ಹದಿನಾಲ್ಕನೆಯ ದಿನದ ಯುದ್ಧ – ೫
ಯುಧಿಷ್ಠಿರನು ಭೀಮಸೇನನನ್ನು ಅರ್ಜುನ-ಸಾತ್ಯಕಿಯರಿದ್ದಲ್ಲಿಗೆ ಕಳುಹಿಸಿದುದು
ಪಾಂಡವರ ವ್ಯೂಹವು ಅಲ್ಲಲ್ಲಿಯೇ ಅಲ್ಲೋಲಕಲ್ಲೋಲಗೊಳ್ಳುತ್ತಿರಲು ಸೋಮಕ-ಪಾಂಚಾಲರೊಂದಿಗೆ ಪಾರ್ಥರು ದೂರದಲ್ಲಿ ಸೇರಿದರು. ಹಾಗೆ ರೌದ್ರವಾದ, ರೋಮಾಂಚಕಾರೀ ಸಂಗ್ರಾಮವು ನಡೆಯುತ್ತಿರಲು, ಪ್ರಲಯವೋ ಎಂಬಂತೆ ತೀವ್ರವಾಗಿ ಜನರ ನಾಶವಾಗುತ್ತಿರಲು, ಯುದ್ಧದಲ್ಲಿ ಪರಾಕ್ರಾಂತನಾದ ದ್ರೋಣನು ಮತ್ತೆ ಮತ್ತೆ ಗರ್ಜಿಸುತ್ತಿರಲು, ವಧಿಸಲ್ಪಡುತ್ತಿರುವ ಪಾಂಚಾಲ ಮತ್ತು ಪಾಂಡವರ ಸೇನೆಗಳು ಕ್ಷೀಣಿಸುತ್ತಿರಲು, ಮೊರೆಹೊಗಲು ಯಾರನ್ನೂ ಕಾಣದೇ ರಾಜಾ ಯುಧಿಷ್ಠಿರನು ಇದು ಹೇಗಾಗುತ್ತದೆ ಎಂದು ಜಿಂತಿಸತೊಡಗಿದನು. ಸವ್ಯಸಾಚಿಯನ್ನು ಹುಡುಕುತ್ತಾ ಎಲ್ಲ ದಿಕ್ಕುಗಳಲ್ಲಿಯೂ ಕಣ್ಣು ಹಾಯಿಸಿದನು. ಆದರೆ ಯುಧಿಷ್ಠಿರನು ಪಾರ್ಥನನ್ನಾಗಲೀ ಮಾಧವನನ್ನಾಗಲೀ ಕಾಣಲಿಲ್ಲ. ಆ ನರಶಾರ್ದೂಲ ವಾನರರ್ಷಭಲಕ್ಷಣನನ್ನು ಕಾಣದೇ ಗಾಂಡೀವದ ನಿರ್ಘೋಷವನ್ನು ಕೇಳದೇ ಅವನು ವ್ಯಥಿತನಾದನು. ವೃಷ್ಣಿಯರ ರಥರಲ್ಲಿ ಶ್ರೇಷ್ಠನಾದ ಸಾತ್ಯಕಿಯನ್ನೂ ಕಾಣದೇ ಧರ್ಮರಾಜ ಯುಧಿಷ್ಠಿರನು ಚಿಂತೆಯಿಂದ ತಳಮಳಗೊಂಡನು. ಆ ಇಬ್ಬರು ನರರ್ಷಭರನ್ನು ಕಾಣದೇ ಶಾಂತಿಯನ್ನು ಹೊಂದಲಿಲ್ಲ. ಲೋಕದ ಕಟುಮಾತಿಗೆ ಹೆದರಿ ಧರ್ಮರಾಜನು ಶೈನೇಯನ ರಥದ ಕುರಿತು ಚಿಂತಿಸತೊಡಗಿದನು: “ಫಲ್ಗುನನು ಹೋದದಾರಿಯಲ್ಲಿಯೇ ಹೋಗೆಂದು ನಾನು ಮಿತ್ರರಿಗೆ ಅಭಯವನ್ನುಂಟುಂಮಾಡುವ ಶಿನಿಯ ಮೊಮ್ಮಗ ಸಾತ್ಯಕಿಯನ್ನು ಕಳುಗಿಸಿ ಕೊಟ್ಟೆನು. ಮೊದಲು ಒಬ್ಬನ ಕುರಿತು ಮಾತ್ರ ಚಿಂತೆಯಿತ್ತು. ಈಗ ಇಬ್ಬರ ಕುರಿತು ನನಗೆ ಚಿಂತೆಯಾಗುತ್ತಿದೆ. ಸಾತ್ಯಕಿ ಮತ್ತು ಧನಂಜಯ ಇಬ್ಬರ ಕುರಿತೂ ನಾನು ತಿಳಿದುಕೊಳ್ಳಬೇಕಾಗಿದೆ. ಪಾಂಡವನಿಗೆ ಸಹಾಯಕನಾಗಿ ಅವನ ದಾರಿಯನ್ನೇ ಅನುಸರಿಸಿ ಹೋಗೆಂದು ಸಾತ್ಯಕಿಯನ್ನು ಕಳುಹಿಸಿ, ಈಗ ಯುದ್ಧದಲ್ಲಿ ಸಾತ್ಯಕಿಯ ಕುರುಹನ್ನರಿಯಲು ಯಾರನ್ನು ಕಳುಹಿಸಿಕೊಡಲಿ? ಯುದ್ಧದಲ್ಲಿ ಯುಯುಧಾನನನ್ನು ಹುಡುಕದೇ ಕೇವಲ ಸಹೋದರ ಅರ್ಜುನನನ್ನು ಮಾತ್ರ ಹುಡುಕಲು ಪ್ರಯತ್ನಿಸಿದೆನೆಂದರೆ “ಸಹೋದರನ ಅನ್ವೇಷಣೆಯನ್ನು ಮಾಡಲು ಧರ್ಮರಾಜ ಯುಧಿಷ್ಠಿರನು ವಾರ್ಷ್ಣೇಯ ಸತ್ಯವಿಕ್ರಮಿ ಸಾತ್ಯಕಿಯನ್ನು ತ್ಯಜಿಸಿಬಿಟ್ಟನು!” ಎಂದು ಜನರು ನನ್ನನ್ನು ನಿಂದಿಸುತ್ತಾರೆ. ಜನರಿಂದ ಅಪವಾದವು ಬರಬಾರದೆಂದು ನಾನು ಮಹಾತ್ಮ ಮಾಧವನು ಹೋದ ದಾರಿಯಲ್ಲಿ ಪಾರ್ಥ ವೃಕೋದರನನ್ನು ಕಳುಹಿಸುತ್ತೇನೆ. ನನಗೆ ಅರ್ಜುನನ ಮೇಲೆ ಎಷ್ಟು ಪ್ರೀತಿಯಿದೆಯೋ ಅಷ್ಟೇ ಸಾತ್ಯಕಿಯ ಮೇಲೂ ಇದೆ. ಮಿತ್ರನಿಗೆ ಸಹಾಯಮಾಡಬೇಕೆಂದು ಗೌರವದಿಂದ ಶೈನೇಯನಂದನನು ನನ್ನಿಂದ ಅತಿಯಾದ ಭಾರವನ್ನು ಹೊತ್ತು ಮೊಸಳೆಯು ಸಮುದ್ರವನ್ನು ಹೇಗೋ ಹಾಗೆ ಭರತರ ಸೇನೆಯನ್ನು ಪ್ರವೇಶಿಸಿರುವನು. ವೃಷ್ಣಿವೀರನೊಂದಿಗೆ ಯುದ್ಧಮಾಡುತ್ತಿರುವ ಪಲಾಯನ ಮಾಡದ ಶೂರರ ಶಬ್ಧವು ಇಗೋ ಕೇಳಿಬರುತ್ತಿದೆ. ಅವನಿಗೆ ಆ ಸೇನೆಯು ಬಹಳವಾಗಿದೆ ಎಂದು ನನಗನ್ನಿಸುತ್ತದೆ. ಆ ಮಹಾರಥರಿಬ್ಬರು ಎಲ್ಲಿಗೆ ಹೋಗಿದ್ದಾರೋ ಅಲ್ಲಿಗೆ ಭೀಮಸೇನನನ್ನೂ ಕಳುಹಿಸಲು ಇದು ಸರಿಯಾದ ಸಮಯವೆಂದು ನನಗನ್ನಿಸುತ್ತದೆ. ಭೀಮಸೇನನಿಗೆ ಸಹಿಸಲಸಾದ್ಯವಾದದು ಭೂಮಿಯಲ್ಲಿ ಏನೂ ಇಲ್ಲ. ಪ್ರಯತ್ನಪಟ್ಟು ರಣದಲ್ಲಿ ಯುದ್ಧಮಾಡಿದರೆ ಇವನು ಭೂಮಿಯ ಸರ್ವಧನ್ವಿಗಳನ್ನೂ ಎದುರಿಸಬಲ್ಲ. ತನ್ನದೇ ಬಾಹುಬಲವನ್ನು ಆಶ್ರಯಿಸಿ ಸೇನೆಗಳನ್ನು ನಿರಾಯಾಸವಾಗಿ ಎದುರಿಸಬಲ್ಲನು. ಯಾರ ಬಾಹುಬಲವನ್ನು ಆಶ್ರಯಿಸಿ ನಾವೆಲ್ಲರೂ ವನವಾಸವನ್ನು ಪೂರೈಸಿ ಹಿಂದಿರುಗಿದೆವೋ ಆ ಮಹಾತ್ಮನಿಗೆ ಸೋಲೇ ಇಲ್ಲ. ಈಗ ಸಾತ್ವತನಿರುವಲ್ಲಿಗೆ ಭೀಮನು ಹೋದರೆ ಯುದ್ಧದಲ್ಲಿ ಸಾತ್ವತ-ಫಲ್ಗುನರಿಬ್ಬರಿಗೂ ಸಹಾಯಕನಿದ್ದಾನೆಂದಾಗುತ್ತದೆ. ನಿಜವಾಗಿಯೂ ನಾನು ರಣದಲ್ಲಿ ವಾಸುದೇವನಿಂದ ರಕ್ಷಿತರಾದ, ಸ್ವಯಂ ಅಸ್ತ್ರವಿಶಾರದರಾದ ಸಾತ್ವತ-ಫಲ್ಗುನರ ಕುರಿತು ಚಿಂತಿಸಬಾರದು. ನನ್ನ ಶೋಕವನ್ನು ನಾಶಗೊಳಿಸಿಕೊಳ್ಳಬೇಕಾದುದು ಅವಶ್ಯಕವಾಗಿದೆ. ಆದುದರಿಂದ ಸಾತ್ವತನನ್ನು ಹಿಂಬಾಲಿಸಲು ಭೀಮನನ್ನು ನಿಯೋಜಿಸುತ್ತೇನೆ. ಆಗ ಸಾತ್ಯಕಿಗೆ ಪ್ರತೀಕಾರವನ್ನು ಮಾಡಿದಂತಾಗುತ್ತದೆ ಎಂದು ನನಗನ್ನಿಸುತ್ತದೆ.”
ಹೀಗೆ ಮನಸ್ಸಿನಲ್ಲಿಯೇ ನಿಶ್ಚಯಿಸಿ ಧರ್ಮಪುತ್ರ ಯುಧಿಷ್ಠಿರನು “ನನ್ನನ್ನು ಭೀಮನಿರುವಲ್ಲಿಗೆ ಕರೆದೊಯ್ಯಿ!” ಎಂದು ಸಾರಥಿಗೆ ಹೇಳಿದನು. ಧರ್ಮರಾಜನ ಮಾತನ್ನು ಕೇಳಿ ಹಯಕೋವಿದ ಸಾರಥಿಯು ಹೇಮಮಯ ರಥವನ್ನು ಭೀಮಸೇನನ ಬಳಿಗೆ ಕೊಂಡೊಯ್ದನು. ಭೀಮಸೇನನ ಬಳಿಸಾರಿ ಸಮಯಕ್ಕೆ ಸರಿಯಾದುದನ್ನು ನೆನಪಿಸಿಕೊಂಡು ಕಳವಳಗೊಂಡು ರಾಜನು ಅಲ್ಲಿ ಅವನಿಗೆ ಬಹುರೀತಿಗಳಲ್ಲಿ ಹೇಳಿಕೊಂಡನು. “ಭೀಮಸೇನ! ಯಾರು ಗಂಧರ್ವ-ದೈತ್ಯರೊಂದಿಗೆ ದೇವತೆಗಳನ್ನು ಕೂಡ ಪರಾಯಜಗೊಳಿಸುತ್ತಾನೋ ಆ ನಿನ್ನ ತಮ್ಮನ ಕುರುಹು ನನಗೆ ಕಾಣುತ್ತಿಲ್ಲ.”
ಆಗ ಧರ್ಮರಾಜನಿಗೆ ಭೀಮಸೇನನು ಹೇಳಿದನು: “ಈ ರೀತಿ ನೀನು ತಳಮಳಗೊಂಡಿರುವುದನ್ನು ನಾನು ಈ ಮೊದಲು ನೋಡಿರಲಿಲ್ಲ ಕೇಳಿರಲಿಲ್ಲ. ಹಿಂದೆ ದುಃಖದಿಂದ ದೀನರಾಗಿದ್ದ ನಮಗೆ ನೀನೇ ಗತಿಯಾಗಿದ್ದೆಯಲ್ಲವೇ? ರಾಜೇಂದ್ರ! ನಿನಗೇನು ಮಾಡಬೇಕು ಹೇಳು! ಏಕೆಂದರೆ ಆಸಾದ್ಯವೆಂಬ ಯಾವ ಕಾರ್ಯವೂ ನನಗೆ ತಿಳಿಯದು. ಕುರುಶ್ರೇಷ್ಠ! ಆಜ್ಞಾಪಿಸು! ಮನಸ್ಸನ್ನು ಶೋಕಗೊಳಿಸಬೇಡ!”
ಆಗ ಕಣ್ಣೀರುತುಂಬಿದವನಾಗಿ, ಕೃಷ್ಣಸರ್ಪದಂತೆ ನಿಟ್ಟುಸಿರುಬಿಡುತ್ತಾ, ಕಂದಿದ ಮುಖವುಳ್ಳ ನೃಪನು ಭೀಮಸೇನನಿಗೆ ಈ ಮಾತನ್ನಾಡಿದನು. “ಯಶಸ್ವಿ ವಾಸುದೇವನು ಉದ್ವೇಗದಿಂದ ಊದಿದ ಪಾಂಚಜನ್ಯ ಶಂಖದ ನಿರ್ಘೋಷವು ಕೇಳಿ ಬರುತ್ತಿದೆಯೆಂದರೆ ನಿನ್ನ ತಮ್ಮ ಧನಂಜಯನು ಹತನಾಗಿ ಮಲಗಿರಬಹುದೇ? ಅವನು ಹತನಾಗಲು ಜನಾರ್ದನನೇ ಈಗ ಯುದ್ಧಮಾಡುತ್ತಿರಬಹುದು. ಯಾವ ಸತ್ವವತನ ವೀರ್ಯವನ್ನು ಅವಲಂಬಿಸಿ ಪಾಂಡವರು ಜೀವಿಸುತ್ತಿರುವರೋ, ಭಯವಾದಾಗ ಅಮರರು ಸಹಸ್ರಾಕ್ಷನಲ್ಲಿ ಮೊರೆಹೊಗುವಂತೆ ಯಾರನ್ನು ಪಾಂಡವರು ಮೊರೆಹೊಡುವರೋ ಆ ಶೂರ ಅರ್ಜುನನು ಸೈಂಧವನಿಗಾಗಿ ಭಾರತರ ಸೇನೆಯನ್ನು ಹೊಕ್ಕಿದ್ದಾನೆ. ಭೀಮ! ಆ ಶ್ಯಾಮವರ್ಣದ, ಯುವಕ, ಗುಡಾಕೇಶ, ಸುಂದರ, ಮಹಾಭುಜ, ವಿಶಾಲ ಎದೆಯ, ಮಹಾಸ್ಕಂಧ, ಮದಿಸಿದ ಆನೆಯ ನಡುಗೆಯುಳ್ಳ, ಚಕೋರಪಕ್ಷಿಗಳಂಥ ಕಣ್ಣುಗಳುಳ್ಳ, ಎಣ್ಣೆಗೆಂಪಿನ ಕಣ್ಣುಳ್ಳ, ಶತ್ರುಗಳ ಭಯವನ್ನು ಹೆಚ್ಚಿಸುವ ಅರ್ಜುನನು ಹೋಗಿದ್ದುದು ನಮಗೆ ತಿಳಿದಿದೆ. ಆದರೆ ಅವನು ಪುನಃ ಹಿಂದಿರುಗಿಲ್ಲ. ನಿನಗೆ ಮಂಗಳವಾಗಲಿ! ಇದೇ ನನ್ನ ಶೋಕಕ್ಕೆ ಕಾರಣ. ಮಹಾಬಾಹೋ! ಅರ್ಜುನನಿಗಾಗಿ ಮತ್ತು ಸಾತ್ವತನ ಕಾರಣದಿಂದಾಗಿ ನನ್ನ ಶೋಕವು ತುಪ್ಪದ ಆಹುತಿಯಂತೆ ಹತ್ತಿ ಉರಿಯುವ ಅಗ್ನಿಯಂತೆ ಪುನಃ ಪುನಃ ಹೆಚ್ಚಾಗುತ್ತಿದೆ. ಅವನನ್ನು ಕಾಣದೇ ನಾನು ಶೋಕದಲ್ಲಿ ಮುಳುಗಿಹೋಗಿದ್ದೇನೆ. ನಿನ್ನ ಅನುಜನನ್ನು ಅನುಸರಿಸಿಹೋದ ಆ ಸಾತ್ವತನನ್ನು ಕಾಣದೆ ಕೂಡ ನಾನು ಶೋಕದಲ್ಲಿ ಮುಳುಗಿಹೋಗಿದ್ದೇನೆ. ಆದುದರಿಂದ ಯಾವ ವೀರ್ಯವತನ ವೀರ್ಯವನ್ನು ಅವಲಂಬಿಸಿ ಪಾಂಡವರು ಜೀವಿಸುತ್ತಿದ್ದಾರೋ ಆ ಯುದ್ಧಕೋವಿದ ಕೃಷ್ಣನೇ ರಣದಲ್ಲಿ ಯುದ್ಧಮಾಡುತ್ತಿರಬೇಕು. ನಿನ್ನ ಹಿರಿಯ ಅಣ್ಣನಾಗಿರುವ ನನ್ನ ಮಾತಿನಂತೆ ಮಾಡಬೇಕೆಂದು ನಿನಗನ್ನಿಸಿದರೆ ಎಲ್ಲಿ ಧನಂಜಯ ಮತ್ತು ಸಾತ್ಯಕಿಯರು ಹೋಗಿರುವರೋ ಅಲ್ಲಿಗೆ ಹೋಗು. ಸವ್ಯಸಾಚಿಯು ಹೋದ ದುರ್ಗಮವೂ ಘೋರವೂ ಮತ್ತು ಪಳಗಿಲ್ಲದವರು ಹೋಗಲು ಅಸಾಧ್ಯವೂ ಆದ ದಾರಿಯನ್ನು ಅನುಸರಿಸಿ ಹೋಗಿ ಅರ್ಜುನನ ಕುರಿತೂ ಸತ್ಯಕಿಯ ಕುರಿತೂ ತಿಳಿದುಕೊಂಡು ನನಗೆ ತಿಳಿಸು. ನನಗೆ ಪ್ರಿಯವಾದ ಈ ಕೆಲಸವನ್ನು ಮಾಡು.”
ಆಗ ಭೀಮಸೇನನು ಹೇಳಿದನು: “ಹಿಂದೆ ಬ್ರಹ್ಮ, ಈಶಾನ, ಇಂದ್ರ ಮತ್ತು ವರುಣರು ಏರಿದ್ದ ಆ ರಥವನ್ನು ಏರಿ ಕೃಷ್ಣರಿಬ್ಬರೂ ಹೋಗಿದ್ದಾರೆ. ಅವರಿಗೆ ಭಯವೆಂಬುದೇ ಇಲ್ಲ. ಆದರೆ ನಿನ್ನ ಆಜ್ಞೆಯನ್ನು ಶಿರಸಾ ವಹಿಸಿ ಅಲ್ಲಿಗೆ ಹೋಗುತ್ತೇನೆ. ಆ ನರವ್ಯಾಘ್ರರನ್ನು ಸೇರಿ ನಿನಗೆ ಸೂಚನೆಯನ್ನು ನೀಡುತ್ತೇನೆ.””
ಹೀಗೆ ಹೇಳಿ ಬಲವಾನ ಭೀಮಸೇನನು ಯುಧಿಷ್ಠಿರನನ್ನು ಧೃಷ್ಟದ್ಯುಮ್ನ ಮತ್ತು ಇತರ ಸುಹೃದರಿಗೆ ಪುನಃ ಪುನಃ ಒಪ್ಪಿಸುತ್ತಾ ಹೊರಡಲು ಸಿದ್ಧನಾದನು. ಆ ಮಹಾಬಲನು ಧೃಷ್ಟದ್ಯುಮ್ನನಿಗೆ ಹೀಗೆ ಹೇಳಿದನು: “ಮಹಾಬಾಹೋ! ನಿನಗೆ ತಿಳಿದೇ ಇದೆ. ದ್ರೋಣನು ಸರ್ವೋಪಾಯಗಳಿಂದ ಧರ್ಮರಾಜನನ್ನು ಬಂಧಿಸುವ ಪ್ರಯತ್ನದಲ್ಲಿದ್ದಾನೆ. ನನಗೆ ಅಲ್ಲಿಗೆ ಹೋಗುವುದಕ್ಕಿಂತಲೂ ಮಾಡಲಿಕ್ಕೆ ಮುಖ್ಯವಾದುದು ಇಲ್ಲಿದೆ ಎಂದು ತಿಳಿದಿದೆ. ರಾಜನನ್ನು ರಕ್ಷಿಸುವ ಕಾರ್ಯವು ನಮ್ಮೆಲ್ಲರದ್ದೂ ಆಗಿದೆ. ಆದರೆ ಯುಧಿಷ್ಠಿರನು ಸೈಂಧವನು ಇರುವಲ್ಲಿಗೆ ಹೋಗಬೇಕೆಂದು ಹೇಳಿದ್ದಾನೆ. ಅದಕ್ಕೆ ವಿರುದ್ಧವಾಗಿ ಮಾಡಲು ಮನಸ್ಸಿಲ್ಲ. ಯಾವುದೇ ಶಂಕೆಯಿಲ್ಲದೇ ಧರ್ಮರಾಜನ ಮಾತಿನಂತೆಯೇ ನಡೆದುಕೊಳ್ಳಬೇಕು. ಆದುದರಿಂದ ನೀನು ರಣದಲ್ಲಿ ಪ್ರಯತ್ನಪೂರ್ವಕವಾಗಿ ಪಾರ್ಥ ಯುಧಿಷ್ಠಿರನನ್ನು ರಕ್ಷಿಸು. ಏಕೆಂದರೆ ಇದೇ ರಣದಲ್ಲಿ ಮಾಡಬೇಕಾದ ಸರ್ವಕಾರ್ಯಗಳಲ್ಲಿ ಅತಿ ಮುಖ್ಯವಾದುದು.”
ಆಗ ಧೃಷ್ಟದ್ಯುಮ್ನನು ವೃಕೋದರನಿಗೆ ಹೇಳಿದನು: “ಮಹಾಬಾಹೋ! ಏನನ್ನೂ ವಿಚಾರಿಸದೇ ನೀನು ಇಷ್ಟಪಟ್ಟು ಪಾರ್ಥನಲ್ಲಿಗೆ ಹೋಗು. ಧೃಷ್ಟದ್ಯುಮ್ನನನ್ನು ಸಂಹರಿಸದೇ ದ್ರೋಣನು ಎಂದೂ ರಣದಲ್ಲಿ ಯುಧಿಷ್ಠಿರನನ್ನು ಸೆರೆಹಿಡಿಯಬಲ್ಲನು.”
ಆಗ ರಾಜನನ್ನು ಧೃಷ್ಟದ್ಯುಮ್ನನಿಗೊಪ್ಪಿಸಿ ಪಾಂಡವ ಭೀಮನು ಗುರು, ಹಿರಿಯಣ್ಣ ಯುಧಿಷ್ಠಿರನಿಗೆ ನಮಸ್ಕರಿಸಿ ಫಲ್ಗುನನಿದ್ದಲ್ಲಿಗೆ ಹೊರಟನು. ಕೌಂತೇಯ ಧರ್ಮರಾಜನು ಅವನನ್ನು ಬಿಗಿದಪ್ಪಿ, ನೆತ್ತಿಯನ್ನು ಆಘ್ರಾಣಿಸಿ ಶುಭ ಆಶೀರ್ವಾದಗಳನ್ನಿತ್ತನು. ರಥಿಗಳಲ್ಲಿ ಮಹಾಬಾಹು ಭೀಮಸೇನನು ಕವಚವನ್ನು ಧರಿಸಿ, ಶುಭಕುಂಡಲಗಳನ್ನೂ, ಭುಜಕೀರ್ತಿಗಳನ್ನೂ ಧರಿಸಿ, ಕೈಚೀಲಗಳನ್ನು ಹಾಕಿಕೊಂಡನು. ಕಪ್ಪು ಲೋಹದಿಂದ ಮಾಡಲ್ಪಟ್ಟಿದ್ದ ಅವನ ಕವಚವು ಬಂಗಾರದ ಚಿತ್ರಗಳಿಂದ ಕೂಡಿದ್ದು, ಮಹಾ ಅಮೂಲ್ಯದ್ದಾಗಿತ್ತು. ಅವನ ಮೈಗೆ ಅಂಟಿಕೊಂಡೇ ಇದ್ದ ಅದು ಮಿಂಚಿನಿಂದ ಕೂಡಿದ ಮೇಘದಂತೆ ತೋರುತ್ತಿತ್ತು. ಹಳದಿ, ಕೆಂಪು, ಕಪ್ಪು ಮತ್ತು ಬಿಳಿಯ ವಸ್ತ್ರಗಳನ್ನು ಧರಿಸಿದ್ದ ಮತ್ತು ಕಂಠತ್ರಾಣವನ್ನು ಧರಿಸಿದ್ದ ಭೀಮಸೇನನು ಕಾಮನಬಿಲ್ಲಿನಿಂದ ಕೂಡಿದ ಮೋಡದಂತೆ ಕಂಗೊಳಿಸಿದನು.
ಯುದ್ಧೋತ್ಸಾಹದಿಂದ ಕೌರವ ಸೇನೆಯ ಕಡೆ ಭೀಮಸೇನನು ಹೊರಡುತ್ತಿರುವ ಪುನಃ ಇನ್ನೊಂದು ಸಲ ಪಾಂಚಜನ್ಯದ ಘೋರ ಧ್ವನಿಯು ಕೇಳಿಸಿತು. ಮೂರುಲೋಕಗಳನ್ನೂ ತಲ್ಲಣಿಸುವ ಆ ಘೋರ ನಿನಾದವನ್ನು ಕೇಳಿ ಧರ್ಮಪುತ್ರನು ಪುನಃ ಭೀಮನಿಗೆ ಹೇಳಿದನು: “ಇದು ವೃಷ್ಣಿಪ್ರವೀರ ಕೃಷ್ಣನ ಪಾಂಚಜನ್ಯದ ಧ್ವನಿಯೇ ಹೌದು. ಆ ಶಂಖರಾಜನು ಭೂಮಿ-ಅಂತರಿಕ್ಷಗಳನ್ನು ಮೊಳಗಿಸುತ್ತಿದ್ದಾನೆ. ಸವ್ಯಸಾಚಿಯು ಮಹಾ ವ್ಯಸನದಲ್ಲಿ ಸಿಲುಕಿಕೊಂಡಿರುವುದರಿಂದಲೇ ಚಕ್ರಗದಾಧರ ಕೃಷ್ಣನೇ ಎಲ್ಲ ಕುರುಗಳೊಂದಿಗೆ ಯುದ್ಧಮಾಡುತ್ತಿದ್ದಾನೆ. ನಿಶ್ಚಯವಾಗಿಯೂ ಆರ್ಯೆ ಕುಂತಿಯು ಇಂದು ಅನೇಕ ಅಪಶಕುನಗಳನ್ನೇ ಕಂಡಿರಬೇಕು. ದ್ರೌಪದೀ-ಸುಭದ್ರೆಯರೂ ತಮ್ಮ ಬಂಧುಗಳೊಡನೆ ಅವುಗಳನ್ನು ಕಂಡಿರಬಹುದು. ಆದುದರಿಂದ ಭೀಮ! ತ್ವರೆಮಾಡಿ ಧನಂಜಯನಿರುವಲ್ಲಿಗೆ ಹೋಗು. ಧನಂಜಯನನ್ನು ನೋಡಲು ಬಯಸಿದ ನನಗೆ ಮತ್ತು ಸಾತ್ವತನ ಕಾರಣದಿಂದಲೂ ಎಲ್ಲ ದಿಕ್ಕು-ಉಪದಿಕ್ಕುಗಳೂ ಅಂಧಕಾರಮಯವಾಗಿ ತೋರುತ್ತಿದೆ.”
“ಹೋಗು! ಹೋಗು!” ಎಂದು ಪುನಃ ಅವನು ಭೀಮಸೇನನಿಗೆ ಹೇಳಿದನು. ಅಣ್ಣನಿಗೆ ಪ್ರಿಯವಾದುದನ್ನು ಮಾಡಲು ಹೊರಟ ತಮ್ಮನನ್ನು ಅಣ್ಣನು ಚೆನ್ನಾಗಿ ಬೀಳ್ಕೊಟ್ಟನು. ಹೊರಡುವಾಗ ಭೀಮನು ದುಂದುಭಿಯನ್ನು ಮೊಳಗಿಸಿ ಶಂಖವನ್ನು ಊದಿದನು. ಸಿಂಹನಾದವನ್ನೂ ಮಾಡಿ ಪುನಃ ಪುನಃ ಧನುಷ್ಟೇಂಕಾರ ಮಾಡುತ್ತಿದ್ದನು. ತನ್ನ ಘೋರರೂಪವನ್ನು ಪ್ರದರ್ಶಿಸುತ್ತಾ ಶತ್ರುಗಳ ಮೇಲೆ ಒಮ್ಮೆಲೇ ಆಕ್ರಮಣಿಸಿದನು. ವಿಶೋಕನೆಂಬ ಸಾರಥಿಯಿಂದ ಸಂಚಾಲಿತವಾದ, ಮನೋವೇಗ-ವಾಯುವೇಗಗಳುಳ್ಳ ಸುಶಿಕ್ಷಿತವಾದ, ಉತ್ತಮ ಕುದುರೆಗಳು ಸಂತೋಷಸೂಚಕ ಶಬ್ಧಮಾಡುತ್ತಾ ಭೀಮನನ್ನು ಕರೆದೊಯ್ದವು. ಪಾರ್ಥನು ಕೈಯಿಂದ ಧನುಸ್ಸಿನ ಮೌರ್ವಿಯನ್ನು ತೀಡುತ್ತಾ, ಎಳೆಯುತ್ತಾ, ಬಾಣಗಳ ಮಳೆಗರೆಯುತ್ತಾ ಸೇನೆಯ ಅಗ್ರಭಾಗವನ್ನು ಮಥಿಸಿಬಿಟ್ಟನು. ಹಾಗೆ ಮುಂದುವರೆಯುತ್ತಿದ್ದ ಮಹಾಬಾಹು ಭೀಮಸೇನನನ್ನು ಇಂದ್ರನನ್ನು ಅಮರರು ಹೇಗೋ ಹಾಗೆ ಶೂರ ಸೋಮಕರೊಂದಿಗೆ ಪಾಂಚಾಲರು ಅವನ ಹಿಂದೆಯೇ ಅನುಸರಿಸಿ ಹೋದರು.
ಭೀಮಸೇನನ ಪರಾಕ್ರಮ
ಭೀಮಸೇನನನ್ನು ಸೇನಾಸಮೇತರಾಗಿ ದುಃಶಲ, ಚಿತ್ರಸೇನ, ಕುಂಡಭೇದೀ, ವಿವಿಂಶತಿ, ದುರ್ಮುಖ, ದುಃಸ್ಸಹ, ವಿಕರ್ಣ, ಶಲ, ವಿಂದ, ಅನುವಿಂದ, ಸುಮುಖ, ದೀರ್ಘಬಾಹು, ಸುದರ್ಶನ, ವೃಂದಾರಕ, ಸುಹಸ್ತ, ಸುಷೇಣ, ದೀರ್ಘಲೋಚನ, ಅಭಯ, ರೌದ್ರಕರ್ಮ, ಸುವರ್ಮ, ಮತ್ತು ದುರ್ವಿಲೋಚನರು ಸುತ್ತುವರೆದರು. ಈ ಶೂರ ರಥಶ್ರೇಷ್ಠರು ವಿವಿಧ ಸೇನೆಗಳೊಂದಿಗೆ ಮತ್ತು ಅನುಯಾಯಿಗಳೊಂದಿಗೆ ಸಮರದಲ್ಲಿ ಒಂದಾಗಿ ಭೀಮಸೇನನನ್ನು ಆಕ್ರಮಣಿಸಿದರು. ಅವರನ್ನು ನೋಡಿ ಪರಾಕ್ರಮೀ ಭೀಮಸೇನನು ಸಿಂಹವು ಕ್ಷುದ್ರಮೃಗಗಳನ್ನು ಹೇಗೋ ಹಾಗೆ ವೇಗವಾಗಿ ಅವರ ಮೇಲೆರಗಿದನು. ಆ ವೀರರು ಮಹಾ ದಿವ್ಯಾಸ್ತ್ರಗಳನ್ನು ಪ್ರದರ್ಶಿಸುತ್ತಾ ಉದಯಿಸುತ್ತಿರುವ ಸೂರ್ಯನನ್ನು ಮೇಘಗಳು ಹೇಗೋ ಹಾಗೆ ಭೀಮನನ್ನು ಶರಗಳಿಂದ ತಡೆದರು. ವೇಗವಾಗಿ ಅವರನ್ನು ದಾಟಿ ಭೀಮನು ದ್ರೋಣನ ಸೇನೆಯನ್ನು ಆಕ್ರಮಣಿಸಿದನು ಮತ್ತು ಅಲ್ಲಿದ್ದ ಗಜಸೇನೆಯನ್ನು ಶರವರ್ಷಗಳಿಂದ ಮುಚ್ಚಿಬಿಟ್ಟನು. ಸ್ವಲ್ಪವೇ ಸಮಯದಲ್ಲಿ ಪವನಾತ್ಮಜನು ಆಶುಗಗಳಿಂದ ಆ ಗಜಸೇನೆಯನ್ನು ಎಲ್ಲ ದಿಕ್ಕುಗಳಿಗೂ ಚದುರಿಸಿ ಸಂಹರಿಸಿದನು. ವನದಲ್ಲಿ ಗರ್ಜಿಸುತ್ತಿರುವ ಸಿಂಹಕ್ಕೆ ಹೆದರಿ ಓಡುಹೋಗುವ ಜಿಂಕೆಗಳಂತೆ ಆ ಆನೆಗಳೆಲ್ಲವೂ ಭೈರವ ಕೂಗನ್ನು ಕೂಗಿಕೊಳ್ಳುತ್ತಾ ಓಡಿ ಹೋದವು. ಅವುಗಳನ್ನು ದಾಟಿ ಅವನು ಪುನಃ ವೇಗದಿಂದ ದ್ರೋಣನ ಸೇನೆಯನ್ನು ಆಕ್ರಮಣಿಸಿದನು. ಮೇಲೇರಿ ಬರುತ್ತಿದ್ದ ಸಮುದ್ರದ ಅಲೆಗಳನ್ನು ದಡವು ತಡೆಯುವಂತೆ ಆಚಾರ್ಯನು ಅವನನ್ನು ತಡೆದನು. ದ್ರೋಣನು ನಸುನಗುತ್ತಾ ಭೀಮನ ನೆತ್ತಿಗೆ ನಾರಾಚಗಳಿಂದ ಹೊಡೆಯಲು ಪಾಂಡವನು ಕಿರಣಗಳನ್ನು ಸೂಸುವ ಆದಿತ್ಯನಂತೆ ಕಂಗೊಳಿಸಿದನು. ಫಲ್ಗುನನಂತೆ ಭೀಮನೂ ಕೂಡ ತನ್ನನ್ನು ಗೌರವಿಸಿ ಮುಂದುವರೆಯುತ್ತಾನೆಂದು ತಿಳಿದುಕೊಂಡ ಆಚಾರ್ಯನು ವೃಕೋದರನಿಗೆ ಹೀಗೆ ಹೇಳಿದನು. “ಭೀಮಸೇನ! ಸಮರದಲ್ಲಿ ಶತ್ರುಗಳ ಮಧ್ಯದಲ್ಲಿ ನನ್ನನ್ನು ಗೆಲ್ಲದೇ ಈ ಅರಿವಾಹಿನಿಯನ್ನು ಪ್ರವೇಶಿಸಲು ಶಕ್ಯನಾಗುವುದಿಲ್ಲ. ನಿನ್ನ ತಮ್ಮ ಅರ್ಜುನನು ನನ್ನ ಅನುಮತಿಯನ್ನು ಪಡೆದು ಪ್ರವೇಶಿಸಿದನೆಂದರೆ ನಿನಗೆ ಇದನ್ನು ಪ್ರವೇಶಿಸಲು ಸಾಧ್ಯವಿಲ್ಲ!”
ಭೀಮನಾದರೋ ಗುರುವಿನ ಆ ಮಾತನ್ನು ಕೇಳಿ ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ನಿಟ್ಟುಸಿರು ಬಿಡುತ್ತಾ ದ್ರೋಣನಿಗೆ ಹೇಳಿದನು: “ಬ್ರಹ್ಮಬಂಧೋ! ಅರ್ಜುನನು ನಿನ್ನ ಅನುಮತಿಯನ್ನು ತೆಗೆದುಕೊಂಡು ರಣವನ್ನು ಪ್ರವೇಶಿಸಿಲ್ಲ! ಶಕ್ರನಿಗೂ ದುರ್ಧರ್ಷನಾದ ಅವನು ತನ್ನದೇ ಬಲದಿಂದ ಸೇನೆಯನ್ನು ಪ್ರವೇಶಿಸಿದ್ದಾನೆ. ಈ ರೀತಿಯ ಪರಮ ಪೂಜೆಯನ್ನು ಮಾಡಿದನೆಂದರೆ ಅವನು ನಿನ್ನನ್ನು ಗೌರವಿಸುತ್ತಾನೆಂದು ಅರ್ಥ. ಆದರೆ ದ್ರೋಣ! ನಾನು ದಯಾವಂತನಾದ ಅರ್ಜುನನಲ್ಲ. ನಿನ್ನ ಶತ್ರುವಾದ ಭೀಮಸೇನ! ನಾವು ನಿನ್ನನ್ನು ನಮ್ಮ ತಂದೆ, ಗುರು ಮತ್ತು ಬಂಧುವೆಂದೂ ಹಾಗೆಯೇ ನಾವು ನಿನ್ನ ಮಕ್ಕಳೆಂದೂ ಎಲ್ಲರೂ ತಿಳಿದುಕೊಂಡು ಬಂದಿದ್ದೆವು ಮತ್ತು ನಿನಗೆ ನಮಸ್ಕರಿಸಿ ನಿಲ್ಲುತ್ತಿದ್ದೆವು. ಆದರೆ ಈಗ ನೀನು ನಮ್ಮೊಡನೆ ಮಾತನಾಡುವುದನ್ನು ನೋಡಿದರೆ ಅವೆಲ್ಲವೂ ಬದಲಾದಂತಿವೆ. ನೀನು ನಮ್ಮನ್ನು ಶತ್ರುವೆಂದು ತಿಳಿದುಕೊಂಡಿದ್ದರೆ ಅದು ಹಾಗೆಯೇ ಆಗಲಿ. ಇಗೋ ಶತ್ರುವಾದ ಭೀಮನು ಏನನ್ನು ಮಾಡಬೇಕೋ ಅದನ್ನು ನಾನು ಮಾಡುತ್ತೇನೆ.”
ಇದನ್ನು ಹೇಳಿದ ಕೂಡಲೇ ಭೀಮನು ಅಂತಕನು ಕಾಲದಂಡವನ್ನು ಹೇಗೋ ಹಾಗೆ ಗದೆಯನ್ನು ದ್ರೋಣನಮೇಲೆ ಎಸೆದನು. ಆದರೆ ಅಷ್ಟರಲ್ಲಿಯೇ ದ್ರೋಣನು ರಥದಿಂದ ಕೆಳಕ್ಕೆ ಹಾರಿಕೊಂಡುಬಿಟ್ಟಿದ್ದನು. ಆ ಗದೆಯು ದ್ರೋಣನ ರಥವನ್ನು ಕುದುರೆ-ಸಾರಥಿಗಳೊಂದಿಗೆ ಅಪ್ಪಳಿಸಿ ಹಾಕಿ ವಾಯುವು ಓಜಸ್ಸಿನಿಂದ ಮರಗಳನ್ನು ಕಡಿದುರುಳಿಸುವಂತೆ ಅನೇಕ ಯೋಧರನ್ನು ಅಪ್ಪಳಿಸಿ ಬೀಳಿಸಿತು. ಪುನಃ ಆ ರಥೋತ್ತಮ ಭೀಮನನ್ನು ಧೃತರಾಷ್ಟ್ರನ ಪುತ್ರರು ಆವರಿಸಿದರು. ದ್ರೋಣನು ಇನ್ನೊಂದು ರಥವನ್ನೇರಿದನು. ಆಗ ಕ್ರುದ್ಧ ಭೀಮನು ಮುಂದಿದ್ದ ಆ ರಥಸೇನೆಯನ್ನು ಶರವರ್ಷಗಳಿಂದ ಮುಚ್ಚಿಬಿಟ್ಟನು. ಸಮರದಲ್ಲಿ ಅವನನ್ನು ಹೊಡೆಯುತ್ತಿದ್ದ ಧೃತರಾಷ್ಟ್ರನ ಮಹಾರಥ ಪುತ್ರರು ಜಯವನ್ನೇ ಬಯಸಿ ಭೀಮನೊಂದಿಗೆ ಭೀಮಬಲದಿಂದ ಯುದ್ಧದಲ್ಲಿ ಹೋರಾಡತೊಡಗಿದರು. ಆಗ ಕ್ರುದ್ಧ ದುಃಶಾಸನನು ಭೀಮನನ್ನು ಸಂಹರಿಲೋಸುಗ, ಎಲ್ಲ ಲೋಹಮಯವಾದ, ತೀಕ್ಷ್ಣವಾದ ರಥಶಕ್ತಿಯನ್ನು ಅವನ ಮೇಲೆ ಎಸೆದನು. ಅವನು ಪ್ರಯೋಗಿಸಿದ ಆ ಮಹಾಶಕ್ತಿಯು ಬೀಳುತ್ತಿರಲು ಭೀಮನು ಅದನ್ನು ಎರಡಾಗಿ ಕತ್ತರಿಸಿದನು. ಅದೊಂದು ಅದ್ಭುತವಾಗಿತ್ತು. ಕೂಡಲೆ ಬಲೀ ಭೀಮನು ಸಂಕ್ರುದ್ಧನಾಗಿ ಕುಂಡಭೇದಿ, ಸುಷೇಣ ಮತ್ತು ದೀರ್ಘನೇತ್ರ ಈ ಮೂವರನ್ನು ಮೂರು ಮೂರು ಅನ್ಯ ನಿಶಿತ ಬಾಣಗಳಿಂದ ವಧಿಸಿದನು. ಅನಂತರ ಪುನಃ ವೀರ ವೃಂದಾರಕನನ್ನು ಕೊಂದು ಯುದ್ಧಮಾಡುತ್ತಿರುವ ಧೃತರಾಷ್ಟ್ರನ ವೀರ ಪುತ್ರರಾದ ಅಭಯ, ರೌದ್ರಕರ್ಮ, ಮತ್ತು ದುರ್ವಿಮೋಚನ ಈ ಮೂವರನ್ನು ಮೂರು ಮೂರು ಬಾಣಗಳಿಂದ ಸಂಹರಿಸಿದನು. ವಧಿಸಲ್ಪಡುತ್ತಿದ್ದ ಅವರು ಬಲವನ್ನುಪಯೋಗಿಸಿ ಭೀಮನನ್ನು ಎಲ್ಲ ಕಡೆಗಳಿಂದ ಸುತ್ತುವರೆದರು.
ಆಗ ಒಟ್ಟಿಗೇ ಇದ್ದ ವಿಂದಾನುವಿಂದರನ್ನೂ, ಧೃತರಾಷ್ಟ್ರನ ಇನ್ನೊಬ್ಬ ಮಗ ಸುವರ್ಮನನ್ನೂ ನಗುತ್ತಾ ಕೌಂತೇಯನು ಶರಗಳಿಂದ ಯಮಕ್ಷಯಕ್ಕೆ ಕಳುಹಿಸಿದನು. ಅನಂತರ ಭೀಮನು ಧೃತರಾಷ್ಟ್ರನ ವೀರ ಪುತ್ರ ಸುದರ್ಶನನ್ನೂ ಹೊಡೆದನು. ತಕ್ಷಣವೇ ಅವನು ಬಿದ್ದು ಮರಣಹೊಂದಿದನು. ಹೀಗೆ ಪಾಂಡುನಂದನನು ಸ್ವಲ್ಪವೇ ಸಮಯದಲ್ಲಿ ಆ ರಥಸೇನೆಯನ್ನು ಆಶುಗಗಳಿಂದ ಎಲ್ಲ ದಿಕ್ಕುಗಳಲ್ಲಿ ಚದುರಿಸಿ ಸಂಹರಿಸಿದನು. ರಥಘೋಷದಿಂದ ಗರ್ಜಿಸಿ ಮೃಗಗಳಂತೆ ವಧಿಸಲ್ಪಡುತ್ತಿದ್ದ ಧೃತರಾಷ್ಟ್ರನ ಮಕ್ಕಳೆಲ್ಲರೂ ಭೀಮಸೇನನ ಭಯದಿಂದ ಪೀಡಿತರಾಗಿ ರಥಗಳೊಂದಿಗೆ ಸಮರದಿಂದ ಪಲಾಯನಗೈದರು. ಕೌಂತೇಯನು ಕೌರವೇಯರ ಆ ಮಹಾಸೇನೆಯನ್ನು ಎಲ್ಲಕಡೆ ಅಟ್ಟಿಸಿಕೊಂಡು ಹೋಗಿ ಸಂಹರಿಸಿದನು. ಭೀಮಸೇನನಿಂದ ವಧಿಸಲ್ಪಡುತ್ತಿದ್ದ ಕೌರವರು ರಣದಲ್ಲಿ ಭೀಮನನ್ನು ಬಿಟ್ಟು ಅವರು ಉತ್ತಮ ಕುದುರೆಗಳನ್ನು ಪುಸಲಾಯಿಸುತ್ತಾ ಓಡಿ ಹೋಗುತ್ತಿದ್ದರು. ಅವರನ್ನು ಸೋಲಿಸಿ ಮಹಾಬಲ ಪಾಂಡವ ಭೀಮಸೇನನು ಸಿಂಹನಾದಗೈದನು ಮತ್ತು ಬಾಹುಗಳನ್ನು ತಟ್ಟಿ ಶಬ್ಧಮಾಡಿದನು. ಜೋರಾಗಿ ಚಪ್ಪಾಳೆಗಳ ಶಬ್ಧವನ್ನೂ ಮಾಡುತ್ತಾ ಮಹಾಬಲ ಭೀಮನು ರಥಿಗಳನ್ನೂ ದಾಟಿ ದ್ರೋಣನ ಸೇನೆಯನ್ನು ಆಕ್ರಮಣಿಸಿದನು.
ಭೀಮ-ದ್ರೋಣರ ಯುದ್ಧ
ಕತ್ತಲೆಯನ್ನು ಅತಿಕ್ರಮಿಸಿದ ಭಾಸ್ಕರನಂತೆ ಆ ರಥಸೇನೆಯನ್ನು ದಾಟಿಬಂದ ಭೀಮಸೇನನನ್ನು ತಡೆಯಲು ಆಚಾರ್ಯ ದ್ರೋಣನು ಅವನ ಮೇಲೆ ಬಾಣಗಳ ಮಳೆಯನ್ನೇ ಸುರಿಸಿದನು. ದ್ರೋಣನ ಬಿಲ್ಲಿನಿಂದ ಹೊರಟುಬಂದ ಆ ಶರ ಸಮೂಹಗಳನ್ನು ಕುಡಿಯುವನೋ ಎಂಬಂತೆ ತನ್ನ ಮಾಯೆಯಿಂದ ಆ ಸೇನೆಯನ್ನು ಭ್ರಾಂತಗೊಳಿಸಿ ಭೀಮನು ತನ್ನ ಸೋದರ ಧಾರ್ತರಾಷ್ಟ್ರರ ಮೇಲೆ ನುಗ್ಗಿದನು. ಆಗ ರಣದಲ್ಲಿ ಧೃತರಾಷ್ಟ್ರನ ಮಕ್ಕಳಿಂದ ಪ್ರಚೋದಿತರಾದ ಪರಮ ಧನ್ವಿಗಳು ಅತ್ಯಂತ ವೇಗದಿಂದ ಭೀಮನನ್ನು ಎಲ್ಲ ಕಡೆಗಳಿಂದ ಸುತ್ತುವರೆದರು. ಹಾಗೆ ಮುತ್ತಿಗೆ ಹಾಕಲ್ಪಟ್ಟ ಬಲಶಾಲೀ ಭೀಮನು ನಗುತ್ತಾ ಸಿಂಹನಾದಗೈದು ಘೋರವಾದ ಗದೆಯನ್ನು ತೆಗೆದುಕೊಂಡು ವೇಗದಿಂದ ಎಸೆದು ಅವರನ್ನು ನುಚ್ಚುನೂರು ಮಾಡಿದನು. ಇಂದ್ರನಿಂದಲೇ ಪ್ರಹರಿಸಲ್ಪಟ್ಟ ಇಂದ್ರನ ವಜ್ರಾಯುಧದಂತೆ ಎಸೆಯಲ್ಪಟ್ಟ ಆ ಅತಿ ಸಾಮರ್ಥ್ಯದ ಗದೆಯು ತನ್ನ ಘೋಷದಿಂದ ಇಡೀ ಮೇದಿನಿಯನ್ನೇ ತುಂಬಿಸಿಬಿಟ್ಟಿತು. ತೇಜಸ್ಸಿನಿಂದ ಪ್ರಜ್ವಲಿಸುತ್ತಿರುವ ಆ ಭಯಂಕರ ಗದೆಯು ಧೃತರಾಷ್ಟ್ರನ ಸುತರನ್ನು ಭೀತರನ್ನಾಗಿಸಿತು. ತೇಜಸ್ಸಿನಿಂದ ಸುತ್ತುವರೆಯಲ್ಪಟ್ಟು ಮಹಾವೇಗದಿಂದ ಬೀಳುತ್ತಿರುವ ಆ ಗದೆಯನ್ನು ನೋಡಿ ಕೌರವರೆಲ್ಲರೂ ಭೈರವ ಕೂಗನ್ನು ಕೂಗುತ್ತಾ ಓಡತೊಡಗಿದರು. ಸಹಿಸಲಾಧ್ಯವಾದ ಅದರ ಶಬ್ಧದಿಂದಾಗಿ ಮನುಷ್ಯರು ನಿಂತಲ್ಲಿಯೇ ಬಿದ್ದುಬಿಟ್ಟರು ಮತ್ತು ರಥಿಗಳು ರಥಗಳ ಮೇಲಿಂದ ಬಿದ್ದರು. ದುರಾಸದ ಕೌಂತೇಯನು ತನ್ನ ಶತ್ರುಗಳನ್ನು ಸದೆಬಡಿಯುತ್ತಾ ಗರುಡನಂತೆ ವೇಗದಿಂದ ಆ ಸೇನೆಯನ್ನು ಅತಿಕ್ರಮಿಸಿದನು. ರಥಯೋಧಿಗಳ ನಾಯಕರ ನಾಯಕನಾದ ಭೀಮಸೇನನು ಹಾಗೆ ಸೇನೆಯನ್ನು ನಾಶಪಡಿಸುತ್ತಿರಲು ಅವನನ್ನು ಆಕ್ರಮಣಿಸಲು ಭಾರದ್ವಾಜ ದ್ರೋಣನು ಮುನ್ನುಗ್ಗಿದನು.
ದ್ರೋಣನಾದರೋ ಸಮರದಲ್ಲಿ ಭೀಮನನ್ನು ತೀಕ್ಷ್ಣ ಶರಗಳಿಂದ ತಡೆಯುತ್ತಾ ಒಮ್ಮಿಂದೊಮ್ಮೆಲೇ ಜೋರಾಗಿ ಗರ್ಜಿಸಿ ಪಾಂಡವರಿಗೆ ಭಯವನ್ನು ತಂದನು. ಆಗ ಮಹಾತ್ಮ ದ್ರೋಣ ಮತ್ತು ಭೀಮರ ನಡುವೆ ದೇವಾಸುರರ ಯುದ್ಧದಂತೆ ಘೋರವಾದ ಯುದ್ಧವು ನಡೆಯಿತು. ದ್ರೋಣನ ಚಾಪದಿಂದ ಹೊರಟ ತೀಕ್ಷ್ಣ ವಿಶಿಖಗಳು ಸಮರದಲ್ಲಿ ನೂರಾರು ಸಹಸ್ರಾರು ವೀರರನ್ನು ವಧಿಸಿದವು. ಆಗ ಪಾಂಡವನು ರಥದಿಂದ ಹಾರಿ ವೇಗವನ್ನು ಬಳಸಿ ಕಣ್ಣುಗಳನ್ನು ಮುಚ್ಚಿಕೊಂಡು ಓಡಿಕೊಂಡು ದ್ರೋಣನ ಕಡೆ ಮುನ್ನುಗ್ಗಿದ್ದನು. ಹೋರಿಯೊಂದು ಬಹುಲೀಲೆಯಿಂದ ಜೋರಾಗಿ ಸುರಿಯುವ ಮಳೆಯನ್ನು ತಡೆದುಕೊಳ್ಳುವ ಹಾಗೆ ಭೀಮನು ಆ ಶರಗಳ ಮಳೆಯನ್ನು ತಡೆದುಕೊಂಡನು. ವಧಿಸುತ್ತಿರುವ ಆ ಮಹಾಬಲನು ದ್ರೋಣನ ರಥದ ಮೂಕನ್ನು ಕೈಯಿಂದ ಹಿಡಿದು ಹಿಂದಕ್ಕೆ ನೂಕಿ ಎಸೆದನು. ಭೀಮನಿಂದ ಎಸೆಯಲ್ಪಟ್ಟ ದ್ರೋಣನಾದರೋ ತ್ವರೆಮಾಡಿ ಇನ್ನೊಂದು ರಥದಲ್ಲಿ ಕುಳಿತು ವ್ಯೂಹದ್ವಾರದಲ್ಲಿ ಮತ್ತೆ ಕಾಣಿಸಿಕೊಂಡನು. ಅವನ ಸಾರಥಿಯು ಕುದುರೆಗಳನ್ನು ಬೇಗನೆ ಓಡಿಸಿದನು. ಭೀಮಸೇನನ ಆ ಕೃತ್ಯವು ಅದ್ಭುತವಾಗಿತ್ತು.
ಆಗ ಮಹಾಬಲ ಭೀಮಸೇನನು ತನ್ನ ರಥವನ್ನೇರಿ ವೇಗದಿಂದ ಕೌರವ ಸೇನೆಯ ಮೇಲೆ ಎರಗಿದನು. ಭಿರುಗಾಳಿಯು ವೃಕ್ಷಗಳನ್ನು ಧ್ವಂಸಗೊಳಿಸುವಂತೆ ಅವನು ಕ್ಷತ್ರಿಯರನ್ನು ಧ್ವಂಸಗೊಳಿಸಿದನು. ಮತ್ತು ವೇಗವಾಗಿ ಹರಿದು ಬರುತ್ತಿರುವ ನದಿಯನ್ನು ಪರ್ವತವು ಹೇಗೋ ಹಾಗೆ ಅವರ ಆ ಸೇನೆಗಳನ್ನು ತಡೆಗಟ್ಟಿದನು. ಅನಂತರ ಹಾರ್ದಿಕ್ಯ ಕೃತವರ್ಮನಿಂದ ರಕ್ಷಿತವಾದ ಭೋಜಸೇನೆಯನ್ನು ಚೆನ್ನಾಗಿ ಸದೆಬಡಿದು ದಾಟಿ ಮುಂದುವರೆದನು. ಚಪ್ಪಾಳೆ ಶಬ್ಧದಿಂದ ಸೇನೆಗಳನ್ನು ಬೆದರಿಸುತ್ತಾ ಭೀಮನು ಹುಲಿಯು ಹಸು ಹೋರಿಗಳನ್ನು ಹೇಗೋ ಹಾಗೆ ಎಲ್ಲ ಸೇನೆಗಳನ್ನೂ ಜಯಿಸಿದನು. ಭೋಜರ ಮತ್ತು ಕಾಂಬೋಜರ ಸೇನೆಗಳನ್ನು ಅತಿಕ್ರಮಿಸಿ ಹಾಗೆಯೇ ಯುದ್ಧವಿಶಾರದರಾದ ಅನೇಕ ಮ್ಲೇಚ್ಛಗಣಗಳನ್ನೂ ಅನ್ಯರನ್ನೂ ಸೋಲಿಸಿ, ಯುದ್ಧಮಾಡುತ್ತಿರುವ ನರರ್ಷಭ ಸಾತ್ಯಕಿಯನ್ನು ಕೂಡ ನೋಡಿ, ಧನಂಜಯನನ್ನು ಕಾಣಲು ಬಯಸಿ ಕೌಂತೇಯ ಭೀಮಸೇನನು ವೇಗವಾಗಿ ರಥದಲ್ಲಿ ಪ್ರಯಾಣಿಸಿದನು.
ಕೌರವರ ಕಡೆಯ ಯೋಧರನ್ನು ಸಮರದಲ್ಲಿ ಅತಿಕ್ರಮಿಸಿ ಪರಾಕ್ರಮೀ ಭೀಮನು ಸೈಂಧವನ ವಧೆಗೋಸ್ಕರವಾಗಿ ಯುದ್ಧಮಾಡುತ್ತಿದ್ದ ಅರ್ಜುನನನ್ನು ಅಲ್ಲಿ ನೋಡಿದನು. ಅರ್ಜುನನನ್ನು ನೋಡಿ ಮಹಾ ಕೂಗನ್ನು ಕೂಗಿದನು. ಕೂಗುತ್ತಿರುವ ಅವನ ಮಹಾನಾದವು ಅರ್ಜುನನಿಗೆ ಕೇಳಿತು. ಆ ಮಹಾನಾದವನ್ನು ಕೇಳಿ ಪಾರ್ಥ ಮತ್ತು ಮಾಧವರಿಬ್ಬರೂ ಗೂಳಿಗಳಂತೆ ಜೋರಾಗಿ ಕೂಗಿದರು. ಭೀಮಸೇನನ ಗರ್ಜನೆಯನ್ನು ಕೇಳಿ ವಾಸುದೇವ-ಅರ್ಜುನರು ವೃಕೋದರನನ್ನು ಕಾಣಲೋಸುಗ ಪುನಃ ಪುನಃ ಗರ್ಜಿಸಿದರು. ಭೀಮಸೇನನ ಮತ್ತು ಅರ್ಜುನನ ಕೂಗುಗಳನ್ನು ಕೇಳಿ ಯುಧಿಷ್ಠಿರನು ಅತ್ಯಂತ ಪ್ರೀತನಾದನು. ಭೀಮನ ಮತ್ತು ಧನಂಜಯನ ಮಹಾನಿನಾದವನ್ನು ಕೇಳಿ ರಾಜನು ಶೋಕವನ್ನು ಕಳೆದುಕೊಂಡು ಜಯದ ಆಸೆಯನ್ನು ಹೊತ್ತನು. ರಣೋತ್ಕಟನಾದ ಭೀಮಸೇನನು ಹಾಗೆ ಗರ್ಜಿಸುತ್ತಿರಲು ಮಹಾಬಾಹು ಯುಧಿಷ್ಠಿರನು ನಸುನಕ್ಕನು. ಆ ಧರ್ಮಭೃತರಲ್ಲಿ ಶ್ರೇಷ್ಠನು ಹೃದಯದಿಂದ ಹೊರಟ ಮಾತನ್ನು ಮನಸ್ಸಿನಲ್ಲಿಯೇ ಅಂದುಕೊಂಡನು: “ಭೀಮ! ನೀನು ನನಗೆ ಈ ಸಂದೇಶವನ್ನಿತ್ತು ಹಿರಿಯನ ವಚನದಂತೆಯೇ ಮಾಡಿದ್ದೀಯೆ! ನಿನ್ನನ್ನು ದ್ವೇಷಿಸುವವರಿಗೆ ಯುದ್ಧದಲ್ಲಿ ಜಯವೆಂಬುದೇ ಇಲ್ಲ. ಅದೃಷ್ಟವಶಾತ್ ಧನಂಜಯನು ಸಂಗ್ರಾಮದಲ್ಲಿ ಜೀವಂತವಿದ್ದಾನೆ. ಒಳ್ಳೆಯದಾಯಿತು! ವೀರ ಸತ್ಯವಿಕ್ರಮ ಸಾತ್ಯಕಿಯು ಕುಶಲನಾಗಿದ್ದಾನೆ. ಅದೃಷ್ಟವಶಾತ್ ವಾಸುದೇವ-ಧನಂಜಯರ ಗರ್ಜನೆಯನ್ನು ಕೇಳುತ್ತಿದ್ದೇನೆ! ಒಳ್ಳೆಯದಾಯಿತು! ರಣದಲ್ಲಿ ಶಕ್ರನನ್ನು ಗೆದ್ದು ಹವ್ಯವಾಹನನನ್ನು ತೃಪ್ತಿಪಡಿಸಿದ ಫಲ್ಗುನನು ರಣದಲ್ಲಿ ದ್ವೇಷಿಗಳನ್ನು ಸಂಹರಿಸಿ ಜೀವಂತನಿದ್ದಾನೆ! ಒಳ್ಳೆಯದಾಯಿತು! ಯಾರ ಬಾಹುಬಲವನ್ನು ಆಶ್ರಯಿಸಿ ನಾವು ಜೀವಿತರಾಗಿದ್ದೆವೋ ಆ ಫಲ್ಗುನನು ಶತ್ರುಸೇನೆಗಳನ್ನು ಸಂಹರಿಸಿ ಜೀವಂತವಿದ್ದಾನೆ! ಒಳ್ಳೆಯದಾಯಿತು! ದೇವತೆಗಳಿಗೂ ದುರ್ಜಯರಾದ ನಿವಾತಕವಚರನ್ನು ಯಾವ ಒಬ್ಬನೇ ರಥಿಯು ಗೆದ್ದನೋ ಆ ಪಾರ್ಥನು ಜೀವಿಸಿದ್ದಾನೆ. ಒಳ್ಳೆಯದಾಯಿತು! ಮತ್ಸ್ಯನಗರದಲ್ಲಿ ಗೋವುಗಳನ್ನು ಹಿಡಿಯಲು ಒಟ್ಟಿಗೇ ಸೇರಿದ್ದ ಕೌರವರೆಲ್ಲರನ್ನೂ ಜಯಿಸಿದ ಪಾರ್ಥನು ಜೀವಿಸಿದ್ದಾನೆ. ಒಳ್ಳೆಯದಾಯಿತು! ಮಹಾರಣದಲ್ಲಿ ಹದಿನಾಲ್ಕು ಸಾವಿರ ಕಾಲಕೇಯರನ್ನು ಭುಜವೀರ್ಯದಿಂದ ವಧಿಸಿದ ಪಾರ್ಥನು ಜೀವಿಸಿದ್ದಾನೆ. ಒಳ್ಳೆಯದಾಯಿತು! ದುರ್ಯೋಧನನಿಗಾಗಿ ಬಲಶಾಲೀ ಗಂಧರ್ವರಾಜನನ್ನು ಅಸ್ತ್ರವೀರ್ಯದಿಂದ ಜಯಿಸಿದ ಪಾರ್ಥನು ಜೀವಿಸಿದ್ದಾನೆ. ಒಳ್ಳೆಯದಾಯಿತು! ನನಗೆ ಸತತವೂ ಪ್ರಿಯನಾಗಿರುವ ಕಿರೀಟಮಾಲೀ, ಬಲವಾನ್, ಶ್ವೇತಾಶ್ವ, ಕೃಷ್ಣಸಾರಥಿ ಫಲ್ಗುನನು ಜೀವಿಸಿದ್ದಾನೆ. ಪುತ್ರಶೋಕದಿಂದ ಸಂತಪ್ತನಾಗಿ ಜಯದ್ರಥನ ವಧೆಯಂಥಹ ದುಷ್ಕರ ಕರ್ಮವನ್ನು ಮಾಡಲು ಬಯಸಿ ಪ್ರತಿಜ್ಞೆಯನ್ನು ಕೈಗೊಂಡಿರುವ ಧನಂಜಯನು ರಣದಲ್ಲಿ ಸೈಂಧವನನ್ನು ಕೊಲ್ಲುತ್ತಾನೆಯೇ? ವಾಸುದೇವನಿಂದ ರಕ್ಷಿತನಾಗಿ, ಆದಿತ್ಯನು ಅಸ್ತನಾಗುವುದರೊಳಗೇ ಪ್ರತಿಜ್ಞೆಯನ್ನು ಪೂರೈಸಿದ ಅರ್ಜುನನನ್ನು ನಾನು ಭೇಟಿಯಾಗಬಲ್ಲೆನೇ? ದುರ್ಯೋಧನನ ಹಿತದಲ್ಲಿಯೇ ನಿರತನಾಗಿರುವ ರಾಜಾ ಸೈಂಧವನು ಫಲ್ಗುನನಿಂದ ಹತನಾಗಿ ಬಿದ್ದು ಶತ್ರುಗಳಿಗೆ ಆನಂದವನ್ನುಂಟು ಮಾಡುತ್ತಾನೆಯೇ? ರಣದಲ್ಲಿ ಫಲ್ಗುನನು ಉರುಳಿಸಿದ ಸೈಂಧವಕನನ್ನು ನೋಡಿಯಾದರೂ ರಾಜಾ ದುರ್ಯೋಧನನು ನಮ್ಮೊಡನೆ ಸಂಧಾನವನ್ನು ಮಾಡಿಕೊಳ್ಳುವನೇ? ರಣದಲ್ಲಿ ಭೀಮಸೇನನು ಸಂಹರಿಸಿದ ಸಹೋದರರನ್ನು ನೋಡಿಯಾದರೂ ಮಂದಬುದ್ಧಿಯ ದುರ್ಯೋಧನನು ನಮ್ಮೊಡನೆ ಸಂಧಾನವನ್ನು ಮಾಡಿಕೊಳ್ಳುವನೇ? ಇನ್ನೂ ಅನೇಕ ಯೋಧರು ರಣಭೂಮಿಯಲ್ಲಿ ಹತರಾಗಿ ಬಿದ್ದಿರುವುದನ್ನು ನೋಡಿಯಾದರೂ ಮಂದಬುದ್ಧಿಯ ದುರ್ಯೋಧನನು ಪಶ್ಚಾತ್ತಾಪ ಪಡುತ್ತಾನೆಯೇ? ಭೀಷ್ಮನೊಬ್ಬನ ಪತನದೊಂದಿಗೇ ನಮ್ಮ ಈ ವೈರವು ಕೊನೆಗೊಳ್ಳುತ್ತದೆಯೇ? ಮತ್ತು ಉಳಿದವರ ರಕ್ಷಣೆಗಾಗಿಯಾದರೂ ಸುಯೋಧನನು ಸಂಧಿಮಾಡಿಕೊಳ್ಳುತ್ತಾನೆಯೇ?”
ಹೀಗೆ ಬಹುವಿಧವಾಗಿ ಕೃಪೆಯಿಂದ ತುಂಬಿ ತುಳುಕುತ್ತಿದ್ದ ರಾಜ ಯುಧಿಷ್ಠಿರನು ಯೋಚಿಸುತ್ತಿರಲು, ಇನ್ನೊಂದುಕಡೆ ಘೋರವಾದ ಯುದ್ಧವು ನಡೆಯಿತು.
ಕರ್ಣ-ಭೀಮಸೇನರ ಯುದ್ಧ
ಹಾಗೆ ಗರ್ಜಿಸುತ್ತಿದ್ದ ಮಹಾರಥ ಭೀಮಸೇನನನ್ನು ಅಷ್ಟೇ ತುಮುಲ ಶಬ್ಧದಿಂದ ಬಲೀ ಕರ್ಣನು ಎದುರಿಸಿದನು. ಭೀಮನನ್ನು ಸಹಿಸಲಾರದೇ ಬಲವತ್ತಾಗಿ ಚಾಪವನ್ನು ಸೆಳೆದು ಯುದ್ಧಾಕಾಂಕ್ಷಿಯಾಗಿ ಕರ್ಣನು ಬಲವನ್ನು ಪ್ರದರ್ಶಿಸಿದನು. ಕರ್ಣ-ಭೀಮಸೇನರ ಆ ಸಮಾಗಮದಲ್ಲಿ ಅವರಿಬ್ಬರ ಚಪ್ಪಾಳೆ ಶಬ್ಧವನ್ನು ಕೇಳಿಯೇ ರಥಿಗಳು ಮತ್ತು ಅಶ್ವಾರೋಹಿಗಳ ಶರೀರಗಳು ಕಂಪಿಸಿದವು. ರಣರಂಗದಲ್ಲಿ ಭೀಮಸೇನನ ಘೋರ ನಿನಾದವನ್ನು ಕೇಳಿ ಭೂಮಿ-ಆಕಾಶಗಳು ಗಾಭರಿಗೊಂಡಿವೆಯೋ ಎಂದು ಕ್ಷತ್ರಿಯರ್ಷಭರು ತಿಳಿದುಕೊಂಡರು. ಪುನಃ ಮಹಾತ್ಮ ಪಾಂಡವನ ಘೋರನಾದದಿಂದಾಗಿ ಸಮರದಲ್ಲಿದ್ದ ಸರ್ವಯೋಧರ ಧನುಸ್ಸುಗಳು ನೆಲದ ಮೇಲೆ ಬಿದ್ದವು. ವಾಹಕ ಪ್ರಾಣಿಗಳೆಲ್ಲವೂ ಹೆದರಿ ಮಲ-ಮೂತ್ರಗಳನ್ನು ವಿಸರ್ಜಿಸಿದವು. ಲವಲವಿಕೆಯನ್ನೂ ಕಳೆದುಕೊಂಡವು. ಭೀಮ ಮತ್ತು ಕರ್ಣರ ಆ ತುಮುಲ ಸಮಾಗಮದಲ್ಲಿ ಅನೇಕ ಘೋರ ನಿಮಿತ್ತಗಳು ಉಂಟಾದವು.
ಕರ್ಣನು ಇಪ್ಪತ್ತು ಶರಗಳಿಂದ ಭೀಮನನ್ನು ಗಾಯಗೊಳಿಸಿದನು. ತ್ವರೆಮಾಡಿ ಅವನ ಸಾರಥಿಯನ್ನು ಕೂಡ ಐದು ಆಶುಗಗಳಿಂದ ಹೊಡೆದನು. ಮಹಾಬಲ ಭೀಮಸೇನನಾದರೋ ಜೋರಾಗಿ ನಕ್ಕು ಅರವತ್ನಾಲ್ಕು ಕ್ಷಿಪ್ರಕಾರೀ ಸಾಯಕಗಳಿಂದ ಕರ್ಣನನ್ನು ಹೊಡೆದನು. ಕರ್ಣನು ಅವನ ಮೇಲೆ ನಾಲ್ಕು ಸಾಯಕಗಳನ್ನು ಪ್ರಯೋಗಿಸಿದನು. ಅವು ತಲುಪುವುದರೊಳಗೇ ಅವುಗಳನ್ನು ಭೀಮನು ಸಾಯಕ ನತಪರ್ವಗಳಿಂದ ಅನೇಕ ಚೂರುಗಳಾಗಿ ತುಂಡರಿಸಿ ತನ್ನ ಕೈಚಳಕವನ್ನು ತೋರಿಸಿದನು. ಕರ್ಣನಿಂದ ಬಹಳ ಬಾರಿ ಮುಚ್ಚಲ್ಪಟ್ಟ ಪಾಂಡುನಂದನನು ಕರ್ಣನನ್ನೂ ಕೂಡ ಅನೇಕ ಶರಸಮೂಹಗಳಿಂದ ಮುಚ್ಚಿದನು. ಭೀಮನು ಕರ್ಣನ ಧನುಸ್ಸನ್ನು ಮುಷ್ಟಿದೇಶದಲ್ಲಿ ಕತ್ತರಿಸಿದನು ಮತ್ತು ಅನೇಕ ನತಪರ್ವ ಸಾಯಕಗಳಿಂದ ಅವನನ್ನೂ ಹೊಡೆದನು. ಆಗ ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಶಿಂಜನಿಯನ್ನು ಬಿಗಿದು ಸೂತಜ ಕರ್ಣನು ಭೀಮನನ್ನು ಹೊಡೆದನು. ಅವನ ಮೇಲೆ ತುಂಬಾ ಕ್ರುದ್ಧನಾದ ಭೀಮನು ಮೂರು ನತಪರ್ವ ಶರಗಳನ್ನು ವೇಗದಿಂದ ಸೂತಪುತ್ರನ ಎದೆಗೆ ಗುರಿಯಿಟ್ಟು ಹೊಡೆದು ನಾಟಿಸಿದನು.
ಅವನ ಎದೆಯ ಮಧ್ಯವನ್ನು ಹೊಕ್ಕ ಆ ಬಾಣಗಳಿಂದ ಕರ್ಣನು ಮೂರು ಶೃಂಗಗಳುಳ್ಳ ಪರ್ವತದಂತೆ ಕಂಗೊಳಿಸಿದನು. ಆ ತೀಕ್ಷ್ಣ ಶರಗಳಿಂದ ಗಾಯಗೊಂಡ ಅವನು ಧಾತುಗಳು ತುಂಬಿದ ನೀರನ್ನು ಪ್ರಸವಿಸುವ ಪರ್ವತದಂತೆ ರಕ್ತವನ್ನು ಸುರಿಸಿದನು. ಉತ್ತಮ ಪ್ರಹಾರದಿಂದ ತುಂಬಾ ಪೀಡಿತನಾಗಿದ್ದರೂ ಕರ್ಣನು ಸ್ವಲ್ಪವೂ ವಿಚಲಿತನಾಗಲಿಲ್ಲ. ಧನುಸ್ಸನ್ನೇ ಸಹಾಯವಾಗಿರಿಸಿಕೊಂಡು ಕರ್ಣನು ಪುನಃ ನೂರಾರು ಸಹಸ್ರಾರು ಬಾಣಗಳನ್ನು ಭೀಮನ ಮೇಲೆ ಪ್ರಯೋಗಿಸಿದನು. ದೃಢಧನ್ವಿ ಕರ್ಣನಿಂದ ಹಾಗೆ ಒಮ್ಮೆಲೇ ಮುಚ್ಚಿಹೋದ ಭೀಮನು ನಗುತ್ತಾ ಬಿಲ್ಲನ್ನು ಸೆಳೆದು ಭಲ್ಲದಿಂದ ಕರ್ಣನ ಸಾರಥಿಯನ್ನು ಯಮಸಾದನಕ್ಕೆ ಕಳುಹಿಸಿದನು. ಅವನ ನಾಲ್ಕು ಕುದುರೆಗಳನ್ನೂ ಸಂಹರಿಸಿದನು. ಕುದುರೆಗಳು ಹತವಾದ ಆ ರಥದಿಂದ ಹಾರಿ ಇಳಿದು ಮಹಾರಥ ಕರ್ಣನು ಮಗ ವೃಷಸೇನನ ರಥವನ್ನು ಏರಿದನು.
ಕರ್ಣನನ್ನು ಸೋಲಿಸಿ ಭೀಮಸೇನನು ಮಳೆಗಾಲದ ಗುಡುಗಿನಂತೆ ಜೋರಾಗಿ ಗರ್ಜಿಸಿದನು. ಅವನ ಆ ಕೂಗನ್ನು ಕೇಳಿ, ಭೀಮಸೇನನಿಂದ ಕರ್ಣನು ಸೋತನು ಎಂದು ತಿಳಿದು ಯುಧಿಷ್ಠಿರನು ಪರಮ ಹರ್ಷಿತನಾದನು. ಆಗ ಪಾಂಡವರ ಸೇನೆಯಲ್ಲಿ ಎಲ್ಲ ಕಡೆ ಶಂಖವನ್ನು ಊದಿದರು. ಶತ್ರುಸೇನೆಗಳ ಧ್ವನಿಯನ್ನು ಕೇಳಿ ಕೌರವರೂ ಕೂಡ ಕೂಗಿದರು. ಪಾರ್ಥನು ಗಾಂಡೀವವನ್ನು ಮೊಳಗಿಸಿದನು ಮತ್ತು ಕೃಷ್ಣನು ಶಂಖವನ್ನೂದಿದನು. ಆ ಎಲ್ಲ ಕೂಗುಗಳನ್ನೂ ಅಡಗಿಸಿ ಗರ್ಜಿಸುತ್ತಿದ್ದ ಭೀಮಸೇನನ ಕೂಗಿನ ಧ್ವನಿಯು ಎಲ್ಲ ಸೇನೆಗಳಲ್ಲೂ ಕೇಳಿಬಂದಿತು. ಆಗ ಆ ಇಬ್ಬರು ಅರಿಂದಮ ಕರ್ಣ-ಭೀಮರು ಬೇರೆ ಬೇರೆ ಅಸ್ತ್ರಗಳಿಂದ - ರಾಧೇಯನು ಮೃದುವಾಗಿಯೂ ಪಾಂಡವನು ಜೋರಾಗಿಯೂ - ಹೋರಾಡಿದರು.
ದುರ್ಯೋಧನನ ಯುದ್ಧ
ಆ ಸೇನೆಯು ಚದುರಿಹೋಗಲು, ಸೈಂಧವನಿಗಾಗಿ ಅರ್ಜುನ, ಸಾತ್ಯಕಿ ಮತ್ತು ಭೀಮಸೇನರು ಹೊರಟು ಹೋಗಲು ದುರ್ಯೋಧನನು ದ್ರೋಣನ ಬಳಿಸಾರಿದನು. ಆಗ ಅವನು ಒಬ್ಬನೇ ರಥದಲ್ಲಿ ಕುಳಿತುಕೊಂಡು ಅನೇಕ ಕೆಲಸಗಳ ಕುರಿತು ಚಿಂತಿಸುತ್ತಾ ಅತ್ಯಂತ ವೇಗದಿಂದ ಹೊರಟನು. ಮನಸ್ಸು-ಮಾರುತಗಳ ವೇಗದಿಂದ ಬೇಗನೆ ದ್ರೋಣನನ್ನು ಸಮೀಪಿಸಿದ ದುರ್ಯೋಧನನು ಕ್ರೋಧದಿಂದ ರಕ್ತಲೋಚನನಾಗಿ ಹೀಗೆ ಹೇಳಿದನು: “ಅರಿಕರ್ಶನರಾದ ಅರ್ಜುನ, ಭೀಮಸೇನ ಮತ್ತು ಸಾತ್ಯಕಿಯರು ಎಲ್ಲ ಮಹಾ ಸೇನೆಗಳನ್ನೂ, ಮಹಾರಥರನ್ನೂ ಸೋಲಿಸಿ ಸಿಂಧುರಾಜನ ಸಮೀಪಕ್ಕೆ ಹೋಗಿಯಾಯಿತು! ಅಲ್ಲಿಯೂ ಕೂಡ ಈ ಅಪರಾಜಿತರು ಎಲ್ಲರೂ ನಮ್ಮ ಮೇಲೆ ಆಕ್ರಮಣ ನಡೆಸಿದ್ದಾರೆ. ಮಹಾರಥ ಪಾರ್ಥನಾದರೋ ರಣದಲ್ಲಿ ತಮ್ಮನ್ನು ಅತಿಕ್ರಮಿಸಿ ಹೋರಟು ಹೋಗಿರಬಹುದು. ಆದರೆ ಸಾತ್ಯಕಿ-ಭೀಮಸೇನರು ನಿಮ್ಮನ್ನು ಹೇಗೆ ಅತಿಕ್ರಮಿಸಿ ಹೋದರು? ಸಾತ್ವತನಿಂದ ಮತ್ತು ಅರ್ಜುನನಿಂದ ಹಾಗೆಯೇ ಭೀಮಸೇನನಿಂದ ನೀವು ಸೋತಿರೆಂದರೆ ಈ ಲೋಕದಲ್ಲಿ ಸಮುದ್ರವು ಒಣಗಿಹೋದಷ್ಟೇ ಆಶ್ಚರ್ಯಕರವಾದ ವಿಷಯವಾಗಿದೆ. ಲೋಕದಲ್ಲಿ ಜನರು ಜೋರಾಗಿ ಕೇಳುತ್ತಿದ್ದಾರೆ - ಧನುರ್ವೇದದಲ್ಲಿ ಪಾರಂಗತನಾದ ದ್ರೋಣನು ಯುದ್ಧದಲ್ಲಿ ಹೇಗೆ ಸೋತ? – ಎಂದು. ಆ ಮೂವರು ಪುರುಷವ್ಯಾಘ್ರ ರಥರು ನಿಮ್ಮನ್ನು ಅತಿಕ್ರಮಿಸಿ ಹೋದರೆಂದರೆ ಈ ಮಂದಭಾಗ್ಯನ ನಾಶವಾಯಿತೆಂದೇ ಅಲ್ಲವೇ? ಹೀಗೆ ನಡೆದಿರುವಾಗ ಮುಂದೇನು ಮಾಡುವುದಿದೆ ಎನ್ನುವುದನ್ನು ಹೇಳಿ. ಆದದ್ದು ಆಗಿಹೋಯಿತು. ಈಗ ಏನು ಮಾಡಬೇಕು ಎನ್ನುವುದನ್ನು ಯೋಚಿಸಿ. ಈ ಪರಿಸ್ಥಿತಿಯಲ್ಲಿ ಸಿಂಧುರಾಜನು ಏನು ಮಾಡಬೇಕು ಎನ್ನುವುದನ್ನು ಹೇಳಿ. ಅದನ್ನು ಬೇಗನೆ ವಿಧಿವತ್ತಾಗಿ ಕಾರ್ಯಗತಗೊಳಿಸಲಿ!”
ದ್ರೋಣನು ಹೇಳಿದನು: “ಮಹಾರಾಜ! ಬಹಳವಾಗಿ ಯೋಚಿಸಿ ಏನು ಮಾಡಬೇಕೆಂದು ನಾನು ಹೇಳುವುದನ್ನು ಕೇಳು. ಕೇವಲ ಮೂವರು ಪಾಂಡವ ಮಹಾರಥರೇ ನನ್ನನ್ನು ಅತಿಕ್ರಮಿಸಿ ಹೋಗಿದ್ದಾರೆ. ಮುಂದೆ ಹೋಗಿರುವವರ ಕುರಿತು ಭಯಪಡುವಷ್ಟೇ ಹಿಂದೆ ಉಳಿದಿರುವವರ ಕುರಿತು ಭಯಪಡಬೇಕು. ಆದರೆ ಎದಿರು ಕೃಷ್ಣ-ಧನಂಜಯರಿರುವಲ್ಲಿ ಇನ್ನೂ ಹೆಚ್ಚಿನ ಜಾಗ್ರತೆಯಿರಬೇಕೆಂದು ಅನಿಸುತ್ತದೆ. ಭಾರತೀ ಸೇನೆಯು ಮುಂದಿನಿಂದ ಮತ್ತು ಹಿಂದಿನಿಂದ ಎರಡೂ ಕಡೆಗಳಿಂದ ಆಕ್ರಮಣಿಸಲ್ಪಟ್ಟಿದೆ. ಸೈಂಧವನ ರಕ್ಷಣೆಯು ನಮ್ಮ ಮೊದಲ ಕರ್ತವ್ಯವೆಂದು ನಾನು ತಿಳಿಯುತ್ತೇನೆ. ಅಯ್ಯಾ! ಧನಂಜಯನಿಂದ ಭೀತನಾದ ಅವನು ನಮ್ಮ ರಕ್ಷಣೆಗೆ ಅರ್ಹನಾಗಿದ್ದಾನೆ. ವೀರರಾದ ಯುಯುಧಾನ-ವೃಕೋದರರಿಬ್ಬರೂ ಸೈಂಧವನಲ್ಲಿಗೆ ತಲುಪಿದ್ದಾರೆ. ಶಕುನಿಯ ಬುದ್ಧಿಯಿಂದ ಹುಟ್ಟಿದ ದ್ಯೂತದಿಂದಲೇ ನಮಗೆ ಈ ಪರಿಸ್ಥಿತಿಯು ಬಂದೊದಗಿದೆ. ಸಭೆಯಲ್ಲಿ ಆಟವಾಡಿದಾಗ ಅಲ್ಲಿ ಜಯವೂ ಇರಲಿಲ್ಲ, ಸೋಲೂ ಇರಲಿಲ್ಲ. ಆದರೆ ಆಡುತ್ತಿರುವ ಈ ಆಟದಲ್ಲಿ ಜಯ-ಪರಾಜಯಗಳಿವೆ. ಕುರುಸಂಸದಿಯಲ್ಲಿ, ಅನೇಕ ಕುರುಗಳು ಸೇರಿದ್ದಲ್ಲಿ, ದಾಳಗಳೆಂದು ತಿಳಿದು ಆಟವಾಡುತ್ತಿದ್ದುದು ಮುಗ್ಧ ದಾಳಗಳಾಗಿರಲಿಲ್ಲ. ಅವು ಕಣ್ಣಿಗೆ ಕಾಣದೇ ಇರುವ ಘೋರ ದುರಾಸದ ಬಾಣಗಳಾಗಿದ್ದವು. ಈ ಸೇನೆಗಳೇ ಆಟಗಾರರೆಂದೂ, ಶರಗಳೇ ದಾಳಗಳೆಂದೂ, ಸೈಂಧವನೇ ದ್ಯೂತವನ್ನು ನಿಶ್ಚಯಿಸುವ ಪಣವೆಂದೂ ತಿಳಿ. ಸೈಂಧವನೇ ಈಗ ನಾವು ಶತ್ರುಗಳೊಂದಿಗೆ ಹೋರಾಡುತ್ತಿರುವ ಈ ಮಹಾದ್ಯೂತದ ಪಣ. ಆದುದರಿಂದ ನಾವೆಲ್ಲರೂ ನಮ್ಮ ಜೀವವನ್ನೇ ಮುಡುಪಾಗಿಟ್ಟು ಅವನನ್ನು ವಿಧಿವತ್ತಾಗಿ ರಕ್ಷಣೆಯನ್ನು ಮಾಡಬೇಕಾಗಿದೆ. ಅಲ್ಲಿ ಆಟವಾಡುವ ನಮ್ಮವರ ಜಯ-ಅಪಜಯಗಳು ನಿರ್ಧರಿಸಲ್ಪಡುತ್ತದೆ. ಎಲ್ಲಿ ಆ ಪರಮೇಷ್ವಾಸರು ಸೈಂಧವನನ್ನು ಪ್ರಯತ್ನಪಟ್ಟು ರಕ್ಷಿಸುತ್ತಿದ್ದಾರೋ ಅಲ್ಲಿಗೆ ಶೀಘ್ರವಾಗಿ ಸ್ವಯಂ ನೀನು ಹೋಗು. ಆ ರಕ್ಷಕರನ್ನು ರಕ್ಷಿಸು! ನಾನು ನಿನ್ನೊಂದಿಗೆ ಇತರರನ್ನು ಅಲ್ಲಿಗೆ ಕಳುಹಿಸುತ್ತೇನೆ ಮತ್ತು ಇಲ್ಲಿಯೇ ಇದ್ದುಕೊಂಡು ಪಾಂಚಾಲರೊಂದಿಗೆ ಪಾಂಡವ-ಸೃಂಜಯರನ್ನು ತಡೆಯುತ್ತೇನೆ.”
ಆಗ ದುರ್ಯೋಧನನು ತಕ್ಷಣವೇ ಆಚಾರ್ಯನ ಶಾಸನದಂತೆ, ತನ್ನ ಅನುಯಾಯಿಗಳೊಂದಿಗೆ ಆ ಉಗ್ರ ಕರ್ಮವನ್ನು ಮಾಡಲು ಉತ್ಸಾಹಿತನಾಗಿ ಹೊರಟನು. ಆ ಸಮಯದಲ್ಲಿ ಚಕ್ರರಕ್ಷಕರಾದ ಪಾಂಚಾಲ್ಯ ಯುಧಾಮನ್ಯು ಉತ್ತಮೌಜಸರು ಸೇನೆಯನ್ನು ಹೊರಗಿನಿಂದ ಭೇದಿಸಿ ಸವ್ಯಸಾಚಿಯ ಬಳಿ ಹೋಗುತ್ತಿದ್ದರು. ಇದಕ್ಕೂ ಮೊದಲು ಅರ್ಜುನನು ಯುದ್ಧಮಾಡುತ್ತಾ ಕೌರವ ಸೇನೆಯನ್ನು ಪ್ರವೇಶಿಸಿದಾಗ ಕೃತವರ್ಮನು ಅವರಿಬ್ಬರನ್ನೂ ತಡೆದಿದ್ದನು. ಆಗ ಭಾರತ ಬಲಶಾಲೀ ದುರ್ಯೋಧನನು ಉತ್ತಮವಾಗಿ ಯುದ್ಧಮಾಡುತ್ತಾ ತ್ವರೆಮಾಡಿ ಒಟ್ಟಿಗೇ ಮುಂದುವರೆಯುತ್ತಿದ್ದ ಅವರಿಬ್ಬರು ಸಹೋದರರನ್ನು ಎದುರಿಸಿದನು. ಮಹಾರಥರೆಂದು ಪ್ರಸಿದ್ಧರಾದ ಅವರಿಬ್ಬರು ಕ್ಷತ್ರಿಯ ಪ್ರವರರೂ ಧನುಸ್ಸನ್ನು ಸೆಳೆದು ದುರ್ಯೋಧನನೊಂದಿಗೆ ಯುದ್ಧಕ್ಕೆ ತೊಡಗಿದರು. ಯುಧಾಮನ್ಯುವಾದರೋ ಸಂಕ್ರುದ್ಧನಾಗಿ ತ್ವರೆಮಾಡಿ ದುರ್ಯೋಧನನ ಸ್ತನಾಂತರದಲ್ಲಿ ಮುನ್ನೂರು ಉಕ್ಕಿನ ಶರಗಳನ್ನು ಪ್ರಯೋಗಿಸಿದನು. ದುರ್ಯೋಧನನಾದರೋ ಉತ್ತಮೌಜಸನ ನಾಲ್ಕು ಕುದುರೆಗಳನ್ನೂ ಇಬ್ಬರು ಪಾರ್ಷ್ಣಿಸಾರಥಿಗಳನ್ನೂ ಸಂಹರಿಸಿದನು. ಕುದುರೆಗಳು, ಸೂತರೂ ಹತರಾಗಲು ಉತ್ತಮೌಜಸನು ತ್ವರೆಮಾಡಿ ಸಹೋದರ ಯುಧಾಮನ್ಯುವಿನ ರಥವನ್ನೇರಿದನು. ಸಹೋದರನ ರಥವನ್ನೇರಿ ಅವನು ದುರ್ಯೋಧನನ ಕುದುರೆಗಳನ್ನು ಅನೇಕ ಶರಗಳಿಂದ ಹೊಡೆಯುತ್ತಿರಲು ಅವು ಹತವಾಗಿ ಭೂಮಿಯ ಮೇಲೆ ಬಿದ್ದವು. ಕುದುರೆಗಳು ಬೀಳಲು ಯುಧಾಮನ್ಯುವು ಶೀಘ್ರವಾಗಿ ಪರಮ ಧನುಸ್ಸಿನಿಂದ ದುರ್ಯೋಧನನ ಧನುಸ್ಸನ್ನೂ ಶರಾವಾಪವನ್ನೂ ಕತ್ತರಿಸಿದನು. ಕುದುರೆ-ಸಾರಥಿಯರು ಸತ್ತುಹೋದ ರಥದಿಂದ ಧುಮುಕಿ ದುರ್ಯೋಧನನು ಗದೆಯನ್ನೆತ್ತಿಕೊಂಡು ಪಾಂಚಾಲ್ಯರ ಕಡೆ ಧಾವಿಸಿದನು. ಎರಗಿ ಬೀಳುತ್ತಿರುವ ಆ ಕ್ರುದ್ಧ ಪರಪುರಂಜಯನನ್ನು ನೋಡಿ ಯುಧಾಮನ್ಯು-ಉತ್ತಮೌಜಸರು ರಥದಿಂದ ಕೆಳಗೆ ಹಾರಿದರು. ಆಗ ಅವರು ಗದೆಯಿಂದ ಹೇಮಚಿತ್ರಿತವಾದ ರಥಗಳಲ್ಲಿಯೇ ದುರ್ಯೋಧನನ ರಥವನ್ನು ಕುದುರೆ-ಸಾರಥಿ-ಧ್ವಜಗಳೊಂದಿಗೆ ಪುಡಿ ಪುಡಿ ಮಾಡಿದರು. ಹೀಗೆ ಹತಾಶ್ವ ಹತಸಾರಥಿಯಾದ ಪರಂತಪ ದುರ್ಯೋಧನನು ಬೇಗನೇ ಮದ್ರರಾಜನ ರಥವನ್ನೇರಿದನು. ಪಾಂಚಾಲ ನಾಯಕರಾದ ಅವರಿಬ್ಬರು ಮಹಾಬಲಿ ರಾಜಪುತ್ರರೂ ಇನ್ನೊಂದು ರಥವನ್ನೇರಿ ಧನಂಜಯನ ಬಳಿ ತಲುಪಿದರು.
ಕರ್ಣ-ಭೀಮಸೇನರ ಯುದ್ಧ ಮುಂದುವರೆದುದು
ಭೀಮಸೇನನಾದರೋ ರಥಿಗಳಲ್ಲಿ ಶ್ರೇಷ್ಠ ರಾಧೇಯನನ್ನು ಬಿಟ್ಟು ವೀರರಾದ ಕೃಷ್ಣ-ಧನಂಜಯರು ಇರುವಲ್ಲಿ ಹೋಗ ಬಯಸಿದನು. ಹಾಗೆ ಹೋಗುತ್ತಿರುವ ಅವನನ್ನು ತಡೆಗಟ್ಟಿ ರಾಧೇಯನು ಮೇಘಗಳು ಪರ್ವತದ ಮೇಲೆ ಹೇಗೋ ಹಾಗೆ ಭೀಮಸೇನನ ಮೇಲೆ ಕಂಕಪತ್ರಿಗಳನ್ನು ಸುರಿಸಿದನು. ಬಲಶಾಲಿ ಆಧಿರಥಿಯು ಅರಳುತ್ತಿರುವ ಕಮಲದಂತಹ ಮುಖದಲ್ಲಿ ನಗೆಯಾಡುತ್ತಾ ಹೋಗುತ್ತಿದ್ದ ಭೀಮನನ್ನು ಯುದ್ಧಕ್ಕೆ ಆಹ್ವಾನಿಸಿದನು. ಕರ್ಣನು ಯುದ್ಧಕ್ಕೆ ನೀಡಿದ ಆ ಆಹ್ವಾನವನ್ನು ಕೇಳಿ ರೋಷಗೊಂಡ ಭೀಮಸೇನನು ಅರ್ಧಮಂಡಲಪರ್ಯಂತ ತಿರುಗಿ ಸೂತಪುತ್ರನನ್ನು ಎದುರಿಸಿ ಯುದ್ಧಮಾಡತೊಡಗಿದನು. ದ್ವೈರಥಯುದ್ಧಕ್ಕೆ ಪ್ರಯತ್ನಿಸುತ್ತಿದ್ದ ಕವಚಧಾರಿಯಾದ ಸರ್ವ ಶಸ್ತ್ರಭೃತರಲ್ಲಿ ಶ್ರೇಷ್ಠನಾದ ಕರ್ಣನನ್ನು ಭೀಮಸೇನನು ನೇರವಾಗಿ ಹೋಗುವ ಬಾಣಗಳ ಮಳೆಗರೆದು ಮುಚ್ಚಿಬಿಟ್ಟನು. ಶೀಘ್ರವಾಗಿ ಕಲಹವನ್ನು ಕಡೆಗಾಣಿಸಲು ಮತ್ತು ಕರ್ಣ ಹಾಗೂ ಅವನ ಇತರ ಅನುಯಾಯಿಗಳೆಲ್ಲರನ್ನೂ ಸಂಹರಿಸಿಬಿಡಲು ಮಹಾಬಲ ಭೀಮಸೇನನು ಯೋಚಿಸಿದನು. ಅಸಹನೆಯಿಂದ ಪರಮ ಕ್ರುದ್ಧನಾದ ಪರಂತಪ ಪಾಂಡವನು ಕರ್ಣನ ಮೇಲೆ ಉಗ್ರವಾದ ವಿವಿಧ ಬಾಣಗಳ ಮಳೆಯನ್ನೇ ಸುರಿಸಿದನು. ಸುಮಹಾಯಶಸ್ವಿಯಾದ ಸೂತಪುತ್ರನು ಮತ್ತಗಜದ ನಡುಗೆಯುಳ್ಳ ಭೀಮಸೇನನ ಆ ಬಾಣಗಳ ಮಳೆಯನ್ನೂ ಅಸ್ತ್ರಮಾಯೆಗಳನ್ನೂ ನಿರಸನಗೊಳಿಸಿಬಿಟ್ಟನು. ವಿದ್ಯೆಯಲ್ಲಿ ಆಚಾರ್ಯನಷ್ಟೇ ಗೌರವಾನ್ವಿತನಾದ ಮಹೇಷ್ವಾಸ ಕರ್ಣನು ರಣದಲ್ಲಿ ಸಂಚರಿಸುತ್ತಿದ್ದನು. ಕ್ರೋಧದಿಂದ ಯುದ್ಧಮಾಡುತ್ತಿದ್ದ ಅಸಹನಶೀಲ ವೃಕೋದರ ಭೀಮಸೇನನನ್ನು ರಾಧೇಯನು ನಗುತ್ತಲೇ ಎದುರಿಸಿದನು. ಸುತ್ತಲೂ ಯುದ್ಧಮಾಡುತ್ತಿರುವ ವೀರರೆಲ್ಲರೂ ನೋಡುತ್ತಿರುವಾಗ ರಣದಲ್ಲಿ ಕರ್ಣನು ನಗುತ್ತಿರುವುದನ್ನು ಕೌಂತೇಯ ಭೀಮಸೇನನು ಸಹಿಸಿಕೊಳ್ಳಲಿಲ್ಲ. ಮಾವುತನು ಮಹಾ ಗಜವನ್ನು ಅಂಕುಶದಿಂದ ತಿವಿಯುವಂತೆ ಬಲವಾನ್ ಭೀಮಸೇನನು ಕ್ರುದ್ಧನಾಗಿ ಕರ್ಣನ ಎದೆಗೆ ಕರುವಿನ ದಂತಗಳಿಂದ ತಯಾರಿಸಿದ ಬಾಣಗಳಿಂದ ಹೊಡೆದನು. ಬಣ್ಣದ ಕವಚವನ್ನು ಧರಿಸಿದ್ದ ಸೂತಪುತ್ರನ ಸಾರಥಿಯನ್ನೂ ಸುಂದರ ಪುಂಖಗಳುಳ್ಳ ಎಪ್ಪತ್ಮೂರು ನಿಶಿತ ಶರಗಳಿಂದ ಭೇದಿಸಿದನು. ಅನಂತರ ಗಾಳಿಯ ವೇಗದಲ್ಲಿ ಹೋಗುವ ಬಂಗಾರದ ಬಾಣಗಳ ಜಾಲದಿಂದ ಕರ್ಣನನ್ನೂ, ಐದೈದು ಬಾಣಗಳಿಂದ ಅವನ ಕುದುರೆಗಳನ್ನೂ ಭೀಮನು ಹೊಡೆದನು. ಆಗ ನಿಮಿಷಾರ್ಧದಲ್ಲಿ ಭೀಮಸೇನನ ರಥದ ಬಳಿ ಕರ್ಣನು ಪ್ರಯೊಗಿಸಿದ ಬಾಣಮಯ ಜಾಲವು ಕಂಡಿತು.
ಕರ್ಣನ ಧನುಸ್ಸಿನಿಂದ ಹೊರಟ ಬಾಣಗಳಿಂದ ಪಾಂಡವನು ರಥ-ಧ್ವಜ-ಸೂತನೊಂದಿಗೆ ಮುಚ್ಚಿ ಹೋದನು. ಕರ್ಣನು ಕ್ರುದ್ಧನಾಗಿ ಅರವತ್ನಾಲ್ಕರಿಂದ ಭೀಮನ ದೃಢವಾದ ಕವಚವನ್ನು ಹೊಡೆದನು. ಹಾಗೆಯೇ ಮರ್ಮಭೇದೀ ನಾರಾಚಗಳಿಂದ ಅವನನ್ನೂ ಹೊಡೆದನು. ಆದರೆ ಕರ್ಣನ ಬಿಲ್ಲಿನಿಂದ ಹೊರಟ ಮಹಾವೇಗದ ಬಾಣಗಳ ಕುರಿತು ಯೋಚಿಸದೇ ಸ್ವಲ್ಪವೂ ಗಾಬರಿಗೊಳ್ಳದೇ ವೃಕೋದರನು ಸೂತಪುತ್ರನನ್ನು ಆಕ್ರಮಣಿಸಿದನು. ಕರ್ಣನ ಚಾಪದಿಂದ ಹೊರಟ ಹಾವಿನ ವಿಷಗಳಂತಿದ್ದ ಬಾಣಗಳಿಂದ ಭೀಮನು ಭಯಪಡಲಿಲ್ಲ ಮತ್ತು ವ್ಯಥೆಗೊಳ್ಳಲಿಲ್ಲ. ಆಗ ಭೀಮಸೇನನು ತಿಗ್ಮ ತೇಜಸ್ಸುಳ್ಳ ನಿಶಿತ ಮೂವತ್ತೆರಡು ಭಲ್ಲಗಳಿಂದ ಕರ್ಣನನ್ನು ಹೊಡೆದನು. ಅದಕ್ಕೆ ಪ್ರತಿಯಾಗಿ ಕರ್ಣನು ಹೆಚ್ಚೇನೂ ಪ್ರಯತ್ನಪಡದೇ ಸೈಂಧವನ ವಧೈಷಿಣಿಯಾದ ಭೀಮಸೇನನನ್ನು ಶರಗಳಿಂದ ಮುಚ್ಚಿಬಿಟ್ಟನು. ರಾಧೇಯನು ಭೀಮನೊಂದಿಗೆ ಮೃದುವಾಗಿ ಹೋರಾಡುತ್ತಿದ್ದನು. ಆದರೆ ಹಿಂದಿನ ವೈರವನ್ನು ಸ್ಮರಿಸಿಕೊಳ್ಳುತ್ತಾ ಭೀಮನು ಕ್ರೋಧದಿಂದ ಹೋರಾಡುತ್ತಿದ್ದನು. ಭೀಮಸೇನನು ಅವನ ಆ ಅಪಮಾನವನ್ನು ಸ್ವಲ್ಪವೂ ಸಹಿಸಿಕೊಳ್ಳಲಿಲ್ಲ. ಆ ಅಮಿತ್ರಜಿತುವು ಕರ್ಣನ ಮೇಲೆ ಬೇಗನೇ ಶರವರ್ಷವನ್ನು ಸುರಿಸಿದನು. ರಣದಲ್ಲಿ ಭೀಮಸೇನನಿಂದ ಕಳುಹಿಸಲ್ಪಟ್ಟ ಆ ಬಾಣಗಳು ಕರ್ಣನ ಮೇಲೆ ಎಲ್ಲ ಕಡೆ ಕೂಗುತ್ತಿರುವ ಪಕ್ಷಿಗಳಂತೆ ಬಿದ್ದವು. ಭೀಮಸೇನನ ಧನುಸ್ಸಿನಿಂದ ಹೊರಟ ಆ ಹೇಮಪುಂಖದ ಬಾಣಗಳು ತೋಳಗಳು ಕ್ಷುದ್ರ ಮೃಗವನ್ನು ಹೇಗೋ ಹಾಗೆ ಆಕ್ರಮಣಿಸಿದವು. ಎಲ್ಲ ಕಡೆಯಿಂದ ಮುತ್ತಲ್ಪಟ್ಟ ರಥಿಗಳಲ್ಲಿ ಶ್ರೇಷ್ಠ ಕರ್ಣನಾದರೋ ಭೀಮನ ಮೇಲೆ ಉಗ್ರವಾದ ಶರವರ್ಷಗಳನ್ನು ಸುರಿಸಿದನು.
ಆವನ ಆ ವಜ್ರಗಳಂತಿರುವ ಬಾಣಗಳನ್ನು ಅವು ತನಗೆ ತಾಗುವುದರೊಳಗೇ ಅನೇಕ ಭಲ್ಲಗಳಿಂದ ಸಮರಶೋಭಿ ವೃಕೋದರನು ಕತ್ತರಿಸಿಬಿಟ್ಟನು. ಯುದ್ಧದಲ್ಲಿ ಪುನಃ ಕರ್ಣ ವೈಕರ್ತನನು ಮಹಾರಥ ಭೀಮಸೇನನನ್ನು ಶರವರ್ಷಗಳಿಂದ ಮುಚ್ಚಿ ಬಿಟ್ಟನು. ಮುಳ್ಳುಗಳು ನಿಗುರಿನಿಂತ ಮುಳ್ಳು ಹಂದಿಯಂತೆ ಸಾಯಕಗಳಿಂದ ಚುಚ್ಚಲ್ಪಟ್ಟ ಭೀಮನು ಕಂಡುಬಂದನು. ಕರ್ಣನ ಚಾಪದಿಂದ ಹೊರಟ ಹೇಮಪುಂಖಗಳ ಶಿಲಾಧೌತ ಶರಗಳನ್ನು ಭೀಮನು ಭಾಸ್ಕರನು ತನ್ನ ಕಿರಣಗಳನ್ನು ಹೇಗೋ ಹಾಗೆ ಸಹಿಸಿಕೊಂಡನು. ರಕ್ತದಲ್ಲಿ ಸರ್ವಾಂಗಗಳೂ ತೋಯ್ದುಹೋಗಿರಲು ಭೀಮಸೇನನು ಕಾನನದಲ್ಲಿರುವ ಕೆಂಪುಹೂಗಳು ಬಿಟ್ಟಿರುವ ಪಲಾಶ ವೃಕ್ಷದಂತೆ ರಾರಾಜಿಸಿದನು. ಆದರೆ ಕರ್ಣನ ನಡತೆಯನ್ನು ಭೀಮನು ಸ್ವಲ್ಪವೂ ಸಹಿಸಿಕೊಳ್ಳಲಿಲ್ಲ. ಕ್ರೋಧದಿಂದ ಕಣ್ಣುಗಳನ್ನು ತಿರುಗಿಸಿದನು. ಅವನು ಕರ್ಣನನ್ನು ಇಪ್ಪತ್ತೈದು ನಾರಾಚಗಳಿಂದ ಹೊಡೆದನು. ಆಗ ಅವನು ವಿಷಯುಕ್ತವಾದ ಸರ್ಪಗಳಿಂದ ಕೂಡಿದ ಶ್ವೇತಪರ್ವತದಂತೆ ಶೋಭಿಸಿದನು. ಅಮರವಿಕ್ರಾಂತನಾದ ಭೀಮನು ಮಹಾರಣದಲ್ಲಿ ಸೂತಪುತ್ರನ ಮರ್ಮಗಳಿಗೆ ಹದಿನಾಲ್ಕು ಬಾಣಗಳಿಂದ ಹೊಡೆದನು. ಆಗ ತಕ್ಷಣವೇ ಭೀಮಸೇನನು ಕರ್ಣನ ಧನುಸ್ಸನ್ನೂ ಸರ್ವೋಪಕರಣಗಳನ್ನೂ ತುಂಡರಿಸಿದನು. ಅನಂತರ ತ್ವರೆಮಾಡಿ ಶರಗಳಿಂದ ಅವನ ನಾಲ್ಕು ಕುದುರೆಗಳನ್ನೂ ಸಾರಥಿಯನ್ನೂ ಸಂಹರಿಸಿದನು. ಸೂರ್ಯನ ರಶ್ಮಿಗಳಂತೆ ಪ್ರಕಾಶಿಸುವ ನಾರಾಚಗಳಿಂದ ಕರ್ಣನ ಎದೆಗೂ ಹೊಡೆದನು. ಸೂರ್ಯನ ರಶ್ಮಿಗಳು ಮೋಡವನ್ನು ಭೇದಿಸುವಂತೆ ಆ ಶರಗಳು ಎಲ್ಲವೂ ಕರ್ಣನನ್ನು ಭೇದಿಸಿ ನೆಲವನ್ನು ಹೊಕ್ಕವು. ಧನುಸ್ಸು ತುಂಡಾಗಿ, ಶರಗಳಿಂದ ನೋವುತಿಂದು ಅತೀವ ಕಷ್ಟಕ್ಕೊಳಗಾದ ಆ ಪುರುಷಮಾನೀ ಕರ್ಣನು ಮತ್ತೊಂದು ರಥವನ್ನೇರಿ ಅಲ್ಲಿಂದ ಹೊರಟುಹೋದನು.
ಪ್ರಜ್ವಲಿಸುತ್ತಿರುವ ಅಗ್ನಿಯಂತಿರುವ ಭೀಮಸೇನನನ್ನು ರಣದಲ್ಲಿ ನೋಡಿ ಕರ್ಣನು ವಿಧಿವತ್ತಾಗಿ ಸಿದ್ಧಗೊಳಿಸಿದ ಇನ್ನೊಂದು ರಥವನ್ನೇರಿ ಭಿರುಗಾಳಿಗೆ ಸಿಲುಕಿದ ಸಾಗರದಂತೆ ಪಾಂಡವನನ್ನು ಆಕ್ರಮಣಿಸಿದನು. ಕ್ರುದ್ಧನಾದ ಆಧಿರಥಿಯನ್ನು ನೋಡಿ ಭೀಮಸೇನನು ವೈವಸ್ವತನ ಯಾಗದಲ್ಲಿ ಹುತನಾದನೆಂದೇ ತಿಳಿದುಕೊಂಡರು. ಧನುಸ್ಸನ್ನು ಜೋರಾಗಿ ಟೇಂಕರಿಸುತ್ತಾ ಭೈರವವಾದ ಚಪ್ಪಾಳೆ ಶಬ್ಧವನ್ನು ಮಾಡುತ್ತಾ ರಾಧೇಯನು ಭೀಮಸೇನನ ರಥದ ಕಡೆ ನುಗ್ಗಿದನು. ಆಗ ಪುನಃ ಸೂತಪುತ್ರ ಮತ್ತು ಭೀಮಸೇನರ ನಡುವೆ ದಾರುಣವಾದ ಮಹಾ ಹೋರಾಟವು ನಡೆಯಿತು. ಪರಸ್ಪರರನ್ನು ವಧಿಸಲು ಬಯಸಿ ಸಂರಬ್ಧರಾದ ಅವರಿಬ್ಬರೂ ಕಣ್ಣುಗಳಿಂದಲೇ ಅನ್ಯೋನ್ಯರನ್ನು ಸುಟ್ಟುಬಿಡುವರೋ ಎನ್ನುವಂತೆ ನೋಡುತ್ತಾ ತಿರುಗುತ್ತಿದ್ದರು. ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡ, ಕ್ರುದ್ಧರಾಗಿ ನಿಟ್ಟುಸಿರುಬಿಡುತ್ತಿದ್ದ ಆ ಮಹಾರಥ ಅರಿಂದಮರು ಯುದ್ಧದಲ್ಲಿ ಎದುರಿಸಿ ಅನ್ಯೋನ್ಯರನ್ನು ಗಾಯಗೊಳಿಸಿದರು. ವ್ಯಾಘ್ರಗಳಂತೆ ಸಂರಬ್ಧರಾಗಿ, ಗಿಡುಗಳಂತೆ ಶೀಘ್ರವಾಗಿ, ಶರಭಗಳಂತೆ ಸಂಕ್ರುದ್ಧರಾಗಿ ಪರಸ್ಪರರೊಡನೆ ಯುದ್ಧಮಾಡಿದರು. ಆಗ ಭೀಮನು ಅಕ್ಷದ್ಯೂತದಲ್ಲಿ, ನಂತರ ವನದಲ್ಲಿ ಮತ್ತು ವಿರಾಟನಗರದಲ್ಲಿಯೂ ಪಡೆದ ದುಃಖಗಳನ್ನು ಸ್ಮರಿಸಿಕೊಂಡು; ರತ್ನಗಳಿಂದ ಸಮೃದ್ಧವಾಗಿದ್ದ ರಾಷ್ಟ್ರಗಳನ್ನು ಧೃತರಾಷ್ಟ್ರನ ಪುತ್ರರು ಅಪಹರಿಸಿದುದನ್ನೂ, ಮಕ್ಕಳೊಂದಿಗೆ ಧೃತರಾಷ್ಟ್ರನು ಸತತವೂ ಅವರಿಗೆ ನೀಡಿದ ಪರಿಕ್ಲೇಶಗಳನ್ನೂ, ಮುಗ್ಧಳಾಗಿದ ಕುಂತಿಯನ್ನು ಅವಳ ಮಕ್ಕಳೊಂದಿಗೆ ಸುಟ್ಟುಬಿಡಲು ಬಯಸಿದ ಧೃತರಾಷ್ಟ್ರನನ್ನೂ, ಸಭಾಮಧ್ಯದಲ್ಲಿ ದುರಾತ್ಮರು ಕೃಷ್ಣೆ ದ್ರೌಪದಿಗೆ ನೀಡಿದ ಕಷ್ಟಗಳನ್ನೂ, “ಪೊಳ್ಳು ಎಳ್ಳಿನಂತಿರುವ ಪಾರ್ಥರೆಲ್ಲರೂ ನರಕದಲ್ಲಿ ಬಿದ್ದಿದ್ದಾರೆ! ಇವರು ನಿನ್ನ ಗಂಡಂದಿರಾಗಿ ಉಳಿದಿಲ್ಲ! ಬೇರೆಯೇ ಪತಿಯನ್ನು ಸ್ವೀಕರಿಸು!” ಎಂದು ಕುರುಗಳು ಹೇಳಿದ್ದುದನ್ನೂ; ಕೃಷ್ಣೆಯನ್ನು ದಾಸಿಯನ್ನಾಗಿಸಿಕೊಂಡು ಭೋಗಿಸಲು ಬಯಸಿದ ಧೃತರಾಷ್ಟ್ರನ ಮಕ್ಕಳನ್ನೂ; ಕೃಷ್ಣಾಜಿನಗಳನ್ನು ಧರಿಸಿ ಅವರು ಹೊರಡುತ್ತಿರುವಾಗ ಸಭೆಯಲ್ಲಿ ಕರ್ಣನಾಡಿದ ಕಠೋರ ಮಾತುಗಳನ್ನೂ; ಕಷ್ಟದಲ್ಲಿರುವ ಪಾರ್ಥರನ್ನು ತೃಣೀಕರಿಸಿ ದರ್ಪದಿಂದ ಅವಹೇಳನ ಮಾಡಿದ ಆ ಅಲ್ಪತೇಜಸನನ್ನೂ; ಬಾಲ್ಯದಿಂದಲೂ ನೀಡಿದ ಆ ದುಃಖಗಳನ್ನು ನೆನೆದು ಆ ಅರಿಘ್ನ ಧರ್ಮಾತ್ಮ ವೃಕೋದರನು ಜೀವವನ್ನೂ ಕಡೆಗಣಿಸಿದನು. ಬಂಗಾರದ ಬೆನ್ನುಳ್ಳ ದುರಾಸದ ಮಹಾ ಧನುಸ್ಸನ್ನು ಟೇಂಕರಿಸಿ ಆ ಭರತಶಾರ್ದೂಲನು ತನ್ನ ಜೀವವನ್ನೇ ಕಡೆಗಣಿಸಿ ಕರ್ಣನನ್ನು ಆಕ್ರಮಣಿಸಿದನು. ಕರ್ಣನ ರಥದ ಮೇಲೆ ಪ್ರಭೆಯುಳ್ಳ ಶಿಲಾಧೌತ ಸಾಯಕಗಳ ಜಾಲಗಳನ್ನು ಪ್ರಯೋಗಿಸಿ ಭೀಮನು ಸೂರ್ಯನ ಪ್ರಭೆಯನ್ನೇ ಮಂಕುಗೊಳಿಸಿದನು.
ಆಗ ಆಧಿರಥಿಯು ನಗುತ್ತಾ ತಕ್ಷಣವೇ ನಿಶಿತ ಶರಗಳಿಂದ ಭೀಮಸೇನನ ಪತ್ರಿಗಳ ಶರಜಾಲಗಳನ್ನು ನಾಶಗೊಳಿಸಿದನು. ಅಧಿರಥಿಯು ಭೀಮನನ್ನು ಒಂಭತ್ತು ನಿಶಿತಶರಗಳಿಂದ ಹೊಡೆದನು. ಅಂಕುಶದಿಂದ ತಿವಿಯಲ್ಪಟ್ಟ ಆನೆಯಂತೆ ಈ ಪತತ್ರಿಗಳಿಂದ ಹೊಡೆಯಲ್ಪಟ್ಟ ವೃಕೋದರನು ಸ್ವಲ್ಪವೂ ಗಾಭರಿಗೊಳ್ಳದೇ ಸೂತಪುತ್ರನನ್ನು ಆಕ್ರಮಣಿಸಿದನು. ವೇಗದಿಂದ ರಭಸವಾಗಿ ತನ್ನ ಮೇಲೆ ಬೀಳುತ್ತಿದ್ದ ಪಾಂಡವರ್ಷಭನೊಂದಿಗೆ, ಮದಿಸಿದ ಆನೆಯನ್ನು ಹೋರಾಡುವ ಇನ್ನೊಂದು ಮದಿಸಿದ ಆನೆಯಂತೆ, ಕರ್ಣನು ಪ್ರತಿಯಾಗಿ ಯುದ್ಧಮಾಡಿದನು. ಆಗ ಕರ್ಣನು ನೂರಾರು ಭೇರಿಗಳು ಒಮ್ಮೆಲೇ ಬಾರಿಸಿದರೆ ಉಂಟಾಗುವಷ್ಟು ಶಬ್ಧವನ್ನು ನೀಡುವ ಶಂಖವನ್ನು ಊದಿ ಹರ್ಷದಿಂದ ಸಾಗರದಂತಿರುವ ಭೀಮನ ಸೇನೆಯನ್ನು ಕ್ಷೋಭೆಗೊಳಿಸಿದನು. ರಥ-ಗಜ-ಅಶ್ವ-ಪದಾತಿಗಳ ತನ್ನ ಸೇನೆಯು ಹೀಗೆ ಕ್ಷೋಭೆಗೊಂಡಿದುದನ್ನು ನೋಡಿ ಭೀಮನು ಹತ್ತಿರದಿಂದಲೇ ಕರ್ಣನನ್ನು ಸಾಯಕಗಳಿಂದ ಮುಚ್ಚಿದನು. ಆಗ ಕರ್ಣನು ತನ್ನ ಹಂಸವರ್ಣದ ಕುದುರೆಗಳು ಭೀಮನ ಕರಡೀಬಣ್ಣದ ಕುದುರೆಗಳೊಂದಿಗೆ ಬೆರೆಯುವಷ್ಟು ಹತ್ತಿರಕ್ಕೆ ಬಂದು ಪಾಂಡವನನ್ನು ಶರಗಳಿಂದ ಮುಚ್ಚಿಬಿಟ್ಟನು. ಆ ಕರಡೀ ಬಣ್ಣದ ಕುದುರೆಗಳು ಗಾಳಿಯ ವೇಗದಲ್ಲಿ ಚಲಿಸುತ್ತಿರುವ ಹಂಸವರ್ಣದ ಕುದುರೆಗಳೊಂದಿಗೆ ಬೆರೆತುದನ್ನು ನೋಡಿ ಕೌರವ ಸೇನೆಯಲ್ಲಿ ಹಾಹಾಕಾರವುಂಟಾಯಿತು. ಬೆರೆತುಹೋದ ಆ ಗಾಳಿಯವೇಗದ ಕುದುರೆಗಳು ಆಕಾಶದಲ್ಲಿ ತೋರುವ ಕಪ್ಪು-ಬಿಳೀ ಮೋಡಗಳಂತೆ ಅಧಿಕವಾಗಿ ಶೋಭಿಸಿದವು. ಕ್ರೋಧದಿಂದ ಕಣ್ಣುಗಳು ಕೆಂಪಾದ ಸಂರಬ್ಧರಾದ ಕರ್ಣ-ವೃಕೋದರರನ್ನು ನೋಡಿ ಕೌರವ ಮಹಾರಥರು ಭಯದಿಂದ ತತ್ತರಿಸಿದರು. ಅವರಿಬ್ಬರೂ ಹೋರಾಡುತ್ತಿದ್ದ ಯುದ್ಧಭೂಮಿಯು ಯಮರಾಷ್ಟ್ರದಂತೆ ಘೋರವಾಗಿ ಪರಿಣಮಿಸಿತು. ಪ್ರೇತರಾಜನ ಪುರದಂತೆ ದುರ್ದರ್ಶವಾಯಿತು. ಚಿತ್ರವನ್ನು ನೋಡುತ್ತಿರುವ ಪ್ರೇಕ್ಷಕರಂತಿದ್ದ ಆ ಮಹಾರಥರ ಸಮಾಜವು ಯಾರೊಬ್ಬರಿಗೂ ನಿಶ್ಚಯಪೂರ್ವಕ ಜಯವು ದೊರಕುತ್ತದೆಯೆಂದು ಕಾಣಲಿಲ್ಲ. ಅವರು ಧೃತರಾಷ್ಟ್ರ ಮತ್ತು ಅವನ ಮಗ ದುರ್ಯೋಧನನ ದುರ್ಮಂತ್ರದಿಂದಾಗಿ ನಡೆಯುತ್ತಿದ್ದ ಮಹಾ ಅಸ್ತ್ರಗಳ ಆ ಹೋರಾಟವನ್ನು ಮಾತ್ರ ನೋಡುತ್ತಿದ್ದರು. ಅವರಿಬ್ಬರು ಶತ್ರುಘ್ನರೂ ಪರಸ್ಪರರನ್ನು ನಿಶಿತ ಸಾಯಕಗಳಿಂದ ಮುಚ್ಚಿದರು. ಆಕಾಶವನ್ನು ಶರಜಾಲಗಳಿಂದ ತುಂಬಿಸಿ, ಬಾಣಗಳ ಮಳೆಯನ್ನೂ ಸುರಿಸಿದರು. ಅನ್ಯೋನ್ಯರನ್ನು ಸಂಹರಿಸಲು ಬಯಸಿ ತೀಕ್ಷ್ಣಶರಗಳಿಂದ ಹೊಡೆದಾಡುತ್ತಿರುವ ಆ ಮಹಾರಥರಿಬ್ಬರೂ ಜೋರಾಗಿ ಮಳೆಸುರಿಸುತ್ತಿದ್ದ ಮೋಡಗಳಂತೆ ತುಂಬಾ ಪ್ರೇಕ್ಷಣೀಯರಾಗಿ ಕಾಣುತ್ತಿದ್ದರು. ಬಂಗಾರದಿಂದ ಮಾಡಲ್ಪಟ್ಟ ಬಾಣಗಳನ್ನು ಬಿಡುತ್ತಾ ಆ ಅರಿಂದಮರು ಆಕಾಶವನ್ನು ಉಲ್ಕೆಗಳಿಂದ ಪ್ರಕಾಶಿಸುವಂತೆ ಪ್ರಕಾಶಗೊಳಿಸಿದರು. ಅವರು ಬಿಟ್ಟ ಹದ್ದಿನ ಗರಿಗಳ ಬಾಣಗಳು ಶರತ್ಕಾಲದ ಅಂಬರದಲ್ಲಿ ಸಾಗುತ್ತಿರುವ ಮದಿಸಿದ ಸಾರಂಗಗಳ ಸಾಲುಗಳಂತೆ ಶೋಭಿಸುತ್ತಿದ್ದವು.
ಆಗ ಸೂತಪುತ್ರನೊಡನೆ ಯುದ್ಧಮಾಡುತ್ತಿರುವ ಅರಿಂದಮನನ್ನು ನೋಡಿ ಕೃಷ್ಣ-ಧನಂಜಯರು ಕರ್ಣನು ಭೀಮನಿಗೆ ಅತಿ ಭಾರಿ ಎಂದು ಅಂದುಕೊಂಡರು. ಹೀಗೆ ಆಧಿರಥಿ ಮತ್ತು ಭೀಮರು ಶರಗಳನ್ನು ಪರಸ್ಪರರ ಮೇಲೆ ಬಿಡುತ್ತಿರಲು ಆ ಬಾಣಗಳಿಗೆ ಸಿಲುಕಿದ ಅನೇಕ ಕುದುರೆ, ಮನುಷ್ಯ, ಆನೆಗಳು ಸತ್ತು ಬಿದ್ದರು. ಸತ್ತು ಬಿದ್ದ ಮತ್ತು ಇನ್ನೂ ಬೀಳುತ್ತಿದ್ದ ಅನೇಕರಿಂದ ಕೌರವರ ಕಡೆ ಮಹಾ ಜನಕ್ಷಯವುಂಟಾಯಿತು. ಕ್ಷಣದಲ್ಲಿಯೇ ರಣಭೂಮಿಯು ಜೀವವನ್ನು ಕಳೆದುಕೊಂಡ ಮನುಷ್ಯ-ಅಶ್ವ-ಗಜಗಳಿಂದ ತುಂಬಿಬಿಟ್ಟಿತು.
ಕ್ರುದ್ಧನಾದ ವೈಕರ್ತನನು ಕ್ರುದ್ಧನಾದ ಭೀಮನ ಪರಾಕ್ರಮವನ್ನು ಮೀರಿಸಿ ಅವನನ್ನು ಮುನ್ನೂರು ಬಾಣಗಳಿಂದ ಹೊಡೆದನು. ವೈಕರ್ತನನು ಭೀಮನ ಮೇಲೆ ಮಹಾವೇಗದಿಂದ ಮೊನಚಾಗಿದ್ದ ಬಂಗಾರದಿಂದ ಮಾಡಲ್ಪಟ್ಟಿದ್ದ ಶರಗಳನ್ನು ಪ್ರಯೋಗಿಸಿದನು. ಆಗ ಭೀಮನು ಮೂರು ನಿಶಿತ ಭಲ್ಲಗಳಿಂದ ಕರ್ಣನ ಧನುಸ್ಸನ್ನು ಕತ್ತರಿಸಿ, ರಥನೀಡೆಯನ್ನೂ ಮತ್ತು ಸಾರಥಿಯನ್ನೂ ನೆಲಕ್ಕುರುಳಿಸಿದನು. ಭೀಮಸೇನನ ವಧೆಯನ್ನು ಬಯಸಿ ವೃಷಸೇನ ವೈಕರ್ತನನು ಕನಕ-ವೈಡೂರ್ಯಗಳಿಂದ ಚಿತ್ರಿತ ಹಿಡಿಯುಳ್ಳ ಶಕ್ತಿಯನ್ನು ತೆಗೆದುಕೊಂಡನು. ಕಾಲಶಕ್ತಿಯಂತಿರುವ ಆ ಮಹಾಶಕ್ತಿಯನ್ನು ಹಿಡಿದು ಸಂಧಾನಮಾಡಿ ಭೀಮಸೇನನ ಜೀವವನ್ನೇ ಕೊನೆಗೊಳಿಸುವನೋ ಎಂಬಂತೆ ರಾಧೇಯನು ಅವನ ಮೇಲೆ ಎಸೆದನು. ಪುರಂದರನು ವಜ್ರವನ್ನು ಹೇಗೋ ಹಾಗೆ ಆ ಶಕ್ತಿಯನ್ನು ಪ್ರಯೋಗಿಸಿ ಸೂತನಂದನ ರಾಧೇಯನು ಜೋರಾಗಿ ಮಹಾನಾದಗೈದನು. ಆಗ ಅವನ ಆ ಕೂಗನ್ನು ಕೇಳಿ ಕೌರವರಿಗೆ ಹರ್ಷವುಂಟಾಯಿತು. ಕರ್ಣನ ಭುಜದಿಂದ ಹೊರಟ ಆ ಸೂರ್ಯ-ಅಗ್ನಿಯರ ಪ್ರಭೆಯುಳ್ಳ ಶಕ್ತಿಯನ್ನು ಭೀಮನು ಏಳು ಆಶುಗಗಳಿಂದ ತುಂಡರಿಸಿಬಿಟ್ಟನು. ಪೊರೆಬಿಟ್ಟ ಹಾವಿನಂತಿರುವ ಆ ಶಕ್ತಿಯನ್ನು ತುಂಡರಿಸಿ ರಣದಲ್ಲಿ ಸಂರಬ್ಧನಾದ ಭೀಮನು ಸೂತಪುತ್ರನ ಪ್ರಾಣಗಳನ್ನು ಹೀರುವವೋ ಎಂತಿರುವ ನವಿಲುಗರಿಗಳನ್ನು ಹೊಂದಿರುವ, ಸ್ವರ್ಣಪುಂಖಗಳ, ಶಿಲೆಗಳಲ್ಲಿ ಮಸೆದ, ಯಮದಂಡಗಳಂತಿರುವ ಮಾರ್ಗಣ ಶರಗಳನ್ನು ಪ್ರಯೋಗಿಸಿದನು. ಕರ್ಣನು ಆಗ ಇನ್ನೊಂದು ಬಂಗಾರದ ಬೆನ್ನುಳ್ಳ ದುರಾಸದವಾದ ಧನುಸ್ಸನ್ನು ಹಿಡಿದು ಜೋರಾಗಿ ಎಳೆದು ಒಂಭತ್ತು ಸಾಯಕಗಳನ್ನು ಪ್ರಯೋಗಿಸಿದನು. ವಸುಷೇಣನು ಪ್ರಯೋಗಿಸಿದ ಆ ಒಂಭತ್ತು ಒಂಭತ್ತು ನತಪರ್ವ ಮಹಾಶರಗಳನ್ನೂ ಪಾಂಡುಪುತ್ರನು ಕತ್ತರಿಸಿದನು. ಮಹಾರಾಜ! ಕತ್ತರಿಸಿ ಭೀಮನು ಸಿಂಹದಂತೆ ಜೋರಾಗಿ ಗರ್ಜಿಸಿದನು.
ಕಾವಿಗೆ ಬಂದಿರುವ ಹಸುವಿಗಾಗಿ ಹೊಡೆದಾಡುವ ಬಲಶಾಲೀ ಹೋರಿಗಳಂತೆ ಅಥವಾ ಒಂದೇ ಮಾಂಸದ ತುಂಡಿಗೆ ಸೆಣಸಾಡುವ ಹುಲಿಗಳಂತಿರುವ ಅವರಿಬ್ಬರೂ ಗರ್ಜಿಸುತ್ತಾ ಅನ್ಯೋನ್ಯರನ್ನು ಗೆಲ್ಲಲು ಅನ್ಯೋನ್ಯರಲ್ಲಿ ಅವಕಾಶವನ್ನು ಹುಡುಕುತ್ತಿದ್ದರು. ಕೊಟ್ಟಿಗೆಯಲ್ಲಿರುವ ಎರಡು ಮಹಾ ಹೋರಿಗಳಂತೆ ಅನ್ಯೋನ್ಯರನ್ನು ದುರುಗುಟ್ಟಿ ನೋಡುತ್ತಿದ್ದರು. ಅನಂತರ ಪರಸ್ಪರರನ್ನು ದಂತಗಳ ತುದಿಯಿಂದ ತಿವಿಯುತ್ತಿರುವ ಎರಡು ಆನೆಗಳಂತೆ ಸಂಪೂರ್ಣವಾಗಿ ಎಳೆದ ಬಿಲ್ಲಿನಿಂದ ಪ್ರಯೋಗಿಸಿದ ಶರಗಳಿಂದ ಅನ್ಯೋನ್ಯರನ್ನು ಹೊಡೆದರು. ಅವರಿಬ್ಬರೂ ಪರಸ್ಪರರನ್ನು ಶರವೃಷ್ಟಿಯಿಂದ ಸುಡುತ್ತಾ ಕೋಪದಿಂದ ಕಣ್ಣುಗಳನ್ನು ತಿರುಗಿಸುತ್ತಾ ಅನ್ಯೋನ್ಯರನ್ನು ದುರುಗುಟ್ಟಿ ನೋಡುತ್ತಿದ್ದರು. ಅನ್ಯೋನ್ಯರನ್ನು ನೋಡಿ ನಗುತ್ತಾ, ಮತ್ತೆ ಮತ್ತೆ ಬೈದಾಡುತ್ತಾ, ಶಂಖಗಳನ್ನು ಊದಿ ಶಬ್ಧಮಾಡುತ್ತಾ ಪರಸ್ಪರರೊಂದಿಗೆ ಯುದ್ಧಮಾಡುತ್ತಿದ್ದರು. ಪುನಃ ಭೀಮನು ಅವನ ಧನುಸ್ಸನ್ನು ಹಿಡಿಯಲ್ಲಿಯೇ ತುಂಡರಿಸಿದನು. ಶಂಖದ ಬಿಳುಪಿನ ಅವನ ಕುದುರೆಗಳನ್ನೂ ಬಾಣಗಳಿಂದ ಯಮಕ್ಷಯಕ್ಕೆ ಕಳುಹಿಸಿದನು. ಹಾಗೆ ಕಷ್ಟದಲ್ಲಿ ಸಿಲುಕಿದ ಕರ್ಣನನ್ನು ನೋಡಿ ಕ್ರೋಧದಿಂದ ಕಂಪಿಸುತ್ತಿರುವಂತಿದ್ದ ನೃಪ ದುರ್ಯೋಧನನು ದುರ್ಜಯನಿಗೆ ಆದೇಶವನ್ನಿತ್ತನು: “ದುರ್ಜಯ! ಹೋಗು! ಅಲ್ಲಿ ಪಾಂಡವನು ರಧೇಯನನ್ನು ನುಂಗಿಬಿಡುವಂತಿದ್ದಾನೆ. ಆ ಗಡ್ಡವಿಲ್ಲದವನನ್ನು ಬೇಗನೆ ಕೊಲ್ಲು! ಕರ್ಣನ ಬಲವನ್ನು ಹೆಚ್ಚಿಸು!”
ಇದನ್ನು ಕೇಳಿದ ದುರ್ಜಯನು ದುರ್ಯೋಧನನಿಗೆ ಹಾಗೆಯೇ ಆಗಲೆಂದು ಹೇಳಿ ಕರ್ಣನೊಡನೆ ಹೋರಾಡುತ್ತಿದ್ದ ಭೀಮಸೇನನನ್ನು ಆಕ್ರಮಣಿಸಿ ಅವನ ಮೇಲೆ ಶರಗಳನ್ನು ಚೆಲ್ಲಿದನು. ಅವನು ಭೀಮನನ್ನು ಒಂಭತ್ತು ಬಾಣಗಳಿಂದ ಮತ್ತು ಕುದುರೆಗಳನ್ನು ಎಂಟರಿಂದ ಹೊಡೆದನು. ಆರರಿಂದ ಸಾರಥಿಯನ್ನು, ಮೂರರಿಂದ ಕೇತುವನ್ನು ಮತ್ತು ಏಳರಿಂದ ಅವನನ್ನೂ ಪುನಃ ಹೊಡೆದನು. ಸಂಕ್ರುದ್ಧನಾದ ಭೀಮಸೇನನೂ ಕೂಡ ಆಶುಗಗಳಿಂದ ದುರ್ಜಯನ ಮರ್ಮಗಳನ್ನು ಭೀದಿಸಿ ಅವನನ್ನೂ, ಅವನ ಕುದುರೆಗಳನ್ನೂ, ಸಾರಥಿಯನ್ನೂ ಯಮಸಾದನಕ್ಕೆ ಕಳುಹಿಸಿದನು. ಗಾಯಗೊಂಡ ಹಾವಿನಂತೆ ಹೊರಳಾಡಿ ಆರ್ತನಾಗಿ ರೋದಿಸಿ ನೆಲದ ಮೇಲೆ ಬಿದ್ದಿದ್ದ ಅಲಂಕೃತನಾಗಿದ್ದ ಧೃತರಾಷ್ಟ್ರನ ಆ ಮಗನನ್ನು ಕರ್ಣನು ಪ್ರದಕ್ಷಿಣೆ ಮಾಡಿದನು. ಆಗ ಭೀಮಸೇನನು ಅತ್ಯಂತ ವೈರಿಯಾದ ಕರ್ಣನನ್ನು ವಿರಥನನ್ನಾಗಿ ಮಾಡಿ ಬಾಣಗಣಗಳಿಂದ ಅವನನ್ನು ಚುಚ್ಚಿ ಮುಳ್ಳುಗಳಿಂದ ತುಂಬಿರುವ ಶತಘ್ನಿಯಂತೆ ಮಾಡಿದನು. ಸಾಯಕಗಳಿಂದ ಭೇದಿಸಲ್ಪಟ್ಟರೂ ಪರಂತಪ ಅತಿರಥ ಕರ್ಣನು ಸಮರದಲ್ಲಿ ಕ್ರುದ್ಧರೂಪನಾದ ಭೀಮನನ್ನು ಬಿಟ್ಟು ಹೋಗಲಿಲ್ಲ.
ಭೀಮನಿಂದ ಹೀಗೆ ಸೋತು ವಿರಥನಾದ ಕರ್ಣನು ಪುನಃ ಇನ್ನೊಂದು ರಥವನ್ನೇರಿ ಸದ್ಯದಲ್ಲಿಯೇ ಪಾಂಡವನನ್ನು ಹೊಡೆದನು. ತಮ್ಮ ದಂತಗಳ ತುದಿಯಿಂದ ಪರಸ್ಪರರನ್ನು ಚುಚ್ಚಿ ಸೆಣಸಾಡುವ ಮಹಾಗಜಗಳಿಂತೆ ಅವರಿಬ್ಬರೂ ಪೂರ್ಣವಾಗಿ ಸೆಳೆದು ಬಿಟ್ಟ ಬಾಣಗಳಿಂದ ಅನ್ಯೋನ್ಯರನ್ನು ಹೊಡೆದರು. ಆಗ ಕರ್ಣನು ಶರವ್ರಾತಗಳಿಂದ ಭೀಮನನ್ನು ಜೋರಾಗಿ ಹೊಡೆದನು. ಪುನಃ ಅವನ ಎದೆಯ ಮೇಲೆ ಹೊಡೆದು ಜೋರಾಗಿ ಗರ್ಜಿಸಿದನು. ಪ್ರತಿಯಾಗಿ ಭೀಮನು ಅವನನ್ನು ಹತ್ತು ಬಾಣಗಳಿಂದ ಹೊಡೆದನು. ಪುನಃ ಇಪ್ಪತ್ತು ನತಪರ್ವಣ ಶರಗಳಿಂದ ಹೊಡೆದನು. ಕರ್ಣನಾದರೋ ಭೀಮನ ಸ್ತನಾಂತರವನ್ನು ಒಂಭತ್ತರಿಂದ ಹೊಡೆದು ಒಂದೇ ನಿಶಿತ ಸಾಯಕದಿಂದ ಧ್ವಜಕ್ಕೂ ಹೊಡೆದನು. ಆಗ ಪ್ರತಿಯಾಗಿ ಪಾರ್ಥ ಭೀಮನು ಅಂಕುಶದಿಂದ ಮಹಾ ಆನೆಯನ್ನು ಅಥವಾ ಚಾವಟಿಯಿಂದ ಕುದುರೆಯನ್ನು ಹೊಡೆಯುವ ಹಾಗೆ ಕರ್ಣನನ್ನು ಅರತ್ಮೂರು ಸಾಯಕಗಳಿಂದ ಹೊಡೆದನು. ಯಶಸ್ವೀ ಪಾಂಡವನಿಂದ ಅತಿಯಾಗಿ ಗಾಯಗೊಂಡ ವೀರ ಕರ್ಣನು ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ಕಟವಾಯಿಯನ್ನು ನೆಕ್ಕತೊಡಗಿದನು. ಆಗ ಕರ್ಣನು ಭೀಮಸೇನನನ್ನು ಕೊಲ್ಲಲು ಇಂದ್ರನು ವಜ್ರವನ್ನು ಹೇಗೋ ಹಾಗೆ ಸರ್ವ ದೇಹಗಳನ್ನೂ ಭೇದಿಸಬಲ್ಲ ಶರವನ್ನು ಬಲವಾಗಿ ಪ್ರಯೋಗಿಸಿದನು.
ರಣದಲ್ಲಿ ಸೂತಪುತ್ರನ ಧನುಸ್ಸಿನಿಂದ ಹೊರಟ ಚಿತ್ರಪುಂಖವುಳ್ಳ ಶಿಲೀಮುಖ ಬಾಣವು ಪಾರ್ಥ ಭೀಮನನ್ನು ಭೇದಿಸಿ ಭೂಮಿಯನ್ನು ಅಗೆದು ಹೊಕ್ಕಿತು. ಆಗ ಒಂದು ಕ್ಷಣವೂ ವಿಚಾರಿಸದೇ ಭೀಮನು ಪೂರ್ಣವಾಗಿ ನಾಲ್ಕು ಕಿಷ್ಕು ಉದ್ದವಿರುವ ಆರು ಕಡೆಗಳಲ್ಲಿ ಮೊನಚಾಗಿರುವ, ಬಂಗಾರದ ಹಿಡಿಯುಳ್ಳ ಭಾರವಾದ ಗದೆಯನ್ನು ಸೂತಪುತ್ರನ ಮೇಲೆ ಎಸೆದನು. ಕ್ರುದ್ಧನಾದ ಇಂದ್ರನು ವಜ್ರದಿಂದ ಅಸುರರನ್ನು ಹೇಗೋ ಹಾಗೆ ಭಾರತ ಭೀಮನು ಆ ಗದೆಯಿಂದ ಆಧಿರಥ ಕರ್ಣನ ಉತ್ತಮ ಕುದುರೆಗಳನ್ನು ಸಂಹರಿಸಿದನು. ಆಗ ಮಹಾಬಾಹು ಭೀಮನು ಎರಡು ಕ್ಷುರಗಳಿಂದ ಆದಿರಥಿಯ ಧ್ವಜವನ್ನು ಕತ್ತರಿಸಿ ಸೂತನನ್ನು ಸಂಹರಿಸಿದನು. ಕುದುರೆ-ಸಾರಥಿಗಳು ಹತರಾಗಿದ್ದ, ಧ್ವಜವೂ ಬಿದ್ದುಹೋಗಿದ್ದ ಆ ರಥವನ್ನು ಬಿಟ್ಟು ಕರ್ಣನು ಧನುಸ್ಸನ್ನು ಟೇಂಕರಿಸಿ ದುಃಖದಿಂದ ನಿಂತುಬಿಟ್ಟನು. ಅಲ್ಲಿ ನಾವು ವಿರಥನಾಗಿದ್ದರೂ ಶತ್ರುವನ್ನು ತಡೆದು ಎದುರಿಸಿದ ರಥಿಗಳಲ್ಲಿ ಶ್ರೇಷ್ಠ ರಾಧೇಯನ ಪರಾಕ್ರಮವನ್ನು ನೋಡಿದೆವು. ಆಹವದಲ್ಲಿ ವಿರಥನಾಗಿರುವ ರಥಶ್ರೇಷ್ಠ ಆಧಿರಥಿಯನ್ನು ನೋಡಿದ ದುರ್ಯೋಧನನು ದುರ್ಮುಖನಿಗೆ ಹೇಳಿದನು: “ದುರ್ಮುಖ! ಇಗೋ ರಾಧೇಯನು ಭೀಮನಿಂದ ವಿರಥೀಕೃತನಾಗಿದ್ದಾನೆ. ಆ ನರಶ್ರೇಷ್ಠ ಮಹಾರಥನಿಗೆ ರಥವನ್ನು ಒದಗಿಸಿ ಕೊಡು!”
ದುರ್ಯೋಧನನ ಮಾತನ್ನು ಕೇಳಿ ದುರ್ಮುಖನು ತ್ವರೆಮಾಡಿ ಕರ್ಣನ ಬಳಿಸಾರಿ ಭೀಮನನ್ನು ಶರಗಳಿಂದ ಮುಚ್ಚಿದನು. ಸಂಗ್ರಾಮದಲ್ಲಿ ಸೂತಪುತ್ರನ ಸಹಾಯಕ್ಕೆಂದು ಬಂದ ದುರ್ಮುಖನನ್ನು ನೋಡಿ ವಾಯುಪುತ್ರನು ಹರ್ಷಗೊಂಡು ನಾಲಿಗೆಯಿಂದ ಕಟವಾಯಿಯನ್ನು ಸವರಿದನು. ಆಗ ಪಾಂಡವ ಭೀಮನು ಶಿಲೀಮುಖಗಳಿಂದ ಕರ್ಣನನ್ನು ತಡೆದು ಶೀಘ್ರದಲ್ಲಿಯೇ ರಥವನ್ನು ದುರ್ಮುಖನ ಕಡೆ ತಿರುಗಿಸಿದನು. ಅದೇ ಕ್ಷಣದಲ್ಲಿಯೇ ಭೀಮನು ಸುಂದರ ಪುಂಖಗಳುಳ್ಳ ಒಂಭತ್ತು ನತಪರ್ವ ಶರಗಳಿಂದ ದುರ್ಮುಖನನ್ನು ಯಮಕ್ಷಯಕ್ಕೆ ಕಳುಹಿಸಿಬಿಟ್ಟನು. ದುರ್ಮುಖನು ಹತನಾಗಲು ಆಧಿರಥಿಯು ಅವನ ರಥವನ್ನೇರಿ ಸೂರ್ಯನಂತೆ ಬೆಳಗುತ್ತಾ ಪ್ರಕಾಶಿಸಿದನು. ಕವಚವು ಒಡೆದು ರಕ್ತದಲ್ಲಿ ತೋಯ್ದು ಮಲಗಿದ್ದ ದುರ್ಮುಖನನ್ನು ನೋಡಿ ಕರ್ಣನು ಕಣ್ಣಿರು ತುಂಬಿದವನಾಗಿ ಕ್ಷಣಕಾಲ ಯುದ್ಧವನ್ನೇ ಮಾಡಲಿಲ್ಲ. ಸತ್ತು ಬಿದ್ದಿರುವ ಅವನನ್ನು ಪ್ರದಕ್ಷಿಣೆ ಮಾಡಿ ಮುಂದುವರೆದು ವೀರ ಕರ್ಣನು ದೀರ್ಘವಾದ ಬಿಸಿ ನಿಟ್ಟುಸಿರನ್ನು ಬಿಟ್ಟನು. ಏನು ಮಾಡಬೇಕೆಂದೇ ಅವನಿಗೆ ತೋಚದಾಯಿತು. ಅದರ ಮಧ್ಯದಲ್ಲಿ ಭೀಮಸೇನನು ಸೂತಪುತ್ರನ ಮೇಲೆ ಹದ್ದಿನ ಗರಿಗಳುಳ್ಳ ಹದಿನಾಲ್ಕು ನಾರಾಚಗಳನ್ನು ಪ್ರಯೋಗಿಸಿದನು. ಆ ಬಣ್ಣದ ಸ್ವರ್ಣಪುಂಖಗಳ ಮಹೌಜಸ ರಕ್ತವನ್ನು ಕುಡಿಯುವ ಕಾಲಚೋದಿತ ಬಾಣಗಳು ಕ್ರುದ್ಧರಾದ ಸರ್ಪಗಳಂತೆ ಹತ್ತು ದಿಕ್ಕುಗಳನ್ನೂ ಬೆಳಗಿಸುತ್ತ ಸೂತಪುತ್ರ ಕರ್ಣನ ಕವಚವನ್ನು ಒಡೆದು ಅವನ ರಕ್ತವನ್ನು ಕುಡಿದು ಭೂಮಿಯನ್ನು ಕೊರೆದು ಒಳಹೊಕ್ಕಿದವು. ಆ ಮಾರ್ಗಣಗಳು ಬಿಲವನ್ನು ಅರ್ಧವೇ ಪ್ರವೇಶಿಸಿದ ಕ್ರುದ್ಧ ಮಹಾಸರ್ಪಗಳಂತೆ ಕಂಡವು.
ಅದಕ್ಕೆ ಪ್ರತಿಯಾಗಿ ರಾಧೇಯನು ಏನೂಂದನ್ನೂ ವಿಚಾರಿಸದೇ ಬಂಗಾರದಿಂದ ವಿಭೂಷಿತವಾದ ಹದಿನಾಲ್ಕು ಉಗ್ರ ನಾರಾಚಗಳಿಂದ ಭೀಮನನ್ನು ಹೊಡೆದನು. ಆ ಭಯಂಕರ ಪತ್ರಿಗಳು ಭೀಮಸೇನನ ಬಲಭುಜವನ್ನು ಸೀಳಿ ಕ್ರೌಂಚ ಪಕ್ಷಿಗಳು ವೃಕ್ಷಸಮೂಹಗಳನ್ನು ಹೊಗುವಂತೆ ಮೇದಿನಿಯನ್ನು ಪ್ರವೇಶಿಸಿದವು. ವಸುಂಧರೆಯನ್ನು ಪ್ರವೇಶಿಸಿದ ಆ ನಾರಾಚಗಳು ಅಸ್ತಗಿರಿಯನ್ನು ಸೇರುವ ದಿನಕರನ ಕಿರಣಗಳಂತೆ ಬೆಳಗಿ ರಾರಾಜಿಸಿದವು. ಆ ಮರ್ಮಭೇದಿ ನಾರಾಚಗಳಿಂದ ಗಾಯಗೊಂಡ ಭೀಮನು ರಣದಲ್ಲಿ ಪರ್ವತವು ನದಿಯನ್ನು ಸುರಿಸುವಂತೆ ರಕ್ತವನ್ನು ಸುರಿಸಿದನು. ಆಗ ಭೀಮನು ಸೂತಪುತ್ರನನ್ನು ಗರುಡನ ವೇಗವುಳ್ಳ ಏಳು ಪತತ್ರಿಗಳಿಂದ ಮತ್ತು ಅವನ ಸಾರಥಿಯನ್ನು ಏಳರಿಂದ ಹೊಡೆದನು. ಭೀಮನ ಬಲದಿಂದ ಪೀಡಿತನಾದ ಮಹಾಯಶಸ್ವಿ ಕರ್ಣನು ವೇಗವಾಗಿ ಹೋಗುವ ಕುದುರೆಗಳೊಂದಿಗೆ ರಣವನ್ನು ತೊರೆದು ಹೊರಟುಹೋದನು. ಅತಿರಥ ಭೀಮಸೇನನಾದರೋ ಬಂಗಾರದಿಂದ ಮಾಡಲ್ಪಟ್ಟ ಧನುಸ್ಸನ್ನು ಟೇಂಕರಿಸಿ ಪ್ರಜ್ವಲಿಸುತ್ತಿರುವ ಹುತಾಶನನಂತೆ ರಣರಂಗದಲ್ಲಿ ನಿಂತುಬಿಟ್ಟನು.
ಭೀಮಸೇನನಿಂದ ಕರ್ಣನು ಸೋತುದನ್ನು ನೋಡಿ ಧೃತರಾಷ್ಟ್ರನ ಐವರು ಮಕ್ಕಳು ಸಹಿಸಿಕೊಳ್ಳಲಿಲ್ಲ. ಬಣ್ಣದ ಕವಚಗಳನ್ನು ಧರಿಸಿದ ದುರ್ಮರ್ಷಣ, ದುಃಸ್ಸಹ, ದುರ್ಮದ, ದುರ್ಧರ ಮತ್ತು ಜಯ ಇವರು ಬೆಳಗುತ್ತಿರುವ ಪಾಂಡವನನ್ನು ಆಕ್ರಮಣಿಸಿದರು. ಅವರು ಮಹಾಬಾಹು ವೃಕೋದರನನ್ನು ಎಲ್ಲಕಡೆಗಳಿಂದ ಸುತ್ತುವರೆದು ಹಾರಾಡುವ ಮಿಡಿತೆಗಳಂತಿರುವ ಶರಗಳಿಂದ ದಿಕ್ಕುಗಳನ್ನೇ ತುಂಬಿಬಿಟ್ಟರು. ಒಮ್ಮಿಂದೊಮ್ಮೆಲೇ ಮೇಲೆ ಎರಗಿದ ಆ ದೇವರೂಪೀ ಕುಮಾರರನ್ನು ಸಮರದಲ್ಲಿ ಭೀಮಸೇನನು ನಗುತ್ತಲೇ ಎದುರಿಸಿದನು. ಧೃತರಾಷ್ಟ್ರನ ಮಕ್ಕಳು ಭೀಮಸೇನನ ಸಮೀಪಹೋದುದನ್ನು ನೋಡಿ ರಾಧೇಯನು ಭೀಮಸೇನನನ್ನು ಪುನಃ ಆಕ್ರಮಣಿಸಿದನು. ಸ್ವರ್ಣಪುಂಖಗಳ ಶಿಲಾಶಿತ ವಿಶಿಖಗಳನ್ನು ಬಿಡುತ್ತಾ ಅವನು ಧೃತರಾಷ್ಟ್ರನ ಮಕ್ಕಳು ತಡೆಯುತ್ತಿದ್ದ ಭೀಮಸೇನನನ್ನು ಬೇಗನೆ ಆಕ್ರಮಣಿಸಿದನು. ಆಗ ಕುರುಗಳು ಕರ್ಣನನ್ನು ಎಲ್ಲಕಡೆಗಳಿಂದ ಸುತ್ತುವರೆದು ಭೀಮಸೇನನನ್ನು ಸನ್ನತಪರ್ವ ಶರಗಳಿಂದ ಮುಚ್ಚಿದರು. ಭೀಮಧನುಷೀ ಭೀಮನು ಇಪ್ಪತ್ತೈದು ಬಾಣಗಳಿಂದ ಆ ನರರ್ಷಭರನ್ನು ಅವರ ಕುದುರೆ-ಸಾರಥಿಯರೊಂದಿಗೆ ಯಮಲೋಕಕ್ಕೆ ಕಳುಹಿಸಿದನು. ರಥದ ಮೇಲಿಂದ ಅಸುನೀಗಿ ಅವರು ಸೂತರೊಂದಿಗೆ ರಥದ ಮೇಲಿಂದ ಬೀಳುವಾಗ ಅವರು ಬಣ್ಣ ಬಣ್ಣದ ಹೂಗಳು ತುಂಬಿದ್ದ ಮಹಾವೃಕ್ಷವು ಭಿರುಗಾಳಿಗೆ ತುಂಡಾಗಿ ಬಿದ್ದಂತೆ ತೋರಿದರು.
ಅಧಿರಥಿ ಕರ್ಣನ ಸುತ್ತಲೂ ಇದ್ದ ಧಾರ್ತರಾಷ್ಟ್ರರನ್ನು ಸಂಹರಿಸಿದ ಭೀಮಸೇನನ ವಿಕ್ರಮವನ್ನು ಅಮೋಘವಾಗಿತ್ತು. ಭೀಮನ ನಿಶಿತ ಬಾಣಗಳಿಂದ ಎಲ್ಲ ಕಡೆಗಳಿಂದಲೂ ತಡೆಯಲ್ಪಟ್ಟ ಸೂತಪುತ್ರನು ಭೀಮಸೇನನನ್ನು ನೋಡುತ್ತ ನಿಂತುಬಿಟ್ಟನು. ಭೀಮಸೇನನೂ ಕೂಡ ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ಮಹಾ ಚಾಪವನ್ನು ಮತ್ತೆ ಮತ್ತೆ ಟೇಂಕರಿಸುತ್ತಾ ಕರ್ಣನನ್ನು ದುರುಗುಟ್ಟಿ ನೋಡಿದನು.
ಧಾರ್ತರಾಷ್ಟ್ರರು ಬಿದ್ದಿರುವುದನ್ನು ನೋಡಿ ಪ್ರತಾಪವಾನ ಕರ್ಣನು ಮಹಾ ಕ್ರೋಧದಿಂದ ಆವಿಷ್ಟನಾದನು ಮತ್ತು ತನ್ನ ಜೀವನದಲ್ಲಿಯೇ ಜಿಗುಪ್ಸೆತಾಳಿದನು. ಆಗ ಅಧಿರಥನು ತಾನೇ ತಪ್ಪಿತಸ್ಥನು ಎಂದು ಕೊಂಡನು. ಅನಂತರ ಕ್ರುದ್ಧನಾಗಿ ಉತ್ತೇಜದಿಂದ ಭೀಮಸೇನನನ್ನು ಆಕ್ರಮಣಿಸಿದನು. ರಾಧೇಯನು ನಗುತ್ತಾ ಭೀಮನನ್ನು ಐದರಿಂದ ಹೊಡೆದು ಪುನಃ ಏಳು ಸ್ವರ್ಣಪುಂಖ ಶಿಲಾಶಿತಬಾಣಗಳಿಂದ ಹೊಡೆದನು. ಅವನ ಆ ಅವಹೇಳನವನ್ನು ಪಾರ್ಥ ವೃಕೋದರನು ಸಹಿಸಿಕೊಳ್ಳಲಿಲ್ಲ. ಅವನು ರಾಧೇಯನನ್ನು ನೂರು ನತಪರ್ವಗಳಿಂದ ಹೊಡೆದನು. ಪುನಃ ಅವನು ಐದು ತೀಕ್ಷ್ಣವಾದ ವಿಶಿಖ ಆಶುಶುಗಗಳಿಂದ ಹೊಡೆದು ಭಲ್ಲದಿಂದ ಸೂತಪುತ್ರನ ಬಿಲ್ಲನ್ನು ಕತ್ತರಿಸಿದನು. ಆಗ ದುಃಖಿತನಾದ ಕರ್ಣನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಬಾಣಗಳಿಂದ ಭೀಮಸೇನನನ್ನು ಎಲ್ಲ ಕಡೆಗಳಿಂದ ಮುಚ್ಚಿದನು. ಭೀಮನು ಅವನ ಕುದುರೆಗಳನ್ನು ಕೊಂದು, ಸಾರಥಿಯನ್ನೂ ಸಂಹರಿಸಿ ಮಾಡಿದುದಕ್ಕೆ ಪ್ರತೀಕಾರ ಮಾಡಿದನೆಂದು ಅಟ್ಟಹಾಸದ ನಗುವನ್ನು ನಕ್ಕನು. ಭೀಮನು ಬಾಣಗಳಿಂದ ಕರ್ಣನ ಧನುಸ್ಸನ್ನು ಕತ್ತರಿಸಲು ಆ ಸ್ವರ್ಣದ ಹಿಡಿಯಿದ್ದ, ಜೋರಾಗಿ ಟೇಂಕರಿಸುತ್ತಿದ್ದ ಬಿಲ್ಲು ಕೆಳಕೆ ಬಿದ್ದಿತು. ಆಗ ಮಹಾರಥಿ ಕರ್ಣನು ರಥದಿಂದ ಇಳಿದು ಸಮರದಲ್ಲಿ ಗದೆಯನ್ನು ಹಿಡಿದು ಭೀಮಸೇನನ ಮೇಲೆ ಎಸೆದನು. ಮೇಲಿಂದ ಬೀಳುತ್ತಿದ್ದ ಆ ಗದೆಯನ್ನು ನೋಡಿ ಕೂಡಲೇ ವೃಕೋದರನು ಸರ್ವಸೇನೆಗಳೂ ನೋಡುತ್ತಿರುವಂತೆಯೇ ಶರಗಳಿಂದ ಅದನ್ನು ತಡೆದನು. ಆಗ ಪರಾಕ್ರಮೀ ಪಾಂಡವನು ಸೂತಪುತ್ರನ ವಧೆಯನ್ನು ಬಯಸಿ ತ್ವರೆಮಾಡಿ ಸಹಸ್ರಾರು ಬಾಣಗಳನ್ನು ಪ್ರಯೋಗಿಸಿದನು. ಮಹಾರಣದಲ್ಲಿ ಆ ಬಾಣಗಳನ್ನು ಬಾಣಗಳಿಂದಲೇ ತಡೆದು ಕರ್ಣನು ಸಾಯಕಗಳಿಂದ ಭೀಮಸೇನನ ಕವಚವನ್ನು ಬೀಳಿಸಿದನು. ಇಪ್ಪತ್ತೈದು ಕ್ಷುದ್ರಕ ಬಾಣಗಳನ್ನೂ ಅವನ ಮೇಲೆ ಪ್ರಯೋಗಿಸಿದನು. ನೋಡುತ್ತಿರುವ ಸರ್ವಭೂತಗಳಿಗೂ ಅದೊಂದು ಅದ್ಭುತವೆನಿಸಿತು. ಆಗ ಕ್ರುದ್ಧ ಭೀಮನು ಒಂಭತ್ತು ನತಪರ್ವಗಳನ್ನು ಸೂತಪುತ್ರನ ಮೇಲೆ ಪ್ರಯೋಗಿಸಿದನು.
ಆ ತೀಕ್ಷ್ಣ ಬಾಣಗಳು ಅವನ ಕವಚವನ್ನು ಮತ್ತು ಬಲ ಬಾಹುವನ್ನು ಸೀಳಿ ಹಾವುಗಳು ಹುತ್ತವನ್ನು ಹೊಗುವಂತೆ ನೆಲವನ್ನು ಹೊಕ್ಕವು. ರಾಧೇಯನು ಭೀಮಸೇನನಿಂದ ಗಾಬರಿಗೊಂಡು ನೆಲದಮೇಲೆ ನಿಂತಿರುವುದನ್ನು ನೋಡಿ ದುರ್ಯೋಧನನು “ಎಲ್ಲರೂ ರಾಧೇಯನ ರಥದ ಕಡೆ ತ್ವರೆಮಾಡಿ!” ಎಂದು ಹೇಳಿದನು. ಅಣ್ಣನ ಮಾತನ್ನು ಕೇಳಿದ ಧಾರ್ತರಾಷ್ಟ್ರರು - ಚಿತ್ರ, ಉಪಚಿತ್ರ, ಚಿತ್ರಾಕ್ಷ, ಚಾರುಚಿತ್ರ, ಶರಾಸನ, ಚಿತ್ರಾಯುಧ ಮತ್ತು ಚಿತ್ರವರ್ಮ – ಇವರು ನಿಶಿತ ಶರಗಳನ್ನು ಪ್ರಯೋಗಿಸುತ್ತಾ ಪಾಂಡವನನ್ನು ಆಕ್ರಮಣಿಸಿದರು. ಭೀಮನು ಬರುತ್ತಿರುವ ಅವರನ್ನು ಕೂಡಲೇ ಕುದುರೆಗಳು, ಸೂತರು ಮತ್ತು ಧ್ವಜಗಳೊಂದಿಗೆ ಉರುಳಿಸಿದನು. ಭಿರುಗಾಳಿಗೆ ಸಿಲುಕಿದ ಮರಗಳಂತೆ ಅವರು ಹತರಾಗಿ ನೆಲದ ಮೇಲೆ ಬಿದ್ದರು. ಮಹಾರಥ ಧಾರ್ತರಾಷ್ಟ್ರರು ಹತರಾದುದನ್ನು ಕಂಡು ಕರ್ಣನು ಕಣ್ಣೀರುತುಂಬಿದವನಾಗಿ ಶೋಕಭರಿತನಾದನು. ಆ ಪರಾಕ್ರಮಿಯು ವಿಧಿವತ್ತಾಗಿ ಸಜ್ಜುಗೊಳಿಸಿದ್ದ ಇನ್ನೊಂದು ರಥವನ್ನೇರಿ ಯುದ್ಧದಲ್ಲಿ ತ್ವರೆಮಾಡುತ್ತಾ ಪುನಃ ಪಾಂಡವ ಭೀಮನನ್ನು ಎದುರಿಸಿದನು.
ಅನ್ಯೋನ್ಯರನ್ನು ಸ್ವರ್ಣಪುಂಖಗಳ ಶಿಲಾಶಿತ ಶರಗಳಿಂದ ಹೊಡೆದು ಗಾಯಗೊಳಿಸಿದ ಅವರು ಹೂಬಿಟ್ಟ ಕಿಂಶುಕ ವೃಕ್ಷಗಳಂತೆ ಕಂಗೊಳಿಸಿದರು. ಆಗ ಪಾಂಡವನು ಕ್ರುದ್ಧನಾಗಿ ತಿಗ್ಮತೇಜಸ್ಸಿನಿಂದ ಕೂಡಿದ ನಿಶಿತವಾದ ಮೂವತ್ತಾರು ಭಲ್ಲಗಳಿಂದ ಸೂತಪುತ್ರನ ಕವಚವನ್ನು ತುಂಡರಿಸಿದನು. ರಕ್ತ-ಚಂದನಗಳಿಂದ ಲೇಪಿತಗೊಂಡ, ಶರಗಳಿಂದ ತುಂಬಾ ಗಾಯಮಾಡಿಕೊಂಡು ಕೆಂಪಾಗಿದ್ದ ಅವರಿಬ್ಬರೂ ಉದಯಿಸುತ್ತಿರುವ ಪ್ರಳಯಕಾಲದ ಸೂರ್ಯರಂತೆ ರಾರಾಜಿಸಿದರು. ರಕ್ತದಿಂದ ಅಂಗಾಂಗಳು ತೋಯ್ದುಹೋಗಿದ್ದ, ಶರಗಳು ತಾಗಿ ಚರ್ಮವು ಹರಿದುಹೋಗಿದ್ದ, ಕವಚಗಳನ್ನು ಕಳೆದುಕೊಂಡಿದ್ದ ಅವರಿಬ್ಬರು ಪೊರೆಬಿಟ್ಟ ಸರ್ಪಗಳಂತೆ ರಾಜಿಸುತ್ತಿದ್ದರು. ಹುಲಿಗಳು ತಮ್ಮ ಕೋರೆದಾಡೆಗಳಿಂದ ಪರಸ್ಪರರನ್ನು ಗಾಯಗೊಳಿಸುವಂತೆ ಆ ಇಬ್ಬರು ಅರಿಂದಮ ನರವ್ಯಾಘ್ರರು ಶರಗಳೆಂಬ ತಮ್ಮ ಹಲ್ಲುಗಳಿಂದ ಪರೆದಾಡಿಕೊಂಡು ಗಾಯಮಾಡಿದರು. ರಂಗಮಧ್ಯದಲ್ಲಿ ತಮ್ಮ ದಂತಗಳಿಂದ ತಿವಿದು ಕಾದಾಡುತ್ತಿರುವ ಆನೆಗಳಂತೆ ಆ ಇಬ್ಬರು ಮತ್ತವಾರಣವಿಕ್ರಮಿಗಳು ತೀಕ್ಷ್ಣ ವಿಶಿಖಗಳಿಂದ ಕಾದಾಡಿ ವಿರಾಜಿಸಿದರು. ಸಮರದಲ್ಲಿ ಪರಸ್ಪರರನ್ನು ಶರಜಾಲಗಳಿಂದ ಮುಚ್ಚಿಬಿಡುತ್ತಾ, ಗರ್ಜಿಸುತ್ತಾ ಅವರಿಬ್ಬರೂ ರಥಗಳೆರಡರಲ್ಲಿ ಎಲ್ಲ ದಿಕ್ಕುಗಳಲ್ಲಿಯೂ ಸಂಚರಿಸುತ್ತಿದ್ದರು. ಮಂಡಲಾಕಾರದಲ್ಲಿ ಆ ಎರಡು ರಥಗಳೂ ತಿರುಗುತ್ತಿರಲು ಅವರಿಬ್ಬರು ಮಹಾತ್ಮರೂ ವೃತ-ವಜ್ರಧರರಂತೆ ರಾರಾಜಿಸಿದರು. ಹಸ್ತಾಭರಣಗಳಿಂದ ಯುಕ್ತವಾದ ಎರಡೂ ಭುಜಗಳಿಂದ ಧನುಸ್ಸನ್ನು ಸೆಳೆಯುತ್ತಿದ್ದ ಭೀಮನು ರಣದಲ್ಲಿ ಮಿಂಚಿನಿಂದ ಕೂಡಿದ ಮೋಡದಂತೆ ಪ್ರಕಾಶಿಸಿದನು. ಗುಡುಗುತ್ತಿರುವ ಮಳೆಸುರಿಸುವ ಮಹಾ ಮೋಡದಂತೆ ಚಾಪಘೋಷಯುಕ್ತನಾದ ಭೀಮನೆಂಬ ಮೇಘವು ಕರ್ಣವೆಂಬ ಪರ್ವತವನ್ನೇ ಮುಸುಕಿ ಹಾಕಿತು. ಆಗ ಧನುಸ್ಸಿನಿಂದ ಬಿಟ್ಟ ಸಹಸ್ರ ಬಾಣಗಳಿಂದ ಪಾಂಡವನು ಕರ್ಣನನ್ನು ಮೋಡವು ಪರ್ವತವನ್ನು ಮಳೆಯಿಂದ ಹೇಗೋ ಹಾಗೆ ಮುಚ್ಚಿಬಿಟ್ಟನು. ಪುಂಖಗಳಿರುವ ಕಂಕವಾಸ ಶರಗಳಿಂದ ಕರ್ಣನನ್ನು ಮುಸುಕಿಹಾಕಿದ ಭೀಮಸೇನನ ವಿಕ್ರಮವನ್ನು ಎಲ್ಲರೂ ನೋಡುತ್ತಿದ್ದರು. ಕರ್ಣನೊಡನೆ ಯುದ್ಧಮಾಡಿ ಭೀಮನು ರಣದಲ್ಲಿ ಅರ್ಜುನ ಮತ್ತು ಕೇಶವನಿಗೂ, ಸಾತ್ಯಕಿಗೂ, ಚಕ್ರರಕ್ಷಕರಿಗೂ ಆನಂದವನ್ನುಂಟುಮಾಡಿದನು. ಪಾಂಡವ ಭೀಮನ ವಿಕ್ರಮವನ್ನೂ, ಭುಜಗಳ ವೀರ್ಯವನ್ನೂ, ಧೈರ್ಯವನ್ನೂ ಧಾರ್ತರಾಷ್ಟ್ರರು ತಾವೇ ನೋಡಿ ಅರ್ಥಮಾಡಿಕೊಂಡರು.
ಭೀಮಸೇನನ ಮೌರ್ವಿಯ ಟೇಂಕಾರಶಬ್ಧವನ್ನು ಕೇಳಿ ರಾಧೇಯನು ಮದಿಸಿದ ಆನೆಯು ಎದುರಾಳಿ ಸಲಗದ ಘೀಂಕಾರವನ್ನು ಹೇಗೋ ಹಾಗೆ ಸಹಿಸಿಕೊಳ್ಳಲಿಲ್ಲ. ಮುಹೂರ್ತಕಾಲ ಆಧಿರಥನು ಭೀಮಸೇನನ ಬಾಣಗಳ ದೃಷ್ಟಿಗೆ ದೂರದಲ್ಲಿಯೇ ಇದ್ದು ಭೀಮಸೇನನಿಂದ ನಿಹತರಾಗಿ ರಥದಿಂದ ಬಿದ್ದಿದ್ದ ಧಾರ್ತರಾಷ್ಟ್ರರನ್ನು ನೋಡಿ ವಿಮನಸ್ಕನೂ ದುಃಖಿತನೂ ಆದನು. ದೀರ್ಘವಾದ ಬಿಸಿ ನಿಟ್ಟುಸಿರನ್ನು ಬಿಡುತ್ತಾ ಪುನಃ ಪಾಂಡವ ಭೀಮನನ್ನು ಆಕ್ರಮಣಿಸಿದನು. ಕ್ರೋಧದಿಂದ ರಕ್ತಾಕ್ಷನಾದ ಕರ್ಣನು ಘಸರ್ಪದಂತೆ ಭುಸುಗುಟ್ಟುತ್ತಾ ಶರಗಳನ್ನು ಪ್ರಯೋಗಿಸುತ್ತಿದ್ದ ಕರ್ಣನು ಕಿರಣಗಳನ್ನು ಸೂಸುವ ಭಾಸ್ಕರನಂತೆ ಪ್ರಕಾಶಿಸಿದನು. ಸೂರ್ಯನ ಕಿರಣಗಳ ಜಾಲಗಳಿಂದ ಪರ್ವತವು ಆಚ್ಛಾದಿದವಾಗುವಂತೆ ಕರ್ಣನ ಚಾಪದಿಂದ ಹೊರಟ ಬಾಣಗಳಿಂದ ವೃಕೋದರನು ಆಚ್ಛಾದಿತನಾದನು. ಕರ್ಣನ ಚಾಪದಿಂದ ಹೊರಟ ಬಣ್ಣದ ನವಿಲುಗರಿಗಳನ್ನು ಹೊಂದಿರುವ ಶರಗಳು ಪಕ್ಷಿಗಳು ವೃಕ್ಷವನ್ನು ಹೊಗುವಂತೆ ಪಾರ್ಥನನ್ನು ಎಲ್ಲಕಡೆಗಳಿಂದ ಪ್ರವೇಶಿಸಿದವು. ಕರ್ಣನ ಚಾಪದಿಂದ ಹೊರಟ ರುಕ್ಮಪುಂಖ ಬಾಣಗಳು ಅಲ್ಲಿಂದ ಇಲ್ಲಿಗೆ ಹಾರಾಡುತ್ತಿದ್ದ ಹಂಸಗಳ ಸಾಲಿನಂತೆ ವಿರಾಜಿಸಿದವು. ಆಧಿರಥನ ಶರಗಳು ಧನುಸ್ಸು, ಧ್ವಜ, ಇತರ ಸಾಮಗ್ರಿಗಳು, ಚತ್ರ, ಈಷಾದಂಡ, ಮೂಕಿ, ನೊಗ ಇವುಗಳಿಂದಲೂ ಬರುತ್ತಿವೆಯೋ ಎಂಬಂತೆ ಕಾಣುತ್ತಿದ್ದವು. ಆಧಿರಥಿಯು ರಣಹದ್ದಿನ ರೆಕ್ಕೆಗಳನ್ನು ಹೊಂದಿದ್ದ ಸುವರ್ಣದಿಂದ ಚಿತ್ರಿತವಾದ ಮಹಾವೇಗಯುಕ್ತವಾದ, ಆಕಾಶಗಾಮೀ ಬಾಣಗಳಿಂದ ಆಕಾಶವನ್ನೇ ತುಂಬಿಸಿ ಪ್ರಯೋಗಿಸಿದನು. ಅಂತಕನಂತೆ ಮೇಲೆ ಬೀಳುತ್ತಿದ್ದ ಕರ್ಣನನ್ನು ವೃಕೋದರನು ಪ್ರಾಣಗಳನ್ನೂ ಕಡೆಗಣಿಸಿ ಕ್ರೋಧದಿಂದ ಒಂಭತ್ತು ಶರಗಳಿಂದ ಹೊಡೆದನು. ಕರ್ಣನ ವೇಗವು ಅಸಹನೀಯವಾದುದೆಂದು ನೋಡಿದ ವೀರ್ಯವಾನ್ ಪಾಂಡವನು ಮಹತ್ತರವಾದ ಅನ್ಯ ಶರೌಘಗಳಿಂದ ಅವನ ಶರಗಳನ್ನು ನಿರಸನಗೊಳಿಸಿದನು. ಆಗ ಆಧಿರಥ ಕರ್ಣನ ಶರಜಾಲಗಳನ್ನು ದ್ವಂಸಮಾಡಿ ಪಾಂಡವನು ಪುನಃ ಅನ್ಯ ಇಪ್ಪತ್ತು ನಿಶಿತ ಶರಗಳಿಂದ ಕರ್ಣನನ್ನು ಹೊಡೆದನು. ಸೂತಪುತ್ರನ ಶರಗಳಿಂದ ಹೇಗೆ ಭೀಮನು ಮುಚ್ಚಲ್ಪಟ್ಟಿದ್ದನೋ ಅದೇ ರೀತಿಯಲ್ಲಿ ಪಾಂಡವನು ಕರ್ಣನನ್ನು ಮುಚ್ಚಿದನು. ಯುದ್ದದಲ್ಲಿ ಭೀಮಸೇನನ ವಿಕ್ರಮವನ್ನು ನೋಡಿ ನಿನ್ನವರು ಆನಂದಿತರಾದರು ಮತ್ತು ಚಾರಣರು ಹರ್ಷಿತರಾದರು.
ಕುರುಪಾಂಡವರ ಹತ್ತು ಪ್ರವರ ಮಹಾರಥರು - ಭೂರಿಶ್ರವ, ಕೃಪ, ದ್ರೌಣಿ, ಮದ್ರರಾಜ, ಜಯದ್ರಥ, ಉತ್ತಮೌಜ, ಯುಧಾಮನ್ಯು, ಸಾತ್ಯಕಿ ಮತ್ತು ಕೇಶವ-ಅರ್ಜುನರು - ವೇಗದಿಂದ “ಸಾಧು! ಸಾಧು!” ಎಂದು ಸಿಂಹನಾದಗೈದರು. ರೋಮಾಂಚಕಾರಿ ಆ ತುಮುಲ ಶಬ್ಧವು ಹುಟ್ಟಿಕೊಳ್ಳಲು ದುರ್ಯೋಧನನು ಸಹೋದರರಿಗೆ ತ್ವರೆಮಾಡಿ ಹೇಳಿದನು: “ರಾಜರು, ರಾಜಪುತ್ರರು ಮತ್ತು ವಿಶೇಷವಾಗಿ ಸೋದರರು ಕರ್ಣನಲ್ಲಿಗೆ ಹೋಗಿ ವೃಕೋದರನಿಂದ ಅವನನ್ನು ರಕ್ಷಿಸಿ. ನಿಮಗೆ ಮಂಗಳವಾಗಲಿ! ಭೀಮಸೇನನ ಚಾಪದಿಂದ ಹೊರಟ ಶರಗಳು ರಾಧೇಯನನ್ನು ಸಂಹರಿಸುವ ಮೊದಲೇ ಸೂತಪುತ್ರನ ರಕ್ಷಣೆಗೆ ಪ್ರಯತ್ನಿಸಿ!”
ದುರ್ಯೋಧನನಿಂದ ಆದೇಶಪಡೆದ ಏಳು ಸಹೋದರರು ಸಂರಬ್ಧರಾಗಿ ಭೀಮಸೇನನನ್ನು ಸುತ್ತುವರೆದು ಆಕ್ರಮಣಿಸಿದರು. ಅವರು ಕೌಂತೇಯನನ್ನು ಎದುರಿಸಿ ಮೋಡಗಳು ಪರ್ವತವನ್ನು ಮಳೆಯ ನೀರಿನಿಂದ ಮುಚ್ಚಿಬಿಡುವಂತೆ ಶರವೃಷ್ಟಿಗಳಿಂದ ಅವನನ್ನು ಮುಚ್ಚಿದರು. ಪ್ರಜಾಸಂಹರಣಕಾಲದಲ್ಲಿ ಏಳು ಗ್ರಹಗಳು ಸೇರಿಕೊಂಡು ಚಂದ್ರನನ್ನು ಕಾಡುವಂತೆ ಕ್ರುದ್ಧರಾದ ಆ ಏಳು ಮಹಾರಥರು ಭೀಮಸೇನನನ್ನು ಪೀಡಿಸಿದರು. ಆಗ ಭೀಮಸೇನನು ಎಡ ಮುಷ್ಟಿಯಿಂದ ಸುಪರಿಷ್ಕೃತವಾದ ಧನುಸ್ಸನ್ನು ದೃಢವಾಗಿ ಮೀಟಿ, ಅವರು ಸಾಮಾನ್ಯ ಮನುಷ್ಯರೆಂದೇ ತಿಳಿದುಕೊಂಡು, ಹಿಂದಿನ ವೈರವನ್ನು ಸ್ಮರಿಸಿಕೊಂಡು, ಏಳು ಸಾಯಕಗಳನ್ನು ಹೂಡಿ ಸೂರ್ಯನ ಕಿರಣಗಳಂತೆ ಪ್ರಕಾಶಿಸುತ್ತಿರುವ ಅವುಗಳನ್ನು ಧೃತರಾಷ್ಟ್ರನ ಪುತ್ರರ ದೇಹದಿಂದ ಪ್ರಾಣಗಳನ್ನು ಹೀರುತ್ತಿರುವನೋ ಎಂಬಂತೆ ಅವರ ಮೇಲೆ ಪ್ರಯೋಗಿಸಿದನು. ಭೀಮಸೇನನು ಎಸೆದ ಆ ಸ್ವರ್ಣಪುಂಖ ಶಿಲಾಶಿತ ಬಾಣಗಳು ಆ ಭಾರತರನ್ನು ಭೇದಿಸಿ ಆಕಾಶಕ್ಕೆ ಹಾರಿದವು. ಅವರ ಚೇತನಗಳನ್ನು ಸೀಳಿದ ಆ ಹೇಮವಿಭೂಷಿತ ಶರಗಳು ಪಕ್ಷಿ ಗರುಡನಂತೆ ರಾಜಿಸಿದವು. ಆ ಏಳು ಸುವರ್ಣಭೂಷಿತ ಬಾಣಗಳು ಧೃತರಾಷ್ಟ್ರನ ಪುತ್ರರ ರಕ್ತವನ್ನು ಕುಡಿದು ಹೊರಬಂದು ರಕ್ತದಿಂದ ಲೇಪಿತವಾದ ಅಗ್ರಭಾಗ-ರೆಕ್ಕೆಗಳಿಂದ ಪ್ರಕಾಶಿಸಿದವು. ಪರ್ವತದ ತಪ್ಪಲು ಪ್ರದೇಶದಲ್ಲಿದ್ದ ಮಹಾವೃಕ್ಷಗಳು ಆನೆಗಳಿಂದ ಮುರಿದು ಬೀಳುವಂತೆ ಆ ಶರಗಳಿಂದ ಕವಚಗಳು ಒಡೆದು ಧೃತರಾಷ್ಟ್ರನ ಆ ಮಕ್ಕಳು ರಥದಿಂದ ಉರುಳಿ ಭೂಮಿಯಮೇಲೆ ಬಿದ್ದರು. ಶತ್ರುಂಜಯ, ಶತ್ರುಸಹ, ಚಿತ್ರ, ಚಿತ್ರಾಯುಧ, ದೃಢ, ಚಿತ್ರಸೇನ, ವಿಕರ್ಣ – ಈ ಏಳುಮಂದಿ ಕೆಳಗುರುಳಿದರು.
ರಾಧೇಯನು ನೋಡುತ್ತಿದ್ದಂತೆಯೇ ಅವರನ್ನು ಸಂಹರಿಸಿದ ಪಾಂಡುನಂದನನು ಘೋರವಾಗಿ ಸಿಂಹನಾದಗೈದನು. ಶೂರನಾದ ಅವನ ಆ ಕೂಗು ಯುದ್ಧದಲ್ಲಿ ಅವನು ಗಳಿಸಿರುವ ತನ್ಮೂಲಕವಾಗಿ ತನಗೂ ದೊರಕಿರುವ ಮಹಾ ವಿಜಯವನ್ನು ಧರ್ಮರಾಜನಿಗೆ ಸೂಚಿಸಿತು. ಧನ್ವಿ ಭೀಮಸೇನನ ಆ ಸುಮಹಾನಾದವನ್ನು ಕೇಳಿ ರಣದಲ್ಲಿದ್ದ ಧರ್ಮರಾಜನಿಗೆ ಮಹದಾನಂದವುಂಟಾಯಿತು. ಆಗ ಹೃಷ್ಟನಾದ ಯುಧಿಷ್ಠಿರನು ಎಲ್ಲಕಡೆ ರಣವಾದ್ಯ ಘೋಷಗಳನ್ನು ಮೊಳಗಿಸಿ ಭೀಮಸೇನನ ಸಿಂಹನಾದವನ್ನು ಪ್ರತಿಗ್ರಹಿಸಿದನು. ತಾನು ಮಹಾ ಸಂತೋಷಗೊಂಡಿದ್ದೇನೆ ಎಂದು ವೃಕೋದರನಿಗೆ ಸಂಜ್ಞೆಯನ್ನಿತ್ತು ಧರ್ಮರಾಜನು ಸಮರದಲ್ಲಿ ಶಸ್ತ್ರಭೃತರಲ್ಲಿ ಶ್ರೇಷ್ಠನಾದ ದ್ರೋಣನನ್ನು ಎದುರಿಸಿದನು.
ಧೃತರಾಷ್ಟ್ರನ ಮೂವತ್ತೊಂದು ಮಹಾರಥ ಪುತ್ರರು ಹತರಾದುದನ್ನು ನೋಡಿ ದುರ್ಯೋಧನನು ಕ್ಷತ್ತ ವಿದುರನ ಆ ಮಾತುಗಳನ್ನು ನೆನಪಿಸಿಕೊಂಡನು. “ಕ್ಷತ್ತನ ಹಿತಕರವಚನವನ್ನೇನು ಹೇಳಿದ್ದನೋ ಅವೆಲ್ಲವೂ ಈಗ ನಡೆಯುತ್ತಿವೆ!” ಎಂದು ಚಿಂತಿಸಿದ ರಾಜನಿಗೆ ಉತ್ತರವೊಂದೂ ದೊರಕಲಿಲ್ಲ.
ಮಹಾಯುದ್ಧದಲ್ಲಿ ಪರಾಕ್ರಾಂತರಾದ ಕರ್ಣ-ಭೀಮರಿಬ್ಬರೂ ಮಳೆಗರೆಯುವ ಮೋಡಗಳಂತೆ ಪರಸ್ಪರರ ಮೇಲೆ ಬಾಣಗಳ ಮಳೆಯನ್ನು ಸುರಿಸಿದರು. “ಭೀಮ!” ಎಂಬ ನಾಮಾಂಕಿತ ಸ್ವರ್ಣಪುಂಖಗಳ ಶಿಲಾಶಿತ ಬಾಣಗಳು ಜೀವವನ್ನೇ ಹರಣಮಾಡುವವೋ ಎಂಬಂತೆ ಕರ್ಣನ ಶರೀರವನ್ನು ಹೊಕ್ಕವು. ಹಾಗೆಯೇ ರಣದಲ್ಲಿ ಕರ್ಣನು ಪ್ರಯೋಗಿಸಿದ ಹಾವಿನ ವಿಷಗಳಂತಿರುವ ನೂರಾರು ಸಹಸ್ರಾರು ಬಾಣಗಳು ಭೀಮನನ್ನು ಮುಚ್ಚಿಬಿಟ್ಟವು. ಎಲ್ಲಕಡೆಗಳಲ್ಲಿ ಬೀಳುತ್ತಿದ್ದ ಅವರ ಶರಗಳಿಂದಾಗಿ ಕೌರವ ಸೇನೆಯಲ್ಲಿ ಸಾಗರದಂತೆ ಅಲ್ಲೋಲಕಲ್ಲೋಲವುಂಟಾಯಿತು. ಭೀಮನ ಚಾಪದಿಂದ ಹೊರಟ ಘೋರ ಸರ್ಪಗಳ ವಿಷಕ್ಕೆ ಸಮಾನವಾದ ಬಾಣಗಳು ಕೌರವ ಸೇನೆಗಳ ಚಮೂಮಧ್ಯದಲ್ಲಿ ಅನೇಕರನ್ನು ಸಂಹರಿದವು. ಹರಡಿ ಬಿದ್ದಿರುವ ಆನೆಗಳಿಂದ, ಕುದುರೆಗಳಿಂದ ಮತ್ತು ಮನುಷ್ಯರಿಂದ ರಣಭೂಮಿಯು ಚಂಡಮಾರುತಕ್ಕೆ ಸಿಲುಕಿ ಮರಗಳು ಉರುಳಿ ಬಿದ್ದಿರುವಂತೆ ತೋರಿತು. ಭೀಮನ ಚಾಪದಿಂದ ಹೊರಟ ಶರಗಳಿಂದ ವಧಿಸಲ್ಪಡುತ್ತಿದ್ದ ಕೌರವರ ಕಡೆಯ ಯೋಧರು “ಇದೇನಿದು?” ಎಂದು ಹೇಳುತ್ತಾ ಓಡಿಹೋಗುತ್ತಿದ್ದರು. ಹೀಗೆ ಕರ್ಣ-ಪಾಂಡವರ ಶರಗಳ ಮಹಾವೇಗದಿಂದ ಸಿಂಧು-ಸೌವೀರ-ಕೌರವ ಸೇನೆಗಳು ಭಗ್ನವಾಗಿ ಪಲಾಯನಗೈದವು.
ಅವರ ಶರಗಳಿಂದ ಹತರಾಗದೇ ಉಳಿದಿದ್ದ ಅಶ್ವ-ರಥ-ಗಜ-ಪದಾತಿಗಳು ಕರ್ಣ-ಭೀಮರನ್ನು ಅಲ್ಲಿಯೇ ಬಿಟ್ಟು ಎಲ್ಲ ದಿಕ್ಕುಗಳಿಗೂ ಓಡಿ ಹೋದವು. “ನಿಜವಾಗಿಯೂ ಪಾರ್ಥರ ಹಿತಕ್ಕಾಗಿಯೇ ದಿವೌಕಸರು ನಮ್ಮನ್ನು ಹೀಗೆ ಭ್ರಾಂತರನ್ನಾಗಿಸಿದ್ದಾರೆ! ಕರ್ಣ-ಭೀಮರಿಂದ ಹೊರಟ ಬಾಣಗಳು ನಮ್ಮ ಸೇನೆಗಳನ್ನೇ ವಧಿಸುತ್ತಿವೆ.” ಹೀಗೆ ಹೇಳುತ್ತಾ ಭಯಪೀಡಿತರಾದ ಕೌರವರು ಶರಗಳು ಬೀಳುತ್ತಿರುವ ಪ್ರದೇಶವನ್ನು ಬಿಟ್ಟು ದೂರದಲ್ಲಿ ಯುದ್ಧಪ್ರೇಕ್ಷಕರಾಗಿ ನಿಂತುಬಿಟ್ಟರು. ಆಗ ಮಹಾಹವದಲ್ಲಿ ವಿಶೇಷವಾಗಿ ರಣಹೇಡಿಗಳ ಭಯವನ್ನು ಹೆಚ್ಚಿಸುವ ಘೋರರೂಪವಾದ ನದಿಯು ಪ್ರವಹಿಸತೊಡಗಿತು. ಆನೆ-ಕುದುರೆ-ಮನುಷ್ಯರ ರಕ್ತದಿಂದ ಹುಟ್ಟಿದ ಆ ನದಿಯು ಸತ್ತುಹೋಗಿದ್ದ ಮನುಷ್ಯ-ಆನೆ-ಕುದುರೆಗಳಿಂದ ತುಂಬಿಹೋಗಿತ್ತು. ತೋಳುಮರಗಳು, ಪತಾಕೆಗಳು, ಆನೆ-ಕುದುರೆ-ರಥಗಳ ಭೂಷಣಗಳು, ಪುಡಿಯಾಗಿದ್ದ ರಥಗಳು, ಮುರಿದುಹೋಗಿದ್ದ ರಥಚಕ್ರಗಳು, ನೊಗಗಳು, ಬಂಗಾರದಿಂದ ಮಾಡಲ್ಪಟ್ಟ ಮಹಾಮೌಲ್ಯದ ಧನುಸ್ಸುಗಳು, ಕರ್ಣ-ಪಾಂಡವರು ಬಿಟ್ಟ ಪೊರೆಬಿಟ್ಟ ಹಾವುಗಳಂತಿರುವ ಸಾವಿರಾರು ಸುವರ್ಣಪುಂಖಗಳ ನಾರಾಚ ಬಾಣಗಳು, ಒಡೆದು ಬಿದ್ದಿದ್ದ ಪ್ರಾಸ-ತೋಮರ-ಖಡ್ಗ ಮತ್ತು ಪರಶಾಯುಧಗಳು, ಬಂಗಾರದಿಂದ ಮಾಡಲ್ಪಟ್ಟ ಗದೆ-ಮುಸಲ-ಪಟ್ಟಿಶಗಳು, ವಿವಿಧಾಕಾರದ ವಜ್ರಗಳು, ಪರಿಘ-ಶಕ್ತಿಗಳು, ಶತಘ್ನೀ-ಚಿತ್ರಗಳು, ಕನಕಾಂಗದ-ಕೇಯೂರಗಳು, ಶುಭ ಕುಂಡಲ ಮಣಿಗಳು, ಕವಚಗಳು, ಬಳೆಗಳು, ಉಂಗುರಗಳು, ಕೈಚೀಲಗಳಿಂದ, ಹಾರಗಳಿಂದ, ನಿಷ್ಕಗಳಿಂದ, ವಸ್ತ್ರ-ಚತ್ರಗಳಿಂದ, ಮುರಿದಿದ್ದ ಚಾಮರ-ವ್ಯಜಗಳಿಂದ, ಛಿನ್ನ-ಛಿನ್ನರಾಗಿದ ಗಜ-ಅಶ್ವ-ಮನುಷ್ಯರಿಂದ, ಶಸ್ತ್ರಗಳಿಂದ, ರಥಭೂಷಣಗಳಿಂದ, ವಿವಿಧ ಭಾವ್ಗಳಿಂದ ಅಲ್ಲಲ್ಲಿ ಬಿದ್ದಿದ್ದ ಇನ್ನೂ ಅನೇಕ ವಸ್ತುಗಳಿಂದ ವ್ಯಾಪ್ತವಾಗಿದ್ದ ರಣಾಂಗಣವು ಗ್ರಹಗಳಿಂದ ತುಂಬಿದ್ದ ಆಕಾಶದಂತೆ ಪ್ರಕಾಶಿಸುತ್ತಿತ್ತು. ಅವರಿಬ್ಬರ ಯೋಚನೆಗೆ ಸಿಲುಕದ ಅದ್ಭುತವೂ ಅಮಾನುಷವೂ ಆದ ಕೃತ್ಯಗಳನ್ನು ನೋಡಿ ಚಾರಣ-ಸಿದ್ಧರಲ್ಲಿ ವಿಸ್ಮಯವುಂಟಾಯಿತು. ಒಣಮರಗಳಿರುವ ವನದಲ್ಲಿ ಅಗ್ನಿಯ ಮುನ್ನಡೆಯು ಗಾಳಿಯ ಸಹಾಯದಿಂದ ಬಹಳ ಭಯಂಕರವಾಗಿ ಪರಿಣಮಿಸುವಂತೆ ಯುದ್ಧದಲ್ಲಿ ಭೀಮನ ಸಹಾಯವನ್ನು ಪಡೆದ ಆಧಿರಥ ಕರ್ಣನ ಗಮನವು ಬಹಳ ಭಯಂಕರವಾಗಿ ಪರಿಣಮಿಸಿತು. ಅಂಕುಶಪ್ರಹಾರದಿದ ಪ್ರೇರಿತವಾದ ಎರಡು ಆನೆಗಳು ಜೊಂಡುಹುಲ್ಲಿನ ವನವನ್ನು ಧ್ವಂಸಮಾಡುವಂತೆ ಅವರಿಬ್ಬರು ಧ್ವಜ-ರಥಗಳನ್ನು ಕೆಳಗುರುಳಿಸಿ ಅಶ್ವ-ನರ-ಗಜಗಳನ್ನು ಸಂಹರಿಸಿದರು. ಆಗ ಸಂಯುಗದಲ್ಲಿ ಕರ್ಣ-ಭೀಮರಿಂದ ಆ ಮಹಾಸೇನೆಯು ಸಂಪೂರ್ಣವಾಗಿ ನಾಶಗೊಂಡಿತು.
ಆಗ ಕರ್ಣನು ಭೀಮನನ್ನು ಮೂರು ಶರಗಳಿಂದ ಹೊಡೆದು ವಿಚಿತ್ರವಾದ ಅನೇಕ ಶರವರ್ಷಗಳನ್ನು ಸುರಿಸಿದನು. ಸೂತಪುತ್ರನಿಂದ ಪ್ರಹರಿಸಲ್ಪಡುತ್ತಿರುವ ಭೀಮನೇನನು ಭೇದಿಸಲ್ಪಡುವ ಪರ್ವತದಂತೆ ಸ್ವಲ್ಪವೂ ಅಲುಗಾಡಲಿಲ್ಲ. ಭೀಮಸೇನನು ಕರ್ಣನ ಕಿವಿಯ ಪ್ರದೇಶಕ್ಕೆ ನಿಶಿತವಾದ ಪತತ್ರಿ ಕರ್ಣಿಗಳಿಂದ ಹೊಡೆದನು. ಅದು ಕರ್ಣನ ಕಿವಿಯಿಂದ ಬಂಗಾರದ ಮಹಾ ಕುಂಡಲವನ್ನು ಅಂಬರದಿಂದ ಉರಿಯುತ್ತಿರುವ ನಕ್ಷತ್ರದಂತೆ ಭೂಮಿಯ ಮೇಲೆ ಬೀಳಿಸಿತು. ಕೂಡಲೇ ಇನ್ನೊಂದು ಭಲ್ಲದಿಂದ ನಗುತ್ತಾ ಭೀಮನು ಸೂತಪುತ್ರನ ಎದೆಗೆ ಹೊಡೆದನು. ಪುನಃ ಬೇಗನೆ ಭೀಮನು ರಣದಲ್ಲಿ ಯಮದಂಡಗಳಂತಿರುವ ಮಹಾವೇಗವುಳ್ಳ ಹತ್ತು ನಾರಾಚಗಳನ್ನು ಪ್ರಯೋಗಿಸಿದನು. ಅವು ಸೂತಪುತ್ರನ ಹಣೆಯನ್ನು ಹೊಕ್ಕು, ಹಾವುಗಳು ಹುತ್ತವನ್ನು ಹೊಗುವಂತೆ ಹೊಕ್ಕು ನಾಟಿಕೊಂಡವು. ಹಣೆಯಲ್ಲಿದ್ದ ಆ ಬಾಣಗಳಿಂದ ಸೂತಪುತ್ರನು ಹಿಂದೆ ನೀಲಪುಷ್ಪಗಳ ಮಾಲೆಯನ್ನು ಧರಿಸಿದ್ದಾಗ ಹೇಗೋ ಹಾಗೆ ಕಂಗೊಳಿಸಿದನು. ಆಗ ದೃಢಧನ್ವನಿಂದ ಪೀಡಿತನಾಗಿ ಕ್ರುದ್ಧನಾದ ಮಹಾವೇಗಿ ಕರ್ಣನು ಭೀಮಸೇನನ ವಧೆಗೆ ತ್ವರೆಮಾಡಿದನು. ಅಮರ್ಷೀ ಬಲವಾನ್ ಕ್ರುದ್ಧ ಕರ್ಣನು ನೂರು ಗಾರ್ಧ್ರವಾಸಸಗಳನ್ನು ಅವನ ಮೇಲೆ ಪ್ರಯೋಗಿಸಿದನು. ಆಗ ಪಾಂಡವನು ಸಮರದಲ್ಲಿ ಅವನನ್ನು ಅನಾದರಿಸಿ, ಅವನ ವೀರ್ಯದ ಕುರಿತು ಚಿಂತಿಸದೇ ಅವನ ಮೇಲೆ ಶರವರ್ಷಗಳನ್ನು ಸುರಿಸಿದನು.
ಕ್ರುದ್ಧ ಕರ್ಣನು ಕ್ರುದ್ಧರೂಪೀ ಪಾಂಡವನ ಎದೆಗೆ ನಿಶಿತ ಬಾಣಗಳಿಂದ ಹೊಡೆದನು. ಮೋಡಗಳಂತೆ ಅವರಿಬ್ಬರು ಅನ್ಯೋನ್ಯರ ಮೇಲೆ ಬಾಣಗಳ ಮಳೆಗಳನ್ನು ಸುರಿಸಿದರು ಮತ್ತು ರಣದಲ್ಲಿ ಚಪ್ಪಾಳೆಯ ಶಬ್ಧ ಮತ್ತು ಕೂಗುಗಳಿಂದ ಪರಸ್ಪರರನ್ನು ಬೆದರಿಸಿದರು. ರಣದಲ್ಲಿ ವಿವಿಧ ಶರಜಾಲಗಳಿಂದ ಅನ್ಯೋನ್ಯರನ್ನು ಮುಚ್ಚಿದರು ಮತ್ತು ಸಮರದಲ್ಲಿ ಕ್ರುದ್ಧರಾಗಿ ಅನ್ಯೋನ್ಯರನ್ನು ಮೀರಿಸುವಂತಿದ್ದರು. ಆಗ ಭೀಮನು ಕ್ಷುರಪ್ರದಿಂದ ರಾಧೇಯ ಕರ್ಣನ ಧನುಸ್ಸನ್ನು ತುಂಡರಿಸಿ ಪತ್ರಿಗಳಿಂದ ಅವನನ್ನು ಹೊಡೆದನು. ತನ್ನ ಧನುಸ್ಸು ತುಂಡಾಗಲು ಸೂತಪುತ್ರನು ಇನ್ನೊಂದು ವೇಗವುಳ್ಳ, ಭಾರಸಾಧನ ಬಿಲ್ಲನ್ನು ಎತ್ತಿಕೊಂಡನು. ಕುರು-ಸೌವೀರ-ಸೈಂಧವರ ಸೇನೆಗಳು ನಾಶವಾಗುತ್ತಿರುವುದನ್ನು ನೋಡಿ, ಕವಚ-ಧ್ವಜ-ಶಸ್ತ್ರಗಳೊಂದಿಗೆ ನೆಲದಮೇಲೆ ಬಿದ್ದು ಅಸುನೀಗಿದ ಆನೆ-ಕುದುರೆ-ನರರ ದೇಹಗಳನ್ನು ಎಲ್ಲ ಕಡೆ ನೋಡಿ ಸೂತಪುತ್ರನ ಮುಖವು ಕ್ರೋಧದಿಂದ ಉರಿದು ಬೆಳಗತೊಡಗಿತು. ಬಂಗಾರದಿಂದ ವಿಭೂಷಿತವಾದ ಆ ಮಹಾ ಧನುಸ್ಸನ್ನು ಟೇಂಕರಿಸಿ ರಾಧೇಯನು ಭೀಮನನ್ನು ಘೋರ ದೃಷ್ಟಿಯಿಂದ ನೋಡಿದನು. ಬಾಣಗಳನ್ನು ಬಿಡುವಾಗ ಕ್ರುದ್ಧನಾದ ಸೂತಪುತ್ರನು ಶರತ್ಕಾಲದ ಮಧ್ಯಾಹ್ನದ ಅರ್ಚಿಷ್ಮಾನ್ ದಿವಾಕರನಂತೆ ರಾರಾಜಿಸಿದನು. ನೂರಾರು ಶರಗಳನ್ನು ಬಿಡುತ್ತಿರುವ ಆಧಿರಥನ ಘೋರ ಮುಖವು ಕಿರಣಗಳನ್ನು ಹೊರಸೂಸುವ ಭಾನುಮತನ ಮುಖದಂತಾಯಿತು. ರಣದಲ್ಲಿ ಅವನು ಕೈಯಿಂದ ಶರಗಳನ್ನು ತೆಗೆದುಕೊಳ್ಳುವುದಾಗಲೀ, ಹೂಡುವುದಾಗಲೀ, ಎಳೆಯುವುದಾಗಲೀ ಅಥವಾ ಬಿಡುವುದರಲ್ಲಾಗಲೀ ಅಂತರವನ್ನೇ ಕಾಣುತ್ತಿರಲಿಲ್ಲ.
ಆಯುಧವನ್ನು ಘೋರವಾದ ಅಗ್ನಿಚಕ್ರದಂತೆ ಗೋಲಾಕಾರವಾಗಿ ಮಾಡಿ ಕರ್ಣನು ಎಡ-ಬಲಗಳಲ್ಲಿ ಒಂದೇ ಸಮನಾಗಿ ಕಾಣುತ್ತಿದ್ದನು. ಕರ್ಣನ ಚಾಪದಿಂದ ಬಿಡಲ್ಪಟ್ಟ ಸ್ವರ್ಣಪುಂಖದ ನಿಶಿತ ಶರಗಳು ಸೂರ್ಯನ ಪ್ರಭೆಯಂತೆ ದಿಕ್ಕುಗಳನ್ನು ಮುಸುಕಿದವು. ಅವನ ಧನುಸ್ಸಿನಿಂದ ಹೊರಟ ಕನಕಪುಂಖಗಳ ನತಪರ್ವ ಶರಗಳು ಅನೇಕ ಸಂಖ್ಯೆಗಳಲ್ಲಿ ಹಾರಾಡುತ್ತಿರುವುದು ಕಂಡಿತು. ಆಧಿರಥನ ಧನುಸ್ಸಿನಿಂದ ಹೊರಟ ಸಾಯಕಗಳು ಆಕಾಶದಲ್ಲಿ ಸಾಲುಕಟ್ಟಿದ ಕ್ರೌಂಚಪಕ್ಷಿಗಳಂತೆ ರಾಜಿಸಿದವು. ಆಧಿರಥನು ಗಾರ್ಧ್ರಪತ್ರಗಳ, ಶಿಲೆಗಳ ಮೇಲೆ ಮಸೆದ, ಬಂಗಾರದಿಂದ ವಿಭೂಷಿತವಾದ, ಮಹಾವೇಗವುಳ್ಳ, ಬೆಳಗುತ್ತಿರುವ ಉಗ್ರ ಶರಗಳನ್ನು ಪ್ರಯೋಗಿಸುತ್ತಿದ್ದನು. ಧನುಸ್ಸಿನ ಬಲದಿಂದ ಕೊಂಡೊಯ್ಯಲ್ಪಟ್ಟ ಆ ಬಂಗಾರದಿಂದ ವಿಭೂಷಿತ ಶರಗಳು ಆಕಾಶದಲ್ಲಿ ಗೀರೆಳೆಯುತ್ತಾ ಪಾರ್ಥನ ರಥದ ಕಡೆ ಹೋಗುತ್ತಿದ್ದವು. ಕರ್ಣನು ಬಿಟ್ಟ ರತ್ನವಿಕೃತ ಬಾಣಗಳು ಆಕಾಶದಲ್ಲಿ ಸಾವಿರಾರು ಹಾರುತ್ತಾ ಸಹಸ್ರಾರು ಮಿಡಿತೆಗಳಂತೆ ತೋರುತ್ತಿದ್ದವು. ಆದಿರಥನ ಧನುಸ್ಸಿನಿಂದ ಬಿಡಲ್ಪಟ್ಟ ಉರಿಯುತ್ತಿರುವ ಸಾಯಕಗಳು ಉದ್ದವಾದ ಒಂದೇ ಶರದಂತಾಗಿ ಕಾಣುತ್ತಿದ್ದವು. ಮೋಡವು ಪರ್ವತವನ್ನು ಮಳೆಯ ನೀರಿನಿಂದ ಮುಚ್ಚಿಬಿಡುವಂತೆ ಕ್ರುದ್ಧನಾದ ಕರ್ಣನು ಸಾಯಕಗಳ ಮಳೆಯಿಂದ ಭೀಮನನ್ನು ಮುಚ್ಚಿಬಿಟ್ಟನು. ಅಲ್ಲಿ ಭೀಮನ ಬಲವೀರ್ಯ ಪರಾಕ್ರಮವನ್ನೂ ಅವನ ಕಸರತ್ತನ್ನೂ ಕುರುಗಳೊಂದಿಗೆ ಧಾರ್ತರಾಷ್ಟ್ರರು ನೋಡಿದರು. ಉಕ್ಕಿಬರುವ ಸಮುದ್ರದಂತೆ ಮೇಲಿಂದ ಬೀಳುತ್ತಿರುವ ಶರವೃಷ್ಟಿಯನ್ನು ಲೆಕ್ಕಿಸದೇ ಕ್ರುದ್ಧನಾದ ಭೀಮನು ಕರ್ಣನನ್ನು ಆಕ್ರಮಿಣಿಸಿದನು.
ಭೀಮನ ಮಹಾಚಾಪವು ಬಂಗಾರದ ಹಿಂಬದಿಯುಳ್ಳದ್ದಾಗಿತ್ತು. ಇನ್ನೊಂದು ಶಕ್ರಚಾಪವೋ ಎಂಬಂತಿದ್ದ ಅದನ್ನು ಮಂಡಲಾಕರದಲ್ಲಿ ಸೆಳೆದು ಅದರಿಂದ ಬಾಣಗಳನ್ನು ಬಿಟ್ಟು ಇಡೀ ಅಂಬರವನ್ನೇ ತುಂಬಿಸಿಬಿಟ್ಟನು. ಭೀಮನ ಸುವರ್ಣಪುಂಖಗಳುಳ್ಳ ಸಾಯಕ-ನತಪರ್ವಗಳು ಗಗನದಲ್ಲಿ ರಚಿಸಿದ ಬಂಗಾರದ ಮಾಲೆಯಂತೆ ಕಂಗೊಳಿಸಿದವು. ಆಗ ಕರ್ಣನ ಶರಜಾಲಗಳು ವ್ಯೋಮವನ್ನೇ ತುಂಬಿಬಿಡಲು ಅವುಗಳ ಭಾಗಶವನ್ನು ಭೀಮಸೇನನ ಪತ್ರಿಗಳು ಹೊಡೆದುರುಳಿಸಿದವು. ರಣದಲ್ಲಿ ಕರ್ಣ ಮತ್ತು ಭೀಮಸೇನ ಇಬ್ಬರದ್ದೂ ವೇಗದಿಂದ ಕೂಡಿದ ಕನಕ ಪುಂಖಗಳ ಶರಜಾಲಗಳು ಆಕಾಶದಲ್ಲಿ ಹಾರಾಡುವಾಗ ಒಂದಕ್ಕೊಂದು ತಾಗಿ ಬೆಂಕಿಯ ಕಿಡಿಗಳನ್ನು ಹಾರಿಸುತ್ತಿದ್ದವು. ಸೂತಪುತ್ರನು ಭೀಮಸೇನನ ವೀರ್ಯವನ್ನು ಕಡೆಗಣಿಸಿ ಇನ್ನೂ ಹೆಚ್ಚು ಬಾಣಗಳಿಂದ ಅವನನ್ನು ಮುಚ್ಚಿ ಮೀರಿಸಿದನು. ಅಲ್ಲಿ ಅವರಿಬ್ಬರು ಬಿಟ್ಟ ಶರಜಾಲಗಳು ಒಂದು ಇನ್ನೊಂದನ್ನು ಟಕ್ಕರಿಸುತ್ತಿರುವ ವಿರೋಧದಿಕ್ಕುಗಳಲ್ಲಿ ಬೀಸುತ್ತಿರುವ ಎರಡು ಭಿರುಗಾಳಿಗಳಂತೆ ತೋರಿದವು. ಭೀಮನನ್ನು ವಧಿಸಲು ಬಯಸಿದ ಕರ್ಣನು ಕ್ರುದ್ಧನಾಗಿ ಕಮ್ಮಾರರಿಂದ ಸಾಣೆಹಿಡಿಸಲ್ಪಟ್ಟ ಬಂಗಾರದಿಂದ ಮಾಡಿದ ನಿಶಿತ ಬಾಣಗಳನ್ನು ಪ್ರಯೋಗಿಸಿದನು. ಅವುಗಳನ್ನು ಅಂತರಿಕ್ಷದಲ್ಲಿಯೇ ವಿಶಿಖಗಳಿಂದ ಒಂದೊಂದನ್ನೂ ಮೂರು ಮೂರು ತುಂಡುಗಳನ್ನಾಗಿ ಕತ್ತರಿಸಿ, ಸೂತಪುತ್ರನನ್ನು ಮೀರಿಸುತ್ತಾ ಭೀಮಸೇನನು “ನಿಲ್ಲು!” ಎಂದು ಹೇಳಿದನು.
ಭಸ್ಮಮಾಡಿಬಿಡುವನೋ ಎನ್ನುವ ಪಾವಕನಂತೆ ಕ್ರುದ್ಧನಾದ ಪಾಂಡವನು ಪುನಃ ಉಗ್ರ ಶರವರ್ಷಗಳನ್ನು ಸುರಿಸಿದನು. ಆದರೆ ಕರ್ಣನು ಭಯಪಡದೇ ಭೀಮನ ಎಲ್ಲ ಅಸ್ತ್ರಗಳನ್ನೂ ತಡೆದನು. ಸೂತಪುತ್ರನು ಪಾಂಡುಪುತ್ರನೊಡನೆ ಅಸ್ತ್ರಮಾಯೆಯಿಂದ ಯುದ್ಧಮಾಡತೊಡಗಿದನು. ಕರ್ಣನು ಸನ್ನತ ಪರ್ವ ಬಾಣಗಳಿಂದ ಅವನ ಭತ್ತಳಿಕೆಗಳನ್ನೂ, ಧನುಸ್ಸಿನ ಶಿಂಜನಿಯನ್ನೂ, ಧನುಸ್ಸನ್ನೂ, ಹಗ್ಗಗಳನ್ನೂ, ಕುದುರೆಗಳ ಕಡಿವಾಣಗಳನ್ನೂ ಕತ್ತರಿಸಿದನು. ಪುನಃ ಅವನ ಕುದುರೆಗಳನ್ನು ಸಂಹರಿಸಿ, ಮೂರರಿಂದ ಸಾರಥಿಯನ್ನು ಹೊಡೆದನು. ಆ ಸಾರಥಿಯು ಕೂಡಲೇ ರಥದಿಂದ ಹಾರಿ ಸಾತ್ಯಕಿಯ ರಥಕ್ಕೆ ಹೋದನು. ಕ್ರುದ್ಧನಾದ ಪ್ರಳಯಾಗ್ನಿಯ ಪ್ರಭೆಯಿಂದ ಪ್ರಕಾಶಿಸುತ್ತಿದ್ದ ರಾಧೇಯನು ಭೀಮನನ್ನು ಗೇಲಿಮಾಡುತ್ತಾ ಅವನ ಧ್ವಜವನ್ನೂ ಪತಾಕೆಯನ್ನೂ ಕತ್ತರಿಸಿ ಬೀಳಿಸಿದನು. ಧನುಸ್ಸನ್ನು ಕಳೆದುಕೊಂಡ ಕ್ರುದ್ಧ ಭೀಮನು ಪರಮ ರೋಷದಿಂದ ಕರ್ಣನ ರಥದ ಕಡೆಗೆ ಶಕ್ತ್ಯಾಯುಧವನ್ನು ಬೀಸಿ ಪ್ರಯೋಗಿಸಿದನು. ಮೇಲೆ ಬೀಳುತ್ತಿದ್ದ ಮಹಾಉಲ್ಕೆಯ ಪ್ರಭೆಯನ್ನುಳ್ಳ ಹೇಮಪರಿಷ್ಕೃತವಾಗಿದ್ದ ಆ ಶಕ್ತಿಯನ್ನು ಆಯಾಸಗೊಂಡಿದ್ದ ಕರ್ಣನು ಹತ್ತು ಶರಗಳಿಂದ ಕತ್ತರಿಸಿದನು. ಮಿತ್ರನಿಗಾಗಿ ವಿಚಿತ್ರವಾಗಿ ಯುದ್ಧಮಾಡುತ್ತಿದ್ದ ಸೂತಪುತ್ರನ ಕರ್ಣನ ಸಾಯಕಗಳಿಂದ ಆ ಶಕ್ತಿಯು ಹತ್ತು ತುಂಡುಗಳಾಗಿ ಬಿದ್ದಿತು. ಯುದ್ಧದಲ್ಲಿ ಬೇಗನೇ ಮೃತ್ಯು ಅಥವಾ ಜಯವನ್ನು ಬಯಸಿ ಭೀಮನು ಬಂಗಾರದಿಂದ ಮಾಡಲ್ಪಟ್ಟ ಖಡ್ಗವನ್ನೂ ಗುರಾಣಿಯನ್ನೂ ಎತ್ತಿಕೊಂಡನು. ಕೂಡಲೆ ಕರ್ಣನು ನಗುತ್ತಾ ಗುರಾಣಿಯನ್ನು ತುಂಡರಿಸಿದನು. ಗುರಾಣಿಯನ್ನು ಕಳೆದುಕೊಂಡ ಮತ್ತು ವಿರಥನಾಗಿದ್ದ ಭೀಮನು ಕ್ರೋಧಮೂರ್ಚಿತನಾಗಿ ತ್ವರೆಮಾಡಿ ಖಡ್ಗವನ್ನೇ ತಿರುಗಿಸುತ್ತಾ ಕರ್ಣನ ರಥದ ಕಡೆ ಎಸೆದನು. ಆ ಖಡ್ಗವು ಮೌರ್ವಿಯಿಂದ ಯುಕ್ತವಾಗಿದ್ದ ಸೂತಪುತ್ರನ ಧನುಸ್ಸನ್ನು ಕತ್ತರಿಸಿ ಕೋಪಗೊಂಡ ಸರ್ಪವು ಆಕಾಶದಿಂದ ಕೆಳಕ್ಕೆ ಬೀಳುವಂತೆ ಭೂಮಿಯ ಮೇಲೆ ಬಿದ್ದಿತು. ಆಗ ಕ್ರುದ್ಧನಾದ ಅಧಿರತನು ಜೋರಾಗಿ ನಗುತ್ತಾ ಶತ್ರುವನ್ನು ಕೊಲ್ಲಬಲ್ಲಂತಹ, ದೃಢವಾದ ಮೌರ್ವಿಯುಳ್ಳ, ವೇಗವತ್ತರವಾದ ಇನ್ನೊಂದು ಧನುಸ್ಸನ್ನು ಎತ್ತಿಕೊಂಡನು.
ಕುಪಿತನಾದ ಸತ್ಯವಿಕ್ರಮಿ ಭೀಮಸೇನನು ಕರ್ಣನ ಮನಸ್ಸನ್ನು ವ್ಯಥೆಗೊಳಿಸುತ್ತಾ ಆಕಾಶಕ್ಕೆ ಹಾರಿದನು. ಅವನ ಆ ನಡತೆಯನ್ನು ನೋಡಿ ಸಂಗ್ರಾಮದಲ್ಲಿ ವಿಜಯವನ್ನು ಬಯಸುತ್ತಿದ್ದ ರಾಧೇಯನು ಶರೀರವನ್ನು ಸಂಕುಚಿಸಿಕೊಂಡು ಭೀಮಸೇನನನ್ನು ಮೋಸಗೊಳಿಸಿದನು. ವ್ಯಥಿತ ಮನಸ್ಕನಾಗಿ ರಥದ ಹಿಂಭಾಗದಲ್ಲಿ ಅಡಗಿದ್ದ ಕರ್ಣನನ್ನು ನೋಡಿ ಭೀಮಸೇನನು ರಥದ ಧ್ವಜಸ್ಥಂಭವನ್ನು ಹಿಡಿದು ಭೂಮಿಯಮೇಲೆ ನಿಂತನು. ಗರುಡನು ಸರ್ಪವೊಂದನ್ನು ಎತ್ತಿಕೊಂಡು ಹೋಗುವಂತೆ ರಥದಿಂದ ಕರ್ಣನನ್ನು ಎತ್ತಿಕೊಂಡು ಹೋಗುವಂತಿರುವ ಭೀಮನನ್ನು “ಧನುಸ್ಸನ್ನು ಕಳೆದುಕೊಂಡಿದ್ದರೂ ವಿರಥನಾಗಿದ್ದರೂ ತನ್ನ ಧರ್ಮವನ್ನು ಅನುಸರಿಸಿ ಇವನು ತನ್ನ ರಥವನ್ನು ಹಿಂದಕ್ಕೆ ಬಿಟ್ಟು, ಯುದ್ಧದಲ್ಲಿಯೇ ನಿರತನಾಗಿದ್ದಾನೆ!” ಎಂದು ಕುರುಗಳು ಮತ್ತು ಚಾರಣರು ಎಲ್ಲರೂ ಪ್ರಶಂಸಿಸಿದರು.
ಆಕಾಶದಿಂದ ಹಾರಿ ಹೀಗೆ ತನ್ನ ಹತ್ತಿರುವೇ ಬಂದಿರುವ ಪಾಂಡವನನ್ನು ನೋಡಿ ಕ್ರೋಧಿತನಾದ ರಾಧೇಯನು ಅವನೊಂದಿಗೆ ಪುನಃ ಯುದ್ಧವನ್ನು ಮುಂದುವರಿಸಿದನು. ಬೇಸಗೆಯ ಕೊನೆಯಲ್ಲಿ ನಭಸ್ಥಲದಲ್ಲಿ ಗರ್ಜಿಸುತ್ತಿರುವ ಮೋಡಗಳಂತೆ ಅವರಿಬ್ಬರೂ ಮಹಬಲಶಾಲಿಗಳು ಮಹಾರಂಗದಲ್ಲಿ ಜೊತೆಗೂಡಿ ಸ್ಪರ್ಧಿಸುತ್ತಿದ್ದರು. ರಣದಲ್ಲಿ ಕ್ರುದ್ಧರಾಗಿದ್ದ, ಅಸಹನಶೀಲರಾಗಿದ್ದ ಆ ನರಸಿಂಹರ ನಡುವೆ ದೇವ-ದಾನವರ ನಡುವಿನಂತೆ ಪ್ರಹಾರಗಳು ನಡೆದವು.
ಕರ್ಣನಿಂದ ಆಕ್ರಮಣಿಸಿಸಲ್ಪಟ್ಟ ಶಸ್ತ್ರಗಳನ್ನು ಕಳೆದುಕೊಂಡಿದ್ದ ಕೌಂತೇಯ ಭೀಮನು ಅರ್ಜುನನಿಂದ ಹತವಾಗಿ ಬಿದ್ದಿದ್ದ ಪರ್ವತೋಪಮ ಆನೆಗಳನ್ನು ನೋಡಿ ಕರ್ಣನ ರಥಮಾರ್ಗವನ್ನು ತಡೆಯಲೋಸುಗ ಆ ಪ್ರದೇಶವನ್ನು ಪ್ರವೇಶಿಸಿದನು. ರಥವು ಬರಲು ಕಷ್ಟವಾಗಿದ್ದ ಸತ್ತ ಆನೆಗಳ ರಾಶಿಗಳನ್ನು ಪ್ರವೇಶಿಸಿ ಜೀವಿತಾಕಾಂಕ್ಷಿಯಾದ ಪಾಂಡವನು ರಾಧೇಯನನ್ನು ಪ್ರಹರಿಸಲಿಲ್ಲ. ಹೋರಾಡಲು ಸರಿಯಾದ ಸ್ಥಾನದಲ್ಲಿ ನಿಲ್ಲಲು ಬಯಸಿ ಪರಪುರಂಜಯ ಪಾರ್ಥ ಭೀಮನು ಧನಂಜಯನ ಶರಗಳಿಂದ ಹತವಾಗಿ ಬಿದ್ದಿದ್ದ ಆನೆಯೊಂದನ್ನು ಎತ್ತಿ ನಿಂತನು. ಆ ಕುಂಜರವನ್ನು ಕರ್ಣನು ವಿಶಿಖಗಳಿಂದ ತುಂಡುಮಾಡಲು ಪಾಂಡವನು ಇತರ ಆನೆಗಳನ್ನು ಹಿಡಿದು ಕರ್ಣನ ಮೇಲೆ ಎಸೆದು ಗರ್ಜಿಸಿದನು. ಕ್ರುದ್ಧನಾದ ಪಾಂಡವನು ಆಗ ರಣಭೂಮಿಯ ಮೇಲೆ ಏನೆಲ್ಲ ಕಂಡನೋ - ರಥಚಕ್ರಗಳು, ಕುದುರೆಗಳು, ರಥಗಳು - ಅವುಗಳನ್ನು ಕರ್ಣನ ಮೇಲೆ ಎಸೆಯುತ್ತಿದ್ದನು. ಎಸೆದಹಾಗೆ ಅವೆಲ್ಲವನ್ನೂ ಕರ್ಣನು ನಿಶಿತ ಶರಗಳಿಂದ ಚೂರು ಚೂರು ಮಾಡಿ ಕತ್ತರಿಸಿದನು.
ಕುಂತಿಯ ವಚನವನ್ನು ಸ್ಮರಿಸಿಕೊಂಡ ಕರ್ಣನು ನಿರಾಯುಧನಾಗಿ ಜ್ಞಾನತಪ್ಪಿದ್ದ ಭೀಮನನ್ನು ಕೊಲ್ಲಲಿಲ್ಲ. ಪರಮ ಕ್ರೋಧದಿಂದ ರಾಧೇಯ ಕರ್ಣನು ಧನುಸ್ಸಿನ ತುದಿಯಿಂದ ಭೀಮಸೇನನನ್ನು ತಿವಿದನು ಮತ್ತು ನಗುತ್ತಾ ಅವನಿಗೆ ಹೇಳಿದನು: “ಪುರುಷರಿಗಿರಬೇಕಾದ ಗಡ್ಡ-ಮೀಸೆಗಳಿಲ್ಲದ ನಪುಂಸಕನೇ! ಮೂಢ! ಹೊಟ್ಟೆಬಾಕ! ಅಸ್ತ್ರಗಳನ್ನು ಕಲಿಯದವನೇ! ಯುದ್ಧಹೇಡಿಯೇ! ಬಾಲಸ್ವಭಾವದವನೇ! ಸಂಗ್ರಾಮಕಾತರ! ಪುನಃ ಪುನಃ ಯುದ್ಧಕ್ಕೆ ಬರಬೇಡ! ಎಲ್ಲಿ ಭೋಜಿಸಲು ಬಹುವಿಧದ ಭಕ್ಷ್ಯ ಪಾನೀಯಗಳಿರುತ್ತವೋ ಅಲ್ಲಿಗೆ ನೀನು ಯೋಗ್ಯನೇ ಹೊರತು ಯುದ್ಧದಲ್ಲಿ ಎಂದೂ ಅಲ್ಲ! ನೀನು ಯುದ್ಧವಿಶಾರದನಲ್ಲ! ಭೀಮ! ಮುನಿಯಾಗು ಅಥವಾ ವನಕ್ಕೆ ಹೋಗಿ ಫಲಗಳನ್ನಾದರೂ ಸೇವಿಸಿ ಜೀವಿಸಿಕೊಂಡಿರು! ನೀನು ಫಲಮೂಲಗಳನ್ನು ತಿನ್ನುವುದಕ್ಕ್ಕೆ ಮತ್ತು ಅತಿಥಿಭೋಜನಕ್ಕೆ ಯೋಗ್ಯ! ಆದರೆ ಶಸ್ತ್ರಗಳನ್ನೆತ್ತಿ ಯುದ್ಧಮಾಡುವುದರಲ್ಲಿ ಯೋಗ್ಯನೆಂದು ನಿನ್ನನ್ನು ಮನ್ನಿಸುವುದಿಲ್ಲ. ವನದಲ್ಲಿ ಪುಷ್ಪ-ಮೂಲ-ಫಲಾಹಾರಗಳು ಮತ್ತು ವ್ರತ-ನಿಯಮಗಳೇ ನಿನಗೆ ಉಚಿತವಾದವುಗಳು. ನೀನು ಯುದ್ಧವಿಶಾರದನಲ್ಲ! ಅಯ್ಯಾ! ಯುದ್ಧವೆಲ್ಲಿ? ಮುನಿತ್ವವೆಲ್ಲಿ? ವನಕ್ಕೆ ತೆರಳು! ಯುದ್ಧವು ನಿನಗೆ ಉಚಿತವಾದುದಲ್ಲ! ವನವಾಸವೇ ನಿನಗೆ ಅತಿಯಾಗಿ ಯೋಗ್ಯವಾದುದು! ಭೋಜನಾರ್ಥವಾಗಿ ನೀನು ಕ್ರೋಧದಿಂದ ಮನೆಯಲ್ಲಿರುವ ಅಡುಗೆಯವರನ್ನು ಮತ್ತು ಭೃತ್ಯಜನ-ದಾಸರನ್ನು ತುಂಬಾ ಅವಸರ ಪಡಿಸಿ ಹೊಡೆಯಲು ಮಾತ್ರ ನೀನು ಯೋಗ್ಯ!”
ಹಿಂದೆ ಬಾಲತನದಲ್ಲಿ ಏನು ಅಪ್ರಿಯವಾದವುಗಳು ನಡೆದಿದ್ದವೋ ಅವುಗಳನ್ನು ಕೂಡ ಎತ್ತಿ ಹೇಳುತ್ತಾ ಕರ್ಣನು ಭೀಮನೊಡನೆ ನಿಷ್ಟೂರವಾಗಿ ಮಾತನಾಡಿದನು. ಶರೀರವನ್ನು ಸಂಕುಚಿತಗೊಳಿಸಿಕೊಂಡಿದ್ದ ಭೀಮನನ್ನು ವೃಷಸೇನ ಕರ್ಣನು ಪುನಃ ಧನುಸ್ಸಿನಿಂದ ತಿವಿದು ಜೋರಾಗಿ ನಕ್ಕು ಈ ಮಾತನ್ನಾಡಿದನು: “ಎಲ್ಲಿ ಅಲ್ಪಬಲವುಳವುಳ್ಳವರಿದ್ದಾರೋ ಅಲ್ಲಿ ಹೋರಾಡಬೇಕು. ನನ್ನಂಥವರೊಂದಿಗೆ ಹೋರಾಡಬಾರದು. ನನ್ನೊಡನೆ ಯುದ್ಧಮಾಡುವವರಿಗೆ ಹೀಗಿರುವ ಮತ್ತು ಇನ್ನೂ ಕೆಟ್ಟ ಅವಸ್ಥೆಯಾಗುತ್ತದೆ. ಕೌಂತೇಯ! ರಣದಲ್ಲಿ ನಿನ್ನನ್ನು ರಕ್ಷಿಸಲಿರುವ ಆ ಇಬ್ಬರು ಕೃಷ್ಣರು ಎಲ್ಲಿದ್ದಾರೋ ಅಲ್ಲಿಗೆ ಹೋಗು! ಅಥವಾ ಮನೆಗಾದರೂ ಹೋಗು! ನಿನ್ನಂತಹ ಬಾಲಕನೊಂದಿಗೇನು ಯುದ್ಧ!”
ಹೀಗೆ ಕರ್ಣನು ವೃಷ್ಣಿಸಿಂಹ ಕೃಷ್ಣನ ಎದುರಿಗೇ ಮಹಾತ್ಮ ಪಾರ್ಥ ಭೀಮನನ್ನು ವಿರಥನನ್ನಾಗಿ ಮಾಡಿ ಕೊಚ್ಚಿಕೊಂಡನು. ಆಗ ಕೇಶವನಿಂದ ಪ್ರಚೋದಿತನಾದ ಕಪಿಧ್ವಜ ಅರ್ಜುನನು ಸೂತಪುತ್ರನ ಮೇಲೆ ಮಸೆಗಲ್ಲಿನಿಂದ ಶುದ್ಧಪಡಿಸಿದ್ದ ಶರಗಳನ್ನು ಪ್ರಯೋಗಿಸಿದನು. ಪಾರ್ಥನ ಭುಜಗಳಿಂದ ಬಿಡಲ್ಪಟ್ಟ, ಗಾಂಡೀವದಿಂದ ಹೊರಟ ಕಾಂಚನಭೂಷಣ ಶರಗಳು ಹಂಸಗಳು ಕ್ರೌಂಚಪರ್ವತವನ್ನು ಹೇಗೋ ಹಾಗೆ ಕರ್ಣನ ಶರೀರದ ಒಳಹೊಕ್ಕವು. ಧನಂಜಯನು ಗಾಂಡೀವದಿಂದ ಪ್ರಯೋಗಿಸಿದ ಭುಜಂಗಗಳಂತಿದ್ದ ಆ ಬಾಣಗಳಿಂದ ಸೂತಪುತ್ರನು ಭೀಮಸೇನನಿಂದ ದೂರಸರಿಯುವಂತೆ ಮಾಡಿದನು. ಮೊದಲು ಭೀಮನಿಂದ ಧನುಸ್ಸನ್ನು ಕಳೆದುಕೊಂಡಿದ್ದ ಮತ್ತು ಈಗ ಧನಂಜಯನ ಶರಗಳಿಂದ ಪೀಡಿತನಾದ ಕರ್ಣನು ತನ್ನ ಮಹಾರಥದಲ್ಲಿ ಕುಳಿತು ಭೀಮನಿರುವಲ್ಲಿಂದ ದೂರ ಹೊರಟುಹೋದನು. ನರರ್ಷಭ ಭೀಮನೂ ಕೂಡ ಸಾತ್ಯಕಿಯ ರಥವನ್ನೇರಿ ತಮ್ಮ ಸವ್ಯಸಾಚಿಯನ್ನು ರಣದಲ್ಲಿ ಅನುಸರಿಸಿಹೋದನು. ಆಗ ಕ್ರೋಧದಿಂದ ಕಣ್ಣುಗಳು ಕೆಂಪಾಗಿದ್ದ ಧನಂಜಯನು ತ್ವರೆಮಾಡಿ ಕರ್ಣನನ್ನು ಗುರಿಯಿಟ್ಟು ಅಂತಕ ಮೃತ್ಯುವಿನಂತಿರುವ ನಾರಾಚವನ್ನು ಪ್ರಯೋಗಿಸಿದನು. ಆಕಾಶದಲ್ಲಿ ಗರುಡವು ಸರ್ಪವನ್ನು ಹುಡುಕಿಕೊಂಡು ಹೋಗುವಂತೆ ಗಾಂಡೀವದಿಂದ ಬಿಡಲ್ಪಟ್ಟ ಆ ನಾರಾಚವು ವೇಗವಾಗಿ ಕರ್ಣನನ್ನು ಹುಡುಕಿಕೊಂಡು ಹೋಯಿತು. ಅಂತರಿಕ್ಷದಲ್ಲಿ ಹೋಗುತ್ತಿದ್ದ ಆ ನಾರಾಚವನ್ನು ಮಹಾರಥ ದ್ರೌಣಿಯು ಧನಂಜಯನ ಭಯದಿಂದ ಕರ್ಣನನ್ನು ಉಳಿಸಲು ಬಯಸಿ ಪತ್ರಿಯಿಂದ ತುಂಡರಿಸಿದನು. ಆಗ ಕುಪಿತನಾದ ಅರ್ಜುನನು ಅರವತ್ನಾಲ್ಕು ಶಿಲೀಮುಖಗಳಿಂದ ದ್ರೌಣಿಯನ್ನು ಹೊಡೆದು “ಹೋಗಬೇಡ! ನಿಲ್ಲು!” ಎಂದು ಹೇಳಿದನು. ಧನಂಜಯ ಶರಗಳಿಂದ ಪೀಡಿತನಾದ ದ್ರೌಣಿಯಾದರೋ ಮತ್ತಗಜಗಳಿಂದಲೂ ರಥಸಂಕುಲಗಳಿಂದ ಸೇನೆಯಲ್ಲಿ ನುಸುಳಿಕೊಂಡನು. ಆಗ ರಣದಲ್ಲಿ ಸುವರ್ಣದ ಹಿಡಿಗಳುಳ್ಳ ಧನುಸ್ಸುಗಳ ಟೇಂಕಾರ ಶಬ್ಧವನ್ನು ತನ್ನ ಗಾಂಡೀವ ಘೋಷದಿಂದ ಬಲಶಾಲಿ ಕೌಂತೇಯನು ಮೀರಿಸಿದನು. ಹಾಗೆ ಧನಂಜಯನು ಶರಗಳಿಂದ ಸೇನೆಗಳನ್ನು ಪೀಡಿಸುತ್ತಾ ಸ್ವಲ್ಪದೂರದವರೆಗೆ ಹೋಗುತ್ತಿದ್ದ ದ್ರೌಣಿಯನ್ನು ಹಿಂಬಾಲಿಸಿದನು. ನಾರಾಚಗಳಿಂದ ಮನುಷ್ಯರು, ಕುದುರೆಗಳು ಮತ್ತು ಆನೆಗಳ ದೇಹಗಳನ್ನು ಸೀಳುತ್ತಾ ಅರ್ಜುನನು ಕಂಕಬರ್ಹಿಣಗಳಿಂದ ಸೇನೆಯನ್ನು ಮರ್ದಿಸಿದನು. ಕುದುರೆ-ಆನೆ-ಮನುಷ್ಯರೊಂದಿಗೆ ಆ ಬಲವನ್ನು ಪಾಕಶಾಸನಿ ಪಾರ್ಥ ಅರ್ಜುನನು ಪ್ರಯತ್ನಿಸಿ ಧ್ವಂಸಮಾಡಿದನು.