ಹದಿನೇಳನೇ ದಿನದ ಯುದ್ಧ - ೬: ಕರ್ಣನ ವಧೆಗಾಗಿ ಕೃಷ್ಣಾರ್ಜುನರ ಪ್ರಸ್ಥಾನ
ದಾರುಕನು ಸಿದ್ಧಗೊಳಿಸಿದ ರಥವನ್ನು ನೋಡಿ ಅರ್ಜುನನು ಧರ್ಮರಾಜನ ಆಶೀರ್ವಾದ ಮತ್ತು ಬ್ರಾಹ್ಮಣರ ಸ್ವಸ್ತಿವಾಚನವನ್ನು ಕೇಳಿಸಿಕೊಂಡು ಆ ಸುಮಂಗಲಯುಕ್ತ ಉತ್ತಮ ರಥವನ್ನೇರಿದನು. ಧರ್ಮರಾಜ ಯುಧಿಷ್ಠಿರನು ಅವನಿಗೆ ಕರ್ಣವಧೆಯ ಕುರಿತು ಪರಮ ಆಶೀರ್ವಚನಗಳನ್ನಿತ್ತನು. ಆ ಮಹೇಷ್ವಾಸನು ಹೋಗುತ್ತಿರುವುದನ್ನು ನೋಡಿ ಭೂತಗಳು ಮಹಾತ್ಮ ಪಾಂಡವನಿಂದ ಕರ್ಣನು ಹತನಾದನೆಂದೇ ಭಾವಿಸಿದವ್ರ. ಎಲ್ಲ ದಿಕ್ಕುಗಳೂ ಸುತ್ತಲೂ ವಿಮಲವಾದವು. ನವಿಲುಗಳೂ, ಸಾರಸಗಳೂ ಮತ್ತು ಕ್ರೌಂಚಪಕ್ಷಿಗಳೂ ಪಾಂಡುನಂದನನ್ನು ಪ್ರದಕ್ಷಿಣೆ ಮಾಡಿ ಹಾರುತ್ತಿದ್ದವು. ಅನೇಕ ಶುಭ ಮಂಗಳಕರ ಗಂಡುಪಕ್ಷಿಗಳು ಅರ್ಜುನನನ್ನು ಯುದ್ಧಕ್ಕೆ ತ್ವರೆಮಾಡುತ್ತಿರುವವೋ ಎನ್ನುವಂತೆ ಸಂತೋಷದಿಂದ ಕೂಗುತ್ತಿದ್ದವು. ಭಯಾನಕ ಹದ್ದುಗಳೂ, ರಣಹದ್ದುಗಳೂ, ಗಿಡುಗಗಳೂ ಮತ್ತು ಕಾಗೆಗಳು ಮಾಂಸದ ಸಲುವಾಗಿ ಅವನ ಮುಂದೆ ಮುಂದೆ ಹೋಗುತ್ತಿದ್ದವು. ಧನ್ಯ ನಿಮಿತ್ತಗಳು ಪಾರ್ಥನನ್ನು ಪ್ರಶಂಶಿಸಿದವು ಮತ್ತು ಹಾಗೆಯೇ ಅರಿಸೇನೆಗಳ ವಿನಾಶವನ್ನೂ ಕರ್ಣನ ವಧೆಯನ್ನೂ ಸೂಚಿಸಿದವು. ಹಾಗೆ ಪಾರ್ಥನು ಪ್ರಯಾಣಿಸುತ್ತಿರುವಾಗ ಅವನಿಗೆ ಅತಿಯಾದ ಬೆವರುಂಟಾಯಿತು. ಇದು ಏಕೆ ಹೀಗಾಗುತ್ತಿದೆ ಎಂಬ ವಿಪುಲ ಚಿಂತೆಯೂ ಅವನಿಗುಂಟಾಯಿತು.
ಹಾಗೆ ಚಿಂತಾಪರನಾಗಿಹೋಗಿದ್ದ ಪಾರ್ಥನನ್ನು ನೋಡಿ ಮಧುಸೂದನನು ಗಾಂಡೀವಧನ್ವಿಗೆ ಹೀಗೆ ಹೇಳಿದನು: “ಗಾಂಡೀವಧನ್ವಿಯೇ! ನಿನ್ನ ಧನುಸ್ಸಿನಿಂದ ನೀನು ಸಂಗ್ರಾಮದಲ್ಲಿ ಯಾರನ್ನು ಜಯಿಸಿದ್ದೀಯೋ ಅವರನ್ನು ಅನ್ಯ ಮಾನವರು ಜಯಿಸಲು ಸಾಧ್ಯವಾಗುತ್ತಿರಲಿಲ್ಲ. ಶಕ್ರತುಲ್ಯಪರಾಕ್ರಮವುಳ್ಳ ಅನೇಕ ಶೂರರು ಸಮರದಲ್ಲಿ ನಿನ್ನನ್ನು ಎದುರಿಸಿ ವೀರರ ಪರಮ ಗತಿಯನ್ನು ಹೊಂದಿರುವುದನ್ನು ನೋಡಿದ್ದೇವೆ! ದ್ರೋಣ, ಭೀಷ್ಮ, ಭಗದತ್ತ, ಅವಂತಿಯ ವಿಂದಾನುವಿಂದರು, ಕಾಂಬೋಜದ ಸುದಕ್ಷಿಣ, ಮಯಾವೀರ್ಯ ಶ್ರುತಾಯುಷ ಮತ್ತು ಅಚ್ಯುತಾಯುಷರನ್ನು ಎದುರಿಸಿ ನೀನಲ್ಲದೇ ಬೇರೆ ಯಾರಿಗೆ ತಾನೇ ಕ್ಷೇಮದಿಂದ ಇರಲು ಸಾಧ್ಯವಾಗುತ್ತಿತ್ತು? ನಿನ್ನಲ್ಲಿ ದಿವ್ಯಾಸ್ತ್ರಗಳು, ಲಾಘವವೂ, ಬಲವೂ ಇವೆ. ಲಕ್ಷ್ಯಭೇದನ ಪಾತನಗಳು ನಿನಗೆ ಚೆನ್ನಾಗಿ ತಿಳಿದಿವೆ. ಯುದ್ಧದಲ್ಲಿ ನೀನು ಸಮ್ಮೋಹನನಾಗುವುದಿಲ್ಲ. ಮತ್ತು ನಿನ್ನಲ್ಲಿ ವಿಶೇಷ ಜ್ಞಾನವಿದೆ. ನೀನು ದೇವಾಸುರರನ್ನೂ ಸಚರಾಚರ ಸರ್ವವನ್ನೂ ಪೃಥ್ವಿಯನ್ನೂ ನಾಶಗೊಳಿಸಬಲ್ಲೆ. ರಣದಲ್ಲಿ ನಿನ್ನ ಸಮನಾದ ಪುರುಷ ಯೋಧನು ಇಲ್ಲ! ದೇವತೆಗಳ ಪರ್ಯಂತವಾಗಿ ಯುದ್ಧದುರ್ಮದರಾದ ಧನುಸ್ಸನ್ನು ಹಿಡಿದಿರುವ ಕ್ಷತ್ರಿಯರೇನೋ ಇದ್ದಾರೆ. ಆದರೆ ಅವರಲ್ಲಿ ನಿನ್ನ ಸಮನಾಗಿರುವವರನ್ನು ನಾನು ನೋಡಿಲ್ಲ. ಕೇಳಿಯೂ ಇಲ್ಲ. ಬ್ರಹ್ಮನಿಂದ ಪ್ರಜೆಗಳೂ ಮತ್ತು ಈ ಮಹಾದ್ಭುತವಾದ ಗಾಂಡೀವವೂ ಸೃಷ್ಟಿಸಲ್ಪಟ್ಟವು. ಅದರಿಂದ ನೀನು ಯುದ್ಧಮಾಡುತ್ತಿರುವೆ! ನಿನ್ನ ಸಮನಾಗಿರುವವರು ಯಾರೂ ಇಲ್ಲ! ಆದರೂನಿನ್ನ ಹಿತದಲ್ಲಿ ನಾನು ಈ ಮಾತನ್ನು ಹೇಳುವುದು ಅವಶ್ಯಕವಾಗಿದೆ.
“ಮಹಾಬಾಹೋ! ಆಹವಶೋಭೀ ಕರ್ಣನನ್ನು ಅವಗಣಿಸಬೇಡ! ಏಕೆಂದರೆ ಕರ್ಣನು ಬಲವಾನನು. ಅಭಿಮಾನಿಯು. ಅಸ್ತ್ರವಿದನು. ಮಹಾರಥನು. ಯುದ್ಧಕುಶಲನು. ವಿತ್ರಯೋಧಿಯು. ಮತ್ತು ದೇಶ-ಕಾಲಗಳ ಕೋವಿದನು. ತೇಜಸ್ಸಿನಲ್ಲಿ ವಹ್ನಿಸದೃಶನು. ವೇಗದಲ್ಲಿ ವಾಯುವಿನ ವೇಗಸಮನು. ಕ್ರೋಧದಲ್ಲಿ ಅಂತಕನಂತೆ ಮತ್ತು ಬಲದಲ್ಲಿ ಸಿಂಹದಂತೆ. ಎತ್ತರವಾಗಿರುವನು. ಮಾಹಾಬಾಹು. ವಿಶಾಲ ಎದೆಯುಳ್ಳವನು. ಜಯಿಸಲು ಕಷ್ಟಕರನಾದವನು. ಅತಿಮಾನಿನಿಯು. ಶೂರ, ಪ್ರವೀರ ಮತ್ತು ನೋಡಲು ಸುಂದರನು. ಯೋಧನ ಸರ್ವ ಗುಣಗಳಿಂದಲೂ ಕೂಡಿದವನು. ಮಿತ್ರರಿಗೆ ಅಭಯವನ್ನುಂಟುಮಾಡುವವನು. ಸತತವೂ ಪಾಂಡವದ್ವೇಷಿಯಾಗಿರುವನು ಮತ್ತು ಧಾರ್ತರಾಷ್ಟ್ರರ ಹಿತದಲ್ಲಿ ನಿರತನಾಗಿರುವವನು. ರಾಧೇಯನು ನಿನ್ನನ್ನು ಮಾತ್ರ ಬಿಟ್ಟು ಎಲ್ಲರಿಂದಲೂ, ವಾಸವನೊಂದಿಗೆ ದೇವತೆಗಳಿಂದಲೂ, ಅವಧ್ಯನು ಎಂದು ನನ್ನ ಯೋಚನೆ. ಇಂದು ಸೂತಜನನ್ನು ಕೊಲ್ಲು! ಮಾಂಸಶೋಣಿತಯುಕ್ತವಾದ ಶರೀರಗಳನ್ನು ಧರಿಸಿ ದೇವತೆಗಳು ಯುದ್ಧೋತ್ಸುಕರಾಗಿ ಬಂದರೂ ಸಮರದಲ್ಲಿ ಅವರೆಲ್ಲರಿಂದ ಇವನನ್ನು ಜಯಿಸಲು ಶಕ್ಯವಾಗುವುದಿಲ್ಲ. ಇಂದು ಆ ದುರಾತ್ಮನನ್ನೂ, ಪಾಪಮತಿಯನ್ನೂ, ನೃಶಂಸನನ್ನೂ, ನಿತ್ಯವೂ ಪಾಂಡವರೊಡನೆ ದುಷ್ಟನಾಗಿ ನಡೆದುಕೊಂಡುಬಂದಿರುವ, ಹೀನಸ್ವಾರ್ಥ, ಪಾಂಡವೇಯರ ವಿರೋಧೀ ಕರ್ಣನನ್ನು ಸಂಹರಿಸಿ ನಿನ್ನ ಮನೋರಥವನ್ನು ಪೂರೈಸಿಕೋ! ಧನಂಜಯ! ಯಾರಿಂದಾಗಿ ಸುಯೋಧನನು ತನ್ನನ್ನು ವೀರನೆಂದು ತಿಳಿದುಕೊಂಡಿದ್ದಾನೋ ಅವನ ಪಾಪಗಳ ಮೂಲ ಸೌತಿಯನ್ನು ಇಂದು ಜಯಿಸು!”
ಆಗ ಎಲ್ಲರೀತಿಯಲ್ಲಿಯೂ ಕರ್ಣನ ವಧೆಯ ಸಂಕಲ್ಪವನ್ನು ಮಾಡಿದ ಕೇಶವನು ಪುನಃ ಅರ್ಜುನನಿಗೆ ಹೇಳಿದನು: “ಭಾರತ! ಇಂದು ನರವಾರಣವಾಜಿಗಳ ಅತಿಘೋರ ವಿನಾಶದ ಹದಿನೇಳನೆಯ ದಿನವು ನಡೆಯುತ್ತಿದೆ. ಸಮರದಲ್ಲಿ ಅನ್ಯೋನ್ಯರನ್ನು ಎದುರಿಸಿ ನಿನ್ನ ಮತ್ತು ಶತ್ರುಸೇನೆಗಳಲ್ಲಿ ಒಟ್ಟಿಗೇ ವಿಪುಲ ಸೇನೆಯು ನಾಶವಾಗಿ ಸ್ವಲ್ಪ ಭಾಗ ಮಾತ್ರ ಉಳಿದುಕೊಂಡಿದೆ. ಹಿಂದೆ ಕೌರವರು ಬಹುಸಂಖ್ಯಾತ ಆನೆ-ಕುದುರೆಗಳಿಂದ ಕೂಡಿದ್ದರು. ಆದರೆ ಅವರು ಶತ್ರುವಾದ ನಿನ್ನನ್ನು ಎದುರಿಸಿ ರಣಮೂರ್ಧನಿಯಲ್ಲಿ ವಿನಷ್ಟವಾದವು. ಈ ಎಲ್ಲ ಪಾಂಚಾಲರೂ ಸೃಂಜಯರೂ ಮತ್ತು ತಮ್ಮ ಅನುಯಾಯಿಗಳೊಂದಿಗೆ ಪಾಂಡವರೂ ದುರ್ಧರ್ಷನಾದ ನಿನ್ನನ್ನು ಪಡೆದು ರಣದಲ್ಲಿ ವ್ಯವಸ್ಥಿತರಾಗಿ ನಿಂತಿದ್ದಾರೆ. ನಿನ್ನಿಂದ ರಕ್ಷಿತರಾದ ಪಾಂಚಾಲರು, ಪಾಂಡವರು, ಮತ್ಸ್ಯರು, ಕಾರೂಷರು, ಚೇದಿ-ಕೇಕಯರು ಶತ್ರುಗಣಗಳನ್ನು ನಾಶಪಡೆಸಿರುವರು. ನಿನ್ನಿಂದ ರಕ್ಷಿತರಾಗಿರುವ ಮಹಾರಥ ಪಾಂಡವರಲ್ಲದೇ ಬೇರೆ ಯಾರಿಗೆ ರಣದಲ್ಲಿ ಕೌರವರನ್ನು ಗೆಲ್ಲಲು ಶಕ್ಯವಾಗಿದ್ದಿತು? ರಣದಲ್ಲಿ ಸುರಾಸುರಮನುಷ್ಯರೊಂದಿಗೆ ತ್ರಿಲೋಕಗಳನ್ನೂ ಗೆಲ್ಲಲು ನೀನು ಶಕ್ತನಾಗಿರುವಾಗ ಇನ್ನು ಕೌರವ ಸೇನೆಯು ಯಾವ ಲೆಕ್ಕಕ್ಕೆ? ವಾಸವನಂತಿದ್ದ ರಾಜ ಭಗದತ್ತನನ್ನು ನಿನ್ನ ಹೊರತು ಬೇರೆ ಯಾರು ಗೆಲ್ಲಲು ಶಕ್ಯರಾಗಿದ್ದರು? ನಿನ್ನಿಂದ ರಕ್ಷಿಸಲ್ಪಟ್ಟ ಈ ವಿಪುಲ ಸೇನೆಯನ್ನು ಕಣ್ಣುಗಳಿಂದ ನೇರವಾಗಿ ನೋಡಲು ಕೂಡ ಈ ಪಾರ್ಥಿವರೆಲ್ಲರಿಗೂ ಸಾಧ್ಯವಿಲ್ಲ. ಹಾಗೆಯೇ ರಣದಲ್ಲಿ ಸತತವೂ ನಿನ್ನಂದ ರಕ್ಷಿಸಲ್ಪಟ್ಟ ಧೃಷ್ಟದ್ಯುಮ್ನ-ಶಿಖಂಡಿಯರು ಭೀಷ್ಮ-ದ್ರೋಣರನ್ನು ಕೆಳಗುರುಳಿಸಿದರು. ಶಕ್ರನ ಸಮನಾದ ಪರಾಕ್ರಮವುಳ್ಳ ಭೀಷ್ಮ-ದ್ರೋಣರನ್ನು ಯುದ್ಧದಲ್ಲಿ ಜಯಿಸಲು ಮಹಾರಥರಾದ ಪಾಂಚಾಲರಿಗಾದರೋ ಹೇಗೆ ಶಕ್ಯವಾಯಿತು? ಅಕ್ಷೌಹಿಣೀಪತಿಗಳಾದ, ಉಗ್ರರಾದ, ಸಂರಬ್ಧರಾದ, ಯುದ್ಧದುರ್ಮದರಾದ, ವೀರರಾದ, ಕೃತಾಸ್ತ್ರರಾದ, ಸಮರದಿಂದ ಎಂದೂ ಪಲಾಯನಮಾಡದ ಶಾಂತನವ, ದ್ರೋಣ, ವೈಕರ್ತನ, ಕೃಪ, ದ್ರೌಣಿ, ಸೌಮದತ್ತಿ, ಕೃತವರ್ಮ, ಸೈಂದವ, ಮದ್ರರಾಜ, ಮತ್ತು ರಾಜಾ ಸುಯೋಧನರನ್ನು ನೀನಲ್ಲದೇ ಬೇರೆ ಯಾರು ರಣದಲ್ಲಿ ಎದುರಿಸಿಯಾರು? ನಾನಾಜನಪದಗಳಿಂದ ಬಂದಿರುವ ಉಗ್ರ ಕ್ಷತ್ರಿಯರ ಅಶ್ವ-ರಥ-ಅನೆಗಳ ಶ್ರೇಣಿಗಳು ಬಹಳವಾಗಿ ಕ್ಷೀಣವಾಗಿವೆ. ಗೋವಾಸರ, ದಾಸಮೀಯರ, ವಸಾತಿಗಳ, ವ್ರಾತ್ಯರ, ವಾಟಧಾನರ, ಮಾನಿನಿ ಭೋಜರ, ಉದೀರ್ಣರ ಮತ್ತು ಬ್ರಹ್ಮಕ್ಷತ್ರರ ಮಹಾಸೇನೆಗಳು ನಿನ್ನನ್ನು ಎದುರಿಸಿ ಅಶ್ವರಥಗಜಗಳೊಂದಿಗೆ ನಿಧನವಾದವು. ಉಗ್ರರಾದ, ಕೋಪಿಷ್ಟರೂ, ಯುದ್ಧಶೌಂಡರೂ, ಬಲಶಾಲಿಗಳೂ, ದೃಬ್ಧಪಾಣಿಯರೂ, ಕ್ರೂರಕರ್ಮಿಗಳೂ ಆದ ತುಖರರು, ಯವನರು, ಖಶರು, ದಾರ್ವರು, ಅಭಿಸಾರರು, ದರದರು, ಶಕರು, ರಮಠತಂಗಣರು, ಆಂಧ್ರಕರು, ಪುಲಿಂದರು, ಉಗ್ರಕರ್ಮಿಗಳಾದ ಕಿರಾತರು, ಮ್ಲೇಚ್ಛರು, ಪಾರ್ವತೀಯರು, ಮತ್ತು ಸಾಗರಾನೂಪವಾಸಿಗಳು ಸುಯೋಧನನಿಗೋಸ್ಕರವಾಗಿ ಕ್ರುಗಳನ್ನು ಸೇರಿ ಹೋರಾಡಿದರು. ನೀನಲ್ಲದೇ ಬೇರೆ ಯಾರೂ ಯುದ್ಧದಲ್ಲಿ ಅವರನ್ನು ಜಯಿಸಲು ಶಕ್ಯರಾಗಿರಲಿಲ್ಲ. ವ್ಯೂಹಕ್ರಮದಲ್ಲಿದ್ದ ಧಾರ್ತರಾಷ್ಟ್ರನ ಉಗ್ರವಾದ ಮಹಾಸೇನೆಯನ್ನು ನೋಡಿ ನಿನ್ನಿಂದ ರಕ್ಷಿಸಲ್ಪಡದ ಯಾವ ಮನುಷ್ಯನು ತಾನೇ ಎದುರಿಸುತ್ತಿದ್ದನು? ಧೂಳಿನಿಂದ ಆವೃತವಾಗಿ ಸಾಗರದಂತೆ ಉಕ್ಕಿ ಬರುತ್ತಿದ್ದ ಆ ಸೇನೆಯನ್ನು ನಿನ್ನಿಂದ ರಕ್ಷಿತರಾದ ಪಾಂಡವರು ನಾಶಗೊಳಿಸಿದರು. ಇಂದಿನಿಂದ ಏಳು ದಿನಗಳ ಹಿಂದೆ ಯುದ್ಧದಲ್ಲಿ ಮಾಗಧರ ಅಧಿಪತಿ ಜಯತ್ಸೇನನು ಅಭಿಮನ್ಯುವಿನಿಂದ ಹತನಾದನು. ಅನಂತರ ಆ ರಾಜನಿಂದ ರಕ್ಷಿತಗೊಂಡಿದ್ದ ಹತ್ತು ಸಾವಿರ ಆನೆಗಳನ್ನು ಭೀಮಸೇನನು ಗದೆಯಿಂದ ಸಂಹರಿಸಿದನು. ಅವನ ಸೇನೆಯ ನೂರಾರು ಅನ್ಯ ರಥಗಳೂ ಆನೆಗಳೂ ನಾಶಗೊಂಡವು. ಹಾಗೆಯೇ ಮಹಾಭಯಂಕರ ಸಮರವು ನಡೆಯುತ್ತಿರಲು ಕೌರವರು ಭೀಮಸೇನನನ್ನು ಮತ್ತು ನಿನ್ನನ್ನು ಎದುರಿಸಿ ಕುದುರೆ, ರಥಗಳು ಮತ್ತು ಆನೆಗಳೊಂಡಿಗೆ ಮೃತ್ಯುಲೋಕಕ್ಕೆ ಹೋದರು.
“ಹಾಗೆ ಪಾಂಡವರಿಂದ ಅವರು ನಾಶಗೊಳ್ಳುತ್ತಿರಲು ಭೀಷ್ಮನು ಉಗ್ರ ಶರವರ್ಷಗಳನ್ನು ಸುರಿಸಿದನು. ಮಹಾಸ್ತ್ರಗಳನ್ನು ತಿಳಿದಿದ್ದ ಅವನು ಚೇದಿ, ಕಾಶಿ, ಪಾಂಚಾಲ, ಕರೂಷ, ಮತ್ಸ್ಯ ಕೇಕಯರನ್ನು ಶರಗಳಿಂದ ಮುಚ್ಚಿ ಸಂಹರಿಸಿದನು. ಅವನ ಚಾಪದಿಂದ ಹೊರಟ ಶತ್ರುದೇಹಗಳನ್ನು ಕೊರೆಯುವಂತಹ, ರುಕ್ಮಪುಂಖಗಳ ಜಿಹ್ಮಗ ಬಾಣಗಳಿಂದ ಆಕಾಶವೇ ತುಂಬಿಹೋಗಿತ್ತು. ಅವನು ಒಂಭತ್ತು ಬಗೆಯ ದುಷ್ಟಬಾಣಪ್ರಯೋಗಗಳ ಮಾರ್ಗಗಳನ್ನು ತ್ಯಜಿಸಿ ಹತ್ತನೆಯ ಮಾರ್ಗವನ್ನು ಬಳಸಿ ಕುದುರೆ-ಆನೆ-ರಥಗಳನ್ನು ಸಂಹರಿಸಿದನು. ಹತ್ತುದಿನಗಳ ಪರ್ಯಂತವಾಗಿ ಭೀಷ್ಮನು ನಿನ್ನ ಸೇನೆಯಲ್ಲಿ ರಥಾರೂಡರನ್ನು ಶೂನ್ಯರನ್ನಾಗಿ ಮಾಡಿದನು ಮತ್ತು ಆನೆ-ಕುದುರೆಗಳನ್ನು ಸಂಹರಿಸಿದನು. ಯುದ್ಧದಲ್ಲಿ ತನ್ನ ರುದ್ರ ಮತ್ತು ಉಪೇಂದ್ರರ ಸಮನಾದ ರೂಪವನ್ನು ತೋರಿಸುತ್ತಾ ಅವನು ಪಾಂಡವರ ಸೇನೆಯಲ್ಲಿ ಆರಿಸಿ ನಾಶಗೊಳಿಸುತ್ತಿದ್ದನು. ಚೇದಿ-ಪಾಂಚಾಲ-ಕೇಕಯ ಪೃಥ್ವೀಪಾಲರನ್ನು ಸಂಹರಿಸಿ ಪಾಂಡವೀ ಸೇನೆಯ ನರ-ಅಶ್ವ-ಗಜ ಸಂಕುಲಗಳನ್ನು ದಹಿಸಿದನು. ಸುಳಿಯಲ್ಲಿ ಮುಳುಗಿಹೋಗುವವನಂತಿದ್ದ ಮಂದ ಸುಯೋಧನನನ್ನು ಗೆಲ್ಲಿಸಲು ಬಯಸಿ ಸಮರದಲ್ಲಿ ಸುಡುತ್ತಿರುವ ಸೂರ್ಯನಂತೆ ಸಂಚರಿಸುತ್ತಿದ್ದ ಅವನನ್ನು ಸೃಂಜಯರೂ ಅನ್ಯ ಮಹೀಕ್ಷಿತರೂ ನೋಡಲೂ ಕೂಡ ಶಕ್ಯರಾಗುತ್ತಿರಲಿಲ್ಲ. ಸಂಗ್ರಾಮದಲ್ಲಿ ಜಯವನ್ನು ಬಯಸಿ ಹಾಗಿ ಸಂಚರಿಸುತ್ತಿರುವ ಅವನನ್ನು ಪಾಂಡವರು ಸರ್ವ ಪ್ರಯತ್ನದಿಂದ ಆಕ್ರಮಣಿಸಿದರು. ಆದರೆ ಭೀಷ್ಮನು ಸಮರದಲ್ಲಿ ಪಾಂಡವರನ್ನೂ ಸೃಂಜಯರನ್ನೂ ಪಲಾಯನಗೊಳಿಸಿ ಅವನೊಬ್ಬನೇ ರಣದಲ್ಲಿ ಏಕವೀರತ್ವವನ್ನು ಪಡೆದನು. ಆಗ ಆ ಪುರುಷವ್ಯಾಘ್ರನನ್ನು ನಿನ್ನಿಂದ ರಕ್ಷಿತನಾದ ಶಿಖಂಡಿಯು ಎದುರಿಸಿ ಸನ್ನತಪರ್ವ ಶರಗಳಿಂದ ಕೆಳಗುರುಳಿಸಿದನು. ನಿನ್ನನ್ನು ಶತ್ರುವನ್ನಾಗಿ ಪಡೆದ ಪಿತಾಮಹನು ಈಗ ಶರತಲ್ಪದ ಮೇಲೆ ಮಲಗಿದ್ದಾನೆ!
“ಉಗ್ರ ದ್ರೋಣನು ವ್ಯೂಹವನ್ನು ರಚಿಸಿ ಮಹಾರಥರನ್ನು ಉರುಳಿಸುತ್ತಾ ಶತ್ರುಸೇನೆಯನ್ನು ಭೇದಿಸಿ ಐದು ದಿನಗಳ ಮಹಾಯುದ್ಧವನ್ನು ನಡೆಸಿದನು. ಆ ಮಹಾರಥನು ಸಮರದಲ್ಲಿ ಜಯದ್ರಥನ ರಕ್ಷಣೆಯನ್ನು ಮಾಡಿ ಉಗ್ರ ರಾತ್ರಿಯಲ್ಲಿ ಅಂತಕನಂತೆ ಯುದ್ಧಮಾಡಿ ಸೇನೆಗಳನ್ನು ದಹಿಸಿದನು. ಇಂದಿನಿಂದ ಎರಡು ದಿನಗಳ ಹಿಂದೆ ವೀರ ಪ್ರತಾಪವಾನ್ ಭಾರದ್ವಾಜನು ಧೃಷ್ಟದ್ಯುಮ್ನನನ್ನು ಎದುರಿಸಿ ಪರಮಗತಿಯನ್ನು ಪಡೆದನು. ಆಗ ನೀನು ಯುದ್ಧದಲ್ಲಿ ಸೂತಪುತ್ರನೇ ಮೊದಲಾದ ಶತ್ರುಪಕ್ಷದ ರಥರನ್ನು ತಡೆಯದೇ ಇದ್ದಿದ್ದರೆ ಸಂಗ್ರಾಮದಲ್ಲಿ ನಾವು ದ್ರೋಣನನ್ನು ನಾಶಪಡಿಸಲು ಸಾಧ್ಯವಾಗುತ್ತಿರಲಿಲ್ಲ. ನೀನು ಧಾರ್ತರಾಷ್ಟ್ರನ ಸರ್ವ ಸೇನೆಯನ್ನು ತಡೆದುದರಿಂದಲೇ ಯುದ್ಧದಲ್ಲಿ ದ್ರೋಣನು ಪಾರ್ಷತನಿಂದ ಹತನಾದನು. ಜಯದ್ರಥನ ವಧೆಗಾಗಿ ನೀನು ರಣದಲ್ಲಿ ಮಾಡಿದಂತೆ ಯುದ್ಧದಲ್ಲಿ ಮಾಡಬಲ್ಲ ಬೇರೆ ಯಾವ ಕ್ಷತ್ರಿಯನು ಇದ್ದಾನೆ? ಅಸ್ತ್ರಬಲತೇಜಸ್ಸಿನಿಂದ ನೀನು ಶೂರ ಪಾರ್ಥಿವವನ್ನು ಸಂಹರಿಸಿ, ಮಹಾಸೇನೆಯನ್ನು ತಡೆದು ನಿಲ್ಲಿಸಿ, ರಾಜಾ ಸೈಂಧವನನ್ನು ಸಂಹರಿಸಿದೆ. ಸಿಂಧುರಾಜನ ವಧೆಯನ್ನು ಒಂದು ಆಶ್ಚರ್ಯವೆಂದೇ ಪಾರ್ಥಿವರು ತಿಳಿದುಕೊಂಡಿದ್ದಾರೆ. ಆದರೆ ಮಹಾರಥನಾದ ನಿನಗೆ ಇದೊಂದು ಆಶ್ಚರ್ಯಕರವಾದುದೇನಲ್ಲ! ಕ್ಷತ್ರಿಯರೆಲ್ಲರೂ ಒಟ್ಟಾಗಿ ರಣದಲ್ಲಿ ನಿನ್ನನ್ನು ಎದುರಿಸಿದರೆ ಒಂದೇ ಹಗಲಿನಲ್ಲಿ ಸುಟ್ಟುಹೋಗುತ್ತಾರೆ ಎಂದು ನನ್ನ ಅಭಿಪ್ರಾಯ!
“ಯುದ್ಧದಲ್ಲಿ ಭೀಷ್ಮ-ದ್ರೋಣರು ಹತರಾದಾಗಲೇ ಸರ್ವವೀರರೊಂದಿಗೆ ಧಾರ್ತರಾಷ್ಟ್ರನ ಘೋರ ಸೇನೆಯು ನಾಶವಾಗಿ ಹೋಯಿತು. ಯೋಧಪ್ರವರರಿಂದ ಕ್ಷೀಣವಾಗಿರುವ, ಕುದುರೆ-ಸೈನಿಕ-ಆನೆಗಳು ಹತವಾಗಿರುವ ಭಾರತೀ ಸೇನೆಯು ಸೂರ್ಯ-ಚಂದ್ರ-ನಕ್ಷತ್ರಗಳ ಬೆಳಕಿನಿಂದ ಹೀನವಾಗಿರುವ ಆಕಾಶದಂತೆ ತೋರುತ್ತಿದೆ. ಹಿಂದೆ ಪರಾಕ್ರಮದಿಂದ ಶಕ್ರನು ಅಸುರ ಸೇನೆಯನ್ನು ಮಾಡಿದಂತೆ ನೀನು ಕೂಡ ರಣದಲ್ಲಿ ಭೀಮವಿಕ್ರಮದಿಂದ ಈ ಸೇನೆಯನ್ನು ಧ್ವಂಸಗೊಳಿಸು! ಅವರಲ್ಲಿ ಅಳಿದುಳಿದವರು ಐವರು ಮಹಾರಥರಿದ್ದಾರೆ: ಅಶ್ವತ್ಥಾಮ, ಕೃತವರ್ಮ, ಕರ್ಣ, ಮದ್ರಾಧಿಪ ಮತ್ತು ಕೃಪ. ಆ ಐವರು ಮಹಾರಥರನ್ನು ಇಂದು ಸಂಹರಿಸಿ ಶತ್ರುಗಳಿಲ್ಲದ ದ್ವೀಪ-ಪಟ್ಟಣಗಳಿಂದೊಡಗೂಡಿದ ಈ ಪೃಥ್ವಿಯನ್ನು ರಾಜನಿಗೊಪ್ಪಿಸು! ಆ ಅಮಿತವೀರ್ಯಪಾರ್ಥನು ಇಂದು ಆಕಾಶ-ಜಲ-ಪಾತಾಳಗಳೊಂದಿಗೆ ಮತ್ತು ಪರ್ವತ-ಮಹಾವನಗಳೊಂದಿಗೆ ಈ ವಸುಂಧರೆಯನ್ನೂ ಶ್ರೀಯನ್ನು ಪಡೆಯಲಿ! ಹಿಂದೆ ವಿಷ್ಣು ಹರಿಯು ದೈತ್ಯ-ದಾನವರನ್ನು ಸಂಹರಿಸಿ ಮೇದಿನಿಯನ್ನು ರಾಜ ಶಕ್ರನಿಗೆ ಇತ್ತಂತೆಯೇ ಆಗಲಿ. ವಿಷ್ಣುವಿನಿಂದ ದಾನವೇಯರು ಹತರಾದಾಗ ದೇವತೆಗಳು ಹೇಗೋ ಹಾಗೆ ನಿನ್ನಿಂದ ಶತ್ರುಗಳು ಹತರಾಗಲು ಇಂದು ಪಾಂಚಾಲರು ಮೋದಿಸುತ್ತಾರೆ.
“ಒಂದುವೇಳೆ ನೀನು ಗುರು ದ್ರೋಣನನ್ನು ಗೌರವಿಸಿ ಅಶ್ವತ್ಥಾಮನನ್ನು ಸಂಹರಿಸದಿರಬಹುದು. ಮತ್ತು ಆಚಾರ್ಯ ಗೌರವದಿಂದ ಕೃಪನನ್ನು ಸಂಹರಿಸದಿರಬಹುದು. ಅಥವಾ ಅತ್ಯಂತ ಅನುಪಚಿತವೆಂದು ನೀನು ಭ್ರಾತೃಬಾಂಧವರನ್ನು ಮನ್ನಿಸಿ ಕೃತವರ್ಮನನ್ನು ಯಮಕ್ಷಯಕ್ಕೆ ಕಳುಹಿಸುವುದು ಅಸಾಧ್ಯವೆಂದು ತಿಳಿದಿರಬಹುದು. ತಾಯಿಯ ಅಣ್ಣ ಶಲ್ಯನನ್ನು ಎದುರಿಸಿ ದಯೆಯಿಂದ ಕೊಲ್ಲಲು ನೀನು ಇಷ್ಟಪಡದಿರಬಹುದು. ಆದರೆ ಇಂದು ಈ ಪಾಪಮತಿ ಕರ್ಣನನ್ನು ಮಾತ್ರ ನಿಶಿತ ಶರಗಳನ್ನು ಸಂಹರಿಸಬೇಕು! ಇದೇ ನಿನ್ನ ಸುಕೃತ ಕರ್ಮ. ಅಲ್ಲಿ ಯೋಚಿಸಬೇಕಾದುದು ಏನೂ ಇಲ್ಲ. ನಾನೂ ಕೂಡ ನಿನಗೆ ಅನುಜ್ಞೆನೀಡುತ್ತಿದ್ದೇನೆ. ಅದರಲ್ಲಿ ಯಾವ ದೋಷವೂ ಇಲ್ಲ. ಪುತ್ರರೊಂದಿಗೆ ನಿನ್ನ ತಾಯಿಯನ್ನು ರಾತ್ರಿವೇಳೆಯಲ್ಲಿ ಸುಯೋಧನನು ಸುಡಲು ಪ್ರಯತ್ನಿಸಿದುದು ಮತ್ತು ನಿಮ್ಮನ್ನು ದ್ಯೂತದಲ್ಲಿ ತೊಡಗಿಸಿದುದು ಇವೆಲ್ಲದರ ಮೂಲವು ದುಷ್ಟಾತ್ಮ ಕರ್ಣನೇ ಆಗಿದ್ದಾನೆ. ಕರ್ಣನೇ ತನ್ನ ತ್ರಾಣವೆಂದು ನಿತ್ಯವೂ ಸುಯೋಧನನು ತಿಳಿದುಕೊಂಡಿದ್ದಾನೆ. ಆದುದರಿಂದಲೇ ಅವನು ಸಂರಬ್ಧನಾಗಿ ನನ್ನನ್ನು ಕೂಡ ಬಂಧಿಸಲು ಪ್ರಯತ್ನಿಸಿದನು. ಧಾರ್ತರಾಷ್ಟ್ರನ ಸ್ಥಿರ ಬುದ್ಧಿಯಾಗಿರುವ ಕರ್ಣನು ರಣದಲ್ಲಿ ಪಾರ್ಥರೆಲ್ಲರನ್ನೂ ಜಯಿಸುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಕರ್ಣನನ್ನು ಆಶ್ರಯಿಸಿ ಧಾರ್ತರಾಷ್ಟ್ರನು ನಿನ್ನ ಬಲವನ್ನು ತಿಳಿದು ಕೂಡ ನಿಮ್ಮೊಂದಿಗೆ ಯುದ್ಧಮಾಡಲು ಬಯಸಿದನು. ಏಕೆಂದರೆ “ನಾನು ಪಾರ್ಥರನ್ನೂ ವಾಸುದೇವನನ್ನೂ ಅವರೊಡನೆ ಸೇರಿರುವ ರಾಜರೊಂದಿಗೆ ಮಹಾರಣದಲ್ಲಿ ಜಯಿಸುತ್ತೇನೆ!” ಎಂದು ಕರ್ಣನು ನಿತ್ಯವೂ ಹೇಳುತ್ತಿರುತ್ತಾನೆ. ದುರಾತ್ಮ ಧಾರ್ತರಾಷ್ಟ್ರನನ್ನು ಪ್ರೋತ್ಸಾಹಿಸುತ್ತಾ ಇಬ್ಬರೂ ಒಂದಾಗಿ ಗರ್ಜಿಸುತ್ತಿರುವ ಕರ್ಣನನ್ನು ನೀನು ಇಂದು ಸಂಹರಿಸು! ನಿಮ್ಮೊಡನೆ ಧಾರ್ತರಾಷ್ಟ್ರನು ಏನೆಲ್ಲ ಪಾಪವನ್ನೆಸಗಿದ್ದಾನೋ ಅವೆಲ್ಲದರ ಮುಖವಾಗಿ ದುಷ್ಟಾತ್ಮಾ ಪಾಪಮತಿ ಕರ್ಣನಿದ್ದನು.
“ಮಹಾರಥರಾದ ವೀರ ದ್ರೋಣ, ದ್ರೌಣಿ ಮತ್ತು ಕೃಪರನ್ನು ಕಂಪಿಸುತ್ತಾ, ಮಾತಂಗಗಳನ್ನು ನಿರ್ಮನುಷ್ಯರನ್ನಾಗಿಸುತ್ತಾ, ಮಹಾರಥರನ್ನು ವಿರಥರನ್ನಾಗಿಸುತ್ತಾ, ಕುದುರೆಗಳನ್ನು ಅಶ್ವಾರೋಹಿಗಳಿಂದ ವಿಹೀನರನ್ನಾಗಿಸುತ್ತಾ, ಪದಾತಿಗಳ ಆಯುಧ ಮತ್ತು ಜೀವಗಳನ್ನು ತೆಗೆಯುತ್ತಿದ್ದ ಆ ಋಷಭಸ್ಕಂಧ, ಕುರು-ವೃಷ್ಣಿ ಯಶಸ್ಕರ ಋಷಭೇಕ್ಷಣ ವೀರ ಸೌಭದ್ರನು ಧಾರ್ತರಾಷ್ಟ್ರರ ಆ ಕ್ರೂರ ಷಢ್ಮಹಾರಥರಿಂದ ಹತನಾದುದನ್ನು ನಾವು ನೋಡಿದೆವು. ಸೇನೆಗಳನ್ನು ಧ್ವಂಸಗೊಳಿಸುತ್ತಾ, ಮಹಾರಥರನ್ನು ವ್ಯಥೆಗೊಳಿಸುತ್ತಾ, ಮನುಷ್ಯ-ಕುದುರೆ-ಮಾತಂಗಗಳನ್ನು ಯಮಕ್ಷಯಕ್ಕೆ ಕಳುಗಿಸುತ್ತಾ ಸೌಭದ್ರನು ಶರಗಳಿಂದ ವಾಹಿನಿಗಳನ್ನು ಸುಡುತ್ತಿದ್ದನು. ಸಖಾ! ನಿನ್ನ ಮೇಲೆ ಆಣೆಯನ್ನಿಟ್ಟು ಹೇಳುತ್ತಿದ್ದೇನೆ: ಅದನ್ನು ನೆನಪಿಸಿಕೊಂಡು ನನ್ನ ದೇಹವು ಸುಡುತ್ತಿದೆ! ಅಲ್ಲಿ ಕೂಡ ದುಷ್ಟಾತ್ಮ ಕರ್ಣನ ದ್ರೋಹವಿತ್ತು. ರಣದ ಮುಂದಿದ್ದ ಅಭಿಮನ್ಯುವನ್ನು ತಡೆಯಲು ಕರ್ಣನೂ ಕೂಡ ಅಶಕ್ಯನಾಗಿದ್ದನು. ಸೌಭದ್ರನ ಶರಗಳಿಂದ ಗಾಯಗೊಂಡು ರಕ್ತಸುರಿಸುತ್ತಿದ್ದ ಅವನು ಮೂರ್ಛೆಗೊಂಡು ಸಾಯಕಗಳಿಂದ ಪೀಡಿತನಾಗಿ ಕ್ರೋಧದಿಂದ ಉರಿದೆದ್ದು ನಿಟ್ಟುಸಿರುಬಿಡುತ್ತಾ ವಿಮುಖನಾಗಿದ್ದನು. ಪ್ರಹಾರಗಳಿಂದ ಬಳಲಿ ಜೀವಿತದಲ್ಲಿ ನಿರಾಶನಾಗಿ ಪಲಾಯನಮಾಡಲು ಬಯಸಿ ಇವನು ರಣದಲ್ಲಿ ವಿಹ್ವಲನಾಗಿ ನಿಂತಿದ್ದನು. ಆಗ ದ್ರೋಣನ ಸಮಯೋಚಿತವಾದ ಸಮರದ ಕ್ರೂರ ಉಪಾಯವನ್ನು ಕೇಳಿ ಕರ್ಣನು ಅಭಿಮನ್ಯುವಿನ ಕಾರ್ಮುಕವನ್ನು ತುಂಡರಿಸಿದನು. ಆಯುಧವು ಭಗ್ನವಾಗಲು ರಣದಲ್ಲಿ ಅಭಿಮನ್ಯುವನ್ನು ಮೋಸಗಾರರಾದ ಆ ಐವರು ಮಹಾರಥರು ಶರವೃಷ್ಟಿಗಳಿಂದ ಮುಚ್ಚಿಬಿಟ್ಟರು. ಸಭೆಯಲ್ಲಿ ಕರ್ಣನು ಕೃಷ್ಣೆಗೆ ಪಾಂಡವೇಯರ ಮತ್ತು ಕುರುಗಳ ಪ್ರಮುಖವೇ ಕರುಣೆಯಿಲ್ಲದವನಂತೆ ಈ ಕಠೋರ ಮಾತುಗಳನ್ನಾಡಿರಲಿಲ್ಲವೇ? “ಕೃಷ್ಣೇ! ಪಾಂಡವರು ವಿನಷ್ಟರಾಗಿ ಶಾಶ್ವತ ನರಕಕ್ಕೆ ಹೋಗಿಬಿಟ್ಟಿದ್ದಾರೆ! ಬೇರೆಯಾರನ್ನಾದರೂ ಪತಿಯನ್ನಾಗಿ ಆರಿಸಿಕೋ! ಧೃತರಾಷ್ಟ್ರನ ದಾಸಿಯಾಗಿ ಅವನ ಮನೆಯನ್ನು ಪ್ರವೇಶಿಸು! ನಿನ್ನ ಪತಿಗಳು ಇನ್ನು ಇಲ್ಲವಾಗಿದ್ದಾರೆ!”
“ಆಗ ಆ ಪಾಪಿ ಕರ್ಣನು ನಿನಗೆ ಕೇಳುವಂತೆ ಈ ಪಾಪದ ಮಾತುಗಳನ್ನಾಡಿದ್ದನು. ಪಾಪಿಯ ಆ ಮಾತುಗಳನ್ನು ಜೀವವನ್ನು ಹಾರಿಸುವ ಸುವರ್ಣದಿಂದ ಕೊರೆಯಲ್ಪಟ್ಟ ಶಿಲಾಧೌತ ಬಾಣಗಳನ್ನು ಪ್ರಯೋಗಿಸಿ ಉಪಶಮನಗೊಳಿಸು! ಇನ್ನೂ ಏನೆಲ್ಲ ಪಾಪಗಳನ್ನು ನಿನ್ನಕುರಿತು ಈ ದುಷ್ಟಾತ್ಮನು ಮಾಡಿರುವನೋ ಅವೆಲ್ಲವನ್ನೂ ಮತ್ತು ಅವನ ಜೀವವನ್ನೂ ನಿನ್ನ ಶರಗಳು ಇಂದು ಉಪಶಮನಗೊಳಿಸಲಿ! ಗಾಂಡೀವದಿಂದ ಪ್ರಯೋಗಿಸಲ್ಪಟ್ಟ ಘೋರಶರಗಳು ಇಂದು ಅವನ ಶರೀರಗಳನ್ನು ಹೊಗಲು ದುಷ್ಟಾತ್ಮ ಕರ್ಣನು ದ್ರೋಣ-ಭೀಷ್ಮರ ಮಾತುಗಳನ್ನು ಸ್ಮರಿಸಿಕೊಳ್ಳುತ್ತಾನೆ! ನೀನು ಬಿಡುವ ಶತ್ರುಗಳನ್ನು ಸಂಹರಿಸಬಲ್ಲ ವಿದ್ಯುತ್ತಿನ ಪ್ರಭೆಯುಳ್ಳ ಸುವರ್ಣಪುಂಖಗಳ ನಾರಾಚಗಳು ಅವನ ಕವಚವನ್ನು ಭೇದಿಸಿ ರಕ್ತವನ್ನು ಕುಡಿಯುತ್ತವೆ! ಇಂದು ನಿನ್ನ ಭುಜಗಳಿಂದ ಪ್ರಯೋಗಿಸಲ್ಪಟ್ಟ ಮಹಾವೇಗದ ಉಗ್ರ ನಿಶಿತ ಶರಗಳು ಕವಚಗಳನ್ನು ಭೇದಿಸಿ ಕರ್ಣನನ್ನು ಯಮಕ್ಷಯಕ್ಕೆ ಕಳುಹಿಸುತ್ತವೆ! ಇಂದು ನಿನ್ನ ಶರಗಳಿಂದ ಪೀಡಿತನಾಗಿ ದೀನನಾಗಿ ದುಃಖದಿಂದ ಹಾಹಾಕಾರಮಾಡುತ್ತಾ ಕರ್ಣನು ರಥದಿಂದ ಬೀಳುವುದನ್ನು ವಸುಧಾಧಿಪರು ನೋಡಲಿದ್ದಾರೆ! ಇಂದು ಆಯುಧವನ್ನು ಎಸೆದು ಭೂಮಿಯ ಮೇಲೆ ಬಿದ್ದು ತನ್ನದೇ ರಕ್ತದಲ್ಲಿ ಮುಳುಗಿ ಮಲಗಿರುವ ಕರ್ಣನನ್ನು ಅವನ ಸುಹೃದಯರು ನೋಡಲಿದ್ದಾರೆ! ಹಸ್ತಿಕಕ್ಷದ ಚಿಹ್ನೆಯುಳ್ಳ ಈ ಆಧಿರಥನ ಮಹಾ ಧ್ವಜವು ನಿನ್ನ ಭಲ್ಲಗಳಿಂದ ಮಥಿಸಲ್ಪಟ್ಟು ಅಲುಗಾಡುತ್ತಾ ಭೂಮಿಯಮೇಲೆ ಬೀಳಲಿದೆ! ಯೋಧನು ಹತನಾಗಿ, ನಿನ್ನ ನೂರಾರು ಶರಗಳಿಂದ ಛಿನ್ನವಾಗಿರುವ ಹೇಮವಿಭೂಷಿತವಾದ ರಥವನ್ನು ಬಿಟ್ಟು ಭೀತನಾಗಿ ಶಲ್ಯನು ಪಲಾಯನ ಮಾಡುವನು! ನಿನ್ನಿಂದ ಹತನಾದ ಆಧಿರಥನನ್ನು ನೋಡಿ ಸುಯೋಧನನು ಇಂದು ಜೀವಿತದಲ್ಲಿ ಮತ್ತು ರಾಜ್ಯದಲ್ಲಿ ನಿರಾಶನಾಗಲಿದ್ದಾನೆ!
“ಪಾಂಡವರ ಜಯವನ್ನು ಬಯಸುವ ಪಾಂಚಾಲರು ಇಗೋ ಕರ್ಣನ ನಿಶಿತ ಶರಗಳಿಂದ ಪ್ರಹರಿಸಲ್ಪಟ್ಟು ಓಡುಹೋಗುತ್ತಿದ್ದಾರೆ! ಪಾಂಚಾಲರು, ದ್ರೌಪದೇಯರು, ಧೃಷ್ಟದ್ಯುಮ್ನ-ಶಿಖಂಡಿಯರು, ಧೃಷ್ಟದ್ಯುಮ್ನನ ಮಕ್ಕಳು, ನಾಕುಲಿ ಶತಾನೀಕ, ನಕುಲ, ಸಹದೇವ, ದುರ್ಮುಖ, ಜನಮೇಜಯ ಮತ್ತು ಸಾತ್ಯಕಿಯರು ಕರ್ಣನ ವಶದಲ್ಲಿ ಸಿಲುಕಿರುವುದನ್ನು ನೋಡು! ಮಹಾರಣದಲ್ಲಿ ಕರ್ಣನಿಂದ ಅಭ್ಯಾಹತರಾಗುತ್ತಿರುವ ನಿನ್ನ ಬಂಧು ಪಾಂಚಾಲರ ಘೋರ ನಿನಾದವು ಕೇಳಿಬರುತ್ತಿದೆ! ಈ ಪಾಂಚಾಲರು ಭೀತರಾಗುವವರಲ್ಲ. ಎಂದೂ ಇವರು ಯುದ್ಧದಿಂದ ಪರಾಙ್ಮುಖರಾಗುವವರಲ್ಲ. ಏಕೆಂದರೆ ಈ ಮಹಾರಥರು ಮೃತ್ಯುವನ್ನೇ ಎಣಿಸುತ್ತಿದ್ದಾರೆ! ಭೀಷ್ಮನೊಬ್ಬನೇ ಪಾಂಡವೀ ಸೇನೆಯನ್ನು ಶರೌಘಗಳಿಂದ ಮುಚ್ಚಿಬಿಟ್ಟಿರಲು ಪಾಂಚಾಲರು ಅವನನ್ನು ಎದುರಿಸಿದರೇ ಹೊರತು ಪರಾಙ್ಮುಖರಾಗಲಿಲ್ಲ! ಹಾಗೆಯೇ ಅವರು ತನ್ನ ಓಜಸ್ಸಿನಿಂದ ಅಸ್ತ್ರಾಗ್ನಿಯನ್ನು ಉರಿಯಿಸುತ್ತಾ ಸುಡುತ್ತಿದ್ದ ಸರ್ವಧನುಷ್ಮತರ ಗುರು ದುರ್ಧರ್ಷ ದ್ರೋಣನನ್ನು ಆಕ್ರಮಣಿಸುತ್ತಿದ್ದರು. ಯುದ್ಧದಲ್ಲಿ ಶತ್ರುಗಳನ್ನು ಗೆಲ್ಲಲು ನಿತ್ಯವೂ ಸಿದ್ಧರಾಗಿರುವ ಆ ಅರಿಂದಮ ಪಾಂಚಾಲರು ಆಧಿರಥಿಯ ಭಯದಿಂದ ಪರಾಙ್ಮುಖರಾಗುವುದಿಲ್ಲ! ತನ್ನ ಮೇಲೆ ಬೀಳುತ್ತಿರುವ ಆ ತರಸ್ವೀ ಶೂರ ಪಾಂಚಾಲರನ್ನು ಪತಂಗಗಳನ್ನು ಬೆಂಕಿಯು ಹೇಗೋ ಹಾಗೆ ಕರ್ಣನು ಶರಗಳಿಂದ ಸುಟ್ಟುಹಾಕಿಬಿಡುತ್ತಿದ್ದಾನೆ. ಮಿತ್ರನಿಗಾಗಿ ಜೀವವನ್ನೇ ತೊರೆದು ಎದುರಿಸಿರುವ ಆ ವೀರ ಪಾಂಚಾಲರನ್ನು ರಣದಲ್ಲಿ ನೂರಾರು ಸಂಖ್ಯೆಗಳಲ್ಲಿ ರಾಧೇಯನು ನಾಶಗೊಳಿಸುತ್ತಿದ್ದಾನೆ. ಹಿಂದೆ ಋಷಿಸತ್ತಮ ಭಾರ್ಗವ ರಾಮನಿಂದ ಪಡೆದ ಘೋರರೂಪೀ ಅಸ್ತ್ರವನ್ನೇ ಇಂದು ಕರ್ಣನು ಪ್ರಯೋಗಿಸಿದ್ದಾನೆ. ಸರ್ವಸೇನೆಗಳನ್ನು ಸುಡಬಲ್ಲ ಘೋರರೂಪಿಯಾದ ಸುದಾರುಣವಾದ ಆ ಅಸ್ತ್ರವು ತನ್ನ ತೇಜಸ್ಸಿನಿಂದ ಉರಿಯುತ್ತಾ ಮಹಾಸೇನೆಯನ್ನು ಆವರಿಸಿದೆ! ಇಗೋ ಸಂಗ್ರಾಮದಲ್ಲಿ ಕರ್ಣನ ಚಾಪದಿಂದ ಹೊರಟ ಶರಗಳು ಭ್ರಮರಗಳಂತೆ ಹಾರಿಬಂದು ನಿನ್ನವರನ್ನು ಸುಡುತ್ತಿವೆ! ಇಗೋ ಪಾಂಚಾಲರು, ಸಮರದಲ್ಲಿ ಕರ್ಣನ ಅಸ್ತ್ರಕ್ಕೆ ಸಿಲುಕಿ ತಮ್ಮನ್ನು ತಾವು ತಡೆಯಲಾರದೇ ಸರ್ವ ದಿಕ್ಕುಗಳಲ್ಲಿಯೂ ಚದುರಿ ಹೋಗುತ್ತಿದ್ದಾರೆ! ಇಗೋ ದೃಢಕ್ರೋಧನಾದ ಭೀಮನು ಎಲ್ಲಕಡೆಗಳಿಂದ ಸೃಂಜಯರಿಂದ ಸುತ್ತುವರೆಯಲ್ಪಟ್ಟು ಕರ್ಣನನ್ನು ನಿಶಿತ ಶರಗಳಿಂದ ಪೀಡಿಸಿ ಹೋರಾಡುತ್ತಿದ್ದಾನೆ! ರೋಗವು ದೇಹವನ್ನು ಹೇಗೋ ಹಾಗೆ ಕರ್ಣನು ಪಾಂಡವರನ್ನೂ, ಸೃಂಜಯರನ್ನೂ, ಪಾಂಚಾಲರನ್ನೂ ಸಂಹರಿಸಲು ನೋಡುತ್ತಿದ್ದಾನೆ. ನೀನಲ್ಲದೇ - ರಾಧೇಯನನ್ನು ಎದುರಿಸಿ ಕುಶಲನಾಗಿ ಮನೆಗೆ ತೆರಳುವ - ಬೇರೆ ಯಾವ ಯೋಧನನ್ನೂ ನಾನು ಯುಧಿಷ್ಠಿರನ ಸೇನೆಯಲ್ಲಿ ಕಾಣೆ! ಪ್ರತಿಜ್ಞೆಮಾಡಿದಂತೆ ಮಾಡಿ ಇಂದು ನೀನು ನಿಶಿತಬಾಣಗಳಿಂದ ಅವನನ್ನು ಸಂಹರಿಸಿ ಕೀರ್ತಿಯನ್ನು ಹೊಂದುವೆ! ನೀನು ಮಾತ್ರ ಕರ್ಣನಿರುವ ಕೌರವರನ್ನು ರಣದಲ್ಲಿ ಗೆಲ್ಲಲು ಶಕ್ತ. ಯೋಧರಲ್ಲಿ ಶ್ರೇಷ್ಠ! ಬೇರೆ ಯಾವ ಯೋಧನಿಗೂ ಇದು ಶಕ್ಯವಿಲ್ಲ. ನಾನು ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ. ಮಹಾರಥ ಕರ್ಣನನ್ನು ಕೊಲ್ಲುವ ಈ ಮಹಾಕಾರ್ಯವನ್ನು ಮಾಡಿ ಪಾರ್ಥ! ನರೋತ್ತಮ! ಕೃತಾರ್ಥನೂ, ಸಫಲನೂ ಮತ್ತು ಸುಖಿಯೂ ಆಗು!”
ಕೇಶವನಾಡಿದ ಆ ಮಾತನ್ನು ಕೇಳಿ ಕ್ಷಣದಲ್ಲಿಯೇ ಬೀಭತ್ಸುವು ಶೋಕರಹಿತನೂ, ಸಂಪ್ರಹೃಷ್ಟನೂ, ಉತ್ಸಾಹಿತನೂ ಆದನು. ಆಗ ಅವನು ಗಾಂಡೀವ ಧನುಸ್ಸನ್ನು ಸೆಳೆದು, ಮೌರ್ವಿಯನ್ನು ತೀಡಿ ಠೇಂಕರಿಸಿ ಕರ್ಣನ ವಿನಾಶಕ್ಕಾಗಿ ನಿಶ್ಚಯಿಸಿ ಕೇಶವನಿಗೆ ಹೇಳಿದನು: “ಗೋವಿಂದ! ನೀನು ನಾಥನಾಗಿರುವಾಗ ನನ್ನ ಜಯವು ನಿಶ್ಚಯಿಸಿದ್ದೇ ಆಗಿದೆ. ನನ್ನ ಮೇಲೆ ಇಂದು ಪ್ರಸನ್ನನಾಗಿರುವ ನೀನು ಭೂತ-ಭವ್ಯ-ಭವತ್ತುಗಳ ಪ್ರಭುವು! ಕೃಷ್ಣ! ನಿನ್ನ ಸಹಾಯದಿಂದ ನಾನು ಮೂರು ಲೋಕಗಳನ್ನೂ ಎದುರಿಸಬಲ್ಲೆ. ಪರಮ ಲೋಕವನ್ನೂ ಸೇರಬಲ್ಲೆ. ಇನ್ನು ಮಹಾರಣದಲ್ಲಿ ಕರ್ಣನು ಯಾವ ಲೆಖ್ಕಕ್ಕೆ? ಜನಾರ್ದನ! ಓಡಿಹೋಗುತ್ತಿರುವ ಪಾಂಚಾಲರ ಸೇನೆಯನ್ನು ನೋಡುತ್ತಿದ್ದೇನೆ. ಸಮರದಲ್ಲಿ ನಿರ್ಭೀತನಾಗಿ ಸಂಚರಿಸುತ್ತಿರುವ ಕರ್ಣನನ್ನೂ ನೋಡುತ್ತಿದ್ದೇನೆ. ಕರ್ಣನಿಂದ ಸೃಷ್ಟಿಸಲ್ಪಟ್ಟ, ಸುತ್ತಲೂ ಹರಡುತ್ತಿರುವ, ಶಕ್ರನ ಮಹಾವಜ್ರದಂತಿರುವ ಭಾರ್ಗವಾಸ್ತ್ರವನ್ನೂ ನಾನು ನೋಡುತ್ತಿದ್ದೇನೆ. ನಾನು ಇಲ್ಲಿ ಏನು ಸಂಗ್ರಾಮವನ್ನು ನಡೆಸುತ್ತೇನೋ ಅದರ ಕುರಿತು ಭೂತಗಳು ಭೂಮಿಯು ಧರಿಸಿರುವವರೆಗೆ ಮಾತನಾಡಿಕೊಳ್ಳುತ್ತಿರುತ್ತವೆ. ಇಂದು ನನ್ನ ಕೈಯಿಂದ ಪ್ರಜೋದಿತಗೊಂಡು ಗಾಂಡೀವದಿಂದ ಹೊರಡುವ ವಿಕರ್ಣ ಬಾಣಗಳು ಕರ್ಣನನ್ನು ಗಾಯಗೊಳಿಸಿ ಮೃತ್ಯುವಿಗೆ ಒಯ್ಯುವವು! ಇಂದು ರಾಜಾ ಧೃತರಾಷ್ಟ್ರನು ರಾಜ್ಯಕ್ಕೆ ಅರ್ಹನಾಗಿರದ ದುರ್ಯೋಧನನನ್ನು ರಾಜ್ಯಾಭೀಷೇಕಮಾಡಿದುದಕ್ಕೆ ತನ್ನದೇ ಬುದ್ಧಿಯನ್ನು ಹಳಿದುಕೊಳ್ಳುತ್ತಾನೆ! ಇಂದು ಧೃತರಾಷ್ಟ್ರನು ರಾಜ್ಯ, ಸುಖ, ಸಂಪತ್ತು, ರಾಷ್ಟ್ರ, ಮತ್ತು ನಂತರ ಪುತ್ರರಿಂದಲೂ ವಿಯೋಗಹೊಂದುತ್ತಾನೆ! ಕರ್ಣನು ಹತನಾಗಲು ಇಂದು ರಾಜಾ ದುರ್ಯೋಧನನು ಜೀವದಲ್ಲಿಯೇ ನಿರಾಶನಾಗುತ್ತಾನೆ. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ! ಇಂದು ನನ್ನ ಶರಗಳಿಂದ ಚೂರು ಚೂರುಗಳಾಗಿ ತುಂಡಾದನಂತರ ಜನೇಶ್ವರನು ಸಂಧಿಯಕುರಿತು ನೀನು ಹೇಳಿದ ಮಾತುಗಳನ್ನು ಸ್ಮರಿಸಿಕೊಳ್ಳುತ್ತಾನೆ! ಇಂದು ಸೌಬಲನು ನನ್ನ ಶರಗಳನ್ನೇ ದಾಳಗಳೆಂದೂ, ಗಾಂಡೀವವೇ ಜೂಜುಗಾರ ಮತ್ತು ರಥವೇ ಜೂಜಾಡುವ ಕಟ್ಟೆ ಎಂದು ತಿಳಿದುಕೊಳ್ಳುತ್ತಾನೆ! ರಣದಲ್ಲಿ ಪೃಥ್ವಿಯ ಬೇರೆ ಯಾವ ನರನನ್ನೂ ಮನ್ನಿಸದಿದ್ದ ಸೂತಪುತ್ರನ ರಕ್ತವನ್ನು ಭೂಮಿಯು ಕುಡಿಯಲಿದೆ! ಗಾಂಡೀವದಿಂದ ಸೃಷ್ಟಿಸಲ್ಪಟ್ಟ ಶರಗಳು ಕರ್ಣನಿಗೆ ಪರಮಗತಿಯನ್ನು ನೀಡುತ್ತವೆ! ಅಂದು ಸಭಾಮಧ್ಯದಲ್ಲಿ ಪಾಂಡವರ ಕುರಿತು ತಿರಸ್ಕಾರಪೂರ್ವಕವಾಗಿ ಮಾತನಾಡುತ್ತ ಪಾಂಚಾಲಿಗೆ ಯಾವ ಕ್ರೂರ ಮಾತುಗಳನ್ನಾಡಿದನ್ನು ಅದಕ್ಕೆ ಇಂದು ರಾಧೇಯನು ಪಶ್ಚಾತ್ತಾಪಪಡುತ್ತಾನೆ. ಅಂದು ಎಣ್ಣೆಯನ್ನು ತೆಗೆದ ಪೊಳ್ಳು ಎಳ್ಳಿನಂತಿರುವರೆಂದು ಕರೆಯಲ್ಪಟ್ಟವರು ಇಂದು ದುರಾತ್ಮ ಸೂತಪುತ್ರ ವೈಕರ್ತನ ಕರ್ಣನು ಹತನಾದನಂತರ ಎಣ್ಣೆಯಿಂದ ಕೂಡಿದ ಎಳ್ಳಿನಂತೆಯೇ ಆಗುತ್ತಾರೆ! ನಾನು ನಿಮ್ಮನ್ನು ಪಾಂಡುಪುತ್ರರಿಂದ ಸಂರಕ್ಷಿಸುತ್ತೇನೆ ಎಂದು ಹೇಳಿದ ಅವನ ಮಾತುಗಳನ್ನು ನನ್ನ ನಿಶಿತ ಶರಗಳು ಸುಳ್ಳಾಗಿಸುತ್ತವೆ! ಪುತ್ರರೊಂದಿಗೆ ಸರ್ವ ಪಾಂಡವರನ್ನೂ ನಾನು ಸಂಹರಿಸುತ್ತೇನೆ ಎಂದು ಯಾರು ಹೇಳಿದ್ದನೋ ಆ ಕರ್ಣನನ್ನು ನಾನು ಇಂದು ಸರ್ವಧನ್ವಿಗಳೂ ನೋಡುತ್ತಿದ್ದಂತೆ ಸಂಹರಿಸುತ್ತೇನೆ! ಯಾರ ವೀರ್ಯದಮೇಲೆ ವಿಶ್ವಾಸವನ್ನಿಟ್ಟು ದುರ್ಬುದ್ಧಿ ಧಾರ್ತರಾಷ್ಟ್ರನು ನಿತ್ಯವೂ ನಮ್ಮನ್ನು ಅಪಮಾನಿಸುತ್ತಾ ಬಂದನೋ ಆ ರಾಧೇಯ ಕರ್ಣನನ್ನು ನಾನು ಇಂದು ಸಂಹರಿಸುತ್ತೇನೆ. ಇಂದು ಕರ್ಣನು ಹತರಾಗಲು ರಾಜರೊಂದಿಗೆ ಧಾರ್ತರಾಷ್ಟ್ರರು ಸಿಂಹಕ್ಕೆ ಹೆದರಿದ ಮೃಗಗಳಂತೆ ದಿಕ್ಕಾಪಾಲಾಗಿ ಓಡಿ ಹೋಗುವರು! ಮಕ್ಕಳು ಮತ್ತು ಸುಹೃಜ್ಜನರೊಂದಿಗೆ ಕರ್ಣನು ರಣದಲ್ಲಿ ಇಂದು ನನ್ನಿಂದ ಹತನಾದಾಗ ರಾಜಾ ದುರ್ಯೋಧನನು ಭೂಮಿಯಲ್ಲಿಯೇ ನಿರಾಶೆಹೊಂದುತ್ತಾನೆ! ಇಂದು ಕರ್ಣನು ಹತನಾದುದನ್ನು ನೋಡಿ ಅಮರ್ಷಣ ಧಾರ್ತರಾಷ್ಟನು ರಣದಲ್ಲಿ ನಾನೇ ಸರ್ವಧನ್ವಿಗಳಲ್ಲಿ ಶ್ರೇಷ್ಠ ಎನ್ನುವುದನ್ನು ತಿಳಿದುಕೊಳ್ಳುತ್ತಾನೆ! ಇಂದು ನಾನು ಧನುರ್ಧಾರಿಗಳ, ಕುರುಗಳ ಕ್ರೋಧದ ಮತ್ತು ಗಾಂಡಿವದ ಶರಗಳ ಅನೃಣನಾಗುತ್ತೇನೆ! ಮಘವಾನನು ಶಂಬರನನ್ನು ಹೇಗೋ ಹಾಗೆ ಇಂದು ರಣದಲ್ಲಿ ಕರ್ಣನನ್ನು ಸಂಹರಿಸಿ ನಾನು ಹದಿಮೂರುವರ್ಷಗಳಿಂದ ಬೆಳೆಯುತ್ತಿರುವ ಈ ದುಃಖದಿಂದ ಮುಕ್ತಿಹೊಂದುತ್ತೇನೆ! ಇಂದು ಯುದ್ಧದಲ್ಲಿ ಕರ್ಣನು ಹತನಾಗಲು ಯುದ್ಧದಲ್ಲಿ ಮಿತ್ರಕಾರ್ಯವನ್ನೇ ಬಯಸಿ ಮಾಡುತ್ತಿದ್ದ ಸೋಮಕ ಮಹಾರಥರು ಕಾರ್ಯವು ಮುಗಿಯಿತೆಂದು ಅಭಿಪ್ರಾಯಪಡುತ್ತಾರೆ. ಇಂದು ನನ್ನಿಂದ ಕರ್ಣನು ಹತನಾಗಿ ಜಯವು ಅಧಿಕವಾಗಲು ಶೈನೇಯನು ಎಷ್ಟು ಸಂತೋಷಪಡುತ್ತಾನೋ ಅದನ್ನು ತಿಳಿಯಲು ಅಸಾಧ್ಯ! ಇಂದು ನಾನು ರಣದಲ್ಲಿ ಮಹಾರಥ ಕರ್ಣ ಮತ್ತು ಅವನ ಮಗನನ್ನು ಕೊಂದು ಭೀಮ, ಯಮಳರು ಮತ್ತು ಸಾತ್ಯಕಿಯರ ಪ್ರೀತಿಪಾತ್ರನಾಗುತ್ತೇನೆ. ಇಂದು ಮಹಾರಣದಲ್ಲಿ ಕರ್ಣನನ್ನು ಕೊಂದು ನಾನು ಧೃಷ್ಟದ್ಯುಮ್ನ ಮತ್ತು ಶಿಖಂಡಿ ಈ ಇಬ್ಬರೂ ಪಾಂಚಾಲರ ಋಣಮುಕ್ತನಾಗುತ್ತೇನೆ! ಇಂದಿನ ಸಂಗ್ರಾಮದಲ್ಲಿ ಕುಪಿತನಾದ ಧನಂಜಯನು ಕೌರವರೊಡನೆ ಯುದ್ಧಮಾಡಿ ಸೂತಜನನ್ನು ರಣದಲ್ಲಿ ಬೀಳಿಸುವುದನ್ನು ನೋಡಲಿದ್ದಾರೆ!
“ನಿನ್ನ ಸಮ್ಮುಖದಲ್ಲಿ ಮಾತ್ರ ನಾನು ಈ ಆತ್ಮಸಂಸ್ತುತಿಯನ್ನು ಮಾಡಿಕೊಳ್ಳುತ್ತಿದ್ದೇನೆ! ಧನುರ್ವೇದದಲ್ಲಿ ನನ್ನ ಸಮನಾದವನು ಲೋಕದಲ್ಲಿ ಇಲ್ಲ. ಪರಾಕ್ರಮದಲ್ಲಿ ನನ್ನ ತುಲ್ಯನಾದವನು ಯಾರೂ ಇಲ್ಲ. ಕ್ಷಮೆಯಲ್ಲಿಯೂ ನನ್ನಂತಹ ಬೇರೊಬ್ಬನು ಇಲ್ಲ. ಹಾಗೆಯೇ ಕ್ರೋಧದಲ್ಲಿಯೂ ನನ್ನ ಸದೃಶನಾದ ಇನ್ನೊಬ್ಬನಿಲ್ಲ! ಧನುಷ್ಮಂತನಾದ ನಾನು ಒಟ್ಟಾಗಿ ಬಂದ ಅಸುರರನ್ನೂ, ಸುರರನ್ನೂ ಮತ್ತು ಸರ್ವ ಭೂತಗಳನ್ನೂ ಸ್ವಬಾಹುವೀರ್ಯದಿಂದ ಪರಾಭವಗೊಳಿಸಬಲ್ಲೆನು. ಎಲ್ಲರ ಪೌರುಷಕ್ಕಿಂತ ನನ್ನ ಪೌರುಷವು ಹೆಚ್ಚಿನದೆಂದು ತಿಳಿ. ಬಾಣಗಳೇ ಜ್ವಾಲೆಗಳಾಗಿರುವ ಈ ಗಾಂಡೀವದಿಂದ ನಾನೊಬ್ಬನೇ ಸರ್ವ ಕುರುಗಳನ್ನೂ, ಬಾಹ್ಲೀಕರನ್ನೂ ಸಂಹರಿಸಿ ಗ್ರೀಷ್ಮಋತುವಿನಲ್ಲಿ ಒಣಪೊದೆಗಳನ್ನು ಅಗ್ನಿಯು ದಹಿಸಿಬಿಡುವಂತೆ ಬಲಪೂರ್ವಕವಾಗಿ ದಹಿಸಿಬಿಡುತ್ತೇನೆ! ನನ್ನ ಒಂದು ಕೈಯಲ್ಲಿ ಬಾಣಗಳ ಚಿಹ್ನೆಗಳಿವೆ. ಮತ್ತೊಂದರಲ್ಲಿ ಬಾಣವನ್ನು ಹೂಡಿರುವ ಧನುಸ್ಸಿನ ಚಿಹ್ನೆಯಿದೆ. ನನ್ನ ಎರಡೂ ಪಾದಗಳಲ್ಲಿ ರಥ-ಧ್ವಜಗಳ ಚಿಹ್ನೆಗಳಿವೆ. ಯುದ್ಧಗತನಾಗಿರುವ ನನ್ನಂತಹವನನ್ನು ಯಾರೂ ಜಯಿಸಲಾರರು!”
ಹೀಗೆ ಮಾತನಾಡಿಕೊಳ್ಳುತ್ತಾ ಕೃಷ್ಣಾರ್ಜುನರು ರಣಭೂಮಿಯನ್ನು ತಲುಪಿದರು.