್ಲಿ ತೊಡಗಿದರು. ದೃಪ್ತರಾದ ಅವರಿಬ್ಬರೂ ನೂರಾರು ಮಾಯೆಗಳನ್ನು ಸೃಷ್ಟಿಸಿ ಒಬ್ಬರನ್ನೊಬ್ಬರ ಮಾಯೆಗಳಿಂದ ಅಂತರ್ಧಾನರಾಗಿ ತುಂಬಾ ವಿಸ್ಮಯಗಳನ್ನುಂಟುಮಾಡುತ್ತಾ ಸಂಚರಿಸುತ್ತಿದ್ದರು. ದೇವಾಸುರರ ಯುದ್ಧದಲ್ಲಿ ಮಹಾಬಲಶಾಲಿಗಳಾದ ಬಲ ಮತ್ತು ಶಕ್ರರಂತೆ ಚೇಕಿತಾನ-ಅನುವಿಂದರು ಅತಿ ಭೈರವ ಯುದ್ಧದಲ್ಲಿ ತೊಡಗಿದರು. ಹಿಂದೆ ವಿಷ್ಣುವು ಹಿರಣ್ಯಾಕ್ಷನೊಂದಿಗೆ ಹೇಗೋ ಹಾಗೆ ಲಕ್ಷ್ಮಣನು ಕ್ಷತ್ರದೇವನ ಸೇನೆಯನ್ನು ಚೆನ್ನಾಗಿ ಮರ್ದಿಸಿದನು.
ಅಭಿಮನ್ಯು ಪರಾಕ್ರಮ
ಆಗ ಚಂಚಲಸ್ವಭಾವದ ಕುದುರೆಗಳಿಂದ ವಿಧಿವತ್ತಾಗಿ ಕಲ್ಪಿತವಾಗಿದ್ದ ರಥದಲ್ಲಿ ಪೌರವನು ನಿನಾದಿಸುತ್ತಾ ಸೌಭದ್ರನನ್ನು ಆಕ್ರಮಣಿಸಿದನು. ಯುದ್ಧಾಕಾಂಕ್ಷಿಯಾಗಿದ್ದ ಮಹಾಬಲ ಅಭಿಮನ್ಯುವು ತ್ವರೆಮಾಡಿ ಅವನೊಂದಿಗೆ ಮಹಾಯುದ್ಧದಲ್ಲಿ ತೊಡಗಿದನು. ಪೌರವನು ಸೌಭದ್ರನನ್ನು ಶರವರ್ಷಗಳಿಂದ ಮುಚ್ಚಿಬಿಟ್ಟನು. ಆರ್ಜುನಿಯು ಅವನ ಧ್ವಜ, ಚತ್ರ, ಧನುಸ್ಸುಗಳನ್ನು ಕತ್ತರಿಸಿ ಬೀಳಿಸಿದನು. ಸೌಭದ್ರನು ಪೌರವನನ್ನು ಅನ್ಯ ಏಳು ಆಶುಗಗಳಿಂದ ಹೊಡೆದು ಐದು ಸಾಯಕಗಳಿಂದ ಅವನ ಕುದುರೆಗಳನ್ನೂ ಸೂತನನ್ನೂ ಹೊಡೆದನು. ಆಗ ಆರ್ಜುನಿಯು ಸೇನೆಗಳನ್ನು ಹರ್ಷಗೊಳಿಸುತ್ತಾ ಪುನಃ ಪುನಃ ಸಿಂಹದಂತೆ ಗರ್ಜಿಸಿದನು ಮತ್ತು ತಕ್ಷಣವೇ ಪೌರವನನ್ನು ಅಂತ್ಯಗೊಳಿಸಲು ಶರವನ್ನು ತೆಗೆದುಕೊಂಡನು. ಆಗ ಹಾರ್ದಿಕ್ಯನು ಎರಡು ಬಾಣಗಳಿಂದ ಅವನ ಬಿಲ್ಲು-ಬಾಣಗಳನ್ನು ಕತ್ತರಿಸಿದನು. ಪರವೀರಹ ಸೌಭದ್ರನು ಆ ತುಂಡಾದ ಧನುಸ್ಸನ್ನು ಎಸೆದು ಥಳಥಳಿಸುವ ಖಡ್ಗವನ್ನು ವರಸೆಯಿಂದ ತೆಗೆದು ಗುರಾಣಿಯನ್ನೂ ಹಿಡಿದನು. ಅವನು ಅನೇಕ ನಕ್ಷತ್ರಗಳ ಚಿಹ್ನೆಗಳನ್ನು ಹೊಂದಿದ ಗುರಾಣಿಯನ್ನು ಹಿಡಿದು, ಅದರಲ್ಲಿ ತನ್ನ ಕೈಚಳಕವನ್ನು ಮತ್ತು ವೀರ್ಯವನ್ನು ತೋರಿಸುತ್ತಾ ರಣಾಂಗಣದ ಸುತ್ತಲೂ ತಿರುಗುತ್ತಿದ್ದನು. ಭ್ರಾಮಿತ (ಕತ್ತಿ-ಗುರಾಣಿಗಳನ್ನು ಕೆಳಕ್ಕೆ ತಿರುಗಿಸುವುದು), ಉದ್ಭ್ರಾಂತ (ಕತ್ತಿಯನ್ನು ಮೇಲೆ ತಿರುಗಿಸುವುದು), ಅಧೂತ (ಸುತ್ತಲೂ ತಿರುಗಿಸುವುದು), ಉತ್ಥಿತ (ಮೇಲಕ್ಕೆ ಹಾರಿ ತಿರುಗಿಸುವುದು) – ಇತ್ಯಾದಿ ವರಸೆಗಳಿಂದ ಅವನು ಖಡ್ಗ ಗುರಾಣಿಗಳನ್ನು ತಿರುಗಿಸುತ್ತಿದ್ದು ವಿಶೇಷವಾಗಿ ಕಂಡಿತು. ಅವನು ಒಮ್ಮೆಲೇ ಜೋರಾಗಿ ಗರ್ಜಿಸಿ ಪೌರವನ ರಥದ ಮೂಕಿನ ಮೇಲೆ ಹಾರಿ ರಥದಲ್ಲಿ ಕುಳಿತಿದ್ದ ಪೌರವನ ತಲೆಗೂದಲನ್ನು ಹಿಡಿದನು. ಕಾಲಿನಿಂದ ಅವನನ್ನು ಒದೆದು, ಖಡ್ಗದಿಂದ ಸೂತ ಮತ್ತು ಧ್ವಜಗಳನ್ನು ಉರುಳಿಸಿದನು. ಅಲ್ಲೋಲಕಲ್ಲೋಲಗೊಂಡಿದ್ದ ಸಮುದ್ರದಿಂದ ಗರುಡನು ಸರ್ಪಗಳನ್ನು ಎಳೆದುಕೊಳ್ಳುವಂತೆ ಅವನನ್ನು ಸೆಳೆದುಕೊಂಡನು. ಸಿಂಹದಿಂದ ಬೀಳಿಸಲ್ಪಟ್ಟ ಹೋರಿಯಂತೆ ಕೆಳಗೆ ಅಚೇತನನಾಗಿ ಬಿದ್ದ ಬಿಚ್ಚಿದ ಕೂದಲಿನ ಅವನನ್ನು ಸರ್ವಪಾರ್ಥಿವರೂ ನೋಡಿದರು.
ಆರ್ಜುನಿಯ ವಶದಲ್ಲಿ ಬಂದು ಅನಾಥನಂತೆ ಎಳೆದಾಡಲ್ಪಟ್ಟು ಬಿದ್ದಿದ್ದ ಪೌರವನನ್ನು ನೋಡಿ ಜಯದ್ರಥನು ಸಹಿಸಿಕೊಳ್ಳಲಿಲ್ಲ. ನವಿಲುಗರಿಗಳಿಂದ ಮತ್ತು ಸಣ್ಣಸಣ್ಣ ಗಂಟೆಗಳಿಂದ ಅಲಂಕೃತಗೊಂಡಿದ್ದ ಗುರಾಣಿಯನ್ನೂ ಖಡ್ಗವನ್ನೂ ಹಿಡಿದು ಗರ್ಜಿಸುತ್ತಾ ರಥದಿಂದ ಧುಮುಕಿದನು. ಸೈಂಧವನನ್ನು ನೋಡಿ ಕಾರ್ಷ್ಣಿಯು ಪೌರವನನ್ನು ಅಲ್ಲಿಯೇ ಬಿಟ್ಟು ತಕ್ಷಣವೇ ರಥದಿಂದ ಧುಮುಕಿ ಗಿಡುಗದಂತೆ ಮೇಲೆ ಬಿದ್ದನು. ಶತ್ರುಗಳು ತನ್ನ ಮೇಲೆ ಪ್ರಹರಿಸುತ್ತಿದ್ದ ಪ್ರಾಸ-ಪಟ್ಟಿಶ-ಖಡ್ಗಗಳನ್ನು ಕಾರ್ಷ್ಣಿಯು ಗುರಾಣಿಯಿಂದ ತಡೆಯುತ್ತಾ ಖಡ್ಗದಿಂದ ಅವುಗಳನ್ನು ತುಂಡರಿಸಿದನು. ಅವನು ತನ್ನ ಬಾಹುಬಲವನ್ನು ಸೇನೆಗಳಿಗೆ ತೋರಿಸುತ್ತಾ ಆ ಬಲಿ ಶೂರನು ಪುನಃ ಮಹಾಖಡ್ಗವನ್ನೂ ಗುರಾಣಿಯನ್ನು ಮೇಲೆತ್ತಿ ವೃದ್ಧಕ್ಷತ್ರನ ಮಗ, ತನ್ನ ತಂದೆಯ ಅತ್ಯಂತ ವೈರಿಯಾಗಿದ್ದ ಜಯದ್ರಥನನ್ನು ಆನೆಯನ್ನು ಸಿಂಹವು ಹೇಗೋ ಹಾಗೆ ಸಲೀಲವಾಗಿ ಎದುರಿಸಿದನು. ಖಡ್ಗ, ಹಲ್ಲು ಮತ್ತು ಉಗುರುಗಳೇ ಆಯುಧಗಳಾಗಿದ್ದ ಅವರಿಬ್ಬರೂ ಪರಸ್ಪರರನ್ನು ಎದುರಿಸಿ ಸಂತೋಷಗೊಂಡು ಸಿಂಹ ಮತ್ತು ಹುಲಿಗಳಂತೆ ಹೊಡೆದಾಡಿದರು. ಆ ಇಬ್ಬರು ನರಸಿಂಹರ ನಡುವೆ ಖಡ್ಗ-ಗುರಾಣಿಗಳ ಸಂಪಾತ-ಅಭಿಪಾತ-ನಿಪಾತಗಳಲ್ಲಿ ಯಾವ ಅಂತರವೂ ಕಾಣಲಿಲ್ಲ.
ಖಡ್ಗಪ್ರಹಾರ, ಖಡ್ಗಸಂಚಾಲನದ ಶಬ್ಧ, ಅನೇಕ ವಿಧವಾದ ವರಸೆಗಳ ಪ್ರದರ್ಶನ, ಶರೀರದ ಮುಂಬಾಗ-ಹಿಂಬಾಗಗಳಲ್ಲಿ ಸಮಯವರಿತು ಪ್ರಹರಿಸುವಿಕೆ ಇವುಗಳಲ್ಲಿ ಅವರಿಬ್ಬರ ನಡುವೆ ಅಂತರವೇ ಕಾಣಲಿಲ್ಲ. ಶರೀರದ ಮುಂದೆ ಮತ್ತು ಹಿಂದೆ ತಿರುಗಿಸುತ್ತಾ, ಉತ್ತಮ ಮಾರ್ಗದಲ್ಲಿ ತಿರುಗುತ್ತಿರುವ ಆ ಇಬ್ಬರು ಮಹಾತ್ಮರು ರೆಕ್ಕೆಗಳಿರುವ ಪರ್ವತಗಳಂತೆ ಕಂಡರು. ಆಗ ಖಡ್ಗವನ್ನು ತಿರುಗಿಸುತ್ತಿದ್ದ ಸೌಭದ್ರನ ಗುರಾಣಿಯ ಒಂದು ಭಾಗವನ್ನು ಯಶಸ್ವಿ ಜಯದ್ರಥನು ಹೊಡೆದನು. ಬಂಗಾರದ ತಗುಡಿನಿಂದ ಮಾಡಿದ್ದ ಗುರಾಣಿಯಲ್ಲಿ ಚುಚ್ಚಿಕೊಂಡಿದ್ದ ತನ್ನ ಮಹಾ ಖಡ್ಗವನ್ನು ಸಿಂಧುರಾಜನು ಬಲವನ್ನುಪಯೋಗಿಸಿ ಅಲ್ಲಾಡಿಸಿ ಕೀಳಲು ಹೋದಾಗ ಅದು ಅಲ್ಲಿಯೇ ತುಂಡಾಯಿತು. ತನ್ನ ಖಡ್ಗವು ತುಂಡಾದುದನ್ನು ಗಮನಿಸಿದ ಜಯದ್ರಥನು ಒಡನೆಯೇ ಆರು ಅಡಿಗಳಷ್ಟು ಹಾರಿ ನಿಮಿಷದಲ್ಲಿ ತನ್ನ ರಥದಲ್ಲಿ ಕುಳಿತಿದ್ದುದು ಪ್ರೇಕ್ಷಣೀಯವಾಗಿತ್ತು. ಕಾರ್ಷ್ಣಿ ಅಭಿಮನ್ಯುವೂ ಕೂಡ ಯುದ್ಧವನ್ನು ನಿಲ್ಲಿಸಿ ತನ್ನ ಉತ್ತಮ ರಥದಲ್ಲಿ ಕುಳಿತುಕೊಂಡನು. ಆಗ ಸರ್ವ ರಾಜರೂ ಒಟ್ಟಿಗೇ ಎಲ್ಲ ಕಡೆಗಳಿಂದ ಅವನನ್ನು ಸುತ್ತುವರೆದರು. ಆಗ ಖಡ್ಗವನ್ನೂ ಗುರಾಣಿಯನ್ನೂ ಮೇಲೆತ್ತಿ ಮಹಾಬಲ ಅರ್ಜುನನ ಮಗನು ಜಯದ್ರಥನನ್ನು ನೋಡುತ್ತಾ ಗರ್ಜಿಸಿದನು. ಸಿಂಧುರಾಜನನ್ನು ಬಿಟ್ಟು ಪರವೀರಹ ಸೌಭದ್ರನು ಆ ಸೈನ್ಯವನ್ನು ಭುವನವನ್ನು ಭಾಸ್ಕರನು ಹೇಗೋ ಹಾಗೆ ಸುಡತೊಡಗಿದನು.
ಆಗ ಶಲ್ಯನು ಅಗ್ನಿಯ ಜ್ವಾಲೆಯಂತೆ ಪ್ರದೀಪ್ತವಾಗಿದ್ದ ಕನಭೂಷಣದ ಲೋಹಮಯವಾಗಿದ್ದ ಘೋರವಾದ ಶಕ್ತಿಯನ್ನು ಅವನ ಮೇಲೆ ಎಸೆದನು. ಬೀಳುತ್ತಿರುವ ಉತ್ತಮ ನಾಗವನ್ನು ವೈನತೇಯನು ಹೇಗೋ ಹಾಗೆ ಕಾರ್ಷ್ಣಿಯು ಅದನ್ನು ಹಾರಿ ಹಿಡಿದು, ತನ್ನ ಒರಸೆಯಿಂದ ಖಡ್ಗವನ್ನು ಎಳೆದು ತೆಗೆದನು. ಆ ಅಮಿತತೇಜಸ್ವಿಯ ಸತ್ತ್ವವನ್ನೂ ಹಸ್ತಲಾಘವವನ್ನೂ ತಿಳಿದ ಸರ್ವ ರಾಜರೂ ಒಟ್ಟಿಗೇ ಸಿಂಹನಾದಗೈದರು. ಆಗ ಶಲ್ಯನ ಅದೇ ವೈಡೂರ್ಯದಿಂದ ಸಮಲಂಕೃತವಾಗಿದ್ದ ಶಕ್ತಿಯನ್ನು ಪರವೀರಹ ಸೌಭದ್ರನು ತನ್ನ ಭುಜವೀರ್ಯದಿಂದ ಎಸೆದನು. ಪೊರೆಯನ್ನು ಬಿಟ್ಟ ಸರ್ಪದಂತಿದ್ದ ಅದು ಅವನ ರಥವನ್ನು ತಲುಪಿ ಶಲ್ಯನ ಸೂತನನ್ನು ಕೊಂದು ಅವನನ್ನು ರಥದಿಂದ ಕೆಳಗೆ ಉರುಳಿಸಿತು. ಆಗ ವಿರಾಟ-ದ್ರುಪದರು, ಧೃಷ್ಟಕೇತು-ಯುಧಿಷ್ಠಿರರು, ಸಾತ್ಯಕಿ, ಕೇಕಯರು, ಭೀಮ, ಧೃಷ್ಟದ್ಯುಮ್ನ-ಶಿಖಂಡಿಯರು, ಯಮಳರು ಮತ್ತು ದ್ರೌಪದೇಯರು “ಸಾಧು! ಸಾಧು!” ಎಂದು ಕೂಗಿದರು. ಯುದ್ಧದಲ್ಲಿ ಪಲಾಯನವನ್ನರಿಯದ ಸೌಭದ್ರನನ್ನು ಹರ್ಷಗೊಳಿಸುತ್ತಾ ವಿವಿಧ ಬಾಣ ಪ್ರಹಾರದ ಶಬ್ಧಗಳೂ ಪುಷ್ಕಲ ಸಿಂಹನಾದಗಳೂ ಕೇಳಿ ಬಂದವು.
ಶತ್ರುಗಳ ವಿಜಯಸೂಚಕವಾದ ಅದನ್ನು ಕೌರವರು ಸಹಿಸಿಕೊಳ್ಳಲಿಲ್ಲ. ಆಗ ಅವರೆಲ್ಲರೂ ಅವನನ್ನು ನಿಶಿತ ಶರಗಳಿಂದ ಎಲ್ಲಕಡೆಗಳಿಂದ ಪರ್ವತವನ್ನು ಮೋಡಗಳು ಹೇಗೋ ಹಾಗೆ ಮುಸುಕಿದರು. ತನ್ನ ಸೂತನ ಪರಾಭವದಿಂದ ಮತ್ತು ಕೌರವರಿಗೆ ಪ್ರಿಯವಾದುದನ್ನು ಮಾಡಲು ಅಮಿತ್ರಘ್ನ ಶಲ್ಯನು ಕ್ರುದ್ಧನಾಗಿ ಸೌಭದ್ರನನ್ನು ಪುನಃ ಆಕ್ರಮಣಿಸಿದನು.
ಭೀಮ-ಶಲ್ಯರ ಯುದ್ಧ
ತನ್ನ ಸೂತನು ಹತನಾದುದನ್ನು ನೋಡಿ ಶಲ್ಯನು ಕ್ರುದ್ಧನಾಗಿ ಉಕ್ಕಿನಮಯವಾಗಿದ್ದ ಗದೆಯನ್ನು ಮೇಲೆ ಎತ್ತಿ ಹಿಡಿದು ಗರ್ಜಿಸುತ್ತಾ ಉತ್ತಮ ರಥದಿಂದ ಧುಮುಕಿದನು. ಕಾಲಾಗ್ನಿಯಂತೆ ಉರಿಯುತ್ತಿದ್ದ, ದಂಡವನ್ನು ಹಿಡಿದ ಅಂತಕನಂತಿದ್ದ ಅವನನ್ನು ನೋಡಿ ಭೀಮನು ಮಹಾ ಗದೆಯನ್ನು ಹಿಡಿದು ವೇಗದಿಂದ ಎದುರಿಸಿದನು. ಸೌಭದ್ರನೂ ಕೂಡ ವಜ್ರಾಯುಧದಂತಿದ್ದ ಮಹಾ ಗದೆಯನ್ನು ಹಿಡಿತು “ಬಾ! ಬಾ!” ಎಂದು ಶಲ್ಯನನ್ನು ಕರೆಯುತ್ತಿರಲು ಭೀಮನು ಅವನನ್ನು ಪ್ರಯತ್ನಪಟ್ಟು ತಡೆದನು. ಸೌಭದ್ರನನ್ನು ತಡೆದು ಪ್ರತಾಪವಾನ್ ಭೀಮಸೇನನು ಶಲ್ಯನನ್ನು ಎದುರಿಸಿ ಸಮರದಲ್ಲಿ ಗಿರಿಯಂತೆ ಅಚಲವಾಗಿ ನಿಂತನು. ಆಗ ಮದ್ರರಾಜನೂ ಕೂಡ ಮಹಾಬಲ ಭೀಮನನ್ನು ನೋಡಿ ಹುಲಿಯು ಆನೆಯನ್ನು ಆಕ್ರಮಣಿಸುವಂತೆ ಅವನಿಗೆ ಎದುರಾಗಿ ಹೋಗಿ ಆಕ್ರಮಣಿಸಿದನು. ಆಗ ಕೂಡಲೇ ಸಹಸ್ರಾರು ಶಂಖಗಳ ನಿನಾದಗಳು, ಸಿಂಹನಾದಗಳು ಮತ್ತು ಭೇರಿಗಳ ಮಹಾಶಬ್ಧವು ಉಂಟಾಯಿತು. ನೋಡುತ್ತಿರುವ ನೂರಾರು ಪಾಂಡವ-ಕೌರವರ ಕಡೆಯವರು ಸಮಚೇತಸರಾದ ಅನ್ಯೋನ್ಯರನ್ನು “ಸಾಧು! ಸಾಧು!” ಎಂದು ಹುರಿದುಂಬಿಸುತ್ತಿದ್ದರು. ಸಂಯುಗದಲ್ಲಿ ಭೀಮಸೇನನ ವೇಗವನ್ನು ಸಹಿಸಿಕೊಳ್ಳುವವರು ಸರ್ವರಾಜರಲ್ಲಿ ಮದ್ರಾಧಿಪನನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ. ಹಾಗೆಯೇ ಮಹಾತ್ಮ ಮದ್ರಾಧಿಪನ ಗದಾವೇಗವನ್ನು ಯುದ್ಧದಲ್ಲಿ ವೃಕೋದರನನ್ನು ಬಿಟ್ಟು ಬೇರೆ ಯಾರೂ ಸಹಿಸಿಕೊಳ್ಳಲು ಉತ್ಸುಕರಿರಲಿಲ್ಲ.
ಬಂಗಾರದ ಪಟ್ಟಿಯಿಂದ ಕಟ್ಟಲ್ಪಟ್ಟಿದ್ದ ಭೀಮನು ಹಿಡಿದಿದ್ದ ಜನಹರ್ಷಿಣೀ ಮಹಾಗದೆಯು ಉರಿಯುವ ಬೆಂಕಿಯಂತೆ ಹೊಳೆಯುತ್ತಿತ್ತು. ಹಾಗೆಯೇ ಮಂಡಲಾಕಾರ ಮಾರ್ಗದಲ್ಲಿ ಚಲಿಸುತ್ತಿದ ಶಲ್ಯನ ಗದೆಯೂ ಕೂಡ ಭಾಗಶಃ ಆಕಾಶದಲ್ಲಿರುವ ಮಹಾಮಿಂಚಿನಂತೆ ಹೊಳೆಯತ್ತಿತ್ತು. ಗೂಳಿಗಳಂತೆ ಕೂಗುತ್ತಾ, ಮಂಡಲಾಕಾರಗಳಲ್ಲಿ ಚಲಿಸುತ್ತಾ ಆ ಶಲ್ಯ-ವೃಕೋದರರಿಬ್ಬರು ಶೃಂಗಗಳಂತಿರುವ ಗದೆಗಳಿಂದ ಹೊಡೆದಾಡಿದರು. ಮಂಡಲಾಕಾರವಾಗಿ ತಿರುಗುವುದರಲ್ಲಿ, ಗಡೆಯನ್ನು ತಿರುಗಿಸುವುದರಲ್ಲಿ ಆ ಪುರುಷಸಿಂಹರ ಯುದ್ಧದಲ್ಲಿ ವ್ಯತ್ಯಾಸವೇ ಇರಲಿಲ್ಲ. ಭೀಮಸೇನನಿಂದ ಹೊಡೆಯಲ್ಪಟ್ಟ ಶಲ್ಯನ ಮಹಾಗದೆಯು ಅಗ್ನಿಜ್ವಾಲೆಯೊಂದಿಗೆ ಮಹಾರೌದ್ರವಾಗಿ ಚೂರು ಚೂರಾಯಿತು. ಹಾಗೆಯೇ ಭೀಮಸೇನನ ದ್ವೇಷಿಯಿಂದ ಹೊಡೆಯಲ್ಪಟ್ಟ ಗದೆಯು ಮಳೆಗಾಲದ ಪ್ರದೋಷಕಾಲದಲ್ಲಿ ಮಿಂಚಿನ ಹುಳುಗಳು ಮುತ್ತಿರುವ ವೃಕ್ಷದಂತೆ ತೋರಿತು. ಮದ್ರರಾಜನು ಸಮರದಲ್ಲಿ ಎಸೆದ ಗದೆಯು ಆಕಾಶವನ್ನೇ ಬೆಳಗಿಸುತ್ತಾ ಅನೇಕ ಬೆಂಕಿಯ ಕಿಡಿಗಳನ್ನುಂಟುಮಾಡಿತು. ಹಾಗೆಯೇ ಭೀಮಸೇನನು ಕೋಪದಿಂದ ಎಸೆದ ಗದೆಯು ಬೀಳುತ್ತಿರುವ ಮಹಾ ಉಲ್ಕೆಯಅಂತೆ ಆ ಸೈನ್ಯವನ್ನು ಸುಟ್ಟಿತು. ಗದೆಯಲ್ಲಿ ಶ್ರೇಷ್ಠರಾದ ಅವರಿಬ್ಬರೂ ಪರಸ್ಪರರನ್ನು ಎದುರಿಸಿ ನಾಗಕನ್ಯೆಯರಂತೆ ಭುಸುಗುಟ್ಟುತ್ತಾ ಬೆಂಕಿಯ ಕಿಡಿಗಳನ್ನು ಹೊರಹೊಮ್ಮಿದರು. ಮಹಾವ್ಯಾಘ್ರಗಳು ಉಗುರುಗಳಿಂದ ಹೇಗೋ ಹಾಗೆ ಮತ್ತು ಮಹಾಗಜಗಳೆರಡು ದಂತಗಳಿಂದ ಹೇಗೋ ಹಾಗೆ ಅವರಿಬ್ಬರೂ ಗದೆಗಳಿಂದ ಪರಸ್ಪರರನ್ನು ತಾಗಿಸಿ ಹೊಡೆದರು. ಆಗ ಕ್ಷಣದಲ್ಲಿಯೇ ಗದೆಯಿಂದ ಪೆಟ್ಟುತಿಂದು ರಕ್ತದಿಂದ ತೋಯ್ದುಹೋಗಿದ್ದ ಆ ಇಬ್ಬರು ಮಹಾತ್ಮರು ಹೂಬಿಟ್ಟ ಕಿಂಶುಕ ವೃಕ್ಷಗಳಂತೆ ಕಂಡರು. ಆ ಪುರುಷಸಿಂಹರ ಗದಾಪ್ರಹಾರದ ಶಬ್ಧವು ಸಿಡುಲಿನ ಗರ್ಜನೆಯಂತೆ ಎಲ್ಲ ದಿಕ್ಕುಗಳಲ್ಲಿ ಕೇಳಿಬರುತ್ತಿತ್ತು. ಮದ್ರರಾಜನು ಗದೆಯಿಂದ ಎಡ ಮತ್ತು ಬಲಭಾಗಗಳೆರಡಕ್ಕೆ ಹೊಡೆದರೂ ಭೀಮನು ಪರ್ವತದಂತೆ ಅಲುಗಾಡಲಿಲ್ಲ. ಹಾಗೆಯೇ ಭೀಮನ ಗದಾವೇಗದಿಂದ ಹೊಡೆಯಲ್ಪಟ್ಟ ಮಹಾಬಲ ಮದ್ರಾಧಿಪನು ಧೈರ್ಯದಿಂದ ವರ್ಜದಿಂದ ಹೊಡೆಯಲಟ್ಟ ಪರ್ವತದಂತೆ ನಿಂತಿದ್ದನು. ಪುನಃ ಮಹಾವೇಗಯುಕ್ತರಾಗಿದ್ದ ಅವರು ಮಹಾಗದೆಗಳನ್ನು ಎತ್ತಿಕೊಂಡು ಅಂತರ ಮಾರ್ಗಸ್ಥರಾಗಿ ಮಂಡಲಾಕರದ ಗತಿಯಿಂದ ಚಲಿಸತೊಡಗಿದರು. ಎಂಟು ಹೆಜ್ಜೆಗಳಷ್ಟು ದೂರ ಕುಪ್ಪಳಿಸಿ ಎರಡು ಆನೆಗಳೋಪಾದಿಯಲ್ಲಿ ಹೋರಾಡುತ್ತಾ ಒಡನೆಯೇ ಆ ಲೋಹದಂಡಗಳಿಂದ ಪರಸ್ಪರರನ್ನು ಹೊಡೆದರು. ಪರಸ್ಪರರ ವೇಗವಾದ ಗದೆಗಳ ಪ್ರಹಾರಗಳಿಂದ ತುಂಬಾ ಗಾಯಗೊಂಡ ಆ ಇಬ್ಬರೂ ವೀರರೂ ಒಟ್ಟಿಗೇ ಇಂದ್ರಧ್ವಜಗಳಂತೆ ಭೂಮಿಯ ಮೇಲೆ ಬಿದ್ದರು. ಆಗ ಶಲ್ಯನು ವಿಹ್ವಲಮಾನನಾಗಿ ಪುನಃ ಪುನಃ ಭುಸುಗುಟ್ಟುತ್ತಾ ಬಿದ್ದಿರಲು ಒಡನೆಯೇ ಅಲ್ಲಿಗೆ ಮಹಾರಥ ಕೃತವರ್ಮನು ಆಗಮಿಸಿದನು. ಗದೆಯಿಂದ ಪೀಡಿತನಾಗಿ ಸರ್ಪದಂತೆ ಮೂರ್ಛೆತಪ್ಪಿ ಹೊರಳಾಡುತ್ತಿದ್ದ ಅವನನ್ನು ನೋಡಿದನು.
ಆಗ ಗದೆಯೊಂದಿಗೆ ಮದ್ರಾಧಿಪನನ್ನು ರಥದಲ್ಲಿ ಏರಿಸಿಕೊಂಡು ಮಹಾರಥ ಕೃತವರ್ಮನು ರಣದಿಂದ ವೇಗವಾಗಿ ಹೊರಟುಹೋದನು. ವಿಹ್ವಲನಾಗಿದ್ದ ಆಯಾಸಗೊಂಡಿದ್ದ ಸುಮಹಾಬಾಹು ವೀರ ಭೀಮನಾದರೋ ನಿಮಿಷದಲ್ಲಿಯೇ ಗದೆಯನ್ನು ಹಿಡಿದು ನಿಂತನು. ಆಗ ಮದ್ರಾಧಿಪನು ಪರಾಙ್ಮುಖನಾದುದನ್ನು ನೋಡಿ ಕೌರವರು ಗಜ-ರಥ-ಅಶ್ವ-ಪದಾತಿಗಳೊಂದಿಗೆ ನಡುಗಿದರು. ಗೆಲುವಿನಿಂದ ಸೊಕ್ಕಿದ್ದ ಪಾಂಡವರಿಂದ ಮರ್ದಿಸಲ್ಪಡುತ್ತಿದ್ದ ಅವರು ಭಿರುಗಾಳಿಗೆ ಸಿಲುಕಿದ ಮೋಡಗಳಂತೆ ಭೀತರಾಗಿ ದಿಕ್ಕಾಪಾಲಾಗಿ ಓಡಿದರು. ಧಾರ್ತರಾಷ್ಟ್ರರನ್ನು ಸೋಲಿಸಿ ಮಹಾರಥ ಯಶಸ್ವಿ ಪಾಂಡವರು ರಣದಲ್ಲಿ ಬೆಳಗುತ್ತಾ ರಾರಾಜಿಸಿದರು. ಗಟ್ಟಿಯಾಗಿ ಸಿಂಹನಾದಗೈದರು. ಹರ್ಷಿತರಾಗಿ ಶಂಖಗಳನ್ನು ಊದಿದರು. ಅನಕಗಳೊಂದಿಗೆ ಭೇರಿಗಳನ್ನೂ ಮೃದಂಗಗಳನ್ನೂ ಬಾರಿಸತೊಡಗಿದರು.
ಹನ್ನೊಂದನೇ ದಿನದ ಯುದ್ಧ ಸಮಾಪ್ತಿ
ಕೌರವರ ಆ ಮಹಾ ಸೇನೆಯು ಚೆಲ್ಲಪಿಲ್ಲಿಯಾಗಿ ರಣದಿಂದ ಪಾಂಡವರಿಂದ ಓಡಿಹೋಗುತ್ತಿದ್ದುದನ್ನು ನೋಡಿ ವೀರ್ಯವಾನ್ ವೃಷಸೇನನೊಬ್ಬನೇ ತನ್ನ ಅಸ್ತ್ರಮಾಯೆಯಿಂದ ಅವರನ್ನು ತಡೆದನು. ವೃಷಸೇನನು ಬಿಟ್ಟ ಬಾಣಗಳು ಮನುಷ್ಯರು-ಕುದುರೆಗಳು-ರಥಗಳು ಮತ್ತು ಆನೆಗಳನ್ನು ಭೇದಿಸಿ ಹತ್ತು ದಿಕ್ಕುಗಳಲ್ಲಿಯೂ ಸಂಚರಿಸಿದವು. ಅವನ ಉರಿಯುತ್ತಿರುವ ಸಹಸ್ರಾರು ಮಹಾಬಾಣಗಳು ಗ್ರೀಷ್ಮಕಾಲದ ಆಕಾಶದಲ್ಲಿ ನಕ್ಷತ್ರಗಳು ಮಿಂಚುವಂತೆ ಮಿನುಗಿದವು. ಅವನಿಂದ ಆರ್ದಿರತರಾದ ರಥಿಗಳು ಮತ್ತು ಅಶ್ವಾರೋಹಿಗಳು ಭಿರುಗಾಳಿಗೆ ಸಿಲುಕಿದ ಮರಗಳಂತೆ ತಕ್ಷಣವೇ ಭೂಮಿಯ ಮೇಲೆ ಬಿದ್ದರು. ಕುದುರೆಗಳ ಗುಂಪುಗಳು, ರಥಗಳ ಗುಂಪುಗಳು ಮತ್ತು ಆನೆಗಳ ಸಮೂಹಗಳು ಎಲ್ಲಕಡೆ ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಉರುಳಿದವು. ಈ ರೀತಿ ಭಯವಿಲ್ಲದೇ ಸಮರದಲ್ಲಿ ಸಂಚರಿಸುತ್ತಿರುವ ಅವನನ್ನು ನೋಡಿ ಎಲ್ಲರಾಜರೂ ಒಟ್ಟಿಗೇ ಎಲ್ಲ ಕಡೆಗಳಿಂದ ಅವನನ್ನು ಸುತ್ತುವರೆದರು. ನಕುಲನ ಮಗ ಶತಾನೀಕನಾದರೋ ವೃಷಸೇನನನ್ನು ಎದುರಿಸಿ ಅವನನ್ನು ಮರ್ಮಭೇದಿಗಳಾದ ಹತ್ತು ನಾರಾಚಗಳಿಂದ ಹೊಡೆದನು. ಕರ್ಣಾತ್ಮಜನು ಅವನ ಧನ್ನುಸ್ಸನ್ನು ಕತ್ತರಿಸಿ ಧ್ವಜವನ್ನು ಕೆಡವಿದನು. ಆ ಸಹೋದರನನ್ನು ರಕ್ಷಿಸಲು ಇತರ ದ್ರೌಪದೇಯರು ಧಾವಿಸಿದರು. ಅವರು ಶರಗಳ ಮಳೆಯನ್ನು ಸುರಿಸಿ ಕರ್ಣಾತ್ಮಜನನ್ನು ಕಾಣದಂತೆ ಮಾಡಿದರು. ಆಗ ದ್ರೋಣಪುತ್ರನ ನಾಯಕತ್ವದಲ್ಲಿ ರಥರು ಗರ್ಜಿಸುತ್ತಾ ಅವರಿದ್ದಲ್ಲಿಗೆ ಧಾಮಿಸಿ ಬಂದರು. ಅವರು ತಕ್ಷಣವೇ ನಾನಾ ವಿಧದ ಶರಗಳಿಂದ ಮೋಡಗಳು ಪರ್ವತವನ್ನು ಹೇಗೋ ಹಾಗೆ ಮಹಾರಥ ದ್ರೌಪದೇಯರನ್ನು ಮುಚ್ಚಿದರು. ಆಗ ಪುತ್ರರ ಮೇಲಿನ ಪ್ರೀತಿಯಿಂದ ಪಾಂಡವರು, ಪಾಂಚಾಲರು, ಕೇಕಯರು, ಮತ್ಸ್ಯರು ಮತ್ತು ಸೃಂಜಯರೊಂದಿಗೆ ಆಯುಧಗಳನ್ನು ಎತ್ತಿ ಹಿಡಿದು ಧಾವಿಸಿದರು. ಆಗ ದಾನವರೊಂದಿಗೆ ದೇವತೆಗಳಂತೆ ಕೌರವರೊಡನೆ ಪಾಂಡುಪುತ್ರರ ರೋಮಾಂಚಕಾರೀ ಘೋರವಾದ ತುಮುಲ ಯುದ್ಧವು ನಡೆಯಿತು.
ಹೀಗೆ ಕುರುಪಾಂಡವರು ಪರಸ್ಪರರ ತಪ್ಪುಗಳಿಗೆ ಪರಸ್ಪರರನ್ನು ದಿಟ್ಟಾಗಿ ನೋಡುತ್ತಾ ಕ್ರೋಧದಿಂದ ಉತ್ತಮವಾಗಿ ಯುದ್ಧಮಾಡಿದರು. ಕೋಪದಿಂದ ಆ ಅಮಿತತೇಜಸ್ವಿಯರ ಶರೀರಗಳು ಆಕಾಶದಲ್ಲಿ ಗರುಡ ಮತ್ತು ಸರ್ಪಗಳು ಹೊಡೆದಾಡುತ್ತಿರುವಂತೆ ಕಾಣುತ್ತಿದ್ದವು. ಭೀಮ, ಕರ್ಣ, ಕೃಪ, ದ್ರೊಣ, ದ್ರೌಣಿ, ಪಾರ್ಷತ ಮತ್ತು ಸಾತ್ಯಕಿಯರಿಂದ ರಣಾಂಗಣವು ಉದಯಕಾಲದ ಸೂರ್ಯನಂತೆ ಹೊಳೆಯುತ್ತಿತ್ತು. ಆಗ ಸುರರಿಂದ ದಾನವರು ಹೇಗೋ ಹಾಗೆ ಒಬ್ಬರು ಇನ್ನೊಬ್ಬರನ್ನು ಸಂಹರಿಸುವ ಆ ಮಹಾಬಲರ ಬಲಶಾಲೀ ತುಮುಲ ಯುದ್ಧವು ನಡೆಯಿತು. ಯುಧಿಷ್ಠಿರನ ಸೇನೆಯು ಉಕ್ಕಿಬರುವ ಸಮುದ್ರದಂತೆ ಜೋರಾಗಿ ಗರ್ಜಿಸುತ್ತಾ ನಿನ್ನ ಸೇನೆಯ ಮೇಲೆ ಎರಗಿತು. ಮಹಾರಥರು ಪಲಾಯನಗೈದರು. ಶತ್ರುಗಳಿಂದ ಬಹಳವಾಗಿ ಮರ್ದಿಸಲ್ಪಟ್ಟು ಭಗ್ನವಾದ ಆ ಸೇನೆಯನ್ನು ನೋಡಿ ದ್ರೋಣನು “ಶೂರರೇ! ನಿಲ್ಲಿ! ಓಡಬೇಡಿ!” ಎಂದು ಕೂಗಿ ಹೇಳಿದನು. ಆಗ ದ್ರೋಣನು ನಾಲ್ಕುದಂತಗಳ ಆನೆಯಂತೆ ಕೂಗುತ್ತಾ ಪಾಂಡವರ ಸೇನೆಯನ್ನು ಪ್ರವೇಶಿಸಿ ಯುಧಿಷ್ಠಿರನನ್ನು ಆಕ್ರಮಣಿಸಿದನು. ಯುಧಿಷ್ಠಿರನು ಅವನನ್ನು ನಿಶಿತ ಕಂಕಪತ್ರ ಬಾಣಗಳಿಂದ ಹೊಡೆಯಲು ದ್ರೋಣನು ಅವನ ಧನುಸ್ಸನ್ನು ಕತ್ತರಿಸಿ ಅವನ ಮೇಲೆ ವೇಗದಿಂದ ಎರಗಿದನು. ಆಗ ಪಂಚಾಲರ ಯಶಸ್ಕರ ಯುಧಿಷ್ಠಿರನ ಚಕ್ರರಕ್ಷಕ ಕುಮಾರನು ಆಕ್ರಮಣಿಸುತ್ತಿದ್ದ ದ್ರೋಣನನ್ನು ಉಕ್ಕಿ ಬರುವ ಅಲೆಗಳನ್ನು ದಡವು ತಡೆಯುವಂತೆ ತಡೆದನು. ಕುಮಾರನು ದ್ರೋಣನನ್ನು ತಡೆದುದನ್ನು ನೋಡಿ “ಸಾಧು! ಸಾಧು!” ಎಂಬ ಸಿಂಹನಾದವು ಕೇಳಿಬಂದಿತು. ಕುಮಾರನಾದರೋ ಮಹಾಹವದಲ್ಲಿ ಸಂಕ್ರುದ್ಧನಾಗಿ ದ್ರೋಣನನ್ನು ಸಾಯಕದಿಂದ ಎದೆಗೆ ಹೊಡೆದು ಪುನಃ ಪುನಃ ಸಿಂಹನಾದಗೈದನು. ಮಹಾಬಲ ದ್ರೋಣನು ಅನೇಕ ಸಹಸ್ರ ಬಾಣಗಳಿಂದ ಕುಮಾರನನ್ನು ರಣದಲ್ಲಿ ತಡೆದನು. ದ್ವಿಜಸತ್ತಮನು ಆ ಶೂರ, ಆರ್ಯವ್ರತಿ, ಅಸ್ತ್ರಾರ್ಥಕೃತನಿಶ್ರಮ ಚಕ್ರರಕ್ಷಕ ಕುಮಾರನನ್ನು ಸಂಹರಿಸಿದನು.
ಆ ಭಾರದ್ವಾಜ ರಥರ್ಷಭನು ಸೇನೆಗಳ ಮಧ್ಯೆ ಹೋಗಿ ಎಲ್ಲ ದಿಕ್ಕುಗಳಲ್ಲಿಯೂ ಸಂಚರಿಸುತ್ತಾ ಕೌರವ ಸೇನೆಯನ್ನು ರಕ್ಷಿಸಿದನು. ಶಿಖಂಡಿಯನ್ನು ಹನ್ನೆರಡರಿಂದ, ಉತ್ತಮೌಜಸನನ್ನು ಇಪ್ಪತ್ತರಿಂದ, ನಕುಲನನ್ನು ಐದರಿಂದ, ಸಹದೇವನನ್ನು ಏಳರಿಂದ, ಯುಧಿಷ್ಠಿರನನ್ನು ಹನ್ನೆರಡರಿಂದ, ದ್ರೌಪದೇಯರನ್ನು ಮೂರು ಮೂರರಿಂದ, ಸಾತ್ಯಕಿಯನ್ನು ಐದರಿಂದ, ಮತ್ಸ್ಯನನ್ನು ಹತ್ತು ಶರಗಳಿಂದ ಹೊಡೆದು ರಣದಲ್ಲಿ ಅಲ್ಲೋಲಕಲ್ಲೋಲವನ್ನುಂಟುಮಾಡಿದನು. ಮುಖ್ಯಯೋಧರನ್ನು ಆಕ್ರಮಣಿಸಿ ಕುಂತೀಪುತ್ರ ಯುಧಿಷ್ಠಿರನನ್ನು ತಲುಪಲು ಧಾವಿಸಿದನು. ಆಗ ಸಂಕ್ರುದ್ಧನಾದ ಯುಗಂಧರನು ಭಿರುಗಾಳಿಯಿಂದ ಉಕ್ಕಿಬಂದ ಸಮುದ್ರದಂತೆ ಮಹಾರಥ ಭಾರದ್ವಾಜನನ್ನು ತಡೆದನು. ದ್ರೋಣನು ಯುಧಿಷ್ಠಿರನನ್ನು ಸನ್ನತಪರ್ವ ಶರದಿಂದ ಹೊಡೆದು ಯುಗಂಧರನನ್ನು ಭಲ್ಲದಿಂದ ಹೊಡೆದು ರಥದಿಂದ ಕೆಳಗೆ ಬೀಳಿಸಿದನು. ಆಗ ವಿರಾಟ-ದ್ರುಪದರು, ಕೇಕಯರು, ಸಾತ್ಯಕಿ, ಶಿಬಿ, ವ್ಯಾಘ್ರದತ್ತ ಮತ್ತು ಇನ್ನೂ ಇತರ ಅನೇಕರು ಯುಧಿಷ್ಠಿರನನ್ನು ರಕ್ಷಿಸಲು ಬಯಸಿ ಅವನ ದಾರಿಯಲ್ಲಿ ಬಹಳ ಸಾಯಕಗಳನ್ನು ಚೆಲ್ಲಿದರು. ಪಾಂಚಾಲ್ಯ ವ್ಯಾಘ್ರದತ್ತನು ದ್ರೋಣನನ್ನು ಐವತ್ತು ನಿಶಿತ ಮಾರ್ಗಣಗಳಿಂದ ಹೊಡೆದನು. ಆಗ ಸೈನಿಕರು ಜೋರಾಗಿ ಕೂಗಿದರು. ಸಿಂಹಸೇನನಾದರೋ ಬೇಗನೆ ಮಹಾರಥ ದ್ರೋಣನನ್ನು ಹೊಡೆದು ಪೀಡಿಸಿ ಹರ್ಷದಿಂದ ಜೋರಾಗಿ ನಕ್ಕನು. ಆಗ ಕಣ್ಣಿನವರಿಗೆ ಧನುಸ್ಸಿನ ಶಿಂಜನಿಯನ್ನು ಎಳೆದು ಜೋರಾಗಿ ಚಪ್ಪಾಳೆಯ ಶಬ್ಧವನ್ನುಂಟುಮಾಡುತ್ತಾ ದ್ರೋಣನು ಅವನ ಮೇಲೆ ಎರಗಿದನು. ಆಗ ಆ ಬಲಶಾಲಿಯು ಎರಡು ಭಲ್ಲಗಳಿಂದ ಕುಂಡಲಗಳೊಡನೆ ಸಿಂಹಸೇನನ ಶಿರವನ್ನು ದೇಹದಿಂದ ಬೇರ್ಪಡಿಸಿ ವ್ಯಾಘ್ರದತ್ತನನ್ನು ಸಂಹರಿಸಿದನು. ಪಾಂಡವರ ಆ ಮಹಾರಥರನ್ನು ಶರವ್ರಾತದಿಂದ ಸಂಹರಿಸಿ ದ್ರೋಣನು ಯುಧಿಷ್ಠಿರನ ಮುಂದೆ ಅಂತಕ ಮೃತ್ಯುವಿನಂತೆ ಹೋಗಿ ನಿಂತನು.
ಆಗ ಯುಧಿಷ್ಠಿರನ ಸೇನೆಯಲ್ಲಿ ಆ ಯತವ್ರತನ ಸಮೀಪವಿದ್ದ ಯೋಧರು “ರಾಜನು ಕೊಲ್ಲಲ್ಪಟ್ಟನು!” ಎಂದು ಕೂಗಿ ಮಹಾಶಬ್ಧವುಂಟಾಯಿತು. ಅಲ್ಲಿ ದ್ರೋಣನ ವಿಕ್ರಮವನ್ನು ನೋಡಿ “ಇಂದು ರಾಜಾ ಧಾರ್ತರಾಷ್ಟ್ರನು ಕೃತಾರ್ಥನಾದಂತೆಯೇ! ಇಂದು ಇವನು ಧಾರ್ತರಾಷ್ಟ್ರನ ಎದುರಿಗೆ ಬರುವವನಿದ್ದಾನೆ” ಎಂದು ಹೇಳಿಕೊಂಡರು. ಹೀಗೆ ಕೌರವರು ಕೂಗಿಕೊಳ್ಳುವಾಗ ಮಹಾರಥ ಕೌಂತೇಯನು ರಥಘೋಷದಿಂದ ಪ್ರತಿಧ್ವನಿಸುತ್ತಾ ವೇಗದಿಂದ ಅಲ್ಲಿಗೆ ಬಂದನು. ರಕ್ತವೇ ನೀರಾಗಿ, ರಥಗಳೇ ಸುಳಿಗಳಾಗಿ, ಶೂರರ ಅಸ್ಥಿಗಳಿಂದ ತುಂಬಿಹೋಗಿದ್ದ, ಪ್ರೇತಗಳೆಂಬ ದಡವನ್ನು ಕೊಚ್ಚಿಕೊಂಡು ಹೋಗುತ್ತಿದ್ದ, ಶರೌಘಗಳೇ ನೊರೆಗಳಾಗಿದ್ದ, ಪ್ರಾಸಗಳೆಂಬ ಮೀನುಗಳಿಂದ ತುಂಬಿಹೋಗಿದ್ದ ಆ ವಿಶಸನ ನದಿಯನ್ನು ವೇಗದಿಂದ ದಾಟಿ ಪಾಂಡವನು ಶೀಘ್ರವಾಗಿ ಅಲ್ಲಿಗೆ ಬಂದನು. ಆಗ ತಕ್ಷಣವೇ ಕಿರೀಟಿಯು ದ್ರೋಣನ ಸೇನೆಯನ್ನು ಆಕ್ರಮಣಿಸಿ ಮಹಾ ಶರಜಾಲದಿಂದ ಮೋಹಿಸಿ ಮುಚ್ಚಿದನು. ಯಶಸ್ವಿ ಕೌಂತೇಯನು ಎಷ್ಟೊಂದು ಶೀಘ್ರವಾಗಿದ್ದನೆಂದರೆ ಅವನು ಬಾಣವನ್ನು ತೆಗೆದುಕೊಳ್ಳುವುದರ ಮತ್ತು ಹೂಡುವುದರ ಮಧ್ಯ ಅಂತರವೇ ಕಾಣುತ್ತಿರಲಿಲ್ಲ. ದಿಕ್ಕುಗಳಾಗಲೀ, ಅಂತರಿಕ್ಷವಾಗಲೀ, ಆಕಾಶವಾಗಲೀ, ಭೂಮಿಯಾಗಲೀ ಕಾಣದೇ ಹೋಯಿತು. ಎಲ್ಲವೂ ಬಾಣಮಯವಾಯಿತು. ಗಂಡೀವಧನ್ವಿಯು ರಚಿಸಿದ ಆ ಮಹಾ ಬಾಣಾಂಧಕಾರದಿಂದಾಗಿ ರಣದಲ್ಲಿ ಏನೊಂದೂ ಕಾಣದಂತಾಯಿತು. ಸೂರ್ಯನೂ ಅಸ್ತವಾಗುತ್ತಿರಲು ಮತ್ತು ಧೂಳಿನಿಂದ ತುಂಬಿಹೋಗಿರಲು ಅಲ್ಲಿ ಶತ್ರುಗಳಾರು ಮಿತ್ರರಾರು ಎಂದು ಏನೂ ತಿಳಿಯದೇ ಹೋಯಿತು.
ಆಗ ದ್ರೋಣ-ದುರ್ಯೋಧನಾದಿಗಳು ಯುದ್ಧದಿಂದ ಹಿಮ್ಮೆಟ್ಟಿದರು. ಶತ್ರುಗಳು ಭಯಪಟ್ಟಿದುದನ್ನೂ ಯುದ್ಧದಲ್ಲಿ ನಿರಾಸಕ್ತರಾದುದನ್ನೂ ತಿಳಿದುಕೊಂಡ ಬೀಭತ್ಸುವೂ ಕೂಡ ತನ್ನ ಸೇನೆಗಳನ್ನು ನಿಧಾನವಾಗಿ ಹಿಂದೆ ತೆಗೆದುಕೊಂಡನು. ಪ್ರಹೃಷ್ಟರಾದ ಪಾಂಡವ-ಸೃಂಜಯ-ಪಾಂಚಾಲರು ಪಾರ್ಥನನ್ನು ಋಷಿಗಳು ಸೂರ್ಯನನ್ನು ಸ್ತುತಿಸುವಂತೆ ಮನೋಜ್ಞ ಮಾತುಗಳಿಂದ ಸಂತೋಷಪಡಿಸಿದರು. ಹೀಗೆ ಶತ್ರುಗಳನ್ನು ಗೆದ್ದು ಸಂತೋಷಭರಿತನಾಗಿ ಧನಂಜಯನು ಕೇಶವನೊಂದಿಗೆ ಸರ್ವಸೇನೆಗಳ ಹಿಂಬಾಗದಲ್ಲಿ ತನ್ನ ಶಿಬಿರದ ಕಡೆ ಪ್ರಯಾಣಿಸಿದನು. ನಕ್ಷತ್ರಗಳಿಂದ ಚಿತ್ರಿತವಾಗಿರುವ ಆಕಾಶದಲ್ಲಿ ಚಂದ್ರನು ಪ್ರಕಾಶಿಸುವಂತೆ ಪಾಂಡುಸುತನು ಮಣಿಗಳಿಂದಲೂ, ಪದ್ಮರಾಗಗಳಿಂದಲೂ, ಸುವರ್ಣದಿಂದಲೂ, ವಜ್ರಮಣಿಗಳಿಂದಲೂ, ಹವಳಗಳಿಂದಲೂ, ಸ್ಪಟಿಕ ಮೊದಲಾದವುಗಳಿಂದ ವಿಭೂಷಿತವಾಗಿದ್ದ ಚಿತ್ರರಥದಲ್ಲಿ ಪ್ರಕಾಶಿಸಿದನು.
