ಹದಿನೆಂಟನೆಯ ದಿನದ ಪೂರ್ವಾಹ್ಣದಲ್ಲಿ ಶಲ್ಯ ವಧೆ
ಯುದ್ಧಾರಂಭ
ರಾತ್ರಿಯು ಕಳೆಯಲು ರಾಜಾ ದುರ್ಯೋಧನನು ಮಹಾರಥರೆಲ್ಲರೂ ಕವಚಗಳನ್ನು ಧರಿಸಿ ಯುದ್ಧಸನ್ನದ್ಧರಾಗುವಂತೆ ನಿನ್ನ ಕಡೆಯವರೆಲ್ಲರಿಗೆ ಹೇಳಿದನು. ರಾಜನ ಅಭಿಪ್ರಾಯವನ್ನು ತಿಳಿದ ಆ ಸೇನೆಯು ಸನ್ನದ್ಧವಾಗತೊಡಗಿತು. ಬೇಗನೆ ರಥವನ್ನು ಸಜ್ಜುಗೊಳಿಸಲು ಸೈನಿಕರು ಅತ್ತಿತ್ತ ಓಡಾಡುತ್ತಿದ್ದರು. ಆನೆಗಳನ್ನು ಸಜ್ಜುಗೊಳಿಸಿದರು. ಪದಾತಿಗಳು ಕವಚಗಳನ್ನು ತೊಟ್ಟುಕೊಂಡರು. ಇನ್ನು ಕೆಲವರು ಸಹಸ್ರಾರು ಕುದುರೆಗಳನ್ನು ಸಜ್ಜುಗೊಳಿಸಿದರು. ವಾದ್ಯಗಳು ಮೊಳಗಿದವು. ಗರ್ಜಿಸುತ್ತಿದ್ದ ಯೋಧ-ಸೇನೆಗಳ ಶಬ್ಧಗಳೂ ಕೇಳಿಬಂದಿತು. ಮೃತ್ಯುವನ್ನೇ ಹಿಂದಿರುಗುವ ಸ್ಥಾನವನ್ನಾಗಿ ಕಲ್ಪಿಸಿಕೊಂಡಿದ್ದ ಅಳಿದುಳಿದಿದ್ದ ಸರ್ವ ಸೇನೆಗಳೂ ಯುದ್ಧಸನ್ನದ್ಧರಾಗಿ ಮುಂದುವರೆದವು. ಮಹಾರಥರು ಮದ್ರರಾಜ ಶಲ್ಯನನ್ನು ಸೇನಾಪತಿಯನ್ನಾಗಿ ಮಾಡಿಕೊಂಡು ಸೇನೆಗಳೆಲ್ಲವನ್ನೂ ವಿಭಜಿಸಿ ತಮ್ಮ ತಮ್ಮ ದಳಗಳಲ್ಲಿ ಸನ್ನದ್ಧರಾಗಿದ್ದರು. ಅನಂತರ ಸರ್ವ ಸೈನಿಕರೂ, ಕೃಪ, ಕೃತವರ್ಮ, ದ್ರೌಣಿ, ಶಲ್ಯ, ಸೌಬಲ ಮತ್ತು ಅಳಿದುಳಿದ ಅನ್ಯ ಪಾರ್ಥಿವರು ದುರ್ಯೋಧನನೊಡನೆ ಸೇರಿ ಈ ನಿಯಮಗಳನ್ನು ಮಾಡಿಕೊಂಡರು: “ಪಾಂಡವರೊಂದಿಗೆ ನಮ್ಮವರಲ್ಲಿ ಯಾರೂ ಒಬ್ಬನೇ ಯುದ್ಧಮಾಡಬಾರದು. ಪಾಂಡವರೊಂದಿಗೆ ಒಬ್ಬನೇ ಯುದ್ಧಮಾಡುತ್ತಿರುವವನನ್ನು ಬಿಟ್ಟುಬಂದರೆ ಅಂತವನು ಪಂಚಮಹಾಪಾತಕ ಮತ್ತು ಉಪಪಾತಕಗಳಿಂದ ಯುಕ್ತನಾಗುತ್ತಾನೆ. ನಾವೆಲ್ಲರೂ ಒಟ್ಟಾಗಿ ಅನ್ಯೋನ್ಯರನ್ನು ರಕ್ಷಿಸುತ್ತಾ ಶತ್ರುಗಳೊಂದಿಗೆ ಯುದ್ಧಮಾಡಬೇಕು!”
ಹೀಗೆ ಒಪ್ಪಂದವನ್ನು ಮಾಡಿಕೊಂಡು ಆ ಮಹಾರಥರೆಲ್ಲರೂ ಮದ್ರರಾಜನನ್ನು ಮುಂದೆ ಬಿಟ್ಟುಕೊಂಡು ಬೇಗನೆ ಶತ್ರುಗಳ ಮೇಲೆ ಆಕ್ರಮಣ ನಡೆಸಿದರು. ಭೀಷ್ಮ, ದ್ರೋಣ ಮತ್ತು ಸೂತಪುತ್ರರು ಹತರಾಗಿರಲು ರಣದಲ್ಲಿ ಶಲ್ಯನು ಪಾರ್ಥರೆಲ್ಲರನ್ನೂ ಸಂಹರಿಸುತ್ತಾನೆ ಎಂಬ ಬಲವತ್ತಾದ ಆಶೆಯು ಧೃತರಾಷ್ಟ್ರನ ಪುತ್ರರಲ್ಲುಂಟಾಗಿತ್ತು. ಅದೇ ಆಶೆಯನ್ನು ಹೃದಯಲ್ಲಿಟ್ಟುಕೊಂಡು ಆಶ್ವಾಸನೆಗಳಿಂದ ಸಮರದಲ್ಲಿ ಮಹಾರಥ ಮದ್ರರಾಜನನ್ನು ಆಶ್ರಯಿಸಿ ಅವನ ಮಕ್ಕಳು ತಮ್ಮನ್ನು ತಾವೇ ನಾಥವಂತರೆಂದು ತಿಳಿದುಕೊಂಡಿದ್ದರು. ಕರ್ಣನು ಹತನಾದಾಗ ಪಾರ್ಥರು ಮಾಡಿದ ಸಿಂಹನಾದದಿಂದ ಧಾರ್ತರಾಷ್ಟ್ರರಲ್ಲಿ ಮಹಾ ಭಯವು ಆವೇಶಗೊಂಡಿತ್ತು. ಅವರನ್ನು ಸಮಾಧಾನಗೊಳಿಸಿ ಪ್ರತಾಪವಾನ್ ಮದ್ರರಾಜನು ಸೇನೆಯನ್ನು ಸರ್ವತೋಭದ್ರ ವ್ಯೂಹದಲ್ಲಿ ರಚಿಸಿದನು. ಮದ್ರರಾಜನು ರಣದಲ್ಲಿ ಚಿತ್ರಿತ-ಶತ್ರುಭಾರನಾಶಕ-ವೇಗವತ್ತರ ಧನುಸ್ಸನ್ನು ಸೇಲೆಯುತ್ತಾ ಸಿಂಧುದೇಶದ ಕುದುರೆಗಳನ್ನು ಕಟ್ಟಿದ್ದ ಶೇಷ್ಠ ರಥವನ್ನು ಏರಿ ಪಾರ್ಥರನ್ನು ಆಕ್ರಮಣಿಸಿದನು. ರಥದಲ್ಲಿದ್ದ ಅವನ ಸಾರಥಿಯೂ ರಥವನ್ನು ಶೋಭಾಯಮಾನಗೊಳಿಸಿದನು. ಆ ಶೂರನು ಧೃತರಾಷ್ಟ್ರ-ಪುತ್ರರ ಭಯವನ್ನು ಹೋಗಲಾಡಿಸುತ್ತಾ ಆ ರಥದಲ್ಲಿ ಸಿದ್ಧನಾಗಿ ನಿಂತಿದ್ದನು. ಪ್ರಯಾಣದ ಸಮಯದಲ್ಲಿ ಮದ್ರರಾಜನು ಕವಚವನ್ನು ಧರಿಸಿ ವೀರ ಮದ್ರಕರು ಮತ್ತು ದುರ್ಜಯ ಕರ್ಣಪುತ್ರರೊಂದಿಗೆ ವ್ಯೂಹದ ಮುಖಭಾಗದಲ್ಲಿದ್ದನು. ಎಡಭಾಗದಲ್ಲಿ ತ್ರಿಗರ್ತರಿಂದ ಪರಿವಾರಿತನಾದ ಕೃತವರ್ಮನೂ, ಬಲಭಾಗದಲ್ಲಿ ಶಕ-ಯವನರೊಂದಿಗೆ ಕೃಪನೂ ಇದ್ದರು. ಕಾಂಬೋಜರಿಂದ ಪರಿವಾರಿತನಾಗಿ ಅಶ್ವತ್ಥಾಮನು ಪೃಷ್ಠ ಭಾಗದಲ್ಲಿದ್ದನು ಮತ್ತು ಕುರುಪುಂಗವರಿಂದ ರಕ್ಷಿತನಾಗಿ ದುರ್ಯೋಧನನು ಮಧ್ಯದಲ್ಲಿದ್ದನು. ಮಹಾ ಸೇನೆಯಿಂದ ಪರಿವೃತನಾಗಿ ಶಕುನಿ-ಉಲೂಕರು ವ್ಯೂಹದ ಪೃಷ್ಟಭಾಗದಲ್ಲಿ ಇದ್ದರು.
ಹಾಗೆಯೇ ಪಾಂಡವರು ಕೂಡ ಮಹಾರಣದಲ್ಲಿ ಸೈನ್ಯವನ್ನು ವ್ಯೂಹದಲ್ಲಿ ರಚಿಸಿ ಉತ್ಸಾಹದಿಂದ ಎಲ್ಲಕಡೆಗಳಿಂದ ಕೌರವರೆಲ್ಲರನ್ನೂ ಆಕ್ರಮಣಿಸಿದರು. ಆ ಸೇನೆಯು ಕ್ಷೋಭೆಗೊಂಡ ಮಹಾ ಸಮುದ್ರದಂತೆ ಭೋರ್ಗರೆಯುತ್ತಿತ್ತು. ಉಕ್ಕಿಮರುವ ಮಹಾಸಮುದ್ರದಂತೆ ರಥ-ಆನೆಗಳು ಮುನ್ನುಗ್ಗಿ ಹೋಗುತ್ತಿದ್ದವು. ಪಾಂಡವರ ವ್ಯೂಹವು ಮೂರು ಮೂರು ಭಾಗಗಳಲ್ಲಿ ಕೌರವ ಸೇನೆಯನ್ನು ಆಕ್ರಮಣಿಸಿತು. ಧೃಷ್ಟದ್ಯುಮ್ನ-ಶಿಖಂಡಿ-ಸಾತ್ಯಕಿಯರು ಶಲ್ಯನ ಸೇನೆಯನ್ನು ಆಕ್ರಮಣಿಸಿದರು. ಯುಧಿಷ್ಠಿರನು ಶಲ್ಯನನ್ನೇ ಕೊಲ್ಲಲು ಬಯಸಿ ಅವನನ್ನು ಆಕ್ರಮಣಿಸಿದನು. ಅರ್ಜುನನು ಹಾರ್ದಿಕ್ಯನನ್ನೂ, ಸಂಶಪ್ತಕಗಣಗಳನ್ನೂ ಆಕ್ರಮಣಿಸಿದನು. ಭೀಮಸೇನ ಮತ್ತು ಸೋಮಕರು ಗೌತಮ ಕೃಪನನ್ನು ಆಕ್ರಮಣಿಸಿದರು. ಮಾದ್ರೀಪುತ್ರರಿಬ್ಬರೂ ಶಕುನಿ-ಉಲೂಕರನ್ನು ಆಕ್ರಮಣಿಸಿದರು.
ಆ ದಿನ ಕೌರವನ ಪಕ್ಷದಲ್ಲಿ ಹನ್ನೊಂದು ಸಾವಿರ ರಥಗಳೂ, ಹತ್ತು ಸಾವಿರದ ಏಳು ನೂರು ಆನೆಗಳೂ, ಎರಡು ಲಕ್ಷ ಕುದುರೆಗಳೂ ಮತ್ತು ಮೂರು ಕೋಟಿ ಪದಾತಿಸೈನಿಕರೂ ಉಳಿದಿದ್ದರು. ಪಾಂಡವರ ಪಕ್ಷದಲ್ಲಿ ಆರು ಸಾವಿರ ರಥಗಳೂ, ಆರು ಸಾವಿರ ಆನೆಗಳೂ, ಹತ್ತು ಸಾವಿರ ಕುದುರೆಗಳೂ ಮತ್ತು ಎರಡು ಕೋಟಿ ಪದಾತಿಸೈನಿಕರೂ ಉಳಿದಿದ್ದರು.
ಈ ರೀತಿ ಸೇನೆಗಳೊಂದಿಗೆ ಪರಸ್ಪರರನ್ನು ವಧಿಸಲು ಇಚ್ಛಿಸಿ ನರವ್ಯಾಘ್ರರು ಆ ದಿನದ ಪ್ರಾತಃಸಂಧ್ಯಾಸಮಯದಲ್ಲಿ ಹೊರಟರು. ಆಗ ಕೌರವರ ಮತ್ತು ಶತ್ರುಗಳ ನಡುವೆ ಪರಸ್ಪರರನ್ನು ಸಂಹರಿಸುವ ಭಯಾನಕ ಘೋರರೂಪೀ ಯುದ್ಧವು ಪ್ರಾರಂಭವಾಯಿತು.
ಪದಾತಿ-ರಥ-ಆನೆಗಳ ಗುಂಪುಗಳೂ, ಸಾವಿರಾರು ಕುದುರೆಸವಾರರೂ ತಮ್ಮ ಪರಾಕ್ರಮಗಳನ್ನು ಪ್ರದರ್ಶಿಸುತ್ತಾ ಪರಸ್ಪರೊಡನೆ ಕಾದಾಡಿದರು. ನಭಸ್ತಲದಲ್ಲಿ ಮೇಘಗಳ ನಿನಾದದಂತೆ ಘೋರರೂಪೀ ಆನೆಗಳು ಓಡುತ್ತಿರುವ ಮಹಾ ನಿನಾದವು ಕೇಳಿಬಂದಿತು. ಕೆಲವು ರಥಿಗಳು ಆನೆಗಳ ಆಘಾತದಿಂದ ರಥಗಳೊಂದಿಗೆ ಕೆಳಕ್ಕುರುಳಿದರು. ಮದೋತ್ಕಟ ಆನೆಗಳಿಂದ ದೂಡಲ್ಪಟ್ಟ ಅನೇಕ ವೀರರು ರಣದಿಂದ ಓಡಿಹೋಗುತ್ತಿದ್ದರು. ರಥಿಗಳು ಶರಗಳಿಂದ ಕುದುರೆಗಳ ಗುಂಪುಗಳನ್ನೂ ಪಾದರಕ್ಷಕರನ್ನೂ ಪರಲೋಕಕ್ಕೆ ಕಳುಹಿಸುತ್ತಿದ್ದರು. ಅಶ್ವಾರೋಹಿಗಳು ಮಹಾರಥರನ್ನು ಸುತ್ತುವರೆದು ಪ್ರಾಶ-ಶಕ್ತಿ-ಋಷ್ಟಿಗಳಿಂದ ಅವರನ್ನು ಸಂಹರಿಸುತ್ತಾ ಸಂಚರಿಸುತ್ತಿದ್ದರು. ಧನುರ್ಧಾರೀ ಪುರುಷರು ಮಹಾರಥರನ್ನು ತಡೆದು -ಒಬ್ಬರೇ ಅನೇಕರನ್ನು ಎದುರಿಸಿ, ಯಮಕ್ಷಯಕ್ಕೆ ಕಳುಹಿಸುತ್ತಿದ್ದರು. ಅನ್ಯ ರಥಶ್ರೇಷ್ಠರು ಮಹಾರಥರನ್ನು ಸುತ್ತುವರೆದು ಮಹಾರವದೊಂದಿಗೆ ಆಯುಧಗಳನ್ನು ಬಿಟ್ಟು ಓಡಿಹೋಗುತ್ತಿದ್ದವರನ್ನು ಸಂಹರಿಸುತ್ತಿದ್ದರು. ಹಾಗೆಯೇ ಕ್ರುದ್ಧ ಆನೆಗಳು ಅನೇಕ ಶರಗಳನ್ನು ಚೆಲ್ಲುತ್ತಿದ್ದ ರಥಿಗಳನ್ನು ಎಲ್ಲ ಕಡೆಗಳಿಂದ ಸುತ್ತುವರೆದು ಕೊಲ್ಲುತ್ತಿದ್ದವು. ಆನೆಗಳು ಆನೆಗಳನ್ನೂ, ರಥಿಗಳು ರಥಿಗಳನ್ನೂ, ಶಕ್ತಿ-ತೋಮರ-ನಾರಚಗಳಿಂದ ಸಂಹರಿಸುತ್ತಿದ್ದರು. ರಥ-ಆನೆ-ಕುದುರೆಗಳು ರಣಮಧ್ಯದಲ್ಲಿ ಪಾದಾತಿಗಳನ್ನು ತುಳಿದು ಮಹಾ ವ್ಯಾಕುಲವನ್ನುಂಟುಮಾಡುತ್ತಿದ್ದವು. ಹಿಮವತ್ಪರ್ವತ ಪ್ರಸ್ಥದಲ್ಲಿರುವ ಹಂಸಗಳು ನೀರು ಕುಡಿಯಲು ಭೂಮಿಯ ಕಡೆ ವೇಗದಿಂದ ಹಾರಿಬರುವಂತೆ ಚಾಮರ-ಸುಶೋಭಿತ ಕುದುರೆಗಳು ಓಡುತ್ತಿದ್ದವು. ಆ ಕುದುರೆಗಳ ಖುರಗಳಿಂದ ಚಿತ್ರಿತವಾದ ರಣಭೂಮಿಯು ಪ್ರಿಯತಮನ ಉಗುರುಗಳಿಂದ ಗಾಯಗೊಂಡ ನಾರಿಯಂತೆ ಶೋಭಿಸುತ್ತಿತ್ತು. ಕುದುರೆಗಳ ಖುರಶಬ್ಧಗಳು, ರಥಚಕ್ರಗಳ ನಿಸ್ವನಗಳು, ಪದಾತಿಗಳ ಕೂಗುಗಳು, ಆನೆಗಳ ಘೀಂಕಾರ, ವಾದ್ಯಗಳ ಘೋಷಗಳು ಮತ್ತು ಶಂಖಗಳ ನಿನಾದಗಳಿಂದ ಸಿಡಿಲುಗಳು ಭೂಮಿಯನ್ನು ಬಡಿಯುತ್ತಿವೆಯೋ ಎಂಬಂತೆ ತೋರುತ್ತಿತ್ತು. ಧನುಸ್ಸುಗಳ ಠೇಂಕಾರ, ಅಸ್ತ್ರಗಳ ಉರಿ ಮತ್ತು ಕವಚಗಳ ಪ್ರಭೆಗಳಿಂದ ಯಾವುದೊಂದೂ ತಿಳಿಯುತ್ತಲಿರಲಿಲ್ಲ. ಆನೆಗಳ ಸೊಂಡಿಲುಗಳಂತಿದ್ದ ಅನೇಕ ಬಾಹುಗಳು ತುಂಡಾಗಿ ವೇಗವಾಗಿ ಕುಪ್ಪಳಿಸಿ ದಾರುಣವಾಗಿ ಸುತ್ತುತ್ತಿದ್ದವು. ವಸುಧಾತಲದಲ್ಲಿ ಬೀಳುತ್ತಿದ್ದ ಶಿರಗಳು ತಾಳೆಯ ಮರದಿಂದ ಕೆಳಕ್ಕೆ ಬೀಳುತ್ತಿದ್ದ ತಾಲಫಲಗಳಂತೆ ಶಬ್ಧಮಾಡುತ್ತಿದ್ದವು. ಕೆಳಕ್ಕೆ ಬೀಳುತ್ತಿದ್ದ ರಕ್ತ-ಸಿಕ್ತ ಶಿರಗಳು ಸುವರ್ಣಮಯ ಕಮಲಪುಷ್ಪಗಳಂತೆ ತೋರುತ್ತಿದ್ದವು.
ಕಣ್ಣುಗಳು ಹೊರಬಂದಿದ್ದ ಮತ್ತು ಗಾಯಗೊಂಡು ಪ್ರಾಣಹೋದ ಶಿರಸ್ಸುಗಳಿಂದ ಆವೃತವಾಗಿದ್ದ ರಣರಂಗವು ಕಮಲಪುಷ್ಪಗಳಿಂದ ಅಚ್ಛಾದಿತವಾಗಿದೆಯೋ ಎನ್ನುವಂತೆ ಕಾಣುತ್ತಿತ್ತು. ಚಂದನ-ಲೇಪಿತ ಮಹಾಧನ-ಅಂಗದ ಕೇಯೂರಗಳಿಂದ ಅಲಂಕೃತ ತೋಳುಗಳು ಸುತ್ತಲೂ ಬಿದ್ದಿರಲು ರಣರಂಗವು ದೊಡ್ಡ ದೊಡ್ಡ ಇಂದ್ರಧ್ವಜಗಳಿಂದ ಆವೃತವಾಗಿರುವಂತೆ ತೋರುತ್ತಿತ್ತು. ಆ ಮಹಾಹವದಲ್ಲಿ ಆನೆಗಳ ಸೊಂಡಿಲುಗಳಂತಿದ್ದ ನರೇಂದ್ರರ ತೊಡೆಗಳು ಕತ್ತರಿಸಿ ಬಿದ್ದು ರಣಾಂಗಣವನ್ನು ತುಂಬಿಬಿಟ್ಟಿದ್ದವು. ನೂರಾರು ಮುಂಡ-ಸಮಾಕುಲಗಳಿಂದ ಮತ್ತು ಚತ್ರ-ಚಾಮರಗಳಿಂದ ಶೋಭಿತವಾದ ಆ ಸೇನಾವನವು ಪುಷ್ಪಭರಿತ ಶುಭ ವನದಂತೆ ತೋರುತ್ತಿತ್ತು. ಅಂಗಗಳು ರಕ್ತಲೇಪಿತಗೊಂಡು ಅಭೀತರಾಗಿ ಸಂಚರಿಸುತ್ತಿದ್ದ ಯೋಧರು ಪುಷ್ಪಿತ ಕಿಂಶುಕ ವೃಕ್ಷಗಳಂತೆ ಕಾಣುತ್ತಿದ್ದರು. ಶರ-ತೋಮರಗಳಿಂದ ಪೀಡಿತ ಆನೆಗಳು ಅಲ್ಲಲ್ಲಿಯೇ ಬಿದ್ದು ಮೋಡಗಳು ತುಂಡಾಗಿ ಬೀಳುತ್ತಿವೆಯೋ ಎನ್ನುವಂತೆ ತೋರುತ್ತಿದ್ದವು. ಮಹಾತ್ಮರು ವಧಿಸುತ್ತಿದ್ದ ಗಜಸೇನೆಯು ಭಿರುಗಾಳಿಗೆ ಸಿಲುಕಿದ ಮೋಡಗಳಂತೆ ಎಲ್ಲ ದಿಕ್ಕುಗಳಲ್ಲಿಯೂ ಚದುರಿಹೋಯಿತು. ಮೋಡಗಳಂತಿದ್ದ ಆ ಆನೆಗಳು ಯುಗಸಂಕ್ಷಯದಲ್ಲಿ ವಜ್ರಗಳಿಂದ ಪ್ರಹರಿಸಲ್ಪಟ್ಟ ಪರ್ವತಗಳಂತೆ ಭೂಮಿಯ ಮೇಲೆ ಎಲ್ಲಕಡೆ ಬಿದ್ದವು. ಆರೋಹಿಗಳೊಂದಿಗೆ ರಣದಲ್ಲಿ ಅಲ್ಲಲ್ಲಿ ಬೀಳುತ್ತಿದ್ದ ಕುದುರೆಗಳ ರಾಶಿಗಳು ಪರ್ವತಗಳಂತೆಯೇ ಕಾಣುತ್ತಿದ್ದವು. ರಣಭೂಮಿಯಲ್ಲಿ ರಕ್ತವೇ ನೀರಾಗಿದ್ದ, ರಥಗಳೇ ಸುಳಿಗಳಾಗಿದ್ದ, ಧ್ವಜಗಳೇ ವೃಕ್ಷಗಳಾಗಿದ್ದ ಮತ್ತು ಮೂಳೆಗಳೇ ಕಲ್ಲಾಗಿದ್ದ ಪರಲೋಕಕ್ಕೆ ಕೊಂಡೊಯ್ಯುವ ನದಿಯೇ ಹರಿಯತೊಡಗಿತು. ಆ ನದಿಯಲ್ಲಿ ಭುಜಗಳು ಮೊಸಳೆಗಳಂತಿದ್ದವು. ಧನುಸ್ಸುಗಳು ಪ್ರಹಾವರೂಪದಲ್ಲಿದ್ದವು. ಆನೆಗಳು ಪರ್ವತಗಳಂತೆಯೂ, ಕುದುರೆಗಳು ಪರ್ವತದ ಕ್ಕಲ್ಲುಬಂಡೆಗಳಂತೆಯೂ, ಮೇದ-ಮಜ್ಜೆಗಳೇ ಕೆಸರಾಗಿಯೂ, ಶ್ವೇತಛತ್ರಗಳು ಹಂಸಗಳಂತೆಯೂ, ಗದೆಗಳು ನೌಕೆಗಳಂತೆಯೂ ತೋರುತ್ತಿದ್ದವು. ಕವಚ-ಕಿರೀಟಗಳಿಂದ ತುಂಬಿದ್ದ ಆ ನದಿಯಲ್ಲಿ ಪತಾಕೆಗಳು ಸುಂದರ ವೃಕ್ಷಗಳಂತೆಯೂ, ಚಕ್ರಗಳಿಂದ ಸಮೃದ್ಧ ಆ ನದಿಯು ಚಕ್ರವಾಕ ಪಕ್ಷಿಗಳಿಂದ ತುಂಬಿದಂತೆಯೂ, ರಥಗಳ ತ್ರಿವೇಣಿಗಳೆಂಬ ಸರ್ಪಗಳಿಂದ ತುಂಬಿದಂತೆಯೂ ತೋರುತ್ತಿತ್ತು. ಕುರು-ಸೃಂಜಯರಿಂದ ಹುಟ್ಟಿದ್ದ, ಶೂರರಿಗೆ ಹರ್ಷವನ್ನುಂಟುಮಾಡುವ ಮತ್ತು ಹೇಡಿಗಳ ಭಯವನ್ನು ಹೆಚ್ಚಿಸುವ ಆ ನದಿಯು ರೌದ್ರವಾಗಿ ಹರಿಯುತ್ತಿತ್ತು. ಪಿತೃಲೋಕಗಳಿಗೊಯ್ಯುತ್ತಿದ್ದ ಆ ಭೈರವನದಿಯನ್ನು ಪರಿಘದಂತಹ ಬಾಹುಗಳುಳ್ಳ ಶೂರರು ವಾಹನಗಳ ಮೇಲೆ ದಾಟುತ್ತಿದ್ದರು. ಹಿಂದೆ ನಡೆದ ದೇವಾಸುರ ಯುದ್ಧದಂತಿದ್ದ, ಮರ್ಯಾದೆ ಮೀರಿದ, ಚತುರಂಗ ಬಲಗಳನ್ನೂ ನಾಶಗೊಳಿಸುವ ಆ ಘೋರ ಯುದ್ಧವು ನಡೆಯುತ್ತಿರಲು ಭಯಾರ್ತ ಯೋಧರು ಬಾಂಧವರನ್ನು ಕೂಗಿ ಕರೆಯುತ್ತಿದ್ದರು. ಬಾಂಧವರು ಕರೆಯುತ್ತಿದ್ದರೂ ಕೆಲವರು ಯುದ್ಧದಿಂದ ಹಿಮ್ಮೆಟ್ಟುತ್ತಿರಲಿಲ್ಲ. ಆ ರೀತಿ ನಿರ್ಮರ್ಯಾದಾಯುಕ್ತ ಭಯಾನಕ ಯುದ್ಧವು ನಡೆಯುತ್ತಿರಲು ಅರ್ಜುನ-ಭೀಮಸೇನರು ಶತ್ರುಗಳನ್ನು ವಿಮೋಹಗೊಳಿಸಿದರು. ಅವರು ವಧಿಸುತ್ತಿದ್ದ ಕೌರವ ಮಹಾ ಸೇನೆಯು ಮದಮತ್ತ ಯುವತಿಯಂತೆ ಅಲ್ಲಲ್ಲಿಯೇ ಮೂರ್ಛೆಹೋಗುತ್ತಿತ್ತು.
ಭೀಮಸೇನ-ಧನಂಜಯರಿಬ್ಬರೂ ಆ ಸೇನೆಯನ್ನು ಮೋಹಗೊಳಿಸಿ ಶಂಖಗಳನ್ನು ಊದಿ ಸಿಂಹನಾದಗೈದರು. ಆ ಮಹಾಶಬ್ಧವನ್ನು ಕೇಳಿ ಧೃಷ್ಟದ್ಯುಮ್ನ-ಶಿಖಂಡಿಯರು ಧರ್ಮರಾಜನನ್ನು ಮುಂದಿಟ್ಟುಕೊಂಡು ಮದ್ರರಾಜನನ್ನು ಆಕ್ರಮಣಿಸಿದರು. ಯುದ್ಧದುರ್ಮದ ಮಾದ್ರೀಪುತ್ರರಿಬ್ಬರೂ ರಭಸದಿಂದ ತ್ವರೆಮಾಡಿ ಕೌರವ ಸೇನೆಯನ್ನು ಗೆಲ್ಲಲು ಆಕ್ರಮಣಿಸಿದರು. ವಿಜಯೋತ್ಸಾಹಿತ ಪಾಂಡವರು ಶರಗಳಿಂದ ಬಹಳವಾಗಿ ಪ್ರಹರಿಸುತ್ತಿದ್ದ ಕೌರವ ಸೇನೆಯು ಹಿಂದೆಸರಿಯಿತು. ಧೃತರಾಷ್ಟ್ರನ ಮಕ್ಕಳು ನೋಡುತ್ತಿದ್ದಂತೆಯೇ ದೃಢಧನ್ವಿಗಳು ಚುಚ್ಚಿ ವಧಿಸುತ್ತಿದ್ದ ಆ ಸೇನೆಯು ದಿಕ್ಕಾಪಾಲಾಗಿ ಹೋಯಿತು. ಕೌರವ ಯೋಧರಲ್ಲಿ ಮಹಾ ಹಾಹಾಕಾರವುಂಟಾಯಿತು. ಯುದ್ಧದಲ್ಲಿ ಅನ್ಯೋನ್ಯರ ಸಹಾಯದಿಂದ ಜಯವನ್ನು ಬಯಸಿದ್ದ ಕ್ಷತ್ರಿಯರು ಓಡಿಹೋಗುತ್ತಿದ್ದ ಮಹಾತ್ಮರಿಗೆ “ನಿಲ್ಲಿ! ನಿಲ್ಲಿ!” ಎಂದು ಕೂಗಿ ಕರೆಯುವುದೂ ಕೇಳಿಬರುತ್ತಿತ್ತು. ಪಾಂಡವರಿಂದ ಭಗ್ನರಾದ ಕೌರವ ಸೈನಿಕರು ಯುದ್ಧದಲ್ಲಿ ಪ್ರಿಯ ಪುತ್ರ-ಸಹೋದರ-ಪಿತಾಮಹ-ಸೋದರಮಾವಂದಿರನ್ನೂ, ತಂಗಿಯ ಮಕ್ಕಳನ್ನೂ, ಸಂಬಂಧಿ-ಬಾಂಧವರನ್ನೂ ಬಿಟ್ಟು ಓಡುತ್ತಿದ್ದರು. ಕುದುರೆ-ಆನೆಗಳನ್ನು ತ್ವರೆಗೊಳಿಸುತ್ತಾ ಆತ್ಮರಕ್ಷಣೆಯಲ್ಲಿ ಉತ್ಸಾಹವಿದ್ದ ಕೌರವ ಯೋಧರು ಎಲ್ಲ ದಿಕ್ಕುಗಳಲ್ಲಿ ಓಡಿ ಹೋದರು.
ಆ ಸೇನೆಯು ಭಗ್ನವಾಗುತ್ತಿರುವುದನ್ನು ಕಂಡ ಪ್ರತಾಪವಾನ್ ಮದ್ರರಾಜನು ಮಹಾವೇಗವುಳ್ಳ ಕುದುರೆಗಳನ್ನು ಶೀಘ್ರವಾಗಿ ನಡೆಸುವಂತೆ ಸಾರಥಿಗೆ ಹೇಳಿದನು: “ಇಗೋ ರಾಜಾ ಪಾಂಡುಪುತ್ರ ಯುಧಿಷ್ಠಿರನು ಹೊಳೆಯುತ್ತಿರುವ ಬಿಳಿಯ ಚತ್ರದಡಿಯಲ್ಲಿ ವಿರಾಜಿಸುತ್ತಿದ್ದಾನೆ! ಸಾರಥೇ! ಅಲ್ಲಿಗೆ ನನ್ನನ್ನು ಬೇಗನೆ ತಲುಪಿಸಿ ನನ್ನ ಬಲವನ್ನು ನೋಡು. ಇಂದಿನ ಯುದ್ಧದಲ್ಲಿ ನನ್ನನ್ನು ಎದುರಿಸಿಸಲು ಪಾರ್ಥರು ಸಮರ್ಥರಿಲ್ಲ!”
ಹೀಗೆ ಹೇಳಲು ಮದ್ರರಾಜನ ಸಾರಥಿಯು ಧರ್ಮರಾಜಾ ಯುಧಿಷ್ಠಿರನಿರುವಲ್ಲಿಗೆ ಅವನನ್ನು ಕೊಂಡೊಯ್ದನು. ಆಕ್ರಮಣಿಸುತ್ತಿದ್ದ ಪಾಂಡವರ ಮಹಾ ಬಲವನ್ನು ರಣದಲ್ಲಿ ಶಲ್ಯನು ಓರ್ವನೇ ಮೇಲುಕ್ಕಿ ಬರುತ್ತಿರುವ ಸಾಗರವನ್ನು ದಡವು ಹೇಗೋ ಹಾಗೆ ತಡೆದನು. ಪಾಂಡವರ ಸೇನೆಯಾದರೋ ಶಲ್ಯನನ್ನು ಸಮೀಪಿಸಿ ಪರ್ವತವನ್ನು ಸಮೀಪಿಸಿದ ನದಿಯಂತೆ ಯುದ್ಧದಲ್ಲಿ ನಿಂತುಬಿಟ್ಟಿತು. ಸಮರದಲ್ಲಿ ಯುದ್ಧಕ್ಕೆಂದು ನಿಂತಿದ್ದ ಮದ್ರರಾಜನನ್ನು ಕುರುಗಳು ಸುತ್ತುವರೆದರು. ಆ ವ್ಯೂಹದ ಭಾಗವಾಗಿದ್ದ ಸೇನೆಗಳ ನಡುವೆ ರಕ್ತವೇ ನೀರಾಗಿ ಚೆಲ್ಲಿದ ಮಹಾರೌದ್ರ ಸಂಗ್ರಾಮವು ನಡೆಯಿತು.
ನಕುಲನು ಕರ್ಣನ ಮಕ್ಕಳಾದ ಚಿತ್ರಸೇನ, ಸುಷೇಣ ಮತ್ತು ಸತ್ಯಸೇನರನ್ನು ವಧಿಸಿದುದು
ಆಗ ಕರ್ಣನ ಮಗ ಚಿತ್ರಸೇನನು ಯುದ್ಧದುರ್ಮದ ನಕುಲನನ್ನು ಪ್ರಹರಿಸಿದನು. ದಕ್ಷಿಣೋತ್ತರ ದಿಕ್ಕುಗಳಿಂದ ಮೇಲ್ಮುಖವಾಗಿ ಬಂದು ಆಕಾಶ ಮಧ್ಯದಲ್ಲಿ ಸಂಘರ್ಷಿಸಿ ಮಳೆಗರೆಯುವ ಎರಡು ಮೋಡಗಳಂತೆ ಚಿತ್ರಿತ ಧನುಸ್ಸುಗಳನ್ನು ಧರಿಸಿದ್ದ ಅವರಿಬ್ಬರೂ ಪರಸ್ಪರರನ್ನು ಎದುರಿಸಿದರು. ಯುದ್ಧದಲ್ಲಿ ಪರಸ್ಪರರ ಮೇಲೆ ಶರಗಳ ಮಳೆಗರೆಯುತ್ತಿದ್ದ ಪಾಂಡವ ಅಥವಾ ಚಿತ್ರಸೇನನ ನಡುವೆ ಅಂತರವೇ ಕಾಣಲಿಲ್ಲ. ಆ ಇಬ್ಬರು ಕೃತಾಸ್ತ್ರ-ಬಲಶಾಲಿಗಳೂ, ರಥವನ್ನು ನಡೆಸುವುದರಲ್ಲಿ ವಿಶಾರದರೂ, ಪರಸ್ಪರರ ವಧೆಯ ಪ್ರಯತ್ನಶೀಲರೂ ಯುದ್ಧದಲ್ಲಿ ಪರಸ್ಪರರಲ್ಲಿ ನ್ಯೂನತೆಗಳನ್ನು ಹುಡುಕುವವರೂ ಆಗಿದ್ದರು. ಚಿತ್ರಸೇನನಾದರೋ ಹಳದೀ ಬಣ್ಣದ ನಿಶಿತ ಭಲ್ಲದಿಂದ ನಕುಲನ ಧನುಸ್ಸನ್ನು ಮುಷ್ಟಿದೇಶದಲ್ಲಿ ತುಂಡರಿಸಿದನು. ಕೂಡಲೇ ಅಸಂಭ್ರಾಂತನಾಗಿ ಧನುಸ್ಸುತುಂಡಾಗಿದ್ದ ನಕುಲನ ಹಣೆಗೆ ಮೂರು ರುಕ್ಮಪುಂಖಗಳ ಶಿಲಾಶಿತ ಬಾಣಗಳಿಂದ ಹೊಡೆದನು. ತೀಕ್ಷ್ಣ ಶರಗಳಿಂದ ಅವನ ಕುದುರೆಗಳನ್ನು ಮೃತ್ಯುಲೋಕಕ್ಕೆ ಕಳುಹಿಸಿದನು. ಹಾಗೆಯೇ ಧ್ವಜ ಮತ್ತು ಸಾರಥಿಗಳನ್ನು ಮೂರು ಮೂರು ಬಾಣಗಳಿಂದ ಹೊಡೆದು ಕೆಳಗುರುಳಿಸಿದನು. ಶತ್ರುಭುಜದಿಂದ ಪ್ರಯೋಗಿಸಲ್ಪಟ್ಟ ಆ ಮೂರು ಶರಗಳು ಹಣೆಗೆ ತಾಗಲು ನಕುಲನು ಮೂರು ಶೃಂಗಗಳುಳ್ಳ ಪರ್ವತದಂತೆ ಸುಶೋಭಿಸಿದನು. ಧನುಸ್ಸು ತುಂಡಾಗಿ ವಿರಥನಾಗಿದ್ದ ಆ ವೀರನು ಖಡ್ಗ-ಗುರಾಣಿಗಳನ್ನು ಹಿಡಿದು ಬೆಟ್ಟದಿಂದ ಧುಮುಕುವ ಕೇಸರಿಯಂತೆ ರಥದ ಮೇಲಿಂದ ಕೆಳಕ್ಕೆ ಹಾರಿದನು.
ಪದಾತಿಯಾಗಿಯೇ ತನ್ನನ್ನು ಆಕ್ರಮಣಿಸಲು ಬರುತ್ತಿದ್ದ ನಕುಲನ ಮೇಲೆ ಚಿತ್ರಸೇನನು ಶರಗಳ ಮಳೆಯನ್ನು ಸುರಿಸಿದನು. ಆದರೆ ಲಘುವಿಕ್ರಮಿ ನಕುಲನು ಅವುಗಳನ್ನು ತನ್ನ ಗುರಾಣಿಯಿಂದಲೇ ತಡೆದನು. ಆಗ ಚಿತ್ರಯೋಧೀ ಜಿತಶ್ರಮಿ ಮಹಾಬಾಹು ನಕುಲನು ಸರ್ವ ಸೇನೆಗಳು ನೋಡುತ್ತಿದ್ದಂತೆಯೇ ಚಿತ್ರಸೇನನ ರಥದ ಬಳಿಸಾರಿ ಅದನ್ನು ಏರಿ, ಕುಂಡಲ-ಮುಕುಟ-ಸುಂದರ ಮೂಗು ಮತ್ತು ಆಯತ ಕಣ್ಣುಗಳಿದ್ದ ಚಿತ್ರಸೇನನ ಶಿರವನ್ನು ಕಾಯದಿಂದ ಅಪಹರಿಸಿದನು. ದಿವಾಕರಪ್ರಭೆಯ ಚಿತ್ರಸೇನನು ರಥಾಸನದ ಕೆಳಕ್ಕೆ ಬಿದ್ದನು.
ಚಿತ್ರಸೇನನು ಹತನಾದುದನ್ನು ನೋಡಿ ಮಹಾರಥ ಪಾಂಡವರು “ಸಾಧು! ಸಾಧು!” ಎಂದು ಕೂಗಿ ಪುಷ್ಕಲ ಸಿಂಹನಾದಗೈದರು. ಸಹೋದರನು ಹತನಾದುದನ್ನು ನೋಡಿ ಕರ್ಣನ ಇನ್ನಿಬ್ಬರು ಮಹಾರಥ ಪುತ್ರರು – ಸುಷೇಣ ಮತ್ತು ಸತ್ಯಸೇನ - ನಿಶಿತ ಶರಗಳನ್ನು ಎರಚುತ್ತಾ ಮಹಾವನದಲ್ಲಿ ಆನೆಯನ್ನು ಕೊಲ್ಲಲು ಬರುವ ವ್ಯಾಘ್ರಗಳಂತೆ ನಕುಲನನ್ನು ಆಕ್ರಮಣಿಸಿದರು. ಆ ಇಬ್ಬರು ತೀಕ್ಷ್ಣರೂ ಮಹಾರಥ ನಕುಲನನ್ನು ಮೇಘಗಳು ಮಳೆಗರೆಯುವಂತೆ ಬಾಣಗಳನ್ನು ಸುರಿಸುತ್ತಾ ಆಕ್ರಮಿಸಿದರು. ಶರಗಳಿಂದ ಎಲ್ಲಕಡೆ ಪ್ರಹರಿಸಲ್ಪಟ್ಟರೂ ಕೂಡ ನಕುಲನು ಪ್ರಹೃಷ್ಟನಾಗಿಯೇ ಇದ್ದು, ಇನ್ನೊಂದು ಧನುಸ್ಸನ್ನು ಹಿಡಿದು ರಥವನ್ನೇರಿ ರಣದಲ್ಲಿ ಕ್ರುದ್ಧರೂಪೀ ಅಂತಕನಂತೆ ನಿಂತನು. ಆ ಇಬ್ಬರು ಸಹೋದರರು ಸನ್ನತಪರ್ವ ಶರಗಳಿಂದ ಅವನ ರಥವನ್ನೇ ಚೂರು ಚೂರು ಮಾಡಲು ಪ್ರಾರಂಭಿಸಿದರು. ಆಗ ನಕುಲನು ರಣದಲ್ಲಿ ನಗುತ್ತಾ ನಿಶಿತ ತೀಕ್ಷ್ಣ ನಾಲ್ಕು ಶರಗಳಿಂದ ಸತ್ಯಸೇನನ ನಾಲ್ಕೂ ಕುದುರೆಗಳನ್ನು ಸಂಹರಿಸಿದನು. ಅನಂತರ ಪಾಂಡವನು ರುಕ್ಮಪುಂಖ ಶಿಲಾಶಿತ ನಾರಚವನ್ನು ಸಂಧಾನಮಾಡಿ ಸತ್ಯಸೇನನ ಧನುಸ್ಸನ್ನು ತುಂಡರಿಸಿದನು. ಕೂಡಲೇ ಅನ್ಯ ರಥವನ್ನೇರಿ ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಸತ್ಯಸೇನ-ಸುಷೇಣರು ಪಾಂಡವನನ್ನು ಪುನಃ ಆಕ್ರಮಣಿಸಿದರು. ಅದರಿಂದ ಸ್ವಲ್ಪವೂ ಗಾಬರಿಗೊಳ್ಳದೇ ಪ್ರತಾಪವಾನ್ ಮಾದ್ರೀಪುತ್ರನು ಅವರಿಬ್ಬರನ್ನು ರಣಮೂರ್ಧನಿಯಲ್ಲಿ ಎರಡೆರಡು ಬಾಣಗಳಿಂದ ಹೊಡೆದನು. ಆಗ ಮಹಾರಥ ಸುಷೇಣನಾದರೋ ಕ್ರುದ್ಧನಾಗಿ ಕ್ಷುರಪ್ರದಿಂದ ಪಾಂಡವನ ಮಹಾ ಧನುಸ್ಸನ್ನು ತುಂಡರಿಸಿ ನಕ್ಕನು. ಕೂಡಲೇ ಕ್ರೋಧಮೂರ್ಛಿತ ನಕುಲನು ಇನ್ನೊಂದು ಧನುಸ್ಸನ್ನು ಹಿಡಿದು ಸುಷೇಣನನ್ನು ಐದು ಬಾಣಗಳಿಂದ ಹೊಡೆದು ಒಂದರಿಂದ ಧ್ವಜವನ್ನು ಕತ್ತರಿಸಿದನು. ಕೂಡಲೇ ಅವನು ಸತ್ಯಸೇನನ ಧನುಸ್ಸನ್ನೂ ಕೈಚೀಲವನ್ನೂ ಕತ್ತರಿಸಿದನು. ಆಗ ಜನರು ಗಟ್ಟಿಯಾಗಿ ಕೂಗಿಕೊಂಡರು. ಸತ್ಯಸೇನನು ಇನ್ನೊಂದು ವೇಗವಾದ ಮತ್ತು ಭಾರವನ್ನು ಹೊರಬಲ್ಲ ಧನುಸ್ಸನ್ನು ಎತ್ತಿಕೊಂಡು ಶರಗಳಿಂದ ಪಾಂಡುನಂದನನನ್ನು ಎಲ್ಲ ಕಡೆಗಳಿಂದ ಮುಚ್ಚಿಬಿಟ್ಟನು. ನಕುಲನು ಆ ಬಾಣಗಳನ್ನು ತಡೆದು ನಿಲ್ಲಿಸಿ, ಸತ್ಯಸೇನ ಮತ್ತು ಸುಷೇಣರನ್ನು ಎರಡೆರಡು ಬಾಣಗಳಿಂದ ಹೊಡೆದನು. ಅವರಿಬ್ಬರೂ ಪ್ರತ್ಯೇಕ ಪ್ರತ್ಯೇಕವಾಗಿ ಪ್ರತಿಯಾಗಿ ಹೊಡೆಯುತ್ತಾ ನಿಶಿತ ಶರಗಳಿಂದ ನಕುಲನ ಸಾರಥಿಯನ್ನು ಪ್ರಹರಿಸಿದರು. ಸತ್ಯಸೇನನು ಪ್ರತ್ಯೇಕ ಎರಡು ಬಾಣಗಳಿಂದ ನಕುಲನ ರಥದ ಈಷಾದಂಡವನ್ನೂ ಧನುಸ್ಸನ್ನೂ ತುಂಡರಿಸಿದನು. ಅದರಿಂದ ಕುಪಿತನಾದ ನಕುಲನು ರಥದಲ್ಲಿಯೇ ನಿಂತು ಸ್ವರ್ಣದಂಡದ, ನೇರ ಅಗ್ರಭಾಗವಿದ್ದ, ಎಣ್ಣೆಯಿಂದ ಹದಮಾಡಲ್ಪಟ್ಟಿದ್ದ, ನಿರ್ಮಲ, ಕಟವಾಯಿಯನ್ನು ನೆಕ್ಕುತ್ತಿರುವ ಮಹಾ ವಿಷಯುಕ್ತ ಸರ್ಪಿಣಿಯಂತಿರುವ ರಥಶಕ್ತಿಯನ್ನು ಮೇಲಕ್ಕೆತ್ತಿ ಸತ್ಯಸೇನನ ಮೇಲೆ ಎಸೆದನು. ಅದು ಅವನ ಹೃದಯವನ್ನು ನೂರು ಚೂರುಗಳಾಗಿ ಒಡೆಯಲು ಅವನು ಪ್ರಾಣಗಳನ್ನು ತೊರೆದು ಒಡನೆಯೇ ರಥದಿಂದ ಭೂಮಿಯ ಮೇಲೆ ಬಿದ್ದನು.
ಸಹೋದರನು ಹತನಾದುದನ್ನು ನೋಡಿ ಕ್ರೋಧಮೂರ್ಛಿತ ಸುಷೇಣನು ಕೂಡಲೇ ಪದಾತಿ ಪಾಂಡುನಂದನನನ್ನು ಶರಗಳಿಂದ ಮುಚ್ಚಿಬಿಟ್ಟನು. ನಕುಲನು ವಿರಥನಾದುದನ್ನು ನೋಡಿ ಮಹಾಬಲ ದ್ರೌಪದೇಯ ಸುತಸೋಮನು ರಣದಲ್ಲಿ ತಂದೆಯನ್ನು ರಕ್ಷಿಸುತ್ತಾ ಅಲ್ಲಿಗೆ ಧಾವಿಸಿಬಂದನು. ಅನಂತರ ಭರತಶೇಷ್ಠ ನಕುಲನು ಸುತಸೋಮನ ಆ ರಥವನ್ನೇರಿ ಗಿರಿಯನ್ನೇರಿದ ಕೇಸರಿಯಂತೆ ಸುಶೋಭಿಸಿದನು. ಅವನು ಇನ್ನೊಂದು ಧನುಸ್ಸನ್ನೆತ್ತಿಕೊಂಡು ಸುಷೇಣನೊಡನೆ ಯುದ್ಧಮಾಡಿದನು. ಅವರಿಬ್ಬರು ಮಹಾರಥರೂ ಶರವರ್ಷಗಳಿಂದ ಪರಸ್ಪರರನ್ನು ಎದುರಿಸುತ್ತಾ ಪರಸ್ಪರರ ವಧೆಯನ್ನು ಪ್ರಯತ್ನಿಸುತ್ತಿದ್ದರು. ಅನಂತರ ಸುಶೇಣನಾದರೋ ಕ್ರುದ್ಧನಾಗಿ ಪಾಂಡವನನ್ನು ಮೂರು ವಿಶಿಖಗಳಿಂದ ಮತ್ತು ಇಪ್ಪತ್ತು ಬಾಣಗಳಿಂದ ಸುತಸೋಮನ ಬಾಹು-ಎದೆಗಳಿಗೆ ಹೊಡೆದನು. ಆಗ ಪರವೀರಹ ವೀರ್ಯವಾನ್ ನಕುಲನು ಕ್ರುದ್ಧನಾಗಿ ಅವನನ್ನು ಎಲ್ಲ ಕಡೆಗಳನ್ನೂ ಶರಗಳಿಂದ ಮುಚ್ಚಿಬಿಟ್ಟನು. ಅನಂತರ ನಕುಲನು ತೀಕ್ಷ್ಣಅಗ್ರದ ಸುತೇಜನ ಅರ್ಧಚಂದ್ರವನ್ನು ಹಿಡಿದು ಅದನ್ನು ವೇಗಯುಕ್ತವಾಗಿ ಕರ್ಣಪುತ್ರನ ಮೇಲೆ ಎಸೆದನು. ಅದು ಅವನ ಶಿರವನ್ನು ದೇಹದಿಂದ ಬೇರ್ಪಡಿಸಿತು. ಅದನ್ನು ಸರ್ವಸೇನೆಗಳೂ ನೋಡಿದವು. ಅದೊಂದು ಅದ್ಭುತವಾಗಿತ್ತು. ಮಹಾತ್ಮ ನಕುಲನಿಂದ ಹತನಾದ ಅವನು ನದಿಯ ವೇಗಕ್ಕೆ ಸಿಲುಕಿದ ದಡದಲ್ಲಿದ್ದ ಮಹಾ ವೃಕ್ಷದಂತೆ ಕೆಳಕ್ಕುರುಳಿದನು. ಕರ್ಣಪುತ್ರನ ವಧೆಯನ್ನು ಮತ್ತು ನಕುಲನ ವಿಕ್ರಮವನ್ನು ನೋಡಿ ಕೌರವ ಸೇನೆಯು ಭಯದಿಂದ ಓಡಿ ಹೋಯಿತು.
ಆಗ ಶೂರ ಸೇನಾಪತಿ ಮದ್ರರಾಜನು ರಣದಲ್ಲಿ ಆ ಸೇನೆಯನ್ನು ಪಾಲಿಸಿದನು. ಭೀತರಾಗಿದ್ದ ಸೇನೆಯನ್ನು ಪುನಃ ವ್ಯವಸ್ಥೆಗೊಳಿಸಿ ಅವನು ಜೋರಾಗಿ ಸಿಂಹನಾದ ಗೈದು ಧನುಸ್ಸನ್ನು ದಾರುಣವಾಗಿ ಟೇಂಕರಿಸಿದನು. ದ್ರುಢಧನ್ವಿಯಿಂದ ರಕ್ಷಿತರಾದ ಕೌರವರು ಸಮರದಲ್ಲಿ ವ್ಯಥೆಯನ್ನು ಕಳೆದುಕೊಂಡು ಒಟ್ಟಾಗಿ ಎದುರಿಸಿ ಯುದ್ಧಮಾಡತೊಡಗಿದರು. ಯುದ್ಧಮಾಡಲು ಬಯಸಿದ ಮಹಾಸೇನೆಯು ಮಹೇಷ್ವಾಸ ಮದ್ರರಾಜನನ್ನು ಸುತ್ತಲಿನಿಂದಲೂ ಆವರಿಸಿ ನಿಂತುಕೊಂಡಿತು. ಸಾತ್ಯಕಿ, ಭೀಮಸೇನ, ಮಾದ್ರೀಪುತ್ರ ಪಾಂಡವರೀರ್ವರು ಯುಧಿಷ್ಠಿರನನ್ನು ಮುಂದಿಟ್ಟುಕೊಂಡು ಶಲ್ಯನನ್ನು ಎದುರಿಸಿದರು. ರಣದಲ್ಲಿ ವೀರರು ತುಂಬಿ ಸಿಂಹನಾದಗೈದರು. ಉಗ್ರ ಬಾಣಗಳ ಶಬ್ಧಗಳೂ, ವಿಧ-ವಿಧದ ಜಯಘೋಷಗಳೂ ಕೇಳಿಬಂದವು. ಹಾಗೆಯೇ ಕೌರವರೆಲ್ಲರೂ ಮದ್ರಾಧಿಪತಿಯನ್ನು ಸುತ್ತುವರೆದು ನಿಂತು ಪುನಃ ಯುದ್ಧಮಾಡಲು ಆಸಕ್ತಿತೋರಿಸುತ್ತಿದ್ದರು. ಆಗ ಮೃತ್ಯುವನ್ನೇ ಹಿಂದಿರುಗುವ ಸ್ಥಾನವನ್ನಾಗಿಸಿಕೊಂಡಿದ್ದ ಕೌರವರ ಮತ್ತು ಶತ್ರುಗಳ ನಡುವೆ ಹೇಡಿಗಳ ಭಯವನ್ನು ಹೆಚ್ಚಿಸುವ ಯುದ್ಧವು ಪ್ರಾರಂಭವಾಯಿತು. ಹಿಂದೆ ದೇವಾಸುರರ ನಡುವೆ ನಡೆದ ಯುದ್ಧದಂತೆ ಯಮರಾಷ್ಟ್ರವನ್ನು ವಿವರ್ಧಿಸುವ ಅಭೀತರ ಯುದ್ಧವು ನಡೆಯಿತು.
ಪರಸ್ಪರರನ್ನು ವಧಿಸುತ್ತಾ ಹೋರಾಡುತ್ತಿದ್ದ ಸೇನೆಗಳಲ್ಲಿ ಯೋಧರು ಓಡಿ ಹೋಗುತ್ತಿದ್ದರು ಮತ್ತು ಆನೆಗಳು ಚೀತ್ಕರಿಸುತ್ತಿದ್ದವು. ಆ ಮಹಾಹವದಲ್ಲಿ ಪದಾತಿಗಳು ಜೋರಾಗಿ ಕೂಗಿಕೊಳ್ಳುತ್ತಿದ್ದರು. ಅನೇಕ ಕುದುರೆಗಳು ಓಡಿಹೋಗುತ್ತಿದ್ದವು. ಸರ್ವದೇಹಿಗಳ ಸಂಹಾರಕ ದಾರುಣ ಕ್ಷಯಕಾರವು ನಡೆಯುತ್ತಿರಲು ನಾನಾ ಶಸ್ತ್ರಗಳ ಪ್ರಹಾರವು ನಡೆಯುತ್ತಿತ್ತು ಮತ್ತು ರಥ-ಆನೆಗಳು ಸಂಘರ್ಷಿಸುತ್ತಿದ್ದವು. ಯುದ್ಧಶೌಂಡರಿಗೆ ಹರ್ಷವನ್ನುಂಟುಮಾಡುವ, ಹೇಡಿಗಳ ಭಯವನ್ನು ಹೆಚ್ಚಿಸುವ ಆ ಯುದ್ಧದಲ್ಲಿ ಯೋಧರು ಪರಸ್ಪರರನ್ನು ವಧಿಸಲು ಬಯಸಿ ನುಗ್ಗಿ ಹೋಗುತ್ತಿದ್ದರು. ಯಮರಾಷ್ಟ್ರವನ್ನು ವರ್ಧಿಸುವ ಆ ಘೋರರೂಪೀ ಸಂಗ್ರಾಮದಲ್ಲಿ ಪ್ರಾಣಗಳನ್ನು ಪಣವಾಗಿಟ್ಟ ಮಹಾ ಜೂಜಾಟವು ನಡೆಯುತ್ತಿತ್ತು. ಪಾಂಡವರು ಕೌರವ ಸೈನ್ಯವನ್ನು ನಿಶಿತ ಶರಗಳಿಂದ ವಧಿಸುತ್ತಿದ್ದರು. ಕೌರವರ ಕಡೆಯ ಯೋಧರೂ ಕೂಡ ಪಾಂಡವ ಸೈನಿಕರನ್ನು ಸಂಹರಿಸುತ್ತಿದ್ದರು. ಹೇಡಿಗಳಿಗೆ ಭಯವನ್ನು ನೀಡುವ ಆ ಯುದ್ಧವು ಹಾಗೆ ನಡೆಯುತ್ತಿರಲು, ಸೂರ್ಯನು ಉದಯಿಸಿ ಪೂರ್ವಾಹ್ಣವು ಪ್ರಾಪ್ತವಾಯಿತು.
ಮಹಾತ್ಮ ಅರ್ಜುನನಿಂದ ರಕ್ಷಿತವಾಗಿದ್ದ, ಮೃತ್ಯುವನ್ನೇ ಹಿಂದಿರುಗುವ ಸ್ಥಾನವನ್ನಾಗಿ ಮಾಡಿಕೊಂಡು ಗುರಿಯನ್ನಿಟ್ಟುಕೊಂಡಿದ್ದ ಶತ್ರುಸೇನೆಯು ಕೌರವ ಸೇನೆಯೊಂದಿಗೆ ಹೋರಾಡುತ್ತಿತ್ತು. ಪ್ರಹಾರ ಕುಶಲ ಲಬ್ಧಲಕ್ಷ್ಯ ದೃಪ್ತ ಬಲಿಷ್ಠ ಪಾಂಡವ ಯೋಧರಿಂದ ಪ್ರಹರಿಸಲ್ಪಟ್ಟ ಕೌರವ ಸೇನೆಯು ದಾವಾಗ್ನಿಯಿಂದ ಸುತ್ತುವರೆಯಲ್ಪಟ್ಟ ಹರಿಣಿಯಂತೆ ವ್ಯಾಕುಲಗೊಂಡಿತ್ತು. ಕೆಸರಿನಲ್ಲಿ ಸಿಕ್ಕಿಬಿದ್ದ ದುರ್ಬಲ ಹಸುವಿನಂತೆ ಕೌರವ ಸೇನೆಯು ಕುಸಿಯುತ್ತಿರುವುದನ್ನು ನೋಡಿ ಶಲ್ಯನು ಅದನ್ನು ಮೇಲೆತ್ತಲು ಬಯಸಿ ಪಾಂಡವ ಸೇನೆಯ ಕಡೆ ಹೋದನು. ಮದ್ರರಾಜನಾದರೋ ಸಂಕ್ರುದ್ಧನಾಗಿ ಉತ್ತಮ ಧನುಸ್ಸನ್ನು ಹಿಡಿದು ಸಂಗ್ರಾಮದಲ್ಲಿ ಪಾಂಡವರನ್ನು ಆಕ್ರಮಣಿಸಿದನು. ವಿಜಯೋತ್ಸಾಹಿಗಳಾಗಿದ್ದ ಪಾಂಡವರು ಕೂಡ ಸಮರದಲ್ಲಿ ಮದ್ರರಾಜನನ್ನು ಎದುರಿಸಿ ನಿಶಿತ ಶರಗಳಿಂದ ಹೊಡೆದರು. ಆಗ ಧರ್ಮರಾಜನು ನೋಡುತ್ತಿದ್ದಂತೆಯೇ ಮಹಾಬಲ ಮದ್ರರಾಜನು ನೂರಾರು ತೀಕ್ಷ್ಣ ಶರಗಳಿಂದ ಅವನ ಸೇನೆಯನ್ನು ಮರ್ದಿಸತೊಡಗಿದನು.
ಆಗ ನಾನಾ ರೂಪದ ಅನೇಕ ನಿಮಿತ್ತಗಳು ಕಾಣಿಸಿಕೊಂಡವು. ಪರ್ವತಗಳೊಂದಿಗೆ ಶಬ್ಧಮಾಡುತ್ತಾ ಭೂಮಿಯು ನಡುಗಿತು. ಆಕಾಶದಿಂದ ಅನೇಕ ಉಲ್ಕೆಗಳು ಮತ್ತು ದಂಡಗಳೊಡನೆ ದೀಪ್ತಾಗ್ರ ಶೂಲಗಳೂ ಸೂರ್ಯಮಂಡಲವನ್ನು ಅಪ್ಪಳಿಸಿ ಎಲ್ಲ ಕಡೆಗಳನ್ನೂ ಸೀಳುವಂತೆ ಭೂಮಿಯ ಮೇಲೆ ಬಿದ್ದವು. ಮೃಗಗಳು, ಎಮ್ಮೆಗಳು ಮತ್ತು ಪಕ್ಷಿಗಳು ಅನೇಕ ಸಂಖ್ಯೆಗಳಲ್ಲಿ ನಿನ್ನ ಸೇನೆಯನ್ನು ಬಲಬದಿಯಿಂದ ಸುತ್ತುತ್ತಿದ್ದವು. ಆಗ ಸಂಘಟಿತರಾಗಿದ್ದವರ ನಡುವೆ ಅತ್ಯುಗ್ರ ಯುದ್ಧವು ನಡೆಯಿತು. ಕೌರವರು ಸರ್ವ ಸೇನೆಗಳನ್ನೂ ಒಟ್ಟುಮಾಡಿಕೊಂಡು ಪಾಂಡವಸೇನೆಯನ್ನು ಆಕ್ರಮಣಿಸಿದರು. ಶಲ್ಯನಾದರೋ ವರ್ಷಾಕಾಲದಲ್ಲಿ ಸಹಸ್ರಾಕ್ಷನು ಮಳೆಸುರಿಸುವಂತೆ ಶರವರ್ಷಗಳನ್ನು ಯುಧಿಷ್ಠಿರನ ಮೇಲೆ ಸುರಿಸಿದನು. ಆ ಮಹಾಬಲನು ರಕ್ಮಪುಂಖ ಶಿಲಾಶಿತ ಶರಗಳಿಂದ ಭೀಮಸೇನನನ್ನೂ, ದ್ರೌಪದೇಯರೆಲ್ಲರನ್ನೂ, ಮಾದ್ರೀಪುತ್ರ ಪಾಂಡವರಿಬ್ಬರನ್ನೂ, ಧೃಷ್ಟದ್ಯುಮ್ನ, ಶೈನೇಯ, ಶಿಖಂಡಿಯರನ್ನು ಕೂಡ ಒಬ್ಬೊಬ್ಬರನ್ನೂ ಹತ್ತತ್ತು ಬಾಣಗಳಿಂದ ಹೊಡೆದನು. ಅನಂತರ ಬೇಸಗೆಯ ಕೊನೆಯಲ್ಲಿ ಇಂದ್ರನು ಸುರಿಸುವಂತೆ ಬಾಣವರ್ಷಗಳನ್ನು ಸೃಷ್ಟಿಸಿದನು. ಆಗ ಸಹಸ್ರಾರು ಪ್ರಭದ್ರಕ-ಸೋಮಕರು ಶಲ್ಯಸಾಯಕಗಳಿಂದ ಉರುಳಿಸಲ್ಪಟ್ಟು ಕೆಳಗೆ ಬೀಳುತ್ತಿರುವುದು ಕಂಡುಬಂದಿತು. ಶಲ್ಯನ ಶರಗಳು ದುಂಬಿಗಳ ಸಮೂಹಗಳಂತೆ, ಮಿಡತೆಹುಳುಗಳ ಗುಂಪುಗಳಂತೆ, ಮೇಘಗಳ ಗುಂಪುಗಳಂತೆ ಸೇನೆಗಳ ಮೇಲೆ ಬೀಳುತ್ತಿದ್ದವು. ಶಲ್ಯನ ಬಾಣಗಳಿಂದ ಆರ್ತರಾಗಿ ಆನೆಗಳೂ, ಕುದುರೆಗಳೂ, ಪದಾತಿಗಳೂ, ರಥಿಗಳೂ ಕೆಳಗುರುಳುತ್ತಿದ್ದವು. ದಿಕ್ಕುಕಾಣದೇ ತಿರುಗುತ್ತಿದ್ದವು. ಕಾಲಸೃಷ್ಟ ಅಂತಕನಂತೆ ಕೋಪ-ಪೌರುಷಗಳಿಂದ ಆವಿಷ್ಟನಾಗಿದ್ದ ಮದ್ರೇಶನು ಯುದ್ಧದಲ್ಲಿ ಶತ್ರುಗಳನ್ನು ಬಾಣಗಳಿಂದ ಮುಚ್ಚಿಬಿಟ್ಟನು. ಮಹಾಬಲ ಮದ್ರೇಶನು ಮೇಘಗರ್ಜನೆಯಂತೆ ಗರ್ಜಿಸುತ್ತಿದ್ದನು. ಶಲ್ಯನಿಂದ ಹಾಗೆ ವಧಿಸಲ್ಪಡುತ್ತಿದ್ದ ಪಾಂಡವ ಸೇನೆಯು ಯುಧಿಷ್ಠಿರನ ಬಳಿ ಸಾರಿತು. ಲಘುಹಸ್ತ ಶಲ್ಯನು ನಿಶಿತ ಶರಗಳಿಂದ ಆ ಸೇನೆಯನ್ನು ಮರ್ದಿಸಿ ಮಹಾ ಶರವರ್ಷದಿಂದ ಯುಧಿಷ್ಠಿರನನ್ನು ಪೀಡಿಸಿದನು. ಪದಾತಿ-ಅಶ್ವಗಳೊಂದಿಗೆ ತನ್ನ ಮೇಲೆ ಎರಗುತ್ತಿದ್ದ ಶಲ್ಯನನ್ನು ಕ್ರುದ್ಧ ಯುಧಿಷ್ಠಿರನು ತೀಕ್ಷ್ಣ ಶರಗಳಿಂದ ಮುಸುಕಿ ಮದಿಸಿದ ಆನೆಯನ್ನು ಅಂಕುಶಗಳಿಂದ ಹೇಗೋ ಹಾಗೆ ನಿಯಂತ್ರಿಸಿದನು. ಅವನ ಮೇಲೆ ಶಲ್ಯನು ಘೋರ ಸರ್ಪವಿಷದಂತಿರುವ ಶರವನ್ನು ಪ್ರಯೋಗಿಸಿದನು. ಅದು ಮಹಾತ್ಮ ಯುಧಿಷ್ಠಿರನನ್ನು ಭೇಧಿಸಿ ವೇಗದಿಂದ ಭೂಮಿಯನ್ನು ಹೊಕ್ಕಿತು.
ಆಗ ಕ್ರುದ್ಧ ವೃಕೋದರನು ಶಲ್ಯನನ್ನು ಏಳು ಬಾಣಗಳಿಂದ, ಸಹದೇವನು ಐದರಿಂದ ಮತ್ತು ನಕುಲನು ಹತ್ತು ಶರಗಳಿಂದ ಹೊಡೆದರು. ದ್ರೌಪದೇಯರು ಕೂಡ ಮೇಘಗಳು ಭೂಮಿಯ ಮೇಲೆ ಹೇಗೋ ಹಾಗೆ ಶತ್ರುಘ್ನ-ಶೂರ-ಆರ್ತಾಯನಿ-ಮಹಾಭಾಗ ಶಲ್ಯನ ಮೇಲೆ ಶರಗಳನ್ನು ಸುರಿಸಿದರು.
ಎಲ್ಲಕಡೆಗಳಲ್ಲಿ ಪಾರ್ಥರಿಂದ ಆಕ್ರಮಣಿಸಲ್ಪಟ್ಟ ಶಲ್ಯನನ್ನು ನೋಡಿ ಸಂಕ್ರುದ್ಧ ಕೃತವರ್ಮ-ಕೃಪರು ಅಲ್ಲಿಗೆ ಧಾವಿಸಿದರು. ಪತತ್ರೀ, ಉಲೂಕ, ಸೌಬಲ ಶಕುನಿ, ಅಶ್ವತ್ಥಾಮ, ಧೃತರಾಷ್ಟ್ರ ಪುತ್ರರು ಎಲ್ಲರೂ ಯುದ್ಧದಲ್ಲಿ ಶಲ್ಯನ ಸಹಾಯಕ್ಕಾಗಿ ಹೋದರು. ಕೃತವರ್ಮನು ಮೂರು ಶಿಲೀಮುಖಗಳಿಂದ ಭೀಮಸೇನನನ್ನು ಹೊಡೆದು ಮಹಾ ಬಾಣವರ್ಷದಿಂದ ಆ ಕ್ರುದ್ಧರೂಪನನ್ನು ತಡೆದನು. ಕೃಪನು ಧೃಷ್ಟದ್ಯುಮ್ನನನ್ನು ಬಾಣವರ್ಷಗಳಿಂದ ಪೀಡಿಸಿದನು. ದ್ರೌಪದೇಯರನ್ನು ಶಕುನಿಯೂ, ದ್ರೌಣಿಯು ಯಮಳರನ್ನೂ ಆಕ್ರಮಣಿಸಿದರು. ದುರ್ಯೋಧನನು ಕೇಶವಾರ್ಜುನರನ್ನು ಎದುರಿಸಿ ಬಾಣಗಳಿಂದ ಅವರನ್ನು ಪ್ರಹರಿಸಿದನು. ಹೀಗೆ ಕೌರವ ಮತ್ತು ಶತ್ರುಗಳ ನಡುವೆ ನೂರಾರು ಘೋರರೂಪೀ-ವಿಚಿತ್ರ ದ್ವಂದ್ವಯುದ್ಧಗಳು ಅಲ್ಲಲ್ಲಿ ನಡೆಯುತ್ತಿದ್ದವು. ಭೋಜ ಕೃತವರ್ಮನು ಭೀಮನ ಕರಡಿಬಣ್ಣದ ಕುದುರೆಗಳನ್ನು ಸಂಹರಿಸಿದನು. ಹತಾಶ್ವ ಪಾಂಡುನಂದನನು ರಥದಿಂದ ಕೆಳಗಿಳಿದು ಕಾಲದಂಡದಂತಿರುವ ಗದೆಯನ್ನು ಎತ್ತಿಹಿಡಿದು ಯುದ್ಧಮಾಡಿದನು. ಎದುರಾಳಿಯಾಗಿದ್ದ ಸಹದೇವನ ಕುದುರೆಗಳನ್ನು ಮದ್ರರಾಜನು ಸಂಹರಿಸಿದನು. ಆಗ ಸಹದೇವನು ಖಡ್ಗದಿಂದ ಶಲ್ಯನ ಮಗನನ್ನು ವಧಿಸಿದನು. ಆಚಾರ್ಯ ಗೌತಮನು ಅಸಂಭ್ರಾಂತನಾಗಿ, ಪ್ರಯತ್ನಪಟ್ಟು ಧೃಷ್ಟದ್ಯುಮ್ನನೊಡನೆ ಹೋರಾಡಿದನು. ಆಚಾರ್ಯಸುತ ಅಶ್ವತ್ಥಾಮನು ನಗುತ್ತಿರುವನೋ ಎನ್ನುವಂತೆ ಹತ್ತತ್ತು ಶರಗಳಿಂದ ಒಬ್ಬೊಬ್ಬ ದ್ರೌಪದೇಯ ವೀರನನ್ನೂ ಪ್ರಹರಿಸಿದನು. ಶಲ್ಯನೂ ಕೂಡ ಸಂಕ್ರುದ್ಧನಾಗಿ ಸೋಮಕ-ಪಾಂಡವರನ್ನು ವಧಿಸುತ್ತ ಪುನಃ ನಿಶಿತ ಬಾಣಗಳಿಂದ ಯುಧಿಷ್ಠಿರನನ್ನು ಪೀಡಿಸಿದನು.
ಶಲ್ಯ-ಭೀಮಸೇನರ ಗದಾಯುದ್ಧ
ಭೀಮನು ಕ್ರುದ್ಧನಾಗಿ ತುಟಿಯನ್ನು ಕಚ್ಚುತ್ತಾ ಶಲ್ಯನನ್ನು ವಿನಾಶಗೊಳಿಸಲು ಯಮದಂಡ ಸದೃಶ, ಮೇಲೆದ್ದುಬಂದ ಕಾಳರಾತ್ರಿಯಂತೆ ಕಾಣುತ್ತಿದ್ದ ಆನೆ-ಕುದುರೆ-ಪದಾತಿ ಶರೀರಗಳನ್ನು ವಿನಾಶಗೊಳಿಸಬಹುದಾದ ಮಹಾ ಗದೆಯನ್ನು ಎತ್ತಿ ಹಿಡಿದನು. ಸುವರ್ಣಪಟ್ಟಿಯನ್ನು ಸುತ್ತಿದ್ದ, ಉಲ್ಕೆಯಂತೆ ಪ್ರಜ್ವಲಿಸುತ್ತಿದ್ದ, ವಜ್ರದಂತಹ ಕಠಿನ ಲೋಹಮಯವಾಗಿದ್ದ, ಉಯ್ಯಾಲೆಯ ಮೇಲಿರುವ ಭಯಂಕರ ವಿಷಸರ್ಪಿಣಿಯಂತಿದ್ದ, ಚಂದನ-ಅಗರುಗಳಿಂದ ಲೇಪಿತಗೊಂಡು ಅಭೀಷ್ಟಳಾದ ಪ್ರಿಯತಮೆಯಂತಿದ್ದ ಆ ಗದೆಯು ಪ್ರಾಣಿಗಳ ವಸೆ-ಮೇಧಸ್ಸುಗಳಿಂದ ಲೇಪಿಸಲ್ಪಟ್ಟು ಯಮರಾಜನ ನಾಲಿಗೆಯಂತೆ ಭಯಂಕರವಾಗಿತ್ತು. ಆ ಗದೆಯಲ್ಲಿದ್ದ ನೂರಾರು ಕಿರುಗಂಟೆಗಳು ಯಾವಾಗಲೂ ಧ್ವನಿಗೈಯುತ್ತಿದ್ದವು. ವಾಸವನ ವಜ್ರದಂತಿದ್ದ ಆ ಗದೆಯು ಪೊರೆಕಳಚಿದ ವಿಷಸರ್ಪದಂತಿತ್ತು ಮತ್ತು ಆನೆಗಳ ಮದೋದಕಗಳಿಂದ ತೋಯ್ದುಹೋಗಿತ್ತು. ಶತ್ರುಸೇನೆಗಳಿಗೆ ಭಯದಾಯಕವೂ ಸ್ವಸೈನ್ಯಗಳಿಗೆ ಹರ್ಷದಾಯಕವೂ ಆಗಿದ್ದ ಅದು ಮನುಷ್ಯಲೋಕದಲ್ಲಿ ಗಿರಿಶೃಂಗಗಳನ್ನೂ ಸೀಳಬಲ್ಲದು ಎಂದು ವಿಖ್ಯಾತವಾಗಿತ್ತು. ಆ ಗದೆಯ ಆಶ್ರಯದಿಂದಲೇ ಕೌಂತೇಯನು ಕೈಲಾಸಭವನದಲ್ಲಿ ಮಹೇಶ್ವರಸಖ-ಬಲಶಾಲಿ-ಅಲಕಾಧಿಪ ಕುಬೇರನನ್ನು ಯುದ್ಧಕ್ಕೆ ಆಹ್ವಾನಿಸಿದ್ದನು. ದ್ರೌಪದಿಗೆ ಪ್ರಿಯವನ್ನುಂಟುಮಾಡಲು ಮಂದರ ಪುಷ್ಪಕ್ಕಾಗಿ ಮಹಾಬಲ ಕ್ರುದ್ಧ ಭೀಮನು ಅನೇಕರು ತಡೆದಿದ್ದರೂ ಗಣನೆಗೆ ತೆಗೆದುಕೊಳ್ಳದೇ ಆ ಗದೆಯನ್ನೇ ಅವಲಂಬಿಸಿ ಕುಬೇರನ ಪಟ್ಟಣದಲ್ಲಿ ಮಾಯಾವೀ ದೃಪ್ತ ಗುಹ್ಯಕರನ್ನು ಸಂಹರಿಸಿದ್ದನು. ಮಹಾಬಾಹು ಭೀಮನು ವಜ್ರ-ಮಣಿ-ರತ್ನಚಿತ್ರಿತ, ವಜ್ರದಂತೆ ಭಾರವಾಗಿದ್ದ ಆ ಗದೆಯನ್ನೆತ್ತಿಕೊಂಡು ರಣದಲ್ಲಿ ಶಲ್ಯನನ್ನು ಆಕ್ರಮಣಿಸಿದನು. ದಾರುಣ ಶಬ್ಧಮಾಡುತ್ತಿದ್ದ ಆ ಗದೆಯಿಂದ ಯುದ್ಧಕುಶಲ ಭೀಮಸೇನನು ಶಲ್ಯನ ನಾಲ್ಕೂ ಮಹಾವೇಗಯುಕ್ತ ಕುದುರೆಗಳನ್ನು ಅಪ್ಪಳಿಸಿ ಧ್ವಂಸಮಾಡಿದನು.
ಆಗ ಕ್ರುದ್ಧನಾದ ವೀರ ಶಲ್ಯನು ಗರ್ಜಿಸುತ್ತಾ ಭೀಮಸೇನನ ವಿಶಾಲ ವಕ್ಷಃಸ್ಥಳಕ್ಕೆ ತೋಮರವನ್ನು ಎಸೆಯಲು ಅದು ಅವನ ಕವಚವನ್ನು ಭೇದಿಸಿ ಅಲ್ಲಿ ನೆಟ್ಟಿಕೊಂಡಿತು. ಅಸಂಭ್ರಾಂತನಾದ ವೃಕೋದರನು ಆ ತೋಮರವನ್ನು ಕಿತ್ತೆತ್ತಿ ಅದರಿಂದಲೇ ಮದ್ರರಾಜನ ಸಾರಥಿಯ ಹೃದಯವನ್ನು ಭೇದಿಸಿದನು. ಭಿನ್ನ ಕವಚನಾದ ಅವನು ರಕ್ತವನ್ನು ಕಾರುತ್ತಾ ಭಯಗೊಂಡ ಮನಸ್ಸಿನಿಂದ ದೀನನಾಗಿ ಶಲ್ಯನಿಗೆ ಅಭಿಮುಖನಾಗಿ ಬಳಿಯಲ್ಲಿಯೇ ಬಿದ್ದನು. ಪ್ರತೀಕಾರಮಾಡಿದುದನ್ನು ನೋಡಿ ವಿಸ್ಮಿತಮಾನಸನಾದ ಶಲ್ಯನು ಗದೆಯನ್ನು ಹಿಡಿದು ಶತ್ರುವನ್ನು ದುರುಗುಟ್ಟಿ ನೋಡಿದನು. ಸಂಗ್ರಾಮದಲ್ಲಿ ಅನಾಯಾಸವಾಗಿ ಘೋರಕರ್ಮಗಳನ್ನೆಸಗುವ ಭೀಮಸೇನನ ಆ ಕೃತ್ಯವನ್ನು ನೋಡಿ ಸುಮನಸ್ಕ ಪಾರ್ಥರು ಭೀಮಸೇನನನ್ನು ಗೌರವಿಸಿದರು.
ಸಾರಥಿಯು ಬಿದ್ದುದನ್ನು ಕಂಡು ಶಲ್ಯನು ಬೇಗನೇ ಲೋಹಮಯ ಗದೆಯನ್ನು ಹಿಡಿದು ಅಚಲ ಪರ್ವತದಂತೆ ನಿಂತನು. ಭೀಮಸೇನನು ಮಹಾ ಗದೆಯನ್ನು ಹಿಡಿದು ಕಾಲಾಗ್ನಿಯಂತೆ ಉರಿಯುತ್ತಿದ್ದ, ಪಾಶಹಸ್ತ ಅಂತಕ-ಶೃಂಗವಿರುವ ಕೈಲಾಸ-ವಜ್ರವನ್ನು ಹಿಡಿದಿರುವ ವಾಸವ- ಶೂಲವನ್ನು ಹಿಡಿದಿದ್ದ ಹರ್ಯಕ್ಷ ರುದ್ರನಂತಿದ್ದ ಶಲ್ಯನನ್ನು ವೇಗದಿಂದ ಆಕ್ರಮಣಿಸಿದನು. ಆಗ ಸಹಸ್ರಾರು ಶಂಖ-ಪ್ರಣಾದ-ತೂರ್ಯಗಳು ಮೊಳಗಿದವು ಮತ್ತು ಶೂರರ ಹರ್ಷವನ್ನು ಹೆಚ್ಚಿಸುವ ಸಿಂಹನಾದಗಳುಂಟಾದವು. ಕಾಳಗವಾಡುತ್ತಿರುವ ಎರಡು ಮಹಾಗಜಗಳಂತಿದ್ದ ಅವರಿಬ್ಬರನ್ನೂ ಅಲ್ಲಿದ್ದ ಪ್ರೇಕ್ಷಕ ಯೋಧರೆಲ್ಲರೂ – ಕೌರವರು ಮತ್ತು ಪಾಂಡವರ ಕಡೆಯವರು – ಸಾಧು ಸಾಧು ಎಂದು ಹೇಳುತ್ತಿದ್ದರು. ಮದ್ರಾಧಿಪ ಅಥವಾ ಬಲರಾಮನನ್ನು ಬಿಟ್ಟರೆ ಬೇರೆ ಯಾರೂ ಯುದ್ಧದಲ್ಲಿ ಭೀಮಸೇನನ ವೇಗವನ್ನು ಸಹಿಸಿಕೊಳ್ಳಲು ಉತ್ಸಾಹಿತರಾಗಿರಲಿಲ್ಲ. ಅದೇರೀತಿ ಮದ್ರಾಧಿಪನ ಗದಾವೇಗವನ್ನು ಕೂಡ ಯುದ್ಧದಲ್ಲಿ ವೃಕೋದರನಲ್ಲದೇ ಅನ್ಯ ಯಾವ ಯೋಧನೂ ಸಹಿಸಿಕೊಳ್ಳಲು ಉತ್ಸಾಹಿತನಾಗಿರಲಿಲ್ಲ. ಮದ್ರರಾಜ-ವೃಕೋದರರಿಬ್ಬರೂ ಗೂಳಿಗಳಂತೆ ಗರ್ಜಿಸುತ್ತಾ ಗದೆಗಳನ್ನು ಹಿಡಿದು ತಿರುಗಿಸುತ್ತಾ ಮಂಡಲಾಕಾರಗಳಲ್ಲಿ ತಿರುಗುತ್ತಿದ್ದರು. ಮಂಡಲಾಕಾರದಲ್ಲಿ ತಿರುಗುವುದರಲ್ಲಾಗಲೀ, ಗದೆಗಳನ್ನು ತಿರುಗಿಸುವುದರಲ್ಲಾಗಲೀ ಆ ಇಬ್ಬರು ಪುರುಷಸಿಂಹಗಳ ನಡುವಿನ ಯುದ್ಧದಲ್ಲಿ ವ್ಯತ್ಯಾಸಗಳೇ ಇರಲಿಲ್ಲ. ಅಪ್ಪಟ ಚಿನ್ನದ ಪಟ್ಟಿಯ ಶಲ್ಯನ ಆ ಗದೆಯು ಅಗ್ನಿಜ್ವಾಲೆಯಂತೆ ಹೊಳೆಯುತ್ತಿದ್ದು ಶುಭ್ರವೂ ಭಯವರ್ಧನಿಯೂ ಆಗಿತ್ತು. ಹಾಗೆಯೇ ಮಂಡಲಮಾರ್ಗಗಳಲ್ಲಿ ಸುತ್ತುತ್ತಿದ್ದ ಮಹಾತ್ಮ ಭೀಮನ ಗದೆಯೂ ಮಿಂಚಿನ ಪ್ರಕಾಶದಂತೆ ಹೊಳೆದು ಶೋಭಿಸುತ್ತಿತ್ತು. ಮದ್ರರಾಜನು ಗದೆಯಿಂದ ಭೀಮನ ಗದೆಯನ್ನು ಹೊಡೆಯಲು ಅದರಿಂದ ಉರಿಯುವ ಅಗ್ನಿಜ್ವಾಲೆಗಳು ಹೊರಸೂಸುತ್ತಿದ್ದವು. ಹಾಗೆಯೇ ಭೀಮನು ತನ್ನ ಗದೆಯಿಂದ ಶಲ್ಯನ ಗದೆಯನ್ನು ಹೊಡೆಯಲು ಅದರಿಂದಲೂ ಕಿಡಿಗಳ ಮಳೆಯೇ ಸುರಿಯಿತು. ಅದೊಂದು ಅದ್ಭುತವಾಗಿತ್ತು. ಮಹಾಗಜಗಳು ದಂತಗಳಿಂದಲೂ ಮಹಾಗೂಳಿಗಳು ಕೋಡುಗಳಿಂದಲೂ ತಿವಿದಾಡುವಂತೆ ಅವರಿಬ್ಬರೂ ಅನ್ಯೋನ್ಯರನ್ನು ಗದೆಯ ಅಗ್ರಬಾಗದಿಂದ ಪ್ರಹರಿಸುತ್ತಿದ್ದರು. ಗದೆಗಳಿಂದ ಪ್ರಹರಿಸಲ್ಪಟ್ಟ ಅವರಿಬ್ಬರ ಶರೀರಗಳಲ್ಲಿ ಕ್ಷಣದಲ್ಲಿಯೇ ಗಾಯಗಳುಂಟಾಗಿ ರಕ್ತವು ಸೋರುತ್ತಿರಲು ಅವರಿಬ್ಬರೂ ಹೂಬಿಟ್ಟ ಕಿಂಶುಕ ವೃಕ್ಷಗಳಂತೆ ಪ್ರೇಕ್ಷಣೀಯರಾಗಿದ್ದರು. ಮದ್ರರಾಜನು ಗದೆಯಿಂದ ಭೀಮಸೇನನ ಎಡ ಮತ್ತು ಬಲ ಪಾರ್ಶ್ವಗಳಲ್ಲಿ ಹೊಡೆಯಲು ಆ ಮಹಾಬಾಹುವು ಪರ್ವತದಂತೆ ಅಲುಗಾಡಲೇ ಇಲ್ಲ. ಅದೇ ರೀತಿಯಲ್ಲಿ ಭೀಮನ ಗದೆಯಿಂದ ವೇಗವಾಗಿ ಪುನಃ ಪುನಃ ಪ್ರಹರಿಸಲ್ಪಡುತ್ತಿದ್ದರೂ ಶಲ್ಯನು ಆನೆಯಿಂದ ಪ್ರಹರಿಸಲ್ಪಟ್ಟ ಗಿರಿಯಂತೆ ಸ್ವಲ್ಪವೂ ವ್ಯಥೆಗೊಳ್ಳಲಿಲ್ಲ. ಆ ಇಬ್ಬರು ಪುರುಷಸಿಂಹರ ಗದಾಪ್ರಹಾರಗಳ ಧ್ವನಿಯು ಮಿಂಚಿನ ಧ್ವನಿಯಂತೆ ಎಲ್ಲ ದಿಕ್ಕುಗಳಲ್ಲಿಯೂ ಮೊಳಗಿತು.
ಆ ಮಹಾವೀರ್ಯರಿಬ್ಬರೂ ಗದೆಯನ್ನೆತ್ತಿ ಮುಂದೆಸಾಗುತ್ತಿದ್ದರು, ಹಿಂದೆ ಸರಿಯುತ್ತಿದ್ದರು ಮತ್ತು ಪುನಃ ಮಂಡಲ ಮಾರ್ಗಗಳಲ್ಲಿ ಸಂಚರಿಸುತ್ತಿದ್ದರು. ಹೀಗೆ ಅವರು ಎಂಟು ಹೆಜ್ಜೆಗಳನ್ನಿಟ್ಟ ಮೇಲೆ ಆ ಅತಿಮಾನುಷಕರ್ಮಿಗಳು ಲೋಹದಂಡಗಳನ್ನು ಮೇಲೆತ್ತಿ ಒಬ್ಬರನ್ನೊಬ್ಬರು ಹೊಡೆಯತೊಡಗಿದರು. ಮಂಡಲಗಳಲ್ಲಿ ಸಂಚರಿಸುತ್ತಾ ಅನ್ಯೋನ್ಯರನ್ನು ಹೊಡೆಯಲು ಪ್ರಯತ್ನಿಸುತ್ತಾ ತಮ್ಮ ಕ್ರಿಯಾವಿಶೇಷತೆಗಳನ್ನು ಪ್ರದರ್ಶಿಸುತ್ತಿದ್ದರು. ಶೃಂಗಸಹಿತ ಪರ್ವತಗಳಂತಿದ್ದ ಅವರಿಬ್ಬರೂ ಘೋರ ಗದೆಗಳನ್ನು ಮೇಲೆತ್ತಿ ಅನ್ಯೋನ್ಯರನ್ನು ಪ್ರಹರಿಸಿದರು. ಆದರೂ ಅವರು ರಣಭೂಮಿಯಲ್ಲಿ ಅಚಲರಾಗಿಯೇ ಇದ್ದರು. ಪರಸ್ಪರರ ಗದಾವೇಗದಿಂದ ತುಂಬಾ ಗಾಯಗೊಂಡ ಆ ವೀರರಿಬ್ಬರೂ ಎರಡು ಇಂದ್ರಧ್ವಜಗಳೋಪಾದಿಯಲ್ಲಿ ಒಟ್ಟಿಗೇ ಕೆಳಕ್ಕೆ ಬಿದ್ದರು. ಆಗ ಎರಡೂ ಸೇನೆಗಳ ವೀರರಲ್ಲಿ ಹಾಹಾಕಾರವುಂಟಾಯಿತು. ಮರ್ಮಸ್ಥಾನಗಳಲ್ಲಿ ತುಂಬಾ ಗಾಯಗೊಂಡಿದ್ದ ಅವರಿಬ್ಬರೂ ಅತ್ಯಂತ ವಿಹ್ವಲರಾಗಿದ್ದರು. ಆಗ ಕೃಪನು ಶಲ್ಯನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ಬೇಗನೇ ಅಲ್ಲಿಂದ ಕರೆದುಕೊಂಡು ಹೋದನು.
ದುರ್ಯೋಧನನಿಂದ ಚೇಕಿತಾನನ ವಧೆ
ವಿಹ್ವಲತೆಯಿಂದ ಕ್ಷೀಣನಾದವನಂತೆಯೇ ಇದ್ದ ಭೀಮಸೇನನು ನಿಮಿಷಮಾತ್ರದಲ್ಲಿ ಪುನಃ ಮೇಲೆದ್ದು ಗದಾಪಾಣಿಯಾಗಿ ಮದ್ರಪನನ್ನು ಯುದ್ಧಕ್ಕೆ ಆಹ್ವಾನಿಸಿದನು. ಆಗ ಕೌರವ ಶೂರರು ನಾನಾಶಸ್ತ್ರಗಳನ್ನು ಹಿಡಿದು ನಾನಾ ವಾದಿತ್ರಶಬ್ಧಗಳೊಂದಿಗೆ ಪಾಂಡುಸೇನೆಯೊಡನೆ ಹೋರಾಡಿದರು. ದುರ್ಯೋಧನನೇ ಮೊದಲಾದವರು ಭುಜ-ಶಸ್ತ್ರಗಳನ್ನು ಮೇಲೆತ್ತಿ ಮಹಾ ಗರ್ಜನೆಗಳೊಂದಿಗೆ ಶತ್ರುಸೇನೆಯನ್ನು ಆಕ್ರಮಣಿಸಿದರು. ಆ ಸೇನೆಯನ್ನು ನೋಡಿ ಪಾಂಡುನಂದನರು ದುರ್ಯೋಧನನ್ನು ವಧಿಸಲು ಬಯಸಿ ಸಿಂಹನಾದದೊಂದಿಗೆ ಆಕ್ರಮಣಿಸಿದರು. ರಭಸದಿಂದ ಅವರು ಮೇಲೆ ಬೀಳುತ್ತಿರಲು ದುರ್ಯೋಧನನು ಪ್ರಾಸದಿಂದ ಚೇಕಿತಾನನ ಹೃದಯಕ್ಕೆ ಜೋರಾಗಿ ಪ್ರಹರಿಸಿದನು. ಅವನಿಂದ ಹೊಡೆಯಲ್ಪಟ್ಟ ಚೇಕಿತಾನನು ಅಸುನೀಗಿ ಕುಳಿತಿದ್ದ ರಥದಿಂದ ಬಿದ್ದನು. ರಕ್ತದಿಂದ ಅವನು ತೋಯ್ದುಹೋಗಿದ್ದನು.
ಚೇಕಿತಾನನು ಹತನಾದುದನ್ನು ನೋಡಿ ಮಹಾರಥ ಪಾಂಡವರು ಪ್ರತ್ಯೇಕ ಪ್ರತ್ಯೇಕವಾಗಿ ಶರವರ್ಷಗಳನ್ನು ಸುರಿಸಲು ಉಪಕ್ರಮಿಸಿದರು. ವಿಜಯೋತ್ಸಾಹೀ ಪಾಂಡವರು ಕುರುಸೇನೆಗಳಲ್ಲಿ ನುಗ್ಗಿ ಸಂಚರಿಸುತ್ತಿರುವಾಗ ಎಲ್ಲಕಡೆಗಳಿಂದ ಪ್ರೇಕ್ಷಣೀಯರಾಗಿದ್ದರು. ಮದ್ರರಾಜನನ್ನು ಮುಂದಿಟ್ಟುಕೊಂಡು ಕೃಪ, ಕೃತವರ್ಮ, ಮತ್ತು ಸೌಬಲರು ಧರ್ಮರಾಜನನ್ನು ಆಕ್ರಮಣಿಸಿದರು. ದುರ್ಯೋಧನನು ಧೃಷ್ಟದ್ಯುಮ್ನನೊಡನೆ ಯುದ್ಧಮಾಡಿದನು. ದುರ್ಯೋಧನನಿಂದ ಪ್ರಚೋದಿತರಾದ ಮೂರು ಸಾವಿರ ರಥಗಳು ದ್ರೋಣಪುತ್ರನನ್ನು ಮುಂದೆಮಾಡಿಕೊಂಡು ಅರ್ಜುನನೊಡನೆ ಯುದ್ಧಮಾಡಿದರು. ಹಂಸಗಳು ಮಹಾಸರೋವರವನ್ನು ಹೇಗೋ ಹಾಗೆ ವಿಜಯವನ್ನೇ ಧೃಢಸಂಕಲ್ಪವಾಗಿಟ್ಟುಕೊಂಡು ಜೀವನವನ್ನೇ ತೊರೆದು ಕೌರವರು ಶತ್ರುಸೇನೆಗಳನ್ನು ಪ್ರವೇಶಿಸಿದರು. ಆಗ ಪರಸ್ಪರರನ್ನು ವಧಿಸಲು ಇಚ್ಛಿಸಿದವರ ಮಧ್ಯೆ ಅನ್ಯೋನ್ಯರನ್ನು ವಧಿಸುವ ಮತ್ತು ಅನ್ಯೋನ್ಯರಿಗೆ ಸಂತೋಷವನ್ನುಂಟುಮಾಡುವ ಆ ಘೋರ ಯುದ್ಧವು ನಡೆಯಿತು.
ವೀರಶ್ರೇಷ್ಠರ ಕ್ಷಯವಾಗುತ್ತಿರುವ ಆ ಸಂಗ್ರಾಮವು ನಡೆಯಲು ಭಿರುಗಾಳಿಯಿಂದ ಎಬ್ಬಿಸಲ್ಪಟ್ಟ ಭಯಂಕರ ಧೂಳು ಭೂಮಿಯ ಮೇಲೆದ್ದಿತು. ಪಾಂಡವರು ತಮ್ಮ ನಾಮಧೇಯಗಳನ್ನು ಹೇಳಿಕೊಂಡಿದ್ದುದನ್ನು ಕೇಳಿದ ನಂತರವೇ ಕೌರವರು ಅವರ ಎದಿರು ನಿಂತು ಯುದ್ಧಮಾಡುವವರು ಯಾರೆಂದು ತಿಳಿದುಕೊಳ್ಳುತ್ತಿದ್ದರು. ರಕ್ತದಿಂದ ಆ ಧೂಳು ಅಡಗಿತು. ಧೂಳು ನಾಶವಾಗಲು ದಿಕ್ಕುಗಳು ಸ್ವಚ್ಛವಾದವು. ಆ ಘೋರರೂಪೀ ಭಯಾನಕ ಸಂಗ್ರಾಮವು ನಡೆಯುತ್ತಿರಲು ಕೌರವರಲ್ಲಾಗಲೀ ಪಾಂಡವರಲ್ಲಾಗಲೀ ಯಾರೂ ಪರಾಙ್ಮುಖರಾಗಲಿಲ್ಲ. ಬ್ರಹ್ಮಲೋಕವನ್ನೇ ಗುರಿಯನ್ನಾಗಿಟ್ಟುಕೊಂಡು ಯುದ್ಧದಲ್ಲಿ ಜಯವನ್ನು ಪ್ರಾರ್ಥಿಸುತ್ತಿದ್ದರು. ಧರ್ಮಯುದ್ಧದಲ್ಲಿ ತಮ್ಮ ಪರಾಕ್ರಮವನ್ನು ತೋರಿಸಿ ನರರು ಸ್ವರ್ಗವನ್ನೇ ಬಯಸುತ್ತಿದ್ದರು. ಒಡೆಯನ ಅನ್ನದ ಋಣವನ್ನು ತೀರಿಸಲು, ಒಡೆಯನ ಕಾರ್ಯವನ್ನು ಮಾಡುವ ನಿಷ್ಠೆಯುಳ್ಳವರಾಗಿ ಯೋಧರು ಸ್ವರ್ಗಪ್ರಾಪ್ತಿಯಲ್ಲಿಯೇ ಮನಸ್ಸನ್ನು ಇಟ್ಟುಕೊಂಡು ಯುದ್ಧಮಾಡುತ್ತಿದ್ದರು. ಮಹಾರಥರು ನಾನಾರೂಪದ ಶಸ್ತ್ರಗಳನ್ನು ಪ್ರಯೋಗಿಸುತ್ತಿದ್ದರು. ಅನ್ಯೋನ್ಯರ ಮೇಲೆ ಗರ್ಜಿಸುತ್ತಾ ಪರಸ್ಪರ ಪ್ರಹರಿಸುತ್ತಿದ್ದರು. “ಕೊಲ್ಲಿರಿ! ಪ್ರಹರಿಸಿರಿ! ಬಂಧಿಸಿರಿ! ಹೊಡೆಯಿರಿ! ಕತ್ತರಿಸಿರಿ!” ಇವೇ ಮೊದಲಾದ ಕೂಗುಗಳು ಕೌರವ ಮತ್ತು ಶತ್ರು ಸೈನ್ಯಗಳಲ್ಲಿ ಕೇಳಿಬರುತ್ತಿತ್ತು.
ಶಲ್ಯ-ಯುಧಿಷ್ಠಿರರ ಯುದ್ಧ
ಆಗ ಶಲ್ಯನು ಧರ್ಮರಾಜ ಮಹಾರಥ ಯುಧಿಷ್ಠಿರನನ್ನು ಕೊಲ್ಲಲು ಬಯಸಿ ಅವನನ್ನು ನಿಶಿತ ಬಾಣಗಳಿಂದ ಹೊಡೆದನು. ಅದಕ್ಕೆ ಪ್ರತಿಯಾಗಿ ಮರ್ಮಜ್ಞ ಪಾರ್ಥನು ನಗು ನಗುತ್ತಲೇ ಹದಿನಾಲ್ಕು ನಾರಾಚಗಳನ್ನು ಶಲ್ಯನ ಮರ್ಮಸ್ಥಾನಗಳಲ್ಲಿ ನಾಟಿಸಿದನು. ಪಾಂಡವನನ್ನು ಕೊಲ್ಲಲು ಬಯಸಿದ್ದ ಶಲ್ಯನು ಕ್ರುದ್ಧನಾಗಿ ಬಾಣಗಳಿಂದ ಅವನನ್ನು ತಡೆದು ಸಮರದಲ್ಲಿ ಅನೇಕ ಕಂಕಪತ್ರಿ ಬಾಣಗಳಿಂದ ಅವನನ್ನು ಹೊಡೆದನು. ಪುನಃ ಸರ್ವ ಸೇನೆಗಳೂ ನೋಡುತ್ತಿರುವಂತೆಯೇ, ಅವನು ನತಪರ್ವ ಶರಗಳಿಂದ ಯುಧಿಷ್ಠಿರನನ್ನು ಪ್ರಹರಿಸಿದನು. ಮಹಾಯಶಸ್ವಿ ಧರ್ಮರಾಜನೂ ಕೂಡ ಕುಪಿತನಾಗಿ ನವಿಲು ಮತ್ತು ರಣಹದ್ದುಗಳ ರೆಕ್ಕೆಗಳುಳ್ಳ ನಿಶಿತ ಬಾಣಗಳಿಂದ ಮದ್ರರಾಜನನ್ನು ಹೊಡೆದನು. ಮಹಾರಥ ಯುಧಿಷ್ಠಿರನು ಚಂದ್ರಸೇನನನ್ನು ಎಪ್ಪತ್ತು, ಸಾರಥಿಯನ್ನು ಒಂಭತ್ತು, ಮತ್ತು ದ್ರುಮಸೇನನನ್ನು ಅರವತ್ನಾಲ್ಕು ಬಾಣಗಳಿಂದ ಹೊಡೆದು ಸಂಹರಿಸಿದನು. ಪಾಂಡವನಿಂದ ತನ್ನ ಚಕ್ರರಕ್ಷಕರು ಹತರಾಗಲು ಶಲ್ಯನು ಇಪ್ಪತ್ತೈದು ಚೇದಿಯೋಧರನ್ನು ಸಂಹರಿಸಿದನು. ಸಾತ್ಯಕಿಯನ್ನು ಇಪ್ಪತ್ತೈದು, ಭೀಮಸೇನನನ್ನು ಐದು, ಮತ್ತು ಮಾದ್ರೀಪುತ್ರರನ್ನು ನೂರು ನಿಶಿತ ಶರಗಳಿಂದ ಪ್ರಹರಿಸಿದನು. ಸಂಗ್ರಾಮದಲ್ಲಿ ಹೀಗೆ ಸಂಚರಿಸುತ್ತಿದ್ದ ಶಲ್ಯನ ಮೇಲೆ ಪಾರ್ಥನು ಅನೇಕ ಸರ್ಪವಿಷಸಮಾನ ಬಾಣಗಳನ್ನು ಪ್ರಯೋಗಿಸಿದನು. ಯುಧಿಷ್ಠಿರನು ಸಮರದಲ್ಲಿ ಶಲ್ಯನ ಧ್ವಜದ ಅಗ್ರಭಾಗವನ್ನು ಭಲ್ಲದಿಂದ ಕತ್ತರಿಸಿ ರಥದಿಂದ ಕೆಳಕ್ಕೆ ಬೀಳಿಸಿದನು. ಪಾಂಡುಪುತ್ರನಿಂದ ತುಂಡರಿಸಲ್ಪಟ್ಟ ಆ ಕೇತುವು ಪ್ರಹಾರದಿಂದ ಕತ್ತರಿಸಲ್ಪಟ್ಟು ಪರ್ವತ ಶಿಖರದಂತೆ ಬಿದ್ದಿತು. ಧ್ವಜವು ಕೆಳಗೆ ಬಿದ್ದುದನ್ನೂ, ವ್ಯವಸ್ಥಿತನಾಗಿ ನಿಂತಿದ್ದ ಪಾಂಡವನನ್ನೂ ನೋಡಿ ಸಂಕ್ರುದ್ಧನಾದ ಮದ್ರರಾಜನು ಶರವರ್ಷಗಳನ್ನು ಪ್ರಯೋಗಿಸಿದನು. ಮಳೆಸುರಿಸುತ್ತಿರುವ ಮೋಡದಂತೆ ಶಲ್ಯನು ಸಾಯಕಗಳ ಮಳೆಯನ್ನು ಯುಧಿಷ್ಠಿರನ ಮೇಲೆ ಸುರಿಸಿದನು. ಸಾತ್ಯಕಿ, ಭೀಮಸೇನ, ಮಾದ್ರೀಪುತ್ರ ಪಾಂಡವರಿಬ್ಬರಲ್ಲಿ ಒಬ್ಬೊಬ್ಬರನ್ನೂ ಐದೈದು ಬಾಣಗಳಿಂದ ಹೊಡೆದು ಯುಧಿಷ್ಠಿರನನ್ನು ಪೀಡಿಸಿದನು. ಆಗ ಮೇಘಗಳ ಜಾಲವು ಮೇಲೆದ್ದು ಬರುವಂತೆ ಬಾಣಮಯ ಜಾಲವು ಪಾಂಡವನ ಎದೆಯಮೇಲೆ ಬಂದಿತು. ಅವನ ಮೇಲೆ ಕ್ರುದ್ಧ ಶಲ್ಯನು ಸನ್ನತಪರ್ವ ಬಾಣಗಳಿಂದ ದಿಕ್ಕು ಉಪದಿಕ್ಕುಗಳನ್ನು ಮುಚ್ಚಿಬಿಟ್ಟನು. ಆಗ ಯುಧಿಷ್ಠಿರನು ಬಾಣಜಾಲಗಳಿಂದ ಪೀಡಿತನಾಗಿ ಇಂದ್ರನಿಂದ ಜಂಭಾಸುರನು ಹೇಗೋ ಹಾಗೆ ಹತವಿಕ್ರಾಂತನಾದನು.
ಧರ್ಮರಾಜನು ಹಾಗೆ ಮದ್ರರಾಜನಿಂದ ಪೀಡಿತನಾಗಿರಲು ಸಾತ್ಯಕಿ, ಭೀಮಸೇನ ಮತ್ತು ಮಾದ್ರೀಪುತ್ರ ಪಾಂಡವರೀರ್ವರು ರಥಗಳಿಂದ ಶಲ್ಯನನ್ನು ಸುತ್ತುವರೆದು ಯುದ್ಧದಲ್ಲಿ ಅವನನ್ನು ಪೀಡಿಸತೊಡಗಿದರು. ಅವನೊಬ್ಬನನ್ನು ಅನೇಕ ಮಹಾರಥರು ಪೀಡಿಸುತ್ತಿರುವುದನ್ನು ಕಂಡು ಸಾಧು ಸಾಧುವೆನ್ನುವ ಜೋರಾದ ಮಾತುಗಳು ಕೇಳಿಬಂದವು. ಸಿದ್ಧರು ಪ್ರಹರ್ಷಿತರಾದರು. ಸೇರಿದ ಮುನಿಗಳೂ ಕೂಡ ಆಶ್ಚರ್ಯದಿಂದ ಮಾತನಾಡಿಕೊಳ್ಳುತ್ತಿದ್ದರು. ರಣದಲ್ಲಿ ಭೀಮಸೇನನು ತನ್ನ ಪರಾಕ್ರಮಕ್ಕೆ ಕಂಟಕಪ್ರಾಯನಾಗಿದ್ದ ಶಲ್ಯನನ್ನು ಒಂದೇ ಬಾಣದಿಂದ ಹೊಡೆದು ಪುನಃ ಏಳರಿಂದ ಹೊಡೆದನು. ಸಾತ್ಯಕಿಯೂ ಕೂಡ ಧರ್ಮಪುತ್ರನನ್ನು ರಕ್ಷಿಸಲೋಸುಗ ಮದ್ರೇಶ್ವರನನ್ನು ನೂರು ಬಾಣಗಳಿಂದ ಮುಚ್ಚಿ ಸಿಂಹನಾದಗೈದನು. ನಕುಲನು ಐದು ಮತ್ತು ಸಹದೇವನು ಏಳು ಬಾಣಗಳಿಂದ ಅವನನ್ನು ಹೊಡೆದು ನಂತರ ತಕ್ಷಣವೇ ಪುನಃ ಏಳರಿಂದ ಹೊಡೆದನು. ರಣದಲ್ಲಿ ಮಹಾರಥರಿಂದ ಪೀಡಿತನಾದ ಶಲ್ಯನು ಭಾರಸಾಧನ-ವೇಗವಾಗಿ ಕೊಲ್ಲುವ ಘೋರ ಕಾರ್ಮುಕವನ್ನು ಸೆಳೆದು ಸಾತ್ಯಕಿಯನ್ನು ಇಪ್ಪತ್ತೈದು ಬಾಣಗಳಿಂದ, ಭೀಮನನ್ನು ಎಪ್ಪತ್ತು ಬಾಣಗಳಿಂದ ಮತ್ತು ನಕುಲನನ್ನು ಏಳರಿಂದ ಹೊಡೆದನು. ಆಗ ಶಲ್ಯನು ಸಮರದಲ್ಲಿ ವಿಶಿಖದೊಂದಿಗೆ ಸಹದೇವನ ಧನುಸ್ಸನ್ನು ಭಲ್ಲದಿಂದ ತುಂಡರಿಸಿ ಅವನನ್ನು ಎಪ್ಪತ್ಮೂರು ಬಾಣಗಳಿಂದ ಹೊಡೆದನು. ಸಹದೇವನಾದರೋ ಸಮರದಲ್ಲಿ ಇನ್ನೊಂದು ಧನುಸ್ಸನ್ನು ಸಜ್ಜುಗೊಳಿಸಿ ಪ್ರಜ್ವಲಿಸುವ ಅಗ್ನಿಗೆ ಸಮಾನ ಸರ್ಪವಿಷದಾಕಾರದ ಐದು ಶರಗಳಿಂದ ತನ್ನ ಸೋದರಮಾವನನ್ನು ಹೊಡೆದನು. ಸಮರದಲ್ಲಿ ಅವನು ನತಪರ್ವ ಶರದಿಂದ ಅವನ ಸಾರಥಿಯನ್ನು ಹೊಡೆದು ಪುನಃ ಕ್ರುದ್ಧನಾಗಿ ಮೂರು ಬಾಣಗಳಿಂದ ಶಲ್ಯನನ್ನು ಹೊಡೆದನು. ಭೀಮಸೇನನು ಎಪ್ಪತ್ಮೂರು ಶರಗಳಿಂದಲೂ, ಸಾತ್ಯಕಿಯು ಒಂಭತ್ತರಿಂದಲೂ, ಹಾಗೆಯೇ ಧರ್ಮರಾಜನು ಅರವತ್ತು ಶರಗಳಿಂದಲೂ ಶಲ್ಯನ ದೇಹವನ್ನು ಚುಚ್ಚಿದರು. ಆ ಮಹಾರಥರಿಂದ ಚೆನ್ನಾಗಿ ಪ್ರಹರಿಸಲ್ಪಟ್ಟ ಶಲ್ಯನ ದೇಹದಿಂದ ಗೈರಕಾದಿ ಧಾತುಗಳುಳ್ಳ ಕೆಂಪು ನೀರು ಪರ್ವತದಿಂದ ಸುರಿಯುವಂತೆ ರಕ್ತವು ಸುರಿಯಿತು. ಕೂಡಲೇ ಅವನು ಆ ಎಲ್ಲ ಮಹಾರಥರನ್ನೂ ಐದೈದು ಶರಗಳಿಂದ ಹೊಡೆದನು. ಅದೊಂದು ಅದ್ಭುತವಾಗಿತ್ತು. ಅನಂತರ ಇನ್ನೊಂದು ಭಲ್ಲದಿಂದ ಆ ಸುಮಹಾರಥನು ಧರ್ಮಪುತ್ರನ ಧನುಸ್ಸನ್ನು ತುಂಡರಿಸಿದನು. ಆಗ ಮಹಾರಥ ಧರ್ಮಪುತ್ರನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಶರಗಳಿಂದ ಕುದುರೆಗಳು, ಸಾರಥಿ, ಧ್ವಜ ಮತ್ತು ರಥಗಳ ಸಹಿತ ಶಲ್ಯನನ್ನು ಮುಚ್ಚಿಬಿಟ್ಟನು. ಸಮರದಲ್ಲಿ ಧರ್ಮಪುತ್ರನ ಸಾಯಕಗಳಿಂದ ಮುಚ್ಚಿಹೋದ ಶಲ್ಯನು ಕೂಡಲೇ ಯುಧಿಷ್ಠಿರನನ್ನು ಹತ್ತು ನಿಶಿತ ಶರಗಳಿಂದ ಪ್ರಹರಿಸಿದನು. ಧರ್ಮಪುತ್ರನನ್ನು ಶರಗಳಿಂದ ಪೀಡಿಸಲು, ಕ್ರುದ್ಧನಾದ ಸಾತ್ಯಕಿಯು ಶೂರ ಮದ್ರಾಧಿಪನನ್ನು ಶರಸಮೂಹಗಳಿಂದ ತುಂಬಿಬಿಟ್ಟನು. ಶಲ್ಯನು ಕ್ಷುರಪ್ರದಿಂದ ಸಾತ್ಯಕಿಯ ಮಹಾ ಧನುಸ್ಸನ್ನು ಕತ್ತರಿಸಿದನು ಮತ್ತು ಭೀಮಸೇನನೇ ಮೊದಲಾದವರನ್ನು ಮೂರು ಮೂರು ಬಾಣಗಳಿಂದ ಹೊಡೆದನು.
ಆಗ ಕ್ರುದ್ಧ ಸತ್ಯವಿಕ್ರಮಿ ಸಾತ್ಯಕಿಯು ಸ್ವರ್ಣದಂಡದ ತೋಮರವನ್ನು ಶಲ್ಯನ ಮೇಲೆ ಪ್ರಯೋಗಿಸಿದನು. ಯುದ್ಧದಲ್ಲಿ ಶಲ್ಯನನ್ನು ಸಂಹರಿಸಲೋಸುಗ ಭೀಮಸೇನನು ಸರ್ಪದಂತೆ ಪ್ರಜ್ಚಲಿಸುತ್ತಿದ್ದ ನಾರಾಚವನ್ನೂ, ನಕುಲನು ಶಕ್ತಿಯನ್ನೂ, ಸಹದೇವನು ಗದೆಯನ್ನೂ ಮತ್ತು ಧರ್ಮರಾಜನು ಶತಘ್ನಿಯನ್ನೂ ಪ್ರಯೋಗಿಸಿದರು. ಈ ಐವರ ಭುಜಗಳಿಂದ ಹೊರಟ ಅಸ್ತ್ರಗಳು ತನ್ನ ಮೇಲೆ ಬೀಳುವುದರೊಳಗೇ ಶಲ್ಯನು ಅವುಗಳನ್ನು ನಿವಾರಿಸಿದನು. ಸಾತ್ಯಕಿಯು ಕಳುಹಿಸಿದ ತೋಮರವನ್ನು ಭಲ್ಲಗಳಿಂದ ತುಂಡರಿಸಿದನು. ಭೀಮನು ಪ್ರಯೋಗಿಸಿದ ಕನಕಭೂಷಣ ಶರವನ್ನು ಎರಡಾಗಿ ತುಂಡರಿಸಿದನು. ಶರೌಘಗಳಿಂದ ನಕುಲನು ಪ್ರಯೋಗಿಸಿದ ಭಯವನ್ನುಂಟುಮಾಡುವ ಹೇಮದಂಡಯುಕ್ತ ಶಕ್ತಿಯನ್ನು ಮತ್ತು ಸಹದೇವನ ಗದೆಯನ್ನು ನಿವಾರಿಸಿದನು. ಧರ್ಮರಾಜನ ಶರಗಳನ್ನೂ ಶತಘ್ನಿಯನ್ನೂ ತುಂಡರಿಸಿ, ಪಾಂಡುಪುತ್ರರು ನೋಡುತ್ತಿದ್ದಂತೆಯೇ ಸಿಂಹನಾದಗೈದನು. ಯುದ್ಧದಲ್ಲಿ ಶತ್ರುವಿನ ಆ ವಿಜಯವನ್ನು ಶೈನೇಯನಿಗೆ ಸಹಿಸಿಕೊಳ್ಳಲಾಗಲಿಲ್ಲ. ಆಗ ಕ್ರೋಧಮೂರ್ಛಿತ ಸಾತ್ಯಕಿಯು ಇನ್ನೊಂದು ಧನ್ನುಸ್ಸನ್ನೆತ್ತಿಕೊಂಡು ಎರಡು ಬಾಣಗಳಿಂದ ಮದ್ರೇಶ್ವರನನ್ನೂ ಮೂರರಿಂದ ಅವನ ಸಾರಥಿಯನ್ನೂ ಹೊಡೆದನು. ಆಗ ಕ್ರುದ್ಧ ಶಲ್ಯನು ಅವರೆಲ್ಲರನ್ನು – ಮಹಾಗಜಗಳನ್ನು ಅಂಕುಶಗಳಿಂದ ಹೇಗೋ ಹಾಗೆ – ಹತ್ತು ಬಾಣಗಳಿಂದ ಪ್ರಹರಿಸಿದನು. ಸಮರದಲ್ಲಿ ಮದ್ರರಾಜನಿಂದ ತಡೆಯಲ್ಪಡುತ್ತಿದ್ದ ಆ ಶತ್ರುನಿಷೂದನ ಮಹಾರಥರು ಅವನ ಎದುರು ನಿಲ್ಲಲು ಶಕ್ಯರಾಗಿರಲಿಲ್ಲ.
ಆಗ ಶಲ್ಯನ ವಿಕ್ರಮವನ್ನು ನೋಡಿ ರಾಜಾ ದುರ್ಯೋಧನನು ಪಾಂಡವ-ಪಾಂಚಾಲ-ಸೃಂಜಯರು ಹತರಾದರೆಂದೇ ಭಾವಿಸಿದನು. ಆಗ ಭೀಮಸೇನನು ಮನಸಾ ಪ್ರಾಣಗಳನ್ನೇ ಪರಿತ್ಯಜಿಸಿ ಮದ್ರಾಧಿಪನೊಡನೆ ಯುದ್ಧಮಾಡಿದನು. ನಕುಲ, ಸಹದೇವ ಮತ್ತು ಸಾತ್ಯಕಿಯರು ಎಲ್ಲಕಡೆಗಳಲ್ಲಿ ಶರಗಳನ್ನು ಎರಚುತ್ತಾ ಶಲ್ಯನನ್ನು ತಡೆದರು. ಮದ್ರರಾಜನು ಆ ನಾಲ್ಕು ಪಾಂಡವ ಮಹಾರಥರಿಂದ ಸುತ್ತುವರೆಯಲ್ಪಟ್ಟು ಯುದ್ಧಮಾಡಿದನು. ಮಹಾಯುದ್ಧದಲ್ಲಿ ಧರ್ಮಸುತನು ಮದ್ರರಾಜನ ಚಕ್ರರಕ್ಷಕನನ್ನು ಕ್ಷುರಪ್ರದಿಂದ ಸಂಹರಿಸಿದನು. ಚಕ್ರರಕ್ಷಕನು ಹತನಾಗಲು ಶೂರ ಮಹಾರಥಿ ಬಲವಾನ್ ಮದ್ರರಾಜನು ಶರಗಳಿಂದ ಸೈನಿಕರನ್ನು ಮುಚ್ಚಿಬಿಟ್ಟನು. ಸೈನಿಕರು ಶಲ್ಯನ ಬಾಣಗಳಿಂದ ಮುಚ್ಚಿಹೋಗಿರುವುದನ್ನು ವೀಕ್ಷಿಸಿದ ಯುಧಿಷ್ಠಿರನು ಚಿಂತಿಸತೊಡಗಿದನು: “ಮಾಧವನ ಮಹಾ ವಚನವು ಹೇಗೆ ತಾನೇ ಸತ್ಯವಾಗಬಲ್ಲದು? ರಣದಲ್ಲಿ ಕ್ರುದ್ಧನಾದ ಈ ರಾಜನು ನನ್ನ ಸೇನೆಯನ್ನು ಸಂಪೂರ್ಣವಾಗಿ ನಾಶಮಾಡದೇ ಇರುವನೇ?”
ಅನಂತರ ರಥ-ಗಜ-ಅಶ್ವ ಸೇನಾ ಸಮೇತರಾದ ಪಾಂಡವರು ಮದ್ರೇಶ್ವರನನ್ನು ಎಲ್ಲ ಕಡೆಗಳಿಂದ ಪೀಡಿಸುತ್ತಾ ಅವನ ಮೇಲೆ ಧಾಳಿನಡೆಸಿದರು. ಮೇಲೆದ್ದ ದೊಡ್ಡ ದೊಡ್ಡ ಮೇಘಗಳನ್ನು ಭಿರುಗಾಳಿಯು ಹೇಗೋ ಹಾಗೆ ಅವನು ಸಮರದಲ್ಲಿ ನಾನಾ ಶಸ್ತ್ರಗಳಿಂದ ಕೂಡಿದ್ದ ಆ ಅನೇಕ ಶರವೃಷ್ಟಿಯನ್ನು ನಾಶಗೊಳಿಸಿದನು. ಮಿಡತೆಗಳ ಹಿಂಡುಗಳಂತೆ ಶಲ್ಯನಿಂದ ಪ್ರಯೋಗಿಸಲ್ಪಟ್ಟು ಆಕಾಶವನ್ನೇ ತುಂಬಿದ್ದ, ಬಾಣಗಳ ವೃಷ್ಟಿಯು ಸುರಿಯಿತು. ಮದ್ರರಾಜನಿಂದ ಪ್ರಯೋಗಿಸಲ್ಪಟ್ಟ ಆ ಬಾಣಗಳು ಮಿಡತೆಗಳ ಗುಂಪುಗಳಂತೆ ರಣಮೂರ್ಧನಿಯಲ್ಲಿ ಬೀಳುತ್ತಿದ್ದವು. ಮದ್ರರಾಜನ ಧನುಸ್ಸಿನಿಂದ ಹೊರಟ ಆ ಕನಕಭೂಷಣ ಶರಗಳಿಂದ ತುಂಬಿಹೋದ ಆಕಾಶದಲ್ಲಿ ಸ್ವಲ್ಪವೂ ಸ್ಥಳಾವಕಾಶವಿಲ್ಲದಂತಾಯಿತು. ಅವನು ಸೃಷ್ಟಿಸಿದ ಮಹಾ ಬಾಣಾಂಧಕಾರದಿಂದ ಕೌರವರಿಗಾಗಲೀ ಪಾಂಡವರಿಗಾಗಲೀ ಏನೂ ಕಾಣುತ್ತಿರಲಿಲ್ಲ. ಅಲ್ಲಿ ಮಹಾಭಯವೇ ಉತ್ಪನ್ನವಾಯಿತು. ಮದ್ರರಾಜನ ಹಸ್ತಲಾಘವದಿಂದ ಸೃಷ್ಟಿಸಲ್ಪಟ್ಟ ಆ ಶರವೃಷ್ಟಿಯಿಂದ ಪಾಂಡವರ ಸೇನಾಸಾಗರವು ಅಲ್ಲೋಲಕಲ್ಲೋಲವಾಗುತ್ತಿರುವುದನ್ನು ನೋಡಿ ದೇವ-ಗಂಧರ್ವ-ದಾನವರಲ್ಲಿಯೂ ಪರಮ ವಿಸ್ಮಯವುಂಟಾಯಿತು. ಶಲ್ಯನು ಆ ಪ್ರಯತ್ನಶೀಲರೆಲ್ಲರನ್ನೂ ಶರಗಳಿಂದ ಪೀಡಿಸಿ, ಧರ್ಮರಾಜನನ್ನೂ ಶರಗಳಿಂದ ಮುಚ್ಚಿ, ಪುನಃ ಪುನಃ ಸಿಂಹನಾದಗೈದನು. ಸಮರದಲ್ಲಿ ಅವನಿಂದ ಮುಸುಕಲ್ಪಟ್ಟ ಪಾಂಡವ ಮಹಾರಥರು ಆಗ ಯುದ್ಧದಲ್ಲಿ ಆ ಮಹಾರಥ ಶಲ್ಯನನ್ನು ಎದುರಿಸಿ ಯುದ್ಧಮಾಡಲು ಶಕ್ಯರಾಗಿರಲಿಲ್ಲ. ಆದರೂ ಧರ್ಮರಾಜನ ನಾಯಕತ್ವದಲ್ಲಿದ್ದ ಭೀಮಸೇನನೇ ಮೊದಲಾದ ಮಹಾರಥರು ಸಮರದಲ್ಲಿ ಆಹವಶೋಭೀ ಶೂರ ಶಲ್ಯನನ್ನು ಬಿಟ್ಟು ಹಿಂದೆ ಸರಿಯಲಿಲ್ಲ.
ಅರ್ಜುನ-ಅಶ್ವತ್ಥಾಮರ ಯುದ್ಧ; ಅಶ್ವತ್ಥಾಮನಿಂದ ಪಾಂಚಾಲ ಸುರಥನ ವಧೆ
ದ್ರೌಣಿ ಮತ್ತು ಅವನನ್ನು ಅನುಸರಿಸಿ ಹೋಗುತ್ತಿದ್ದ ತ್ರಿಗರ್ತರ ಮಹಾರಥ ಶೂರರು ಅರ್ಜುನನನ್ನು ಅನೇಕ ಲೋಹಮಯ ಬಾಣಗಳಿಂದ ಗಾಯಗೊಳಿಸಿದರು. ಆಗ ಅರ್ಜುನನು ದ್ರೌಣಿಯನ್ನು ಮೂರು ಶಿಲೀಮುಖಿಗಳಿಂದ ಹೊಡೆದನು. ಇತರ ಮಹೇಷ್ವಾಸರನ್ನೂ ಎರೆಡೆರಡು ಬಾಣಗಳಿಂದ ಹೊಡೆದು ಪುನಃ ಅವರನ್ನು ಶರವರ್ಷಗಳಿಂದ ಮುಚ್ಚಿಬಿಟ್ಟನು. ಮುಳ್ಳುಗಳಂತಿದ್ದ ಬಾಣಗಳು ನಾಟಿಕೊಂಡಿದ್ದರೂ ಪಾರ್ಥನ ನಿಶಿತ ಶರಗಳಿಂದ ಪ್ರಹರಿಸಲ್ಪಡುತ್ತಿದ್ದ ಕೌರವರು ಸಮರದಲ್ಲಿ ಪಾರ್ಥನನ್ನು ಬಿಟ್ಟು ಕದಲಲಿಲ್ಲ. ದ್ರೋಣಪುತ್ರನ ನಾಯಕತ್ವದಲ್ಲಿ ಆ ಮಹಾರಥರು ರಥಸಮೂಹಗಳಿಂದ ಅರ್ಜುನನನ್ನು ಸುತ್ತುವರೆದು ಯುದ್ಧಮಾಡುತ್ತಿದ್ದರು. ಅವರು ಪ್ರಯೋಗಿಸುತ್ತಿದ್ದ ಸುವರ್ಣ ವಿಭೂಷಿತ ಶರಗಳು ಬೇಗನೇ ಅರ್ಜುನನ ರಥಪೀಠವನ್ನು ತುಂಬಿಬಿಟ್ಟವು. ಆಗ ಸರ್ವಧನ್ವಿಗಳಲ್ಲಿ ವೃಷಭರಂತಿದ್ದ ಯುದ್ಧದುರ್ಮದ ಮಹೇಷ್ವಾಸ ಕೃಷ್ಣರಿಬ್ಬರ ಅಂಗಗಳೂ ತಮ್ಮ ಶರಗಳಿಂದ ಕ್ಷತವಿಕ್ಷತವಾಗಿರುವುದನ್ನು ನೋಡಿ ಅವರು ಪ್ರಹೃಷ್ಟರಾದರು. ಅರ್ಜುನನ ರಥದ ಮೂಕಿ, ಚಕ್ರಗಳು, ಹಗ್ಗಗಳು, ನೊಗ, ತೋಳುಮರ – ಎಲ್ಲವೂ ಬಾಣಮಯವಾಗಿದ್ದವು. ಅದೊಂದು ಅಭೂತಪೂರ್ವವಾಗಿದ್ದಿತು. ಅಲ್ಲಿ ಕೌರವರು ಪಾರ್ಥನಿಗೆ ಕೊಟ್ಟ ಉಪಟಳವನ್ನು ಇದಕ್ಕೂ ಮೊದಲು ಯಾರೂ ಕಂಡಿರಲಿಲ್ಲ ಮತ್ತು ಕೇಳಿರಲಿಲ್ಲ. ವಿಚಿತ್ರ ಪುಂಖಗಳ ನಿಶಿತ ಶರಗಳಿಂದ ಎಲ್ಲಕಡೆ ತುಂಬಿಹೋಗಿದ್ದ ಅವನ ರಥವು ರಣಭೂಮಿಯಲ್ಲಿ ಉರಿಯುತ್ತಿರುವ ನೂರಾರು ಉಲ್ಕೆಗಳಿರುವ ವಿಮಾನದಂತೆಯೇ ಕಾಣುತ್ತಿತ್ತು. ಆಗ ಅರ್ಜುನನು ಸನ್ನತಪರ್ವ ಶರಗಳಿಂದ ಮೇಘವು ಪರ್ವತವನ್ನು ಮಳೆಯಿಂದ ಹೇಗೋ ಹಾಗೆ ಸೇನಾಸಮೂಹಗಳನ್ನು ಮುಚ್ಚಿಬಿಟ್ಟನು. ಸಮರದಲ್ಲಿ ಪಾರ್ಥನಾಮಾಂಕಿತ ಶರಗಳಿಂದ ವಧಿಸಲ್ಪಡುತ್ತಿರುವ ಅವರು ಪಾರ್ಥನನ್ನು ಬಾಣರೂಪದಲ್ಲಿಯೇ ಕಾಣುತ್ತಾ ಸರ್ವವೂ ಪಾರ್ಥಮಯವಾಗಿಬಿಟ್ಟಿರುವುದೆಂದೇ ಭಾವಿಸಿದರು. ಆಗ ಅದ್ಭುತ ಶರಜ್ವಾಲೆ ಮತ್ತು ಧನುಸ್ಸಿನ ಟೇಂಕಾರ ಶಬ್ಧದ ಮಹಾ ಭಿರುಗಾಳಿಯಿಂದ ಪಾರ್ಥನೆಂಬ ಪಾವಕನು ನಿನ್ನ ಸೇನೆಯನ್ನು ಇಂಧನದಂತೆ ಸುಟ್ಟುಬಿಟ್ಟನು.
ರಣಭೂಮಿಯಲ್ಲಿ ಪಾರ್ಥನ ರಥಮಾರ್ಗದಲ್ಲಿ ರಥಗಳೊಂದಿಗೆ ಚಕ್ರಗಳು-ನೊಗಗಳು-ತೂಣೀರಗಳು-ಪತಾಕೆಗಳು- ಧ್ವಜಗಳು-ಈಷಾದಂಡಗಳು-ಹಗ್ಗಗಳು-ತ್ರಿವೇಣುಗಳು-ಅಚ್ಚುಮರಗಳು-ಲಗಾಮುಗಳು-ಚಾವಟಿಗಳು-ಕುಂಡಲ-ಶಿರಸ್ತ್ರಾಣಗಳನ್ನು ಧರಿಸಿದ್ದ ಶಿರಸ್ಸುಗಳು-ಭುಜಗಳು-ಹೆಗಲುಗಳು-ಛತ್ರ-ವ್ಯಜನಗಳು-ಕಿರೀಟಗಳು ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದಿತು. ಮಾಂಸ-ರಕ್ತಗಳ ಕೆಸರಿನಿಂದ ರಣಭೂಮಿಯು ತಿರುಗಾಡಲು ದುರ್ಗಮವಾಗಿ, ಅದು ಹೇಡಿಗಳಿಗೆ ಭಯವನ್ನುಂಟುಮಾಡುವ ಮತ್ತು ಶೂರರ ಹರ್ಷವನ್ನು ಹೆಚ್ಚಿಸುವ, ರುದ್ರದೇವನ ಆಟದ ಮೈದಾನದಂತಾಯಿತು. ಸಮರದಲ್ಲಿ ಪರಂತಪ ಪಾರ್ಥನು ಎರಡು ಸಾವಿರ ರಥಗಳನ್ನು ಧ್ವಂಸಮಾಡಿ ಧೂಮರಹಿತ ಅಗ್ನಿಜ್ವಾಲೆಯಂತೆ ಪ್ರಕಾಶಿಸಿದನು. ಚರಾಚರಗಳೊಂದಿಗೆ ಜಗತ್ತನ್ನೇ ಸುಟ್ಟ ಭಗವಾನ್ ಅಗ್ನಿಯು ಧೂಮರಹಿತನಾಗಿ ಕಾಣುವಂತೆ ಮಹಾರಥ ಪಾರ್ಥನು ತೋರಿದನು. ಪಾಂಡವನ ಪರಾಕ್ರಮವನ್ನು ನೋಡಿ ದ್ರೌಣಿಯಾದರೋ ಉನ್ನತ ಧ್ವಜವುಳ್ಳ ರಥದಿಂದ ಪಾಂಡವನನ್ನು ತಡೆದನು. ಆ ಇಬ್ಬರು ಪುರುಷವ್ಯಾಘ್ರ-ಶ್ವೇತಾಶ್ವ ಧನ್ವಿಶ್ರೇಷ್ಠರು ಪರಸ್ಪರರನ್ನು ವಧಿಸಲು ಬಯಸಿ ಸಂಘರ್ಷಿಸಿದರು. ಆಗ ಮಳೆಗಾಲದಲ್ಲಿ ಮೇಘಗಳು ಮಳೆಸುರಿಸುವಂತೆ ಅವರ ಸುದಾರುಣ ಬಾಣವರ್ಷವು ಸುರಿಯಿತು. ಅನ್ಯೋನ್ಯರೊಂದಿಗೆ ಸ್ಪರ್ಧಿಸುತ್ತಿರುವ ಅವರಿಬ್ಬರೂ ಎರಡು ಗೂಳಿಗಳು ತಮ್ಮ ಕೋಡುಗಳಿಂದ ಹೇಗೋ ಹಾಗೆ ಸನ್ನತಪರ್ವ ಶರಗಳಿಂದ ಅನ್ಯೋನ್ಯರನ್ನು ಗಾಯಗೊಳಿಸಿದರು. ಬಹಳ ಸಮಯದವರೆಗೆ ಅವರಿಬ್ಬರ ಯುದ್ಧವು ಸಮಸಮವಾಗಿಯೇ ನಡೆಯಿತು. ಅಲ್ಲಿ ಘೋರ ಅಸ್ತ್ರಗಳ ಮಹಾ ಸಂಗಮವು ನಡೆಯಿತು.
ಆಗ ದ್ರೌಣಿಯು ಅರ್ಜುನನನ್ನು ಹನ್ನೆರಡು ರುಕ್ಮಪುಂಖ ತೇಜಯುಕ್ತ ಬಾಣಗಳಿಂದ ಮತ್ತು ವಾಸುದೇವನನ್ನು ಹತ್ತು ಬಾಣಗಳಿಂದ ಹೊಡೆದನು. ಆ ಮಹಾಯುದ್ಧದಲ್ಲಿ ಮುಹೂರ್ತಕಾಲ ಗುರುಪುತ್ರನನ್ನು ಗೌರವಿಸಿ, ಜೋರಾಗಿ ನಗುತ್ತಾ ಬೀಭತ್ಸುವು ಗಾಂಡೀವ ಧನುಸ್ಸನ್ನು ದೀರ್ಘವಾಗಿ ಸೆಳೆದನು. ಸವ್ಯಸಾಚಿಯು ಅವನನ್ನು ಅಶ್ವ-ಸೂತ-ರಥಗಳಿಂದ ವಿಹೀನನನ್ನಾಗಿ ಮಾಡಿ ಮೂರು ಸಾಯಕಗಳಿಂದ ಮೃದುಪೂರ್ವಕವಾಗಿಯೇ ಹೊಡೆದನು. ಕುದುರೆಗಳು ಹತಗೊಳ್ಳಲು ದ್ರೋಣಪುತ್ರನು ರಥದ ಮೇಲೆಯೇ ನಿಂತು ಲೋಹಮಯ ಪರಿಘದಂತಿದ್ದ ಮುಸಲವನ್ನು ಪಾಂಡುಪುತ್ರನ ಮೇಲೆ ಎಸೆದನು. ಮೇಲೆ ಬೀಳುತ್ತಿದ್ದ ಆ ಹೇಮಪಟ್ಟವಿಭೂಷಿತ ಮುಸಲವನ್ನು ತಕ್ಷಣವೇ ಪಾರ್ಥನು ಎಳು ತುಂಡುಗಳನ್ನಾಗಿ ಕತ್ತರಿಸಿದನು. ಆ ಮುಸಲವು ತುಂಡಾಗಿದ್ದುದನ್ನು ಕಂಡ ದ್ರೌಣಿಯು ಪರ್ವತಶಿಖರದಂತಿದ್ದ ಘೋರ ಪರಿಘವನ್ನು ತೆಗೆದುಕೊಂಡು ಅದನ್ನು ಪಾರ್ಥನ ಮೇಲೆ ಎಸೆದನು. ಕ್ರುದ್ಧ ಅಂತಕನಂತಿರುವ ಆ ಪರಿಘವನ್ನು ನೋಡಿದ ಅರ್ಜುನನು ತ್ವರೆಮಾಡಿ ಐದು ಉತ್ತಮ ಸಾಯಕಗಳಿಂದ ಅದನ್ನು ನಾಶಗೊಳಿಸಿದನು. ಪಾರ್ಥನ ಬಾಣಗಳಿಂದ ಕತ್ತರಿಸಲ್ಪಟ್ಟ ಆ ಪರಿಘವು ರಾಜರ ಮನಸ್ಸನ್ನು ಸೀಳುವಂತೆ ಶಬ್ಧಮಾಡುತ್ತಾ ಭೂಮಿಯ ಮೇಲೆ ಬಿದ್ದಿತು. ಅನಂತರ ಪಾಂಡವನು ದ್ರೌಣಿಯನ್ನು ಬೇರೆ ಮೂರು ಬಾಣಗಳಿಂದ ಹೊಡೆದನು. ಪಾರ್ಥನಿಂದ ಬಲವಾಗಿ ಪ್ರಹರಿಸಲ್ಪಟ್ಟರೂ ಆ ಸುಮಹಾಬಲ ದ್ರೌಣಿಯು ಪೌರುಷದಿಂದ ಸ್ವಲ್ವವೂ ವಿಚಲಿತನಾಗಲಿಲ್ಲ.
ಆಗ ಪಾಂಚಾಲರ ಮಹಾರಥ ಸುರಥನು ದ್ರೌಣಿಯನ್ನು ಆಕ್ರಮಣಿಸಿದನು. ದೃಢ ಶ್ರೇಷ್ಠ ಧನುಸ್ಸನ್ನು ಸೆಳೆದು ಸರ್ಪಾಗ್ನಿಸದೃಶ ಬಾಣಗಳಿಂದ ಅಶ್ವತ್ಥಾಮನನ್ನು ಮುಚ್ಚಿದನು. ಸಮರದಲ್ಲಿ ಕ್ರುದ್ಧನಾಗಿ ತನ್ನ ಮೇಲೆ ಎರಗುತ್ತಿದ್ದ ಸುರಥನನ್ನು ನೋಡಿ ದ್ರೌಣಿಯು ದಂಡದಿಂದ ಪೆಟ್ಟುತಿಂದ ಸರ್ಪದಂತೆ ಅತಿ ಕುಪಿತನಾದನು. ಹುಬ್ಬನ್ನು ಗಂಟಿಕ್ಕಿ ಕಟವಾಯಿಯನ್ನು ನೆಕ್ಕುತ್ತಾ ಸುರಥನನ್ನು ಕೋಪದಿಂದ ದಿಟ್ಟಿಸಿ ನೋಡುತ್ತಾ ಧನುಸ್ಸಿನ ಶಿಂಜನಿಯನ್ನು ತೀಡಿ ಯಮದಂಡದಂತೆ ಬೆಳಗುತ್ತಿದ್ದ ತೀಕ್ಷ್ಣ ನಾರಾಚವನ್ನು ಅವನ ಮೇಲೆ ಪ್ರಯೋಗಿಸಿದನು. ಶಕ್ರನಿಂದ ಪ್ರಯೋಗಿಸಲ್ಪಟ್ಟ ವಜ್ರಾಯುಧವು ಭೂಮಿಯನ್ನು ಭೇದಿಸಿ ಹೋಗುವಂತೆ ಅದು ಅತಿವೇಗದಿಂದ ಸುರಥನ ಹೃದಯವನ್ನು ಭೇದಿಸಿ ಭೂಮಿಯನ್ನು ಹೊಕ್ಕಿತು. ವಜ್ರಾಯುಧ ಪ್ರಹಾರದಿಂದ ಭಿನ್ನ ಪರ್ವತ ಶಿಖರವು ಕೆಳಕ್ಕೆ ಬೀಳುವಂತೆ ಆ ನಾರಾಚದಿಂದ ಪ್ರಹೃತನಾದ ಸುರಥನು ಭಗ್ನನಾಗಿ ಭೂಮಿಯ ಮೇಲೆ ಬಿದ್ದನು.
ಅನಂತರ ದ್ರೌಣಿಯು ಸಂಶಪ್ತಕರಿಂದ ಸುತ್ತುವರೆಯಲ್ಪಟ್ಟು ಅರ್ಜುನನೊಡನೆ ಯುದ್ಧದಲ್ಲಿ ತೊಡಗಿದನು. ಸೂರ್ಯನು ನಡುನೆತ್ತಿಗೆ ಬರಲು ಶತ್ರುಗಳೊಂದಿಗೆ ಅರ್ಜುನನ ಯಮರಾಷ್ಟ್ರವನ್ನು ವರ್ಧಿಸುವ ಮಹಾ ಯುದ್ಧವು ನಡೆಯಿತು. ಒಬ್ಬನೇ ಅನೇಕ ವೀರ ಯೋಧರೊಡನೆ ಯುದ್ಧಮಾಡುತ್ತಿರುವ ಅರ್ಜುನನ ಪರಾಕ್ರಮವು ಒಂದು ಆಶ್ಚರ್ಯವಾಗಿತ್ತು. ದೈತ್ಯರ ಮಹಾಸೇನೆಯೊಡನೆ ಹಿಂದೆ ಶತಕ್ರತುವಿನ ಯುದ್ಧವು ಹೇಗಿತ್ತೋ ಹಾಗೆ ಶತ್ರುಗಳೊಂದಿಗೆ ಅರ್ಜುನನ ಯುದ್ಧವು ಮಹಾ ವಿಮರ್ದನಕಾರಿಯಾಗಿತ್ತು.
ಸಂಕುಲ ಯುದ್ಧ
ದುರ್ಯೋಧನ ಮತ್ತು ಧೃಷ್ಟದ್ಯುಮ್ನರು ಬಾಣ-ಶಕ್ತ್ಯಾಯುಧಗಳಿಂದ ಕೂಡಿದ್ದ ಮಹಾ ಯುದ್ಧದಲ್ಲಿ ತೊಡಗಿದರು. ವರ್ಷಾಕಾಲದಲ್ಲಿ ಮೋಡಗಳು ಜಲಧಾರೆಗಳನ್ನು ಸುರಿಸುವಂತೆ ಅಲ್ಲಿ ಸಹಸ್ರಾರು ಬಾಣಗಳ ಮಳೆಯೇ ಸುರಿಯಿತು. ದುರ್ಯೋಧನನು ಪಾರ್ಷತನನ್ನು ಐದು ಉಕ್ಕಿನ ಶರಗಳಿಂದ ಹೊಡೆದು ಆ ದ್ರೋಣಹಂತಾರನನ್ನು ಪುನಃ ಏಳು ಉಗ್ರಬಾಣಗಳಿಂದ ಪ್ರಹರಿಸಿದನು. ಧೃಷ್ಟದ್ಯುಮ್ನನಾದರೋ ಸಮರದಲ್ಲಿ ದುರ್ಯೋಧನನನ್ನು ಎಪ್ಪತ್ತು ವಿಶಿಖಗಳಿಂದ ಪೀಡಿಸಿದನು. ರಾಜನು ಪೀಡಿತನಾಗುತ್ತಿರುವುದನ್ನು ನೋಡಿ ಅವನ ಸಹೋದರರು ಮಹಾ ಸೇನೆಯೊಂದಿಗೆ ಪಾರ್ಷತನನ್ನು ಸುತ್ತುವರೆದು ಆಕ್ರಮಣಿಸಿದರು. ಎಲ್ಲಕಡೆಗಳಿಂದಲೂ ಆ ಶೂರ ಅತಿರಥರಿಂದ ಸುತ್ತುವರೆಯಲ್ಪಟ್ಟ ಧೃಷ್ಟದ್ಯುಮ್ನನು ಸಮರದಲ್ಲಿ ತನ್ನ ಹಸ್ತಲಾಘವವನ್ನು ಚೆನ್ನಾಗಿ ಪ್ರದರ್ಶಿಸಿದನು.
ಶಿಖಂಡಿಯು ಪ್ರಭದ್ರಕರಿಂದ ಕೂಡಿ ಮಹಾರಥ ಗೌತಮ -ಕೃತವರ್ಮರೊಡನೆ ಯುದ್ಧಮಾಡಿದನು. ಅಲ್ಲಿ ಕೂಡ ಪ್ರಾಣಗಳನ್ನೇ ತೊರೆದು ಯುದ್ಧವೆಂಬ ದ್ಯೂತದಲ್ಲಿ ಪ್ರಾಣಗಳನ್ನೇ ಪಣವನ್ನಾಗಿಟ್ಟು ಘೋರರೂಪದ ಯುದ್ಧವು ನಡೆಯಿತು.
ಶಲ್ಯನಾದರೋ ಸರ್ವ ದಿಕ್ಕುಗಳಲ್ಲಿ ಶರವರ್ಷಗಳನ್ನು ಸುರಿಸುತ್ತಾ ಸಾತ್ಯಕಿ-ವೃಕೋದರರೊಡನಿದ್ದ ಪಾಂಡವರನ್ನು ಪೀಡಿಸತೊಡಗಿದನು. ಹಾಗೆಯೇ ಅವನು ಯುದ್ಧ ಪರಾಕ್ರಮದಲ್ಲಿ ಯಮನ ಸಮನಾಗಿದ್ದ ಯಮಳರೊಂದಿಗೆ ವೀರ್ಯ-ಬಲಗಳೊಂದಿಗೆ ಹೋರಾಡಿದನು. ಶಲ್ಯನ ಸಾಯಕಗಳಿಂದ ಪೀಡಿತರಾದ ಪಾಂಡವ ಮಹಾರಥರು ಆ ಮಹಾಯುದ್ಧದಲ್ಲಿ ಯಾವ ತ್ರಾತಾರನನ್ನೂ ಕಾಣದೇ ಹೋದರು.
ಧರ್ಮರಾಜನೂ ಪೀಡಿತನಾಗಿರಲು ಶೂರ ಮಾದ್ರಿನಂದನ ನಕುಲನು ವೇಗದಿಂದ ತನ್ನ ಸೋದರ ಮಾವ ಶಲ್ಯನನ್ನು ಆಕ್ರಮಣಿಸಿದನು. ನಕುಲನು ಶಲ್ಯನನ್ನು ಬಾಣಗಳಿಂದ ಮುಚ್ಚಿಬಿಟ್ಟು, ನಸುನಗುತ್ತಾ ಅವನ ಎದೆಗೆ ಹತ್ತು ಬಾಣಗಳಿಂದ ಹೊಡೆದನು. ಸೋದರಳಿಯನ ಸ್ವರ್ಣಪುಂಖಗಳ ಲೋಹಮಯ ಬಾಣಗಳಿಂದ ಪೀಡಿತನಾದ ಶಲ್ಯನು ನತಪರ್ವ-ಪತ್ರಿಗಳಿಂದ ನಕುಲನನ್ನು ಪೀಡಿಸತೊಡಗಿದನು.
ಆಗ ಯುಧಿಷ್ಠಿರ, ಭೀಮಸೇನ, ಸಾತ್ಯಕಿ ಮತ್ತು ಸಹದೇವರು ಮದ್ರರಾಜನನ್ನು ಮುತ್ತಿದರು. ರಥಘೋಷಗಳಿಂದ ದಿಕ್ಕು-ಉಪದಿಕ್ಕುಗಳನ್ನು ಮೊಳಗಿಸುತ್ತಾ, ಭೂಮಿಯನ್ನೇ ನಡುಗಿಸುತ್ತಾ ತನ್ನ ಮೇಲೆ ಬೀಳುತ್ತಿದ್ದ ಅವರನ್ನು ಸಮರದಲ್ಲಿ ಸೇನಾಪತಿ- ಶಲ್ಯನು ತಡೆದನು. ಅವನು ಯುಧಿಷ್ಠಿರನನ್ನು ಮೂರು ಬಾಣಗಳಿಂದಲೂ, ಭೀಮಸೇನನನ್ನು ಏಳರಿಂದಲೂ, ಸಾತ್ಯಕಿಯನ್ನು ನೂರರಿಂದಲೂ ಮತ್ತು ಸಹದೇವನನ್ನು ಮೂರು ಶರಗಳಿಂದಲೂ ಹೊಡೆದನು.
ಅನಂತರ ಮದ್ರರಾಜನು ನಕುಲನ ಬಾಣಸಹಿತ ಧನುಸ್ಸನ್ನು ಕ್ಷುರಪ್ರದಿಂದ ಕತ್ತರಿಸಿದನು. ಶಲ್ಯನ ಸಾಯಕಗಳಿಂದ ಸೀಳಲ್ಪಟ್ಟ ಆ ಧನುಸ್ಸು ಚೂರುಚೂರಾಯಿತು. ಕೂಡಲೇ ಮಹಾರಥ ಮಾದ್ರೀಪುತ್ರನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಪತ್ರಿಗಳಿಂದ ಮದ್ರರಾಜನ ರಥವನ್ನು ತುಂಬಿಸಿಬಿಟ್ಟನು. ಯುಧಿಷ್ಠಿರ ಮತ್ತು ಸಹದೇವರಾದರೋ ಮದ್ರೇಶನ ಎದೆಗೆ ಹತ್ತು-ಹತ್ತು ಬಾಣಗಳಿಂದ ಹೊಡೆದರು. ಅನಂತರ ಭೀಮಸೇನನು ಅರವತ್ತು ಬಾಣಗಳಿಂದಲೂ ಸಾತ್ಯಕಿಯು ಒಂಭತ್ತು ಕಂಕಪತ್ರಿ ಶರಗಳಿಂದಲೂ ಮದ್ರರಾಜನನ್ನು ವೇಗದಿಂದ ಹೊಡೆದರು.
ಆಗ ಕ್ರುದ್ಧ ಮದ್ರರಾಜನು ಸಾತ್ಯಕಿಯನ್ನು ಒಂಭತ್ತು ಶರಗಳಿಂದ ಹೊಡೆದು ಪುನಃ ಅವನನ್ನು ಏಳು ನತಪರ್ವ ಶರಗಳಿಂದ ಹೊಡೆದನು. ಕೂಡಲೇ ಅವನು ಸಾತ್ಯಕಿಯ ಧನುಸ್ಸನ್ನು ಬಾಣದೊಂದಿಗೆ ಅದರ ಮುಷ್ಟಿಪ್ರದೇಶದಲ್ಲಿ ತುಂಡರಿಸಿ, ಯುದ್ಧದಲ್ಲಿ ಅವನ ನಾಲ್ಕು ಕುದುರೆಗಳನ್ನೂ ಮೃತ್ಯುಲೋಕಕ್ಕೆ ಕಳುಹಿಸಿದನು. ಸಾತ್ಯಕಿಯನ್ನು ವಿರಥನನ್ನಾಗಿಸಿ ಮಹಾಬಲ ಮದ್ರರಾಜನು ನೂರು ವಿಶಿಖಗಳಿಂದ ಅವನನ್ನು ಎಲ್ಲಕಡೆ ಗಾಯಗೊಳಿಸಿದನು.
ಶಲ್ಯನು ಕ್ರುದ್ಧ ಮಾದ್ರೀಪುತ್ರರಿಬ್ಬರನ್ನೂ, ಪಾಂಡವ ಭೀಮಸೇನನನ್ನೂ, ಯುಧಿಷ್ಠಿರನನ್ನೂ ಹತ್ತು ಶರಗಳಿಂದ ಪ್ರಹರಿಸಿದನು. ಅಲ್ಲಿ ಮದ್ರರಾಜನ ಪೌರುಷವು ಅದ್ಭುತವಾಗಿತ್ತು. ಪಾರ್ಥರು ಒಂದಾಗಿ ಹೋರಾಡುತ್ತಿದ್ದರೂ ಅವನನ್ನು ಯುದ್ಧದಿಂದ ಹಿಮ್ಮೆಟ್ಟಿಸಲಾಗಲಿಲ್ಲ. ಆಗ ಸಾತ್ಯಕಿಯು ಇನ್ನೊಂದು ರಥವನ್ನೇರಿ ಮದ್ರರಾಜನ ವಶರಾಗಿ ಪೀಡೆಗೊಳಗಾಗುತ್ತಿದ್ದ ಪಾಂಡವರನ್ನು ನೋಡಿ ವೇಗದಿಂದ ಮದ್ರರಾಜನನ್ನು ಆಕ್ರಮಣಿಸಿದನು. ಮೇಲೆ ಎರಗುತ್ತಿದ್ದ ಅವನ ರಥವನ್ನು ಶಲ್ಯನು ಮದಿಸಿದ ಆನೆಯು ಇನ್ನೊಂದು ಮದಿಸಿದ ಆನೆಯನ್ನು ಹೇಗೋ ಹಾಗೆ ರಥದಿಂದಲೇ ಆಕ್ರಮಣಿಸಿ ಯುದ್ಧಮಾಡಿದನು. ಸಾತ್ಯಕಿ ಮತ್ತು ಮದ್ರರಾಜರ ನಡುವೆ ನಡೆದ ಆ ತುಮುಲ ಯುದ್ಧವು ಹಿಂದೆ ಶಂಬರ-ಅಮರರಾಜರ ನಡುವೆ ನಡೆದ ಯುದ್ಧದಂತೆ ನೋಡಲು ಅಧ್ಭುತವಾಗಿತ್ತು. ಸಮರದಲ್ಲಿ ವ್ಯವಸ್ಥಿತನಾಗಿದ್ದ ಮದ್ರರಾಜನನ್ನು ನೋಡಿ ಸಾತ್ಯಕಿಯು ಅವನನ್ನು ಹತ್ತು ಬಾಣಗಳಿಂದ ಪ್ರಹರಿಸಿ ನಿಲ್ಲು ನಿಲ್ಲೆಂದು ಹೇಳಿದನು. ಆ ಮಹಾತ್ಮನಿಂದ ಬಹಳವಾಗಿ ಗಾಯಗೊಂಡ ಮದ್ರರಾಜನು ವಿಚಿತ್ರ ಪುಂಖಗಳ ನಿಶಿತ ಶರಗಳಿಂದ ಸಾತ್ಯಕಿಯನ್ನು ತಿರುಗಿ ಪ್ರಹರಿಸಿದನು. ಆಗ ಪಾರ್ಥರು ಸಾತ್ವತನೊಡನೆ ಯುದ್ಧದಲ್ಲಿ ತೊಡಗಿದ್ದ ಸೋದರಮಾವ ನೃಪನನ್ನು ವಧಿಸಲು ಬಯಸಿ ಕೂಡಲೇ ರಥಗಳೊಂದಿಗೆ ಅವನನ್ನು ಆಕ್ರಮಣಿಸಿದರು. ಆಗ ಅಲ್ಲಿ ಸಿಂಹಗಳಂತೆ ಗರ್ಜಿಸುತ್ತಿದ್ದ ಪರಸ್ಪರರನ್ನು ಗಾಯಗೊಳಿಸಿ ರಕ್ತದ ನೀರನ್ನೇ ಸುರಿಸುತ್ತಿದ್ದ ಶೂರರ ತುಮುಲಯುದ್ಧವು ನಡೆಯಿತು. ಒಂದೇ ಮಾಂಸದ ತುಂಡಿಗಾಗಿ ಗರ್ಜಿಸಿ ಹೊಡೆದಾಡುತ್ತಿರುವ ಸಿಂಹಗಳಂತೆ ಪರಸ್ಪರರನ್ನು ಗಾಯಗೊಳಿಸುವ ಮಹಾಯುದ್ಧವು ಅವರ ನಡುವೆ ನಡೆಯಿತು.
ಅವರ ಸಹಸ್ರಾರು ಬಾಣಗಳಿಂದ ಭೂಮಿಯು ತುಂಬಿಹೋಯಿತು. ಕೂಡಲೇ ಅಂತರಿಕ್ಷವೂ ಕೂಡ ಬಾಣಮಯವಾಯಿತು. ಆ ಮಹಾತ್ಮರು ಪ್ರಯೋಗಿಸಿದ ಶರಗಳಿಂದ ಅಲ್ಲಿ ಎಲ್ಲ ಕಡೆ ಅತ್ಯಂತ ಶರಾಂಧಕಾರವುಂಟಾಗಿ, ಮೋಡಗಳಿಂದ ಉಂಟಾದ ನೆರಳಿನಂತೆಯೇ ಕಾಣುತ್ತಿತ್ತು. ಅಲ್ಲಿ ಪ್ರಯೋಗಿಸಲ್ಪಟ್ಟ ಪೊರೆಬಿಟ್ಟ ಸರ್ಪಗಳಂತೆ ಹೊಳೆಯುತ್ತಿದ್ದ ಸ್ವರ್ಣಪುಂಖ ಶರಗಳಿಂದ ದಿಕ್ಕುಗಳು ಬೆಳಗಿದವು. ಸಮರದಲ್ಲಿ ಶತ್ರುನಾಶಕ ಶೂರ ಶಲ್ಯನು ಒಬ್ಬನೇ ಅನೇಕರೊಡನೆ ಯುದ್ಧಮಾಡುತ್ತಿದ್ದ ಅದು ಒಂದು ಪರಮ ಅದ್ಭುತವಾಗಿತ್ತು. ಮದ್ರರಾಜನ ಭುಜಗಳಿಂದ ಪ್ರಮುಕ್ತವಾಗಿ ಕೆಳಗಿ ಬೀಳುತ್ತಿದ್ದ ರಣಹದ್ದು-ನವಿಲ ಗರಿಗಳ ಘೋರಶರಗಳಿಂದ ರಣಭೂಮಿಯು ತುಂಬಿಹೋಯಿತು. ಹಿಂದೆ ಅಸುರವಿನಾಶನಸಮಯದಲ್ಲಿ ಶಕ್ರನ ರಥವು ಹೇಗಿತ್ತೋ ಹಾಗೆ ಆ ಮಹಾಯುದ್ಧದಲ್ಲಿ ಶಲ್ಯನ ರಥವು ಸಂಚರಿಸುತ್ತಿತ್ತು.
ಮದ್ರರಾಜನ ನಾಯಕತ್ವದಲ್ಲಿದ್ದ ಕೌರವ ಸೇನೆಯು ಆ ಮಹಾರಣದಲ್ಲಿ ಪುನಃ ವೇಗದಿಂದ ಪಾರ್ಥರನ್ನು ಆಕ್ರಮಣಿಸಿತು. ಪೀಡೆಗೊಳಗಾಗಿದ್ದರೂ ರಣೋತ್ಕಟರಾದ ಕೌರವರೆಲ್ಲರೂ ಸಂಖ್ಯೆಯಲ್ಲಿ ಅಧಿಕರಾಗಿದ್ದುದರಿಂದ ಕ್ಷಣದಲ್ಲಿಯೇ ಮುನ್ನುಗ್ಗಿ ಪಾರ್ಥರನ್ನು ಮರ್ದಿಸತೊಡಗಿದರು. ಅವರಿಂದ ವಧಿಸಲ್ಪಡುತ್ತಿದ್ದ ಪಾಂಡವರು, ಭೀಮನಿಂದ ತಡೆಯಲ್ಪಟ್ಟರೂ, ಕೃಷ್ಣ-ಪಾರ್ಥರು ನೋಡುತ್ತಿದ್ದಂತೆಯೇ ಅಲ್ಲಿ ನಿಲ್ಲದೇ ಪಲಾಯನಮಾಡತೊಡಗಿದರು. ಆಗ ಧನಂಜಯನು ಕ್ರುದ್ಧನಾಗಿ ಅನುಯಾಯಿಗಳಿಂದ ಕೂಡಿದ್ದ ಕೃಪ-ಕೃತವರ್ಮರನ್ನು ಬಾಣಗಳ ಸಮೂಹಗಳಿಂದ ಮುಚ್ಚಿಬಿಟ್ಟನು.
ಸಹದೇವನು ಸೇನಾಸಮೇತನಾಗಿ ಶಕುನಿಯನ್ನು ತಡೆದನು. ನಕುಲನು ಪಕ್ಕದಲ್ಲಿಯೇ ನಿಂತು ಮದ್ರರಾಜನನ್ನು ನೋಡುತ್ತಿದ್ದನು. ದ್ರೌಪದೇಯರು ಮುನ್ನುಗ್ಗಿ ಅನೇಕ ಕುರು ನರೇಂದ್ರರರನ್ನು ತಡೆದರು. ಶಿಖಂಡಿಯು ದ್ರೋಣಪುತ್ರನನ್ನು ಎದುರಿಸಿದನು. ಭೀಮಸೇನನಾದರೋ ರಾಜರನ್ನು ಗದಾಪಾಣಿಯಾಗಿ ತಡೆದನು. ಯುಧಿಷ್ಠಿರನು ಸೇನೆಗಳೊಡಗೂಡಿ ಶಲ್ಯನನ್ನು ತಡೆದನು. ಆಗ ಕೌರವರು ಮತ್ತು ಶತ್ರುಗಳು ಅಲ್ಲಲ್ಲಿಯೇ ಯುದ್ಧದಲ್ಲಿ ತೊಡಗಿದರು. ಆ ಮಹಾರಣಲ್ಲಿ ಪಾಂಡವರ ಸರ್ವಸೇನೆಗಳೊಡನೆ ಓರ್ವ ಶಲ್ಯನು ಹೋರಾಡಿದ ಅತಿದೊಡ್ಡ ಸಾಹಸವು ತೋರುತ್ತಿತ್ತು.
ಯುಧಿಷ್ಠಿರನು ಶಲ್ಯನನ್ನು ವಧಿಸಿದುದು
ಆಗ ಚಂದ್ರಗ್ರಹದ ಸಮೀಪದಲ್ಲಿ ಶನೈಶ್ಚರಗ್ರಹವು ಕಾಣಿಸಿಕೊಳ್ಳುವಂತೆ ಯುಧಿಷ್ಠಿರನ ಬಳಿ ಶಲ್ಯನು ಕಾಣಿಸಿಕೊಂಡನು. ಸರ್ಪವಿಷಗಳಿಂತಿದ್ದ ಬಾಣಗಳಿಂದ ರಾಜ ಯುಧಿಷ್ಠಿರನನ್ನು ಪೀಡಿಸಿ, ಪುನಃ ಭೀಮನ ಬಳಿ ಹೋಗಿ ಅವನನ್ನು ಶರವರ್ಷಗಳಿಂದ ಮುಚ್ಚಿದನು. ಅವನ ಆ ಹಸ್ತಲಾಘವ ಮತ್ತು ಅಸ್ತ್ರ-ಪಾಂಡಿತ್ಯಗಳನ್ನು ನೋಡಿ ಕೌರವ ಮತ್ತು ಶತ್ರುಸೇನೆಗಳು ಅವನನ್ನು ಶ್ಲಾಘಿಸಿದರು. ಶಲ್ಯನಿಂದ ಪೀಡಿಸಲ್ಪಟ್ಟು ತುಂಬಾ ಗಾಯಗೊಂಡಿದ್ದ ಪಾಂಡವ ಸೈನಿಕರು ಯುಧಿಷ್ಠಿರನು ಕೂಗಿ ಕರೆಯುತ್ತಿದ್ದರೂ ರಣವನ್ನು ಬಿಟ್ಟು ಓಡಿಹೋಗುತ್ತಿದ್ದರು. ಮದ್ರರಾಜನು ತನ್ನ ಸೇನೆಗಳನ್ನು ವಧಿಸುತ್ತಿರುವುದನ್ನು ನೋಡಿ ಕುಪಿತನಾದ ಯುಧಿಷ್ಠಿರನು ಪೌರುಷವನ್ನು ತಾಳಿ ಮದ್ರರಾಜನನ್ನು ಪೀಡಿಸಿದನು. ಜಯವಾಗಲಿ ಅಥವಾ ವಧೆಯಾಗಲಿ ಎಂದು ನಿಶ್ಚಯಿಸಿ ಯುಧಿಷ್ಠಿರನು ತನ್ನ ಸಹೋದರರನ್ನೂ ಮಾಧವ ಕೃಷ್ಣನನ್ನೂ ಕರೆಯಿಸಿ ಹೇಳಿದನು:
“ಭೀಷ್ಮ, ದ್ರೋಣ, ಕರ್ಣ ಮತ್ತು ಪರಾಕ್ರಾಂತ ಅನ್ಯ ಪೃಥಿವೀಪತಿಗಳು ಕೌರವನಿಗಾಗಿ ಯುದ್ಧಮಾಡಿ ನಿಧನಹೊಂದಿದ್ದಾರೆ. ನೀವು ಕೂಡ ನಿಮ-ನಿಮಗೆ ಹಂಚಿಕೊಟ್ಟ ಯುದ್ಧಭಾಗಳೊಡನೆ ಉತ್ಸಾಹಪೂರ್ಣರಾಗಿ ಪೌರುಷವನ್ನು ಪ್ರದರ್ಶಿಸುತ್ತಾ ಹೋರಾಡಿದ್ದೀರಿ. ನನ್ನ ಭಾಗವಾದ ಮಹಾರಥ ಶಲ್ಯನೋರ್ವನೇ ಉಳಿದುಕೊಂಡಿದ್ದಾನೆ. ಇಂದು ಯುದ್ಧದಲ್ಲಿ ನಾನು ಮದ್ರಕೇಶ್ವರನನ್ನು ಜಯಿಸಲು ಬಯಸುತ್ತೇನೆ. ಈ ವಿಷಯದಲ್ಲಿ ನನ್ನ ಮನಸ್ಸಿನಲ್ಲಿರುವುದನ್ನು ಹೇಳಿಬಿಡುತ್ತೇನೆ. ಎಲ್ಲರೂ ಕೇಳಿರಿ. ಸಮರದಲ್ಲಿ ವಾಸವನಿಂದಲೂ ಅಜೇಯರಾಗಿರುವ ವೀರಸಮ್ಮತ ಶೂರ ಮಾದ್ರವತೀ ಸುತರಿಬ್ಬರೂ ನನ್ನ ಚಕ್ರರಕ್ಷಕರಾಗಲಿ. ಯುದ್ಧದಲ್ಲಿ ಕ್ಷತ್ರಧರ್ಮವನ್ನು ಮುಂದಿಟ್ಟುಕೊಂಡು ಈ ಇಬ್ಬರು ಸಾಧ್ವಿಗಳೂ, ಮಾನಾರ್ಹರೂ ಸತ್ಯಸಂಗರರೂ ನನಗಾಗಿ ತಮ್ಮ ಸೋದರಮಾವನೊಂದಿಗೆ ಯುದ್ಧಮಾಡುತ್ತಾರೆ. ರಣದಲ್ಲಿ ನಾನಾಗಲೀ ಶಲ್ಯನಾಗಲೀ ಹತರಾಗುತ್ತೇವೆ. ನಿಮಗೆ ಮಂಗಳವಾಗಲಿ! ನನ್ನ ಈ ಸತ್ಯವಚನವನ್ನು ನೀವೆಲ್ಲರೂ ಕೇಳಿಕೊಳ್ಳಿರಿ! ಕ್ಷತ್ರಧರ್ಮವನ್ನು ಅನುಸರಿಸಿ ನಾನಿಂದು ನನ್ನ ಭಾಗದ ಪ್ರತಿಜ್ಞೆಯನ್ನು ಪೂರೈಸಲು ವಿಜಯವಾಗಲೀ ಇನ್ನೊಂದಾಗಲೀ ಸೋದರಮಾವನೊಂದಿಗೆ ಯುದ್ಧಮಾಡುತ್ತೇನೆ. ರಥಯೋಜಕರು ನನ್ನ ರಥವನ್ನು ಅಧಿಕ ಶಸ್ತ್ರಗಳಿಂದ ಮತ್ತು ಸರ್ವೋಪಕರಣಗಳಿಂದ ಶಾಸ್ತ್ರವತ್ತಾಗಿ ಸಿದ್ಧಗೊಳಿಸಲಿ. ಸಾತ್ಯಕಿಯು ಬಲಚಕ್ರವನ್ನೂ ಧೃಷ್ಟದ್ಯುಮ್ನನು ಎಡಚಕ್ರವನ್ನೂ ಮತ್ತು ನನ್ನ ರಥದ ಹಿಂಭಾಗವನ್ನು ಧನಂಜಯನು ರಕ್ಷಿಸಲಿ. ಭೀಮನು ನನ್ನ ಮುಂದಿರಲಿ. ಹೀಗೆ ನಾನು ಮಹಾರಣದಲ್ಲಿ ಶಲ್ಯನಿಗಿಂತ ಅಧಿಕನಾಗುತ್ತೇನೆ!”
ಅವನು ಹೀಗೆ ಹೇಳಲು ರಾಜ-ಹಿತೈಷಿಗಳೆಲ್ಲರೂ ಹಾಗೆಯೇ ಮಾಡಿದರು. ಸೇನೆಗಳು ಪುನಃ ಹರ್ಷಿತರಾದವು. ಸಂಗ್ರಾಮದಲ್ಲಿ ಧರ್ಮರಾಜನು ಪ್ರತಿಜ್ಞೆಯನ್ನು ಪೂರೈಸುವನೆಂದು ಪಾಂಚಾಲ-ಸೋಮಕ-ಮತ್ಸ್ಯರು ವಿಶೇಷವಾಗಿ ಉತ್ಸಾಹಿತರಾದರು. ಪಾಂಚಾಲರು ನೂರಾರು ಶಂಖ-ಭೇರಿ-ಪುಷ್ಕರಗಳನ್ನು ಮೊಳಗಿಸಿ ಸಿಂಹನಾದಗೈದರು. ಕುಪಿತರಾಗಿ, ಭೂಮಿಯನ್ನೇ ಮೊಳಗಿಸುವ ಹರ್ಷನಾದ, ಆನೆಗಳ ಗಂಟೆಗಳ ಶಬ್ಧ, ಶಂಖ ನಿನಾದ ಮತ್ತು ತೂರ್ಯಶಬ್ಧಗಳೊಂದಿಗೆ ಅವರು ವೇಗಶಾಲೀ ಮದ್ರರಾಜನನ್ನು ಆಕ್ರಮಣಿಸಿದರು. ಉದಯಾಚಲ ಮತ್ತು ಅಸ್ತಾಚಲ ಪರ್ವತಗಳು ಅನೇಕ ಮಹಾಮೇಘಗಳನ್ನು ತಡೆದು ನಿಲ್ಲಿಸುವಂತೆ ದುರ್ಯೋಧನ ಮತ್ತು ಮದ್ರರಾಜರು ಪಾಂಡವ ಸೇನೆಯನ್ನು ತಡೆದು ನಿಲ್ಲಿಸಿದರು.
ಶಲ್ಯನಾದರೋ ಧರ್ಮರಾಜನ ಮೇಲೆ ಇಂದ್ರನು ಮಳೆಸುರಿಸುವಂತೆ ಶರಗಳ ಮಳೆಗರೆದನು. ಹಾಗೆಯೇ ಯುಧಿಷ್ಠಿರನೂ ಕೂಡ ಸುಂದರ ಧನುಸ್ಸನ್ನು ಹಿಡಿದು ದ್ರೋಣನು ಉಪದೇಶಿಸಿದ್ದ ವಿವಿಧ ಅಸ್ತ್ರಗಳನ್ನು ಪ್ರದರ್ಶಿಸುತ್ತಾ ಶೀಘ್ರವಾಗಿ ವಿಚಿತ್ರ-ದಟ್ಟ ಶರವರ್ಷಗಳನ್ನು ಸುರಿಸಿದನು. ರಣದಲ್ಲಿ ಅವನು ಚರಿಸುತ್ತಿದ್ದ ರೀತಿಯಲ್ಲಿ ಯಾವುದೇ ದೋಷವು ಕಾಣುತ್ತಿರಲಿಲ್ಲ. ಮಾಂಸದ ಲೋಭಕ್ಕಾಗಿ ಹೊಡೆದಾಡುತ್ತಿರುವ ಎರಡು ಶಾರ್ದೂಲಗಳಂತೆ ಅವರಿಬ್ಬರು ಪರಾಕ್ರಾಂತರೂ ಯುದ್ಧದಲ್ಲಿ ಪರಸ್ಪರರನ್ನು ವಿವಿಧ ಬಾಣಗಳಿಂದ ಗಾಯಗೊಳಿಸಿದರು.
ಭೀಮನು ದುರ್ಯೋಧನನೊಡನೆ ಯುದ್ಧದಲ್ಲಿ ತೊಡಗಿದನು. ಧೃಷ್ಟದ್ಯುಮ್ನ, ಸಾತ್ಯಕಿ, ಮತ್ತು ಮಾದ್ರೀಪುತ್ರರಿಬ್ಬರೂ ಶಕುನಿಪ್ರಮುಖ ವೀರರನ್ನು ಎದುರಿಸಿ ಯುದ್ಧಮಾಡುತ್ತಿದ್ದರು. ದುರ್ಯೋಧನನು ನತಪರ್ವ ಶರದಿಂದ ಭೀಮನ ಹೇಮವಿಭೂಷಿತ ಧ್ವಜವನ್ನು ಕತ್ತರಿಸಿದನು. ಸಣ್ಣ-ಸಣ್ಣ ಗಂಟೆಗಳ ಸಮೂಹಗಳಿಂದ ನೋಡಲು ಸುಂದರವಾಗಿದ್ದ ಭೀಮಸೇನನ ಆ ಧ್ವಜವು ಕೆಳಗೆ ಬೀಳಲು ಭೀಮಸೇನನು ಸಿಂಹದಂತೆ ಗರ್ಜಿಸಿದನು. ದುರ್ಯೋಧನನು ಪುನಃ ಆನೆಯ ಸೊಂಡಿಲಿನಂತಿದ್ದ ಭೀಮನ ಚಿತ್ರಿತ ಧನುಸ್ಸನ್ನು ನಿಶಿತ ಅಲುಗಿನ ಕ್ಷುರದಿಂದ ಕತ್ತರಿಸಿದನು. ಧನುಸ್ಸು ತುಂಡಾದ ಭೀಮಸೇನನು ವಿಕ್ರಮದಿಂದ ಶಕ್ತಿಯನ್ನು ದುರ್ಯೋಧನನ ಎದೆಗೆ ಎಸೆಯಲು ಅದರಿಂದ ಪೀಡಿತ ದುರ್ಯೋಧನನು ರಥದಲ್ಲಿ ಕುಸಿದು ಬಿದ್ದನು. ಅವನು ಮೂರ್ಛಿತನಾಗಲು ವೃಕೋದರನು ಪುನಃ ಕ್ಷುರಪ್ರದಿಂದ ದುರ್ಯೋಧನನ ಸಾರಥಿಯ ಶಿರವನ್ನು ಶರೀರದಿಂದ ಪ್ರತ್ಯೇಕಿಸಿದನು. ಸಾರಥಿಯನ್ನು ಕಳೆದುಕೊಂಡ ಆ ಕುದುರೆಗಳು ರಥವನ್ನೆಳೆದುಕೊಂಡು ದಿಕ್ಕಾಪಾಲಾಗಿ ಓಡಿಹೋದವು. ಆಗ ಹಾಹಾಕಾರವುಂಟಾಯಿತು.
ದುರ್ಯೋಧನನನ್ನು ರಕ್ಷಿಸಲು ಅಲ್ಲಿಗೆ ದ್ರೋಣಪುತ್ರ, ಕೃಪ ಮತ್ತು ಕೃತವರ್ಮರು ಧಾವಿಸಿ ಬಂದರು. ದುರ್ಯೋಧನನ ಸೇನೆಯು ಅಸ್ತವ್ಯಸ್ತಗೊಳ್ಳಲು ಅವನ ಅನುಚರರು ಭಯಗ್ರಸ್ತರಾದರು. ಆಗ ಗಾಂಡೀವಧನ್ವಿಯು ಧನುಸ್ಸನ್ನು ಟೇಂಕರಿಸುತ್ತಾ ಅವರನ್ನು ಶರಗಳಿಂದ ಸಂಹರಿಸಿದನು.
ಯುಧಿಷ್ಠಿರನು ದಂತದ ಬಣ್ಣದ ಮನೋವೇಗದ ಕುದುರೆಗಳನ್ನು ತಾನೇ ಓಡಿಸುತ್ತಾ ಮದ್ರೇಶನನ್ನು ಆಕ್ರಮಣಿಸಿದನು. ಆಗ ಯುಧಿಷ್ಠಿರನಲ್ಲಿ ಒಂದು ಅದ್ಭುತವು ಕಂಡಿತು. ಹಿಂದೆ ಮೃದುಸ್ವಭಾವದವನೂ ಜಿತೇಂದ್ರಿಯನೂ ಆಗಿದ್ದ ಅವನು ಆಗ ಕಠೋರಸ್ವಭಾವದವನಾಗಿದ್ದನು. ಕೌಂತೇಯನು ಕೋಪದಿಂದ ಕಣ್ಣುಗಳನ್ನರಳಿಸಿಕೊಂಡು ಕಂಪಿಸುತ್ತಾ ನಿಶಿತ ಶರಗಳಿಂದ ನೂರಾರು ಸಹಸ್ರಾರು ಯೋಧರನ್ನು ಸಂಹರಿಸಿದನು. ಯಾವ ಯಾವ ಸೇನೆಗಳು ಎದುರಿಸಿ ಯುದ್ಧ ಮಾಡುತ್ತಿದ್ದವೋ ಆ ಆ ಸೇನೆಗಳನ್ನು ಜ್ಯೇಷ್ಠ ಪಾಂಡವನು, ಇಂದ್ರನು ಉತ್ತಮ ವಜ್ರಪ್ರಹಾರಗಳಿಂದ ಪರ್ವತಗಳನ್ನು ಕೆಳಗುರುಳಿಸಿದಂತೆ, ಬಾಣಗಳಿಂದ ಧ್ವಂಸಮಾಡುತ್ತಿದ್ದನು. ಭಿರುಗಾಳಿಯು ಮೇಘಗಳನ್ನು ಛಿನ್ನ-ಭಿನ್ನಗೊಳಿಸುವಂತೆ ಅವನು ಒಬ್ಬನೇ ಅಶ್ವ-ಸಾರಥಿ-ಧ್ವಜ-ರಥಗಳೊಂದಿಗೆ ರಥಿಗಳನ್ನು ಅನೇಕ ಸಂಖ್ಯೆಗಳಲ್ಲಿ ಕೆಡವುತ್ತಾ ರಣರಂಗದಲ್ಲಿ ಆಟವಾಡುತ್ತಿದ್ದನು.
ಅಶ್ವಾರೋಹಿಗಳೊಂದಿಗೆ ಕುದುರೆಗಳೂ ಪದಾತಿಗಳೂ ಸಹಸ್ರಾರು ಸಂಖ್ಯೆಗಳಲ್ಲಿ ಕ್ರುದ್ಧ ರುದ್ರನಿಂದ ಪಶುಗಳು ಹೇಗೋ ಹಾಗೆ ಸಂಗ್ರಾಮದಲ್ಲಿ ಬೀಳುತ್ತಿದ್ದವು. ಶರವರ್ಷಗಳಿಂದ ಸುತ್ತಲೂ ರಣರಂಗವನ್ನು ಶೂನ್ಯವನ್ನಾಗಿ ಮಾಡಿ “ಶಲ್ಯ! ನಿಲ್ಲು!” ಎಂದು ಕೂಗುತ್ತಾ ಮದ್ರೇಶನನ್ನು ಆಕ್ರಮಣಿಸಿದನು. ಸಂಗ್ರಾಮದಲ್ಲಿ ಅವನ ಭಯಂಕರ ಕೃತ್ಯವನ್ನು ನೋಡಿ ಕೌರವರೆಲ್ಲರೂ ಭಯದಿಂದ ನಡುಗಿದರು. ಆದರೆ ಶಲ್ಯನೊಬ್ಬನೇ ನಿರ್ಭಯನಾಗಿ ಅವನನ್ನು ಎದುರಿಸಿದನು. ಕುಪಿತರಾಗಿದ್ದ ಶಲ್ಯ-ಧರ್ಮಜರಿಬ್ಬರೂ ಶಂಖಗಳನ್ನೂದಿ ಅನ್ಯೋನ್ಯರನ್ನು ಯುದ್ಧಕ್ಕೆ ಆಹ್ವಾನಿಸುತ್ತಾ, ಗರ್ಜನೆಗಳಿಂದ ಅನ್ಯೋನ್ಯರನ್ನು ಭಯಪಡಿಸುತ್ತಾ ಭೀಕರ ಯುದ್ಧದಲ್ಲಿ ತೊಡಗಿದರು.
ಶಲ್ಯನಾದರೋ ಶರವರ್ಷದಿಂದ ಯುಧಿಷ್ಠಿರನನ್ನು ಮುಚ್ಚಿಬಿಟ್ಟನು. ಕೌಂತೇಯನೂ ಕೂಡ ಮದ್ರರಾಜನನ್ನು ಶರವರ್ಷದಿಂದ ಮುಚ್ಚಿದನು. ಆಗ ಯುದ್ಧದಲ್ಲಿ ಕಂಕಪತ್ರಿ ಬಾಣಗಳಿಂದ ಗಾಯಗೊಂಡ ಮದ್ರರಾಜ-ಯುಧಿಷ್ಠಿರರಿಬ್ಬರ ಶರೀರಗಳಿಂದ ರಕ್ತವು ಹರಿಯುತ್ತಿತ್ತು. ಪ್ರಾಣಗಳನ್ನೇ ಪಣವಾಗಿಟ್ಟ ಆ ಯುದ್ಧದುರ್ಮದರಿಬ್ಬರೂ ವಸಂತಕಾಲದಲ್ಲಿ ವನದಲ್ಲಿ ಹೂಬಿಟ್ಟ ಮುತ್ತುಗದ ಮರಗಳಂತೆ ಪ್ರಕಾಶಿಸುತ್ತಿದ್ದರು. ಯುದ್ಧವನ್ನು ನೋಡುತ್ತಿದ್ದ ಸರ್ವ ಸೇನೆಗಳೂ ಅವರಿಬ್ಬರಲ್ಲಿ ಯಾರಿಗೆ ಜಯವಾಗುತ್ತದೆಯೆಂದು ನಿರ್ಧರಿಸಲು ಅಶಕ್ಯರಾಗಿದ್ದರು. “ಯುಧಿಷ್ಠಿರನು ಮದ್ರಾಧಿಪತಿಯನ್ನು ಸಂಹರಿಸಿ ವಸುಂಧರೆಯನ್ನು ಭೋಗಿಸುತ್ತಾನೋ ಅಥವಾ ಪಾಂಡವನನ್ನು ಸಂಹರಿಸಿ ಶಲ್ಯನು ಈ ಭೂಮಂಡಲವನ್ನು ದುರ್ಯೋಧನನಿಗೆ ನೀಡುತ್ತಾನೋ!” ಎಂದು ಯೋಧರು ಯಾವ ನಿಶ್ಚಯಕ್ಕೂ ಬರಲಿಲ್ಲ. ಆದರೆ ಯುದ್ಧದಲ್ಲಿ ಎಲ್ಲವೂ ಧರ್ಮರಾಜನಿಗೆ ಅನುಕೂಲವಾಗಿಯೇ ನಡೆಯುತ್ತಿತ್ತು.
ಅನಂತರ ಶಲ್ಯನು ಯುಧಿಷ್ಠಿರನ ಮೇಲೆ ನೂರು ಬಾಣಗಳನ್ನು ಪ್ರಯೋಗಿಸಿದನು ಮತ್ತು ನಿಶಿತ ಮೊನೆಯಿರುವ ಬಾಣದಿಂದ ಅವನ ಧನುಸ್ಸನ್ನೂ ಕತ್ತರಿಸಿದನು. ಕೂಡಲೇ ಯುಧಿಷ್ಠಿರನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಶಲ್ಯನನ್ನು ಮುನ್ನೂರು ಬಾಣಗಳಿಂದ ಪ್ರಹರಿಸಿ, ಅವನ ಧನುಸ್ಸನ್ನೂ ಕ್ಷುರದಿಂದ ಕತ್ತರಿಸಿದನು. ಅನಂತರ ನತಪರ್ವ ಬಾಣಗಳಿಂದ ಶಲ್ಯನ ನಾಲ್ಕುಕುದುರೆಗಳನ್ನೂ ಸಂಹರಿಸಿದನು. ಶಿತಾಗ್ರ ಬಾಣಗಳೆರಡರಿಂದ ಅವನ ಇಬ್ಬರು ಪಾರ್ಶ್ವಸಾರಥಿಗಳನ್ನೂ ಸಂಹರಿಸಿದನು. ಉರಿಯುತ್ತಿದ್ದ ನಿಶಿತ ಹೊಂಬಣ್ಣದ ಭಲ್ಲದಿಂದ ಶಲ್ಯನ ಧ್ವಜವನ್ನೂ ಕತ್ತರಿಸಿದನು.
ಆಗ ದುರ್ಯೋಧನನ ಸೈನ್ಯವು ಭಗ್ನವಾಗಿ ಹೋಯಿತು. ದ್ರೌಣಿಯು ಧಾವಿಸಿಬಂದು ತ್ವರೆಮಾಡಿ ಮದ್ರಾಧಿಪನನ್ನು ತನ್ನ ರಥದಲ್ಲೇರಿಸಿಕೊಂಡು ಹೊರಟುಹೋದನು. ಯುಧಿಷ್ಠಿರನು ಸ್ವಲ್ಪಹೊತ್ತು ಅವನನ್ನು ಹಿಂಬಾಲಿಸಿ ಹೋಗಿ ಗರ್ಜಿಸಿದನು. ಅನಂತರ ಮದ್ರಪತಿಯು ವಿಧಿವತ್ತಾಗಿ ಸಜ್ಜಾಗಿಸಿದ, ಯಂತ್ರೋಪಕರಣಗಳಿಂದ ಸುಸಜ್ಜಿತವಾದ, ಶುಭ್ರ, ಮಹಾಮೇಘದ ಗುಡುಗಿನಂತೆ ಶಬ್ಧಮಾಡುತ್ತಿದ್ದ, ಶತ್ರುಗಳಿಗೆ ರೋಮಾಂಚನವನ್ನುಂಟುಮಾಡುವ ಇನ್ನೊಂದು ರಥವನ್ನೇರಿ ನಿಂತನು. ಇನ್ನೊಂದು ಬಲವತ್ತರ-ವೇಗವತ್ತರ ಧನುಸ್ಸನ್ನು ಎತ್ತಿ ಮದ್ರಪತಿಯು ಯುಧಿಷ್ಠಿರನನ್ನು ಗಾಯಗೊಳಿಸಿ ಸಿಂಹದಂತೆ ಗರ್ಜಿಸಿದನು. ಆಗ ಮಳೆಸುರಿಸುವ ಪರ್ಜನ್ಯನಂತೆ ಶಲ್ಯನು ಪಾಂಡವ ಕ್ಷತ್ರಿಯರ ಮೇಲೆ ಶರವರ್ಷಗಳನ್ನು ಸುರಿಸಿದನು. ಸಾತ್ಯಕಿಯನ್ನು ಹತ್ತುಬಾಣಗಳಿಂದ, ಭೀಮಸೇನನನ್ನು ಮೂರರಿಂದ ಮತ್ತು ಸಹದೇವನನ್ನು ಮೂರರಿಂದ ಹೊಡೆದು ಯುಧಿಷ್ಠಿರನನ್ನು ಪೀಡಿಸಿದನು. ಆ ರಥಿಶ್ರೇಷ್ಠನು ರಥ-ಕುಂಜರಗಳೊಂದಿಗೆ ಅನ್ಯ ಮಹೇಷ್ವಾಸರನ್ನೂ, ಆನೆಸವಾರರೊಂದಿಗೆ ಆನೆಗಳನ್ನು, ಸವಾರರೊಂದಿಗೆ ಕುದುರೆಗಳನ್ನು, ಮತ್ತು ರಥಗಳನ್ನು ರಥಿಗಳೊಂದಿಗೆ ಸಂಹರಿಸಿದನು. ಬಾಹುಗಳನ್ನು ಕತ್ತರಿಸಿದನು ಮತ್ತು ಹಾಗೆಯೇ ಆಯುಧ-ಧ್ವಜಗಳನ್ನು ತುಂಡರಿಸಿ, ದರ್ಬೆಗಳನ್ನು ಹಾಸಿದ ಯಜ್ಞವೇದಿಕೆಯಂತೆ, ರಣಭೂಮಿಯನ್ನು ಯೋಧರ ಮೃತಶರೀರಗಳಿಂದ ತುಂಬಿದನು. ಹಾಗೆ ಅಂತಕ ಮೃತ್ಯುವಿನಂತೆ ಶತ್ರುಸೇನೆಗಳನ್ನು ನಾಶಪಡಿಸುತ್ತಿದ್ದ ಅವನನ್ನು ಅತೀವ ಕ್ರುದ್ಧರಾದ ಪಾಂಡವ-ಪಾಂಚಾಲ-ಸೋಮಕರು ಸುತ್ತುವರೆದರು. ಭೀಮಸೇನ, ಸಾತ್ಯಕಿ, ಮಾದ್ರೀಪುತ್ರರು, ಭೀಮಬಲದಿಂದೊಡಗೂಡಿ ಯುಧಿಷ್ಠಿರನೊಡನೆ ಯುದ್ಧಮಾಡುತ್ತಿದ್ದ ಶಲ್ಯನನ್ನು ಪ್ರತ್ಯೇಕ ಪ್ರತ್ಯೇಕವಾಗಿ ಆಹ್ವಾನಿಸುತ್ತಿದ್ದರು. ಆಗ ಸಮರದಲ್ಲಿ ಆ ಶೂರ ನರವೀರರು ಮದ್ರೇಶ್ವರನ ಸಮೀಪಕ್ಕೆ ಹೋಗಿ ಉಗ್ರವೇಗದ ಪತ್ರಿ ಶರಗಳಿಂದ ಗಾಯಗೊಳಿಸಿದರು. ಭೀಮಸೇನ, ಮಾದ್ರೀಸುತರು ಮತ್ತು ಸಾತ್ಯಕಿಯಿಂದ ಸಂರಕ್ಷಿತನಾಗಿದ್ದ ರಾಜಾ ಧರ್ಮಸುತನು ಉಗ್ರವೇಗದ ಪತ್ರಿಗಳಿಂದ ಮದ್ರಾಧಿಪನ ವಕ್ಷಸ್ಥಳಕ್ಕೆ ಪ್ರಹರಿಸಿದನು. ಮದ್ರಾಧಿಪತಿಯು ಶರಗಳಿಂದ ಪೀಡಿತನಾಗಿದ್ದುದನ್ನು ಕಂಡು ಕೌರವರ ಪ್ರಮುಖ ರಥಗುಂಪುಗಳು ಎಲ್ಲವೂ ದುರ್ಯೋಧನನ ಅನುಮತಿಯಂತೆ ಶಲ್ಯನನ್ನು ಸುತ್ತುವರೆದು ಬಂದವು.
ಆಗ ರಣದಲ್ಲಿ ಮದ್ರಾಧಿಪನು ಬೇಗನೇ ಏಳು ಬಾಣಗಳಿಂದ ಯುಧಿಷ್ಠಿರನನ್ನು ಹೊಡೆದನು. ಆ ತುಮುಲ ಯುದ್ಧದಲ್ಲಿ ಪಾರ್ಥನೂ ಕೂಡ ಅವನನ್ನು ಒಂಭತ್ತು ಪೃಷತಗಳಿಂದ ಹೊಡೆದನು. ಮದ್ರಾಧಿಪ-ಯುಧಿಷ್ಠಿರರಿಬ್ಬರೂ ಎಣ್ಣೆಯಿಂದ ಹದಮಾಡಲ್ಪಟ್ಟ ಬಾಣಗಳನ್ನು ಕಿವಿಯ ತುದಿಯವರೆಗೂ ಸೆಳೆದು ಬಿಟ್ಟು ಅನ್ಯೋನ್ಯರನ್ನು ಮುಚ್ಚಿಬಿಟ್ಟರು. ಆಗ ಸಮರದಲ್ಲಿ ಪರಸ್ಪರರ ದುರ್ಬಲತೆಯನ್ನು ಹುಡುಕುತ್ತಿದ್ದ, ಶತ್ರುಗಳಿಂದ ಎದುರಿಸಲು ಅಸಾಧ್ಯರಾಗಿದ್ದ, ನೃಪೋತ್ತಮರಿಬ್ಬರೂ ಬೇಗ ಬೇಗನೇ ಶರಗಳಿಂದ ಪರಸ್ಪರರನ್ನು ಹೊಡೆಯುತ್ತಿದ್ದರು. ಪರಸ್ಪರರ ಮೇಲೆ ಬಾಣಗಣಗಳನ್ನು ಸುರಿಸುತ್ತಿದ್ದ ಆ ಪಾಂಡವ-ಮದ್ರ ವೀರರ ಧನುಸ್ಸಿನ ಶಿಂಜನಿಯ ಟೇಂಕಾರ ಶಬ್ಧವು ಮಹೇಂದ್ರನ ವಜ್ರಾಯುಧದ ಗರ್ಜನೆಗೆ ಸಮನಾಗಿದ್ದಿತು. ಮಹಾವನದಲ್ಲಿ ಮಾಂಸದ ತುಂಡಿಗಾಗಿ ಪರಚಾಡುವ ಹುಲಿಯ ಮರಿಗಳಂತಿದ್ದ ಮತ್ತು ದಂತಗಳುಳ್ಳ ಸಲಗಶ್ರೇಷ್ಠರಂತೆ ದರ್ಪಿತರಾಗಿದ್ದ ಅವರಿಬ್ಬರೂ ಪರಸ್ಪರರನ್ನು ಗಾಯಗೊಳಿಸಿದರು. ಆಗ ಮದ್ರಾಧಿಪತಿಯು ಸೂರ್ಯಾಗ್ನಿತೇಜಸ್ಸಿಗೆ ಸಮಾನ ತೇಜಸ್ಸುಳ್ಳ ಅತಿವೇಗದ ಭಯಂಕರ ಶರವನ್ನು, ಬಲವನ್ನುಪಯೋಗಿಸಿ, ಯುಧಿಷ್ಠಿರನ ಎದೆಗೆ ಪ್ರಹರಿಸಿದನು. ಅತಿಯಾಗಿ ಗಾಯಗೊಂಡ ಯುಧಿಷ್ಠಿರನಾದರೋ ಚೆನ್ನಾಗಿ ಹೂಡಿದ ಬಾಣದಿಂದ ಮದ್ರಾಧಿಪತಿಯನ್ನು ಹೊಡೆದು, ಅವನು ಮೂರ್ಛಿತನಾದುದನ್ನು ಕಂಡು ಆನಂದಿಸಿದನು.
ಸಹಸ್ರನೇತ್ರನಂತೆ ಅಪ್ರತಿಮ ಪ್ರಭಾವವುಳ್ಳ ಪಾರ್ಥಿವೇಂದ್ರ ಶಲ್ಯನು ಮುಹೂರ್ತಕಾಲದಲ್ಲಿಯೇ ಸಂಜ್ಞೆಯನ್ನು ಪಡೆದು ಕ್ರೋಧದಿಂದ ಕೆಂಗಣ್ಣನಾಗಿ ತ್ವರೆಮಾಡಿ ನೂರು ಬಾಣಗಳಿಂದ ಯುಧಿಷ್ಠಿರನನ್ನು ಪ್ರಹರಿಸಿದನು. ಆಗ ಕ್ರುದ್ಧ ಧರ್ಮಸುತನು ತ್ವರೆಮಾಡಿ ಒಂಭತ್ತು ಬಾಣಗಳಿಂದ ಶಲ್ಯನ ಸುವರ್ಣಮಯ ಕವಚವನ್ನು ಭೇದಿಸಿ ಪುನಃ ಆರು ಪೃಷತಗಳಿಂದ ಅವನ ವಕ್ಷಸ್ಥಳಕ್ಕೆ ಹೊಡೆದನು. ಆಗ ಪ್ರಹೃಷ್ಟ ಮದ್ರಾಧಿಪತಿಯು ಧನುಸ್ಸನ್ನು ಸೆಳೆದು ಪೃಷತಗಳನ್ನೂ ಎರಡು ಕ್ಷುರಗಳನ್ನು ಪ್ರಯೋಗಿಸಿ ರಾಜನನ್ನು ಹೊಡೆದು ಕುರುಪುಂಗವನ ಧನುಸ್ಸನ್ನು ತುಂಡರಿಸಿದನು. ಆಗ ರಾಜನು ಘೋರತರ ಅನ್ಯ ಧನುಸ್ಸನ್ನು ತೆಗೆದುಕೊಂಡು ನಿಶಿತ ಶರಗಳಿಂದ ಮಹೇಂದ್ರನು ಶಿತಾಗ್ರಗಳಿಂದ ನಮುಚಿಯನ್ನು ಹೇಗೋ ಹಾಗೆ ಎಲ್ಲ ಕಡೆಗಳಲ್ಲಿ ಪ್ರಹರಿಸಿದನು. ಶಲ್ಯನು ಒಂಭತ್ತು ಪೃಷತಗಳಿಂದ ಭೀಮಸೇನ ಮತ್ತು ಯುಧಿಷ್ಠಿರರ ಸುವರ್ಣಮಯ ಸುದೃಢ ಕವಚಗಳನ್ನು ಕತ್ತರಿಸಿ ಅವರಿಬ್ಬರ ಭುಜಗಳನ್ನು ಸೀಳಿದನು. ಅನಂತರ ಇನ್ನೊಂದು ಅಗ್ನಿ-ಸೂರ್ಯರ ತೇಜಸ್ಸಿನಿಂದ ಬೆಳಗುತ್ತಿದ್ದ ಕ್ಷುರದಿಂದ ಯುಧಿಷ್ಠಿರನ ಧನುಸ್ಸನ್ನು ಧ್ವಂಸಗೊಳಿಸಿದನು. ಎದುರಿಗಿದ್ದ ಕೃಪನೂ ಕೂಡ ಆರು ಶರಗಳಿಂದ ಯುಧಿಷ್ಠಿರನ ಸಾರಥಿಯನ್ನು ಕೆಳಗುರುಳಿಸಿದನು. ಮದ್ರಾಧಿಪತಿಯೂ ಕೂಡ ಶರಗಳಿಂದ ಯುಧಿಷ್ಠಿರನ ನಾಲ್ಕು ಕುದುರೆಗಳನ್ನು ಸಂಹರಿಸಿದನು. ಕುದುರೆಗಳನ್ನು ಸಂಹರಿಸಿ ಅವನು ಧರ್ಮಸುತನ ಯೋಧರನ್ನು ನಾಶಗೊಳಿಸಿದನು.
ಮದ್ರಾಧಿಪನು ರಾಜನನ್ನು ಈ ಅವಸ್ಥೆಗೊಳಪಡಿಸಿದುದನ್ನು ನೋಡಿದ ಭೀಮಸೇನನು ವೇಗವತ ಶರದಿಂದ ಅವನ ಧನುಸ್ಸನ್ನು ತುಂಡರಿಸಿ, ಇನ್ನೆರಡು ಶರಗಳಿಂದ ಬಹಳವಾಗಿ ಗಾಯಗೊಳಿಸಿದನು. ತುಂಬಾ ಕುಪಿತನಾಗಿದ್ದ ಭೀಮಸೇನನು ಹಾಗೆಯೇ ಶೀಘ್ರವಾಗಿ ಇನ್ನೊಂದು ಶರದಿಂದ ಸಾರಥಿಯ ಶಿರವನ್ನು ಶರೀರದಿಂದ ಬೇರ್ಪಡಿಸಿ, ಅವನ ನಾಲ್ಕು ಕುದುರೆಗಳನ್ನೂ ಸಂಹರಿಸಿದನು. ಸಮರದಲ್ಲಿ ಅತಿವೇಗದಿಂದ ಸಂಚರಿಸುತ್ತಿದ್ದ ಆ ಶಲ್ಯನ ಮೇಲೆ ಭೀಮ ಮತ್ತು ಸಹದೇವರು ನೂರು ಬಾಣಗಳನ್ನು ಎರಚಿದರು. ಆ ಸಾಯಕಗಳಿಂದ ಶಲ್ಯನು ಮೂರ್ಛಿತನಾದುದನ್ನು ಕಂಡು ಭೀಮನು ಶರಗಳಿಂದ ಅವನ ಕವಚವನ್ನು ತುಂಡರಿಸಿದನು. ಭೀಮಸೇನನು ಕವಚಗಳನ್ನು ಕತ್ತರಿಸಲು ಮದ್ರಾಧಿಪನು ಸಹಸ್ರತಾರೆಗಳ ಚಿತ್ರವುಳ್ಳ ಗುರಾಣಿ-ಖಡ್ಗಗಳನ್ನು ಹಿಡಿದು ರಥದಿಂದ ಧುಮಿಕಿ ಕುಂತೀಸುತನೆಡೆಗೆ ಧಾವಿಸಿದನು. ನಕುಲನ ರಥದ ಈಷಾದಂಡವನ್ನು ತುಂಡರಿಸಿ ಆ ಭೀಮಬಲನು ಯುಧಿಷ್ಠಿರನನನ್ನು ಆಕ್ರಮಣಿಸಿದನು. ಹಾಗೆ ಕ್ರುದ್ಧ ಅಂತಕನಂತೆ ಮೇಲೆ ಬೀಳುತ್ತಿದ್ದ ರಾಜನನ್ನು ಧೃಷ್ಟದ್ಯುಮ್ನ, ದ್ರೌಪದೇಯರು, ಶಿಖಂಡೀ, ಮತ್ತು ಶೈನೇಯರು ಕೂಡಲೇ ಸುತ್ತುವರೆದರು. ಭೀಮನು ಹತ್ತು ಪೃಷತಗಳಿಂದ ಅವನ ಅಪ್ರತಿಮ ಗುರಾಣಿಯನ್ನು ಪುಡಿಮಾಡಿ, ಭಲ್ಲದಿಂದ ಮುಷ್ಟಿಪ್ರದೇಶದಲ್ಲಿ ಅವನ ಖಡ್ಗವನ್ನೂ ಕತ್ತರಿಸಿ ನಿನ್ನ ಸೇನಾಮಧ್ಯದಲ್ಲಿ ಪ್ರಹೃಷ್ಟನಾಗಿ ಗರ್ಜಿಸಿದನು.
ಭೀಮನ ಆ ಕರ್ಮವನ್ನು ನೋಡಿ ಪಾಂಡವರ ಕಡೆಯ ಪ್ರಮುಖ ರಥಸೇನೆಗಳು ಉತ್ಸಾಹದಿಂದ ಜೋರಾಗಿ ಸಿಂಹನಾದಗೈದವು ಮತ್ತು ಚಂದ್ರಪ್ರಭೆಯ ಶಂಖಗಳನ್ನು ಊದಿದರು. ರಕ್ತದಿಂದ ತೋಯ್ದುಹೋಗಿದ್ದ ಕೌರವ ಸೇನೆಯು ಆ ವಿಭೀಷಣ ಶಬ್ಧದಿಂದ ತಪಿಸಿ ದುಃಖಗೊಂಡು ವಿಷಣ್ಣರಾಗಿ ದಿಕ್ಕುಗಾಣದೇ ಸ್ತಬ್ಧವಾಗಿ ನಿಂತುಬಿಟ್ಟಿತು. ಭೀಮಸೇನನೇ ಮೊದಲಾದವರ ಶರಗಳಿಂದ ಪೀಡಿತ ಮದ್ರರಾಜನು ಜಿಂಕೆಯ ಸಲುವಾಗಿ ಸಿಂಹವು ಹೇಗೋ ಹಾಗೆ ವೇಗದಿಂದ ಯುಧಿಷ್ಠಿರನ ಬಳಿಗೆ ಓಡಿದನು. ಕುದುರೆ-ಸಾರಥಿಯರನ್ನು ಕಳೆದುಕೊಂಡು ಕ್ರೋಧದಿಂದ ಪ್ರಜ್ವಲಿಸುತ್ತಿರುವ ಅಗ್ನಿಯಂತೆ ಪ್ರಕಾಶಿಸುತ್ತಿದ್ದ ಧರ್ಮರಾಜನು ಮದ್ರಾಧಿಪತಿಯನ್ನು ನೋಡಿ ಬೇಗನೆ ಬಲವನ್ನುಪಯೋಗಿಸಿ ಶತ್ರುವನ್ನು ಆಕ್ರಮಣಿಸಿದನು. ಕೂಡಲೇ ಗೋವಿಂದನ ಮಾತನ್ನು ನೆನಪಿಸಿಕೊಂಡ ಅವನು ಶಲ್ಯನ ವಿನಾಶಕ್ಕೆ ಮನಸ್ಸುಮಾಡಿದನು. ಕುದುರೆ-ಸಾರಥಿಗಳನ್ನು ಕಳೆದುಕೊಂಡಿದ್ದ ಆ ಧರ್ಮರಾಜನು ರಥದಲ್ಲಿ ನಿಂತು ಶಕ್ತಿಯನ್ನೇ ಬಯಸಿದನು. ಶಲ್ಯನ ಕರ್ಮಗಳನ್ನು ವೀಕ್ಷಿಸಿ, ತನ್ನ ಭಾಗವೊಂದು ಉಳಿದುಕೊಂಡಿದೆಯೆಂದು ನೆನಪಿಸಿಕೊಂಡು, ಶಲ್ಯವಧೆಗೆ ಪ್ರಯತ್ನಿಸಿ, ಇಂದ್ರಾವರಜ ಕೃಷ್ಣನು ಹೇಳಿದಂತೆಯೇ ಮಾಡಿದನು.
ಧರ್ಮರಾಜನು ಮಣಿಹೇಮದಂಡವುಳ್ಳ ಕನಕಪ್ರಕಾಶಿತ ಶಕ್ತಿಯನ್ನು ಹಿಡಿದು, ಉರಿಯುತ್ತಿದ್ದ ಕಣ್ಣುಗಳನ್ನು ಅರಳಿಸಿಕೊಂಡು, ಕ್ರುದ್ಧಮನಸ್ಕನಾಗಿ ಮದ್ರಾಧಿಪನನ್ನು ದಿಟ್ಟಿಸಿ ನೋಡಿದನು. ಪೂತಾತ್ಮ ಕಲ್ಮಷಗಳೇ ಇಲ್ಲದ ಆ ಪರಿಶುದ್ಧ ರಾಜನು ದುರುಗುಟ್ಟಿ ನೋಡಿದರೂ ಮದ್ರರಾಜನು ಭಸ್ಮೀಭೂತನಾಗಲಿಲ್ಲ! ಅದೊಂದು ಅದ್ಭುತವಾಗಿಯೇ ತೋರಿತು. ಆಗ ಯುಧಿಷ್ಠಿರನು ಆ ಸುಂದರ, ಉಗ್ರದಂಡವುಳ್ಳ, ಮಣಿರತ್ನಗಳಿಂದ ಪ್ರಜ್ವಲಿಸುತ್ತಿದ್ದ ಶಕ್ತ್ಯಾಯುಧವನ್ನು ಅತಿವೇಗದಿಂದ ಮದ್ರಾಧಿಪನ ಮೇಲೆ ಪ್ರಹರಿಸಿದನು. ಮಹಾಬಲದಿಂದ ಪ್ರಯೋಗಿಸಲ್ಪಟ್ಟು ವೇಗವಾಗಿ ಬೀಳುತ್ತಿದ್ದ, ಕಿಡಿಗಳನ್ನು ಕಾರುತ್ತಾ ಉರಿಯುತ್ತಿದ್ದ, ಯುಗಾಂತದಲ್ಲಿ ಕಾಣಿಸಿಕೊಳ್ಳುವ ಮಹಾ ಉಲ್ಕೆಯಂತೆ ತೋರುತ್ತಿದ್ದ ಆ ಶಕ್ತಿಯನ್ನು ಸರ್ವಕುರುಗಳೂ ನೋಡಿದರು. ಕಾಲರಾತ್ರಿಯಂತಿದ್ದ, ಯಮನ ಕೈಯಲ್ಲಿರುವ ಪಾಶದಂತಿದ್ದ, ಧಾತ್ರಿಯಂತೆ ಉಗ್ರರೂಪದಿಂದಿದ್ದ, ಬ್ರಹ್ಮದಂಡದಂತೆ ಅಪ್ರತಿಮ ಅಮೋಘವಾಗಿದ್ದ ಆ ಶಕ್ತಿಯನ್ನು ಯುದ್ಧದಲ್ಲಿ ಧರ್ಮರಾಜನು ಪ್ರಯತ್ನಿಸಿ ಪ್ರಯೋಗಿಸಿದನು. ಪಾಂಡುಸುತನಿಂದ ಗಂಧ-ಮಾಲೆ-ಅಗ್ರಾಸನ-ಪಾನ-ಭೋಜನಗಳಿಂದ ಪ್ರಯತ್ನಪೂರ್ವಕವಾಗಿ ಪೂಜಿಸಲ್ಪಡುತ್ತಿದ್ದ, ಪ್ರಳಯಕಾಲದ ಅಗ್ನಿಗೆ ಸಮನಾಗಿ ಪ್ರಜ್ವಲಿಸುತ್ತಿದ್ದ, ಅಥರ್ವಾಂಗಿರಸ ಮಂತ್ರಗಳಿಂದ ಅಭಿಮಂತ್ರಿತ, ಕೃತ್ಯೆಯಂತೆ ಉಗ್ರವಾಗಿದ್ದ, ಈಶಾನನ ಸಲುವಾಗಿ ಶತ್ರುಗಳ ಪ್ರಾಣ-ದೇಹಗಳನ್ನು ಭಕ್ಷಿಸಲು ತ್ವಷ್ಟನಿಂದ ನಿರ್ಮಿಸಲ್ಪಟ್ಟಿದ್ದ, ಭೂಮಿ-ಅಂತರಿಕ್ಷ-ಜಲಾಶಯಾದಿಗಳಲ್ಲಿದ್ದರೂ ಪ್ರಾಣಿಗಳನ್ನು ಸೆಳೆದು ಕೊಲ್ಲಬಹುದಾಗಿದ್ದ, ಘಂಟೆ-ಪತಾಕೆ-ಮಣಿ-ವಜ್ರಗಳಿಂದ ಬೆಳಗುತ್ತಿದ್ದ, ವೈಡೂರ್ಯ ಚಿತ್ರಿತ ಹೇಮದಂಡವುಳ್ಳ, ತ್ವಷ್ಟನು ಪ್ರಯತ್ನಪೂರ್ವಕವಾಗಿ ಮತ್ತು ನಿಯಮಬದ್ಧನಾಗಿ ರಚಿಸಿದ್ದ, ಬ್ರಹ್ಮದ್ವೇಷಿಗಳನ್ನು ವಿನಾಶಗೊಳಿಸುವ, ಆ ಅಮೋಘ ಶಕ್ತಿಯನ್ನು ಯುಧಿಷ್ಠಿರನು ಬಲ-ಪ್ರಯತ್ನ ಮತ್ತು ಘೋರ ಮಂತ್ರಗಳಿಂದ ಅಭಿಮಂತ್ರಿಸಿ ಶತ್ರು ಮದ್ರಾಧಿಪತಿಯ ವಧೆಗಾಗಿ ಮಾರ್ಗದಲ್ಲಿ ಅತಿವೇಗವಾಗಿ ಹೋಗುವಂತೆ ಪ್ರಯೋಗಿಸಿದನು. ರುದ್ರನು ಅಂತಕನನ್ನು ಸಂಹರಿಸಲು ಹೇಗೆ ಬಾಣಪ್ರಯೋಗ ಮಾಡಿದ್ದನೋ ಹಾಗೆ ಕ್ರೋಧದಿಂದ ನರ್ತಿಸುತ್ತಿರುವನೋ ಎಂಬಂತೆ ಧರ್ಮರಾಜನು ತನ್ನ ಸುಂದರ ಸುದೃಢ ಕೈ-ಬಾಹುಗಳನ್ನು ಚಾಚಿ “ಇವನನ್ನು ಕೊಲ್ಲು!” ಎಂದು ಗರ್ಜಿಸುತ್ತಾ ಆ ಶಕ್ತಿಯನ್ನು ಪ್ರಯೋಗಿಸಿದನು.
ವೀರ ಯುಧಿಷ್ಠಿರನು ಸರ್ವಶಕ್ತಿಯನ್ನುಪಯೋಗಿಸಿ ಪ್ರಯೋಗಿಸಿದ, ತಡೆಯಲಸಾಧ್ಯ ಆ ಶಕ್ತಿಯನ್ನು ಶಲ್ಯನು ಆಜ್ಯಧಾರೆಯನ್ನು ಸ್ವೀಕರಿಸುವಾಗ ಅಗ್ನಿಯು ಚಟಪಟ ಶಬ್ಧಮಾಡುವಂತೆ ಗರ್ಜಿಸಿ ಸ್ವೀಕರಿಸಿದನು. ಆ ಶಕ್ತಿಯು ಶಲ್ಯನ ಮರ್ಮಸ್ಥಳಗಳನ್ನು ಸೀಳಿ, ಶುಭ್ರ-ವಿಶಾಲ ಕವಚ-ವಕ್ಷಸ್ಥಲಗಳನ್ನು ಭೇದಿಸಿ, ಸರ್ವತ್ರ ವ್ಯಾಪಿ ನೃಪತಿಯ ಕೀರ್ತಿಯನ್ನು ದಹಿಸುತ್ತಾ, ತಡೆಯಿಲ್ಲದೇ ನೀರನ್ನು ಪ್ರವೇಶಿಸುವಂತೆ ಭೂಮಿಯನ್ನು ಹೊಕ್ಕಿತು. ಮೂಗು-ಕಣ್ಣು-ಕಿವಿ-ಮುಖಗಳಿಂದ ಮತ್ತು ಗಾಯಗಳಿಂದ ಪಸರಿಸುವ ರಕ್ತದಿಂದ ತೋಯ್ದುಹೋಗಿದ್ದ ಶಲ್ಯನ ಶರೀರವು ಸ್ಕಂದನಿಂದ ಪ್ರಹರಿಸಲ್ಪಟ್ಟ ಮಹಾದ್ರಿ ಕ್ರೌಂಚದಂತೆ ತೋರಿತು. ಯುಧಿಷ್ಠಿರನಿಂದ ಕವಚ ಒಡೆದಿದ್ದ ತುಂಡರಿಸಿದ್ದ ಶಲ್ಯನು ಮಹೇಂದ್ರನು ಪ್ರಯೋಗಿಸಿದ ಅಪ್ರತಿಮ ವಜ್ರದಿಂದ ಹತಗೊಂಡ ಪರ್ವತ ಶಿಖರದಂತೆ ಬಾಹುಗಳನ್ನು ಚಾಚಿ ರಥದಿಂದ ಭೂಮಿಯ ಮೇಲೆ ಬಿದ್ದನು. ಮದ್ರರಾಜನು ಬಾಹುಗಳನ್ನು ಚಾಚಿ ಎತ್ತರ ಇಂದ್ರಧ್ವಜವು ಬೀಳುವಂತೆ ಧರ್ಮರಾಜನ ಅಭಿಮುಖನಾಗಿಯೇ ಭೂಮಿಯ ಮೇಲೆ ಬಿದ್ದನು. ಸರ್ವಾಂಗಗಳಲ್ಲಿ ಗಾಯಗೊಂಡು ರಕ್ತದಿಂದ ತೋಯ್ದುಹೋಗಿದ್ದ ಆ ನರಪುಂಗವನು ಬೀಳಲು ಭೂಮಿಯು ಪ್ರೇಮದಿಂದ ಪ್ರಿಯ ಕಾಂತನು ಎದೆಯ ಮೇಲೆ ಬೀಳುವಾಗ ತಬ್ಬಿಕೊಳ್ಳುವಂತೆ ಅವನನ್ನು ಸ್ವೀಕರಿಸಿದಳು. ಪ್ರಿಯಕಾಂತೆಯಂತಿದ್ದ ವಸುಮತಿಯನ್ನು ಬಹುಕಾಲ ಭೋಗಿಸಿ ಅವಳನ್ನು ಸರ್ವಾಂಗಗಳಿಂದ ಆಲಿಂಗನಮಾಡಿಕೊಂಡು ಮಲಗಿರುವನೋ ಎನ್ನುವಂತೆ ಶಲ್ಯನು ತೋರುತ್ತಿದ್ದನು. ಧರ್ಮಯುದ್ಧದಲ್ಲಿ ಧರ್ಮಾತ್ಮಾ ಧರ್ಮಸೂನುವಿನಿಂದ ಹತನಾದ ಶಲ್ಯನು ಯಜ್ಞದಲ್ಲಿ ವಿಧಿಪೂರ್ವಕ ಆಜ್ಯಾಹುತಿಯನ್ನು ಪಡೆದು ಪೂಜಾದಿಗಳಿಂದ ಆರಾಧಿಸಲ್ಪಟ್ಟು ಪ್ರಶಾಂತನಾಗುವ ಅಗ್ನಿಯಂತೆ ಶಾಂತನಾದನು. ಶಕ್ತಿಯಿಂದ ಹೃದಯವು ಒಡೆದುಹೋಗಿದ್ದ, ಆಯುಧ-ಧ್ವಜಗಳು ವಿನಾಶಗೊಂಡು ಸುಶಾಂತನಾಗಿದ್ದ ಮದ್ರೇಶನನ್ನು ಲಕ್ಷ್ಮಿಯು ಬಿಟ್ಟು ಹೋಗಿರಲಿಲ್ಲ.