ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
Contents
Toggle೧೩೪
ಬಂದಿನ್ ಮತ್ತು ಅಷ್ಟಾವಕ್ರರ ನಡುವೆ ವಾದ; ಬಂದಿಯ ಸೋಲು (೧-೨೧). ಬಂದಿಯು ವರುಣನ ಮಗನೆಂದೂ, ತಂದೆಯ ಯಜ್ಞಕ್ಕೆ ಯೋಗ್ಯ ವಿಪ್ರರನ್ನು ಕಳುಹಿಸುತ್ತಿದ್ದನೆಂದೂ ತಿಳಿದುಬಂದುದು (೨೨-೨೫). ಕಹೋಡನು ಪುನಃ ಬದುಕಿ ಬರುವುದು; ಬಂದಿಯು ಸಾಗರವನ್ನು ಪ್ರವೇಶಿಸಿದುದು (೨೬-೩೯).
03134001 ಅಷ್ಟಾವಕ್ರ ಉವಾಚ|
03134001a ಅತ್ರೋಗ್ರಸೇನಸಮಿತೇಷು ರಾಜನ್|
ಸಮಾಗತೇಷ್ವಪ್ರತಿಮೇಷು ರಾಜಸು|
03134001c ನ ವೈ ವಿವಿತ್ಸಾಂತರಮಸ್ತಿ ವಾದಿನಾಂ|
ಮಹಾಜಲೇ ಹಂಸನಿನಾದಿನಾಮಿವ||
ಅಷ್ಟಾವಕ್ರನು ಹೇಳಿದನು: “ರಾಜನ್! ಈ ಉಗ್ರಸೇನೆಯ ಸಮಿತಿಯಲ್ಲಿ ಅಪ್ರತಿಮ ರಾಜರುಗಳ ಸಮಾವೇಶದಲ್ಲಿ ಮಹಾಸರೋವರದಲ್ಲಿ ಹಂಸಗಳ ನಿನಾದದಂತೆ ವಾದಿಗಳಿಗೆ ತಪ್ಪಿಸಿಕೊಂಡು ಹೋಗಲು ಅವಕಾಶವಿರಲಿಕ್ಕಿಲ್ಲ.
03134002a ನ ಮೇಽದ್ಯ ವಕ್ಷ್ಯಸ್ಯತಿವಾದಿಮಾನಿನ್|
ಗ್ಲಹಂ ಪ್ರಪನ್ನಃ ಸರಿತಾಮಿವಾಗಮಃ|
03134002c ಹುತಾಶನಸ್ಯೇವ ಸಮಿದ್ಧತೇಜಸಃ|
ಸ್ಥಿರೋ ಭವಸ್ವೇಹ ಮಮಾದ್ಯ ಬಂದಿನ್||
ಅತಿವಾದಿಯೆಂದು ತಿಳಿದವನು ಇಂದು ವೇಗವಾಗಿ ಹರಿಯುತ್ತಿರುವ ನದಿಯಂತೆ ನನ್ನನ್ನು ಕೊಚ್ಚಿಕೊಂಡು ಹೋಗದಿರಲಿ! ಸಮಿತ್ತನ್ನು ಸುಡುತ್ತಿರುವ ಅಗ್ನಿಯ ತೇಜಸ್ಸುಳ್ಳ ನನ್ನ ಮುಂದೆ ಬಂದು ನಿಲ್ಲು ಬಂದಿನ್!”
03134003 ಬಂದ್ಯುವಾಚ|
03134003a ವ್ಯಾಘ್ರಂ ಶಯಾನಂ ಪ್ರತಿ ಮಾ ಪ್ರಬೋಧಯ|
ಆಶೀವಿಷಂ ಸೃಕ್ಕಿಣೀ ಲೇಲಿಹಾನಂ|
03134003c ಪದಾಹತಸ್ಯೇವ ಶಿರೋಽಭಿಹತ್ಯ|
ನಾದಷ್ಟೋ ವೈ ಮೋಕ್ಷ್ಯಸೇ ತನ್ನಿಬೋಧ||
ಬಂದಿಯು ಹೇಳಿದನು: “ನಿದ್ದೆಯಲ್ಲಿದ್ದ ಹುಲಿಯನ್ನು ಅಥವಾ ತನ್ನ ಬಾಯಿಯನ್ನು ಸವರುತ್ತಿರುವ ವಿಷಭರಿತ ಹಾವನ್ನು ಕರೆದು ಎಬ್ಬಿಸಬೇಡ! ನಿನ್ನ ಪಾದದಿಂದ ಅವನ ತಲೆಯನ್ನು ಒದ್ದೆಯಾದರೆ ಅದು ಕಚ್ಚದೇ ಇರುವುದಿಲ್ಲ ಎನ್ನುವುದನ್ನು ಚೆನ್ನಾಗಿ ತಿಳಿದುಕೋ!
03134004a ಯೋ ವೈ ದರ್ಪಾತ್ಸಂಹನನೋಪಪನ್ನಃ|
ಸುದುರ್ಬಲಃ ಪರ್ವತಮಾವಿಹಂತಿ|
03134004c ತಸ್ಯೈವ ಪಾಣಿಃ ಸನಖೋ ವಿಶೀರ್ಯತೇ|
ನ ಚೈವ ಶೈಲಸ್ಯ ಹಿ ದೃಶ್ಯತೇ ವ್ರಣಃ||
ಗಟ್ಟಿಯಾದ ದೇಹವಿದ್ದರೂ ದುರ್ಬಲನಾಗಿ ದರ್ಪದಿಂದ ಪರ್ವತವನ್ನು ಹೊಡೆದರೆ ಅವನದೇ ಕೈ ಮತ್ತು ಉಗುರುಗಳು ಗಾಯಗೊಳ್ಳುತ್ತವೆ. ಆ ಪರ್ವತದ ಮೇಲೆ ಯಾವುದೇ ರೀತಿಯ ಗಾಯವು ಕಾಣುವುದಿಲ್ಲ.
03134005a ಸರ್ವೇ ರಾಜ್ಞೋ ಮೈಥಿಲಸ್ಯ ಮೈನಾಕಸ್ಯೇವ ಪರ್ವತಾಃ|
03134005c ನಿಕೃಷ್ಟಭೂತಾ ರಾಜಾನೋ ವತ್ಸಾ ಅನದುಹೋ ಯಥಾ||
ಮಿಥಿಲದ ರಾಜನಿಗೆ ಎಲ್ಲ ರಾಜರುಗಳು ಮೈನಾಕಪರ್ವತದಡಿಯಲ್ಲಿರುವ ಪರ್ವತಗಳಂತೆ. ಎತ್ತಿನ ಎದುರಿಗೆ ಕರುಗಳು ಹೇಗೋ ಹಾಗೆ ಈ ರಾಜರುಗಳು ಅವನಿಗಿಂತ ಚಿಕ್ಕವರು.””
03134006 ಲೋಮಶ ಉವಾಚ|
03134006a ಅಷ್ಟಾವಕ್ರಃ ಸಮಿತೌ ಗರ್ಜಮಾನೋ|
ಜಾತಕ್ರೋಧೋ ಬಂದಿನಮಾಹ ರಾಜನ್|
03134006c ಉಕ್ತೇ ವಾಕ್ಯೇ ಚೋತ್ತರಂ ಮೇ ಬ್ರವೀಹಿ|
ವಾಕ್ಯಸ್ಯ ಚಾಪ್ಯುತ್ತರಂ ತೇ ಬ್ರವೀಮಿ||
ಲೋಮಶನು ಹೇಳಿದನು: “ರಾಜನ್! ಆ ಸಮಿತಿಯಲ್ಲಿ ಕ್ರೋಧಿಷ್ಠನಾಗಿ ಅಷ್ಟಾವಕ್ರನು ಗರ್ಜಿಸುತ್ತಾ ಬಂದಿಗೆ ಹೇಳಿದನು: “ನಾನು ಹೇಳುವ ವಾಕ್ಯಕ್ಕೆ ಉತ್ತರವನ್ನು ಕೊಡು. ಮತ್ತು ನೀನು ಹೇಳಿದುದಕ್ಕೆ ನಾನು ಉತ್ತರವನ್ನು ಕೊಡುತ್ತೇನೆ.”
03134007 ಬಂದ್ಯುವಾಚ|
03134007a ಏಕ ಏವಾಗ್ನಿರ್ಬಹುಧಾ ಸಮಿಧ್ಯತೇ|
ಏಕಃ ಸೂರ್ಯಃ ಸರ್ವಮಿದಂ ಪ್ರಭಾಸತೇ|
03134007c ಏಕೋ ವೀರೋ ದೇವರಾಜೋ ನಿಹಂತಾ|
ಯಮಃ ಪಿತೄಣಾಮೀಶ್ವರಶ್ಚೈಕ ಏವ||
ಬಂದಿಯು ಹೇಳಿದನು: “ಒಂದೇ ಒಂದು ಅಗ್ನಿಯು ಬಹಳ ರೂಪಗಳಲ್ಲಿ ಉರಿಯುತ್ತದೆ. ಒಬ್ಬನೇ ಸೂರ್ಯನು ಇವೆಲ್ಲವನ್ನೂ ಬೆಳಗಿಸುತ್ತಾನೆ. ಒಬ್ಬನೇ ವೀರ ಸಂಹರಿಸುವ ದೇವರಾಜ. ಮತ್ತು ಪಿತೃಗಳ ಈಶ್ವರನೂ ಒಬ್ಬನೇ ಯಮ.”
03134008 ಅಷ್ಟಾವಕ್ರ ಉವಾಚ|
03134008a ದ್ವಾವಿಂದ್ರಾಗ್ನೀ ಚರತೋ ವೈ ಸಖಾಯೌ|
ದ್ವೌ ದೇವರ್ಷೀ ನಾರದಃ ಪರ್ವತಶ್ಚ|
03134008c ದ್ವಾವಶ್ವಿನೌ ದ್ವೇ ಚ ರಥಸ್ಯ ಚಕ್ರೇ|
ಭಾರ್ಯಾಪತೀ ದ್ವೌ ವಿಹಿತೌ ವಿಧಾತ್ರಾ||
ಅಷ್ಟಾವಕ್ರನು ಹೇಳಿದನು: “ಇಂದ್ರ ಮತ್ತು ಅಗ್ನಿಗಳೀರ್ವರು ಸಖರಂತೆ ನಡೆಯುತ್ತಾರೆ. ನಾರದ ಪರ್ವತರೆಂಬ ಇಬ್ಬರು ದೇವರ್ಷಿಗಳಿದ್ದಾರೆ. ಅಶ್ವಿನಿಯರಿಬ್ಬರು, ರಥಕ್ಕೆ ಚಕ್ರಗಳೆರಡು, ಮತ್ತು ವಿಧಾತ್ರನು ಪತಿ ಪತ್ನಿಯರೆಂದು ಇಬ್ಬರನ್ನು ಮಾಡಿದನು.”
03134009 ಬಂದ್ಯುವಾಚ|
03134009a ತ್ರಿಃ ಸೂಯತೇ ಕರ್ಮಣಾ ವೈ ಪ್ರಜೇಯಂ|
ತ್ರಯೋ ಯುಕ್ತಾ ವಾಜಪೇಯಂ ವಹಂತಿ|
03134009c ಅಧ್ವರ್ಯವಸ್ತ್ರಿಷವಣಾನಿ ತನ್ವತೇ|
ತ್ರಯೋ ಲೋಕಾಸ್ತ್ರೀಣಿ ಜ್ಯೋತೀಂಷಿ ಚಾಹುಃ||
ಬಂದಿಯು ಹೇಳಿದನು: “ಈ ಪ್ರಜೆಗಳು ಮೂರು ಕರ್ಮಗಳಿಂದ ಹುಟ್ಟುತ್ತಾರೆ. ಮೂರು ವೇದಗಳು ಸೇರಿ ವಾಜಪೇಯವೆನಿಸುತ್ತದೆ. ಅಧ್ವರ್ಯರು ಮೂರು ಬಾರಿ ಒತ್ತುತ್ತಾರೆ. ಮೂರು ಲೋಕಗಳು ಮತ್ತು ಮೂರು ಜ್ಯೋತಿಗಳಿವೆ ಎಂದು ಹೇಳುತ್ತಾರೆ.”
03134010 ಅಷ್ಟಾವಕ್ರ ಉವಾಚ|
03134010a ಚತುಷ್ಟಯಂ ಬ್ರಾಹ್ಮಣಾನಾಂ ನಿಕೇತಂ|
ಚತ್ವಾರೋ ಯುಕ್ತಾ ಯಜ್ಞಮಿಮಂ ವಹಂತಿ|
03134010c ದಿಶಶ್ಚತಸ್ರಶ್ಚತುರಶ್ಚ ವರ್ಣಾಶ್|
ಚತುಷ್ಪದಾ ಗೌರಪಿ ಶಶ್ವದುಕ್ತಾ||
ಅಷ್ಟಾವಕ್ರನು ಹೇಳಿದನು: “ಬ್ರಾಹ್ಮಣರಿಗೆ ನಾಲ್ಕು ಘಟ್ಟಗಳಿವೆ, ನಾಲ್ವರು ಸೇರಿ ಈ ಯಜ್ಞವನ್ನು ನಡೆಸುತ್ತಾರೆ. ದಿಕ್ಕುಗಳು ನಾಲ್ಕು. ನಾಲ್ಕು ವರ್ಣಗಳು ಮತ್ತು ಗೋವಿಗೆ ನಾಲ್ಕು ಕಾಲುಗಳಿವೆ ಎಂದು ಸದಾ ಹೇಳುತ್ತಾರೆ.”
03134011 ಬಂದ್ಯುವಾಚ|
03134011a ಪಂಚಾಗ್ನಯಃ ಪಂಚಪದಾ ಚ ಪಂಕ್ತ್ತಿರ್|
ಯಜ್ಞಾಃ ಪಂಚೈವಾಪ್ಯಥ ಪಂಚೇಂದ್ರಿಯಾಣಿ|
03134011c ದೃಷ್ಟಾ ವೇದೇ ಪಂಚಚೂಡಾಶ್ಚ ಪಂಚ|
ಲೋಕೇ ಖ್ಯಾತಂ ಪಂಚನದಂ ಚ ಪುಣ್ಯಂ||
ಬಂದಿಯು ಹೇಳಿದನು: “ಅಗ್ನಿಗಳು ಐದು ಮತ್ತು ಪಂಕ್ತಿಗೆ ಐದು ಪಾದಗಳು. ಯಜ್ಞಗಳು ಐದು ವಿಧದವು ಮತ್ತು ಇಂದ್ರಿಯಗಳು ಐದು. ವೇದಗಳಲ್ಲಿ ಕಾಣುವವು ಐದು ಮತ್ತು ಚೂಡಗಳೂ ಐದು. ಲೋಕದಲ್ಲಿ ಪುಣ್ಯವೆಂದು ಐದು ನದಿಗಳು ಪ್ರಖ್ಯಾತವಾಗಿವೆ.”
03134012 ಅಷ್ಟಾವಕ್ರ ಉವಾಚ|
03134012a ಷಡಾಧಾನೇ ದಕ್ಷಿಣಾಮಾಹುರೇಕೇ|
ಷಡೇವೇಮೇ ಋತವಃ ಕಾಲಚಕ್ರಂ|
03134012c ಷಡಿಂದ್ರಿಯಾಣ್ಯುತ ಷಟ್ಕೃತ್ತಿಕಾಶ್ಚ|
ಷಟ್ಸಾದ್ಯಸ್ಕಾಃ ಸರ್ವವೇದೇಷು ದೃಷ್ಟಾಃ||
ಅಷ್ಟಾವಕ್ರನು ಹೇಳಿದನು: “ಅಗ್ನಿಯನ್ನು ಇಡುವುದಕ್ಕೆ ಆರು ಆಕಳುಗಳನ್ನು ದಾನವನ್ನಾಗಿ ನೀಡಬೇಕು. ಕಾಲಚಕ್ರದಲ್ಲಿ ಆರೇ ಋತುಗಳಿವೆ. ಇಂದ್ರಿಯಗಳು ಆರು. ಕೃತ್ತಿಕಗಳು ಆರು. ಸರ್ವ ವೇದಗಳಲ್ಲಿ ಕಂಡುಬಂದಂತೆ ಸಾಧ್ಯಕರು ಆರು ಮಂದಿ.”
03134013 ಬಂದ್ಯುವಾಚ|
03134013a ಸಪ್ತ ಗ್ರಾಮ್ಯಾಃ ಪಶವಃ ಸಪ್ತ ವನ್ಯಾಃ|
ಸಪ್ತ ಚಂದಾಂಸಿ ಕ್ರತುಮೇಕಂ ವಹಂತಿ|
03134013c ಸಪ್ತರ್ಷಯಃ ಸಪ್ತ ಚಾಪ್ಯರ್ಹಣಾನಿ|
ಸಪ್ತತಂತ್ರೀ ಪ್ರಥಿತಾ ಚೈವ ವೀಣಾ||
ಬಂದಿಯು ಹೇಳಿದನು: “ಏಳು ಬಗೆಯ ಪಳಗಿಸಿದ ಮತ್ತು ಏಳು ಬಗೆಯ ವನ್ಯ ಪಶುಗಳಿವೆ. ಏಳು ಚಂದಸ್ಸುಗಳು ಒಂದು ಕ್ರತುವನ್ನು ಮಾಡುತ್ತವೆ. ಋಷಿಗಳು ಏಳು. ಏಳು ಗೌರವಗಳು. ವೀಣೆಯಲ್ಲಿ ಸಪ್ತ ತಂತ್ರಿಗಳಿವೆ ಎಂದು ಪ್ರಥಿತವಾಗಿದೆ.”
03134014 ಅಷ್ಟಾವಕ್ರ ಉವಾಚ|
03134014a ಅಷ್ಟೌ ಶಾಣಾಃ ಶತಮಾನಂ ವಹಂತಿ|
ತಥಾಷ್ಟಪಾದಃ ಶರಭಃ ಸಿಂಹಘಾತೀ|
03134014c ಅಷ್ಟೌ ವಸೂಂ ಶುಶ್ರುಮ ದೇವತಾಸು|
ಯೂಪಶ್ಚಾಷ್ಟಾಸ್ರಿರ್ವಿಹಿತಃ ಸರ್ವಯಜ್ಞಃ||
ಅಷ್ಟಾವಕ್ರನು ಹೇಳಿದನು: “ಎಂಟು ಶಾಣಗಳು ಸೇರಿ ಒಂದು ನೂರಾಗುತ್ತದೆ. ಸಿಂಹವನ್ನು ಕೊಲ್ಲುವ ಶರಭಕ್ಕೆ ಎಂಟು ಕಾಲುಗಳಿವೆ. ದೇವತೆಗಳಲ್ಲಿ ವಸುಗಳು ಎಂಟು ಎಂದು ಕೇಳಿದ್ದೇವೆ. ಸರ್ವಯಜ್ಞವು ಎಂಟು ಯೂಪಗಳನ್ನು ಹೊಂದಿದೆ.”
03134015 ಬಂದ್ಯುವಾಚ|
03134015a ನವೈವೋಕ್ತಾಃ ಸಾಮಿಧೇನ್ಯಃ ಪಿತೄಣಾಂ|
ತಥಾ ಪ್ರಾಹುರ್ನವಯೋಗಂ ವಿಷರ್ಗಂ|
03134015c ನವಾಕ್ಷರಾ ಬೃಹತೀ ಸಂಪ್ರದಿಷ್ಟಾ|
ನವಯೋಗೋ ಗಣನಾಮೇತಿ ಶಶ್ವತ್||
ಬಂದಿಯು ಹೇಳಿದನು: “ಪಿತೃಗಳಿಗೆ ಒಂಭತ್ತು ಸಾಮಿಧಗಳನ್ನು ಹೇಳುತ್ತಾರೆ. ಸೃಷ್ಟಿಯು ಒಂಭತ್ತು ಹಂತಗಳಲ್ಲಿ ನಡೆಯುತ್ತದೆ ಎಂದು ಹೇಳುತ್ತಾರೆ. ಬೃಹತಿ ಸಂಪ್ರದಿಷ್ಟದಲ್ಲಿ ಒಂಭತ್ತು ಅಕ್ಷರಗಳಿವೆ. ಲೆಕ್ಕದಲ್ಲಿ ಶಾಶ್ವತವಾಗಿ ಒಂಭತ್ತೇ ಇರುವುದು.”
03134016 ಅಷ್ಟಾವಕ್ರ ಉವಾಚ|
03134016a ದಶಾ ದಶೋಕ್ತಾಃ ಪುರುಷಸ್ಯ ಲೋಕೇ|
ಸಹಸ್ರಮಾಹುರ್ದಶ ಪೂರ್ಣಂ ಶತಾನಿ|
03134016c ದಶೈವ ಮಾಸಾನ್ಬಿಭ್ರತಿ ಗರ್ಭವತ್ಯೋ|
ದಶೇರಕಾ ದಶ ದಾಶಾ ದಶಾರ್ಣಾಃ||
ಅಷ್ಟಾವಕ್ರನು ಹೇಳಿದನು: “ಲೋಕದಲ್ಲಿ ಪುರುಷನಿಗೆ ಹತ್ತು ದಶೆಗಳಿವೆ ಎಂದು ಹೇಳುತ್ತಾರೆ. ಒಂದು ಸಾವಿರದಲ್ಲಿ ಸಂಪೂರ್ಣವಾಗಿ ಹತ್ತು ನೂರುಗಳಿವೆ ಎಂದು ಹೇಳುತ್ತಾರೆ. ಗರ್ಭವತಿಯು ಹತ್ತು ತಿಂಗಳುಗಳು ಗರ್ಭವನ್ನು ಧರಿಸುತ್ತಾಳೆ. ಇರಕಗಳು ಹತ್ತು. ದಾಶರು ಹತ್ತು ಮತ್ತು ಆರ್ಣರು ಹತ್ತು.”
03134017 ಬಂದ್ಯುವಾಚ|
03134017a ಏಕಾದಶೈಕಾದಶಿನಃ ಪಶೂನಾಂ|
ಏಕಾದಶೈವಾತ್ರ ಭವಂತಿ ಯೂಪಾಃ|
03134017c ಏಕಾದಶ ಪ್ರಾಣಭೃತಾಂ ವಿಕಾರಾ|
ಏಕಾದಶೋಕ್ತಾ ದಿವಿ ದೇವೇಷು ರುದ್ರಾಃ||
ಬಂದಿಯು ಹೇಳಿದನು: “ಏಕಾದಶಿಗೆ ಹನ್ನೊಂದು ಪಶುಗಳು, ಅದರಲ್ಲಿ ಹನ್ನೊಂದು ಯೂಪಗಳೂ ಇರುತ್ತವೆ. ಪ್ರಾಣವಿರುವಕ್ಕೆ ವಿಕಾರಗಳು ಹನ್ನೊಂದು. ದಿವಿಯ ದೇವರಲ್ಲಿ ಹನ್ನೊಂದು ರುದ್ರರನ್ನು ಎಣಿಸುತ್ತಾರೆ.”
03134018 ಅಷ್ಟಾವಕ್ರ ಉವಾಚ|
03134018a ಸಂವತ್ಸರಂ ದ್ವಾದಶ ಮಾಸಮಾಹುರ್|
ಜಗತ್ಯಾಃ ಪಾದೋ ದ್ವಾದಶೈವಾಕ್ಷರಾಣಿ|
03134018c ದ್ವಾದಶಾಹಃ ಪ್ರಾಕೃತೋ ಯಜ್ಞ ಉಕ್ತೋ|
ದ್ವಾದಶಾದಿತ್ಯಾನ್ಕಥಯಂತೀಹ ವಿಪ್ರಾಃ||
ಅಷ್ಟಾವಕ್ರನು ಹೇಳಿದನು: “ಒಂದು ಸಂವತ್ಸರದಲ್ಲಿ ಹನ್ನೆರಡು ತಿಂಗಳುಗಳಿವೆ ಎಂದು ಹೇಳುತ್ತಾರೆ. ಜಗತಿಯ ಪಾದದಲ್ಲಿ ಅಕ್ಷರಗಳು ಹನ್ನೆರಡು. ಪ್ರಾಕೃತ ಯಜ್ಞವು ಹನ್ನೆರಡು ದಿನಗಳು ನಡೆಯುತ್ತವೆ ಎಂದು ಹೇಳುತ್ತಾರೆ. ವಿಪ್ರರು ಹನ್ನೆರಡು ಆದಿತ್ಯರಿದ್ದಾರೆಂದು ಹೇಳುತ್ತಾರೆ.”
03134019 ಬಂದ್ಯುವಾಚ|
03134019a ತ್ರಯೋದಶೀ ತಿಥಿರುಕ್ತಾ ಮಹೋಗ್ರಾ|
ತ್ರಯೋದಶದ್ವೀಪವತೀ ಮಹೀ ಚ|
ಬಂದಿಯು ಹೇಳಿದನು: “ತ್ರಯೋದಶೀ ತಿಥಿಯು ಮಹಾ ಉಗ್ರವೆಂದು ಹೇಳುತ್ತಾರೆ. ಈ ಭೂಮಿಯು ಹದಿಮೂರು ದ್ವೀಪಗಳನ್ನು ಹೊಂದಿದೆ.””
03134020 ಲೋಮಶ ಉವಾಚ|
03134020a ಏತಾವದುಕ್ತ್ವಾ ವಿರರಾಮ ಬಂದೀ|
ಶ್ಲೋಕಸ್ಯಾರ್ಧಂ ವ್ಯಾಜಹಾರಾಷ್ಟವಕ್ರಃ|
03134020c ತ್ರಯೋದಶಾಹಾನಿ ಸಸಾರ ಕೇಶೀ|
ತ್ರಯೋದಶಾದೀನ್ಯತಿಚ್ಚಂದಾಂಸಿ ಚಾಹುಃ||
ಲೋಮಶನು ಹೇಳಿದನು: “ಇದನ್ನು ಹೇಳಿ ಬಂದಿಯು ನಿಲ್ಲಿಸಿದನು. ಆ ಶ್ಲೋಕದ ಇನ್ನೊಂದು ಅರ್ಧವನ್ನು ಅಷ್ಟಾವಕ್ರನು ಸಂಪೂರ್ಣಮಾಡಿದನು: “ಕೇಶಿಯು ಹದಿಮೂರು ದಿನಗಳು ಹೋರಾಡಿದನು. ಅತಿಚ್ಚಂದಾಂಸಿಯು ಹದಿಮೂರರಿಂದ ಪ್ರಾರಂಭವಾಗುತ್ತದೆ ಎಂದು ಹೇಳುತ್ತಾರೆ.”
03134021a ತತೋ ಮಹಾನುದತಿಷ್ಠನ್ನಿನಾದಸ್|
ತೂಷ್ಣೀಂಭೂತಂ ಸೂತಪುತ್ರಂ ನಿಶಮ್ಯ|
03134021c ಅಧೋಮುಖಂ ಧ್ಯಾನಪರಂ ತದಾನೀಂ|
ಅಷ್ಟಾವಕ್ರಂ ಚಾಪ್ಯುದೀರ್ಯಂತಮೇವ||
ಸೂತಪುತ್ರನು ಸುಮ್ಮನಾಗಿದ್ದುದನ್ನು, ಅವನು ತಲೆತಗ್ಗಿಸಿ ನಿಂತಿದುದನ್ನು, ಮತ್ತು ಅಷ್ಟಾವಕ್ರನು ಮುಂದುವರೆದುದನ್ನು ನೋಡಿ ಅತಿ ದೊಡ್ಡ ನಿನಾದವು ಹುಟ್ಟಿಬಂದಿತು.
03134022a ತಸ್ಮಿಂಸ್ತಥಾ ಸಂಕುಲೇ ವರ್ತಮಾನೇ|
ಸ್ಫೀತೇ ಯಜ್ಞೇ ಜನಕಸ್ಯಾಥ ರಾಜ್ಞಃ|
03134022c ಅಷ್ಟಾವಕ್ರಂ ಪೂಜಯಂತೋಽಭ್ಯುಪೇಯುರ್|
ವಿಪ್ರಾಃ ಸರ್ವೇ ಪ್ರಾಂಜಲಯಃ ಪ್ರತೀತಾಃ||
ರಾಜ ಜನಕನ ಆ ಸಮೃದ್ಧ ಯಜ್ಞದಲ್ಲಿ ಈ ರೀತಿಯ ತುಮುಲವು ನಡೆಯುತ್ತಿರುವಾಗ, ಎಲ್ಲ ವಿಪ್ರರೂ ಕೈಮುಗಿದು ಅಷ್ಟಾವಕ್ರನನ್ನು ಗೌರವಿಸಲು ಮುಂದಾದರು.
03134023 ಅಷ್ಟಾವಕ್ರ ಉವಾಚ|
03134023a ಅನೇನ ವೈ ಬ್ರಾಹ್ಮಣಾಃ ಶುಶ್ರುವಾಂಸೋ|
ವಾದೇ ಜಿತ್ವಾ ಸಲಿಲೇ ಮಜ್ಜಿತಾಃ ಕಿಲ|
03134023c ತಾನೇವ ಧರ್ಮಾನಯಮದ್ಯ ಬಂದೀ|
ಪ್ರಾಪ್ನೋತು ಗೃಹ್ಯಾಪ್ಸು ನಿಮಜ್ಜಯೈನಂ||
ಅಷ್ಟಾವಕ್ರನು ಹೇಳಿದನು: “ವಾದದಲ್ಲಿ ಸೋತ ಅನೇಕ ಬ್ರಾಹ್ಮಣರನ್ನು ಇವನು ನೀರಿನಲ್ಲಿ ಮುಳುಗಿಸಿದ್ದಾನೆ ಎಂದು ಕೇಳಿದ್ದೇನೆ. ಇಂದು ಬಂದಿಯು ಅದೇ ಧರ್ಮವನ್ನು ಅನುಸರಿಸಲಿ. ಅವನನ್ನೂ ಹಿಡಿದು ಮುಳುಗಿಸಿ.”
03134024 ಬಂದ್ಯುವಾಚ|
03134024a ಅಹಂ ಪುತ್ರೋ ವರುಣಸ್ಯೋತ ರಾಜ್ಞಸ್|
ತತ್ರಾಸ ಸತ್ರಂ ದ್ವಾದಶವಾರ್ಷಿಕಂ ವೈ|
03134024c ಸತ್ರೇಣ ತೇ ಜನಕ ತುಲ್ಯಕಾಲಂ|
ತದರ್ಥಂ ತೇ ಪ್ರಹಿತಾ ಮೇ ದ್ವಿಜಾಗ್ರ್ಯಾಃ||
ಬಂದಿಯು ಹೇಳಿದನು: “ನಾನು ರಾಜಾ ವರುಣನ ಮಗ. ಅಲ್ಲಿ ಅವನ ಹನ್ನೆರಡು ವರ್ಷಗಳ ಸತ್ರವು ನಡೆಯುತ್ತಿದೆ. ಜನಕ! ನಿನ್ನ ಸತ್ರಕ್ಕೆ ಸರಿಸಮನಾಗಿ ನಡೆಯುತ್ತಿರುವ ಅದಕ್ಕಾಗಿ ನಾನು ದ್ವಿಜಾಗ್ರರನ್ನು ಅಲ್ಲಿಗೆ ಕಳುಹಿಸುತ್ತಿದ್ದೆ.
03134025a ಏತೇ ಸರ್ವೇ ವರುಣಸ್ಯೋತ ಯಜ್ಞಂ|
ದ್ರಷ್ಟುಂ ಗತಾ ಇಹ ಆಯಾಂತಿ ಭೂಯಃ|
03134025c ಅಷ್ಟಾವಕ್ರಂ ಪೂಜಯೇ ಪೂಜನೀಯಂ|
ಯಸ್ಯ ಹೇತೋರ್ಜನಿತಾರಂ ಸಮೇಷ್ಯೇ||
ವರುಣನ ಯಜ್ಞವನ್ನು ನೋಡಲು ಹೋಗಿರುವ ಅವರೆಲ್ಲರೂ ಪುನಃ ಹಿಂದಿರುಗಿ ಬರುತ್ತಾರೆ. ಪೂಜನೀಯನಾದ ಅಷ್ಟಾವಕ್ರನನ್ನು ಪೂಜಿಸುತ್ತೇನೆ. ಯಾಕೆಂದರೆ ಅವನ ಕಾರಣದಿಂದ ನಾನು ನನ್ನ ತಂದೆಯನ್ನು ಸೇರುತ್ತೇನೆ.”
03134026 ಅಷ್ಟಾವಕ್ರ ಉವಾಚ|
03134026a ವಿಪ್ರಾಃ ಸಮುದ್ರಾಂಭಸಿ ಮಜ್ಜಿತಾಸ್ತೇ|
ವಾಚಾ ಜಿತಾ ಮೇಧಯಾ ಆವಿದಾನಾಃ|
03134026c ತಾಂ ಮೇಧಯಾ ವಾಚಮಥೋಜ್ಜಹಾರ|
ಯಥಾ ವಾಚಮವಚಿನ್ವಂತಿ ಸಂತಃ||
ಅಷ್ಟಾವಕ್ರನು ಹೇಳಿದನು: “ನಿನ್ನಿಂದ ಸಮುದ್ರದಲ್ಲಿ ಮುಳುಗಿಸಲ್ಪಟ್ಟ ವಿಪ್ರರು ಕಲಿತವರಾಗಿದ್ದರೂ ಬುದ್ಧಿ ಮತ್ತು ಮಾತುಗಳಲ್ಲಿ ಸೋತರು. ಸಂತರು ಯೋಚನೆಮಾಡಿ ಮಾತನಾಡುವಂತೆ ನಾನು ಅವರನ್ನು ಮಾತಿನ ಮೂಲಕ ನೀರಿನಿಂದ ಮೇಲೆ ಎತ್ತಿದ್ದೇನೆ.
03134027a ಅಗ್ನಿರ್ದಹಂ ಜಾತವೇದಾಃ ಸತಾಂ ಗೃಹಾನ್|
ವಿಸರ್ಜಯಂಸ್ತೇಜಸಾ ನ ಸ್ಮ ಧಾಕ್ಷೀತ್|
03134027c ಬಾಲೇಷು ಪುತ್ರೇಷು ಕೃಪಣಂ ವದತ್ಸು|
ತಥಾ ವಾಚಮವಚಿನ್ವಂತಿ ಸಂತಃ||
ಜಾತವೇದಾಗ್ನಿಯು ಸತ್ಯವಂತರ ಮನೆಗಳನ್ನು ಹೇಗೆ ಸುಡುವುದಿಲ್ಲವೋ ಹಾಗೆ ಬಾಲಕ ಪುತ್ರರು ಕೃಪಣ ಮಾತುಗಳನ್ನಾಡಿದರೆ ಸಂತರು ಆ ಮಾತುಗಳ ಕುರಿತು ಯೋಚಿಸಬೇಕು.
03134028a ಶ್ಲೇಷ್ಮಾತಕೀ ಕ್ಷೀಣವರ್ಚಾಃ ಶೃಣೋಷಿ|
ಉತಾಹೋ ತ್ವಾಂ ಸ್ತುತಯೋ ಮಾದಯಂತಿ|
03134028c ಹಸ್ತೀವ ತ್ವಂ ಜನಕ ವಿತುದ್ಯಮಾನೋ|
ನ ಮಾಮಿಕಾಂ ವಾಚಮಿಮಾಂ ಶೃಣೋಷಿ||
ಶ್ಲೇಷ್ಮಾತಕಿಯಿಂದ ನಿನ್ನ ವರ್ಚಸ್ಸು ಕ್ಷೀಣವಾಗಿದೆಯೋ ಅಥವಾ ನೀನು ಕೇಳಿದ ಹೊಗಳಿಕೆಗಳಿಂದ ಮತ್ತೇರಿದೆಯೋ? ಜನಕ! ನೀನು ಮಾವುತನಿಂದ ಸೂಚಿತಗೊಂಡ ಆನೆಯಂತಿದ್ದೀಯೆ. ನನ್ನ ಈ ಮಾತುಗಳನ್ನು ಕೇಳಬೇಡ.”
03134029 ಜನಕ ಉವಾಚ|
03134029a ಶೃಣೋಮಿ ವಾಚಂ ತವ ದಿವ್ಯರೂಪಾಂ|
ಅಮಾನುಷೀಂ ದಿವ್ಯರೂಪೋಽಸಿ ಸಾಕ್ಷಾತ್|
03134029c ಅಜೈಷೀರ್ಯದ್ಬಂದಿನಂ ತ್ವಂ ವಿವಾದೇ|
ನಿಸೃಷ್ಟ ಏಷ ತವ ಕಾಮೋಽದ್ಯ ಬಂದೀ||
ಜನಕನು ಹೇಳಿದನು: “ನಿನ್ನ ದಿವ್ಯರೂಪೀ ಮಾತನ್ನು ಕೇಳುತ್ತಿದ್ದೇನೆ. ನೀನು ಅಮಾನುಷಿಯಾಗಿದ್ದು ಸಾಕ್ಷಾತ್ ದಿವ್ಯರೂಪಿಯಾಗಿದ್ದೀಯೆ. ಬಂದಿಯನ್ನು ನೀನು ವಿವಾದದಲ್ಲಿ ಸೋಲಿಸಿದ್ದೀಯೆ. ಈಗ ನೀನು ಬಂದಿಯನ್ನು ನಿನಗಿಷ್ಟವಾದಹಾಗೆ ಬಿಡು.”
03134030 ಅಷ್ಟಾವಕ್ರ ಉವಾಚ|
03134030a ನಾನೇನ ಜೀವತಾ ಕಶ್ಚಿದರ್ಥೋ ಮೇ ಬಂದಿನಾ ನೃಪ|
03134030c ಪಿತಾ ಯದ್ಯಸ್ಯ ವರುಣೋ ಮಜ್ಜಯೈನಂ ಜಲಾಶಯೇ||
ಅಷ್ಟಾವಕ್ರನು ಹೇಳಿದನು: “ರಾಜನ್! ಈ ಬಂದಿಯು ಜೀವಿತವಿರುವುದರಿಂದ ನನಗೇನೂ ಪ್ರಯೋಜನವಿಲ್ಲ. ವರುಣನು ಅವನ ತಂದೆಯಾದರೆ ಅವನನ್ನು ಜಲಾಶಯದಲ್ಲಿ ಮುಳುಗಿಸು.”
03134031 ಬಂದ್ಯುವಾಚ|
03134031a ಅಹಂ ಪುತ್ರೋ ವರುಣಸ್ಯೋತ ರಾಜ್ಞೋ|
ನ ಮೇ ಭಯಂ ಸಲಿಲೇ ಮಜ್ಜಿತಸ್ಯ|
03134031c ಇಮಂ ಮುಹೂರ್ತಂ ಪಿತರಂ ದ್ರಕ್ಷ್ಯತೇಽಯಂ|
ಅಷ್ಟಾವಕ್ರಶ್ಚಿರನಷ್ಟಂ ಕಹೋಡಂ||
ಬಂದಿಯು ಹೇಳಿದನು: “ರಾಜನ್! ನಾನು ವರುಣನ ಮಗ. ನೀರಿನಲ್ಲಿ ಮುಳುಗುವುದಕ್ಕೆ ನನಗೆ ಭಯವಿಲ್ಲ. ಸ್ವಲ್ಪಯೇ ಸಮಯದಲ್ಲಿ ಅಷ್ಟಾವಕ್ರನು ಬಹುಕಾಲದ ಹಿಂದೆ ಕಳೆದುಕೊಂಡಿದ್ದ ತನ್ನ ತಂದೆ ಕಹೋಡನನ್ನು ಕಾಣುತ್ತಾನೆ.””
03134032 ಲೋಮಶ ಉವಾಚ|
03134032a ತತಸ್ತೇ ಪೂಜಿತಾ ವಿಪ್ರಾ ವರುಣೇನ ಮಹಾತ್ಮನಾ|
03134032c ಉದತಿಷ್ಠಂತ ತೇ ಸರ್ವೇ ಜನಕಸ್ಯ ಸಮೀಪತಃ||
ಲೋಮಶನು ಹೇಳಿದನು: “ಅನಂತರ ಮಹಾತ್ಮ ವರುಣನಿಂದ ಪೂಜಿತರಾದ ವಿಪ್ರರೆಲ್ಲರೂ ಜನಕನ ಮುಂದೆ ಎದ್ದುನಿಂತರು.
03134033 ಕಹೋಡ ಉವಾಚ
03134033a ಇತ್ಯರ್ಥಮಿಚ್ಚಂತಿ ಸುತಾಂ ಜನಾ ಜನಕ ಕರ್ಮಣಾ|
03134033c ಯದಹಂ ನಾಶಕಂ ಕರ್ತುಂ ತತ್ಪುತ್ರಃ ಕೃತವಾನ್ಮಮ||
ಕಹೋಡನು ಹೇಳಿದನು: “ಜನಕ! ಇದಕ್ಕಾಗಿಯೇ ಜನರು ತಮ್ಮ ಕರ್ಮಗಳಿಂದ ಮಕ್ಕಳನ್ನು ಬಯಸುತ್ತಾರೆ. ನಾನು ಮಾಡಲಿಕ್ಕೆ ಅಸಾಧ್ಯವಾದುದನ್ನು ನನ್ನ ಮಗನು ಮಾಡಿದ್ದಾನೆ.
03134034a ಉತಾಬಲಸ್ಯ ಬಲವಾನುತ ಬಾಲಸ್ಯ ಪಂಡಿತಃ|
03134034c ಉತ ವಾವಿದುಷೋ ವಿದ್ವಾನ್ಪುತ್ರೋ ಜನಕ ಜಾಯತೇ||
ಜನಕ! ಅಬಲನಿಗೆ ಬಲವಂತನು ಜನಿಸಿದ್ದಾನೆ, ದಡ್ಡನಿಗೆ ಪಂಡಿತನು ಜನಿಸಿದ್ದಾನೆ ಮತ್ತು ತಿಳಿಯದೇ ಇದ್ದವನಿಗೆ ತಿಳಿದ ಮಗನು ಜನಿಸಿದ್ದಾನೆ.”
03134035 ಬಂದ್ಯುವಾಚ|
03134035a ಶಿತೇನ ತೇ ಪರಶುನಾ ಸ್ವಯಮೇವಾಂತಕೋ ನೃಪ|
03134035c ಶಿರಾಂಸ್ಯಪಾಹರತ್ವಾಜೌ ರಿಪೂಣಾಂ ಭದ್ರಮಸ್ತು ತೇ||
ಬಂದಿಯು ಹೇಳಿದನು: “ಹರಿತ ಪರಶುವಿನಿಂದ ಸ್ವಯಂ ಅಂತಕನು ನಿನ್ನ ಶತ್ರುಗಳ ಶಿರವನ್ನು ಕತ್ತರಿಸುತ್ತಾನೆ. ರಾಜ! ನಿನಗೆ ರಕ್ಷಣೆಯಿರಲಿ!””
03134037 ಲೋಮಶ ಉವಾಚ|
03134036a ಮಹದುಕ್ಥ್ಯಂ ಗೀಯತೇ ಸಾಮ ಚಾಗ್ರ್ಯಂ|
ಸಮ್ಯಕ್ಸೋಮಃ ಪೀಯತೇ ಚಾತ್ರ ಸತ್ರೇ|
03134036c ಶುಚೀನ್ಭಾಗಾನ್ಪ್ರತಿಜಗೃಹುಶ್ಚ ಹೃಷ್ಟಾಃ|
ಸಾಕ್ಷಾದ್ದೇವಾ ಜನಕಸ್ಯೇಹ ಯಜ್ಞೇ||
ಲೋಮಶನು ಹೇಳಿದನು: “ಮಹಾ ಉಕ್ಥವನ್ನು ಹಾಗೂ ಮಹಾ ಸಾಮವನ್ನು ಹಾಡಲಾಯಿತು. ಆ ಸತ್ರದಲ್ಲಿ ಚೆನ್ನಾಗಿ ಸೋಮವನ್ನು ಕುಡಿಯಲಾಯಿತು. ಜನಕನ ಯಜ್ಞದಲ್ಲಿ ಸಂತೋಷಗೊಂಡ ಸಾಕ್ಷಾತ್ ದೇವತೆಗಳು ಶುಚಿಯಾದ ತಮ್ಮ ತಮ್ಮ ಭಾಗಗಳನ್ನು ಸ್ವೀಕರಿಸಿದರು.
03134037a ಸಮುತ್ಥಿತೇಷ್ವಥ ಸರ್ವೇಷು ರಾಜನ್|
ವಿಪ್ರೇಷು ತೇಷ್ವಧಿಕಂ ಸುಪ್ರಭೇಷು|
03134037c ಅನುಜ್ಞಾತೋ ಜನಕೇನಾಥ ರಾಜ್ಞಾ|
ವಿವೇಶ ತೋಯಂ ಸಾಗರಸ್ಯೋತ ಬಂದೀ||
ರಾಜನ್! ಎಲ್ಲ ವಿಪ್ರರೂ ಮೊದಲಿಗಿಂತ ಪ್ರಕಾಶಮಾನರಾಗಿ ಮೇಲೆದ್ದ ನಂತರ ರಾಜಾ ಜನಕನ ಅನುಜ್ಞೆಯನ್ನು ಪಡೆದು ಬಂದಿಯು ಸಾಗರದ ನೀರನ್ನು ಪ್ರವೇಶಿಸಿದನು.
03134038a ಅಷ್ಟಾವಕ್ರಃ ಪಿತರಂ ಪೂಜಯಿತ್ವಾ|
ಸಂಪೂಜಿತೋ ಬ್ರಾಹ್ಮಣೈಸ್ತೈರ್ಯಥಾವತ್|
03134038c ಪ್ರತ್ಯಾಜಗಾಮಾಶ್ರಮಮೇವ ಚಾಗ್ರ್ಯಂ|
ಜಿತ್ವಾ ಬಂದಿಂ ಸಹಿತೋ ಮಾತುಲೇನ||
ಅಷ್ಟಾವಕ್ರನು ತಂದೆಯನ್ನು ಪೂಜಿಸಿ, ಯಥಾವತ್ತಾಗಿ ಬ್ರಾಹ್ಮಣರಿಂದ ಪೂಜಿಸಿಕೊಂಡು, ತನ್ನ ಮಾವನೊಡನೆ ಬಂದಿಯನ್ನು ಸೋಲಿಸಿ ತನ್ನ ಉತ್ತಮ ಆಶ್ರಮಕ್ಕೆ ಹಿಂದಿರುಗಿದನು[1].
03134039a ಅತ್ರ ಕೌಂತೇಯ ಸಹಿತೋ ಭ್ರಾತೃಭಿಸ್ತ್ವಂ|
ಸುಖೋಷಿತಃ ಸಹ ವಿಪ್ರೈಃ ಪ್ರತೀತಃ|
03134039c ಪುಣ್ಯಾನ್ಯನ್ಯಾನಿ ಶುಚಿಕರ್ಮೈಕಭಕ್ತಿರ್|
ಮಯಾ ಸಾರ್ಧಂ ಚರಿತಾಸ್ಯಾಜಮೀಢ||
ಕೌಂತೇಯ! ಇಲ್ಲಿ ನಿನ್ನ ತಮ್ಮಂದಿರೊಡನೆ ಮತ್ತು ವಿಪ್ರರೊಡನೆ ಸುಖವಾಗಿ ನೀನು ವಾಸಿಸು. ಅಜಮೀಢ! ಅನಂತರ ನನ್ನೊಡನೆ ಶುಚಿಕರ್ಮಗಳು ಮತ್ತು ಭಕ್ತಿಯೊಂದಿಗೆ ಪುಣ್ಯಕ್ಷೇತ್ರಗಳಿಗೆ ಪ್ರಯಾಣಮಾಡುವೆ.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಷ್ಟಾವಕ್ರೀಯೇ ಚತುರ್ತ್ರಿಂಶದಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಷ್ಟಾವಕ್ರದಲ್ಲಿ ನೂರಾಮೂವತ್ತ್ನಾಲ್ಕನೆಯ ಅಧ್ಯಾಯವು.

[1]ಜನಕನು ಅಷ್ಟಾವಕ್ರನ ಶಿಷ್ಯನಾದನು. ಜನಕ-ಅಷ್ಟಾವಕ್ರರ ಸಂವಾದವು ಅಷ್ಟಾವಕ್ರ ಗೀತೆಯೆಂದು ಪ್ರಸಿದ್ಧ ಆಧ್ಯಾತ್ಮಿಕ ಗ್ರಂಥವೆನಿಸಿಕೊಂಡಿದೆ.
Ashtavakra Gita English Audio Book